Monday, September 03, 2012

ಹತ್ತಿಮಬ್ಬೆಯ ಹತ್ತಿ ಹುಚ್ಚು

ಸಾಬ್.....ನಿಮಗೆ ಕಾಟನ್ ಪೇಟೆ ಪುಷ್ಪ ಅನ್ನೋರು ಗೊತ್ತು ಕ್ಯಾ? - ಅಂತ ಕೇಳಿದ ಕರೀಂ.

ನನ್ನ ಮಟ್ಟಿಗೆ ಅದು ಸಣ್ಣ ಬಾಂಬ್. ಫುಲ್ ಥಂಡಾ ಹೊಡೆದ ಬಿಟ್ಟೆ ನಾನು.

ಏ ಕರೀಂ....ಸಾವಕಾಶ ಮಾತಾಡೋ. ಅವರ ಪೈಕಿ ಮಂದಿ ಯಾರರ ಕೇಳಿಸ್ಕೊಂಡ್ರಾ ನಾಳೆ ನಮಗ ರೇಜರ್ ಬಿದ್ದಾವು. ಖತರ್ನಾಕ್ ಮಂದಿ ಅವರೆಲ್ಲ - ಅಂದೆ. ಅಂಜ್ಕಿ ಭಾಳ ನಮಗ.

ಯಾರು ಸಾಬ್ ಕಾಟನ್ ಪೇಟೆ ಪುಷ್ಪಾ ಅಂದ್ರೆ? - ಕೇಳಿದ ಕರೀಂ.

ಅಯ್ಯೋ....ಅವರು ಒಂದು ಕಾಲದ ಬೆಂಗಳೂರಿನ ದೊಡ್ಡ ಅಂಡರ್ವರ್ಲ್ಡ್ ಡಾನ್ ಮಾರಾಯಾ. ಮತ್ತ ಇಲ್ಲೂ ಎಲ್ಲರ ಅವರ ಚೇಲಾ ಚಪೇಲಾಗಳು ಇದ್ದರೂ ಇದ್ದಾರು. ಸುಮ್ಮನಿರಪಾ. ಯಾರಿಗೆ ಬೇಕು ಪುಷ್ಪರಾಜ್ ಅವರ ಸಹವಾಸ - ಅಂತ ಹೇಳಿ ಇವನ್ನ ಸುಮ್ಮಾ ಮಾಡೋ ಪ್ರಯತ್ನ ಮಾಡಿದೆ.

ಅದಿರಲಿ ಕರೀಂ....ಯಾಕ್ ಏಕ್ದಂ ಅವರ ಹೆಸರು ಕೇಳಿದಿ? ಅದೂ ಬೆಂಗಳೂರಿನ ಮಾಜಿ ಡಾನ್ ಸುದ್ದಿ? ಹಾಂ? ಹಾಂ? - ಅಂತ ಕೇಳಿದೆ.

ಸಾಬ್....ನಮ್ಮ ಬೇಗಂ ಗೆ "ಕಾಟನ್ ಹುಚ್ಚು" ಹತ್ತಿ ಬಿಟ್ಟಿದೆ. ಯಾರೋ ಹೋಗಿ ಕಾಟನ್ ಪೇಟೆ ಪುಷ್ಪಾಗೆ ನೋಡಿ ಅಂದ್ರು. ನೀವು ಹೇಳೋದ ಕೇಳಿದ್ರೆ ನಮ್ಮ ಜೊತೆ ಆ ಹರಾಮಿಗಳು ಮಜಾಕ್ ಮಾಡಿದ್ರು ಅನ್ನಿಸ್ತದೆ. ನಮ್ಮದು ದುಃಖ ನಮಗೆ. ಅದರಲ್ಲಿ ಮಜಾಕ್ ಮಾಡೋ ಹಲ್ಕಟ್ ಮಂದಿ ಬ್ಯಾರೆ - ಅಂತ ಅಲವತ್ತುಕೊಂಡ ಕರೀಂ.

ಏನು? ಕಾಟನ್ ಹುಚ್ಚಾ ನಿಮ್ಮ ಬೇಗಂಗೆ? ಅಂದ್ರ ಕಾಟ್ ಅಂದ್ರ ಮಂಚ. ಮಂಚದ ಹುಚ್ಚಾ? ಯಾಕ.....ನಿಮ್ಮ ಬೇಗಂ ಮಂಚದಾಗ ದೆವ್ವ ಸೇರಿಕೊಂಡು ಕಾಟ ಕೊಡಲಿಕತ್ತದೇನು? ಅದಕ್ಕ ಕಾಟನ್ ಹುಚ್ಚು ಅನ್ನಲಿಕತ್ತಿಯೇನು? - ಅಂತ ಕೇಳಿದೆ.

ಇದೆಂತಾ ಕಾಟಿನ ಹುಚ್ಚು. ಕಾಟಿನ ಕಾಟ ಅನ್ನಿಸ್ತು.

ಅಯ್ಯೋ ಸಾಬ್. ಕಾಟ್, ಪಲ್ಲಂಗ, ದಿವಾನ್ ಅಂತಾ ಮಲ್ಕೊಳೋ ಹಾಸ್ಗಿ ಅಲ್ಲ ಸಾಬ್. ಕಾಟನ್. ಕಾಟನ್. ಮತ್ಲಬ್ ರೂಯಿ. ನಿಮ್ಮದು ಭಾಷೇಲಿ ಅಂದ್ರೆ ಹತ್ತಿ. ಹತ್ತಿ. ಕಾಟನ್ - ಅಂತ ವಿವರಣೆ ಕೊಟ್ಟ.

ಏನು? ಹುಚ್ಚಿ ಹತ್ತು ಹತ್ತಿ ಬಿಟ್ಟದ? ಅಲ್ಲ....ಅಲ್ಲ.....ನಾಲಗಿ ಹೊಳ್ಳಲಿಲ್ಲ. ಹತ್ತಿ ಹುಚ್ಚು ಹತ್ತಿ ಬಿಟ್ಟದ? ನಿಮ್ಮ ಬೇಗಂಗೆ? ಯಾಕ? ಅವರು ಹತ್ತಿಮತ್ತೂರ ಕಡೆಯವರು ಏನು? - ಅಂತ ಕೇಳಿದೆ.

ಕ್ಯಾ ಸಾಬ್? ಹತ್ತಿಮತ್ತೂರ ಅಂದ್ರೆ ನಿಮ್ಮದೂಕಿ ಜಾತಿ ಮಂದಿ. ನಮ್ಮ ಬೇಗಂ ನಮ್ಮ ಜಾತಿಯವರು. ಅಕಿ ಹ್ಯಾಂಗೆ ಹತ್ತಿಮತ್ತೂರ ಕಡೆಯವರು ಆಗ್ತಾರೆ? ತಲಿಗಿಲಿ ಸರಿ ಐತೆ ಕ್ಯಾ? - ಅಂತ ಹೇಳಿದ.

ತಪ್ಪು ತಿಳ್ಕೊಂಡಿದ್ದ ಕರೀಂ.

ಲೇ....ಮಂಗ್ಯಾನ್ ಕೆ.....ಹತ್ತಿಮತ್ತೂರ ಕಡೆಯವರು ಅಂದ್ರ ಅವರ ಪೈಕಿ ಅಂತಲ್ಲ. ಆ ಊರ ಕಡೆಯವರು ಏನು ಅಂತ ಕೇಳಿದೆ. ಅದಕ್ಕ ನನಗ ಚೀರ್ಲಿಕತ್ತಿ. ನೀ ಒಬ್ಬವ ಮಂಗ್ಯಾ - ಅಂತ ಅವನ ಹುಚ್ಚಾಟಾನ ಅಷ್ಟಕ್ಕ ಸ್ಕ್ವಾಶ್ ಮಾಡಿದೆ.

ಇಲ್ಲಾ ಸಾಬ್. ನಮ್ಮದು ಬೇಗಂ ಆ ಕಡೆಯಾಕಿ ಅಲ್ಲ. ಬೆಳಗಾಂ ಕಡೆಯಾಕಿ. ಈಗ ನೋಡಿದ್ರೆ ಬೆಳಗಾಂ ರೋಡ ಕಡೆಯಾಕಿ ಅಂತ ಹೇಳಬಹುದು. ಆ ಪರಿ ಹುಚ್ಚ ಆಗಿದಾಳೆ. ಒಮ್ಮೆ ಫೇಸ್ಬುಕ್ ಹುಚ್ಚು, ಮ್ಯಾಲೆ ಪುಂಗಿ ಹುಚ್ಚು, ಆ ಮೇಲೆ ಈಗ ಕಾಟನ್ ಹುಚ್ಚು - ಅಂತ ಕೊಯ್ಯಾ ಕೊಯ್ಯಾ ಅಂತ ಕೊರೆದ ಕರೀಂ.

ಹೋಗಿ ಹೋಗಿ ಬೆಳಗಾಂ ಹುಡುಗಿನ ಕಟ್ಟಗೊಂಡು ಬಂದ್ರಿ ನೋಡ್ರಿ, ಅದಕ್ಕ ಹೀಂಗ. ಧಾರವಾಡದಾಗ ಸಿಗ್ತಿದ್ದಿಲ್ಲ ನಿಮಗ ಬೀವಿ? - ಅಂದೆ.

ಸಾಬ್....ಮೊದಲಿಂದು ಎರಡು ಬೇಗಂ ಇಲ್ಲಿದೇ ಇತ್ತು ಸಾಬ್. ಯಾವದೂ ಬರಕತ್ತಾಗಲಿಲ್ಲ ನೋಡ್ರಿ. ಅದಕ್ಕೆ ನಾವು ಧಾರವಾಡ ಪೇಡಾ ರುಚಿ ನೋಡಿ ಆಯಿತು, ಬೆಳಗಾವಿ ಕುಂದಾ ನೋಡೋಣ ಅಂತ ಅಲ್ಲಿಂದ ಸ್ವೀಟ್ ಸಿಕ್ಸ್ಟೀನ್ ಲಡ್ಕಿ ತಂದರೆ ಹೀಗೆ ಆಗಿ ಹೋಯಿತು. ದಸ್ ಲಾಖ್ ರೂಪಾಯಿ ಪಾನಿ ಮೇ - ಅಂದ ಕರೀಂ.

ಹೋಗ್ಲಿ ಬಿಡ್ರಿ....ಏನು ನಿಮ್ಮ ಬೇಗಂ ಹತ್ತಿ ಹುಚ್ಚು? ಏನು ಒಂದರೆಡು ಎಕರೆ ಹೊಲ ತೊಗೊಂಡು ಹತ್ತಿ ಬೆಳಿಬೇಕಂತೇನು? - ಅಂತ ಕೇಳಿದೆ.

ಅಯ್ಯೋ....ಇಲ್ಲ ಸಾಬ್. ಅಕಿಗೆ ಈಗ ಕಾಚಾ ಸೆ  ಕರ್ಚೀಫ್ ತಕ್, ಪೋಲ್ಕಾ ಸೆ ಪರ್ಕಾರ್ ತಕ್  ಎಲ್ಲದೂ ಪ್ಯೂರ್ ಕಾಟನ್ ನೇ ಬೇಕಂತೆ. ಏನು ಕೇಳ್ತೀರಿ ಸಾಬ್? - ಅಂದ ಕರೀಂ.

ಅಷ್ಟನ...........? ಚೊಲೋ ಆತ ತೊಗೋರಿ. ಗಾಂಧಿವಾದಿ ಆಗಿ ಫುಲ್ ಖಾದಿ ಅಂತಾಳೇನು? ತಪ್ಪೇನದ ಎಲ್ಲಾ ಕಾಟನ್ ಹಾಕ್ಕೊಂಡ್ರಾ? - ಅಂತ ಕೇಳಿದೆ.

ಅಯ್ಯೋ ಸಾಬ್! ಇಕೀದು ಎಲ್ಲಾ ಅತಿರೇಕ ನೋಡಿ. ಮಚ್ಚರದಾನಿ (mosquito curtain) ಕೂಡ ಕಾಟನ್ ದು ಬೇಕಂತೆ - ಅಂದ ಕರೀಂ.

ತಪ್ಪೇನದ ಅದರಾಗ? - ಅಂತ ಕೇಳಿದೆ.

ಸಾಬ್! ಕಾಟನ್ ಮಚ್ಚರದಾನಿ ಅಂದ್ರೆ ಮಚ್ಚರದಾನಿ ಹಾಗೆ ತೂತ ತೂತ ಇರೋ ಜಾಳಗಿ ಅಂತಾ ವಸ್ತ್ರದ್ದು ನೈಟಿ ಹಾಕ್ಕೊಂಡು ಮಲ್ಕೋತ್ತಾಳಂತೆ. ನಾನು ಅದೇ ಟೈಪ್ ಪೈಜಾಮ ಜುಬ್ಬಾ ಹಾಕ್ಕೊಬೇಕಂತೆ. ಇದು ಹುಚ್ಚು ಅಲ್ಲಾ ಕ್ಯಾ ಸಾಬ್? - ಅಂದ ಕರೀಂ.

ಹೋಗ್ಗೋ ಸಾಬ್ರಾ! ಇದು ವಿಪರೀತ ಆತಲ್ಲರೀ. ಇಕಿ ಏನು ಹತ್ತಿಮಬ್ಬೆ ಅವರ ಪೈಕಿ ಏನು? ಅಕಿ ಒಬ್ಬಾಕಿ ಇದ್ದಳು ಅತ್ತಿಮಬ್ಬೆ ಅಂತ. ಇಕಿ ಇದ್ದಾಳ ಹತ್ತಿಮಬ್ಬೆ. ಹತ್ತಿಮಬ್ಬೆ...ಹೀ.....ಹೀ.....ಹತ್ತಿಮಬ್ಬೆ.....ಮಸ್ತ ಅದ ತೊಗೋರಿ ನಿಮ್ಮ ಬೇಗಂ ನಾಮಧೇಯ - ಅಂದೇ.

ಅತ್ತಿಮಬ್ಬೆ ಕೌನ್ ಸಾಬ್? ಅಕಿಗೆ ಕ್ಯಾ ಅತ್ತಿ ಹಣ್ಣಿನದು ಹುಚ್ಚು ಕ್ಯಾ? - ಅಂತ ಕೇಳಿದ ಕರೀಂ.

ಏ ಇಲ್ಲೋ......ಅತ್ತಿಮಬ್ಬೆ, ಹತ್ತಿಮಬ್ಬೆ ಮಸ್ತ ಪ್ರಾಸ ಕೂಡತದ ನೋಡು ಅದಕ್ಕ ಹೆಸರ ಕೊಟ್ಟೆ ಅಷ್ಟ. ಅತ್ತಿಮಬ್ಬೆ ಯಾರೋ ಹಳೆ ಕಾಲದ ರಾಣಿ. ಕವಿ ರನ್ನಗ ಆಶ್ರಯ ಕೊಟ್ಟಿದ್ದಳಂತ. ಈಗ ಅಕಿ ಹೆಸರಿನ್ಯಾಗ ಅತ್ತಿಮಬ್ಬೆ ಪ್ರಶಸ್ತಿ ಅಂತ ಏನೋ ಕೊಡ್ತಾರ ನೋಡಪಾ. ನಿನ್ನ ಹೆಂಡ್ತಿ ಹತ್ತಿ ಹುಚ್ಚಿನ ಹೆಸರಾಗ ಹತ್ತಿಮಬ್ಬೆ ಪ್ರಶಸ್ತಿ ಅಂತ ಕೊಡಬೇಕಾಗಾಬಹುದು. ಕೊಡ್ತಿ ಏನು? - ಅಂತ ಹೇಳಿದೆ.

ಓಹೋ...ಹಾಗೆ ಕ್ಯಾ? ಇಕಿ ಒಳ್ಳೆ ಹತ್ತಿಮಬ್ಬೆ. ನಮಗೆ ಮಚ್ಚರದಾನಿ ಕಪಾಡಾದು ಪೈಜಾಮ ಜುಬ್ಬಾ ಹಾಕಿಕೊಂಡು ಮಲಕೊಂಡ್ರೆ ನಿದ್ದೇನೇ ಬರೋದಿಲ್ಲ ಸಾಬ್. ಭಾಳ ತ್ರಾಸ್ ಆಗಿದೆ - ಅಂದ ಕರೀಂ.

ಯಾಕೋ? ಮಚ್ಚರದಾನಿ ಕಟ್ಟಿಗೋಂಡರೇನು, ಅದರದ್ದು ವಸ್ತ್ರಾ ಹಾಕಿಕೊಂಡರೇನು? ಎಲ್ಲಾ ಒಂದ ಅಲ್ಲೇನು? ಗುಂಗಾಡು (ಸೊಳ್ಳೆ) ಹ್ಯಾಂಗ ಕಡಿತಾವ? ಹಾಂ? ಹಾಂ? - ಅಂದೆ.

ಇದಕ್ಕೇ ನಿಮಗೆ ಅಕಲ್ ಇಲ್ಲಾ ಅನ್ನೋದು. ಮಚ್ಚರದಾನಿ ಕಟ್ಟಿಕೊಂಡು ಮಲಗೋದು ಮತ್ತೆ ಅದರದ್ದು ವಸ್ತ್ರಾ ಹಾಕಿಕೊಂಡು ಮಲಗೋದು ಒಂದೇ ಕ್ಯಾ? ಮೈಮ್ಯಾಲೆ ಹಾಕ್ಕೊಂಡು ಮಲಗಿದರೆ ಜಾಳಿ ಒಳಗೆ ನೀಟಾಗಿ ತಮ್ಮ ಸೂಜಿ ಬಿಟ್ಟಿ ಮಚ್ಚರ್ ಮಸ್ತ ಕೋಲ್ಡ್ ಡ್ರಿಂಕ್  ಸ್ಟ್ರಾನಿಂದ ಕುಡಿದ ಹಾಗೆ ನಮ್ಮದೂಕಿ ಖೂನ ಕುಡಿತಾವೆ. ಗೊತ್ತು  ಕ್ಯಾ.....? ಅಷ್ಟೂ ತಿಳಿಯೋದಿಲ್ಲ ನಿಮಗೆ ಕ್ಯಾ? - ಅಂದ ಕರೀಂ.

ಹೌದು ನೋಡು. ಕರೆಕ್ಟ್ ಅದ ನೀ ಹೇಳುದು. ಮತ್ತ ನಿಮ್ಮ ಹೇಣ್ತಿ ಮಚ್ಚರದಾನಿ ಅರವೀದು ನೈಟಿ ಹಾಕ್ಕೊಂಡ ಮಲಕೊಂಡ್ರಾ ಅವರಿಗೆ ಕಡಿಯಂಗಿಲ್ಲಾ  ಗುಂಗಾಡು?  - ಅಂತ ಕೇಳಿದೆ.

ಅಯ್ಯೋ....ಅಕಿಗೆ ಬಿಡಿ. ಮೈಯಾಗೆ ಖೂನ್ ಕಮ್ಮಿ ಜೆಹೆರ್ ಜಾಸ್ತಿ ತುಂಬಿದೆ. ಅಕಿಗೆ ಕಡಿದು ಮಚ್ಚರ್ ಯಾಕೆ ಸಾಯ್ತಾವೆ? ಅವು ಭಾಳ ಸ್ಮಾರ್ಟ್ ಇದ್ದಾವೆ. ಬರೇ ನಮ್ಮದು ಖೂನ ಕುಡಿತಾವೆ. ಜೋಕ್ ಅತ್ಲಾಗೆ ಇರ್ಲಿ. ಅಕಿದು ಭಾಳ ಲೇಯರ್ ಕಪಡಾ ಇರ್ತಾವೆ ನೋಡ್ರೀ, ಆದಕ್ಕೇ ಅಕಿಗೆ ಏನೂ ಆಗೋದಿಲ್ಲ. ನಮಗೆ ಒಂದೇ ಲೇಯರ್. ಅದಕ್ಕೆ ಕಚ್ ಕಚ್ ಅಂತ ರಾತ್ರಿ ಎಲ್ಲಾ ಮಚ್ಚರ್ ಕಡಿತಾವೆ. ನಾವು ಪಟ್ ಪಟ್ ಅಂತ ಮಚ್ಚರ್ ಹೊಡ್ಕೊತ್ತಾ ನಿದ್ದೇನೇ ಇಲ್ಲಾ ಸಾಬ್....ಈಗ ಹೋಗಿ ಸ್ವಲ್ಪ ಮಲಗಿ ಬರಲಿ ಕ್ಯಾ? - ಅಂತ ಹೇಳಿ ಕೇಳಿದ ಕರೀಂ.

ಆದರೂ ಕರೀಂ....ಮಸಡಿಗೆ? ಅಲ್ಲೇನು ಮಾಡ್ಯಾಳ? ಅಲ್ಲೆ  ಅಕಿಗೆ ಗುಂಗಾಡ ಕಡಿಯೆಂಗಿಲ್ಲಾ? - ಅಂತ ಕೇಳಿದೆ.

ಸಾಬ್.....ನೀವು ಸ್ಪೈಡರ್ ಮ್ಯಾನ್ ಗೆ ನೋಡೀರಿ ಅಲ್ಲಾ? ಅವನು ಒಂದು ಜಾಳಿಗಿ ನಕಾಬ್ (ಮುಖವಾಡ) ಹಾಕ್ಕೊಂಡು ಇರ್ತಾನೆ ನೋಡಿ. ಅದೇ ತರಹ ನಮ್ಮ ಹಾಪ್ ಬೇಗಂ ಮಚ್ಚರದಾನಿ ಬಟ್ಟಿ ಒಳಗೆ ಒಂದು ಮಂಕಿ ಕ್ಯಾಪ್ ಹೊಲ್ಸಿಕೊಂಡು ಬಿಟ್ಟಿದ್ದಾರೆ. ಮೈತುಂಬಾ ಜಾಳಗಿ  ಜಾಳಗಿ ಬಟ್ಟಿ ಹಾಕ್ಕೊಂಬಿಟ್ಟಿ, ಜಾಳಗಿ ಮಂಗ್ಯಾನ ಟೊಪ್ಪಿಗಿ ಹಾಕ್ಕೊಂಡು ವಾಡೇದಾಗ ಅಡ್ಡಾಡುದ ನೋಡಿದ್ರೆ, ಸ್ಪೈಡರ್ ಮ್ಯಾನ್, ಸ್ಪೈಡರ್ ಮ್ಯಾನ್ ಅಂತ ಹಾಡಬೇಕು ನೋಡಿ.....ಹಾಗೆ. ಅದೂ ಬಿಳಿ ಬಣ್ಣದ ಜಾಳ್ಗಿ ಜಾಳ್ಗಿ ಡ್ರೆಸ್. ಒಳ್ಳೆ ದೆವ್ವಾ - ಅಂದಾ ಕರೀಂ.

ಸಾಬ್ರಾ....ಸ್ಪೈಡರ್ ಉಮನ್....ಸ್ಪೈಡರ್ ಉಮನ್.....ಮಚ್ಚರದಾನಿ ವಸ್ತ್ರದ ಕುರ್ತಾ ಪೈಜಾಮ ಹಾಕ್ಕೊಂಡ ನೀವು ಸ್ಪೈಡರ್ ಮ್ಯಾನ್....- ಅಂತ ಸಣ್ಣದಾಗಿ ಕರೆಕ್ಟ್ ಮಾಡಿ ಕಾಡಿಸಿದೆ.

ಓಹೋ.....ಹಾಂಗ ಅನ್ನು? ಭಾಳ ಗಹನವಾದ ವಿಚಾರ. ಅಕಿಗೆ ಯಾರು ಮಚ್ಚರ್ದಾನಿ ಅರವೀದು ವಸ್ತ್ರಾ ಮಾಡಿ ಹೊಲಿಸ್ಕೊಂಡು, ಅದನ್ನ ಹಾಕ್ಕೊಂಡು ಅಡ್ಡಾಡು ಅಂತ ಮನಿಹಾಳ ಐಡಿಯಾ ಕೊಟ್ಟಾರೋ? - ಅಂತ ಕೇಳಿದೆ.

ಅದೇ ಸಾಬ್. ಮತ್ಯಾರು? ಅವನೇ ಡಾ. ಎಸ್. ಎಸ್. ಉಳ್ಳಾಗಡ್ಡಿ. ಮಸ್ತ ಪುಂಗಿ ಟ್ರೀಟ್ಮೆಂಟ್ ಕೊಟ್ಟು ಇಕಿದು ಸಾಂಪ್ ಸಪ್ನಾ ಬರೊ ಬೀಮಾರಿ ಗುಣಾ ಮಾಡಿದ. ಈಗ ಹೋಗಿ ಅವನಕಡೆ ಮಚ್ಚರ್ ಭಾಳ ಅವೇ ಅಂತೆ ಹೇಳಿದ್ದಕ್ಕೆ, ಇದನ್ನ ಹೇಳಿ, ನಮ್ಮ ಹಾಪ್ ಬೇಗಂ ಕಡೆ ಮತ್ತೊಂದು ಹತ್ತು ಸಾವಿರ ಇಸ್ಕೊಂಡು ಈ ಮನಿಹಾಳ ಐಡಿಯಾ ಕೊಟ್ಟಾನೆ. ಪುಂಗಿ ಊದಿ ಹಾವನ್ನು ಓಡಿಸಿದ್ದ ನಮ್ಮ ಬೇಗಂ ಅವನಿಂದ ಭಾಳಾ  ಇಂಪ್ರೆಸ್ ಆಗ್ಬಿಟ್ಟಿ ಅವನು ಹೇಳಿದಾ ಹಾಗೆ ಮಚ್ಚರದಾನಿ ಕಪಡೇದು ಕಾಚಾ ಸೆ ಕರ್ಚೀಫ್ ತಕ್, ಚಡ್ಡಿ ಸೆ ಚೂಡಿದಾರ್ ತಕ್  ಮತ್ತು ಪೋಲ್ಕಾ ಸೆ ಪರ್ಕಾರ್ ತಕ್ ಹೊಲಿಸ್ಕೊಂಡು ಬಿಟ್ಟಿದೆ. ಕರ್ಮ......ಕರ್ಮ......- ಅಂತ ಉಳ್ಳಾಗಡ್ಡಿ ಡಾಕ್ಟರನ ಪ್ರತಾಪ ಹೇಳಿ ಮುಗಿಸಿದ.

ಹೋಗ್ಗೋ......ಇವನ.....ಇಲ್ಲೂ ಬಂದನಾ ಉಳ್ಳಾಗಡ್ಡಿ ಡಾಕ್ಟರ? ಅವನ್ನ ಓಡಸ್ರೀ. ನಿಮ್ಮ ಗ್ಯಾಂಗ ಅದ, ಮತ್ತೊಂದ ಅದ ಅಂತ ಅನ್ನಕೋತ್ತ ಇರ್ತೀರಿ - ಅಂತ ಸಾಬರಿಗೆ ಐಡಿಯಾ ಕೊಟ್ಟೆ.

ಸಾಬ್ ನಿಮಗೆ ಇನ್ನೊಂದು ಖಬರ್ ಗೊತ್ತು ಕ್ಯಾ? - ಅಂದ ಕರೀಂ.

ಏನಪಾ? ಹೇಳು - ಅಂದೆ.

ಬಹುತ್ ಖರಾಬ್ ಖಬರ್ ಸಾಬ್.......ನಮ್ಮ ಬೇಗಂ ನಾವು ಕೊಡಸಿದ್ದ ರೇಶಂ ದು ಸೀರೀಗೆ ಎಲ್ಲಾ ತೊಗೊಂಡು ಹೋಗಿ, ಅದರಿಂದ ಕಿಡಕಿಗೆ ಹಾಕೋ ಕರ್ಟನ್ ಹೋಲಿಸಿ ಬಿಟ್ಟಿದ್ದಾರೆ ಸಾಬ್.....ಇದಕ್ಕೆ ಏನಂತೀರಿ? -ಅಂದ ಕರೀಂ.

ಇದು ದೊಡ್ಡ ಘಾತ ಆತಲ್ಲರೀ ಸಾಬ್ರಾ. ರೆಶಮೀ ಸೀರೀ ಕರ್ಟನ್. ವಾಹ! ವಾಹ! ಕ್ಯಾ ಬಾತ್ ಹೈ? ವಿಚಿತ್ರ. ಆದರೂ ಸತ್ಯ. ಇದು ಆ ಉಳ್ಳಾಗಡ್ಡಿ ಐಡಿಯಾ ಏನು? ಅಥವಾ ಇದನ್ನ ಯಾವದರ ಬಳ್ಳೊಳ್ಳಿ ಡಾಕ್ಟರ್ ಐಡಿಯಾ ಕೊಟ್ಟಾನೋ? - ಅಂತ ಕೇಳಿದೆ.

ಇಲ್ಲಾ ಸಾಬ್....ಇದು ಇಕಿದೇ ಸ್ವಂತ ಐಡಿಯಾ. ಹ್ಯಾಗೂ ಈಗ ಕಾಟನ್ ಹುಚ್ಚು ಹತ್ತಿದೆ. ರೇಷ್ಮೆ ಸೀರೆ ಯಾಕೆ ಅಂತ ಹೇಳಿ, ಪರಪರಾ ಅಂತಾ ಕತ್ತರಿಸಿ ಕತ್ತರಿಸಿ ಕರ್ಟನ್, ಕಾಲು ಒರೆಸೋ ಬಟ್ಟೆ, ಟಾವೆಲ್ ಎಲ್ಲ ಮಾಡಿ ಮಾಡಿ ಹಾಕ್ತಿದಾಳೆ ನಮ್ಮ ಬೇಗಂ. ಎಲ್ಲಾ 10-15-20 ಸಾವಿರ ರುಪೈದು ಸೀರೆ ಸಾಬ್! ನಮ್ಮದು ಹೊಟ್ಟಿ ಉರಿದು......ಉರಿದು.....ಏನು ಮಾಡೋದು ಸಾಬ್? - ಅಂತ ತಲಿ ಮ್ಯಾಲೆ ಕೈ ಇಟ್ಟಗೊಂಡ ಕರೀಂ.

ಹೋಗ್ಗೋ....ಸಾಬ್ರಾ! ಇದು ವಿಚಿತ್ರ ಆತಲ್ಲರಿ. ನಿಮ್ಮದ ಲಕ್ ಬಿಡ್ರಿ. ಅವನೌನ ಮೈ ವರೆಸಿಕೊಳ್ಳಲಿಕ್ಕೂ ರೇಶ್ಮಿ ಟಾವೆಲ್. ಕೈ ವರೆಸಿಕೊಳ್ಳಲಿಕ್ಕೂ ರೇಶ್ಮಿ ನ್ಯಾಪಕಿನ್. ಏನ ಕಥಿ? ನವಾಬರ ಕಾಲ ವಾಪಸ್ ಬಂದ ಹಾಂಗ ಅನ್ನಸ್ತದ ನೋಡ್ರೀ! - ಅಂದೆ.

ಹೌದು! ಹೌದು! ನಿಮಗೆ ಎಲ್ಲಾ ಹಾಗೆ ಅನ್ನಿಸ್ತದೆ. ಈ ಕಾಟನ್ ಹುಚ್ಚ ಬಿಟ್ಟ ಮ್ಯಾಲೆ ಮತ್ತೆ ರೇಶ್ಮಿ ವಸ್ತ್ರಾ ಕೊಡಸು ಅಂದ್ರು ನಂದು ಮತ್ತೆ 5-6 ಲಾಖ್ ಫುಲ್ ಮುಂಡಾಯಿಸ್ಕೊಂಡು ಹೋಗಿ ಬಿಡ್ತದೆ. ಗೊತ್ತು ಕ್ಯಾ? - ಅಂದ ಕರೀಂ.

ಸಾಬ್! ಲಾಸ್ಟ್ ಒಂದು ಬಾರಿ confirm ಮಾಡಿ. ಅದು ಆ ಕಾಟನ್ ಪೇಟೆದು ಪುಷ್ಪಾಜಿ ಕಾಟನ್ ಬಿಸಿನೆಸ್ಸ್ ಮಾಡೋದಿಲ್ಲ ಅಲ್ಲಾ? ಯಾಕೆಂದ್ರೆ ನಮಗೆ ಕಾಟನ್ ಹೋಲ್ ಸೇಲ್ ನಲ್ಲಿ ಚೀಪಾಗಿ ಕೊಡೋರು ಬೇಕು - ಅಂದ ಕರೀಂ.

ಏ.....ಇಲ್ಲೋ....ಅವರದ್ದು ಕಾಟನ್ ಗೀಟನ್ ಬಿಸಿನೆಸ್ಸ್ ಇಲ್ಲ. ಅವರ ಹೆಸರಾ ಎತ್ತಬ್ಯಾಡ ನೀ. ತಿಳಿತಲ್ಲ? - ಅಂದೆ.

ಓಕೆ ಸಾಬ್.....ಇನ್ನು ನಮ್ಮದೇ ಹೊಲದಲ್ಲಿ ಕಾಟನ್ ಬೆಳೆಯೋದು ಬೆಟರ್ ಅನ್ನಿಸ್ತದೆ. ವಿಚಾರ ಮಾಡ್ತೇನಿ. ಈಗ ಬರ್ತೇನಿ. ಖುಧಾ ಹಾಫಿಜ್ - ಅಂತ ಹೇಳಿ ಕರೀಂ ರೈಟ್ ಅಂದ.

ಏನೋಪ್ಪಾ.....ಇದು ಹುಚ್ಚು ಮುಖದ ಎಷ್ಟನೇ ಮುಖವೋ ಏನೋ? ದೇವರಿಗೇ ಗೊತ್ತು.

No comments: