Wednesday, March 20, 2013

ಬೇಬಿ ಗಂಡಾಮೃಗ

ನಮ್ಮ ಕರೀಂ ಸಾಬರು ಮತ್ತ ಸಿಕ್ಕಿದ್ದರು. ಯಾಕೋ ಸ್ವಲ್ಪ ಚಿಂತಾಕ್ರಾಂತರಾಗಿದ್ದಾಂಗ ಕಂಡರು.

ಏನ್ ಕರೀಂ? ಆರಾಮ್ ಏನಪಾ? - ಅಂತ ಕೇಳಿದೆ.

ಎಲ್ಲಿ ಆರಾಮ್ ಸಾಬ್? ಎಲ್ಲಾ ಹರಾಮ್ ಆಗಿಬಿಟ್ಟಿದೆ. ಈ ಹಾಪ್ ಬೇಗಂ ಕಾಲದಲ್ಲಿ. ಈಗ ಅಕಿಗೆ ಬೇಬಿ ಗಂಡಾಮೃಗದ ಹುಚ್ಚು ಹತ್ತಿದೆ. ಬೇಬಿ ಗಂಡಾಮೃಗ ತಂದುಕೊಡ್ರೀ ಅಂತ ತಾಕೀತ್ ಮಾಡಿಬಿಟ್ಟಿದ್ದಾಳೆ. ಈಗ ನಾವು ಬೋಟ್ಸವನಕ್ಕೋ, ನಮೀದ ಮಿಯಾಕ್ಕೋ ಹೋಗಿ ಬೇಬಿ ಗಂಡಾಮೃಗ ಹುಡುಕಿ, ಆರಿಸಿ ತಂದು ಕೊಡಬೇಕು. ಯಾ ಅಲ್ಲಾ!!!ಯಾ ರಬ್ಬಾ!!!, ಅಂತ ಹೇಳುತ್ತಾ ಕೂತ ಬಿಟ್ಟ.

ಒಂದರ ಮ್ಯಾಲೊಂದು ಅನರ್ಥದ ಬಾಂಬ್ ಸುರಿಮಳೆ. ಏನಂತ ತಿಳಿಲಿಲ್ಲ. ಎಲ್ಲದಕ್ಕೂ ವಿವರಣೆ ಕೇಳಿಕೋತ್ತ ಕೂತರ ಇವ ಒಂದಕ್ಕ ಎರಡು ಹೇಳಿ ಹರೋ ಹರ ಮಾಡಿ ಬಿಡ್ತಾನ. ನಾವ ಸ್ವಲ್ಪ ಊಹಾ  ಮಾಡಿ ವಿವರಣೆ ತೆಗೆದು ಖಾಲಿ ಬಿಟ್ಟ ಜಾಗಗಳಲ್ಲಿ ಟಿಮ್ ಟಿಮ್ ಹೊಡಕೋಬೇಕು, ಅಲ್ಲಲ್ಲ ತುಂಬಿಕೋಬೇಕು.

ಸಾಬ್ರಾ..... ಕಂಗ್ರಾಟ್ಸ್ ರೀ!!! ಅಂತೂ ನಿಮ್ಮ ಹಾಪ್ ಬೇಗಂ ನಿಂದ ನಿಮಗ ಛುಟ್ಕಾರಾ ಅಂದ್ರ ಬಿಡುಗಡೆ ಸಿಕ್ಕತು ಅಂತ ಆತು. ಕಂಗ್ರಾಟ್ಸ್!!!ಕಂಗ್ರಾಟ್ಸ್!!!, ಅಂತ ಅಭಿನಂದನೆ ಸಲ್ಲಿಸಿದೆ.

ಹಾಂ? ಏನು ಛುಟ್ಕಾರಾ? ಆ ಹಾಪ್ ಬೇಗಂ ನಮ್ಮದೂಕೆ ಬಿಟ್ಟಿಲ್ಲ ಸಾಬ್. ಬೇಬಿ ಗಂಡಾಮೃಗಕ್ಕೆ ಹೊಸಾ ಡಿಮಾಂಡ್ ಮಾಡಿದ್ದಾರೆ ಅಂದ್ರೆ ತಲಾಕ್ ಕೊಟ್ಟಿದಾರೆ ಅಂತೀರಲ್ಲ? ಆ ನಸೀಬ್ ನಮಗೆ ಇಲ್ಲಾ ಸಾಬ್, ಅಂತ  ನಾ ಊಹೆ ಮಾಡಿದ ಅನುಕೂಲಕರ  ಪರಿಸ್ಥಿತಿ ಇಲ್ಲ ಅಂತ ಖಚಿತ ಪಡಿಸಿದ.

ಮತ್ತೇನ್ರೀ???? ಬೇಬಿ ಗಂಡಾಮೃಗ ಅಂದ್ರ ಏನು? ನಾ ಏನೋ ನಿಮ್ಮ ಬೇಗಂ ನೀವು ಬ್ಯಾಸರ ಆಗಿ, ಮೃಗದಂತೆ ಇರೋ, ಜಾನ್ಸನ್  ಬೇಬಿ ಪೌಡರ್ ಬೇಬಿ ಫೇಸ್ ಇರೋ ಹೊಸ ಗಂಡನ್ನು ಹುಡುಕಿಕೊಟ್ಟು, ನೀವು ಪೆಟ್ಟಿಗಿ ಕಟ್ಟಿ, ಮನಿ ಮನ ಎರಡೂ ಖಾಲಿ ಮಾಡಿ ಹೊಂಡ್ರೀ , ಅಂತ ನಿಮ್ಮ ಬೇಗಂ ನಿಮಗ ಹುಕುಂನಾಮಾ ಕೊಟ್ಟು ನಿಮಗ ನಾಮಾ ಹಾಕಿದರೋ ಏನೋ ಅಂತ ತಿಳ್ಕೊಂಡಿದ್ದೆ. ನೋಡಿದರ ಪರಿಸ್ಥಿತಿ ಬೇರೇನೋ ಅದ. ಸಿಂಹದಂತೆ ಇರುವ  ಪುರುಷಂಗ ಪುರಷಸಿಂಹ ಅಂದಾಂಗ ಮೃಗದಂಗ ಅಂದ್ರ ಕಾಡಹಂದಿ ಹಾಂಗ ಹಟ್ಟಾ ಕಟ್ಟಾ ಇರೋ ಆದ್ಮಿಗೆ ಎಲ್ಲೆ ನಿಮ್ಮ ಮಿಸೆಸ್ ಗಂಡಾಮೃಗ ಅಂತ ಅಂದರೋ ಅಂತ ನಮ್ಮ ಡೌಟ್. ಯಾಕಂದ್ರ ಅವರಿಗೆ ನಿಮ್ಮ ಹಕ್ಕಿ ಪಿಕ್ಕಿ ಭಾಷಾ ಒಂದು ಬಿಟ್ಟರ ಯಾವದಾ ಭಾಷಾ ಸರೀತ್ನಾಗಿ ಬರೋದಿಲ್ಲ ನೋಡ್ರೀ, ಅದಕ್ಕ, ಅಂತ ಹೇಳಿದೆ.

