Tuesday, August 07, 2012

ಕತ್ತಿಆಯಿನಿ ಬೇಗಂ ಹೋದರೆ ಮೈತೇರಿ ಬೇಗಂ ಬೇಕಂತೆ ಕರೀಂ ಎಂಬ ಯಜ್ಞವಲ್ಕ್ಯನಿಗೆ

ಕರೀಂ ಸಾಬರು ಹರಟಿಗೆ ಸಿಕ್ಕರ ಏನೋ ಮಜಾ. ಏನೇನೋ ಹೇಳ್ತಾರ. ಮಜಾ ಮಜಾ ಸುದ್ದಿ.

ಮನ್ನೆ ಸಿಕ್ಕಾಗ ಮತ್ತ ಬಾಂಬ್ ಹಾಕೇ ಬಿಟ್ಟರು.

ಸಾಬ್.....ನಮ್ಮದು ಬೇಗಂ ನೋಡಿದ್ರೆ ಯಾಕೋ ನಿಮ್ಮ ಪೈಕಿ ಕತ್ತಿಆಯಿನಿ ನೆನಪ ಆಗ್ತದೆ - ಅಂದ ಕರೀಂ.

ಹಾಂ....ಹಾಂ....ಏನಪಾ ಇದು ಕತ್ತಿಆಯಿನಿ? ಯಾವ ಭಾಷಾ ಇದು?...........ಕತ್ತಿಆಯಿನಿ....ತಡಿ ನಾ ಗೆಸ್ ಮಾಡಿ ಹೇಳತೇನಿ....ಕತ್ತಿ ಅಂದ್ರಾ ಕತ್ತಿನಾ ಅರ್ಥಾತ್  ಇಂಗ್ಲಿಷ್ ಡಾಂಕಿ....ಆಯಿನಿ....ಅಂದ್ರಾ ಫ್ರಾಂ ಆಯಿನಾ ರೂಟ್....ಅಂದ್ರಾ ಕನ್ನಡಿ.....ಸೊ ಕತ್ತಿಆಯಿನಿ ಅಂದ್ರಾ ಕನ್ನಡಿಯೊಳಗ ಮಸಡಿ ನೋಡಿಕೊಳ್ಳೋ ಕತ್ತಿ ಅಂತ ಅರ್ಥಾ ಏನು?......ಏನಪಾ ನೀನು ಬೇಗಂಗೆ ಕತ್ತಿ ಅದು ಇದು ಅಂತಿ ಅಲ್ಲೋ....ಛೆ!!!! ಛೆ!!!

ಇದು ನಮ್ಮ ತಲಿಗೆ ಬಂದಿರಲಿಲ್ಲ ನೋಡಿ ಸಾಬ್....ಅದು ನಮ್ಮ ಬೇಗಂ ಶಂಬರ್ ಟಕಾ ಕತ್ತಿನೇ ಅದೇ.....ಕನ್ನಡಿ ಒಳಗೆ ನೋಡಿಕೊಂಡರೆ  ಕುದರಿ ಆಗ್ತದೆ ಕ್ಯಾ?.......ಅದು ಅಲ್ಲಾ ಸಾಬ್  ನಾವ್ ಹೇಳಿದ್ದು.  ಅದು ನಿಮ್ಮ ಪೈಕಿ ಒಬ್ಬ ಋಷಿ ಹೆಂಡ್ತಿ ಕತ್ತಿಆಯಿನಿ.......ಆಕಿ ಬಗ್ಗೆ....ಅಂತ ಹೇಳಿ ನಮ್ಮ ಪುರಾಣದ ಯಾವದೋ ಕಥಿ ಹೇಳಲಿಕ್ಕೆ ಪ್ರಯತ್ನ ಮಾಡಲಿಕತ್ತೇನಿ ಅನ್ನೋ ಲುಕ್ ಕೊಟ್ಟ.

ಯಾವ ಋಷಿ ಹೆಂಡತಿಯೋ......ಮಾರಾಯಾ?

ಅದೇ  ಸಾಬ್....ಒಬ್ಬರು ಇದ್ದರು ನೋಡಿ....ಅವರ ಹೆಸರು ಏನೋ....ಯಾಜಿವಲ್ಕ್ಯಾ ಅಂತೆ.....ನೋಡಿ.....ಅವರಿಗೆ ಇಬ್ಬರು ಬೇಗಂ....ಒಬ್ಬಾಕಿ ಇಕಿ ಕತ್ತಿಆಯಿನಿ. ಇನ್ನೊಬ್ಬಾಕಿ ಮೈತೇರಿ....ಅಂತ ನಿಮ್ಮ ಸಂಸ್ಕೃತದ ಕೊಲೆ ಮಾಡಿ ಮುಗಿಸಿದೆ ಅಂತ ಅನ್ನೋರಾಂಗ ಸುಮ್ಮನಾದ.

ಯಾ ವಲ್ಕ್ಯಾನೋ? ವಲ್ಲ್ಯಾ ಅಂತ ದೋಸ್ತನ ಒಬ್ಬನ್ನ ಬಿಟ್ಟರ ಯಾ ವಲ್ಕ್ಯಾನೂ ಗೊತ್ತಿಲ್ಲೋ...ಯಾವದರ ಹೊಸ ಋಷಿ ಮುನಿ ಏನು ಮತ್ತಾ?.....ಅಂತ ತಲಿ ಕೆರಕೊತ್ತ ಕೇಳಿದೆ. ಏನರ ಹೇಳ್ತಾನ ಹಾಪನ್ನ ತಂದು.

ಅಲ್ಲಾ ಸಾಬ್.....ತುಂಬಾ ಹಿಂದೆ.....ಅದು ಯಾವದೋ ನಿಮ್ಮಾ ವೇದಾ, ಉಪ್ಪಿನಶೆಟ್ಟಿ ಕಾಲದ ಋಷಿ ಅಂತೆ ನೋಡಿ.....ಅಂದ ಕರೀಂ.

ಹೋಗ್ಗೋ ಸಾಬ್ರಾ....ಏನ ಭಾಷಾರಿ ನಿಮದು? ಅದು ಉಪನಿಷತ್ತು ಅಂತ ಇರಬೇಕ ನೋಡ್ರೀ....ಅದಕ್ಕ ಉಪ್ಪಿನಶೆಟ್ಟಿ ಅಂತ ಅಂತೀರಲ್ಲರೀ.....ಕರ್ಮ, ಕರ್ಮ......ಅಂತ ಹಣಿ ಹಣಿ ಬಡಕೊಂಡೆ.

ವೇದ, ಉಪನಿಷತ್ತಿನಲ್ಲಿ ಬರುವ ಯಾರಪಾ ಈ ಮಂದಿ.....ಕತ್ತಿಆಯಿನಿ, ಯಾಜಿವಲ್ಕ್ಯಾ, ಮೈತೇರಿ......ಅಂತ ತಲಿ ಕೆಡಿಸಿಕೊಂಡೆ. ಆದ್ರಾ ತಿಳಿಲಿಲ್ಲ.

ಸಾಬ್ರಾ.....ಸ್ವಲ್ಪ ಕಥಿ ಹೇಳ್ರೀ.......... ನೋಡೋಣಾ.....ಏನರ ಹೊಳಿತದೋ ಏನು ಅಂತ.....ಅಂದೆ.

ಸಾಬ್ ಅದೇ....ಆ ಋಷಿ ವಲ್ಕ್ಯಾ ನಾನು ಎಲ್ಲಾ ಬಿಟ್ಟಬಿಟ್ಟಿ ಫಕೀರ್ ಆಗ್ತೀನಿ ಅಂತಾನೆ. ಇಬ್ಬರೂ ಬೇಗಂ ಗೆ ಕೇಳ್ತಾನೆ.....ನಿನಗೆ ಏನು ಬೇಕು? ನಿನಗೆ ಏನು ಬೇಕು? ಆಸ್ತಿ ಭಾಗ ಮಾಡಿ ಕೊಡ್ತೀನಿ ಅಂತಾನೆ. ಆವಾಗ ಕತ್ತಿಆಯಿನಿ ಬೇಗಂ ಅವನಿಗೆ ಆಸ್ತಿ ಕೊಟ್ಟು ಭಾಗೋ ಭಾಡ್ಕೊವ್ ಅಂತಾಳೆ. ಆದ್ರೆ ಮೈತೇರಿ ಬೇಗಂ ಮಾತ್ರ ನನಗೆ ಆಸ್ತಿ ಪಾಸ್ತಿ ಏನೂ ಬೇಡ. ನೀನೇ ಬೇಕು. ನಿನ್ನಾ ಕಡೆ ಇರೋ ಜ್ಞಾನ ಬೇಕು ಅಂತಾಳೆ.....ನೆನಪ ಆಯ್ತು ಕ್ಯಾ?.....ಅಂತ ಅವನ ರೀತಿಯೋಳಗ ಅವನ ಉಚ್ಚಾರದ ಪ್ರಕಾರ ಕಥಿ ಹೇಳಿದ ಕರೀಂ.

ಸಾಬ್ರಾ....ಸಾಬ್ರಾ.....ಇದು ಯಜ್ಞವಲ್ಕ್ಯ, ಕಾತ್ಯಾಯಿನಿ ಮತ್ತು ಮೈತ್ರೇಯಿ ಕಥಿ ಏನ್ರೀ? ಹಾಂ....ಹಾಂ? ಹೌದೇನು?......ಏನ ಅಪಭ್ರಂಶ ಮಾಡಿ, ಕುಲಗೆಡೆಸಿ ಹೇಳ್ತೀರಿಪಾ.....ನೀವೋ ನಿಮ್ಮ ಭಾಷಾನೋ...... ಅಂತ ಅಂದೆ.

ಹಾಂ....ಅದೇ ನೋಡಿ ಸಾಬ್. ಏಕದಂ ಬರಾಬರ್. ಅದೇ ಸ್ಟೋರಿ. ಅದು ನಿಮ್ಮ ವೇದಾದಲ್ಲಿ ಬರೋದಿಲ್ಲ ಕ್ಯಾ?....ಅಂದ ಕರೀಂ.

ಹೌದಪಾ.....ಹೌದು. ಬೃಹದಾರಣ್ಯಕ ಉಪನಿಷತ್ತಿನಲ್ಲಿ  ಯಜ್ಞವಲ್ಕ್ಯ, ಕಾತ್ಯಾಯಿನಿ ಮತ್ತು ಮೈತ್ರೇಯೀ ಕಥಿ ಬರೋದು. ಹೌದು. ಏನೀಗ?.......ಅಂತ ಕೇಳಿದೆ. ಒಳ್ಳೆ ಇಮಾಂಸಾಬಿ ಗೋಕುಲಾಷ್ಟಮಿ ಸಂಬಂಧ ಆದಂಗ ಆತು ಇದು.

ನೋಡಿ  ಸಾಬ್.....ನಾನು ನಮ್ಮ ಹಾಪ್ ಬೇಗಂ ಕಾಟದಿಂದ ಸಾಕಾಗಿ ಎಲ್ಲಾ ಬಿಟ್ಟು ಫಕೀರ್ ಆಗೋಣಾ ಅಂತ ಹೊಂಟರೆ ಇಕಿ ಕತ್ತಿಆಯಿನಿ ಗತೆ ಮಾತಾಡೋದು ಕ್ಯಾ?.....ಅಂದ ಕರೀಂ.

ಏನು ಅಂದಳು?.....ಅಂದೆ.

ಅಲ್ಲಾ ಸಾಬ್......ಆಸ್ತಿ ಪಾಸ್ತಿ ನಮ್ಮದು ಹೆಸರಿಗೆ ಬರೆದು ಹಾಳು ಬಿದ್ದು ಹೋಗು. ಫಕೀರ್ ಆಗು ಯಾ ಮತ್ತೊಂದು ಆಗು. ನಮಗೆ ಕ್ಯಾ? ನಮ್ಮದು ಕಡೆ ಗೆಲಾಕ್ಸಿ ಅದೇ, ಫೇಸ್ಬುಕ್ ಅದೇ, ಪುರಾನೇ ಆಶಿಕ್ ಇದಾರೆ. ನಿನ್ನ ಗತೆ ಇರೋ ಬಾಲ್ಡೀ ಬುಡ್ಡಾಗೆ ಯಾರು ಕೇರ್ ಮಾಡ್ತಾರೆ.....ಭಾಗ್ ಸಾಲೆ.....ಅಂತ ಅಂದು ಬಿಡೋದೇ ಸಾಬ್....ಅಂತ ತೊಬಾ ತೊಬಾ ಫೀಲಿಂಗ್ ನಲ್ಲಿ ಹೇಳಿದ.

ಅದಕ್ಕ ಮತ್ತ ಕತ್ತಿಆಯಿನಿ....ಛೀ....ಛೀ....ಕಾತ್ಯಾಯಿನಿಗೆ ಏನ್ರೀ ಸಂಬಂಧ?.....ತಿಳಿಲಿಲ್ಲ ನನಗೆ.

ಅಲ್ಲಾ ಸಾಬ್....ನಿಮಗೆ ಕಥಿ ಗೊತ್ತಿಲ್ಲಾ ಕ್ಯಾ? ಅದು ನಿಮ್ಮ ಯಜ್ನಾವಲ್ಕ್ಯಾ ಋಷಿ ಸನ್ಯಾಸಿ ಆಗಿ ಹೋಗ್ತೇನಿ ಅಂದ ಕೊಡಲೇ ನನಗೆ ಬೇಕಾದದ್ದು ಕೊಟ್ಟು ಭಾಗ್ ಸಾಲೆ ಅಂದವಳು ಕತ್ತಿಆಯಿನಿ ಅಲ್ಲ ಕ್ಯಾ?.....ಏನು ನಿಮಗೆ ನಿಮ್ಮದೇ ಪುರಾಣ ಅದು ಇದು ಗೊತ್ತಿಲ್ಲ. ಫುಲ್ ಬುರ್ನಾಸ್ ಸಾಬ್.....ಅಂತ ನನಗಾ ಬೈದ.

ಓಹೋ....ಹಾಂಗ ನಿನ್ನ ಅರ್ಥ. ನಿನ್ನ ಬೇಗಂ ನಿನಗ ಹೊಗೊದಾದ್ರ ಹೋಗು ಅಂದ ಬಿಟ್ಟಳು ಅಂತ ಅಕಿಗೆ ಕಾತ್ಯಾಯಿನಿ ಅಂತ ಅಂದು ಬಿಟ್ಟಿ ಏನು? ತಥ್ ನಿನ್ನ......ಏನೇನೋ ಅಲ್ಲೇ ಇಲ್ಲೇ ಸ್ವಲ್ಪ ಓದ್ಕೊತ್ತೀ, ಹುಚ್ಚುಚ್ಚರಗತೆ ಮಾತಾಡತಿ....ಹಾಂ.....ಅಂತ ಅಂದೆ.  ಅಲ್ಲೆ ಬರೋ ಕಥಿ ಏನು......ಈ ಹಾಪಾ ಹೇಳೋ ರೀತಿ ಏನು.....ಸ್ವಚ್ಛ ಹಾಪ್.

ಸಾಬ್ರಾ.....ಒಟ್ಟಿನ್ಯಾಗ ನೀವು ಯಜ್ಞವಲ್ಕ್ಯಾ, ನಿಮ್ಮ ಬೇಗಂ ಕತ್ತಿಆಯಿನಿ. ತಿಳೀತು. ಈಗ ಮೈತೇರಿ ಯಾರು?....ಅಂತ ಸಾಬರು ತಮ್ಮ ಶೈಲಿಯಾಗ ಮೈತ್ರೇಯಿ ಬಗ್ಗೆ ಏನು ಹೇಳ್ತಾರ ಅಂತ ನೋಡೋಣ ಅಂತ ಕೆಟ್ಟ ಕುತೂಹಲ.

ಸಾಬ್....ನಿಮಗೆ ಮೈತೇರಿ ಕಥಿ ಗೊತ್ತು....ಕ್ಯಾ? ಅಕಿ ನಿಮ್ಮ ಋಷಿ ಕಡೆ ಬರೆ ಅಭ್ಯಾಸ ಮಾಡಲಿಕ್ಕೆ ಬಂದಿದ್ದಳು. ಅಕಿಗೆ ಋಷಿ ಅವರನ್ನ ಶಾದಿ ವಾದಿ ಆಗೋದು ಬೇಕಾಗಿರಲಿಲ್ಲ. ಆದರೂ ಋಷಿ ಅವರು ಹೇಳಿದರು ಅಂತ ಶಾದಿ ಆಗ್ಬಿಟ್ಟು, ವಿದ್ಯಾನೂ ಕಲಿತಳು. ಆಮೇಲೆ ಋಷಿ ಅವರು ಬಿಟ್ಟು ಹೊಂಟೆ, ಏನು ಕೊಡಲಿ ಅಂದ ಕೂಡಲೇ, ಕೊಡುದು ಏನೂ ಬ್ಯಾಡ, ವಿದ್ಯಾ ಪೂರ್ತಿ ಕಲಿಸಿ ಜೊತಿಗೆ ಕರಕೊಂಡ ಹೋಗ್ರೀ ಅಂದಳು. ಗೊತ್ತು ಕ್ಯಾ? ಎಷ್ಟು ಒಳ್ಳೆ ಬೇಗಂ ಮೈತೇರಿ......ಅಂತ ಮೈತ್ರೇಯಿ ಕಥಿ ಅವಂಗ ತಿಳಿದಾಂಗ ಹೇಳಿ ಮುಗಿಸಿದ.

ಸಾಬ್ರಾ.....ಅಕಿ ಮೈತೇರಿ ಅಲ್ಲ....... ಮೈತ್ರೇಯಿ..... ಮೈತ್ರೇಯಿ.....ಅಂತ.....ಸರಿತ್ನಾಗಿ ಹೇಳ್ರೀ....ಓಕೆ?....ಅಂತ ಸ್ವಲ್ಪ ತಿದ್ದಿದೆ.

ನಾಮ್ ಮೇ ಕ್ಯಾ ಹೈ ಸಾಬ್.....ಯಾವಾಗಲೂ ಋಷಿ ವಲ್ಕ್ಯಾ ಗೆ "ಮೈ ತೇರಿ ಹೂನ್" "ಮೈ ತೇರಿ ಹೂನ್" ಅನಕೋತ್ತಾ ಅವರ ಜೊತಿಗೇ ಇದ್ದಳು ಅಂತ ಅಕಿಗೆ ನಿಮ್ಮ ಸಂಸ್ಕೃತ ಭಾಷಾದಾಗೆ ಮೈತ್ರೇಯೀ ಅಂತ ಹೆಸರು ಬಂತು ಕ್ಯಾ?....ಅಂತ ಸಿಕ್ಕಾಪಟ್ಟೆ ಜನರಲ್ ನಾಲೇಜ್ ಬಾಂಬ್ ಹಾಕಿಬಿಟ್ಟ.

ಎಲ್ಲಿ ಇವನ ತಪ್ಪು ತಪ್ಪು ಮೈತೇರಿ ಉಚ್ಚಾರ, ಎಲ್ಲಿ ಮೈತ್ರೇಯಿ ಅನ್ನೋ ಹೆಸರು. ಆದರೂ ಮಸ್ತ ಕನೆಕ್ಷನ್ ಮಾತ್ರ ಕೊಟ್ಟಾನ. ಅವಂದ ರೀತಿಯೋಳಗ ಆದರೂ, ಏನೇನೋ ಲಾಜಿಕ್ ಹಚ್ಚತಾನ. ನಮಗ ಮಾತ್ರ ಫುಲ್ ಪುಖಟ್ ಮಜಾ.

ಆತ್ರೀ ಸಾಬ್ರಾ....ನಿಮ್ಮ ಬೇಗುಂ ಒಟ್ಟಿನ್ಯಾಗ ಕಾತ್ಯಾಯಿನಿ ಹಾಂಗ ನಿಮಗ ಕಾಣ್ತಾಳ. ನಿಮ್ಮ ಬಾಯಾಗ ಕತ್ತಿಆಯಿನಿ ಆದಳು. ಮನಸ್ಸಿನ್ಯಾಗ ಇದ್ದಿದ್ದು ನಿಮ್ಮ ಬಾಯಾಗ ಬಂತು ಅನ್ನಸ್ತದ. ಕಾಕತಾಳೀಯ ಅಂತ ಇದಕ್ಕ ಅಂತಾರೇನೋ?.....ಅಂದೆ. ಏನು ಭಾರಿ ಆಕಸ್ಮಿಕ ಅಂತ ಅನ್ನಿಸ್ತು.

ಸಾಬ್ರಾ.....ನಿಮ್ಮಾ ಬೇಗಂ ಕತ್ತಿಆಯಿನಿ ಆದ್ರಾ, ನಿಮ್ಮ ಮೈತೇರಿ ಯಾರ್ರೀ?.....ಅಂತ ಕೇಳಿದೆ. ಸಾಬರು ಮತ್ತ ಸೈಡಿನ್ಯಾಗ ಎಲ್ಲರ ಮೈತೇರಿ ಅಂತ ಸ್ಟೆಪ್ನೀ ಇಟ್ಟಾರೋ ಏನು ಅಂತ ಗುಮಾನಿ.

ನಮ್ಮದು ಕಡೆ ಎಲ್ಲಿ ಮೈತೇರಿ ಸಾಬ್? ನಾವು ನಿಮ್ಮ ಋಷಿಗತೆ ಕ್ಯಾ? ನಮಗೆ ನಮ್ಮ ಕತ್ತೆ ಬೇಗಂ ಬಿಟ್ಟರೆ ಯಾರೂ ಇಲ್ಲಾ ಸಾಬ್.....ಗಧಿ ಕಹೀನ್ ಕಿ..........ಅಂತ ಅಂದು ತಲಿ ಹಿಡಕೊಂಡು ಕೂತಬಿಟ್ಟ.

ಚಿಂತಿ ಮಾಡಬ್ಯಾಡ್ರಿ ಸಾಬ್ರಾ......ನೀವು ಹಿಂಗಾ ಉಪನಿಷತ್ತು ಅದು ಇದು ಓದಿಕೋತ್ತ ಹೋಗ್ರಿ. ನಿಮ್ಮ ಜ್ಞಾನದಿಂದ ಪ್ರಭಾವಿತ ಆಗಿ ಯಾರರ ಮೈತ್ರೇಯಿ ಬಂದಳೂ ಬಂದಳು. ಸ್ವಲ್ಪ ಸಹನಾ ತೊಗೊರೀ...ಸರ್ರಾ....ಅಂದೆ.

ಸಹನಾ ಯಾರು ಸಾಬ್? ಚೋಕ್ರೀ ಕ್ಯಾ? ಹಾಂ?......ಅಂತ ಕೇಳಿದಾ ಹಾಪ್ ಕರೀಂ.

ಹೋಗ್ಗೋ ನಿನ್ನಾ.....ಸಹನಾ ಅಂದ್ರಾ ಪೇಷನ್ಸ್....ನಿಮ್ಮ ಭಾಷಾದಾಗ ಸಬರ್....ಸಬರ್....ಖಬರಗೇಡಿ....ಸಹನಾ ಅಂದ್ರ ಹುಡುಗಿ ಅಂತ ಕೇಳ್ತಿಯಲ್ಲೋ? ತಲಿ ಗಿಲಿ ಅದನೋ ಇಲ್ಲೋ?.....ಅಂತ ಬೈದಾಂಗ ಮಾಡಿದೆ.

ಓಹೋ...ಸಬರ್....ಸಬರ್....ಎಲ್ಲಿಂದ ಸಬರ್ ಕಲಿಯೋದು ಸಾಬ್?.....ಅಂತ ಕೇಳಿದ ಕರೀಮ.

ಸಾಬ್ರಾ.....ನಿಮ್ಮ ಪುಣ್ಯಗ್ರಂಥ ಕುರಾನ್ ಒಳಗ ಎಂಟನೇ ಸುರಾ ಓದ್ರೀ. ಅದು ಫುಲ್ ಸಹನಾ, ಪೇಷನ್ಸ್, ಸಬರ್ ಮ್ಯಾಲೆ ಅದ ನೋಡ್ರೀ.....ಅಂತ ನಮಗ ಇದ್ದ ಸ್ವಲ್ಪ ಜ್ಞಾನ ತೋರ್ಸಿದೆ.

ಸಾಬ್.....ಕ್ಯಾ ಸಾಬ್ ಇದು? ನಿಮಗೆ ನಮ್ಮ ಗ್ರಂಥಾ ಬಗ್ಗೆ ಗೊತ್ತು ಕ್ಯಾ? ಬಹುತ್ ಖೂಬ್.....ನೀವೂ ಓದೀರೀ ಕ್ಯಾ?....ಅಂತ ಕೇಳಿದ ಕರೀಂ.

ಇಲ್ಲಪಾ....ಪೂರ್ತಿ ಏನು ಓದಿಲ್ಲ. ಆದ್ರ ನಮ್ಮ ಗುರುಗಳು ಎಲ್ಲ ಧರ್ಮದ ಗ್ರಂಥ ಅದು ಇದು ಓದಿಕೊಂಡು ಎಲ್ಲೋ ಹೇಳಿದ್ದರು.....ಕುರಾನ್ ನಲ್ಲಿ ಎಂಟನೇ ಸುರಾದಾಗ ಸಹನೆ ಮ್ಯಾಲೆ ಭಾಳ ಚೊಲೋ ಹೇಳ್ಯಾರ ಅಂತ.....ಅಷ್ಟ ಗೊತ್ತ ನೋಡಾಪಾ.....ಅಂತ ಹೇಳಿದೆ.

ಓಕೆ...ಸಾಬ್....ನಾನು ಮತ್ತೆ ನಮ್ಮದು ಹಳೆ ಪುಸ್ತಕ ತೆಗೆದು ಓದ್ತೇನಿ....ಆ ಮ್ಯಾಲೆ ಬಂದು ನಿಮಗೆ ಹೇಳತೇನಿ. ಈಗ ಬರ್ತೀನಿ ಸಾಬ್. ಖುದಾ ಹಾಫಿಜ್...ಅಂತ ನಮ್ಮ  ಲೋಕಲ್ ಯಜ್ಞವಲ್ಕ್ಯ ಉರುಫ್ ಕರೀಂ ಹೋದ. ನಾನೂ ಹೊಂಟು ಬಂದೆ.

ಈ ಬೃಹದಾರಣ್ಯಕ ಉಪನಿಷತ್ತಿನಲ್ಲಿ ಇರೋದು ಏನು ಅಂತ ವಿಚಾರ ಬಂತು.

** ಬೃಹದಾರಣ್ಯಕ ಉಪನಿಷತ್ತಿನಲ್ಲಿ ಯಜ್ಞವಲ್ಕ್ಯ, ಕಾತ್ಯಾಯಿನಿ, ಮೈತ್ರೇಯಿ ಮಧ್ಯೆ ಆಗುವ ಸಂವಾದ ಒಂದು ಅದ್ಭುತ ಅಧ್ಯಾತ್ಮಿಕ ಸಂಭಾಷಣೆ ಅಂತ ಪರಿಗಣಿಸಲ್ಪಡುತ್ತದೆ. ಜಾಸ್ತಿ ಇರುವದು ಯಜ್ಞವಲ್ಕ್ಯ ಮತ್ತು ಮೈತ್ರೇಯಿ ನಡುವೆ. ಆಸಕ್ತರು ಇಲ್ಲಿ ಅದನ್ನು ಓದಬಹದು.  

** ಕುರಾನಿನ ಸುರಾ ಎಂಟರಲ್ಲಿ 'ಸಹನೆ' ಬಗ್ಗೆ ಹೇಳಲಾಗಿದೆ ಅಂತ ಎಲ್ಲೋ ಓದಿದ ನೆನಪು. ಕುರಾನಿನ ಇತರೆ ಕಡೆಯಲ್ಲೂ ಹೇಳಲಾಗಿದೆಯಂತೆ. ಆಸಕ್ತರು ಈ ಪಿಡಿಎಫ್ ಡಾಕುಮೆಂಟ್ ಓದಬಹುದು.

No comments: