Monday, July 23, 2012

ಸರ್ವ ಗುರುಗಳ, ಸ್ವಾಮಿಗಳ ಕಚ್ಛೆ ಬಿಚ್ಚೋಡಿಸ್ಯಾಮಿಬುದ್ಧಂ ಶರಣಂ ಗಚ್ಛಾಮಿ. ಧರ್ಮಂ ಶರಣಂ ಗಚ್ಛಾಮಿ. ಇವೆಲ್ಲ ಕೇಳಿದ್ದು ಆಯಿತು.

ಇಲ್ಲೊಬ್ಬರು ಲೇಖಕರು. ಅವರ ಹೆಸರು ಜೆಫ್ರಿ ಫಾಕ್ ಅಂತೆ.

ಸರ್ವ ಗುರುಗಳ ಕಚ್ಛೆ ಬಿಚ್ಚಾಮಿ. ಬಿಚ್ಚಿ ಓಡಿಸ್ಯಾಮಿ ಅಂತ ಹೊಂಟು ಬಿಟ್ಟಿದ್ದಾರೆ ನೋಡಿ. 

ಈಗ ಜೆಫ್ರಿ ಫಾಕ್ ಬರೆದ - Stripping The Gurus - ಎಂಬ ಪುಸ್ತಕ ನೋಡೋಣ ಬನ್ನಿ.

ಯಾರ್ರೀ ಇವರು ಜೆಫ್ರಿ ಫಾಕ್?

ಈಗ ಸುಮಾರು ವರ್ಷಗಳ ಹಿಂದೆ ಜೆಫ್ರಿ ಫಾಕ್ ಅವರು ಸ್ವಾಮಿ ಯೋಗಾನಂದರ ದಕ್ಷಿಣ ಕ್ಯಾಲಿಫೋರ್ನಿಯದ ಆಶ್ರಮದಲ್ಲಿ ಇದ್ದರಂತೆ. ತಮ್ಮ ಎಲ್ಲವನ್ನೂ ಅರ್ಪಣೆ ಮಾಡಿಕೊಂಡು  ಸ್ವಾಮಿ ಯೋಗಾನಂದರ ಶಿಷ್ಯ ಸ್ವಾಮಿ ಕ್ರಿಯಾನಂದರನ್ನು ತಮ್ಮ ಪರಮ ಗುರುಗಳು ಅಂತ ತಿಳಕೊಂಡು ಇದ್ದವರು. ಒಟ್ಟಿನಲ್ಲಿ ಆಶ್ರಮ ಸರಿ ಬರಲಿಲ್ಲ. ಭ್ರಮನಿರಸನವಾಯಿತು ಅಂತ ಕಾಣಿಸುತ್ತದೆ. ಆಶ್ರಮ ಬಿಟ್ಟು ಬಂದವರೇ - ಈ ಎಲ್ಲ ಸ್ವಾಮಿ, ಸಾಧು, ಸಂತರ ಜನ್ಮ ಜಾಲಾಡಿ ಬಿಡುತ್ತೇನೆ - ಅಂತ ನಿರ್ಧರಿಸಿದವರೇ ಪುಸ್ತಕ ಬರೆಯಲು ಕೂತು ಬಿಟ್ಟರು. ಅದರ ಪ್ರತಿಫಲವೇ - Stripping The Gurus - ಎಂಬ ಪುಸ್ತಕ.

ಯಾವದೇ ಪೂರ್ವಾಗ್ರಹಗಳನ್ನು (prejudices) ಇಟ್ಟುಗೊಳ್ಳದೆ ಓದಿದರೆ ಒಂದು ತರಹದ ವಿಭಿನ್ನ ರೀತಿಯ ಪುಸ್ತಕ ಓದಿದಂತೆ ಅನ್ನಿಸಬಹುದು. ಪೂರ್ವಾಗ್ರಹ ಇಟ್ಟುಗೊಂಡು ಯಾವದೇ ಪುಸ್ತಕ  ಓದಬಾರದು. ಈ ಪುಸ್ತಕವನ್ನು ಪೂರ್ವಾಗ್ರಹ ಪೀಡಿತರು ನೋಡಲೂ ಬಾರದು.

ಈ ಪುಸ್ತಕ ನಾನು ಸುಮಾರ್ 2-3 ವರ್ಷದ ಹಿಂದೆ ಓದಿದ್ದು. ಏನೋ ರೋಚಕ ಇದ್ದಂಗೆ ಕಂಡಿತು. ಆ ದಿನಗಳಲ್ಲಿ ರೋಚಕ ಪುಸ್ತಕ, ಟ್ಯಾಬ್ಲಾಯಿಡ್ ಎಲ್ಲ ಬಾಯಿ ಚಪ್ಪರಿಸಿ ಓದುವ ಹವ್ಯಾಸ ನಮಗೆ. ಅದೂ ಬಿಟ್ಟಿ ಸಿಗುವ ಪುಸ್ತಕ. ನಮಗೆ ತಿಳಿದ, ಕೇಳಿದ ಸ್ವಾಮಿಗಳನ್ನ, ಆಚಾರ್ಯರನ್ನ ಎಲ್ಲರನ್ನೂ ನಂಗಾ ಮಾಡಿ ಎಕ್ಸಪೋಸ್ ಮಾಡಿದ್ದೇನೆ ಅನ್ನುತ್ತಾರೆ. ದೊಡ್ಡ ವಿದ್ವಾಂಸ ಡಾ.ನರಸಿಂಗ ಸೀಲ್ ಮುನ್ನುಡಿ ಬೇರೆ ಬರೆದ್ದಿದ್ದಾರೆ. ಹಾಗಾಗಿ ಓದಿದ ಟೈಮ್ ಗೆ ಖೋತಾ ಆಗಲಿಕ್ಕೆ ಇಲ್ಲ ಅಂದುಕೊಂಡು ಪುಸ್ತಕ ಎತ್ತಿಕೊಂಡರೆ ಒಂದು ವಿಚಿತ್ರ ಲೋಕಕ್ಕೆ ಹೋದ ಅನುಭವ.

ಸ್ವಾಮಿ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಸ್ವಾಮಿ ಯೋಗಾನಂದರು ಮತ್ತು ಅವರ SRF ಸಂಘಟನೆ, ಸ್ವಾಮಿ ರಾಮ, ಓಶೋ ರಜನೀಶ್, ಗಣೇಶಪುರಿಯ ಸ್ವಾಮಿ ನಿತ್ಯಾನಂದ, ಅವರ ಶಿಷ್ಯ ಸ್ವಾಮಿ ಮುಕ್ತಾನಂದ, ಹರೇ ರಾಮ ಹರೇ ಕೃಷ್ಣ, ಇತ್ಯಾದಿ, ಇತ್ಯಾದಿ ಸ್ವಾಮಿಗಳು, ಸಂಘ ಸಂಸ್ಥೆಗಳು ಜೆಫ್ರಿ ಫಾಕ್  ರ ಮೊನಚು ಕಲಮಿಗೆ ಬಲಿಯಾಗಿವೆ. ಕೇವಲ ಸನಾತನ  ಧರ್ಮದ ಗುರುಗಳಷ್ಟೇ ಅಲ್ಲ. ಸುಮಾರು ಬೌದ್ಧರನ್ನೂ ಹಿಡಿದು ಅಲುಗಾಡಿಸಿದ್ದಾರೆ ಫಾಕ್.

ತಾವು ದಾಖಲಿಸಿದ್ದಕ್ಕೆ ಎಲ್ಲ ಪೂರಕ ಮಾಹಿತಿ ಒದಗಿಸಿದ್ದಾರೆ ಲೇಖಕ ಫಾಕ್. ಅಷ್ಟರಮಟ್ಟಿಗೆ ಅವರನ್ನು ಗೌರವಿಸುತ್ತೇನೆ. ಪುಸ್ತಕದಲ್ಲಿ ಇರುವ ಮಾಹಿತಿಗಿಂತ ರೆಫರನ್ಸ್ ಜಾಸ್ತಿ ಇದೆ. ಸುಮಾರು ರೆಫರನ್ಸ್ ಎಲ್ಲ ಆ ಕಾಲದ ದಿನಪತ್ರಿಕೆಗಳು. ಅವನ್ನು ಹುಡಕಿಕೊಂಡು ಎಲ್ಲಿ ಹೋಗೋಣ? ಕೆಲವೊಂದು ನೂರಾರು ವರ್ಷದ ಹಿಂದಿಯ ಸಂಗತಿಗಳು.

ಇದರಲ್ಲಿ ಬರುವ ಸ್ವಾಮಿಗಳ, ಸಂತರ, ಗುರುಗಳ ವೈಯಕ್ತಿಕ ವೈಪರೀತ್ಯಗಳು, ವಿಲಕ್ಷಣತೆಗಳು, ವಿಕ್ಷಿಪ್ತತೆಗಳು  ಏನೇ ಇರಲಿ, ಆ ಮಹಾನುಭಾವರು ನಮ್ಮ ಸಂಸ್ಕೃತಿಯನ್ನು ಉಳಿಸಲು, ಬೆಳೆಸಲು ಕೊಟ್ಟ ಕೊಡುಗೆ ಅಮೂಲ್ಯ. ಅವರುಗಳು ಬರೆದ ಪುಸ್ತಕಗಳು, ಕೊಟ್ಟ ಪ್ರವಚನಗಳು ಇಂದಿಗೂ ನಮಗೆ ಉಪಯೋಗಕಾರಿ. ಈ ಪುಸ್ತಕದಲ್ಲಿ ಜೆಫ್ರೀ ಫಾಕ್ ಕೊಟ್ಟ ಸ್ಫೋಟಕ ಮಾಹಿತಿ ಇನ್ನೊಂದು ದೃಷ್ಟಿಕೋನ ಬೇಕಾದರೆ  ನೀಡಲಿ. ಆದರೆ 10% ಋಣಾತ್ಮಕ ಮಾಹಿತಿ ಉಳಿದ 90% ಉಪಯುಕ್ತ ಮಾಹಿತಿಗಳನ್ನು  ಕೊಳೆಯಂತೆ ದೂರ ಸರಿಸದಿರಲಿ. ಅಷ್ಟೇ ನಮ್ಮ ಕೋರಿಕೆ.

ಈ ಕಾಲದಲ್ಲಿ ಇರುವಂತೆ ಆಗಲೂ ಇದ್ದಿದ್ದು ಇಲ್ಲದ್ದಕ್ಕೆ ಮಸಾಲೆ ಹಾಕಿ ಬರೆಯುವ ಪತ್ರಿಕೆಗಳು ಇದ್ದೇ ಇದ್ದವು. ಪ್ರತಿ ಖ್ಯಾತನಾಮರ ಸುತ್ತ ಮುತ್ತ ಅವರನ್ನು ಒಂದಲ್ಲ ಒಂದು ಕಾರಣಕ್ಕೆ ವಿರೋಧಿಸುವ ಜನ ಇದ್ದೇ ಇರುತ್ತಾರೆ. ಅವರು ಹೇಳುವ ವಿಷಯ ಒಂದೊಂದು ಸಲ ನಿಜವಿರುತ್ತದೆ. ಒಮ್ಮೊಮ್ಮೆ ನಿಜವಿದ್ದರೂ ಏನೂ ಸಂಬಂಧವಿರುವದಿಲ್ಲ.

ಮತ್ತೆ ಇನ್ನೊಂದು. ಜೆಫ್ರೀ ಫಾಕ್ ಬಿಚ್ಚಿದ್ದೇನೆ ಎನ್ನುವ ಕೆಲವು ಸಾಧು ಸಂತರು ತಾಂತ್ರಿಕ ಯೋಗ ಪದ್ಧತಿಯವರು. ಅವರಲ್ಲಿ ಕೆಲವೊಂದು ವಿಚಿತ್ರ ಆಚಾರಗಳು, ಆಚರಣೆಗಳು ಇರುವದು ಸತ್ಯ. ಅವಕ್ಕೆ ವೇದಗಳಿಂದಲೇ ಬಂದಂತಹ ತಾಂತ್ರಿಕ ಗ್ರಂಥಗಳಲ್ಲಿ ವಿವರಣೆ ಸಿಗುತ್ತದೆ. ನಮಗೆ ಅರ್ಥವಾಗಲಿಕ್ಕೆ ಇಲ್ಲ. ಅಷ್ಟು ಮಾತ್ರಕ್ಕೆ ಅವೆಲ್ಲ ತಪ್ಪು, ನಮ್ಮ ಸಂಸ್ಕೃತಿಯಲ್ಲಿ ಅವಕ್ಕೆಲ್ಲ ಜಾಗ ಇಲ್ಲ ಅಂದ್ರೆ ತಪ್ಪಾಗುತ್ತದೆ. ಅಘೋರಿಗಳ ಆಚರಣೆಗಳು, ಜೀವನ ಪದ್ಧತಿ ತುಂಬಾ ವಿಚಿತ್ರ. ಅದಕ್ಕೇ ಅವರು ನಾಗರೀಕ ಸಮಾಜದಿಂದ ದೂರ ಇರುತ್ತಾರೆ. ಯಾರೋ ಒಬ್ಬ ನಾಗರಿಕ ಹೋಗಿ ಅಘೋರಿಗಳೋ, ನಾಗಾ ಸಾಧುಗಳೋ ಮುಂತಾದ ಬೇರೆಯೇ ತರಹದ ಜನರ ಮಧ್ಯೆ ಇದ್ದು ಬಂದು ಅವರ ಬಗ್ಗೆ ಬರೆದು ಅವೆಲ್ಲ ತಪ್ಪು ಅಂದರೆ ಅದನ್ನು ನಾವು ಒಪ್ಪಬೇಕು ಅಂತ ಏನೂ ಇಲ್ಲ.

ರಾಮಕೃಷ್ಣ ಪರಮಹಂಸರ ಮೇಲೆ ಈ ಪುಸ್ತಕದಲ್ಲೇ ಆಗಲಿ ಅಥವಾ ಬೇರೆಯವರ ಹತ್ತಿರ ಆಕ್ಷೇಪಣೆ ಕೇಳಿದ್ದೇನೆ. ಸುಮಾರು ಜನರ ಆಕ್ಷೇಪಣೆ ಅಂದರೆ - ರಾಮಕೃಷ್ಣರು ತಾಂತ್ರಿಕ ಯೋಗದ ಮೇಲೆ ಹಿಡಿತ ತಂದುಕೊಳ್ಳುವ ಕಾಲದದಲ್ಲಿ ಕೆಲವೊಂದು ಆಚರಣೆಗಳನ್ನು ಮಾಡಿದರು. ವಿಚಿತ್ರ ದೈಹಿಕ ಪರಿಣಾಮಗಳಾದವು. ಅವೆಲ್ಲ ವೇದಾಂತಿಗಳಿಗೆ ಶೋಭೆ ತಂದುಕೊಡುವಂತಹದ್ದು ಅಲ್ಲ. ಸರಿ. ಅದು ಒಂದು ವಾದ ಸರಣಿ. ಕೇಳಿಸಿಕೊಳ್ಳೋಣ. ಅದು ಸರಿಯೋ ತಪ್ಪೋ? ಏನೇ ಇರಲಿ. ಆದರೆ ಅದೊಂದೇ ಇಷ್ಟವಾಗಲಿಲ್ಲ ಅಂದ ಮಾತ್ರಕ್ಕೆ ರಾಮಕೃಷ್ಣರು ಕೊಟ್ಟ ಕೊಡುಗೆ ಕಮ್ಮಿಯೇ? ಒಂದೂವರೆ ಡಝನ್ ಶಿಷ್ಯರ ಪಡೆ ಸ್ಥಾಪಿಸಿ ನಿರ್ಗಮಿಸಿದವರು ಅವರು. ಅದೂ ಎಂಥ ಎಂಥ ಶಿಷ್ಯರು? ಸ್ವಾಮೀ ವಿವೇಕಾನಂದ, ಬ್ರಹ್ಮಾನಂದ, ಅಭೇದಾನಂದ. ಪ್ರೇಮಾನಂದ, ತ್ರಿಗುಣತೀತಾನಂದ, ಮುಂತಾದವರು. ಇಂಥ ಮಹಾತ್ಮರಿಂದ ತಾನೇ ರಾಮಕೃಷ್ಣ ಮಿಶನ್ ಎಂಬ ಅದ್ಭುತ ಸಂಸ್ಥೆ ಎದ್ದು ಬಂದು ನಮ್ಮ ದೇಶದ ವೇದಾಂತವನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದು?

ಇನ್ನು ಗಣೇಶಪುರಿಯ ನಿತ್ಯಾನಂದರು. ದಕ್ಷಿಣ ಭಾರತದಲ್ಲಿ ಕುಂಡಲಿನಿ ಮಹಾಯೋಗವನ್ನು ಸಾಮಾನ್ಯರಿಗೆ ತಿಳಿಯುವಂತೆ ಕಲಿಸಿದವರು ಗಣೇಶಪುರಿಯ ನಿತ್ಯಾನಂದರು. ಅದನ್ನು ದೇಶ ವಿದೇಶಗಳಲ್ಲಿ ಹರಡಿದವರು ಅವರ ಶಿಷ್ಯ ಸ್ವಾಮಿ ಮುಕ್ತಾನಂದರು. ಇಬ್ಬರ ಮೇಲೂ ಹಲವಾರು ಆಪಾದನೆಗಳು ಬಂದವು. ನಿಜ ಇರಬಹುದು. ಸುಳ್ಳೇ ಇರಬಹುದು. ಆದರೆ ಕಾಶ್ಮೀರದ ತಾಂತ್ರಿಕ ಶೈವರಲ್ಲಿ ಮಾತ್ರ ಕೊಂಚ ಮಟ್ಟಿಗೆ ಪ್ರಚಲಿತವಿದ್ದ ತುಂಬಾ ಶಕ್ತಿಶಾಲಿಯೂ ಆದರೆ ಅಷ್ಟೇ ಅಪಾಯಕಾರಿಯೂ ಆದ ಕುಂಡಲಿನಿ ಮಹಾಯೋಗವನ್ನು ಸರಳೀಕರಿಸಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಿದವರು ಈ ಇಬ್ಬರು ಮಹನೀಯರು. ಮುಂದೆ ಮುಕ್ತಾನಂದರ ಶಿಷ್ಯ ಸ್ವಾಮಿ ರುದ್ರಾನಂದರು ಮತ್ತೆ ಅವರ ಶಿಷ್ಯ ಸ್ವಾಮಿ ಕೇಕರಾಂತರು ಆ ಕೆಲಸವನ್ನು ಮುಂದುವರೆಸಿದ್ದಾರೆ.

ಗಣೇಶಪುರಿಯ ನಿತ್ಯಾನಂದರ ಬಗ್ಗೆ ಅವರ ಭಕ್ತರಿಂದ ಕೇಳಿದ್ದೋ ಅಥವಾ ಪುಸ್ತಕದಲ್ಲಿ ಓದಿದ್ದೋ ನೆನಪಿಲ್ಲ. ಅವರು ಮನಸ್ಸು ಬಂದಾಗ ಟ್ರೈನ್ ಹತ್ತಿ ಹೊರಟು ಬಿಡುತ್ತಿದ್ದರು. ಗೊತ್ತಿದ್ದ ಟಿಕೆಟ್ ಚೆಕರ್ ಯಾರೂ ಅವರನ್ನು ಟಿಕೆಟ್ ಕೇಳುತ್ತಿದ್ದಿಲ್ಲ. ಒಂದು ಸಲ ಟಿಕೆಟ್ ತೋರಿಸಿ ಟಿಕೆಟ್ ತೋರಿಸಿ ಅಂತ ಪಿರಿ ಪಿರಿ  ಮಾಡಿದ ಟಿಕೆಟ್ ಚೆಕರ್ ಗೆ ಗಾಳಿಯಲ್ಲಿ ಟಿಕೆಟ್ಗಳ ಗೊಂಚಲನ್ನೇ ಸೃಷ್ಟಿ ಮಾಡಿಸಿ ತೋರಿಸಿ ಅವನನ್ನು ಥಂಡಾ ಹೊಡೆಸಿದವರಂತೆ ನಿತ್ಯಾನಂದರು. ಅಂತಹ  ಮಹಾನ್ ಸಾಧಕರಿಗೆ ಇಂತಹ ಚಿಲ್ಲರೆ ಗಿಮ್ಮಿಕ್ಸ್ ಬೇಕಿತ್ತಾ ಅನ್ನುತ್ತಾರೆ ಕೆಲವರು. ಯಾರಿಗೆ ಗೊತ್ತು ಯಾವದು ಸರಿ ಅಂತ. ಅವರ ಪ್ರಸಾದ ಕೊಡುವ ವಿಧಾನವೂ ವಿಚಿತ್ರವಂತೆ. ಪಕ್ಕದಲ್ಲಿರುವ ಚೀಲದಿಂದ ತೆಂಗಿನಕಾಯಿ ತೆಗೆದು ಕ್ರಿಕೆಟ್ನಲ್ಲಿ ಬಾಲಿಂಗ್ ಮಾಡಿದಂತೆ ಎಸೆಯುವದು. ನಗು ಬಂತು ನಿಜ. ಆದ್ರೆ ಅದು ಅಷ್ಟು ದೊಡ್ಡ ಆಕ್ಷೇಪದ ಮಾತೆ? ಗೊತ್ತಿಲ್ಲ.

ಕಂಚಿ  ಪೀಠದ ಸ್ವಾಮಿಗಳಂತೂ ಕೊಲೆ ಅಪರಾಧದಲ್ಲಿ ಜೈಲಿಗೆ ಹೋಗಿ ಬಂದರು. ವಿಚಾರಣೆ ಇನ್ನೂ ನಡೆಯುತ್ತಿದೆ ಅಂತ ಕಾಣುತ್ತೆ. ಅವರ ಜೂನಿಯರ್ ಸ್ವಾಮಿಗಳು ಒಬ್ಬ  ನಟಿ ಜೊತೆ ಇರೋ ಕೆಸೆಟ್ ಇದೆಯಂದು ಪೊಲೀಸರು ಜೂನಿಯರ್ ಸ್ವಾಮಿಗಳನ್ನು ಮತ್ತು ಆ ನಟಿಯನ್ನು ವಿಚಾರಿಸಿದರು. ತಪ್ಪೋ, ಸರಿಯೋ? ಒಂದು ವೇಳೆ ತಪ್ಪಿದ್ದು ಶಿಕ್ಷೆ ಆದರೂ ಆ ಮಹಾನುಭಾವರು ಮಾಡಿರುವ ಒಳ್ಳೆ ಕೆಲಸಗಳು ಕಮ್ಮಿಯೇ?

ಮೊನ್ನೆ ಮೊನ್ನೆ ನಮ್ಮ ಬಿಡದಿ ನಿತ್ಯಾನಂದರ ಬಗ್ಗೆ ಒಂದು ಹಾಸ್ಯ ಲೇಖನ ಬರೆದಿದ್ದೆ. ಪೂರಕ ಓದಿಗೆ ಇಲ್ಲಿದೆ ನೋಡಿ. ಕಾಮಾಚಾರಿ ಸ್ವಾಮಿ ವಾಮಾಚಾರ ಮಾಡ್ತಾರಾ?

ಸ್ವಾಮಿಗಳೇ ಆದರೂ ಅವರೂ ಮನುಷ್ಯರೇ ತಾನೇ? ಸಾಧನೆಯ ಶುರುವಿನಲ್ಲಿ, ಮಧ್ಯೆ ಮಧ್ಯೆ ಅವರಿಂದ ಕೆಲವೊಂದು ವಿಲಕ್ಷಣ ಅನ್ನಿಸುವಂತಹ ಕೆಲವು ಘಟನೆಗಳು ನೆಡದಿರಬಹುದು. ಅದರ ಬಗ್ಗೆ ನಾವು ನಿರ್ಣಾಯಕ ಅಭಿಪ್ರಾಯ (judgmental opinion) ಹೊಂದುವದು ಎಷ್ಟು ಸರಿ? ಅವರು ಮಾಡಿದ್ದು ಸರಿಯೋ ತಪ್ಪೋ ಅನ್ನುವದು ಅವರಿಗೆ ಮಾತ್ರ ಗೊತ್ತು. ಇಲ್ಲ ದೇವರಿಗೆ ಗೊತ್ತು. ನಾವು ಕೇವಲ ಎಲ್ಲವನ್ನೂ ಕೇಳಿಸಿಕೊಂಡು ಹಂಸಕ್ಷೀರ ನ್ಯಾಯದಂತೆ ಒಳ್ಳೆಯದ್ದನ್ನು ಮಾತ್ರ ತೆಗೆದುಕೊಂಡು ನಮಗೆ ಸೇರದ್ದನ್ನು ಬಿಟ್ಟು ಬಿಟ್ಟರೆ ಆಯಿತು.

ಹಾಗಂತ ಜೆಫ್ರೀ ಫಾಕರು ಬರೆದಿದ್ದು ತಪ್ಪು ಅಂತ ನನ್ನ ಅಭಿಪ್ರಾಯವಲ್ಲ.  ಅವರಿಗೆ ಅಭಿವ್ಯಕ್ತಿ ಸ್ವಾತಂತ್ರವಿದೆ. ಬರೆದಿದ್ದಾರೆ. ಎಲ್ಲ ಕಡೆ ಪೂರಕ ಮಾಹಿತಿ ಕೊಟ್ಟಿದ್ದಾರೆ. ಮುಗಿಯಿತು. ಪುಸ್ತಕ ಓದಿ ಅಂತ ಅವರೇನೂ ಹೇಳಿಲ್ಲ. ಓದಿ ನಮಗೆ ಅಭ್ಯಂತರ ಇದ್ದರೆ ಅವರೊಂದಿಗೆ ತಗಾದೆ ತೆಗೆಯಬಹುದು. ಸುಮಾರು ಜನ ತೆಗೆದಿದ್ದರೂ ತೆಗೆದಿದ್ದರಬಹುದು. 

ಯಾವದೇ ಪೂರ್ವಾಗ್ರಹ ಇಟ್ಟುಗೊಳ್ಳದೆ ಓದಿದೆ. ಹೀಗೂ ಇರಬಹುದೇ ಶಿವಾ!!!??? - ಅಂತ ಭಾವನೆ ಬಂತೆ ವಿನಹಾ ಯಾರ ಮೇಲೂ ಭಕ್ತಿ ಅಥವಾ ಗೌರವ ಕಮ್ಮಿಯಾಗಲಿಲ್ಲ. Just another point of reference - ಅಷ್ಟೇ.

ಡಾ. ನರಸಿಂಗ ಸಿಲ್ ಎಂಬವರೂ ಸಹ ಸಾಕಷ್ಟು ' ಸ್ವಾಮಿಗಳನ್ನು ಬಿಚ್ಚಾಮಿ' ತರಹದ ಲೇಖನ, ಪುಸ್ತಕಗಳನ್ನು ಬರೆದಿದ್ದಾರೆ. ಅವನ್ನು ಇನ್ನೂ ಓದಬೇಕಿದೆ. ಒಂದು ಇಷ್ಟವಾಗುವ ಸಂಗತಿ ಅಂದರೆ ಫಾಕ್ ಆಗಲಿ, ಡಾ. ಸೀಲ್ ಆಗಲಿ ಯಾವದೇ ರಾಗ ದ್ವೇಷ ಇಟ್ಟುಗೊಂಡು ಬರೆದ ಹಾಗೆ ಕಾಣುವದಿಲ್ಲ. ತುಂಬಾ ಸಹಜ ಶೈಲಿಯಲ್ಲಿ ಬರೆಯುತ್ತಾರೆ. ಇಲ್ಲವಾದಲ್ಲಿ ಇಂತಹ ವಿಷಯ ಸಿಕ್ಕರೆ ವಿನಾಕಾರಣ ರೋಚಕವಾಗಿ ಬರೆಯುವವರೇ ಹೆಚ್ಚು. ಆ  ತರಹದ ಅಸಹಜ ರೋಚಕ ಪುಸ್ತಕಗಳನ್ನು ಬಹಳ ವಿಚಾರ ಮಾಡಿ ಓದುವದು ಒಳಿತು.

** Stripping the gurus - ಪುಸ್ತಕ ಓದಲು ವೆಬ್ ಸೈಟ್ ಗೆ (http://www.strippingthegurus.com/) ಹೋಗಿ. ಕೆಳಗೆ ಸ್ಕ್ರೋಲ್ ಮಾಡಿ. ಪೂರ್ತಿ ಕೆಳಗೇ ಪರಿವಿಡಿ ಇದೆ. ಅಲ್ಲಿಂದ ಪುಸ್ತಕದ ಎಲ್ಲ ಚಾಪ್ಟರ್ ಗೆ ಲಿಂಕ್ಸ್ ಇವೆ.

** ಕಚ್ಛೆ ಬಿಚ್ಚಾಮಿ - ಯಾವದೋ ಜಗ್ಗೇಶ್ ಸಿನೆಮಾದಿಂದ ಎತ್ತಿದ್ದು. ಅದರಲ್ಲಿ ಬ್ಯಾಂಕ್ ಜನಾರ್ಧನ್ ಅವರದ್ದು ಮಾರವಾಡಿ ಸೇಟು ಪಾತ್ರ. ಬ್ಯಾಂಕಿನಲ್ಲಿ ದುಡ್ಡು ಡ್ರಾ ಮಾಡಿಕೊಂಡ ಬಂದ ಅವರ ಪಂಚೆಯ ಕಚ್ಛೆಯನ್ನು ಕಿಡಿಗೇಡಿಯೊಬ್ಬ ಹಿಂದಿನಿಂದ ಮೆಲ್ಲನೆ ಜಗ್ಗಿಬಿಡುತ್ತಾನೆ. ಇನ್ನೊಬ್ಬ ಮುಂದಿನಿಂದ ಬಂದು - ಸೇಟು, ನಿಮ್ಮ ಕಚ್ಛೆ.....ಬುಧ್ಧಂ ಶರಣಂ ಬಿಚ್ಚಾಮಿ ಆಗಿಬಿಟ್ಟಿದೆ. ಸರಿ ಮಾಡಿಕೊಳ್ಳಿ - ಅನ್ನುತ್ತಾನೆ. ಮಾರವಾಡಿ ಕಚ್ಚೆ ಸರಿಮಾಡಿಕೊಳ್ಳುತ್ತಿರುವಾಗ ಅವನ ದುಡ್ಡಿಗೆ ನಾಮ ಹಾಕಿ ಎತ್ತಾಕಿಕೊಂಡು ಜಗ್ಗೇಶ್ ಮತ್ತು ಕಂಪನಿ ಪರಾರಿ. ಆ ಸಿನಿಮಾ ನಂತರ ಕಚ್ಛೆ ಬಿಚ್ಚಾಮಿ ಡೈಲಾಗ್ ತುಂಬಾ ಪಾಪ್ಯುಲರ್ ಆಗಿತ್ತು. 1992-1993 ಟೈಮ್ ಇರಬೇಕು.

** ಬಿಚ್ಚಿ + ಓಡಿಸ್ಯಾಮಿ = ಬಿಚ್ಚೋಡಿಸ್ಯಾಮಿ. ಯಾವ ಸಂಧಿಯೋ? ಯಾವ ಸಮಾಸವೋ ಗೊತ್ತಿಲ್ಲ. ತಮಾಷೆಗೆ  ಹೀಗೆ  ಮಾಡಿದ್ದು.