Saturday, May 11, 2013

ಅಮೇರಿಕಾದ ಮಂಗ್ಯಾ ಹಿಡಿಯವನನ್ನೇ ರಶಿಯಾ ಮಂಗ್ಯಾ ಮಾಡಿಬಿಟ್ಟಿತ್ತಾ ?!

ಮಂಗ್ಯಾ ಹಿಡಿಯವನನ್ನೇ ಮಂಗ್ಯಾ ಮಾಡಿಬಿಟ್ಟರೆ
ಮನುಷ್ಯಾರೆಲ್ಲಾ ಮಂಗ್ಯಾ ಹಾಂಗ ಕಂಡು 
ಮನುಷ್ಯಾರನ್ನss ಮಂಗ್ಯಾ ಅಂತ ಹಿಡಿದು ಬಿಡ್ತಾನ!

ಹೀಗೊಂದು ಕಪೋಲಕಲ್ಪಿತ ಹಾಡು CIA ಒಳಗೆ ಯಾಕೆ ಹಾಡಲಾಗುತ್ತಿತ್ತು?

ಸಾವಿರದ ಒಂಬೈನೂರ ಎಪ್ಪತ್ತರ ದಶಕದ ಅಂತ್ಯದ ದಿನಗಳು. ಅಮೇರಿಕಾ ಮತ್ತು ಸೋವಿಯತ್ ಮಧ್ಯೆ ಶೀತಲ ಸಮರದ ಉತ್ತುಂಗ. ಇನ್ನೇನು ಸೋವಿಯತ್ ಅಫ್ಘಾನಿಸ್ತಾನದ ಮೇಲೆ ಯುಧ್ಧ ಶುರು ಮಾಡಿ, ತನ್ನ ಕಾಲಿನ ಮೇಲೆ ತಾನೇ ಕೊಡಲಿ  ಹೊಡಕೊಂಡು ಅಪ್ಪಾ, ಅಮ್ಮಾ ಅಂತ ಮುಲುಗುತ್ತ ಛಿದ್ರ ಛಿದ್ರ ಆಗಲು ಮೂಹೂರ್ತ ಹುಡಕುವ ಕಾಲ.

ಇಂತಹ ದಿನಗಳಲ್ಲಿ ಹಿರಿಯ ಜಾರ್ಜ್ ಎಚ್ ಡಬ್ಲು ಬುಶ್ ಆಗ ತಾನೇ CIA ಡೈರೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಅವರು ಮುಂದೆ ರೀಗನ್ ಕಾಲದಲ್ಲಿ ಉಪಾಧ್ಯಕ್ಷರೂ ನಂತರ ೮೮ ರಲ್ಲಿ ಅಧ್ಯಕ್ಷರೂ ಆಗಿದ್ದರು. ನಂತರ ಅವರ ಮಗ ಜಾರ್ಜ್ ಡಬ್ಲು ಬುಶ್ ಸಹಿತ ಅಧ್ಯಕ್ಷರಾಗಿದ್ದು ಎಲ್ಲರಿಗೂ ಗೊತ್ತೇ ಇದೆ.

ಹೀಗೆ ಹಿರಿಯ ಬುಶ್ CIA ಡೈರೆಕ್ಟರ್ ಆದ ಕೆಲವೇ ದಿನಗಳಲ್ಲಿ ಒಂದು ದಿವಸ ಅವರ ಮನೆ ಮುಂದೆ, ಬೆಳಿಗ್ಗೆ ಬೆಳಿಗ್ಗೆ, ಗಲಾಟೆ. ಏನಾಯಿತು ಎಂದು ನೋಡಲು ಬುಶ್ ಹೊರಗೆ ಬಂದರು. ರಕ್ಷಣಾ ಸಿಬ್ಬಂದಿ ಯಾರನ್ನೋ ತಳ್ಳಿ ಬೈದು ಓಡಿಸುವ ಕೆಲಸದಲ್ಲಿ ಇದ್ದರು. ತಮ್ಮ ಆಪ್ತ ಸಹಾಯಕನನ್ನು ಕರೆದ ಬುಶ್, ಯಾರದು ಗಲಾಟೆ ಮಾಡೋ ಪಾರ್ಟಿ? ಅಂತ ಕೇಳಿದರು. ಸಹಾಯಕ ಹೇಳಿದ ಉತ್ತರದಿಂದ ತತ್ತರಿಸಿದ ಬುಶ್ ಗಲಾಟೆ  ಮಾಡುತ್ತಿದ್ದ ಆ ಆಸಾಮಿಯನ್ನು ಮನೆಯೊಳಗೆ ಕಳಿಸುವಂತೆ ಹೇಳಿದರು.

ತೆಳ್ಳಗೆ, ಎತ್ತರಕ್ಕೆ, ಮಹಾ ವಿಕ್ಷಿಪ್ತನಂತೆ ಕಾಣುತ್ತಿದ್ದ ಆಸಾಮಿಯೊಬ್ಬ ಬಂದವನೇ ಬಡಬಡಾಯಿಸಲು  ಶುರು ಮಾಡೇ ಬಿಟ್ಟ.

ರೀ ಸ್ವಾಮೀ.... ಬುಶ್ ಅವರೇ.... ನಿಮಗೆ ಗೊತ್ತಾ ಪೂರ್ತಿ ಅಮೇರಿಕಾ ತುಂಬಾ ಸೋವಿಯತ್ ಗೂಢಚಾರರು ತುಂಬಿ ಬಿಟ್ಟಿದ್ದಾರೆ? ಅಧ್ಯಕ್ಷ ಜೆರಾಲ್ಡ್ ಫೋರ್ಡ್ ಅವರ ಕ್ಯಾಬಿನೆಟ್ ನಲ್ಲಿ ಸಹ ಇದ್ದಾರೆ. ನನಗೆ ಅವರ ರಕ್ಷಣಾ ಸಲೆಹೆಗಾರ ಹೆನ್ರಿ ಕಿಸ್ಸಿಂಗರ್ ಮೇಲೇ ಅನುಮಾನ. ಅವನೇ ಸೋವಿಯತ್ ಆಸಾಮಿಯಾ ಹೇಗೆ ಅಂತ? ಹಿಂದಿನ CIA ಡೈರೆಕ್ಟರ್ ಬಿಲ್ ಕೋಲ್ಬಿ ಸಹ ಸೋವಿಯತ್ ಏಜೆಂಟ್ ಇದ್ದರೂ ಇರಬಹುದು. ಯಾರಿಗೆ ಗೊತ್ತು? ನಾ ಮತ್ತೆ ಸಿಐಎ ಗೆ ಬರ್ಲಾ? ರೀ ಬರ್ತೀನ್ರೀ.... ಪ್ಲೀಸ್ ....ಪ್ಲೀಸ್ ..... ಮತ್ತೆ ಬಂದು ಸೋವಿಯತ್ ಏಜೆಂಟ್ಸ್ ಎಲ್ಲಾ ಹಿಡಿದು ಹಿಡಿದು ಹಾಕ್ತೇನ್ರಿ... ಪ್ಲೀಸ್.... ಎಷ್ಟೋ ಮಂದಿಯನ್ನು ಸೋವಿಯತ್ ಏಜೆಂಟ್ ಅಂತ ಹಿಡಿದು ಹಿಡಿದು ಓಡಿಸಿ ಬಿಟ್ಟಿದ್ದೀನಿ. ನನ್ನ  ತರಹದ counter intelligence ಮನುಷ್ಯ ನಿಮಗೆ ಸಿಗಲು ಸಾಧ್ಯವೇ ಇಲ್ಲ.... ಮತ್ತೆ ಬರ್ಲಾ? ಬರ್ಲಾ? - ಅಂತ ಮೊಳೆ ಹೊಡದೇ ಬಿಟ್ಟ.

ಇದು ರಿಪೇರಿ ಆಗುವ ತಲೆಯಲ್ಲ ಅಂತ ಅಂದ ಬುಶ್, ಚಾ ಕುಡದು ಹೊಂಡ್ರೀ, ಅಂತ ಅಪ್ಪಣೆ ಕೊಟ್ಟು ಕಳಚಿಕೊಂಡರು.

ಯಾರಿದು ಈ ಪರಿ ಸೋವಿಯೆಟ್ ಏಜೆಂಟರ ಬಗ್ಗೆ ತಲೆ ಕೆಡಿಸಿಕೊಂಡು ಅದರಲ್ಲೇ ಸರ್ವನಾಶವಾಗಿ  ಎಷ್ಟೋ ಜನರನ್ನೂ ಕೂಡ ಸರ್ವನಾಶ ಮಾಡಿ ಹೋದ ಆಸಾಮಿ?

ಅವರೇ ಜೇಮ್ಸ್ ಜೀಸಸ್ ಯಾಂಗಲ್ಟನ್ !!!!!
ಜೇಮ್ಸ್ ಜೀಸಸ್ ಯಾಂಗಲ್ಟನ್
ಸರಿ ಸುಮಾರು 20 ವರ್ಷ ಅಮೇರಿಕಾದ CIA ಬೇಹುಗಾರಿಕೆ ಸಂಸ್ಥೆಯಲ್ಲಿ counter intelligence ವಿಭಾಗದ ಮತ್ತು ಇಸ್ರೇಲಿ ಡೆಸ್ಕಿನ  ಅನಭಿಷಿಕ್ತ ದೊರೆಯಾಗಿ ಮೆರದವರು ಯಾಂಗಲ್ಟನ್. ಮಾಹಾನ್ ಮೇಧಾವಿ. ಆದ್ರೆ ಅಷ್ಟೇ ವಿಕ್ಷಿಪ್ತ ಮತ್ತು ವಿಲಕ್ಷಣ ಸ್ವಭಾವ. counter intelligence ಎಂಬ ವೃತ್ತಿಯೇ ಹಾಗೋ ಏನೋ? ಎಲ್ಲರನ್ನೂ ಸಂಶಯ ದೃಷ್ಟಿಯಿಂದ ನೋಡುವದು. ಬೇಹುಗಾರಿಕೆ ಸಂಸ್ಥೆಯೊಂದರಲ್ಲಿ, ದೇಶದಲ್ಲಿ  ಒಳಗೇ ಇರಬಹುದಾದ, ಪರದೇಶದ ಪರವಾಗಿ ಕೆಲಸ ಮಾಡುವ ಜನರನ್ನು ಹಿಡಿದು ಒಳಗೆ ಹಾಕುವದೇ counter intelligence ವಿಭಾಗದ ಕೆಲಸ. ಡಬಲ್, ಟ್ರಿಪಲ್ ಏಜೆಂಟ್ ಗಳನ್ನು weed out ಮಾಡಿ ದೇಶದ ರಕ್ಷಣೆ ಮಾಡುವದಕ್ಕೆ ಪ್ರತಿ ದೇಶದ ಬೇಹುಗಾರಿಕೆ ಸಂಸ್ಥೆ ತಮ್ಮಲ್ಲಿ ಒಂದು counter intelligence ವಿಭಾಗ ಇಟ್ಟಿಗೊಂಡಿರುತ್ತದೆ. 

ಯಾಂಗಲ್ಟನ್ ಎರಡನೇ ಮಹಾಯುದ್ಧದ ಟೈಮ್ನಿಂದನೇ CIA ನಲ್ಲಿ ಇದ್ದವರು. ಆಗ CIA ಗೆ OSS - Office of Strategic Services ಅನ್ನುತ್ತಿದ್ದರು. ಮಹಾನ್ ಬುದ್ಧಿವಂತ, ದೆವ್ವದಂತೆ ದುಡಿಯುವವ, ಖತರ್ನಾಕ್ ಕೆಲಸಗಾರ. ಮತ್ತೇನು ಬೇಕು ಮೇಲೆ ಮೇಲೆ ಬರಲು? ಎಲ್ಲ CIA ಮುಖ್ಯಸ್ಥರಿಗೆ, ಸುಮಾರು ಜನ ಅಧ್ಯಕ್ಷರುಗಳಿಗೆ, ಶಕ್ತಿಶಾಲಿ ಧುರೀಣರಿಗೆ ಅತ್ಯಂತ ಖಾಸಮ್ ಖಾಸ್ ಆಗಿ ಹೋದರು ಯಾಂಗಲ್ಟನ್. ಬಿಲ್ ಕೊಲ್ಬಿ ಅನ್ನುವವ CIA ಡೈರೆಕ್ಟರ್ ಆಗಿ ಬರುವ ತನಕ ಸುಮಾರು ೨೦ ವರ್ಷ ಯಾವದೇ ಪರವಾನಿಗಿ, ಅಪಾಯಿಂಟ್ಮೆಂಟ್ ಮತ್ತೊಂದು ಇಲ್ಲದೆ ಸೀದಾ ಸಿಐಎ ಡೈರೆಕ್ಟರ್ ಅವರ ಕ್ಯಾಬಿನ್ ಒಳಗೆ ನುಗ್ಗುವ ಅವಕಾಶ ಇದ್ದಿದ್ದು ಅಂದ್ರೆ ಅದು ಯಾಂಗಲ್ಟನ್ ಗೆ ಮಾತ್ರ. ಆ ನಮೂನಿ ಗ್ರಿಪ್ ಇತ್ತು ಅವರಿಗೆ. 

ಆ ನಮೂನಿ ಗ್ರಿಪ್ ಮತ್ತು ಪವರ್ ಯಾಂಗಲ್ಟನ್ ಅವರಲ್ಲಿ ಕೇಂದ್ರಿಕ್ರತ ಆಗಲು ಕಾರಣ  ಆ ಪುಣ್ಯಾತ್ಮ ತನ್ನ ರಹಸ್ಯದ ಫೈಲ್ ಗಳಲ್ಲಿ ಸಂಗ್ರಹಿಸುತ್ತಿದ್ದ  ಮಾಹಿತಿ ಮತ್ತು ಅದನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವದು. 

ಒಂದು ಉದಾಹರಣೆ ನೋಡಿ. CIA ಮತ್ತು FBI ನಡುವೆ ಯಾವಾಗಲೂ ಒಂದು ತರಹದ ಅಹಂ ಯುದ್ಧ. ಆ ಕಾಲದ ಇನ್ನೊಬ್ಬ ಮಹಾನ್ ಖತರ್ನಾಕ ವ್ಯಕ್ತಿ ಅಂದ್ರೆ ಜೆ ಎಡ್ಗರ್ ಹೂವರ್. ಅಖಂಡ ೫೦ ವರ್ಷ FBI ಆಳಿದ ಮಹಾತ್ಮ. ಅವರಿಗೆ ಮತ್ತೆ CIA ಗೆ turf war ಅನ್ನುವ ಹಾಗೆ ಒಂದು ತರಹದ ವೈಮನಸ್ಸಿನ ಸಮರ. CIA ಗೆ  ಬೇಕಾದ ಮಾಹಿತಿ ಬೇಕಂತಲೇ ಕೊಡದೇ ಇರುವದು, ಸಹಕರಿಸದೇ ಇರುವದು ಇತ್ಯಾದಿ. FBI ಡೈರೆಕ್ಟರ್ ಆದ ಹೂವರ್ ಅವರಿಗೆ ಯಾರೂ ಏನೂ ಹೇಳುವಂತೆಯೇ ಇರಲಿಲ್ಲ. ಯಾಕೆಂದ್ರೆ ಹೂವರ್ ಸಾಹೇಬರ ರಹಸ್ಯ ಕಡತಗಳಲ್ಲಿ ಎಲ್ಲಾ ದೊಡ್ಡ ದೊಡ್ಡ ರಾಜಕೀಯ ಧುರೀಣರ ಹೂರಣ ತುಂಬಿತ್ತು. ಅದನ್ನು ಉಪಯೋಗಿಸಿಕೊಂಡೇ ಹೂವರ್ ೫೦ ವರ್ಷ FBI ಆಳಿದ್ದರು. ಇಂತಹ  ಹೂವರ್ ಅವರನ್ನೇ ಬ್ಲಾಕ್ ಮೇಲ್ ಮಾಡಿದ್ದ ಭೂಪ ಈ ಯಾಂಗಲ್ಟನ್.  ಛುಪಾ ರುಸ್ತುಂ ಸಲಿಂಗ ಕಾಮಿ ಆಗಿದ್ದ ಹೂವರ್ ಸಾಹೇಬರು ತಮ್ಮ ಗಂಡು ಸಂಗಾತಿಯೊಂದಿಗೆ ಕ್ರೀಡೆಯಲ್ಲಿ ತೊಡಗಿದ್ದ ಒಂದು ಫೋಟೋ ತೆಗಿಸಿಬಿಟ್ಟ ಯಾಂಗಲ್ಟನ್ . ಮಾಫಿಯಾದಿಂದ ಮಾಮೂಲಿ ತೆಗೆದುಕೊಳ್ಳುತ್ತಿದ್ದ ಹೂವರ್ ಸಾಹೇಬರು ಮಾಫಿಯದವರ ಹೋಟೆಲ್ ನಲ್ಲಿ ತಮ್ಮ ಸಂಗಾತಿಯೊಂದಿಗೆ ಜಮ್ಮ ಚಕ್ಕ ಮಾಡುತ್ತಿದ್ದಾಗ ಮಾಫಿಯಾ ಫೋಟೋ ತೆಗೆದಿತ್ತು. ಅದನ್ನು ಹೇಗೋ ಮಾಡಿ ಯಾಂಗಲ್ಟನ್ ಸಂಪಾದಿಸಿಬಿಟ್ಟಿದ್ದರು.  ಮುಂದೆ ಅದೇ ಫೋಟೋ ಇಟ್ಟುಗೊಂಡು ಹೂವರ್ ಸಾಹೇಬರನ್ನು ಬ್ಲಾಕ್ ಮೇಲ್ ಮಾಡುತ್ತ CIA ಗೆ ಬೇಕಾದ ಕೆಲಸ ಮಾಡಿಸಿಕೊಳ್ಳುತ್ತಿದ್ದ ಯಾಂಗಲ್ಟನ್. ಇದಾದ ನಂತರ ಯಾಂಗಲ್ಟನ್ ಅಂದ್ರೆ ಹೂವರ್ ಸಾಹೇಬರು, ಲಗೂನ ಅವನ ಕೆಲಸ ಮಾಡಿ ಮುಗಿಸ್ರೋ, ಅಂತ ಸ್ಟ್ಯಾಂಡಿಂಗ್ ಆರ್ಡರ್ ಕೊಟ್ಟು ಯಾಂಗಲ್ಟನ್ ಕಂಡರೂ ಮಾರಿ ತಿರುಗಿಸ್ಕೊಂಡು ಹೋಗಿ ಬಿಡತಿದ್ದರು. ಇಂಥಾ ಪ್ರಳಯಾಂತಕ ಈ ಜೇಮ್ಸ್ ಯಾಂಗಲ್ಟನ್ . 

ಜಾನ್ ಎಫ್ ಕೆನಡಿ ಅವರ ಹತ್ಯೆ ಆದ ತಕ್ಷಣ ಅವರ ತಮ್ಮ ರಾಬರ್ಟ್ ಕೆನಡಿ ಮಾಡಿದ ಮೊತ್ತ ಮೊದಲ ಫೋನ್ ಕಾಲ್ ಆಗಿನ CIA ಮುಖ್ಯಸ್ಥ ಜಾನ್ ಮೆಕ್ಕೋನ್ ಅವರಿಗೆ. ರಾಬರ್ಟ್ ಕೆನಡಿ ಕೇಳಿದ್ದು ಒಂದೇ ಪ್ರಶ್ನೆ - ನಿಮ್ಮ CIA ಜನರೇ ನನ್ನ ಅಣ್ಣ ಮತ್ತು ಅಮೇರಿಕಾದ ಅಧ್ಯಕ್ಷ ಜಾನ್ ಕೆನಡಿ ಅವರನ್ನು ಪಿತೂರಿ ಮಾಡಿ ಮುಗಿಸಿ ಬಿಟ್ಟರಾ ಹೇಗೆ? ಟೆಲ್ ಮಿ ದಿ ಟ್ರುಥ್.  ಸಿಐಎ ಡೈರೆಕ್ಟರ್ ಜಾನ್ ಮೆಕ್ಕೋನ್, ವಿಚಾರಿಸಿ ತಿಳಿಸುತ್ತೇನೆ ಅಂತ ಅಂದು ಫೋನ್ ಇಟ್ಟಿದ್ದರು. 

ಮುಂದೆ ಜಾನ್ ಮೆಕ್ಕೋನ್ CIA ಇಂಟರ್ನಲ್ ಎನ್ಕ್ವೈರಿ ಮಾಡಿ, CIA ಜನ ಅಥವಾ ಯಾವದೇ CIA ಪ್ರೇರೇಪಿತ ಜನ ಕೆನಡಿ ಹತ್ಯೆಯಲ್ಲಿ ಭಾಗಿ ಆಗಿಲ್ಲ, ಹಾಗೆ ತೋರುವ ಯಾವದೇ ದಾಖಲೆಗಳು ಲಭ್ಯವಿಲ್ಲ ಅಂತ ರಾಬರ್ಟ್ ಕೆನಡಿ ಅವರಿಗೆ ಸಂದೇಶ ಕಳಿಸಿ ಕೈತೊಳಕೊಂಡಿದ್ದರು. 

ಆ ಸಮಯದಲ್ಲಿ ಜೇಮ್ಸ್ ಯಾಂಗಲ್ಟನ್ ಮುಗುಮ್ಮಾಗಿ ಒಂದು ಅತ್ಯಂತ ಗಹನವಾದ ಕಾಮೆಂಟ್ ಮಾಡಿ ಸುಮ್ಮನಾಗಿದ್ದರು. ಅದೇನೆಂದರೆ, ರಾಬರ್ಟ್ ಕೆನಡಿ ಸಾಹೇಬರಿಗೆ ಯಾರನ್ನು ಏನು ಕೇಳಬೇಕು ಅಂತ ಗೊತ್ತಿಲ್ಲ. ಮಾಹಿತಿ ಗೊತ್ತಿದ್ದವರನ್ನು ಕೇಳಿದ್ದರೆ ಜಾನ್ ಕೆನಡಿ ಹತ್ಯೆಯ ಬಗ್ಗೆ ಮಾಹಿತಿ ಸಿಗುತ್ತಿತ್ತೋ ಏನೋ? ಅಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟಿದ್ದರು. 

ಹಾಗಿದ್ದರೆ ಜೇಮ್ಸ್ ಯಾಂಗಲ್ಟನ್ ಗೆ ಕೆನಡಿ ಹತ್ಯೆಯ ಬಗ್ಗೆ ಎಲ್ಲಾ ಗೊತ್ತಿತ್ತೆ? ಅಥವಾ ಅವರೂ ಆ ಕಾರಸ್ತಾನದಲ್ಲಿ ಇದ್ದರೇ?

ಯಾರಿಗೂ ಸರಿ ಗೊತ್ತಿಲ್ಲ. ಆದ್ರೆ ಕೆನಡಿ ಹತ್ಯೆಯ ಒಂದೇ ವರ್ಷದಲ್ಲಿ ಕೆನಡಿಯ ಪ್ರೇಯಸಿ ಮೇರಿ ಪಿನ್ಚೋಟ್ ಮೇಯರ್ ಎಂಬಾಕೆಯನ್ನು ಗುಂಡಿಟ್ಟು ಕೊಲ್ಲಲಾಯಿತು. ಆ ಕಡೆ ಪೊಲೀಸರು ಮೇರಿಯ ಹೆಣ ಎತ್ತಿ ಯಾರೋ ನಿಗ್ರೋ ಮನುಷ್ಯನನ್ನು ಅರೆಸ್ಟ್ ಮಾಡುತ್ತಿದ್ದ ಸಮಯದಲ್ಲಿ ಇದೇ ಜೇಮ್ಸ್  ಯಾಂಗಲ್ಟನ್ ಮೇರಿಯ ಮನೆಯ ಬೇಗ ಮುರಿದು ಆಕೆಯ ರಹಸ್ಯ ಡೈರಿಗಾಗಿ ಹುಡುಕುತ್ತಿದ್ದರು. ಯಾಕೆ? ಮೇರಿಯ ಡೈರಿಯಲ್ಲಿ ಕೆನಡಿಯವರ ಜೊತೆಯ ಸಂಬಂಧ, ಕೆನಡಿ ಹತ್ಯೆಯ ಹಿಂದಿನ ರಹಸ್ಯ ಇತ್ಯಾದಿ ಮೇರಿಗೆ ತಿಳಿದಿತ್ತೆ? ಕೆನಡಿ ಪ್ರೇಯಸಿ ಹತ್ಯೆಯ ಸೂತ್ರಧಾರ ಯಾರು ಯಾಂಗಲ್ಟನ್ ಅವರೇ ಏನು?

ಹೀಗೆ ಎಲ್ಲಾ ದೊಡ್ಡ ದೊಡ್ಡ ಪ್ರಕರಣಗಳಲ್ಲಿ ಜೇಮ್ಸ್ ಯಾಂಗಲ್ಟನ್ ಹೆಜ್ಜೆ ಗುರುತು ಕಂಡೇ ಕಾಣುತ್ತದೆ. ಆದ್ರೆ ಎಲ್ಲಿಯೂ ಒಂದು ಪುರಾವೆ ಬಿಟ್ಟಿಲ್ಲ ಪುಣ್ಯಾತ್ಮ. Counter Intelligence ಚೀಫ್ ಆಗಿದ್ದ ಯಾಂಗಲ್ಟನ್ ಗೆ ಶತ್ರು ದೇಶದ ಏಜೆಂಟ್ಗಳ  ಬಗ್ಗೆ ಎಷ್ಟು ಹೆದರಿಕೆ ಇತ್ತು ಅಂದ್ರೆ ಜೇಮ್ಸ್ ಯಾಂಗಲ್ಟನ್ ಅಂತ ಹೇಳಿಯೇ CIA ಒಳಗೇ ಐದಾರು ಜನರಿಗೆ false identity ಕೊಟ್ಟು ಇಟ್ಟು ಬಿಟ್ಟಿದ್ದರು ಯಾಂಗಲ್ಟನ್.  ಕೆಲವು ದೊಡ್ಡ ಮಟ್ಟದ CIA ಅಧಿಕಾರಿಗಳಿಗೆ ಬಿಟ್ಟರೆ ನಿಜವಾದ ಜೇಮ್ಸ್ ಯಾಂಗಲ್ಟನ್ ಯಾರು ಅಂತನೇ ಸುಮಾರು ಮಂದಿಗೆ ಗೊತ್ತೇ ಇರಲಿಲ್ಲ. ಯಾರನ್ನೋ ಭೆಟ್ಟಿಯಾಗಿ ಅವರೇ ಯಾಂಗಲ್ಟನ್ ಅಂತ ತಿಳಿದವರು ಎಷ್ಟೋ ಜನ. ರಹಸ್ಯ ದ್ವಾರದಿಂದ ಬಂದು ಹೋಗಿ ಮಾಡುತ್ತಿದ್ದ ಯಾಂಗಲ್ಟನ್ ವ್ಯಕ್ತಿತ್ವವೇ ವಿಚಿತ್ರ. 

CIA ಒಳಗೇ ಹುದುಗಿರಬಹುದಾದ ಸೋವಿಯೆಟ್ ಡಬಲ್ ಏಜೆಂಟ್ಸ್ ಗಳನ್ನು ಹುಡುಕುವ ಕಾಯಕ ಎಲ್ಲಿ ತನಕ ಹೋಯಿತೆಂದರೆ ಯಾಂಗಲ್ಟನ್ ಅವರಿಗೆ ಬುದ್ಧಿ ಭ್ರಮಣೆ ಆಗಿತ್ತೆ ಅಂತ ಈಗಿನವರು ಯೋಚಿಸುತ್ತಿದ್ದಾರೆ. ಕುಂತಲ್ಲಿ ನಿಂತಲ್ಲಿ ಎಲ್ಲರಲ್ಲೂ ಸೋವಿಯೆಟ್ ಏಜೆಂಟ್ ಗಳೇ ಕಾಣತೊಡಗಿದ್ದರು ಯಾಂಗಲ್ಟನ್ ಅವರಿಗೆ. ಸೋವಿಯೆಟ್ ಏಜೆಂಟ್ ಗಳನ್ನು ಹುಡುಕಿ ತೆಗೆಯುವ ಅಬ್ಬರದಲ್ಲಿ ಎಷ್ಟೋ ಜನ ನಿರಪರಾಧಿಗಳೂ ಸಹ ಸಿಕ್ಕಿ ಬಿದ್ದು ಪಡಬಾರದ ಕಷ್ಟ ಸಂಕಷ್ಟ ಅನುಭವಿಸಿದರು. ಪೀಟರ್ ಕಾರ್ಲೊವ್ ಅನ್ನುವ ಒಬ್ಬ ಸೀನಿಯರ್ ಅಧಿಕಾರಿ, ಯಾಂಗಲ್ಟನ್ ಗೆ ಹತ್ತಿರದವ ಕೂಡ, ಯಾಂಗಲ್ಟನ್ ಅವರ ಸಂಶಯದ ಸುಳಿಯಲ್ಲಿ ಸಿಕ್ಕು CIA ನೌಕರಿ ಕಳೆದುಕೊಂಡ. ಆದ್ರೆ ಕಾರ್ಲೊ ಸುಮ್ಮನೆ ಕೂಡಲಿಲ್ಲ. ಸರಿ ಸುಮಾರು ೨೫ ವರ್ಷ 
ಬಡಿದಾಡಿ ತಾನು ನಿರಪರಾಧಿ, ಸೋವಿಯೆಟ್ ಪರವಾಗಿ ಕೆಲಸ ಮಾಡಿದ ಗದ್ದಾರ್ ಅಲ್ಲವೇ ಅಲ್ಲ ಪ್ರೂವ್ ಮಾಡಿಕೊಂಡಿದ್ದು ಅಷ್ಟೇ ಅಲ್ಲ CIA ಅವನನ್ನು ವಾಪಸ್ ಕರೆದು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳುವ ಹಾಗೆ ಮಾಡಿಕೊಂಡ. ಆದ್ರೆ ಯಾಂಗಲ್ಟನ್ ಸಾಹೇಬರ ಸೋವಿಯೆಟ್ ಏಜೆಂಟ್ಸ್ ಹಿಡಿಯುವ ಮಂಗ್ಯಾನಾಟದಲ್ಲಿ  CIA ಧ್ವಂಸ ಆಗಿ ಹೋಯಿತಾ? ಹೀಗೆ ಯಾಂಗಲ್ಟನ್ ಅವರಿಗೆ ಇಲ್ಲದ ಸಲ್ಲದ ಸಂಶಯ ಬರುವ ಹಾಗೆ ಮಾಡಿ, ಒಳ್ಳೊಳ್ಳೆ CIA ಆಫೀಸರ್ ಗಳ ನಿರ್ನಾಮ ಮಾಡಿ, CIA ಅನ್ನು ದುರ್ಬಲಗೊಳಿಸಿದ್ದು ಸಹ ಸೋವಿಯೆಟ್ ಕಾರಸ್ತಾನ ಆಗಿತ್ತೇ? ಸೋವಿಯೆಟ್ ಯೂನಿಯನ್ ಅತ್ಯಂತ ಕೇರ್ಫುಲ್ ಆಗಿ ಬೀಸಿದ ಬಲೆಗೆ ತಾವೇ ತಿಳಿಯದಂತೆ ಬಿದ್ದಿದ್ದರೆ ಯಾಂಗಲ್ಟನ್? ಸೋವಿಯೆಟ್ ಯೂನಿಯನ್ ಪುಕ್ಕಟೆಯಾಗಿ ಒಂದು ದೊಡ್ಡ ಮಟ್ಟದ ಕಾರ್ಯಾಚರಣೆ ಯಾಂಗಲ್ಟನ್ ಮೂಲಕವೇ ಮಾಡಿಸಿಬಿಟ್ಟಿತಾ? ಹೀಗೆ ಹಲವು ಊಹಾಪೋಹಗಳು ಬರುತ್ತವೇ ಇರುತ್ತವೆ. 

ದೇಶಭಕ್ತಿಯ ಗುಂಗಿನಲ್ಲಿ  ಪ್ಯಾರೊನೋಯಿಡ್ ಆಗಿದ್ದ ಯಾಂಗಲ್ಟನ್ ಯಾಕೆ ಹೀಗಾಗಿದ್ದರು?

ಕಿಮ್ ಫಿಲ್ಬಿ ಅನ್ನುವವ ಇಂಗ್ಲೆಂಡ್ ದೇಶದ ಬೇಹುಗಾರಿಕೆ ಸಂಸ್ಥೆ MI -6 ನಲ್ಲಿ ದೊಡ್ಡ ಆಫೀಸರ್. CIA ಮತ್ತೆ MI -6 ಗೆ ಏಕದಂ ಗಳಸ್ಯ ಮತ್ತು ಕಂಟಸ್ಯ. ಇದೇ ಬಾಂಧವ್ಯ ಕಿಮ್ ಫಿಲ್ಬಿ ಮತ್ತು ಜೇಮ್ಸ್ ಯಾಂಗಲ್ಟನ್ ಮಧ್ಯೆ ಕೂಡ ಇತ್ತು. ಇಬ್ಬರೂ ಅತಿ ಕ್ಲೋಸ್. ಆದ್ರೆ ಯಾಂಗಲ್ಟನ್ ಗೆ ಒಂದು ಮಾತ್ರ ಗೊತ್ತಿರಲಿಲ್ಲ. ಕಿಮ್ ಫಿಲ್ಬಿ ಆಗಲೇ ಸೋವಿಯೆಟ್ ಯೂನಿಯನ್ ಕಡೆ  ಹಾರಿದ್ದ ಮತ್ತು ಸೊವಿಯಟ್ ಬೇಹುಗಾರಿಕೆ ಸಂಸ್ಥೆ KGB ಸಲುವಾಗಿ ಕೆಲಸ ಮಾಡಲು ಶುರು ಮಾಡಿ ಅಮೇರಿಕಾ, ಇಂಗ್ಲಂಡ ಇತರ NATO ದೇಶಗಳ ಸಕಲ ಮಾಹಿತಿ ದೊಡ್ಡ ಪ್ರಮಾಣದಲ್ಲಿ ಸಾಗಿಸುತ್ತಿದ್ದ ಅಂತ!

ಇಂತಹ ಖಾಸಮ್ ಖಾಸ್ ದೋಸ್ತ್ ಕಿಮ್ ಫಿಲ್ಬಿ ಒಂದು ದಿವಸ ಇಂಗ್ಲೆಂಡ್ ನಿಂದ ನಾಪತ್ತೆ ಆದ. ನಂತರ ಪತ್ತೆ ಆದದ್ದು ಮಾಸ್ಕೋನಲ್ಲಿ. ಕಿಮ್ ಫಿಲ್ಬಿ ಗದ್ದಾರ್ ಎನ್ನುವದು MI -6 ಗೆ ಗೊತ್ತಾಗಿತ್ತು. ಇನ್ನೇನು ಅವನನ್ನು ಅರೆಸ್ಟ್ ಮಾಡಬೇಕು ಅನ್ನುವಷ್ಟರಲ್ಲಿ KGB ಅತ್ಯಂತ ಚಾಣಾಕ್ಷ ರೀತಿಯಲ್ಲಿ ಕಿಮ್ ಫಿಲ್ಬಿಯನ್ನು ದೇಶದಿಂದ ಹಾರಿಸಿ ಸೋವಿಯೆಟ್ ಮಾಸ್ಕೋಗೆ ಶಿಫ್ಟ್ ಮಾಡಿ, ಅಲ್ಲೇ ಸೆಟಲ್ ಮಾಡಿತ್ತು. ಅಲ್ಲಿಂದಲೇ KGB ಸಲುವಾಗಿ ಕೆಲಸ ಮಾಡಿದ ಕಿಮ್ ಫಿಲ್ಬಿ. 

ಪ್ರಾಣ ಮಿತ್ರ ಕಿಮ್ ಶತ್ರು ದೇಶದ  ಏಜೆಂಟ್ ಅನ್ನುವದು ಜೇಮ್ಸ್ ಯಾಂಗಲ್ಟನ್ ಗೆ ಅರಗಿಸಿಕೊಳ್ಳಲು ಆಗಲೇ ಇಲ್ಲ. ಸಾಧ್ಯವೇ ಇಲ್ಲ! ಕಿಮ್ ಫಿಲ್ಬಿ ಹಾಗೆ ಮಾಡಲು ಸಾಧ್ಯವೇ ಇಲ್ಲ ಅನ್ನುತ್ತಲೇ ಇದ್ದ ಯಾಂಗಲ್ಟನ್ ಗೆ ಈ ಘಟನೆಯಿಂದ ಆದ ಘಾತವೇ ತಲೆ ಕೆಡಲು ಕಾರಣವೇ? ಯಾಂಗಲ್ಟನ್ ನನ್ನು ಸರಿಯಾಗಿ ಅರಿತಿದ್ದ ಕಿಮ್ ಫಿಲ್ಬಿ ಮಾಸ್ಕೋ ದಲ್ಲೇ ಕೂತು ಸ್ಕೀಮ್ ಹಾಕಿದನಾ? ಹೌದು ಅನ್ನುತ್ತವೆ ಕೆಲವು ಮೂಲಗಳು. 

ಕಿಮ್ ಫಿಲ್ಬಿಗೆ  ಯಾಂಗಲ್ಟನ್ ಬಗ್ಗೆ ಎಲ್ಲ ಗೊತ್ತಿತ್ತು. ಇಬ್ಬರೂ ಸಿಕ್ಕಾಪಟ್ಟೆ ಎಣ್ಣೆ ಹೊಡೆಯುತ್ತಿದ್ದರು. ಯಾಂಗಲ್ಟನ್ ಅವರ ಕುಡಿತ ಅಂದ್ರೆ ಲಿಮಿಟ್ ಇಲ್ಲದ್ದು. ಎಷ್ಟೇ ಕುಡಿದರು ಚಿತ್ತ ಮಾತ್ರ ಎಂದೂ ಆಗುತ್ತಿರಲಿಲ್ಲ. ಯಾಂಗಲ್ಟನ್ ಅವರ ಪ್ಲಸ್ ಮೈನಸ್ ಎಲ್ಲ ಗೊತ್ತಿದ್ದ ಕಿಮ್ ಫಿಲ್ಬಿ KGB ಮೂಲಕ ಎನಾಟೋಲಿ ಗೊಲಿಸ್ಟಿನ್ ಅನ್ನುವ ಡಬಲ್ ಏಜೆಂಟ್ ಒಬ್ಬವನನ್ನು CIA ಒಳಗೆ ನುಗ್ಗಿಸಿದ್ದನಾ? 

ಎನಾಟೋಲಿ ಗೊಲಿಸ್ಟಿನ್ ಅನ್ನುವ KGB ಅಧಿಕಾರಿ ಹೆಲ್ಸಿಂಕಿ ಅಲ್ಲಿ KGB ಬಿಟ್ಟು CIA ಗೆ ಹಾರಿದ. ಹೆಲ್ಸಿಂಕಿಯಿಂದ ಅವನನ್ನು ಸೀದಾ ಅಮೆರಿಕಾಕ್ಕೆ ಹಾರಿಸಿದ CIA ಅವನನ್ನು ಅತ್ಯಂತ ಗೌಪ್ಯತೆಯಿಂದ ಕಾಪಾಡಿತು. KGB ಯ ದೊಡ್ಡ ಅಧಿಕಾರಿಯೊಬ್ಬನನ್ನು ಪಟಾಯಿಸಿದ CIA KGB ಗೆ ಒಂದು ಟಾಂಗ್ ಕೊಟ್ಟೆ ಅಂತು. ಅದು ನಿಜವಾದ ವಿಜಯವಾಗಿತ್ತೆ? ಅಥವಾ ಯಾಂಗಲ್ಟನ್ ಅವರನ್ನು ಮಂಗ್ಯಾ ಮಾಡಲು ಎಂದೇ KGB ಎನಾಟೋಲಿ ಗೊಲಿಸ್ಟಿನ್ ನನ್ನು ನುಗ್ಗಿಸಿತ್ತೆ? ಎನಾಟೋಲಿ ಗೊಲಿಸ್ಟಿನ್ ಸೂತ್ರಧಾರ ಕಿಮ್ ಫಿಲ್ಬಿ ಆಗಿದ್ದನಾ? KGB ಆಡಿದ ಚದುರಂಗದ ಆಟದಲ್ಲಿ ಯಾಂಗಲ್ಟನ್ ಒಂದು ಮೊಹ್ರಾ ಆಗಿಬಿಟ್ಟರೆ? ಮೊಹ್ರಾ ಆಗಿ ಎತ್ತರ ಪತ್ತರ ಆಡಿ CIA ಅನ್ನು ನಾಮಾನೇಷ ಮಾಡಿ ಹಾಕಿ ಬಿಟ್ಟರಾ? ಅದೂ ದೇಶಭಕ್ತಿಯ ಸೋಗಿನಲ್ಲಿ ಗೊತ್ತಿಲ್ಲದೇ ಏನೇನೋ ಮಾಡಿ ಬಿಟ್ಟರಾ?

ಎನಾಟೋಲಿ ಗೊಲಿಸ್ಟಿನ್ ಬಂದವನೇ ಯಾಂಗಲ್ಟನ್ ಅವರಿಗೆ ಪರಮಾಪ್ತನಾಗಿಬಿಟ್ಟ. Counter Intelligence ಚೀಫ್ ಆಗಿದ್ದ ಯಾಂಗಲ್ಟನ್ ಅವರಿಗೆ ಇದು ಒಂದು ದೊಡ್ಡ ವಿಕ್ಟರಿ.  ಎನಾಟೋಲಿ ಗೊಲಿಸ್ಟಿನ್ ಹೇಳಿದ್ದೆಲ್ಲ ಪ್ರಸಾದದಂತೆ ಸ್ವೀಕರಿಸಿಬಿಟ್ಟರು. ಎನಾಟೋಲಿ ಗೊಲಿಸ್ಟಿನ್ ಯಾರ್ಯಾರೋ CIA ಅಧಿಕಾರಿಗಳು KGB ಜೊತೆ ಶಾಮೀಲಾಗಿದ್ದಾರೆ ಅಂತ ಬಟ್ಟೆಯ ಹಾವು ಬಿಟ್ಟ. ಯಾಂಗಲ್ಟನ್ ತಮ್ಮ Counter Intelligence ಯೂನಿಟ್ಟಿನ ಅಷ್ಟು ಸಂಪನ್ಮೂಲಗಳನ್ನು ಗೊಲಿಸ್ಟಿನ್ ತೋರಿಸಿದ ಅಧಿಕಾರಗಳ ತನಿಖೆ ಮಾಡುವತ್ತ ತಿರುಗಿಸಿ ಬಿಟ್ಟರು. ಇಸ್ರೇಲಿ ಡೆಸ್ಕ್ ಸಹಿತ ಯಾಂಗಲ್ಟನ್ ಅವರ ಕೆಳಗೇ ಇತ್ತಲ್ಲ. ಇತ್ತ ಕಡೆ ಮಂಗ್ಯಾ ಹಿಡಿಯುವ ಅಬ್ಬರದಲ್ಲಿ ಅದನ್ನು ಪೂರ್ತಿ ನಿರ್ಲಕ್ಷಿಸಿದ ಯಾಂಗಲ್ಟನ್ ಅವರಿಗೆ ಅರಬ್ ದೇಶಗಳು ಇಸ್ರೇಲ್ ಮೇಲೆ ಮಿಂಚಿನ ದಾಳಿ ಮಾಡುವ ಖಬರೂ ಇರಲಿಲ್ಲ. ಅದು ದೊಡ್ಡ ಮಟ್ಟದ ಇಂಟೆಲಿಜೆನ್ಸ್ ಫೇಲ್ಯೂರ್ ಅಂತಲೇ ಖ್ಯಾತವಾಯಿತು. ಹೇಗೋ ಸಿಕ್ಕಾಪಟ್ಟೆ ಹೈ ಲೆವೆಲ್ ಕನೆಕ್ಷನ್ ಇದ್ದ ಯಾಂಗಲ್ಟನ್ ಬಚಾವ ಆದರು. ನೌಕರಿ ಉಳಿಯಿತು. ಅವರ ಸೊವಿಯಟ್ ಏಜೆಂಟ್ಸ್ ಹುಡುಕಿ ತೆಗೆಯುವ ಕಾರ್ಯ ಮುಂದುವರಿಯಿತು. ಈ ಕಡೆ CIA ಎಕ್ಕುಟ್ಟಿ ಹೋಗುತ್ತಿತ್ತು. 

ಎನಾಟೋಲಿ ಗೊಲಿಸ್ಟಿನ್ ಎಂಬ KGB ಆಫೀಸರ್ ಹಾರಿದ ಒಂದೋ ಎರಡೋ ವರ್ಷಗಳಲ್ಲೇ ನೊರ್ಸೆಂಕೊ ಅನ್ನುವ ಮತ್ತೊಬ್ಬ KGB ಆಫೀಸರ್ ಅಮೇರಿಕಾಗೆ ಹಾರಿದ. CIA ಪರವಾಗಿ ವರ್ಕ್ ಮಾಡುತ್ತೇನೆ ಅಂದ. ಆದ್ರೆ ಮೊದಲಿನ ಎನಾಟೋಲಿ ಗೊಲಿಸ್ಟಿನ್ ಇದ್ದನಲ್ಲ! ಆ ಎನಾಟೋಲಿ ಗೊಲಿಸ್ಟಿನ್ ಪುಣ್ಯಾತ್ಮ, ಈ ನೊರ್ಸೆಂಕೊ KGB ಕಳಿಸಿದ ಡಬಲ್ ಏಜೆಂಟ್ ಅಂದು ಬಿಟ್ಟ. ಈಗ ಏನು ಮಾಡುವದು? ಎನಾಟೋಲಿ ಗೊಲಿಸ್ಟಿನ್ ನಿಂದ ಒಂದು ತರಹದ  ಮಾಯೆಗೆ ಒಳಗಾಗಿದ್ದ ಜೇಮ್ಸ್ ಯಾಂಗಲ್ಟನ್ ನೊರ್ಸೆಂಕೊ ಗೆ ಏನೇನೋ ಚಿತ್ರಹಿಂಸೆ ಕೊಟ್ಟು, ನೀನು ಡಬಲ್ ಏಜೆಂಟ್ ಏನು? ಹಾಂ? ಹಾಂ? ಅಂತ ಝಾಡಿಸಿ, ಆ ಬಡಪಾಯಿ, ಹೌದ್ರೀ ಸರ್ರ್!!!! ಅನ್ನುವಂತೆ ಮಾಡಿ ಬಿಟ್ಟರು. ಎನಾಟೋಲಿ ಗೊಲಿಸ್ಟಿನ್ ತನ್ನ ಪ್ರತಿಸ್ಪರ್ಧಿಯನ್ನು ನಿರ್ನಾಮ ಮಾಡಿದ ಖುಷಿಯಲ್ಲಿ ಇದ್ದ. ಎನಾಟೋಲಿ ಗೊಲಿಸ್ಟಿನ್ KGB ಕಳಿಸಿದ ಡಬಲ್ ಏಜೆಂಟ್ ಆಗಿದ್ದೆ ಹೌದಾಗಿದ್ದರೆ ನೊರ್ಸೆಂಕೊ ನನ್ನು neutralize ಮಾಡಿ KGB ಕೆಲಸ ಮಾಡಿಸಿ ಕೊಟ್ಟಿದ್ದ. CIA ಏನಾದರೂ ನೊರ್ಸೆಂಕೊ ನನ್ನು ನಂಬಿ ಬಿಟ್ಟಿದ್ದರೆ KGB ಗೆ ದೊಡ್ಡ ಮಟ್ಟದ ಹಾನಿ ಆಗುತ್ತಿತ್ತು. ಅದನ್ನು ಡಬಲ್ ಏಜೆಂಟ್ ಎನಾಟೋಲಿ ಗೊಲಿಸ್ಟಿನ್ ತಪ್ಪಿಸಿದನಾ?

ಹೀಗೆ ಜೇಮ್ಸ್ ಯಾಂಗಲ್ಟನ್ ಹೇರಾ ಪೇರಿ ಮಾಡುತ್ತ ಇದ್ದಾಗ ಅವರ ದೊಡ್ಡ ಮಟ್ಟದ ಬೆಂಬಲಿಗರಾಗಿದ್ದ CIA ಲಾಂಗ್ ಟೈಮ್ ಡೈರೆಕ್ಟರ್ ರಿಚರ್ಡ್ ಹೆಲಮ್ಸ್ ನೌಕರಿ ಕಳೆದುಕೊಂಡರು. Watergate ಪ್ರಕರಣದಲ್ಲಿ ಸಿಕ್ಕು ಒದ್ದಾಡುತ್ತಿದ್ದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಆ ಪ್ರಕರಣ ಮುಚ್ಚಿ ಹಾಕಲು CIA ಸಹಾಯ ಕೇಳಿದರು. CIA ಡೈರೆಕ್ಟರ್ ರಿಚರ್ಡ್ ಹೆಲಮ್ಸ್, ಅದು ಮಾತ್ರ ಹರ್ಗೀಸ್ ಸಾಧ್ಯವೇ ಇಲ್ಲ ಅಂದ್ರು. ಪ್ರೆಸಿಡೆಂಟ್ ರಿಚರ್ಡ್ ನಿಕ್ಸನ್, ಹಾಂಗಿದ್ರ ನೀ ಬ್ಯಾಡ. ಮನಿಗೆ ಹೋಗು, ಅಂತ ಹೇಳಿ ಅವರನ್ನ ಡಿಸ್ಮಿಸ್ ಮಾಡಿದರು. 

ಸಿಐಎ ಡೈರೆಕ್ಟರ್ ರಿಚರ್ಡ್ ಹೆಲಮ್ಸ್ ಹೋಗಿದ್ದೇ ಹೋಗಿದ್ದು ಜೇಮ್ಸ್ ಯಾಂಗಲ್ಟನ್ ಅವರ ಕುಂಡಲಿಯಲ್ಲಿ ಶನಿ ವಕ್ಕರಿಸಿಕೊಂಡೇ ಬಿಟ್ಟಿತು. ಆ ಶನಿ ಹೊಸ ಸಿಐಎ ಡೈರೆಕ್ಟರ್ ವಿಲಿಯಂ ಕೋಲ್ಬಿ ಎಂಬಾತನ ರೂಪದಲ್ಲಿ ಬಂದಿತ್ತು. ಇದೇ ಸಮಯದಲ್ಲಿ ಸೀಮೊರ್ ಹರ್ಷ್ ಅನ್ನುವ ಪ್ರಳಯಾಂತಕ ಪತ್ರಕರ್ತ ಒಬ್ಬ ಒಂದೊಂದೇ ಆಗಿ ಜೇಮ್ಸ್ ಯಾಂಗಲ್ಟನ್ ಅವರ ಕಾರ್ನಾಮೆಗಳನ್ನು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಬಿಚ್ಚ ತೊಡಗಿದ. ಸಿಐಎ ಮತ್ತು ಯಾಂಗಲ್ಟನ್ ಬೀದಿಯಲ್ಲಿ ಬೆತ್ತಲೆ ನಿಂತಿದ್ದರು. ಈ ಕಡೆ ಹೊಸ ಡೈರೆಕ್ಟರ್ ವಿಲಿಯಂ ಕೋಲ್ಬಿ ಸಿಐಎ ನ ಹಾಳಾಗಿ ಹೋಗಿದ್ದ ಇಮೇಜ್ ಸರಿ ಮಾಡುವ ಪ್ರಯತ್ನದಲ್ಲಿ ತೊಡಗಿದ್ದರು. ಮೊದಲಿಂದ ಸಿಐಎ ಅಮೇರಿಕಾದ ಸೆನೆಟ್ ಗೆ ಸಹಿತ ಪೂರ್ತಿ ಮಾಹಿತಿ ಕೊಡುತ್ತಿರಲಿಲ್ಲ. ರಾಷ್ಟ್ರೀಯ ಭದ್ರತೆ, ಗೌಪ್ಯತೆ ಅದು ಇದು ಅಂದು ಎಲ್ಲವನ್ನು ಮುಚ್ಚಿ ಮುಚ್ಚಿ ಇಡುತ್ತಿತ್ತು. ವಿಲಿಯಂ ಕೋಲ್ಬಿ ಅದನ್ನು ಬದಲಾಯಿಸಲು ಹೊರಟರು. ಸೆನೆಟ್ ಅತ್ಯಂತ ರಹಸ್ಯದ ದಾಖಲೆಗಳನ್ನು ಕೇಳಿದಾಗ ಕೊಟ್ಟೇ ಬಿಟ್ಟರು. ಸಿಐಎ ಒಳಗೇ ಅದಕ್ಕೆ ತುಂಬಾ ವಿರೋಧ ವ್ಯಕ್ತವಾಯಿತು. ಜೇಮ್ಸ್ ಯಾಂಗಲ್ಟನ್ ಅಂತೂ ಸಿಐಎ ಡೈರೆಕ್ಟರ್ ವಿಲಿಯಂ ಕೋಲ್ಬಿ ಸಹಿತ ಸೋವಿಯೆಟ್ ಏಜೆಂಟ್ ಇರಬಹುದೋ  ಏನೋ ಅಂತ ತಮ್ಮ ಆಪ್ತ ಪಟಾಲಂ ಮುಂದೆ ಹೇಳಿಕೊಂಡರು. ಅದು ಎಲ್ಲಿ ವಿಲಿಯಂ ಕೋಲ್ಬಿಯವರ ಕಿವಿಗೆ ಬಿತ್ತೋ ಇಲ್ಲವೋ ಗೊತ್ತಿಲ್ಲ. ಆದರೂ ಸೀಮೊರ್ ಹರ್ಷ ಬರೆದ ಲೇಖನಗಳನ್ನು ಜೇಮ್ಸ್ ಯಾಂಗಲ್ಟನ್ ಅವರ ಮುಂದ ಇಟ್ಟ ವಿಲಿಯಂ ಕೋಲ್ಬಿ, ಏನಂತೀರಿ ಇವಕೆಲ್ಲಾ? ಅಂದಾಗ ಯಾಂಗಲ್ಟನ್ ಬೆಬ್ಬೆ ಅಂದ್ರು. ಹೊಂಡ್ರೀ ಮನಿಗೆ. ಭಾಳ ರಾಡಿ ಎಬ್ಬಿಸಿ CIA ಅಂದ್ರ "ಚಡ್ಡಿ ಇಲ್ಲದ ಏಜನ್ಸಿ" ಅಂತ ಮಂದಿ ನಗೋ ಹಾಂಗ ಮಾಡಿ ಹಾಕೀರಿ. You are dismissed! ಅಂತ ಒಂದೇ ಮಾತಿನಲ್ಲಿ ಜೇಮ್ಸ್ ಯಾಂಗಲ್ಟನ್ ಅವರನ್ನು ಮನೆಗೆ ಕಳಿಸಿದ್ದರು ಹೊಸ ಡೈರೆಕ್ಟರ್ ವಿಲಿಯಂ ಕೋಲ್ಬಿ. 

ಹೀಗೆ ಜೇಮ್ಸ್ ಯಾಂಗಲ್ಟನ್ ಅನ್ನುವ ಒಬ್ಬ ಖ್ಯಾತನಾಮನ ಬೇಹುಗಾರಿಕೆ ಕರಿಯರ್ ಬರ್ಬಾದ್ ಆಗಿ ಮುಗಿದಿತ್ತು. 

Counter Intelligence ಚೀಫ್ ಆಗಿದ್ದ ಜೇಮ್ಸ್ ಯಾಂಗಲ್ಟನ್ ಮಂಗ್ಯಾ ಹಿಡಿಯುವ ಅಬ್ಬರದಲ್ಲಿ ತಾವೇ ಮಂಗ್ಯಾ  ಆಗಿ ಹೋಗಿಬಿಟ್ಟಿದ್ದರೆ? ಸೋವಿಯೆಟ್ KGB ಅವರನ್ನು ಫುಲ್ ಮಂಗ್ಯಾ ಮಾಡಿ ಯಾಂಗಲ್ಟನ್ ಅವರಿಗೆ ಮನುಷ್ಯಾರೆಲ್ಲ ಕೂಡ ಮಂಗ್ಯಾ ತರಹ ಕಂಡು ಬಿಟ್ಟಿದ್ದರೆ? ತಿಳಿಯದೇ ಸೋವಿಯೆಟ್ ಯೂನಿಯನ್ ಹೆಣೆದ ಜಾಲಕ್ಕೆ ಬಿದ್ದರೆ ಯಾಂಗಲ್ಟನ್?

ಹೊಸ ಡೈರೆಕ್ಟರ್ ವಿಲಿಯಂ ಕೋಲ್ಬಿ ಸಹಿತ ಜಾಸ್ತಿ ದಿನ ಇರಲಿಲ್ಲ. ಅವರ ಆ ಪರಿ ಓಪನ್  ಮೈಂಡೆಡ್ ಪಾಲಿಸಿ ಎಷ್ಟೋ ಮಂದಿಗೆ ಸರಿ ಬರಲಿಲ್ಲ. ಎಲ್ಲಿ ತಮ್ಮ ರಹಸ್ಯ ಎಲ್ಲ ಹೊರಗೆ ಹಾಕಿ ಬಿಟ್ಟಾನು ಅಂತ ಅಧ್ಯಕ್ಷ ಜೆರಾಲ್ಡ್ ಫೋರ್ಡ್ ಅವರಿಂದ ಹಿಡಿದು ಹಲವಾರು ದೊಡ್ಡ ವ್ಯಕ್ತಿಗಳಿಗೆ ಚಿಂತೆಯಾಗಿತ್ತು. ಆವಾಗಲೇ ಪ್ರೆಸಿಡೆಂಟ್ ಫೋರ್ಡ್ ವಿಲಿಯಂ ಕೋಲ್ಬಿ ಅವರನ್ನು ಮನೆಗೆ ಕಳಿಸಿ ಸೀನಿಯರ್ ಜಾರ್ಜ್ ಬುಶ್ ಅವರನ್ನು ಸಿಐಎ ಡೈರೆಕ್ಟರ್ ಆಗಿ ನೇಮಕ ಮಾಡಿದ್ದು. 

ಅದಾದ ಕೆಲವೇ ದಿವಸಗಳಲ್ಲಿ ಜೇಮ್ಸ್ ಯಾಂಗಲ್ಟನ್ ಸಿಐಎ ಡೈರೆಕ್ಟರ್ ಬುಶ್ ಅವರ ಮನೆಯ ಮುಂದೆ ಹೋಗಿ ಹುಚ್ಚನಂತೆ ಏನೇನೋ ಹೇಳಿ ಬಂದಿದ್ದರು. 

ಯಾಂಗಲ್ಟನ್  ಅವರ ಕಾಟಕ್ಕೋ ಏನೋ ಗೊತ್ತಿಲ್ಲ, ಆದ್ರೆ ಅವರ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಯೋಗಿ ಭಾಜನ್ ಎಂಬ ಯೋಗಾ ಗುರುವಿಗೆ ಅರ್ಪಿಸಿಕೊಂಡು ಸಿಖ್ ಧರ್ಮ ತೊಗೊಂಡು ಯಾಂಗಲ್ಟನ್ ಅವರಿಗೆ ಬೈ ಬೈ ಹೇಳಿ ಹೋಗಿ ಬಿಟ್ಟರು. ಜೀವನಪೂರ್ತಿ ಸೋವಿಯೆಟ್ ಮಂಗ್ಯಾ ಹುಡುಕಿದ್ದ ಯಾಂಗಲ್ಟನ್ ಸಾಹೇಬರು ಕೊನೆಗೆ ಫುಲ್ ಮಂಗ್ಯಾ ಕೂತರು. ಆ ಮ್ಯಾಲೆ ಪಾಪ ಸತ್ತೂ ಹೋದರು.

ಪೂರಕ ಮಾಹಿತಿ:

** The good shepherd ಎಂಬ ಮೂವಿ ಜೇಮ್ಸ್  ಯಾಂಗಲ್ಟನ್ ಮೇಲೆ ಆಧಾರಿತ.
** Targeted by the CIA: An Intelligence Professional Speaks Out on the Scandal That Turned the CIA Upside Down
** Spytime: The Undoing of James Jesus Angleton
** Wilderness of Mirrors: Intrigue, Deception, and the Secrets that Destroyed Two of the Cold War's Most Important Agents
** Lost Crusader: The Secret Wars of CIA Director William Colby

No comments: