Friday, June 29, 2012

ಸಾವಿನೊಂದಿಗೆ ಸಂಭಾಷಣೆ

ಸಾವಿನ ಬಗ್ಗೆ ಮಾತಾಡೋದು ತಪ್ಪಾ?

ಸಾವು ಒಂದೇ ಜೀವನದ ಬಗ್ಗೆ ಸೀರಿಯಸ್ ಆಗಿ ವಿಚಾರ ಮಾಡೋಕೆ ಹಚ್ಚೋದು. ನಾವು ಯಾರು? ಯಾಕೆ ಇಲ್ಲಿ ಬಂದಿದ್ದೇವೆ? ಈ ಜೀವನ ಏಕೆ? ಇಂತಹ ಪ್ರಶ್ನೆಗಳನ್ನು ತಡವಾಗಿ ಆದರೂ ಕೇಳುವಂತೆ ಮಾಡೋ ಶಕ್ತಿ ಇರೋದು ಸಾವಿಗೆ.

ಬದುಕೋಕೆ ಸಾವಿರಾರು ವರ್ಷ ಇದ್ದಿದ್ದರೆ, ಇಂತಾ ಪ್ರಶ್ನೆ ಇಷ್ಟು ಲಗೂನೆ ಕೇಳೋ ಪ್ರಸಂಗ ಇರತಿರಲಿಲ್ಲ. ಆದ್ರೆ ಇರೊ  ಸ್ವಲ್ಪೇ ಟೈಮ್ ನಲ್ಲಿ ಇವನ್ನ ಕೇಳದೇ ಹೋದ್ರೆ, ತುಂಬಾ ಲೇಟ್ ಆಗಿ ಬಿಟ್ಟೀತು.

ಸಾವನ್ನು ಸಿರಿಯಸ್ ಆಗಿ ತೊಗೊಂಡಾಗ ಜೀವಿಸುವದರ ಬಗ್ಗೆ ಸಿರಿಯಸ್ ಆಗಲಿಕ್ಕೆ ಸಾಧ್ಯ. ಇಲ್ಲ ಅಂದ್ರೆ, ಹೆನ್ರಿ ಡೇವಿಡ್ ಥೊರೋ ಹೇಳಿದಾಂಗೆ - ಸಾಯೋ ಟೈಮ್ ನಲ್ಲಿ ಗೊತ್ತಾಯ್ತು, ನಾವು ಬದುಕಲೇ ಇಲ್ಲ ಅಂತ. ಆ ದೃಷ್ಟಿಯಿಂದ ನೋಡಿದ್ರೆ ಸಾವು ನಮ್ಮ ಗೆಳಯ. ಯಾವಾಗಲೂ ಯಾವದು ಸರಿ ಅನ್ನೋದರ ಬಗ್ಗೆ ನೆನಪ  ಮಾಡೋ ಗೆಳಯ.

ಇದು ನೆಗೆಟಿವ್ ಥಿಂಕಿಂಗ್ ಅಲ್ಲವೇ ಅಲ್ಲ. ಈ ತರಹ ವಿಚಾರ ಬಂತು ಅಂದರೆ ನಂತರದ ಪ್ರತಿ ಕ್ಷಣವೂ ಅಮೂಲ್ಯ. ಬದುಕಿಗೆ ಒಂದು ತರಹದ ಫೋಕಸ್ ತಂದು ಕೊಡಬಲ್ಲ ಥೀಮ್ ಅಂದ್ರೆ ಸಾವು. ಒಮ್ಮೆ ಜೀವಿಸುವದರ, ಸರಿಯಾಗಿ  ಜೀವಿಸುವದರ, ಮಹತ್ವ ತಿಳಿಯಿತು ಅಂದರೆ  ಚಿಲ್ಲರೆ ವಿಚಾರಗಳಿಗೆ ಟೈಮ್ ಇರೋದಿಲ್ಲ. ಸಿಟ್ಟು, ಖಿನ್ನತೆ, ಜಗಳ, ಇವಕ್ಕೆಲ್ಲಾ ಟೈಮ್ ಕೊಡಲು ಸಾಧ್ಯವೇ ಇಲ್ಲ. ಸರಿಯಾಗಿ ಜೀವಿಸಿ, ಮೇಲೆ ಕೇಳಿದ ಮೂರು ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯುವದು ಎಲ್ಲಕಿಂತ ಮುಖ್ಯವಾಗುತ್ತದೆ. ಆ ಗುರಿಯೊಂದಿಗೆ ನಡೆಯುವವರು ತಮಗೂ, ತಮ್ಮ ಸುತ್ತ ಮುತ್ತ ಇರುವ ಜನರಿಗೂ ಯಾವಾಗಲೂ ಆನಂದ, ಪ್ರೀತಿ, ಸದಾಶಯ, ಜೀವನದ ಅರ್ಥವನ್ನು ಹಂಚುತ್ತಾರೆ.

