Wednesday, August 29, 2012

ಭರ್ಜರಿ ಬಾಸ್, ಖತರ್ನಾಕ್ ಕಲೀಗ್ಸ್

ಅವರೊಬ್ಬರು ದೊಡ್ಡ ಕಂಪನಿಯ ದೊಡ್ಡ ಬಾಸ್. ಅವರದ್ದೇ ಕಂಪನಿ. ಸ್ಥಾಪಿಸಿ ತುಂಬ ಜತನದಿಂದ ಬೆಳೆಸಿದ್ದರು. ಒಂದು ಕುಟುಂಬದ ತರಹ ಅವರಿಗೆ ಕಂಪನಿ ಅಂದ್ರೆ. ಜೊತೆಗೆ ಕೆಲಸ ಮಾಡುವರು ಅಂದ್ರೆ ಮನೆ ಮಂದಿ ಇದ್ದ ಹಾಗೆ. ಅವರ ಜೊತೆ ಕೆಲಸ ಮಾಡುವವರಿಗೂ ಹಾಗೆಯೇ. ಅದಕ್ಕೇ ಇರಬೇಕು  ಅವರ ಜೊತೆ ತುಂಬ ವರ್ಷಗಳಿಂದ ಕೆಲಸ ಮಾಡುತ್ತಿದ್ದರು.

ಹೀಗೆ ಇರುವಾಗ ಒಂದು ಅವಘಡವಾಯಿತು. ಇರಾನಿನಲ್ಲಿ ಅವರ ಕಂಪನಿಯ ಕೆಲವು ಜನರನ್ನು ಇರಾನ್ ಸರ್ಕಾರ ಬಂಧಿಸಿತು. ಲಂಚ ಕೊಟ್ಟು ಡೀಲ್ಸ್ ಪಡೆಯುತ್ತಿದ್ದರು ಎಂಬ  ಆರೋಪದ ಮೇಲೆ. ಅದು ಆರೋಪ. ಹಿಂದೆ ನಿಜವಾದ ಕಾರಣ ಬೇರೆಯೇ ಇತ್ತು. 

ಅದು 1978 ರ ಸಮಯ. ಇರಾನಿನಲ್ಲಿ ಬಂಡಾಯದ ಟೈಮ್. ಸರ್ವಾಧಿಕಾರಿ ರೆಜಾ ಶಹಾ ಪೆಹಲವಿಯನ್ನು ಮುಲ್ಲಾಗಳು, ಖೋಮೇನಿಗಳು ಇರಾನಿನಿಂದ ಓಡಿಸಿದ್ದರು. ಅವನು ಪನಾಮಾದಲ್ಲಿ ಆಶ್ರಯ ಪಡೆದಿದ್ದ.

ಒಟ್ಟಿನಲ್ಲಿ ಪರದೇಶದ ಕಂಪನಿಗಳಿಗೆ ಕಷ್ಟ ಕೊಟ್ಟು, ಬಂದಷ್ಟು ದುಡ್ಡು ಗುಂಜಿಕೊಂಡು ಇರಾನಿನಿಂದ ಓಡಿಸಿಬಿಡುವದು ಅವರ ಪ್ಲಾನ್. ಹಾಗಾಗೇ ಬಂಧಿಸಿದ್ದ ಇಬ್ಬರು ಅಧಿಕಾರಿಗಳ ಜಾಮೀನಿಗೆ ಆ ಕಾಲದ 1.5 ಮಿಲಿಯ ಡಾಲರ್ ಡಿಮ್ಯಾಂಡ್ ಇಟ್ಟಿದ್ದರು. ಅಷ್ಟು ದೊಡ್ಡ ಕಂಪನಿಗೆ ಆ ಮೊತ್ತ ಕೊಟ್ಟು ಬಿಡಿಸಿಕೊಂಡು ಬರುವದು ದೊಡ್ಡ ಮಾತಾಗಿರಲಿಲ್ಲ. ಆದರೂ ಪ್ರಿನ್ಸಿಪಲ್ ಅಂತ ಇರುತ್ತದೆ ನೋಡಿ. ಯಾಕೆ ಕೊಡಬೇಕು ಅಂತ? ಇಲ್ಲಿ ಒಮ್ಮೆ ಕೊಟ್ಟರೆ ಇನ್ನೊಂದು ದೇಶದಲ್ಲಿ ಇನ್ನೊಬ್ಬ ಕೊರಮ ಮತ್ತೊಂದಿಷ್ಟು ದುಡ್ಡು ಕೇಳುತ್ತಾನೆ. ಬಗ್ಗುತ್ತಾರೆ ಅಂತ ಗೊತ್ತಾದರೆ ಬಗ್ಗಿಸಿ ಬಾರಿಸುವವರಿಗೆ ಏನೂ ಕಮ್ಮಿ ಇಲ್ಲ.

ಈ ಪರಿಸ್ಥಿತಿ ಬಂದಿದ್ದು EDS (Electronic Data Systems) ಎಂಬ ಆ ಕಾಲದ ದೊಡ್ಡ ಕಂಪನಿಗೆ. ಅದರ ಸ್ಥಾಪಕ, CEO ಆಗಿದ್ದವರು ರಾಸ್ ಪೆರೋ ಎಂಬವರು. ಅತ್ಯಂತ ಶಿಸ್ತಿನ, ಖಡಕ್ ಮನುಷ್ಯ. ಸಕ್ಕತ್ ತಲೆ ಇರುವ ವ್ಯಾಪಾರಿ. ಆಗಲೇ ಮಲ್ಟಿ-ಮಿಲಿಯನರ್ ಆಗಿದ್ದವರು. ಈಗ ಬಿಲಿಯನರ್ ಆಗಿ ವಿಶ್ವದ ಅತಿ ದೊಡ್ಡ ಶ್ರೀಮಂತರಲ್ಲಿ ಒಬ್ಬರು.

ರಾಸ್ ಪೆರೋ ದೊಡ್ಡ ಮಟ್ಟದ ಪ್ರಿನ್ಸಿಪಲ್ ಇರುವ ಮನುಷ್ಯ. ತಮಗೆ ಸರಿ ಕಂಡಿದ್ದು ಮಾಡುತ್ತಿದ್ದರು. ಅವರ ಮೌಲ್ಯಗಳ ಜೊತೆ ಹೊಂದಾಣಿಕೆ ಇಲ್ಲವೇ ಇಲ್ಲ. ಲಂಚ ಪಂಚ ಕೊಟ್ಟು ಕಾರ್ಯ ಮಾಡಿಸಿಕೊಳ್ಳುವ ದರ್ದು ಅವರಿಗೆ ಇರಲಿಲ್ಲ. ಹಾಗಿರುವಾಗ ಮುಲ್ಲಾಗಳ ಸರ್ಕಾರ ಅವರ ಕಂಪನಿಯ ಅಧಿಕಾರಿಗಳನ್ನು ಲಂಚ ಕೊಡುತ್ತಿದ್ದರು ಅಂತ ಬಂಧಿಸಿ, ಜಾಮೀನಿನ ಹೆಸರಲ್ಲಿ ಮಿಲಿಯಗಟ್ಟಲೆ ಡಾಲರ್ ಗುಂಜಲು ನೋಡಿದರೆ ಅವರಿಗೆ ಉರಿಯದೇ ಇರುತ್ತದೆಯೇ?

ಏನು ಮಾಡುವದು? ತಮ್ಮ ಕಂಪನಿಯ ಜನರನ್ನು ಮನೆ ಮಂದಿಯಂತೆ ನೋಡಿಕೊಳ್ಳುತ್ತಿದ್ದರು. ಆ ಮಟ್ಟದ ನಿಷ್ಠೆ ನೌಕರರಿಂದ ಮಾಲಿಕರೆಡೆಗೆ ಮತ್ತು ಮಾಲಿಕರಿಂದ ನೌಕರರೆಡೆಗೆ ಇತ್ತು. ದುಡ್ಡು ಕೊಟ್ಟು ಜಾಮೀನ ಕೊಡಿಸುವದಿಲ್ಲ. ಸರಿ. ಆದ್ರೆ ತಮ್ಮನ್ನು  ನಂಬಿದ ನೌಕರರನ್ನು ನರಕಸದೃಶ ಜೇಲಿನಲ್ಲಿ ಬಿಡುವದು ಹೇಗೆ? ದುಡ್ಡು ಬರಲಿಲ್ಲ ಅಂತ ಅವರಿಗೆ ಇರಾನಿಗಳು ಚಿತ್ರಹಿಂಸೆ ಮತ್ತೊಂದು ಕೊಟ್ಟರೆ ಹೇಗೆ? ಏನಾದರು ಹೆಚ್ಚು ಕಮ್ಮಿ ಆದರೆ ಆ ತನಕ ಕಷ್ಟು ಪಟ್ಟು ಬೆಳೆಸಿಕೊಂಡಿದ್ದ - ರಾಸ್ ಪೆರೋ ಅಂದ್ರೆ ಮನೆ ಹಿರಿಯ. ಅವರಿರುವ ತನಕ ಚಿಂತೆ ಮಾಡೋ ಅಗತ್ಯ ಇಲ್ಲ - ಅಂತ ಜನ ತಮ್ಮ ಮೇಲೆ ಇಟ್ಟಿದ್ದ ನಂಬುಗೆ ಹೋದರೆ ವಾಪಾಸ್ ಬರುವದು ಕಷ್ಟ. ಆ ಚಿಂತೆ ಪೆರೋ ಅವರಿಗೆ.

ಏನು ಮಾಡುವದು? ಅಮೇರಿಕಾದ ಆ ಕಾಲದ ಸರ್ಕಾರದ ಕಡೆ ನೋಡಿದರು. ಜಿಮ್ಮಿ ಕಾರ್ಟರ್ ಅಧ್ಯಕ್ಷರಾಗಿದ್ದರು. ಮೃದು ಮನುಷ್ಯ. ಅವರು 1977 ರಲ್ಲಿ ಅಧಿಕಾರವಹಿಸಿಕೊಂಡಿದ್ದಾಗಿಂದ ಒಂದಲ್ಲ ಒಂದು ತೊಂದರೆ. 1976 ಅರಬ್ ಇಸ್ರೇಲಿ ಯುದ್ಧದ ನಂತರ ಅರಬ್ ರಾಷ್ಟ್ರಗಳು ಪೆಟ್ರೋಲ್ ಮೇಲೆ ನಿರ್ಬಂಧ ವಿಧಿಸಿ, ಪೆಟ್ರೋಲ್ ಬೆಲೆ ವಿಪರೀತ ಮೇಲೆ ಹೋಗಿ, ಅಮೇರಿಕಾದ ಜನ ರೊಚ್ಚಿಗೆದ್ದಿದ್ದರು. ಅರ್ಥಿಕ ಸ್ಥಿತಿ ಹದಗೆಟ್ಟಿತ್ತು. ಮತ್ತೇನೋ ತೊಂದರೆಗಳು. ಎಲ್ಲಕ್ಕೂ ಮೀರಿ ಇರಾನಿನ ರಾಜಧಾನಿ ಟೆಹರಾನಿನಲ್ಲಿ ಇದ್ದ ಅಮೇರಿಕಾದ ಇಡೀ ರಾಯಭಾರ ಕಛೇರಿಯನ್ನೇ ಇರಾನಿನ ಮೂಲಭೂತವಾದಿ ವಿದ್ಯಾರ್ಥಿ ಸಂಘಟನೆಯೊಂದು ಆಕ್ರಮಿಸಿತ್ತು. ಸುಮಾರು 70 ಅಮೇರಿಕನ್ನರು ಒತ್ತೆಯಾಳಾಗಿದ್ದರು. ಅದೊಂದು ದೊಡ್ಡ ತಲೆ ಬಿಸಿ ಕಾರ್ಟರ್ ಅವರಿಗೆ. ಸಿಕ್ಕಾಪಟ್ಟೆ ಪ್ರೆಶರ್ ಬರುತ್ತಿತ್ತು. ಅಂತಾದ್ದರಲ್ಲಿಯೇ ಒಂದು ಕಮಾಂಡೋ ಕಾರ್ಯಾಚರಣೆ ಮಾಡಲು ಹೋಗಿ, ಅದು ಪೂರ್ತಿ ಎಕ್ಕುಟ್ಟು ಹೋಗಿ, ದೊಡ್ಡ ಮಟ್ಟದ ಅವಮಾನ ಮತ್ತು ಮುಜುಗರ ಅನುಭವಿಸಿದ್ದರು ಕಾರ್ಟರ್. ಮತ್ತೆ ಅವರ ಎರಡನೇ ಅವಧಿಯ ಚುನಾವಣೆ ಬೇರೆ ಬರುತ್ತಿತ್ತು. ಇಷ್ಟೆಲ್ಲ ತೊಂದರೆಗಳ ಅಡಿ ಸಿಕ್ಕು ನಲಗುತ್ತಿದ್ದ ಕಾರ್ಟರ್ ರಾಸ್ ಪೆರೋ ಅವರಿಗೆ ಏನೂ ಮಾಡುವ ಹಾಗೆ ಇರಲಿಲ್ಲ. ಅಮೇರಿಕಾದ ಸುಮಾರು ಮಂದಿ ನಾಗರಿಕರು ಇರಾನಿನಲ್ಲಿ ಬಂಧಿಗಳಾಗಿದ್ದಾರೆ. ಎಲ್ಲರೂ ಒಂದಲ್ಲ ಒಂದು ಸರೆ ತಿರುಗಿ ಬರುತ್ತಾರೆ ಬಿಡಿ - ಅಂದಿದ್ದರು ಕಾರ್ಟರ್. ಸೋತಿದ್ದರು ಅವತ್ತಿನ ಮಟ್ಟಿಗೆ ಅವರು. ಮುಂದೆ ರೋಸಿದ್ದ ಜನ ಕಾರ್ಟರ್ ಅವರನ್ನು ಮನೆಗೆ ಕಳಿಸಿ ರೀಗನ್ ಅವರನ್ನು ಆರಿಸಿದ್ದು ಇತಿಹಾಸ.

ರಾಸ್ ಪೆರೋ ಹಾಗೆ ಏನೂ ಮಾಡಲು ಆಗಲ್ಲ ಅಂತ ಕೈಚೆಲ್ಲಿ ಕೂಡುವರಲ್ಲ. ಅಷ್ಟೆಲ್ಲ ಯಶಸ್ಸು ಸಾಧಿಸಿದವರು ಅವರು. ಕಾರ್ಟರ್ ಸರ್ಕಾರ ಸಹಾಯ ಮಾಡಲಿಲ್ಲ ಅಂದ್ರೆ ಏನಾಯಿತು, ನಾವೇ ಏಕೆ ಏನಾದರು ಮಾಡಬಾರದು ಅಂತ ಯೋಚಿಸಿದರು. ಅವರಿಗೂ ದೊಡ್ಡ ಮಟ್ಟದ ಸಂಪರ್ಕಗಳಿದ್ದವು. ಆ ಸಂಪರ್ಕಗಳನ್ನು ಉಪಯೋಗಿಸಿ ಅವರು ಕಾಂಟಾಕ್ಟ್ ಮಾಡಿದ್ದು ಯಾರನ್ನ ಅಂದರೆ ಕೇಳಿದವರು ಸಿಕ್ಕಾಪಟ್ಟೆ ಆಶ್ಚರ್ಯಪಟ್ಟರು.

ರಾಸ್ ಪೆರೋ ಸಂಪರ್ಕಿಸಿದ್ದು ಎರಡನೇ ವಿಶ್ವಯುದ್ಧದಲ್ಲಿ, ವಿಯೆಟ್ನಾಂ ಯುದ್ಧದಲ್ಲಿ ಅರಿಭಯಂಕರ ಅಂತ ಹೆಸರು ಮಾಡಿದ್ದ ನಿವೃತ್ತ ಕಮಾಂಡೋ ನಾಯಕ ಆರ್ಥರ್ "ಬುಲ್" ಸೈಮನ್ಸ್ ಎಂಬವರನ್ನು.

ದೊಡ್ಡ ಮಟ್ಟದ ಹೆಸರಿತ್ತು ಸೈಮನ್ಸ್ ಗೆ. ವಿಯೆಟ್ನಾಂ ಯುದ್ಧ ಗರಂ ಆಗುವ ಹೊತ್ತಿಗೆ ಸೈಮನ್ಸ್ ರಿಟೈರ್ ಆಗಿದ್ದರು. ಆದರೂ ಹಳೆಯ ದೋಸ್ತರು - ಬನ್ನಿ ಸಾರ್! ನಿಮ್ಮಂತ ಜನ ಬೇಕು ನಮಗೆ ಮಾರ್ಗದರ್ಶನ ಮಾಡಲಿಕ್ಕೆ - ಅಂತ ಕೇಳಿಕೊಂಡಿದ್ದಕ್ಕೆ ವಿಯೆಟ್ನಾಂ ಗೆ ಹೋಗಿ ಕೂತಿದ್ದರು. ದೊಡ್ಡ ಮಟ್ಟದ ಕಾರ್ಯಾಚರಣೆಗಳಿಗೆ ಪ್ಲಾನ್ ಹಾಕಿ ಕೊಡುತ್ತಿದ್ದರು.

ಒಮ್ಮೆಯಂತೂ ಕೆಲವು ಕಾರ್ಯಾಚರಣೆಗಳ ವೈಫಲ್ಯದಿಂದ  ರೊಚ್ಚಿಗೆದ್ದ ಅವರು - ನಾಲಾಯಕ್ ನನ್ನ ಮಕ್ಕಳಾ! ನಿಮಗೆ ಕಮಾಂಡೋ ಕಾರ್ಯಾಚರಣೆ ಮಾಡೋಕೆ ಬರೋತ್ತೇನ್ರೀ? ಸರೀರಿ ಆ ಕಡೆ. ಈ ಸಲ ನಾನೇ ಬರುತ್ತೇನೆ. ನಾನೇ ಲೀಡ್ ಮಾಡುತ್ತೇನೆ - ಅಂತ ಹೊಂಟುಬಿಟ್ಟರು. ಅದೇ 'ಸೋನ್ ಟೋಯ್ ರೇಡ್' ಕಾರ್ಯಾಚರಣೆ.

ಸೋನ್ ಟೋಯ್ ಎಂಬುದು ಉತ್ತರ ವಿಯೆಟ್ನಾಂ ನಲ್ಲಿ ಇದ್ದ ಯುದ್ಧಕೈದಿಗಳ ಶಿಬಿರ. ವಿಯೆಟ್ನಾಂ ಬಂಡುಕೋರರು ಹಿಡಿದ 61 ಜನ ಅಮೇರಿಕನ್ನ ಸೈನಿಕರು ಅಲ್ಲಿದ್ದರು. ಅವರನ್ನು ಬಿಡಿಸಿಕೊಂಡು ಬರಲು ಒಂದು ಕಮಾಂಡೋ ಕಾರ್ಯಾಚರಣೆ ಮಾಡಲಾಯಿತು. ಆಗಲೇ 52 ವರ್ಷದವರಾಗಿದ್ದ ಬುಲ್ ಸೈಮನ್ಸ್ ಆ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಬೇರೆ ಬೇರೆ ಕಾರಣಗಳಿಂದ ಆ ಕಾರ್ಯಾಚರಣೆ ವಿಫಲವಾದರೂ ಬುಲ್ ಸೈಮನ್ನರ ಛಾತಿಗೆ, ಧೈರ್ಯಕ್ಕೆ, ಸಾಹಸಕ್ಕೆ, ನಾಯಕತ್ವಕ್ಕೆ ಮತ್ತೊಂದು ಗರಿ ಏರಿತ್ತು.

ಮುಂದೆ ಸೈಮನ್ಸ್ ವಾಪಸ್ ಬಂದು ಫ್ಲೋರಿಡಾದಲ್ಲಿ ರಿಟೈರ್ ಆಗಿದ್ದರು. ಆವಾಗಲೇ ರಾಸ್ ಪೆರೋ ತಮ್ಮ ಇರಾನಿ ಪ್ರಾಬ್ಲೆಮ್ ತೆಗೆದುಕೊಂಡು ಅವರ ಹತ್ತಿರ ಬಂದಿದ್ದರು.

ಬುಲ್ ಸೈಮನ್ಸಗೆ ಇದೆಲ್ಲಾ ಬೇಕಾಗಿರಲಿಲ್ಲ. ಸಕಲ ಸರಕಾರೀ ಗೌರವಗಳಿಂದ ವಿಯೆಟ್ನಾಂನಿಂದ ವಾಪಸ್ ಬಂದಿದ್ದರೂ, 'ಸೋನ್ ಟೋಯ್ ರೇಡ್' ಕಾರ್ಯಾಚರಣೆ ವಿಫಲವಾದ ಬಗ್ಗೆ ಅವರಿಗೆ ನೋವಿತ್ತು. ಮತ್ತೆ ಬಂದವರು ಯಾರೋ ದೊಡ್ಡ ಬಿಸಿನೆಸ್ಸ್ ಮ್ಯಾನ್ ರಾಸ್ ಪೆರೋ. ಬುಲ್ ಸೈಮನ್ಸ್ ಸಹಿತ ಅತ್ಯಂತ ಉನ್ನತ ಮೌಲ್ಯಗಳಿರುವ ಸೈನಿಕ. ಖಾಸಗಿ ಮಂದಿಗೆ ಭಾಡಿಗೆ ಸೈನಿಕ ಕೆಲಸ ಮಾಡುವ ಮರ್ಸಿನರಿ ಆಗುವ ಆಸಕ್ತಿ ಇರಲಿಲ್ಲ. ಅಂತಹ ಕೆಲಸಗಳನ್ನೇ ಮಾಡುವ ಜನರ ಕಡೆ ರಾಸ್ ಪೆರೋ ಅವರನ್ನು ಸಾಗ ಹಾಕಲು ನೋಡಿದರು. ಹಾಗೆ ಕೇವಲ ದುಡ್ಡಿಗಾಗಿ ಭಾಡಿಗೆ ಹಂತಕರಾಗಿ ಕೆಲಸ ಮಾಡುವ ಜನರನ್ನು ರಾಸ್ ಪೆರೋ ಕೂಡ ನಂಬುತ್ತಿರಲಿಲ್ಲ.

ರಾಸ್ ಪೆರೋ ಬುಲ್ ಸೈಮನ್ಸ್ ಅವರ ಹೃದಯಕ್ಕೆ ತಾಗುವಂತೆ ಮಾತಾಡಿದರು. ಆ ಸಂಭಾಷಣೆಯ ಅಂತ್ಯಕ್ಕೆ ಬುಲ್ ಸೈಮನ್ಸ್ ಅವರಿಗೆ ಅನ್ನಿಸಿದ್ದು  ಇಷ್ಟು. ಈ ರಾಸ್ ಪೆರೋ ಎನ್ನುವ ಮಲ್ಟಿ ಮಿಲಿಯನರ ಕೇವಲ ಕಾಸೆಣಿಸುವ ಶೆಟ್ಟಿ ಅಲ್ಲ. ಒಳ್ಳೆ ಮನುಷ್ಯ. ಇಲ್ಲಾಂದ್ರೆ ತನ್ನ ಮನೆಯವರಲ್ಲ, ರಿಷ್ತೆದಾರರಲ್ಲ, ಕೇವಲ ಸಂಬಳ ತೆಗೆದುಕೊಂಡು ಕೆಲಸ ಮಾಡುವವರು. ಅವರ ಸಲುವಾಗಿ ಈ ಮಟ್ಟದ ಸಹಾಯ ಕೇಳಿಕೊಂಡು ಬಂದಿದ್ದಾನೆ. ದಿಲ್ದಾರ್ ಮನುಷ್ಯ. ಇವನಿಗೆ ಆದಷ್ಟು ಹೆಲ್ಪ್ ಮಾಡಬೇಕು.

ರೀ.....ರಾಸ್ ಪೆರೋ ಅವರೇ....ಇರಾನಿನ ಹೃದಯಕ್ಕೆ ನುಗ್ಗಿ, ನಿಮ್ಮ ಜನರಿರುವ ಕಾರಾಗೃಹವನ್ನು ರೇಡ್ ಮಾಡಿ, ಅಷ್ಟೊಂದು ಕೈದಿಗಳ ಮಧ್ಯೆ ನಿಮ್ಮ ಜನರನ್ನ ಹುಡುಕಿಕೊಂಡು ಬರೋದು ಅಂದ್ರೆ ಸುಲಭ ಅಂತ ಮಾಡಿದ್ದೀರಾ? ಮತ್ತೆ ನನಗೆ 60 ವರ್ಷ ಸಮೀಪ. ನಾನು ಡೈರೆಕ್ಟ್ ಆಗಿ ಅಂತೂ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಹೆಚ್ಚೆಂದರೆ ಸಲಹೆ ಕೊಟ್ಟೇನು. ಆದ್ರೆ ಹೆಚ್ಚಿಗೆ ಉಪಯೋಗವಾಗಲಿಕ್ಕಿಲ್ಲ. ನಿಮ್ಮತ್ರ ಕಮಾಂಡೋ ತಂಡ ಇದೆಯೇನ್ರೀ? - ಅಂದರು ಬುಲ್ ಸೈಮನ್ಸ್.

ಇಲ್ಲಾ ಸಾರ್....ನಾವು EDS ಕಂಪನಿ ಜನ. ನಾವು ಸಾಫ್ಟವೇರ್, ಹಾರ್ಡ್ವೇರ್, ಕಂಪ್ಯೂಟರ್ ಜನ. ನಿಮಗೇ ಫುಲ್ ಕಾಂಟ್ರಾಕ್ಟ್ ಕೊಟ್ಟು ಬಿಡೋಣ - ಅಂತ ಅಂದರು ಪೆರೋ. 

ರಾಸ್ ಪೆರೋ ಅವರಿಗೆ ಕಂಪ್ಯೂಟರ್ ಕಾಂಟ್ರಾಕ್ಟ್ ತೆಗೆದುಕೊಂಡು ಕೆಲಸ ಮಾಡಿಕೊಟ್ಟು ರೂಢಿ. ಕಮಾಂಡೋ ಕಾರ್ಯಾಚರಣೆಯೂ ಹಾಗೆ ಅಂದುಕೊಂಡು ಒಂದು ಗುತ್ತಿಗೆ ಸೈಮನ್ಸ್ ಅವರಿಗೆ ಕೊಟ್ಟುಬಿಡೋಣ ಅಂತ ಅಂದುಕೊಂಡರೆ ಏನೇನೋ ಕೇಳುತ್ತಿದ್ದಾರೆ ಸೈಮನ್ಸ್.

ಹಾಗಾದ್ರೆ.....ನಾನು ಏನೂ ಮಾಡಲು ಸಾಧ್ಯವಿಲ್ಲ ಮಿಸ್ಟರ್ ಪೆರೋ. ಗುಡ್ ಬೈ - ಅಂತ ಬಾಗಿಲು ಮುಚ್ಚಿ ಹೊಂಟಿದ್ದರು ಬುಲ್ ಸೈಮನ್ಸ್.

ಸಾರ್....ಅಕಸ್ಮಾತ್ ನಾನು ಕಮಾಂಡೋ ಆಗಲಿಕ್ಕೆ ತಯಾರ್ ಇರೋ ಜನರನ್ನು ತಂದು ಕೊಟ್ಟರೆ, ಹೆಲ್ಪ್ ಮಾಡುತ್ತೀರಾ? ಪ್ಲೀಜ್ - ಅಂತ ಕೇಳಿಕೊಂಡರು ಪೆರೋ.

ಓಕೆ....ಓಕೆ.....ಜನರನ್ನು ಕರೆದುಕೊಂಡು ಬನ್ನಿ ನೋಡೋಣ -ಅಂತ ನಮಸ್ಕಾರ ಅಂದು ಪೆರೋ ಅವರನ್ನು ಸಾಗಹಾಕಿದರು ಸೈಮನ್ಸ್. 

ಇನ್ನೇನು ಈ ಶೆಟ್ಟಿ ಬರಲಿಕ್ಕೆ ಇಲ್ಲ ಅಂತ ಅಂದುಕೊಂಡರು ಸೈಮನ್ಸ್.

ಈ ಕಡೆ ವಾಪಸ್ ಬಂದರು ರಾಸ್ ಪೆರೋ. ಇರಾನಿನಲ್ಲಿ ಬಂಧಿಯಾಗಿದ್ದ ಅವರ ನೌಕರರ ಹೆಂಡರು, ಮಕ್ಕಳು, ಮನೆಯವರು ದಿನವೂ ಫೋನ್ ಮಾಡಿ - ಏನು ಮಾಡ್ತೀರಿ ಸಾರ್? ಯಾವಾಗ ಬಿಡಿಸಿಕೊಂಡು ಬರುತ್ತೀರಿ? - ಅಂತ ಕೇಳುತ್ತಿದ್ದರು. ಪೆರೋ ಕೂಡ ಎಲ್ಲ ಲಭ್ಯವಿರುವ ಮಾರ್ಗಗಳನ್ನು ಹುಡುಕುತ್ತಿದ್ದರು. ಎಲ್ಲಿಯೂ ಭಾಗ್ಯದ ಬಾಗಿಲು ತೆಗೆಯಲಿಲ್ಲ. ಹಾಗಂತ ಸುಮ್ಮನೆ ಕೂಡುವ ಪೈಕಿ ಅವರಲ್ಲ.

ಮರುದಿನವೇ ತಮ್ಮ ಖಾಸ್ 10-12 ಜನ EDS ನೌಕರರನ್ನು ಕರೆದರು. ಅವರೆಲ್ಲ ಪೆರೋ ಅವರಿಗೆ ಸಿಕ್ಕಾಪಟ್ಟೆ ಕ್ಲೋಸ್. ಪೆರೋ ಕೇಳಿದರೆ ಪ್ರಾಣ ಕೂಡ ಕೊಡಲೂ ಸಿದ್ಧ. ಅಂತಹ ಜನ.

ಯೋ.....ನಿಮ್ಮ ಗೆಳೆಯರು, ಕಲೀಗ್ಸ್ ಅಲ್ಲಿ ಇರಾನಿನ ಜೇಲಿನಲ್ಲಿ ಬಂಧಿಯಾಗಿದ್ದಾರೆ. ನಮ್ಮ ದೇಶವಂತೂ ಅವರನ್ನು ಬಿಡಿಸಲು ಏನೂ ಮಾಡುತ್ತಿಲ್ಲ. ನೀವೇ ಹೋಗಿ ಬಿಡಿಸಿಕೊಂಡು ಬರುವಿರಾ ಹೇಗೆ? ಇದು ಒಂದು ಚಾಲೆಂಜ್. ತೆಗೆದುಕೊಳ್ಳುವಿರಾ? ಯಾರ ಮೇಲೂ ಪ್ರೆಶರ್ ಇಲ್ಲ. ತುಂಬಾ ರಿಸ್ಕ್ ಇದೆ. ನಿಮಗೆ ಬೇಕಾದ ಎಲ್ಲಾ ಸವಲತ್ತು ನಾನು ಒದಗಿಸುತ್ತೇನೆ. ಅಕಸ್ಮಾತ್ ನೀವು ಅಲ್ಲಿ ಹೋಗಿ ವಾಪಸ್ ಬರದಿದ್ದರೆ ನೀವು ಹೇಳಿದವರಿಗೆ ಇಷ್ಟು ಮಿಲಿಯ ಡಾಲರ್ ಅಂತ ಬರೆದುಕೊಡುತ್ತೇನೆ. ಮತ್ತೊಮ್ಮೆ ಹೇಳುತ್ತೇನೆ. ಯಾವದೇ ಒತ್ತಾಯ ಇಲ್ಲ. ಬೇಕಾದ್ರೆ ಮನೆಯಲ್ಲಿ ಕೇಳಿಕೊಂಡು ಬಂದು ಹೇಳಿ. ನಿಮ್ಮನ್ನು ನಂಬಿದ್ದೇನೆ. ಹಿಂದೆಲ್ಲ ನಾನು ಯಾವದೇ ಚಾಲೆಂಜ್ ಒಡ್ಡಿದರೂ, ಅದನ್ನು ಮಾತಿಲ್ಲದೆ ತೆಗೆದುಕೊಂಡು, ಗೆದ್ದು ಬಂದು ನಮ್ಮ ನಿಮ್ಮ EDS ಕಂಪನಿ ಈ ಉನ್ನತ ಸ್ಥಿತಿಯಲ್ಲಿ ಇರುವ ಹಾಗೆ ಮಾಡಿದ್ದೀರಿ. ಅದೇ ರೀತಿ ಇದೂ ಒಂದು ಚಾಲೆಂಜ್ - ಅಷ್ಟೇ ಹೇಳಿ  ಹೋಗಿ ಬಿಟ್ಟರು ಪೆರೋ.

ಅದು ಅವರ ನಾಯಕತ್ವದ ಶೈಲಿ. ತಮ್ಮ ಕೆಳಗೆ ಕೆಲಸ ಮಾಡುವ ಜನರಿಗೆ ಏನು ಆಗಬೇಕು ಅಂತ ಕ್ಲೀಯರ್ ಆಗಿ ಹೇಳಿ, ಪೂರ್ತಿ ವಿಶ್ವಾಸವಿಟ್ಟು ಹೋಗಿಬಿಡುವದು.  ನಾಯಕ ತಮ್ಮಲ್ಲಿ ಇಟ್ಟಿರುವ ಆ ಪರಿ ವಿಶ್ವಾಸ ನೋಡಿಯೇ ಜನ ಹುಮ್ಮಸ್ಸಿನಿಂದ ಕೆಲಸ ಮಾಡಬೇಕು. ಗುರಿ ಮುಟ್ಟಬೇಕು. ಅದು ರಾಸ್ ಪೆರೋ ಲೀಡರಷಿಪ್ ಸ್ಟೈಲ್.

ಪೆರೋ ನೌಕರರು ಮುಖ ಮುಖ ನೋಡಿಕೊಂಡರು. ಅವರಲ್ಲಿ ಯಾರೂ ಸೈನಿಕ ಕಾರ್ಯಾಚರಣೆ ಇತ್ಯಾದಿ ಮಾಡಿದವರಲ್ಲ. ಎಲ್ಲೋ ಸೈನ್ಯದಲ್ಲಿ ಚೂರು ಪಾರು ಕೆಲಸ ಮಾಡಿರಬಹುದು. ಅಷ್ಟೇ. ಈಗೆಲ್ಲ ಅವರು EDS ಕಂಪನಿಯಲ್ಲಿ ಮ್ಯಾನೇಜರ್ಗಳು. ಯಾರೂ ಕಮಾಂಡೋ ತರಹದ ಜನರಲ್ಲ. ಎಲ್ಲ ಸೇಲ್ಸಮನ್ಸ್. ಆದರೂ ಪೆರೋ ಬಗ್ಗೆ ನಿಷ್ಠೆ. ತಮ್ಮ ಕಲೀಗ್ಸ್ ಬಗ್ಗೆ ಒಂದು ತರಹದ ಸೋದರಭಾವ. ಮತ್ತೆ ಅದು ಈಗಿನ ಕಾಲದ ಕೊಡುವ ಸಂಬಳಕ್ಕೆ ಮಾತ್ರ ನಿಷ್ಠೆ ತೋರುತ್ತಿದ್ದ ಕಾಲವಲ್ಲ. ನೌಕರಿ ಹಿಡಿದ ಜನ ಜೀವನಪೂರ್ತಿ ಒಂದೇ ಕಡೆ ಕೆಲಸ ಮಾಡಲು ಬಯಸುತ್ತಿದ್ದರು. ಕಂಪನಿಗಳೂ ಅಷ್ಟೇ, ತಮ್ಮ ಜನರನ್ನು ಈಗಿನ ತರಹ use & throw ರೀತಿಯಲ್ಲಿ ಟ್ರೀಟ್ ಮಾಡುತ್ತಿರಲಿಲ್ಲ. ಒಂದು ತರಹದ mutual commitment.

ಪೆರೋ ಆಯ್ಕೆ ಮಾಡಿದ ಜನ ಸಿದ್ಧರಾಗಿಯೇ ಬಿಟ್ಟರು. ಪೆರೋ ಮೆಚ್ಚಿ ಬೆನ್ನು ತಟ್ಟಿದರು. ಎಲ್ಲರೂ ಕೂಡಿ ಮತ್ತೆ ಫ್ಲೋರಿಡಾಕ್ಕೆ ಹೋಗಿ ಬುಲ್ ಸೈಮನ್ಸ್ ಅವರನ್ನು ಭೆಟ್ಟಿ ಮಾಡುವದು ಎಂದಾಯಿತು.

ಹೋದರು ಫ್ಲೋರಿಡಾಗೆ. ಬುಲ್ ಸೈಮನ್ಸ್ ಗೆ ಆಶ್ಚರ್ಯ. 

ಮತ್ತೆ ಬಂದೇ ಬಿಟ್ಟನಾ ರಾಸ್ ಪೆರೋ ಎಂಬ ಶೆಟ್ಟಿ? ಅದೂ 8-10 ಜನರನ್ನು ಬೇರೆ ಕರೆದುಕೊಂಡು ಬಂದಿದ್ದಾರೆ. ಏನು ಸ್ಕೀಮೋ ಈ ರಾಸ್ ಪೆರೋದು? - ಅಂತ ಅಂದುಕೊಂಡರು ಸೈಮನ್ಸ್.

ಬುಲ್ ಸೈಮನ್ಸ್ ಸಾಹೇಬ್ರೆ....ಇವರೇ ನಮ್ಮ ಜನ. ನಿಮ್ಮ ಕಡೆ ತರಬೇತಿ ಪಡೆದು, ಕಮಾಂಡೋ ಅಂತ ತಯಾರಾಗಿ, ಇರಾನಿಗೆ ಹೋಗಿ  ಅವರ ಕಲೀಗ್ಸ್ ಬಿಡಿಸಿಕೊಂಡು ಬರುವವರು. ಇವರಿಗೆ ಟ್ರೇನ್ ಮಾಡ್ತೀರಾ? ಪ್ಲೀಸ್....ಅಂದ ಪೆರೋ ಅವರ ಮಾತನ್ನು ಬುಲ್ ಸೈಮನ್ಸ್ ನಂಬುವ ಸ್ಥಿತಿಯಲ್ಲಿ ಇರಲಿಲ್ಲ.

ರೀ....ಪೆರೋ ಅವರೇ....ಕಮಾಂಡೋ ಆಗೋದು ಅಂದ್ರೆ ನಿಮ್ಮ ಕಂಪ್ಯೂಟರ್ ಮಾರಿದಾಂಗೆ ಅಂತ ಮಾಡಿದ್ದೀರೇನು? ಈ ಜನ 5 ವರ್ಷ ಟ್ರೇನ್ ಮಾಡಿದರೂ ಕಮಾಂಡೋ ಆಗುತ್ತಾರೆ ಅಂತ ಖಾತ್ರಿಯಿಲ್ಲ. ಇದೆಲ್ಲ ಆಗುವ ಮಾತಲ್ಲ. ಬಂದಿದ್ದೀರಾ. ಒಳ್ಳೇದು. ಡ್ರಿಂಕ್ಸ್ ತೊಗೊಂಡು ಹೊರಡಿ. ಏನು ಬಿಯರ್ ಓಕೆನಾ? ಅಥವಾ ಸಾಫ್ಟ್ ಡ್ರಿಂಕಾ? -ಅಂತ ಕೈ ತೊಳೆದುಕೊಳ್ಳುವ ತಯಾರಿ ಮಾಡಿದರು ಸೈಮನ್ಸ್.

ಪೆರೋ ಹೇಳಿ ಕೇಳಿ ವ್ಯಾಪಾರಿ. ಎಷ್ಟೆಷ್ಟೋ ದೊಡ್ಡ ದೊಡ್ಡ ಡೀಲ್ಸ್ ಮಾಡಿ, ಜನರಿಗೆ ಮಾರಾಟ ಮಾಡಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿಯಲ್ಲೂ ಮಾರಿ ದುಡ್ಡು ಮಾಡಿದ ಜನ ಅವರು. ಇನ್ನು ಬುಲ್ ಸೈಮನ್ಸ್ ನನ್ನು ಅಷ್ಟು ಸುಲಭವಾಗಿ ಬಿಟ್ಟಾರೇ? ತಮ್ಮ salesmanship ಎಲ್ಲ ಉಪಯೋಗಿಸಿ ಏನೋ ಒಂದು ತರಹ ಕನ್ವಿನ್ಸ್ ಮಾಡಿದರು. ಅವರ ಪ್ರಾಮಾಣಿಕ ಕಳಕಳಿಗೆ ಸೈಮನ್ಸ್ ಸಹಿತ ಸ್ವಲ್ಪ ಕರಗಿದರು.

ಏನೇನೋ ಚರ್ಚೆಗಳು ಆದ ಮೇಲೆ, ಪೆರೋ ಕೂಡ ದೊಡ್ಡ ಮಟ್ಟದ ವಶೀಲಿ ಅದು ಇದು ಹಚ್ಚಿ ಮುಂದಿನ ತಯಾರಿ ಮಾಡಿಕೊಳ್ಳುತ್ತಿದ್ದರು.

ಈ 10-12 ಜನರಿಗೆ EDS ನಿಂದ ಟೆಂಪೊರರಿ ರಜೆ ನೀಡಲಾಯಿತು. ಅವರೆಲ್ಲ ಬಂದು ಬುಲ್ ಸೈಮನ್ಸ್ ಅವರ ಫ್ಲೋರಿಡಾದ ಫಾರ್ಮ್ ಹತ್ತಿರ ವಸತಿ ಮಾಡಿದರು. ಅರವತ್ತು ವರ್ಷದ ಬುಲ್ ಸೈಮನ್ಸ್ ಗೆ ಎಲ್ಲಿಲ್ಲದ ಉತ್ಸಾಹ. ಈ ಜನರಿಗೆ ಅವಶ್ಯವಿರುವ ತರಬೇತಿ ಡಬಲ್ ಟ್ರಿಪಲ್ ಸ್ಪೀಡಿನಲ್ಲಿ ನೀಡಲು ಶುರು ಮಾಡಿಯೇ ಬಿಟ್ಟರು.

ಮೊದಲು ಒಂದಿಷ್ಟು ದಿನ ಸಿಕ್ಕಾಪಟ್ಟೆ ದೈಹಿಕವಾಗಿ ದಂಡಿಸಲಾಯಿತು. ಬಾಡಿ ಒಂದು ಶೇಪಿಗೆ ಬಂದ ಕೂಡಲೇ ಬೇರೆ ಬೇರೆ ತರಹದ ಶಸ್ತ್ರ ಇತ್ಯಾದಿ ಉಪಯೋಗಿಸುವದು, ಜೇಲ್ ಆಕ್ರಮಣದ ಪ್ಲಾನಿಂಗ್ ಇತ್ಯಾದಿಗಳನ್ನು ಬೇಕಾದಷ್ಟು ಮಟ್ಟಿಗೆ ಹೇಳಿಕೊಟ್ಟರು ಸೈಮನ್ಸ್. ಇವರ ಮಿಶನ್ ಕ್ಲೀರ್ ಇತ್ತು. ಅದಕ್ಕೆ ತಕ್ಕಂತೆ ಕರಾರುವಕ್ಕಾಗಿ ತರಬೇತಿ ಕೊಟ್ಟರು ಸೈಮನ್ಸ್. ಅವರೋ ತುಂಬಾ ಸ್ಟ್ರಿಕ್ಟ್. ಸಿಕ್ಕಾಪಟ್ಟೆ ದಂಡಿಸಿಬಿಟ್ಟರು. ದುರುದ್ದೇಶದಿಂದಲ್ಲ. ಟೈಮ್ ಕಮ್ಮಿ ಇತ್ತು. ತಮ್ಮ ಕಲೀಗ್ಸ್ ಸಲುವಾಗಿ EDS ನೌಕರರೂ ಸಿಗರೇಟು, ಡ್ರಿಂಕ್ಸ್ ಎಲ್ಲಾ ಬಿಟ್ಟು ಟ್ರೇನಿಂಗ್ ಮಾಡಿದರು. ಮೆಚ್ಚಬೇಕಾಗಿದ್ದೇ ಅವರ ಕಮಿಟ್ಮೆಂಟ್. ಅದೂ ತಮ್ಮ ಕಲೀಗ್ಸ್ ಸಲುವಾಗಿ ಮತ್ತು ಬಾಸ್ ಪೆರೋ ಅವರ ಸಲುವಾಗಿ. ಹ್ಯಾಟ್ಸ್ ಆಫ್!

ಈ ಕಡೆ ರಾಸ್ ಪೆರೋ ಹೀಗೆ ತಯಾರ್ ಆದ ತಮ್ಮ ಖಾಸಗಿ ಕಮಾಂಡೋಗಳನ್ನು ಇರಾನಿಗೆ ನುಗ್ಗಿಸುವ ಪ್ಲಾನ್ ಮಾಡುತ್ತಿದ್ದರು.

ಮುಂದೆ ಏನೇನೋ ಆಯಿತು. 

ಕಮಾಂಡೋಗಳು ಇರಾನ್ ಹೊಕ್ಕರು. ಆದರೆ ಅಷ್ಟೊತ್ತಿಗೆ ಅವರ ಕಲೀಗ್ಸ್ ಗಳನ್ನು ಬೇರೆ ಎಲ್ಲೋ ಕಡೆ ಶಿಫ್ಟ್ ಮಾಡಲಾಗಿತ್ತು. ಅದು ಖೊಮೇನಿ ಅಧಿಕಾರಕ್ಕೆ ಬರುತ್ತಿದ್ದ ಸಮಯ. ಇರಾನಿನ ಎಲ್ಲ ಕಡೆ ದೊಂಬಿ, ಗಲಾಟೆ, ಗದ್ದಲ. ಎಲ್ಲೂ ಸರಿ ಮಾಹಿತಿ ಸಿಗುತ್ತಿರಲಿಲ್ಲ. ಹಾಗಾಗಿ ಹೋದ EDS  ಕಮಾಂಡೋಗಳಿಗೆ ಏನು ಮಾಡುವದು ಅಂತ ತಿಳಿಯಲಿಲ್ಲ. ಮತ್ತೆ ರಿಯಲ್ ಟೈಮ್ ನಲ್ಲಿ ಪ್ಲಾನ್ ಚೇಂಜ್ ಮಾಡಿಕೊಂಡು ಕಾರ್ಯಾಚರಣೆ ಮಾಡಲು ಅವರು ನುರಿತ ಕಮಾಂಡೊಗಳೂ ಅಲ್ಲ. ಮತ್ತೆ ಅವರ ಬೆನ್ನಿಗೆ ದೊಡ್ಡ ಮಟ್ಟದ ಸಪೋರ್ಟ್ ಸಿಸ್ಟಮ್ ಕೂಡ ಇರಲಿಲ್ಲ. ಮೊದಲೇ ಪ್ಲಾನ್ ಮಾಡಿದಂತೆ ರಾಜಧಾನಿ ಟೆಹ್ರಾನ್ ಬಿಟ್ಟು ಟರ್ಕೀ ಬಾರ್ಡರ್ ಹತ್ತಿರ ಬಂದು ಮುಂದಿನ ಸೂಚನೆಗೆ ಕಾದು ನಿಂತಿದ್ದರು.

ಒಳ್ಳೆ ಕೆಲಸಕ್ಕೆ ದೇವರೂ ಕೈಜೋಡಿಸುತ್ತಾನೆ ಎಂಬಂತೆ, EDS ನ ಇಬ್ಬರು ನೌಕರರನ್ನು ಇಟ್ಟ ಜೈಲಿನಲ್ಲಿ ದೊಡ್ಡ ಮಟ್ಟದ ದಂಗೆ. ಅಲ್ಲಿದ್ದವರೆಲ್ಲ ಮೊದಲಿನ ಸರ್ವಾಧಿಕಾರಿ ರೇಜಾ ಶಾಹನ ಕಾಲದಲ್ಲಿ ಬಂಧಿಸಲ್ಪಟ್ಟಿದ್ದ ಜನ. ಖೊಮೇನಿ ಜನ ಅಧಿಕಾರಕ್ಕೆ ಹತ್ತಿರ ಬರುತ್ತಿದ್ದಂತೆ ಜೈಲಿಗೆ ಜೈಲೇ ಒಡೆದು ಬಂಧಿಗಳನ್ನು ಬಿಟ್ಟು ಕಳಿಸುತ್ತಿದ್ದರು. ಅದೇ ರೀತಿ ಈ ಜೈಲಿನಲ್ಲೂ ಆಯಿತು. EDS ನ ಇಬ್ಬರು ನೌಕರರೂ ಸಹ ಗುಂಪಿನಲ್ಲಿ ಗೋವಿಂದ ಅನ್ನುವ ರೀತಿ ಜೇಲಿನಿಂದ ಪರಾರಿ ಆದರು. ಹೇಗೋ ಮಾಡಿ EDS ಸಂಪರ್ಕ ಮಾಡಿದರು. ರಾಸ್ ಪೆರೋ ಖುಷ್. ಸಾಕಷ್ಟು ಕಾಸ್ ಖರ್ಚು ಮಾಡಿ ಹೇಗೋ ಇವರಿಬ್ಬರನ್ನೂ ಸಹ ಟರ್ಕೀ ಬಾರ್ಡರಿಗೆ ಕರೆಸಿಕೊಂಡರು. ಅಲ್ಲಿಂದ ಎಲ್ಲರೂ ಟರ್ಕಿಗೆ ಬಂದು ಒಂದು ಉಸಿರು ಬಿಟ್ಟರೆ,  ಈ ಕಡೆ ಅಮೇರಿಕಾದಲ್ಲಿ ಎಲ್ಲರ ಕುಟುಂಬಗಳು ದೇವರಿಗೆ ಮಾಡಿಕೊಂಡಿದ್ದ ಹರೆಕೆ ತೀರಿಸಲು ತಯಾರಾಗುತ್ತಿದ್ದವು.

ಒಟ್ಟಿನಲ್ಲಿ ಎಲ್ಲ ಸುಖಾಂತ್ಯ. 

ಕೇವಲ ಇಷ್ಟೇ ವಿವರ ತಿಳಿದ ಕೆಲವರಿಗೆ ರಾಸ್ ಪೆರೋ ಅವರ ಹುಚ್ಚು ಪ್ಲಾನ್, ಅವರ ನೌಕರರ blind faith ತುಂಬ ಬಾಲಿಶ ಮತ್ತು ಅವಿವೇಕ ಅನ್ನಿಸಬಹುದು. ಒಂದು ಲೆವೆಲ್ ಗೆ ಅದು ಕರೆಕ್ಟ್ ಇರಬಹುದು ಕೂಡ. ಆದ್ರೆ ತನ್ನ ಮೌಲ್ಯಗಳಿಗೆ compromise ಮಾಡಿಕೊಳ್ಳದ ಪೆರೋ, ತನ್ನ ನೌಕರರು ಇಟ್ಟ ನಿಷ್ಠೆಗೆ ಪ್ರತಿಯಾಗಿ ತೋರಿಸಿದ ಪೆರೋ ಅವರ ನಿಷ್ಠೆ, ಅವರ ನೌಕರರು ಕಲೀಗ್ಸ್ ಬಗ್ಗೆ, ಬಾಸ್ ಬಗ್ಗೆ ಇಟ್ಟಿದ್ದ ಮನೋಭಾವ, ಕಲೀಗ್ಸ್ ಸಲುವಾಗಿ ಪ್ರಾಣವನ್ನೇ ದಾವ್ ಇಟ್ಟಿದ್ದ ಅವರ ಬಡಾ ದಿಲ್ ಇತ್ಯಾದಿ ಮಾತ್ರ ತುಂಬಾ impressive. ಅವೆಕ್ಕೆಲ್ಲ ಒಂದು ದೊಡ್ಡ ಸಲಾಂ.

ಆ ತರಹದ ಕಂಪನಿಗಳು, ಬಾಸ್, ಕಲೀಗ್ಸ್ ಎಲ್ಲ ವಿರಳ ಈ ಕಾಲದಲ್ಲಿ. ಮಾಡಿದ ಕೆಲಸಕ್ಕೆ ಸರಿಯಾಗಿ ಕಾಸ್ ಕೊಡುವ ಬಾಸ್, ಕೊಟ್ಟ ಕಾಸಿಗೆ ನಿಯತ್ತಾಗಿ ಕೆಲಸ ಮಾಡುವ ನೌಕರರು ಸಿಕ್ಕರೆ ಅದೇ ದೊಡ್ಡ ಮಾತು ಈ ಕಾಲದಲ್ಲಿ. ನಿಷ್ಠೆ ಮತ್ತೊಂದು ಕೇಳಬೇಡಿ. ಅವೆಲ್ಲ ಓಲ್ಡ್ ಸ್ಟೈಲ್. ಅದಕ್ಕೇ ಇರಬೇಕು ಒಂದು ಕಾಲದಲ್ಲಿ ಗ್ರೇಟ್ ಆಗಿದ್ದ ಕಂಪನಿಗಳೆಲ್ಲ ದಿವಾಳಿಯೆದ್ದು ಹೋಗುತ್ತಿವೆ. 

ಅದಕ್ಕೆ ಕಾರಣ ಇಷ್ಟೇ- ರಾಸ್ ಪೆರೋ ತರಹದ ನಾಯಕರು ಮತ್ತು ಅವರಿಗಿದ್ದ ತರಹದ ನೌಕರರು ಮತ್ತು ನಿಷ್ಠೆ ಮಾಯವಾಗುತ್ತಿವೆ. ಕಂಪನಿಗಳು hire & fire ಅನ್ನುವ ಮನೋಭಾವ ತೋರಿದರೆ, ನೌಕರರು ತಾವು ಕೇವಲ ಸಂಬಳಕ್ಕೆ ಮಾತ್ರ ಬಂದಿರುವ ಮಂದಿ ಅಂತ ತೋರಿಸಿಕೊಳ್ಳುವದರಲ್ಲಿ ಏನು ತಪ್ಪು? ಒಂದು ಕಾಲದಲ್ಲಿ ಎಂತಹ ಸಂಕಷ್ಟ ಬಂದರೂ ಕಂಪನಿಗಳು mass layoff ಮತ್ತೊಂದು ಮಾಡುತ್ತಿರಲಿಲ್ಲ. ನೌಕರರೂ ಅಷ್ಟೇ. ಸಂಬಳದಲ್ಲಿ ಕಟ್ ತೆಗೆದುಕೊಂಡೋ, ದುಡ್ಡಿಲ್ಲದೆ ಓವರ್ ಟೈಮ್ ಮಾಡಿಯೋ ಕಂಪನಿ ಉಳಿಸುತ್ತಿದ್ದರು. 

ಇವತ್ತಿನ ಕಾಲವೋ.....ಒಂದು ಕ್ವಾರ್ಟರ್ ನಲ್ಲಿ ಒಂದು ಪೆನ್ನಿ ಲಾಭ ಕಮ್ಮಿ ಆಯಿತು ಅಂದ್ರೆ ಸುಖಾಸುಮ್ಮನೆ ಸಾವಿರಾರು ಜನರನ್ನು ಮನೆಗೆ ಕಳಿಸುವ ಕಂಪನಿಗಳು. ಒಂದೆರಡು ಸಾವಿರ ಜಾಸ್ತಿ ಕಾಸ್ ಸಿಕ್ಕರೆ ಬಿಟ್ಟು ಹೋಗುವ ನೌಕರರು. ಎಲ್ಲಿಂದ ಎಲ್ಲಿಗೆ ಬಂತು ಕಾರ್ಪೊರೇಟ್ ಜಗತ್ತು.

ಮುಂದೆ ರಾಸ್ ಪೆರೋ ಏನೇನೋ ಆದರು. ಎರಡು ಬಾರಿ ಅಮೆರಿಕಾದ ಅಧ್ಯಕ್ಷ ಚುನಾವಣೆಯಲ್ಲಿಯೂ ನಿಂತು ಸೀನಿಯರ್ ಬುಶ್, ಕ್ಲಿಂಟನ್ ಅಂತವರಿಗೆ ದೊಡ್ಡ ಮಟ್ಟದ ಟಾಂಗ್ ಕೊಟ್ಟಿದ್ದರು.

EDS ನ್ನು ಒಂದು ದೊಡ್ಡ ಲಾಭಕ್ಕೆ IBM ಗೆ ಮಾರಿದ್ದರು. ಸರಿಯಾಗಿ ಮ್ಯಾನೇಜ್ ಮಾಡದ IBM ನಷ್ಟದಲ್ಲಿ ಇದ್ದಾಗ ಅದೇ EDS ನ್ನು ಅತೀ ಕಡಿಮೆ ಬೆಲೆಗೆ ಖರೀದಿಸಿ, ಎಲ್ಲಾ ಸರಿ ಮಾಡಿ, ಮತ್ತೆ ಮೂರ್ನಾಕು ಪಟ್ಟು ಲಾಭಕ್ಕೆ ಮತ್ತೆ IBM ಗೆ ಮಾರಿದ್ದ ಜೀನಿಯಸ್ ಭೂಪ ರಾಸ್ ಪೆರೋ.

ಈಗಲೂ ಇದ್ದಾರೆ ರಾಸ್ ಪೆರೋ. ತಮಗೆ ಅತಿ ಖಾಸ್ ಅದ ಆಪ್ತ ವಿಷಯ ಬಂದರೆ ಈಗಲೂ 82 ನೆ ವಯಸ್ಸಿನಲ್ಲೂ ಅಬ್ಬರಿಸಲಿಕ್ಕೆ ರೆಡಿ ರಾಸ್ ಪೆರೋ. ಅವರಿಗೊಂದು ಸಲಾಂ.

ಹೆಚ್ಚಿನ ಮಾಹಿತಿಗೆ:

On Wings of Eagles -  ರಾಸ್ ಪೆರೋ ಮಾಡಿಸಿದ ಈ ಕಾರ್ಯಾಚರಣೆಯ ಬಗ್ಗೆ ಕೆನ್ ಫೊಲೇಟ್ ಬರೆದ ಅತ್ಯುತ್ತಮ ಪುಸ್ತಕ.


ಬುಲ್ ಸೈಮನ್ಸ್ 

Operation eagle claw - ಜಿಮ್ಮಿ ಕಾರ್ಟರ್ ಮಾಡಿಸಿದ ರಹಸ್ಯ ಇರಾನ್ ಕಾರ್ಯಾಚರಣೆ. ಪೂರ್ತಿ ಎಕ್ಕುಟ್ಟಿ ಹೋಗಿತ್ತು.

No comments: