Monday, July 30, 2012

ರುಂಡಚೀಲಿ

ರುಂಡಮಾಲಿ, ರುಂಡಮಾಲಿನಿ ಅಂದ್ರೆ ರುಂಡಗಳನ್ನು ಮಾಲೆಯಾಗಿ ಧರಿಸಿರುವ ದೇವಿ - ಮಹಾಕಾಳಿ. ತಾನು ಕೊಂದ ಅಸುರರ ರುಂಡಗಳನ್ನು ಮಾಲೆ ಮಾಡಿಕೊಂಡು ಹಾಕಿಕೊಂಡಾಕೆ ಕಾಳಿಕಾದೇವಿ.

ರುಂಡಚೀಲಿ ಅಂದ್ರೆ? ಗೊತ್ತಾ? ಮುಂದೆ ಓದಿ.

ಅವರೊಬ್ಬರು ದೊಡ್ಡ ಕ್ರಿಮಿನಲ್ ವಕೀಲರು. 

ಸಿಕ್ಕಾಪಟ್ಟೆ ಪ್ರಾಕ್ಟೀಸ್. ದಿನಕ್ಕೆ 14-16 ಘಂಟೆ ಕೆಲಸ. ಇದು ಸುಮಾರು 20-25 ವರ್ಷದ ಹಿಂದೆ. ಆಗ ಮಾತ್ರ ಅವರು ಪ್ರವರ್ಧಮಾನಕ್ಕೆ ಬರುತ್ತಿದ್ದರು. ಇನ್ನೂ ಬಹಳ ಮಂದಿ ಜ್ಯೂನಿಯರ್ ವಕೀಲರು, ದೊಡ್ಡ ಆಫೀಸ್ ಎಲ್ಲ ಆಗಿರಲಿಲ್ಲ. ಇದ್ದ ಭಾಡಿಗೆ ಮನೆಯಲ್ಲೇ ಆಫೀಸ್ ಮಾಡಿಕೊಂಡಿದ್ದರು.

ಅವತ್ತು ಒಂದು ದಿನ ರಾತ್ರೆ ಒಂದೋ ಎರಡೋ ಘಂಟೆಯ ಟೈಮ್ ಇರಬಹುದು. ಯಾರೋ ಬಾಗಿಲು ಬಡಿಯುವ ಸದ್ದು. ರಾತ್ರಿ 11.30 ವರಗೆ ಕಕ್ಷೀದಾರರ ಜೊತೆ ಕುಳಿತಿದ್ದು ನಂತರ ಒಂದು ತುತ್ತು ತಿಂದು ಮಲಗಿದ್ದರೋ ಇಲ್ಲವೋ, ಈಗ ಮತ್ತೆ ಯಾರೋ ಬಂದು ಬಾಗಿಲು ಬಡಿಯುತ್ತಿದ್ದಾರೆ. ಕಿತ್ತುಕೊಂಡು ಬರುತ್ತಿದ್ದ ನಿದ್ದೆ. ಆದರೂ ವೃತ್ತಿಯ ಮೇಲೆ ಅಷ್ಟು ಪ್ರೀತಿ. ಎದ್ದು ಬಂದು ಬಾಗಿಲು ತೆರೆದರು. ನೋಡಿದರೆ ಮತ್ತೆ ಅದೇ ಗೌಡರು.

"ಏನ್ರೀ ಗೌಡರ ಇದು? ರಾತ್ರಿ 8 ಘಂಟೆ ತನಕ ನಿಮ್ಮದ ಕೇಸ್ ಮ್ಯಾಲೆ ಕೆಲ್ಸಾ ಮಾಡಿ, ನಿಮ್ಮ ಜೊತಿನಾ ಮಾತಾಡಿ, ನಾಳೆ ಮುಂಜಾನೆ 9 ಘಂಟೆಕ್ಕ ಬರ್ರಿ, ಅಲ್ಲಿ ತನಕ ಏನ್ ಮಾಡ್ಲಿಕ್ಕೆ ಸಾಧ್ಯ ಇಲ್ಲ ಅಂತ ಹೇಳೇನಿ. ಅಂತಾದ್ರಾಗ ಈ ನಡು ರಾತ್ರಿಯಾಗ  ಬಂದೀರಲ್ಲರಿ. ಏನು ಕಥಿ?" - ಅಂತ ಸ್ವಲ್ಪ ಅಸಹನೆ, ಅಸಮಾಧಾನ ಬೆರೆತ ದನಿಯಲ್ಲಿ ಹೇಳಿದರು.

"ಸಾರೀ ರೀ ಸರ್ರಾ.....ಅದು ಏನ ಆಗೈತಿ ಅಂದ್ರ....ಏ ತಮ್ಮಾ.....ಇಲ್ಲೇ ಮುಂದ ಬಾರೋ...." - ಅಂತ ಯಾರನ್ನೋ ಕರೆದರು. ವಕೀಲರಿಗೆ ಸರಿಯಾಗಿ ಕಾಣಲಿಲ್ಲ. ಕಂಪೌಂಡ್ ಗೇಟಿನ ಹತ್ತಿರ ಯಾರೋ ನಿಂತಂತೆ ಕತ್ತಲಲ್ಲಿ ಮಸುಕು ಮಸುಕಾಗಿ ಕಂಡಿತು.

ಗೌಡರು ಕರೆದ ವ್ಯಕ್ತಿ ಮುಂದೆ ಬರಲು ಹಿಂದೆ ಮುಂದೆ ನೋಡಿದ.

"ಬಾರೋ....ದೌಡ್ ಬಾರೋ....ವಕೀಲ್ ಸಾಹೇಬರಿಗೆ ಹೊಸ ಖಬರ್ ಲಗೂನ್ ಹೇಳ್ಬೇಕು. ಅದ ಹೇಳಿದ್ರ ಕೇಸಿಗೆ ಏನರ ಉಪಯೋಗ ಆದರೂ ಆದೀತು..ಬಾ...ಬಾ....ಏನ ಚಿಂತಿ ಮಾಡ ಬ್ಯಾಡ್.....ನಮ್ಮ ವಕೀಲರ ಅದಾರ್....." -  ಅಂತ ಗೌಡರು ಆಶ್ವಾಸನೆ ಕೊಟ್ಟರು.

ಹಿಂಜಾರುತ್ತ, ಮಿಸುಕಾಡುತ್ತ ಒಬ್ಬ ವ್ಯಕ್ತಿ ಇಲ್ಲದ ಮನಸ್ಸಿನಿಂದ ಮುಂದೆ ಬಂದ. ಈಗ ಮುಂಬಾಗಿಲಿನ ದೀಪದಲ್ಲಿ ಸ್ವಲ್ಪ ಕ್ಲೀಯರ್ ಆಗಿ ಕಂಡು ಬಂದ.

ಸಾಮನ್ಯನಂತೆ ಕಾಣುವ ಆ ವ್ಯಕ್ತಿ ಅಂತಾದ್ದೇನು ಹೊಸ ವಿಷಯ, ಅದೂ ಕೇಸಿಗೆ ಸಂಬಂಧಿಸಿದ್ದು, ತಂದಾನು  ಅಂತ ವಕೀಲರು ಅವನನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.

"ವಕೀಲ್ ಸಾಹೇಬರ.....ಸ್ವಲ್ಪ ಒಳಗ ಕೂತ ಮಾತಾಡೋಣ ಏನ್ರೀ? ಪ್ಲೀಜ್ ರೀ ಸರ್ರಾ.....ಪ್ಲೀಜ್ ರೀ....." - ಅಂತ ಗೌಡರು ಅಂಗಾಲಾಚುವ ದನಿಯಲ್ಲಿ ಕೇಳಿಕೊಂಡರು.

ಮತ್ತೇನು ಮಾಡುವದು. ನಿದ್ದಿಯಿಂದ ಅಂತೂ ಎಬ್ಬಿಸಿ ಬಿಟ್ಟಾರ್.ಮನಿ ಬಾಗಿಲದಾಗ ನಿಂತು ಏನು ಮಾತಾಡೋದು ಅಂತ ವಕೀಲರು - "ಬರ್ರೀ....ಒಳಗ ಬರ್ರೀ.....ಕೂತಾ ಮಾತಾಡೋಣಂತ... "- ಅಂತ ತಮ್ಮ ಕಚೇರಿ ಎಂಬ ಕೋಣೆಗೆ ಕರೆದೋಯ್ದರು.

ಗೌಡರ ಹಿಂದೆ ಹೊಸ   ವ್ಯಕ್ತಿಯೂ ಬಂದ. ಅವನ ಕೈಯಲ್ಲಿ ಒಂದು ದೊಡ್ಡ ಚೀಲ. ವಾರಕ್ಕೊಮ್ಮೆ ತರಕಾರಿ ತರುವ ಸೈಜಿನದು. ಯಾಕೋ ಏನೋ? ಅತ್ಯಂತ ಜತನದಿಂದ ಹಿಡ್ಕೊಂಡಿದ್ದ ಚೀಲವನ್ನ. ಚೀಲ ಒದ್ದೆ ಒದ್ದೆ ಆದಂಗಿತ್ತು. ಬಲ್ಬಿನ ಬೆಳಕಲ್ಲಿ ಸರಿ ಬಣ್ಣ ಕಾಣಲಿಲ್ಲ.

"ಈಗ ಹೇಳ್ರೀ ಗೌಡ್ರ....ಏನು ಹೊಸ ಸುದ್ದಿ ತೊಗೊಂಡ ಬಂದೀರಿ" - ಅಂತ ವಕೀಲರು ತಮ್ಮ ಖುರ್ಚಿಯಲ್ಲಿ ಆರಾಮಾದರು.

"ಸರ್ರಾ....ಏನಂದರ....ಇವ ನೋಡ್ರೀ ನಮ್ಮ ಕೇಸಿನ್ಯಾಗ ಪೊಲೀಸರಿಗೆ ಇನ್ನೂ ಸಿಗದ ಇರೋವ. ಇವನ ಕಡೆ ಏನ ಅದ ಅಂದರ...." - ಅಂತ ಎಳಿಯುತ್ತಿರುವಾಗ ವಕೀಲರು ಅವರನ್ನು ತಡೆದರು.

"ಓಹೋ....ಇವನ ಏನು? ಬಾಕಿ ಎಲ್ಲಾರನ್ನ ಪೊಲೀಸರು ಹಾಕಿಕೊಂಡು ಬಡದ್ ಬಡದ್ ಹೆಣ ಮಾಡ್ಲಿಕತ್ತಾರ್....ಇವ ಈಗ ಬಂದು ಸರೆಂಡರ್ ಆಗವಾ ಏನು? ಅದೂ ಮುಂಜಾನೆ ಮಾತ್ರ ಆಗೋ ಕೆಲಸ. ಈಗೆಲ್ಲಿ ಪೋಲಿಸರನ್ನ ಎಬ್ಬಿಸಲಿ ನಾ? ಗಿಚ್ಚ್ ಕುಡದ ಮಲ್ಕೊಂಡಿರ್ತಾರ್ ಎಲ್ಲಾರೂ....ನಾಳೆ ಬರ್ರಿ....ನಡ್ರೀ...."- ಅಂತ ಸಾಗ ಹಾಕಲು ಹೊರಟರು ವಕೀಲರು.

"ಅದಲ್ಲರೀ ಸರ್ರಾ....ತಡೀರಿ....ಏ ತಮ್ಮಾ.....ತೆಗೆದ್ ತೋರ್ಸೀ ಬಿಡೋ ವಕೀಲರಿಗೆ....." - ಅಂತ ಹೇಳಿದರು ಗೌಡರು.

ಚೀಲ ಹಿಡಿದುಕೊಂಡಿದ್ದ ವ್ಯಕ್ತಿ ಹಿಂದೆ ಮುಂದೆ ನೋಡಿದ. ಸ್ವಲ್ಪ ಹಿಂಜರಿದ. ವಕೀಲರ ಮುಖವನ್ನೂ, ಗೌಡರ ಮುಖವನ್ನೂ ಮತ್ತೆ ಮತ್ತೆ ನೋಡಿದ. ಖರೇನ ತೋರಿಸ್ಲೀ ಏನು? ಅನ್ನುವಂತೆ ಮಾರಿ ಮಾಡಿದ.

"ತೋರ್ಸೋ ಅಪ್ಪಾ.....ಇದ ಆ ಪೋಲಿಸರಿಗೆ ಬೇಕಾಗಿದ್ದು. ಸಾಹೇಬರು ನೋಡಿದ ಮ್ಯಾಲೆ ಮುಂದೇನು ಅಂತ ಹೇಳ್ತಾರ...." - ಅಂತ ಗೌಡರು ಅವನಿಗೆ ಆಶ್ವಾಸನೆ ಕೊಟ್ಟರು. ವಕೀಲರೂ ಸಹ ಓಕೆ ಎಂಬಂತೆ ತಲೆ ಕುಣಿಸಿದರು.

ಆ ವ್ಯಕ್ತಿ ಚೀಲದೊದಳಗೆ ಕೈ ಹಾಕಿ ತೆಗೆದ. ತೆಗೆದು ತೋರ್ಸಿಯೇ ಬಿಟ್ಟ. ವಕೀಲರಿಗೆ ಸಣ್ಣ ಪ್ರಮಾಣದ ಹಾರ್ಟ್ ಎಟಾಕ್ ಆಯಿತು. ಅಷ್ಟು ಭೀಕರವಾಗಿತ್ತು ದೃಶ್ಯ.

ಅವನು ತೆಗೆದು ತೋರಿಸಿದ್ದು ಏನು? 

ಚೀಲದಿಂದ ತೆಗೆದೆದ್ದು ಒಂದು ನೀಟಾಗಿ ಕತ್ತರಿಸಿ ಬೇರ್ಪಡಿಸಲ್ಪಟ್ಟಿದ್ದ ಒಂದು ಮಾನವ ರುಂಡ!!!!!!!! ಅದರ ಜುಟ್ಟು ಹಿಡಿದು ವಕೀಲರಿಂದ ಕೇವಲ 4-6 ದೂರದಲ್ಲಿ ನಿಂತಿದ್ದ ಅವನು. ದೀಪದ ಬೆಳಕಿನಲ್ಲಿ, ಆ ಕಾಳ ರಾತ್ರಿಯಲ್ಲಿ ಅತಿ ಭೀಕರ ದೃಶ್ಯ ಅದು.

ವಕೀಲರು ಇಂದಿಗೂ ಒಂದು ಮಾತು ಹೇಳುತ್ತಾರೆ. ನನಗೆ ಆ ಕೇಸ್ ಬಗ್ಗೆ ಮಾಹಿತಿ ಇತ್ತು. ರುಂಡ ಮಿಸ್ಸಾಗಿದ್ದು ಗೊತ್ತಿತ್ತು. ಮತ್ತೆ ಕಕ್ಷೀದಾರರು ಆದ ಗೌಡರೂ ಅವನ ಜೊತೆಯಲ್ಲಿಯೇ ಇದ್ದರು. ಹಾಗಾಗಿ ನನಗೆ ಅವತ್ತು ಹಾರ್ಟ್ ಎಟಾಕ್ ಆಗಲಿಲ್ಲ. ಇಲ್ಲ ಅಂದ್ರೆ ಸಡನ್ ಆಗಿ ಅಂತಹ ಒಂದು ದೃಶ್ಯ ತೋರಿಸಿಬಿಟ್ಟಿದ್ದರೆ ಸಾಯೋದು ಗ್ಯಾರಂಟೀ ಇತ್ತು ಅವತ್ತು.

ಆಗಿದ್ದು ಇಷ್ಟು. ಆ ಗೌಡರ ಮನೆಯ ಹೆಣ್ಣುಮಗಳೊಬ್ಬಳು ಅವರ ಮನೆಯ ಕೆಲಸದವನೊಂದಿಗೆ ಸಂಬಂಧ ಇಟ್ಟುಗೊಂಡಿದ್ದಳಂತೆ. ಅದು ಗೌಡರ ಮನೆತನದ ಗೌರವ, ಪ್ರತಿಷ್ಠೆಯ ಮಾತಾಗಿತ್ತು. ಆ ಕೆಲಸದವನಿಗೆ ಕೊಟ್ಟ ಎಚ್ಚರಿಕೆ ಏನೂ ಉಪಯೋಗವಾದ ಹಾಗೆ ಕಾಣಲಿಲ್ಲ. ಅದಕ್ಕೇ - "ಅವನನ್ನ ತೆಗೆದು ಬಿಡಿ" - ಎಂಬ ಆಜ್ಞೆ ಹೊರಬಿದ್ದಿತ್ತು.

ತೆಗೆಯುವವರು ಯಾರು? ಗೌಡರ ಕಡೆ ಮಂದಿ. ಅವರು ಲೀಡ್ ಮಾಡೋರು. ಕೊಲ್ಲುವವರು ಬೇರೆ ಆಳು ಮಂದಿ. ಇಷ್ಟೆಲ್ಲಾ ಮಂದಿ ಕೂಡಿ ಒಬ್ಬನನ್ನು  ತೆಗೆಯೋದು ದೊಡ್ಡದೇ.....ತೆಗೆದೇ ಬಿಟ್ಟರು. ಅದೇನು ಪ್ಲಾನ್ ಇತ್ತೋ ಗೊತ್ತಿಲ್ಲ. ರುಂಡ ಬೇರ್ಪಡಿಸಿ ಕೇವಲ ಮುಂಡ ಬಿಟ್ಟು ಹೋಗಿಬಿಟ್ಟರು. ಪೋಲಿಸರನ್ನು ದಾರಿ ತಪ್ಪಿಸಲಿಕ್ಕೋ ಅಥವಾ ಮತ್ಯಾವದೋ ಕಾರಣಕ್ಕೋ ರುಂಡ ತೆಗೆದುಕೊಂಡು ಹೋಗಿ ಬಿಟ್ಟಿದ್ದ ಈ ಪುಣ್ಯಾತ್ಮ ರುಂಡಚೀಲಿ.

ಕೊಲೆ ಮರುದಿನ ಮುಂಡ ಸಿಕ್ಕಿತು. ಪೊಲೀಸರು ಬಂದು ವಿಚಾರಣೆ ಮಾಡಿದರು. ಸಿಕ್ಕ ಮಾಹಿತಿ ಮೇಲೆ ಗೌಡರ ಪೈಕಿ ಸುಮಾರು ಜನರನ್ನು ಎತ್ತಾಕಿಕೊಂಡು ಹೋದರು.

ರುಂಡ ಸಿಗದಿದ್ದು ಭಯಂಕರ ತಲೆ ನೋವಾಯಿತು ಪೊಲೀಸರಿಗೆ. ಪ್ರತಿಷ್ಠೆಯ ಪ್ರಶ್ನೆಯೂ ಆಯಿತು. ಎತ್ತಾಕಿಕೊಂಡು ಬಂದವರಲ್ಲಿ ಯಾರಿಗೂ ರುಂಡ ಎಲ್ಲಿ ಹೋಯಿತು ಅನ್ನೋ ಬಗ್ಗೆ ಖಚಿತ ಮಾಹಿತಿ ಇರಲಿಲ್ಲ. 

ನಾರ್ಮಲಿ ಮರ್ಡರ್ ಕೇಸ್ನಲ್ಲಿ ಆರೋಪಿಗಳನ್ನ ಎತ್ತಾಕಿಕೊಂಡು ಬಂದ್ ಕ್ಷಣದಿಂದ ಡೀಲಿಂಗ್ ಶುರು ಆಗಿಬಿಡುತ್ತದೆ. ಚೌಕಾಶಿ ಶುರು. ಇಷ್ಟು ಲಕ್ಷ ಕೊಟ್ಟರೆ ಟಾರ್ಚರ್ ಇಲ್ಲ. ಅಷ್ಟು ದುಡ್ಡು ಇಲ್ಲವೋ? ಓಕೆ. ಇದು ಟಾರ್ಚರ್ ಮೆನು. ನೀವು ಕೊಡೊ ದುಡ್ಡಿಗೆ ಇಷ್ಟ ಟಾರ್ಚರ್ ಮಾಡಲೇ ಬೇಕಾಗುತ್ತದೆ. ಹಾಗೆ ಹೀಗೆ. ಒಟ್ಟಿನಲ್ಲಿ ದುಡ್ಡು ಗುಂಜಿ ಗುಂಜಿ ಕೇಸ್ ಲೂಸ್ ಮಾಡಿ ಬಿಟ್ಟರೆ, ಒಳ್ಳೆ ಡಿಫೆನ್ಸ್ ವಕೀಲರು ಬಿಡಿಸಿಕೊಂಡು ಬರುತ್ತಾರೆ. ಪೊಲೀಸರು, ಸರ್ಕಾರಿ ವಕೀಲರು, ನ್ಯಾಯಾಧೀಶರು, ಡಿಫೆನ್ಸ್ ವಕೀಲರು ಎಲ್ಲರೂ ಮಾಲಾಮಾಲ್. ಕೊಲೆ ಮಾಡಿದವರು ಕೇಸ್ ಮುಗಿಯುವತನಕ ಎಲ್ಲಾ ಅಸ್ತಿ ಪಾಸ್ತಿ ಮಾರಿಕೊಂಡು ಆಲ್ಮೋಸ್ಟ್ ರೋಡಿಗೆ ಬಂದಿರುತ್ತಾರೆ. ಅದು ವಾಸ್ತವಿಕತೆ. ದುರಂತ.

ಆದರೆ ಈ ಕೇಸಿನಲ್ಲಿ ರುಂಡ ಸಿಗದಿದ್ದಕ್ಕೆ ಮೇಲಿಂದ ಪ್ರೆಶರ್ ಭಾಳ ಬಂತು ಅನ್ನಿಸುತ್ತದೆ. "ರುಂಡ ಎಲ್ಲಿ? ಹೇಳ್ರೋ?" - ಅಂತ ಟಾರ್ಚರ್ ಶುರು ಆಗಿಯೇ ಬಿಟ್ಟಿತು. ಅದೂ ಥರ್ಡ್ ಡಿಗ್ರೀ. ಫುಲ್ ಫಾರಂ. ಗೌಡರು, ವಕೀಲರಿಗೆ ತೋರ್ಸಿಯೇ ಮಾಡುತ್ತಿದ್ದರು. ನೋಡಿದವರ ಮೇಲೆ ಪರಿಣಾಮವಾಗಿ, ಎಲ್ಲಿಂದಾದರೂ ರುಂಡ ಹುಡಕಿ ತಂದು ಕೊಡಲಿ ಅಂತ. ಅಲ್ಟಿಮೇಟ್ ಹೆದರಿಕೆ ಕೊಟ್ಟಿದ್ದು ಅಂದರೆ - "ನಿಮ್ಮ ಮನಿ ಹೆಂಗಸೂರನ್ನ ಇನ್ನು ಮುಂದ ಅರೆಸ್ಟ್ ಮಾಡಿಕೊಂಡು ಬರ್ತೇವಿ. ಖಬರ್ದಾರ್." ಅದು ಮಹಾ ಡೇಂಜರ್.

ಗೌಡರು ರಾತ್ರಿ ಹಗಲು ಭೂಮಿ ಆಕಾಶ ಒಂದು ಮಾಡಿ ರುಂಡವಿದ್ದ ಆಳನ್ನ ಹುಡುಕಿದ್ದರು. ಅವ ಪೋಲೀಸರ ಭಯದಿಂದ ಎಲ್ಲೋ ಅಡಗಿ ಕೂತಿದ್ದ. ಸಿಕ್ಕ ನಂತರ ಒಂದು ಕ್ಷಣವೂ ಕಾಯದೇ ಸೀದಾ ವಕೀಲರ ಮನಿಗೆ ಕರ್ಕೊಂಡು ಬಂದಿದ್ದರು. ಹಿರಿ ಗೌಡರಿಗೆ ತಮ್ಮ ಮನೆಯ ಜನ ಟಾರ್ಚರ್ ಚೆಂಬರನಲ್ಲಿ ಸ್ಕ್ರಾಪ್ ಆಗುತ್ತಿದ್ದರ ಬಗ್ಗೆಯೇ ಚಿಂತೆ. ಅದು ಸಹಜವೂ ಹೌದು. 

ಹೀಗೆ ರುಂಡಚೀಲಿಯೊಬ್ಬ ವಕೀಲರಿಗೆ ಭೆಟ್ಟಿ ಆಗಿದ್ದ. ಮರುದಿನ ಮತ್ತೆ ಪೋಲೀಸರ ಜೊತೆ ಮಾತುಕತೆ ಮುಂದುವರೆಯಿತು. ರುಂಡ ಸಿಕ್ಕಿದ್ದಕ್ಕೆ ಪೊಲೀಸರು ಎಷ್ಟೋ ರಿಲೀವ್ ಆಗಿದ್ದರು. ಇವನನ್ನೂ ಅರೆಸ್ಟ್ ಮಾಡಿದರು. ದುಡ್ಡು ಕಾಸಿನ ಮಾತುಕತೆಯೂ ಮುಗಿಯಿತು ಅಂತ ಕಾಣುತ್ತದೆ. ಟಾರ್ಚರ್ ಬಂದಾಯಿತು. ಮುಂದೆ ಬೇಲ್ ಸಿಕ್ಕಿತು. ಕೇಸ್ ಸಹಿತ ಡಿಫೆನ್ಸ್ ವಕೀಲರು ಹೇಳಿದಾಗೆ ಹಾಕಿದ್ದರಿಂದ  ಅದೂ ನಿಲ್ಲಲಿಲ್ಲ. ಎಲ್ಲರೂ ಹೊರಬಂದರು. 2-3 ವರ್ಷ ಜೇಲ್ ನಲ್ಲಿ ಇದ್ದರು ಅಂತ ಕಾಣುತ್ತದೆ.

ಹಾಗೆ ನೋಡಿದರೆ ಇದೇನೂ ದೊಡ್ಡ ಸುದ್ದಿ ಆಗಿರಲಿಲ್ಲ. ಇಂತಹ ಸುಮಾರು ಮರ್ಡರ್ ಆಗುತ್ತಲೇ ಇರುತ್ತವೆ. ಆದ್ರೆ ನಮ್ಮ ದೋಸ್ತ ವಕೀಲರಿಗೆ ಮಾತ್ರ ವೈಯಕ್ತಿಕವಾಗಿ ಈ ಕೇಸ್ ಒಂದು ವಿಚಿತ್ರ ಕೇಸ್ ಆಗಿತ್ತು. ಕಕ್ಷಿದಾರನೊಬ್ಬ ಎಂದಿಗೂ ಇಂತಹ ವಿಲಕ್ಷಣ ವಸ್ತುವೊಂದನ್ನು  ಹಿಡಿದುಕೊಂಡು ಆ ಮೊದಲು ಅವರ ಎದುರಿಗೆ ಬಂದಿರಲಿಲ್ಲ. ಕ್ರಿಮಿನಲ್ ವಕೀಲರಿಗೆ ಕೊಲೆ, ಹೆಣ, ಪೊಲೀಸರು, ಟಾರ್ಚರ್, ಕರಪ್ಶನ್, ಯಾವದೂ ಹೊಸತಲ್ಲ. ಆದ್ರೆ ಅಪರಾತ್ರಿ ರುಂಡ ನೋಡುವದು ಜೀವಮಾನದಲ್ಲಿ ಒಂದೇ ಸಲವಿರಬಹುದು. ಸಾಕಲ್ಲವೇ ಒಂದೇ ಸಲ?

ಹೀಗೆ ವಕೀಲರು, ಪೊಲೀಸರು, ಪತ್ರಕರ್ತರು ಮಿತ್ರರಾಗಿದ್ದರೆ ಏನೇನೋ ಸುದ್ದಿ. ರೋಚಕ ಸುದ್ದಿ. ಇವತ್ತಿಗೂ ಈ ಮೂವರ ಜೊತೆ ಕೂತು ಹರಟುವದು ಅಂದ್ರೆ ಏನೋ ಒಂದು ಮಜಾ. ತಾಸು ತಾಸು ಕಳೆದು ಹೋಗಿದ್ದು ಗೊತ್ತೇ ಆಗುವದಿಲ್ಲ. ಆದರೆ ಅವರ ಜೊತೆ ಹರಟಿದ್ದೆಲ್ಲವನ್ನೂ ಬರೆಯಲು ಆಗುವದಿಲ್ಲ. ಯಾಕೆಂದರೆ ಅಷ್ಟು ಸ್ಫೋಟಕ ಮಾಹಿತಿಗಳು ಅವರ ಹತ್ತಿರವಿರುತ್ತವೆ. ಪತ್ರಿಕೆಗಳಲ್ಲಿ ಬರುವ ಮಾಹಿತಿ ಹೆಚ್ಚಂದರೆ 30-40% ಮಾತ್ರ. ಬಾಕಿ 60% ಬರೆದರೆ ಎಷ್ಟೋ ಜನ ಪತ್ರಕರ್ತರು ಬೇಗ ಬೇಗ ಈ ಭೂಮಿ ಖಾಲಿಮಾಡಬೇಕಾಗುತ್ತದೆ. ಮತ್ತೆ ಎಲ್ಲದಕ್ಕೂ ಸಪೋರ್ಟ್ ಮಾಹಿತಿ ಹುಡುಕಲು ಟೈಮ್ ಬೇರೆ ಇರುವದಿಲ್ಲ.ಆದರೆ ಹರಟೆ ಹೊಡಿಯುವಾಗ ಏನೂ ಕಟ್ಟಳೆ ಇರುವದಿಲ್ಲ. ನೀವು ಹೋಗಿ ಅವರನ್ನು ತೊಂದರೆಯಲ್ಲಿ ಸಿಲಿಕಿಸುವದಿಲ್ಲ ಅಂತ ಖಾತ್ರಿ ಆದರೆ ಎಂತೆಂತ ಸುದ್ದಿ ಹೇಳುತ್ತಾರೆ ಅನ್ನೋದನ್ನ ಕೇಳಿಯೇ ತಿಳಿಬೇಕು.

ಪತ್ರಕರ್ತರು, ಪೊಲೀಸರು, ವಕೀಲರು ನಿಮ್ಮ ಸ್ನೇಹಿತರಾಗಿದ್ದಾರೆ ಕೇಳಿ ನೋಡಿ. ಏನೇನೋ ಸುದ್ದಿ ತಿಳಿದೀತು ನಿಮಗೆ.

No comments: