Monday, June 10, 2013

ನಮಸ್ತೇ ಸದಾ ಒತ್ತಲೇ....ಕಾಶಿನಾಥ್ ಅವರ ಫೇಸ್ಬುಕ್ ಪ್ರಾರ್ಥನೆ

ಕಾಶಿನಾಥ

ಅವತ್ತೊಂದಿನ ನಮ್ಮ ಮಹಾ ಪೋಕ್ರೀ, ಪರಮ  ಪೋಲಿ ನಟ ನಿರ್ದೇಶಕ 'ಅನಂತನ ಆವಾಂತರ' ಖ್ಯಾತಿಯ ಕಾಶಿನಾಥ್ ಅವರನ್ನು ಭೆಟ್ಟಿಯಾಗುವ ಅನ್ನಿಸಿತು. 1978 ರಲ್ಲಿ ಅವರ suspense ಚಿತ್ರ 'ಅಪರಿಚಿತ' ನೋಡಿದಾಗಿಂದ ಅವರ ಅಭಿಮಾನಿ ನಾನು.

ಹೋದೆ ಅವರ ಮನೆಗೆ.

ಕಾಶಿನಾಥ್ ಕಂಪ್ಯೂಟರ್ ಮುಂದೆ ಕೂತು ಏನೋ ಕುಟ್ಟುತ್ತಿದ್ದರು.

ನಮಸ್ತೇ, ಕಾಶಿನಾಥ್ ಅವರಿಗೆ, ಅಂದೆ.

ಅವರು ನನ್ನ ಕಡೆ ತಿರುಗಿ ಕೂಡ ನೋಡಲಿಲ್ಲ.

ನಮಸ್ತೇ ಸದಾ ಒತ್ತಲೇ
ಲೈಕ್ ಒತ್ತಲೇ
ಕಾಮೆಂಟ್ ಹಾಕಲೇ
ಚಾಟಿಂಗ್ ಮಾಡಲೇ
ನಮಸ್ತೇ ಸದಾ ಒತ್ತಲೇ

ಅಂದು ಬಿಟ್ಟರು ಕಾಶಿನಾಥ್!!!!!

ಕಾಶಿನಾಥ್ ಹೇಳಿದ್ದನ್ನು ಎಲ್ಲೋ ಕೇಳಿದ ಹಾಗಿದೆಯಲ್ಲ ಅಂತ ತಲೆ ಕೆರಕೊಂಡೆ. ನೆನಪಾಯಿತು. ಇದು RSS (ರಾಷ್ಟ್ರೀಯ ಸ್ವಯಂಸೇವಕ ಸಂಘ) ನವರ ಪ್ರಾರ್ಥನೆ ಅಲ್ಲವಾ? ಹೌದು. ಇದನ್ನೇಕೆ ಕಾಶಿನಾಥ್ ಹೇಳಿದರು? ಎಲ್ಲಿ ನಮ್ಮ 'ಚಪಲ ಚೆನ್ನಿಗರಾಯ' ಕಾಶಿನಾಥ ಕೂಡ 'ಚಡ್ಡಿ' ಆಗಿ ಬಿಟ್ಟರೋ ಏನೋ ಅಂತ ಬಗ್ಗಿ ನೋಡಿದೆ. ಕಾಶಿನಾಥ್ ತಮ್ಮ ಟ್ರೇಡ್ ಮಾರ್ಕ್ ಟೈಟ್ ಪ್ಯಾಂಟ್ ನ್ನೇ ಹಾಕಿಕೊಂಡಿದ್ದರು. ಖಾಕಿ ಚಡ್ಡಿ ಇರಲಿಲ್ಲ. ಸೊ ಚಡ್ಡಿ ಆಗಿಲ್ಲ ಅಂತ ಖಾತ್ರಿ ಆಯಿತು.

ಏನೇ  ಇರಲಿ ನಾವೂ ಕೂಡ RSS ಪ್ರಾರ್ಥನೆಯ ಮೂಲಕವೇ ವಂದಿಸೋಣ ಅಂದುಕೊಂಡು ತಿರುಗಿ

ನಮಸ್ತೇ ಸದಾ ವತ್ಸಲೇ ಮಾತೃಭೂಮೇ
ತ್ವಯಾ ಹಿಂದುಭೂಮೇ ಸುಖಂ ವರ್ಧಿತೋಹಮ್
ಮಹಾಮಂಗಲೇ ಪುಣ್ಯಭೂಮೇ ತ್ವದರ್ಥೇ
ಪತತ್ವೇಷ ಕಾಯೋ ನಮಸ್ತೇ ನಮಸ್ತೇ

ಅಂತ RSS ಪ್ರಾರ್ಥನೆ ಮಾಡಿಬಿಟ್ಟೆ.

ನಿಲ್ಲಸ್ರೀ!!.....ಇದೇನು RSS ಶಾಖೆ ಅಂತ ತಿಳಿದಿದಿ ಏನೋ ಲೋಫರ್!? ನಾನು ಹೇಳಿದ್ದು ಅದಲ್ಲ. ನಾನು ಹೇಳಿದ್ದು 'ಮುಖ ಪುಸ್ತಕದ' ಪ್ರಾರ್ಥನೆ. ಮತ್ತೊಮ್ಮೆ ಹೇಳುತ್ತೇನೆ. ಸರಿಯಾಗಿ ಕೇಳಿಕೊಳ್ಳಿ ಅಂದವರೇ, ಮತ್ತೆ ಹೇಳಿದರು

ನಮಸ್ತೇ ಸದಾ ಒತ್ತಲೇ
ಲೈಕ್ ಒತ್ತಲೇ
ಕಾಮೆಂಟ್ ಹಾಕಲೇ
ಚಾಟಿಂಗ್ ಮಾಡಲೇ
ನಮಸ್ತೇ ಸದಾ ಒತ್ತಲೇ

ಅಯ್ಯೋ....ಡಬಲ್ ಮೀನಿಂಗ್ ಕಿಂಗ್ ಕಾಶಿನಾಥ್ ಅವರೇ!! ಏನ್ರೀ!? ಇನ್ನೂ ಡಬಲ್ ಮೀನಿಂಗ್ ಡೈಲಾಗ್ ಹೊಡೆಯೋದನ್ನ ಬಿಟ್ಟಿಲ್ಲವಾ ನೀವು? ಏನ್ರೀ? - ಅಂತ ಆಕ್ಷೇಪ ಮಾಡಿದೆ.

ಏನೋ ರಾಸ್ಕಲ್? ಎಲ್ಲೋ ಹೊಡದೇ ನಾನು ಡಬಲ್ ಮೀನಿಂಗ್? ನಾನು ಮುಖಪುಸ್ತಕ ಅಂದ್ರೆ ಫೇಸ್ಬುಕ್(Facebook) ಪ್ರಾರ್ಥನೆ ಹೇಳಿದರೆ ಡಬಲ್ ಮೀನಿಂಗ್ ಅಂತಾನೆ. ಭಡವಾ ರಾಸ್ಕಲ್! ರಾಸ್ಕಲ್, ಅಂತ ಕಾಶಿನಾಥ್ ಉರಿದುಕೊಂಡರು.

ಒತ್ತಲೇ, ಹಾಕಲೇ ಅಂತ ಏನೇನೋ ಅಂದ್ರೀ. ತಿಳಿಲಿಲ್ಲ. ತಿಳಿಸಿ ಹೇಳ್ರೀ ಸಾರ್, ಅಂತ ಕೇಳಿಕೊಂಡೆ.

ಒಳ್ಳೆ ಗಮಾರಾ ನೀನು. ಫೇಸ್ಬುಕ್ ನಲ್ಲಿ  ಲೈಕ್ ಒತ್ತಿ, ಕಾಮೆಂಟ್ ಹಾಕಿ, ಚಾಟ್ ಮಾಡಿ ಅಂತ ಚಿಕ್ಕದಾಗಿ ಚೊಕ್ಕದಾಗಿ ಫೇಸ್ಬುಕ್ ಪ್ರಾರ್ಥನೆ ಮಾಡಿದರೆ ಡಬಲ್ ಮೀನಿಂಗ್ ಅಂತೀರಲ್ಲರೀ! ರಾಸ್ಕಲ್! - ಅಂತ ಬೈದು ವಿವರಿಸಿದರು ಕಾಶಿನಾಥ್.

ಇವರಿಗೂ ಫೇಸ್ಬುಕ್ ಹುಚ್ಚು ಹತ್ತಿದೆ ಅಂತ ಆಯಿತು.

ಓಹೋ....ನೀವು ಫೇಸ್ಬುಕ್ ಫ್ಯಾನಾ ಸರ್? ಫೇಸ್ಬುಕ್ ಅಂದ್ರೆ ಏನು ಅಂತ ಎಲ್ಲರಿಗೂ ತಿಳಿಯೋ ಹಾಗೆ ಹೇಳಬೇಕು ಅಂದ್ರೆ ಹೇಗೆ ಹೇಳಬಹುದು ಸಾರ್? ಚಿಕ್ಕದಾಗಿ ಚೊಕ್ಕದಾಗಿ ಹೇಳಿ ನೋಡೋಣ, ಅಂತ ಸವಾಲ್ ಹಾಕಿದೆ.

ಸಿಂಪಲ್ ಕಣ್ರೀ....ಫೇಸ್ಬುಕ್ ಅಂದ್ರೆ ಮ್ಯಾಲೆ ಒತ್ತೋದು, ಕೆಳಗೆ ಹಾಕೋದು! ಅಷ್ಟೇ! ಅಂದು ಬಿಟ್ಟರು ಕಾಶಿನಾಥ್.

ಏನ್ ಸಾರ್ ಇದು ಒಳ್ಳೆ 'ಅನಂತನ ಆವಾಂತರ' ಸಿನೆಮಾದಲ್ಲಿ ನಿಮ್ಮ ಪರ್ಸನಲ್ ಸೆಕ್ರೆಟರಿ, ಸಾರ್! ಮೇಲೆ ಒತ್ತಿದಾಂಗೆ ಆಗೊತ್ತೆ ಸಾರ್.............ಅಯ್ಯೋ!!!ಅಯ್ಯೋ!!! ಮುಂದೆ ನಾ ಹೇಳಲಾರೆ ಆ ಡೈಲಾಗ್....ನಿಮಗೇ ಗೊತ್ತಲ್ಲ..... ಹಾಗೆ ಡಬಲ್ ಮೀನಿಂಗ್ ಹೊಡೆದು ಬಿಟ್ರೀ ಸಾರ್!!!!ಇಶ್ !!!ಇಶ್ !!! ಅಸಹ್ಯ!!!ಇದು ನಿಮ್ಮ ಪರ್ಸನಲ್ ಸೆಕ್ರೆಟರಿಗೆ ತಿಳಿಬಹುದು ಬೇರೆಯವರಿಗೆ ತಿಳಿಯೋದಿಲ್ಲ ಸಾರ್! - ಅಂತ ಹೇಳಿದೆ.

ಸ್ಟುಪಿಡ್ ರಾಸ್ಕಲ್....ಏನ್ರೀ ಬೆಳಿಗ್ಗೆ ಬೆಳಿಗ್ಗೆ ಬಂದು ತಲೆ ತಿಂತೀರಾ. ಫೇಸ್ಬುಕ್ ನಲ್ಲಿ ಮೇಲೆ ಲೈಕ್ ಒತ್ತೋದು ಕೆಳಗೆ ಕಾಮೆಂಟ್ ಹಾಕೋದು ಅಂತ. ಅದಕ್ಕೆ ಮತ್ತೆ ಅನಂತನ ಆವಾಂತರ ಸಿನೆಮಾದಲ್ಲಿ ಬಂದು ಡಬಲ್ ಮೀನಿಂಗ್ ಡೈಲಾಗ್ ಹೊಡೆದ ನಟಿಗೂ ಏನ್ರೀ ಸಂಬಂಧ? - ಅಂತ ಝಾಡಿಸಿ ಬಿಟ್ಟರು ಕಾಶಿನಾಥ್.

ಓಹೋ!! ಹಾಗಾ ಸರ್? ಫೇಸ್ಬುಕ್ ಅಂದ್ರೆ ಮ್ಯಾಲೆ ಲೈಕ್ ಒತ್ತೋದು ಕೆಳಗಡೆ ಕಾಮೆಂಟ್ ಹಾಕೋದು. ಚೆನ್ನಾಗಿದೆ ನಿಮ್ಮ ಫೇಸ್ಬುಕ್ one-liner. ಆದರೂ ಪೂರ್ತಿ ಹೇಳದೇ ಇದ್ದರೆ ಅಪಾರ್ಥ ಬರುತ್ತೆ ಸಾರ್. ಅಲ್ಲವಾ? - ಅಂತ ಕೇಳಿದೆ.

ತಲೆ ಸರಿ ಇದ್ದರೆ ಏನೂ ಅಪಾರ್ಥ ಮತ್ತೊಂದು ಬರೋದಿಲ್ಲ. ನಿಮ್ಮ ತಲೆಯಲ್ಲಿ ಮನಸ್ಸಿನಲ್ಲಿ ಏನು ಇರತ್ತೋ ಅದೇ ವಿಶ್ಲೇಷಣೆ ಆಗಿ ನಿಮಗೆ ಅರ್ಥ ಅಪಾರ್ಥ ಎಲ್ಲ ಬರೋದು. ಮನಸ್ಸನ್ನು ಸ್ವಚ್ಚ ಮಾಡಿಕೊಳ್ಳಿ. ಅದರ ಬದಲು ಕಾಶಿನಾಥ್ ಡಬಲ್ ಮೀನಿಂಗ್ ಹೊಡಿತಾರೆ ಅಂತ ಅಪಪ್ರಚಾರ ಮಾಡಬೇಡಿ. ತಿಳಿಯಿತಾ? - ಅಂತ ಝಾಡಿಸಿದರು ಕಾಶಿನಾಥ.

ಅದು ಹೌದು ಸಾರ್! ಇಡೀ ಜಗತ್ತೇ ನಮ್ಮ ಮನಸಲ್ಲಿ ಇದೆ ಅಂತಾರೆ ದೊಡ್ಡವರು. ಅದೂ ಸರಿಯೇ.ಆದರೂ ಕೆಲವೊಂದು ಶಬ್ದ ಹೀಗೆ ಡಬಲ್ ಮೀನಿಂಗ್ ಗೆ ಅಂತಾನೇ ಫಿಕ್ಸ್ ಆಗಿಬಿಟ್ಟಿದೆಯಲ್ಲ ಸಾರ್? - ಅಂತ ಹೇಳಿದೆ.

ಅದು ಕರ್ಮ...ಕರ್ಮ.... ಅಂತ ಏನೋ ಹೇಳಲು ಹೊರಟರು ಕಾಶಿನಾಥ. ಅಷ್ಟರಲ್ಲಿ ಅವರ ಫೇಸ್ಬುಕ್ ಮೇಲೆ ಏನೋ ನೋಟಿಫಿಕೆಶನ್ ಬಂತು. ಕಾಶಿ ಏಕ್ದಂ ರೈಸ್ ಆದರು.

ಆದ ನೋಡಲೇ ಲಿಂಗಪ್ಪ ನನ್ನ ಫೇಸ್ಬುಕ್ ಫ್ರೆಂಡ್! ನನ್ನ ಹಳೇ ಫ್ರೆಂಡ್ ಅವನು. ಈಗ ಫೇಸ್ಬುಕ್ ಮೇಲೆ ಸಿಕ್ಕಿದಾನೆ. ನಿನ್ನೆ ಮಾತ್ರ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದೆ. accept ಮಾಡಿದ್ದಾನೆ ಅನ್ನಿಸತ್ತೆ, ಅಂತ ಹೇಳುತ್ತ ಉತ್ಸುಕರಾದ  ಕಾಶಿನಾಥ ಫೇಸ್ಬುಕ್ ನೋಡಲು ಹೋದರು.

ಹಾಂ!!! ಅಂತ ಚೀತ್ಕರಿಸಿದರು ಕಾಶಿನಾಥ್.

ಏನಾಯ್ತು ಸಾರ್? - ಅಂತ ಕೇಳಿದೆ.

ನಾನು ಲಿಂಗಪ್ಪಂಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದರೆ ಯಾರೋ ಲಂಗಪ್ಪ ಅನ್ನೋವನು ಫ್ರೆಂಡ್ ಆಗಿದಾನಲ್ಲರೀ. ಇದು ಒಳ್ಳೆ ಕಥೆ ಆಯಿತು, ಅಂತ ಕಾಶಿ ಪೇಚಾಡಿಕೊಂಡರು.

ಮುಂದೇನು ಸಾರ್? ಲಂಗಪ್ಪನ್ನ ಫ್ರೆಂಡ್ ಅಂತಾ ಇಟ್ಟುಕೊಳ್ಳುತ್ತೀರಾ ಅಥವಾ unfriend ಮಾಡಿ ಬಿಡ್ತೀರಾ? - ಅಂತ ಕೇಳಿದೆ.

ಹೋಗ್ರೀ....ಹೋಗ್ರೀ....ನೀವು ಬಂದು ಕೂತಾಗಿಂದ ಇದೇ ಆಗೋಯ್ತು. ಮುಂದೆ ಹೋಗಿ ಬೇರೆ ಯಾರದ್ದಾದ್ರೂ ತಲೆ ತಿನ್ನಿ. ಲಿಂಗಪ್ಪನ್ನ ಲಂಗಪ್ಪನ್ನ ನಾನು ಸರಿ ಮಾಡಿಕೋತೀನಿ, ಅಂತ ಕಾಶಿನಾಥ್ ರೈಸ್ ಆಗಿ ನನ್ನ ಓಡಿಸಿಬಿಟ್ಟರು.

ಬರ್ತೀನಿ ಸಾರ್. ನಮಸ್ತೇ. ಕೇವಲ ನಮಸ್ತೇ ಮಾತ್ರ ಅಲ್ಲ....ನಮಸ್ತೇ ಸದಾ ಒತ್ತಲೇ, ಲೈಕ್ ಒತ್ತಲೇ, ಕಾಮೆಂಟ್ ಹಾಕಲೇ, ಚಾಟಿಂಗ್ ಮಾಡಲೇ, ನಮಸ್ತೇ ಸದಾ ಒತ್ತಲೇ, ಅಂತ ಫುಲ್ ಪ್ರಾರ್ಥನೆ ಮಾಡಿಯೇ ಬಿಟ್ಟೆ.

ಭೇಷ್!!!ಭೇಷ್!!! ಈಗ ಸರಿಯಾಗಿ ಕಲಿತಿರಿ ಫೇಸ್ಬುಕ್ ಪ್ರಾರ್ಥನೆ, ಅಂದ ಕಾಶಿ ಸ್ವಲ್ಪ ಕೂಲ್ ಆಗಿ ಬೀಳ್ಕೊಟ್ಟರು.

** ಇದೊಂದು ಮಂಡೆ ಕಲ್ಪಿತ ಕಹಾನಿ. ಅಂದ್ರೆ fictional. ಕಾಶಿನಾಥರನ್ನು ಭೇಟಿಯಾಗುವ ಸೌಭಾಗ್ಯ ಇನ್ನೂ ಬಂದಿಲ್ಲ. ಕಾಶಿನಾಥ್ ಅವರ ಕ್ಷಮೆ ಮೊದಲೇ ಕೇಳಿಬಿಡುತ್ತೇನೆ. ಕಾಶಿನಾಥ ಪೋಲಿ ನಟ ನಿರ್ದೇಶಕ ಅಂತ ಲೇಬಲ್ ಆದರೂ ಅವರೊಬ್ಬ ಅಪರೂಪದ ಪ್ರತಿಭಾವಂತ ಆಸಾಮಿ ಅನ್ನೋಕೆ 'ಅಪರಿಚಿತ' ಚಿತ್ರವೇ ಸಾಕು. ಕನ್ನಡದಲ್ಲಿ ಬಂದಂತಹ ಒಂದು ಅಪರೂಪದ suspense thriller ಮಾದರಿಯ ಚಿತ್ರ ಅದು. ಇವತ್ತಿನ ನಟ ನಿರ್ದೇಶಕ ಉಪೇಂದ್ರ, ಮನೋಹರ್ ಮುಂತಾದ ಪ್ರತಿಭೆಗಳೆಲ್ಲ ಕಾಶಿನಾಥ್ ಗರಡಿಯಲ್ಲೇ ತಯಾರಾದವರು. 'ಅಪರಿಚಿತ' ಚಿತ್ರವನ್ನು ಹಿಂದಿಯಲ್ಲೂ ಮಾಡಿದ ಕಾಶಿನಾಥ ಕಾಸು ಕಳೆದುಕೊಂಡು 'ಅನಂತನ ಆವಾಂತರ' ತರಹದ ಪೋಲಿ ಸಿನೆಮಾ ಮಾಡಿ ಸ್ವಲ್ಪ ಕಾಸು ಮಾಡಿಕೊಂಡಿರಬಹುದು. ಆದರೆ ಪ್ರತಿ ಚಿತ್ರದಲ್ಲೂ ತಮ್ಮದೇ ಆದ ಒಂದು ಛಾಪು ಮೂಡಿಸುವ ಅವರಿಗೆ ಮತ್ತು ಅವರ ಪ್ರತಿಭೆಗೆ ಒಂದು ನಮೋ ನಮಃ. 'ಶ್!!!' ಎಂಬ ಇನ್ನೊಂದು suspense thriller ಚಿತ್ರ, ಉಪೇಂದ್ರ ನಿರ್ದೇಶಿಸಿದ್ದು, ಅದರಲ್ಲಿ ಕಾಶಿನಾಥ ನಿರ್ಧೇಶಕನ ಪಾತ್ರ ಮಾಡಿದ್ದಾರೆ. ಅದರಲ್ಲಿ ಕೂಡ ಅವರಿಗೆ ಡಬಲ್ ಮೀನಿಂಗ್ ಅಂತಾನೆ ಬ್ರಾಂಡ್ ಮಾಡುತ್ತಾರೆ. ಅದರಲ್ಲಿ ಮಾತಿಗೊಮ್ಮೆ ಉರಿದು ಬೀಳುವ ನಿರ್ದೇಶಕನ ಪಾತ್ರ ಮಾಡಿದ ಕಾಶಿನಾಥ ಡೈಲಾಗ್ ಸ್ಟೈಲ್ ಈ ಬ್ಲಾಗ್ ಪೋಸ್ಟಿಗೆ ಸ್ಪೂರ್ತಿ. 'ಶ್!!!' ಕೂಡ ಒಂದು ಒಳ್ಳೆ suspense thriller ಚಿತ್ರ. ಗುರುವಿಗೆ ತಕ್ಕ ಶಿಷ್ಯ ಉಪೇಂದ್ರ. ಆ ಸನ್ನಿವೇಶದ ಒಂದು ಸಣ್ಣ ಕ್ಲಿಪ್ ಇಲ್ಲಿದೆ ನೋಡಿ. ಪೂರ್ತಿ ಚಿತ್ರ ಸಹ youtube ಮೇಲೆ ಲಭ್ಯ. ಒಂದು ಅತ್ಯಂತ ಕುತೂಹಲಕರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ 'ಶ್!'




** ಯಾರೋ ಪುಣ್ಯಾತ್ಮರು 'ಅಪರಿಚಿತ' ಪೂರ್ತಿ ಚಿತ್ರವನ್ನು youtube ಮೇಲೆ ಹಾಕಿದ್ದಾರೆ. ಅಪ್ಪಟ U ಸರ್ಟಿಫಿಕೇಟ್ ಚಿತ್ರ. ಇಲ್ಲಿ ನೋಡಬಹುದು - http://www.youtube.com/watch?v=vtlQ9K2zwws


** ಕಾಶಿನಾಥ - http://en.wikipedia.org/wiki/Kashinath_%28actor%29

ಕಾಶಿನಾಥ

5 comments:

ವಿ.ರಾ.ಹೆ. said...

LOL..."ನಮಸ್ತೇ ಸದಾ ಒತ್ತಲೇ..

ನಾವೂ ಕಾಶೀನಾಥ್ 'ಸಂಗ'ದವರು ದಿನಾ ಬೆಳಗ್ಗೆ 'ನಮಸ್ತೆ ಸದಾ ಒತ್ತಲೇ' ಹಾಡಿ ಧ್ವಜವಂದನ್ ಮಾಡಿಯೇ ಕೆಲಸ ಶುರುಮಾಡೋದು. :) ಪ್ರತಿಭಾನ್ವಿತ ನಿರ್ದೇಶಕ ಕಾಶೀನಾಥರಿಗೂ, ಫೇಸ್ ಬುಕ್ಕಿಗೂ, ಸಂಘಕ್ಕೂ ಲಿಂಕ್ ಮಾಡಿಬರೆದಿರುವುದು ಮಜಾ ಇದೆ.

Mahesh Hegade said...

ಥ್ಯಾಂಕ್ಸ್ ವಿಕಾಸ...:) :)

Anonymous said...

Hello. And Bye.

bhagwat said...

:)

Mahesh Hegade said...

ಧನ್ಯವಾದ ಭಾಗೋತ್ರೆ! :)