Wednesday, July 25, 2012

ಸಿಗ್ಗಿಲ್ಲೇಶ್ವರಿ ಸತಿಯೂ, ವಿಗ್ಗೇಶ್ವರ ಪತಿಯೂ

ಆವತ್ತು ಮತ್ತ ಕರೀಂ ಸಾಬ್ರು ಕಂಡರು. ಸ್ಕೂಟರ್ ಮ್ಯಾಲೆ ಬರ್ರ್ ಅಂತ ಜೋರ ಹೊಂಟಿದ್ರು. ಎಲ್ಲಕ್ಕಿಂತ ಆಶ್ಚರ್ಯವಾಗಿ ಕಂಡಿದ್ದು ಹೆಲ್ಮೆಟ್ ಹಾಕಿಕೊಂಡು ಹೊಂಟ ಸಾಬ್ರು. ಹೆಲ್ಮೆಟ್ ಕಂಪಲ್ಸರಿ ಇಲ್ಲ. ಅದೂ ಕೆಟ್ಟ ರಣ ರಣ ಬಿಸಿಲಿರೊ ಬ್ಯಾಸಗಿ ಟೈಮ್. ಇನ್ತಾದ್ರಾಗ ಯಾಕ್ ಹೆಲ್ಮೆಟ್ ಹಾಕ್ಕೊಂಡು ಹೊಂಟಾರ ಅಂತ ತಿಳಿಲಿಲ್ಲ.

ನಮ್ಮ ಕರಿಯೋ ಸ್ಟೈಲ್ ಗೊತ್ತಲ್ಲ ನಿಮಗ.

ಏ...........ಏ............ಕರೀಮ....ನಿಂದ್ರಪಾ.....ನಿಂದ್ರೋ......ಅಂತ ಹೊಯ್ಕೊತ್ತ ಚಪ್ಪಾಳಿ ಹೊಡದೆ ನೋಡ್ರಿ. ಅದು ಹ್ಯಾಂಗ ಇತ್ತ ಅಂದ್ರ ಅವನ ಹೆಲ್ಮೆಟ್ ಒಳಗ ಮುಚ್ಚಿದ್ದ ಕಿವಿಯೊಳಗೂ ಹೋಗಿ, ಅವನಿಗೆ ಕೇಳಿ, ಗಾಡಿ ನಿಲ್ಲಿಸಿದ. ರಸ್ತೆ ಕ್ರಾಸ್ ಮಾಡಿ ಹೋಗಿ ಸಾಬರನ್ನ ಭೆಟ್ಟಿ ಮಾಡಿದೆ.

ಫುಲ್ ಮಸಡಿ ಕವರ್ ಮಾಡೋ ಹಾಂಗ ಇರ್ತಾವ್ ನೋಡ್ರಿ, ಗಗನಯಾತ್ರಿ ಮಂದಿ ಹಾಕ್ಕೊತ್ತಾರಾ, ಅಂತಾ ಫುಲ್ ಹೆಲ್ಮೆಟ್ ಹಾಕಿಕೊಂಡಿದ್ದ ಕರೀಂ.

ಜಸ್ಟ್ ಮಸಡಿ ಮುಂದಿನ ಜಾಳ್ಗಿ ಹಾಂಗ ಇರೋದನ್ನ ಮಾತ್ರ ಮ್ಯಾಲೆ ಮಾಡಿ ಮಾತಾಡ್ಲಿಕ್ಕೆ ಶುರು ಮಾಡಿದಾ ಕರೀಂ.

ಲೇ....ಮಂಗ್ಯಾನ್ ಕೆ....ಪೂರ್ತ ಹೆಲ್ಮೆಟ್ ಕಳೆದು ಮಾತಾಡೋ....ಏನ್ ಈ ರಣ ರಣ ಬ್ಯಾಸಿಗಿ ಒಳಗಾ ಫುಲ್ ಹೆಲ್ಮೆಟ್? - ಅಂದೆ.

ಹ್ಞೂ....ಹ್ಞೂ...ಅನಕೊತ್ತ ಮೊದಲು ಮಸಡಿ ಮುಂದಿನ ಜಾಳಗಿ ಒಳಗಾ ಕೈ ಹಾಕಿ ನೆತ್ತಿ ಒತ್ತಿಕೊಂಡಾ. ಯಾಕೋ ಏನೋ?

ಹೆಲ್ಮೆಟ್ ತೆಗೆದು ತನ್ನ ಮಸಡಿ ತೋರ್ಸೀದಾ ನೋಡ್ರಿ!!!! ನಾ ಬೆಚ್ಚಿ ಬೀಳೊದೊಂದು ಬಾಕಿ ಇತ್ತು.

ಹಾಪ್ ಬೋಡ್ಯಾ (ಹಾಫ್ ಬಾಲ್ಡಿ , ಬಕ್ಕ ತಲಿ) ಆಗಿದ್ದ ಕರೀಮ. ಈಗ ನೋಡಿದ್ರಾ ಏನ ಮಸ್ತ ತಲಿ ತುಂಬಾ ಫುಲ್ ಕೂದ್ಲಾ.

ಏನೋ? ಎಲ್ಲಿಂದ ಬಂದ್ವೋ ಬೋಡ್ಯಾ ತಲಿತುಂಬ ಕೂದಲ? ಏನು ಪವಾಡ ಆಗಿಬಿಟ್ಟದಲ್ಲೋ ದೋಸ್ತಾ?.....ಅಂದೆ.

ಹೌದು ಸಾಬ್.....ನಮ್ಮದು ಬೇಗಂ ನಮಗೆ ಟೋಪನ್ ಹಾಕಿ ಬಿಟ್ಟಿದ್ದಾರೆ......ಅಂದ ಕರೀಂ.

ವಿಗ್ಗ್ ಹಾಕ್ಕೊಂಡು  ವಿಗ್ಗೇಶ್ವರ ಆಗಿಬಿಟ್ಟಿದ್ದ ನಮ್ಮ ಕರೀಂ.

ಸಾಬ್ರಾ....ನಿಮಗ ವಿಗ್ಗೇಶ್ವರ ಅಂತ ಹೆಸರು ಮಸ್ತ ಸೂಟ್ ಆಗ್ತದ ನೋಡ್ರೀ....ಅಂದೆ.

ವಿಗ್ಗೇಶ್ವರ ಅಂದ್ರೆ ನಿಮ್ಮದು ದೇವರು ಅಲ್ಲ ಕ್ಯಾ?....ಅಂದ ಕರೀಂ.

ಇಲ್ರೀ...ಸಾಬ್ರಾ....ದೇವರು ವಿಘ್ನೇಶ್ವರ.....ಅಂದ್ರ ಗಣಪ್ಪ....ನೀವು ವಿಗ್ಗ್ ಹಾಕ್ಕೊಂಡವರು ವಿಗ್ಗೇಶ್ವರ....ಅಂತ ಕ್ಲಾರಿಫೈ ಮಾಡಿದೆ.

ಚೊಲೋ ಆತ ತೊಗೋ, ಕರೀಂ. ಸಿಕ್ಕ ಸಿಕ್ಕ ಮಂದಿಗೆ ಟೊಪ್ಪಿಗಿ ಹಾಕು ಮಂದಿ ಇರುವಾಗ, ಪಾಪ ನಿಮ್ಮ ಬೇಗಂ ನಿಮಗ ಚಂದಾಗಿ ಹಾಕ್ಯಾಳ ನೋಡ್ರಿ.....ಅಂದ್ರ ಟೋಪನ್ ಹಾಕ್ಯಾಳ ಅಂತ.....ಅಂದೆ ನಾನು.

ಟೋಪನ್ ಹಾಕ್ಕೊಂಡಿ. ಓಕೆ. ಆದ್ರ ಮ್ಯಾಲೆ ಹೆಲ್ಮೆಟ್ ಯಾಕೋ?......ಅಂದೆ. ಆ extra ಫಿಟ್ಟಿಂಗ್ ಯಾಕ್ ಅಂತ ತಿಳಿಲಿಲ್ಲ.

ಏನು ಸಾಬ್ ನೀವು? ಹೆಲ್ಮೆಟ್ ಇಲ್ದೆ ಹೋದ್ರೆ, ಗಾಳಿಗೆ ಟೋಪನ್ ಹಾರಿ ಹೋಗೋದಿಲ್ಲ ಕ್ಯಾ? ಒಂದೆರಡು ಸಲ ಹಾರಿ ಹೋಗ್ಬಿಟ್ಟಿ, ಮಂದಿ ಎಲ್ಲಾ ನಕ್ಕಿ, ಬೇಗಂಗೆ ಇನ್ಸಲ್ಟ್ ಆಗಿ, ನನಗೆ ಬೈದಿಬಿಟ್ಟಿ, ಯಾವಾಗಲೂ ಹೆಲ್ಮೆಟ್ ಹಾಕಿಕೊಂಡೇ ಗಾಡಿ ಹೊಡಿಬೇಕು ಅಂತ ಹುಕುಂ ಆಗಿದೆ....ಅಂದು ಪಾಪ ಸ್ಯಾಡ್ ಲುಕ್ ಕೊಟ್ಟ ಕರೀಂ.

ಕರೀಂ....ಇರ್ಲಿ...ಯಾಕ್ ಟೋಪನ್ ಹಾಕ್ಸಿದಳು ನಿನ್ನ ಹೆಂಡ್ತಿ?.....ಅಂತ ಕೇಳಿದೆ.

ಎಲ್ಲಾ ನಿಮ್ಮಿಂದ ಸಾಬ್.....ಅಂತ ಅಂದು ನಿಲ್ಲಿಸಿಬಿಟ್ಟ ಕರೀಂ.

ಹಾಂ.....ಹಾಂ....ನಾಯೇನ್ ಮಾಡಿದೆನೋ?.....ಅಂತ ಸ್ವಲ್ಪ ಡಿಫೆನ್ಸಿವ್ ಆಗಿ ಕೇಳಿದೆ.

ಮತ್ತೆ ನಮ್ಮದು ಬಗ್ಗೆ, ನಮ್ಮ ಬೇಗಂ ಬಗ್ಗೆ, ಆಕಿ ಫೇಸ್ಬುಕ್ ಹುಚ್ಚು ಬಗ್ಗೆ, ಅಕಿ ಹ್ಯಾಂಗೆ ಹಾಪ್ ಬೋಲ್ಡೀ ಆಗಿದಾಳೆ ಅನ್ನೋದರ ಬಗ್ಗೆ ಎಲ್ಲ ನೀವು ಅದೇನೋ ಬ್ಲಾಗ್ ನಲ್ಲಿ ಬರೆದು ಬರೆದು ಹಾಕ್ಬಿಟ್ಟಿ, ಅಕಿನೂ ಅದನ್ನ ಎಲ್ಲ ಓದ್ಬಿಟ್ಟಿ, ಅಕಿಗೆ ಸಿಟ್ಟು ಬಂದ್ಬಿಟ್ಟಿ, ನಮಗೆ ಟೋಪನ್, ಹೆಲ್ಮೆಟ್ ಎಲ್ಲ ಬಂದು ಬಿಡ್ತು ಸಾಬ್....ನಮ್ಮದು ನಸೀಬ್ ಸರಿ ಇಲ್ಲ...ಈ ಸುಡು ಸುಡು ಬ್ಯಾಸಿಗೆ ಒಳಗೆ ನಮಗೆ ಈ ಶಿಕ್ಷೆ. ಎಲ್ಲಾರೂ ಬೇಸಿಗೆಗೆ ಅಂತ ಸಮ್ಮರ್ ಕಟ್ ಮಾಡ್ಸಿದ್ರೆ, ನಮ್ಮದು ನ್ಯಾಚುರಲ್ ಸಮ್ಮರ್ ಕಟ್ಟೇ ಇತ್ತು....ಅಂತ ನಿಟ್ಟುಸಿರು ಬಿಟ್ಟ ಕರೀಂ.

ಓಹೋ.....ವೆರಿ ಗುಡ್....ಓದಿದಳು ಅಲ್ಲ ನಿಮ್ಮ ಬೇಗಂ? ಚೊಲೋ ಆತು ತೊಗೋ. ಅಕಿಗೆ ನಾ ಹೇಳಿದ್ರಂತು ತಿಳಿಯೋದಿಲ್ಲ. ತಿಳಿಯೋದು ಹೋಗ್ಲಿ. ಕೇಳೂ ಪೇಷನ್ಸ್ ಸಹ ಅಕಿಗೆ ಇಲ್ಲ. ಬ್ಯಾಕ್ ಬ್ಲಾಸ್ಟ್ ಆದವರ ಗತೆ ಚಿಟಿ ಚಿಟಿ ಚೀರ್ತಾಳ್. ಓದಿ ತಿಳ್ಕೊಂಡು ಸುಧಾರಿಸಲಿಕ್ಕೆ ಹತ್ಯಾಳ್ ಅಂದ್ರ ಚೊಲೋ ಆತ.....ಅಂತ ಸಾರ್ಥಕ್ಯ ಭಾವದ ಲುಕ್ ಕೊಟ್ಟೆ.

ಏನು ಚೊಲೋ ಆಗೋದು? ನಿಮ್ಮ ಕರ್ಮ....ಅಲ್ಲ ನಮ್ಮ ಕೆಟ್ಟ ಕರ್ಮ....ಅಂತ ನಿಡುಸೋಯ್ದ ಕರೀಂ.

ಸಾಬ್ ನೋಡಿ...ನೀವು ಅಕಿ ಫೇಸ್ಬುಕ್ ಹುಚ್ಚು ಬಗ್ಗೆ ಬರೆದ್ರಿ. ಆ ಮ್ಯಾಲೆ ಎಲ್ಲರೂ ಅಕಿಗೆ ನಿಂದು ಗಂಡಾದು ಫೋಟೋ ಎಲ್ಲಿ? ಅವಂದು ಜೊತೆ ನಿಂದು ಫೋಟೋ ಯಾಕೆ ಇಲ್ಲಾ?....ಅಂತ ಎಲ್ಲರೂ ಕೇಳಿದ್ರು ಸಾಬ್ ಅಕಿಗೆ.....ಕರೆಕ್ಟಾಗೆ ಕೇಳಿದ್ರು....ಆದ್ರೆ ಆಕಿಗೆ....ನಿಮಗೆ ಗೊತ್ತಲ್ಲಾ.....ನಮ್ಮದು ಮುದ್ಕಾ ಗಂಡಾ ಜೊತೆ ಫೋಟೋ ಹಾಕ್ಕೊಂಡ್ರೆ ಆಕಿದು ಜವಾನಿಗೆ ಇನ್ಸಲ್ಟ್ ನೋಡಿ.....ಅಂತ ಮುಂದುವರಿಸಿದ ಕರೀಂ.

ಓಹೋ....ನಿಮ್ಮ ಬೋಡ್ಯಾ ಲುಕ್ ಅಕಿಗೆ ಸೇರಿಲ್ಲ ಅಂತ ಆತು. ಅದಕ್ಕ ನಿಮಗ ಟೋಪನ್ ಹಾಕ್ಸಿ ನೀವು ಬೋಡಾ ಅಲ್ಲಾ ಅಂತ ಪ್ರೂವ್ ಮಾಡ್ಲಿಕ್ಕೆ ಹೊಂಟಾಳ್ ಏನು?.......ಅಂದೆ.

ಹ್ಞೂ....ಸಾಬ್...ಹಾಗೆ ಅನ್ನಿ. ಅವತ್ತು ಏನು ಆಯ್ತು ಗೊತ್ತಾ? ಫೇಸ್ಬುಕ್ ಮೇಲೆ?....ಅಂತ ಒಂದು ಸಣ್ಣ ಪ್ರಶ್ನೆ ಬಾಂಬ್ ಹಾಕಿದ.

ಏನಾತಪಾ? ನಿನಗೂ ಫೇಸ್ಬುಕ್ ಹುಚ್ಚು ಹಿಡಿತೇನೋ? ಥತ್ ನಿನ್ನಾ....ಅದು ಬ್ಯಾಡೋ....ನಿನ್ನ ಹೆಂಡ್ತಿ ಫೇಸ್ಬುಕ್ ಹುಚ್ಚ್  ನಿನಗ ಸಂಭಾಳಿಸಲಿಕ್ಕೆ ಆಗವಲ್ಲತು. ಇನ್ನು ನಿನಗೂ ಫೇಸ್ಬುಕ್ ಹುಚ್ಚು ಹತ್ತಿದ್ರಾ ಮುಗೀತು. ಫುಲ್ ವೆಂಕಟರಮಣ ಗೋವಿಂದಾ.....ಗೋವಿಂದಾ...ಅಷ್ಟ ಮತ್ತ......ಅಂತ ಇವರಿಬ್ಬರಿಗೂ ಫೇಸ್ಬುಕ್ ಹುಚ್ಚು ಹಿಡದರ ನಾನ ಇಬ್ಬರನ್ನೂ ನೋಡ್ಕೊಬೇಕಾದೀತು ಅಂತ ಹೆದ್ರಕಿ ಆತು.

ಇಲ್ಲಾ ಸಾಬ್....ಅದು ಏನೂ ಇಲ್ಲ...ನಾವು ಸ್ವಲ್ಪ ಸ್ವಲ್ಪ ಫೇಸ್ಬುಕ್ ಕಲ್ತಿದೀವಿ ಈಗ. ಜಾಸ್ತಿ ಏನೂ ಇಲ್ಲ. ನಮ್ಮ ಹಾಪ್ ಬೇಗಂ ಏನೇನು ಕೆತ್ತೆಬಜೆ ಕಾರ್ಬಾರ್ ಮಾಡ್ತಾರೆ ಅಂತ ನೋಡುದು. ಅಷ್ಟೇ. ಮತ್ತೆ ವತ್ತೋದು. ಸ್ವಲ್ಪ ಸ್ವಲ್ಪ ವತ್ತೋದು. ಅದೇ ಸಾಬ್ ಲೈಕ್ ವತ್ತೋದು ಅಷ್ಟೇ.....ತಿಳೀತು ಕ್ಯಾ?.....ಅಂದ ಕರೀಂ.

ಓಕೆ...ಇದರಾಗ ಏನ್ ಪ್ರಾಬ್ಲೆಮ್ ಅಂತ ನಿಮ್ಮ ಹೆಂಡತೀದು?....ಅಂತ ಕೇಳಿದೆ.

ಅವತ್ತು ನೋಡಿ ಸಾಬ್....ಅಕಿದು ಮೂಡ ಖರಾಬ್ ಇತ್ತು ಅಂತ ಕಾಣಿಸ್ತದೆ. ತನ್ನ ಪುರಾನಾ ಆಶಿಕ್ ಸಲುವಾಗಿ ಯಾವದೋ ಒಂದೆರಡು ಹಾಡಿಗೆ ಲಿಂಕ್ ತನ್ನ ಫೇಸ್ಬುಕ್ ವಾಲ್ ಮೇಲೆ ಹಾಕಿಕೊಂಡು ಕೂತಿದ್ಳು. ನಾನೂ ಆಗ ಫೇಸ್ಬುಕ್ ಮೇಲೆ ಇದ್ದೆ. ತುಂಬಾ ಒಳ್ಳೆ ಹಳೆ ಹಿಂದಿ ಮೂವಿ ಹಾಡು ಸಾಬ್. ನನಗೆ ಹಿಡಿಸ್ತು. ಬೇಗಂ ನಮಗೆ ಹಾಕಿರಬೇಕು ಅಂತ ಖುಷ್ ಆಗಿ ಲೈಕ್ ವತ್ತೇ ಬಿಟ್ಟೆ ಸಾಬ್. ವತ್ತಬಿಟ್ಟಿ ಮರೆತು ಬಿಟ್ಟೆ. ಸಂಜೆ ಮುಂದೆ ಮತ್ತೆ ಫೇಸ್ಬುಕ್ ನೋಡಿದ್ರೆ ನಮ್ಮ ಬೇಗಂ ಗ್ವಾಡಿ ಮ್ಯಾಲೆ ಆ ಎರಡೂ ಹಾಡ ಇಲ್ಲೇ ಇಲ್ಲ. ಗಾಯಬ್ ಆಗಿ ಬಿಟ್ಟಿವೆ.....ಅಂತ ಫುಲ್ ಆಶ್ಚರ್ಯ ಲುಕ್ ಕೊಟ್ಟ.

ಹೋಗ್ಗೋ ಸಾಬ್ರಾ ....ಎಲ್ಲೆ ಹೋತು ಹಾಡಿನ ಲಿಂಕ್ಸ್ ಸಾಬರ?.....ಅಂದೆ.

ಸಾಬ್....ನಮ್ಮದು ಹರಾಮಕೊರ್ ಬೇಗಂ ಅದನ್ನ ಡಿಲೀಟ್ ಮಾಡಿ ಬಿಟ್ಟೆ ಅಂತ ಹೇಳಿಬಿಟ್ಟಳು ಸಾಬ್.....ಅಂತ ದುಃಖ ತೋಡಿಕೊಂಡ.

ಯಾಕ್ ಡಿಲೀಟ್ ಮಾಡಿದಳು ನಿಮ್ಮ ಬೇಗಂ? ಅದೂ ನೀವು ಲೈಕ್ ಮಾಡಿದ ಮ್ಯಾಲೆ. ಅದೂ ನೀವು ಸ್ವಂತ, ಒಬ್ಬನೇ ಗಂಡ. ಲೈಕ್ ಆಗಿ ವತ್ತೀರಿ ಅಕಿ ಹಾಡನ್ನ. ಅದನ್ನ ನೋಡಿದ್ ಮ್ಯಾಲೂ ಡಿಲೀಟ್ ಮಾಡೋದು ಅಂದ್ರ ಎಷ್ಟು ದುರ್ಬುದ್ಧಿ ಅಕಿಗೆ ಅಂತೀನಿ....ಅಂತ ನನ್ನ ಮಾರಲ್ ಸಪೋರ್ಟ್ ಕೊಟ್ಟೆ ಸಾಬ್ರಿಗೆ.

ಹೌದು ಸಾಬ್....ನಮ್ಮ ಬೇಗಂ ಹೇಳಿದಳು....ನಾನು ಹೋಗಿ ಲೈಕ್ ಮಾಡಿ ಬಿಟ್ಟರೆ, ಆ ಮೇಲೆ ಅಕಿದು ದೋಸ್ತರು ಯಾರೂ ಲೈಕ್ ಮಾಡೋದಿಲ್ಲವಂತೆ. ಗಂಡಾನೇ ಮೊದಲು ಮಾಡಿ ಬಿಟ್ಟಾನೆ, ನಾವೇನು ಲೈಕ್ ಮಾಡೋದು ಅಂತ. ಒಟ್ಟಿನಲ್ಲಿ ಟೋಟಲ್ ಲೈಕ್ ಕಡಿಮೆ ಆಗ್ತದೆ ನೋಡಿ. ಅದಕ್ಕೆ ಡಿಲೀಟ್ ಮಾಡಿ ಬಿಟ್ಟಳಂತೆ ಸಾಬ್. ನನಗೆ ಗೊತ್ತು ರೀಯಲ್ ಕಾರಣ....ಅಂತ ನಿಗೂಢ ಲುಕ್ ಕೊಟ್ಟ.

ಏನ್ರೀ ರಿಯಲ್ ಕಾರಣ? ಸ್ವಲ್ಪ ಹೇಳ್ರೀ...ಅಂದೆ.

ನೋಡಿ ಸಾಬ್...ಅಕಿ ಆ ಎರಡೂ ಹಾಡು ಆಕಿ ಪುರಾನಾ ಆಶಿಕ್ ಗೆ ಹಾಕ್ಕೊಂಡು ಕೂತಿದ್ದಳು. ಅವನು ಮೊದಲೆಲ್ಲ ತಾಪಡತೊಪ್ ಲೈಕ್ ವತ್ತೋದು, ಕಾಮೆಂಟ್ ಹಾಕೋದು ಮಾಡ್ತಿದ್ದ. ಅವನದೂ ತಲೆ ತಿಂದಿರಬೇಕು ಇವಳು. ಅದಕ್ಕೆ ಅವನೂ ಈಗಿತ್ತಲಾಗೆ ಅಕಿಗೆ ತಪ್ಪಿಸಿಕೊಂಡು ಓಡಾಡ್ತಾನೆ. ಅವ ಬಂದು ಲೈಕ್ ವತ್ತಲೇ ಇಲ್ಲ. ಅಷ್ಟರಲ್ಲಿ ನಾನು ಬೋಡ್ಯಾ ಖಾನ್ ಹೋಗಿ ವತ್ತಿಬಿಟ್ಟೆ ನೋಡಿ...ಅದಕ್ಕೆ ಉರಕೊಂಡು ಉರಕೊಂಡು ಚಿಟಿ ಚಿಟಿ ಚೀರಿ ಇಮ್ಮಿಡಿಯೇಟ್ಲಿ ಸಾಂಗ್ಸ್ ಲಿಂಕ್ಸ್ ಡಿಲೀಟ್ ಮಾಡಿ ಬಿಟ್ಟಳು ಸಾಬ್....ಅಂತ ಕರೀಂ ದುಖ ತೋಡಿಕೊಂಡ.

ಛೆ!!ಛೆ!!! ಹತ್ತ ಲಕ್ಷ ರೂಪಾಯಿ ಕೊಟ್ಟ ಸ್ವೀಟ್ ಸಿಕ್ಸಟೀನ್ ಹೆಂಡ್ತಿ ಮಾಡಿಕೊಂಡ ಸಾಬರಿಗೆ ಬೋಡ್ಯಾ ಖಾನ್ ಅಂದಿದ್ದು ಮಾತ್ರ ಅಲ್ಲದೇ , ಅವ ಪಾಪ ಲೈಕ್ ಮಾಡಿದ ಅನ್ನೋ ಒಂದೇ ಕಾರಣಕ್ಕೆ  ಸಾಂಗ್ಸ್ ಡಿಲೀಟ್ ಮಾಡ್ಯಾಳ ಇಕಿ. ಎಷ್ಟು ಕೆಟ್ಟ ಬುದ್ಧಿ ಇಕಿದು ಅಂತ ಅನ್ನಿಸ್ತು.

ನೀವೇನ್ ಮಾಡ್ಲಿಲ್ಲ ಏನು ಸಾಬ್ರಾ ?....ಅಂತ ಕೇಳಿದೆ.

ನಾನು ಅತ್ತೆ ಸಾಬ್. ಬಕೆಟ್ ಬಕೆಟ್ ಆಸೂ ಬಹಾಯಾ ಸಾಬ್.....ಅಂತ ಅಂದ ಕರೀಂ.

ಕುಸ್ತಿ ಅಖಾಡಾದಾಗ ಮಂದಿ ಎತ್ತಿ ಎತ್ತಿ ಒಗೆದವಾ ಇವನ ಏನು?.......ಅಂತ ಸಂಶಯ ಬಂತು.....ಹೆಂಡ್ತಿ ಮುಂದ ಅತ್ತನಂತ. ಹೆಣ್ಯಾ ಮಂಗ್ಯಾನ್ ಕೆ.

ಯಾಕ್ರೀ ಸಾಬ್ರಾ? ಏನಾತು ಎಲ್ಲಾ ಪೌರುಷ? ಮೊನ್ನೆ ಒಮ್ಮೆ ಅಕಿ ಬೆನ್ನ ಮುರಿಯುಹಾಂಗ ಗುದ್ದಿದ್ದ್ರೀ....ಈಗ ಯಾಕ್ ಅತ್ರೀ? ಯಾಕ್ ಕಣ್ಣೀರ ಹಾಕಿದ್ರಿ?....ಅಂದೆ.

ಆ ಮೇಲೆ ಸರಗಂ ಕೇಸ್ನಲ್ಲಿ ಕಲ್ಲೂ ಮಾಮಾ, ಕಲ್ಲೂ ಮಾಮಿ ಕೂಡಿ ನಮ್ಮ ಕಾಲು ಮುರದಿದ್ದರಲ್ಲ ಸಾಬ್...ಮತ್ತೆ ಬೇಡ ಹಾಗೆ ಫುಲ್ ಬಾಡಿ ಸ್ಕ್ರಾಪ್ ಆಗೋದು ಅಂತ ಸುಮ್ಮನೆ ಇದ್ದೆ ಸಾಬ್. ಕಲ್ಲೂ ಮಾಮಿನೇ ಹೇಳಿದಾಳೆ. ಸುಮ್ಮನೆ ಅತ್ತು ಬಿಡು ಅಂತ.....ಅದೇ ಬೆಷ್ಟು ಸಾಬ್....ಅಂತ ಸಾಧು ಪ್ರಾಣಿ ಲುಕ್ ಕೊಟ್ಟ.

ಹ್ಞೂ....ಅಂತೂ ಇಂತೂ ಪಾಲ್ತು ಪ್ರಾಣಿ ಆದಿ ಅನ್ನು....ಮುಂದ ಹೇಳಪಾ....ಅಂತ ಹೇಳಿದೆ.

ಏ....ಬೋಡ್ಯಾ ಕರೀಂ ಖಾನ್....ನಮ್ಮದು ಫೇಸ್ಬುಕ್ ಪೋಸ್ಟ್ ಮೇಲೆ ಲೈಕ್ ವತ್ತೋದು, ಕಾಮೆಂಟ್ ಹಾಕೋದು ಎಲ್ಲಾ ಮಾಡ್ಬೇಕು ಅಂದ್ರೆ ಮೊದಲು ನಿನ್ನ ಬೋಡ್ಯಾ ಲುಕ್ ಚೇಂಜ್ ಮಾಡ್ಕೋ. ಸಮಜೆ ಕ್ಯಾ?....ಅಂದಳು ಸಾರ್.....ನಮ್ಮ ಬೇಗಂ....ಅಂದ ಕರೀಂ.

ಹ್ಯಾಂಗೆ ಬೇಗಂ?.........ಉದರಿ ಹೋಗಿರೋ ಕೂದಲ ಹ್ಯಾಂಗೆ ವಾಪಸ್ ತರೋದು?....ಅಂತ ಹೆಲ್ಪಲೆಸ್ಸಾಗಿ ಹೇಳಿದೆ ಅಂದ ಕರೀಂ.

ಅದಕ್ಕೆ ನಿಮಗೆ ದುಬೈನಿಂದ ಛೋಟಾ ವಕೀಲ್ ಮಾಮೂಜಾನ್ಗೆ ಹೇಳಿ ಒಂದು ಒಳ್ಳೆ ಸಂಜೀವ್ ಕುಮಾರ್ ವಿಗ್ಗ್ ತರ್ಸಿ ಕೊಡ್ತೀನಿ. ಅದನ್ನ ಹಾಕ್ಕೊಂಡು ಫೋಟೋ ತೆಗಿಸ್ಕೊಂಡಿ, ಫೇಸ್ಬುಕ್ ಮೇಲೆ ಹಾಕ್ಕೊ. ಆ ಮ್ಯಾಲೆ ಬೇಕಾದ್ರೆ ನನ್ನ ಫೇಸ್ಬುಕ್ ಪೋಸ್ಟ್ ಲೈಕ್ ಮಾಡು. ಸಮಜೆ ಕ್ಯಾ? ಅಂದಳು ಸಾಬ್.....ಅಂದ ಕರೀಮ್.

ಓಹೋ....ಇಷ್ಟೆಲ್ಲಾ ಕಥಿ ಆದ ಮ್ಯಾಲೆ ನಿಮಗ ಸಂಜೀವ್ ಕುಮಾರ್ ವಿಗ್ಗ್ ಬಂತು ಅಂತ ಆತು. ಚೊಲೋ ಆತ ಬಿಡ್ರೀ. ಸಂಜೀವ್ ಕುಮಾರ್ ಪರ್ಸನಾಲಿಟಿ ಅದ ನಿಮಗ. ಈಗ ವಿಗ್ಗೂ ಬಂದು ಬಿಡ್ತು. ಮತ್ತೇನು ಹಾಕ್ಕೊಂಡು ಹೀರೋಗತೆ ಮಿಂಚ್ರೀ ಸಾಬ್ರಾ.....ಅಂತ ಬಿ-ಪಾಸಿಟಿವ್ ಅನ್ನೋ ಹಾಂಗ ಹೇಳಿದೆ.

ಅಲ್ಲಾ.....ಸಂಜೀವ್ ಕುಮಾರ್ ವಿಗ್ಗನ್ನಾ ಯಾಕ್ ನಿಮಗ ಹಾಕ್ಸಿದ್ರು ನಿಮ್ಮ ಬೇಗಂ?.....ಅಂತ ಕೇಳಿದೆ ಸಾಬರನ್ನ.

ಅದು ಸಂಜೀವ್ ಕುಮಾರ್ ಭಾಳ ಒಳ್ಳೆ ನಟ. ನಮಗೂ, ಬೇಗಂ ಇಬ್ಬರಿಗೂ ತುಂಬಾ ಸೇರ್ತಾನೆ.....ಅಂದ್ರು ಸಾಬರು.

ನಿಮಗೆ ಗೊತ್ತಾ ಸಾಬ್ ಈ ವಿಗ್ಗನಲ್ಲಿ ಇರೋ ಕೂದಲ ಎಲ್ಲೀದು ಅಂತ?....ಅಂತ ಕೇಳಿದ ಕರೀಂ.

ಎಲ್ಲಿ ಹೊಲಸ್ ಕೂದಲನೋ ಏನೋ? ನಮ್ಮ ರಾಯಲ್ ಹೇರ ಕಟ್ಟಿಂಗ್ ಸಲೂನ್ ಹಜಾಮ್ ಪಾಂಡು, ಬೋಳಿಸಿದ ಕೂದಲ ಎಲ್ಲಾ ಚೌರಿ ಮಾಡೋ ಮಂದೀಗೆ ಹೋಲ್ಸೇಲ್ ನ್ಯಾಗ್  ಮಾರ್ತಿದ್ದ. ಅಂತಹ  ಕಡೆ ಎಲ್ಲಿಂದಾರ ಬಂದಿರಬೇಕು....ಅಂತ ಸಾಕ್-ಮಾಡು ಅನ್ನೋ ಹಾಂಗ ಹೇಳಿದೆ.

ಇಲ್ಲಾ....ಸಾಬ್....ಇದು ತಿರುಪತಿ ಕೂದಲದಿಂದ ಮಾಡಿದ ವಿಗ್ಗು ಸಾಬ್....ಅಂತ ಹೆಮ್ಮೆಯ  ಕೃತಾರ್ಥನಾದೆ  ಅನ್ನೋ ಲುಕ್ ಕೊಟ್ಟು ಹೇಳಿದ ಕರೀಂ.

ಪುಣ್ಯಾ ಮಾಡಿರಿ ಸಾಬ್ರಾ ನೀವು. ಯಾವ್ ಯಾವದೋ ಪ್ರಾಣಿಗಳ,  ಎಲ್ಲಿ ಎಲ್ಲಿದೋ ಕೂದಲದ್ದು ವಿಗ್ಗ್ ಹಾಕ್ಕೊತ್ತಾರ ಮಂದಿ. ಹಾಂಗಿದ್ದಾಗ ನಿಮಗ ತಿರುಪತಿ ತಿಮ್ಮಪ್ಪನ ಭಕ್ತರು ಭಕ್ತಿಯಿಂದ ಮುಡಿ ಅಂತ ಹೇಳಿ ಕೊಟ್ಟ ಕೂದಲದಿಂದ ಮಾಡಿದ ವಿಗ್ಗ ಸಿಕ್ಕದ. ಮುದ್ದಾಂ ಹಾಕ್ಕೊಳ್ರೀ. ತಿಮ್ಮಪ್ಪ ಒಳ್ಳೇದು ಮಾಡೇ ಮಾಡ್ತಾನ.....ಅಂತ ಹೇಳಿದೆ. ಸಾಬರು ಖುಷ್ ಆದಂಗ ಕಂಡರು.

ಕೇರಳದ ತೆಂಗಿನಕಾಯಿ ಕಾಶಿಯ ವಿಶ್ವನಾಥನಿಗೆ ಅರ್ಪಿತವಾಗುವದರ ಬಗ್ಗೆ ಕೇಳಿದ್ದೆ. ಕಾಶ್ಮೀರದ ಸೇಬುಹಣ್ಣು ದಕ್ಷಿಣೇಶ್ವರದ  ಮಹಾಕಾಳಿಗೆ ಸಲ್ಲೋದನ್ನ ಕೇಳಿದ್ದೆ. ಆದ್ರ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಕೂದಲು, ವಿಗ್ಗಾಗಿ, ದುಬೈನಲ್ಲಿ ಡ್ಯೂಟಿ ಫ್ರೀ ಬಿಕರೀ ಆಗಿ, ಧಾರವಾಡಕ್ಕೆ ಬಂದು ಯಾರದೇ ಶಿರೋಮಣಿಯಾಗಿ ನಳನಳಿಸಿದ್ದು ಮಾತ್ರ ಕೇಳಿರಲಿಲ್ಲ. ಬೋಲ್ಡೀ ಬೇಗಂ ದೆಸೆಯಿಂದ ಅದೂ ಆಗಿ ನಾನು ಧನ್ಯೋಸ್ಮಿ.

ಈಗ ವಿಗ್ಗ ಹಾಕಿಕೊಳ್ಳಲಿಕ್ಕೆ ಶುರು ಮಾಡಿದ ಮ್ಯಾಲೆ ನಿಮ್ಮ ಬೋಲ್ಡೀ ಬೇಗಂ ವರ್ತನೆ ಹ್ಯಾಂಗ್ ಅದ? ಸ್ವಲ್ಪ ಇಂಪ್ರೂವ್ ಆಗಿದೆ ಏನು? ತನ್ನ ಹಳೆ ಆಶಿಕ್ ಹುಚ್ಚು ಕಡಿಮಿ ಮಾಡ್ಯಾಳ ಏನು?....ಅಂತ ಕೇಳಿದೆ.

ಯಾರಿಗೆ ಗೊತ್ತು ಸಾಬ್? ಇಡೀ ದಿವಸ ಫೇಸ್ಬುಕ್ ಮೇಲೆ ಇರೋದು ಬಿಟ್ಟಿಲ್ಲ. ನಮಗೆ ಹೋಟೆಲಿಂದ ಖಾನಾ ತರೋದು, ಮನಿ ಕೆಲಸ ಮಾಡೋದು ತಪ್ಪಿಲ್ಲ. ಅದರ ಮ್ಯಾಲೆ ಈ ತಲಿ ಪರಾ ಪರಾ ಕೆರಕೋ ಬೇಕು ಅನ್ನಿಸೋ ವಿಗ್ಗ್ ಬ್ಯಾರೆ.....ಅಂತ ಹೇಳಿದ ಕರೀಂ.

ಹ್ಞೂ...ಮತ್ತೇನು ಬೇಗಂ ಕಾರ್ಬಾರ್?....ಅಂದೆ.

ಯಾರಿಗೆ ಗೊತ್ತು ಸಾಬ್? ಎರಡು ವಾರದಿಂದ ಅಕಿ ಇಲ್ಲ.ಎಲ್ಲೋ ಟ್ರಿಪ್ ಅಂತ ಪ್ಯಾಂಟ್, ಸ್ಲೀವ್ ಲೆಸ್ ಬನಿಯನ್ ಹಾಕಿಕೊಂಡು ಹೋಗಿ ಬಿಟ್ಟಿದ್ದಾಳೆ.....ಅಂತ ಬೇಗಂ ಬುರ್ಕಾ ಬಿಟ್ಟು ಬೆಪರ್ದಾ ಆಗಿ ಹೋದ ನ್ಯೂಸ್ ಕೊಟ್ಟ.

ಹೋಗ್ಗೋ....ಸಾಬರ....ನಿಮ್ಮ ಪೈಕಿ ಮಂದಿ ಅದು ಹ್ಯಾಂಗ ಪ್ಯಾಂಟ್, ಸ್ಲೀವಲೆಸ್ ಬನಿಯನ್ ಹಾಕ್ಕೊಂಡು ಹೋದರು? ಅದೂ ಬುರ್ಕಾ ಇಲ್ಲದ....ಅಂತ ಘಾಬರಿ ವ್ಯಕ್ತಪಡಿಸಿದೆ.

ನಿಮ್ಮದು ಒಳ್ಳೆ ಮಾತು ಆಯಿತು. ನಿಮ್ಮದು ಔರತ್ ಮಂದಿ ಎಲ್ಲಾ ಕಚ್ಛಿ ಸೀರಿ ಹಾಕ್ಕೊತ್ತಾರೆ ಕ್ಯಾ? ನಿಮ್ಮದೂ ಮಂದಿನೂ ಹಾಪ್ ಚಡ್ಡಿ, ಸ್ಲೀವಲೆಸ್ ಬನಿಯನ್ ಹಾಕಿಕೊಂಡು ಆಧಾ ನಂಗಾ ಪಂಗಾ ಆಗೇ ಅಲ್ಲಿ ಇಲ್ಲಿ ಹೋಗ್ತಾರೆ.....ಹಾಗೆ ಈ ಹಾಪ್ ಬೇಗಂ ಕೂಡ....ಅಂತ ಕರೀಂ ಸ್ವಲ್ಪ ಡಿಫೆಂಡ್ ಮಾಡಿಕೊಂಡ.

ನೀವು ಹೇಳಿದ್ದು ಕೇಳಿ ಒಂದು ಹಳೆ ತೆಲಗು ಹಾಡು ನೆನಪ ಆತ ನೋಡ್ರೀ ಸಾಬ್ರಾ.....ಅಂದೆ.

ಏನು ಸಾಬ್ ಹಾಡು? ತೆಲಗು ಹಾಡು ಅಂದ್ರೆ ತಿರುಪತಿ ಮೇಲಿನ ಹಾಡು ಕ್ಯಾ ಸಾಬ್?........ಅಂದ ಕರೀಮ. ಪಾಪ ತಿರುಪತಿ ಮುಡಿ ಕೂದಲಿನ ವಿಗ್ಗ್ ಹಾಕಿಕೊಂಡ ತಿರುಪತಿ ವಿಗ್ಗೇಶ್ವರನಿಗೆ ತೆಲಗು, ಆಂಧ್ರ ಅಂದ್ರೆ ತಿರುಪತಿಯದೇ ಗುಂಗು.

ಜ್ಯೋತಿಲಕ್ಷ್ಮಿ ಸೀರೆ ಉಟ್ಟಿಂದಿ.
ಸೀರೆಗು ಸಿಗ್ಗು ವಚ್ಚಿಂದಿ.

ಅಂದ್ರೆ ಏನು ಸಾಬ್?....ಅಂತ ಕೇಳಿದ ಕರೀಂ.

ಜ್ಯೋತಿಲಕ್ಷ್ಮಿ ಸೀರಿ ಉಟ್ಟುಗೊಂಡರ ಸೀರಿಗೇ ನಾಚಿಗೆ ಬಂತು....ಅಂತ ನೋಡಪಾ....ಅಂತ ಕನ್ನಡದಾಗ ಅರ್ಥ ಹೇಳಿದೆ.

ಅಲ್ಲಾ ಸಾಬ್....ಯಾವದೋ ಜ್ಯೋತೀದು ಲಕ್ಷ್ಮಿ ಬಾಯಿ ಸೀರೆ ಉಟ್ಟರೆ ಸೀರೆಗೆ ಯಾಕೆ ಶರ್ಮ್ ಬರಬೇಕು? ತಿಳಿಲಿಲ್ಲ ಸಾಬ್....ಅಂತ ಹೇಳಿದ ಕರೀಂ.

ಜ್ಯೋತಿಲಕ್ಷ್ಮಿ ಅಂದ್ರ ನಮ್ಮ ಕಾಲದ ಫೇಮಸ್ ಕ್ಯಾಬರೆ ಡ್ಯಾನ್ಸರ್. ನಾನು, ನೀನು ಕೂಡಿ ಅಕಿ ಎಷ್ಟ ಮೂವಿ ನೋಡೇವಿ. ನೆನಪ ಇಲ್ಲೇನು? ಅಂಥಾ ಜ್ಯೋತಿಲಕ್ಷ್ಮಿ ಮೈತುಂಬ ಸೀರಿ ಉಟ್ಟುಗೊಂಡು ಬಿಟ್ಟಳು ಅಂದ್ರ ಮತ್ತೇನೋ? ಸೀರಿ ನಾಚಿ ನಾಚಿ ನೀರಾಗಿ ಕರಗಿ ಕರಗಿ ಹೋಗ್ತದ ನೋಡಪಾ....ಅಂತ ನಮ್ಮ ಹೈಸ್ಕೂಲ್ ಜಮಾನಾದಾಗ ಹ್ಯಾಂಗ್ ನಗ್ತಿದ್ವಿ ಹಾಂಗ ಖೀ...ಖೀ...ಅಂತ ಖುಲ್ಲಾ ಖುಲ್ಲಾ ನಕ್ಕೆ. ಅವನೂ ಖೀ ಖೀ ಅಂತ ನಕ್ಕು ಜುಗಲಬಂದಿ ಆಫ್ ನಗು.

ಓಹೋ....ಹಾಂಗೆ ಹೇಳಿ ಸಾಬ್...ಈಗ ನೆನಪ ಆಯಿತು.ಇದು ಜ್ಯೋತಿಲಕ್ಷ್ಮಿ, ಜಯಮಾಲಿನಿ ತಂಗಿ ಅಲ್ಲ ಕ್ಯಾ? ಅಕ್ಕಾ ತಂಗಿ ಇಬ್ಬರೂ ಏಕ್ದಂ ಝಾಕಾಸ್, ರಾಪ್ಚಿಕ್ ಮಾಲ್. ಎಷ್ಟು ಸಿನೆಮಾದಲ್ಲಿ ಅವರ ಡ್ಯಾನ್ಸ್ ಖಾಯಂ....ಅಂತ ಹೇಳಿ ಗತಕಾಲ ವೈಭವ ನೆನಿಸ್ಕೊಂಡು ಕರೀಂ ತನ್ನ ಕಷ್ಟ ಎಲ್ಲ ಸ್ವಲ್ಪ ಮರೆತು ರಿಫ್ರೆಶ್ ಆದ.

ಹಾಗಾದ್ರೆ ಸಾಬ್....ನಮ್ಮ ಬೇಗಂಗೆ ಸಿಗ್ಗಿಲ್ಲೇಶ್ವರಿ ಅಂತ ಹೆಸರು ಇಟ್ಟು ಬಿಡೋಣ. ಕ್ಯಾ ಸಾಬ್?....ಅಂತ ಕಣ್ಣು ಹೊಡೆದ ಕರೀಂ.

ಸಿಗ್ಗಿಲ್ಲೇಶ್ವರಿ...ಅಂದ್ರಾ........ಸಿಗ್ಗು ಅಂದ್ರ ನಾಚಿಗಿ. ಇಲ್ಲೇಶ್ವರಿ ಅಂದ್ರ ಇಲ್ಲದಾಕಿ. ನಾಚಿಗಿ ಇಲ್ಲದಾಕಿ ಅಂತ ಅರ್ಥ ಏನು ನಿಂದು? ಮಸ್ತ ತೆಲಗು ಹೆಸರ ಇಟ್ಟಿ ನೋಡು....ಶಭಾಶ್.....ಅಂದೆ.

ಬ್ಯಾಡ್ ಬಿಡಪಾ....ಪಾಪ್ ಏನೋ ಪ್ಯಾಂಟು, ಸ್ಲೀವಲೆಸ್ ಬನಿಯನ್ ಹಾಕ್ಕೊಂಡು ಒಂದೆರಡು ವಾರ ಮನಿ ಬಿಟ್ಟು ಹೊಗ್ಯಾಳ್ ಅಂದ ಮಾತ್ರಕ್ಕ ನಾಚಿಗಿ ಇಲ್ಲದಾಕಿ ಅಂತ ಹೇಳಿಬಿಡೋದು ಸರಿ ಏನೋ?...ಪಾಪ್ ಅಕಿನೂ ಚೊಲೋ ಇರಬಹದು. ಇನ್ನೂ ಸಣ್ಣಾಕಿ ಇದ್ದಾಳ. ಮುಂದ ಸರಿ ಆದರೂ ಆಗಬಹುದು. ಬಿ ಪಾಸಿಟಿವ್ ಐ ಸೆ.....ಅಂದೆ ನಾನು.

ಅಕಿ ಬೇಕಾದ್ರೆ ಪ್ಯಾಂಟು, ಹಾಪ್ ಪ್ಯಾಂಟು, ಬನಿಯನ್ ಏನ ಬೇಕಾದರೂ ಹಾಕಿಕೊಂಡು ಹಾಳಾಗಿ ಹೋಗ್ಲಿ ಸಾಬ್....ಆದರೆ ನಮಗೆ ಈ ದರಿದ್ರ ವಿಗ್ಗ್ ಹಾಕಿಸಿ ನಮ್ಮನ್ನ ವಿಗ್ಗೇಶ್ವರ ಮಾಡಿಸಿದಳು ನೋಡಿ.ಅದಕ್ಕೆ ಅವಳಿಗೆ ಸಿಗ್ಗಿಲ್ಲೇಶ್ವರಿ ಅಂತ ಹೆಸರೇ ಕರೆಕ್ಟ್....ಅಂತ ಫುಲ್ ವಿವರಣೆ ಕೊಟ್ಟ.

ಈ ಸಾಬ್ರದ್ದು ಮತ್ತ ಅವರ ಮಂಗ್ಯಾನ್ ಕೆ ಬೇಗಂದು ಯಾವಾಗಲೂ ಇರೋದ ಅಂತ ಹೇಳಿ ಸಾಬರಿಗೆ ಸಲಾಂ ಹೇಳಿ ವಾಪಸ್ ಬಂದೆ.

ಒಟ್ಟಿನಲ್ಲಿ ಇವತ್ತು - ಸಿಗ್ಗಿಲ್ಲೇಶ್ವರಿ ಸತಿಯೂ, ವಿಗ್ಗೇಶ್ವರ ಪತಿಯೂ- ಅಂತ ಬ್ಲಾಗ್ ಬರೀಲಿಕ್ಕೆ ಮಸ್ತ ಮಾಲ್ ಸಿಕ್ತು.

ಮನಿಗೆ ಬಂದು ಟೀವಿ ಆನ್ ಮಾಡಿದ್ರ ಎಲ್ಲಕಿಂತ ದೊಡ್ಡ ಸಿಗ್ಗಿಲ್ಲೇಶ್ವರಿ ಡಿಸ್ಕೋ ಶಾಂತಿ ಐಟಂ ನಂಬರ್ ಬರ್ಲಿಕತ್ತಿತ್ತು. ಚೀರಿ ಟೀವಿ ಆಫ್ ಮಾಡಿದೆ. ಡಿಸ್ಕೋ ಶಾಂತಿ ಅವತಾರ ನೋಡಿದ್ರ ಸೀರಿಗೆ ಒಂದ ಅಲ್ಲ ಲುಂಗಿಗೂ, ಅಂಗಿಗೂ, ಪುಂಗಿಗೂ ಎಲ್ಲಾದಕ್ಕೂ ಸಿಗ್ಗು ಮತ್ತೊಂದು ಬಂದ್ರ ಕಷ್ಟ ನೋಡ್ರೀ ಅದಕ್ಕ.

** ಕರೀಂ ಬಗ್ಗೆ ಬರೆಯದೇ ತುಂಬಾ ದಿವಸವಾಗಿತ್ತು. ಕರೀಂ ಬಗ್ಗೆ ಬರೆದ ಎಲ್ಲಾ ಹಾಪ್ ಲೇಖನಗಳನ್ನ ಓದಿ, ಎಂಜಾಯ್ ಮಾಡಿ, ಸಿಕ್ಕಾಪಟ್ಟೆ ನಕ್ಕೆ- ಅಂತ ಹೇಳಿದವರು ಒಬ್ಬ ಹಳೆಯ ಸಹೃದಯೀ ಧಾರವಾಡದ ಆಪ್ತರು. ಅವರೇ ಕೇಳಿದ್ದರು - ಮುಂದಿನ ಕರೀಂ ಪೋಸ್ಟ್ ಯಾವಾಗ? - ಅಂತ. ಕರೀಂ ಪೋಸ್ಟ್ ಬರೆಯಲು ತುಂಬಾ ಸೃಜನಶೀಲತೆ ಬೇಕು. ಅದು ಯಾವದೋ ಪುಸ್ತಕದ ಬುಕ್ ರಿವ್ಯೂ ಮಾಡಿದ ಹಾಗೆ ಅಲ್ಲ. ನಾವು ಅಷ್ಟು ದೊಡ್ಡ ಮಟ್ಟಿನ ಸೃಜನಶೀಲರಂತೂ ಅಲ್ಲವೇ ಅಲ್ಲ. ಆದರೂ ಅವರು ಕೇಳಿದ್ದಕ್ಕೆ ಇವತ್ತು ಮತ್ತೆ ಕರೀಮನನ್ನು ನೆನಪು ಮಾಡಿಕೊಂಡೆ. ಬಂದು ನಗಿಸಿ ಹೋಗೇ ಬಿಟ್ಟ. ಥ್ಯಾಂಕ್ಸ್ ಕರೀಂ ಭಾಯಿ.

** ಸಿಗ್ಗು, ವಿಗ್ಗು ಪದಗಳನ್ನು ಒಂದೇ ಸಲ ಮೊದಲಬಾರಿಗೆ ಬಳಸಿದವರು ನನಗೆ ತಿಳಿದ ಮಟ್ಟಿಗೆ ಪತ್ರಕರ್ತ ರವಿ ಬೆಳಗೆರೆ ಅವರು. ಮಾಜಿ ಮುಖ್ಯಮಂತ್ರಿ  ಶ್ರೀ. ಎಸ್. ಎಮ್. ಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಳ್ಳುವಾಗ - ಸಿಗ್ಗಿಲ್ಲದವನಿಗೆ ವಿಗ್ಗೊಂದು ಬ್ಯಾರೆ ಕೇಡು- ಅಂತೇನೋ ಟೈಟಲ್ ಕೊಟ್ಟ ಅವರ ಲೇಖನ ನೋಡಿ ಬಿದ್ದು ಬಿದ್ದು ನಕ್ಕಿದ್ದೆ. ಕೃಷ್ಣ ಕೂಡ ವಿಗ್ಗೇಶ್ವರರಂತೆ.

** ಫೇಸ್ಬುಕ್ addiction ಬಗ್ಗೆ ತುಂಬಾ ಚರ್ಚೆ ಆಗುತ್ತಿದೆ. ಮೊನ್ನೆ ಒಂದು ಆರ್ಟಿಕಲ್ ಓದಿದೆ. ವಿವಾಹದ ನಂತರ ಫೇಸ್ಬುಕ್ ನಲ್ಲಿ ಗಂಡ relationship status ಚೇಂಜ್ ಮಾಡಲಿಲ್ಲ ಅಂತ ಯಾರೋ ಒಬ್ಬ ಮಹಿಳಾಮಣಿ ಡೈವೋರ್ಸ್ ಗೆ ಅರ್ಜಿ ಹಾಕಿದ್ದಾಳೆ ಅಂತೆ. ಲಿಂಕ್ ಇಲ್ಲಿದೆ ನೋಡಿ.

** ಫೇಸ್ಬುಕ್ ನಲ್ಲಿ ಸಿಕ್ಕ ಜನರೊಂದಿಗೆ ಸರಿಯಲ್ಲದ ಸಲಿಗೆ, ಸಂಬಂಧ, ವಿಪರೀತ ಹರಟೆ ಇತ್ಯಾದಿಗಳನ್ನು  ಶುರು ಹಚ್ಚಿಕೊಳ್ಳುವದೇ ಒಂದು ದೊಡ್ಡ ಸಮಸ್ಯೆ ಆಗಿ ಸಾಕಷ್ಟು ದಾಂಪತ್ಯಗಳನ್ನು ಮುರಿದಿದೆ ಅಂತ ಹೇಳುತ್ತದೆ ಒಂದು ನ್ಯೂಸ್ ರಿಪೋರ್ಟ್. ಲಿಂಕ್ ಇಲ್ಲಿದೆ ನೋಡಿ.


3 comments:

ಈಶ್ವರ said...

super :) Liked sir :)

Mahesh Hegade said...

Thank you Ishwara Bhat avare.

I appreciate your reading my blog and taking time to post a comment.

ಅನಿಕೇತನ said...

thumba olleya kelasa maduthideeri hageye munduvaresi.

shubha kamanegalondige
Prasanna Kumar C R