Wednesday, June 19, 2013

ಓಂ ನಮೋ ನಾರಾಯಣ

 

ಅವತ್ತು ಮುಂಜಾನೆ ನಾಷ್ಟಾ ಆಗಿರಲಿಲ್ಲ. ಟೈಮ್ ನೋಡಿದೆ. ಇನ್ನೂ ಒಂಬತ್ತೂವರಿ ಮಾತ್ರ ಆಗಿತ್ತು. ಈಗ ಲಗೂನ ನಮ್ಮ ದೋಸ್ತ್ ಚೀಪ್ಯಾನ ಮನಿಗೆ ಹೋದ್ರ ಅವಂದು ಮತ್ತ ಅವನ್ ಹೆಂಡ್ತಿ ರೂಪಾ ವೈನಿದು ತುಳಸಿ ಪೂಜಾ ನೆಡದಿರ್ತದ. ಕೊಬ್ಬರಿ ಚೂರಿನ ಪ್ರಸಾದ ಅದು ಇದು ಅಂತ ಸ್ವಲ್ಪ ನಾಷ್ಟಾ ಸಿಗ್ತದ. ಕಡ್ಕಿ ದಿನದಾಗ ಕೊಬ್ಬರಿ ಚೂರು ತಿಂದು ಒಂದು ಹಾಪ್ ಚಹಾ ಕುಡಿಯೋದ ಚೊಲೋದು ಅಂತ ಚೀಪ್ಯಾನ ಮನಿ ಕಡೆ ಹೊಂಟೆ.

ಚೀಪ್ಯಾನ ಪೂಜಾ ನೆಡದಿತ್ತು. ಇವತ್ತೇನು ಜೋರ್ ಪೂಜಾ! ಮಸ್ತ ಕೆಂಪ ಧೋತ್ರಾ ಬ್ಯಾರೆ ಉಟ್ಟು ಜಿಗದ್ ಜಿಗದ್ ಪೂಜಾ ಮಾಡ್ಲಿಕತ್ತಿಬಿಟ್ಟಾನ ಚೀಪ್ಯಾ!!! ಯಾವಾಗಲೂ ಇರೋ ಸಣ್ಣ ನಾಮ ಹಣಿ ಮ್ಯಾಲೆ ದೊಡ್ಡ ಆರ್ಭಟ ನಾಮ ಆಗಿತ್ತು. ರೂಪಾ ವೈನಿ ಬ್ಯಾರೆ ಹುರುಪಿಲೆ ಎಲ್ಲಾ ಸಂರಸಿ ಕೊಡ್ಲಿಕತ್ತಾರ. ಮಸ್ತ ಜಾಯಿಂಟ ಪೂಜಾ ಇಬ್ಬರದ್ದೂ.

ನಾಣಿ ಬಂದಾ ನಮ್ಮ ನಾಣಿ ಬಂದಾನೋ
ಮಾಣಿಗಳ ದೊಡ್ಡ ಮಾಣಿ ನಾಣಿ ಮಾಮಾ ಬಂದಾನೋ!

ಅಂತ ಚೀಪ್ಯಾ ಹಾಡಿದಂಗ ಕೇಳ್ತು.

ಏನಪಾ ವಿಚಿತ್ರ ಇದು? ಯಾವಾಗಲೂ ಭರಕ್ಕನ, 'ಜಯಮಂಗಳ ಜಯಮಂಗಳ ಜಯಮಂಗಳ ಮೂರ್ತೆ', ಅಂತ ಮರಾಠಿ ಮಿಶ್ರಿತ ಕನ್ನಡ ಒಳಗ ಸಣ್ಣ ಮಂತ್ರ ಹೇಳಿ ಪೂಜಾ ಮುಗಿಸೋ ಚೀಪ್ಯಾ ಇವತ್ತು ಏನೋ ಬ್ಯಾರೆನss ಮಂತ್ರ ಹೇಳಲಿಕತ್ತಾನಲ್ಲ! ಅಂತ ಅನ್ನಿಸ್ತು.

ಚೀಪ್ಯಾ ಮತ್ತ ಹೇಳಿದ ಅದss ಮಂತ್ರ....

ನಾಣಿ ಬಂದಾ ನಮ್ಮ ನಾಣಿ ಬಂದಾನೋ
ಮಾಣಿಗಳ ದೊಡ್ಡ ಮಾಣಿ ನಾಣಿ ಮಾಮಾ ಬಂದಾನೋ!

ಇದು ಎಲ್ಲೋ ಕೇಳಿದ ಹಾಡಿನ parody ಇದ್ದಂಗ ಅದ ಅಲ್ಲಾ!!!

ಹಾಂ!! ನೆನಪ ಆತು. ಪುರಂದರ  ದಾಸರ ಕೃತಿ. ದಾಸರ ಹಾಡಿನ್ಯಾಗ ಎಲ್ಲಿ ಮಾಣಿ ಎಲ್ಲಿ ನಾಣಿ ಎಲ್ಲಿ ಮಾಮಾ?!

ದಾಸರ ನಾಮ ಇದ್ದಿದ್ದು ಹೀಂಗ.............

ದೇವ ಬಂದಾ ನಮ್ಮ ಸ್ವಾಮೀ ಬಂದಾನೋ
ದೇವರ ದೇವ ಶಿಖಾಮಣಿ ಬಂದಾನೋ

ಈ ಹಾಡಿಗೆ ನಾಣಿ, ಮಾಣಿ ಅಂತ ಏನೇನೋ ಫಿಟ್ ಮಾಡಿ ಹಾಡ್ಲಿಕತ್ತಾನ ಚೀಪ್ಯಾ. ಹಾಪಾ!!!

ಏನಲೇ ಚೀಪ್ಯಾ? ಏನು ಮಂತ್ರ ಇದು? ಯಾರ ಪೂಜಾ ಮಾಡಲಿಕತ್ತಿ? ಯಾವ ಮಾಣಿ, ಯಾವ ನಾಣಿ, ಯಾವ ಮಾಮಾ? ಹಾಂ? ಹಾಂ? - ಅಂತ ಕೇಳಿದೆ.

ಪೂಜಾ ಮುಗಿಸಿ ಪೂಜಾದ ಪ್ರಸಾದ ಕೊಬ್ಬರಿ ಚೂರು ಕೊಟ್ಟ ಚೀಪ್ಯಾ.

ಇನ್ಫೋಸಿಸ್ (Infosys) ನೆತ್ತಿಗೆ ಮತ್ತ 'ನಾಮಾ' ಬಂತಲ್ಲೋ. ಅದss ಖುಷಿಯೊಳಗ ಇವತ್ತು ದೊಡ್ಡ ನಾಮಾ, ಪೂಜಾ ಎಲ್ಲಾ, ಅಂತ ಹೇಳಿ ಮತ್ತೂ ತಲಿ ಕೆಡಸಿ ಹಾಪ್ ಮಾಡಿ ಬಿಟ್ಟ.

ಹಾಂ!!!ಅಯ್ಯೋ!!! ಏನೂ????!!!! ಇನ್ಫೋಸಿಸ್ ಕಂಪನಿ ಸಹಿತ ಸತ್ಯಂ ಗತೆ ಕತ್ಯಂ ಆಗಿ ಖತಂ ಆತ? ಏನು ಭಾನಗಡಿ ಮಾಡಿಕೊಂಡ್ರೋ ಮಾರಾಯಾ ಇನ್ಫೋಸಿಸ್ ಮಂದಿ? - ಅಂತ ಘಾಬ್ರಿಲೆ ಕೇಳಿದೆ.

ಮುಂಜಾನೆ ಮುಂಜಾನೆ ಶುಭ ಶುಭ ಮಾತಾಡೋ ಅನಿಷ್ಟ ಮುಂಡೆ ಗಂಡ ಮಂಗೇಶ್, ಅಂತ ಅಲ್ಲೇ ಇದ್ದ ರೂಪಾ ವೈನಿ ಬೈದರು.

ಹಾಂ!? - ಅಂತ ಲುಕ್ ಕೊಟ್ಟೆ.

ಎಲ್ಲಾ ಛೋಲೋ ಆಗ್ಯದ. ಏನೂ ಭಾನಗಡಿ ಆಗಿಲ್ಲ ಇನ್ಫೋಸಿಸ್ ಒಳಗ, ಅಂದ ಚೀಪ್ಯಾ.

ಮತ್ತ ಇನ್ಫೋಸಿಸ್ ನೆತ್ತಿಗೆ ನಾಮಾ ಅಂದ್ಯಲ್ಲೋ? ಏನು ಹಾಂಗಂದ್ರ? ನಾಮಾ ಹಾಕೋದು ಅಂದ್ರ ಟೊಪ್ಪಿಗಿ ಹಾಕೋದು ಅಂತ ಅಲ್ಲೇನು? ಯಾರರ ಇನ್ಫೋಸಿಸ್ ನೆತ್ತಿಗೆ ನಾಮಾ ಹಾಕಿ ಕಂಪನಿ ಮುಳುಗಸಲಿಕ್ಕೆ ಹೊಂಟಾರೇನೋ ಅಂತ ಮಾಡಿದ್ದೆ. ನೆತ್ತಿಗೆ ನಾಮಾ ಹಾಕೋದು ಅಂದ್ರೇನು ಮತ್ತ? - ಅಂತ ಕೇಳಿದೆ. 

ಅವಾ ಸತ್ಯಂ ಕಂಪನಿ ಮಾಲೀಕ ರಾಮಲಿಂಗ ರಾಜು ದೊಡ್ಡ 'ನಾಮ'ಲಿಂಗ ರಾಜು ಆಗಿ, ಕಂಪನಿಗೆ, ಶೇರುದಾರರಿಗೆ ದೊಡ್ಡ ನಾಮಾ ಹಾಕಿ ಹೋಗಿದ್ದು ನೆನಪ ಇತ್ತು. ಈ ಸಾಫ್ಟ್ ವೇರ್ ಮಂದಿ ಅಂಡರ್ ವೇರ್ ಯಾವಾಗ ಹರಿತದ ಅನ್ನೋದನ್ನ ಹೇಳಲಿಕ್ಕೆ ಸಾಧ್ಯ ಇಲ್ಲ ನೋಡ್ರೀ!

ಲೇ....ಮಂಗ್ಯಾನ್ ಕೆ....ನಾಮದ ಬ್ರಾಹ್ಮಣ ನಾನು. ನೀನು ಹೇಳಿ ಕೇಳಿ ಭಸ್ಮದ (ವಿಭೂತಿ) ಬ್ರಾಹ್ಮಣ. ಆದರೂ ನನಕಿಂತ ಹೆಚ್ಚು ನಾಮದ ಬಗ್ಗೆ ಲಕ್ಷ ನಿನಗss ಇರ್ತದಲ್ಲ! ಯಾಕ ಅಂತೀನಿ? ಭಾಳ ಮಂದಿಗೆ ನಾಮಾ ಹಾಕಿ ಏನು? - ಅಂತ ಕೇಳಿದ ಚೀಪ್ಯಾ.

ಇಲ್ಲಪಾ....ಯಾರಿಗೂ ನಾಮಾ ಹಾಕಿಲ್ಲ. ಕೆಲೊ ಮಂದಿ ಅವರಾಗೇ ಬಂದು, ನೀವಾ ನಮಗ ಮುದ್ದಾಂ ನಾಮಾ ಹಾಕಬೇಕು ಅಂದವರಿಗೆ ಮಾತ್ರ ಬರೇ ನಾಮ ಒಂದss ಅಲ್ಲ, ಗೋಕರ್ಣ ಹಜಾಮತಿ ಸಹಿತ ಫ್ರೀ ಒಳಗ ಮಾಡಿ, ಉದ್ದಾಗಿ ನಾಮಾ ಹಾಕಿ, ಒಳ್ಳೆದಾಗಲಿ ಹೋಗಿ ಬರ್ರಿ ಅಂತ ಆಶೀರ್ವಾದ ಮಾಡಿ ಕಳಿಸಿ ಬಿಟ್ಟೇನಿ ನೋಡು. ಗೋಕರ್ಣ ಹಜಾಮತಿ ಯಾಕ ಮಾಡಿದೆ ಅಂದ್ರ ಉದ್ದಾಗಿ ನಾಮಾ ಹಾಕಲಿಕ್ಕೆ ಸ್ವಲ್ಪ ಜಾಸ್ತಿ ಜಗಾ ಸಿಗ್ತದ ನೋಡು ಅದಕ್ಕ......ಹಾ!!! ಹಾ!!! ಬರೆ ಜೋಕ್ ಮಾರಾಯಾ. ಯಾರಿಗೂ ನಾಮಾ ಮತ್ತೊಂದು ಹಾಕಿಲ್ಲ ನಾವು. ಈಗ ಹೇಳಪಾ ಇನ್ಫೋಸಿಸ್ ನೆತ್ತಿಗೆ ನಾಮಾ ಬಿತ್ತು ಅಂದ್ರ ಏನು ಅಂತ, ಅಂತ ನಕ್ಕೋತ್ತ ಹೇಳಿದೆ. ಕೇಳಿಕೊಂಡೆ.

ಲೇ....ನಮ್ಮ ನಾಣಿ ಮಾಮಾ ಉರ್ಫ್ ನಾಮಾ ಇನ್ಫೋಸಿಸ್ ಗೆ ವಾಪಸ್ ಬಂದಾರ. ಅದೂ ಏಕ್ದಂ ದೊಡ್ಡ ಲೆವಲ್ ನ್ಯಾಗ ಬಂದು ಕೂತಾರ. ಅದಕ್ಕ ಇನ್ಫೋಸಿಸ್ ನೆತ್ತಿಗೆ ಮತ್ತ ನಾಮಾ ಅಂತ ಹೇಳಿದೆ ಮಾರಾಯ, ಅಂತ ಚೀಪ್ಯಾ ವಿವರಿಸಿದ.

ಏನು? ನಿಮ್ಮ ಮಾಮಾ ಇನ್ಫೋಸಿಸ್ ಕಂಪನಿ ಒಳಗ ದೊಡ್ಡ ನೌಕರಿ ಹಿಡದ್ರ? ಯಾವ ನಾಣಿ ಮಾಮಾ? ಅವರss ನಾರಾಯಣ ಆಚಾರ್ರು ಏನು? ಅವರು ಅಲ್ಲೆಲ್ಲೋ ವಿಜಾಪುರ ಕಡೆ ಯಾವದೋ ರಾಯರ ಮಠದಾಗ ಆಚಾರ್ರು ಅಂತ ಇರಲಿಲ್ಲ? ಇನ್ಫೋಸಿಸ್ ಕಂಪನಿ ಈಗ ಆಚಾರ್ರು ಭಟ್ಟರು ಇತ್ಯಾದಿ ಮಂದಿ ಸಹಿತ ತೊಗೊಳ್ಳಿಕತ್ತುಬಿಟ್ಟದ ಏನು? ಅವರಿಗೂ ಎಲ್ಲಾ ಅಮೇರಿಕಾ ಯುರೋಪ್ ಒಳಗ ಡಿಮ್ಯಾಂಡ್ ಏನು? ಎಲ್ಲೆ ನಿಮ್ಮ ನಾಣಿ ಮಾಮಾ ಉರ್ಫ್ ನಾಮಾ ಅವರ ಪೋಸ್ಟಿಂಗ್? - ಅಂತ ಉದ್ದ ಕೇಳಿ ಬಿಟ್ಟೆ.

ಲೇ...ಊರ ಹಾಪಾ!!! ನಾಣಿ ಮಾಮಾ ಉರ್ಫ್ ನಾಮಾ ಅಂದ್ರ ನಮ್ಮ ಖರೆ ಮಾಮಾ ಮುದ್ದೇಬಿಹಾಳ ನಾರಾಣಾಚಾರ್ರು ಅಲ್ಲ. ಈಗ ಇನ್ಫೋಸಿಸ್ ನೆತ್ತಿಗೆ ಬಂದು ಕೂತವರು ಒರಿಜಿನಲ್ ನಾಣಿ ಮಾಮಾ ಅಂದ್ರ ಕಂಪನಿ ಫೌಂಡರ್ ನಾರಾಯಣ ಮೂರ್ತಿ ಅವರು. ಏನಲೇ??? ಬುದ್ಧಿ ಇಲ್ಲದವನ....ಪೇಪರ್ ಗೀಪರ್ ಓತ್ತಿಯೋ ಇಲ್ಲೋ? - ಅಂತ ಹೇಳಿದ.

ನಾರಾಯಣ ಮೂರ್ತಿ

ಈಗ ತಿಳೀತು. ರಿಟೈರ್ ಆಗಿ ಮನಿ ಸೇರಿಕೊಂಡು, ಮಕ್ಕಳು ಮಮ್ಮಕ್ಕಳು ಅಂತ ಆರಾಮಿದ್ದ ಇನ್ಫೋಸಿಸ್ ಕಂಪನಿ ಫೌಂಡರ್ ಮಾಮು (ಮಾಜಿ ಮುಖ್ಯಸ್ಥ) ನಾಮೂ (ನಾರಾಯಣ ಮೂರ್ತಿ) ಕಂಪನಿಗೆ ವಾಪಾಸ್ ಬಂದ ಸುದ್ದಿ. ಅದೇನೋ ಕಂಪನಿ ಪರಿಸ್ಥಿತಿ ಈಗ ೩-೪ ವರ್ಷದಿಂದ, ಅದೂ ಅವರು ಬಿಟ್ಟು ಹೋದಾಗಿಂದ, ಸರಿ ಇಲ್ಲಂತ. ಅದಕ್ಕ ಕಂಪನಿ ಶೇರುದಾರರು ನಾರಾಯಣ ಮೂರ್ತಿ ಅವರನ್ನು ವಾಪಾಸ್ ಕರ್ಕೊಂಡು ಬರ್ರಿ ಅಂತ ಸಿಕ್ಕಾಪಟ್ಟೆ ಒತ್ತಡ ಹಾಕಿ ಕರ್ಕೊಂಡು ಬಂದರಂತ. ಇದು ಸುದ್ದಿ.

ಅಲ್ಲಲೇ ಚೀಪ್ಯಾ.....ನಾರಾಯಣ ಮೂರ್ತಿ ಅವರಿಗೆ ಅಷ್ಟು ಸಲಿಗೀಲೆ ನಾಣಿ ಮಾಮಾ ನಾಣಿ ಮಾಮಾ ಅನ್ನಲಿಕತ್ತಿ. ಅದು ಹ್ಯಾಂಗ? ಅವರು ನಿಮ್ಮ ಬಳಗ ಏನು? - ಅಂತ ಕೇಳಿದೆ.

ಅಲ್ಲೋ ಮಂಗೇಶ್....ನಮ್ಮ ಹುಡುಗ್ಯಾರು ಕುಂತಿ ನಿಂತಿ ನಿನಗ ಮಂಗೇಶ್ ಮಾಮಾ ಮಂಗೇಶ್ ಮಾಮಾ ಅಂತಾರ. ಅಂತಾರೋ ಇಲ್ಲೋ? ಹಂಗಂತ ನೀನು ನಮ್ಮ ಬಳಗ ಏನು? ಹಾಂ? ಹಾಂ? - ಅಂತ ತಲಿಗೆ ಕಟ್ಟಿಕೊಂಡ ಬಿಳೆ ವಸ್ತ್ರದ ಟರ್ಬನ್ ಬಿಚ್ಚಿಗೋತ್ತ ಅಂದ್ರು ರೂಪಾ ವೈನಿ. ತಲಿಗೆ ಎರಕೊಂಡಿದ್ದರು ಅಂತ ಅನ್ನಸ್ತದ. ಎಷ್ಟು ದಿವಸದ ನಂತರವೋ? ದೇವರಿಗೇ ಗೊತ್ತು.

ಅದೂ ಖರೆ ಅನ್ರೀ ವೈನಿ. ಸಂಬಂಧಕ್ಕಿಂತ ಆತ್ಮೀಯತೆ ಮುಖ್ಯ. ಆತ್ಮೀಯತೆ ಇದ್ದರ ಸಂಬಂಧಗಳನ್ನು ಮಾಡಿಕೋಬಹದು. ನಾರಾಯಣ ಮೂರ್ತಿ ನಿಮಗ ಹ್ಯಾಂಗ ಅಷ್ಟು ಆತ್ಮೀಯರು? - ಅಂತ ಕೇಳಿದೆ.

ಅವರ ಹೆಂಡ್ತಿ ಸುಧಾ ಇಲ್ಲೇ ಹುಬ್ಬಳ್ಳಿ ಅವರು. ಸುಧಾ ಕುಲಕರ್ಣಿ. ಬಹಳ ಒಳ್ಳೆ ಮನುಷ್ಯಾರು. ಏನು ಮಸ್ತ ಮಂದಿ. ಅಷ್ಟು ದೊಡ್ಡ ಮಂದಿ ಆದರೂ ಒಂಚೂರೂ ದೊಡ್ಡಸ್ತನಿಕೆ ಬಿಂಕ ಬಿಗುಮಾನ ಒಂದೂ ಇಲ್ಲ. ಸಾವಿರಾರು ಕರೋಡ್ ರುಪಾಯಿ ಮಾಲಿಕರಾದ್ರೂ ಸಿಂಪಲ್ ಲಿವಿಂಗ್ ಅಂಡ್ ಹೈ ಥಿಂಕಿಂಗ್ ಅನ್ನೋ ಮಂದಿ. ದಾನಾ ಧರ್ಮಾ ಅಂತೂ ಬಿಡಪಾ. ಕೊಟ್ಟಿದ್ದಕ್ಕ ಲೆಕ್ಕ ಇಲ್ಲ. ಅವರೇನು ನಮಗ ಬಳಗ ಅಲ್ಲ. ಆದರೂ ಮೂಲತ ಹುಬ್ಬಳ್ಳಿ ಧಾರವಾಡ ಮಂದಿ. ಅಂತವರು ನಾರಾಯಣ ಮೂರ್ತಿ ಅವರ ಹೆಂಡ್ರು ಅಂದ್ರ ನಮಗ ಒಂದು ರೀತಿಯಿಂದ ಆತ್ಮೀಯರ ನೋಡು, ಅಂತ ಚೀಪ್ಯಾ ರೂಪಾ ವೈನಿ ಸರದಿ ಪ್ರಕಾರ ಸುಧಾ ಮೂರ್ತಿ ಅವರನ್ನು ಕೊಂಡಾಡಿದರು.

ಅದು ಸೋಲಾ ಆಣೆ ಖರೆ ಮಾತು ನೋಡ್ರೀ. ನಾರಾಯಣ ಮೂರ್ತಿ ಫ್ಯಾಮಿಲಿ ಅಂದ್ರ ಅದು ಏಕದಂ ಭಾರಿ ಫ್ಯಾಮಿಲಿ. ಮತ್ತೆನರ ಕಾರಣ ಅದ ಏನು ನಿಮಗ ಇಷ್ಟು ಆತ್ಮೀಯತೆ ಬರಲಿಕ್ಕೆ? - ಅಂತ ಕೇಳಿದೆ.

ಭಾಳ ಹಿಂದ ನಮ್ಮ ಅಪ್ಪಗ ಇನ್ಫೋಸಿಸ್ ಭಾಳ ರೊಕ್ಕಾ ಮಾಡಿ ಕೊಟ್ಟಿತ್ತೋ ಮಂಗೇಶ. ಅದss ರೊಕ್ಕದಾಗ ನಮ್ಮಪ್ಪಾ ನಿಮ್ಮ ದೋಸ್ತ ಶ್ರೀಪಾದ್ ರಾವ್ ಅವರ ಜೊತಿ ನನ್ನ ಮದ್ವಿ ಮಾಡಿ ಇವರ ಮಸಡಿ ಮ್ಯಾಲೆ ಮಸ್ತ ವರದಕ್ಷಿಣೆ ಬ್ಯಾರೆ ಒಗದಿದ್ದರು. ಬಂಗಾರದಂತ ಇನ್ಫೋಸಿಸ್ ಶೇರ್ ಮಾರೋದಂತು ಮಾರಿದಾ ನಮ್ಮಪ್ಪಾ. ಹೋಗಿ ಹೋಗಿ ನಿಮ್ಮ ಚೀಪ್ಯಾನಂತ ವರನ್ನ ಜೋತಿ ನನ್ನ ಲಗ್ನಾ ಮಾಡೋದಾ? ಅದೂ ಇನ್ಫೋಸಿಸ್ ಶೇರ್ ಮಾರಿ ಬಂದ ರೊಕ್ಕದಾಗ ವರದಕ್ಷಿಣಿ ಬ್ಯಾರೆ ಕೊಟ್ಟು. ಅದೂ ನಮ್ಮ ಚೀಪ್ಯಾರಿಗೆ ಕೊಟ್ಟು !ಹಾಂ! ಹಾಂ!! - ಅಂತ ಅಂದ ವೈನಿ ವಿಕಾರವಾಗಿ ನಕ್ಕರು.

ಚೀಪ್ಯಾನ ಮಾರಿ ಸಣ್ಣದಾತು. ಮಾತಿಗೊಮ್ಮೆ ನಮ್ಮ ಚೀಪ್ಯಾನ್ನ ಚ್ಯಾಸ್ಟಿ ಮಾಡಲಿಲ್ಲ, ಟಿಂಗಲ್ ಮಾಡಲಿಲ್ಲ ಅಂದ್ರ ರೂಪಾ ವೈನಿಗೆ ಸಮಾಧಾನ ಇಲ್ಲ.

ಯಾಕ್ರೀ ಶ್ರೀಪಾದ ರಾವ್? ಬ್ಯಾಸರಾ ಮಾಡಿಕೊಂಡ್ರೀ? ಸುಮ್ಮನಾ ಚ್ಯಾಸ್ಟಿರೀ. ಏಳೇಳು ಜನ್ಮಕ್ಕೂ ನೀವ ನನ್ನ ಧರ್ಮಪತಿ ಕರ್ಮಪತಿ ಎಲ್ಲಾ ಆಗ್ರೀಪಾ. ಅದಿಲ್ಲ ಅಂದ್ರ ನನ್ನ ಹಳೆ ಕೆಟ್ಟ ಕರ್ಮ ನಾ ಹ್ಯಾಂಗ ಕಳಕೊಳ್ಳಲಿ? ಏನು ಪುಣ್ಯಾ ಮಾಡಿ ಬಂದಿದ್ದನೋ ಏನೋ, ನಿಮ್ಮಂತ ಪತಿದೇವರು ನನಗ ಸಿಕ್ಕಿ ಬಿಟ್ಟಾರ. ಒಂದss ಜನ್ಮಕ್ಕ ಹ್ಯಾಂಗ ಸಾಕು ಅಂತ ಬಿಡಲೀ? ಹಾಂ? ಹಾಂ? - ಅಂತ ರೂಪಾ ವೈನಿ ಹೇಳಿದ್ರು. ಹೇಳಿದ್ರಾಗ ವ್ಯಂಗ್ಯ ಜಾಸ್ತಿ ಇತ್ತೋ ಅನುಕಂಪ ಜಾಸ್ತಿ ಇತ್ತೋ ಅಥವಾ ವೈನಿಯ ಖೋಟಾ ನಸೀಬದ ಮ್ಯಾಲೆ ಆವರಿಗೇ ಸಿಟ್ಟು ಜಾಸ್ತಿ ಇತ್ತೋ ಗೊತ್ತಾಗಲಿಲ್ಲ.

ಏ....ವೈನಿ..ತುಳಸಿ ಕಟ್ಟಿ ಮುಂದ ನಿಂತು ಏನಂತ ನಿಮ್ಮ ಪತಿದೇವರಿಗೆ ಅಂತೀರಿ? ನಮ್ಮ ಚೀಪ್ಯಾನಂತಹ ಗಂಡನ್ನ ಪಡಿಲಿಕ್ಕೆ ಏಳೇಳು ಜನ್ಮದ ಪುಣ್ಯಾ ಮಾಡಿರಬೇಕು ನೀವು. ಅಂತಾ ಮಸ್ತ ಆದ್ಮಿ ಇದ್ದಾನ ನಮ್ಮ ದೋಸ್ತ, ಅಂತ ಚೀಪ್ಯಾನ ಸ್ವಲ್ಪ ಡಿಫೆಂಡ್ ಮಾಡಿಕೊಂಡೆ.

ಹೌದ....ಹೌದ....ಬಂದು ಬಿಟ್ಟ ಗೆಳೆಯಾನ್ನ ಪರ ವಹಿಸ್ಕೊಂಡು. ಓತಿಕಾಟಕ್ಕ ಬೇಲಿ ಸಾಕ್ಷಿ. ಓತಿಕಾಟ ಬೇಲಿ ಇಬ್ಬರೂ ಬರ್ರಿ ಒಳಗ. ಚಹಾ ಮಾಡ್ತೆನಿ, ಅಂದು ವೈನಿ ಒಳಗ ಹೋದರು.

ಇಕಿನೌನ್....ಏಳು ಜನ್ಮ ಅಂತ ಏಳು ಜನ್ಮ!!!ಇಕಿ ಕಾಟಾ ಈ ಜನ್ಮದಾಗ ನನಗ ತಡಕೊಳ್ಳಲಿಕ್ಕೆ ಅಗವಲ್ಲತು. ಮುಂದಿನ ಜನ್ಮದಾಗ ಪಿಶಾಚಿ ಆಗಿ ಇಕ್ಕಿನ್ನ ಹೀಂಗ ಕಾಡವ ಇದ್ದೇನಿ ನೋಡು ದೋಸ್ತ! ಇಕೀನ್ನ ಕಾಡಲಿಕ್ಕೆ ಅಂತss ನಾ ಮುದ್ದಾಂ ಪಿಶಾಚಿ ಆಗಿ ಹುಟ್ಟಿ ಬರವ ಇದ್ದೇನಿ, ಅಂತ ಚೀಪ್ಯಾ ರೋಷ ಮಿಶ್ರಿತ ಏನೇನೋ ಫೀಲಿಂಗ್ಸ್ ಮಿಕ್ಸ್ ಮಾಡಿ ಹೇಳಿದ.

ಪಿಶಾಚಿ ಆಗಿ ಹುಟ್ಟಲಿಕ್ಕೆ ಬರಂಗಿಲ್ಲ. ಸುಯಿಸೈಡ್ ಮಾಡಿಕೊಂಡು ಸತ್ತರ ಪಿಶಾಚಿ ಫ್ರೀ ಒಳಗ ಆಗ್ತೀ ಅಂತ ಹೇಳೋಣ ಅಂತ ಮಾಡಿದೆ. ಟೈಮಿಂಗ್ ಸರಿ ಇಲ್ಲ ಅಂತ ಬಿಟ್ಟೆ.

ಹೋಗ್ಲೀ ಬಿಡಪಾ!! ಹೇಳಿ ಕೇಳಿ ರೂಪಾ ವೈನಿ. ಏನೋ ಒಂದು ಮಾತು ಅಂದ್ರ ಏನು ದೊಡ್ಡ ಮಾತು? ನೀನss ಹೊಂದಿಕೊಂಡು ಹೋಗಪಾ, ಅಂತ ಏನೋ ಬಿಟ್ಟಿ ಉಪದೇಶ ಕೊಟ್ಟೆ.

ಏ ಬ್ರಹ್ಮಚಾರಿ ಬಡ್ಡಿಮಗನ.....!!!ಉದ್ರಿ ಉಪದೇಶ ಕೊಡುದ್ರಾಗ ಏನೂ ಕಮ್ಮಿ ಇಲ್ಲ ನೋಡು. ಸುಮ್ಮ ಕೂಡಲೇ. ತಲಿ ಕೆಡಸಬ್ಯಾಡ. ನಡಿ ಚಹಾ ಮಾಡ್ತಾಳಂತ. ಕುಡದು ಜಗಾ ಖಾಲಿ ಮಾಡೋಣ. ಎಲ್ಲೆರೆ ಹೋಗಿ ಒಂದು ಖಡಕ್ಕ್ ಜರ್ದಾ ಪಾನ್ ಹಾಕಿ ಸ್ವಲ್ಪ ರಿಲಾಕ್ಸ್ ಮಾಡೋಣಂತ, ಅಂತ ಅನಕೋತ್ತ ಮನಿಯೊಳಗ ಕರ್ಕೊಂಡು ಹೋದ ಚೀಪ್ಯಾ.

ಅಲ್ಲ ಚೀಪ್ಯಾ....ನಾಣಿ, ನಾಣಿ ಮಾಮಾ ಅಂದ್ರ ಏನೋ ಒಂದು ಅರ್ಥ ಅದ. ಆದ್ರ, 'ಮಾಣಿಗಳ ದೊಡ್ಡ ಮಾಣಿ ನಾಣಿ ಮಾಮಾ ಬಂದಾನೋ!' ಅಂತ ಬ್ಯಾರೆ ಹೇಳಿಬಿಟ್ಟಿ. ಇನ್ಫೋಸಿಸ್ ಸಾಫ್ಟ್ ವೇರ್ ಕಂಪನಿ ಅಲ್ಲೇನೋ? ಅಲ್ಲೆಲ್ಲಿ ಉಡುಪಿ ಹೋಟೆಲ್ಲಿನಂಗ ಮಾಣಿಗಳು ಬಂದ್ರು? ಅಥವಾ ಇನ್ಫೋಸಿಸ್ ಹೋಟೆಲ್ ಬಿಸಿನೆಸ್ಸ್ ಶುರು ಮಾಡ್ಯಾರೋ? ಹಾಂ? ಹಾಂ? - ಅಂತ ಕೇಳಿದೆ.

ನೋಡಪಾ....ನಮಗೂ ಸರಿ ಗೊತ್ತಿಲ್ಲ. ಈಗ ನಾಣಿ ಮಾಮಾ ಬರೋಕಿಂತ ಮೊದಲು ಅವರು ಯಾರೋ ಕೆ.ವಿ. ಕಾಮತ್ ಅಂತ ಒಬ್ಬರು ಇನ್ಫೋಸಿಸ್ ಛೇರ್ಮನ್ ಆಗಿದ್ರಂತ. ಅವರು ಮೊದಲು ಬ್ಯಾಂಕಿಂಗ್ ಒಳಗ ದೊಡ್ಡ ನೌಕರಿ ಒಳಗ ಇದ್ದು ಬಂದವರು. ಸೀದಾ ಸಾಫ್ಟ್ ವೇರ್ ಕಂಪನಿ ಛೇರ್ಮನ್ ಆಗ್ರೀ ಅಂದು ಬಿಟ್ಟರ ಅವರೇನು ಮಾಡಬೇಕು? ಎಲ್ಲೋ ಪಾಪ ಅವರು  ಕಾಮತ್ ಮಂದಿ ಹೋಟೆಲ್ ನೆಡಸಿದಾಂಗ ನೆಡಸಿ ಎಲ್ಲಾ ಸಾಫ್ಟ್ ವೇರ್ ಮಂದಿಗೆ ಹೋಟೆಲ್ ಮಾಣಿ ಫೀಲಿಂಗ್ ಬಂದಿರಬೇಕು. ನನಗೂ ಖರೆ ಗೊತ್ತಿಲ್ಲ. ಕಾಮತ್ ಅವರ ದೇಖರೆಖೀ ಒಳಗ ಹೀಂಗ ಇರಬಹದು ಅಂತ ಮಾಣಿ, ಮಾಣಿಗಳ ದೊಡ್ಡ ಮಾಣಿ ನಾಣಿ ಮಾಮಾ ಅಂತ ಅಂದೇ ಏನಪಾ, ಅಂತ ಉದ್ದಾಗಿ ಛೋಡಿದಾ ಚೀಪ್ಯಾ.

ಲೇ ಮಗನss...ಅವರು ಕಾಮತ್ ಅವರು ಭಾಳ ಶಾಣ್ಯಾ ಮಾರಾಯಾ. ಅವರೇನು ನಿನ್ನ ಇನ್ಫೋಸಿಸ್ ಕಾಮತ್ ಹೋಟೆಲ್ ನೆಡಸಿದಾಂಗ ನೆಡಸಿರಲಿಕ್ಕೆ ಇಲ್ಲ ಬಿಡು. ಕಾಮತ್ ಅಂದ ಕೂಡಲೇ ಎಲ್ಲಾರಿಗೂ ಮಾಣಿ, ದೊಡ್ಡ ಮಾಣಿ ಅಂದು ಬಿಡೋದ? ಹಾಂ?- ಅಂತ ತಿಳಿಸಿದೆ.

ಅಂತೂ ಇಂತೂ ನಾಮೂ ಬಂದ್ರು ಅಂತ ಆತು. ಅಲ್ಲೆ ನ್ಯಾಷನಲ್ ಪಾಲಿಟಿಕ್ಸ್ ನ್ಯಾಗ ನಮೋ ಅಂದ್ರ ನರೇಂದ್ರ ಮೋದಿ ಮತ್ತ ಇಲ್ಲೆ ಬಿಸಿನೆಸ್ ಒಳಗಾ ನಾಮೂ ಅಂದ್ರ ನಾರಾಯಣ ಮೂರ್ತಿ. ಎರಡೂ ಕಡೆ ರಾಡಿ ಎದ್ದು ಹೊಲಗೇರಿ ಎದ್ದು ಬಿಟ್ಟದ. ಇವರಿಬ್ಬರೂ ಕೂಡಿ ಎರಡೂ ಕಡೆ ಆಗಿರೋ ರಾಡಿ ಸ್ವಚ್ಚ ಮಾಡಿದ್ರ ಸಾಕು ನೋಡಪಾ. ನರೇಂದ್ರ, ನಾರಾಯಣ ಇಬ್ಬರಿಗೂ ಒಳ್ಳೆದಾಗಲಿ, ಅಂತ ಹೇಳಿದೆ.

ನಾಣಿ ಮಾಮಾ ಬಂದ ಕೂಡಲೇ ಹೇಳೇ ಬಿಟ್ಟರು ನೋಡಪಾ. ಖಡಕ್ಕ್ ಮಾತು. ಏಕ್ ಮಾರ್ ದೋ ತುಕಡಾ ಹಾಂಗ, ಅಂತ ಹೇಳಿದ ಚೀಪ್ಯಾ.

ಏನು ಹೇಳಿದ್ರು ನಾರಾಯಣ ಮೂರ್ತಿಗಳು? - ಅಂತ ಕೇಳಿದೆ.

ಕಂಪನಿ ಒಳಗ ರಾಡಿ ಭಾಳ ಎದ್ದದ. ರಾಡಿ ಎಲ್ಲಾ ಸ್ವಚ್ಚ ಮಾಡಿ, ಇನ್ಫೋಸಿಸ್ ಹಳೆ ವೈಭವಕ್ಕ ತರಲಿಕ್ಕೆ ಕಮ್ಮಿ ಕಮ್ಮಿ ಅಂದ್ರೂ ಮೂರು ವರ್ಷ ಬೇಕಾಗ್ತದ, ಅಂತ ಹೇಳಿದರಂತ ಮೂರ್ತಿಗಳು.

ಹಾಂ!? ಮೂರು ವರ್ಷ ಬೇಕಂತ!? ಯಾಕ? - ಅಂತ ಕೇಳಿದೆ.

ಮತ್ತೇನಲೇ??? ಹಾಪಾ!!!ತಿಂಗಳೊಂದ್ರಾಗ ಬಸರ ಮಾಡಿ ವರ್ಷವೊಂದ್ರಾಗ ಕೂಸು ಮಾಡಿದಂಗ ಅಂತ ಮಾಡಿ ಏನು? ರಾಡಿ ಎದ್ದ ಕಂಪನಿ ಎಲ್ಲಾ ಸಾಫ್ ಮಾಡಿ ಮತ್ತ ಮಸ್ತ ಹಳೆ ಮುನಾಫಾ, ಹಳೆ ವೈಭವ ವಾಪಾಸ್ ತರೋದು ಅಂದ್ರ ಭಾಳ ಶ್ರಮ ಪಡಬೇಕಾಗ್ತದ. ಗೊತ್ತದ ಏನು? - ಅಂತ ನನಗ ರಿವರ್ಸ್ ಬಾರಿಸಿದ ಚೀಪ್ಯಾ.

ಬಸಿರು.... ಅನ್ನೋ ಶಬ್ದ ರೂಪಾ ವೈನಿ ಕಿವಿಗೆ ಬಿದ್ದಿದ್ದ ಬಿದ್ದಿದ್ದು. ಅಲ್ಲೋಲ ಕಲ್ಲೋಲ ಎಬ್ಬಿಸಿಬಿಟ್ಟರು ವೈನಿ.

ಯಾರು ಬಸರಾದ್ರೀ ಶ್ರೀಪಾದ ರಾವ್? ಯಾರರ ಕುಬಸಕ್ಕ ಕರೀಲಿಕ್ಕೆ ಬಂದಿದ್ದರೇನು? ಮತ್ತ ಕುಬಸಕ್ಕ ನೀವು ಹೋಗಿ ಕೂಡಬ್ಯಾಡ್ರೀ. ಅವೆಲ್ಲಾ ಹೆಂಗಸೂರ ಕಾರ್ಯಕ್ರಮ. ಕರೀಲಿಕ್ಕೆ ಬಂದರೂ ನನ್ನ ಕರೀಲಿಕ್ಕೆ ಬಂದಿರ್ತಾರ. ಕರಿಲಿಕ್ಕೆ ಬಂದಿದ್ದರು ಅಂತ ನನಗ ಹೇಳೂದು ಮಾತ್ರ ನಿಮ್ಮ ಕೆಲಸ. ಕುಬಸಕ್ಕ ಹೋಗಿ ಉಡಿ ಗಿಡಿ ತುಂಬಿ ಬರೋದು ನನ್ನ ಕೆಲಸ. ಎಲ್ಲರೆ ಕುಬಸಕ್ಕ ಹೊಂಟ್ರೀ ಅಂದ್ರ ನೋಡ್ಕೊರೀ ಮತ್ತ. ಕಾಲ ಮುರುದು ತಲಿಗೆ ಕಟ್ಟಿ ಬಿಡ್ತೇನಿ. ಹುಷಾರ್! - ಅಂತ ರೂಪಾ ವೈನಿ ಗಂಡಗ ವಾರ್ನಿಂಗ್ ಕೊಟ್ಟರು.

ಕಾಲ ಮುರದು ಕೈಯಾಗ ಕೊಡೋದು ಅಲ್ಲೇನ್ರೀ ವೈನಿ? ತಲಿಗೆ ಯಾಕ ಕಟ್ಟತೀರಿ? ಹಾಂ? ಹಾಂ? - ಅಂತ ಕೇಳಿದೆ.

ಏ....ಕೈ ಸಹಿತ ಮುರದು ಬಿಡ್ತೇನಿ ಇವರದ್ದು ಕುಬಸಕ್ಕ ಹೊಂಟರ. ಕೈ ಮುರಕೊಂಡವರ ಕೈಯಾಗ ಮುರದ ಕಾಲು ಹ್ಯಾಂಗ ಕೊಡಲಿ? ಹುಚ್ಚ ಮಂಗೇಶ್! ಅದಕ್ಕ ತಲಿಗೆ ಕಟ್ಟಿ ಬಿಡ್ತೇನಿ ಅಂತ ಹೇಳಿದೆ, ಅಂದ್ರು ರೂಪಾ ವೈನಿ.

ಅಲ್ರೀ ವೈನಿ.....ಹೆಂಗಸೂರ ಕುಬಸಕ್ಕ ಯಾಕ ನಮ್ಮ ಚೀಪ್ಯಾ ಹೋಗತಾನ? ಅವಂಗೇನು ಬ್ಯಾರೆ ಕೆಲಸ ಇಲ್ಲೇನು? ಸುಮ್ಮನ ಏನರ ಏನರ ಹೇಳಿ ಬೈತೀರಲ್ಲಾ ಅವನ್ನ? ಹಾಂ? ಪಾಪ ಚೀಪ್ಯಾ, ಅಂತ ಸ್ವಲ್ಪ ಚೀಪ್ಯಾನ ವಹಿಸಿ ಮಾತಾಡಿದೆ.

ಕೇಳು ಅವರನ್ನss ಕುಬಸಕ್ಕ ಹೋಗಿ ಕೂಡ್ತಾರೋ ಇಲ್ಲೋ ಅಂತ. ಹೇಳ್ರೀ ಶ್ರೀಪಾದ ರಾವ್ ಯಾಕ ಕುಬಸಕ್ಕ ಹೋಗ್ತೀರಿ ಅಂತ, ರೂಪಾ ವೈನಿ ಗಂಡಂಗ ಚುಚ್ಚಿದಳು.

ನೀ ಏನ್ ಪತಿಯಾಲಾದ ಮಹಾರಾಜ್ ಏನಲೇ ಚೀಪ್ಯಾ? ಹಾಂ? ಹಾಂ? ಕಂಡ ಕಂಡ ಹೆಂಗಸೂರ ಕುಬಸಕ್ಕ ಹೋಗಿ ಕೂಡಲಿಕ್ಕೆ? ಪತಿಯಾಲಾದ ಮಹಾರಾಜ ಅಂದ್ರ ಅವರ ರಾಜ್ಯದ ಎಲ್ಲಾ ಸಮಸ್ತ ಹೆಂಗಸೂರಿಗೂ ಪತಿ ಇದ್ದಂಗ. ಪತಿ all ಆ = ಪತಿಯಾಲಾ. ಅದಕ್ಕss ಹೋಗ್ತಿದ್ದರು. ನೀ ರೂಪಾ ವೈನಿಗೆ ಮಾತ್ರ ಪತಿ ಅಷ್ಟss. ನೀ ಯಾಕ ಹೋಗ್ತಿಯೋ ಮಾರಾಯಾ ಅಂತಾ ಹೆಂಗಸೂರ ಕಾರ್ಯಕ್ರಮಕ್ಕ. ಹಾಂ? ಹಾಂ? - ಅಂತ ಕೇಳಿದೆ.

ಚೀಪ್ಯಾ ಏನೋ ನೆನಸಿಕೊಂಡು ತುಟಿ ಮ್ಯಾಲೆ ನಾಲಿಗಿ ಸವರಿಕೊಂಡ. ಏನೋ ತಿಂಡಿ ಊಟದ ನೆನಪ ಆಗಿರಬೇಕು.

ಮಂಗೇಶ್....ನಾ ಹೇಳತೇನಿ ಕೇಳಿಲ್ಲೆ....ನಿಮ್ಮ ಚೀಪ್ಯಾ ಸಾಹೇಬರಿಗೆ ಕುಬಸದ ಗುಗ್ಗರೀ ಅಂದ್ರ ಮುಗೀತು ನೋಡಪಾ. ಒಂದು ಪೌಣಾ ಕೇಜಿ ಗುಗ್ಗರೀ ತಿಂದು ಕೂತರು ಅಂದ್ರ ಮುಗೀತು ನೋಡು ಕಥಿ. ಕುಬಸದಾಗ ಎಷ್ಟು ಬೇಕು ಅಷ್ಟು ಗುಗ್ಗರೀ ತಿನ್ನಲಿಕ್ಕೆ ಸಿಗ್ತದ ಅಂತ ಹೇಳಿ ಕಂಡ ಕಂಡ ಬಸುರಿ ಹೆಂಗಸೂರ ಕುಬಸಕ್ಕ ಹೋಗಲಿಕ್ಕೆ ಸಾಯ್ತಾರ ನಿಮ್ಮ ಚೀಪ್ಯಾ. ಅಲ್ಲೆ ಇವರು ಒಬ್ಬರ ಗಂಡಸರು ನೋಡಪಾ. ಬಸುರಿ ಹೆಂಗಸಿನ ಗಂಡ ಸಹ ಅಲ್ಲೆ ಇರಂಗಿಲ್ಲ. ಆದ್ರ ಇವರು ಮಾತ್ರ ಬಸುರಿ ಮುಂದನss ಕೂತು,  ಹೀ ಹೀ ಅಂತ ಹಲ್ಲು ಕಿರಕೋತ್ತ ಪೊಗದಸ್ತಾಗಿ ಗುಗ್ಗರೀ ಗುಳುಂ ಗುಳುಂ ಮಾಡ್ತಿರ್ತಾರ ನೋಡಪಾ. ಎಲ್ಲಾರೂ ನಗತಾರ. ನನಗಂತೂ ಘೋರ ಅಪಮಾನ. ಅದಕ್ಕss ಕುಬಸಕ್ಕ ಹೊಂಟರ ಕಾಲು ಮತ್ತೊಂದು ಮುರಿತೇನಿ ಅಂತ ಹೇಳಿದ್ದು, ಅಂತ ಹೇಳಿದರು ರೂಪಾ ವೈನಿ. ನನಗೂ ಗೊತ್ತಿರದಿದ್ದ ಒಂದು ಸಿಕ್ರೆಟ್ ಹೇಳಿ ಬಿಟ್ಟರು.

ಗುಗ್ಗರಿ ಅಂದ್ರ ನೆನಸಿದ ಕಡ್ಲಿ ಕಾಳಿಗೆ ಒಗ್ಗರಿಣಿ ಹಾಕಿದ್ದು ಹೌದಿಲ್ಲೋ? ಅದರಾಗ ಏನು ಅಂತಾ ಮಹಾ ರುಚಿ ಇರ್ತದಲೇ ಚೀಪ್ಯಾ? ಅದನ್ನ ತಿನ್ನಲಿಕ್ಕೆ ಅಷ್ಟ್ಯಾಕ ಸಾಯ್ತೀ? ಅಷ್ಟು ಬೇಕಂದ್ರ ಮನ್ಯಾಗ ಮಾಡಿಕೊಡಂಗಿಲ್ಲ ಅಂದಾರೇನು ರೂಪಾ ವೈನಿ? ಹಾಂ? ಹಾಂ? - ಅಂತ ಕೇಳಿದೆ.

ಗುಗ್ಗರೀ.....ಗುಗ್ಗರೀ....ಮಸ್ತ ರುಚಿ ರುಚಿ ಗುಗ್ಗರೀ.... ಅಂತ ಗುಗ್ಗರೀ  ನೆನಸಿಕೊಂಡು ಭಾಳ ಮಿಸ್ ಮಾಡಿಕೊಂಡು ಮುಲುಗಿದ ಚೀಪ್ಯಾ.

ಏ ಮಂಗೇಶ್!!!ಮನ್ಯಾಗ ಮಾತ್ರ ನಾ ಗುಗ್ಗರಿ ಮಾಡಂಗಿಲ್ಲ. ಏನಾರ ಸಾಮಾನ್ಯ ಮನುಷ್ಯಾರು ಪಲ್ಯಾ ತಿಂದಂಗ ಸ್ವಲ್ಪ ಸ್ವಲ್ಪ ತಿಂದ್ರ ಮಾತ ಬ್ಯಾರೆ. ಮಾಡಿದ್ರ ಅಷ್ಟೂ ಒಬ್ಬರss ಮುಕ್ಕತಾರ ನೋಡು. ಪೌಣೆ ಕೇಜಿ ಗುಗ್ಗರೀ ತಿನ್ನವರು ಇವರು, ಆ ಮ್ಯಾಲೆ ಸಂಕಟ ಪಡವರು ನಾವು. ಏನ್ ಬೇಕಾಗಿಲ್ಲ. ಸುಮ್ಮನ ಕೂಡು, ಅಂತ ಹೇಳಿ ರೂಪಾ ವೈನಿ ನನ್ನ ಬಾಯಿ ಮುಚ್ಚಿಸಿದರು.

ಹಶಿ ಕಾಬೂಲಿ ಕಡ್ಲಿ ಒಳಗ ಮಾಡಿದ ಗುಗ್ಗರೀ. ಈ ಮಂಗ್ಯಾ ಸೂಳೆಮಗ ಚೀಪ್ಯಾ ಕೇಜಿ ಗಟ್ಟಲೆ ತಿಂದು ಕೂತ್ರ ಸಂಕಟ ಪಡವರು ಮನಿ ಮಂದಿನss. ಅದೂ ಖರೆ. ಈಗ ತಿಳೀತು ನನಗ. ಭೋಪಾಲ್ ಗ್ಯಾಸ್ ಟ್ರಾಜಿಡಿ!!!!

ಅಯ್ಯೋ!!!! ಎಲ್ಲಿಂದಲೋ ಎಲ್ಲಿಗೋ ಬಂದು ಬಿಡ್ತು ನಮ್ಮ ಸುದ್ದಿ. ಇನ್ಫೋಸಿಸ್ ರಿಪೇರ್ ಮಾಡಲಿಕ್ಕೆ ಮೂರು ವರ್ಷ ಬೇಕಾಗ್ತದ ಅಂತ ಹೇಳ್ಯಾರ ಅಂತ ಆತು ನಾಣಿ ಮಾಮಾ. ಏನೇನು ಮಾಡವರು ಇದ್ದಾರಂತ? - ಅಂತ ಕೇಳಿದೆ.

ನೋಡೋ....ಒಂದು ಐದು ಸಾವಿರ ಮಂದಿ ಮನಿಗೆ ಕಳಸ್ತಾರಂತ. ಮತ್ತ ಬ್ಯಾಕ್ ಟು ಬೇಸಿಕ್ಸ್ ಅಂತ ಮೊದಲು ಮಾಡಿದಂಗ ಬಿಸಿನೆಸ್ ಮಾಡ್ತಾರಂತ. ಸಾಧ್ಯ ಆದ್ರ ನಾಣಿ ಮಾಮಾ ಬಿಟ್ಟು ಹೋದ ಮ್ಯಾಲೆ ಕಂಪನಿ ಬಿಟ್ಟು ಹೋದ ಕೆಲೊ ಮಂದಿನ ವಾಪಸ್ ಕರಕೊಂಡು ಬರ್ತಾರಂತ. ಒಂದು ಮೇಜರ್ ಸರ್ಜರಿ ಮಾಡ್ತೇನಿ. ಅದರದ್ದು ಜರೂರತ್ ಅದ ಅಂತ ಹೇಳೇ ಬಿಟ್ಟಾರ ನಾಣಿ ಮಾಮಾ!!!!, ಅಂತ ನಾಮೂ ಅವರ ಸ್ಟ್ರಾಟೆಜಿ ಹೇಳಿದ ಚೀಪ್ಯಾ.

ಅಲ್ಲಲೇ ಚೀಪ್ಯಾ....ಇನ್ಫೋಸಿಸ್ ಅಂದ್ರ ನಿನಗ್ಯಾಕ ಇಷ್ಟು ಇಂಟರೆಸ್ಟ್ ಮಾರಾಯಾ? ರೂಪಾ ವೈನಿ ಅಪ್ಪಾ ಯಾವಾಗಲೋ ಅದರ ಶೇರ್ ತೊಗೊಂಡು, ನಿಮ್ಮ ಲಗ್ನದ ಸಮಯದಾಗ ಮಸ್ತ ಲಾಭಕ್ಕ ಮಾರಿಕೊಂಡು, ಅದರಾಗ ರೂಪಾ ವೈನಿ ಲಗ್ನ, ನಿನ್ನ ವರದಕ್ಷಿಣಿ ಎಲ್ಲಾ ಕೊಟ್ಟರು ಅನ್ನೋದು ಹಳೇ ಮಾತು. ಈಗ್ಯಾಕ ನಿನಗ ಈ ಕಂಪನಿ ಮ್ಯಾಲೆ ಇಷ್ಟು ಇಂಟರೆಸ್ಟ್? ಏನರ ಆಗಲೀ....ಕಂಪನಿ ಉದ್ಧಾರರ ಆಗಲೀ ಇಲ್ಲಾ ಸತ್ಯಂ ಕತ್ಯಂ ಗತೆ ಹಾಳು ಬಿದ್ದು ಹೋಗಲೀ. ನಿನಗೇನು ಆಗಬೇಕಾಗ್ಯದ? ಹಾಂ? ಹಾಂ? - ಅಂತ ಕೇಳಿದೆ. ಯಾರೋ ಗೃಹಪ್ರವೇಶ ಮಾಡಿದ್ರ ಇವಾ ಯಾಕ ತಾನss ಮನಿ ಕಟ್ಟಿದವರಷ್ಟು ಖುಷ್ ಆಗಿಬಿಟ್ಟಾನ.....ತಿಳಿಲಿಲ್ಲ.

ಏ....ಮನಿಹಾಳ ಮಂಗ್ಯಾನ್ ಕೆ ಮಂಗೇಶ್..... ಅಂತ ಈ ಸರಿ ಶಂಖಾ ಹೊಡೆದವರು ರೂಪಾ ವೈನಿ.

ಯಾಕ್ರೀ ವೈನಿ? ಯಾಕ ಬೈತೀರಿ? ನಾ ಏನ್ ಮಾಡಿದೆ? - ಅಂತ ಇನ್ನೊಂಸೆಂಟ್ ಆಗಿ ಕೇಳಿದೆ.

ಏನ್ ಮಾಡಿದೆ ಅಂತ ಕೇಳ್ತಿಯಲ್ಲೋ!!! ಮನಿಹಾಳ!!! ಚಂದಾಗಿ ಗೋಕರ್ಣ ಹಜಾಮತಿ ಮಾಡಿ ಉದ್ದಾಗಿ ನಾಮಾ ಹಾಕಿ ಹೋಗಿದ್ದು, ಈಗ ಎರಡು ವರ್ಷದ ಹಿಂದ, ಮರ್ತು ಹೊತೇನು? ಏನೂ ಗೊತ್ತಿಲ್ಲದವರಾಂಗ ಹ್ಯಾಂಗ ಕೇಳ್ತಾನ ನೋಡು!!! - ಅಂತ ವೈನಿ ಝಾಡಿಸಿದರು.

ಎರಡು ವರ್ಷದ ಹಿಂದ ನಾ ಏನು ಇವರಿಗೆ ನಾಮಾ ಹಾಕಿದೆ ಅಂತ ತಲಿ ಕೆರಕೊಂಡೆ. ಏನೂ ನೆನಪ ಬರಲಿಲ್ಲ.

ನೆನಪ ಆಗಲಿಲ್ಲ? ನಾ ನೆನಪ ಮಾಡಿ ಕೊಡ್ತೇನಿ ತಡಿ. ಎರಡು ವರ್ಷದ ಹಿಂದ ನಿನ್ನ ಅವತಾರ ನೆನಪ ಮಾಡಿಕೋ. ಎಲ್ಲಾ ಕೆತ್ತೆಬಜೆ ಕಾರಬಾರ ಮುಗಿಸಿ ಶೇರ್ ಬ್ರೋಕರ್ ಅನ್ನೋ ಹೊಸಾ ಕೆಲಸಾ ಸುರು ಮಾಡಿದ್ದಿ. ನೆನಪಾತ? ಮನಿಗೆ ಬಂದು, ನಮಗ ಇಲ್ಲದ ಸಲ್ಲದ ಕಥಿ ಹೇಳಿದಿ. ಇನ್ಫೋಸಿಸ್ ಭಾರಿ ಛೋಲೋ ಕಂಪನಿ.  ಮಸ್ತ ಅವ ಶೇರು.  ಒಂದರೆಡು ಲಕ್ಷದ್ದು ತೊಗೊಂಡು ಬಿಡ್ರೀ. ಎರಡ ವರ್ಷದಾಗ ಡಬಲ್ ಡಬಲ್ ಆಗ್ತಾವ ಅಂತ ಹೇಳಿ ನಮಗ ನಾಮಾ ಹಾಕಿ ಹೋಗಿದ್ದು ನೆನಪ ಅದನೋ ಇಲ್ಲೋ ಮಂಗೇಶ್? ನೀ ಏನೋ ಶೇರ್ ಬ್ರೋಕರ್ಕಿ ಬಿಟ್ಟು ಈಗ ಮತ್ತೊಂದು ಗೋಕರ್ಣ ಹಜಾಮತಿ ಮಾಡೋದು ನಾಮಾ ಹಾಕೋದು ಕೆಲಸ ಶುರು ಮಾಡಿರ್ತೀ. ಆದ್ರ ನಿನ್ನ ಮಾತು ಕೇಳಿ ನನ್ನ ಕನ್ನಡಿ ಪೆಟ್ಟಿಗಿ, ಸಾಸವಿ ಡಬ್ಬಿ, ಖಾರಪುಡಿ ಡಬ್ಬಿ, ಎಲ್ಲಾ ಕಡೆ ಇಟ್ಟಿದ್ದ ಚೂರು ಪಾರು ರೊಕ್ಕ ಎಲ್ಲಾ ಕೂಡಿಸಿ ಎರಡು ಲಕ್ಷ ರೂಪಾಯಿದು ಇನ್ಫೋಸಿಸ್ ಶೇರ್ ತೊಗೊಂಡ್ರ ಏನು ಆಗಿರಬೇಕು ವಿಚಾರ ಮಾಡು, ಅಂತ ರೂಪಾ ವೈನಿ ನಮ್ಮ ಹಳೆ ಅವತಾರವಾದ ಶೇರ್ ಬ್ರೋಕರ್ಕೀ ಅವತಾರದ ನೆನಪು ಮಾಡಿಕೊಟ್ಟರು.

ನೆನಪಾತು. ಆಗ ಮಾತ್ರ ನಾವು ಹೊಸತಾಗಿ ಶೇರ್ ಬ್ರೋಕರ್ಕಿ ಶುರು ಮಾಡಿದ್ವಿ. ಚೀಪ್ಯಾಗ ಅದು ಇದು ಹೇಳಿ ಎರಡು ಲಕ್ಷ ರೂಪಾಯಿ ಇನ್ಫೋಸಿಸ್ ಶೇರ್ ಖರೀದಿ ಮಾಡಿಸಿ ಕೊಟ್ಟಿದ್ದೆ. ಮಸ್ತ ಕಮಿಷನ್ ಹೊಡದಿದ್ದೆ. ಆ ಮ್ಯಾಲೆ ನಾವಂತೂ ಆ ಕೆಲಸಾ ಬಿಟ್ಟು ಬಿಟ್ಟಿವಿ. ಚೀಪ್ಯಾನ ಇನ್ಫೋಸಿಸ್ ಶೇರು ಏನು ಆದವೋ ಏನೋ?

ಏನ್ ಆತ್ರಿ ವೈನಿ ಇನ್ಫೋಸಿಸ್ ಶೇರಿಗೆ? ಇನ್ನೂ ಇಟ್ಟಗೊಂಡು ಕೂತಿರೋ ಅಥವಾ ಮಾರಿದ್ರೋ? - ಅಂತ ಕೇಳಿದೆ.

ಕೇಳ್ತಾನ ನೋಡು....ಏನೂ ಗೊತ್ತಿಲ್ಲದ ಮಳ್ಳನಾಂಗ. ಎರಡ ಲಕ್ಷ ಡಬಲ್ ಆಗಿ ನಾಕು ಲಕ್ಷ ಆಗೋದು ಹೋಗ್ಲೀ, ಸೂಡ್ಲಿ, ಅರ್ಧಾ ಆಗಿ ಒಂದ ಲಕ್ಷ ಆಗಿ ಬಿಟ್ಟದ. ನಮ್ಮ ಒಂದು ಲಕ್ಷ ರುಪಾಯಿ ನುಕ್ಸಾನ್ ತುಂಬಿಸಿಕೊಡವರು ಯಾರು? ನೀ ಅಂತೂ ಹಿಂದಿಲ್ಲ ಮುಂದಿಲ್ಲದ ಬ್ರಹ್ಮಚಾರಿ. ನಿನ್ನ ಮಾರಿದ್ರೂ ಒಂದು ಹತ್ತು ಸಾವಿರ ರುಪಾಯಿ ಹುಟ್ಟೋದಿಲ್ಲ. ಹಂತಾದ್ರಾಗ ಒಂದ ಲಕ್ಷ ನುಕ್ಸಾನ್!!!! ಎಲ್ಲಿಂದ ತಂದು ಕೊಡ್ತಿಯೋ ಮನಿಹಾಳಾ??!! ನೆನಸಿಕೊಂಡ್ರ ನನ್ನ ಹೊಟ್ಟಿಯೊಳಗ ಸಂಕಟ ಆಗ್ತದ. ಕುಂತಿ ನಿಂತಿ ಲಗ್ನದ ಟೈಮ್ ನ್ಯಾಗ ರೊಕ್ಕ ಆದೀತು ಅಂತ ನಿನ್ನ ಮಾತು ಕೇಳಿ ಇನ್ಫೋಸಿಸ್ ಶೇರ್ ತೊಗೊಂಡ್ರ ಹಾಕಿದ್ಯಲ್ಲಪಾ ನಾಮಾ!!!! - ಅಂತ ರೂಪಾ ವೈನಿ ಅವರ ಹಾಕಿದ ಬಂಡವಾಳ ಅರ್ಧಾ ಆದ ಸಂಕಟದಿಂದ ಬೈದರು.

ಅದು ಹಾಂಗ ಆತೆನ್ರೀ ವೈನಿ? ನಾ ಶೇರ್ ಬ್ರೋಕರ್ಕೀ ಬಿಟ್ಟಾಗಿಂದ ಅವೆಲ್ಲಾ ಸುದ್ದಿ ನನಗ ಗೊತ್ತss ಇಲ್ಲ ಬಿಡ್ರೀ. ಆದರೂ ಏನಾತು ಈಗ? ನಾಣಿ ಮಾಮಾ ಮೂರ ವರ್ಷದಾಗ ಏನೇನೋ ಪವಾಡ ಮಾಡಿದ್ರ ಡಬಲ್ ಅಲ್ಲ ನಾಕು ಪಟ್ಟು ಎಂಟು ಪಟ್ಟು ಆದರೂ ಏನೂ ಆಶ್ಚರ್ಯ ಇಲ್ಲ ನೋಡ್ರೀ. ಶೇರ್ ಮಾರ್ಕೆಟ್ ಅಂದ್ರ ಹಾಂಗss ನೋಡ್ರೀ, ಅಂತ ಏನೇನೋ ಆಶ್ವಾಸನೆ ಕೊಟ್ಟೆ.

ಡಬಲ್ ಆಗೋದು ಬ್ಯಾಡ ಏನೂ ಬ್ಯಾಡ. ತೊಂಗೊಂಡ ರೇಟ್ ವಾಪಸ್ ಬಂದ್ರ ಸಾಕು. ಮಾರಿ ಕೈ ಮುಗಿತೇವಿ. ಮತ್ತ ಎಂದೂ ಶೇರು ಸ್ಟಾಕ್ ಮಾರ್ಕೆಟ್ ಅದು ಇದು ಅಂತ ಸುದ್ದಿಗೆ ಹೋಗುದಿಲ್ಲ, ಅಂತ ವೈನಿ ಹೇಳಿದರು. ಚೀಪ್ಯಾ ತಲಿ ಆಡಿಸಿಕೋತ್ತ ಕೂತಿದ್ದ.

ಓಹೋ! ಅದಕ್ಕ ಈಗ ತುಳಸಿ ಪೂಜಾದ್ದು ಮಂತ್ರ ಚೇಂಜ್ ಆಗಿ, ನಾಣಿ ಬಂದಾ ನಮ್ಮ ನಾಣಿ ಬಂದಾನೋ, ಮಾಣಿಗಳ ದೊಡ್ಡ ಮಾಣಿ ನಾಣಿ ಮಾಮಾ ಬಂದಾನೋ, ಅಂತ ಆಗ್ಯದ ಅಂತ ಆತು. ಎಲ್ಲಿ ತನಕಾ ಈ ಹೊಸಾ ಮಂತ್ರಾ? - ಅಂತ ಕೇಳಿದೆ.

ನಾಣಿ ಮಾಮಾಂಗ ಯಶಸ್ಸು ಸಿಕ್ಕಿ ಶೇರ್ ಪ್ರೈಸ್ ವಾಪಸ್ ಬರೋ ತನಕಾನೂ, ಅಂದ ಚೀಪ್ಯಾ.

ಒಳ್ಳೆದಾಗಲಿ... ಮಾಮು ಆಗಿದ್ದ ನಾಮೂ ಮತ್ತ ಮುಖ್ಯಸ್ಥ ಆಗ್ಯಾರ ಅಂದ್ರ ಇನ್ಫೋಸಿಸ್ ಲಗೂನ ಏಕದಂ ಜಗ್ ಮಗ್ ಅಂತ ಮ್ಯಾಲೆ ಎದ್ದು ಬಿಡ್ತದ. ಹಾಂಗ ಆಗಲೀ ಅನ್ನೋದss ನಮ್ಮ ಆಶಯ, ಅಂತ ಹೇಳಿದೆ.

ಆವಾಗ ನೀ ಬಾಕಿ ಕಾರಬಾರ ಎಲ್ಲ ಮುಗಿಸಿ ಮತ್ತ ಶೇರ್ ಬ್ರೋಕರ್ ಆಗಿರ್ತಿಯೇನೋ ಮಂಗೇಶ್? - ಅಂತ ಕುಹಕದಿಂದ ಕೇಳಿದರು ರೂಪಾ ವೈನಿ.

ಮತ್ತ????!!!! ಕೃಷ್ಣ ಪರಮಾತ್ಮ, ಸಂಭವಾಮಿ ಯುಗೇ ಯುಗೇ, ಅಂದಂಗ ನಿಮಗ ಹಾಕಿದ ನಾಮಾ ಅಳಿಸಲಿಕ್ಕೆ ನಾನss ಬರ್ತೇನಿ. ನಾನ ನಿಂತು ನಿಮ್ಮ ಶೇರ್ ಮಸ್ತ ಪ್ರಾಫಿಟ್ ಒಳಗ ಮಾರಿಸಿ ಕೊಡಲಿಲ್ಲ ಅಂದ್ರ ಹೇಳೀರಿ ಅಂತ. ಚಿಂತಿ ಮಾಡಬ್ಯಾಡ್ರೀ ವೈನಿ, ಅಂತ ಆಶ್ವಾಸನೆ ಕೊಟ್ಟು ಹೊಂಟು ಬಂದೆ.



** ದೇವ ಬಂದಾ ನಮ್ಮ ಸ್ವಾಮೀ ಬಂದಾನೋ, ದೇವರ ದೇವ ಶಿಖಾಮಣಿ ಬಂದಾನೋ - ಪುರಂದರ ದಾಸರ ಕೃತಿ ಭೀಮಸೇನ್ ಜೋಷಿ ಅವರ ಧ್ವನಿಯಲ್ಲಿ.