Monday, September 10, 2012

ಸಂಕಟ ಬಂದಾಗ 'ಮಾತ್ರ' ಬರುವ ವೆಂಕಟರಮಣಗಳು

'ಸಂಕಟ ಬಂದಾಗ ವೆಂಕಟರಮಣ' ಅಂತ ಒಂದು ಮಾತಿದೆ. ಅಂದ್ರೆ ನಮಗೆ ತೊಂದರೆ ತಾಪತ್ರಯ ಬಂದಾಗ ಮಾತ್ರ ಸಹಾಯ ಮಾಡುವ ಜನರ ನೆನಪಾಗುತ್ತದೆ. ಇಲ್ಲಿ ವೆಂಕಟರಮಣ ದೇವರೇ ಆಗಬಹುದು ಅಥವಾ ನಮ್ಮನ್ನು ಸಂಕಟದಿಂದ ಪಾರು ಮಾಡುವ ಗೆಳೆಯರೋ,ಬಂಧುಗಳೋ ಕೂಡ ಆಗಬಹುದು.

ಆದ್ರೆ ಇನ್ನೊಂದು ವರೈಟಿ ಜನ ಕೂಡ ಇರುತ್ತಾರೆ. ಅವರೇ.........ಸಂಕಟ ಬಂದಾಗ 'ಮಾತ್ರ' ಬರುವ ವೆಂಕಟರಮಣಗಳು.

ನಿಮಗೆ ಏನಾದರು ಒಳ್ಳೇದಾಯಿತು ಅಂದುಕೊಳ್ಳಿ. ಪ್ರಮೋಶನ್ ಸಿಕ್ಕಿರಬಹುದು. ಯಾವದೋ ದೊಡ್ಡ ಪರೀಕ್ಷೆ ಪಾಸ್ ಮಾಡಿರಬಹುದು. ಹೀಗೆ ಏನೋ ಒಳ್ಳೆಯದು ಇರಬಹುದು. ನಿಮ್ಮ ಖುಷಿಯನ್ನು ಹಂಚಿಕೊಳ್ಳೋಣ ಅಂತ ನೋಡಿದರೆ ಇವರು ಪತ್ತೆ ಇರೋದಿಲ್ಲ. ಹಾಗಂತ ಅವರು ಕೆಟ್ಟವರಲ್ಲ. ನಿಮ್ಮ ಮೇಲೆ, ನಿಮ್ಮ ಸಾಧನೆಗಳ ಬಗ್ಗೆ ಅವರಿಗೆ ಅಸೂಯೆ ಅಂತ ಏನೂ ಇರುವದಿಲ್ಲ. ಅಸೂಯೆ ಮಂದಿ ಅವರಲ್ಲ. ಬೇರೆಯೇ ಟೈಪಿನ ಜನ ಅವರು.

ಇನ್ನು ನಿಮಗೆ ಏನಾದರು ತೊಂದರೆ ಆಯಿತೆಂದರೆ ಈ ಟೈಪಿನ ಜನ ಬಂದೇ ಬಿಡುತ್ತಾರೆ. ಅದೂ ಸಿಕ್ಕಾಪಟ್ಟೆ ಉತ್ಸಾಹದಿಂದ. 

ನಿಮಗೆ ತೊಂದರೆ ಬರುವದನ್ನೇ ಕಾಯುತ್ತಿದ್ದೆ. ನಿಮ್ಮ ತೊಂದರೆಯಲ್ಲಿ ಭಾಗಿಯಾಗಿ, ನಿಮ್ಮ ದುಃಖ ಹಂಚಿಗೊಂಡು, ನಿಮಗೆ ಸಹಾಯ ಮಾಡುವದೇ ನಮ್ಮ ಭಾಗ್ಯ - ಅನ್ನುವ ಭಾವನೆ ಕೊಡುತ್ತಾರೆ. 

ಒಳ್ಳೆಯದೇ. ಸಹಾಯ ಮಾಡುವ ಜನ ಬೇಕು. ಆದರೆ............

ಏನು ಆದರೆ?

ಆದರೆ ಇವರ ಕಾಟ ಒಂದು ಅಂದರೆ ನಿಮಗೆ ತುಂಬಾ ಸೆಲ್ಫ್ ಪಿಟಿ (self-pity) ತಂದು ಇಟ್ಟು ಬಿಡುತ್ತಾರೆ. ನಿಮಗೆ ನಿಮ್ಮ ಆ ಟೈಮ್ ನ ತೊಂದರೆಗಿಂತ ಈ ಮಂದಿಯನ್ನು ಸಹಿಸಿಕೊಳ್ಳುವದೇ ಕಷ್ಟ ಎನ್ನಿಸುತ್ತದೆ. ಬಿಸಿ ತುಪ್ಪ. ತಿನ್ನುವ ಹಾಗಿಲ್ಲ. ಉಗಳುವ ಹಾಗಿಲ್ಲ.

ಏನೇನೋ ಮಾತಾಡುತ್ತಾರೆ. ನಿಮಗೆ ಸಹಾಯ ಮಾಡುತ್ತ ಮಾಡುತ್ತಲೇ ಏನೇನೋ ಹೇಳುತ್ತಿರುತ್ತಾರೆ.

ಉದಾಹರಣೆಗೆ ಅವರ ಮಾತಿನ ಧಾಟಿ ಹೀಗೆ ಇರುತ್ತದೆ. 

ನಿಮ್ಮ ಕರ್ಮ ನೋಡಿ? ಈ ತರಹದ ಕರ್ಮ ಇಟ್ಟುಗೊಂಡು ಅದೆಂಗೆ ಜೀವನ ಮಾಡ್ತೀರೋ? ನನಗೆ ಪಾಪ ಅನ್ನಿಸುತ್ತದೆ. ನಿಮ್ಮ ಕರ್ಮದ ಫಲ ಯಾವಾಗ ಮುಗಿಯುತ್ತದೆಯೋ? ಯಾಕೆ ಬೇಕಾಗಿತ್ತು ಇದೆಲ್ಲ? ಒಳ್ಳೆ ಜಾಬ್ ಇತ್ತು. ಬೆಟರ್ ಆಫರ್ ಅಂತ ಬಿಟ್ಟು ಬಂದಿರಿ. ಈಗ ನೋಡಿ ಕೆಲಸ ಹೋಯಿತು. ಮುಂದೆ ಜಾಬ್ ಸಿಗುತ್ತದೆಯೋ ಇಲ್ಲವೋ? ಈಗ ಜ್ವರ ಬೇರೆ ಬಂದಿದೆ. ಏಳಿ. ಸ್ವಲ್ಪ ಬಿಸಿ ಬಿಸಿ ಊಟ ಮಾಡಿ. ನಿಮಗೇ ಅಂತನೇ ಫ್ರೆಶ್ ಆಗಿ ಅಡಿಗೆ ಮಾಡಿಕೊಂಡು ಬಂದಿದ್ದೇನೆ. ಏನೂ ಸಂಕೋಚ ಇಲ್ಲದೆ ಕೇಳಿ. ನಿಮ್ಮ ಕರ್ಮ. ಪ್ರಾರಬ್ಧ ಕರ್ಮ. ಏನು ಮಾಡೋದು?

ಈ ತರಹ ಅವರ ಮಾತಿನ ಧಾಟಿ. ಈ ತರಹ ಮಾತಾಡುತ್ತಿರುವವರಿಗೆ  ತಮ್ಮ ಮಾತಿನಿಂದ ನಿಮಗೆ ಯಾವ ರೀತಿ ಅನ್ನಿಸುತ್ತಿರಬಹುದು ಅನ್ನುವ ಖಬರೇ ಇರುವದಿಲ್ಲ. 

ಹೆಲ್ಪ್ ಮಾಡುತ್ತಿದ್ದೇವೆ. ಟೈಮ್ ಪಾಸ್ ಗೆ ಮಾತು - ಅನ್ನುವ ರೀತಿಯಲ್ಲಿ ಅವರ ವರ್ತನೆ.

ನಮಗೋ ಅವರನ್ನು ಕೊಲ್ಲುವಷ್ಟು ಸಿಟ್ಟು ಬರುತ್ತಿರುತ್ತದೆ. ಆದ್ರೆ ಅವರ ಸಹಾಯವೂ ಬೇಕಾಗಿರುತ್ತದೆ. ಏನು ಮಾಡುವದು?

ಸ್ವಲ್ಪ ದೂರಾಲೋಚನೆ ಇದ್ದರೆ, ಈ ತರಹದ ಜನರನ್ನು ನಿಮ್ಮ ಸರ್ಕಲ್ಲಿನಿಂದ ನಿಧಾನವಾಗಿ ಹೊರಗೆ ಹಾಕಲು ಆರಂಭಿಸಿ. ಯಾಕೆಂದ್ರೆ ಈ ತರಹದ ಜನ ಕನಸುಗಳನ್ನೇ ಕೊಂದು ಬಿಡುವ ಪೈಕಿ. 

ನೀವು ಬೇಕಾದ್ರೆ ಸೂಕ್ಷ್ಮವಾಗಿ ಗಮನಿಸಿ ನೋಡಿ. ಈ ತರಹದ ಜನ ತಮ್ಮ ಕನಸುಗಳನ್ನು ಎಂದೋ ಕೊಂದು ಒಗೆದಿರುತ್ತಾರೆ. ಅದರ ಬಗ್ಗೆ ಒಂದು ತರಹದ ಖಿನ್ನತೆ ಅವರಿಗೆ ಇರುತ್ತದೆ. ಅದಕ್ಕೇ ಇವರು ಎಂದೂ ಯಾರದ್ದೇ ಆಗಲಿ ಶ್ರೇಯಸ್ಸಿನಲ್ಲಿ ಭಾಗವಹಿಸುವದಿಲ್ಲ. ಆದ್ರೆ ಎಲ್ಲಾದರು ಒಂದು ಕನಸಿಗೆ ಚಿಕ್ಕ ಪ್ರಮಾಣದ ಹೊಡೆತ ಬಿತ್ತು ಅಂತ ಗೊತ್ತಾದರೂ ಸಾಕು. ಸ್ವಲ್ಪ ಗಾಯಗೊಂಡ ಕನಸನ್ನು ಪೂರ್ತಿಯಾಗಿ ಕೊಂದು, ತಿಥಿ ಮಾಡಲಿಲ್ಲ ಅಂದರೆ ಅವರಿಗೆ ಸಮಾಧಾನವಿಲ್ಲ. ಕನಸುಗಳ ಕೊಲೆಗಾರರು ಇವರು.

ಓಕೆ. ಈಗ ತೊಂದರೆಯಲ್ಲಿ ಇದ್ದೀರಿ. ನಿಮಗೆ ಈ ತರಹದ ಜನ ಸಹಾಯ ಮಾಡುತ್ತಿದ್ದಾರೆ. ಅವರು ಹೋದ ನಂತರ ಹೇಗೆ ಅನ್ನಿಸುತ್ತದೆ ನಿಮಗೆ? ಒಂದು ತರಹದ ಅಂತಃಸತ್ವವನ್ನೇ ಹೀರಿದ ಫೀಲಿಂಗ್ ಬಂದ್ರೆ ಆಶ್ಚರ್ಯವಿಲ್ಲ. ದೊಡ್ಡ ಪ್ರಮಾಣದ ಗಿಲ್ಟಿ ಫೀಲಿಂಗ್, ವಿಷಣ್ಣತೆ, ಖಿನ್ನತೆ ಬಿಟ್ಟು ಹೋಗಿರುತ್ತಾರೆ. ಇದು ಬೇಕಾ? ನೀವೇ ಡಿಸೈಡ್ ಮಾಡಬೇಕು.

ತೋಷಾ  ಸಿಲ್ವರ್ ಎಂಬವರು ಒಂದು ತುಂಬ ಒಳ್ಳೆಯ ಪುಸ್ತಕ ಬರೆದಿದ್ದಾರೆ. ಪುಸ್ತಕದ ಹೆಸರು - Outrageous Openness: Letting the Divine Take the Lead

ಅದರಲ್ಲಿ ಒಂದು ಚಾಪ್ಟರ್ ಈ ತರಹದ ಜನರ ಮೇಲಿದೆ. ಆ ಚಾಪ್ಟರ್ ಶುರು ಆಗುವದೇ ಒಂದು ಅತಿ ಉತ್ತಮ ಹೇಳಿಕೆಯಿಂದ -
People who have let go of their dreams are sometimes eager to help you bury your own. 

ಸತ್ಯವಾದ ಮಾತು.

ಈ ತರಹದ ಜನಗಳು ಸ್ನೇಹಿತರೋ, ದೂರದ ಬಂಧುಗಳೋ ಆದ್ರೆ ಹೇಗೋ ಮಾಡಿ ಕಳಚಿಕೊಳ್ಳಬಹುದು. ಅತಿ ಹತ್ತಿರದವರೇ ಆದರೆ ಏನು ಮಾಡುವದು? ಮಿಡಲ್ ಕ್ಲಾಸ್ ಮೆಂಟಾಲಿಟಿ ಕೂಡ ಒಂದು ತರಹದ ಕನಸುಗಳ ಕೊಲೆಗಾರನೇ. ಎಷ್ಟೋ ಸಲ ಕುಟುಂಬದವರೇ - ಸಾಕು ಬಿಡು. ಇದ್ದುದರಲ್ಲಿಯೇ ಸಂತೋಷಪಡು - ಅಂದು ಬಿಟ್ಟಿರುತ್ತಾರೆ. ಆಕಸ್ಮಾತ ಎಲ್ಲೋ ಒಂದು ಕಡೆ ಚಿಕ್ಕ ಮಟ್ಟಿನ ಸೋಲಾದರೂ ಅದನ್ನೇ ಎತ್ತಿ ಎತ್ತಿ ಮಾತಾಡುತ್ತಿರುತ್ತಾರೆ. ಕುಟುಂಬದ ಜನ ಆದ್ದರಿಂದ ಏನೂ  ಮಾಡಲು ಬರುವದಿಲ್ಲ. ಅವರ ಜೊತೆ ಹೇಗೋ ಮಾಡಿ ಹೊಂದಿಕೊಂಡು ಹೋಗಬೇಕಾಗುತ್ತದೆ. ತಿಳಿಸಿ ಹೇಳುವ ಪ್ರಯತ್ನ ಮಾಡಬಹುದು. ಎಷ್ಟು ಉಪಯೋಗವಾಗುವದೋ ಗೊತ್ತಿಲ್ಲ.

ವೈಯಕ್ತಿಕ ನೆಲೆಯಲ್ಲಿ ಈ ತರಹದ ಜನರನ್ನು  ನಯವಾಗಿ ಹೊರಗೆ ಹಾಕಿದ್ದು ತುಂಬ ಒಳ್ಳೆಯದೇ ಆಗಿದೆ. ದೋಸ್ತಿ ಉಳಿದಿದೆ. ಆದರೆ ಸಹಾಯ ಮಾಡುವ ಸೋಗಲ್ಲಿ ತಲೆತಿಂದು ಹೋಗುವದು ಬಂದಾಗಿದೆ. ಅದೇ ರೀತಿ ಅವರು ಹೋದ ನಂತರ ಆವರಿಸುವ ಒಂದು ತರಹದ ಪೂರ್ತಿ ಸುಸ್ತಾದ ಫೀಲಿಂಗ್ ಸಹಿತ ಹೋಗಿದೆ.

ಅದರ ಹಿಂದಿನ ಥೇರಿ ಗೊತ್ತಿರಲಿಲ್ಲ. ಯಾಕೆ ಹೀಗಾಗುತ್ತದೆ ಅಂತ ತಿಳಿದಿರಲಿಲ್ಲ.

ತೋಷಾ ಸಿಲ್ವರ್ ಅವರ ಪುಸ್ತಕ ಓದಿದಾಗ "ಆಹಾ! ಇದೇ ನೋಡಿ ಪಾಯಿಂಟ್ " ಅನ್ನುವ ರೀತಿಯಲ್ಲಿ ಒಮ್ಮೆಲೇ ಫ್ಲಾಶ್ ಆಯಿತು.

ತುಂಬ ಒಳ್ಳೆಯ ಪುಸ್ತಕ. ಓದಿ. ಈ ತರಹದ ಬಹಳ "help yourself" ಟಿಪ್ಸ್ ಇವೆ. ನನಗಂತೂ ತುಂಬಾ ಇಷ್ಟವಾಯಿತು.

No comments: