Saturday, September 01, 2012

ಮದರಂಗಿ ಮಂಗಿ. ತಿರಂಗಿ ತುಂಗಿ. ಸಾತರಂಗಿ ಸಂಗಿ.

ಕರೀಂ ಮತ್ತ ಸಿಕ್ಕಿದ್ದ.

ಈಗಿತ್ತಲಾಗ ಯಾಕೋ ಡಲ್ ಆಗ್ಯಾನ. ಬೇಗಂ ಹೆಚ್ಚಗಿ ಹಾಪ್ ಆದಂಗ ಇವ ಜಾಸ್ತಿ ಡಲ್. ಅಕಿನ ಹೋಗಿ ದರ್ಗಾಕ್ಕ ಬಿಟ್ಟು ಬಾರೋ, ಅಲ್ಲೆ ದಿನಾ ಮೂರ ಸರೆ ಬೇವಿನ ತೊಪ್ಪಲದಿಂದ ಝಾಡಿಸ್ತಾರ, ಒಂದೆರಡು ವರ್ಷ ಆದ ಮ್ಯಾಲೆ ಸರಿ ಆದರೂ ಆದಳು....ಅಂತ ಹೇಳಿದ್ರ ಕೇಳಂಗಿಲ್ಲ. 

ಮದುವಿಯಾದ ಮ್ಯಾಲ ಹುಚ್ಚು ಬಿಡ್ತದ ಅಂದ್ರ ಇವಂಗ ಮತ್ತ ಇವನ ಹೆಂಡತಿಗೆ ಇಬ್ಬರಿಗೂ ಮದುವಿಯಾದ ಮ್ಯಾಲ ಹುಚ್ಚು ಹಿಡದ ಬಿಟ್ಟದ. ಎಲ್ಲಾ ವಿಚಿತ್ರ.

ಯಾಕೋ ಕರೀಂ? ಏನ ಸುದ್ದಿ ಮತ್ತ? ಎಲ್ಲಾ ಆರಾಮ ಏನಪಾ? - ಅಂದೆ.

ಎಲ್ಲಿದು ಆರಾಮ ಸಾಬ್? ಬೇಗಂ ಫುಲ್ "ಹೆಡ್ ಲೈಟಿಂಗ್" ಮಾಡಿಕೊಂಡುಬಿಟ್ಟಿದೆ. ಅಕಿ ಬುರ್ಕಾ ಹಾಕದೆ ಹೊರಗೆ ಹೊಂಟಳು ಅಂದ್ರೆ ನೋಡಿದವರು ಬೆಚ್ಚಿ ಬೀಳಬೇಕು ಹಾಂಗೆ ಅವತಾರ ಮಾಡಿಕೊಂಡಿದೆ ಯಬಡಿ ಬೇಗಂ. ಅಕಿ ಜೊತಿ ಹೋಗಬೇಕು ಅಂದ್ರೆ ನಾನು ಬುರ್ಕಾ ಹಾಕಿಕೊಂಡು ಹೋಗಬೇಕು. ಅಷ್ಟು ಶರಮ್ ಬರೋ ಹಾಗೆ ಆಗಿ ಬಿಟ್ಟಿದೆ. ಎಲ್ಲಾ ನಮ್ಮದು ನಸೀಬ್. ಯಾ ಖುದಾ. ಯಾಕೆ ಇಷ್ಟು ತೊಂದ್ರೆ ನಮಗೆ ಪರ್ವರ್ದಿಗಾರ್? - ಅಂತ ಹೇಳಿ ಕೂತ ಬಿಟ್ಟ.

ಏನಂದ್ರೀ? "ಹೆಡ್ ಲೈಟಿಂಗ್"? ಅಂದ್ರ? ನಿಮ್ಮ ಬೇಗಂ ತಲಿಗೆ ಹೆಡ್ ಲೈಟ್ ಫಿಕ್ಸ್ ಮಾಡಿಕೊಂಡಾರ ಏನು? ಅಲ್ಲಾ...ರಾತ್ರಿ ಎದ್ದು ಸಂಡಾಸಕ್ಕ ಹೋಗು ಮುಂದ ಬ್ಯಾಟರೀ ಕೈಯಾಗ ಯಾಕ ಹಿಡಕೊಂಡು ಹೋಗುದು? ತಲಿಗೇ ಫಿಕ್ಸ್ ಮಾಡಿಕೊಂಡುಬಿಟ್ಟರ, ಒಂದ ಕೈಯಾಗ ಚಂಬು, ಇನ್ನೊಂದು ಕೈಯಾಗ ಸ್ಯಾಮ್ಸಂಗ್ ಗೆಲಾಕ್ಸಿ ಫೋನ್ ಹಿಡಕೊಂಡು, ಫೇಸ್ಬುಕ್ ಮ್ಯಾಲೆ ಮಂಗ್ಯಾತನ ಮಾಡಿಕೋತ್ತ ಹೋಗಬಹುದು ಅಂತ ಅವರ ಐಡಿಯಾ ಇರಬೇಕು. ಅಲ್ಲ? ಶಿಕಾರಿ ಮಾಡಲಿಕ್ಕೆ ಹೋಗೋ ಮಂದಿ ತಲಿಗೆ ಹೆಡ್ ಲೈಟ್ ಹಾಕ್ಕೊಂಡಿರ್ತಾರ ನೋಡು. ಅಂತಾ ಹೆಡ್ ಲೈಟ್ ಏನಪಾ? - ಅಂತ ಕೇಳಿದೆ.

ಕರೀಮಂದು ಹೇಳಿ ಕೇಳಿ ಸವಣೂರ ನವಾಬರ ವಂಶ. ದೊಡ್ಡ ವಾಡೆ ಅದ. ಸಂಡಾಸ್ ಮನಿ ಹಿಂದ ದೂರ ಅದ. ರಾತ್ರಿ ಕತ್ತಲು ಬ್ಯಾರೆ. ಬ್ಯಾಟರೀ ಬೇಕು. ಬ್ಯಾಟರೀ ಕೈಯಾಗ ಬ್ಯಾಡ ಅಂತ ಹೇಳಿ ತಲಿಗೇ ಹೆಡ್ ಲೈಟ್ ಫಿಕ್ಸ್ ಮಾಡ್ಸಿಕೊಂಡಾಳ ಅಂತ ಅನ್ನಸ್ತದ.

ಅಯ್ಯೋ.....ಅಲ್ಲ ಸಾಬ್. ತಲಿಗೆ ಎಲ್ಲಿದು ಬ್ಯಾಟರೀ? ಹಾಂಗೇನೂ ಇಲ್ಲ. ಈಗ ಮತ್ತ ನಮ್ಮದೂಕಿ ವಾಡೆನಲ್ಲಿ ಅಷ್ಟು ದೂರ ಸಂಡಾಸ್ ಗೆ ಹೋಗುದು ಬೇಕಾಗಿಲ್ಲ. ಈ ಹೊಸ ಬೇಗಂ ಬಂದ ಕೂಡಲೇ ಮನಿ ಒಳಗೇ ಒಂದು ಕಮೋಡ್ ಸ್ಟೈಲಿನಲ್ಲಿ 5-6 ಲಕ್ಷ ರೂಪಾಯಿ ಖರ್ಚ ಮಾಡಿ, ನಮ್ಮದು ತಲಿ ಬೋಳ್ಸಿ ಹೊಚ್ಚ ಹೊಸ ಅಂಗ್ರೇಜಿ ಪಾಯಖಾನಾ ಕಟ್ಟಿಸಿಬಿಟ್ಟಿದ್ದಾಳೆ. ಅದು ಅಕಿ ಒಬ್ಬಾಕಿ ಉಪಯೋಗಕ್ಕೆ ಮಾತ್ರ. ಬಾಕಿ ಯಾರೂ ಅಲ್ಲಿ ಹೋಗೋ ಹಾಗಿಲ್ಲ. ಅದು ಯಾವಾಗಲೂ ಘಂ ಘಂ ಅನ್ನುವ ಹಾಗೆ ಏನೇನೋ ಪರ್ರ್  ಪರ್ರ್ ಅಂತಾ ಸ್ಪ್ರೆ ಮಾಡ್ತಾಳೆ. ಒಟ್ಟಿನಲ್ಲಿ ಪಾಯಖಾನಿ ಕಟ್ಟೋಕೆ ನಮ್ಮದೂಕಿ ರೊಕ್ಕಾ. ರಾತ್ರಿ ಎದ್ದು ನಾವು ಮಾತ್ರ ಮನಿ ಹಿಂದೆ ಒಂದು ಫರ್ಲಾಂಗ್ ದೂರ ಇರೊ ಸಂಡಾಸ್ ಗೆ ಹೋಗಬೇಕು. ಅಲ್ಲಿ ಹಾವು ಹರಣಿ ಬೇರೆ ಅವೇ. ಇಲ್ಲಿ ಈ ಹಾವರಾಣಿ ಬೇಗಂಗೆ ಮಾತ್ರ ಮನಿ ಒಳಗೇ ಇರುವ ಅಂಗ್ರೇಜಿ ಸಂಡಾಸ್. ಥತ್! ಜಿಂದಗೀನೆ ಹಾಳಾಗ್ ಬುಟ್ಟೈತೆ. ಈ ಮಂಗ್ಯಾ ಬೇಗಂ ಜೊತೆ ಶಾದಿ ಆಗಿ ಬಿಟ್ಟೈತೆ - ಅಂತ ಊದ್ದ ಕಥಿ ಹೇಳಿದ ಕರೀಂ.

ದೊಡ್ಡ ಸುದ್ದಿ ಆತಲ್ಲರೀ ಸಾಬ್ರಾ? ಎಲ್ಲಿ ಕಟ್ಟಿಸಿಕೊಂಡಾಳ ಹೊಸಾ ಪಾಯಖಾನಿ? - ಅಂತ ಕೇಳಿದೆ.

ಅದೇ ಸಾಬ್. ನಿಮಗೆ ಯಾದ್ ಐತೆ ಕ್ಯಾ? ನಮ್ಮದು ವಾಡೆಯೊಳಗೆ ದೋಸ್ತ ಮಂದಿ ಜೊತೆ ಶರಾಬ್ ಕುಡೀತಾ, ಮುಜರಾ ನೋಡೋ ಒಂದು ದೊಡ್ಡ ಹಾಲು ಇತ್ತು ನೋಡಿ. ಅದರಲ್ಲಿ ಒಂದಿಷ್ಟು ಜಾಗ ತೊಗೊಂಡು ಬಿಟ್ಟಿ ಅಲ್ಲೇ ಅಕಿದು ಅಂಗ್ರೇಜಿ ಪಾಯಖಾನಾ. ಈಗ ಅಲ್ಲಿ ನಮಗೆ ಪಾರ್ಟಿ ಮಾಡೋ ಹಾಗೇ ಇಲ್ಲ. ಮಾಡಲಿಕ್ಕೆ ಇಕಿ ಬಿಡೋದೂ ಇಲ್ಲ. ಪಾಯಖಾನಿ ಮುಂದೆ ಕ್ಯಾ ಪಾರ್ಟಿ ಸಾಬ್? ಒಟ್ಟಿನಲ್ಲಿ ನಮ್ಮದು ಒಂದು ಬೆಸ್ಟ್ "ಮೆಹಖಾನಾ" (ದೊಡ್ಡ ಹಾಲ್) ಹೋಗ್ಬಿಟ್ಟಿದೆ - ಅಂತ ಹೇಳಿದ ಕರೀಂ.

ಹೋಗ್ಗೋ ಸಾಬ್ರಾ. ನಿಮ್ಮ ಮೆಹಖಾನಾ ಹೋಗಿ ಇಕಿ ಪಾಯಖಾನಾ ಆಗಿ ಹೋತಲ್ಲರೀ. ಏನೋ ಒಂದು ಖಾನಾ. ದುಷ್ಟ ಬುದ್ಧಿ. ಎಂತಾ ಚಂದ ಇತ್ತು ನಿಮ್ಮ ಮೆಹಖಾನಾ ಹಾಲ್. ಅಲ್ಲೆ ನಿಮ್ಮ ಮಾಮೂಜಾನ್ ಬಂದಾಗ ಎಂತೆಂತಾ ಪಾರ್ಟಿ ಕೊಡ್ತಿದ್ದರು? ಏನು ಕಥಿ?ಏನ ಮಸ್ತ ಮುಜರಾ ಡ್ಯಾನ್ಸರ್ ಕರ್ಕಕೊಂಡು ಬರ್ತಿದ್ದರು. ಎಲ್ಲಾ ಬಂದ ಏನು ಈಗ? ಈಗ ನೋಡಿದ್ರ ನೀವ ಇಕಿ ಹೇಳಿದಾಂಗ ಮುಜರಾ ಮಾಡೋ ಬಂದರ್ ಆದಂಗ ಕಾಣಿಸ್ತದ. ಎಲ್ಲಾ ಹೋಗಿಬಿಟ್ಟಿತಲ್ಲರೀ ಸಾಬ್ರಾ? ಹಾಂ? ಹಾಂ? - ಅಂತ ನಂದೂ ಒಂದಿಷ್ಟು ದುಃಖ ವ್ಯಕ್ತಪಡಿಸಿದೆ. ಮಸ್ತ ಪಾರ್ಟಿ ಮಾಡ್ತಿದ್ದಿವಿ ನಾವು ಅಲ್ಲೆ ಜವಾನಿ ಇದ್ದಾಗ.

ಸಚ್ಚ್ ಬಾತ್ ಸಾಬ್. ಮೆಹಖಾನಾ ಸಚ್ಚಿ ಮೇ ಪಾಯಖಾನಾ ಹೋಗಯಾ ಸಾಬ್ - ಅಂತ ಕರೀಮನೂ ಒಪ್ಪಿಕೊಂಡ.

ಅದೆಲ್ಲಾ ಇರಲಿ. ಈಗ ಹೆಡ್ ಲೈಟಿಂಗ್ ಅಂದ್ರ ಏನು? ಅದನ್ನ ಹೇಳ್ರೀ. ಟಾಪಿಕ್ ಚೇಂಜ್ ಆಗಿ ಬಿಡ್ತು - ಅಂತ ಕೇಳಿದೆ.

ಅಯ್ಯೋ!!!! ತಲಿ ಇರೋದಿಲ್ಲ ಕ್ಯಾ? ಅದರ ಮ್ಯಾಲೆ ಬಾಲ್ ಅಂದ್ರೆ ಕೂದಲು ಇರೋದಿಲ್ಲ ಕ್ಯಾ? ಅವು ಕೂದಲಕ್ಕೆ ಬ್ಯಾರೆ ಬ್ಯಾರೆ ಬಣ್ಣದ ರಂಗ ಹಚ್ಚಿಕೊಂಡು ಒಂದು ಈಸ್ಟಮನ್ ಕಲರ್ ತಲಿ ಮಾಡಿಕೊಳ್ಳೋದಕ್ಕೆ ಹೆಡ್ ಲೈಟಿಂಗ್ ಅಂತಾರಂತೆ. ನಮ್ಮ ಯಬಡ ಬೇಗಂ ಅತಿ ಕೆಟ್ಟ ರೀತಿಯಲ್ಲಿ ತಲಿಗೆ ಬಣ್ಣ ಬಣ್ಣದ  ಪೇಂಟ್ ಹೊಡೆಸಿಕೊಂಡು ಬಂದು ಬಿಟ್ಟಿದೆ. ಯಾಕೆ ಅಂದ್ರೆ? ಅದು ಫ್ಯಾಶನ್. ದೇಶಭಕ್ತಿ ಅಂತದೆ ಸಾಬ್. ಅಕಿ ರೂಪ ನೋಡೋ ಹಾಗೆ ಇಲ್ಲ - ಅಂದ ಕರೀಂ.

ಓಹೋ....ಸಾಬ್ರಾ. ಅದು ಹೈಲೈಟಿಂಗ್ ಅಂತ ಇರ್ಬೇಕು ನೋಡ್ರೀ. ನಿಮ್ಮದು ಒಂದು ರೀತಿಲೇ ಕರೆಕ್ಟ್ ಅದ ಬಿಡ್ರೀ. ಹೆಡ್ ಅಂದ್ರ ತಲಿ. ಲೈಟ್ ಅಂದ್ರ ಬೆಳಕು. ತಲಿ ಪೂರ ಜಗಮಗ ಅನ್ನೋ ಹಾಂಗ ಪೇಂಟ್ ಹೊಡಕೊಂಡು ಬಂದ್ರ ಹೆಡ್ ಲೈಟಿಂಗ್ ಅಂದ್ರ ತಪ್ಪಿಲ್ಲ ತೊಗೋರಿ - ಅಂದೆ.

ಹೆಂಗ ಮಾಡ್ಸಿಯಾಳ ನಿಮ್ಮ ಬೇಗಂ ಹೆಡ್ ಲೈಟಿಂಗ್? ಅಲ್ಲಲ್ಲ ಹೈಲೈಟಿಂಗ್. ಅಷ್ಟು ಅಸಡ್ಡಾಳ ಮಾಡ್ಸಿಯಾಳ ಅಂತೀರಿ. ದೇಶಭಕ್ತಿ ಅಂತೀರಿ. ಭಾಳ ಗೊಂದಲ ಅದ - ಅಂತ ವಿವರಣೆ ಕೇಳಿದೆ.

ತಲಿ ಮ್ಯಾಲೆ ನಮ್ಮ ಇಂಡಿಯಾದ ಫ್ಲಾಗ್ ಅಂದ್ರೆ ಝೇಂಡಾ ಪೇಯಿಂಟ್ ಹೊಡ್ಸಿದಾಳೆ ಸಾಬ್. ಮತ್ತೆ ನಿಮ್ಮದು ಮಂದಿ ಗತೆ ನಟ್ಟ ನಡು ಚಂಡ್ಕಿ (ಜುಟ್ಟ) ಬೇರೆ. ಅದು ಅಶೋಕ ಚಕ್ರ ಅಂತೆ. ಈಗ ಅಕಿ ಎದ್ರಿಗೆ ಬಂದಳು ಅಂದ್ರೆ, ನೀವು ಸಾವಧಾನ್ ಪೋಷಿಶನ್ ಗೆ ಹೋಗಿ ಸೆಲ್ಯೂಟ್ ಹೊಡಿ ಬೇಕು. ಯಾಕಂದ್ರೆ ನಿಮ್ಮ ಮುಂದೆ ಇಂಡಿಯಾದ ಗೌರವ ಗೂಳವ್ವನ ಗತೆ ನಿಂತಿರ್ತದೆ - ಅಂತ ಅವನ ಹೆಂಡ್ತಿ ಹ್ಯಾಂಗ ತಲಿಗೆ ಪೇಂಟ್ ಹೊಡಿಸ್ಯಾಳ ಅಂತ ಹೇಳಿದ.

ಯಾಕೋ ಗೊಂದಲ ಆತು. ಹೈಲೈಟಿಂಗ್ ಅಂತಾನ. ನಡು ಚಂಡ್ಕಿ ಗತೆ ಅಶೋಕ ಚಕ್ರ ಬೇರೆ ಮಾಡಿಸ್ಯಾಳ ಅಂತಾನ. ಎಲ್ಲೆ ಫುಲ್ ತಲಿ ಬೋಡಿ ಹೊಡೆಸಿ, ಚಂಡ್ಕಿ ಒಂದಾ ಬಿಟ್ಟು, ಬೋಳಿಸಿದ ತಲಿಗೆ ಕೇಸರಿ, ಬಿಳಿ, ಹಸಿರು ಪೇಂಟ್ ಹೊಡಿಸಿಕೊಂಡು ಬಂದು ಬಿಟ್ಟಾಳೋ ಅಂತ ಸಂಶಯ ಬಂತು. ಕೇಳೇ ಬಿಡೋಣ ಅಂತ ಮಾಡಿದೆ.

ಅಂದ್ರಾ....ತಲಿ ಸ್ವಚ್ಚ ಬೋಳಿಸ್ಕೊಂಡು, ನಟ್ಟ ನಡು ಅಶೋಕ ಚಕ್ರದ ಗತೆ ಒಂದು ಡಿಸೈನರ್ ಚಂಡ್ಕಿ ಬಿಟ್ಟು, ಬೋಳ ತಲಿಗೆ ಕರೆಕ್ಟಾಗಿ 33.33%, 33.33%, 33.33% ಲೆಕ್ಕದೊಳಗ ಕೇಸರಿ, ಬಿಳಿ, ಹಸಿರು ಪೇಂಟ್ ಹೊಡಿಸ್ಕೊಂಡು ಬಂದು ಬಿಟ್ಟಾಳ ಏನು? - ಅಂತ ಕೇಳಿದೆ.

ಇಲ್ಲ ಸಾಬ್. ನಿಮಗೆ ಖರೇನೇ ಅಕಲ್ ಇಲ್ಲ. ಇದು ಬೋಳಿಸಿ ಪೇಂಟ್ ಹೊಡೆಯೋದು ಅಲ್ಲ. ಕೂದಲ ಹಾಗೇ ಇರ್ತಾವೆ. ಅದರ ಮೇಲೆ ಪೇಂಟ್ ಹೊಡಿತಾರೆ. ಬೇರೆ ಬೇರೆ ಕಲರದ್ದು. ಗೊತ್ತಾಯ್ತು ಕ್ಯಾ? ಮುಂದೆ ಕೇಸರಿ, ನಡು ಬಿಳಿ, ಹಿಂದೆ ಹಸಿರು. ನಡು ಚಂಡ್ಕಿ ಹಾಂಗೆ ಅಶೋಕ ಚಕ್ರ ಪೇಂಟ್ ಮಾಡ್ತಾರೆ. ತಿಳೀತು ಕ್ಯಾ? - ಅಂತ ಸಮಾಧಾನದಿಂದನ ಫುಲ್ ವಿವರಣೆ ಕೊಟ್ಟ.

ಹಾಂಗೆನು? ನಮಗೇನ ಗೊತ್ತಪಾ? ನಮ್ಮ ಪೈಕಿ ಯಾರೂ ಹಾಂಗ ಮಾಡಿಸಿಕೊಂಡಿಲ್ಲ. ಅದಕ್ಕ ನಮಗ ಇದೆಲ್ಲದರ ಹವಾ ಇಲ್ಲ ನೋಡಪಾ. ನಮಗ ಈ ಹೆಂಗಸೂರು ಚಡ್ಡಿದಾರ ಮತ್ತೊಂದು ಡ್ರೆಸ್ ಹಾಕಿದ್ದು ನೋಡೇ ಆಶ್ಚರ್ಯ ಆಗ್ತದ. ಇನ್ನು ಇಂತಾ ವಿಚಿತ್ರ ಎಲ್ಲ ಕೇಳಿಬಿಟ್ಟರ.....ರಾಮಾ....ಕೃಷ್ಣಾ......ಮುರಾರೆ......- ಅಂತ ಕಾಲ ಕೆಟ್ಟು ಹೋತು ಅನ್ನೋ ಲುಕ್ ಕೊಟ್ಟೆ.

ಸಾಬ್....ಅದು ಚಡ್ಡಿದಾರ ಅಲ್ಲ. ಚೂಡಿದಾರ್ ಕುರ್ತಾ ಅಂತ. ಚಡ್ಡಿದಾರ ನಿಮ್ಮದು ಪಟ್ಟಾಪಟ್ಟಿ ಅಂಡರವೇರದು ಇರಬೇಕು ನೋಡ್ರೀ - ಅಂತ ಕರೆಕ್ಟ್ ಮಾಡಿದ. ಹೊಸಾ ಜನರಲ್ ನಾಲೇಜ್ ಕೊಟ್ಟ. ಧನ್ಯ. ಧನ್ಯ.

ಸಾಬ್ರಾ....ಈ ತಲಿ ಮ್ಯಾಲೆ ತಿರಂಗಾ ಝೇಂಡಾ ಎಲ್ಲೆ ಪೇಂಟ್ ಮಾಡ್ಸಿದ್ರು ನಿಮ್ಮ ಬೇಗಂ? ಧಾರವಾಡದಾಗ ಹಜಾಮತಿ ಅಂಗಡಿ ಅವರು ಇದನ್ನ ಮಾಡಲಿಕ್ಕೆ ಚಾಲೂ ಮಾಡ್ಯಾರ ಏನು? ಎಲ್ಲೆ ಅಲ್ಲೇ ಮಾಳಮಡ್ಡಿ ರಾಯಲ್ ಹೇರಕಟಿಂಗ್ ಅಂಗಡಿಗೆ ಹೋಗಿ ಪಾಂಡ್ಯಾನ ಕಡೆ ಪೇಯಿಂಟ್ ಹೊಡೆಸಿಕೊಂಡು ಬಂದಳು ಏನು? - ಕೇಳಿದೆ. 

ನಮಗ ಗೊತ್ತಿದ್ದ ಹಜಾಮತಿ ಅಂಗಡಿ ಅಂದ್ರ ಅದು ಒಂದ.

ಸಾಬ್....ಏನು ಆಗಿದೆ ನಿಮಗೆ? ಸ್ಟೈಲಿಶ್ ಸುಂದರ್ ಔರತ್ ಮಂದಿ ಎಲ್ಲಾ ನಿಮ್ಮ ಹಜಾಮ ಪಾಂಡು ಕಡೆ ಹೋಗ್ತಾರೆ ಕ್ಯಾ? ಅದು ಕೇವಲ ಜೆಂಟ್ಸ್ ಗೆ ಮಾತ್ರ. ಪಾಂಡ್ಯಾ ಕಟಿಂಗ್ ಮಾಡೋ ಔರತ್ ಮಂದಿ ಅಂದ್ರೆ ನಿಮ್ಮದು ಒಳಗೆ ಲಾಲ್ ಸೀರಿ ಹಾಕ್ಕೊಂಡ ಅಮ್ಮಾ ಲೋಗ್, ಅದೇ ಗಂಡನ್ನ ಕಳೆದುಕೊಂಡಿರೋ ಮಂದಿ....ಅವರಿಗೆ ಮಾತ್ರ ಮಾಡ್ತಾನೆ. ತಿಳೀತು ಕ್ಯಾ? ಇಕಿ ಬೆಂಗಳೂರಗೆ ಹೋಗಿ ಹೈಲೈಟಿಂಗ್ ಮಾಡಿಸಿಕೊಂಡು ಬಂದಾಳೆ ಸಾಬ್. ಎಲ್ಲಾ ಕೂಡಿ ಬೀಸ್ ಹಜಾರ್ ಖರ್ಚು ಆಯಿತು. ನಮ್ಮದು ತಲಿ ಮತ್ತೆ ಬೋಳಿಸಿ ಬಿಡ್ತು ನಮ್ಮ ಬೇಗಂ - ಅಂತ ಹೇಳಿದ ಕರೀಂ.

ಓಹೋ....ಅಂದ್ರ ಭಾರಿ ದೊಡ್ಡ ಮಟ್ಟದ ಕಾಮಗಾರಿ ಅಂತ ಆತು ಈ ಹೈಲೈಟಿಂಗ್ ಹಜಾಮತಿ. ಇದನ್ನ ಇಲ್ಲೆ ಹುಬ್ಬಳ್ಳಿ ಧಾರವಾಡದಲ್ಲಿ ಯಾರೂ ಮಾಡೋದಿಲ್ಲ ಏನು? - ಅಂತ ಕೇಳಿದೆ.

ಸಾಬ್....ಏನು ಕೇಳ್ತೀರಿ? ನಮ್ಮ ಹಾಪ್ ಬೇಗಂ ತಲಿಗೆ ಪೇಂಟ್ ಹೊಡಿಸ್ಕೋಬೇಕು ಅಂತ ದುಬೈಗೆ ಹೊಗಾಕಿ ಇದ್ದಳು. ಪುಣ್ಯಕ್ಕೆ ಅಲ್ಲಿ ಹೋಗದೇ ಬೆಂಗಳೂರಿಗೆ ಹೋಗಿ ಬಂದಳು. ದುಬೈಗೆ ಹೋಗಿ ಬಂದಿದ್ದರೆ ಕಂಸೆಕಂ ಏಕ ದೋ ಲಾಕ್ ರೂಪಾಯಿದು ನಾಮ ನಮಗೆ ಬೀಳ್ತಿತ್ತು ಸಾಬ್ - ಅಂತ ಹೇಳಿದ ಕರೀಂ.

ದುಬೈಗೆ ಯಾಕ ಹೋಗಲಿಲ್ಲ ನಿಮ್ಮ ಬೇಗಂ? ಅಕಿಗೆ ದುಬೈ ಅಂದ್ರ ಭಾಳ ಸೇರ್ತದ ಅಲ್ಲ? - ಅಂತ ಕೇಳಿದೆ.

ಸಾಬ್....ಅಕಿ ದುಬೈಗೆ ಫೋನ್ ಮಾಡಿ ಎಲ್ಲ ಮಾಹಿತಿ ತೆಗೆದಳು ಸಾಬ್. ಅಲ್ಲಿ ಅವರು ನಾವು ಹೈಲೈಟಿಂಗ್ ಮಾಡ್ತೀವಿ ಆದ್ರೆ ಇಂಡಿಯಾದು ತಿರಂಗಾ ಝೇಂಡಾ ಮಾತ್ರಾ ಹರ್ಗೀಸ್ ಮಾಡೋದಿಲ್ಲ. ಬೇಕಾದ್ರೆ ಪಾಕಿಸ್ತಾನದ ಝೇಂಡಾ ತಲಿ ಮ್ಯಾಲೆ ಪೇಂಟ್ ಹೊಡೆದು ಕೊಡ್ತೀವಿ ಅಂದರಂತೆ ಸಾಬ್. ಇಕಿ ಏನೇ ಅಂದ್ರೂ ಇಂಡಿಯಾದಾಕಿ ನೋಡ್ರೀ. ಇಂಡಿಯಾ ಮೇಲೆ ಅಷ್ಟು ಪ್ರೀತಿ. ಅದೂ ಪಂದ್ರಾ ಅಗಸ್ಟ್ ಗೆ ತಲಿ ಮ್ಯಾಲೆ ತಿರಂಗಾ ಇಲ್ಲದೆ ಪಾಕಿಸ್ತಾನದ ಫ್ಲಾಗ್ ಬಂದ್ರೆ ಇಲ್ಲಿ ಮಂದಿ ಇಕಿ ಕುಂಡಿ ಮ್ಯಾಲೆ ಒದ್ದು ಬಿಡ್ತಾರೆ. ನಾನೇ ಒದ್ದು ಬಿಡ್ತೀನಿ. ಅದಕ್ಕೆ ದುಬೈ ಬೇಡ, ಇಲ್ಲೇ ಬೆಂಗಳೂರಿಗೆ ಹೋಗಿ ತಲಿ ಮ್ಯಾಲೆ ತಿರಂಗಾ ಪೇಂಟ್ ಹೊಡಿಸ್ಕೊಂಡು ಬಂದು ಪಂದ್ರಾ ಅಗಸ್ಟ್ ಸೆಲೆಬ್ರೇಟ್ ಮಾಡಿದಳು ಸಾಬ್....ಇದೇ ಕಥಿ - ಅಂತ ಹೇಳಿದ ಕರೀಂ.

ಏನ ಇರಲಿ. ತಲಿ ಮ್ಯಾಲೆ ತಿರಂಗಾ ಮೂಡಿಸಿಕೊಂಡಾಳ. ದೇಶಭಕ್ತಿ ನೋಡಿ ಖುಷಿ ಆತು.

ಸಾಬ್ರಾ.....ನಿಮ್ಮ ಬೇಗಂ ಮೊದಲು ತಲಿ ತುಂಬಾ ಮದರಂಗೀ ಹಚ್ಚಿಕೊಂಡು ಕೆಂಚ ಕೂದಲಾ ಮಾಡಿಕೊಂಡಿದ್ದಳು. ಅಲ್ಲ? - ಅಂತ ಕೇಳಿದೆ.

ಹೌದು ಸಾಬ್....ನಿಮ್ಮ ಅಮ್ಮೀಜಾನ ಅವರೇ ಅಕಿಗೆ ಮದರಂಗಿ ಗಿಡ ಕೊಟ್ಟಿದ್ದರು. ನೆನಪ ಇಲ್ಲಾ ಕ್ಯಾ? ಅದು ಏನು ಬೆಸ್ಟ್ ಮದರಂಗೀ ಸಾಬ್. ಅದು ಎಷ್ಟೋ ಬೆಸ್ಟ್ ಇತ್ತು ಸಾಬ್. ಮದರಂಗೀ ತಲಿ ಸೆಹತ್ ಗೆ ಒಳ್ಳೇದು. ಅದನ್ನ ಬಿಟ್ಟು ಈಗ ಈ ಮಂಗ್ಯಾನ ಗತೆ ತಲಿ ಮ್ಯಾಲೆ ತಿರಂಗಾ ಪೇಂಟ್ ಮಾಡಿಸ್ಕೊಂಡು ಬಂದಾಳೆ ಹಾಪ್ - ಅಂತ ಹೇಳಿದ ಕರೀಂ.

ನಮ್ಮನಿ ಹಿತ್ತಲದಾಗಿನ ಮದರಂಗೀ ಫೇಮಸ್.

ಹ್ಞೂ...ಹ್ಞೂ....ಒಟ್ಟಿನ್ಯಾಗ ಮೊದಲು "ಮದರಂಗಿ ಮಂಗಿ" ಇದ್ದಳು. ಈಗ "ತಿರಂಗಿ ತುಂಗಿ" ಆಗ್ಯಾಳ ಅಂತ ಆತು. ಮುಂದಿನ ಅವತಾರ ಏನು? "ಪಂಚರಂಗಿ ಪುಂಗಿ" ಏನು? - ಅಂತ ಖೀ.....ಖೀ.....ಅಂತ ನಕ್ಕೆ. ಅವನೂ ನಕ್ಕ.

ಎಲ್ಲಿ....ತುಂಗಿ, ಪುಂಗಿ ಸಾಬ್? ಅಕಿ ಯಾವಾಗಲೂ ಮಂಗೀನೆ - ಅಂತ ಅವನೂ ನಕ್ಕ.

ಸಾಬ್ರಾ.....ಮುಂದಿನ ಸರೆ  "ಸಾತರಂಗಿ ಸಂಗಿ" ಆಗ ಅಂತ ಹೇಳ್ರೀ ನಿಮ್ಮ ಬೇಗಂಗ - ಅಂತ ಅಂದೆ.

ಕ್ಯಾ ಸಾಬ್? "ಸಾತರಂಗಿ ಸಂಗಿ" ಅಂದ್ರೆ? ಅಂದ್ರೆ ಏನು ಸಾಬ್? ಅಕಿ 'ನಾಮ'ಧೇಯ ಸಂಗದಿಲ್ ಸನಂ ಉರ್ಫ್ ಸಂಗಿ ಹೌದು. ಆದ್ರೆ ಸಾತರಂಗಿ ಅಂದ್ರೆ? - ಅಂತ ಕೇಳಿದ ಕರೀಂ. 

ಕರೀಂ ಹೆಂಡ್ತಿ ಹೆಸರು ಮೆಹರುನ್ನೀಸಾ ಉರ್ಫ್ ಸಂಗದಿಲ್ ಸನಂ ಉರ್ಫ್ ಸಂಗೀ. ಅದು ಕರೀಮನ ಇಟ್ಟ ಹೆಸರುಗಳು.

ಅಲ್ಲಾ ಸಾಬ್ರಾ.....ಬರೆ ತಿರಂಗಾಕ್ಕ ಯಾಕ ನಿಲ್ಲಿಸಬೇಕು ಅಂತ? ಫುಲ್ VIBGYOR ಕಲರ್ ಹೊಡೆಸಿಕೊಳ್ಳಲಿಕ್ಕೆ ಹೇಳ್ರೀ ಅಕಿಗೆ. ತಲಿ ನೋಡಿದ್ರ ಕಾಮನಬಿಲ್ಲು ನೋಡಿದಾಂಗ ಆಗಬೇಕು. ಏಳೂ ಬಣ್ಣ ಇರಬೇಕು. ತಲಿ ಏಳು ಭಾಗ ಮಾಡಿ ಏಕ್ದಂ ಕಾಮನಬಿಲ್ಲಿನಾಂಗ ಪೇಂಟ್ ಹೊಡಿಸ್ಕೋ ಅಂತ ಹೇಳ್ರೀ. ಎಲ್ಲಾ ಚಂದ ಹೆಂಗಸೂರ ಹುಬ್ಬಿಗೆ ಕಾಮನಬಿಲ್ಲು ಮತ್ತೊಂದು ಅಂತ ಕವಿಗಳು ಉಪಮೆ ಹೇಳ್ತಾರ. ಇಕಿ ತಲಿಗೇ ಕಾಮನಬಿಲ್ಲಿನಂತಹ ರಂಗು ರಂಗಿನ ತಲಿಯ "ಸಾತರಂಗಿ ಸಂಗಿ" ಅಂತ ಹೊಸಾ ಜಮಾನಾದ ಕವಿಗಳು ಹೇಳಿದರೂ ಹೇಳಬಹುದು - ಅಂತ ಜೋಕ್ ಹೊಡದೆ.

ಕ್ಯಾ ಮಸ್ತ ಜೋಕ್ ಸಾಬ್? ನಿಮ್ಮ ಪ್ರಕಾರ ತಲಿಗೆ ಫುಲ್ ಇಂದ್ರಧನುಷ ಹಾಗೆ ಎಲ್ಲಾ ಸಾತ್ ರಂಗ ಹೊಡೆಸಿಬಿಡು ಅಂತಾ ಕ್ಯಾ ನಿಮ್ಮದು ಐಡಿಯಾ? ಮಸ್ತ ಐಡಿಯಾ ಅದೆ. ನೀವೇ ಹೇಳಿ ಅಕಿಗೆ. ನೀವು ಹೇಳಿದ್ರೆ ಹೋಗಿ ತಲಿಗೆ ಕಾಮನಬಿಲ್ಲಿನ ಬಣ್ಣದ ಹೈಲೈಟ್ ಮಾಡಿಸಲಿಕ್ಕೆ ಅಂತ ಮತ್ತೆ ಬೆಂಗಳೂರಿಗೆ ಓಡ್ತಾಳೆ. ಒಂದೆರಡು ವಾರ ನೆಮ್ಮದಿ. ಪಾರ್ಟಿ ಮಾಡೋಣ. ಕ್ಯಾ? - ಅಂದ ಕರೀಂ.

ಬ್ಯಾಡಪಾ ಬ್ಯಾಡ ಅಕಿ ಸಹವಾಸ. ನೀನಾ ಬೇಕಾದ್ರ ಹೇಳ್ಕೋ. ಅಕಿ ಕಾಮನಬಿಲ್ಲಿನ ಹೈಲೈಟಿಂಗ್ ಮಾಡಿಸ್ಕೊಂಡು "ಸಾತರಂಗಿ ಸಂಗಿ" ಆಗಿ ಬಂದ್ರ, ಪೇಪರ್ ನ್ಯಾಗ್ ಫೋಟೋ ಬಂದು ಏಕ್ದಂ ಫೇಮಸ್ ಆಗಿ ಬಿಡ್ತಾಳ ನೋಡು. - ಅಂದೆ.

ಸಾಬ್ರಾ....ಅಕಿ ಸಾತರಂಗಿ ಸಂಗಿ ಆಗಿ ಬಂದು ಯಾವ ಹಾಡು ಹಾಡಬಹುದು ಅಂತೀರೀ? ಗೆಸ್ ಕರೋಜೀ - ಅಂದೆ.

ಕರೀಂ ಬಿದ್ದು ಬಿದ್ದು ನಕ್ಕ. ನಕ್ಕು ಹೊಟ್ಟಿ ಹಿಡಕೋತ್ತನ ಹೇಳಿದ ಹಾಡು.

ಹೈಲೈಟಿಂಗ್, ಹಾಪ್  ಹೈಲೈಟಿಂಗ್

ಮತ್ತ ಇಬ್ಬರೂ ಬಿದ್ದು ಬಿದ್ದು ನಕ್ಕವೀ. ಯಪ್ಪಾ.....ಎಂತಾ ನಗು ಅಂದ್ರ. ಮಸ್ತ ಮಜಾ ಬಂತು.

ನೋಡಿ ಸಾಬ್....ಈ ಮಂಗಿ ಮಂದಿ ಇರ್ತಾರೆ ನೋಡಿ, ಅವರ ತಲಿ ಒಳಗೇ ಭೇಜಾ ಖರಾಬ್ ಇರ್ತದೆ ನೋಡಿ. ಕೂದಲಕ್ಕೆ ಏನೇ ಪೇಂಟ್ ಹೊಡಕೊಂಡರೂ ಮಂಗೀನೇ ಇರ್ತಾರೆ. ತುಂಗಿ, ಪುಂಗಿ, ಸಂಗೀ ಏನೂ ಆಗೋದಿಲ್ಲ ಸಾಬ್. ನಾಮುನ್ಕಿನ್ ಹೈ. ನಾನು ಬರ್ತೀನಿ ಸಾಬ್. ಖುದಾ ಹಾಫಿಜ್ - ಅಂತ ಹೇಳಿ ಹೋದ ಕರೀಂ.

ಹ್ಮ್.....ಒಟ್ಟಿನಲ್ಲಿ ಅಕಿ ಖರ್ಚಿನ ಬಿಲ್ಲು ಕೊಟ್ಟು ಕೊಟ್ಟು ಬಿಲ್ಲು ಕೊಡೊ ಕಾಮಣ್ಣ ಆದ ಕರೀಮ. ಮತ್ತ ಸಾತರಂಗಿ ಪೇಂಟ್ ಹೊಡಿಸ್ಕೊಂಡರ ಕಾಮನಬಿಲ್ಲಿನ ಕರೀಮಿ ಅವನ ಬೇಗಂ. 

ಒಳ್ಳೆ ಕಥಿ ಇವರದ್ದು.

2 comments:

ಸುಬ್ರಹ್ಮಣ್ಯ ಭಾಗ್ವತ್ said...

ಹಾಹಾ,ಚೆನ್ನಾಗಿದೆ ಮಹೇಶಣ್ಣ "ಹೆಡ್ ಲೈಟು"

Mahesh Hegade said...

ಧನ್ಯವಾದ ಭಾಗೋತ್ರೆ.

ಹೌದ್ರಾ....ಕೆಲೋ ಜನರ ತಲೆ ಹೈಲೈಟ್ ಅಂದ್ರೆ ಲಾಂಗ್ ಬೀಮ್ ಹೆಡ್ ಲೈಟ್ ಇದ್ದಾಂಗೆ ನೋಡಿ. ಕಣ್ಣು ಕುಕ್ಕತು. ಹೀ....ಹೀ....

ಅವ ಲಸಿತ್ ಮಾಲಿಂಗನ ಹೈಲೈಟ್ ಮುಂದೆ ಯಾರದ್ದೂ ಎಂತದು ಇಲ್ಲೇ ಬಿಡಿ.

ಕಾಮೆಂಟಿಗೆ ಶುಕ್ರಿಯಾ.

:)