ಜೈವಿಕವಾಗಿ ಸಾವಿನೊಂದಿಗೆ ನಮ್ಮ ಸಂಭಾಷಣೆ ತಾಯಿಯ ಗರ್ಭದಲ್ಲಿ ಇರುವಾಗಿಂದಲೇ ಶುರು. ಜೈವಿಕವಾಗಿ ಒಂದು ಘಟ್ಟ ಬರುತ್ತದೆ. ಕೆಲವರಿಗೆ 30 ಕ್ಕೆ, ಕೆಲವರಿಗೆ 40 ಕ್ಕೆ, ಕೆಲವರಿಗೆ 50 ಕ್ಕೆ. ಅಲ್ಲಿಂದ ಸೆಕೆಂಡ್ ಹಾಫ್ ಶುರು. ಸೆಕೆಂಡ್ ಹಾಫ್ ನಲ್ಲಿ ಜೈವಿಕವಾಗಿ ಸಾವು ನಮ್ಮ ಮೇಲೆ ಮೇಲಗೈ ಸಾಧಿಸಿದಂಗೆ ಕಂಡು, ಸಿಕ್ಕಾಪಟ್ಟೆ ಟೆನ್ಷನ್ ಆಗಿ ಜನ, ಇಂದು ಇದ್ದು, ನಾಳೆ ಬಿದ್ದು ಹೋಗುವ ದೇಹದ ಮೇಲೆ ಸಿಕ್ಕಾಪಟ್ಟೆ ಜತನ ತೋರುತ್ತಾರೆಯೇ ವಿನಹ ಮೇಲೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವದರಲ್ಲಿ ಅಲ್ಲ. ಅದು ಭಾಳ ನೋವಿನ ಸಂಗತಿ. ಕಾರಿನ ಇಂಜಿನ್ ಗೆ ಮೇಜರ್ ರಿಪೇರಿ ಬೇಕಾದ ಸಮಯದಲ್ಲಿ ಸೀಟ್ ಬೆಲ್ಟ್ ಗೆ ಕಸೂತಿ ಹಾಕ್ತಾ ಕೂತಂಗೆ.

ಬುದ್ಧಿವಂತರಿಗೆ ಈ ಸೆಕೆಂಡ್ ಹಾಫ್ ಅನ್ನೋದು ಒಂದು ಅತಿ ಮುಖ್ಯ ಘಟ್ಟ. ಫಸ್ಟ್ ಹಾಫ್ ನಲ್ಲಿ ದುಡ್ಡು, ಪ್ರತಿಷ್ಠೆ, ಸುಖ, ಪವರ್ ಇತ್ಯಾದಿ ಆಟಿಗೆಗಳ ಸಂಗಡ ಸಾಕಷ್ಟು ಆಟ ಆಡಿ, ಅವುಗಳ ಇತಿ ಮಿತಿ ಅರಿತಿದ್ದು ಆಯಿತು. ಮುಂದೆ ಏನು? ಅನ್ನೋ ಪ್ರಶ್ನೆ ಕೇಳಲು ಸೆಕೆಂಡ್ ಹಾಫ್ ಉತ್ತಮ ಸಮಯ. ಆಟಿಗೆಗಳೊಂದಿಗೆ ಆಟ ಇನ್ನು ಮುಗಿದಿಲ್ಲ ಅಂದ್ರೆ ಬೋರ್ ಹೊಡೆಯೋ ತನಕ ಆಡಿ. ಒಂದಲ್ಲ ಒಂದು ದಿನ ರಿಯಲ್ ಸೆಕೆಂಡ್ ಹಾಫ್ ಶುರು ಆಗೇ ಆಗುತ್ತೆ.

ಸೆಕೆಂಡ್ ಹಾಫ್ ಶುರು ಆದಾಗ 1) ನಾನು ಯಾರು? 2)ನಾನು ಇಲ್ಲೇಕೆ ಇರುವೆ? 3) ಈ ಜೀವನ ಏತಕ್ಕಾಗಿ? ಈ ಪ್ರಶ್ನೆಗಳಿಗೆ ಸೀರಿಯಸ್ ಆಗಿ ಉತ್ತರ ಹುಡುಕಲು ಹೋಗುವವರಿಗೆ ಸೆಕೆಂಡ್ ಹಾಫ್ ಒಂದು ಉಲ್ಲಾಸಕರ ಚಾಲೆಂಜ್. ಈ ಚಾಲೆಂಜ್  ಫೇಸ್ ಮಾಡದೇ, ಸೆಕೆಂಡ್ ಹಾಫ್ ನಲ್ಲೂ ಫಸ್ಟ್ ಹಾಫ್ ನಲ್ಲಿ ಆಡಿದ ಆಟಾನೇ ಆಡ್ತೀನಿ ಅಂತ ಹೊಂಟರೆ ದೇಹ, ಮನಸ್ಸು ಎರಡೂ ಸಾಥ್ ಕೊಡೋದಿಲ್ಲಾ. ಒಂದು ತರಹದ ವ್ಯಾಕುಲತೆ ಸದಾ ಆವರಿಸುತ್ತದೆ. ಅದು ಬೇಕಾ?

ಈ ಸೆಕಂಡ್ ಹಾಫ್ ನಲ್ಲಿ ನಮಗೆ ನಮ್ಮ ಜೀವನದ ಮಹತ್ತರ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯುವ ಅವಕಾಶ ಇರುತ್ತದೆ. ಈ ಅವಕಾಶವನ್ನ ಸರಿಯಾಗಿ ಉಪಯೋಗಿಸಿಕೊಂಡರೆ, ನಮ್ಮಲ್ಲೇ ಇರುವ, ಸಾವನ್ನು ಮೀರಿದ, ಆತ್ಮದ ಜೊತೆ ಭೇಟಿ ಗ್ಯಾರಂಟೀ. ಸಾವಿನೊಂದಿಗೆ ಸರಿ ರೀತಿಯಲ್ಲಿ ಸಂಭಾಷಣೆ ನೆಡಸಿದರೆ, ಸಾವೇ ಸಾವನ್ನು ಗೆಲ್ಲುವ ಸಿಕ್ರೆಟ್ ಫಾರ್ಮುಲ ಹೇಳಿಕೊಡುವ ಮಿತ್ರ.

ಇಂತಹ ಪ್ರಶ್ನೆಗಳಿಂದ ಪರೇಶಾನ್ ಆಗಿ ಸೀದಾ ಯಮಧರ್ಮನ ಹತ್ತಿರ ಹೋಗಿ ಆ ಪ್ರಶ್ನೆಗಳನ್ನ ಸೀದಾ ಅವನಿಗೇ ಕೇಳಿ, ಯಮಧರ್ಮ ಕೊಟ್ಟ ಗಿಫ್ಟ್ ಎಲ್ಲ ತಿರಸ್ಕರಿಸಿ, ಎಲ್ಲ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡು  ಬಂದವನು ನಚಿಕೇತ. ಉಪನಿಷತ್ತುಗಳಲ್ಲಿ ಪ್ರಮುಖ ಸ್ಥಾನ ಹೊಂದಿರುವ ಕಠೋಪನಿಷತ್ತಿನಲ್ಲಿ ನಚಿಕೇತನ ಕಥೆ ಬರುತ್ತದೆ. ಕಥೆ ಭಾಳ ಜನರಿಗೆ ಗೊತ್ತು. ಆದ್ರೆ ಸಾವನ್ನು ಗೆಲ್ಲುವ ಸೆಕ್ರೆಟ್ ಫಾರ್ಮುಲ ತಿಳಿಯಲು ಕಠೋಪನಿಷತ್ತನ್ನು ಓದಬೇಕು. ನಮ್ಮ ಸಾವಿನೊಂದಿನ ಸಂಭಾಷಣೆಗೆ ಕಠೋಪನಿಷತ್ತಕ್ಕಿಂತ ಒಳ್ಳೆ ಟೆಕ್ಸ್ಟ್ ಬುಕ್ ಸಿಗಲಾರದು.

ಸಾಯೋದ್ಕಿಂತ ಮೊದಲೇ ಸಾಯಿ - ಅಂತ ಯಾರೋ ಹೇಳಿದ್ದು ನೆನಪು. ಅಂದರೆ ಜೈವಿಕವಾಗಿ ದೇಹ ಸಾವನ್ನು ಹೊಂದುವಕಿಂತ ಮೊದಲೇ 'ನಾನು'  ಯಾರು ಅಂತ ತಿಳಿದುಕೊಂಡು, 'ನಾನು' ಅಲ್ಲದ್ದನ್ನ ಕೊಂದುಬಿಡು ಅಂತ. ಒಮ್ಮೆ ಆ ಬ್ರಹ್ಮಜ್ಞಾನವನ್ನು ಪಡೆದವನಿಗೆ ಜೈವಿಕ ಸಾವು ಒಂದು ಬಾಗಿಲು ಅಷ್ಟೇ. ರೈಟ್ ಟೈಮ್ ನಲ್ಲಿ ಆ ಬಾಗಿಲು ತೆಗೆಯತ್ತೆ, ಒಂದು ರೂಮಿನಿಂದ  ಇನ್ನೊಂದು ರೂಮಿಗೆ ಹೋದಷ್ಟು ಸರಳ, ಜೀವಂತ ಇರುವಾಗಲೇ ಸಾವಿನ ದೋಸ್ತಿ ಮಾಡಿ ಅದರಿಂದಲೇ ಸಾವನ್ನು ಗೆಲ್ಲೋ ವಿದ್ಯೆ ಕಲಿತವನಿಗೆ.

** ಶ್ರೀ ಏಕನಾಥ್ ಈಶ್ವರನ್ ಅವರು ಇಂಗ್ಲಿಷ್ ನಲ್ಲಿ ಬರೆದ - Dialogue With Death : A Journey Through Consciousness - ಎಂಬ ಪುಸ್ತಕದ ಮುನ್ನುಡಿಯ ಸಂಕ್ಷಿಪ್ತ ಭಾವಾನುವಾದ ಇದು. ಈ ಪುಸ್ತಕ  ಕಠೋಪನಿಷತ್ತಿನ ಸಾರವನ್ನು ಅತ್ತ್ಯಂತ ಸರಳವಾಗಿ ವಿವರಿಸಿದೆ. ತುಂಬಾ ಒಳ್ಳೆ ಪುಸ್ತಕ. ಈ ಚಿಕ್ಕ ಭಾವನುವಾದದಲ್ಲಿ ತಪ್ಪು ಇದ್ದರೆ ಅವೆಲ್ಲ ನಂದು. ಶ್ರೀ ಏಕನಾಥರ wisdom ಅವರು ಮಾತ್ರ ಹೇಳಲು ಸಾಧ್ಯ. ಆದರೂ ಶ್ರೀ ಏಕನಾಥ್ ಈಶ್ವರನ್ ಅವರನ್ನು ಮತ್ತು ಅವರ ಪುಸ್ತಕಗಳನ್ನು ಕನ್ನಡಿಗರಿಗೆ ಪರಿಚಯಿಸುವ ಚಿಕ್ಕ ಪ್ರಯತ್ನ.

ಸಾವಿನ ಬಗ್ಗೆ ಬರೆದ ಕೆಲ ಹಳೆ ಪೋಸ್ಟ್ ಗಳಿಗೆ ಲಿಂಕ್ಸ್ .

- http://maheshuh.blogspot.com/2009/09/death.html

- http://maheshuh.blogspot.com/2009/02/birth-death.html

7 comments:

Unknown said...

ಇನ್ಜಿನ್ ಗೆ ರಿಪೆರಿ ಬೆಕಾದಾಗ ಸೀಟ್ ಗೆ ಕಸುತಿ ಮಾದಿದಾನ್ಗೆ...........Super line

Mahesh Hegade said...

Thank you, Unknown, for taking time to write. Much appreciated.

ವಿ.ರಾ.ಹೆ. said...

"ಸೆಕೆಂಡ್ ಹಾಫ್ನಲ್ಲೂ ಫಸ್ಟ್ ಹಾಫ್ನಲ್ಲಿ ಆಡಿದ ಆಟಾನೇ ಆಡ್ತೀನಿ ಅಂತ ಹೊಂಟರೆ ದೇಹ, ಮನಸ್ಸು ಎರಡೂ ಸಾಥ್ ಕೊಡೋದಿಲ್ಲಾ".

True.... Good write up.

Mahesh Hegade said...

Thanks, Vikas.

piscean said...

gud writing.... enjoyed reading...

VISHVANATH B MANNE said...

"ಸಾಯೋದ್ಕಿಂತ ಮೊದಲೇ ಸಾಯಿ - ಅಂತ ಯಾರೋ ಹೇಳಿದ್ದು ನೆನಪು. ಅಂದರೆ ಜೈವಿಕವಾಗಿ ದೇಹ ಸಾವನ್ನು ಹೊಂದುವಕಿಂತ ಮೊದಲೇ 'ನಾನು' ಯಾರು ಅಂತ ತಿಳಿದುಕೊಂಡು, 'ನಾನು' ಅಲ್ಲದ್ದನ್ನ ಕೊಂದುಬಿಡು ಅಂತ."

ಅರ್ಥಪೂರ್ಣವಾಗಿದೆ.

Mahesh Hegade said...

ಧನ್ಯವಾದ ವಿಶ್ವನಾಥ ಅವರೇ!