ಅಷ್ಟಕ್ಕೂ ಕಾಡಹಂದಿ ಹಾಂಗ ಇರೋ ಗಂಡನ ಯಾಕ ಬೇಕಂತ ನಿಮ್ಮ ಬೇಗಂಗ? ಹಂದಿಯಂತ ಕ್ವಾರೀಲೆ (ಕೋರೆ) ತಿವಿಸ್ಕೊಬೇಕಾಗ್ಯದ ಏನು ನಮ್ಮ ಹೆಂಡರಿಗೆ? ಏನು ವಿಚಿತ್ರ ಆಶಾರಿ?, ಅಂತ ಮತ್ತೂ ಕೇಳಿದೆ. 

ಅಯ್ಯೋ.... ಸಾಬ್.... ನಿಮಗೆ ತಲಿ ಇಲ್ಲ ಕ್ಯಾ? ಗಂಡಾಮೃಗ ಅಂದ್ರೆ ಕಾಡಹಂದಿ ಗತೆ ಇರೋ ಗಂಡಾ ಅಂತೆ!!!ಏನಂತ ಹೇಳ್ತೀರಿ???ಹಾಂ? ಹಾಂ? ಮತ್ತೆ ನಮ್ಮ ಬೇಗಂ ಬೇರೆ ಮತ್ತೊಂದು ಗಂಡಾಗೆ ಕೇಳಿಲ್ಲ. ಬೇಬಿ ಗಂಡಾಮೃಗ ಅಂದ್ರೆ ಒಂದು ಟೈಪ್ ಜಾನ್ವರ್. ಅಂದ್ರೆ ಪ್ರಾಣಿ. ಅದರದ್ದು ಬಚ್ಚಾ ಮಾಫಿಕ್ ಅಂದ್ರೆ ಸಣ್ಣ ಮರಿಗೆ ತಂದು ಕೊಡಿ ಅಂತ ಹೇಳಿದಾರೆ, ಅಂತ ನನ್ನ ತಪ್ಪು ತಿದ್ದಿದ.

ಹಾಂ!?  ಹಾಂ!? ಏನಪಾ ಇದು ಗಂಡಾಮೃಗ ಅನ್ನೋ ಪ್ರಾಣಿ? ಎಲ್ಲ ಸಿಗ್ತದ ಇದು ಸಾಬ್ರಾ? - ಅಂತ ಕೇಳಿದೆ.

ಸಾಬ್.... ಅದು ಆಫ್ರಿಕಾ ಒಳಗೆ ಸಿಗ್ತದೆ. ಒಂದು ಕೊಂಬು ಇರ್ತದೆ ನೋಡಿ. ಭಾಳ ಹೊನಗ್ಯಾ ಇದ್ದಂಗೆ ಇರ್ತದೆ. ನಮ್ಮಲ್ಲಿ ಕೇವಲ ಅಲ್ಲೆಲ್ಲೋ ಆಸಾಂ ಒಳಗೆ ಮಾತ್ರ ಇರ್ತದೆ. ನಮ್ಮ ಮುಲ್ಕನಲ್ಲಿ ಇರೋ ಗಂಡಾಮೃಗಕ್ಕೆ ಒಂದೇ ಕೋಡ ಇರ್ತದೆ. ಆಫ್ರಿಕಾ ಗಂಡಾಮೃಗಕ್ಕೆ ಎರಡು ಇರ್ತದೆ, ಅಂದ ಕರೀಂ.

ಆಫ್ರಿಕಾ, ಕೋಡು, ಹೊನಗ್ಯಾ ಸೈಜಿನ ಪ್ರಾಣಿ, ನಮ್ಮ ದೇಶದಲ್ಲೂ ಅದ, ನಮ್ಮಲ್ಲಿ ಇರೋದಕ್ಕೆ ಒಂದು ಕೋಡು, ಅಲ್ಲಿ ಇರೋದಕ್ಕೆ ಎರಡು ಕೋಡು.

ಏನೋ ಹೊಳಿತು.


 ಹಾಂ!!!ಇದು ಘೇಂಡಾಮೃಗ ಇರಬೆಕು.

ಅಕಿ ಹಾಪ್ ಬೇಗಂ ಏನು ಹೇಳಿದಳೋ, ಇವನು ಏನು ಕೇಳಿದನೋ ಗಂಡಾಮೃಗ ಅನಕೋತ್ತ ಓಡಾಡ್ಲಿಕತ್ತಾನ.

ಸಾಬ್ರಾ.....ಅದು  ಘೇಂಡಾಮೃಗ ಏನ್ರೀ? ಕೊಡ್ರೀ ಇಲ್ಲೆ ನಿಮ್ಮ ಸ್ಮಾರ್ಟ್ ಫೋನ್, ಅಂತ ಫೋನ್ ಇಸ್ಕೊಂಡೆ. rhinoceros ಅಂತ ಗೂಗಲ್ ಮಾಡಿದೆ. ಬಂತು ಘೇಂಡಾದ ಚಿತ್ರ.

ಸಾಬ್ರಾ ಇದ ಏನ್ರೀ? ನಿಮ್ಮ ಬೇಗಂ ತೊಗೊಂಡು ಬಾ ಅಂದ ಪ್ರಾಣಿ? ಇದರ ಮರಿ ಯಾಕ ಬೇಕಂತ? ಏನು ಮನಿಯೊಳಗ ಝೂ ಮಾಡೋ ಇರಾದಾ ಅದ ಏನು? ಹಾಂ? ಹ್ಯಾಂಗೂ ಒಂದು ಹಳೆ ಹೆಣ್ಣ ಕುದರಿ ಒಂದು ಮುದಕ ಧೋಭಿ ಕತ್ತಿ ವಾಡೆಯೊಳಗ ಇಟ್ಟೀರಿ. ಅವಕ್ಕ ಇದು ಒಂದು ಬೇಬಿ ಗಂಡಾಮೃಗ ಅಲ್ಲಲ್ಲ ಘೇಂಡಾಮೃಗ ಸೇರಿಸಿ ಒಂದು ಝೂ ಮಾಡೋ ಪ್ಲಾನ್ ಅದ ಏನು? - ಅಂತ ಕೇಳಿದೆ.

ಇಲ್ಲ ಸಾಬ್.... ಅದು ಘೇಂಡಾದು ಮೃಗ ಇರ್ತದೆ ನೋಡಿ, ಅದರ ಕೊಂಬು ಇರ್ತದೆ ನೋಡಿ, ಅದರಲ್ಲಿ ಭಾರಿ ಪಾವರ್ ಇರ್ತದೆ ಅಂತೆ. ಅದನ್ನ ತೇಯಿದು ಜೇನತುಪ್ಪಾ ಜೊತೆ ತೊಗೊಂಡ್ರೆ ಭಾರಿ ಪಾವರ್ ಬರ್ತದೆ ಅಂತೆ. ನಮ್ಮ ಬೇಗಂ ತಲಿ ಒಳಗೆ ಅದನ್ನ ಯಾರೋ ಹಾಕಿ ಬಿಟ್ಟಿದ್ದಾರೆ. ಅದಕ್ಕೇ ಒಂದು ಬೇಬಿ ಘೇಂಡೇಕೊ ತಂದು ಕೊಡಿ ಅಂತ ಗಂಟು ಬಿದ್ದಿದ್ದಾಳೆ, ಅಂತ ವಿವರಣೆ ಕೊಟ್ಟ ಕರೀಂ.

ಓಹೋ!!! ಇದು ಯಾವದೋ ಉಳ್ಳಾಗಡ್ಡಿ ಡಾಕ್ಟರ್ ನವತಾರುಣ್ಯಕೆ ಕೊಟ್ಟ ಔಷಧಿ ಇರಬೇಕು ಅನ್ನಿಸ್ತು. ಆ ಮ್ಯಾಲೆ ಕೇಳೋಣ ಅಂತ ಬಿಟ್ಟೆ.

ಸಾಬ್ರಾ..... ಈಗ ಎಲ್ಲಿಂದ ಬೇಬಿ ಘೇಂಡಾಮೃಗ ತಗೊಂಡು ಬರೋರು ನೀವು? - ಅಂತ ಕೇಳಿದೆ.

ಸಾಬ್ ಅದು ಬೋಟ್ಸವನದಲ್ಲಿ ಸಿಗ್ತದೆ ಅಂತೆ. ಅಲ್ಲಿ ಇಲ್ಲಾ ಅಂದ್ರೆ ನವೀದ್ ಮಿಯಾ ಕಡೆ ಹೋಗಿ ತರಬೇಕು ನೋಡಿ ಸಾಬ್. ಭಾಳ ಖರ್ಚಿನ ಕೆಲಸ, ಅಂದ ಕರೀಂ.

ಬೋಟ್ಸವನ, ನವೀದ್ ಮಿಯಾ!!!!! ಏನು ಇವು?!!!!, ನನಗ ತಿಳಿಲಿಲ್ಲ.

ಸಾಬ್ರಾ.....ಬೋಟ್ಸವನ ಅಂದ್ರ ನಮ್ಮ ತಪೋವನ ಇದ್ದಂಗ ಯಾವದರ ಸ್ವಾಮಿಗಳ ಆಶ್ರಮ ಏನು? ಯಾವ ಸ್ವಾಮಿಗಳು ಇದ್ದಾರ ಅಲ್ಲೇ? ಎಲ್ಲಾ ಸ್ವಾಮಿಗಳು ತಮ್ಮ ಆಶ್ರಮ ಒಳಗ ಚಿಗರಿ ಸಾಕಿದರ ನಿಮ್ಮ ಬೋಟ್ಸವನದ ಸ್ವಾಮಿಗಳು ಘೇಂಡಾಮೃಗ ಸಾಕಿದ್ದು ಅಲ್ಲದ ಅಲ್ಲೇ ಅವನ್ನ ಬ್ರೀಡ್ ಮಾಡಿ ನಾಯಿ ಮರಿ ಮಾರಿದಾಂಗ ಘೇಂಡಾಮೃಗ ಮರಿ ಸಹಿತ ಮಾರತಾರ ಏನು? ಯಾವ ಸ್ವಾಮಿಗಳೋ ಮಾರಾಯ ಅವರು? ಹೆಣ್ಣ ಮರಿ ತರವನೋ ಗಂಡ ಮರಿ ತರವನೋ ಘೇಂಡಾಮೃಗದ್ದು? - ಅಂತ ಕೇಳಿದೆ.

ಅಯ್ಯೋ!!!!!ಸಾಬ್!!!!ನಿಮಗೆ ಕಾಮನ್ ಸೆನ್ಸ್ ಇಲ್ಲ ಕ್ಯಾ? ಬೋಟ್ಸವನ ಅಂದ್ರೇ ತಪೋವನದ ಹಾಗೆ ಯಾವದೋ ಸ್ವಾಮಿಯ ಆಶ್ರಮ ಅದು ಇದು ಅಂತೀರಲ್ಲ. ಅದು ಆಫ್ರಿಕಾದಲ್ಲಿ ಒಂದು ದೇಶ. ಜನರಲ್ ನಾಲೆಜ್ ಇಲ್ಲ ಕ್ಯಾ? ಹಾಂ? ಹಾಂ? - ಅಂತ ನನಗ ಜಬರಿಸಿಬಿಟ್ಟ ಹುಸ್ಸೂಳೆಮಗ.

ಯಾವ ದೇಶರೀ? ಹಂಗಂತ ಯಾವ ದೇಶ ಇಲ್ಲ. ಸುಮ್ಮ ಸುಮ್ಮನ ಚೋಡ್ತೀರಿ ಕ್ಯಾ? - ಅಂತ ನಾನೂ ರಿವರ್ಸ್ ಬಾರ್ಸಿದೆ.

ನೋಡಿ ಇದೇ ದೇಶ.....Botswana.... ಅಂತ ಒಂದು ದೇಶ ತೋರಿಸಿದ, ಕರೀಂ ಅವನ ಸ್ಮಾರ್ಟ್ ಫೋನ್ ಒಳಗ.

ಮಾರಾಯ!!! ಅದು ಬೋಟ್ಸವಾನಾ ಅಂತಪಾ. ನೀ  ಬೋಟ್ಸವನ ಬೋಟ್ಸವನ ಅಂದಿ. ತಪೋವನ ಅದು ಇದು ಅಂತ ಆಶ್ರಮ ಗುಂಗಿನ್ಯಾಗ ಇದ್ದ ನನಗ ನಿನ್ನ ಬೋಟ್ಸವನ ಯಾವದೋ ಆಶ್ರಮದ ಹೆಸರು ಕೇಳಿದಂಗ ಆತು. ಅದಕ್ಕ ಗೊಂದಲ. ಇರಲಿ ನವೀದ್ ಮಿಯಾ ಅವರ ಕಡೆ ಘೇಂಡಾಮೃಗದ ಮರಿ ಅದ ಅಂದಿ. ಅವರು ಯಾರು? ನಿಮ್ಮ ಮಾಮಾ ಛೋಟಾ ವಕೀಲ್ ಪೈಕಿ ಏನು? ಅವರ್ಯಾಕ ಘೇಂಡಾಮೃಗ ಸಾಕ್ಯಾರ? - ಅಂತ ಕೇಳಿದೆ.

ಅಯ್ಯೋ..... ನವೀದ್ ಮಿಯಾ, ಜಾವೇದ್ ಮಿಯಾ ಅನ್ನೋಕೆ ಅವರು ಕ್ಯಾ ನಮ್ಮ ಸಾಲೇಗಳು ಅಂತ ತಿಳದೀರಿ ಕ್ಯಾ? ಅದೂ ಒಂದು ದೇಶ. ಆಫ್ರಿಕಾ ಒಳಗೆ ಅದೇ. ಬೋಟ್ಸವಾನಾ ಬಾಜೂಕೇ ಅದೇ. ಬೋಟ್ಸವಾನಾ ಒಳಗೆ ಘೇಂಡಾ ಮರಿ ಸಿಗಲಿಲ್ಲ ಅಂದ್ರೆ ನವೀದ್ ಮಿಯಾ ಒಳಗೆ ಹೋಗ್ಬಿಟ್ಟು, ಅಲ್ಲಿಂದ ತರೋದು, ಅಂದ ಕರೀಂ. 

ಏ....ಎಲ್ಲಿ ಹಚ್ಚಿ!!! ಹೋಗಲೇ..... ನವೀದ್ ಮಿಯಾ ಅಂತ ಯಾವದೇ ದೇಶ ಇಲ್ಲ. ತೋರ್ಸು ನೋಡೋಣ, ಅಂತ ಹೇಳಿದೆ.

ತೋರ್ಸಿದ. ನೋಡಿದ್ರ Namibia ಅನ್ನೋ ಆಫ್ರಿಕಾದ ದೇಶ ಕಾಣಿಸ್ತು. ಪಾಪ ಯಾರೋ ಏನೋ ಹೇಳ್ಯಾರ. ಇವಾ ನಮೀಬಿಯಾ ದೇಶಕ್ಕ ನವೀದ್ ಮಿಯಾ ಅನ್ನಕೋತ್ತ ಅಡ್ಡಾಡಲಿಕತ್ತಾನ. ಹಾಪಾ!!!

ಹ್ಞೂ.... ಅಂತೂ ಆಫ್ರಿಕಾಕ್ಕ ಹೊಂಟಿ ಅಂತ ಆತು. ಚೊಲೋದು. ನೋಡಿಕೊಂಡು ಹೋಗಿ ಬಾ. ಎಲ್ಲಾ ಕಾಡು ಮಂದಿ, ಕಾಡು ಪ್ರಾಣಿ ಇರೋ ಖತರ್ನಾಕ್ ಜಾಗ. ಲಗೂನ ಹೋಗಿ, ಭರಕ್ಕನ ಒಂದು ಘೇಂಡಾಮೃಗದ ಮರಿ ತೊಗೊಂಡು ಬಂದು ಬಿಡು. ಎಷ್ಟು ದಿವಸದ ಪ್ಲಾನ್? - ಅಂತ ಕೇಳಿದೆ.

ಇವ ಎಲ್ಲರ ಆಫ್ರಿಕಾ ಒಳಗ ಕಳಕೊಂಡರ, ಇವನ್ನ ಹುಡಕಲಿಕ್ಕೆ ನಾ ಹೋಗಬೇಕಾದೀತು ಅದೂ ಕಪ್ಪು ಖಂಡ ಆಫ್ರಿಕಾಕ್ಕ. ಬ್ಯಾಡಪ್ಪೋ ಬ್ಯಾಡ!

ಸಾಬ್... ನಮ್ಮದು ಒಂದು ದೊಡ್ಡ ಪ್ಲಾನ್ ಅದೆ. ಕಮ್ಮಿ ಕಮ್ಮಿ ಅಂದ್ರೂ ಒಂದು ತಿಂಗಳ ಆಗ್ತದೆ ಸಾಬ್, ಅಂದ ಕರೀಂ.

ಒಂದು ತಿಂಗಳ??!!! ಭಾಳ ಜಾಸ್ತಿ ಆತು. ಹೆಚ್ಚಂದ್ರ ಎರಡು ವಾರ ಸಾಕಪಾ. ಮೊದಲು ಬೋಟ್ಸವಾನಾಕ್ಕ ಹೋಗು. ಅಲ್ಲೇ ಮರಿ ಸಿಕ್ಕಿಬಿಡ್ತು ಅಂದ್ರ ಒಂದ ವಾರದಾಗ ವಾಪಾಸ್ ಬರಬಹುದು. ಇಲ್ಲಂದ್ರ ಬಾಜೂಕ ನಮಿಬಿಯಾಕ್ಕೂ ಹೋದ್ರ ಇನ್ನೊಂದು ವಾರ. ಒಂದು ತಿಂಗಳು ಯಾಕಪಾ? - ಅಂತ ಕೇಳಿದೆ. 

ಆಫ್ರಿಕಾ ಒಳಗೂ ಏನೋ ಕಿತಬಿ ಮಾಡೋ ಪ್ಲಾನ್ ಇಟ್ಟಂಗ ಕಾಣ್ತಾನ.

ಸಾಬ್....  ನಾವು ಮೊದಲು ಎರಡು ವಾರ ಅಲ್ಜೇರಿಯಾ ಮತ್ತ ಟ್ಯೂನಿಸಿಯಾಕ್ಕೆ ಹೋಗ್ತೇವೆ ಸಾಬ್. ನಿಮಗೆ ಗೊತ್ತು ಅಲ್ಲ? ನಮಗೆ ಅಲ್ಲಿ ಇಬ್ಬರು ಫೇಸ್ಬುಕ್ ಮೇಲೆ ಸಿಕ್ಕ ಆಂಟಿ ಮಾಲ್ ಅವೇ ಅಂತ. ಅವರು ನಮ್ಮ ಸಲುವಾಗಿ ಬೆಲ್ಲಿ ಡಾನ್ಸ್ ಸಹ ಮಾಡ್ತಾರೆ. ಈಗ ನಾವು ಆಫ್ರಿಕಾಕ್ಕೆ ಬರ್ತಾ ಇದ್ದೇವೆ ಅಂತ ಕೇಳಿದ ಮೇಲೆ ಇಬ್ಬರೂ ಆಂಟಿಗಳು ನಮ್ಮ ಮನೆಗೂ ಬಂದು, ನಮ್ಮ ಬೆಲ್ಲಿ ಡಾನ್ಸ್ ನೋಡಿಬಿಟ್ಟಿ , ನಮ್ಮ ಮೆಹಮಾನ್ ನವಾಜಿ ಎಲ್ಲ ತೊಗೊಂಡು ಹೋಗಬೇಕು ಅಂತ ಫೇಸ್ಬುಕ್ ಮೇಲೆ ಮೆಸೇಜ್ ಮೇಲೆ ಮೇಲೆ ಮೆಸೇಜ್ ಮಾಡಿ ಕರೀತಾ ಇದ್ದಾರೆ ಸಾಬ್. ಹಾಗೆ ಇರುವಾಗ ಆ ಆಂಟಿಗಳ ಮನಸ್ಸು ನೋಯಿಸಬಾರದು ನೋಡಿ. ಅದಕ್ಕೇ ಒಂದು ವಾರ ಇಬ್ಬರ ಜೊತೆಗೂ ಇದ್ದು ಮಜಾ ಮಾಡಿ ಬರೋಣ ಅಂತ ಹೇಳಿ ನಮ್ಮ ಪ್ಲಾನ್, ಅಂತ ಕರೀಂ ಸಾಬರು ಹೇಳಿದರು.

ಭಲೇ !!!!ಮಂಗ್ಯಾನ ಕೆ!!!! ಮಸ್ತ ಆಂಟೀಸ್ ಪಟಾಯಿಸಿ ಅಂತ ಆತು. ನಿನಗ ಈ ಪರಿ ಕಾಡ್ಲಿಕತ್ತಾರ ಅಂದ್ರ ಅವರಿಗೆ ಯಾವ ಪರಿ ಮೋಡಿ ಮಾಡಿ ಮಾರಾಯಾ ನೀನು?ಹಾಂ?ಹಾಂ? ಹ್ಞೂ!!! ನೆಡಿಲಿ ನೆಡಿಲಿ ಸಾಬ್ರ ಕಾರ್ಬಾರ. ಅಷ್ಟ, ಅವೆಲ್ಲಾ ಭಾಳ ಕಟ್ಟರ್ ದೇಶ. ಹಾಂಗೆಲ್ಲಾ ಮಾಲು ಗೀಲು ಪಟಾಯಿಸಿದ್ರ ಕಲ್ಲ ಹೊಡದ ಹೊಡದ ಕೊಲ್ಲತಾರ, ನಿನ್ನೂ ಮತ್ತ ಅವರನ್ನೂ. ಜ್ವಾಕಿ. ನೋಡಿಕೊಂಡು ಕಿತಬಿ ಮಾಡು ಮತ್ತ. ಇಲ್ಲಂದ್ರ ಸುಮ್ಮನ ಅವರ ಬೆಲ್ಲಿ ಡಾನ್ಸ್ ನೋಡಿಕೊಂಡು ವಾಪಸ್ ಬಾ, ಅಂತ ಮೈಲ್ಡ್ ವಾರ್ನಿಂಗ್ ಕೊಟ್ಟೆ.

ಏ...ಹಾಗೇನೂ ಇಲ್ಲ ಸಾಬ್. ಎಲ್ಲಾ ಸೆಟ್ ಅಪ್ ಆಗಿ ಬಿಟ್ಟಿದೆ. ಏನೂ ರಿಸ್ಕ್ ಇಲ್ಲವೇ ಇಲ್ಲ. ಚಿಂತಿ ನಕೋ, ಅಂತ ತಿರುಗಿ ನನಗ ಆಶ್ವಾಸನಿ ಕೊಟ್ಟು ಬಿಟ್ಟ. ಕಾನ್ಫಿಡೆನ್ಸ್ ನೋಡ್ರೀ.

ಹ್ಞೂ.....ಸಾಬ್ರಾ.... ಘೇಂಡಾಮೃಗ ತರಲಿಕ್ಕೆ ಅಂತ ಆಫ್ರಿಕಾಕ್ಕ ಹೊಂಟವರು ನೀವಾ ಝೇಂಡಾಮೃಗ ಆಗಲಿಕತ್ತೀರಿ ಅಂತ ಆತು. ಆಗ್ರೀ.... ಆಗ್ರೀ.... ಮಸ್ತಾಗಿ ಝೇಂಡಾಮೃಗ ಆಗಿ, ನಿಮ್ಮ ಆಫ್ರಿಕಾ ಮಾಲುಗಳ ಅತಿಥಿ ಸತ್ಕಾರ ಸ್ವೀಕರಿಸಿ ಮಾಲಾ ಮಾಲ್ ಆಗಿ ಬರ್ರಿ, ಅಂದೆ ನಾನು.

ಅಯ್ಯೋ!!!ಸಾಬ್!!! ಈಗ ಝೇಂಡಾಮೃಗ ಅಂದ್ರೆ ಏನು? ನಾವು ಯಾಕೆ ಅದು ಆಗಬೇಕು? ನಮಗೆ ಬೇಬಿ ಗಂಡಾಮೃಗ ತರೋದೆ ದೊಡ್ಡ ಮಗಜ್ ಮಾರಿ ಆಗಿದೆ. ಅದರ ಮ್ಯಾಲೆ ಝೇಂಡಾಮೃಗ ಆಗೋದು ಅಂದ್ರೇ ಕ್ಯಾ? ನಿಮಗೆ ಝೇಂಡಾಮೃಗ ಬೇಕು ಕ್ಯಾ? ಅದನ್ನ ನಾವು ಆಫ್ರಿಕಾಯಿಂದ ತರಬೇಕು ಕ್ಯಾ? - ಅಂತ ಕೇಳಿದ ಕರೀಂ.

ಅವಂಗ ನಾ ಎಲ್ಲೆರೆ ಝೇಂಡಾಮೃಗ ತೊಗೊಂಡು ಬಾ ಅಂತೇನೋ ಅಂತ ಸಿಕ್ಕಾಪಟ್ಟೆ ಟೆನ್ಶನ್.

ಸಾಬ್ರಾ..... ನೀವು ಹೋಗಿ ಒಂದು ವಾರ ನಿಮ್ಮ ಟ್ಯೂನಿಸಿಯಾದ ಮಾಲ್ ಮನಿಯೊಳಗ, ಇನ್ನೊಂದು ವಾರ ನಿಮ್ಮ ಅಲ್ಜೀರಿಯಾ  ಮಾಲ್  ಮನಿಯೊಳಗ ಮಸ್ತಾಗಿ  ಝೇಂಡಾ ಹೊಡಿಲಿಕತ್ತೀರಿ ನೋಡ್ರೀ, ಅದಕ್ಕ ನಿಮಗ ಝೇಂಡಾಮೃಗ ಅಂತ ಹೊಸಾ ಹೆಸರ ಕೊಟ್ಟೆ. ಅಷ್ಟ. ಏನ್ ಕಾಳಜಿ ಮಾಡ ಬ್ಯಾಡ್ರೀ. ನೀವೇನೂ ನನ್ನ ಸಲುವಾಗಿ ಝೇಂಡಾಮೃಗ ಮತ್ತೊಂದು ಮೃಗ ತರೋದು ಬ್ಯಾಡ. ಮೃಗ ಇದ್ದಂಗ ಇರೋ ನೀವು ವಾಪಸ ಸಹೀ ಸಲಾಮತ್ ವಾಪಸ್ ಬರ್ರಿ ಸಾಕು, ಅಂದೆ.

ಕರೀಂ ಸ್ವಲ್ಪ ರಿಲಾಕ್ಸ್ ಆದ.

ಸಾಬ್ರಾ.....ಟ್ಯೂನಿಸಿಯಾ ಒಳಗಾ ನಿಮ್ಮ ಫೇಸ್ಬುಕ್ ಮ್ಯಾಲೆ ಸಿಕ್ಕ ಆಂಟಿ ಏನೇನು ತೋರಸ್ತೇನಿ ಅಂದಾಳ? - ಅಂತ ಕೇಳಿದೆ.

ಕರೀಂ ಬಾಂಬ್ ಹಾಕೇ ಬಿಟ್ಟ. ದೊಡ್ಡ ಅನಾಹುತ. 

ನಾ ಅ ಶಬ್ದ ಕೇಳಲಾಗದೆ, ಶಿವಾ!!ಶಿವಾ!!, ಅನಕೋತ್ತ ಕಿವಿ ಮತ್ತೊಂದು ಮುಚ್ಚಿಕೊಂಡೆ.

ಯಾಕೆ ಸಾಬ್ ನಮ್ಮ ಬೇಗಂ ಅವರ ಊರು ತೋರಿಸ್ತಾರೆ ನಮಗೆ ಅಂದ್ರೆ, ನೀವ್ಯಾಕೆ ಹೀಂಗೆ ಚಿಟಿ ಚಿಟಿ ಚೀರ್ತೀರಿ? - ಅಂತ ಇನ್ನೋಸೆಂಟ್ ಆಗಿ ಕೇಳಿದ ಕರೀಂ.

ಅವರ ಊರಿನ ಹೆಸರು ಏನಂದಿ? ಹೇಶಿ ಮಂಗ್ಯಾನ್ ಕೆ.... ಇನ್ನೊಮ್ಮೆ ಹೇಳಬ್ಯಾಡ. ಬರೆ ಸ್ಪೆಲ್ಲಿಂಗ್ ಹೇಳು ಸಾಕು, ಅಂತ ಝಾಡಿಸಿದೆ.

ಸಾಬ್.... ಆ ಬೇಗಂ TUNIS ಒಳಗೆ ಇರ್ತಾರೆ. ಅದು Tunisia ರಾಜಧಾನಿ. ಅವರು ನಮಗೆ ಅವರ Tunis ತೋರಸ್ತೀನಿ ಮಸ್ತ ಅದೇ, ಸಮುದ್ರದ ದಂಡಿ ಮ್ಯಾಲೆ Tunis ಉದ್ದ ಅದೇ. ದೊಡ್ಡ ಸಿಟಿ ಇದ್ದರಿಂದ ಅಗಲನೂ ಅದೇ ಅಂದ್ರು. ಹಾಗೆ ಉದ್ದ, ಅಗಲ ಇರೋ TUNIS ನೋಡೋದು ತಪ್ಪು ಕ್ಯಾ? ಏನು ತಪ್ಪು? - ಅಂತ ಕೇಳಿದ.

ಸಾಬ್ರಾ.....ನಿಮ್ಮ ಗಲತ್ ಉಚ್ಚಾರದಿಂದ ಪ್ರಾಬ್ಲೆಮ್. ಉದ್ದ ಇರಲಿ ದಪ್ಪ ಇರಲಿ ತೊಂದ್ರೀ ಇಲ್ಲ. ನಿಮಗ ಮೊದಲ ಹೇಳೇನಿ....Tunisia ಒಳಗಾ ಬರೋ N ಹ್ಯಾಂಗ ಉಚ್ಚಾರ ಮಾಡಬೇಕು ಅಂತ. ಅದನ್ನ ನವಿಲಿನ ಹಾಂಗ ಉಚ್ಚಾರ ಮಾಡ್ರೀ. ಬೆಣ್ಣಿ ಉಣ್ಣಿ ಹಾಂಗ ಣಕಾರ ಹಾಕಬ್ಯಾಡ್ರೀ. ಮತ್ತ T ಕ್ಕ ಟಕಾರ ಹಚ್ಚರೀಪಾ. ನೀವು ತಕಾರ ಮತ್ತ ಣಕಾರ ಹಚ್ಚಿ ಬೆಣ್ಣಿ ಉಣ್ಣಿ ಹಾಂಗ TUNIS ಅನ್ನೋ ಅವರ ದೇಶದ ಚಂದ ಸಿಟಿ ಹೆಸರು ಹೇಳಿದ್ರ ಮತ್ತ ಅದನ್ನ ಯಾರೋ ನಿಮ್ಮ ಫೇಸ್ಬುಕ್ ಗೆಳತಿ ತೋರಿಸ್ತಾರ ಅಂದ್ರಾ ಏನ್ರೀ???!!!! ಹಾಂ?ಹಾಂ?, ಅಂತ ತಿದ್ದಿ ಝಾಡಿಸಿದೆ.

ಓಹೋ!!!ಅದು ಟ್ಯೂನಿಸ್ ಅಂತ ಕ್ಯಾ? ನಮಗೆ ಏನು ಗೊತ್ತು ಸಾಬ್? ಆಕಿ ನಮ್ಮ ಊರು ತೋರಸ್ತೀನಿ. ಅದರ ಹೆಸರು ಟ್ಯೂನಿಸ್. ನಮ್ಮ ಟ್ಯೂನಿಸ್ ಮಸ್ತ ಉದ್ದ, ಅಗಲ ಅದೇ ಅಂದ್ರು. ನಾವು ನಿಮಗೆ ಅದೇ ಹೇಳಿದ್ದು. ನೀವು ಏನೇನೋ ಕೇಳಿಸಿಕೊಂಡು ಏನೇನೋ ತಿಳಕೊಂಡರೆ ನಾವೇನು ಮಾಡೋಣ? - ಅಂತ ನನಗ ರಿವರ್ಸ್ ಕೊಶ್ಚನ್ ಒಗದು ಕೂತ.

ಸಾಬ್ರಾ.....ಅದೆಲ್ಲ ಇರಲೀ. ನಿಮಗ ಘೇಂಡಾಮೃಗದ ಮರಿ ಯಾಕ ಬೇಕು? ಅದರ ಕೋಡು ಬೇಕು ಅಂತೀರಿ. ಮರಿಗೆ ಕೋಡು ಬರೋದು ದೊಡ್ಡದು ಆದ ಮ್ಯಾಲೆ. ಅದು ದೊಡ್ದದಾಗಲಿಕ್ಕೆ ಭಾಳ ವರ್ಷ ಬೇಕು. ಹೀಂಗ ಇದ್ದಾಗ ಯಾಕ ಸುಮ್ಮನ ಒಂದು ಬೆಳೆದು ನಿಂತ ದೊಡ್ಡ ಘೇಂಡಾಮೃಗ ತಂದು ಬಿಡಬಾರದು? ಯಾರರ ಹಾಲಿಗೆ ಅಂತ ಗಬ್ಬದ ಎಮ್ಮಿ ತರತಾರೋ ಅಥವಾ ಸಣ್ಣ ವಯಸ್ಸಿನ ಎಮ್ಮಿ ಮಣಕಾ ತಂದು ದೊಡ್ಡದು ಮಾಡ್ತಾರೋ? ಹಾಂ? ಹಾಂ? - ಅಂತ ಲಾಜಿಕಲ್ ಪ್ರಶ್ನೆ ಕೇಳಿದೆ.

ಹಾಂ.. ಕರೆಕ್ಟ್ ಪೂಚ್ಯಾ ಆಪ್. ಅದು ಏನು ಅಂದ್ರೆ, ಸಣ್ಣದು ಮರಿ ಘೇಂಡಾಮೃಗ ತಂದು, ಪ್ಯಾರ ಮೊಹಬ್ಬತ್ ಸೆ ದೊಡ್ಡದು ಮಾಡಿದ್ರೆ ಮುಂದೆ ಅದರ ಕೋಡು ಕೊಂಬು ಕತ್ತರಿಸೋಕೆ ಬಿಡ್ತದೆ. ದೊಡ್ಡದು ತಂದು ಬಿಟ್ಟರೆ ಹತ್ತರ ಹೋದ್ರೆ ಕೊಂದೇ ಬಿಡ್ತದೆ. ಅದರದ್ದು ಕೊಂಬು ಬೋಳಿಸೋದು ದೂರ ಉಳಿತು. ಗೊತ್ತಾಯ್ತು ಕ್ಯಾ? ಅದಕ್ಕೇ ಸಣ್ಣ ಮರಿ ತೊಗೊಂಡು ಬಾ ಅಂತ ಹೇಳಿದಾರೆ ನಮ್ಮ ಹಾಪ್ ಬೇಗಂ, ಅಂತ ಫುಲ್ ವಿವರಣೆ ಕೊಟ್ಟ ಕರೀಂ. 

ಓಹೋ!!!ನಿಮ್ಮ ಬೇಗಂ ಸಣ್ಣ ಘೇಂಡಾಮೃಗದ ಮರಿ ದೊಡ್ಡ ಮಾಡಿ, ಅದರ ಕೊಂಬು ಕೋಡು ಉಗರ್ ತೆಗದಂಗ ತೆಗೆದು, ಅದನ್ನ ಅರೆದು ಜೇನುತುಪ್ಪದ ಜೊತಿ ಮಿಕ್ಸ್ ಮಾಡಿ, ನಿಮಗ ನೆಕ್ಕಿಸ್ತಾರ ಅಂತ ಆತು. ಹೌದಲ್ಲೋ ಸಾಬ್ರಾ? - ಅಂತ ಕೇಳಿದೆ. 

ಬರೋಬ್ಬರ್ ಸಾಬ್. ಆ ಹಾಪ್ ಬೇಗಂದು ಅದೇ ಪ್ಲಾನ್ ಇದ್ದಂಗೆ ಅದೆ. ಅದು ವರ್ಕ್ ಔಟ್ ಆಗ್ತದೆ ಕ್ಯಾ? - ಅಂತ ಕೇಳಿದ ಕರೀಂ. 

ದೇವರಿಚ್ಚಾ ಇದ್ದಂಗ ಆಗ್ತದ ನೋಡಪಾ ಕರೀಂ. ಎಲ್ಲಿಂದಲೋ ಘೇಂಡಾಮೃಗದ ಕೊಂಬು ತರಿಸ್ಕೊಂಡು ಅದನ್ನ ಅರೆದು, ನೆಕ್ಕಿ ಏನೇನೋ ಮಾಡಿಕೊಂಡವರ ಬಗ್ಗೆ ಕೇಳೇನಿ. ಆದ್ರ ಒಂದು ಸಣ್ಣ ಘೇಂಡಾಮೃಗದ ಮರಿ ತಂದು, ಅದನ್ನ ಬೆಳಿಸಿ, ಅದರ ಕೊಂಬು ಕತ್ತರಿಸಿ, ಅದನ್ನ ಜೇನತುಪ್ಪದಾಗ ಕಲಿಸಿ, ಅದನ್ನ ಗಂಡಂಗ ನೆಕ್ಕಿಸಿ, ಏನೇನೋ ಮಾಡಿದ ನಾರಿ ಶಿರೋಮಣಿ ಅಂದ್ರ ನಿಮ್ಮ ಬೇಗಂ ಮೊದಲನೇಯಾಕಿ ಇರಬೇಕು ನೋಡ್ರೀ ಸಾಬ್ರಾ!!!!, ಅಂತ ಹೇಳಿದೆ. 

ಬೇಗಂ ಹುಚ್ಚಿನ ಎಷ್ಟನೇ ಅವತಾರವೋ ಇದು!!!! ಇಕಿ ವಾಹನನ ಒಂದು ಘೇಂಡಾಮೃಗ ಮಾಡಿಬಿಟ್ಟರ ಚೊಲೋ ಇತ್ತು. ನಮ್ಮ ಸಾಬರನ್ನ ಬಿಟ್ಟು ಮಾಳಮಡ್ಡಿ ತುಂಬಾ ಒಂದು ಮೂಗದಾರ, ಕೊರಳಿಗೆ ಘಂಟಿ ಕಟ್ಟಿಸಿಕೊಂಡ ಘೇಂಡಾಮೃಗ ಹತ್ತಿ ಓಡ್ಯಾಡೋ ಕಾಡಮಂದಿ ಪೈಕಿ ರಾಣಿ ಗತೆ ಕಾಣ್ತಾಳ ನಮ್ಮ ಸಾಬ್ರಾ ಬೇಗಂ.

ಘೇಂಡಾ ಮ್ಯಾಲೆ ಕುಂತ ಬೇಗಂ ಸಾಹಿಬಾ!

ಸಾಬ್ರಾ....ಆಫ್ರಿಕಾಕ್ಕ  ಹೋಗಿ ಮೊದಲು ನಿಮ್ಮ ಫೇಸ್ಬುಕ್ ಮಾಲಗಳ ಮನಿಯಲ್ಲಿ  ಝೇಂಡಾಮೃಗ ಆಗಿ, ಸಕಲ ಸವಲತ್ತು ಅನುಭವಿಸಿ ಬರ್ರಿ. ನಿಮ್ಮ ಘೇಂಡಾ  ಹನಿಮೂನ್ ಲಗೂನೆ ಆಗ್ಲಿ ಸಾಬ್ರಾ, ಅಂತ ಹೇಳಿ ವಿಶ್ ಮಾಡಿದೆ. 

ಘೇಂಡಾ  ಹನಿಮೂನ್???!!!ವೋ ಕ್ಯಾ ಸಾಬ್? ಔರ್ ಏಕ ಶಾದಿ ಕರ್ಕೆ ಉಸ್ಕೆ ಬಾದ್ ಕಿ ಹನಿಮೂನ್ ಕ್ಯಾ? ನಕ್ಕೋ ಸಾಬ್. ನಕ್ಕೋ!!! ಅಂತ ಕರೀಂ ಶಂಖಾ ಹೊಡೆದ. 

ಅಲ್ಲೋ.... ಮಾರಾಯ.... ನಿನ್ನ ಘೇಂಡಾಮೃಗದ ಮರಿ ಬಂದು, ದೊಡ್ಡದಾಗಿ, ಕೋಡು, ಕೊಂಬು ಬಿಟ್ಟು, ಅದನ್ನ ನಿಮ್ಮ ಬೇಗಂ ಬೋಳಿಸಿ, ಅದನ್ನ ತೇಯ್ದು, ಜೇನುತುಪ್ಪಾ (ಹನಿ) ಒಳಗಾ ಸೇರಿಸಿ, ಹುಣ್ಣಿಮಿ ರಾತ್ರಿ (ಮೂನ್) ದಿವಸ ನಿನಗ ದೆವ್ವದ ಗತೆ ಬಿಳಿ ಸೇರಿ ಉಟ್ಟುಗೊಂಡು ಬಂದು, ಇದನ್ನ ನೆಕ್ಕರೀ...... ಘೇಂಡಾ ಕೊಂಬಿನ ಪುಡಿ ಮತ್ತ ಜೇನುತುಪ್ಪ..... ಇದನ್ನ ನೆಕ್ಕರೀ......ಇಲ್ಲಂದ್ರ ಮೂಗ ಹಿಡದು, ಬಾಯಿ ಬಿಡಿಸಿ, ಕಲ್ಲೂ ಮಾಮಾ, ಕಲ್ಲೂ ಮಾಮಿ ಕಡೆ ಕಾಲು ಕೈ ಹಿಡಿಸಿ ನೆಕ್ಕಿಸಿ ಬಿಡ್ತೀನಿ ಅಂತ ನಿಮ್ಮ ಬೇಗಂ ಧಮಕಿ ಹಾಕ್ತಾಳ ನೋಡ್ರೀ ಮತ್ತ  ನೀವು ಮೂಗು ಹಿಡಿಸಿಕೊಂಡ ಸಣ್ಣ ಹುಡುಗುರು ಔಷಧ ಕುಡದಾಂಗ ಅದನ್ನ ನೆಕ್ಕತೀರಿ ನೋಡ್ರೀ, ಅದss ನಿಮ್ಮ ಘೇಂಡಾ  ಹನಿಮೂನ್. ಏನಂತೀರಿ? - ಅಂತ ಮಸ್ತ ಕಾಡಿಸಿದೆ. 

ಕ್ಯಾ ಸಾಬ್? ನಮ್ಮದು ಹಾಲತ್ ನಮಗೆ ಇಲ್ಲಿ. ನಿಮಗೆ ಇಲ್ಲೂ ಸಹ ಮಸ್ಕಗಿರಿ ಕ್ಯಾ? ಇದು ಚೊಲೊ ಅಲ್ಲಾ ನೋಡಿ. ದೋಸ್ತ್ ಗೆ ಹೆಲ್ಪ್ ಮಾಡೋದು ಬಿಟ್ಟು ಹೀಗೆ ಘೇಂಡಾ  ಹನಿಮೂನ್ ಅಂತ ಕಾಡಿಸೋದು ಕ್ಯಾ?- ಅಂತ ಕರೀಂ ಲಬೋ ಲಬೋ ಅಂದ. 

ನೀ ಹೋಗಪಾ. ಟ್ಯೂನಿಸಿಯಾ, ಆಲ್ಜೀರಿಯಾ, ಬೋಟ್ಸವಾನಾ, ನಮೀಬಿಯಾ ಎಲ್ಲಾ ಕಡೆ ಹೊಂಟೀ. ಪಾಸ್ಪೋರ್ಟ್, ವೀಸಾ, ಟಿಕೆಟ್ ಇತ್ಯಾದಿ ಭಾಳ ಕೆಲಸ ಇರ್ತಾವು. ಮಾಡ್ಕೋ ಹೋಗ್ರೀ ಸಾಬ್ರಾ. ಖುದಾ ಹಾಫಿಜ್, ಅಂತ ಹೇಳಿ ನಾ ಬಂದೆ. 

ಬೇಬಿ ಘೇಂಡಾಮೃಗ..... ಮುಂದಿನ ಸಲೆ ಇನ್ನು ಬೇಬಿ ಗೊರಿಲ್ಲಾ ತೊಗೊಂಡು ಬಾ ಅಂತಾಳೋ ಏನೋ ಹಾಪ್ ಬೇಗಂ?

ಯಾರಿಗ್ಗೊತ್ತು?

ಶಿವನೇ ಶಂಭುಲಿಂಗ. ಕಾಪಾಡಪ್ಪ  ನಮ್ಮ ಸಾಬ್ರನ್ನ.

No comments: