Sunday, July 29, 2012

ಸುಪಾರಿ ಕೊಟ್ಟ ಸಂಗಿ, ಎನ್ಕೌಂಟರ ಮಾಡಿದ ಪುಂಗಿ

ಮೆಹಮೂದ್ ಫೋನ್ ಮಾಡಿ ಕರೀಂ ಸಾಬರಿಗೆ ಆರಾಮ ಇಲ್ಲ, ಹಾಸ್ಪಿಟಲ್ಗೆ ಅಡ್ಮಿಟ್ ಮಾಡ್ಯಾರ್ ಅಂದ ಕೂಡಲೇ ಒಮ್ಮೆ ಎದಿ ಧಸಕ್ ಅಂತು. ಮತ್ತೇನು ಅನಾಹುತ ಮಾಡಿಕೊಂಡ್ರಪಾ ಅಂತ ಕಾಳಜಿ ಆತು.

ಏನಾತೋ ಮೆಹಮೂದ್? ಎಲ್ಲೇ? ರೆಗ್ಯುಲರ್ ಜರ್ಮನ್ ಹಾಸ್ಪಿಟಲ್ ಏನಪಾ?.....ಅಂತ ಕೇಳಿದೆ. ಯಾಕಂದ್ರ ಲಾಸ್ಟ್ ಟೈಮ್ ಅವರ ಸಾಲೀಗೆ (ಹೆಂಡ್ತಿ ತಂಗಿಗೆ) ಭಾಗವತಂ ಹೇಳಲಿಕ್ಕೆ ಹೋಗಿ ಗಜ್ಜು ತಿಂದು, ಕಾಲ್ ಮುರಕೊಂಡು, ಅಲ್ಲೇ ಅಡ್ಮಿಟ್ ಆಗಿದ್ದರು. ಅದಕ್ಕ.

ನಹಿ ಸಾಬ್. ಈ ಸಲ ಮೆಂಟಲ್ ಹಾಸ್ಪಿಟಲ್ ಗೆ ಹಾಕಿದಾರೆ......ಬೆಳಗಾಂ ರೋಡ....ಗೊತ್ತು ನಿಮಗೆ.....ಅಲ್ಲ?....ಅಂತ ಹೇಳಿ ಫೋನ್ ಇಟ್ಟ ಬಿಟ್ಟ ಕರೀಮನ ಅಣ್ಣನ ಮಗ ಮೆಹಮೂದ್.

ಹಾಂ!!!!!!!!!!!.....ಸಾಬರಿಗೆ ಈ ಸಲಿ ಹುಚ್ಚು ಹಿಡೀತು ಏನು? ಏನ ಆತೋ ಏನು? ನೋಡಲಿಕ್ಕೆ ಹೊನಗ್ಯಾ ಪರ್ಸನಾಲಿಟಿ ಇದ್ದರೂ ಭಾಳ ಸೂಕ್ಷ್ಮ ಮನಸ್ಸಿನ ಮನುಷ್ಯಾ ಅವ. ಮದ್ವಿ ಬ್ಯಾಡೋ ಬ್ಯಾಡೋ ಅಂತ ಹೇಳಿದ್ರೂ ತಲಾಕ್ ಆದಂಗ ಆದಂಗ ಮತ್ತ ಮತ್ತ ಹೊಸ ಹುರುಪಿನಿಂದ ಸಣ್ಣ ಸಣ್ಣ ಹುಡುಗ್ಯಾರನ್ನ ರೊಕ್ಕ ಕೊಟ್ಟ ಕಟ್ಟಿಗೊಂಡ ಬರ್ತಾನ. ಅವರು ಬಂದು ಇವಂಗ ಪಾಪ ಅನ್ನಬಾರದ್ದು ಅಂದು, ಫೀಲಿಂಗ್ ಹರ್ಟ್ ಮಾಡ್ತಾರ. ಅದ ಹೆಚ್ಚಾಗಿ ಈಗ ಏನರ ಹುಚ್ಚು ಹಿಡದಿರಬೇಕು ಅಂತ ಅನ್ನಿಸ್ತು. ಒಂದ ಸಲ ನೋಡಿ ಬರೋಣ ಅಂತ ಬೆಳಗಾಂ ರೋಡ ಕಡೆ ಹೊರಟೆ. ಮೆಂಟಲ್ ಹಾಸ್ಪಿಟಲ್ ಗೆ.

ಹೋದೆ.

ಹೀಂಗ....ಕರೀಂ ಸಾಬ್ ಅಂತ....ಅಡ್ಮಿಟ್ ಆಗ್ಯಾರ್ ಅಂತ....ಸ್ವಲ್ಪ ಭೆಟ್ಟಿ ಮಾಡಸರಿ....ಅಂತ ವಿನಂತಿ ಮಾಡಿಕೊಂಡೆ.

ಅವನೌನ್....ಈ ಮೆಂಟಲ್ ಹಾಸ್ಪಿಟಲ್ ಒಳಗ ಸ್ವಾಗತಕಾರಿಣಿ ಅಂತಾ ಕೂತಾಕಿನೂ ಹುಚ್ಚ ಇದ್ದಾಂಗ ಇದ್ದಳು.

ಸ್ವಲ್ಪ ವೇಟ್ ಮಾಡ್ರಿ.....ಕರೀಂ ಅವರು ಇರೊ ವಾರ್ಡ್ ಬಾಯ್ ಎಲ್ಲೋ ಹೋಗ್ಯಾರ್....ಬಂದ ಕೂಡಲೇ ಇಲ್ಲೇ ಬರಲಿಕ್ಕೆ ಹೇಳೇನಿ....ಅಂತ ಸ್ವಲ್ಪೂ ಕರ್ಟಸೀ ಇಲ್ಲದ ಹೇಳಿದಳು. ಇಕಿ ಯಾರೋ ಗವರ್ನಮೆಂಟ್ ಬ್ರಾಹ್ಮಣರಾಕಿ ಇರಬೇಕು ಅಂತ ಅಕಿಗೂ ದೇವರು ಒಳ್ಳೇದು ಮಾಡ್ಲಿ ಅಂತ ಬೇಡಿಕೊಂಡು  ಸುಮ್ಮಾ ಕೂತೆ.

ಸುಮಾರ ಒಂದು ತಾಸ್ ಆದ ಮ್ಯಾಲೆ ಒಬ್ಬ ಫುಲ್ ವೈಟ್  ಯುನಿಫಾರ್ಮ್ ಹಾಕಿಕೊಂಡು, ಬಿಳೆ ಗಾಂಧೀ ಟೊಪ್ಪಿಗಿ ಹಾಕಿಕೊಂಡ ಹಟ್ಟಾ ಕಟ್ಟಾ ಆದ್ಮಿ ಒಬ್ಬವ ಬಂದ. ಆ ಸ್ವಾಗತಕಾರಿಣಿ ನನ್ನ ಅವಂಗ ತೋರಿಸಿದಳು.

ನೀವಾ ಏನು.....ಕರೀಮಗ ಹುಡಿಕಿಕೊಂಡು ಬಂದವರು?........ಅಂತ ಮ್ಯಾಲಿಂದ ಕೆಳವರೆಗೂ ನೋಡುತ್ತಾ ಒಂಚೂರು ನಯ ವಿನಯ ಇಲ್ಲದ ಕೇಳಿದ. ಇಲ್ಲೆ ಅದನ್ನೆಲ್ಲಾ ನಿರೀಕ್ಷೆ ಮಾಡೋದೇ ತಪ್ಪು ಅಂತ ಗೊತ್ತಾಗಿ....ಹೌದರೀ, ಸರ್ರಾ.....ಅಂತ ಬೆನ್ನು ಬಗ್ಗಿಸಿ ಅವನಿಗೆ ಇಲ್ಲದ ಗೌರವ ಕೊಟ್ಟುಗೋತ್ತ ಹೇಳಿದೆ.

ನೋಡ್ರೀ.....ಅವಾ ಕರೀಂ ಭಾಳ ವಾಯೋಲೆಂಟ್ ಆಗ್ಯಾನ....ಹಾಂಗಿದ್ದಾಗ ನೀವ ನಿಮ್ಮ ಸುರಕ್ಷತೆಗೆ ಜವಾಬದಾರರು ನೋಡ್ಕೊಳ್ಳರೀ ಮತ್ತ.....ಹಾಂಗಂತ ಇಲ್ಲೆ  ಸಹಿ ಮಾಡಿ, ಅವರ ಕಡೆ ಕೊಡ್ರೀ....ಅಂತ ಒಂದು ಫಾರ್ಮ್ ಕೊಟ್ಟ.

ಓದಿಲ್ಲ...ಏನೂ ಇಲ್ಲ....ಸಹಿ ಮಾಡಿದೆ. ಕೊಟ್ಟೆ. ಕರೀಂ ನಮ್ಮ ಎಷ್ಟು ಒಳ್ಳೆ ದೋಸ್ತ ಅಂದ್ರ ಅವಾ ಎಷ್ಟ ಯಾಕ ವಾಯೋಲೆಂಟ್ ಆಗ್ವಲ್ಲನ್ಯಾಕ....ಏನೂ ಫರಕ್ ಇಲ್ಲ ನನಗ. ಅವ ಕುತ್ತಗಿ ಹಿಚುಕಿ ಕೊಂದರೂ ಚಿಂತಿಲ್ಲ...ಒಟ್ಟಿನ್ಯಾಗ್ ಲಗೂನ ಅವನ್ನ ಭೆಟ್ಟಿ ಆದ್ರ ಸಾಕಾಗೆದ.

ಆ ವಾರ್ಡ್ ಬಾಯ್ ಫಾಲೋ ಮಾಡ್ಕೊತ್ತಾ  ಹೊಂಟೆ.

ಒಂದು ಚಿಕ್ಕ ಗಾರ್ಡೆನ್ ತರಹ ಇರೋ ಕಡೆ ಕರಕೊಂಡ ಬಂದ. ಅಲ್ಲೇ ಸುಮಾರ್ ಮಂದಿ ನೋಡಿದ್ರಾ ಹುಚ್ಚರು ಅಂತ ತಿಳಿಬಹುದಾದ ಮಂದಿ ಚಿತ್ರ ವಿಚಿತ್ರ ರೀತಿಯಲ್ಲಿ ತಮ್ಮದೇ ಲೋಕದಲ್ಲಿ ಇದ್ದರು. ಎಲ್ಲರೂ ಒಂದೇ ತರಹ ಬಿಳೆ ಶರ್ಟ್ ಮತ್ತು ಬಿಳೆ ಹಾಪ್ ಪ್ಯಾಂಟ್ ಹಾಕಿಕೊಂಡಿದ್ದರಿಂದ ನಮ್ಮ ಕರೀಮನ್ನ ಹುಡುಕೋದು ಸ್ವಲ್ಪ ಟೈಮ್ ಹಿಡೀತು. ಆದರೂ ಅವನ ಸಂಜೀವ್ ಕುಮಾರ್ ಬಿಲ್ಡ್ ಇರೋದ್ರಿಂದ ಕಂಡು ಹಿಡಿದೆ.

ಸ್ವಲ್ಪ ನೋಡಿಕೊಂಡು ಹೋಗ್ರೀ.....ಮೊದಲ ಸಿಕ್ಕಾಪಟ್ಟೆ ಹೊನಗ್ಯಾ ಪರ್ಸನಾಲಿಟಿ ಕರೀಂ....ಹಿಡದು ಒದ್ದಾ ಗಿದ್ದಾ ಅಂದ್ರಾ ನೀವು ಸತ್ತು ಗಿತ್ತು ಹೋದೀರಿ....ಅಂತ ವಾರ್ಡ್ ಬಾಯ್ ಎಚ್ಚರಿಕೆ ಕೊಟ್ಟ.

ಸಾವಕಾಶ ಕರೀಂ ಹತ್ತಿರ ಹೋದೆ. ಗಿಡದ ಕೆಳಗೆ ಸುಮ್ಮನ ಏನೋ ವಿಚಾರ ಮಾಡಿಕೋತ್ತ ಕೂತಿದ್ದ. ಪಾಪ ಅನ್ನಿಸ್ತು.

ಕರೀಮಾ....ಏನಾತೋ ಅಪ್ಪಾ? ಯಾಕೋ? ಬೆಳಗಾಂ ರೋಡ ಬೆಳಗಾಂ ರೋಡ ಅಂತ ಎಷ್ಟ ಮಂದಿಗೆ ನಾನು ನೀನು ಜೋಕ್ ಮಾಡ್ತಿದ್ವಿ. ಈಗ ನೀನಾ ಇಲ್ಲಿ ಬಂದು ಅಡ್ಮಿಟ್ ಆಗಿ ಅಲ್ಲೋ. ಏನಾತೋ? ಹೇಳೋ ದೋಸ್ತ.....ಅಂತ ಭಾಳ ದುಃಖದಿಂದ ಹೇಳಿದೆ.

ನನ್ನ ದನಿ ಕೇಳಿದ ಕೂಡಲೇ ಕರೀಂ ಒಂದು ಸಲೆ ಮಾರಿ ಮ್ಯಾಲ ಮಾಡಿದ. ಎರಡು ಮೂರು ದಿವಸದಿಂದ ದಾಡಿ ಮತ್ತೊಂದು ಏನೂ ಆದಂಗ ಇರಲಿಲ್ಲ. ಒಂದು ತರಹದ ವಿಚಿತ್ರ ಲುಕ್ ಕೊಟ್ಟ. ಹಾಕ್ಕೊಂಡಿದ್ದ ಟೊಪ್ಪಿಗಿ ಕಿತ್ತು ವಗದವನಾ ಓಡಿ ಬಂದು ಅಪ್ಪಿಕೊಂಡು ಬಿಟ್ಟ. ವಾರ್ಡ್ ಬಾಯ್ ಘಾಬರಿ ಆಗಿ ತನ್ನ ಕಟ್ಟಗಿ ಬೇಟನ್ ತೆಗೆದು ಅವಂಗ ಹೊಡಿಲಿಕ್ಕೆ ಬಂದ. ನಾ ಇದೆಲ್ಲಾ ಓಕೆ...ನಮ್ಮ ದೋಸ್ತ....ಪ್ರೀತಿಯಿಂದ ಅಪ್ಪಿಕೊಳ್ಳಲಿಕ್ಕೆ ಬರಲಿಕತ್ತಾನ....ಹೊಡಿಬ್ಯಾಡರಿ.....ಅಂದೆ.

ಕರೀಂ ಬಂದವನ ನನ್ನ ಅಪ್ಪಿಕೊಂಡು ಹಾಡಲಿಕ್ಕೆ ಶುರು ಮಾಡಿ ಬಿಟ್ಟ.

ಸುಪಾರಿ ಕೊಟ್ಟ ಸಂಗಿ
ಎನ್ಕೌಂಟರ ಮಾಡಿದ ಪುಂಗಿ

ಆ ರಾಜೇಶ್ ಖನ್ನಾ, ಮುಮತಾಜ್ ಒಂದು ಹಳೆ ಹಾಡ ಇತ್ತ ನೋಡ್ರೀ. ಜೈ ಜೈ ಶಿವ ಶಂಕರ್. ಕಾಟಾ ಲಗೇನಾ ಕಂಕರ್......ಅಂತ. ಅದೇ ಧಾಟಿವಳಗ ಮತ್ತ ಮತ್ತ ಹಾಡಿದ್ದ ಹಾಡಿದ.

ಸುಪಾರಿ ಕೊಟ್ಟ ಸಂಗಿ
ಎನ್ಕೌಂಟರ ಮಾಡಿದ ಪುಂಗಿ

ಹೊಟ್ಟಿ ಬಿಟಗೋಂಡು, ತುಂಬಿದ ಗಲ್ಲದ ನನ್ನ ನೋಡಿ ನೀನಾ ಮುಮ್ತಾಜ್ ಅನ್ನೋ ರೀತಿಲೇ ನನಗ ಡ್ಯಾನ್ಸ್ ಮಾಡು ಅಂದ....ಸ್ವಲ್ಪ ಮಾಡಿದೆ.

ಡಾನ್ಸ್ ಮುಗೀತು. ಆದ್ರ ಅವ ಮಾತ್ರ ಸಣ್ಣ ದನಿವಳಗ ಸುಪಾರಿ ಕೊಟ್ಟ ಸಂಗಿ................ಏನಕೌಂಟರ ಮಾಡಿದ ಪುಂಗಿ....ಅಂತ ಹೇಳ್ಕೊತ್ತಾ ಇದ್ದ.

ಏನಾತೋ ಕರೀಮಾ.....ರಾಜೇಶ್ ಖನ್ನಾ ತೀರಿಕೊಂಡಿದ್ದಕ್ಕ ಹುಚ್ಚ ಹಿಡೀತೇನೋ? ನನಗ ಗೊತ್ತದ....ಅವರು ನಿನ್ನ ಫೇವರೀಟ್ ಹೀರೋ.....ಅಂತ ....ಆದರೂ ಅದನ್ನ ಅಷ್ಟು ತಲಿಗೆ ಹಚ್ಚಿಗೋತ್ತರ ಏನು?....ಏನಪಾ ಇದು? ಈ ಪರಿಸ್ಥಿತಿ ತಂದ್ಕೊಂಡಿ?  ಹಾಂ.....ಹಾಂ.....ಇದು ನಿನಗ ಸರಿ ಅನ್ನಸ್ತದ ಏನು?.......ಅಂತ ಕೇಳಿದೆ.

ಇಲ್ಲಾ....ಸಾಬ್...ಹಾಗೇನು ಇಲ್ಲಾ....ನಮ್ಮದು ಫೇಸ್ಬುಕ್ ಮೇಲೆ encounter ಆಯಿತು ಸಾಬ್....ಅಂತ ಬಾಂಬ್ ಹಾಕಿದ.

ಹಾಂ.....ಏನಪಾ ಇದು ಫೇಸ್ಬುಕ್ encounter? ಮುಂಬೈದಾಗ ಪೊಲೀಸರು ಗೂಂಡಾಗಳನ್ನ encounter ಮಾಡೋದನ್ನ ಕೇಳಿದ್ದೆ. ಈ ಕಡೆ ಗೂಂಡಾ ಮಂದಿಯಿಂದ ಸುಪಾರಿ ತೊಗೊಂಡು ಅವರ ಆಪೋಸಿಟ್ ಪಾರ್ಟಿ ಗುಂಡಾಗಳನ್ನ ಢಂ ಅನ್ನಿಸಿಬಿಡೋದಕ್ಕ ಸುಪಾರಿ ತಗೊಂಡು ಏನಕೌಂಟರ ಮಾಡೋದು ಅಂತಾರ್. ಇವಾ ನೋಡಿದ್ರಾ ಫೇಸ್ಬುಕ್ ಮೇಲೆ encounter ಆತು ಅಂತಾನ. ಏನು ಅರ್ಥ?

ಸಂಗಿ ಅಂದ್ರಾ ಯಾರು? ಅಕಿ ಏನು ಸುಪಾರಿ ಕೊಟ್ಟಳು? ಯಾರಿಗೆ ಕೊಟ್ಟಳು? ಯಾಕ ಕೊಟ್ಟಳು? ಪುಂಗಿ ಯಾರು? ಅಕಿ ಏನು encounter ಮಾಡಿದಳು? ಸ್ವಲ್ಪ ತಿಳಿಸಿ ಹೇಳಿದರ ಗೊತ್ತಾದೀತು ನೋಡಪಾ ಕರೀಮ....ಅಂತ ಹೇಳಿ ಸುಮ್ಮಾದೆ.

ಸಾಬ್....ಸಂಗಿ ಅಂದ್ರೆ ನಮ್ ಹಾಪ್ ಬೇಗಂ ಸಾಬ್....ಅಂದ ಕರೀಂ.

ಹಾಂ....ಅಕಿ ಹೆಸರು ಮೆಹರುನ್ನೀಸಾ ಅಲ್ಲೇನೋ? ಅಕಿ ತಂಗಿ ಸರಗಂ. ಅಲ್ಲೇನು? ಈ ಸಂಗಿ ಯಾರು?.....ಒಟ್ಟ ತಿಳಿಲಿಲ್ಲ.

ಹೌದು ಸಾಬ್....ಅಕಿ ಹೆಸರು ಮೆಹರುನ್ನೀಸಾ ಖರೆ. ಆದ್ರೆ ನಾವು ಅಕಿಗೆ ಪ್ಯಾರ್ ಮೊಹಬ್ಬತ್ ಸೆ "ಸಂಗದಿಲ್ ಸನಂ" ಉರ್ಫ್ ಸಂಗೀ ಅಂತ ಕರೀತಿವಿ ಸಾಬ್.....ಅಂದು ಕಣ್ಣು ವರಸಿಕೊಂಡ.

ಓಕೆ....ಹೆಂಡ್ತೀ ಸಂಗೀ....ಅಕಿ ಏನು ಸುಪಾರಿ ಕೊಟ್ಟಳು?  - ಅಂತ ಕೇಳಿದೆ.

ಸಾಬ್....ಅವತ್ತು ಅಕಿದು ಬರ್ತ್ ಡೆ....ನಮ್ಮದು ಫೇಸ್ಬುಕ್ ಗ್ರೂಪ್ ನಲ್ಲಿ ಯಾರೋ ಅಕಿಗೆ ಹ್ಯಾಪಿ ಬರ್ತ್ ಡೆ ಅಂತ ಹಾಕಿದ್ರು. ನಾವು ಹೋಗಿ ಹ್ಯಾಪಿ ಬರ್ತ್ ಡೆ ಅಂತ ಕಾಮೆಂಟ್ ಹಾಕಿದ್ವಿ ಸಾಬ್...ಕೆಲವು ನಮ್ಮ ಕಾಮನ್ ದೋಸ್ತರು ಬಂದು ನಮ್ಮ ಕಾಮೆಂಟ ಲೈಕ್ ಕೂಡ ಮಾಡಿದ್ರು. ಆ ಮೇಲೆ ನಾವು ಸ್ವಲ್ಪ ದಿವಸ ಫೇಸ್ಬುಕ್ ಮೇಲೆ ಬರಲಿಲ್ಲ ಸಾಬ್....ಆ ಮೇಲೆ ಬಂದು ನೋಡಿದ್ರೆ, ನಮ್ಮದು ಒಂದೇ ಕಾಮೆಂಟ್ ಗಾಯಬ್ ಆಗಿ ಬಿಟ್ಟಿದೆ. ಆವಾಗ ನಮಗೆ ತಿಳೀತು....ಇದು ನಮ್ಮ ಸಂಗೀ ಬೇಗಂ ಅವರ ಕರಾಮತ್.....ಸುಪಾರಿ ಕೊಟ್ಟಬಿಟ್ಟಿ ನಮ್ಮ ಕಾಮೆಂಟ್ encounter ಮಾಡಿಸಿ ಬಿಟ್ಟಿದ್ದಾರೆ ಅಂತ.....ಹಾಗೆ ಹೇಳಿ ಕರೀಂ ನಿಟ್ಟುಸಿರು ಬಿಟ್ಟ.

ಹೋಗ್ಗೋ....ನಿಮ್ಮಾ.....ಸಾಬ್ರಾ....ನಾ ಹೇಳಿದ್ದೆ....ಆ ಫೇಸ್ಬುಕ್ ಸಹವಾಸ ಬ್ಯಾಡ ಅಂತ. ಆದರೂ ಮಾಡ್ಲಿಕ್ಕೆ ಹೋಗಿ, ಈಗ ಹುಚ್ಚ ಆಗಿ ಕೂತಿರಿ ನೋಡ್ರೀ.....ಅಂದೆ.

ಅಲ್ಲ ಸಾಬ್...ಫೇಸ್ಬುಕ್ ದು ಏನೂ ತಪ್ಪು ಇಲ್ಲ......ಸುಪಾರಿ ಕೊಟ್ಟಾ ಬೇಗಂ ಸಂಗೀದು ಮತ್ತು encounter ಮಾಡಿದ ಪುಂಗಿದೇ ತಪ್ಪು....ಅಂತ ಮತ್ತೆ  ಒಂದು ರೌಂಡ ಸುಪಾರಿ ಕೊಟ್ಟ ಸಂಗಿ, ಎನ್ಕೌಂಟರ ಮಾಡಿದ ಪುಂಗಿ.....ಅಂತ ಡ್ಯಾನ್ಸ್ ಮಾಡೇ ಬಿಟ್ಟ.

ಅಲ್ಲೋ....ಕರೀಂ...ಯಾವದೋ ಫೇಸ್ಬುಕ್ ಗ್ರೂಪ್ ನ್ಯಾಗ ಹಾಕಿದ ಪೋಸ್ಟ್ ಅಂತಿ. ಅದನ್ನ ಹ್ಯಾಂಗ ಡಿಲೀಟ್ ಮಾಡ್ಲಿಕ್ಕೆ ಸಾಧ್ಯ? ಕೇವಲ ಅಡ್ಮಿನ್ ಮಾತ್ರ ಮಾಡಬಹುದು. ಅಥವಾ ನೀನಾ ಹೋಗಿ ಡಿಲೀಟ್ ಮಾಡಬಹುದು. ನೀನಾ ಮತ್ತೇನರಾ ಡಿಲೀಟ್ ಮಾಡಿಕೊಂಡು ಪಾಪಾ ಬೇಗಂ ಮೇಲೆ ಇಲ್ಲದ ಸಲ್ಲದ ಆರೋಪ ಮಾಡ್ಲಿಕತ್ತಿ ಏನು?......ಅಂತ ಕೇಳಿದೆ. ಯಾಕೋ ಲಾಜಿಕಲ್ ಅನ್ನಿಸಲಿಲ್ಲ ಅವನ ವಾದದ ಧಾಟಿ. ಯಾರೋ ಹೋಗಿ ಯಾಕ ಇವನ ಕಾಮೆಂಟ್ ಡಿಲೀಟ್ ಮಾಡ್ತಾರ?

ನಮಗೆ ಗೊತ್ತಿಲ್ಲ ಕ್ಯಾ? ಅಡ್ಮಿನ್ ಮಾತ್ರ ಕಾಮೆಂಟ್ ಡಿಲೀಟ್ ಮಾಡೋಕೆ ಸಾಧ್ಯ. ನಾವೂ ರೀಸರ್ಚ್ ಮಾಡಿ ತಿಳ್ಕೊಂಡಿದೀವಿ. ಫೇಸ್ಬುಕ್ ನಲ್ಲಿ ಗ್ರೂಪ್ ಅಡ್ಮಿನ್  ಪೋಸ್ಟ್ ಡಿಲೀಟ್ ಮಾಡಿದ್ರೆ ಯಾರಿಗೂ ಗೊತ್ತಾಗೋದೇ ಇಲ್ಲ. ಯಾಕೆಂದ್ರೆ ಅದು ಇನ್ಫಾರ್ಮೇಶನ್ ಫೇಸ್ಬುಕ್ ಕಡೆ ಇದ್ದರೂ ಅವರು ಅದನ್ನ ಹೊರಗೆ ಬಿಟ್ಟಿಲ್ಲ. ಹಾಂಗಾಗಿ ಒಮ್ಮೆ ಗ್ರುಪ್ ಅಡ್ಮಿನ್ ಆದ್ರಿ ಅಂದ್ರೆ ನಿಮಗೆ ಹ್ಯಾಗೆ ಬೇಕು ಹಾಗೆ ಮನ್ಮಾನಿ ಮಾಡಿಕೊಂಡು ಇರಬಹದು ನೋಡಿ.............ಅಂದ ಕರೀಂ.

ಓಹೋ....ನಿನ್ನ ಪ್ರಕಾರ ನಿಮ್ಮ ಸಂಗದಿಲ್ ಸನಂ ಉರ್ಫ್ ಸಂಗೀ ಬೇಗಂ ಗೆ ನೀನು ಹಾಕಿದ ಹ್ಯಾಪಿ ಬರ್ತ್ ಡೆ ಪೋಸ್ಟ್ ಸೇರಿಲ್ಲ. ಅದಕ್ಕೆ ಅಡ್ಮಿನ್ ಗೆ ಹೇಳಿ ಅದನ್ನ ಡಿಲೀಟ್ ಮಾಡಿಸಿದಾಳೆ ಅಂತ ನಿನ್ನ ಅರ್ಥ.....ಹೌದಿಲ್ಲೋ?......ಅಂತ ಕೇಳಿದೆ.

ಎಜ್ಜಾಟ್ಲೀ....ಹಾಗೆ ಆಗಿರೋದು ಸಾಬ್....ಇಲ್ಲ ಅಂದ್ರೆ ನಂದು  ಒಂದೇ ಪೋಸ್ಟ್ ಹೇಗೆ ಗಾಯಬ್ ಆಯ್ತು ಸಾಬ್?.....ಅಂತ ಕೌಂಟರ್ ಪ್ರಶ್ನೆ ಕೇಳಿದ.

ಆದ್ರ ಕರೀಂ....ಯಾರೂ ಒಳ್ಳೆ ಬುದ್ಧಿ, ವಿವೇಕ ಇರೋ ಅಡ್ಮಿನ್ ಮಂದಿ ಹಾಂಗ ಹಿಂದ ಮುಂದ ನೋಡದೇ, ತಮ್ಮ ಸ್ವಂತ ಜಜ್ಮೆಂಟ್ ಉಪಯೋಗಿಸದೆ, ತುಂಬಾ ಮುಖ್ಯವಾಗಿ ನಿನ್ನ ಕಡೆ ಕೇಳದೆ ಹಾಂಗೆ ಕಾಮೆಂಟ್ ಡಿಲೀಟ್ ಮಾಡೋದಿಲ್ಲ. ನಾನು ಒಂದು ಕಾಲಕ್ಕೆ ಕೆಲವು ಫೇಸ್ಬುಕ್ ಗ್ರುಪ್ಗಳ ಅಡ್ಮಿನ್ ಇದ್ದೆ. ಆದ್ರ ಒಂದೂ ಪೋಸ್ಟ್ ಡಿಲೀಟ್ ಮಾಡೋವಂತಹ ಸಂದರ್ಭ ಬರಲೇ ಇಲ್ಲ. ಬಂದರೂ ಮೇಲೆ ಹೇಳಿದಂಗ ಆಕ್ಷೇಪ ಇದ್ದವರಿಗೆ, ಮತ್ತ ಅವರ ಆಪೋಸಿಟ್ ಪಾರ್ಟಿಗೆ ಕೇಳಿಯೇ ಒಂದು ನಿರ್ಧಾರ ತಗೋಬೇಕೆ ವಿನಹಾ ಕೇವಲ ನಾ ಅಡ್ಮಿನ್ ಆಗೇನಿ, ನನಗ ಬೇಕಾದವರು ಸುಪಾರಿ ಕೊಟ್ಟರಾ ಅಂತ ಹೇಳಿ ಪೋಸ್ಟ್ ಡಿಲೀಟ್ ಮಾಡಿದರ ಆ ಬದಿರಿನಾಥ ಶಿವ ಮೆಚ್ಚೋದಿಲ್ಲ ನೋಡಪಾ. ನನಗ ತಿಳಿದ ಮಟ್ಟಿಗೆ ಯಾರೂ, ಅದು ಅಡ್ಮಿನ್ ಅಂತ ಜವಾಬ್ದಾರಿ ತೊಗೊಂಡವರು, ಹಾಂಗ ಮಾಡಲಿಕ್ಕೆ ಇಲ್ಲ......ಅಂತ ಕ್ಲಾರಿಫಿಕೆಶನ್ ಕೊಟ್ಟೆ.

ನಮಗೆ ಗೊತ್ತಿಲ್ಲ ಕ್ಯಾ? ಆದ್ರೆ ನಾ ಹ್ಯಾಪಿ ಬರ್ತ್ ಡೆ ಕಾಮೆಂಟ್ ಹಾಕಿದ ಕೂಡಲೇ ಕೆಲವು ಅನಿರೀಕ್ಷೀತ ಬೆಳವಣಿಗೆಗಳು ಆದವು ಸಾಬ್.....ಅಂದ ಕರೀಂ.

ಏನಪಾ ಅಂಥಾ ದೊಡ್ಡ ಅನಿರೀಕ್ಷೀತ ಬೆಳವಣಿಗೆಗಳು?.....ಅಂತ ಕೇಳಿದೆ.

ನಮ್ಮ ಸಂಗೀ ಬೇಗಂ ಸುಪಾರಿ ಕೊಟ್ಟಿದ್ದು ಆಕಿ ದೋಸ್ತ ಪುಂಗಿಗೆ. ಪೆಂಗೀ ಏನೂ ಅಡ್ಮಿನ್ ಇರಲಿಲ್ಲ. ಎಲ್ಲೋ ಇದ್ದವಳು ಬೋರ್ಡ್ ಮೇಲೆ ಬಂದ್ಬಿಟ್ಟಿ ನನಗೆ ಅಡ್ಮಿನ್ ಮಾಡಿ. ಲೇಡೀಸ್ ಯಾರೂ ಅಡ್ಮಿನ್ ಇಲ್ಲ ಅಂತ ಶಂಖಾ  ಹೊಡೆದಳು. ಯಾವಾಗಲೂ ನಿದ್ದಿ ಮಾಡುವ ಒಬ್ಬ ನಿದ್ದಿಬಡಕ್ ಅಡ್ಮಿನ್ ಅಕಿ ಶಂಖಾ ಹೊಡೆಯೋದು ಕೇಳಿ ಅಕಿನ್ನ ಅಡ್ಮಿನ್ ಮಾಡಿಬಿಟ್ಟಿ, ನಾನಾ ಪಾಟೇಕರ್ ತರಹ ಚಪ್ಪಾಳೆ ಹೊಡೆದುಬಿಟ್ಟಿ ಹೋಗಿ ಮತ್ತೆ ರಗ್ಗ್ ಎಳಕೊಂಡು ಮಲಗಿಬಿಟ್ಟ. ಈಗ ಮಂಗ್ಯಾನ್ ಕೈಯಲ್ಲಿ ಮಾಣಿಕ್ಯ ಕೊಟ್ಟಾಗೆ ಆಯಿತು ಸಾಬ್. ಅಡ್ಮಿನ್ ಆದವಳೇ ಪುಂಗಿ ನನ್ನ ಪೋಸ್ಟ್ ಡಿಲೀಟ್ ಮಾಡಿ ತೊಗೊಂಡಿದ್ದ ಸುಪಾರಿಗೆ ನಿಯತ್ತಾಗಿ encounter ಮಾಡಿದಳು ಸಾಬ್.....ಅಂತ ಅಂದವನೇ.......... ಸುಪಾರಿ ಕೊಟ್ಟ ಸಂಗಿ, ಎನ್ಕೌಂಟರ ಮಾಡಿದ ಪುಂಗಿ............ ಅಂತ ಮತ್ತೊಂದು ರೌಂಡ್ ಡ್ಯಾನ್ಸ್ ಮಾಡೇ ಬಿಟ್ಟ. ಈ ಸರ ನವರಸಗಳಲ್ಲಿ  ವಿಷಾದ ರಸ ಜಾಸ್ತಿ ಇತ್ತು. ತುಂಬಾ ಬೇಜಾರಾಯಿತು.

ನೋಡ್ರೀ ಸಾಬ್ರಾ....ಯಾವದು ಖರೆ...ಯಾವದು ಸುಳ್ಳು ಅಂತ ನಮಗ ಗೊತ್ತಿಲ್ಲ. ಯಾರು ನಿಮ್ಮ ಕಾಮೆಂಟ್ ಡಿಲೀಟ್ ಮಾಡಿದ್ರು ಅಂತ ಹೇಳೋದು ಕಷ್ಟ. ಕೇವಲ ನಿಮಗ ನಿಮ್ಮ ಬೇಗಂ ಜೊತಿ ಹೊಂದಾಣಿಕೆ ಆಗ್ತಾ ಇಲ್ಲ ಅಂದಾ ಮಾತ್ರಕ್ಕ ಅವರು ಯಾರಿಗೋ ನಿಮ್ಮ ಕಾಮೆಂಟ್ ಡಿಲೀಟ್ ಮಾಡಲಿಕ್ಕೆ ಸುಪಾರಿ ಕೊಟ್ಟರು, ಮತ್ಯಾರೋ ಪುಂಗಿ ಅನ್ನೋರು ಅಡ್ಮಿನ್ ಆಗಿ ನಿಮ್ಮ ಕಾಮೆಂಟ ಡಿಲೀಟ್ ಮಾಡಿದ್ರು ಅನ್ನೋದು ಯಾಕೋ ಸರಿ ಅನ್ನಿಸೋದಿಲ್ಲ ನೋಡಿ. ಯಾರ್ ಯಾರಿಗೋ ಬೆನಿಫಿಟ್ ಆಫ್ ಡೌಟ್ ಕೊಡಬೇಕು ಅಂತ ಹಿರಿಯರು ಹೇಳ್ಯಾರ್. ಹಾಂಗಿದ್ದಾಗ ನೀವು ನಿಮ್ಮ ಸ್ವಂತ ಬೇಗಂ ಮತ್ತು ಅಕಿ ದೋಸ್ತ ಪುಂಗಿಗೆ ಯಾಕ್ ಬೆನಿಫಿಟ್ ಆಫ್ ಡೌಟ್ ಕೊಡಬಾರದು ಅಂತ ನಾ ಹೇಳೋದು.....ಅಂತ ಒಂದು ಪ್ರೊಪೋಸಲ್ ಕೊಟ್ಟೆ ಕರೀಮ್ಗಾ.

ಅದೂ ಸರಿ ಸಾಬ್....ಯಾರೋ ನಮ್ಮ ಬರ್ತ್ ಡೆ ವಿಷಶ್ ಕಾಮೆಂಟ್ ಡಿಲೀಟ್ ಮಾಡಿದ್ರೆ ನಾವೇನು ಮಾಡೋಕೆ ಆಗ್ತದೆ? ಪ್ರೂಫ್ ಇಲ್ಲ. ಆದರೂ ಎಲ್ಲ ಪಾಯಿಂಟ್ಸ್ ಕೂಡ್ಸಿದ್ರೆ ಸಂಗೀ ಬೇಗಂ ಸುಪಾರಿ ಮೇಲೆ ಭಾಳ್ ಡೌಟ್ ಸಾಬ್....ಅಂತ ನಿಟ್ಟುಸಿರು ಬಿಟ್ಟ.

ನೋಡಪಾ ಕರೀಂ....ನೀ ಏನೂ ಬರೀಬಾರದಂತ ಕಾಮೆಂಟ್ ಏನೂ ಹಾಕಿಲ್ಲ. ಅಕಿ ಹಾಪ್ ಬೇಗಂ ನಿನಗ ಏನಾ ಅಂದಿರ್ಲೀ, ನಿನ್ನ ಹ್ಯಾಂಗಾ ಟ್ರೀಟ್ ಮಾಡಿರಲಿ, ನಿನ್ನ ಫೀಲಿಂಗ್ ಎಷ್ಟಾ ಹರ್ಟ್ ಮಾಡಿರಲಿ, ಪುಂಗಿಗೆ ಹೇಳಿ ನಿನ್ನ ಮ್ಯಾಲೆ ಎಷ್ಟಾ ಪಾಟ್ ಶಾಟ್ (potshot) ಹಾಕ್ಸಿರಲಿ, ಅದೆಲ್ಲ ಮರೆತು ಹೋಗಿ  ಪ್ರೀತಿಯಿಂದ ಹ್ಯಾಪಿ ಬರ್ತ್ ಡೆ ಅಂತ ಕಾಮೆಂಟ್ ಹಾಕೀದಿ. ನಿನ್ನ ಬಗ್ಗೆ ನಮಗ ಭಾಳ ಹೆಮ್ಮೆ ಅದ. ಆದ್ರ ನಿನ್ನ ಜನ್ಮ ದಿನ ಹಾರೈಕೆ ಯಾವದೋ ಕಾರಣಕ್ಕ ಅವರಿಗೆ ಸೇರಿಲ್ಲ. ಏನು ಮಾಡ್ಲಿಕ್ಕೆ ಬರ್ತದ? ಹಾಂಗಾಗಿ ಡಿಲೀಟ್ ಮಾಡಿಸಿರಬಹುದು. ಹೋಗ್ಲೀ ಬಿಡು. ಬೇಕಾದ್ರ ಒಂದಲ್ಲ ಹತ್ತು ಸರೆ ಮನಿಸ್ಸಿನ್ಯಾಗ ಹ್ಯಾಪಿ ಬರ್ತ್ ಡೆ ಅಂದು ಬಿಡು. ಅದನ್ನ ಯಾವ ಪುಂಗಿ ಅಥವಾ ಮಂಗಿ ಡಿಲೀಟ್ ಮಾಡ್ಲಿಕ್ಕೆ ಸಾಧ್ಯ ಇಲ್ಲ ನೋಡು. ಅಲ್ಲ ಫೇಸ್ಬುಕ್ ಮೇಲೆ ಕಾಮೆಂಟ್ ಡಿಲೀಟ್ ಮಾಡಿದಾಕ್ಷಣ ನಿನ್ನಂತ ಸಚ್ಚೆ ದಿಲ್ ಕಾ ಆದ್ಮಿ ಮಾಡಿದ ದುವಾ ಏನು ಬೇಕಾರ್ ಹೋಗ್ತಾವ್ ಅಂತ ಮಾಡಿ ಏನು? ನಿಮ್ಮ ಸಾಲ್ ಗಿರಾ ದುವಾ ನಿಮ್ಮ ಬೇಗಂ ಗೆ ಮುಟ್ಟು ಟೈಮ್ನ್ಯಾಗ ಸರಿಯಾಗಿ ಮುಟ್ಟಿ ಅಕಿಗೇ ಗೊತ್ತಾಗ್ತದ ನಿನ್ನ ಒಳ್ಳೆತನ. ಅಲ್ಲಿ ತನಕ ಸಹನಾ ತೋಗೊಪ್ಪಾ ದೋಸ್ತ. ಈ ಕಲಿಯುಗದಾಗ ಒಳ್ಳೆ ಮಂದಿದು ಭಾಳ್ ಪರೀಕ್ಷಾ ಆಗ್ತಾವ ನೋಡೋ ಕರೀಂ. ನನಗ ಗೊತ್ತದ ನೀ ಎಷ್ಟ ಒಳ್ಳೆಯವ ಅಂತ.....ಅಂತ ತಿಳಿದ ತಿಳಿಯದ ಫಿಲೋಸೋಫಿ ಝಾಡಿಸಿದೆ.

ಹೌದು ಸಾಬ್....ಕರೆಕ್ಟ್...ಇನ್ನು ಮುಂದೆ ಗ್ರೂಪ್ ನಲ್ಲಿ ಎರಡು, ಮೂರು ಸಲೆ ಹ್ಯಾಪಿ ಬರ್ತ್ ಡೆ ಹಾಕಿ ಬಿಡ್ತೇನಿ. ಮೊದಲನೇಯದನ್ನು ಡಿಲೀಟ್ ಮಾಡಿದರೂ ಎರಡನೇ ಪೋಸ್ಟ್ ಡಿಲೀಟ್ ಮಾಡೋವಾಗ ಆತ್ಮಸಾಕ್ಷಿ ಅಂತ ಇರ್ತದೆ ನೋಡಿ, ಅದು ಬಂದಿ ಕಟ್, ಕಟ್ ಅಂತಾ ಕಡಿಬೇಕು ನೋಡಿ. ಹಾಂಗಾಗಿ ಒಂದೇ ಡಿಲೀಟ್ ಮಾಡಿಬಿಟ್ಟು ಅವರಿಗೇ  ಪಾಪಪ್ರಜ್ಞೆ ಬಂದು ನಮಗೆ ಮನಸ್ಸಿನಲ್ಲೇ ಸಾರಿ ಅನ್ನಬೇಕು ನೋಡಿ ಅಷ್ಟು ಒಳ್ಳೇತನ ತೋರ್ಸ್ತೀನಿ ಸಾಬ್.....ಏನು ಅಂತ ತಿಳ್ಕೊಂಡಿದಾರೆ ನಮಗೆ? ಮುನ್ನಾಭಾಯಿ ನೋಡಿಲ್ಲ? ಎಲ್ಲರಿಗೂ ರೋಸ್ ಕೊಟ್ಟಿ ಅಂದರ ಮಾಡಿಕೊಂಡವರು ನಾವು ಸಾಬ್.....ಅಂತ ಹುರುಪಿನಿಂದ ಹೇಳಿದ.

ಅದು ನೋಡ್ರೀ ಸಾಬರ.....ಮಾತು ಅಂದ್ರ....ಅಲ್ಲ ನೀವು ಏನ ಮಾಡ್ರಿ....ಅದು ನಿಮ್ಮ ಮತ್ತು ನಿಮ್ಮ ಖುದಾ ನಡುವೆ ನೋಡ್ರೀ. ನಿಮ್ಮ ಮತ್ತು ನಿಮ್ಮ ಬೇಗಂ ಅಥವಾ ಪುಂಗಿ ಅಥವಾ ಇನ್ನೊಬ್ಬರ ಜೊತಿ ಅಲ್ಲವೇ ಅಲ್ಲ. ಅದನ್ನ ಮನಸ್ಸಿನ್ಯಾಗ ಇಟ್ಟುಗೊಂಡು ಎಲ್ಲ ಕೆಲಸ ಮಾಡ್ರಿ. ಎಲ್ಲವೂ ಶುಭಂ ಆಗ್ತದ ನೋಡ್ರೀ. ಈಗ ಮನಿಗೆ ಹೋಗೋಣ ಏನು?.....ಅಂತ ಕೇಳಿದೆ.

ಆದ್ರೆ ಸಾಬ್....ನಮ್ಮ ಹುಚ್ಚು?......ಅಂತ ಹಿಂದೆ ಮುಂದೆ ನೋಡಿದ ಕರೀಂ.

ಅಲ್ಲರೀ.....ನಿಮ್ಮ ಹ್ಯಾಪಿ ಬರ್ತ್ ಡೆ ಕಾಮೆಂಟ್ ಗಾಯಬ ಆಗಿದ್ದಕ್ಕ ಟೆನ್ಷನ್ ತಗೊಂಡು ಸ್ವಲ್ಪ ನರ್ವಸ್ ಬ್ರೆಕಡೌನ್ ಆಗಿತ್ತು ಅಂತ ಅನ್ನಸ್ತದ.....ಅದ ನೆವ ಮಾಡಿಕೊಂಡು ನಿಮ್ಮ ಹಾಪ್ ಬೇಗಂ ನಿಮ್ಮನ್ನು ಮೆಂಟಲ್ ಹಾಸ್ಪಿಟಲ್ ಗೆ ಅಡ್ಮಿಟ್ ಮಾಡಿ ಬಿಟ್ಟಿದ್ದರು ಅಂತ ಕಾಣಸ್ತದ. ಈಗೆಲ್ಲಾ ಸರಿ ಇದ್ದೀರಿ. ಮಸ್ತ ಡ್ಯಾನ್ಸ್ ಮಾಡಿ ರಿಲ್ಯಾಕ್ಸ್ ಆಗೀರಿ. ಈಗ ಏನೂ ಹುಚ್ಚು ಪಚ್ಚು ಇಲ್ಲ. ಬರ್ರಿ....ಮನಿಗೆ ಹೋಗಿ ಮಸ್ತ ಪಾರ್ಟಿ ಮಾಡೋಣ.....ಅಂತ ಕರ್ಕೊಂಡು ಬಂದೆ. ಡಾಕ್ಟರ್ ನೋಡಿ ಎಲ್ಲ ಬರಾಬರ್ ಅದ ಅಂತ ರಿಲೀಸ್ ಮಾಡಿದ್ರು. ಇಬ್ಬರೂ ಕೂಡಿ ಮನಿಗೆ ಬಂದ್ವಿ.


** ಈ ಲೇಖನಕ್ಕೆ ಸ್ಪೂರ್ತಿ ಒಂದು ನೈಜ ಘಟನೆ. ಈ ಫೇಸ್ಬುಕ್ ಎಂಬ ಮನೆಹಾಳ್ ವೆಬ್ ಸೈಟ್ ಎಷ್ಟೋ ಬಾಂಧವ್ಯಗಳನ್ನು ಹೊಸಕಿ ಹಾಕಿದೆ. ನಮ್ಮದು ಒಂದು ಗ್ರುಪ್ ಇದೆ. ಕೆಲ ಸ್ನೇಹಿತರು ಕೂಡಿ ಹರಟೆ ಮತ್ತೊಂದು ಹೊಡೆಯುತ್ತಿದ್ದೆವು. ಒಂದು ದಿವಸ ಅಚಾನಕ್ ಕೆಲವು ಪೋಸ್ಟ್ ಗಳು ಮಾಯವಾದವು. ಯಾರೂ ಪೋಸ್ಟ್ ಡಿಲೀಟ್ ಮಾಡಿದ ಹಾಗೆ ಇರಲಿಲ್ಲ. ಫೇಸ್ಬುಕ್ ಪ್ರಾಬ್ಲೆಮ್ ನಿಂದ ಅವೇ ಹೇಗೋ ಕಳೆದು ಹೋಗಿದ್ದವು ಅಂತ ಅನ್ನಿಸುತ್ತದೆ. ಪೋಸ್ಟ್ ಹಾಕಿದವರು ತಮ್ಮ ಪೋಸ್ಟ್ ಕಾಣದೇ, ಇದು ಅಡ್ಮಿನ್ ಗಳ ಕಿತಾಪತಿಯೆಂದು ಸಿಟ್ಟಿಗೆದ್ದು ಗ್ರುಪ್ ಬಿಟ್ಟೇ ಹೋದರು. ಅದು ದುರಂತ. ನಾನು ವೈಯಕ್ತಿಕ ಮಟ್ಟದಲ್ಲಿ ಎಷ್ಟೇ ಹೇಳಿದರೂ ಅವರಿಗೆ ನಂಬಿಕೆ ಬರಲಿಲ್ಲ. ಯಾವದೇ ಸಭ್ಯ, ಒಳ್ಳೆಯ, ವಿವೇಕವಂತ, ನೈತಿಕ  ಅಡ್ಮಿನ್ ಪೋಸ್ಟ್ ಡಿಲೀಟ್ ಮಾಡೋದಿಲ್ಲ ಅಂತ ಹೇಳೇ ಹೇಳಿದೆ ಆದರೂ ಅವರನ್ನು ನಂಬಿಸಲು ಬೇಕಾದ ಪುರಾವೆ ಇರಲಿಲ್ಲ. ದರಿದ್ರ ಫೇಸ್ಬುಕ್ ಆಡಿಟ್ ಲಾಗ್ ಕೊಡೋದಿಲ್ಲ. ಹಾಗಾಗಿ ಅಡ್ಮಿನ್ ಏನು ಮಾಡಿದರು ಗ್ರುಪ್ ಮೇಲೆ ಅಂತ ತಿಳಿಯುವದು ಅಸಾಧ್ಯ. ಆಡಿಟ್ ಲಾಗ್ಸ್ ಇದ್ದರೆ ಯಾರು ಏನು ಮಾಡಿದರು ಅನ್ನುವದರ ಬಗ್ಗೆ ಸಂಶಯವೇ ಇರುತ್ತಿದ್ದಿಲ್ಲ. ಅಡ್ಮಿನ್ ಸಹಿತ ನಮ್ಮವರೇ ಇರುವದರಿಂದ ಹಾಗೆ ಮಾಡಬಾರದ್ದು ಮಾಡಲಿಕ್ಕಿಲ್ಲ, ಅನೈತಿಕ ಕೆಲಸ, ಕುಕೃತ್ಯ ಮಾಡಲಿಕ್ಕಿಲ್ಲ ಅಂತ ಬೆನಿಫಿಟ್ ಆಫ್ ಡೌಟ್ ಕೊಡುವದು ಒಳ್ಳೆಯದು. ಹಾಗೆ ಕೊಟ್ಟವರೂ ಒಂದು ವೇಳೆ ನಮ್ಮ ವಿಶ್ವಾಸಕ್ಕೆ ವಿರುದ್ಧವಾಗಿ ಅನ್ಯಾಯದ ಕೆಲಸ ಮಾಡಿದರೆ, ಅದು ಅವರ ಮತ್ತು ಅವರ ಅಂತರಾತ್ಮದ ನಡುವೆ ಬಿಟ್ಟಿದ್ದು.

ಆದರೂ ಕೆಲವೊಮ್ಮೆ ಹೇಗೆ ಘಟನೆಗಳು ನಡೆಯುತ್ತವೆ ಅಂದರೆ - ಇತನೇ ಸಾರೆ coincidences. ಹಜಂ ನಹಿ ಹೋತಾ, ಜೋ - ಅಂತ ಕಾರ್ಪೋರೆಟ್ ಮೂವಿ ಡೈಲಾಗ್ ನೆನಪಾಯಿತು.

No comments: