Wednesday, August 08, 2012

ಮುಖವಾಡವೇ ಮುಖವಾಗಿಬಿಡುವ ದುರಂತ

ಇದು ನನ್ನ ಪರ್ಸನಾಲಿಟಿ. ಚೇಂಜ್ ಮಾಡಿಕೊಳ್ಳುವದು ಕಷ್ಟ. ಅಷ್ಟಕ್ಕೂ ನಾನು ಚೇಂಜ್ ಮಾಡುವ ಪ್ರಯತ್ನ ಮಾಡಿದೆ, ಚೇಂಜ್ ಮಾಡಿಕೊಂಡೆ ಅಂದ್ರೆ ಅದು ಹಿಪೋಕ್ರಸಿ (hypocrisy) ಆಗುವದಿಲ್ಲವೆ? ನಮಗೆ ನಾವೇ ಮೋಸ ಮಾಡಿಕೊಂಡಂತೆ ಅಲ್ಲವಾ? ಹೀಗಂತ ನಾವೇ ಮಾತಾಡುತ್ತ ಇರುತ್ತೇವೆ. ಬೇರೆಯವರು ಮಾತಾಡುವದನ್ನೂ ಕೇಳುತ್ತೇವೆ.

ನೀವು ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ. ಆದರೆ ನಾನು ಗಮನಿಸಿದಂತೆ, ಈ ತರಹ ನಮ್ಮನ್ನು ನಾವು ಸಮರ್ಥಿಸಿಕೊಳ್ಳುವದು, ನಮ್ಮ ವ್ಯಕ್ತಿತ್ವ ಡಿಫೆಂಡ್ ಮಾಡಿಕೊಳ್ಳುವದು, ನಮ್ಮ ನೆಗೆಟಿವ್ ಗುಣಗಳ ಬಗ್ಗೆಯೇ ಹೆಚ್ಚು. ನನಗೆ ಸಿಕ್ಕಾಪಟ್ಟೆ ಸಿಟ್ಟು. ನನ್ನ ದ್ವೇಷ, ರೋಷಕ್ಕೆ ಮಿತಿಯೇ ಇಲ್ಲ. ನನಗೆ ಸಹನೆಯೇ ಇಲ್ಲ. ನನಗೆ ಹೊಟ್ಟೆಕಿಚ್ಚು. ನನಗೆ ಅಸೂಯೆ. ನನಗೆ ತಾಳ್ಮೆ ಕಡಿಮೆ.......ಏನು ಮಾಡೋದು? ಮೊದಲಿಂದ ನಾನು ಹೀಗೆ......... - ಅನ್ನುತ್ತ ಆ ಒಳ್ಳೆ ಗುಣ ಇಲ್ಲ, ಈ ಒಳ್ಳೆ ಗುಣ ಕಮ್ಮಿ ಅನ್ನೋದರ ಬಗ್ಗೆಯೇ ನಮ್ಮ ಡಿಫೆನ್ಸ್ ಮತ್ತು ನಮ್ಮ ನೆಗೆಟಿವ್ ವ್ಯಕ್ತಿತ್ವವನ್ನು ನಾವೇ ಸಪೋರ್ಟ್ ಮಾಡಿಕೊಳ್ಳುವ ಕೆಲಸ ನಡೆದಿರುತ್ತದೆ.

ನನಗೆ ತುಂಬಾ ಸಹನೆ, ನನಗೆ ತುಂಬಾ ಕರುಣೆ, ನನಗೆ ಇನ್ನೊಬ್ಬರ ಏಳ್ಗೆ ಕಂಡು ಖುಷಿ ಪಡುವ ಗುಣ ಇದೆ, ನಾನು ಕ್ಷಮಯಾಧರಿತ್ರಿ, ಹಾಗೆ, ಹಾಗೆ, ಒಳ್ಳೆ ಗುಣ ನನ್ನಲ್ಲಿವೆ. ಏನು ಮಾಡೋದು ಅದೇ ನನ್ನ ಪರ್ಸನಾಲಿಟಿ - ಅಂತ ಅಂದಿರೋರನ್ನ ನೋಡಿದ್ದು, ಕೇಳಿದ್ದು ಅಪರೂಪ. 

ನಾನು ಸಿಕ್ಕಾಪಟ್ಟೆ ಶಾಣ್ಯಾ, ಸುಂದರ, ಶ್ರೀಮಂತ, ಶಕ್ತಿವಂತ, ಪ್ರಭಾವಶಾಲಿ, ಛಲಗಾರ, ಅದು ಇದು ಅಂತ ಬೊಂಬಡಾ ಬಾರಿಸುವದು ಇದೆ. ಆದ್ರೆ ಮನುಷ್ಯ ಸಹಜವಾದ ಒಳ್ಳೆ ಗುಣಗಳ ಬಗ್ಗೆ ಹೇಳಿಕೊಳ್ಳುವದು ದೂರ ಉಳಿತು, ನಾವು ವಿಚಾರ ಮಾಡೋದೇ ಕಮ್ಮಿ. ಎಲ್ಲರ ಹಾಗೆ ನಮ್ಮಲ್ಲೂ ಕೆಲ ಒಳ್ಳೆ ಗುಣಗಳು, ಒಂದು ಪ್ರಮಾಣದಲ್ಲಿ ಇದ್ದೇ ಇರುತ್ತವೆ. ಅಷ್ಟು ಬಿಟ್ರೆ ಜಾಸ್ತಿ ಮಾತು  ಇಲ್ಲ.

ಎಲ್ಲಿಯೋ, ಯಾರೋ ಟೊಪ್ಪಿ ಹಾಕಿದಾಗ ಅಥವಾ ವಿಶ್ವಾಸದ್ರೋಹ ಮಾಡಿದಾಗ, ಆದ ಕಹಿ ಮರೆಯಲು ಅಯ್ಯೋ......ನಾನು ತುಂಬಾ ಭೋಳೆ, ತುಂಬಾ ಸಾಧು, ಅದು ಇದು - ಅಂತ ಕೆಲ ಜನ ಹೇಳಿಕೊಳ್ಳುತ್ತಾರೆ. ಅದೂ ಮಾಡಿದವರಿಗೆ ಬೇಕಾದಷ್ಟು ಬೈದಾದ ಮೇಲೆ. ಮತ್ತೆ ಮೆಜಾರಿಟಿ ಟೈಮ್ ಹೀಗೆ ಹೇಳುವದು ತಮಗೆ ಮೋಸ, ದ್ರೋಹ ಮಾಡಿದವರಿಗೆ ಏನೂ ಮಾಡಲು ಸಾಧ್ಯವಿಲ್ಲವೆಂದಾಗ. ಕೈಲಾಗದವ ಮೈ ಪರಚಿಕೊಂಡ ಅನ್ನುವ ಹಾಗೆ.

ವ್ಯಕ್ತಿತ್ವ, ಪರ್ಸನಾಲಿಟಿ ಅಂದ್ರೆ ಏನ್ರೀ?

ಅವನ/ಅವಳ  ಪರ್ಸನಾಲಿಟಿ ಮಸ್ತ ಇದೆ ಅಂದ್ರೆ ಮೋಸ್ಟ್ಲಿ ನೋಡಲಿಕ್ಕೆ ಒಂದು ಲೆವೆಲ್ ಗೆ ಚೆನ್ನಾಗಿ ಇದ್ದಾನೆ/ಇದ್ದಾಳೆ  ಅಂತ ಅರ್ಥ ಮಾಡೋರೆ ಜಾಸ್ತಿ. ಪರ್ಸನಾಲಿಟಿ ಅಂದ್ರೆ ದಿನಾ ಸ್ನಾನ ಮಾಡಲಿಲ್ಲ ಅಂದ್ರೆ ಕೊಳತು ನಾರುವ ಮೂಳೆ ಮಾಂಸದ ತಡಿಕೆನಾ? ವೇಸ್ಟ್ ಬಾಡೀನಾ? ಅಷ್ಟೇನಾ?

ಎಲ್ಲೋ ಒಂದು ಕಡೆ ಓದಿದ ತಮಾಷೆ ವಿಷಯ ಅಂದರೆ ಮಾನವ ದೇಹವನ್ನು ಮಾಡುವ ರಾಸಾಯನಿಕ ಎಲಿಮೆಂಟ್ಸ್ ಎಲ್ಲ ಕೂಡಿಸಿ ಅವುಗಳ ಮಾರ್ಕೆಟ್ ಬೆಲೆ ಎಷ್ಟು ಅಂತ ನೋಡೋಕೆ ಹೋದರೆ ಎಲ್ಲೋ ೮-೧೦ ಡಾಲರ್. ಇದು ೧೯೭೨ ಬೆಲೆ. ೪೦ ವರ್ಷ ನಂತರವೂ ವರ್ಷಕ್ಕೆ ೫% ಇನಫ್ಲೇಶನ್ ದರದದಲ್ಲಿ, ಚಕ್ರಬಡ್ಡಿ ಲೆಕ್ಕ ಹಾಕಿದರೂ ಸುಮಾರು ೭೦ ಡಾಲರ್. ಅಥವಾ ಅಜಮಾಸ್ ೪೦೦೦ ರುಪಾಯೀ. ನಮ್ಮ ದೇಹದಲ್ಲಿ ಇರುವ ಹೈಡ್ರೋಜೆನ್, ನೈಟ್ರೋಜೆನ್, ಕಾರ್ಬನ್ ಇತ್ಯಾದಿಗಳ ಅಜಮಾಸ್ ಬೆಲೆ ಅಷ್ಟೇ. ಅದಕ್ಕೆ ಪರ್ಸನಾಲಿಟಿ ಅಂತ ಅಂದರೆ ಪರ್ಸನಾಲಿಟಿ ವ್ಯಾಲ್ಯೂ ಅಷ್ಟೇನಾ?

ಪರ್ಸನಾಲಿಟಿ (personality) ಎಂಬ ಶಬ್ದ ಪರ್ಸೋನಾ (persona) ಶಬ್ದಕ್ಕೆ ಸಂಬಂಧಿಸಿದ್ದು. ಪರ್ಸೋನಾ ಶಬ್ದದ ಲ್ಯಾಟಿನ್ ಮೂಲ ಹುಡುಕುತ್ತ ಹೋದರೆ ಸಿಗುವ ಅರ್ಥ ಗೊತ್ತಾ? ಮಾಸ್ಕ್ ಅಂದ್ರೆ ಮುಖವಾಡ ಅಂದ್ರೆ ನಕಾಬ್. ಒಟ್ಟಿನಲ್ಲಿ ಹಾಕ್ಕೊಂಡಿರೊ ಮುಖವಾಡಕ್ಕೆ ಪರ್ಸನಾಲಿಟಿ ಅಂತ ಹೆಸರಿಟ್ಟು, ಹುಟ್ಟಿಂದಲೇ ಅದು ಬಂದಿದ್ದು, ಬದಲಾಯಿಸಲು ಸಾಧ್ಯವೇ ಇಲ್ಲ, ಎಲ್ಲ ನಮ್ಮ ಕರ್ಮ ಅಂತ ಕೂತು ಬಿಡೋದು ಎಷ್ಟು ಸರಿ ಅಂತ?

ಮುಖವಾಡವಿಲ್ಲದ ಪರ್ಸನಾಲಿಟಿ ಅಂದ್ರೆ ಎಲ್ಲ ದೈವೀ ಗುಣಗಳಿಂದ ಕೂಡಿದ್ದು. ಎಲ್ಲಾ ಒಳ್ಳೆ ಗುಣಗಳೂ ಗರಿಷ್ಠ ಮಟ್ಟದಲ್ಲಿ ನಮ್ಮಲ್ಲೇ ಇವೆ. ಎಲ್ಲರಲ್ಲೂ ಇವೆ. ನಾವು ಅದೈವೀ ಗುಣಗಳ ಮುಖವಾಡ ಧರಿಸಿಕೊಂಡು ಅದೇ ನಮ್ಮ ಮೂಲ ಒರಿಜಿನಲ್ ಪರ್ಸನಾಲಿಟಿ ಅಂತ ಕೂತು ನಮಗೆ ನಾವೇ ಅಪರಿಚಿತರಾಗುತ್ತೇವೆ. ಹಾಕಿಕೊಂಡಿರುವ ಮುಖವಾಡವೇ ಮುಖವಾಗಿ ಮೂಲ ಮುಖವೇ ಮರೆತು ಹೋಗಿರುತ್ತದೆ. ಆ ಮೇಲೆ ಮುಖವಾಡ ತೆಗೆದರೆ ಏನೋ ಒಂದು ತರಹದ ಏನೋ  ಬಿಟ್ಟು ಹೋದ withdrawal symptom ಫೀಲಿಂಗ್.

ಸಹನೆ, ಕ್ಷಮೆ, ಶಾಂತಿ, ಸರ್ವರಿಗೆ ಒಳ್ಳೇದನ್ನೇ ಬಯಸುವದು ಇತ್ಯಾದಿ ರೂಢಿ ಮಾಡಿಕೊಳ್ಳಿ ಅಂದ್ರೆ ಮೊದಲ ಪ್ರಶ್ನೆ- ಹೇಗೆ ಮಾಡುವದು ಎಂದು. ಇಂಗ್ಲಿಷ್ನಲ್ಲಿ ಒಂದು ಮಾತಿದೆ Fake it till you make it ಅಂತ. ಅರ್ಥ ಅಂದರೆ ಸರಿಯಾಗಿ ಬರುವ ತನಕ ಬಂದಂತೆ ತೋರಿಸಿ ಅಂತ. ಉದಾಹರಣೆಗೆ ಕೋಪ ಬರುತ್ತಿದೆ. ಆದ್ರೆ ತುಟಿ ಕಚ್ಚಿ ಹಿಡದು ನಗುತ್ತೀರಿ. ಶಾಂತಿಯಿಂದ ಇರುತ್ತೀರಿ ಅಂದುಕೊಳ್ಳಿ. ಆ ಕ್ಷಣದಲ್ಲಿ ಕಷ್ಟ ಅನಿಸಬಹುದು. ಆದ್ರೆ ನಿಮಗೆ ಬಿಟ್ಟು ಬೇರೆ ಯಾರಿಗೂ ಗೊತ್ತಾಗುವದಿಲ್ಲ ನೀವು ಶಾಂತಿಯಿಂದ ಇರುವಿರಿ ಎಂಬ ತೋರಿಕೆ ಮಾಡುತ್ತಿದ್ದೀರೇ ಹೊರತೂ ಶಾಂತಿಯಿಂದ ಇಲ್ಲ ಅಂತ. ಹೀಗೆ......ಸಹನೆ ಪೂರ್ತಿ ಖರ್ಚಾಗಿ,  ತಲೆ ಹನ್ನೆರಡಾಣೆ ಆದಾಗೂ ನಗುನಗುತ್ತಾ ಸಹನೆಯ ತೋರಿಕೆ ಮಾಡಿ. ಹೀಗೆ  ಮುಖವಾಡ ತೆಗೆಯುವ ಯತ್ನ ಜಾರಿಯಲ್ಲಿ ಇರಲಿ. ಅಂತ್ಯದಲ್ಲಿ ಪ್ರಯತ್ನಕ್ಕೆ ಫಲ ಸಿಕ್ಕು, ಮುಖವಾಡ ಕಿತ್ತು ಬಂದು, ನಿಮ್ಮ ಒರಿಜಿನಲ್ ಮುಖ ದೈವೀ ಕಳೆಯಿಂದ ಲಕ ಲಕ ಅಂತ ಹೊಳೆಯುತ್ತದೆ. ಹಿಂದೆ ಪ್ರಭಾವಳಿಯೂ ಮೂಡೀತು. ಏಕೆಂದರೆ  ಅದೇ ನಮ್ಮ ಮೂಲ ದೈವೀ ಸ್ವರೂಪ.

ಮೊದಲೇ ಹೇಳಿದಂತೆ, ಬಹಳ ಜನರ ಆಕ್ಷೇಪ ಅಂದರೆ ಇದು ದೊಡ್ಡ ಮಟ್ಟದ ಹಿಪೋಕ್ರಸಿ ಅಲ್ಲವಾ? ನಮಗೆ ಮತ್ತೆ ಇನ್ನೊಬ್ಬರಿಗೆ ನಾವು ಮಾಡುವ ಮೋಸವಲ್ಲವಾ?

ಪ್ರಶ್ನೆ ಒಳ್ಳೆಯದೇ. ಮೇಲ್ಮಟ್ಟಕ್ಕೆ ಹಿಪೋಕ್ರಸಿ ಅಂತ ಅನಿಸುವದೂ ಸಹಜ. ಆದ್ರೆ ನಾವು ನಮ್ಮ ನಿಜ ಸ್ವರೂಪ ದೈವೀ ಸ್ವರೂಪ ಯಾವದು ಅಂತ ಅರ್ಥ  ಮಾಡಿಕೊಂಡು, ಅದನ್ನು ನೆನಪಿಟ್ಟರೆ ಗೊತ್ತಾಗುತ್ತದೆ ಯಾವದು ಹಿಪೋಕ್ರಸಿ ಅಂತ. ಸಿಟ್ಟು, ಅಸಹನೆ, ದ್ವೇಷ, ಕ್ರೌರ್ಯ, ಲೋಭ, ಅಶಾಂತಿ, ನೋವು, ಸಂಶಯ, ನಿರಾಶಾವಾದ ಮುಂತಾದ ಅದೈವೀ ಗುಣಗಳನ್ನು ಪ್ರದರ್ಶಿಸುವದೇ ಹಿಪೋಕ್ರಸಿ. ಯಾಕಂದರೆ ಅವು ನಮ್ಮ ನೈಜ ಗುಣಗಳೇ ಅಲ್ಲ. ಹಾಗಾಗಿ ಒಳ್ಳೆ ಗುಣ ಇಲ್ಲದಾಗಲೂ ಅಥವಾ ಕಮ್ಮಿ ಇದ್ದಾಗ ಅವೇ ನಮ್ಮ ನೈಜ ಗುಣ ಅಂತ ತೋರಿಕೆ ಮಾಡಿದರೆ ತಪ್ಪೇ ಇಲ್ಲ. ಅಷ್ಟೇ ಮುಂದೆ ನಗು ಹಿಂದೆ ಚೂರಿ ಬೇಡ. ಮುಂದೆ ನಕ್ಕು ಎಲ್ಲ ಸರಿ ಇದೆ ಅಂತೆ ಹೇಳಿ ಹೋಗಿ ಬ್ಯಾಕ್ ನಲ್ಲಿ ಬತ್ತಿ ಇಟ್ಟು ಬ್ಲಾಸ್ಟ್ ಮಾಡಿದರೆ ಮಾತ್ರ ಅದು ಹಿಪೋಕ್ರಸಿ ಒಂದೇ ಅಲ್ಲ. ಅದು ಹಿಪೋಕ್ರಸಿ ಮತ್ತೊಂದು ಮಗದೊಂದು ಎಲ್ಲ ಕೂಡಿ ಆದ ಒಂದು ಪೈಶಾಚಿಕ ಸ್ವಭಾವ.

ಇನ್ನು ಈ ವಾದ ತಪ್ಪು. ನಾವು ಹೇಗೆ ಇದ್ದೇವೋ ಅದೇ ನಮ್ಮ ನೈಜ ರೂಪ. ಚೇಂಜ್ ಮಾಡಿಕೊಳ್ಳೋದಿಲ್ಲ ಅಂದರೆ ದೇಹ ಮನಸ್ಸು ಕೊಡುವಷ್ಟು ದಿನ ಎಷ್ಟು ಫೀಡಬ್ಯಾಕ್ ಕೊಡಲು ಸಾಧ್ಯವೋ ಕೊಟ್ಟು ಒಂದು ದಿವಸ - ಸಾರೀ...ಇನ್ನು ಸಾಧ್ಯವಿಲ್ಲ ಅಂತ ಕೈಚಲ್ಲುತ್ತವೆ. ಆಗ ಅದೃಷ್ಟ ಇದ್ರೆ ಏನೋ ಒಂದು ದೈಹಿಕ, ಮಾನಸಿಕ ತೊಂದರೆ ಆಗಿ ಆಸ್ಪತ್ರೆ ಸೇರುತ್ತಾರೆ. ತುಂಬಾ ಹದೆಗೆಟ್ಟು ಹೋದರೆ ಸೀದಾ ಮೇಲೆ. ಸಿಟ್ಟಿನವರಿಗೆ ಬೀಪಿ, ಅಸೂಯೆ ಮಂದಿಗೆ ಅಸ್ತಮ, ಅಸಹನೆ ಜನರಿಗೆ ಎಸಿಡಿಟಿ....ಹೀಗೆ ಒಂದಲ್ಲ ಒಂದು ರೋಗ ಲಕ್ಷಣ ಕಾಣುತ್ತದೆ. ಡಾಕ್ಟರ್ ಕೊಡುವ  ಔಷಧಿ ತಾತ್ಕಾಲಿಕ. ದೃಷ್ಟಿಕೋನ ಬದಲಾಯಿಸಿಕೊಳ್ಳುವದೇ ನಿಜವಾದ ಖಾಯಂ ಮದ್ದು.

ಸ್ಪೂರ್ತಿ:
Personality, Persona, Mask - ಇದರ ಬಗ್ಗೆ ಶ್ರೀ ಏಕನಾಥ್ ಈಶ್ವರನ್ ತುಂಬಾ ಚೆನ್ನಾಗಿ ಇಂಗ್ಲಿಷ್ನಲ್ಲಿ ಬರೆದಿದ್ದಾರೆ.   ಅದನ್ನೂ ಓದಿ. ಲಿಂಕ್ ಇಲ್ಲಿದೆ. ಇನ್ನೊಂದು ಲಿಂಕ್ ಸೇಮ್ ಟಾಪಿಕ್ ಮೇಲೆ.

ಶ್ರೀ ಏಕನಾಥ್ ಈಶ್ವರನ್ ಅವರು ಬರೆದ ಒಂದು ಲೇಖನದಲ್ಲಿ "hypocrisy"  ಬಗ್ಗೆ ತುಂಬಾ ಚನ್ನಾಗಿ ವಿವರಿಸಿದ್ದಾರೆ. ಇಲ್ಲಿದೆ ಲಿಂಕ್. ಪೂರ್ತಿ ಓದಲಾಗದಿದ್ದರೆ "hypocrisy"  ಅಂತ ಪೇಜ್ ಮೇಲೆ ಹುಡುಕಿ. ಎರಡು ಅದ್ಭುತ ಪ್ಯಾರಾಗ್ರಾಪ್ ಇವೆ. ಅಷ್ಟೇ ಓದಿದರೂ ಸಾಕು. ಇನ್ನೊಂದು ಲಿಂಕ್.

ಮಾನವ  ದೇಹದ ರಾಸಾಯನಿಕಗಳ ಬೆಲೆ ಅಂದಾಜು ಮಾಡಿದ ಲಿಂಕ್ ಸಿಕ್ಕಿಲ್ಲ. ಶ್ರೀ ಏಕನಾಥ್ ಈಶ್ವರನ್ ಬರೆದ ಯಾವದೋ ಪುಸ್ತಕದಲ್ಲಿ ಓದಿದ್ದೆ. ಲಿಂಕ್ ಸಿಕ್ಕ ತಕ್ಷಣ ಹಾಕುತ್ತೇನೆ.
-- -- ಮಿತ್ರ ಮಂಗಲಮೂರ್ತಿ ಭಟ್ ಅವರು ಹುಡುಕಿ ಲಿಂಕ್ ಕಳಿಸಿದ್ದಾರೆ. ಇಲ್ಲಿದೆ ಲಿಂಕ್. ನಾವು ಲೆಕ್ಕ ಹಾಕಿದ್ದು ತುಂಬಾ ಜಾಸ್ತಿ ಆಯಿತು. ಇವತ್ತಿನ ಲೆಕ್ಕದಲ್ಲೂ ಮನುಷ್ಯನ ದೇಹವನ್ನು ಮಾಡುವ ರಾಸಾಯನಿಕಗಳ ಬೆಲೆ ೫ ಡಾಲರ್ / ೩೦೦ ರುಪಾಯೀ ಮೀರಿಲ್ಲ. :):) ಲಿಂಕ್ ಕಳಿಸಿದ ಭಟ್ಟರಿಗೆ ಧನ್ಯವಾದ.

2 comments:

Unknown said...

you are correct sir chemical value of human body is $5 almost

link :-
http://chemistry.about.com/b/2011/02/06/how-much-are-the-elements-in-your-body-worth.htm

Mahesh Hegade said...

Thank you, Mangalamurthy Bhat for finding and sharing the link. What an eyeopener!!!! puts things in perspective. Much much less than what I had estimated. Looks like elements making up our body are not affected by inflation! :) :)