Monday, July 16, 2012

ಹೊಟ್ಟಿಗೇನ್ ತಿಂತೀರಿ ಅಲ್ಲ.....ಮನಸ್ಸಿಗೇನು ತಿನ್ನಸ್ತೀರಿ?...ಅದು ಮುಖ್ಯ (ಭಾಗ - 3)

ಭಾಗ -1 ರಲ್ಲಿ ಮನಸ್ಸಿನ ಆಹಾರ ಶೈಲಿ (mental diet, information diet) ಸರಿ ಇಲ್ಲದಿದ್ದರೆ ಆಗುವ ಉಪದ್ರವಗಳ ಬಗ್ಗೆ ರಿಕ್ ನ ಉದಾಹರಣೆ ಸಹಿತ ನೋಡಿದೆವು. ಹಾಗೆಯೇ ನಮ್ಮ ಅಜ್ಜಿಯ ಶಿಸ್ತಿನ ಜೀವನ ಶೈಲಿಯ ಬಗ್ಗೆಯೂ ಓದಿದೆವು.


ಭಾಗ - 2 ರಲ್ಲಿ ಮನಸ್ಸಿಗೆ ಕೊಡುವ ಆಹಾರಗಳಲ್ಲಿ ಯಾವದನ್ನು ಬಿಟ್ಟರೆ ಒಳ್ಳೇದು, ಯಾವದು ವರ್ಜ್ಯ ಎಂಬುದ ನೋಡಿದೆವು. ಅದೊಂದು ತರಹ ನೇತಿ ನೇತಿ ಅಂದಾಗೆ. ಇದು ಬೇಡ. ಅದು ಬೇಡ.


ಈ ಭಾಗ - 3 ರಲ್ಲಿ ಸರಿಯಾದ ಮಾಹಿತಿ ಜೀವನ ಶೈಲಿಯ ಬಗ್ಗೆ ಟಿಮ್ ಸಾಂಡರ್ಸ್ ಏನು ಹೇಳುತ್ತಾರೆ ಅಂತ ನೋಡೋಣ.


ಸುದ್ದಿ ಎಲ್ಲ ಓದುವದನ್ನು ಬಿಟ್ಟು ಕೇವಲ ಅಧ್ಯಾತ್ಮಿಕ ಮತ್ತು ಉನ್ನತ ವಿಚಾರಗಳನ್ನು ಹೇಳುವ ಪುಸ್ತಕಗಳನ್ನು ಮಾತ್ರ ಓದಿ ಅಂತ ಹೇಳುತ್ತಿಲ್ಲ. ಅತ್ಯಂತ ಜತನದಿಂದ ಆರಿಸಿ ಆರಿಸಿ ಮಾಹಿತಿ ಹುಡುಕಿ ಹಿತ ಮಿತವಾಗಿ ಸ್ವೀಕರಿಸಿ ಅಂತ ಅಷ್ಟೇ.


ಸುದ್ದಿ ಪತ್ರಿಕೆ ಓದುವದಾದರೆ ಸಂಪಾದಕೀಯ ಶೈಲಿಯಲ್ಲಿ ಇರುವ ಪತ್ರಿಕೆಗಳನ್ನೇ ಆದಷ್ಟು ಓದಿ. ಅವು ಕೇವಲ ಸುದ್ದಿ ರಿಪೋರ್ಟ್ ಮಾಡದೇ, ಅಂಕಣ ಬರೆದವರು ಆ ಸುದ್ದಿಯನ್ನು ಯಾವ ರೀತಿ ವಿಶ್ಲೇಷಿಸಿದ್ದಾರೆ ಅನ್ನುವದನ್ನು ಕೊಟ್ಟು ಒಂದು ತರಹದ ದೃಷ್ಟಿಕೋನ ನಿಮಗೆ ಸಿಗಬಹುದು. ಕೆಲವೊಮ್ಮೆ ನಿಮ್ಮ ಸಹಮತವಿರಬಹುದು. ಇರಲಿಕ್ಕೂ ಇಲ್ಲ. ಆದರೆ ಒಂದು ವಿಷಯದ ಬಗ್ಗೆ ಒಂದು ಖಚಿತ ಅಭಿಪ್ರಾಯ ಸಿಕ್ಕರೆ ಒಳ್ಳೇದೆ. ಅದನ್ನ ನೀವು ಮತ್ತೆ ನಿಮ್ಮ ಪ್ರಕಾರ ವಿಶ್ಲೇಷಿಸಿ ವಾದ ಸಹಿತ ಮಾಡಬಹದು. ಇಲ್ಲಿ ಇಂಗ್ಲಿಷ್ನಲ್ಲಿ Wall Street Journal, New York Times ನನಗೆ ಇಷ್ಟವಾದ ದಿನ ಪತ್ರಿಕೆಗಳು. ಪತ್ರಿಕೆ ಸಿಗದಿದ್ದರೆ ಅವುಗಳ ವೆಬ್ ಸೈಟ್ ನಲ್ಲಿ ನೋಡಿ. ಇನ್ನು ರಚನಾತ್ಮಕ ಮಾಹಿತಿಗೆ ಮತ್ತು ಜ್ಞಾನಕ್ಕೆ Fortune, Harvard Business Review, Fast Company, Success ಮುಂತಾದವುಗಳನ್ನು ನಾನು ಓದುತ್ತೇನೆ ಮತ್ತು ನಿಮಗೂ ಸಹ ಓದಿ ಅವು ಒಳ್ಳೆಯವು ಅಂತ ಹೇಳಬಲ್ಲೆ. ಅವೆಲ್ಲ ಪತ್ರಿಕೆಗಳ ವೆಬ್ ಸೈಟ್ ನಲ್ಲಿ ಉಚಿತ ಮಾಹಿತಿ ಸಾಕಷ್ಟು ಸಿಗುತ್ತದೆ.


ಇನ್ನು ರೇಡಿಯೋ, ಟೀವಿ  ಪ್ರೋಗ್ರಾಮ್ಸ್ ಸಹ ಇದೆ ಧಾಟಿಯಲ್ಲಿ ನೋಡಿ. ವಿವಿಧ ದೃಷ್ಟಿಕೋನ ಕೊಡಬಹುದಾದ ನ್ಯೂಸ್ ಪ್ರೋಗ್ರಾಮ್ ನೋಡಿ ಮತ್ತು ಕೇಳಿ. ಒಳ್ಳೊಳ್ಳೆ ಅತಿಥಿಗಳನ್ನ ಕರೆಯಿಸಿ ಅವರಿಂದ ನಿಮಗೆ ಮಾಹಿತಿ ಕೊಡಿಸುವ, ಅಥವಾ ಚರ್ಚೆ ಮಾಡಿಸುವ ಕಾರ್ಯಕ್ರಮಗಳು ಉತ್ತಮ. ಇಲ್ಲಿ ಡೇವ್ ರಾಮ್ಸೆ, ಒಪ್ರಾ ವಿನಫ್ರೆಯ್ ನನಗೆ ಇಷ್ಟ. ಮತ್ತೆ ಇಲ್ಲಿಯ ನ್ಯಾಷನಲ್ ಪಬ್ಲಿಕ್ ರೇಡಿಯೋ ಕೂಡ ತುಂಬಾ ಉತ್ತಮ. ಅವರ ವೆಬ್ ಸೈಟ್ ನಲ್ಲಿ ಲೈವ್ ರೇಡಿಯೋ ಫೀಡ್ ಇಂಟರ್ನೆಟ್ ಮೂಲಕ ಕೇಳಬಹುದು.


ನಾನು ಮತ್ತೆ ಮತ್ತೆ ಹೇಳಬಯಸುವದು ಅಂದರೆ - ಪುಸ್ತಕ ಓದಿ.ಪುಸ್ತಕ ಓದಿ - ಅಂತ. ಒಳ್ಳೆಯ ಪುಸ್ತಕಗಳಿಗೆ ಯಾವದೇ ತರಹದ alternative ಇಲ್ಲ.


ಈ ರೀತಿ ನಿಮ್ಮ ಮಾಹಿತಿ ಆಹಾರ ಕ್ರಮ ಇರಲಿ. 25% ಮೀಡಿಯಾ (ಪತ್ರಿಕೆ, ಮ್ಯಾಗಜೀನ್, ರೇಡಿಯೋ, ಟೀವಿ), 50% ಪುಸ್ತಕಗಳು, 25 % ಸಾಮಾಜಿಕ ಮೀಡಿಯಾ (ಬ್ಲಾಗ್ಸ್, ಫೇಸ್ಬುಕ್, ಟ್ವಿಟ್ಟರ್, ಇತ್ಯಾದಿ). ಉಳಿದೆರಡನ್ನು ಕಮ್ಮಿ ಮಾಡಿ ಪುಸ್ತಕದ ಅನುಪಾತ ಹೆಚ್ಚಿಸಿದರೆ ಅದೂ ಓಕೆ.  ವೆಕೇಶನ್ ಅಂತ ಹೋದಾಗ ಮೀಡಿಯಾ ಪೂರ್ತಿ ಬಿಟ್ಟು ಕೇವಲ ಪುಸ್ತಕ ಓದಿ ನೋಡಿ ವೆಕೇಶನ್ ಮಜಾ ಹೇಗೆ ಜಾಸ್ತಿ ಬರೋತ್ತೆ ಅಂತ. ಇಮೇಲ್, SMS, ಫೋನ್, FB, Twitter ಎಲ್ಲ ಬಂದಿಟ್ಟು ವೆಕೇಶನ್ ಮಾಡಿ ನಿಮಗೇ ಗೊತ್ತಾಗುತ್ತೆ.


ಪುಸ್ತಕ ಹೆಚ್ಚು ಓದಿ ಅಂತ ಹೇಳೋದು ಯಾಕೆ ಅಂದರೆ ಪುಸ್ತಕ ನಿಮಗೆ ಒಂದು ವಿಷಯದ ಬಗ್ಗೆ ಆಳವಾದ ಮತ್ತು ಸಾಕಷ್ಟು ವಿವರವಾದ ಮಾಹಿತಿ ಕೊಡುತ್ತವೆ. ಮತ್ತೆ ಪುಸ್ತಕಗಳ ಬಗ್ಗೆ ಬೇರೆ ಬೇರೆ ಜನ ಬರೆದ ರಿವ್ಯೂ ಸಹ ಸಿಗುತ್ತದೆ. ಪುಸ್ತಕಗಳ ಬಗ್ಗೆ ಅವುಗಳ ಪರಿಚಯ ಒಮ್ಮೊಮ್ಮೆ ನೀವು ಗೌರವಿಸುವ ಜನ ಮಾಡಿ ಕೊಡುತ್ತಾರೆ. ಹೀಗಾಗಿ ನೀವು ಜತನದಿಂದ ಪುಸ್ತಕ ಆರಿಸಿ ಓದುವರು ಆದರೆ ಪುಸ್ತಕ ಓದಿದ ಮೇಲೆ ಟೈಮ್ ವೇಸ್ಟ್ ಮಾಡಿದೆ ಅನ್ನುವ ಭಾವನೆ ಬರುವದು ಕಡಿಮೆ. ಆದರೆ ಈ ಮಾತನ್ನ ಬೇರೆಯದರ ಬಗ್ಗೆ ಹೇಳಲು ಸಾಧ್ಯವಿಲ್ಲ. ಅವೆಲ್ಲ ಹಿಟ್ ಅಂಡ್ ಮಿಸ್. ಎಷ್ಟೋ ರೇಡಿಯೋ, ಟಿವಿ ಪ್ರೋಗ್ರಾಮ್ ಕೇಳಿದ ಮೇಲೆ ನೋಡಿದ ಮೇಲೆ ಟೈಮ್ ವೇಸ್ಟ್ ಆದ ಭಾವನೆ ನಮಗೇ ಎಷ್ಟೋ ಸಲ ಬಂದಿರುತ್ತದೆ.


ಒಳ್ಳೆಯ ಪುಸ್ತಕಗಳು ಈ ನಾಲ್ಕು ಕೆಟೆಗರಿ ಯಲ್ಲಿ ವಿಂಗಡಿಸಬಹುದು.


1) ಜೀವನಸ್ಪೂರ್ತಿ ಕೊಡುವಂತಹವು (ಅಧ್ಯಾತ್ಮಿಕ, ಮನಸ್ಸಿನ ಬಗ್ಗೆ ಬರೆದಿರುವಂತ ಪುಸ್ತಕ, ತತ್ವಜ್ಞಾನ)


2) ಶೈಕ್ಷಣಿಕ (ಒಳ್ಳೆ ಟೆಕ್ಸ್ಟ್ ಬುಕ್ಸ್, ರೆಫರನ್ಸ ಪುಸ್ತಕಗಳು)


3) ಐತಿಹಾಸಿಕ (ಒಳ್ಳೆ ಐತಿಹಾಸಿಕ ಕಾದಂಬರಿಗಳು ಸಹ  ಓಕೆ.)


4) ಭವಿಷ್ಯದ ಬಗ್ಗೆ ಹೇಳುವಂತಹವು (ಜಗತ್ತು ಮುಂದೆ ಹೇಗೆ ಬದಲಾಗಬಹುದು, ಯಾವ ಹೊಸ ಹೊಸ ಅವಕಾಶಗಳು ಬರಬಹುದು ಇತ್ಯಾದಿ)


ಒಳ್ಳೆ ಪುಸ್ತಕದ ಮೇಲೆ ಹಾಕಿದ ಟೈಮ್ ಮತ್ತು ದುಡ್ಡು ತುಂಬಾ ಜಾಸ್ತಿ ರೇಟ್ ನಲ್ಲಿ ವಾಪಸ್ ಬರುತ್ತದೆ. ಹೀಗಾಗಿ ಸ್ವಲ್ಪ ಹೊಟ್ಟೆ, ಬಟ್ಟೆ ಕಟ್ಟಿದರೂ ಚಿಂತೆಯಿಲ್ಲ, ಒಳ್ಳೆ ಪುಸ್ತಕ ಸಿಕ್ಕರೆ ಖರೀದಿಸಲು ಹಿಂದೆ ಮುಂದೆ ನೋಡದಿರಿ. ಅಷ್ಟಾಗಿಯೂ ಪುಸ್ತಕ ಸೇರಲಿಲ್ಲ ಅಂದ್ರೆ ಮಾರಿ ಹಾಕಿ. ಲೈಬ್ರರಿಗಳ ಫುಲ್ ಉಪಯೋಗ ಮಾಡಿಕೊಳ್ಳಿ.


ಭಾಗ -2 ರಲ್ಲಿ ನಿಮ್ಮ ಹತ್ತಿರದ ಸರ್ಕಲನಲ್ಲಿ ಯಾವ ರೀತಿಯ ಜನ ಇರಬೇಕು ಅನ್ನೋದರ ಬಗ್ಗೆ ಹೇಳಿದ್ದಾಗಿದೆ. ನಿಮ್ಮ ಮಿತ್ರರ ಜೀವನನೋಟ,  ಅವರ ಗುರಿ ಮತ್ತು ಅವರ ಮತ್ತು ನಿಮ್ಮ ಮನಸ್ಥಿತಿ ಹೊಂದುತ್ತದೋ ಇಲ್ಲವೋ  ಅಂತ ನೋಡಿಕೊಳ್ಳಿ. ಕೇವಲ ಹತ್ತಿರದಲ್ಲಿ ಇದ್ದಾರೆ, ಅವರಿಗೆ ಟೈಮ್ ಇದೆ ಇತ್ಯಾದಿ ಮಾತ್ರ ನಿಮಗೆ ಸರಿಯಲ್ಲದ ಜನರನ್ನು ನಿಮ್ಮ ಮಿತ್ರಾರಾಗುವಂತೆ ಮಾಡದಿರಲಿ.


ಮೆಂಟಲ್ ಡೈಟ್ ನ ಒಂದು ಕೊನೆ ಮಾತು ಅಂದರೆ ಸೂಕ್ಷ್ಮವಾಗಿ ಎಲ್ಲವನ್ನೂ ಅವಲೋಕಿಸುವದು. ಮಾತಾಡುವದನ್ನು ಕಮ್ಮಿ ಮಾಡಿ ಎಲ್ಲವನ್ನೂ ಯಾವದೇ ಪೂರ್ವಾಗ್ರಹ ಇಟ್ಟುಗೊಳ್ಳದೆ ಅವಲೋಕಿಸುತ್ತ ಇದ್ದರೆ ಸುತ್ತ ಮುತ್ತ ಇರುವ ಜನರಿಂದಲೇ ಎಷ್ಟೋ ಒಳ್ಳೊಳ್ಳೆ ವಿಷಯಗಳನ್ನ,  ಸಂದರ್ಭಕ್ಕೆ ಬೇಕಾದ ಮಾಹಿತಯನ್ನ ನೈಸ್ ಆಗಿ ತೆಗೆದು ಉಪಯೋಗ ಮಾಡಿಕೊಳ್ಳಬಹುದು.


ಇನ್ನು ಮುಂದಿನದು ನಿಮ್ಮ ತಲೆಯೆಂಬ ಕಪಾಟಿನಲ್ಲಿರುವ ಮಾಹಿತಿಗಳದ್ದು.ಮಾಹಿತಿ ಬಿಡಿ. ನೆನಪುಗಳೇ ಜಾಸ್ತಿ ತುಂಬಿರುತ್ತವೆ. ಸುಮಾರು ಯೋಚನೆಗಳ ಆರಂಭವೇ ನೆನಪುಗಳಿಂದ. ದನ ಹುಲ್ಲು ತಿಂದು, ಮತ್ತ ವಾಪಸ್ ತಂದು ಮೆಲುಕಾಡಿಸುತ್ತ ಇರುವ ಹಾಗೆ ನಾವು ಯಾವದೋ ಹಳೆ ನೆನಪು ತಂದುಕೊಂಡು ಮೆಲುಕಾಡಿಸುತ್ತ ಇರುತ್ತೇವೆ.


ನಮ್ಮ ತಲೆಯೂ ಒಂದು ತರಹ ಭೂಮಿ ಇದ್ದಾಂಗೆ. ಬೇಡವಾದ ಕಳೆ ಸಾಕಷ್ಟು ಬೆಳೆಯುತ್ತದೆ. ನೀವು ಅದಕ್ಕೆ ಏನೂ ಮಾಡಬೇಕಿಲ್ಲ. ಅದೇ ಒಳ್ಳೆಯ ಬೆಳೆ ತೆಗಿಯಬೇಕು ಅಂದ್ರೆ ಭೂಮಿ ಹಸನು ಮಾಡಿ, ಕಳೆ ಗಿಳೆ ತೆಗೆದು, ಒಳ್ಳೆ ಬೀಜ ಬಿತ್ತಿ, ಒಳ್ಳೆ ನೀರು ಗೊಬ್ಬರ ಕೊಟ್ಟು ಕೈಮುಗಿದರೆ ಒಳ್ಳೆ ಬೆಳೆ ಬರುತ್ತದೆ. ನಮ್ಮ ಮನಸ್ಸೂ ಹಾಗೆ. ಇಲ್ಲ ಅಂದರೆ ಅಲ್ಲಿ ತುಂಬೋದು ಕೇವಲ ಋಣಾತ್ಮಕ (negative) ವಿಷಯಗಳೇ. ಯಾಕಂದರೆ ಅವು ಕಳೆ ಇದ್ದ ಹಾಗೆ. ಹುಲುಸಾಗಿ ಬೆಳೆಯುತ್ತವೆ.


ಕಳೆ, ಅಂದ್ರೆ ಉಪಯೋಗವಿಲ್ಲದ ನೆನಪುಗಳನ್ನ, ತೆಗೆಯಲು ಹಲವಾರು ವಿಧಾನಗಳು ಸಹಾಯಕಾರಿ. ಧ್ಯಾನ, ಸರಿಯಾದ ಮಾಹಿತಿ ಆಹಾರ ಶೈಲಿ, ಸಜ್ಜನರ ಸಂಗ, ಜೀವನದ ವೇಗವನ್ನು ಕಡಿಮೆ ಮಾಡಿಕೊಳ್ಳುವದು, ಒಂದು ಸಲಕ್ಕೆ ಒಂದೇ ಕಾರ್ಯವನ್ನು ಏಕಾಗ್ರತೆಯಿಂದ ಮಾಡುವದು (multi-tasking ಮಾಡಬಾರದು), ಅಂತರ್ಮುಖಿಯಾಗಿ ಕೇವಲ ನಾನು, ನನಗೆ, ನನ್ನದು (I, Me, Mine) ಇವುಗಳಲ್ಲಿಯೇ ಕಳೆದು ಹೋಗದೇ ಇರುವದು. ಇವೆಲ್ಲ ಮಾಡುತ್ತಾ ಬಂದರೆ ಹಳೆಯ ಜಂಕ್ ಖಾಲಿ ಆಗುತ್ತಾ, ಹೊಸ ಒಳ್ಳೆ ಬೆಳೆ ಬಂದು ಜೀವನ ಉದ್ಧಾರವಾದೀತು.


ಮುಗಿಸುವದಕಿಂತ ಮೊದಲು ಒಂದು ಸಮರಿ (summary) ಮಾಡುವ.


1) ಋಣಾತ್ಮಕ ಎಲ್ಲವನ್ನೂ ತೆಗೆದು ಎಸೆಯಿರಿ. ಧನಾತ್ಮಕ ಮಾತ್ರ  ಒಳಗೆ ಬಿಟ್ಟುಗೊಳ್ಳಿ. ಇದು ನಿಮ್ಮ ಮಾಹಿತಿ ಜೀವನಶೈಲಿಯ ಬೆನ್ನೆಲಬಾಗಿರಲಿ.


2) ಬೆಳಿಗ್ಗೆ ಬೇಗ ಏಳುವದನ್ನ ರೂಢಿ ಮಾಡಿಕೊಳ್ಳಿ. ಇದರಿಂದ ದಿನಕ್ಕೆ ಒಂದು ಸರಿಯಾದ ಹಿತವಾದ ವೇಗ ಕೊಡಲು ಸಾಧ್ಯ ಇಲ್ಲ ಅಂದರೆ - ಏಳು, ಎದ್ದೇಳು, ಓಡು, ಇನ್ನೂ ಜೋರಾಗಿ ಓಡು, ಓಡುತ್ತ ಓಡುತ್ತಲೇ ಬಿದ್ದು ಸಾಯಿ - ಖಚಿತ.


3) ಬೆಳಿಗ್ಗೆ ಎದ್ದ ನಂತರ 1-2 ಘಂಟೆ ಇಂಟರ್ನೆಟ್ ಆನ್ಲೈನ್ ಹೋಗದಿರಿ. ನಾನು CSO, CEO ಮುಂತಾದ ಮುಖ್ಯ ಹುದ್ದೆ ನಿರ್ವಹಿಸಿದ್ದೇನೆ. ಈಗಲೂ ನಿರ್ವಹಿಸುತ್ತಾ ಇದ್ದೇನೆ. ನೀವು ಎದ್ದ ತಕ್ಷಣ ಇಮೇಲ್ ಚೆಕ್ ಮಾಡಿಲ್ಲ ಅಂತ ನಿಮ್ಮ ಕಂಪನಿಯೇನು ಮುಚ್ಚಿ ಹೋಗಲ್ಲ. ಹಾಗೆಂದುಕೊಂಡರೆ  ನಿಮ್ಮ ಸಮಸ್ಯೆ ಬೇರೆಯೇ ಏನೋ ಇರಬೇಕು. ನೋಡಿಕೊಳ್ಳಿ.


4) ಸುದ್ದಿಯೂ ಅಷ್ಟೇ. ಕ್ಷಣ ಕ್ಷಣದ ಸುದ್ದಿಯ ಜರೂರತ್ ಇಲ್ಲ. ದಿನಕ್ಕೆ ಒಂದೋ, ಎರಡೋ ಬಾರಿಯೋ ಜಗತ್ತಿನ ಸುದ್ದಿ ತುಂಬ ಸಂಕ್ಷಿಪ್ತವಾಗಿ ತಿಳಿದುಕೊಳ್ಳಿ. ನಿಮಗೆ ಕ್ಷಣ ಕ್ಷಣದ ಸುದ್ದಿ ತಿಳಿದಿಲ್ಲ ಅಂದ ಮಾತ್ರಕ್ಕೆ ನೀವು ಯಾರಿಗೂ ಮೂಢನ ಹಾಗೆ ಕಾಣುವದಿಲ್ಲ. ಸುದ್ದಿ ಗೊತ್ತಿಲ್ಲವೋ? ಓಕೆ. ಸುದ್ದಿ ಗೊತ್ತಿರುವ ಕ್ಷಣ ಕ್ಷಣದ ಸುದ್ದಿಕೋರ (news junkie) ಬಿಟ್ಟಿಯಾಗಿ ಸುದ್ದಿ ಕೊಡುತ್ತಾನೆ. ಅದನ್ನ ಫ್ರೀ ಆಗಿ ಕೇಳಿ ಎಂಜಾಯ್ ಮಾಡಿ. ಸುದ್ದಿಕೋರರು ಬೇಕಾಗಿದ್ದು ಬೇಡವಾಗಿದ್ದು ಸುದ್ದಿಗಳಲ್ಲಿಯೇ ಕಳೆದು ಹೋಗಿ ಬಿಡುತ್ತಾರೆ.


5) ಮುಂಜಾನೆಯ ಆ ಕೆಲವು ದಿವ್ಯ ಘಂಟೆಗಳನ್ನು ಒಳ್ಳೆಯ ಪುಸ್ತಕ ಓದುವದರಲ್ಲಿ, ನೋಟ್ಸ್ ಮಾಡಿಕೊಳ್ಳುವದರಲ್ಲಿ,ಸಹೃದಯೀ ಮಿತ್ರರ ಜೊತೆ ಒಳ್ಳೆಯ ವಿಷಯಗಳ ಮಾತಾಡಲು, ಧ್ಯಾನಕ್ಕೆ ಉಪಯೋಗಿಸಿ. ನಮ್ಮ ಅಜ್ಜಿಯ ತರಹ (ಭಾಗ -1). ಈ ತರಹ ಮಾಡುವದರಿಂದ ನಿಮ್ಮ ದಿನ ಅತ್ಯಂತ ಪಾಸಿಟಿವ್ ಆಗಿ ಶುರು ಆಗುತ್ತದೆ. ಹೊರಗೆ ಏನಾದರು ಆಗುತ್ತಿರಲಿ. ಈ ತರಹದ ಪಾಸಿಟಿವ್ ಮೂಡ್  ನಿಮಗೆ ಬೆಳಿಗ್ಗೆ ಇಲ್ಲ ಅಂದರೆ ಅವತ್ತು ದಿನ ಮಟಾಶ್. ಅವತ್ತು ಯಾವದೇ ಸಣ್ಣ ಚಾಲೆಂಜ್ ಬಂದರೂ ನೀವು - ಶಿವನೇ  ಶಂಭುಲಿಂಗ. ಸಾಧ್ಯವೇ ಇಲ್ಲ. - ಅಂತ ಮುಂಡಾಸು ಮತ್ತೊಂದು ಬಿಚ್ಚಿಟ್ಟು ಪರಿಸ್ಥಿತಿಯ ಕಾಲಲ್ಲಿ ಇಟ್ಟು  ಪರಿಸ್ಥಿತಿಯ ಕೈಗೊಂಬೆ ಆಗುತ್ತೀರಿ. ಅದು ಬೇಕಾ? ಅದು ನಿಮಗೆ ಶೋಭಿಸುತ್ತದೆಯೇ?


6) ಮಧ್ಯಾನ್ಹದ ಊಟದ ಸಮಯದಲ್ಲಿ ಒಂದು 5 ನಿಮಿಷ ಒಂದು ಚಿಕ್ಕ ಸ್ವಂತ ಪ್ರತಿಫಲನ ಮಾಡಿಕೊಳ್ಳುವಲ್ಲಿ ಉಪಯೋಗಿಸಿ. ಬೆಳಿಗ್ಗೆಯಿಂದ ದಿನ ಹೇಗೆ ಹೋಗುತ್ತಿದೆ? ಯಾವದು ಸರಿ ಹೋಯಿತು? ಎಲ್ಲಿ ತಪ್ಪಿದೆ? ಅದಕ್ಕೆ ತಕ್ಕಂತೆ ಅವತ್ತಿನ ಪ್ಲಾನ್ ಬದಲಾಯಿಸಿಕೊಳ್ಳಿ. ಟೈಮ್ ಮಾಡಿಕೊಂಡು  ಬೇಕಾದ್ರೆ ಒಂದು 10 ನಿಮಿಷ ಧ್ಯಾನ ಮಾಡಿ. ಶ್ರೇಷ್ಠ ಲೇಖಕ ಡೇಲ್ ಕಾರ್ನಿಗಿ ಮಧ್ಯಾನ್ಹದ ಸಮಯದಲ್ಲಿ ಸುತ್ತ ಮುತ್ತ ಇರುವ ಯಾವದೋ ಚರ್ಚ್ ಹೊಕ್ಕು ಒಂದು 10 ನಿಮಿಷ ಧ್ಯಾನ, ಪ್ರಾರ್ಥನೆ ಮಾಡಿ ಬಂದು ಮತ್ತೆ ಕೆಲಸ ಸುರು ಮಾಡುತ್ತಿದ್ದರು ಅಂತ ಅವರೇ ಹೇಳಿಕೊಂಡಿದ್ದಾರೆ.


7) ಆಫಿಸ್ ಗೆ ಹೋಗುವ ಪ್ರಯಾಣ ಸಮಯ, ಜಿಮ್ನಲ್ಲಿ ವ್ಯಾಯಾಮ ಮಾಡುವ ಸಮಯದಲ್ಲಿ ಒಳ್ಳೊಳ್ಳೆ ಆಡಿಯೋ ಬುಕ್ ಕೇಳಿ. ಹಾಳುವರಿ ಟಾಕ್ ಶೋ, ಉಪಯೋಗವಿಲ್ಲದ ನ್ಯೂಸ್ ಬೇಡ. ನಿಮ್ಮ ಕಾರ್ ಒಂದು ಚಲಿಸುವ ವಿದ್ಯಾಲಯವಾಗಲಿ. ಸುಮಾರು ಈ-ಬುಕ್ ರೀಡರ್ಸ್ ನಲ್ಲಿ text-to-speech ಇದ್ದು, ಪುಸ್ತಕ ನಿಮಗಾಗಿ ಓದಬಲ್ಲವು. ಆ ಫೀಚರ್ ಉಪಯೋಗಿಸಿ.


8) ರಾತ್ರಿ ಮಲಗುವ ಮೊದಲು ಮನಸ್ಸಿಗೆ ತಿನ್ನಿಸುವ ಆಹಾರದ ಬಗ್ಗೆ ತುಂಬಾ ಎಚ್ಚರವಿರಲಿ. ತುಂಬಾ ರೋಚಕ ಸುದ್ದಿ, ಪ್ರಚೋದಿಸುವ, ಉನ್ಮಾದಿಸುವ ಸುದ್ದಿ ಬೇಡವೇ ಬೇಡ. ಇಲ್ಲಾಂದ್ರೆ ನಿದ್ದೆ ಆದರೂ ಮನಸ್ಸು ಸಿಕ್ಕಾಪಟ್ಟೆ ಓವರ್ ವರ್ಕ್ ಮಾಡಿ ಬೆಳಿಗ್ಗೆ ಎದ್ದ ತಕ್ಷಣ ಉಲ್ಲಾಸ ಇರುವದಿಲ್ಲ.


ಈ ರೀತಿಯ ಜೀವನಶೈಲಿ ರೂಢಿ ಮಾಡಿಕೊಳ್ಳಿ. ನಂತರ ನೀವೇ ಹೇಳುತ್ತಿರಾ - ನನ್ನ ಜೀವನದೃಷ್ಟಿ ತುಂಬಾ ಪಾಸಿಟಿವ್, ರಚನಾತ್ಮಕ ಮತ್ತು ಆಶಾದಾಯಕ ಆಗಿದೆ. - ಅಂತ. ಹಾಗಾಗಲಿ ಅಂತನೇ ನನ್ನ ಹಾರೈಕೆಯೂ ಸಹ. ಗುಡ್ ಲಕ್!


ಪುಸ್ತಕ ಮತ್ತು ಟಿಮ್ ಸಾಂಡರ್ಸ್ ಅವರ ಬಗ್ಗೆ ಹೆಚ್ಚಿನ ಮಾಹಿತಿಗೆ ಅವರ ವೆಬ್ ಸೈಟ್ - http://www.timsanders.com/

No comments: