Monday, July 09, 2012

ದಕ್ಷಿಣ್ ನಾಗ್ಯಾ

ವಿಸ್ಕಿ ತೊಗೊತೀರೀ ಏನು?

ಸ್ಕಾಚ್ ಸೇರ್ತದ ಏನು?

ಹಾಂಗಿದ್ರಾ "ದಕ್ಷಿಣ್ ನಾಗ್ಯಾ" ಕಾಕ್ ಟೇಲ್ (cocktail) ಟ್ರೈ ಮಾಡ್ರಿ.

ರೆಸಿಪೀ ಬೇಕೇನು?

ಮುಂದ ಓದ್ರೀ.
*******************************************
ಮುಕ್ತಾಯ ಸಮಾರಂಭ ಮುಗಿಯುವ ಸಮಯಕ್ಕೆ, ಸಿವಿಲಿಯನ್ ಬಟ್ಟೆ ಧರಿಸಿದ್ದ ಥೈಲಾಂಡ್ ಸೇನೆಯ ಅಧಿಕಾರಿಯೊಬ್ಬ ಹಾಜರಾದ. ಅವನ ಬೆನ್ನ ಮೇಲೊಂದು ಚೀಲ. ಚೀಲ ಅಂದ್ರೆ ದಿಂಬಿನ ಕವರ್ ರೀತಿದು. ಅದರ ಬಾಯಿ ಕಟ್ಟಿತ್ತು. ಅದರಲ್ಲಿ ಜೀವಂತ ವಿಷಪೂರಿತ ನಾಗರಹಾವುಗಳು ಇವೆ ಎಂದು ಗೊತ್ತಾದ ಮೇಲೆ ನಮ್ಮ ಕುತೂಹಲ ಹೆಚ್ಚಾಗಿ ಅವನು ಅವುಗಳ ವಿಷ ತೆಗೆಯುವ ಕಾರ್ಯದ ವೀಕ್ಷಣೆಗೆ ತಯಾರಾದೆವು.

ಅವನು ಬರೆಗೈನ್ನು ಚೀಲದೊಳಗೆ ಹಾಕಿ ಒಂದು ಹಾವನ್ನು ಎತ್ತಿ ಹೊರತಂದ. ಅದರ ಕುತ್ತಿಗೆ ಅವನ ಕೈಯಲ್ಲಿ ಬಿಗಿಯಾಗಿತ್ತು. ಇನ್ನೊಂದು ಕೈಯ್ಯಿಂದ ಆ ಹಾವಿನ ಬಾಯಿ ತೆಗೆಸಿದ ಅವನು, ಅದರ ಬಾಯನ್ನು ಒಂದು ಗ್ಲಾಸಿನ ತುದಿಗೆ ಒತ್ತಿದ. ದವಡೆ ಮೇಲೆ ಪ್ರೆಶರ್ ಸರಿಯಾಗಿ ಬಿತ್ತು ನೋಡಿ, ನಾಗಪ್ಪ ತನ್ನಲ್ಲಿ  ಇರುವಷ್ಟೂ  ವಿಷವನ್ನ ಸೀದಾ ಗ್ಲಾಸಿಗೇ ಕಕ್ಕಿದ. ನಿನ್ನ ಕೆಲಸ ಮುಗಿಯಿತು ಎಂಬಂತೆ ಆ ನಾಗರಹಾವನ್ನು ಎಸೆದ. ಅದು ಪೊದೆಗಳ ಮಧ್ಯೆಯೆಲ್ಲೋ ಮಾಯವಾಯಿತು.

ಮುಂದೆ ಮಜಾ. ಆ ವಿಷ ಇರುವ ಗ್ಲಾಸಿಗೆ ವಿಸ್ಕಿ ಸುರಿದ. ಸುರಿದವನೇ  ತುಂಬಿದ್ದ ಗ್ಲಾಸ್ ಎತ್ತಿ ನೀಟ್ ಕುಡಿದೇ ಬಿಟ್ಟ..

ಈ ತರಹ ಸಾಂಪಲ್ ತೋರಿಸಿದ ಮೇಲೆ, ಥೈಲಾಂಡಿನ ಸ್ಪೆಷಲ್ ಫೋರ್ಸ್ ಸೈನಿಕರು, ಜೊತೆಗಿದ್ದ ಅಮೇರಿಕದ ನೇವಿ ಸೀಲ್ಸ್ (SEALS) ಸಹ ಅವನಿಂದ ಒಂದೊಂದು ಗ್ಲಾಸ್ ಮಾಡಿಸಿಕೊಂಡು ಇಳಿಸಿದರು.

ಹೀಗೆ ಫ್ರೆಶ್ ಆಗಿ ತೆಗೆದ ನಾಗರಹಾವಿನ ವಿಷ ಮತ್ತು ವಿಸ್ಕಿ ಕಾಕಟೇಲ್  ಗೆ 'southern serpent' (ದಕ್ಷಿಣ್ ನಾಗ್ಯಾ) ಅಂತ ಹೆಸರಂತೆ.

ಹಾವಿನ ವಿಷ ಸೀದಾ ರಕ್ತ ಪ್ರವಾಹಕ್ಕೆ ಹೋದರೆ ಮಾತ್ರ ಅಪಾಯ. ಹೊಟ್ಟೆಗೋದ್ರೆ ತೊಂದರೆ ಇಲ್ಲ.

ನಾನೂ ಒಂದು ಗ್ಲಾಸ್ "ದಕ್ಷಿಣ್ ನಾಗ್ಯಾ" ಎತ್ತಲಾ ಅಂತ ಯೋಚಿಸಿದೆ. ಆದ್ರೆ ನನಗೆ ತದನಂತರ ಹೆಲಿಕಾಪ್ಟರ್ ಹಾರಿಸುವದಿತ್ತು. ಬೇಡ ಅಂತ ಬಿಟ್ಟೆ.

ಏನೋ ಒಂದು ತರಹದ ಔಷದಿ ವಾಲ್ಯೂ ಇದೆಯಂತೆ - ಅಂದ ಒಬ್ಬವ.

ಒಂದು ಗ್ಲಾಸ್ ಹಾಕಿದ್ರೆ ಪಾರ್ಟಿ ಮಾಡೋಕೆ ಮಜಾ ಬರೋತ್ತೆ - ಅಂದವನು ಒಂದು ಗ್ಲಾಸ್ ಹಾಕಿದ್ದ ನೇವಿ SEAL ಒಬ್ಬ.

ನಿಮ್ಮ ನೇವಿ ಜನರ ಸಂಗಡ ನಿಭಾಯಿಸೋದು ಕಷ್ಟ ಕಷ್ಟ - ಅಂತ ಮಣ ಮಣ ಗುಣುಗಿದೆ.

ನಾನು ಕೇಳಿಸಿಕೊಂಡೆ - ಅಂತ ನೇವಿ  SEAL ಗುಟುರು ಹಾಕಿದ.

ಎಲ್ಲರಿಗೂ "ದಕ್ಷಿಣ್ ನಾಗ್ಯಾ" ಡ್ರಿಂಕ್ ಮಾಡಿಕೊಟ್ಟ ಅಧಿಕಾರಿ ಕಂ ಬಾರ್ ಟೆಂಡರ್ ಭಾಗ-2 ಶುರು ಮಾಡಿದ.

ಭಾಗ -2. ಜೀವಂತ ನಾಗರಹಾವನ್ನು ಕೊಲ್ಲುವ ಸರಿಯಾದ ರೀತಿ ಯಾವದು ಎಂಬುದರ ಪ್ರಾತ್ಯಕ್ಷಿಕೆ.

ಚೀಲದೊಳಗೆ ಕೈ ಹಾಕಿ ಇನ್ನೊಂದು ಹಾವು  ತೆಗೆದ. ಈ ಸಲ ಬಾಲವನ್ನು ಹಿಡದು, ತಲೆ ಮೇಲೆ ತಂದು, ಚಾವಟಿಯಂತೆ ತಲೆ ಸುತ್ತ ರೊಯ್ಯಾ ರೊಯ್ಯಾ ಅಂತ ತಿರುಗಿಸತೊಡಗಿದ. ಐಡಿಯಾ ಅಂದ್ರೆ ಹಾವಿನ ಬೆನ್ನೆಲಬನ್ನು ಈ ರೀತಿ ಮಾಡಿ ಮುರಿದರೆ ಹಾವು ಸಾಯುತ್ತೆ. (ಚರ್ಮ ಮತ್ತು ಮಾಂಸ ಝಾಕಮ್ ಆಗೋದಿಲ್ಲ ಅಂತ ಈ ಮೆಥಡ್ ಇರಬಹುದು).

ಅವನ ಕೈತಪ್ಪಿ ಜಾರಿದ ಹಾವು ಸೀದಾ ಬಂದು ನನ್ನ ಪಕ್ಕದವನ ಕುತ್ತಿಗೆಗೆ ಸೇರಿ, ಕೆಳಗೆ ಜಾರಿ ಕಾಲ ಬುಡಕ್ಕೆ - ಭುಸ್ ಭುಸ್ ನಾಗಪ್ಪ!

ನನ್ನ ಪಕ್ಕದವನು - ಇದೂ ಸಹಿತ ನಿನ್ನ ಹಾವನ್ನು ಕೊಲ್ಲುವ ವಿಧಾನದ ಒಂದು ಸ್ಟೆಪ್ ಏನು? - ಅಂತ ಲುಕ್ ಕೊಟ್ಟ.

ಮುಂದೆ ಬಂದ ಬಾರ್ ಟೆಂಡರ್ ಕಂ ಅಧಿಕಾರಿ ಆ ಹಾವನ್ನ ಮತ್ತೆ ಬಾಲದಿಂದ ಹಿಡಿದು, ಚಾವಟಿಯಂತೆ ಮತ್ತೆ ಮತ್ತೆ ತಿರುಗಿಸಿ, ಅದರ ಬೆನ್ನಮೂಳೆ ಮುರಿದು  ಈ ಸಲ ಕರೆಕ್ಟಾಗಿ ಅದನ್ನ ಕೊಂದು ಆಕಡೆ ಒಗೆದ.
*******************************************

ಈ ರೀತಿಯಲ್ಲಿ ಬರೆಯುತ್ತ ಹೋಗುವವರು ಮೈಕಲ್ ದುರ್ರಾಂಟ್. ಅವರು ಅಮೇರಿಕಾದ ಸ್ಪೆಷಲ್ ಹೆಲಿಕಾಪ್ಟರ್ ಪಡೆಯಲ್ಲಿ ಪೈಲಟ್ ಆಗಿದ್ದವರು. ಅತ್ಯಂತ ಕಠಿಣ ಜಾಗಗಳಿಗೆ ಕಮಾಂಡೋಗಳನ್ನು ಕರೆದೊಯ್ದು, ಅವರನ್ನು ಸೀದಾ ವೈರಿಗಳ ಮಧ್ಯೆ ಇಳಿಸಿ, ತಮ್ಮ ಹೆಲಿಕಾಪ್ಟರನ್ನೂ ಉಳಿಸಿಕೊಂಡು, ಕಮಾಂಡೋಗಳ ಕೆಲಸ ಮುಗಿದ ಮೇಲೆ ಅವರನ್ನು ವಾಪಸ್ ಕರೆತರುವದು - ಅವರ ಮತ್ತು ಅವರ ಜೊತೆಗಾರರ ಕೆಲಸ.

ಅವರು - In The Company Of Heroes - ಎಂದು ತಮ ಆತ್ಮಚರಿತೆಯಂತಹ  ಒಂದು ಅದ್ಭುತ ಪುಸ್ತಕ ಬರೆದಿದ್ದಾರೆ.

ಕೇವಲ ಎಲ್ಲೋ ಥೈಲಾಂಡ್ ಗೆ ಹೋಗಿ "ದಕ್ಷಿಣ್ ನಾಗ್ಯಾ" ರೆಸಿಪಿ ತಿಳ್ಕೊಂಡು ಬಂದು ಪುಸ್ತಕ್ ಬರೆದಿದ್ದರೆ ಅದು ಅಷ್ಟಕ್ಕೇ ಮುಗಿಯುತ್ತಿತ್ತು.

ಆದ್ರೆ ಮುಂದೆ ದುರ್ರಾಂಟ್ ಅವರು ಸೋಮಾಲಿಯಾದಲ್ಲಿ 1993-1994 ನಡೆದ ಕಾರ್ಯಚರಣೆಯಲ್ಲಿ ಸಹಿತ ಪಾಲ್ಗೊಂಡಿದ್ದರು. ಬರೆ ಅಷ್ಟೇ  ಅಲ್ಲ. ಮೊಘದಿಶು (ಸೊಮಾಲಿಯಾದ ರಾಜಧಾನಿ) ಪಟ್ಟಣದ ಅಂತ್ಯಂತ ಜನಭರಿತ ಜಾಗವೊಂದರಲ್ಲಿ ಒಬ್ಬ ಬಂಡುಕೋರ ಸಿಗುತ್ತಾನೆ ಎಂಬ ಮಾಹಿತಿ ಸಿಗುತ್ತದೆ. ತಕ್ಷಣ ಕಮಾಂಡೋ ಪಡೆ ಸಿಧ್ಧ ಮಾಡಿ ಅವರನ್ನು ಮೊಘದಿಶು ಗೆ ನುಗ್ಗಿಸಿ ಬಂಡುಕೋರ ಮತ್ತು ಅವನ ಜೊತೆಯವರ ನಿರ್ನಾಮಕ್ಕೆ ನಾಲ್ಕಾರು ಹೆಲಿಕಾಪ್ಟರ್ ನಲ್ಲಿ ಹೊರಡುತ್ತಾರೆ. ಆದರೆ ಅಲ್ಲಿಯ ಸ್ಥಿತಿ ಇನ್ನೂ ಖರಾಬ್ ಇದ್ದು, ಒಂದೆರಡು ಹೆಲಿಕಾಪ್ಟರ್ ಲ್ಯಾಂಡ್ ಮಾಡುವ ಟೈಮ್ ನಲ್ಲಿ, ಮತ್ತೊಂದು ಗುಂಡಿಗೆ ಸಿಕ್ಕಿ, ನೆಲಕ್ಕೆ ಬಿದ್ದು ಕೆಲವರು ಸಾಯುತ್ತಾರೆ. ಉಳಿದ ಇದ್ದ ಬಿದ್ದ ಕಮಾಂಡೋಗಳು ತಕ್ಕ ಮಟ್ಟಿಗೆ ಸ್ವರಕ್ಷಣೆ ಮಾಡಿಕೊಳ್ಳುತ್ತ, ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿಯೋ ಅಥವಾ ಅದಕ್ಕಿಂತ ಮೊದಲೇ ಬರಬಹುದಾದ ಸಾವಿನ ನಿರೀಕ್ಷೆಯಲ್ಲಿಯೋ ಇರುತ್ತಾರೆ. ಆ ಕಥೆ 'Black hawk Down' ಎಂಬ ಪುಸ್ತಕ ಮತ್ತು ಸಿನಿಮಾ ಆಗಿದೆ. ತುಂಬಾ ರೋಮಾಂಚಕಾರಿ ಪುಸ್ತಕ ಮತ್ತು ಮೂವಿ.

ದುರ್ರಾಂಟ್ ತೀವ್ರವಾಗಿ ಗಾಯಗೊಂಡು ಸೋಮಾಲಿ ಬಂಡುಕೋರರ ಒತ್ತೆಯಾಳಗುತ್ತಾರೆ. ಹೆಲಿಕಾಪ್ಟರ್ ನೆಲೆಕ್ಕೆ ಬಿದ್ದ ಹೊಡೆತಕ್ಕೆ ಸುಮಾರು ಎಲ್ಲ ಮೂಳೆ, ಬೆನ್ನೆಲಬು ಮುರಿದ ಅವರು ಮಾಂಸದ ಮುದ್ದೆ ಮುದ್ದೆ ತರಹ. ಅದರ ಮೇಲೆ ಅವರನ್ನ ತಕ್ಷಣ ಕೊಂದು ಸೇಡು ತೀರಿಸಿಕೊಳ್ಳಬೇಕು ಅನ್ನೋ ಸಾಮಾನ್ಯ ಜನ. ಇಲ್ಲ! ಇಂತಹ ಅಮೂಲ್ಯ ಒತ್ತೆಯಾಳನ್ನ ಸೇಫ್ ಆಗಿ ಇಟ್ಟುಗೊಂಡು ಅಮೇರಿಕಾದಿಂದ, ವಿಶ್ವಸಂಸ್ಥೆಯಿಂದ ಲಾಭ ಮಾಡಿಕೊಳ್ಳುವದು ಕೆಲ ಬಂಡುಕೋರ ನಾಯಕರ ಚಿಂತನೆ.

ಆ ಪರಿ ಗಾಯಗೊಂಡಿದ್ದ ದುರ್ರಾಂಟ್ ಸುಮಾರು 2 ವಾರ ಹೇಗೆ ಬದುಕುಳಿದರು? ಅವರನ್ನು ಯಾವ ಶಕ್ತಿ ಬದುಕಿಸಿತು? ಎಲ್ಲಿಂದ ಬದುಕುವ ಸ್ಥೈರ್ಯ ಬಂತು? ಅವರು ಸೆರೆಯಲ್ಲಿ ಇದ್ದಾಗ ಅವರ ಕುಟುಂಬ ಹೇಗೆ ಅವರೊಂದಿಗೆ ಶಾರ್ಟ್ ವೇವ್ ರೇಡಿಯೋ ನಲ್ಲಿ ಮೆಸ್ಸೇಜ್ ಕಳಿಸಿತು? ಅವರಿಗೆ ಯಾವ ರೀತಿ ವೈದ್ಯಕೀಯ ಚಿಕಿತ್ಸೆ ಸಿಕ್ಕಿತು?

ಹೀಗೆ ಅನೇಕ ರೋಚಕ ಮತ್ತು ತುಂಬಾ ಹುಮ್ಮಸ್ಸು ತುಂಬುವಂತಹ ಅನುಭವಗಳನ್ನ ದಾಖಲಿಸುತ್ತಾ ಹೋಗಿದ್ದಾರೆ ದುರ್ರಾಂಟ್.

ಯಾವದೇ ಸಮಯದಲ್ಲಿ  ಎತ್ತಿಕೊಂಡು ಮತ್ತೆ ಮತ್ತೆ ಓದಬಹುದಾದಂತಹ ಪುಸ್ತಕ.

ಲಾವೋಸ್, ಕಾಂಬೋಡಿಯ, ಥೈಲಾಂಡ್, ವಿಯೆಟ್ನಾಂ ಮುಂತಾದ ದೇಶಗಳಲ್ಲಿ ಹಾವಿನ ವಿಷ, ರಕ್ತ ಇತ್ಯಾದಿ ಸೇರಿಸಿ ಹಲವಾರು ರೀತಿಯ ಹೆಂಡ ಮಾಡುವದರ ಬಗ್ಗೆ ಸಾಕಷ್ಟು ಮಾಹಿತಿ ಗೂಗಲ್ ಮಾಡಿದರೆ ಸಿಗುತ್ತದೆ.

ಈ ತರಹ ಓದಿದ ಯಾವದೋ ಪುಸ್ತಕದ ಒಂದು ಝಳಕ್ ಕೊಟ್ಟು ಪುಸ್ತಕ ಪರಿಚಯ ಕನ್ನಡದಲ್ಲಿ ಮಾಡಿದ್ದು ನಾನು ಇದೇ ಮೊದಲ ಸಲ. ಇಷ್ಟವಾಗಿದ್ದರೆ ಒಂದು ಮಾತು ಹೇಳಿ. ಓದಿ ಲೆಕ್ಕವಿಟ್ಟುರುವದೇ  600 ಪುಸ್ತಕಗಳ ಮೇಲಿದೆ. ಅದರಲ್ಲಿ ಅಟ್ ಲೀಸ್ಟ್ 60 ಪುಸ್ತಕಗಳನ್ನು ಹೀಗೆ ಪರಿಚಯ ಮಾಡಿ ಕೊಡಬಲ್ಲೆ.

** ತುಂಬ ಹಿಂದೆ ಓದಿದ್ದು ಈ ಪುಸ್ತಕ. ನೀವು ಪುಸ್ತಕ ಓದಿದಾಗ ಈ ಬ್ಲಾಗ್ ಪೋಸ್ಟ್ ನಲ್ಲಿ ಎಲ್ಲಾರು ಮೈನರ್ ತಪ್ಪು ಕಂಡು ಬಂದ್ರೆ ಕ್ಷಮೆ ಇರಲಿ. ಸೊಮಾಲಿಯಾದ ಕಾರ್ಯಾಚರಣೆ ಮೇಲೆ ಹಲವಾರು ಪುಸ್ತಕ ಮೂವೀಸ್ ಬಂದು ಹೋಗಿವೆ. ಸುಮಾರನ್ನು ಓದಿದ್ದೇನೆ. ನೋಡಿದ್ದೇನೆ. ಹಾಂಗಾಗಿ ಎಲ್ಲಾದರು ಡಿಟೆಲ್ಸ್ ಮಿಕ್ಸಪ್ ಆದ್ರೆ ಮನ್ನಿಸಿ.

** ನಾಗ್ಯಾ - ನಮ್ಮ ಧಾರವಾಡ ಮಹಿಮೆ. ನಾಗರಾಜ್,ನಾಗೇಶ್ ಎಲ್ಲರಿಗೂ ನಾವು ನಾಗ್ಯಾ ಅಂತೀವಿ. ನಾರ್ಮಲಿ ತೂತ್ ನಾಗ್ಯಾ. ಹುತ್ತದ ತೂತಲ್ಲಿ ಹೋಗ್ತಾರೆ ಅನ್ನೋದಕ್ಕೋ ಏನೋ? ಸುಮ್ಮನೆ ತಮಾಷೆಗೆ. ಹೀಂಗಾಗಿ 'southern serpent' ಅಂತ ಶಬ್ದ ಸಿಕ್ಕಾಗ "ದಕ್ಷಿಣ್ ನಾಗ್ಯಾ" ಅನ್ನದೇ ಇರಲಾಗಲಿಲ್ಲ.

2 comments:

Vikas Hegde said...

600+ Books ! Great

'ದಕ್ಷಿಣ್ ನಾಗ್ಯಾ' ಪದ ಚೆನ್ನಾಗಿದೆ. ಬೇರೆ ಭಾಷೆಯ ಪದಗಳನ್ನು ಕನ್ನಡದ ಸ್ಥಳೀಯ ಸೊಗಡಲ್ಲೇ ಹೇಗೆ ಭಾಷಾಂತರಿಸಿ ಬಳಸಬಹುದು ಅನ್ನುವುದಕ್ಕೆ ಒಳ್ಳೆಯ ಉದಾಹರಣೆ ಇದು.

ಪುಸ್ತಕಗಳ ಪರಿಚಯ ಮುಂದುವರೆಯಲಿ. ಪುಸ್ತಕ ಸಾಗರದಲ್ಲಿ ನಮಗೆ ಯಾವುದನ್ನು ಆರಿಸಿಕೊಳ್ಳುವುದು, ಓದುವುದು ಅಂತ ತಿಳಿಯುವುದಿಲ್ಲ. ಹೀಗೆ ಓದಿದವರು ಪರಿಚಯ ಮಾಡಿಕೊಟ್ಟರೆ

ಅನುಕೂಲವಾಗುತ್ತದೆ.

ಥ್ಯಾಂಕ್ಯೂ....

Mahesh Hegade said...

Thanks Vikas.

Most of the books that I have read are on Goodreads.com. Feel free to open up an account and connect. It's good website to keep track of books, get recommendations etc.