Wednesday, August 01, 2012

ಅಮ್ಮಾವರು ಆನೆ ಹತ್ತುತ್ತಿದ್ದರೆ, ಸಾಹೇಬರು ಮದ್ದಾನೆ ಮಣಿಸುತ್ತಿದ್ದರು

ಈ ಕಡೆ ಅಮೇರಿಕಾದಲ್ಲಿ ಸಾಹೇಬರು ಬಿಜಿ ಇದ್ದರು. ಅವರಿಗೆ ಆಗ ರಾತ್ರಿ ಒಂದೋ ಎರಡೋ ಘಂಟೆ.

ಅವರ ಖಾಸಗಿ ಸಹಾಯಕ ಬಂದು ರೂಮಿನ ಬಾಗಿಲನ್ನು ಮೆತ್ತಗೆ ಬಡಿದನು.

ಏನು? ಡಿಸ್ಟರ್ಬ್ ಮಾಡಬಾರದು ಅಂತ ಗೊತ್ತಿಲ್ವಾ? - ಅಂತ ಸಾಹೇಬರು ರೇಗಿದರು.

ಸಾರ್.....ಅಮ್ಮಾವ್ರ ಕಾಲ್....ಇಂಡಿಯಾದಿಂದ......ಮಾತಾಡಲೇಬೇಕಂತೆ. ಟ್ರಾನ್ಸಫರ್ ಮಾಡಲಾ ಸಾರ್? - ಅಂತ ಕೇಳಿದ ಸಹಾಯಕ.

ಈ ಕಡೆ ಸಾಹೇಬರಿಗೆ ಶಿವಪೂಜೆಯಲ್ಲಿ ಕರಡಿ ಬಿಟ್ಟಂಗೆ ಆಗಿತ್ತು ಆ ಫೋನ್ ಕರೆಯಿಂದ. ಅವರು ಅವರದೇ ಆದ ಕಾರ್ಯಕ್ರಮದಲ್ಲಿ ಬಿಜಿ ಇದ್ದರು.

ಈಕೆಯದೊಂದು......ರಗಳೆ....ಇಂಡಿಯಾಕ್ಕೆ ಹೋದರೂ  ತರ್ಲೆ ಮಾಡೋದ ಬಿಡೋಲ್ಲ.... ಹೊತ್ತಲ್ಲದ ಹೊತ್ತಲ್ಲಿ ಫೋನ್ ಮಾಡಿ ತಲೆ ತಿಂತಾಳೆ.....ಪ್ರಾರಬ್ಧ.......- ಅಂತ ಸಾಹೇಬರು ಗೊಣಗುತ್ತಲೇ ಫೋನ್ ಕರೆ ತಮ್ಮ ರೂಮಿಗೆ ಟ್ರಾನ್ಸಫರ್ ಮಾಡಲು ಹೇಳಿದರು.

ಫೋನಿನಲ್ಲಿ ಅಮ್ಮಾವ್ರ ಕೀರಲು ದನಿ ಕೇಳಿ ಬಂತು.

ರೀ.....ನಾನ್ರೀ......ಇಂಡಿಯಾದಿಂದ ಮಾತಾಡ್ತಾ ಇದೀನೀ......ಕೇಳ್ತಾ ಇದೆಯಾ? ಇಲ್ಲಿ ಜೈಪುರಗೆ ಬಂದ್ವಿ ಇವತ್ತು. ಈಗ ಆನೆ ಸವಾರಿಗೆ ಬಂದಿದೀವಿ. ಆನೆ ಹತ್ತೋಕೆ ರೆಡಿ ಆಗ್ತಾ ಇದೀನಿ. ನೀವೂ ಇದ್ದಿದ್ದರೆ ಕೂಡಿ ಆನೆ ಹತ್ತೋಕೆ ಮಜಾ ಬರ್ತಿತ್ತು. ಏನ್ಮಾಡೋದು? ನೀವೋ....ಪಾಲಿಟಿಕ್ಸ್ ಅದು ಇದು ಅಂತಾ ಯಾವಾಗಲೂ ಬಿಜಿ.....- ಅಂತ ಅಮೇರಿಕಾದಿಂದ ಹೋದ ಒಬ್ಬ ದೊಡ್ಡ ಅಮ್ಮಾವರು ಗಂಡನಿಗೆ ಫೋನ್ ಮಾಡಿ ತಾವು ಆನೆ ಸವಾರಿ ಮಾಡಲಿರುವದರ ಬಗ್ಗೆ ಹೇಳುತ್ತಿದ್ದರು.

ಹಲೋ.....ಏನೇ? ಹೇಗಿದಿಯಾ ಚಿನ್ನಾ? ಆನೆ ಹತ್ತುತ್ತಾ ಇದ್ದೀಯ? ಎಂಜಾಯ್ ಮಾಡು....ನನಗೆ ಸಿಕ್ಕಾಪಟ್ಟೆ ನಿದ್ದೆ....ತುಂಬಾ ಬಿಜಿ......ಆನೆ ಹೇಗಿದೆ? ಕರಿಯಾನೇನೋ.....ಅಥವಾ......- ಅಂತ ಎಳೆದೆಳೆದು ಜೋಕ್ ಮಾಡಿದರು.

ನಿಮ್ಮ ತಲೆ....ಆನೆ ಕರಿ ಅಲ್ಲದೆ ಮತ್ತೇನು ಬಿಳಿ ಇರೋತ್ತಾ? ಬಿಳಿಯಾನೆ ಅಂದ್ರೆ ನಿಮ್ಮ ಸರಕಾರ ನೋಡಿ.....ಈ ಹೊತ್ತಲ್ಲೂ ಜೋಕಾ....ಸರಿ ಮತ್ತೆ.....ಇಡ್ಲಾ? ಆನೆ ಬಗ್ಗಿ ಕೂತು ಬಿಟ್ಟಿದೆ....ಅದಕ್ಕೆ ಜಾಸ್ತಿ ಹೊತ್ತು ಹಾಗೆ ಬಗ್ಗಿ ಕೂತರೆ ಮತ್ತೆ ಏಳಕಾಗಲ್ಲ.....ಹೀ....ಹೀ....ಸರಿ ನಾನು ಆನೆ ಹತ್ತೋಕೆ ಹೊಂಟೆ.....ಬೈ....ಬೈ....ಗುಡ್ ನೈಟ್....ಸ್ವೀಟ್ ಡ್ರೀಮ್ಸ್....ಇಡ್ತೀನಿ....- ಅಂತ ಹೇಳುತ್ತಾ ಆ ಕಡೆಯಿಂದ ಅಮ್ಮಾವರು ಫೋನ್ ಇಟ್ಟರು.

ಈ ಕಡೆ ಸಾಹೇಬರು ತೊಲಗಿತಾ ಪೀಡೆ ಅನ್ನುತ್ತ ಹಾಸಿಗೆಯಲ್ಲಿ ಮಗ್ಗುಲು ಬದಲಿಸಿದರೆ ಮುದ್ದಾದ ಮದವೇರಿದ ಬಿಳಿಯಾನೆಯೊಂದು ಕಿಲಕಿಲ ಅಂತ ನಗುತ್ತಿತ್ತು.

ಅಮ್ಮಾವ್ರ ಫೋನ್ ಬಂದಾಗ ಸಾಹೇಬರು ಈ ಕಡೆ ಅವರದೇ ಆದ ರೀತಿಯಲ್ಲಿ ಆನೆ ಸವಾರಿ ನಡೆಸಿದ್ದರು. ಫೋನ್ ಎತ್ತಲು ಆನೆ ಬಿಟ್ಟು ಇಳಿದಿದ್ದರು.

ಇವಳಮ್ಮನ್.....ನಾನು ಇಲ್ಲಿ ನನ್ನ ಬಿಳಿ ಬಿಳಿ ಮುದ್ದಾದ ಮದವೇರಿದ ಮದ್ದಾನೆ ಮಣಿಸುತ್ತಿದ್ದಾಗ, ಅಲ್ಲ್ಯಾವದೋ ಕರಿಯಾನೆ ಹತ್ತಲು ಹೊರಟವಳು ಫೋನ್ ಮಾಡಿ ತಲೆ ತಿಂದಳು..ಸಾರಿ ಡಾರ್ಲಿಂಗ.....- ಅಂತ ತಮ್ಮ ಆನೆ ಸವಾರಿ ಮುಂದುವರಿಸಿದರು.

ಇವರೇನೂ ಯಾರೋ ಆರ್ಡಿನರಿ ಅಮ್ಮಾವರು, ಸಾಹೇಬರು, ಕರಿಯಾನೆ, ಬಿಳಿಯಾನೆ ಅಲ್ಲ. ಇವರೆಲ್ಲ ಯಾರು ಗೊತ್ತಾ?

ಜೈಪುರ್ ಕ್ಕೆ ಹೋಗಿ, ಜೈಪುರ್ ಮಹಾರಾಜರ ಖಾಸಗಿ ಮೆಹಮಾನ್ ಆಗಿ ಅವರ ಅರಮನೆಯಲ್ಲಿ ಉಳಿದು, ಆನೆ ಸವಾರಿ ಮಾಡೋಕೆ ರೆಡಿ ಆಗಿ, ಉತ್ಸಾಹ ತಾಳಲಾಗದೆ ಗಂಡನಿಗೆ, ಸಾಹೇಬರಿಗೆ, ಫೋನ್ ಮಾಡಿದಾಕೆ ಆ ಕಾಲದ ಅಮೇರಿಕಾದ ಪ್ರಥಮ ಮಹಿಳೆ (ಫಸ್ಟ ಲೇಡಿ), ಅಧ್ಯಕ್ಷರ ಪತ್ನಿ, ಜಾಕೀ ಕೆನಡಿ.

ಈ ಕಡೆ ಮನಸಿಲ್ಲದ ಮನಸ್ಸಿನಿಂದ ಫೋನೆತ್ತಿ, ಕಾಟಾಚಾರಕ್ಕೆ ಮಾತಾಡಿ ಮುಗಿಸಿದವರು, ಅಮೇರಿಕಾದ ಪ್ರೆಸಿಡೆಂಟ್ ಜಾನ್ ಎಫ್. ಕೆನಡಿ.

ಜೈಪುರದ ಕರಿಯಾನೆ ಗೊತ್ತು....ಮಹಾರಾಜರ ಹಲವಾರು ಆನೆಗಳ ಪೈಕಿ ಒಂದಿರಬೇಕು. VIP ಅಮೇರಿಕನ್ ಮೇಡಂ ಸಲುವಾಗಿ ಒಳ್ಳೆ ಆನೆಯನ್ನೇ ರೆಡಿ ಮಾಡಿದ್ದಿರಬೇಕು.

ಹಾಗಾದರೆ....ಇಲ್ಲಿ ಕೆನಡಿ ಸಾಹೇಬರು ಮಣಿಸುತ್ತಿದ್ದ, ಕಿಲ ಕಿಲ ನಗುತ್ತಿದ್ದ, ಮುದ್ದಾದ, ಮದವೇರಿದ, ಬಿಳಿ ಬಿಳಿ ಮದ್ದಾನೆ ಯಾವದು?

ಅದಾ?

ಅದೇ....ಹಾಲಿವುಡ್ದೆಂಬ   ಹಾಲಿವುಡ್ಡಿಗೇ....ಅಷ್ಟೇ ಯಾಕೆ....ಇಡೀ ವಿಶ್ವಕ್ಕೇ ಮತ್ತು ಬರಿಸುವಷ್ಟು ಮಾದಕವಾಗಿದ್ದ ಆ ಕಾಲದ ಆಟಂಬಾಂಬ್ ನಟಿ....ಮರ್ಲೀನ್ ಮುನ್ರೋ!!!!!!!!!!!!

ಅತ್ತ ಕಡೆ ಜಾಕಿ ಕೆನಡಿ ಅಮ್ಮಾವರು ಕರಿಯಾನೆ ಹತ್ತುತ್ತಿದ್ದರೆ, ಈ ಕಡೆ ಕೆನಡಿ ಸಾಹೇಬರು ಮದವೇರಿದ ಮದ್ದಾನೆಯಂತಿದ್ದ ಮರ್ಲೀನ್ ಮನ್ರೋ ಎಂಬಾ ಬಿಳಿ ಮದ್ದಾನೆಯನ್ನು ತಮ್ಮದೇ ಶೈಲಿಯಲ್ಲಿ ಮೊದಲನೇ ಬಾರಿಗೆ ಪಳಗಿಸುತ್ತಿದ್ದರು. ಈ ಮದ್ದಾನೆಗೂ ಅಷ್ಟೇ.....ಇಂತಾ ಮಾವುತ...ಅದೂ ಜಗತ್ತಿಗೇ ಅಂತ್ಯಂತ ಬಲಶಾಲಿ ನಾಯಕನೊಬ್ಬನಿಂದ ಪಳಗಿಸಿಕೊಳ್ಳುವ ಪುಣ್ಯ....ಎಷ್ಟು ಜನ ಪ್ರಮೀಳೆಯರಿಗೆ ಇದ್ದೀತು?

ರಾತ್ರಿಯಿಡೀ ಗಜಶಾಸ್ತ್ರದ ಅಧ್ಯಯನ, ಅಧ್ಯಾಪನ ನಡಿಯಿತು. ಥೇರಿ, ಪ್ರಾಕ್ಟಿಕಲ್ ಎಲ್ಲ ಮುಗಿಯಿತು. ಸವಾರಿ ನಂತರ ಸುಸ್ತೋ ಸುಸ್ತು.

ಮರ್ಲೀನ್ ಮನ್ರೋಳ ಜೀವನದ ಎರಡು ಪ್ರಮುಖ ಘಟನೆಗಳಲ್ಲಿ ಇಂಡಿಯಾ ಬರುತ್ತದೆ. 

ಆಕೆ ಹುಟ್ಟಿದಾಗ ಆಕೆಯ ಅಜ್ಜಿ (ತಾಯಿಯ ತಾಯಿ) ಇಂಡಿಯಾದಲ್ಲಿದ್ದರು. ಅವರು ಕ್ರೈಸ್ತ್ ಮಿಷಿನರಿಯೋ ಏನೋ ಆಗಿದ್ದರು ಅಂತ ಕಾಣುತ್ತದೆ.

ಮತ್ತೊಮ್ಮೆ....ಕೆನಡಿ ಸಾಹೇಬರೊಂದಿಗೆ ಪ್ರಥಮ ಬಾರಿಗೆ ಸರಸವಾಡುವಾಗ ಸಾಹೇಬರ ಧರ್ಮಪತ್ನಿ ಇಂಡಿಯಾದಲ್ಲಿದ್ದರು. ಆ ಕೆಲವು ಘಂಟೆಗಳ ಕರ್ಮಪತ್ನಿಯಾಗಿ ಮರ್ಲೀನ್ ಮನ್ರೋ ಕೆನಡಿ ಸಾಹೇಬರ ಕರ್ಮ ಸ್ವಲ ಹಗುರ ಮಾಡುತ್ತಿದ್ದಳು.

ಅಧ್ಯಕ್ಷ ಕೆನಡಿಯವರ ಬಾಳಿನಲ್ಲಿ ಯಾರ್ಯಾರೋ ಪ್ರಮೀಳೆಯರು ಬಂದು ಹೋಗಿ ಬಿಟ್ಟಿದ್ದಾರೆ. ಕೆನಡಿ ಕುಟುಂಬಕ್ಕೆ ಮತ್ತು ಹಾಲಿವುಡ್ ನಟ ನಟಿಯರಿಗೆ ಜನ್ಮಾಂತರದ ಸಂಬಂಧ. ಕೆನಡಿ ತಂದೆ ಜೋ ಕೆನಡಿಯವರು ಹಾಲಿವುಡ್ ನಿರ್ಮಾಪಕರೂ ಆಗಿದ್ದರು. ಆ ಕಾಲದ ಹಿರೋಯಿಣಿ ಗ್ಲೋರಿಯಾ ಸ್ವಾನಸನ್ ಹಿರಿಯ ಕೆನಡಿಯವರ ಉಪಪತ್ನಿ ಆಗಿಬಿಟ್ಟಿದ್ದರು. ಪೀಟರ್ ಲಾಫರ್ಡ್ ಎಂಬ ನಟ ಜಾನ್ ಎಫ್. ಕೆನಡಿಯವರ ಸಹೋದರಿಯನ್ನು ಮದುವೆ ಆಗಿದ್ದ. ಮತ್ತೆ ಹಾಲಿವುಡ್ಡಿನ ಹಲವಾರು ನಟಿಯರು ಬಂದು ಬಂದು ಕೆನಡಿ ಕುಟುಂಬದ ಮಂದಿಯ  ಬಿಸ್ತರ್ ಬಿಸಿ ಮಾಡಿ ಹೋಗುತ್ತಿದ್ದರು. ಅದೆಲ್ಲ ಒಂದು ರುಟೀನ್ ಆಗಿತ್ತು. ದೊಡ್ಡ ಮಾತಲ್ಲ.

ಆದರೆ ಈ ಮರ್ಲೀನ್ ಮನ್ರೋ ಜೊತೆ ಬೇರೆಯೇ ಆಯಿತು. ಆಕೆಯ ಆಸೆ ಆಕಾಂಕ್ಷೆಗಳು ತುಂಬಾ ಎತ್ತರದ್ದು. ಹಾಲಿವುಡ್ ಅಂತೂ ಒಂದಿಷ್ಟು ವರ್ಷ ಆಳಿಬಿಟ್ಟಿದ್ದಳು. ಮೂರು ಮದುವೆ ಆಗಿ ಮೂರು ಜನ ಗಂಡಂದಿರಿಗೆ ನಾಮ ಹಾಕಿದ್ದಳು. ಮೊದಲೆನೆಯವ ಯಾರೋ ಆರ್ಡಿನರಿ ಮನುಷ್ಯ. ಎರಡನೆಯವ ಒಬ್ಬ ದೊಡ್ಡ ಸಾಹಿತಿ. ಮೂರನೆಯವ ಫೇಮಸ್ ಬೇಸ್ಬಾಲ್ ಆಟಗಾರ ಜೋ ಡಿಮಾಜಿಯೋ. ಇವರಲ್ಲದೆ ಸಾಕಷ್ಟು ಮಂದಿ ಜೊತೆ ಟೆಂಪೊರರಿ ಬಿಸ್ತರ್ ವ್ಯವಹಾರ ನಡದೇ ಇರುತಿತ್ತು. ಹೀಗೆ ಸಿಕ್ಕವರಲ್ಲಿ ಕೆನಡಿಯೂ ಒಬ್ಬರು.

ಆದ್ರೆ ಕೆನಡಿ ಆರ್ಡಿನರಿ ಅಲ್ಲ ನೋಡಿ. ಅಮೇರಿಕಾದ ಅಧ್ಯಕ್ಷರು. ಪರಮ ಬಲಿಷ್ಠ ವ್ಯಕ್ತಿ. ಮರ್ಲೀನಳನ್ನು ಪಟಾಯಿಸುವಾಗ, ಮದ್ದಾನೆಯನ್ನು ಮಣಿಸುವಾಗ, ಏನೇನು ರೀಲ್ ಬಿಟ್ಟಿದ್ದರೋ ಸಾಹೇಬರು.....ಯಾರಿಗೆ ಗೊತ್ತು? ಮರ್ಲೀನ್ ತುಂಬಾ ಸೀರಿಯಸ್ ಆಗಿ ತೆಗೆದುಕೊಂಡು ಬಿಟ್ಟಳು. ಕೆನಡಿ ತಮ್ಮ ಪತ್ನಿಗೆ ವಿಚ್ಛೇದನ ಕೊಟ್ಟರೆ ತಾನು ಅವರನ್ನು ಮದುವೆಯಾಗಿ ಫಸ್ಟ್ ಲೇಡಿ ಆಗುವ ಕನಸು ಕಂಡಳು. ಅಲ್ಲಿಂದ ನೋಡಿ ಆಕೆಯ ಅವನತಿ ಶುರು ಆಯಿತು.

ಆಕೆಯ ಕನಸು ಕೇಳಿದ ಕೆನಡಿ ಬೆಚ್ಚಿ ಬಿದ್ದರು. ಅವರಿಗೆ ಹಾಗೆಲ್ಲ ಓಪನ್ ಆಗಿ ಡೈವೋರ್ಸ್ ಅದು ಇದು ಮಾಡಿಕೊಂಡು ಹೆಸರು ಹಾಳು ಮಾಡಿಕೊಂಡು ಗತಿಗೆಟ್ಟು ಹೋಗುವದು ಬೇಕಾಗಿರಲಿಲ್ಲ. ಎರಡನೇ ಅವಧಿಗೆ ಮತ್ತೆ ಪ್ರೆಸಿಡೆಂಟ್ ಆಗಬೇಕಿತ್ತು ಅವರಿಗೆ. ಮನೆಯ ಹಿರಿಯರಾದ ತಂದೆ ಜೋ ಕೆನಡಿ ಹೇಳಿಯೇ ಬಿಟ್ಟಿದ್ದರು. ಲೈಫ್ ಎಂಜಾಯ್ ಮಾಡಿ. ಆದ್ರೆ ಇಮೇಜ್ ಮಾತ್ರ ಫ್ಯಾಮಿಲಿ ಮ್ಯಾನ್ ತರಹ ಇರಬೇಕು ನೋಡಿ. ಅದೇ ಹುಚ್ಚ ಜನ ಕೇಳುವದು. ಜ್ಯಾಕ್, ನೀನು ಬೇಗ ಮಕ್ಕಳು ಮಾಡಿಕೋ - ಅಂತ ಅವರ ಉಪದೇಶ ಮಕ್ಕಳಿಗೆ. ಹಾಲು ಎಲ್ಲಿ ಬೇಕಾದರೂ ಕುಡೀರಿ ಆದ್ರೆ ಒಂದೇ ಹಸು ಕಟ್ಟಿ ಅದು ಜೋ ಕೆನಡಿ ತತ್ವ.

ಮರ್ಲೀನ್ ಮನ್ರೋ ಬೇರೆ ಪದೇ ಪದೇ ಶ್ವೇತಭವನಕ್ಕೆ ಫೋನ್ ಮಾಡತೊಡಗಿದಳು. ಕೆನಡಿ ಅವರಿಗೆ ತಲೆನೋವಾಯಿತು. ತಮ್ಮನಾದ ರಾಬರ್ಟ್ ಕೆನಡಿ ಅವರನ್ನು ಕರೆದರು. ರಾಬರ್ಟ್ (ಬಾಬಿ) ಅಮೇರಿಕಾದ ಅಟಾರ್ನಿ ಜನರಲ್ ಆಗಿದ್ದರು.

ಯೋ....ಬಾಬಿ....ಈ ಮರ್ಲೀನ್ ತಲೆ ತಿಂತಾಳಯ್ಯ....ಅವಳ ಹತ್ತಿರ ಮಾತಾಡಿ ಅವಳಿಗೆ ಸ್ವಲ್ಪ ತಿಳಿಸಿ ಹೇಳಿ, ಮುಂದೆ ಹೋಗೋಕೆ ಹೇಳಯ್ಯ ಅವಳಿಗೆ. ನಂದು ಆಕೆಯದ್ದು ಎಲ್ಲಾ ಮುಗಿದಿದೆ. ಏನೂ ಬಾಕಿ ಇಲ್ಲ....ಓಕೆ? - ಅಂತ ತಮ್ಮ ಪ್ರಾಬ್ಲೆಮ್ ತಮ್ಮನಿಗೆ ವಹಿಸಿ ಕೈತೊಳಕೊಂಡು ಬಿಟ್ಟರು. ಆ ಕಡೆ ಹಾಲಿವುಡ್ಡಿನ ಹೊಸ ಛಮ್ಮಕಛಲ್ಲೋ ಆಂಜೀ ಡಿಕೆನ್ಸನ್ ಎಂಬಾಕೆ ಕೆನಡಿ ಸಾಹೇಬರ ಮನವನ್ನು, ತನುವನ್ನು ಮತ್ತೊಂದನ್ನು ಆವರಿಸಿಕೊಂಡು, ಕೆನಡಿ ಸಾಹೇಬರು - ಪ್ಯಾರ್ ಗೆ ಆಗಿ ಬಿಟ್ಟೈತೆ - ಅಂತ ಆಕೆಗೆ ಭೊಂಗು ಬಿಟ್ಟು ಬಗ್ಗಿಸಿ ಬಾರಿಸುತ್ತಿದ್ದರು.

ಬಾಬಿ ಕೆನಡಿ ಅವರು ತಮ್ಮ ಭಾವನಾದ  ಪೀಟರ್ ಲಾಫರ್ಡ್ ಮೂಲಕ ಮರ್ಲೀನ್ ಮನ್ರೋ ಸಂಪರ್ಕ ಮಾಡಿದರು. ಅವಳೇನು ಕಡಿಮೆ ಖತರ್ನಾಕ್ ಹೆಣ್ಣೇ? ನಿಮ್ಮ ಅಣ್ಣನನ್ನು ತಿಂದು ಮುಗಿಸಿದ್ದೇನೆ.....ನಿನ್ನನ್ನು ಬಿಡುತ್ತೇನಾ? -  ಅಂತ ರಾಜಿ ಮಾಡಲು ಹೋಗಿದ್ದ ಬಾಬಿ ಕೆನಡಿ ಸಾಹೇಬರನ್ನೂ ಮಂಚ ಹತ್ತಿಸಿ ಸ್ವರ್ಗ ತೋರಿಸಿಯೇ ಬಿಟ್ಟಳು.

ಪಾಪ........ಬಾಬಿ ಕೆನಡಿ ಸಾಹೇಬರು.....ಮನುಷ್ಯರಲ್ಲವೇ? ಲಂಚ ಪಂಚ ಕೊಡದೇ ಮಂಚ, ಅದೂ ಮರ್ಲೀನಳದು, ಸಿಕ್ಕಾಗ ಅವರ್ಯಾಕೆ ಬಿಟ್ಟಾರು? ಅವರೂ ಸುಮಾರು ಗಜಶಾಸ್ತ್ರ ಕಲಿತು, ಕಲಿಸಿ ಸಾಕಷ್ಟು ಆನೆ ಸವಾರಿ ಮಾಡಿಯೇ ಬಿಟ್ಟರು.

ಪ್ರೆಸಿಡೆಂಟ್ ಕೆನಡಿ ಬಿಟ್ಟ ಮರ್ಲೀನ್ ಈಗ ಅವರ ತಮ್ಮ ಬಾಬಿ ಕೆನಡಿ ಹಿಡಿದುಕೊಂಡು ಕಾಡತೊಡಗಿದಳು. ಜಾನ್ ಕೆನಡಿಯ ನಂತರ ಬಾಬಿ ಕೆನಡಿ ಪ್ರೆಸಿಡೆಂಟ್ ಆಗೇ ಆಗುತ್ತಾರೆ. ಆಗಾದರೂ ಫಸ್ಟ್ ಲೇಡಿ ಆಗೋಣ ಅಂತ ಬಾಬಿಗೆ ಮದ್ವೆ ಆಗಿ ಅಂತ ಗಂಟು ಬಿದ್ದಳು. ಅವರಿಗೆ ದೊಡ್ಡ ತಲೆನೋವು ಈಗ. ಅವರಿಗೆ ಆಗಲೇ ಮದುವೆ ಆಗಿ 9-10 ಮಕ್ಕಳಿದ್ದವು. ಕಟ್ಟರ್ ಕ್ಯಾಥೊಲಿಕ್ ಆದ ಕೆನಡಿಗಳು ದೇವರು ಕೊಟ್ಟ ಮಕ್ಕಳು ಅಂತ ಮಕ್ಕಳನ್ನು ಮಾಡಿಕೊಂಡೇ ಹೋಗುತ್ತಿದ್ದರು.

ಬಾಬಿ ಅವರೂ ಕೈತೊಳೆದುಕೊಳ್ಳಲು ಶುರು ಮಾಡಿದರು. ಈಗ ಮಾತ್ರ ಮರ್ಲೀನ್ ಸಿಕ್ಕಾಪಟ್ಟೆ ಸಿಟ್ಟಿಗೆದ್ದಳು.

ಏನ್ರಯ್ಯಾ...ಅಣ್ಣಾ, ತಮ್ಮಾ.....ಏನಂತ ತಿಳಕೊಂಡಿದೀರಾ ನನ್ನ? ನಾನು ಏನು ಬಿಟ್ಟಿ ಬಿದ್ದಿದ್ದೀನಾ? ಆಗಾಗ ಭೆಟ್ಟಿಯಾಗಿ ಪ್ರೀತಿ ಗೀತಿ ಮಾಡ್ಕೊಂಡು, ಮದ್ವೆ ಗಿದ್ವೆ ಬಗ್ಗೆ ಮಾತಾಡಿದ್ರೆ ಸರಿ. ಇಲ್ಲಾಂದ್ರೆ ಎಲ್ಲ ಸೀಕ್ರೆಟ್ ಹೊರಗೆ ಹಾಕಿ ಬಿಡ್ತೀನಿ ನೋಡಿ ಮತ್ತೆ.....- ಅಂತ ಮರ್ಲೀನ್ ವಾರ್ನಿಂಗ್ ಕೊಡಲು ಶುರು ಮಾಡಿದಾಗ ಮಾತ್ರ ಕೆನಡಿಗಳು ಮತ್ತು ಅವರ ಆಪ್ತ ಬಳಗ ಥಂಡಾ ಹೊಡೆದಿದ್ದು ನಿಜ.

ಕೆನಡಿಗಳು ಹಾಸಿಗೆಯ ಜೊತೆ ಆ ಮಳ್ಳಿಯೊಂದಿಗೆ  ಏನೇನು ರಹಸ್ಯಗಳನ್ನ ಹಂಚಿಕೊಂಡಿದ್ದರೋ ದೇವರಿಗೆ ಗೊತ್ತು. ತಾವು ಎಷ್ಟು ಪಾವರ್ಫುಲ್ ಅಂತ ತೋರಿಸಿಕೊಳ್ಳಲು ತುಂಬಾ ಸೂಕ್ಷ್ಮ ವಿಷಯ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯ ಎಲ್ಲ ಹೇಳಿಕೊಂಡಿದ್ದರು ಅಂತ ಈಗ ಜನ ಊಹಿಸುತ್ತಾರೆ. ಅದನ್ನೆಲ್ಲ ಬಿಚ್ಚಿ ಇಡುತ್ತೇನೆ ಅಂತ ಮರ್ಲೀನ್ ಧಮಕಿ ಹಾಕತೊಡಗಿದಾದಾಗ ಪರಿಸ್ಥಿತಿ ಕೈಮೀರಿ ಹೋಗುವ ಅನುಭವ ಕೆನಡಿಗಳಿಗೆ ಮತ್ತೆ ಅವರ ಬಳಗಕ್ಕೆ.

ಮುಂದೆ ಒಂದು ದಿವಸ ಮರ್ಲೀನ್ ಸತ್ತು ಬಿದ್ದಿದ್ದಳು. ಆಕೆ ನಿದ್ದೆಗುಳಿಗೆ ಮತ್ತೆ ಬೇರೆ ಬೇರೆ ತರಹದ ಮಾನಸಿಕ ಔಷಧಿ ಗುಳಿಗೆ ತೆಗೆದುಕೊಳ್ಳುತ್ತಿದ್ದಳು. ಕೆನಡಿಗಳ ಸಹವಾಸಗಳಿಂದ ತಲೆಕೆಟ್ಟು, ತಿಳಿದೋ ತಿಳಿಯದೆಯೋ ಓವರ್ ಡೋಜ್ ತೆಗೆದುಕೊಂಡು ಮರಳಿ ಎದ್ದು ಬಾರದ ನಿದ್ದೆ ಹೋಗಿ ಬಿಟ್ಟಳು. ಇದು ಸರಕಾರಿ ವರದಿ. ತಿಪ್ಪೆ ಸಾರಿಸಿದ್ದು.

ಆದ್ರೆ ಸಿಕ್ಕಾಪಟ್ಟೆ ಸುದ್ದಿಗಳು ಹೊರಬರತೊರಗಿದವು. 

ನಿಜವಾಗಿಯೂ ಮರ್ಲೀನ್ ನಿದ್ದೆಗುಳಿಗೆ ಓವರ್ ಡೋಜ್ ನಿಂದ ಸತ್ತಳಾ? ಅಥವಾ ಅವಳಿಗೆ ಬಲಾತ್ಕಾರದಿಂದ ಓವರ್ ಡೋಜ್ ಕೊಡಲಾಯಿತಾ? ಯಾರ್ಯಾರು ಅಂತಹ ಷಡ್ಯಂತ್ರದ ಹಿಂದೆ ಇದ್ದರು? ಮರ್ಲೀನಳನ್ನು ಮುಗಿಸುವ ಜರೂರತ್ತು ಏನಿತ್ತು? 

ಮೊದಲನೇ ಥೇರಿ ಅಂದರೆ ಇದು. ಬಾಬಿ ಕೆನಡಿ ಒಂದು ಫೈನಲ್ ವಾರ್ನಿಂಗ್ ಕೊಡಲು ಹೋಗಿದ್ದರು. 

ಮರ್ಲೀನ್, ಬಾಯಿ ಮುಚ್ಚಿದರೆ ಒಳ್ಳೇದು. ಇಲ್ಲ ಅಂದ್ರೆ ನಾವು ಎಷ್ಟು ಖತರ್ನಾಕ್ ಮತ್ತು ಪಾವರ್ಫುಲ್ ಅಂತ ನಿನಗೇ ಗೊತ್ತು. ಎಷ್ಟೋ ಜನರನ್ನು ಗೊತ್ತಿಲ್ಲದಂತೆ ಗಾಯಬ್ ಮಾಡಿಸಿಬಿಟ್ಟಿದ್ದೇವೆ.ನಿನ್ನನ್ನೂ ಹಾಗೆ ಮಾಡುವದು ನಮಗೆ ದೊಡ್ಡ ಮಾತಲ್ಲ. ಮಾಡುತ್ತೇವೆ. ಅಷ್ಟೇ ಅಲ್ಲ. ಮಾಡಿ ದಕ್ಕಿಸಿಯೂಕೊಳ್ಳುತ್ತೇವೆ. ಜೀವದ ಮೇಲೆ ಪ್ರೀತಿ ಇದ್ದರೆ ಪ್ರೆಸಿಡೆಂಟ್ ಅವರನ್ನು ಮತ್ತು ನನ್ನನ್ನು ಕಾಡುವದನ್ನು ಬಿಡು. ಮತ್ತೆಂದಿಗೂ ರಹಸ್ಯ ಅದು ಇದು ಮಾಧ್ಯಮಗಳಿಗೆ ಹೇಳಿ ಬಿಡುತ್ತೇನೆ ಅಂತ ಬೆದರಿಕೆ ಗಿದರಿಕೆ ಹಾಕಬೇಡ. ತಿಳಿಯಿತಾ? - ಅಂತ ಒಂದು ದೊಡ್ಡ ಧಮಿಕಿ ಕೊಟ್ಟರು ಬಾಬಿ ಕೆನಡಿ.

ಬೇರೆ ಯಾರೋ ಆಗಿದ್ದರೆ, ಅಮೇರಿಕಾದ ಅಟಾರ್ನಿ ಜನರಲ್ ವಾರ್ನಿಂಗ್ ಕೊಟ್ಟ. ಬೇಡಪ್ಪ ಇವರ ಸಹವಾಸ ಅಂತ ಬಾಯಿ ಮತ್ತೊಂದು ಮುಚ್ಚಿಕೊಂಡು ಇರುತ್ತಿದ್ದರು. ಅಥವಾ ಹೆದರಿ ದೇಶ ಬಿಟ್ಟೇ ನಾಪತ್ತೆ ಆಗಿಬಿಡುತ್ತಿದ್ದರು.

ಆದರೆ ಮರ್ಲೀನ್ ಒಂದು ತರಹದ ಮೊಂಡಿ. ಹುಂಬಿ. ಮತ್ತೆ ಒಂದು ತರಹದ ಗಾಯಗೊಂಡ ಪ್ರಾಣಿ ತರಹ. ತಲೆ ಬೇರೆ ಸರಿ ಇರಲಿಲ್ಲ. ಒಂದು ತರಹದ ಹುಚ್ಚು, ಖಿನ್ನತೆ ಮುಂತಾದವು ಅವಳ ಜೀನ್ಸ್ ಒಳಗೇ ಇತ್ತು ಅನ್ನಿಸುತ್ತದೆ. ಅವಳ ತಾಯಿಯೂ ಕೊನೆಯ ವರ್ಷಗಳನ್ನು ಹುಚ್ಚಾಸ್ಪತ್ರೆಯಲ್ಲಿ ಕಳೆದಿದ್ದಳು. ಮರ್ಲೀನ್ ವಿಪರೀತ ನಿದ್ದೆ ಮಾತ್ರೆ, ಮತ್ತೊಂದು ತೆಗೆದುಕೊಳ್ಳುತ್ತಿದ್ದಳು.

ತಿರುಗಿ ಬಿದ್ದಳು ನೋಡಿ. ಬಾಬಿ ಕೆನಡಿಯಂತಹ ಪ್ರಳಯಾಂತಕನೇ ಬೆಚ್ಚಿ ಬಿದ್ದ ಆಕೆ ಹಾಕಿದ ಆವಾಜಿಗೆ.

ಅಲ್ಲೇ ನಾಕು ಹೊಡೆತ ಹಾಕಿದರಂತೆ ಬಾಬಿ ಕೆನಡಿ ಮತ್ತೆ ಅವರ ಸಹಾಯಕರು. ಪ್ರಜ್ಞೆ ತಪ್ಪಿ ಬಿದ್ದಳಂತೆ. ಇವಳನ್ನು ಇನ್ನು ಬಿಟ್ಟರೆ ಕಷ್ಟ ಅಂತ ಮೊದಲೇ ತಯಾರ್ ಮಾಡಿಕೊಂಡು ಹೋಗಿದ್ದ ನಿದ್ದೆಗುಳಿಗೆ ಮಿಕ್ಸ್ ಮಾಡಿದ್ದ ಲೀಟರ್ ಗಟ್ಟಲೆ ದ್ರಾವಣ ಆಕೆಗೆ ಗುದದ್ವಾರದ ಮೂಲಕ ಚುಚ್ಚಿ ಓವರ್ ಡೋಜ್ ಮಾಡಿ ಆಕೆಯ ಖೇಲ್ ಖತಂ ಮಾಡಿದರಂತೆ. ಯಾಕೆಂದರೆ ಅವಳು  ಯಾವಪರಿ ನಿದ್ದೆಗುಳಿಗೆ ತೆಗೆದುಕೊಂಡಿದ್ದಳೆಂದರೆ ಬಾಯಿ ಮೂಲಕ ಅಷ್ಟು ತೆಗೆದುಕೊಳ್ಳಲು ಸಾಧ್ಯವೇ ಇರಲಿಲ್ಲ.

ಇನ್ನು ಎರಡನೆಯ conspiracy theory.

ಮೊದಲೇ ಹೇಳಿದ ಹಾಗೆ ಬಾಬಿ ಕೆನಡಿ ಅಟಾರ್ನಿ ಜನರಲ್ ಆಗಿದ್ದವರು. ಅಧಿಕಾರಕ್ಕೆ ಬಂದ ನಂತರ ಕೈತೊಳೆದುಕೊಂಡು ಮಾಫಿಯಾದ ಹಿಂದೆ ಬಿದ್ದರು. ಮಾಫಿಯಾಕ್ಕೆ ಉರಿದು ಹೋಯಿತು. ಮಾಫಿಯಾನೇ ಕೆನಡಿ ಅವರನ್ನು ಗೆಲ್ಲಿಸಿತ್ತು ಅಂತ ಮಾಫಿಯಾದ ಭಾವನೆ. ಕೆನಡಿ ಪಕ್ಷಕ್ಕೆ ಸಾಕಷ್ಟು ಕಾಣಿಕೆಯೂ ಸಂದಾಯವಾಗಿತ್ತು. ಈ ಋಣಕ್ಕೆ ಪ್ರತಿಯಾಗಿ ಕೆನಡಿ ಮಾಫಿಯಾ ಮೇಲೆ ಲೈಟಾಗಿ ಹೋಗುವದಾಗಿ ವಾಗ್ದಾನ ಮಾಡಿದ್ದರು. ಆದ್ರೆ ಏನಾಯಿತೋ ಏನೋ? ಗೆದ್ದ ನಂತರ ತಮ್ಮನನ್ನು ಅಟಾರ್ನಿ ಜನರಲ್ ಮಾಡಿದರು. ಬಾಬಿ ಕೆನಡಿ ಇನ್ನಿಲ್ಲದಂತೆ ಮಾಫಿಯಾದವರನ್ನು ಹಿಡಿದು ಬಡಿಯತೊಡಗಿದರು. ಆಗ ಮಾಫಿಯಾದವರು ವ್ಯಗ್ರರಾಗಿ - ಮಾಡ್ತೀವಿ ತಡೀರಿ ಮಕ್ಕಳಾ - ಅಂತ ತಮ್ಮ ಕಾರಸ್ತಾನ ಶುರು ಮಾಡಿಯೇ ಬಿಟ್ಟರು.

ಮಾಫಿಯಾದವರಿಗೆ ಸಂಪರ್ಕಗಳು ಕಮ್ಮಿಯೇ? ಅವರಿಗೆ ಕೆನಡಿಗಳ ಮತ್ತು ಮರ್ಲೀನ್ ಮನ್ರೋಳ ಅಫೇರ್ ಎಲ್ಲ ಗೊತ್ತಿತ್ತು. ಮಾಫಿಯ ಮರ್ಲೀನಳ ಮನೆಯಲ್ಲಿ ಮೈಕ್ರೋಫೋನ್ ಅಡಗಿಸಿ ಇಟ್ಟಿತ್ತು. ಅವರ ಯೋಜನೆ ಅಂದರೆ ಮರ್ಲೀನ್ ಮತ್ತು ಕೆನಡಿಗಳ ಸಂಭಾಷಣೆ ಟೇಪ್ ಮಾಡಿಕೊಂಡು ಅದನ್ನು ಕೆನಡಿಗಳ ಬ್ಲಾಕಮೇಲ್ ಮಾಡಲು ಉಪಯೋಗಿಸುವದು. ಆದ್ರೆ ಯಾವಾಗ ಬಾಬಿ ಕೆನಡಿಯ ಪ್ರತಾಪ ಹದ್ದು ಮೀರಿತೋ, ಒಂದು ಅತ್ಯಂತ ಖತರ್ನಾಕ್ ಸ್ಕೀಮ್ ಹಾಕೇ ಬಿಟ್ಟಿತು ಮಾಫಿಯ. ಅದಕ್ಕೆ ಬಲಿಪಶು ಆದವಳು ಮರ್ಲೀನ್ ಮನ್ರೋ.

ಮಾಫಿಯಾ ಪ್ಲಾನ್ ಅಂದರೆ, ಮರ್ಲೀನಳನ್ನು ನಿದ್ದೆ ಗುಳಿಗೆ ಕೊಟ್ಟು ಕೊಲ್ಲುವದು. ಬಾಬಿ ಕೆನಡಿ ಹೇಗೂ ಬರುವರು ಇದ್ದಾರೆ. ಕೆನಡಿ ಮರ್ಲೀನ್ ಹೆಣದ ಜೊತೆ ಇರುವ, ಅದು ಕಂಡು ಬೆಚ್ಚಿ ಬೀಳುವ, ರಹಸ್ಯಗಳನ್ನು ಹುಡುಕುವ, ಇತ್ಯಾದಿಗಳ ರೆಕಾರ್ಡಿಂಗ್ (ಆಡಿಯೋ, ವೀಡಿಯೊ) ಮಾಡ್ಕೊಂಡು ಅದನ್ನ ಬ್ಲಾಕಮೇಲ್ ಮಾಡಲು ಉಪಯೋಗಿಸುವದು.

ಯಾವದು ಸತ್ಯ? ಯಾರಿಗೆ ಗೊತ್ತು? ಆದರೆ ಸತ್ಯ ಎಲ್ಲಿಯೋ ಮಧ್ಯೆ ಇದೆ. ಮಾಡಿದವರಿಗೆ ಮಾತ್ರ ಗೊತ್ತು.

ಹೀಗೆ ಮದ್ದಾನೆಯಂತಹ ಮರ್ಲೀನ್ ಮನ್ರೋ ಯಾರ್ಯಾರದೋ ಜಗಳ, ದ್ವೇಷದ ಮಧ್ಯೆ ಬಲಿಪಶುವಾಗಿ ಸತ್ತು ಹೋದಳು. ಪಾಪ.

ಇದು ಆಗಿದ್ದು 1962.

ಮುಂದೆ 1963 ರಲ್ಲಿ ಸ್ವತಹ ಅಧ್ಯಕ್ಷ ಜಾನ್ ಕೆನಡಿ ಅವರೇ ಟೆಕ್ಸಾಸ್ನ ಡಾಲಸ್ ನಗರದಲ್ಲಿ ಪ್ರವಾಸ ಮಾಡುತ್ತಿದ್ದಾಗ ಬುರುಡೆಗೆ ಬುಲೆಟ್ ಹೊಡಿಸಿಕೊಂಡು ಸತ್ತು ಹೋದರು. ಅವರ ಸಾವಿನ ಸುತ್ತ ಎದ್ದ ಊಹಾಪೋಹಗಳಿಗೆ ಕೊನೆ ಮೊದಲಿಲ್ಲ. ಅವರ ಹತ್ಯೆಯೂ ಹಿಂದೆಯೂ ಒಂದು ಕುಟಿಲ ಕಾರಸ್ತಾನವಿರುವದು ಮಾತ್ರ ಸತ್ಯ.

ಐದು ವರ್ಷದ ನಂತರ 1968 ರಲ್ಲಿ ಬಾಬಿ ಕೆನಡಿಯೂ ಸತ್ತು ಹೋದರು. ಅಧ್ಯಕ್ಷರಾಗಲು ತಯಾರಿ ನಡಸಿದ್ದರು ಅವರು. ಲಾಸ್ ಎಂಜಲಸ್ ನಗರದಲ್ಲಿ ಚುನಾವಣೆ ಪ್ರಚಾರದಲ್ಲಿ ಇದ್ದಾಗ ಒಬ್ಬ ಅವರಿಗೆ ಗುಂಡಿಟ್ಟು ಕೊಂದೇ ಬಿಟ್ಟ. ಒಬ್ಬ ತಲೆಕೆಟ್ಟ ಮಾನಸಿಕ ಅಸ್ವಸ್ಥ ಪ್ಯಾಲೆಸ್ಟೈನ್ ವಲಸಿಗ ಅವರನ್ನು ಕೊಂದ ಅಂತ ತಿಪ್ಪೆ ಸಾರಿಸಲಾಯಿತು. ಅವರ ಹತ್ಯೆಯ ಹಿಂದೆಯೂ ಒಂದು ದೊಡ್ಡ ಷಡ್ಯಂತ್ರವಿದ್ದಿದ್ದು ಮಾತ್ರ ಸತ್ಯ.

ಮುಂದೆ ಜಾನ್ ಕೆನಡಿಯವರ ಮಗ ಸಹಿತ ಈಗ 10-12 ವರ್ಷದ ಹಿಂದೆ ಪ್ಲೇನ್ ಹಾರಿಸುತ್ತಿದ್ದಾಗ ಪ್ಲೇನ್ ಎಲ್ಲೋ ಸಮುದ್ರದಲ್ಲಿ ಬಿದ್ದು ಹೋಗಿ ಸತ್ತು ಹೋದ. ಅದರ ಹಿಂದೆಯೂ ಸುಮಾರು ಕಥೆಗಳು ಹುಟ್ಟಿಕೊಂಡವು. 

ಒಟ್ಟಿನಲ್ಲಿ ಕೆನಡಿ ಶಾಪ (Kennedy Curse) ಅಂತ ಒಂದು ತರಹ ಪ್ರಚಲಿತಕ್ಕೆ ಬಂದು ಬಿಟ್ಟಿದೆ.

** ಇಲ್ಲಿ ಬರೆದಿದ್ದು ಸುಮಾರು 60-70 ಪುಸ್ತಕಗಳಿಂದ ಭಟ್ಟಿ ಇಳಿಸಿದ್ದು. ಕೆನಡಿ ಹತ್ಯೆಗಳ ಬಗ್ಗೆ, ಮರ್ಲೀನ್ ಸಾವಿನ ಬಗ್ಗೆ ಬಂದ ಪುಸ್ತಕಗಳಿಗೆ ಲೆಕ್ಕವಿಲ್ಲ. ಅದರಲ್ಲಿ ನಾನು ಹಿಂದೆ ಬಿದ್ದು ಓದಿದ್ದೇ 60-70. ಒಂದರಿಂದ ಒಂದಕ್ಕೆ ಸ್ವಲ್ಪ ಹೆಚ್ಚು ಕಮ್ಮಿ ಇರುತ್ತದೆ. ಮತ್ತೆ ಯಾರಿಗೂ ಸರಿ ಗೊತ್ತಿಲ್ಲ. ಸರಕಾರ ತಿಪ್ಪೆ ಸಾರಿಸಿದ್ದು ಭೊಂಗು ಅಂತ ಗೊತ್ತು. ಆದರೆ ಸತ್ಯ ಯಾರಿಗೂ ಗೊತ್ತಿಲ್ಲ. ಹಾಗಾಗಿ ನೀವು ಓದಿದ್ದು, ನಿಮಗೆ ತಿಳಿದಿದ್ದು ಮತ್ತು ನಾನು ಇಲ್ಲಿ ಬರೆದಿರುವದಕ್ಕೆ ವ್ಯತ್ಯಾಸ ಕಂಡು ಬಂದರೆ ನಿಮಗೆ ಯಾವದು ಸರಿ ಅನ್ನಿಸುತ್ತದೆಯೋ ಅದನ್ನು ಒಪ್ಪಿ. ಈ ತರಹದ ಸುದ್ದಿಗಳ ಬಗ್ಗೆ ವಾದ ವಿವಾದ ಉಪಯೋಗವಿಲ್ಲ. ಒಂದು ಹೆಚ್ಚಿನ ಬೇರೆಯ ಮಾಹಿತಿ ಅಷ್ಟೇ ಅಂತ  ತಿಳಿಯುವದು ಒಳಿತು. 

** ಕೆನಡಿ ಪತ್ನಿ ಜೈಪುರಕ್ಕೆ ಹೋಗಿದ್ದು, ಆನೆ ಹತ್ತಿದ್ದು, ಇತ್ತಕಡೆ ಸಾಹೇಬರು ಮತ್ತು ಮರ್ಲೀನರ ಆನೆ ಸವಾರಿ ಇತ್ಯಾದಿ  ಪುಸ್ತಕದಲ್ಲಿ ಓದಿದ್ದು ನಿಜ. ನಾಟಕೀಯವಾಗಿ ಫೋನ್ ಡೈಲಾಗ್ ಬರೆದಿದ್ದು ನಾನು.

** ಈಗ ಮಾತ್ರ ನೆನಪಾಯಿತು. ಆಗಸ್ಟ್ 5, 2012 ಕ್ಕೆ ಮರ್ಲೀನ್ ಮನ್ರೋ ಸತ್ತು ಹೋಗಿ ಬರೋಬ್ಬರಿ  50 ವರ್ಷ. RIP!

3 comments:

ವಿ.ರಾ.ಹೆ. said...

This is very interesting..

ಈ ರಾಜಕೀಯ, ಸಿನೆಮಾದವರ ಜೀವನಗಳೇ ವಿಚಿತ್ರ. ಕೊನೆಗೂ ಪೂರ್ತಿ ಸತ್ಯ ಅಂತೂ ಹೊರಬರೂದಿಲ್ಲ.

ವಿ.ರಾ.ಹೆ. said...

ಬರೆದಿರುವ ಶೈಲಿ ಮಸ್ತ್ ಇದೆ.

Mahesh Hegade said...

Thank you very much, Vikas.

With Kennedy's (at least JFK, RFK), things are pretty clear these days because of extensive research. It's just that we can not say with 100% certainty. But facts presented provide pretty clear info. We may never know the people who really pulled the trigger but conspirators, their vested interests are all exposed now. Munroe's still a very mystery. Because people who suggested sedative overdose enema were available to government as well as mob. So who implemented the scheme is up in the air.

Thanks for compliments on the style. Credit goes to all those Kannada authors whose books I read and liked. I personally like conversational style. Story telling style.

Cheers!