Sunday, July 15, 2012

ಪೂರ್ವಾಗ್ರಹ ಪೀಡಿತರ ಗ್ರಹಚಾರ ಯಾವಾಗಲೂ ಖರಾಬ್

ಗ್ರಹಚಾರ ಕೆಟ್ಟಿದೆ. ಅನ್ನುವವರು ಹಲವರು.

ಗ್ರಹಚಾರ ಕೆಟ್ಟಿದೆ ಅಂದ ತಕ್ಷಣ ಶನಿ ಗ್ರಹವೋ, ಮಂಗಳ ಗ್ರಹವೋ ಅಥವಾ ರಾಹು-ಕೇತುವೋ ವಕ್ರವಾಗಿರಬೇಕು ಅನ್ನೋದು ಜನರ ಅಭಿಪ್ರಾಯ.

ಆದರೆ ಸೌರ್ಯಮಂಡಲದಲ್ಲೇ ಇರದ ಒಂದು ಗ್ರಹ ತುಂಬಾ ತೊಂದರೆ ಮಾಡುತ್ತೆ ಅಂದರೆ ಏನನ್ನುತ್ತೀರಿ?

ಅದೇ ಪೂರ್ವಾಗ್ರಹ. ಇಂಗ್ಲಿಷ್ ನಲ್ಲಿ prejudice.  

ಪೂರ್ವಾಗ್ರಹ ಪೀಡಿತರು (prejudiced people) ಗ್ರಹಚಾರ ಕೆಟ್ಟವರಲ್ಲಿ ಅಗ್ರಗಣ್ಯರು ಅಂತ ನನ್ನ ಭಾವನೆ. 

ವಿಜ್ಞಾನಿ  ಆಯಿನ್ಸ್ಟೇನ್ ಒಂದು ಮಾತು ಹೇಳುತ್ತಿದ್ದರು. "ಹೆಚ್ಚಿನ ಸರ ನಾವು ಯೋಚನೆ ಮಾಡುತ್ತೇವೆ ಅಂದುಕೊಂಡಾಗೆಲ್ಲ ಮಾಡುತ್ತಿರುವದು ಏನು ಅಂದ್ರೆ ನಮ್ಮ ಪೂರ್ವಾಗ್ರಹಗಳನ್ನು ಆಚೆಯಿಂದ ಈಚೆಗೆ ಸರಿಸಿ ಇಡುವದು ." (A great many people think they are thinking when they are really rearranging their prejudices. ... Albert Einstein)

ಮತ್ತೊಂದು ಕಾಮನ್ ಹೇಳುವದು ಅಂದ್ರೆ - rearranging the chairs on the deck of titanic. ಅಂದರೆ ಟೈಟಾನಿಕ್ ಹಡಗು ಮುಳುಗುತ್ತಿರುವಾಗ ಅದರ ಮೇಲಿನ ಡೆಕ್ ನಲ್ಲಿ ಖುರ್ಚಿಗಳನ್ನು ಬೇರೆ ತರಹ ಜೋಡಿಸಿದಂತೆ. ಉಪಯೋಗವಿಲ್ಲದ ಕೆಲಸ ಅಂತ ಅರ್ಥ.

ಈ ಪೂರ್ವಾಗ್ರಹ ಪೀಡಿತ ಜನರ ಕರ್ಮವೂ ಅಷ್ಟೆ. ಹಲವಾರು ಪೂರ್ವಾಗ್ರಹಗಳನ್ನು ತಲೆಯಲ್ಲಿ ತುಂಬಿಕೊಂಡು ಅವನ್ನೇ ಆಚೆ ಈಚೆ ಸರಿಸಾಡುತ್ತಿರುತ್ತಾರೆ. ಬಾಳ ದೋಣಿ ಅನ್ನೋಣವೋ ಬಾಳ ಟೈಟಾನಿಕ್ ಅನ್ನೋಣವೋ ಒಟ್ಟಿನಲ್ಲಿ ಹಡಗು  ಮುಳುಗುತ್ತಿರುವ ಖಬರೂ ಇಲ್ಲದಂತೆ  ಗ್ರಹಚಾರ ಕೆಟ್ಟವರು ಪೂರ್ವಾಗ್ರಹ ಪೀಡಿತರು.

ಈ ಪೂರ್ವಾಗ್ರಹ ಪೀಡಿತರು ಯಾವ ಶಾಂತಿ ಮಾಡಿಸಿದರೆ ಅವರ 'ಪೂರ್ವಾ'ಗ್ರಹಚಾರ ಸರಿ ಆಗುತ್ತದೆ?

ಸ್ವಲ್ಪ ಬಿಚ್ಚತೀರಾ?..... ಜಗ್ಗೇಶ್ ಸ್ಟೈಲ್ ನಲ್ಲಿ.

ಏನನ್ನಾ? .....- ಅಂತ ರೈಸ್  ಆಗಿ ಕೇಳಿದರೆ

ಮನಸ್ಸನ್ನಾ ರೀ - ಅಂತ ಜಗ್ಗೇಶ್ ಸ್ಟೈಲ್ ನಲ್ಲಿ ಹೇಳಬಹುದು.

Open-mindedness is the antidote for prejudice - ಅಂತ ಎಲ್ಲೋ ಕೇಳಿದ್ದು ನೆನಪು.

ಹಾಂಗಾಗಿ ಸ್ವಲ್ಪ "ತೆರದ ಮನಸ್ಸು" ಇಟ್ಟುಗೊಂಡರೆ ಎಷ್ಟೋ ಪೂರ್ವಾಗ್ರಹಗಳು ತಂತಾನೇ ದೂರವಾಗುತ್ತವೆ.

ಮನಸ್ಸು ಒಂದು ಪ್ಯಾರಾಚೂಟ್ ತರಹ. ತೆರೆದರೆ ಮಾತ್ರ ಕೆಲಸ ಮಾಡುವದು (Mind is like a parachute. Works best when open).

ಮತ್ತೊಂದು ಅಂದರೆ ಸಹನೆ. ಸಹನೆ ಹೆಚ್ಚಿದ್ದಲ್ಲಿ ಪೂರ್ವಾಗ್ರಹಗಳು ಕಡಿಮೆ. ಯೋಚಿಸಿ ನೋಡಿ. ಪೂರ್ವಾಗ್ರಹಗಳು ಹುಟ್ಟುವದು ನಿಮಗೆ ಪೂರ್ತಿ ವಿಷಯ ತಿಳಿಯುವ ಸಹನೆ ಇಲ್ಲದಾಗ. ಅವು ಗಟ್ಟಿಯಾಗುವದೂ ನಿಮಗೆ ಆಗಲೇ ಇರುವ ಪೂರ್ವಾಗ್ರಹಗಳ ಬಗ್ಗೆ ಒಂದು ಸ್ವಲ್ಪ ಹೊತ್ತು ಸಹನೆಯಿಂದ ಅವಲೋಕನದ ಮಾಡಿಕೊಳ್ಳಲು ಆಗದಿದ್ದಾಗ. ಸಹನೆ. ಸಹನೆ.

ಎಷ್ಟೋ ಜನರನ್ನ ಮೊದಲ ಸಲ ಭೆಟ್ಟಿಯಾದ ಕೂಡಲೇ ನಿಮ್ಮ ಪೂರ್ವಾಗ್ರಹಗಳು ನಿಮ್ಮ ಕಣ್ಣ ಮೇಲೆ ಪರೆಯಂತೆ ಬಂದು ಅವರ ಮೇಲೆ ಒಂದು ತರಹದ ಭಾವನೆ ಬಂದು ಬಿಡುತ್ತದೆ. ನಂತರ ಅವರ ಜೊತೆ ಸಾಕಷ್ಟು ಟೈಮ್ ಕಳೆಯುತ್ತೀರಿ. ಎಷ್ಟೋ ಪೂರ್ವಾಗ್ರಹಗಳು ಬದಲಾಗುವದಿಲ್ಲವೆ? ತುಂಬಾ ಇಂಪ್ರೆಸ್ ಮಾಡಿದ ಜನ ಡಿಸಪೈಂಟ್ ಮಾಡುತ್ತಾರೆ. ಮೊದಲು ಏನೂ ಅಂತಹ ಖಾಸಾ ಅನ್ನಿಸದವರು ತುಂಬಾ ಆಪ್ತರಾಗುತ್ತಾರೆ. ಇಲ್ಲಿ ಸಹಜವಾಗಿ ಟೈಮ್ ಸಿಕ್ಕಿತು. ಸಹನೆಯ ಬದಲಿಗೆ ಟೈಮ್. ಆದರೆ ಎಲ್ಲ ಸಲ ಹಾಗೆ ಆಗುವದಿಲ್ಲ. 

ಪೂರ್ವಾಗ್ರಹ ಪೀಡಿತರ ಖಾಯಂ ಆರ್ತನಾದ ಅಂದರೆ - ಗಡಿಬಿಡಿಯಲ್ಲಿ ಅವರನ್ನ ಅರ್ಥ ಮಾಡಿಕೊಳ್ಳುವಲ್ಲಿ ತಪ್ಪು ಮಾಡಿಬಿಟ್ಟೆ. 

ಇದು ಬೇಕಾ? ಬಹಳ ಪೂರ್ವಾಗ್ರಹಗಳಿದ್ದರೂ, ಅವೆಲ್ಲಾ ನಿಜ(?) ಅನ್ನಿಸಿದರೂ, ನಿಮ್ಮ ಬಾಳ ಟೈಟಾನಿಕ್ ಡೆಕ್ ಮೇಲೆ ಖುರ್ಚಿ ಹಿಂದೆ ಮುಂದೆ ಮಾಡುವ ಬದಲು ಸ್ವಲ್ಪ ಸಹನೆಯಿಂದ ಬಿಚ್ಚಬಾರದಾ ಮನಸ್ಸನ್ನ? ಏನಂತೀರಿ?

ಈ ಯುಗದ ಇತ್ತಕಡೆಯ  ಫೇಮಸ್ ದಾರ್ಶನಿಕ ವೇಯನ್ ಡಾಯರ್ ಒಂದು ಮಾತು ಹೇಳಿದ್ದು ನೆನಪು  - ನೀವು ಒಂದು ವಸ್ತುವನ್ನು ನೋಡುವ ದೃಷ್ಟಿಕೋನ ಬದಲಿಸಿಕೊಂಡರೆ, ನೀವು ನೋಡುವು ವಸ್ತು ಬದಲಾದಂತೆ ಕಾಣುವದು. (When you change the way you look at things, the things you look at change.) ಸತ್ಯ ವಾಕ್ಯ.

ಇವತ್ತು ಈ ಪೂರ್ವಾಗ್ರಹ (prejudice) ಯಾಕೆ ನೆನಪಾಯಿತು? ಇವತ್ತು (ಜುಲೈ 15) ಅಮೇರಿಕೆಗೆ ಬಂದು 15 ವರ್ಷ ಆಯಿತು. ಸುಮ್ಮನೆ 15 ವರ್ಷದ ಒಂದು ಅವಲೋಕನ ಮಾಡುತ್ತಾ ಕುಳಿತಾಗ ನೆನಪಾಗಿದ್ದು ನನ್ನ ಒಂದು ಪೂರ್ವಾಗ್ರಹದ ಕಥೆ. ಅದು ಆಗಿದ್ದು ಕೆಲಸದ ಸ್ಥಳದಲ್ಲಿ. ಒಬ್ಬ ರಶಿಯನ್ ಇಂಜಿನಿಯರ್ ಕಂಡರೆ ನನಗೆ ಏನೋ ಒಂದು ತರಹದ ಪೂರ್ವಾಗ್ರಹ ಮತ್ತು ಲೈಟ್ ತಾತ್ಸಾರ. ಕಾರಣ ಆ ಕಾಲ ತುಂಬ ಕಮ್ಮಿ ಇದ್ದ ಸಹನೆ ಮತ್ತು ಯಾರಿಗೆ ಸಂಕ್ಷಿಪ್ತವಾಗಿ ಹೇಳಿ ಮುಗಿಸೋಕೆ ಬರುವದಿಲ್ಲವೋ ಅವರೆಲ್ಲ ಒಂದು ತರಹದ ವೇಸ್ಟ್ ಬಾಡಿಗಳು ಅನ್ನುವ 'ಅಮೂಲ್ಯ' ಪೂರ್ವಾಗ್ರಹ. ಸಹನೆ ಕಮ್ಮಿ, ಮಂಡೆ ಇಲ್ಲ. ಆದರೆ ಆ ಪುಣ್ಯಾತ್ಮ ನನ್ನ ಜೊತೆ ಕೆಲಸ ಮಾಡಿದ ಐದು ವರ್ಷಗಳಲ್ಲಿ ಯಾವ ಪರಿ ಸಾಧನೆ ಮಾಡಿ ತೋರಿಸಿದ ಅಂದರೆ, ಅವನ ಮೇನೇಜರ್ ಆಗಿದ್ದ ನನಗೆ ಅನ್ನಿಸಿತು ಇವನಿಂದಲೇ ನನ್ನ ಉನ್ನತ್ತಿ ಆಗುತ್ತಿದೆ ಅಂತ.  What a learning experience it was! ಇವತ್ತು ಆವನ ಮೇಲಿನ ಮೊದಲಿನ ಪೂರ್ವಾಗ್ರಹಗಳಂತೂ ಇಲ್ಲ. ಅವನು ಜೊತೆಯಲ್ಲಿ ಕೆಲಸ ಮಾಡುತ್ತಿಲ್ಲವಾದರೂ ಅತಿ ಉತ್ತಮ ಮಿತ್ರನಾಗಿದ್ದಾನೆ.

ಆದರ ನಂತರ ಇನ್ನೊಂದು ತರಹದ ಪೂರ್ವಾಗ್ರಹ ಶುರು ಆಯಿತು. ಅದೆಂದರೆ ಜನರಲ್ಲಿ ಅತಿ ಉತ್ತಮತೆಯನ್ನ ನಿರೀಕ್ಷಿಸುವದು. (Expecting best in people). ಅದು ಒಂದು ರೀತಿ ಒಳ್ಳೆಯದೇ. ಒಂದೆರಡು ಸಲ ಡಿಸಪಾಯಿಂಟ್ ಆಗಿದ್ದರೂ, ನಂಬಿಕೆ ಇಟ್ಟಿದ್ದಕ್ಕೆ ಸುಮಾರ ಜನ ಆ ಲೆವೆಲ್ ಗೆ ಎದ್ದು ಬಂದಿದ್ದಾರೆ. ಕೆಲಸದಲ್ಲೇ ಇರಬಹದು. ವೈಯಕ್ತಿಕ ನೆಲೆಯಲ್ಲೇ ಇರಬಹದು.

ಸಾಡೇ ಸಾತ್ ಶನಿ ಜೀವನದಲ್ಲಿ ಸುಮಾರು ಮೂರು ಸಾರೆ ಬರೋ ಚಾನ್ಸ್ ಇದೆಯಂತೆ. ಆವಾಗ ಬೇರೆ ಗ್ರಹದ ರಕ್ಷೆ ಇಲ್ಲದಿದ್ದರೆ ಗ್ರಹಚಾರ ಕೆಟ್ಟರೂ ಕೆಟ್ಟಿತು. ಆದರೆ ಈ 'ಪೂರ್ವಾ'ಗ್ರಹಚಾರ ಪೀಡೆಯಿಂದ ತಪ್ಪಿಸಿಕೊಳ್ಳೊ  ಸರಳ ಸೂತ್ರ ನಿಮ್ಮ ಕೈಯಲ್ಲೇ ಇದೆ.

** ಬಿಚ್ಚಿ ಮಾತಾಡೋಣ ಬನ್ನಿ. ಪ್ಲೀಸ್. ಅಂದ್ರೆ ಮನಸ್ಸು ಬಿಚ್ಚಿ ಮಾತಾಡೋಣ - ಅಂತ ಡೈಲಾಗ್ ಹೊಡೆದಿದ್ದು ಜಗ್ಗೇಶ್. "ತರ್ಲೆ ನನ್ ಮಗ" ಸಿನೆಮಾದ ವಧು ಪರೀಕ್ಷೆ ಸೀನಾ? ಅಥವಾ ಗುಂಡನ ಮದುವೆ ಮೂವಿನಾ? ಸ್ವಲ್ಪ ಸಂದೇಹ. :) :)

1 comment:

Arunkumar said...

ಪೂರ್ವಾಗ್ರಹ ದಿಂದ ಸಂಭವಿಸಬಹುದಾದ ಇನ್ನೊಂದು ದೊಡ್ಡ ಆಘಾತ ಭ್ರಮನಿರಸನ. ಅಷ್ಟಕ್ಕೂ ಈ ಪೂರ್ವಾಗ್ರಹಕ್ಕೆ ಕಾರಣಗಳೇನು? ನಮ್ಮ ಆಲಸ್ಯವಿರಬಹುದೇ?