Friday, July 20, 2012

ಬಿದಿರಿನ ಬುಟ್ಟಿಯಲ್ಲಿ ನೀರು ನಿಲ್ಲಲಿಲ್ಲ.....ಆದರೆ....

ಅವರೊಬ್ಬರು ಗುರುಗಳು. ಇವನೊಬ್ಬ ಶಿಷ್ಯ. ಅವರ ಕಡೆ ಬಂದು ಸೇರಿಕೊಂಡ. ಆತ್ಮಜ್ಞಾನ ಕಲಿಯಲು.

ಎಲ್ಲರಿಗೂ ಹೇಳುವಂತೆ ಗುರುಗಳು ಈ ಶಿಷ್ಯನಿಗೂ - ಭಗವದ್ಗೀತೆ, ಉಪನಿಷತ್ತುಗಳು, ಶಂಕರ-ಮಧ್ವ-ರಾಮಾನುಜರು ಬರೆದ ಭಾಷ್ಯಗಳು, ಇತ್ಯಾದಿ ಪುಸ್ತಗಳನ್ನು ಓದು, ಓದಿದ್ದನ್ನು ಮನನ ಮಾಡು, ನಂತರ ಅವುಗಳ ಅರ್ಥದ ಮೇಲೆ ಧ್ಯಾನ ಮಾಡು- ಅಂತ  ಸ್ಟ್ಯಾಂಡರ್ಡ್ ಸಿಲೆಬಸ್ ಮತ್ತು ಸೂಚನೆ ಕೊಟ್ಟು ಕಳಿಸಿದರು.

ಈ ಶಿಷ್ಯನೋ.....ನಮ್ಮ ನಿಮ್ಮ ಹಾಗೆ. ಒಂದೆರಡು ದಿನ ಓದಿದ. ಏನೂ ತಿಳಿಯಲಿಲ್ಲ. ಓದಿದ್ದೇ ತಿಳಿಯಲಿಲ್ಲ ಅಂದ ಮೇಲೆ ಮನನ, ಧ್ಯಾನ ಮಾಡುವದೇನು ಬಂತು? ಸಿಕ್ಕಾಪಟ್ಟೆ ಬೋರ್ ಹೊಡೆಯಲು ಶುರು ಆಯಿತು. ವಾಪಸ್ ಗುರುಗಳ ಕಡೆ ಬಂದ.

ಗುರುವೇ, ಏನೂ ಮಾಡಿದರೂ ಓದಿದ್ದು ತಿಳಿಯುತ್ತಿಲ್ಲ. ಹಾಂಗಾಗಿ ಓದಲು ಮನಸ್ಸೇ ಬರುತ್ತಿಲ್ಲ. ಏನು ಮಾಡಲಿ? - ಅಂತ ಗುರುಗಳ ಮುಂದೆ ತನ್ನ ಪ್ರಾಬ್ಲೆಮ್ ಹೇಳಿಕೊಂಡ.

ಗುರುಗಳು ಒಂದು ಸರಿ ಅವನನ್ನ ಮೇಲಿಂದ ಕೆಳವರಗೆ, ಅದೂ ಯೋಗದೃಷ್ಟಿಯಿಂದ, ನೋಡಿದರು. ಈ ಶಿಷ್ಯ ಅವನ ವೈಯಕ್ತಿಕ ಅಧ್ಯಾತ್ಮಿಕ ವಿಕಸನದಲ್ಲಿ ಯಾವ ಹಂತದಲ್ಲಿ ಇರಬಹುದು ಎಂದು ಲೆಕ್ಕ ಹಾಕಿದರು.

ಶಿಷ್ಯಾ,  ಆ ಪುಸ್ತಕ ಎಲ್ಲ ಕಟ್ಟಿಡು. ಆ ಮೂಲೆಯಲ್ಲಿ ಒಂದು ಬಿದಿರಿನ ಬುಟ್ಟಿ ಕಾಣುತ್ತದೆ ನೋಡು. ಅದರಲ್ಲಿ ಇಲ್ಲಿಂದ ಒಂದು ಮೈಲ್ ದೂರವಿರುವ ನದಿಯಿಂದ ನೀರು ತೆಗೆದುಕೊಂಡು ಬಾ. ತಂದ ನೀರನ್ನು ಓ ಅಲ್ಲಿ ಇರುವ ತೊಟ್ಟಿಯಲ್ಲಿ ತುಂಬಿಸು - ಅಂತ ಅಂದರು ಗುರು.

ಗುರವೇ, ಬಿದರಿನ ಬುಟ್ಟಿಯಲ್ಲಿ ನೀರು ತರುವದೇ?  ಅದು ಸಾಧ್ಯದೇ? ಚಿಕ್ಕ ಚಿಕ್ಕ ತೂತುಗಳಿರುವ ಬಿದಿರಿನ ಬುಟ್ಟಿಯಿಂದ ನೀರೆಲ್ಲ ಸೋರಿ ಹೋಗುವದಿಲ್ಲವೆ? - ಅಂತ ತಲೆ ಉಪಯೋಗಿಸಿ ಪ್ರಶ್ನೆ ಕೇಳಿದ.

ಅದೆಲ್ಲ ಪ್ರಶ್ನೆ ಆಮೇಲೆ. ಈಗ ಹೇಳಿದಷ್ಟು ಮಾಡು ಶಿಷ್ಯ - ಅಂತ ಹೇಳಿ ಗುರುಗಳು ತಮ್ಮ ಕೆಲಸ ನೋಡಿಕೊಂಡು ಹೋದರು.

ಶಿಷ್ಯ, ಗುರುಗಳು ಹೇಳಿದ್ದರಲ್ಲಿ ಏನೋ ಅರ್ಥವಿರುವದಿಂದಲೇ ಹಾಗೆ ಮಾಡಲು ಹೇಳಿದ್ದಾರೆ ಅಂತ, ಬಿದಿರಿನ ಬುಟ್ಟಿ ಎತ್ತಿಕೊಂಡ.

ಆ ಬುಟ್ಟಿಯಲ್ಲಿ ಇದ್ದಿಲು ತರುತ್ತಿದ್ದರು ಅಂತ ಕಾಣುತ್ತದೆ. ಇದ್ದಿಲಿನ ಒಂದು ದಪ್ಪ ಕೋಟಿಂಗ್ ಬುಟ್ಟಿಯ ತುಂಬಾ ಕೂತಿತ್ತು. ಕಪ್ಪಗಾಗಿತ್ತು ಬುಟ್ಟಿಯ ಒಳಭಾಗ.

ಬುಟ್ಟಿ ತೆಗೆದುಕೊಂಡು ನದಿಗೆ ಹೋದ. ನೀರು ತುಂಬಿದ. ವಾಪಸ್ ಹೊರಟ. ಸುಮಾರು ಹತ್ತು ಹದಿನೈದು ಮಾರು ನೆಡೆಯುವದರಲ್ಲಿಯೇ ನೀರು ಪೂರ್ತಿ ಸೋರಿ ಹೋಯಿತು. ಮತ್ತೆ ನದಿ ದಂಡೆಗೆ ಬಂದ. ಮತ್ತೆ ನೀರು ತುಂಬಿದ. ಈ ಸಲ ಸ್ವಲ್ಪ ಬೇಗ ಬೇಗ ಹೆಜ್ಜೆ ಹಾಕಿದ. ಎಷ್ಟೇ ಬೇಗ ಬೇಗ ಹೆಜ್ಜೆ ಹಾಕಿದರೂ ಮತ್ತೆ ಸ್ವಲ್ಪ ದೂರ ನಡೆಯುವ ತನಕ ನೀರೆಲ್ಲ ಸೋರಿ ಹೋಗಿ ಬುಟ್ಟಿ ಖಾಲಿ.

ಆದರೆ ಶಿಷ್ಯನಿಗೆ ಗುರುಗಳ ಮೇಲೆ ಪೂರ್ತಿ ನಂಬಿಕೆ ಇತ್ತು ನೋಡಿ. ಅದಕ್ಕೆ ಇಡೀ ದಿವಸ ಅದೇ ಕೆಲಸ ಮಾಡುತ್ತಾ ಇದ್ದ. ಆದರೆ ತೊಟ್ಟಿಯವರೆಗೆ ಹೋಗಿ, ತೊಟ್ಟಿ ತುಂಬಿಸಿ ಬರುವ ಪ್ರಮೇಯವೇ ಬರಲಿಲ್ಲ. ಅಷ್ಟು ಬೇಗ ನೀರು ಸೋರಿ ಹೋಗುತ್ತಿತ್ತು.

ಸಂಜೆಯ ಸಮಯಕ್ಕೆ ಗುರುಗಳು ನದಿ ತೀರಕ್ಕೆ ಬಂದರು. ಶಿಷ್ಯ ತನ್ನ ಕೆಲಸ ಮುಂದುವರಿಸಿದ್ದ.

ಹೇಗೆ ನಡೆದಿದೆ ಕೆಲಸ? - ಅಂದರು ಗುರುಗಳು.

ನೋಡಿ ಗುರುಗಳೇ, ನಿಮ್ಮ ಮೇಲಿನ ಭಕ್ತಿಯಿಂದ ಬಿದರಿನ ಬುಟ್ಟಿಯಲ್ಲಿ ನೀರು ತುಂಬಿ ಸಾಗಿಸುವ ಕೆಲಸ ಮಾಡುತ್ತಿದ್ದೇನೆ. ಪ್ರಯೋಜನವಂತೂ ಕಾಣುತ್ತಿಲ್ಲ - ಅಂದ ಶಿಷ್ಯ.

ಆ ಬುಟ್ಟಿಯನ್ನು ತೆಗೆದುಕೊಂಡು ಬಾ. ನಿನಗೆ ಪ್ರಯೋಜನ ತೋರಿಸುತ್ತೇನೆ - ಅಂದರು ಗುರುಗಳು.

ಶಿಷ್ಯ ತಂದು ಅವರಿಗೆ ಬುಟ್ಟಿ ಕೊಟ್ಟ.

ಈ ಬುಟ್ಟಿ ಮೊದಲು ಹೇಗಿತ್ತು? ಈಗ ಹೇಗೆ ಆಗಿದೆ? - ಅಂತ ಕೇಳಿದರು ಗುರುಗಳು.

ಇದ್ದಿಲಿನ ಒಂದು ದಪ್ಪ ಕಪ್ಪು ಕೋಟಿಂಗ್ ಹೊಂದಿದ್ದ ಬುಟ್ಟಿ ಈಗ ಪೂರ್ತಿ ಸ್ವಚ್ಛವಾಗಿತ್ತು. ನೀರು ಸೋರಿ ಹೋಗಿತ್ತು. ನಿಜ. ಸೋರಿ ಹೋಗುವ ಸಮಯದಲ್ಲಿ ಇದ್ದಿಲಿನ ಕೊಳೆಯನ್ನೂ ತೊಳೆದು ಹೋಗಿತ್ತು ನೀರು. ಒಟ್ಟಿನಲ್ಲಿ  ಬುಟ್ಟಿ ಕ್ಲೀನ್ ಆಗಿ ಬೇರೆ ಕೆಲಸಕ್ಕೆ ಉಪಯೋಗಿಸಲು ತಯಾರ್ ಆಗಿತ್ತು.

ನೋಡಿದಿಯಾ ಶಿಷ್ಯಾ? ಒಮ್ಮೊಮ್ಮೆ ನಾವು ಓದುವದು ನಮಗೆ ಪೂರ್ಣವಾಗಿ ಅರ್ಥ ಆಗಲಿಕ್ಕೆ ಇಲ್ಲ. ಆದರೆ ನಮ್ಮ ಪುಣ್ಯಗ್ರಂಥಗಳ ಮಹಿಮೆ ಹೇಗೆ ಇರುತ್ತದೆ ಅಂದರೆ ನದಿಯ ನೀರು ಬುಟ್ಟಿಯ ಕೊಳೆ ತೊಳೆದಂತೆ. ಅದೇ ರೀತಿ ಸಹಸ್ರಾರು ವರ್ಷಗಳಿಂದ, ಸಾವಿರಾರು ಮಹಾನ್ ಸಾಧಕರು, ಸಿದ್ಧಪುರುಷರು, ದೈವಜ್ಞಾನ ಕಲಿತು, ಅರಗಿಸಿಕೊಂಡು, ನಮ್ಮಂತ ಪಾಮರರಿಗೆ ಅರ್ಥ ಮಾಡಿಸಲಿಕ್ಕೆ ಹೊರಟ ಪುಸ್ತಕಗಳೂ ಹಾಗೆಯೇ. ನಮ್ಮ ಟೈಮ್ ಬಂದಾಗ ಅರ್ಥ ಆಗುತ್ತವೆ. ಅಲ್ಲಿಯ ತನಕ ಶೃದ್ಧೆಯಿಂದ ಓದುತ್ತಾ ಇದ್ದರೆ ನಮ್ಮ ಅಂತರಂಗವನ್ನು ಒಂದು ರೀತಿಯಿಂದ ತೊಳೆ ತೊಳೆದು ಕ್ಲೀನ್ ಮಾಡುತ್ತವೆ ಆ ಮಹಾನ್ ಪುಸ್ತಕಗಳು. ಈ ರೀತಿ ಕ್ಲೀನ್ ಆದ ನಮ್ಮ ಅಂತರಂಗ ಭಗವಂತನಿಗೆ ತೆರೆದುಕೊಳ್ಳುತ್ತದೆ - ಅಂತ ಗುರುಗಳು ತಮ್ಮ ಉಪದೇಶ ಮುಗಿಸಿದರು.

ಈ ಕಥೆ ಯಾರದೋ ಬ್ಲಾಗಿನಲ್ಲಿ ಸುಮಾರು ವರ್ಷದ ಹಿಂದೆ ಓದಿದ  ನೆನಪು. ಆದರೆ ಪದೇ ಪದೇ ನೆನಪು ಮಾಡಿಕೊಳ್ಳುತ್ತೇನೆ. ಯಾಕೆಂದರೆ ಸುಮಾರು ಪುಸ್ತಕಗಳು ನನಗೂ ಅರ್ಥವಾಗುವದಿಲ್ಲ. ತಲೆ ಚಚ್ಚಿಕೊಂಡರೂ ಅರ್ಥವಾಗುವದಿಲ್ಲ. ಆದ್ರೆ ಆ ಪುಸ್ತಕಗಳ  ಮಹಿಮೆಯ ಬಗ್ಗೆ ಎರಡು ಮಾತಿಲ್ಲ. ಹಾಗಾಗಿ ನಿಧಾನವಾಗಿ ಆದರೂ ಅಡ್ಡಿಯಿಲ್ಲ. ದಿನಕ್ಕೆ 2-3 ಪುಟ ಓದಿದರೂ ಅಡ್ಡಿಯಿಲ್ಲ. ಓದುತ್ತಾ ಓದುತ್ತಾ ನಿದ್ದೆ ಬಂದು ಮಾಡಬಾರದ ಟೈಮ್ ನಲ್ಲಿ ನಿದ್ದೆ ಮಾಡಿದರೂ ಚಿಂತೆಯಿಲ್ಲ. ಎಲ್ಲೋ ಏನೋ ಕ್ಲೀನ್ ಆಗ್ತಾ ಇರತ್ತೆ ಅಂತ ಓದುವದನ್ನು ಮಾತ್ರ ಮುಂದುವರಿಸುವದು.

ಹಾಗೆ ನೋಡಿದರೆ ನಾವು ಎಷ್ಟೋ ಅದೃಷ್ಟಶಾಲಿಗಳು. ನಮಗೆ ಇವತ್ತಿನ ಜಮಾನಾದಲ್ಲಿ ಇಂಟರ್ನೆಟ್ ಇದೆ, ಪುಸ್ತಕ ಓದಿ ಅರ್ಥವಾಗದಿದ್ದರೆ ಒಳ್ಳೊಳ್ಳೆ ಗುರುಗಳ, ಆಚಾರ್ಯರ ಪ್ರವಚನಗಳು ಬೇರೆ ಬೇರೆ ಮಾಧ್ಯಮದಲ್ಲಿ ಲಭ್ಯ ಇವೆ. ನಮಗೆ ಸೀದಾ ಶಂಕರಾಚಾರ್ಯರು ಸಂಸ್ಕೃತದಲ್ಲಿ ಬರೆದ ಕಬ್ಬಿಣದ ಕಡಲೆಯಂತಹ ಬ್ರಹ್ಮಸೂತ್ರ ಭಾಷ್ಯ ಓದಿ ತಿಳಿದುಕೊಳ್ಳಬೇಕು ಅಂತೇನೂ ಇಲ್ಲ. ಅಷ್ಟರ ಮಟ್ಟಿಗೆ ನಾವು ಧನ್ಯರೇ.

ಆದರೆ ನಮಗೆ ಆಲಸ್ಯ. ಓದಿದ್ದು ಎಲ್ಲವೂ ಅರ್ಥವಾಗಬೇಕು ಎಂಬ ವಿತಂಡ ಬಯಕೆ. ನಮ್ಮ ಸಣ್ಣ ಜ್ಞಾನದ ಪರೀಧಿಗೆ ನಿಲುಕದ್ದು ನಮಗೆ ವರ್ಜ್ಯ. ಹೀಗಾಗಿ ಎಷ್ಟೋ ಸಲ ಅರ್ಧಕ್ಕೇ ಬಿಟ್ಟು ಬಿಡುತ್ತೇವೆ. ಇಂತಹ ಚಿಕ್ಕ ನೀತಿ ಕಥೆಗಳು ಆವಾಗ ಸಹಾಯಕ್ಕೆ ಬರುತ್ತವೆ.

ಈ ಕಥೆಯನ್ನ ಮತ್ತೆ  ಇವತ್ತು ನೆನಪು ಮಾಡಿಕೊಂಡಿದ್ದು ಯಾಕೆ ಅಂದರೆ ಈಗ ಸುಮಾರು ಎರಡು ತಿಂಗಳಿಂದ ಸ್ವಾಮಿ ಗಂಭೀರಾನಂದರು ಇಂಗ್ಲಿಷ್ನಲ್ಲಿ ಬರೆದಂತಹ ಆದಿ ಶಂಕರರ ಬ್ರಹ್ಮಸೂತ್ರ ಭಾಷ್ಯ ಓದುತ್ತಿದ್ದೇನೆ. ಕಬ್ಬಿಣದ ಕಡಲೆ. ಶಂಕರರ IQ ಯಾವ ಮಟ್ಟಿಗೆ ಇತ್ತು ಅನ್ನೋದು ಇದರಲ್ಲಿ ಕಾಣುತ್ತದೆ. 'ಬ್ರಹ್ಮನ್' (consciousness) ಅಂತ ಒಂದು ಮೂಲ ತತ್ವ  ಹಿಡಿದುಕೊಂಡು ಹೇಗೆ ಎಲ್ಲವನ್ನೂ ವಿಶ್ಲೇಷಿಸುತ್ತಾ ಹೋಗುವ ಶಂಕರರ ಬುದ್ಧಿಶಕ್ತಿ, ತರ್ಕಶಕ್ತಿಗೆ ಹಾಟ್ಸ್ ಆಫ್. ನಮ್ಮ ತಲೆ ಸ್ವಲ್ಪ ಕ್ಲೀನ ಆದೀತು. ಈ ಜನ್ಮದಲ್ಲಿ ಅಲ್ಲದಿದ್ದರೂ ಮುಂದೊಮ್ಮೆ ಅರ್ಥವಾದೀತು ಎಂಬ ಬಯಕೆಯೊಂದಿಗೆ ನಮ್ಮ ಬಿದಿರಿನ ಬುಟ್ಟಿಯಲ್ಲಿ ಶಂಕರರ ಜ್ಞಾನದ ಅಮೃತ ತುಂಬುವ ಪ್ರಯತ್ನ ಮಾಡುತ್ತಿದ್ದೇವೆ.

ತುಂಬಾ ಹಿಂದೆ ಬರೆದ ಇಂಗ್ಲಿಷ್ ಪೋಸ್ಟ್ ಗೆ ಲಿಂಕ್ ಇಲ್ಲದೆ ನೋಡಿ.

No comments: