Friday, July 26, 2013

'ಝೇಂಡಾ ಮಂಗ್ಯಾನ್ ಕೆ' ಎಂಬ ಕಪಿಧ್ವಜ ಉರ್ಫ್ ಅರ್ಜುನ

ಕರೀಂ ಏನೋ ಹಾಡು ಗುಣುಗುಣು ಅನಕೋತ್ತ ಬರ್ಲೀಕತ್ತಿದ್ದ. ಅವಾ ಹಾಡು ಮತ್ತೊಂದು ಗುಣುಗುಣಿಸೋದು ಭಾಳ ಕಮ್ಮಿ.

ಸಲಾಂ ರೀ ಸಾಬ್ರಾ! ಯಾವ ಹಾಡು ಕೊಯ್ಯಾ ಕೊಯ್ಯಾ ಅಂತ ಮೂಗಿನ್ಯಾಗ ಗುಣುಗುಣಿಸಲಿಕತ್ತೀರಿ? 'ಖೋಯಾ ಖೋಯಾ ಚಾಂದ್, ಖುಲಾ ಆಸಮಾ, ತುಮಕೋ ಭೀ ಕೈಸೆ ನೀಂದ ಆಯೇಗಿ', ಅನ್ನೋ ಹಾಡೆನ್ರೀ? ಹಾಂ? ಹಾಂ? - ಅಂತ ಕೇಳಿದೆ.

ಈ 'ಖುಲಾ ಆಸಮಾ' (ಬಿಚ್ಚಿಟ್ಟ ಆಕಾಶ) ಅಂದ ಕೂಡಲೇ ಈ ಗಂಡಸೂರು ಯಾಕ ಪ್ಯಾಂಟಿನ ಜಿಪ್ಪರ್ ಚೆಕ್ ಮಾಡಿಕೊಳ್ಳತಾರೋ ಗೊತ್ತಿಲ್ಲ. ಕರೀಮಾ ಪಠಾಣಿ ಸೂಟ್ ಹಾಕ್ಕೊಂಡಿದ್ದ. ಆದರೂ ರೂಢಿಯಿಂದ ಕೈ ಆಟೋಮ್ಯಾಟಿಕ್ ಆಗಿ ಅಲ್ಲೇ ಕೆಳಗೇ ಹೋತು. ಜಿಪ್ ಸಿಗದೇ ವಾಪಸ್ ಬಂತು. ಕೆಳ ತನಕ ಕೈ ತೊಗೊಂಡು ಹೋದ ಮ್ಯಾಲೆ ಸುಮ್ಮನೆ ಯಾಕ ಹಾಂಗೆ ಮ್ಯಾಲೆ ತರೋದು ಅಂತ ಪೈಜಾಮಾ ಲಾಡಿ ಟೈಟ್ ಮಾಡಿಕೊಂಡು ಬಂತು ಕೈ. ಪೈಜಾಮಾ ಘಟ್ಟೆ ಕಟ್ಟಿಗೊಂಡು ಕಚ್ಚೆಭದ್ರನಾದ ನಮ್ಮ ಕರೀಂ. ಇನ್ನು ಎಲ್ಲರೆ ಕಚ್ಚೆಭದ್ರ ಅಂದ್ರ, ವೀರಭದ್ರ ಇದ್ದ ಹಾಗೆ ಕಚ್ಚೆಭದ್ರ ಕ್ಯಾ? ಅಂತ ಕ್ಯಾ ಕ್ಯಾ ಅಂದಾನು ಅಂತ ಏನೂ ಹೇಳದೇ ಸುಮ್ಮನೆ ತಲಿ ಕುಣಿಸಿದೆ.

ಅದಲ್ಲಾ ಸಾಬ್! ಇವತ್ತು ಭಾಳ ದಿವಸ ಆದ ಮ್ಯಾಲೆ ಒಂದು ಒಳ್ಳೆ ಸುಂದರ ಕನ್ನಡಿ ಗಾನಾ ಕೇಳಿದೆ. ಅದನ್ನೇ ಗುನಗುನಾ ರಹಾ ಥಾ ಮೈ, ಅಂದ ಕರೀಂ.

ವಾಹ್!!! ವಾಹ್!!! ಕನ್ನಡ ಹಾಡಾ?!!! ಕನ್ನಡದ ಕುಲ ಪುತ್ರ ಕರೀಂ! ಯಾವ ಹಾಡೋ? ಇನ್ನೊಮ್ಮೆ ಹೇಳೋ. ನಾವೂ ಕೇಳಿ ಸಂತೋಷ ಪಡೋಣ, ಅಂತ ಅಂದೆ.

ಅದೇ ಸಾಬ್! ನೀರಿನ್ಯಾಗೆ ಅಲೆಯ ಉಂಗುರ. ಎಲ್ಲೆಲ್ಲೋ ಗುಂಗುರು ಕೂದಲ. ಕೊಟ್ಟನಲ್ಲ ಇಟ್ಟನಲ್ಲ....... ಆ ಹಾಡು ಸಾಬ್!!! ಬ್ಲಾಕ್ ಅಂಡ್ ವೈಟ್ ಆದರೂ ಎಷ್ಟು ಮಸ್ತ ಅದೇ ಆ ಹಾಡು, ಅಂತ ತನ್ನ ಸ್ಟೈಲ್ ಒಳಗಾ  ಹೇಳಿದ.

ಸಾಬ್ರಾ!!!! ಅದು, ನೀರಿನಲ್ಲಿ ಅಲೆಯ ಉಂಗುರಾ!!!! ಅನ್ನೋ ಹಾಡ್ರೀಪಾ.....ಅದರಾಗ ಗುಂಗುರು ಕೂದಲಾ, ಕೊಡೋದು ಇಡೋದು ಎಲ್ಲಾ ಸೇರಿಸಿ ರಾಡಿ ಎಬ್ಬಿಸಬ್ಯಾಡ್ರೀ. ಅಷ್ಟು ಚಂದ ಹಾಡಿನ ಸಾಯ ಬಡಿ ಬ್ಯಾಡ್ರೀ!!! - ಅಂತ ಅಂದೆ.



ನಮಗೇನು ಗೊತ್ತು ಸಾಬ್? ಟ್ಯೂನ್ ಮಸ್ತ ಇತ್ತು. ಅದಕ್ಕೇ ನಮಗೆ ಬಂದ ಸಾಹಿತ್ಯ ನಾವು ಹಾಕಿಕೊಂಡು ಹಾಡ್ತಾ ಇದ್ದರೆ, ಹಾಡು ಕೇಳೋದು ಬಿಟ್ಟು ತಪ್ಪು ತಿದ್ದತೀರಿ ಕ್ಯಾ? ಹಾಂ? ಹಾಂ? ಆಮ್ ಖಾವೋ ಜೀ!! ಪೇಡ ಮತ್ ಗಿನೋ, ಅಂತ ನನಗs ಉಪದೇಶ ಸಹಿತ ಮಾಡಿಬಿಟ್ಟ. ಮಾವಿನಹಣ್ಣು ತಿನ್ನರೀ ಗಿಡಾ ಎಣಿಸಬ್ಯಾಡ್ರೀ ಅಂತ ನನಗೇ ಉಪದೇಶ ಬ್ಯಾರೆ.

ಏನ್ ಆಮ್ ರೀ? ಎಲ್ಲಿ ಮಾವಿನ ಹಣ್ಣು ಹಚ್ಚಿಯೋ ಮಾರಾಯಾ?! ಅವನೌನ ಮಾವಿನಹಣ್ಣಿನ  ಗೊರಟ ಸಹಿತ ಸಿಕ್ಕಿಲ್ಲ.  ಅಷ್ಟು ತುಟ್ಟಿ. ಮಂಗ್ಯಾನ್ ಕೆ!!! ಹಾಳಾಗಿ ಹೋಗು ಮಂಗ್ಯಾನ್ ಕೆ!!! - ಅಂತ ಸಣ್ಣಾಗಿ ಬೈದೆ.

ನೀವು ಹಾಗಿದ್ರೆ 'ಝೇಂಡಾ ಮಂಗ್ಯಾನ್ ಕೆ'!!!! - ಅಂದುಬಿಟ್ಟ ಕರೀಂ. ಸೂಡ್ಲೀ !!!

ಏನ್ರೀ???? ಏನು ಹಾಂಗಂದ್ರಾ? ಯಾಕ, ಮನಿಯೊಳಗ ಬಳಗದವರು ಬಂದು ಝೇಂಡಾ ಹೊಡೆದು ಬಿಟ್ಟಾರೇನು? ಅದಕ್ಕs ಅವರಿಗೆ 'ಝೇಂಡಾ ಮಂಗ್ಯಾನ್ ಕೆ' ಅಂತ ಬೈಲಿಕತ್ತೀರಿ ಏನು? ಬಂಧು ಬಳಗದವರು ಬಂದು ನಾಕು ದಿನ ಝೇಂಡಾ ಹೊಡಿಲಿಲ್ಲ ಅಂದ್ರ ಹ್ಯಾಂಗ್ರೀ? ಯಾರ ಕಡೆ ಬಳಗಾ? ನಿಮ್ಮ ಕಡೆಯವರೋ ಅಥವಾ ನಿಮ್ಮ ಬೇಗಂ ಕಡೆಯವರೋ? ಹಾಂ? ಹಾಂ? - ಅಂತ ಕೇಳಿದೆ.

ಅಯ್ಯೋ.....ಮನಿಗೆ ಯಾರೂ ಬಂದು ಝೇಂಡಾ ಮತ್ತೊಂದು ಹೊಡೆದಿಲ್ಲ ಸಾಬ್. ನೀವು ನಮಗೆ ಮಂಗ್ಯಾನ್ ಕೆ ಅಂದ್ರೀ ಅಲ್ಲಾ, ಅದಕ್ಕೇ ನಿಮಗೆ ತಿರುಗಿ 'ಝೇಂಡಾ ಮಂಗ್ಯಾನ್ ಕೆ' ಅಂತ ಬಾರಿಸಿದೆ. ಅದೂ ಪ್ರೀತಿಯಿಂದ ಹೇಳಿದ್ದು ಮತ್ತೆ. ತಿಳೀತು ಕ್ಯಾ? - ಅಂತ ಹೇಳಿ ಕರೀಂ ಮತ್ತೂ confuse ಮಾಡಿ ಬಿಟ್ಟ.

ಏನ್ರೀಪಾ ಮತ್ತ? ಇದು ಯಾವ ರೀತಿ ಪ್ರೀತಿಯ ಬೈಗುಳ ಮಾರಾಯಾ? ಝೇಂಡಾ ಮಂಗ್ಯಾನ್ ಕೆ!!! ಎಲ್ಲಿಂದ ಹುಡುಕಿರೀ ಇದನ್ನ? - ಅಂತ ಕೇಳಿದೆ.

ಸಾಬ್!!! ಖರೆ ಹೇಳಬೇಕು ಅಂದ್ರೆ ಝೇಂಡಾ ಮಂಗ್ಯಾನ್ ಕೆ ಅಂದ್ರೆ ನಿಮ್ಮದೂಕಿ ಅರ್ಜುನ ಇಲ್ಲ ಕ್ಯಾ, ಅವರದ್ದು ಹೆಸರು ಸಾಬ್!!!! ನಿಮಗೆ ಗೊತ್ತು ಕ್ಯಾ? - ಅಂತ ಏನೇನೋ ಹೇಳಿಬಿಟ್ಟ ಕರೀಂ.

ಯಾವ ಅರ್ಜುನರೀ? ಸಿನಿಮಾ ನಟ ಅರ್ಜುನ ರಾಮಪಾಲ ಏನು? ಮೊನ್ನೆ ಅವಂದು D-Day ಮೂವಿ ನೋಡಿದಾಗ ಅನ್ನಿಸಿತ್ತು, ಇದು ಎಂತಾ ತಗಡು ಮೂವಿ, ಅಂತ. ಖರೇನಾ ಮಂಗ್ಯಾನ್ ಕೆ ಮೂವಿ. ಆದ್ರಾ ಆವಾ ಹೀರೋ ಅರ್ಜುನ್ ರಾಮಪಾಲಗ ಯಾಕ ಬೈತೀರಿ? ಹೋಗಿ ಡೈರೆಕ್ಟರ್, ಸ್ಕ್ರಿಪ್ಟ್ ರೈಟರ್ ಗೆ ಬೈರೀ. ಪಾಪ ಅರ್ಜುನ ರಾಮಪಾಲಗ 'ಝೇಂಡಾ ಮಂಗ್ಯಾನ್ ಕೆ' ಅದು ಇದು ಅಂದ್ರ ಏನ್ರೀ ಮಾತು? - ಅಂತ ಕೇಳಿದೆ.

ಅಯ್ಯೋ!!!! ಮೂವಿ ಆಕ್ಟರ್ ಅರ್ಜುನ್ ಅಲ್ಲಾ ಸಾಬ್! ಅರ್ಜುನ ರಾಮಪಾಲನೂ ಅಲ್ಲಾ. ಅರ್ಜುನ ಸರ್ಜಾನೂ ಅಲ್ಲ. ನಿಮ್ಮ ಮಹಾಭಾರತದ ಅರ್ಜುನನ ಹೆಸರು 'ಝೇಂಡಾ ಮಂಗ್ಯಾನ್ ಕೆ' ಅಂತ. ನಿಮಗೆ ಗೊತ್ತು ಕ್ಯಾ? ಮೊದಲು ಕೇಳಿರೀ ಕ್ಯಾ? - ಅಂತ ವಿಚಿತ್ರ ಪ್ರಶ್ನೆ ಒಗದು ಕೂತ.

ಸಾಬ್ರಾ!!!! ಮಹಾಭಾರತದ ಅರ್ಜುನಂಗ ಭಾಳ ಹೆಸರು ಅವ. ಪಾರ್ಥ, ಧನಂಜಯ, ಕೌಂತೇಯ, ಗಾಂಡೀವಿ, ಶ್ರೀಂಜಯ ಮತ್ತೊಂದು ಮಗದೊಂದು. ಆದ್ರ 'ಝೇಂಡಾ ಮಂಗ್ಯಾನ್ ಕೆ' ಅನ್ನೋ ಹೆಸರು ಮಾತ್ರ ಕೇಳಿಲ್ಲ ಬಿಡ್ರೀ. ಮತ್ತ ಅವೆಲ್ಲಾ ಸಂಸ್ಕೃತ ಹೆಸರು. ನಿಮ್ಮ 'ಝೇಂಡಾ ಮಂಗ್ಯಾನ್ ಕೆ' ಯಾವ ಭಾಷಾ? ಹೀಂಗ ಇದ್ದಾಗ ಅರ್ಜುನಂಗ 'ಝೇಂಡಾ ಮಂಗ್ಯಾನ್ ಕೆ' ಅಂದ್ರ ಹ್ಯಾಂಗ್ರೀ? ಎಲ್ಲಿಂದ ಕೇಳಿಕೊಂಡು ಬಂದೀರಿ? ನಿಮಗ ಇದನ್ನು ಹೇಳಿದ ಮಹಾನುಭಾವ ಯಾರು? - ಅಂತ ಕೇಳಿದೆ.

ಅಯ್ಯೋ.....ಹೊಲಸ್ ಹೊಲಸ್ ಹೆಸರು ಎಲ್ಲಾ ಇಟ್ಟು ಬಿಟ್ಟೀರಿ ಕ್ಯಾ? ಪಾಪ ಅರ್ಜುನ್ ಸಾಹೇಬರಿಗೆ ಅದೇನೋ ಅಂದ್ರೀ. ಸಂಸ್ಕೃತ ಒಳಗೂ ಏನೇನೋ ಅಸಹ್ಯ ಅಸಹ್ಯ ಹೆಸರು. ಛೀ!!!ಛೀ!!! -ಅಂತ ಅಸಹ್ಯಪಟ್ಟುಗೊಂಡ ಕರೀಂ.

ಯಾವದರೀ ಹೊಲಸು ಹೆಸರು? ಪಾರ್ಥ, ಧನಂಜಯ, ಕೌಂತೇಯ, ಗಾಂಡೀವಿ, ಶ್ರೀಂಜಯ. ಎಷ್ಟು ಮಸ್ತ ಮಸ್ತ ಹೆಸರು ಹೇಳಿದರ ಹೊಲಸ್ ಹೆಸರು ಅಂತೀರಲ್ಲಾ!!!......ಏ.....ಹಾಪ್ ಮಂಗ್ಯಾನ್ ಕೆ.....ಅಂತ ಮೈಲ್ಡ್ ಆಗಿ ಝಾಡಿಸಿದೆ.

ಅದೇನೋ ಗಾಂಡುವೀ ಅಂದ್ರೀ? ಗಂಡುಗಳಲ್ಲೇ ಅಂಥಾ ಸಿಡಿಗುಂಡಿನಂತಹ ಅರ್ಜುನ್ ಅವರಿಗೆ ಅದೂ ಮಹಾಭಾರತದ ಮಹಾ ರಸಿಕ ಅರ್ಜುನ್ ಅವರಿಗೆ ಗಾಂಡು ಅನ್ನೋದು ಕ್ಯಾ?  ಛೀ!!!ಛೀ!!! - ಅಂತ ಮತ್ತ ಅಸಹ್ಯಪಟ್ಟುಗೊಂಡ ಕರೀಂ.

ಸಾಬ್ರಾ!!!! ಏನೇನರ ಅಂದು ಅನಾಹುತ ಮಾಡ ಬ್ಯಾಡ್ರೀ. ಗಾಂಡೀವ ಅನ್ನೋ ಬಿಲ್ಲು ಹಿಡಕೊಂಡಿದ್ದ ಅನ್ನೋದಕ್ಕ ಅರ್ಜುನಂಗ ಗಾಂಡೀವಿ ಅಂತಾರೀ. ಅದರಾಗ ನಿಮ್ಮ ಭಾಷಾದಾಗಿನ ಗಂಡು, ಗಾಂಡು ಮತ್ತೊಂದು ತಂದು ಸೇರಿಸಿ ರಾಡಿ ಎಬ್ಬಿಸಬ್ಯಾಡ್ರೀ. ಪ್ಲೀಸ್. ಕೇಳಿದವರು ಹಿಂದ ಮುಂದ ಕೂಡೆ ಹಿಡದು ಒದ್ದು ಬಿಟ್ಟಾರು! ಅಂತ ಕಳಕಳಿಯಿಂದ ಕೇಳಿಕೊಂಡೆ.

ಅರ್ಜುನಂಗ 'ಝೇಂಡಾ ಮಂಗ್ಯಾನ್ ಕೆ' ಅಂದ್ರ ಸುಮ್ಮನೆ ಇದ್ದಾರು. ಯಾರಿಗೂ ತಿಳಿಳಿಕ್ಕಿಲ್ಲ. ಹೋಗಿ ಹೋಗಿ, ಕ್ಯಾ ಬಾ?!!! ಮಾಲೂಮ್ ಕ್ಯಾ!!!! ಅರ್ಜುನ್ ಸಾಬ್ ಕೊ ವೋ ಲೋಗ್ ಗಾಂಡು ಬುಲಾತೆ!!! ಅಂತ ಎಲ್ಲರೆ ಟಂ ಟಂ ಹೊಡೆದು ಬಿಟ್ಟ ಅಂದ್ರ ಮುಗೀತು ಕಥಿ. ಯಾಕರೆ ಗಾಂಡೀವಿ ಅನ್ನೋದನ್ನ ಇವನ ಮುಂದ ಹೇಳಿದೆನೋ! ನನಗೂ ತಲಿ ಇಲ್ಲ!

ಸಾಬ್ರಾ!!! ಈಗ ಹೇಳ್ರೀ ಅರ್ಜುನಂಗ 'ಝೇಂಡಾ ಮಂಗ್ಯಾನ್ ಕೆ' ಅಂದಿದ್ದು ಎಲ್ಲೇ ಅಂತ? ಅದಕ್ಕ ಪ್ರೂಫ್ ಏನು? ಸುಮ್ಮ ಸುಮ್ಮನ ಹೆಸರು ಇಟ್ಟಂಗ ಅಲ್ಲ. ಪುರಾಣ ಪುರುಷರು ಅವರೆಲ್ಲ. ಅವರಿಗೆ ಅದು ಇದು ಹೆಸರು ಇಡಬೇಕು ಅಂದ್ರೆ ಅದಕ್ಕ ವೇದ ಪುರಾಣ ಇತ್ಯಾದಿಗಳ ಫುಲ್ ಸಪೋರ್ಟ್ ಬೇಕಾಗ್ತದ. ಎಲ್ಲೆ ಅದ ಸಪೋರ್ಟ್? ಫುಲ್ ಡೀಟೇಲ್ಸ್ ಕೊಡ್ರೀ, ಅಂತ ಕೇಳಿದೆ.

ಅಯ್ಯೋ!!!! ನಿಮ್ಮದೂಕಿ  ಭಗವದ್ಗೀತಾ ಒಳಗೇ ಅರ್ಜುನ್ ಸಾಹೇಬರಿಗೆ 'ಝೇಂಡಾ ಮಂಗ್ಯಾನ್ ಕೆ' ಅಂತ ಹೆಸರು ಅದೆ. ಗೊತ್ತಿಲ್ಲ ಕ್ಯಾ? ಮಾತು ಎತ್ತಿದರೆ ಆ ಪುಸ್ತಕ ಓದೇನಿ, ಈ ಪುಸ್ತಕ ಓದೇನಿ ಅಂತ ಛೋಡ್ತೀರಿ. ಈಗ ನೋಡಿದ್ರೆ ಭಗವದ್ಗೀತಾ ಒಳಗೆ ಇದ್ದ  'ಝೇಂಡಾ ಮಂಗ್ಯಾನ್ ಕೆ' ಉರ್ಫ್ ಅರ್ಜುನ್ ಗೊತ್ತಿಲ್ಲ ಅಂತೀರಿ. ಏನು ಹಾಪ್ ಇದ್ದೀರಿ? ಹಾಂ? ಹಾಂ? - ಅಂತ ನನಗs ರಿವರ್ಸ್ ಬಾರಿಸಿದ.

ಸ್ವಾಮೀ ಚಿನ್ಮಯಾನಂದರು ಬೈದಂಗ ಆತು. ಒಮ್ಮೆ ಯಾರೋ ಒಬ್ಬವ ಬಂದು ಚಿನ್ಮಯಾನಂದರಿಗೆ ಹೇಳಿದಾ ಅಂತ, swamijee, I have gone through Bhagavadgeeta many many times, ಅಂತ ಹೇಳಿದ. ಹೇಳೋ ಟೋನ್ ಒಳಗ ಸ್ವಲ್ಪ ಗರ್ವ ತುಂಬಿತ್ತಂತ. ಅದಕ್ಕs ಸ್ವಾಮೀ ಚಿನ್ಮಯಾನಂದ ತಿರುಗಿ ಕೇಳಿದರಂತ, That's very good. But, how many times Bhagavadgeeta has gone through you? ಹಾಕ್ಕ!!! ನೀ ಎಷ್ಟ ಸರೆ ಬೇಕಾದರೂ ಭಗವದ್ಗೀತಾ ಓದಿರಬಹುದು. ಆದ್ರಾ ಅರ್ಥ ತಿಳದದ ಏನು? ಅಂತ ಅರ್ಥ. ಅವಾ ಮಂಗ್ಯಾ ಆಗಿ ಹೋಗಿರಬೇಕು. ಸ್ವಾಮಿ ಚಿನ್ಮಯಾನಂದರ ಶಿಷ್ಯ ಸ್ವಾಮಿ ತೇಜೋಮಯಾನಂದ ಹೋದ ಸಲ ವೇದಾಂತ ೨೦೧೨ ಕ್ಯಾಂಪ್ ಒಳಗ ಹೇಳಿದ ಜೋಕ್ ನೆನಪಾತು.

ಕರೀಮನ ಮಾತು ಕೇಳಿ ನನಗೂ ಹಾಂಗ ಅನ್ನಿಸ್ತು. ಭಗವದ್ಗೀತಾ ಓದಿದ್ದೆಲ್ಲ ವೇಸ್ಟ್ ಅಂತ.

ಎಲ್ಲೆ ಭಗವದ್ಗೀತಾ ಒಳಗೆ ಅರ್ಜುನಂಗ 'ಝೇಂಡಾ ಮಂಗ್ಯಾನ್ ಕೆ' ಅಂದಾರ? ಅಂತ ತಲಿ ಕೆಡಿಸಿಕೊಂಡೆ. 'ಝೇಂಡಾ ಮಂಗ್ಯಾನ್ ಕೆ' ಅಂತ ಡೈರೆಕ್ಟ್ ಅಂದಿರಲಿಕ್ಕೆ ಇಲ್ಲ. ಇವಾ ಕರೀಂ ಹಾಪಾ ಏನೋ ಕೇಳಿಕೊಂಡು ಬಂದು, ತಂದೇ ಆದ ರೀತಿಯೊಳಗ ಅದನ್ನ ವಿಶ್ಲೇಶಿಸಿ 'ಝೇಂಡಾ ಮಂಗ್ಯಾನ್ ಕೆ' ಮತ್ತೊಂದು ಅಂದಿರ್ತಾನ. ಆದರೂ ಏನು ಇರಬಹುದು? ದೊಡ್ಡ ರಹಸ್ಯ ಆಗಿ ಹೋತಲ್ಲ?!

ಸಾಬ್ರಾ!!! ಭಗವದ್ಗೀತಾ ಒಳಗ ಯಾವ ಶ್ಲೋಕದಾಗ ಅರ್ಜುನಂಗ 'ಝೇಂಡಾ ಮಂಗ್ಯಾನ್ ಕೆ' ಅಂದಾರ? - ಅಂತ ಕೇಳಿದೆ.

ಅಯ್ಯೋ ಸಾಬ್!!!! ಗೀತಾ ಒಳಗೆ ಸುಮಾರು ಏಳನೂರೂ ಚಿಲ್ಲರೆ ಶ್ಲೋಕ ಇವೆ. ಅದರಲ್ಲಿ ಎಲ್ಲಿ ಅಂತ ನಮಗೆ ಏನು ಗೊತ್ತು? - ಅಂತ ಅಂದು ಸುಮ್ಮನಾಗಿಬಿಟ್ಟ ಕರೀಂ.

ಶ್ಲೋಕಾ  ನೆನಪಿಲ್ಲ ಅಂದ್ರ ಸ್ವಲ್ಪ context ಹೇಳ್ರೀಪಾ, ಅಂತ ಇನ್ನೊಂದು ದಾರಿ ಟ್ರೈ ಮಾಡಿದೆ.

ಕ್ಯಾ ಸಾಬ್????!!!! ಅರ್ಜುನ್ ಸಾಬ್ ದು ಗಾಡಿ ಇರಲಿಲ್ಲ ಕ್ಯಾ? ಮತ್ಲಬ್ ರಥಾ. ಘೋಡೆವಾಲಾ ಗಾಡಿ. ಮುಂದೆ ಡ್ರೈವರ್ ಆಗಿ ಕೃಷ್ಣಾಜಿ ಕೂತಿದ್ದರು. ಆ ರಥಾದು ಮೇಲೆ ಒಂದು ಝೇಂಡಾ ಮತ್ಲಬ್ flag ಮತ್ಲಬ್ ಧ್ವಜಾ ಇತ್ತು ನೋಡಿ. ಆ ಝೇಂಡಾ ಮೇಲೆ ನಿಮ್ಮದೂಕಿ ದೇವರು ಹನುಮಾನ್ ಜೀ ದು ಚಿತ್ರ ಇರಲಿಲ್ಲ ಕ್ಯಾ? ಅದಕ್ಕೇ ಅರ್ಜುನ್ ಸಾಹೇಬರಿಗೆ 'ಝೇಂಡಾ ಮಂಗ್ಯಾನ್ ಕೆ' ಅನ್ನೋದು. ಸಂಸ್ಕೃತ ಒಳಗೆ ಏನೋ ಬೇರೇನೆ ಇದೆ. ಆದ್ರೆ ನಮ್ಮದು ಭಾಷಾಗೆ ತರ್ಜುಮಾ  ಮಾಡಿದ್ರೆ  'ಝೇಂಡಾ ಮಂಗ್ಯಾನ್ ಕೆ', ಅಂತ  ಹೇಳಿದ ಕರೀಂ.

ಈಗ tube-light ಹತ್ತಿತು. ಹೌದು!!!! ಕೃಷ್ಣ ಸಾರಥ್ಯದ ಅರ್ಜುನನ ರಥದ ಮ್ಯಾಲೆ ಒಂದು ಧ್ವಜ ಇತ್ತು. ಅದರ ಮ್ಯಾಲೆ ಹನುಮಂತನ ಚಿತ್ರ ಇತ್ತು. ಆದ್ರ ಇವಾ ಕರೀಂ ಯಾಕ 'ಝೇಂಡಾ ಮಂಗ್ಯಾನ್ ಕೆ' ಅನ್ನಲಿಕತ್ತಾನ ಅಂತ ಮಾತ್ರ ತಿಳಿಲಿಲ್ಲ.

ನಮ್ಮ ಜುಬ್ಬಾ ಒಳಗ ಇದ್ದ ಸಣ್ಣ ಪಾಕೆಟ್ ಎಡಿಷನ್ ಭಗವದ್ಗೀತಾ ತೆಗೆದು ಲಗು ಲಗು ಪುಟ ತಿರುವಿದೆ. ಎಲ್ಲೆ ಮಂಗ್ಯಾಕ್ಕ ಅಲ್ಲಲ್ಲ ಹನುಮಂತಂಗ reference ಸಿಗ್ತದ ಅಂತ ನೋಡಲಿಕ್ಕೆ. ನಮ್ಮ ನಸೀಬ್ ಚೊಲೋ ಇತ್ತು. ಬರೇ ಒಂದು ಎಂಟತ್ತು ಪುಟ ತಿರುವುದೊಳಗ ಸಿಕ್ಕಿಬಿಡ್ತು. ಖುಷಿಂದ ಕುಪ್ಪಳಿಸಿಬಿಟ್ಟೆ. ಸೇಮ್ ಮಂಗ್ಯಾನ ಗತೆ ಜಿಗದೆ.

ಕ್ಯಾ ಸಾಬ್!!!??? ಮಂಗ್ಯಾನ್ ಕೆ ಗತೆ ಜಿಗೀತಾ ಇದ್ದೀರಿ? ಕ್ಯಾ ಹೋಗಯಾ? ಗೀತಾ ಮೇ 'ಝೇಂಡಾ ಮಂಗ್ಯಾನ್ ಕೆ' ಮಿಲ್ ಗಯಾ ಕ್ಯಾ? ನಾವೇನು ಹೇಳಿದ್ದು ನಿಮಗೆ? ಹಾಂ? ಹಾಂ? - ಅಂತ ಕಾಲರ್ ಹಾರಿಸಿಕೊಂಡ ಕರೀಂ. ಸೊಕ್ಕು ಮಂಗ್ಯಾನ್ ಕೆ ಗೆ.

ಸಿಕ್ತಪಾ!!! ಸಿಕ್ಕಿತು!!!! ಅಧ್ಯಾಯ ಒಂದು, ಶ್ಲೋಕ ಇಪ್ಪತ್ತು ನೋಡಪಾ. ಅಲ್ಲೆ ಏನದ ಅಂದರ, ಅಂತ ಶ್ಲೋಕಾ ತೋರ್ಸಿದೆ.

ಅಥ ವ್ಯವಸ್ಥಿತಾನ್ ದೃಷ್ಟ್ವಾ ಧಾರ್ತರಾಷ್ಟ್ರಾನ್ ಕಪಿಧ್ವಜಃ 
ಪ್ರವೃತ್ತೇ ಶಸ್ತ್ರಸಂಪಾತೇ ಧನುರುದ್ಯಮ್ಯ ಪಾಂಡವಃ  ೨೦

ರಥದ ಮೇಲಿನ ಧ್ವಜದಲ್ಲಿ ಹನುಮಂತನಿದ್ದಾನೆ
ಹೋಗ್ಗೋ  ಸಾಬ್ರಾ!!!!! ಈ ಶ್ಲೋಕದ ಒಳಗ ಅರ್ಜುನಂಗ ಕಪಿಧ್ವಜ ಅಂತ ಸಂಭೋಧಿಸಿದರೆ  ಅದನ್ನ ನಿಮ್ಮ ಭಾಷಾ ಒಳಗ 'ಝೇಂಡಾ ಮಂಗ್ಯಾನ್ ಕೆ' ಅಂತೀರಲ್ಲರಿ??! ಏನು ಹೇಳೋಣ ನಿಮ್ಮ ಬುದ್ಧಿಗೆ??!! ಒಂದು ರೀತಿಯೊಳಗ ಸರಿ ಅದ ಬಿಡ್ರೀ ನಿಮ್ಮ translation. ಕಪಿ ಅಂದ್ರ ಮಂಗ್ಯಾ. ಧ್ವಜ ಅಂದ್ರ ಝೇಂಡಾ. ಕಪಿಧ್ವಜ ಅಂದ್ರ ಮಂಗ್ಯಾನ್ ಕೆ ಝೇಂಡಾ. ಹಿಂದಿ ಉರ್ದು ಒಳಗ ಪದ ಹಿಂದ ಮುಂದ ಮಾಡಿದ್ರ ಓಕೆ ನೋಡ್ರೀ. ಅರ್ಥದ ಮ್ಯಾಲೆ ಏನೂ ಪರಿಣಾಮ ಇಲ್ಲ. ಅದಕ್ಕs ನೀವು 'ಝೇಂಡಾ ಮಂಗ್ಯಾನ್ ಕೆ' ಅನಕೋತ್ತ ಕೂತೀರಿ. ವಾಹ್!!! ವಾಹ್!!!! - ಅಂತ ಸಾಬರನ್ನ ಅವರ ಗೀತಾ ಜ್ಞಾನವನ್ನ appreciate ಮಾಡಿದೆ. 

ನಮ್ಮ ಮಂದಿನೇ ಎಲ್ಲಾ ಬಿಟ್ಟು ಕೂತಂತಹ ಟೈಮ್ ನಲ್ಲಿ ನಮ್ಮ ಸಾಬ್ರು, ಕ್ಲೋಸ್ ಫ್ರೆಂಡ್ ಕರೀಂ ಸಾಬರು, ನಮ್ಮ ಭಗವದ್ಗೀತಾ ಅವರಿಗೆ ತಿಳಿದ ಮಟ್ಟಿಗೆ ಓದಿ ಅರ್ಥ ಮಾಡಿಕೊಳ್ಳೋದು ಅಂದ್ರ ಕಮ್ಮಿ ಅಲ್ಲ ಬಿಡ್ರೀ. ರಿಯಲಿ ಹಾಟ್ಸ್ ಆಫ್!!!! ನಮ್ಮ ತಲಿ ಮ್ಯಾಲೆ ಅವತ್ತು ಟೊಪ್ಪಿಗಿ ಇರಲಿಲ್ಲ. ಇದ್ದಿದ್ದರ ಟೊಪ್ಪಿಗಿ ಟಿಪ್ ಮಾಡಿ ಹಾಟ್ಸ್ ಆಫ್ ಮಾಡೇ ಬಿಡ್ತಿದ್ದೆ.

ಸಾಬ್!!!! ಅಂತ ಕರೀಂ ತಲಿ ಕೆರಕೊಂಡ.

ಏನೋ?? ಅಂತ ಕೇಳಿದೆ.

ಅದೇನೋ ಅರ್ಜುನಾ ಗೆ ಸಂಭೋಗಿಸಿದರೆ ಅಂದ್ರಿ? ಉಸಕಾ ಮತ್ಲಬ್ ಕ್ಯಾ? - ಅಂತ ಕೇಳಿಬಿಟ್ಟ. ಅನಾಹುತ!!!!!!!

ಶಿವ ಶಿವಾ!!!!

ಸಾಬ್ರಾ!!!!! ಅಂತ ಕಿವಿ ಮುಚ್ಚಿಗೊಂಡೆ.

ಏನಾಯ್ತು ಸಾಬ್???? ನೀವೇ ಹೇಳಿದ್ರಿ. ಅದೂ ಈಗ ಮಾತ್ರ. ಅರ್ಜುನಾಗೆ  ಗೀತಾದಲ್ಲಿ ಅದೇನೋ ಕಪಿದು ಝೇಂಡಾ ಅಂತ ಸಂಭೋಗಿಸಿದರು ಅಂತ. ಏನು ಅಂತ ಕೇಳಿದರೆ ಚಿಟಿ ಚಿಟಿ ಚೀರ್ತಿರಿ. ಯಾಕೆ? ಕ್ಯೂ ಬಾ? ಗಲತಿ ಹುವಾ ಕ್ಯಾ? - ಅಂತ ಕೇಳಿದ ಕರೀಂ. innocent ಆಗಿ ಕೇಳಿದ.

ಸಾಬ್ರಾ!!!! ಅದು ಸಂಭೋಧಿಸಿದರು ಅಂತ. ಅಂದ್ರ ಹೇಳಿದರು ಅಂತ. ಯಾರಿಗಾರ ಹೋಗಿ ಗೀತಾ ಒಳಗ ಅರ್ಜುನನ್ನ ಕಪಿಧ್ವಜ ಅಂತ ಸಂಭೋಗಿಸಿದ್ದಾರೆ ಅಂತ ಹೇಳಿ ಗೀಳೀರಿ ಮತ್ತ!!! ಮಂದಿ ಮೊದಲು ಅವರ ಅಂಡು ತಟ್ಟಿಕೊಂಡು ನಗತಾರ. ಆ ಮ್ಯಾಲೆ ನಿಮ್ಮ ಅಂಡಿನ ನಾಮಾಷೇಶ ಮಾಡಿ ಬಿಡ್ತಾರ. ಹುಷಾರ್!!!! - ಅಂತ ವಾರ್ನಿಂಗ್ ಕೊಟ್ಟೆ. ಭಾಳ ನಗು ಮಾತ್ರ ಬಂತು.

ಹಾಗೆ ಕ್ಯಾ? ಹಾಗಿದ್ದಾಗ ಸುಮ್ಮನೆ ಸಿಂಪಲ್ ಶಬ್ದ ಹೇಳೋದು ಬಿಟ್ಟು ಸಂಭೋಧಿಸು, ಸಂಭೋಗಿಸು ಅಂತ ಸಂಬಂಧ ಇಲ್ಲದ ಶಬ್ದ ಹೇಳಿ ನಮ್ಮನ್ನು ಮಂಗ್ಯಾ ಮಾಡೋದು ಯಾಕೆ? - ಅಂತ ಕೇಳಿದ ಕರೀಂ. ಪಾಯಿಂಟ್ ಇತ್ತು ಆವಾ ಹೇಳಿದ್ರೋಳಗ. simple is always better.

ಸಾಬ್!!!! ಅದೆಲ್ಲ ಇರಲಿ.....ಅರ್ಜುನ್ ಸಾಬ್ ಅವರಿಗೆ 'ಝೇಂಡಾ ಮಂಗ್ಯಾನ್ ಕೆ ' ಅಂತ ಹೆಸರು ಹ್ಯಾಂಗೆ ಬಂತು? - ಅಂತ ಕೇಳಿದ ಕರೀಂ.

ಅದು ಒಂದು ದೊಡ್ಡ ಕಥಿ ಮಾರಾಯಾ. ಶಾರ್ಟ್ ಮಾಡಿ ಹೇಳಿ ಬಿಡ್ತೇನಿ.  ಓಕೆ? 

ಒಮ್ಮೆ ಕೃಷ್ಣ ಅರ್ಜುನ ಕೂಡಿ ಸೌತ್ ಇಂಡಿಯಾ ಕಡೆ ಬಂದಿದ್ದರು ಅಂತ ಆತು. ಅಲ್ಲೇ ಮದ್ರಾಸ್ ಕೆಳಗ ಇಳಿದು ಕನ್ಯಾಕುಮಾರಿ ಬೀಚ್ ಮಸ್ತ ಅದ ನೋಡಿ ಬರೋಣ ಅಂತ ಫುಲ್ ಕೆಳಗ ಶ್ರೀಲಂಕಾ ಹತ್ತಿರ ಹೋಗಿ ಬಿಟ್ಟರು. ಅಲ್ಲೇ ಕನ್ಯಾಕುಮಾರಿ ಬೀಚ್ ಮ್ಯಾಲೆ ಭೇಲಪುರಿ ಪಾನಿಪುರಿ ತಿಂದುಕೋತ್ತ ನಿಂತ ಅರ್ಜುನಂಗ ಕಪಿಗಳು ರಾಮನಿಗೆ ಅಂತ ಕಟ್ಟಿದ ರಾಮ ಸೇತು ಕಂಡದ. ಅರ್ಜುನ ಕೃಷ್ಣನ್ನ ಕೇಳಿದ. ಅಲ್ಲಪಾ ಕೃಷ್ಣ, ರಾಮಾ ತಾನೇ ಅಷ್ಟು ದೊಡ್ಡ ದೇವರು. ಬಿಲ್ಲು ಬಾಣ ಪಂಡಿತ ಇದ್ದ. ಹಾಂಗಿದ್ದಾಗ ಮಂಗ್ಯಾಗಳ ಕಡೆ ಯಾಕ ಬ್ರಿಜ್ ಕಟ್ಟಿಸಿದ? ತಾನೇ ಬಾಣ ಬಿಟ್ಟು ಒಂದು ಮಸ್ತ ಬ್ರಿಜ್ ಮಾಡಿಕೊಂಡು ಲಂಕಾಕ್ಕ ಹೋಗಬಹುದಿತ್ತಲ್ಲ. ಯಾಕ ಹೋಗಲಿಲ್ಲ? ಹಾಂ? ಹಾಂ?  ನಾ ಏನರೆ ಇದ್ದರ ಬಾಣಾ ಬಿಟ್ಟು ಬಿಟ್ಟು ಮಸ್ತ ಬ್ರಿಜ್ ಮಾಡಿಕೊಂಡು ಹೋಗಿ ಬಿಡ್ತಿದ್ದೆ. ಈ ಅಡ್ನಾಡಿ ಮಂಗ್ಯಾಗಳ ಹಂಗ್ಯಾಕೋ? ಏನಂತೀ ಕೃಷ್ಣಾ? - ಅಂತ ಕೇಳಿದ ಅರ್ಜುನ.

ಕೃಷ್ಣಂಗ ಅನ್ನಿಸ್ತು. ಅರ್ಜುನ ಸಾಹೇಬರಿಗೆ ಸೊಕ್ಕು ತಲಿಗೆ ಹತ್ಯದ. ಇದನ್ನ ಇಳಿಸಳಿಕ್ಕೆ ದೊಡ್ಡ ಮಂಗ್ಯಾ ಉರ್ಫ್ ಹನುಮಂತನೇ ಬರಬೇಕು ಅಂತ.

ಹೂನಪಾ ಅರ್ಜುನ! ನೀ ಎಲ್ಲೆ ಆ ರಾಮಾ ಎಲ್ಲೆ? ಮತ್ತ ಆ ಬ್ರಿಜ್ ಕಟ್ಟಿದ ಮಂಗ್ಯಾಗಳು ಎಲ್ಲೇ?!!! ಬಾಣಾ ಬಿಟ್ಟು ಒಂದು ಬ್ರಿಜ್ ಮಾಡಿಬಿಡಪಾ. ಇಲ್ಲಿ ತನಕಾ ಬಂದೇವಿ. ಹಂಗಾs ಲಂಕಾಕ್ಕೂ ಹೋಗಿ ಬಂದು ಬಿಡೋಣ, ಅಂತ ಹೇಳಿ ಅರ್ಜುನಂಗ ಫುಲ್ ಹವಾ ಹಾಕಿ ಬಿಟ್ಟ ಕೃಷ್ಣ.

ಅಷ್ಟು ಹೇಳೊದs ತಡಾ, ಅರ್ಜುನ ಬಾಣದ ಮ್ಯಾಲೆ ಬಾಣ ಬಿಟ್ಟು ಒಂದು ಬ್ರಿಜ್ ತಯಾರ ಮಾಡೇ ಬಿಟ್ಟ!

ನಡೀಪಾ ಕೃಷ್ಣ..... ಬ್ರಿಜ್ ತಯಾರ ಆಗ್ಯದ. ಲಂಕಾಕ್ಕೂ ಒಂದು ವಿಸಿಟ್ ಕೊಟ್ಟು ಬಂದು ಬಿಡೋಣ ನಡಿ. ನಡಿ ನಡಿ, ಅಂತ ಗಡಿಬಿಡಿ ಮಾಡಿದ ಅರ್ಜುನ.

ತಡೀಪಾ ಅರ್ಜುನ. ಅಲ್ಲೆ ನೋಡು, ಯಾರೋ ಬರ್ಲೀಕತ್ತಾರ. ನೋಡಿದರ ನಮ್ಮ ಹನುಮಪ್ಪ ಕಂಡಂಗ ಕಾಣ್ತಾನ. ಅವಗಂತೂ ಯುಗ ಗಿಗ ಏನೂ ಫರಕ್ ಇಲ್ಲ. ಎಲ್ಲಾ ಕಾಲದಾಗೂ ಇರ್ತಾನ, ಅಂತ ಕೃಷ್ಣ ಅನ್ನೋ ತನಕಾ ಹನುಮಂತ ಬಂದೇ ಬಿಟ್ಟ.

ಹನುಮಂತಂಗ ಕೃಷ್ಣಾ ಅರ್ಜುನ ನಮಸ್ಕಾರ ಮಾಡಿದರು. ಅವನೂ ನಮಸ್ಕಾರ ತೊಗೊಂಡು ಪ್ರತಿ ನಮಸ್ಕಾರ ಮಾಡಿದ.

ವಾಹ್!!!ವಾಹ್!!! ಏನು ಮಸ್ತ ಬಾಣದ ಬ್ರಿಜ್ ಮಾಡಿಯೋ ಅರ್ಜುನ. ಭೇಷ್! ನಾವು ಹಾಪ್ ಮಂಗ್ಯಾಗೋಳು ಕಲ್ಲು ಮಣ್ಣು ಹಾಕಿ ಆ ಕಾಲದಾಗ ಬ್ರಿಜ್ ಮಾಡಿದ್ದಿವಿ ನೋಡಪಾ. ತಲಿನೇ ಇಲ್ಲ ನಮಗ. ನಾ ಒಂದು ಸಲೆ ನಿನ್ನ ಬ್ರಿಜ್ ಮ್ಯಾಲೆ ಅಡ್ಡಾಡಿ ಬರ್ಲೇನೋ ಅರ್ಜುನಾ? ಕೃಷ್ಣಾ ನೀವು ಬರ್ತೀರಿ ಏನು? - ಅಂತ ಕೇಳಿದ ಹನುಮಪ್ಪ.

ನೀವು ಹೋಗಿ ಬರ್ರಿ ಹನುಮಪ್ಪಾ. ನಾ ಇಲ್ಲೇ ಬೀಚ್ ಮ್ಯಾಲೆ ಕೂತು ಎಳೆನೀರು ಕುಡಿತೇನಿ, ಅಂದ್ರು ಕೃಷ್ಣ.

ಹನುಮಂತ ಹೋಗಿ ಅರ್ಜುನ ಮಾಡಿದ ಬ್ರಿಜ್ ಮ್ಯಾಲೆ ಕಾಲಿಡೋದೇ ತಡ, ಬ್ರಿಜ್ ಅವನೌನ್ ಪೂರ್ತಿ ಮುರಕೊಂಡು ಬಿದ್ದು ಸಮುದ್ರಾದಾಗ ಸೇರಿಕೊಂಡು ಗೋವಿಂದಾ ಗೋವಿಂದಾ ಆಗಿ ಬಿಡ್ತು. ಫುಲ್ ಖಲಾಸ್!! ಫುಲ್ ಮಟಾಶ್!!! ಹನುಮಪ್ಪನ ಪವರ್ ಅಂದ್ರ ಅದು!! ಅದರ ಮುಂದ ಅರ್ಜುನನ ಬಿಂಗಲಾಟಿ ಬಾಣದ ಬ್ರಿಜ್ ಏನು ಸಮಾ?!

ಅದನ್ನ ನೋಡಿದ ಅರ್ಜುನ ಪಾಠ ಕಲಿತ. ಹನುಮಂತನಿಗೆ ಮತ್ತ ಅವನ ವಾನರ ಸೇನಾಕ್ಕ ಅವಮಾನ ಮಾಡೋ ರೀತಿ ಮಾತಾಡಿದ್ದು ತಪ್ಪು ಅಂತ ಗೊತ್ತಾತು. ಸೀದಾ ಹೋದವನೇ ಹನುಮಪ್ಪನ ಕಾಲಿಗೆ ಬಿದ್ದು, ತಪ್ಪಾತೋ ಹನುಮಪ್ಪಾ!ನೀವೆಲ್ಲಾ ಕೂಡಿ ಕಟ್ಟಿದ ರಾಮ ಸೇತು ಮುಂದ ನಾ ಕಟ್ಟಿದ ಬಾಣದ ಬ್ರಿಜ್ ಏನೂ ಅಲ್ಲಪಾ. ಕ್ಷಮಾ ಮಾಡಿ ಬಿಡೋ!!! ಅಂತ ಗೊಳೋ ಅಂದಾ.

ಹನುಮಪ್ಪಾ ಬೆಸ್ಟ್ ದೇವರು. ಇರಲೀ ಬಿಡಪಾ!!! ಇನ್ನೂ ಸಣ್ಣವ ಇದ್ದಿ. ತಪ್ಪು ತಿದ್ದಿಕೋತ್ತಿ. ಕ್ಷಮಾ ಕೇಳಿದ್ದು ಭಾಳ ಸಂತೋಷ. ಏನು ವರ ಕೊಡಲೀ ನಿನಗ? - ಅಂತ ಕೇಳಿದ ಹನುಮಂತ.

ರೀ....ಹನುಮಂತ! ಮುಂದ ಮಹಾಭಾರತ ಯುದ್ಧ ಶುರು ಆಗೋದು ಅದ. ನಾನು ಈ ಅರ್ಜುನನ ಡ್ರೈವರ್ ಅಂತ ಹೊಂಟೀನಿ. ನೀವು ಕ್ಲೀನರ್ ಅಂತ ಬರ್ರಲಾ. ಬರ್ತೀರಿ? ನನ್ನಂತ ಡ್ರೈವರ್ ನಿಮ್ಮಂತ ಕ್ಲೀನರ್ ಬೇಕ್ರೀಪಾ ಈ ಪಾಂಡವರಿಗೆ, ಅಂತ ಕೇಳಿದ ಕೃಷ್ಣ.

ನನಗ ಈಗ ಭಾಳ ವಯಸ್ಸು ಆಗ್ಯದ. ನಾನು ಸನ್ಯಾಸ ತೊಗೊಂಡು ಕೇವಲ ರಾಮನಾಮ ಸ್ಮರಣೆ ಒಂದೇ ಮಾಡವ ಇದ್ದೇನಿ. ಆದರೂ ನಮ್ಮ ಹುಡುಗ ಅರ್ಜುನನ ರಥದ ಮೇಲಿನ ಬಾವುಟದ ಮ್ಯಾಲೆ ಇರೋ ಚಿತ್ರದಾಗ ಬಂದು ಕೂಡತೇನಿ. ಮತ್ತ ಎಲ್ಲಾ ಛೋಲೋ ಆಗೋ ಹಾಂಗ ನೋಡಿಕೋತ್ತೇನಿ, ಅಂತ ಹೇಳಿ ವರಾ ಕೊಟ್ಟು ಹನುಮಪ್ಪಾ ಜಿಗದು ಹಾರಿ ಹೋಗಿ ಬಿಟ್ಟ.

ಕಪಿಧ್ವಜ
ಗೊತ್ತಾತೇನೋ ಕರೀಂ ಭಾಯಿ? ಹೀಂಗ ವರಾ ಕೊಟ್ಟಿದ್ದೆ ಅಂತ ಹನುಮಪ್ಪಾ ಅರ್ಜುನನ ರಥದ ಬಾವುಟದ ಮ್ಯಾಲೆ ಬಂದು ಕೂತರು. ಅದಕ್ಕs ಅರ್ಜುನಂಗ ಕಪಿಧ್ವಜ ಅನ್ನೋದು. ನೀ ಅದನ್ನ 'ಝೇಂಡಾ ಮಂಗ್ಯಾನ್  ಕೆ' ಮಾಡಿದಿ. ತಿಳೀತಾ? - ಅಂತ ಫುಲ್ ವಿವರಣೆ ಕೊಟ್ಟೆ.

ಎರಡು ಡೌಟ್ ಇವೆ ಸಾಬ್, ಅಂದ ಕರೀಂ.

ಏನೋ? - ಅಂತ ಕೇಳಿದೆ.

ಹನುಮಪ್ಪಾ ಅವರು ಅರ್ಜುನ್ ಅವರಿಗೆ ವರಾ ಯಾಕೆ ಕೊಟ್ಟರು? ಕನ್ಯಾ ಕೊಡಬೇಕು ತಾನೇ? ಅರ್ಜುನ್ ಸಾಹೇಬರಿಗೆ ವರಾ ಯಾಕೆ? ಅವರು ಎಷ್ಟೋ ಮಂದಿ ಹೆಂಗಸೂರಿಗೆ ಕಂಡ ಕಂಡಲ್ಲಿ ಶಾದಿ ಮಾಡಿಕೊಂಡು ಬಂದು ಬಿಡ್ತಿದ್ದರು. ಹನುಮಪ್ಪಾಜಿ ಅವರಿಗೆ ಮುದುಕಾ ಆಗಿಬಿಟ್ಟು ತಲಿ ಅರಳು ಮರಳು ಆಗಿತ್ತು ಕ್ಯಾ? - ಅಂತ ಕೇಳಿಬಿಟ್ಟ ಕರೀಂ.

ಹೋಗ್ಗೋ ಇವನಾ!!!! ಹನುಮಂತ ಅರ್ಜುನಗ ವರಾ ಕೊಟ್ಟಾ ಅಂದ್ರ ಕನ್ಯಾ ಯಾಕ ಕೊಡಲಿಲ್ಲ ಅಂತ!!!!

ಸಾಬ್ರಾ!!! ಇದು ವರ ಅಂದ್ರ ಬ್ಯಾರೇ!!!! ದೇವರು ಕೊಡೊ boon ಅಂತಾರ ನೋಡ್ರೀ. ಅದರೀಪಾ. ಮುಂದಿನ ಡೌಟ್ ಏನು ನಿಮ್ಮದು? - ಅಂತ ಕೇಳಿದೆ.

ಓಹೋ!!! ಇದು ಹಾಗೆ!!! ಭಗವಾನ ಕೊಡೊ ವರ ಮತ್ಲಬ್ ಬೂನ್. ಅದೇನೋ ಹನುಮಾನ್ ಜೀ ಅರ್ಜುನಾ ಅವರಾ ಬಾವುಗಾ ಮ್ಯಾಲೆ ಹೋಗಿ ಕೂತರು ಅಂತಾ ಅಂದ್ರೀ. ವೋ ಕ್ಯಾ? ಅರ್ಜುನ್ ಅವರ ಕಡೆ ಗಂಡು ಬೆಕ್ಕು ಅಂದ್ರೆ ಬಾವುಗ ಇತ್ತು ಕ್ಯಾ? ಹನುಮಾನ್ ಜೀ ಹೋಗಿ ಸಣ್ಣ ಬೆಕ್ಕಿನ ಮ್ಯಾಲೆ ಕೂತರೆ ಬೆಕ್ಕು ಫುಲ್ ಪಡ್ಚಾ ಅಲ್ಲಾ???!!!! - ಅಂತ ಕೇಳಿಬಿಟ್ಟ ಕರೀಂ.

ನಾ ಬಾವುಟ ಅಂತ ಹೇಳಿದರ ಇವಂಗ ಬಾವುಗ ಅಂತ ಕೇಳಿಬಿಟ್ಟದ!!! ಹೋಗ್ಗೋ!!!!

ಸಾಬ್ರಾ!!!! ಅದು ಬಾವುಟ ಅಂತ. ಅಂದ್ರ ಝೇಂಡಾ ಉರ್ಫ್ ಫ್ಲಾಗ್. ಬಾವುಗ ಅಲ್ಲ. ಬಾವುಗ ನಿಮ್ಮ ಬೇಗಂ ಕಡೆ ಇರೋದು. ಎಂತಾ ಬಾವುಗಾ ಸಾಕ್ಯಾಳ್ರೀ ಅಕಿ. ಒಮ್ಮೆ ಹೀಂಗ ಪರಚಿತ್ತು ಅಂದ್ರ, ಕೇಳಬ್ಯಾಡರೀ, ಅಂತ ಬಾವುಟ ಮತ್ತ ಬಾವುಗದ ನಡುವಿನ ಸಂದೇಹ ಬಗೆ ಹರಿಸಿದೆ.

ಐಸಾ ಕ್ಯಾ? ಈಗ ಫುಲ್ ತಿಳೀತು ನೋಡಿ ಅರ್ಜುನ್ ಅವರಿಗೆ 'ಕಪಿ ಝೇಂಡಾ' ಉರ್ಫ್ 'ಝೇಂಡಾ ಮಂಗ್ಯಾನ್ ಕೆ' ಅಂತ ಯಾಕೆ ಹೆಸರು ಬಂತು ಅಂತ. ಬಹುತ್ ಶುಕ್ರಿಯಾ. ಬಡಿ ಮೆಹೆರ್ಬಾನಿ. ಭಾಳ ಚಂದಾಗಿ ತಿಳಿಸಿ ಹೇಳಿದ್ರೀ. ಖುದಾ ಹಾಫಿಜ್, ಅಂತ  ಹೇಳಿ ಕರೀಂ ಮನಿ ಹಾದಿ ಹಿಡದ.

ನಾನೂ ವಾಪಸ್ ಬಂದೆ. ಆದ್ರ ಭಗವದ್ಗೀತಾ ಓದಲಿಕತ್ತು ಹತ್ತು ವರ್ಷದ ಮ್ಯಾಲೆ ಆಗಿ ಹೋತು, ಇಷ್ಟು ವರ್ಷ ಹ್ಯಾಂಗ ಈ ಕಪಿಧ್ವಜ ನಮ್ಮ ಕಣ್ಣಿಗೆ ಬಿದ್ದಿರಲಿಲ್ಲ???? ಇರ್ಲಿ ಆವಾಗ ನಾವು ಇಷ್ಟು ದೊಡ್ಡ ಮಂಗ್ಯಾ ಇರಲಿಲ್ಲ ಅಂತ ಅನ್ನಸ್ತದ. ಈಗರೆ ಕಣ್ಣಿಗೆ ಬಿತ್ತಲ್ಲ, ಅಷ್ಟಾ ಸಾಕು!

** ಮಂಗ್ಯಾನ್ ಕೆ, ಮಂಗ್ಯಾನ ಮಗನ, ಮಂಗ್ಯಾ - ಧಾರವಾಡ ಕಡೆಯ ಪ್ರೀತಿಯ (?) ಬೈಗುಳ.

** ಮೇಲೆ ಉದ್ಧರಿಸಿದ ಮೊದಲ ಅಧ್ಯಾಯದ ಇಪ್ಪತ್ತನೆ ಶ್ಲೋಕದ ಅರ್ಥ ತಿಳಿಯಲು ಬಯಸುವವರು ಇಲ್ಲಿ ನೋಡಬಹುದು

** ಕಪಿಧ್ವಜದ ಹಿಂದಿನ ಕಥೆ ಸ್ವಲ್ಪ ಸ್ವಲ್ಪ ಗೊತ್ತಿತ್ತಾದರೂ ಪೂರ್ತಿ ತಿಳಿದಿದ್ದು ಈಗ. ಸ್ವಾಮಿ ಮುಕುಂದಾನಂದರು ಭಗವದ್ಗೀತೆಯ ಮೇಲೆ Bhagavad Gita - The Song of God ಅಂತ ಒಂದು ತುಂಬ ಒಳ್ಳೆಯ ಪುಸ್ತಕ ಬರೆದಿದ್ದಾರೆ. ಇದರಲ್ಲಿ ಕಪಿಧ್ವಜದ ಪೂರ್ತಿ ಕತೆ ಸರಳವಾಗಿ ಸಿಕ್ಕಿತು. ಹಾಕಿದ ಮಸಾಲೆ ನಮ್ಮದು. IIT, IIM ಪದವೀಧರಾದ ಸ್ವಾಮಿ ಮುಕುಂದಾನಂದರ ಮನಮುಟ್ಟುವ ಪ್ರವಚನಗಳು youtube ಮೇಲೂ ಇವೆ.

Monday, July 15, 2013

ಏ ಹಾಪ್! ಲೇ ಹಾಪಾ!.....ಸರ್ವಂ 'ಹಾಪ'ಮಯಂ.....ಹಾಪಾಯಣ

ನೀವು ಧಾರವಾಡಕ್ಕೆ ಹೋಗಿ, ಸುಮ್ಮನೆ 'ಏ ಹಾಪ್' ಅಥವಾ 'ಲೇ ಹಾಪಾ' ಅಂತ ಸ್ವಲ್ಪ ಜೋರ ಕೂಗಿ ನೋಡ್ರೀ. ಭಾಳ ಜೋರ ಒದರೋದು ಏನೂ ಬ್ಯಾಡ. ಧಾರವಾಡ ಅಥವಾ ಉತ್ತರ ಕರ್ನಾಟಕದ ಮಂದಿ ಜರೂರ ತಿರುಗಿ ನೋಡ್ತಾರ. ತಿರುಗಿ ನೋಡದಿದ್ದವರು ಯಾರೋ ಬ್ಯಾರೆ ಕಡೆಯಿಂದ ಬಂದಿರುವ ವಲಸಿಗ ಪರದೇಸಿಗಳು ಅಂತ ತಿಳಕೋಬಹುದು.

ತಿರುಗಿ ನೋಡಿದವರು, ಇವನಾಪನಾ, ಯಾರಿಗೆ ಹಾಪ್ ಅಂದಲೇ ಇವ ಹಾಪ್ಸೂಳಿಮಗ? ನಮ್ಮ ದೋಸ್ತ ಇರಬೇಕು, ಅಂತ ಅನಕೋತ್ತ ನಿಮ್ಮಲ್ಲಿ ಇರಬಹುದಾದ ಅಥವಾ ಇಲ್ಲದಿರಬಹುದಾದ ದೋಸ್ತನ್ನ ಹುಡಕಿಕೊಂಡು ಬಂದೇ ಬಿಡ್ತಾರ. ಅದು ಅಲ್ಲಿಯ ಮಣ್ಣಿನ ಗುಣ. ಮತ್ತ ಅವರ ದೊಡ್ಡ ಗುಣ. ಆಮ್ಯಾಲೆ ನೀವು ಯಾರಿಗೆ ಹಾಪ್ ಅಂದಿದ್ದು ಅಂತ ವಿವರಣೆ, ಸಮರ್ಥನೆ ಮತ್ತೊಂದು ನೀಡೋದು ನಿಮ್ಮ ಕೆಲಸ.

ಆವಾ ನನಗ ಹಾಪ್ ಅಂದಲೇ! ಅಂತ ಒಬ್ಬ ಅಂದರೆ, ಏ ಇಲ್ಲೋ ಮಂಗ್ಯಾನ್ ಕೆ, ಅವಾ ನಮ್ಮ ದೋಸ್ತ, ನನಗ ಹಾಪ್ ಅಂದಾನ, ಹೌದಿಲ್ಲರೀ ಸರ್ರಾ?, ಅಂತ ಇನ್ನೊಬ್ಬ. ಹಾಪಾ ಅನ್ನಿಸಿಕೊಳ್ಳಲು ಜಗಳ ಅವರಲ್ಲೇ ಶುರು ಆದರೂ ಆಶ್ಚರ್ಯ ಇಲ್ಲ. ಅದನ್ನೂ ನೀವೇ ಬಗೆಹರಿಸಬೇಕು.

ಆತ್ಮೀಯರಿಗೆ ಹಾಪ್, ಹಾಪಾ ಅನ್ನೋದು, ಆತ್ಮೀಯರ ಕಡೆ ಏ ಹಾಪ್, ಲೇ ಹಾಪಾ, ಅಂತ ಅನ್ನಿಸಿಕೊಳ್ಳೋದ್ರೋಗ ಇರೋ ಸುಖ ಅಂದವರಿಗೆ ಮತ್ತ ಅನ್ನಿಸಿಕೊಂಡವರಿಗೇ ಗೊತ್ತು. ಅದೇ ಹಾಪಾನಂದ. ಬ್ರಹ್ಮಾನಂದ, ಸಚ್ಚಿದಾನಂದ ಮತ್ತೊಂದು ಮಗದೊಂದು ಆನಂದ ಇದ್ದಂಗ. ಅವೆಲ್ಲ ಆನಂದಗಳ ಚರಸೀಮೆ ಮೀರಿದ ಆನಂದ ಈ ಹಾಪಾನಂದ!

ಹಾಪ್ ಅನ್ನುವ ಪದದ ಗಮ್ಮತ್ತ ಅದು.

ಇಂಗ್ಲೀಷ 'half' ನಿಂದ ಉದ್ಭವ ಆಗಿದ್ದರೂ ಧಾರವಾಡ ಕಡೆ ಹಾಪ್ ಅನ್ನೋ ಶಬ್ದ ಇಷ್ಟು ಸೃಜನಾತ್ಮಕ ಆಗಿ ಬಿಟ್ಟದ ಅಂದ್ರೆ ಈ ಹಾಪ್ ಅನ್ನೋ versatile ಪದವನ್ನು ಎಲ್ಲಿ ಹಾಕಿ, ಏನು ಮಾಡಿ, ಒಂದು ವಿಶಿಷ್ಟ ಮಾತು ಆಡಲಿ ಅಂತ ನಾವು ಧಾರವಾಡ ಮಂದಿ ಕಾದುಕೊಂಡು ಇರ್ತೇವಿ.

ಮೊದಲು ಬರೇ ಹಾಪ್ ಮ್ಯಾಡ್ ಗೆ ಶಾರ್ಟಾಗಿ ಹಾಪ್ ಅಂತಿದ್ರೋ ಏನೋ? ಈಗಂತೂ ಎಲ್ಲದೂ ಹಾಪ್. ಹಾಪ್ ಚಹಾ, ಹಾಪ್ ಪ್ಯಾಂಟ್, ಹಾಪ್ ಸೀರಿ, ಹಾಪ್ ನಮಸ್ಕಾರ, ಏನೇನೋ. ಒಟ್ಟಿನ್ಯಾಗ ಸರ್ವಂ ಹಾಪಮಯಂ.ಎಲ್ಲೆಲ್ಲಿ half ಉಪಯೋಗಿಸಬಹುದೋ ಅಲ್ಲೆಲ್ಲಾ ಹಾಪ್ ಚಲ್ತಾ ಹೈ. ಚಲ್ತಾ ಹೈ ಕ್ಯಾ ಭಾಯಿ ದೌಡತಾ ಹೈ!

ಹಾಪ್ ಛಾ! - ಹಾಪ್ ಛಾ ಅಂದ್ರ ಒಂದು ಚಹಾ ತೊಗೊಂಡು ಎರಡು ಕಪ್ಪಿನೊಳಗ ಬೈ ಟೂ ಮಾಡಿ ಕುಡಿಯೋದು ಅಲ್ಲ. ಧಾರವಾಡ ಕಡೆ ಹಾಪ್ ಛಾ ಅಂತ ಕೇಳಿದ್ರ ಹಾಪೇ ಕಪ್ ಛಾ ಕೊಟ್ಟು, ತೊಗೊಳ್ಳರೀ ಸರ್ರಾ, ಅಂತ ಹೇಳ್ತಾರ. ಇದರ ಮ್ಯಾಲೆ ಬೈ ಟೂ ಛಾ, ತ್ರೀ ಬೈ ಫೈವ್ ಛಾ ಎಲ್ಲಾ ಬ್ಯಾರೆ ಮತ್ತ.

ನಮ್ಮ ಅತ್ಯಂತ ಪ್ರೀತಿ(?) ಬೈಗುಳ ಅಂದ್ರ ಹೃದಯಾಳದಿಂದ ಬರುವ 'ಸೂಳಿಮಗನss'. ಸೂಳೆಮಗ ಅಲ್ಲ ಮತ್ತ. ಎರಡೂ ಬ್ಯಾರೆ ಬ್ಯಾರೆ. ಸೂಳೆಮಗ ಅಂದ್ರ ಕೆಟ್ಟ ಬೈಗಳ. ಅದು ವಿಷಪೂರಿತ ನಾಗರಹಾವು ಇದ್ದಂಗ. ಅದss ಸೂಳಿಮಗ ಅನ್ನೋದು ಹಲ್ಲು ಕಿತ್ತಿದ ನಾಗರಹಾವು. ಏಕ್ದಂ ಸೇಫ್ ಮತ್ತ ಆಡಲಿಕ್ಕೆ ಅಂದ್ರ ಪುಂಗಿ ಊದಿ ಆಡಲಿಕ್ಕೆ ಮಸ್ತ. ಹೇಳೋ ಧಾಟಿ, ಯಾರಿಗೆ ಯಾರು ಯಾವ ಸಂದರ್ಭದಲ್ಲಿ ಹೇಳ್ತಾರ ಅನ್ನೋದು ಸಹ ಇಂಪಾರ್ಟೆಂಟ್. ಜೀವದ ಆಶಾ ಇದ್ದವರು ಯಾರೂ ಸೂಳೆಮಗ ಅಂತ ಯಾರಿಗೂ ಅನ್ನೋದಿಲ್ಲ. ಸೂಳಿಮಗನss ಅಂತ ಎಳದೆಳದು, ತರೇವಾರಿ ರೀತಿಯೊಳಗ ಹೇಳಿದ್ರ ಮಂದಿ ಹ್ಯಾಂಗ ಆನಂದ ಪಡ್ತಾರೋ ಅದೇ ರೀತಿ ಖರೆ ಅರ್ಥದೊಳಗ ತಾಯಿಗೆ ಬಯ್ಯೋ ಹಾಂಗ ಸೂಳೆಮಗನ ಅಂದು ಬಿಟ್ಟರ ಹೆಣಾ ಹಾಕಲಿಕ್ಕೂ ರೆಡಿ ಧಾರವಾಡ ಮಂದಿ. ಕಾರಣ - ಮತ್ತ ಅದೇ ಮಣ್ಣಿನ ಗುಣ. ಅವರ ಗುಣ.

ಹೀಂಗ ಸೂಳಿಮಗನss ಅನ್ನೋ ಅಪ್ಯಾಯಮಾನ ಪದಕ್ಕ ಹಿಂದೆ ಮಸ್ತ ಹೊಂದಲಿ ಅಂತ ಬೇರೆ ಬೇರೆ ವಿಶೇಷಣಗಳನ್ನು ಸೇರಸ್ತೇವಿ. ಯಾರಿಗೆ ಹೇಳಬೇಕು, ಅವರ ಜೊತಿ ಎಷ್ಟು ಆತ್ಮೀಯತೆ ಇರ್ತದ ಅದರ ಮ್ಯಾಲೆ ಅದು ಡಿಪೆಂಡ್. ಏನ್ರೀ!

ಮಂಗ್ಯಾ, ಮಳ್ಳ, ಹುಚ್ಚ, ಕಳ್ಳ, ಹಾಪಾ, ಕುಡ್ಡ, ಕೆಪ್ಪ, ಢಬ್ಬ, ಕೊಳಕ, ಮಬ್ಬ, ದರಿದ್ರ ಇತ್ಯಾದಿ ಇತ್ಯಾದಿ. ಇವು ಸೂಳಿಮಗನ ಜೋಡಿ ಮಸ್ತ ಹೋಗ್ತಾವ. ಚಹಾದ ಜೋಡಿ ಚೂಡಾದಂಗ. ಈ ಸೂಳಿಮಗ ಅನ್ನೋದು ಒಂದು ತರಹದ ಸೋಡಾ ಇದ್ದಂಗ. ವಿಸ್ಕಿ, ಬ್ರಾಂಡಿ, ರಮ್, ಕಂಟ್ರಿ ಶೆರೆ ಯಾವದರ ಜೋಡಿ ಬೇಕು ಅದರ ಜೋಡಿ ಹಾಕ್ಕೊಂಡು ಎತ್ತಿ ಬಿಡ್ರೀ. ಮಸ್ತ ಇರ್ತದ. ಬರೆ ಹಾಂಗss ಬೇಕಾರೂ ಕುಡೀರಿ. ನೋ ಪ್ರಾಬ್ಲೆಮ್.

ಹಾಪ್ಸೂಳಿಮಗನ = ಹಾಪ್ + ಸೂಳಿಮಗನ. ಯಾವ ಸಂಧಿನೋ ಏನೋ?

ಹಾಪ್ಸೂಳಿಮಗನ ಭಾಳ ಸಲ ಉಪಯೋಗಂತೂ ಆಗ್ತದ. ದೋಸ್ತನ ಡುಬ್ಬದ ಮ್ಯಾಲೆ ಒಂದು ಗುದ್ದಿ, ಪ್ರೀತಿಯಿಂದ,  ಬಾಟಮ್ ಆಫ್ ದಿ ಹಾರ್ಟ್  ನಿಂದ, ದೋಸ್ತಾss! ಏನ್ ಮಸ್ತ ಹಾಪ್ಸೂಳಿಮಗ ಇದ್ದೀ ಮಾರಾಯಾ!!!ಭಾಳ ಥ್ಯಾಂಕ್ಸ್!!! ಅಂದ್ರ  ಆವಾ ತಿರುಗಿ  ನಿಮಗ,  ಏನ್ ಮಂಗ್ಯಾಸೂಳಿಮಗ ಇದ್ದೀಲೆ? ದೋಸ್ತ ಅಂತೀ. ಅದರ ಮ್ಯಾಲಿಂದ ಥ್ಯಾಂಕ್ಸ್ ಬ್ಯಾರೆ. ದೋಸ್ತರ ನಡು ಅದು ಯಾಕಲೇ? ಹುಸ್ಸೂಳಿಮಗನss (ಹುಚ್ಚ ಸೂಳಿಮಗನ), ಅಂತ ದೋಸ್ತ ಹುಸಿಮುನಿಸು ತೋರಿಸಿ ವಾಪಸ್ ಬೆನ್ನ ಮ್ಯಾಲೆ ಗುದ್ದಿ, ನೀವು ಒಂದು ಸೂಳಿಮಗ ಅಂದ್ರ ಅವಾ ಎರಡು ಸೂಳಿಮಗ ಅಂತ ಹೃದಯಾಳದಿಂದ ತೆಗೆದು ಬಡ್ಡೀ ಸಮೇತ ಕೊಟ್ಟು ಬಿಡ್ತಾನ. ನಂತರ ಇಬ್ಬರೂ ಕೂಡಿ ಒಂದೊಂದು ಹಾಪ್ ಛಾ ಕುಡದು ಬ್ಯಾರೆ ಎಲ್ಲಾ ಮಂದಿ ಬಗ್ಗೆ ಮಾತಾಡಿಕೋತ್ತ ಮೇಲೆ ಹೇಳಿದ ಮತ್ತು ಇನ್ನೂ ಹಲವು ಶಬ್ದಗಳನ್ನ ಸೂಳಿಮಗನ ಹಿಂದೆ ಹಚ್ಚಿ ಮಜಾ ಮಾಡಬಹುದು. ಅದಕ್ಕೇನೂ ಲಿಮಿಟ್ ಇಲ್ಲೇ ಇಲ್ಲ.

ನಮ್ಮ ಕಡೆ ಹುಡುಗುರ ನಿಕ್ಕರ್ ಅನ್ನೋ ಶಬ್ದಕ್ಕ ಸ್ವಚ್ಚ ಸಮಾನಾರ್ಥಕ ಶಬ್ದ ಅಂದ್ರ ಚೊಣ್ಣ. ಚಡ್ಡಿ ಬ್ಯಾರೆ. ಅದು ಅಂದರ ಕೀ ಬಾತ್ ಹೈ ಅನ್ನೋ ಹಾಂಗ ಅದು ಅಂಡರ್ವೇರ್. ಚೊಣ್ಣ ಅಂದ್ರ ಬೆಂಗಳೂರು ಮಂದಿ ಅನ್ನೋ ನಿಕ್ಕರ್. ಏನ್ ನಿಕ್ಕರೋ ಏನ್ ಕುಕ್ಕರೋ? ಅವರಿಗೇ ಗೊತ್ತು. ಆದರೂ ಧಾರವಾಡ ಕಡೆ ಇದ್ದಿದರಲ್ಲೇ sophisticated ಅಂತ ಇದ್ದವರು, ಅಥವಾ ಇದ್ದೇವಿ ಅಂತ ತೋರಿಸ್ಕೊಬೇಕು ಅನ್ನವರು 'ಹಾಪ್ ಪ್ಯಾಂಟ್' ಅಂತ ಚೊಣ್ಣಕ್ಕ ಹೆಸರು ಇಟ್ಟು ಬಿಟ್ಟಾರ. ಶಾರ್ಟ್ಸ್ ಅಂತ ಆವಾಗಂತೂ ಅಂತಿರಿಲಿಲ್ಲ. ಈಗ ಏನೋ ಗೊತ್ತಿಲ್ಲ.

ಈ ನಿಕ್ಕರ್ ಮತ್ತ ಚೊಣ್ಣ ಉರ್ಫ್ ಹಾಪ್ ಪ್ಯಾಂಟ್ ಇಷ್ಟು confusion ತಂದು ಇಡ್ತದ ಅಂದ್ರ......

ಒಮ್ಮೆ ಎರಡನೆತ್ತಾನೋ ಮೂರ್ನೆತ್ತಾನೋ ಇದ್ದಾಗ ಬೆಂಗಳೂರು ಕಡಿಯಿಂದ transfer ಆಗಿ ಒಂದು ಹುಡುಗ ನಮ್ಮ ಕ್ಲಾಸಿಗೆ ಬಂದ. ನಮ್ಮ ಕ್ಲಾಸ್ ಮಾಸ್ತರ್ ಮತ್ತ ಆ ಹುಡುಗನ ಅವ್ವನ ನಡುವೆ ನಡದ ಸಂಭಾಷಣೆ ಕೇಳ್ರೀ.

ನಮಸ್ಕಾರ ಸಾssರ್!, ಅಂತ ಬೆಂಗಳೂರ ಭಾಷಾ ಒಳಗ ಉಲಿದಳು ತಾಯಿ.

ಸರ್ ಅನೋದನ್ನ ಆ ಪರಿ ಸಾರ ಮಾಡಿ ಎಳೆದಿದ್ದು ನೋಡಿ ನಮ್ಮ ಮಾಸ್ತರಿಗೆ ಊಟ ಮಾಡಿ ಬಂದ ಸಾರಿನ ನೆನಪಾಗಿರಬೆಕು. ನಮ್ಮ ಸರ್ ಕೈ ಮೂಸಿ ನೋಡಿಕೊಂಡರು. ಧಾರವಾಡ ಬ್ರಾಹ್ಮಣರ ಸಾರು ಭಾಳ ಮಸ್ತ ವಾಸನಿ ಇರ್ತದ. ಸರ್ ಮಾತ್ರ ಊಟ ಮಾಡಿ ಬಂದಿರಬೇಕು. ಇಕಿ ಆ ಪರಿ ಸಾರ್ ಅಂತ ಎಳೆದು ಹೇಳಿದ್ದು ಕೇಳಿ ಸರ್ ಗೆ ಮನಿಯೊಳಗ  ಮಾಡಿದ ಸಾರಿನ ನೆನಪಾಗಿ ಖಮ್ಮನೆ ಒಂದು ಸರೆ ಮೂಸಿ ಮನಿ ಸಾರಿನ ಸುವಾಸಿನಿ ನೋಡಿಕೊಂಡು ಬಿಡೋಣ ಅನ್ನಿಸಿರಬೇಕು. ನೋಡಿಕೊಂಡೇ ಬಿಟ್ಟರು.

ಸಾರಿನ ವಾಸನಿ ಮಸ್ತ ಎಂಜಾಯ್ ಮಾಡಿದ ಸರ್, ನಮಸ್ಕಾರ್ರೀ, ಹೇಳ್ರೀ. ಏನಾಗಬೇಕಿತ್ತು? - ಅಂತ ಕೇಳಿದರು.

ಸಾರ್ ಸ್ಕೂಲ್ ಯುನಿಫಾರ್ಮ್ ಏನು ಸಾರ್? - ಅಂತ ಅಕಿ ಕೇಳಿದಳು. ಮಗನ್ನ ಸಾಲಿಗೆ ಅಂತೂ ಹಾಕಿ ಆತು. ಇನ್ನು ಎರಡ  ಜೋಡಿ ಯುನಿಫಾರ್ಮ್ ಕೊಡಸಿ ಒಗದು ಬಿಟ್ಟರ ಮುಗೀತ ನೋಡ್ರೀ.

ಯುನಿಫಾರ್ಮ್ ರೀ? ಅದರೀ.... ನೀಲಿ ಚೊಣ್ಣ, ಬಿಳೆ ಅಂಗಿ. ಎಲ್ಲಾರೂ ಹಾಕಿಕೊಂಡು ಕೂತಾರ ನೋಡ್ರೀ, ಅಂತ ಚೊಣ್ಣಾ ಹಾಕಿಕೊಂಡು ಚೊಣ್ಣಾ ಹಜಾರೆ ಹಾಗೆ ಕುಳಿತಿದ್ದ ಶಿಷ್ಯರನ್ನು ತೋರಿಸಿದರು ಸರ್.

ಆ ತಾಯಿಗೆ ಅದು ಯಾಕ ತಿಳಿಳಿಲ್ಲೋ ಏನೋ ಅನ್ನೋದು ನಮಗ ಇವತ್ತಿಗೂ ತಿಳಿದಿಲ್ಲ. ತಿಳಿದರೂ ಡಬಲ್ ಖಾತ್ರಿ  ಮಾಡಿಕೊಳ್ಳೋಣ ಅಂತ ಸರ್ ಜೊತಿ ಮಾತು ಮುಂದುವರ್ಸಿದಳೋ ಏನೋ? ಯಾರಿಗೆ ಗೊತ್ತ?

ಚೊಣ್ಣಾ ಅಂದ್ರೆ? ನಿಕ್ಕರ್ ಅಂತಾನಾ ಸಾರ್? - ಅಂತ ಮತ್ತ ರಾಗಾ ಎಳೆದಳು ಬೆಂಗಳೂರು ಕನ್ನಡ ತಾಯಿ.

ನಮ್ಮ ಸರ್ ಗೆ ನಿಕ್ಕರ್ ಅಂದ್ರ ಅವರ ಮನಿ ದೇವರಾಣಿಗೂ ಏನು ಅಂತ ತಿಳಿದಿಲ್ಲ. ತಾಪಡ್ತೋಪ್ ಏನೋ ಒಂದು ವಿಚಾರ ಮಾಡಿ ಕೌಂಟರ್ ಪಾಯಿಂಟ್ ಒಗೆದೇ ಬಿಟ್ಟರು ಸರ್!

ಏನ್ರೀ? ಕುಕ್ಕರ್ ರೀ? ಏ ಕುಕ್ಕರ್ ಗಿಕ್ಕರ್ ಬ್ಯಾಡ್ರೀ. ನಾವೇನು ಇಲ್ಲೆ ಅಡಿಗಿ ಪಡಿಗಿ ಮಾಡೋ ಸಾಲಿ ಇಟ್ಟಿಲ್ಲ. ಡಬ್ಬಿಗೆ ಮಸ್ತ ಊಟ ಹಾಕಿ ಕಳಿಸಿ ಬಿಡ್ರೀ. ನೀವು ಕುಕ್ಕರ್ ಕೊಟ್ಟು, ಇವಾ ಮಂಗ್ಯಾನ್ ಕೆ ನಡು ಸೂಟಿ ಬಿಟ್ಟಾಗ ಅಡಿಗಿ ಮಾಡಲಿಕ್ಕೆ ಹೋಗಿ, ಢಮ್ ಅನ್ನಿಸಿ, ಅವೆಲ್ಲಾ ಬ್ಯಾಡ. ಹುಡುಗ್ಗ ನೀಲಿ ಚೊಣ್ಣ ಬಿಳಿ ಅಂಗಿ ಹಾಕಿ, ತಲಿಗೆ ಒಂದಿಷ್ಟು ಎಣ್ಣಿ ತಟ್ಟಿ ಕಳಿಸಿ ಬಿಡ್ರೀ. ಬಿಸಿಲು ಭಾಳ ನೋಡ್ರೀ. ಎಣ್ಣಿ ಇದ್ದರ ನೆತ್ತಿ ತಂಪ ಇರ್ತದ ಹುಡಗಂದು, ಅಂತ ಸರ್ ಏನೇನೋ ಹೇಳಿ ಆ ಬೆಂಗಳೂರು ಮಾತೆಯನ್ನು ಮತ್ತೂ confuse ಮಾಡಿ ಬಿಟ್ಟರು.

ಅಕಿಗೆ ಒಟ್ಟ ಯುನಿಫಾರ್ಮ್ ಏನು ಅಂತ ಖಾತ್ರಿ ಮಾಡಿಕೋಬೇಕು. ಮೊದಲೇ ಧಾರವಾಡ ಒಳಗ ಎಲ್ಲಾ ಅರವೀ ಅಂಗಡಿಯೋರು, 'ಒಮ್ಮೆ ಮಾರಿದ ಮಾಲನ್ನು ವಾಪಸ್ ತೆಗೆದುಕೊಳ್ಳಲಾಗುವದಿಲ್ಲ', ಅಂತ ರಸೀತಿ ಮ್ಯಾಲೆ ಢಾಳ್ ಆಗಿ ರಬ್ಬನೆ ಅಕ್ಷರ ಒಳಗ ಪ್ರಿಂಟ್ ಹಾಕಿಸಿಬಿಟ್ಟಿರತಾರ. ಹಾಂಗಾಗಿ ಅಕಿದೇನೂ ತಪ್ಪಿಲ್ಲ. ನಮ್ಮ ಸರ್ ಏನೋ ಹೇಳೋದು, ಇಕಿ ಹೋಗಿ ಮಗಂಗ ಏನೋ ಬ್ಯಾರೆನೇ ಯುನಿಫಾರ್ಮ್ ತೊಗೊಳ್ಳೋದು, ಅದನ್ನ ನೋಡಿ ನಮ್ಮ ಸರ್ರ್, ಏ ಇದು ನಮ್ಮ ಸಾಲಿ ಯುನಿಫಾರ್ಮ್ ಅಲ್ಲರೀ, ಇದು ಎಮ್ಮಿಕೇರಿ ಸಾಲಿ ಯುನಿಫಾರ್ಮ್, ನಿಮ್ಮ ಹುಡಗನ್ನ ಎಮ್ಮಿಕೇರಿ ಸಾಲಿಗೇ ಸೇರಸರೀ. ಟೀಸಿ (TC = transfer certificate) ತೆಗಿಸಿ ಕೊಟ್ಟು ಬಿಡಲೇನು? ತೊಗೊಂಡು ಹಾಳಾಗಿ ಹೋಗ್ರೀ, ಅಂತ ಆವಾಜ್ ಹಾಕಿ, ರಾಮಾ ರಾಮಾ.....ಬ್ಯಾಡಪ್ಪೋ ಬ್ಯಾಡ್ ಅವೆಲ್ಲ ತಲಿಸೂಲಿ.

ಅಕಿ ಹೇಳಿ ಕೇಳಿ ಬೆಂಗಳೂರು ಮಾತೆ. ಆ ಮಾತೆ ಮತ್ತೊಂದು ಸ್ಕೀಮ್ ಹಾಕಿದಳು.

ಚೊಣ್ಣ ಅಂದ್ರೆ ಚಡ್ಡೀನಾ ಸಾರ್? - ಅಂತ ಮತ್ತ ರಾಗಾ ಎಳೆದಳು. ಬೆಂಗಳೂರು ಕಡೆ ಕನ್ನಡ ಮತ್ತ ಸಾಮಾನ್ಯ ಕನ್ನಡ ಒಳಗ ಚಡ್ಡೀ ಅಂತನ ಅಂತಾರ. ಆದ್ರ ನಾವು ಧಾರವಾಡ ಮಂದಿ ಚೊಣ್ಣ ಅಂದ್ರ ಹೊರಗಿಂದು ಚಡ್ಡಿ ಅಂದ್ರ ಒಳಗಿಂದು ಅಂತ ಬ್ಯಾರೆ ಬ್ಯಾರೆ ಮಾಡಿ ಇಟ್ಟುಗೊಂಡು ಬಿಟ್ಟೇವಿ.

ಇಷ್ಟು ಸಣ್ಣ ಹುಡಗ್ಗ ನೀವು ಚಡ್ಡೀ ಬ್ಯಾರೆ ಹಾಕಿ ಕಳಸವ್ರು ಇದ್ದೀರಿ ಏನು? ನಿಮ್ಮ ಮರ್ಜೀ. ಯಾರೂ ಇಲ್ಲೇ ಎರ್ಡ್ಮೂನೆತ್ತಕ್ಕೆಲ್ಲಾ ಒಳಗ ಚಡ್ಡಿ ಮತ್ತೊಂದು ಹಾಕಿಕೊಂಡು ಬರೋದಿಲ್ಲ. ಅವೆಲ್ಲಾ ದೊಡ್ಡ ಕನ್ನಡ ಸಾಲಿ ಅಂದ್ರ ಐದನೇತ್ತಾ ಮ್ಯಾಲೆ. ಇಷ್ಟ ಲಗೂ ಯಾಕ ಬಿಡ್ರೀ ಚಡ್ಡಿ. ಸ್ವಲ್ಪ ಹವಾ ಆಡಿ ಚೋಲೋತ್ನಾಗಿ ಬೆಳೀಲಿ ಬಿಡ್ರೀ. ಅಂದ್ರ ಹುಡುಗಾ ಚೋಲೋತ್ನಾಗಿ ಬೆಳೀಲಿ ಅಂತರೀ. ತಪ್ಪು ತಿಳ್ಕೊಬ್ಯಾಡ್ರೀ. ಅದಕ್ಕss ನಾವು ಬೂಟು ಸಹಿತ ಬ್ಯಾಡ ಅಂತ ಹೇಳಿ ಬಿಟ್ಟೇವಿ. ಎಲ್ಲಾ ಟೈಟ್ ಟೈಟ್ ಚಡ್ಡಿ ಬೂಟು ಮತ್ತೊಂದು ಹಾಕಿಕೊಂಡು ಏಳೆಂಟ ತಾಸು ಸಾಲಿಯೊಳಗ ಇದ್ದರ ಸಣ್ಣ ಹುಡುಗುರು ದೊಡ್ಡವರು ಆಗೋದು ಹ್ಯಾಂಗ್ರೀ? ಹೇಳ್ರೀ ನೀವss, ಅಂತ ಸರ್ ಹೇಳಿ ಬಿಡಬೇಕಾ!!!! ಫುಲ್ ಉದ್ರೀ ಉಪದೇಶ!

ಬೆಂಗಳೂರು ಮಾತೆ ಮತ್ತೂ confuse ಆದರು. ಚೊಣ್ಣ ಅಂದ್ರೆ ಚಡ್ಡೀನೋ ಅಂತ ಕೇಳಿದರೆ ಸಾರ್ ಚಡ್ಡಿ optional ಅಂತಾರೆ! ಎಲ್ಲೇ ನಾಳಿಂದ ಅಕಿ ಮಗನ್ನ ಮಿನಿ ಹಾಪ್ ಗೋಮಟೇಶ್ವರ ಮಾಡಿ ಸಾಲಿಗೆ ಕಳಿಸಬೇಕಾದೀತೇನೋ ಅಂತ ಅಕಿ ಚಿಂತಿ. ಚಡ್ಡಿ ಬೇಕಂತಿಲ್ಲ ಅಂದ ಮ್ಯಾಲೆ ಬರೆ ಅಂಗಿ ಒಂದೇ ಹಾಕಿ ಕಳಿಸಿ ಬಿಟ್ಟರೆ ಗಳಗಂಟೆ ದಾಸಯ್ಯನ ಸ್ಟೈಲ್ ಒಳಗ ಕೆಳಗ ಗಂಟಿ ಬಾರಿಸಿಕೋತ್ತ ಹಾಪ್ ಗೋಮಟೇಶ್ವರ ಸಾಲಿಗೆ ಹಾಜರ್!

ಅಕಿ ಬೆಂಗಳೂರಿನ್ಯಾಕಿ ಭಾಳ ಶಾಣ್ಯಾ ಇದ್ದಳು. ಆ ಮಾತೆ ಮತ್ತೂ ಒಂದು ಸ್ಕೀಮ್ ಹಾಕಿದಳು

ಸಾರ್ ಚೊಣ್ಣ ಅಂದ್ರೆ 'ಹಾಪ್ ಪ್ಯಾಂಟ್' ಏನು ಸಾರ್? - ಅಂತ ಕೇಳಿದರು.

ನಮ್ಮ ಸರ್ ಗೆ ಈಗ ತಲಿ ಕೆಡಲಿಕತ್ತಿತ್ತು. ಬ್ಯಾರೆ ಯಾರರೆ ಆಗಿದ್ರ ಇಷ್ಟೊತ್ತಿನ್ಯಾಗ ಪ್ಯಾಟಿಗೆ ಹೋಗಿ, ಯುನಿಫಾರ್ಮ್ ಕೂಡ ಖರೀದಿ ಮಾಡಿ ತಂದು, ಹುಡುಗ ಹಾಕಿಕೊಂಡು ಬಂದಿದ್ದ  ಬಣ್ಣದ ಅರವೀ ಅಲ್ಲೇ ಸಾಲಿ ಒಳಗ ಎಲ್ಲಾರ ಮುಂದನss ಕಳದು (ಬಿಚ್ಚಿ), ಹುಡುಗ್ಗ ಯುನಿಫಾರ್ಮ್ ಹಾಕಿಸಿ ಹೋಗಿ ಬಿಡತಿದ್ದರು. ಇಕಿ ನೋಡಿದ್ರ ಇನ್ನೂ ಚೊಣ್ಣ ಅಂದ್ರೇನು ಚಡ್ಡಿ ಅಂದ್ರೇನು ಅಂತ ಕೇಳಿಕೋತ್ತ ಕೂತಾಳ. ಎಂತಾ ಅವ್ವಾ ಇಕಿ? ಎಂತೆಂತಾ ಹಾಪ್ ಮಂದಿಗೆ ಅಡ್ಮಿಶನ್ ಕೊಡ್ತಾರಪಾ ನಮ್ಮ ತಲಿ ಇಲ್ಲದ ಹೆಡ್(?) ಮಾಸ್ತರು ಅಂತ ಸರ್ ಪೇಚಾಡಿಕೊಂಡರು.

ನೋಡ್ರೀ..... ನೀವು ಫುಲ್ ಪ್ಯಾಂಟ್ ಹೊಲಿಸಿ ಅದನ್ನ ಹಾಪ್ ಮಾಡಿಸಿ ಚೊಣ್ಣ ಮಾಡಿ ಹಾಕಿಸಿ ಕಳಿಸಿದರೂ ಏನೂ ತೊಂದ್ರೀ ಇಲ್ಲರೀ. ಒಟ್ಟಿನ್ಯಾಗ ನೀಲಿ ಚೊಣ್ಣ ಬಿಳೆ ಅಂಗಿ ಯುನಿಫಾರ್ಮ್ ಹಾಕಿಸಿ ಕಳಸರೀ. ತಿಳೀತರೀ? ನಾ ಹೋಗಬೇಕರೀ ಈಗ. ನೋಡ್ರೀ ಎಷ್ಟು ದಾಂಧಲೆ ಹಾಕ್ಲೀಕತ್ತಾರ ಮಂಗ್ಯಾನ ಮಕ್ಕಳು, ಅಂತ ಅಂದವರೇ ಗದ್ದಲ ಹಾಕುತ್ತಿದ್ದ ಹುಡಗರ ಕಡೆ ಕೆಕ್ಕರಿಸಿ ನೋಡಿದರು ಸರ್. ಒಬ್ಬ ಕಿಸಕ್ ಅಂತ ನಕ್ಕ.  ಸರ್ ಬೀಪಿ ಏರಿ ಹೋಯಿತು. ದಡಬಡ ಹೋದವರೇ ಅವನ್ನ ಎಳಕೊಂಡು ಬಂದು ಆ ಬೆಂಗಳೂರು ಮಾತೆಯ ಮುಂದೆಯೇ ದನ ಬಡದಾಂಗ ಬಡಿದು, ಹ್ಯಾಂಗ? ಅನ್ನೋ ಲುಕ್ ಬ್ಯಾರೆ ಕೊಟ್ಟರು. ಹೀಂಗ ಬಡಿಲಿಲ್ಲ ಅಂದ್ರ ಈ ಮಂಗ್ಯಾನಮಕ್ಕಳು ಸುಧಾರಿಸದೋದಿಲ್ಲ ಬಿಡ್ರೀ, ಅಂತ ಡೈಲಾಗ್ ಬ್ಯಾರೆ. ತನ್ನ ಮಗನೂ ಸಹಿತ ಅವರೆಲ್ಲರ ಮಧ್ಯೆ 'ಮಂಗ್ಯಾನಮಗ'ನಾಗಿ,  ಧಾರವಾಡಕ್ಕೆ ಬಂದು ಮಂಗ್ಯಾನ ಮಗನನ್ನು ಹಡೆದ ತಪ್ಪಿಗೆ ತಾನೂ ಮಂಗ್ಯಾ ಆದೆ ಅನ್ನೋ ಫೀಲಿಂಗ್ ಒಳಗೆ ಬೆಂಗಳೂರು ಮಾತೆ ಜಗಾ ಖಾಲಿ ಮಾಡಿದಳು. ಮಂಗಾ ಆಗೋದು ಎಷ್ಟು ಸುಲಭ ಧಾರವಾಡನಲ್ಲಿ ಗೊತ್ತಾ!? ಅಂತ ತನ್ನ ಬೆಂಗಳೂರು ಕನ್ನಡ ಒಳಗ ಡಂಗುರಾ ಹೊಡದಿರಬೇಕು ಆಮ್ಯಾಲೆ ಅಕಿ.

ಹಾಪ್ ಪ್ಯಾಂಟ್ ವಿಷಯದಿಂದ ಹಾಪ್ ಆಗಿದ್ದು ಹೀಗೆ.

ಸಿಂಪಲ್ ನೀಲಿ ಚೊಣ್ಣಾ ಮತ್ತ ಸ್ಯಾಂಪಲ್ ಚೊಣ್ಣಾ ಹಜಾರೆ ತರಹದ ಹುಡುಗ
ನಾವು ಧಾರವಾಡ ಮಂದಿ ನಮಸ್ಕಾರ ಮಾಡೋದನ್ನೂ ಸಹಿತ ಹಾಪ್ ಮಾಡಿ 'ಹಾಪ್ ನಮಸ್ಕಾರ' ಅಂತ ಒಂದು ಹೊಸ ರೀತಿಯ ನಮಸ್ತೆ ಅನ್ನೋದನ್ನ ಕಂಡು ಹಿಡಿದು ಬಿಟ್ಟೇವಿ. 'ಹಾಪ್ ನಮಸ್ಕಾರ' ಒಳಗೂ ಬೇರೆ ಬೇರೆ ತರಹದ ಹಾಪ್ ನಮಸ್ಕಾರ ಇರ್ತಾವ. ಅದಕ್ಕೊಂದು elaborate military salute manual ಹಾಂಗ 'ಹಾಪ್ ನಮಸ್ಕಾರ' manual ಅಂತ ಬರೀಬಹುದು.

ನಮಸ್ಕಾರ್ರೀ ಸರ್ರಾ, ಅಂದು ಬಲಗೈ ಒಂದss ಎತ್ತಿ, ಎದಿ ನಟ್ಟ ನಡು ಹಿಡದು, ಸ್ವಲ್ಪ ತಗ್ಗಿ ಬಗ್ಗಿ ಮಾಡಿಬಿಟ್ಟರೆ 'ಹಾಪ್ ನಮಸ್ಕಾರ' ಮಾಡಿದಂಗ. ನಮಸ್ಕಾರ ಮಾಡಿಸ್ಕೊಂಡವರು ನಿಮಗಿಂತ ದೊಡ್ಡವರು, ಮಾಸ್ತರ್, ಟೀಚರ್ ಮಂದಿ ಇದ್ದರ ಅವರೂ ಸಹಿತ ತಮ್ಮ ಬಲಗೈ ಒಂದೇ ಮ್ಯಾಲೆ ತೊಗೊಂಡು ಹೋಗಿ, ಹಣಿ ನಟ್ಟ ನಡು ಹಿಡದು, ತಲಿ ಸ್ವಲ್ಪ ಬಗ್ಗಿಸಿ, ನಮಸ್ಕಾರ ಅಂದು ಬಿಟ್ಟರ ಹಾಪ್ ನಮಸ್ಕಾರಕ್ಕೆ ಪ್ರತಿ ಹಾಪ್ ನಮಸ್ಕಾರ ಮಾಡಿದಂಗ. ಲೆಕ್ಕ ಚುಕ್ತಾ. ಅವರು ನಿಮಗ ಬರೇ ಆಶೀರ್ವಾದ ಒಂದೇ ಅಲ್ಲ ಸ್ವಲ್ಪ ಗೌರವನೂ ತೋರಿಸಬೇಕು ಅಂದ್ರ ಅವರೂ ನಿಮ್ಮಂಗ ಸ್ವಲ್ಪ ತಗ್ಗಿ ಬಗ್ಗಿ ಎದಿ ಮುಂದ ಬಲಗೈ (ಒಂದೇ) ತಂದು ಸರಿಸಮಾನ ಹಾಪ್ ನಮಸ್ಕಾರ ಮಾಡಬಹುದು.

ಈ 'ಹಾಪ್ ನಮಸ್ಕಾರ' ಅನ್ನೋದು ಮಾಡವರಿಗೆ ಮತ್ತ ಮಾಡಿಸಿಕೊಳ್ಳವರಿಗೆ ಇಬ್ಬರಿಗೂ ಭಾಳ convenient. ನಮ್ಮ ಧಾರವಾಡ ಮಂದೀದು ಎರಡೂ ಕೈ ಟೋಟಲ್ ಫ್ರೀ ಇರೋದು ಭಾಳ ಅಪರೂಪ. ಚೀಲ, ಸೈಕಲ್ ಹ್ಯಾಂಡಲ್, ಸ್ಕೂಟರ್ ಹ್ಯಾಂಡಲ್, ನಾಯಿ / ಹಂದಿ ಓಡಿಸೋ ವಾಕಿಂಗ್ ಸ್ಟಿಕ್, ಮತ್ತೊಂದು ಮಗದೊಂದು ಅಂತ ಏನರ ಒಂದಲ್ಲ ಒಂದು ಸಾಮಾನು ಒಂದು ಕೈಯಾಗ ಇದ್ದss ಇರ್ತದ. ಹಾಂಗಾಗಿ ಎರಡೂ ಕೈ ಜೋಡಿಸಿ ಫುಲ್ ನಮಸ್ಕಾರ ಮಾಡೋದು ಭಾಳ ಕಠಿಣ. ಭಾಳ ರಿಸ್ಕಿ ಸಹಿತ. ಎರಡೂ ಕೈ ಬಿಟ್ಟು ಮಾಡೋದು ಏನರ ಇದ್ದರ ಅದು ಬಾಯಿಯೊಳಗ ಎರಡೂ ಕೈಗಳ ಬೆಟ್ಟು ಹೆಟ್ಟಿ ಸೀಟಿ ಹೊಡೆಯೋದು ಒಂದೇ ಇರಬೇಕು. ಅಷ್ಟು ದೊಡ್ಡ ರಿಸ್ಕ್ ತೊಗೋ ಬೇಕು ಅಂದ್ರ ಅದಕ್ಕ ತಕ್ಕ ರಿವಾರ್ಡ್ ಕೊಡಬಹುದಾದ 'ಮಾಲ್' (ಐಟಂ,ಬಾಂಬ್,ಫಿಗರ್,ಪೀಸ್, ಹುಡುಗಿ) ಸುತ್ತ ಮುತ್ತ ಇರಲೇಬೇಕು. ಇಲ್ಲಂದ್ರ ಇಲ್ಲ.

ಮತ್ತ ನಮಸ್ಕಾರ receive ಮಾಡೋರಿಗೂ ವಾಪಸ್ ಹಾಪ್ ನಮಸ್ಕಾರ ಮಾಡೋದು ಸರಳ. ಯಾಕಂದ್ರ ಮ್ಯಾಕ್ಸಿಮಮ್ ನಮಸ್ಕಾರದ ಶಿಕ್ಷೆಗೆ (?) ಈಡಾಗವರು ಅಂದ್ರ ಮಾಸ್ತರ್ ಮಂದಿ, ಪ್ರೊಫೆಸರ್ ಮಂದಿ, ದೊಡ್ಡ ಸಾಹೇಬರು ಮಂದಿ. ಅವರಿಗೆ ಮುಂಜಾನೆಯಿಂದ ಸಂಜೀ ತನಕಾ ಬಿಟ್ಟೂ ಬಿಡದೆ, ನಮಸ್ಕಾರ್ರೀ ಸರ್ರಾ, ಅಂತ ಹಾಪ್ ನಮಸ್ಕಾರ ಮಾಡಿಸಿಕೊಂಡು ಮಾಡಿಸಿಕೊಂಡು ಸಾಕಾಗಿ ಬಿಟ್ಟಿರ್ತದ. ಕಾಟಾಚಾರಕ್ಕ ಏನೋ ಒಂದು ತಿರುಗಿ ಮಾಡಿ ತಪ್ಪಿಸಿಕೊಂಡು ಹೋದ್ರ ಸಾಕಗಿರ್ತದ. ಹಾಂಗಾಗಿ ಅವರೂ ಒಂದು ಹಾಪ್ ನಮಸ್ಕಾರ ಹಾಕಿ ಬಚಾವ್ ಆಗ್ತಾರ.

ಹಾಪ್ ನಮಸ್ಕಾರ ಮಾಡುವ ಮತ್ತು ಅದನ್ನು ಸ್ವೀಕರಿಸಿ ವಾಪಸ್ ಹಾಪ್ ನಮಸ್ಕಾರ ಮಾಡುವ ಒಂದು ಚಿಕ್ಕ ಪ್ರಾತ್ಯಕ್ಷಿಕೆ.
 


ಶಾಸನಾನುಸಾರ ನೀಡಿದ ವಿಶೇಷ ಸೂಚನೆ : ಮೇಲೆ ಹಾಕಿದ ಹಾಪ್ ನಮಸ್ಕಾರದ ಪ್ರಾತ್ಯಕ್ಷಿಕೆಯಲ್ಲಿ ಯಾವದೇ ಪ್ರಾಣಿಯನ್ನೂ ಹಿಂಸಿಸಲಾಗಿಲ್ಲ.

ಗಂಡಸೂರ ಪ್ಯಾಂಟಿಗೆ ಪ್ಯಾಂಟss ಹಾಪ್ ಮಾಡಿದ ಮ್ಯಾಲೆ ಹೆಂಗಸೂರ ಸೀರಿ ಹಾಪ್ ಮಾಡಿಲ್ಲ ಅಂದ್ರ ಹ್ಯಾಂಗ? ಹೆಂಗಸೂರು, ಅದೂ ಮಹಿಳಾವಾದಿ ಫೆಮಿನಿಸ್ಟ್ ಹೆಂಗಸೂರು, ಗಂಡಸರು ಪ್ಯಾಂಟ್ ಹಾಪ್ ಮಾಡಿ ಹಾಪ್ ಪ್ಯಾಂಟ್ ಮಾಡಿಕೊಂಡರು, ನಮ್ಮ ಹೆಂಗಸೂರದು ಏನೂ(?) ಹಾಪ್ ಮಾಡಲೇ ಇಲ್ಲ ಅಂತ ಜಗಳಾ ತೆಗಿಬಾರದು ಅಂತ ಹೇಳಿ ಅವರ ಸೀರೀನss  ಹಾಪ್ ಮಾಡಿ  'ಹಾಪ್ ಸೀರಿ'  ಅಂತ ಒಂದು ಡ್ರೆಸ್ ಸಹಿತ ತಯಾರ ಮಾಡಿ ಬಿಟ್ಟೇವಿ. ಅಲ್ಲಾ ಏನೂ ಹಾಪ್ ಮಾಡಿಲ್ಲ ಅನಲಿಕ್ಕೆ ಅವರ ತಲಿ ಇವರು, ಇವರ ತಲಿ ಅವರು ಹಾಪ್ ಮಾಡಿಕೋತ್ತ ಇರ್ತಾರ. ಅದು ಪ್ರಕೃತಿಯಿಂದಾದ ಸಜಹ ಹಾಪ್. ಅದನ್ನ ಬಿಟ್ಟು ಹೆಂಗಸೂರದ್ದು ಹಾಪ್ ಮಾಡಿದ್ದು ಅಂದ್ರ ಸೀರಿನss ಇರಬೆಕು. ಶುದ್ಧ ಕನ್ನಡ ಒಳಗ ಏನು ಲಂಗಾ ದಾವಣಿ ಅಂತಾರೋ ಅದಕ್ಕ ನಮ್ಮ ಮಂದಿ ಅನ್ನೋದು 'ಹಾಪ್ ಸೀರಿ'. ಸ್ಕರ್ಟ್, ಪರಕಾರ, ಮತ್ತೊಂದು, ಮಗದೊಂದು ಹಾಕುತ್ತಿದ್ದ ಬಾಲೆಯರು ದೊಡ್ಡವರಾಗಿ ಸೀರೆಗೆ ಶಿಫ್ಟ್ ಆಗೋಕಿಂತ ಮೊದಲು ಸ್ವಲ್ಪ ದಿವಸ ಪ್ರಾಕ್ಟೀಸ್ ಆಗಲಿ ಅಂತ 'ಹಾಪ್ ಸೀರಿ' ಡ್ರೆಸ್ ಬಂದಿರಬಹುದು. ಆದ್ರ ಚೂಡಿದಾರ್ ಅನ್ನೋದು ಬಂದ ಮ್ಯಾಲೆ 'ಹಾಪ್ ಸೀರಿ' ಒಂದss ಏನ್ ಬಂತು, ಫುಲ್ ಸೀರಿ ಸಹಿತ ಆಫ್ರಿಕಾದ ಘೇಂಡಾ ಮೃಗದಾಂಗ ನಶಿಸಿ ಹೋಗ್ಲೀಕತ್ತುಬಿಟ್ಟದ. ಈಗಿನ ಹೆಂಗಸೂರಿಗೆ ಮನ್ಯಾಗಿದ್ದಾಗ, ಓಣ್ಯಾಗಿದ್ದಾಗ ಅಸಡ್ಡಾಳ ಸರ್ಕಸ್ ಟೆಂಟ್ ಅಂತಹ ನೈಟೀ, ಹೊರಗ ಬಂದ್ರ ಚೂಡಿದಾರ್. ಮುತ್ತಜ್ಜಿ, ಅಜ್ಜಿ, ಮಗಳು, ಮಮ್ಮಗಳು, ಮಿಮ್ಮಗಳು ಎಲ್ಲರೂ ಇದೇ ಡ್ರೆಸ್ ಕೋಡಿಗೆ ಬಂದು ಬಿಟ್ಟ ಮ್ಯಾಲೆ 'ಹಾಪ್ ಸೀರಿ' 'ಫುಲ್ ಸೀರಿ' ಎಲ್ಲ ಹರೋ ಹರೋ ಅಂದು ಬಿಟ್ಟಾವ. 'ಹಾಪ್ ಸೀರಿ' ಹಾಕವರು ಭಾಳ ಕಮ್ಮೀ ಈಗ. ಯಾವದರ ಭಾಳ ಸಂಪ್ರದಾಯಸ್ತರ ಮನಿ ಹುಡುಗ್ಯಾರು ಹಾಕಬಹುದು. ಮತ್ತ ಅದನ್ನ ಹಾಕಿಕೊಂಡ ಹುಡುಗ್ಯಾರಿಗೆ, ಪ್ಯಾರಾಚೂಟ್ ಏ ಪ್ಯಾರಾಚೂಟ್, ಅಂತ ಕಿಡಿಗೇಡಿ ಹುಡುಗುರು ಕಾಡಸ್ತಾರ ಬ್ಯಾರೆ. ಪರಕಾರ ಪೋಲ್ಕಾ ಹಾಕಿಕೊಂಡವರಿಗೆ 'ಪ್ಯಾರಾಚೂಟ್' ಅಂತ ಕಾಡೋದು ಜಾಸ್ತಿ. ಯಾಕಿರಬಹುದು? ಆ ಅಸಡ್ಡಾಳ ಸಂಪ್ರದಾಯಸ್ತ ಡ್ರೆಸ್ ಒಳಗ ಹುಡುಗಿ ನೋಡಿದ್ರ ಪ್ಯಾರ್ ಆಗೋದು ದೂರ ಉಳೀತು, ಏನಾರಾ ನಾಕಾಣೆ ಎಂಟಾಣೆ ಪ್ಯಾರ್  ಆಗಿದ್ದರೂ ಸಹ ಛೂಟ್ ಜಾತಾ ಹೈ (ಬಿಟ್ಟು ಹೋಗುತ್ತದೆ) ಅಂತ ಪ್ಯಾರಾಛೂಟ ಅಂತ ಕಾಡಿಸ್ತಾರೋ ಏನೋ? ಕಾಡಿದ ಕಿಡಿಗೇಡಿಗಳನ್ನ ಅಥವಾ ಕಾಡಿಸಿಕೊಂಡ ಪ್ಯಾರಾಚೂಟಗಳನ್ನೇ ಕೇಳಬೇಕು.

ಪ್ಯಾರ್ ಕರನೇ ವಾಲೇ ನಹಿ ಪೆಹನತೆ ಪ್ಯಾರಾಛೂಟ. ಪೆಹನತೆ ಹೈ ಶಾನ್ ಸೆ ಚೂಡಿದಾರ್, ಮಿಡಿ, ಮಿನಿ, ಮ್ಯಾಕ್ಷಿ...ಅಂತ ಶಾನ್ ಮೂವಿಯ ಜೀತೇ ಹೈ ಶಾನ್ ಸೆ ಹಾಡು ನೆನಪು ಆಗಿಬಿಡ್ತು. ಸೂಡ್ಲೀ


ಮ್ಯಾಲೆ ಇದ್ದಾಳ ನೋಡ್ರೀ - 'ಹಾಪ್ ಸೀರಿ' ಸುಂದರಿ. ಇಕಿಗೆ ಯಾರೋ ಕಿಡಿಗೇಡಿ, ಏ ಪ್ಯಾರಾಚೂಟ್!!, ಅಂತ ಕಾಡಿರಬೇಕು. ಏ ಹಲ್ಕಟ್! ಅಂತ ಅದಕ್ಕೇ ಅವಂಗ ಬೈಲಿಕತ್ತಿರಬೇಕು ಅಕಿ! ಮಸಡಿ, ಕೈ ನೋಡಿದರ ಹಂಗಾ ಅನ್ನಸ್ತದ. ಅಲ್ಲಾ?

ಮೇಲಿನ ಚಿತ್ರಕೃಪೆ: http://farm3.static.flickr.com/2620/4200931751_9198f7bc07_o.jpg


ಒಮ್ಮೆ ಒಬ್ಬಾಕಿ 'ಹಾಪ್ ಸೀರಿ' ಹುಡುಗಿಗೆ ನಮ್ಮ ಟೀಚರ್ ಅಂತ ತಿಳ್ಕೊಂಡು 'ಹಾಪ್ ನಮಸ್ಕಾರ' ಮಾಡಿಬಿಟ್ಟಿದ್ದೆ!! ಗೊತ್ತದ ಏನು? 'ಹಾಪ್ ಸೀರಿ' ಹುಡುಗಿಗೆ 'ಹಾಪ್ ನಮಸ್ಕಾರ' ಮಾಡಿದ 'ಹಾಪಾ' ನಾ ಒಬ್ಬನೇ ಇರಬೇಕು.

ಅದೇನಾಗಿತ್ತಂದರ....ನಾವು ಯೋಳನೆತ್ತಾ (7th) ಇದ್ದಾಗ ಒಬ್ಬರು ಹೊಸಾ ಲೇಡಿ ಟೀಚರ್ ಬಂದಿದ್ದರು. ಮಾತ್ರ TCH ಮುಗಿಸಿದ್ದರು. ಹೆಚ್ಚೆಚ್ಚ ಅಂದ್ರ 21-22 ವರ್ಷ ಅವರಿಗೆ. ಅವರಿಗೆ ಒಬ್ಬಾಕಿ ತಂಗಿ. ಏನೋ ಒಂದೆರಡು ವರ್ಷ ಸಣ್ಣಾಕಿ. ನೋಡಲಿಕ್ಕೆ ಇಬ್ಬರೂ ಒಂದss ತರಹ ಇದ್ದರು. ಹತ್ತಿರ ಹೋಗಿ ರವಗಾಜು (ಭೂತಗನ್ನಡಿ, magnifying glass) ಹಚ್ಚಿ, ಡೀಪ್ ಸ್ಕ್ಯಾನ್ ಮಾಡಿ ನೋಡಿದರ ಮಾತ್ರ ಅಕ್ಕ ಯಾರು ತಂಗಿ ಯಾರು ಅಂತ ಗೊತ್ತ ಆದರೂ ಆಗಬಹುದು.  ಅದೂ ಖಾತ್ರಿ ಇಲ್ಲ. ಅವಳಿ ಜವಳಿ ಇದ್ದಂಗ ಇದ್ದರು.

ಹೀಂಗಿದ್ದಾಗ ಒಮ್ಮೆ ಅವರ ಮನಿ ಮುಂದಿಂದನ ಸೈಕಲ್ ಮ್ಯಾಲೆ ಭರ್ರ ಅಂತ ಸಾಲಿಗೆ ಹೊಂಟಿದ್ದೆ. ಏಕ್ದಂ ಥೇಟ್ ಟೀಚರ್ ಹಾಂಗss  ಇರಾಕಿ ಒಬ್ಬಾಕಿ ಎದರಿಗೆ ಬರೋದು ಕಾಣಿಸ್ತು. 'ಹಾಪ್ ಸೀರಿ' ಹಾಕ್ಕೊಂಡು ಬರ್ಲೀಕತ್ತುಬಿಟ್ಟಿದಳು! ನಮ್ಮ ಟೀಚರ್ ಯಾವಾಗಲೂ ಸಾಲಿಗೆ ಫುಲ್ ಸೀರಿ ಉಟ್ಟಗೊಂಡು ಬರ್ತಿದ್ದರು. ಏನಾತಪಾ ಇವರಿಗೆ? ಇವತ್ಯಾಕ ಹಾಪ್ ಸೀರಿ? ಅಂತ ವಿಚಾರ ಬಂತು. ಅಷ್ಟರಾಗ ಹಾಪ್ ಸೀರಿ ಹುಡುಗಿ ಬ್ಯಾರೆ ಹತ್ತಿರ ಬಂದು ಬಿಟ್ಟಿದ್ದಳು. ನಮ್ಮ ಟೀಚರ್ ಹೌದೋ ಅಲ್ಲೋ ಅಂತ ಭಾಳ ಡೌಟ್ ಬಂತು. ಒಂದು ಹಾಪ್ ನಮಸ್ಕಾರ ವೇಸ್ಟ್ ಹೋದರೂ ಫರಕ್ಕ್ ಇಲ್ಲ ಆದರೆ ಟೀಚರ್ ಗೆ ನಮಸ್ಕಾರ ತಪ್ಪಬಾರದು ಅಂತ ಹೇಳಿ, 'ಹಾಪ್ ಸೀರಿ' ಹುಡುಗಿ ಸೈಕಲ್ ಮುಂದ ಬಂದ ಕೂಡಲೇ, ಬಲಗೈ ಎತ್ತಿ, ಸೈಕಲ್ ಹೊಡಕೋತ್ತನ, ನಮಸ್ಕಾರ್ರೀ ಟೀಚರ್, ಅಂತ ಅಂದು ಬಿಟ್ಟೆ. ಹಾಪ್ ಸೀರಿ ಹುಡುಗಿ ತಿರುಗಿ ಹಾಪ್ ನಮಸ್ಕಾರ ಅಂತ ವಾಪಸ್ ನಮಸ್ಕಾರ ಅಂತೂ ಮಾಡಲಿಲ್ಲ. ಮ್ಯಾಲಿಂದ ನಾಚಿಗೊಂಡು, ತಲಿ ಕೆಳಗ ಹಾಕಿಕೊಂಡು, ಒಂದು ನಮೂನಿ ಕಿಸಿ ಕಿಸಿ ನಕ್ಕೋತ್ತ ಹೋಗಿ ಬಿಟ್ಟಳು. ನಮ್ಮದೂ ಸೈಕಲ್ ಜೋರ್ ಇತ್ತು. ರವಗಾಜ ಹಚ್ಚಿ ನೋಡಿ, ಡೀಪ್ ಸ್ಕ್ಯಾನ್ ಮಾಡಿ ಇಕಿ ನಮ್ಮ ಟೀಚರೋ ಅಥವಾ ಅವರ ತಂಗಿನೋ ಅಂತ ನೋಡಲಿಕ್ಕೆ ಆಗಲಿಲ್ಲ. ಕಿಸಿ ಕಿಸಿ ನಕ್ಕಿದ್ದು ನೋಡಿದರ ಅವರ ತಂಗಿನೇ ಇರಬೇಕು ಅಂತ ಅನ್ನಿಸ್ತು. ಅಥವಾ ನಮ್ಮ ಟೀಚರೇ ಇದ್ದು, ಎಲ್ಲೇ ಹಾಪ್ ಸೀರಿ ಉಟ್ಟಗೊಂಡು, ಸ್ಟೂಡೆಂಟ್ ಕೈಯಾಗ ಸಿಕ್ಕೊಂಡು, ಹಾಪ್ ನಮಸ್ಕಾರ ಮಾಡಿಸಿಕೊಂಡೆ ಅಂತ ಟೀಚರ್ ಗೆ ನಾಚಿಗಿ ಆಗಿ, ನಮಸ್ಕಾರ ಮಾಡದೇ, ಹಾಂಗss ಹೋದರೋ ಅಂತ ಸಂಶಯ ಕೂಡ ಬಂತು. ಅಕ್ಕರ ಇರಲೀ ತಂಗ್ಯರಾ ಇರಲೀ ಬಿಡು ಅಂತ ಸಾಲಿಗೆ ಬಂದು ಮುಟ್ಟಿದೆ.

ಸಾಲಿಗೆ ಬಂದು ಮುಟ್ಟಿದರ ಮೊತ್ತಮೊದಲು ಯಾರು ಕಾಣಬೇಕು? ಫುಲ್ ಸೀರಿ ಉಟ್ಟಗೊಂಡ ಟೀಚರ್. ಐದು ನಿಮಿಷದಾಗ ಹಾಪ್ ಸೀರಿಂದ ಫುಲ್ ಸೀರಿಗೆ ಶಿಫ್ಟ್ ಆಗಿ, ಸಾಲಿನೂ ಮುಟ್ಟಲಿಕ್ಕೆ ನಮ್ಮ ಟೀಚರ್ ಆರ್ಡಿನರಿ ಮನುಷ್ಯಾನss ಇದ್ದರು. ದೆವ್ವ, ಭೂತ, ಮೋಹಿನಿ ಮತ್ತೊಂದು ಇರಲಿಲ್ಲ. ಹಾಂಗಾಗಿ ನಾ ಹಾಪ್ ನಮಸ್ಕಾರ ಹಾಕಿದ್ದು ಅವರ ತಂಗಿಗೆ ಅಂತ ಖಾತ್ರಿ ಆತು. ಒಂದು ಹಾಪ್ ನಮಸ್ಕಾರ ವೇಸ್ಟ್ ಆದ ಬಗ್ಗೆ ಸ್ವಲ್ಪ್ ಫೀಲ್ ಆತು. ಆದರೂ ಟೀಚರ್ ಗೆ ನಮಸ್ಕಾರ ಮಾಡೋದು ತಪ್ಪಿಸಬಾರದು ಅಂತ ಹೇಳಿ ಈಗ ಸಿಕ್ಕಿದ ಫುಲ್ ಸೀರಿ ಟೀಚರ್ ಗೆ ಅಪರೂಪಕ್ಕ ಫುಲ್ಲಾಗಿ ಎರಡೂ ಕೈಯಿಂದ ಫುಲ್ ನಮಸ್ಕಾರ ಕೂಡ ಹಾಕಿದೆ. ಟೀಚರ್ ಆಶ್ಚರ್ಯ ಆಗಿ, ಯಾಕಪಾ ಈ ಹಾಪಾ ಇವತ್ತು ಹಾಪ್ ನಮಸ್ಕಾರದ ಬದಲೀ ಫುಲ್ ನಮಸ್ಕಾರ ಹಾಕ್ಲಿಕತ್ತಾನ, ಅಂತ ಲುಕ್ ಕೊಟ್ಟರು. ಮತ್ತ ಹಾಪೂ ಅಲ್ಲದ ಫುಲ್ಲೂ ಅಲ್ಲದ ಗೋಣು ಬಗ್ಗಿಸಿ ಮೌನ ನಮಸ್ಕಾರ ಹಾಕಿದ ಟೀಚರ್ ಇನ್ನೊಬ್ಬ ಟೀಚರ್ ಜೊತೆ ಮಾತಾಡಿಕೋತ್ತ ಹೋದರು. ಏನ್ರೀ ಟೀಚರ್ ನಿಮ್ಮ ತಂಗಿಗೆ ಹಾಪ್, ನಿಮಗ ಫುಲ್, ಒಟ್ಟಿನ್ಯಾಗ ದೀಡ್ (ಒಂದೂವರೆ) ನಮಸ್ಕಾರ ದೀಡ್ ಪಂಡಿತನ ಗತೆ ಹಾಕಿದರ, ಫುಲ್ ಹೋಗಲೀ, ಹಾಪ್ ಬ್ಯಾಡ ಅಟಲೀಸ್ಟ್ ಒಂದು ಕ್ವಾರ್ಟರ್ ನಮಸ್ಕಾರರ ಹಾಕೋದು ಬಿಟ್ಟು ಬರೆ ಗೂಳವ್ವನ ಗತೆ ಗೋಣು ಬಗ್ಗಿಸಿ ಹೊಂಟೀರೆಲ್ಲಾ ಅಂತ ಅನ್ನಬೇಕು ಅಂತ ಮಾಡಿದೆ. ಆದ್ರ ಬ್ಯಾಡ ಅಂತ ಬಿಟ್ಟೆ.

ಇಲ್ಲೆ ಅಮೇರಿಕಾ ಒಳಗ ನೋಡಿದ ಅತ್ಯಂತ ವಿಚಿತ್ರ ಸೈನ್ ಅಂದ್ರ 'baby on board'. ಮೊದಮೊದಲು ಏನಂತನೇ ಗೊತ್ತಾಗಲಿಲ್ಲ. ಆಮ್ಯಾಲೆ ತಿಳೀತು. ಸಣ್ಣ ಕೂಸು, ಬಾಲ ಬಚ್ಚೆ ಇರೋ ಮಂದಿ ತಮ್ಮ ತಮ್ಮ ಕಾರ್ ಖಿಡಕಿಗೆ ಅದೊಂದು ವಿಚಿತ್ರ ಪ್ಲಾಕ್ ಹಚ್ಚಿಗೊಂಡು ಇರ್ತಾರ ಅಂತ. ಯಾಕ ಅಂತ ಇನ್ನೂ ತಿಳಿದಿಲ್ಲ. ನಮ್ಮ ಗಾಡಿ ಒಳಗ ಸಣ್ಣ ಕೂಸು ಅದ, ಬಂದು ಗುದ್ದವರು, ಡಿಕ್ಕಿ ಹೊಡೆಯವರು ಸ್ವಲ್ಪ ನೋಡಿಕೊಂಡು ಗುದ್ದರೀಪಾ, ಸಾವಕಾಶ ಡಿಕ್ಕಿ ಹೊಡಿರೀಪಾ, ಅಂತ ರಿಕ್ವೆಸ್ಟ್ ಮಾಡಿಕೊಳ್ಳಲಿಕ್ಕೆ ಏನು? ಗೊತ್ತಿಲ್ಲ.


ಆದ್ರ ಆ 'baby on board' ಪ್ಲಾಕ್ ನೋಡಿದಾಗೆಲ್ಲ ಏನು  ಅನ್ನಿಸೋದು ಅಂದ್ರ 'ಹಾಪ್ ಆನ್ ಬೋರ್ಡ್' (haap on board) ಅನ್ನೋ ಒಂದು ಪ್ಲಾಕ್ ಸಿಕ್ಕಿದ್ದರ ಎಷ್ಟು ಬೆಷ್ಟ್ ಇತ್ತು ಅಂತ. ಹಾಪ್ ಇದ್ದವರು ಗರ್ವದಿಂದ 'ಹಾಪ್ ಆನ್ ಬೋರ್ಡ್' ಅಂತ ತಮ್ಮ ತಮ್ಮ ಗಾಡಿ ಮ್ಯಾಲೆ ಹಾಕ್ಕೊಂಡು ಹೋಗಬಹುದಿತ್ತು. ಟ್ರಾಫಿಕ್ ಸಿಗ್ನಲ್ ಒಳಗ ನಿಂತಾಗ, ಬಾಜೂ ಗಾಡಿ ಒಳಗ 'ಹಾಪ್ ಆನ್ ಬೋರ್ಡ್' ಅಂತ ಪ್ಲಾಕ್ ಕಂಡರ ಗಾಜು ಇಳಿಸಿ, ಲೇ ಹಾಪಾ! ಅಂತ ಒಳಗಿದ್ದ ಹಾಪಾ, ಹಾಪಿಗಳಿಗೆ ವಿಶ್ ಮಾಡಬಹುದಿತ್ತು.

ಹಾಂಗಂತ ವಿಚಾರ ಮಾಡ್ತಿದ್ದಾಗ ಒಂದು ಪ್ಲಾಕ್ ಕಂಡೇ ಬಿಡ್ತು. ಕೆಳಗ ಅದ ನೋಡ್ರೀ. ಇನ್ನೇನು ತಡ? ಒಂದು ಮಸ್ತ ಕಲರ್ ಪ್ರಿಂಟ್ ಔಟ್ ತೆಗೆದು ಕಾರಿಗೆ ಹಚ್ಚಿಗೊಂಡು ಬಿಡ್ರೀ. ಹಾಪ್ ಹಾಪ್ ಮಂದಿ networking ಮಾಡಲಿಕ್ಕೆ ಬೆಷ್ಟ ಐಡಿಯಾ ಇದು. ಎಲ್ಲೋ ದೂರ ದೇಶದಾಗ ನಮ್ಮೂರಿನ ಹಾಪ್ ಸಿಕ್ಕ ಅಂದ್ರ ಅದರ ಖುಷಿನೇ ಬೇರೆ. ಒಂದು ಹಾಪ್ ನಮಸ್ಕಾರ ಹಾಕಿ, ಹಾಪ್ಸೂಳಿಮಗನss....ಯಾ ಊರ ಆತಾಪಾ ನಿನಗಾ? ಯಾವ ಹಾಪರ ಪೈಕಿ ನೀ? - ಅಂತ ಟ್ರಾಫಿಕ್ ಸಿಗ್ನಲ್ ರೆಡ್ ನಿಂದ ಗ್ರೀನ್ ಆಗಿ, ಬಾಕಿ ಮಂದಿ ಬೊಂಬಡಾ ಹೊಡಕೊಂಡರೂ, ಸಿಕ್ಕಿದ ಹಾಪ್ ಧಾರವಾಡಿ ಜೊತಿ ಹರಟಿ ಮುಗಿಸಿ, ಬೊಂಬಡಾ ಬಜಾಯಿಸಿದವರಿಗೆ ನಟ್ಟ ನಡು ಬೆರಳು ಚಂದಾಗಿ ತೋರಿಸಿಯೇ ಆ ಮ್ಯಾಲೆ ಗಾಡಿ ಎತ್ತೋದು. ಏನಂತೀರಿ?



'ಸರ್ವೇ ಜನ ಸುಖಿನೋ ಭವಂತು' ಹಳೇದಾತು. ಈಗ ಏನಿದ್ರೂ, 'ಸರ್ವೇ ಜನ ಹಾಪೋ ಭವಂತು'. ಹಾಪ್ ಆಗಿ ಬಿಟ್ಟರ ಸುಖ ತಂತಾನೇ ಬರ್ತದ. ಹಾಪ್ ಅಲ್ಲದವರ ಅವಸ್ಥೆ ಯಾರಿಗೂ ಬ್ಯಾಡ. ಅವರೂ ಎಲ್ಲ ಲಗೂ ಲಗೂ ಹಾಪ್ ಆಗಿ ಸರ್ವಂ ಹಾಪಮಯಂ ಆಗಿ ಬಿಟ್ಟರೆ ಅಲ್ಲೇ ಸಚ್ಚಿದಾನಂದ. ಆನಂದದ ಚರಸೀಮೆ. ಬಯಲುಸೀಮ್ಯಾಗ ಚರಸೀಮೆ ಎಲ್ಲಿಂದ ಬಂತು ಕೇಳಿದರ ಬೈತಾರ ನೋಡ್ರೀ ನಮ್ಮ ಧಾರವಾಡ ಮಂದಿ...........ಲೇ ಹೋಗಲೇ ಹಾಪ್....ಏನೇನರ ಕೇಳ್ತೀ..... ಹಾಪನ್ನ ತಂದು....ಹಾಪ್ಸೂಳಿಮಗನ ಪ್ರಶ್ನೆ ನೋಡ್ರೀ..... ಬಯಲುಸೀಮ್ಯಾಗ ಚರಸೀಮೆ ಅಂದ್ರ ಮುಂಜಾನೆ ಚರಗಿ ತೊಗೊಂಡು ಹೋಗೋ ಸೀಮಿಲೇ (ಜಗಾ) ಮಂಗ್ಯಾನ್ ಕೆ.....ಅಂತ.

ಗರ್ವ್ ಸೆ ಕಹೋ ಹಮ್ ಹಾಪ್ ಹೈ!

Friday, July 12, 2013

ಆಂಟಿ ಅಂದರೆ ನರಕ, ACP ಅಂದರೆ ಸ್ವರ್ಗ...(F)art of Living

ನಮ್ಮ ವಯಸ್ಸಿನ ಹುಡುಗಿಯರಿಗೆ  ಏನು ಬೇಕಾರೂ ಅನ್ನಿ. ಆದರೆ 'ಆಂಟೀ' ಅಂದಿರೋ, ಮುಗೀತು  ನಿಮ್ಮ ಕಥೆ. ಆಂಟಿ ಗೂಂಡಾ (anti goonda) ಕಾಯಿದೆ ಒಳಗೆ  ನಿಮ್ಮನ್ನ ಅರೆಸ್ಟ್ ಮಾಡಿಸಿ ಒಳಗೆ ಹಾಕ್ಸಿಬಿಟ್ಟರು ಅಂದ್ರೆ ಮುಗೀತು ಕಥೆ. ಗೋವಿಂದಾ ಗೋ.....ವಿಂದಾ. ಆಮೇಲೆ ನೀವು 'ಇಂದು ಎನಗೆ ಗೋವಿಂದಾ.....ಆಂಟಿಯಾ ಕೃಪೆಯಿಂದಾ. ಕೊಡಿಸೆ ಎನಗೆ ಮುಕುತಿಯಾ........... ಆಂಟಿಯೇ ಓ ಆಂಟಿಯೇ' ಅಂತ ದಾಸರ  ಹಾಡನ್ನು ಬದಲು ಮಾಡಿಕೊಂಡು ಹಾಡುತ್ತ ಇರಬೇಕಾದೀತು.

ನಮ್ಮ ವಯಸ್ಸಿನ ಹುಡುಗಿಯರಿಗೆ  ಹುಡುಗಿ ಅನ್ನೊದೇ ತಪ್ಪು. ಮಹಿಳೆ ಅಂತ ಅನ್ನಬೇಕಾ? ಕ್ಲಾಸ್ ಮೇಟ್ ಹುಡುಗಿಯರಿಗೆಲ್ಲ ಮಹಿಳೆ ಅನ್ನೋದು ತುಂಬ ಅಸಹಜ. ಎಲ್ಲರೂ ಅವರಿಗೆ ಆಂಟೀ ಅಂತಾನೇ ಕರೆಯೋದು. ಅದೇ ನಾವು ಅಂದ್ರೆ ಅಂಕಲ್ ಗಳು ಹಾಗೆ ಅಂದ್ರೆ ಮಾತ್ರ ಅಪಾಯ ಕಟ್ಟಿಟ್ಟ ಬುತ್ತಿ.

ನಮ್ಮ ಗುರು ಜಗ್ಗೇಶಾನಂದ ಸ್ವಾಮಿಗಳು ಹೇಳ್ತಿದ್ದರು.

ಐಕ್...ಲಕಡಿ ಪಕಡಿ ಜುಮ್ಮ.... ನೆಪೋಲಿಯನ್ ಡವ್ವಾ....ತಿಳಿತೇನ್ರೋ ಡಬ್ಬಾ ನನ್ನ ಮಕ್ಕಳಾ? 'ಎಲವೊ ಅಂದ್ರೆ ನರಕ, ಅಯ್ಯಾ ಅಂದ್ರೆ ಸ್ವರ್ಗ' ಅನ್ನೋ ಬಸವಣ್ಣನವರ ಮಾತು ಹಳೆದಾತು ಕಣ್ರೋ.... ಈಗ ಏನಿದ್ರೂ ಆಂಟಿಗಳಿಗೆ ಕ್ಯಾಚ್ ಹಾಕ್ಬೇಕು ಅಂದ್ರೆ ಹೊಸಾ ಗಾದೆ ಮಾತು ನೆನಪು ಇಟ್ಟುಕೋಬೇಕು. ಗೊತ್ತಾ? - ಅಂತ.

ಯಾವ ಗಾದೆ ಮಾತು ಸ್ವಾಮೀಜಿ?

"ಆಂಟಿ ಅಂದರೆ ನರಕ, ACP ಅಂದರೆ ಸ್ವರ್ಗ"

ಏನೂ???!!!! ಆಂಟಿಗಳಿಗೆ ACP ಅಂದ್ರೆ 'ಅಸಿಸ್ಟೆಂಟ್ ಕಮಿಷನರ್ ಆಫ್ ಪೋಲಿಸ್' ಅನ್ನಬೇಕಾ? ಹಾಂಗೆ ಅಂದ್ರೆ ಸ್ವರ್ಗ ಸಿಗತ್ತಾ ಸ್ವಾಮೀಜಿ?

ಅಯ್ಯೋ....ಗುಗ್ಗು ಮುಂಡೇದೆ. ACP ಅಂದ್ರೆ ಅಸಿಸ್ಟೆಂಟ್ ಕಮಿಷನರ್ ಆಫ್ ಪೋಲಿಸ್ ಅಂತೆ.... ಫುಲ್ ಡಬ್ಬಾ ನನ್ಮಗ ನೀನು, ಅಂದ್ರು ಸ್ವಾಮಿ ಜಗ್ಗೇಶಾನಂದ ಸರಸ್ವತಿ.

ಮತ್ತೇನು ACP ಅಂದ್ರೆ? ತಿಳಿಸಿ ಹೇಳಿ ಸ್ವಾಮೀಜಿ, ಅಂತ ಕೇಳಿಕೊಂಡೆ.

ACP ಅಂದ್ರೆ 'ಆಂಟಿ ಕಂ ಪೀಸೂ' ಅಂತ (auntie cum piece). ಫಿಗ್ಗರ್ರು ಕಣ್ರಯ್ಯಾ. ನೀವು ಅಂಟೀಸ್ ಗೆ ಕ್ಯಾಚ್ ಹಾಕೋ ಡಬ್ಬಾ ನನ್ನ ಮಕ್ಕಳು, ತರ್ಲೆ ನನ್ನ ಮಕ್ಕಳು, ಆಂಟೀಸ್  ಹತ್ರ ಹೋಗ್ಬಿಟ್ಟು, ಆಂಟಿ ಆಂಟಿ ಅಂದ್ರೆ 'ಆಂಟಿ ಗೂಂಡಾ ಆಕ್ಟ್' ಒಳಗೆ ಅಂದರ್ ಆಗಿಬಿಟ್ಟು, ಸೀದಾ ಪರಪ್ಪನ ಅಗ್ರಹಾರ ಜೈಲ್ ಸೇರಿಕೊಂಡು ಬಿಡ್ತೀರಾ. ಹುಷಾರ್! ಅದನ್ನು ಬಿಟ್ಟು, ಆಂಟೀ ಆಂಟೀ, ಸಕತ್ ಸೆಕ್ಸಿ ACP ತರಹ ಇದ್ದೀರಾ. ಸಕತ್ ಮಾಲು, ಅಂತ  ಅಂದು ನೋಡ್ರೋ. ಆಂಟಿ ಫುಲ್ ಖರ್ರಾಬಾಗಿ ಖುಷ್ ಆಗ್ಬಿಟ್ಟು ಸ್ವರ್ಗಾನೇ ತೋರಿಸಿ ಬಿಡ್ತಾಳೆ, ಅಂತ ಅಮೋಘ ಸಂದೇಶ ನೀಡಿದರು ಸ್ವಾಮೀಜಿ.

ಅಲ್ಲಾ ಸ್ವಾಮೀಜೀ....ಹುಡುಗರಿಗೆ ಅಂಕಲ್ ಅಂದ್ರೆ ಕೋಪ ಬರಲ್ಲ. ಆದ್ರೆ ಆಂಟಿಗಳಿಗೆ ಆಂಟೀಸ್ ಅಂದ್ರೆ ಯಾಕೆ ಕೋಪ ಸ್ವಾಮೀಜೀ? - ಅಂತ ಕೇಳಿದೆ.

ಡಬ್ಬಾ ನನ್ನ ಮಗನೆ.....ನಿನಗೂ PUC ಸೆಕೆಂಡ್ ಇಯರ್ ನಲ್ಲಿ ಇದ್ದಾಗ ಯಾರಾದರು SSLC ಬಾಲೆ, ಅದೂ ಇನ್ನೂ ಬಾಲ ಮತ್ತೊಂದು ಬಲಿತಿರದ ಬಾಲೆ, ಅಂಕಲ್ ಅಂದು ಬಿಟ್ಟಿದ್ದರೆ ನಿನ್ನ ಬ್ಯಾಕ್ ಸೈಡ್ ಆ ಬಾಲೆಯ ಆ  ಕಾಮೆಂಟ್ ನಿಂದ ಹನುಮಂತನ ಬಾಲ ಉರಿದಂಗೆ ಭಗ ಭಗ ಅಂತ ಉರಿದಿರೋದು. ಗೊತ್ತಾ??!! ಈಗ ನನ್ಮಗನೇ ನೀನು 'ಫಾರ್ಟೀ ಅಟ್ ಫಾರ್ಟಿ' (farty at forty (40)) ಆಗ್ಬಿಟ್ಟು ಅಂಕಲ್ ಅಂದ್ರೂ ಓಕೆ, ಅಜ್ಜಾ ಅಂದ್ರೂ ಓಕೆ ಅಂತ  ಒಳ್ಳೆ 'TB ಹೋರೀ' ತರಹ ಕುತ್ತಿಗೆ ಅಲ್ಲಾಡಿಸುತ್ತೀಯಾ. ಹೋಪಲೆಸ್ಸ್ ಫೆಲೋ, ಅಂತ ಬೈದರು ಸ್ವಾಮೀಜೀ.

TB ಹೋರೀ ಅಂದ್ರೆ ಸ್ವಾಮೀಜೀ? - ಅಂತ ಕೇಳಿದೆ

ಭಂ....ಭಂ.....ಭೋಲೆನಾಥ..... ಅವೆಲ್ಲ ನಾವು ನಮ್ಮ ಪೂರ್ವಾಶ್ರಮದಲ್ಲಿ ಅಂದ್ರೆ ಸ್ವಾಮೀಜೀ ಆಗೋ ಮೊದಲು ಆಡುತ್ತಿದ್ದ ಮಾತುಗಳು. ಅವನ್ನೆಲ್ಲ ಈಗ ಬಿಚ್ಚಿ ಹೇಳೋಕೆ ಆಗೋದಿಲ್ಲ. ಸ್ವಲ್ಪ self understanding ಮಾಡ್ಕೊಂಡು ಅಡ್ಜಸ್ಟ್ ಆಗಿ ಪ್ಲೀಸ್, ಅಂದ್ರು ಸ್ವಾಮೀಜಿ.

ಹಂಗಾ? - ಅಂತ ಬಾಯಿ ಬಿಟ್ಟೆ.

ಮುಚ್ಚಯ್ಯಾ, ಅಂತ ಬೈದರು ಸ್ವಾಮೀಜಿ.

ಏನನ್ನಾ ಸ್ವಾಮೀಜೀ? - ಅಂತ ಕೇಳಿದೆ.

ಬಾಯನ್ನ. ಬಿಟ್ಟುಗೊಂಡು ಕೂತಿದ್ದು, ನಮಗೆ ಕಾಣುತ್ತ ಇದ್ದಿದ್ದು ಅದೇ ತಾನೇ? ಬೇವಕೂಫ್ ನನ್ನ ಮಗನೇ! ಡಬ್ಬಾ  ನನ್ನ ಮಗನೇ!!! ಲೋಫರ್ ನನ್ನ ಮಗನೇ!!! ತೊಟ್ಟಿ ನನ್ನ ಮಗನೇ!!! ತಿರುಪೆ ನನ್ನ ಮಗನೇ!!!! - ಅಂತ ಎಲ್ಲಾ ಮಕ್ಕಳ ಪರವಾಗಿ ಬೈದರು ಸ್ವಾಮೀಜೀ. ಹೇಳಿ ಕೇಳಿ ಜಗ್ಗೇಶಾನಂದ ಸ್ವಾಮಿಗಳು.

ನಿಮಗೆ PUC ಸೆಕೆಂಡ್ ಇಯರ್ ನಲ್ಲಿ SSLC ಹುಡುಗಿ ಅಂಕಲ್ ಅಂದು ಬಿಟ್ಟಿದ್ದಳಾ ಸ್ವಾಮೀಜೀ? ಅದಕ್ಕೇ ಸನ್ಯಾಸ ತೊಗೊಂಡು ಸ್ವಾಮೀ ಆಗಿ ಬಿಟ್ಟಿರಾ? - ಅಂತ ಕೇಳಿದೆ. ಋಷಿ ಮೂಲ ನದಿ ಮೂಲ ಹುಡುಕಬಾರದು ಅಂತ ಹೇಳ್ತಾರೆ. ಆದರೂ ಕೆಟ್ಟ ಕುತೂಹಲ.

ಹೌದು ಕಣಯ್ಯಾ. ಅದೊಂದು ಸ್ಯಾಡ್ ಸ್ಟೋರಿ. ಟ್ರಾಜೆಡಿ ಅದೊಂದು, ಅಂತ ಸ್ವಾಮೀಜೀ ಹಿಂದಿನ ದಿನಗಳಿಗೆ ಫ್ಲಾಶ್ ಬ್ಯಾಕ್ ಹೋದರು.

ಹೇಳಿ ಸ್ವಾಮಿಜೀ? ಪ್ಲೀಸ್, ಅಂತ ಆಗ್ರಹಿಸಿದೆ.

PUC ಆದ ಮ್ಯಾಲೆ ಹಾಲಿಡೇಸ್ ನಲ್ಲಿ ನಮ್ಮ ಪಕ್ಕದ ಮನೆಗೆ ಒಬ್ಬಳು SSLC ಚಕೋರಿ ಬಂದಿದ್ದಳು ಕಣೋ. ಒಳ್ಳೆ ಚಿಗರೆ ತರಹಾ ಚಂಗ ಚಂಗ ಅಂತ ನೆಗೆದುಕೊಂಡು ಚೂಟಿ ಆಗಿತ್ತು ಬಾಲೆ. ಚಿಕ್ಕ ಫಿಗರ್. ಕ್ಯಾಚ್ ಹಾಕೋಣಾ ಅಂತ ಸ್ಕೆಚ್ ಹಾಕಿ, ಹಲೋ ಹಲೋ, ಮೈ ಸೆಲ್ಫ್ ಜಗ್ಗಾ ಉರ್ಫ್ ಜಗ್ಗೇಶ್. ಯುವರ್ ಸ್ವೀಟ್ ನೇಮ್ ಪ್ಲೀಸ್, ಅಂತ ಕೇಳಿದರೆ, ಹಲೋ ಅಂಕಲ್!!! ಅಂತ ಅಂದು ಬಿಡಬೇಕಾ ಆ ಚಿಕ್ಕ ಪೀಡೆ ಫಿಗರ್!!!.....ಅವಳಮ್ಮನ್, ಅವಳಯ್ಯನ್, ಅವಳ ಅಣ್ಣನ್, ಅಂತ ಸ್ವಾಮಿಗಳು ಫೀಲಿಂಗ್ ಒಳಗೆ ಹೇಳಿಕೊಂಡರು. ಚಿಕ್ಕ ಫಿಗರಿನ ಜನ್ಮ ಜಾಲಾಡಿ ಬಿಟ್ಟರು.

ಅಲ್ಲಾ ಸ್ವಾಮೀಜಿ.....TB ಹೋರಿ ಅಂದ್ರೆ ಏನು ಅಂತಾ ಹೇಳೋಕೆ ನಿಮಗೆ ತಕರಾರು. ಆದ್ರೆ ಈಗ ಅಮ್ಮನ್ ಅಯ್ಯನ್ ಅಣ್ಣನ್ ಅಂತ ಪೂರ್ತಿ ಫ್ಯಾಮಿಲಿಗೆ ಮಾಡಿ ಬಿಟ್ಟಿರಿ. ಯಾಕೆ? ಯಾಕೆ ಡಬಲ್ ಸ್ಟ್ಯಾಂಡರ್ಡ್? - ಅಂತ ಕೇಳಿದೆ.

ನೋಡು.....ನಾವು ಸ್ವಾಮೀಜಿ ಆದಾಗಿಂದ 'ಬ್ರಹ್ಮನ್' ಬಗ್ಗೆ ಕಲೀತಾ ಇದ್ದೀವಿ. ನಾವು ಸ್ವಾಮೀ ಆದ ಹೊಸತರಲ್ಲಿ ನಮ್ಮ ಬಡ್ಡು  ತಲೆಗೆ ವೇದಾಂತದ 'ಬ್ರಹ್ಮನ್' ಒಟ್ಟೂ ತಿಳಿತಿರಲ್ಲಿಲ್ಲ. ಆವಾಗ ನಮ್ಮ ಹಿರಿ ಸ್ವಾಮಿಗಳಾದ ಧಾರವಾಡದ ಶ್ರೀ ಶ್ರೀ ಹಾಪಾನಂದ ಸರಸ್ವತೀ ಸ್ವಾಮಿಜೀ ನಮಗೆ, ನಿನಗೆ ಬ್ರಹ್ಮನ್ ತಲೆಗೆ ಹೋಗಲ್ಲ. ನಿನ್ನ ಅಯ್ಯನ್, ಅಮ್ಮನ್, ಅಕ್ಕನ್ ಅಂತ ಬೈದು  ಬೈದು ಬ್ರಹ್ಮನ್ ಬಗ್ಗೆ ಕಲಿಸಿದರು. ಹಾಗಾಗಿ ನನ್ನ ಸನ್ಯಾಸಕ್ಕೆ ಕಾರಣಳಾದ, ಅಂಕಲ್ ಅಂದಿದ್ದ ಆ ಚಿಕ್ಕ ಫಿಗರ್ ಮೇಲೆ ಕೋಪ ಬಂದ್ಬಿಟ್ಟಿ ಏನೇನೋ ಅಂದು ಬಿಟ್ಟೆ. ಆದ್ರೆ 'TB ಹೋರಿ' ಅಂದ್ರೆ ಮಾತ್ರ ಏನು ಅಂತ ಹೇಳಲ್ಲ, ಅಂತ ಹೇಳಿದರು ಸ್ವಾಮೀಜಿ.

ಅದೇನೋ ಪಾರ್ಟಿ ಅಟ್ ಫಾರ್ಟಿ (party at forty) ಅಂದ್ರಿ. ಏನು ಅದರ ಅರ್ಥ? ಫಾರ್ಟಿ ಅಂದ್ರೆ ನಲವತ್ತು ವರ್ಷ ಆದ ಮ್ಯಾಲೆ ಜಾಸ್ತಿ ಪಾರ್ಟಿ ಮಾಡು ಅಂತಾನಾ? ನಲವತ್ತು ಆದ ಮ್ಯಾಲೆ ಎಲ್ಲ ಕಡಿಮೆ ಮಾಡಬೇಕು ಅಂತಾರೆ ಡಾಕ್ಟರು. ಇಲ್ಲಾಂದ್ರೆ ಬೇಗನೆ ಮನೆ ಮುಂದೆ ಹೊಗೆ ಹಾಕಿಸಿಕೊಳ್ಳೋದು, ಬಿದಿರ ಮೋಟಾರ್ ಮ್ಯಾಲೆ ಮೆರವಣಿಗೆ ಹೋಗೋ (ಅಂದ್ರೆ ಸಾಯೋದು) ಚಾನ್ಸಸ್ ಜಾಸ್ತಿ ಅಲ್ಲವಾ ಸ್ವಾಮೀಜಿ? - ಅಂತ ಕೇಳಿದೆ.

ಗುಗ್ಗು ಮುಂಡೇದೆ! ಅದು ಫಾರ್ಟಿ ಅಟ್ ಫಾರ್ಟಿ (farty at forty) ಅಂತಾ. ಅದು ನೋಡಿ ಇವರೇ. ಪಾಪ ಆಂಟೀಸ್ ಗೆ 'ನಾಟಿ ಅಟ್ ಫಾರ್ಟಿ' (naughty at forty) ಅಂತ ಸ್ಲೋಗನ್ ಬಂತು ನೋಡ್ರೀ, ಆವಾಗ ಗಂಡಸರೂ ಸಹ ತಮಗೂ ಒಂದು ಸ್ಲೋಗನ್ ಬೇಕು ಅಂತ ಹೇಳಿದರಂತೆ. ಆವಾಗ ನಿಮ್ಮಂತಹ TB ಹೋರಿ ಅಂಕಲ್ ಗಳ ಸಹವಾಸದಿಂದ ಬೋರೆದ್ದು ಹೋಗಿದ್ದ ಆಂಟಿಯರು 'farty at forty' ಅಂತ ಸ್ಲೋಗನ್ ಮಾಡಿಕೊಟ್ಟರಂತೆ. ಅದರಲ್ಲಿ ಸತ್ಯ ಇತ್ತು ಸಹ. ಅದಕ್ಕೇ ಅಂಕಲ್ ಜನ ಎಲ್ಲ ಹರಳೆಣ್ಣೆ ಕುಡಿದ ಮುಖ ಮಾಡಿಕೊಂಡು ಬಂದ್ರು. ಆಂಟೀಸ್ ಮಾತ್ರ ಎರಡೂ ಸ್ಲೋಗನ್ಸ್ ಸಕತ್ತಾಗಿ ಉಪಯೋಗ ಮಾಡೋದು, ಅಂತ ಹೇಳಿದರು ಸ್ವಾಮೀಜಿ.

ಎರಡೂ ಸ್ಲೋಗನ್ ಆಂಟಿಯರೇ ಉಪಯೋಗ ಮಾಡ್ತಾರಾ? ಹಾಂ? ಹೇಗೆ? - ಅಂತ ಕೇಳಿದೆ. ತಿಳಿಲಿಲ್ಲ.

ಅಯ್ಯೋ.....ನಾಟಿ ಅಟ್ ಫಾರ್ಟಿ (naughty at forty) ಅಂತ ತಮ್ಮ ಪರವಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಮತ್ತೆ ನಿಮ್ಮಂತ TB ಹೋರಿ ತರಹದ ಅಂಕಲ್ ಗಳಿಗೆ ಫಾರ್ಟಿ ಅಟ್ ಫಾರ್ಟಿ(farty at forty) ಅಂತ ಅಣಕಿಸುತ್ತಾರೆ. ಟಿಂಗಲ್ ಮಾಡ್ತಾರೆ. ಅಪಹಾಸ್ಯ ಮಾಡ್ತಾರೆ. ತಿಳೀತಾ? - ಅಂತ ಹೇಳಿದರು ಸ್ವಾಮೀಜಿ.

ಪಾರ್ಟಿ ಅಟ್ ಫಾರ್ಟಿ(party at forty) ಅಲ್ಲ ಅಂದ ಮ್ಯಾಲೆ ಫಾರ್ಟಿ ಅಟ್ ಫಾರ್ಟಿ (forty at 40) ಅಂದ್ರೆ ಏನು? ಫಾರ್ಟಿ ಅಂದ್ರೆ ನಲವತ್ತು ವರ್ಷ ವಯಸ್ಸು ಆದಾಗ ಫಾರ್ಟೀನೆ ಅಲ್ಲವಾ? - ಅಂತ ಕೇಳಿದೆ.

ಗುಗ್ಗು ಮುಂಡೇದೆ!!!! ಎಲ್ಲ ಬಿಡಿಸಿ ಬಿಡಿಸಿ ಹೇಳಬೇಕು. ನೀನು Y2K ಟೈಮ್ ನಲ್ಲಿ ಅಮೆರಿಕಾಗೆ ಹೋಗಿದ್ದೆ ಅಲ್ಲವಾ? 2001 ರಲ್ಲಿ ಡಾಟ್ ಕಾಂ ಬೂಮ್ (dot com boom) ಫುಲ್ ಹೊಗೆ ಹಾಕಿಸ್ಕೊಂಡು ಬರ್ಬಾದ್ ಆದ ಮ್ಯಾಲೆ ಮೇಲೆ ವಾಪಸ್ ಬಂದು ಜೇಪೀ ನಗರದಲ್ಲಿ ಈಗ ಅಮೇರಿಕಾಗೆ ಸೈಬರ್ ಕೂಲಿಗಳನ್ನ ಕಳಿಸುವ ಭಡವಾಗಿರಿ ಬಾಡಿ ಶಾಪಿಂಗ್ (body shopping) ಬಿಸಿನೆಸ್ ಶುರು ಮಾಡಿದಿಯಾ. ಅಲ್ಲವಾ? - ಅಂತ ಕೇಳಿದರು ಸ್ವಾಮೀಜಿ.

ಹೌದು ಸ್ವಾಮೀಜಿ. ಇದ್ದೆ ನಾನು ಅಮೇರಿಕಾದಲ್ಲಿ. ಅದಕ್ಕೇನು ಈಗ? ಅದಕ್ಕೆ ಮತ್ತೆ ಫಾರ್ಟಿ ಅಟ್ ಫಾರ್ಟಿಗೆ ಏನು ಸಂಬಂಧ? ಅಂತ ಕೇಳಿದೆ.

ಅಮೇರಿಕಾದಲ್ಲಿ ಬರೀಟೋ ತಿಂದಿದ್ದರಾ? - ಅಂತ ಕೇಳಿದರು.

ಹಾಂ!!! ಬರೀಟೊ!!! ಮೆಕ್ಸಿಕನ್ ಡಿಶ್. ಚಪಾತಿ ಒಳಗೆ ಏನೇನೋ ಹಾಕಿ ಸುರಳಿ ಸುತ್ತಿ ಕೊಟ್ಟಂಗೆ.

ಬರೀಟೊ ತಿಂದಿದಿನಿ ಸ್ವಾಮೀಜೀ. ಆದ್ರೆ ನಾನು ವೆಜಿಟೆರಿಯನ್. ಕೇವಲ ಬೀನ್ ಬರೀಟೋ ಮಾತ್ರ ತಿಂತಿದ್ದೆ. ಮಾಂಸ ಮಡ್ಡಿ ಹಾಕಿದ ಬರೀಟೋ ಎಲ್ಲ ತಿಂತಾ ಇರಲಿಲ್ಲ, ಅಂತ ಹೇಳಿದೆ.
ಬೀನ್ ಬರ್ರೀಟೋ

ಗೊತ್ತು ಕಣಪ್ಪಾ. ನಮ್ಮ ದೇಸಿ ಜನ ತಿನ್ನೋದು ಕೇವಲ ಬೀನ್ ಬರೀಟೋ ಮಾತ್ರ ಅಂತ. ಆ ಬೀನ್ ಬರೀಟೋ ಒಳಗೆ ಕರೆಕ್ಟಾಗಿ ಎಷ್ಟು ಬೀನ್ಸ್ ಇರತ್ವೆ ಅಂತ ಗೊತ್ತಾ? - ಅಂತ ಕೇಳಿದರು ಸ್ವಾಮೀಜಿ.

ಹಾಂ!!!! ಸ್ವಾಮಿಜೀ ಏನೇನೋ ಕೇಳುತ್ತಿದ್ದಾರೆ. ಈವಾಗಲೇ ಗಾಂಜಾ ಸೇದಿ ಬೇರೆ ಲೋಕಕ್ಕೇ ಹೋಗಿ ಬಿಟ್ಟಿದ್ದಾರೋ ಏನೋ ಅಂತ ಸ್ವಾಮೀಜಿ ಗಡ್ಡ ಮೂಸಿ ನೋಡಿದೆ. ಗಾಂಜಾ ವಾಸನೆ ಬರಲಿಲ್ಲ. ಮಧ್ಯಾನ್ಹ ಊಟ ಮಾಡಿದ್ದ ಸಾಂಬಾರ್ ವಾಸನೆ ಮಾತ್ರ ಬಂತು.

ಒಂದು ಬೀನ್ ಬರೀಟೋ ಒಳಗೆ ಇಷ್ಟೇ ಬೀನ್ಸ್ ಇರ್ತವೆ, ಅಷ್ಟೇ ಇರ್ತವೆ ಅಂತ ಕರಾರುವಕ್ಕಾಗಿ ಹೇಗೆ ಹೇಳೋದು ಸ್ವಾಮೀಜಿ? ಹಾಗೆ ಲೆಕ್ಕ ಇಡೋಕೆ ಅವೇನು ವಜ್ರಗಳೇ? ಬೀನ್ಸ್ ತಾನೇ? ಒಂದು ಹತ್ತು ಹೆಚ್ಚು ಕಮ್ಮಿ ಇರೊತ್ತೆ. ಏನೇನೋ ಕೇಳ್ತಿದೀರಾ. ನೀವೇ ಹೇಳಿ, ಅಂತ ಅಂದೆ.

ನೋಡಯ್ಯಾ. ಬೀನ್ ಬರ್ರಿಟೋ ಒಳಗೆ ಕರೆಕ್ಟಾಗಿ ಎರಡು ನೂರ ಮೂವತ್ತೊಂಬತ್ತು (239) ಬೀನ್ಸ್ ಇರತ್ವೆ. ಒಂದು ಕಾಳು ಜಾಸ್ತಿ ಆದರೂ ಅನರ್ಥ ಆಗಿ ಬಿಡತ್ತೆ. ಗೊತ್ತಾ? - ಅಂತ ಏನೋ ಮಹಾ ಫಾರ್ಮುಲಾ ಹೇಳಿದ ಹಾಗೆ ಹೇಳಿದರು ಸ್ವಾಮೀಜಿ.

ಏನು!? ಒಂದು ಜಾಸ್ತಿ ಆದ್ರೆ ಏನು ಆಗುತ್ತೆ? ಎರಡು ನೂರ ನಲವತ್ತು (240) ಬೀನ್ಸ್ ಇದ್ರೆ ಏನು ಮಹಾ? ಜಂಬೋ ಬರೀಟೊ ಒಳಗೆ ಜಾಸ್ತಿ ಇರಬಹುದು ಬಿಡಿ, ಅಂತ ಹೇಳಿದೆ.

ಅಲ್ಲೇ ಇರೋದು ನೋಡು ಪಾಯಿಂಟ. ಎರಡು ನೂರ ನಲವತ್ತು ಆದ್ರೆ ತೊಂದ್ರೆ, ಅಂತ ಅಂದ ಸ್ವಾಮೀಜಿ ಗಡ್ಡದ ಕೆಳಗೆ ನಕ್ಕರು.

ಏನು ತೊಂದರೆ?

ಎರಡು ನೂರ ನಲವತ್ತು ಇಂಗ್ಲೀಶ್ ಒಳಗೆ ಹೇಳು ಶಿಷ್ಯಾ, ಅಂತ ಪ್ರಾಂಪ್ಟ್ ಮಾಡಿದರು ಸ್ವಾಮೀಜಿ. 

ಟೂ ಫಾರ್ಟಿ. ಎರಡು ನೂರ ನಲವತ್ತು ಇಂಗ್ಲೀಶ್ ಒಳಗೆ ಟೂ ಫಾರ್ಟಿ ಅಂತ. ಇದಕ್ಕೇ ಮತ್ತೆ ಫಾರ್ಟಿ ಅಟ್ ಫಾರ್ಟಿ ಗೆ ಏನು ಸಂಬಂಧ ಗುರುವರ್ಯ? - ಅಂತ ಕೇಳಿದೆ

ಟೂ ಫಾರ್ಟಿ!!! ಟೂ ಫಾರ್ಟಿ!!! too farty!!!!ಟೂ ಫನ್ನಿ!!! ಬೀನ್ಸ್ ಬರೀಟೋ ಒಳಗೆ 240 ಬೀನ್ಸ್ ಹಾಕಿಬಿಟ್ಟರೆ ಅದು too farty ಆಗಿಬಿಡುತ್ತದೆ, ಅಂತ ಅಂಡು ತಟ್ಟಿಕೊಂಡು ನಕ್ಕರು ಸ್ವಾಮೀಜಿ. 

ಟೂ ಫಾರ್ಟಿ!!! ಟೂ ಫಾರ್ಟಿ!!!ಅಂತ ಅನ್ನುತ್ತ ಅಂಡು ತಟ್ಟಿಕೊಂಡಿದ್ದು ಏನೋ ಸೂಚಿಸಿತು. ಏನೋ ಅರ್ಥ ಆಯಿತು. 

ಥೂ!!! ಗಬ್ಬು ಸ್ವಾಮೀಜಿ....ಅದು ಫಾರ್ಟಿ (farty) ಲೈಕ್ ಇನ್ ಫಾರ್ಟಿಂಗ್ (farting) ಅಟ್ ಫಾರ್ಟಿ ಅಂತೇನಾ!!!? ಫಾರ್ಟಿ ಅಟ್ ಫಾರ್ಟಿ (farty at forty) ಅನ್ನೋಕೆ ನಲವತ್ತು ದಾಟಿದ ಗಂಡಸರೆಲ್ಲ ಬರೇ ಫಾರ್ಟಿಂಗೇ ಮಾಡ್ತಾರಾ? ಆಂಟೀಸ್ ನಮಗೆ ಹೀಗೆ "farty at forty" ಅನ್ನೋದು ಪೂರ್ತಿ ತಪ್ಪು. ಹಾಗೆ ಅನ್ನೋ ಆಂಟೀಸ್ ವಿರುದ್ಧ ಸತ್ಯಾಗ್ರಹ ಮಾಡಬೇಕು. ತಮಗೆ ಮಾತ್ರ naughty at forty, ನಮಗೆ ಮಾತ್ರ farty at forty ಅನ್ನೋದಾ? ಅಕಟಕಟ. ಯಾಕೆ ಹಾಂಗೆ ಹೆಸರು ಇಟ್ಟರು ನಮಗೆ ಅಂಟೀಸ್? - ಅಂತ ರೋಷದಿಂದ ಕೇಳಿದೆ. 

ಸ್ವಾಮೀಜಿ ಮಾತಾಡಲಿಲ್ಲ. ಬಾಗಿಲ ಹಿಂದಿಂದ ಒಂದು ಪೋಸ್ಟರ್ ಅಂತಹದ್ದು ಏನೋ ಈ ಕಡೆ ಸರಿಸಿ ತಂದರು. 

ನೋಡಿ....ಯಾಕೆ ನಿಮ್ಮಂತಹ ಗಂಡು ಮುಂಡೇವಕ್ಕೆ ಆಂಟೀಸ್ 'farty at forty' ಅಂತ ಹೆಸರು ಇಟ್ಟಿರೋದು. ನೋಡಿ ನೋಡಿ!!!!! - ಅಂದರು ಸ್ವಾಮೀಜೀ.
'farty at forty' ಅಂಕಲ್ ನಿಂದ ದುಃಖಿತಳಾದ 'naughty at forty' ಆಂಟಿ

ಒಳ್ಳೆ ಕಥೆ ಆಯಿತು ಈ ಆಂಟಿಗಳದ್ದು!!!! ಇವರನ್ನ, ಇವರ ಮಕ್ಕಳನ್ನ, ಇವರ ಅಪ್ಪಾಮ್ಮನ್ನ ಸಾಕೋಕೆ ಅಂತ ನಾವು ಹೆಲ್ತ್ ಪೂರ್ತಿ ಬರಬಾದು ಮಾಡಿಕೊಂಡು, ಹೊಟ್ಟೆ ಮತ್ತೊಂದು ಕಟ್ಟಿ, ಕತ್ತೆ ತರಹ ದುಡಿದು, ಏನೋ ಆವಾಗೊಮ್ಮೆ ಈವಾಗೊಮ್ಮೆ ಗ್ಯಾಸ್ ಜಾಸ್ತಿ ಆದಾಗ ಎಲ್ಲೋ ಒಂದೋ ಎರಡೋ ಡರ್ರಾ ಬರ್ರಾ ಅಂತ ತೋಪು ಹಾರಿಸಿದರೆ ಆಂಟೀಸ್ ನಮಗೆ farty at forty ಅಂತ ಹೇಳಿ, ACP ಅದು ಇದು ಅನ್ನೋ ಚಿಕ್ಕ ಹುಡುಗರ ಹಿಂದೆ ಹೋಗಿ ಬಿಡೋದಾ? ಎಷ್ಟು naughty ಈ ಆಂಟಿಯರು? ಹಾಂ! ಹಾಂ! - ಅಂತ ಆಕ್ಷೇಪ ವ್ಯಕ್ತಪಡಿಸಿದೆ.


ಆಂಟೀ expression ನೋಡಿ... :)

ರೀ ....ಸ್ವಲ್ಪ ರೋಮ್ಯಾಂಟಿಕ್ ಆಗ್ರೀ. 'ಹಾಡು ಹಳೆಯದಾದರೇನು, ಭಾವ ನವ ನವೀನ' ಅನ್ನೋ ಹಾಡು ಇದ್ದ ಹಾಗೆ 'ಹೆಂಡ್ತೀ ಹಳೆಯದಾದರೇನು ಏನೇನೋ ನವ ನವೀನ' ಅಂತ ಚೇಂಜ್ ಮಾಡಿಕೊಂಡು ಸ್ವಲ್ಪ ರೋಮ್ಯಾಂಟಿಕ್ ಆಗ್ರೀ. ಅದನ್ನ ಬಿಟ್ಟು ಮಂಚ ಹತ್ತಿದಾಕ್ಷಣ ಹೆಂಡ್ತೀ ಕಡೆನೇ ತೋಪು ತಿರುಗಿಸಿ ಬಾಂಬ್ ಹಾರಿಸೋದಾ? ಶಿವ ಮೆಚ್ಚೋ ಮಾತೇನ್ರೀ? - ಅಂತ ಸ್ವಾಮಿಗಳು ಹೇಳಿದ್ರು. ಹಿಂದಿನ ಜನ್ಮದಲ್ಲಿ ಕೃಷ್ಣ ಪರಮಾತ್ಮ ಆಗಿದ್ದರು ಅಂತ ಕಾಣುತ್ತದೆ ಸ್ವಾಮಿಗಳು. ಭಾಳ ರೋಮ್ಯಾಂಟಿಕ್ ಸ್ವಾಮೀಜೀ. 

ನಾವು ಮನಸ್ಸಿನಲ್ಲಿ ಅಂದುಕೊಂಡಿದ್ದು ಗುರುಗಳಿಗೆ ತಿಳಿಯಿತು ಅಂತ ಕಾಣುತ್ತದೆ. 

ಹೌದು!!! ಹೌದು!!! ಆಗಿದ್ದೆ  ಕೃಷ್ಣ ಹಿಂದಿನ ಜನ್ಮದಲ್ಲಿ. ನಾನೇ ಕೃಷ್ಣ, ನಾನೇ ರಾಮ, ನಾನೇ ಪೈಗಂಬರ, ನಾನೇ ದಿಗಂಬರ, ನಾನೇ ಮಹಾವೀರ, ನಾನೇ ಏಸು, ನಾನೇ ನಿಜಾಮ. ನಾನೇ ಹಜಾಮ......ಮಾತ್ರ ಅಲ್ಲ, ಅಂತ ಸ್ವಾಮೀ ಜಗ್ಗೇಶಾನಂದ ಹೇಳಿದರು. 

ಅಲ್ಲ ಸ್ವಾಮೀಜಿ....ಸರ್ವಸಂಗ ಪರಿತ್ಯಾಗಿಗಳಾದ ನಿಮಗೆ ಇದೆಲ್ಲ ಜ್ಞಾನ!? ಹೇಗೆ? - ಅಂತ ಕೇಳಿದೆ. 

ಸ್ವಾಮಿಗಳು ಗಡ್ಡ ನೀವಿಕೊಂಡು ನಿಗೂಢ ಲುಕ್ ಕೊಟ್ಟರು. 

ಇವೆಲ್ಲ ನಾವು ಪರಕಾಯ ಪ್ರವೇಶ ಮಾಡಿ ಕಲಿತದ್ದು. ನಮ್ಮ ಪರಮ ಗುರು ಶ್ರೀ ಶ್ರೀ ಹಾಪಾನಂದರ ಕೃಪೆ, ಅಂತ ಹೇಳಿದರು ಸ್ವಾಮೀಜಿ. 

ಆದರೆ ನೀವು ನಿಮ್ಮ ದೇಹ ಬಿಟ್ಟು ಬೇರೆ ದೇಹದಲ್ಲಿ ಹೋಗಿದ್ದನ್ನ ನೋಡಿಲ್ಲವಲ್ಲ ಗುರೂಜಿ? - ಅಂತ ಸಂಶಯ ವ್ಯಕ್ತ ಪಡಿಸಿದೆ. 

ಮೂರ್ಖ! ನಾವು ಬೇರೆಯವರ ಬಾಡಿ ಒಳಗೆ ಹೊಕ್ಕೋಕೆ ಅಮೆರಿಕಾಕ್ಕೆ ಕಂಪ್ಯೂಟರ್ ಕೂಲಿಗಳನ್ನ ಕಳಿಸಿ, ಭಡವಾಗಿರಿ ಮಾಡುವ ನಿನ್ನಂತಹ ಬಾಡಿ ಶಾಪ್ಪರ್ (body-shopper) ಅಂತ ತಿಳಿದಿದ್ದಿಯೇನೋ? ಅಲ್ಲ. ನಾವು ಕೇವಲ ಮನಸನ್ನು ಮಾತ್ರ ಪ್ರವೇಶಿಸಿ, ಮನಸ್ಸಲ್ಲಿ ಇರೋದನ್ನ ತಿಳಿದು ಬರುತ್ತೇವೆ. ಹೀಗಾಗಿಯೇ ನಮಗೆ ಆಂಟಿಗಳ ಮನಸಲ್ಲಿ ನಿಮ್ಮಂತ ವೇಸ್ಟ್ ಬಾಡಿ ಗಂಡಸರ ಬಗ್ಗೆ ಇರುವ ವೈರಾಗ್ಯ ತಿಳಿಯಿತು. ನಿಮ್ಮಂತಹ ಖಬರಿಲ್ಲದ ಗಂಡು ಪ್ರಾಣಿಗಳಿಗೆ, ಹೆಂಡ್ತೀ ಕಡೆ ತೋಪು ತಿರುಗಿಸಿ ಬಾಂಬ್ ಹಾಕೋದನ್ನ ಸ್ಟಾಪ್ ಮಾಡಿ, ಇಲ್ಲವಾದರೆ ಯಾರೋ ಚಿಕ್ಕ ಪುಟ್ಟ ಹುಡುಗರು ಬಂದು ನಿಮ್ಮ ಆಂಟಿಗಳಿಗೆ, ACP, DCP ಅಂತ ಏನೇನೋ ಪುಂಗಿ ಊದಿ ಪಟಾಯಿಸಿಕೊಂಡು, ನಿಮ್ಮ ಕೈಗೆ ಚಿಪ್ಪು ಕೊಟ್ಟು ಹೋಗುತ್ತಾರೆ. ಅದನ್ನೇ ಮತ್ತೆ ಮತ್ತೆ ಹೇಳುತ್ತಿದ್ದೇವೆ. ಅದೂ ನಿಮ್ಮ ಒಳಿತಿಗಾಗಿ, ಅಂತ ಹೇಳಿದರು ಸ್ವಾಮೀಜಿ. 

ಸತ್ಯವಾದ ಮಾತು. 

ಧನ್ಯೋಸ್ಮೀ!!! ಶ್ರೀ ಶ್ರೀ ಜಗ್ಗೇಶಾನಂದ ಸ್ವಾಮೀಜಿ ಧನ್ಯ ಧನ್ಯ. ಅವರ್ಯಾರೋ ಇನ್ನೊಬ್ಬ ಶ್ರೀ ಶ್ರೀ ಆರ್ಟ್ ಆಫ್ ಲಿವಿಂಗ್ (art of Living) ಅಂತ ಉಪದೇಶ ಮಾಡಿದರೆ ನೀವು farting ಮೇಲೆ farty at forty ಅಂತ ಮನೋಜ್ಞವಾಗಿ ಉಪದೇಶ ಮಾಡಿ ನಮ್ಮಂತಹ ಓಲ್ಡ್ ಫಾರ್ಟ್ಸ್ (old farts) ಗಂಡು ಮುಂಡೆಗಂಡರ ಕಣ್ಣು ತೆಗೆಸಿದ ನಿಮಗೆ ಮತ್ತು ನಿಮ್ಮ (F)art of Living ಸಂದೇಶಕ್ಕೆ ನಮೋ ನಮಃ!!!! - ಅಂತ ಉದ್ದಂಡ ಸಕಲಾಂಗ ಸಾಷ್ಟಾಂಗ ನಮಸ್ಕಾರ ಹಾಕಿಬಿಟ್ಟೆ. 

ಕೈಯಲ್ಲಿ ಹಿಡದಿದ್ದ ಚೊಂಬಿನಂತಹ ಕಮಂಡಲುವಿನಿಂದ ನೀರು ತೋಕಿದ ಸ್ವಾಮೀಜಿ, ಭಂ ಭಂ ಭೋಲೆನಾಥ್, ಅಂತ ಆಶೀರ್ವಾದ ಮಾಡಿದರು. 

ಸ್ವಾಮಿಗಳೇ..... ACP ಅಂದ್ರೆನೋ ಆಂಟಿ ಕಮ್ ಪೀಸೂ (auntie cum piece) ಅಂತ ಗೊತ್ತಾಯಿತು. DCP ಅಂದರೆ? ಡೆಪ್ಯುಟಿ ಕಮಿಷನರ್ ಆಫ್ ಪೋಲಿಸ್ ಅಂತೂ ಇರಲಿಕ್ಕಿಲ್ಲ. DCP ಅಂದ್ರೆ ಏನು ಸ್ವಾಮೀಜಿ? - ಅಂತ ಕೇಳಿದೆ. 

DCP ಅಂದರೆ ದಾಸಿ ಕಂ ಪೀಸೂ ಅಂತ ಅರ್ಥ!! - ಅಂತ ಗಂಭೀರವಾಗಿ ಹೇಳಿದರು ಸ್ವಾಮೀಜಿ. 

ಹಾಂ!!! ದಾಸಿ ಕಂ ಪೀಸಾ? ಇದನ್ಯಾರಿಗೆ ಅನ್ನೋದು ಸ್ವಾಮೀಜೀ? - ಅಂತ ಕೇಳಿದೆ. 

ಮೂರ್ಖ!!!! ನನ್ನ  (F)art of Living ಸಂದೇಶ ಪಾಲಿಸಿ ನಿನ್ನ ತೋಪಿಂದ ಬಾಂಬ್ ಹಾಕುವದನ್ನು ನಿಲ್ಲಿಸಲಿಲ್ಲ ಅಂದ್ರೆ ನಿನ್ನ ಪತ್ನಿ  ACP ACP ಅಂತ ಪುಂಗಿ ಊದಿ ಪಟಾಯಿಸಿದ ಚಿಕ್ಕ ಮನ್ಮಥನ ಹಿಂದೆ ಬಿದ್ದು ಓಡಿ ಹೋಗುತ್ತಾಳೆ. ಆವಾಗ ಏನು ಮಾಡುವೆ? ಇದ್ದರಲ್ಲಿ ನಿನ್ನ ಮನೆ ಕೆಲಸದವಳು ಅಂದರೆ ದಾಸಿ ಅಷ್ಟೋ ಇಷ್ಟೋ ಸುಂದರವಾಗಿದ್ದರೆ ಅವಳಿಗೇ DCP DCP, ದಾಸಿ ಎಷ್ಟು ಸಕತ್ ಪೀಸ್ ಕಣೆ ನೀನು, ಅಂತ ಪುಂಗಿ ಊದಿ ದಾಸಿಯ ದಾಸನಾದೀಯ. ಹುಷಾರ್!!!! ಆ ಪರಿಸ್ಥಿತಿ ಬಂದೀತು. ಬರೋದು ಬೇಡ. ಅದಕ್ಕೇ (F)art of Living ಕಲಿತು ಆಚರಿಸು, ಅಂತ ಸ್ವಾಮಿಗಳು ವಾರ್ನಿಂಗ್ ಕೊಟ್ಟರು.

ಮನೆ ಕೆಲಸ ಮಾಡುವ ವಿಧವೆ ಫಣಿಯಮ್ಮನ  ಬೋಡು ತಲೆ ಮೇಲೆ ವಾರದ ಗಡ್ಡದಂತಹ ಕೂದಲು ಕಂಡಂತಾಗಿ, ಮಡಿ ಹೆಂಗಸಿಗೆ 'ಸಕತ್ ಪೀಸೂ ಕಣೆ ನೀನು' ಅನ್ನುವ ಕರ್ಮ ಯಾರಿಗೆ ಬೇಕು ಅಂತ ಗುರುಗಳ ಸಂದೇಶ ಪಾಲಿಸಬೇಕು ಅಂತ ಅಂದುಕೊಂಡೆ.

ಅಷ್ಟರಲ್ಲಿ ಬೆಳ್ಳಿಯ ಲೋಟದಲ್ಲಿ ಏನೋ ತೆಗೆದುಕೊಂಡು ಒಬ್ಬ ಪಟಾಕಾ ಫಿಗರ್ ಬಂದು, ನಖರಾ ತೋರಿಸುತ್ತ, ಬಳಕುತ್ತ ಸ್ವಾಮಿಗಳಿಗೆ ಏನೋ ಕುಡಿಸಿದಳು. ಸ್ವಾಮಿಗಳ ಅಸಂಖ್ಯಾತ ದಾಸಿಯರ ಪೈಕಿಯಲ್ಲಿ ಒಬ್ಬಳಂತೆ. 

Thank you very much ದಾಸೀ, ಅಂತ ಅಕೆಯ ಕುಂಡೆ ತಟ್ಟಿ ಆಶೀರ್ವಾದ ಮಾಡಿದ ಸ್ವಾಮೀಜಿ ನನ್ನ ಕಡೆ ನೋಡಿ ಮುಗುಮ್ಮಾಗಿ ನಕ್ಕರು. ಸ್ವಾಮಿಗಳಿಗೆ ಇರುವ ಹೆಚ್ಚುವರಿ ಭತ್ಯೆಗಳಲ್ಲಿ (additional perks) ಭಕ್ತೆಯರಿಗೆ ಎಲ್ಲೆಲ್ಲೋ ಏನೇನೋ ತಟ್ಟಿ ಆಶೀರ್ವಾದ ಮಾಡುವದೂ ಒಂದು ಪ್ರಮುಖ ಭತ್ಯೆ ಅನ್ನುವ ಅರ್ಥದಲ್ಲಿ ದೇಶಾವರೀ ನಗೆ ಬೀರಿದ ಸ್ವಾಮೀಜಿ, ಹೆಂಗೆ?, ಅಂತ ಅಣಕಿಸಿದಂತಾಯಿತು. 

ಸ್ವಾಮೀ ನಿತ್ಯಾನಂದ ಮುಂದೆ ಬಂದು ನಿಂತಂಗೆ ಆಗಿತ್ತು. ಲೈಫ್ ಮಸ್ತ ಇದೆ. ಎಂಜಾಯ್ ಮಾಡಿ ಸ್ವಾಮೀಜಿ, ಅಂತ ಮನಸ್ಸಿನಲ್ಲೇ ಅಂದುಕೊಂಡೆ. 

ಹರಿ ಓಂ!! ಹರಿ ಓಂ!! (F)art of Living ಸ್ವಾಮೀಜಿಗೆ ಜೈ!!! farty at forty ಗಂಡುಗಳಿಗೆ ಮುಕ್ತಿ ಕೊಟ್ಟ ಸ್ವಾಮೀ ಮುಕ್ತಾನಂದರಿಗೆ ಜೈ!! ಜೈ!! - ಎಂಬ ಘೋಷಣೆಗಳಿಂದ ಆಶ್ರಮ ತುಂಬಿಹೋಯಿತು. 

ಸ್ವಾಮಿಗಳ ಉಪದೇಶ ಕೇಳುತ್ತಾ ಅದರಲ್ಲೇ ಮಗ್ನನಾಗಿ ಬಿಟ್ಟಿದ್ದೆ. ಇಷ್ಟೆಲ್ಲ ಬೇರೆ ಬೇರೆ ಇತರೆ ಭಕ್ತರು ಬಂದಿದ್ದು ಗೊತ್ತೇ ಆಗಿರಲಿಲ್ಲ. ಬಾಗಿಲಲ್ಲಿ ಬಿಟ್ಟ ಹೊಸಾ ಕೊಲ್ಲಾಪುರೀ ಚಪ್ಪಲ್ಲು ಇದೆಯೋ ಇಲ್ಲವೋ ಅಂತ ಚಿಂತೆ ಆಯಿತು. ಗಡಬಡಿಸಿ ಓಡಿ ಬಂದೆ. ಇತ್ತು. ಪುಣ್ಯಕ್ಕೆ. ಮೆಟ್ಟಿ ಮನೆ ಹಾದಿ ಹಿಡದೆ.

** ಜಗ್ಗೇಶ್ ನಟಿಸಿದ್ದ 'ಕಾಸು ಇದ್ದೋನೆ ಬಾಸು' ಅನ್ನೋ ಟಿಪಿಕಲ್ ಜಗ್ಗೇಶ್ ಕಾಮಿಡಿ ಮೂವಿನಲ್ಲಿ ಬರುವ ಜಗ್ಗೇಶ್ ಅವರ ಸ್ವಾಮಿಯ ಪಾತ್ರ ಕೂಡ ಒಂದು ಸ್ಪೂರ್ತಿ. ಅವರಿಗೆ ಮತ್ತು ಅವರ ಕಾಮೆಡಿಗೆ ಒಂದು ದೊಡ್ಡ ಸಲಾಂ. ಸಕತ್ ಸ್ವಾಮೀಜೀ ಹಾಡಿಗೆ 9:00 ಗೆ ಫಾಸ್ಟ್ ಫಾರ್ವರ್ಡ್ ಮಾಡಿ. ಪೂರ್ತಿ ನೋಡಿ. ಮಸ್ತ ಇದೆ.


Sunday, July 07, 2013

'ಹಾದಿ ಶಂಕರಾ' ಜಯಂತಿ, ಮುಬಾರಕ್, ಮುಬಾರಕ್!

ಆವತ್ತು ಸ್ವಲ್ಪ ಬಿಜಿ ಇದ್ದೆ. ಲಗೂ ಲಗೂ ನೆಡಕೋತ್ತ ಹೊಂಟಿದ್ದೆ. ಅದss ಟೈಮ್ ಒಳಗ  ಸಿಕ್ಕ ಕರೀಂ. ಖರೆ ಅಂದ್ರ ಮಾತಾಡೋ ಪರಿಸ್ಥಿತಿ ಇರಲಿಲ್ಲ. ಆದರೂ ಸಿಕ್ಕಾಪಟ್ಟೆ ಖಾಸ್ ದೋಸ್ತ ನಮ್ಮ ಕರೀಂ ಸಾಬ್ರು. ಹಿಡಿದು ನಿಲ್ಲಿಸಿದ ಅಂದ್ರ ಮಾತಾಡಲೇ ಬೇಕಲ್ಲಾ? ನಾ ಬ್ಯಾರೆ ಮೊಬೈಲ್ ಮ್ಯಾಲೆ ಯಾರದ್ದೋ ಜೊತಿ ಏನೋ ಮಾತಾಡಿಕೋತ್ತ ಬ್ಯಾರೆ ಇದ್ದೆ.

ಸಾಬ್, ಹಾದಿ ಶಂಕರಾ........ ಅಂತ ಏನೋ ಅಂದಾ ಕರೀಂ. ಆವಾ ಹೇಳಿದ್ದನ್ನ ಮೊಬೈಲ್ ಮೇಲಿದ್ದ ನಾ ಸರಿ ಕೇಳಿಸಿಕೊಳ್ಳಲಿಲ್ಲ  ಬಿಡಿ.

ಸಲಾಂ ಕರೀಂ. ಇಲ್ಲಿಗೆ ಬರೋ ಮುಂದ ಹಾದಿಯೊಳಗ ಯಾರೂ ಶಂಕರಾ  ಸಿಗಲಿಲ್ಲ ಮಾರಾಯಾ. ಏನು ಹಾದಿ ಶಂಕರಾ ಹಚ್ಚಿಯೋ? - ಅಂತ ಅರ್ಧಂಬರ್ಧಾ ಗಮನ ಕೊಟ್ಟುಗೋತ್ತ ಕೇಳಿದೆ.

ಹಾದಿ ಶಂಕರಾ...ಗೊತ್ತಿಲ್ಲ ಕ್ಯಾ ನಿಮಗೆ? ಮತ್ತೆ ಜಯಂತಿ ಅಂತೆ. ಹೌದು ಕ್ಯಾ? ಮುಬಾರಕ್ ಮುಬಾರಕ್!!! - ಅಂತ ಏನೇನೋ ಹೇಳಿ ತಲಿ ಕೆಡೆಸಿಬಿಟ್ಟ ಕರೀಂ.

ಅಷ್ಟರಾಗ ನನ್ನ ಫೋನ್ ಕಾಲ್ ಸಹಿತ ಮುಗೀತು. ಇವಂದು ಏನಪಾ ನೋಡೋಣ ಅಂತ ಕರೀಮಗ ಫುಲ್ ಗಮನ ಕೊಟ್ಟೆ.

ಸಾಬ್ರಾ....ಯಾರ್ರೀ ಹಾದಿ ಶಂಕರಾ? ಹಾದಿಮನಿ ಶಂಕ್ರ್ಯಾ ಏನು? ನಮ್ಮ ಹೈಸ್ಕೂಲ್ ಕ್ಲಾಸ್ಮೇಟ್. ಗೊತ್ತಿಲ್ಲ ನನಗ  ಅವಾ ಈಗ  ಎಲ್ಲೇ ಇದ್ದಾನೋ ಏನೋ? - ಅಂತ ಹೇಳಿದೆ.

ಅಯ್ಯೋ ಸಾಬ್!!! ಹಾದಿ ಶಂಕರಾ ಅಂತ ನಾವು ಅಂದ್ರೆ ನೀವು ಹಾದಿಮನಿ ಶಂಕ್ರ್ಯಾ ಅಂತ ಕೇಳೋದು ಕ್ಯಾ? ಹಾದಿಮನಿ ಶಂಕ್ರ್ಯಾ ನಮಗೆ ಮನ್ನೆ ಸಿಕ್ಕಿದ್ದ, ಅಂದ ಕರೀಂ.

ಮತ್ತೆ ಏನೋ ಮಾರಾಯಾ? ಯಾವ ಹಾದಿ ಶಂಕರಾ? ಏನು ಕಥಿ? ಸರಿಯಾಗಿ ಹೇಳೋ ಮಾರಾಯಾ ಕರೀಂ, ಅಂತ ಕೇಳಿದೆ. ಅಷ್ಟರಾಗ ನನ್ನ ಮೊಬೈಲ್ ಮ್ಯಾಲೆ ಮತ್ತ ಫೋನ್ ಬಂತು.

ಸಾಬ್!!!ಹಾದಿ ಶಂಕರಾ, ಜಯಂತಿ ಮುಬಾರಕ್ ಮುಬಾರಕ್!!! , ಅಂತ ಹೇಳಿದ ಕರೀಂ.

ಇದೇನೋ ಗಹನವಾದದನ್ನೇ ಕರೀಮಾ ಹೇಳಲಿಕತ್ತಾನ ಅಂತ ಕಾಲ್ ಬಂದು ಮಾಡಿ ಫುಲ್ ಗಮನ ಕೊಟ್ಟೆ.

ಏನು?! ಹಾದಿಮನಿ ಶಂಕ್ರ್ಯಾ, ಮೂಲಿಮನಿ ಜಯಂತಿ ಲಗ್ನಾ ಮಾಡಿಕೊಂಡ್ರಾ? ಅದಕ್ಕಾ - ಹಾದಿ ಶಂಕರಾ, ಜಯಂತಿ ಮುಬಾರಕ್ ಮುಬಾರಕ್ - ಅಂತ ಶುಭಾಶಯ ಹೇಳಲಿಕತ್ತಿ ಏನೋ? ವೆರಿ ಗುಡ್, ಅಂತ ಹೇಳಿದೆ. ಒಂದು ಪುರಾತನ ಪ್ರೇಮ ಕಹಾನಿ ಸಕ್ಸಸ್ ಆಯಿತು ಅಂತ ಖುಷಿ ಆತು.

ಇವ ಶಂಕರ ಹಾದಿಮನಿ. ಅಕಿ ಜಯಂತಿ ಮೂಲಿಮನಿ. ಲಗ್ನಾ ಆದ ಮ್ಯಾಲೆ ಶಂಕ್ರ್ಯಾ ಹಾಲಿಮನಿ ಆದ್ನೋ? ಅಥವಾ ಅಕಿ ಜಯಂತಿ ಮೂದಿಮನಿ ಆದಳೋ? ಇಬ್ಬರ ಅಡ್ಡಹೆಸರು 'ಮನಿ' ನೋಡು. ಒಂದ ಅಕ್ಷರ ಇತ್ಲಾಗ ಅತ್ಲಾಗ ಮಾಡಿದ್ರ ಏನೇನೋ ಮನಿ ಆಗಿ ಬಿಡ್ತಾವ. ಹಾ!!! ಹಾ!!! - ಅಂತ ಜೋಕ್ ಹೊಡದೆ.

ಸಾಬ್!!! ನಿಮಗೆ ಬುದ್ಧಿ ಇಲ್ಲ ಕ್ಯಾ? ಅಲ್ಲಾ ನಾವು ಹೇಳಿದ್ದು ಏನು? ಹಾಂ? ಹಾಂ? ಹಾದಿಮನಿ ಶಂಕ್ರ್ಯಾ ಸಿಕ್ಕಿದ್ದ ಅಂತ. ಎಲ್ಲೇ ಸಿಕ್ಕಿದ್ದ? ಯಾವ ಕಂಡೀಶನ್ ಒಳಗೆ ಸಿಕ್ಕಿದ್ದ? ಏನು ಮಾಡಿದ್ವೀ? ಅನ್ನೋದೆಲ್ಲಾ ಕೇಳೋದು ಬಿಟ್ಟು ಹಾದಿಮನಿ ಶಂಕ್ರ್ಯಾಗೆ ಮತ್ತೆ ಮೂಲಿಮನಿ ಜಯಂತಿಗೆ ಶಾದಿ ಆಯಿತಾ ಅಂತ ಕೇಳ್ತೀರಿ... ಹಾಂ? ತಲಿ ಇಲ್ಲ ಕ್ಯಾ ನಿಮಗೆ? - ಅಂತ ಕರೀಂ ಬಾರಿಸಿದ.

ಏನಾತೋ?ಹಾದಿಮನಿ  ಶಂಕ್ರ್ಯಾಂದು ಮತ್ತ ಮೂಲಿಮನಿ ಜಯಂತಿದು ಲಗ್ನಾ ಆಗಿಲ್ಲ ಅಂದ್ರ ಮತ್ತೇನು ನನ್ನ ಭಾಯಿ ಆಗಪಾ ಶಂಕ್ರೂ ಅಂತ ರಾಖೀ ಕಟ್ಟಿದಳೇನು ಜಯಂತಿ? ರಾಖೀ ಕಟ್ಟಿಸಿಕೊಂಡ ಶಂಕ್ರ್ಯಾ ಸೈಕೋ ಆಗಿಬಿಟ್ಟ ಏನು? - ಅಂತ ಕೇಳಿದೆ.

ನಮಗೆ ಶಂಕ್ರ್ಯಾ ಸಿಕ್ಕಿದ್ದು ಹುಬ್ಬಳ್ಳಿ ಕಮರೀಪೇಟ್ ಒಳಗೆ. ಅಲ್ಲಿ ಸಾವಜಿ ಖಾನಾವಳಿ ಒಳಗೆ ನಾಕ್ನಾಕ್ ಕೀಮಾ ಬಾಲ್ಸ್ ತಿಂದುಬಿಟ್ಟಿ, ಒಂದೊಂದು ಕ್ವಾರ್ಟರ್ ಹಾಕಿಸಿ ಬಂದೆ. ಶಂಕ್ರ್ಯಾ ಪಾಪ ಈಗ ಕಂಟ್ರಿ ಶೆರೆ ಕುಡಿತಾನೆ. ನಾವೇ ಪಾಪ ಅಂತ ಹೇಳಿಬಿಟ್ಟಿ ಒಂದು ಕ್ವಾರ್ಟರ್ 'ಹಳೆ ಮಂಗ್ಯಾ' ಹಾಕಿಸಿ ಊಟ ಮಾಡಿಸಿ ಕಳ್ಸಿದಿವಿ ಶಂಕ್ರ್ಯಾಗೆ. ಗೊತ್ತು ಕ್ಯಾ? - ಅಂತ ಹೇಳಿದ ಕರೀಂ.

ಹಾದಿಮನಿ ಶಂಕ್ರ್ಯಾ ಕಂಟ್ರಿ ಶೆರೆ ಕುಡಿಯೋ ಪರಿಸ್ಥಿತಿಗೆ ಬಂದ್ನಾ!? 'ಹಳೆ ಮಂಗ್ಯಾ' ಅಂದ್ರ 'old monk' ರಮ್ ಕುಡಿಸಿದ 'ರಂ'ಗಣ್ಣ ನೀನು. ಪುಣ್ಯಾ ಬರಲಿ ನಿನಗ. ಕಂಟ್ರಿ ಕುಡಿಲಿಕತ್ತಾನ ಅಂದ್ರ ಜಯಂತಿ ಪಾಪ 'ನಾಮಾ' ಹಾಕಿ ಹೋಗ್ಯಾಳ ಅಂತ ಅನ್ನಸ್ತದ. ನಾಮಾ ಹಾಕಿ ಹೋಗ್ಯಾಳ ಅಂತೇನು? ನಾಮಾ? ಹಾಂ? ಹಾಂ? -ಅಂತ ಕೇಳಿದೆ. ಒಂದು ಅರ್ಧಂಬರ್ಧಾ ಸುಟ್ಟು ಹೋದ ಲವ್ ಅಫೇರ್ ವಾಸನಿ ಬಂತು.

ನಿಮಗೆ ಗೊತ್ತಿಲ್ಲ ಕ್ಯಾ? ಮೂಲಿಮನಿ  ಜಯಂತಿ ಯಾರೋ ಬ್ಯಾರೆ ಆದಮೀ ಗೆ ಶಾದಿ ಮಾಡ್ಕೊಂಡು ಬಿಟ್ಟಿ ಎಲ್ಲೋ ವಿಲಾಯತ್ ಮೇ ಸೆಟ್ಲ್ ಆಗಿ ಬಿಟ್ಟಿದಾಳೆ. ಅದಕ್ಕೇ ನಮ್ಮ ಶಂಕ್ರ್ಯಾ ಇಲ್ಲಿ 'ನಾಮ'ಧಾರಿ ಆಗಿ ಕಂಟ್ರಿ ಸೆರೆ ಕುಡ್ಕೊಂಡು ಇದ್ದಾನೆ. ನಾವು ಹೇಳಿದ್ದು ಅದು ಅಲ್ಲವೇ ಅಲ್ಲ. ಬೇರೇನೆ ಏನೋ. ಏನೇನೋ ಹೇಳ್ತೀರಿ ಅಲ್ಲಾ!! ಅಂತ ಸ್ವಲ್ಪ ಅಸಹನೆಯಿಂದ ಹೇಳಿದ ಕರೀಮ ಮತ್ತ ಮತ್ತ, ಹಾದಿ ಶಂಕರಾ ಜಯಂತಿ ಮುಬಾರಕ್ ಮುಬಾರಕ್, ಅಂತ ಅಂದು ಬಿಟ್ಟ.

ಈಗ ಫುಲ್ ತಲಿ ಕೆಡ್ತು. ಹಾದಿಮನಿ ಶಂಕ್ರ್ಯಾಗ ಹಾದಿ ಶಂಕರಾ ಅಂತಾನೇನೋ ಅಂತ ತಿಳ್ಕೊಂಡೆ. ಇಲ್ಲ. ಹಾದಿಮನಿ ಶಂಕ್ರ್ಯಾಗೂ ಮೂಲಿಮನಿ ಜಯಂತಿಗೂ ಲಗ್ನಾತೇನೋ ಅಂತ ಕೇಳಿದ್ರ ಅದೊಂದು ಬರ್ಬಾದ್ ಪ್ರೇಮ ಕಹಾನಿ ಅಂತಾನ. ಹಾಂಗಿದ್ರ ಏನು ಮಾತಿಗೊಮ್ಮೆ, 'ಹಾದಿ ಶಂಕರಾ ಜಯಂತಿ ಮುಬಾರಕ್ ಮುಬಾರಕ್', ಅಂತ ಯಾಕ ಅನ್ನಲಿಕತ್ತಾನ ಅಂತ ಖರೇನಾ ತಿಳಿಲಿಲ್ಲ.

ಸಾಬ್ರಾ!!!! ಏನ್ರೀ ಅದು 'ಹಾದಿ ಶಂಕರಾ ಜಯಂತಿ ಮುಬಾರಕ್ ಮುಬಾರಕ್'? ಮಾತಿಗೊಮ್ಮೆ ಅದನ್ನೇ ಹೇಳಿ ಹೇಳಿ ತಲಿ ತಿನ್ನಲಿಕತ್ತಿರಲ್ಲಾ? ಏನಂತ ಸರೀತ್ನಾಗಿ ಹೇಳಬಾರದ? ಹಾಂ? ಹಾಂ? - ಅಂತ ಸ್ವಲ್ಪ ಜಬರಿಸಿ ಕೇಳಿದೆ.

ಒಳ್ಳೆ ಆದಮೀ ನೀವು. ಫುಲ್ ಹಾಪ್! ನಿಮಗೂ ಸ್ವಲ್ಪ 'ಹಳೆ ಮಂಗ್ಯಾ' ರಮ್ ಕುಡಿಸಲಿ ಕ್ಯಾ? ಅಂತ ಕೇಳಿದ ಕರೀಂ, ಇಲ್ಲೇ ನೋಡಿ, ಅನ್ನೋ ಹಾಂಗ ಏನೋ ಒಂದು ಪಾಂಪ್ಲೆಟ್ ತಂದು ಮಾರಿ ಮುಂದ ಹಿಡದಾ.

ಪಾಂಪ್ಲೆಟ್ ಒಳಗ ಏನದ ಅಂತ ನೋಡಿದೆ.

'ಶ್ರೀ ಶಂಕರ ಜಯಂತಿ' ಅಂತ ಪ್ರಿಂಟ್ ಆಗಿತ್ತು. ಭಗವತ್ಪಾದ ಶ್ರೀ ಆದಿ ಶಂಕರಾಚಾರ್ಯರ ಫೋಟೋ ಸಹ ಇತ್ತು. ಕಾರ್ಯಕ್ರಮದ ವಿವರಣೆ ಸಹಿತ ಇತ್ತು.
ಶ್ರೀ ಆದಿ ಶಂಕರಾಚಾರ್ಯ

ಈಗ ಗೊತ್ತಾತು. ಈ ಮಂಗ್ಯಾನಿಕೆ ಕರೀಮಗ ಯಾರೋ ಇವತ್ತು 'ಶ್ರೀ ಶಂಕರ ಜಯಂತಿ' ಅಂತ ಹೇಳಿ ಒಂದು ಪಾಂಪ್ಲೆಟ್ ಕೊಟ್ಟಾರ. ಚಿತ್ರಾ ನೋಡಿ ಅದು ಆದಿ ಶಂಕರಾಚಾರ್ಯರ ಫೋಟೋ ಅಂತ ಗೊತ್ತಾಗ್ಯದ. ನಾನು ಶಂಕರಾಚಾರ್ಯರ ಭಕ್ತ, ಶಿಷ್ಯಾ ಅಂತ ಕರೀಮಗ ಗೊತ್ತದ. ಹಂಗಂತ ಹೇಳಿ ನನಗ ಇವ ಶಂಕರ ಜಯಂತಿಯ ಶುಭಾಶಯ ತನ್ನ ಭಾಷಾ ಒಳಗ, ಹಾದಿ ಶಂಕರಾ ಜಯಂತಿ, ಮುಬಾರಕ್ ಮುಬಾರಕ್, ಅಂತ ಹೇಳಿಕತ್ತಾನ. ಹೋಗ್ಗೋ ಇವನಾ!!!!

ಸಾಬ್ರಾ!!! ಅದು 'ಆದಿ ಶಂಕರ' ಅಂತರೀಪಾ. ಹೋಗಿ ಹೋಗಿ ಹಾದಿ ಶಂಕರಾ ಅಂದು ಬಿಟ್ಟರಲ್ಲ?! ನೀವು ಹಾದಿ ಶಂಕರ ಅಂದಿದ್ದು ನಮಗ ಹಳೆ ಗೆಳೆಯಾ ಹಾದಿಮನಿ ಶಂಕ್ರ್ಯಾ ನೆನಪಾಗಿ ಏನೇನೋ ಸುದ್ದಿ ಆಗಿಬಿಡ್ತು. ಆದರೂ ನಮ್ಮ ಪರಮ ಗುರುಗಳಾದ ಶ್ರೀ ಆದಿ ಶಂಕರಾಚಾರ್ಯರ ಹುಟ್ಟಿದ ದಿವಸ ಆಚರಿಸೋ ಶ್ರೀ ಶಂಕರ ಜಯಂತಿ ದಿನ ನೀವು ನಮಗೆ ಶುಭಾಶಯ ಕೋರಿದ್ದು ಮಾತ್ರ ಭಾಳ ಸಂತೋಷ. ಥ್ಯಾಂಕ್ಸ್ ರೀ ಸಾಬ್ರಾ, ಅಂತ ಹೇಳಿದೆ.

ಅಯ್ಯೋ ನಾವೂ ಕೂಡ ಆದಿ ಶಂಕರಾ ಅಂತಾನೇ ಅಂದಿದ್ದು. ಅದು ನಿಮಗೆ ಅದು ಹಾದಿ ಶಂಕರಾ ಅಂತ ಕೇಳಿದ್ರೆ ನಾವೇನು ಮಾಡೋಣ? ನಿಮ್ಮ ಕಿವಿ ಫುಲ್ ಶೆಡ್ಡ ಆಗಿದೆ ಕ್ಯಾ? ಅವತ್ತು ನಾವು ಸ್ಕಾಚಾ (ವಿಸ್ಕಿ) ಅಂದ್ರೆ ನಿಮಗೆ ಅದು ಕಾಚಾ ಅಂತ ಕೇಳಿ ಏನೇನೋ ಅಂದ್ರೀ. ಪಾಗಲ್ ಸಾಬ್! - ಅಂತ ಮೈಲ್ಡ್ ಆಗಿ ಬಾರಿಸಿದ.

ಇರಬಹುದು ಇರಬಹುದು....ಯಾರದ್ದು ಖರೆನೋ ಏನೋ!

ಜಯಂತಿ ಅಂದ್ರೆ ಬರ್ತ್ ಡೇ ಅಂತ ಕ್ಯಾ? - ಅಂತ ಕೇಳಿದ ಕರೀಂ.

ಗೊತ್ತಿಲ್ಲ ಮಾರಾಯಾ. ಆದ್ರ ಎಲ್ಲ ದೊಡ್ಡ ಮಂದಿ ಹುಟ್ಟಿದ ದಿವಸಕ್ಕ ಜಯಂತಿ ಅಂತನೇ ಅನ್ನೋದು. ಗಾಂಧೀ ಜಯಂತಿ, ಬುದ್ಧ ಜಯಂತಿ, ಮಹಾವೀರ ಜಯಂತಿ, ಹನುಮ ಜಯಂತಿ, ಬಸವ ಜಯಂತಿ ಇತ್ಯಾದಿ ಇತ್ಯಾದಿ. ಹಾಂಗೇ ಶಂಕರ ಜಯಂತಿ ಕೂಡ. ಆದ್ರ ಹುಟ್ಟಿದ ಹಬ್ಬಕ್ಕ ಮತ್ತ ಜಯಂತಿಗೆ ಹ್ಯಾಂಗ ಲಿಂಕ ಅಂತ ಕೇಳಬ್ಯಾಡ. ಅದನ್ನ ಯಾರರ ಸಂಸ್ಕೃತ ಪಂಡಿತರ ಹತ್ರ ಕೇಳು, ಅಂತ ಕಳಚಿಕೊಳ್ಳೋ ಪ್ರಯತ್ನ ಮಾಡಿದೆ.

ಮತ್ತೆ ಒಂದು ಡೌಟ್ ಸಾಬ್. ಜಯಂತಿ ಬರ್ತ್ ಡೇ ಗೆ 'ಜಯಂತಿ ಜಯಂತಿ' ಅಂತಾರೆ ಕ್ಯಾ? - ಅಂತ ಮಸ್ತ ಪಾಯಿಂಟ್ ಹಾಕಿದ ಕರೀಂ.

ಅಲ್ಲಲೇ........ 'ಜಯಂತಿ ಜಯಂತಿ' ಅನ್ನಲಿಕ್ಕೆ ಮೂಲಿಮನಿ ಜಯಂತಿ ಏನು ಅಷ್ಟು ದೊಡ್ಡ ಮನುಷ್ಯಾ ಏನು? ಏನಪಾ ಅಕಿ ಮಾಡಿದ ದೊಡ್ಡ ಕೆಲಸಾ? ಪಾಪ ಹಾದಿಮನಿ ಶಂಕ್ರ್ಯಾಗ ನಾಮಾ ಹಾಕಿ, ಅವಾ ಇಕಿ ನೆನಪಿನ್ಯಾಗ ವಿಭೂತಿ ಹಚ್ಚೋದು ಪೂರ್ತ ಬಿಟ್ಟು, 7x24 ನಾಮಾನೇ ಹಾಕ್ಕೊಂಡು, ಸದಾ ನಾಮಧಾರಿ ಆಗಿ, ಕಮರೀಪೇಟ್ ಶೆರೆ ಅಂಗಡಿ ಒಳಗ ಮನಗಂಡ ಕುಡಿತೇನಿ ಅನ್ನೋ ಹಾಂಗ ಮಾಡಿದ್ದೇ ಅಕಿ ಮಾಡಿದ ದೊಡ್ಡ ಕೆಲಸ ಇರಬಹದು ಏನಪಾ. ಅದಕ್ಕ ಅಕಿ ಹುಟ್ಟಿದ ಹಬ್ಬಕ್ಕ ಜಯಂತಿ ಅನ್ನಬೇಕಾ? ಏನಲೇ ನೀ ಹಾದಿಮನಿ ಶಂಕ್ರ್ಯಾನ ದೋಸ್ತನೋ ಅಥವಾ ಮೂಲಿಮನಿ ಜಯಂತಿ ದೋಸ್ತನೋ? ಕ್ಲಿಯರ್ ಮಾಡಪಾ. ಶಂಕ್ರ್ಯಾಗ ಜಯಂತಿ ನಾಮಾ ಹಾಕೋದರ ಹಿಂದ ನಿನ್ನ ಕೈವಾಡ ಏನಾರಾ ಇತ್ತೇನು ಅಂತ ನಮಗ ಈಗ ಡೌಟ್ ನೋಡಪಾ, ಅಂತ ಹೇಳಿದೆ.

ಅಯ್ಯೋ!!! ಮೂಲಿಮನಿ ಜಯಂತಿ ಬಿಡ್ರೀ ಸಾಬ್!!! ಅಕಿದು ಬರ್ತ್ ಡೇ ಗೆ ಯಾರು ಜಯಂತಿ ಕೊಯಂತಿ ಅಂತಾ ಹೇಳ್ತಾರೆ.... ಅಂತ ಹೇಳಿದ ಕರೀಂ ಬ್ರೇಕ್ ತೊಗೊಂಡ.

ಮತ್ಯಾವ ಜಯಂತಿ ರೀ ಸಾಬ್ರಾ???? - ಅಂತ ಕೇಳಿದೆ.

ಸಾಬ್!!! ಅಕಿ ಪುರಾತನ ಬಾಂಬ್ ಸುಂದರೀ ಸಿನೆಮಾ ಹಿರೋಯಿನ್ ಜಯಂತಿ ಅಂತಾ ಒಬ್ಬಾಕಿ ಇದ್ದಳು, ನೆನಪ ಐತೆ ಕ್ಯಾ? 'ವಿರಹಾ ವಿರಹಾ  ನೂರು ನೂರು ತರಹಾ' ಅಂತ ಹಾಡಿಗೆ ಫುಲ್ 'ಲಂಬೀ ಜುದಾಯಿ' ಫೀಲಿಂಗ್ ನಲ್ಲಿ ಮಸ್ತ ಆಕ್ಟ್ ಮಾಡಿದ್ದಳು. ಅವಳು ಫೇಮಸ್ ಅಲ್ಲಾ ಕ್ಯಾ? ಅಕಿದು ಬರ್ತ್ ಡೇ ಗೆ 'ಜಯಂತಿ ಜಯಂತಿ' ಅನ್ನಬಹುದು ಕ್ಯಾ? ಕ್ಯಾ? - ಅಂತ ಕೇಳಿದ.

ಪುರಾತನ ಚಿತ್ರತಾರೆ ಜಯಂತಿ

ವಾಹ್!!! ಎಲ್ಲೆಲ್ಲಿಂದ ನೆನಪು ಇಟ್ಟು ಮಸ್ತಾಗಿ ಪಾಯಿಂಟ್ ಹಾಕ್ತಾನೋ!!!

ಹ್ಞೂ ಸಾಬ್ರಾ!!! ಜಯಂತಿ ಸಿನೆಮಾ ನಟಿ ಒಂದು ತರಹ ಫೇಮಸ್ ಬಿಡ್ರೀ. ಆದರೂ ಜಯಂತಿ ಪಯಂತಿ ಅನ್ನೋವಷ್ಟು ಫೇಮಸ್ ಅಲ್ಲಾ ಸಿನೆಮಾ ಮಂದಿ. ಯಾವದೇ ಸಿನಿಮಾ ಮಂದಿ ಹೆಸರಿನ್ಯಾಗ ಇನ್ನೂ ಜಯಂತಿ ಅಂತ ಬಂದಿಲ್ಲ. ಮತ್ತ ಹಾಂಗೆನರಾ ಮಾಡಬೇಕು ಅಂದ್ರೂ ನಟಿ ಜಯಂತಿಗಿಂತ ಫೇಮಸ್ ಭಾಳ ಮಂದಿ ನಟ ನಟಿಯರು ಇದ್ದಾರ. ತಿಳೀತಾ? - ಅಂತ ಹೇಳಿದೆ.

ಅದು ಖರೆ ಬಿಡಿ ಸಾಬ್. ಇನ್ನೂ ಅಣ್ಣಾವರ ಬರ್ತ್ ಡೇ ನೇ 'ಡಾ. ರಾಜ್ ಜಯಂತಿ' ಅಂತ ಆಗಿಲ್ಲ. ಹಾಗಿರೋವಾಗ ಜಯಂತಿ ಬರ್ತ್ ಡೇ 'ಜಯಂತಿ ಜಯಂತಿ' ಆಗೋದು ದೂರ ಅದೇ ಬಿಡ್ರೀ. ನೀವೇನು ಮಾಡ್ತೀರಿ ಇವತ್ತು ನಿಮ್ಮ ಸ್ವಾಮೀಜಿ ಆದ ಆದಿ ಶಂಕರ ಜೀ ಅವರ ಬರ್ತ್ ಡೇ ಅಂತ? ಕೇಕ್ ಕಾಟೋಗೆ ಕ್ಯಾ? ಅಂಡಾವಾಲಾ ಯಾ ಬಿನಾ  ಅಂಡಾವಾಲಾ ಕೇಕ್? - ಅಂತ ಕೇಳಿದ.

ಏ.....ಶಂಕರಾಚಾರ್ಯರ ಜನ್ಮ ದಿವಸ ಕೇಕ್ ಗೀಕ್ ಕತ್ತರಿಸಿ ಆಚರಿಸೋದಲ್ಲ ಬಿಡು. ಅವರು ಹೇಳಿದ ಅದ್ವೈತ ವೇದಾಂತದ ಬಗ್ಗೆ ಓದಿ, ತಿಳಿದು, ಮನನ ಮಾಡಿ, ನಮಗಾದಷ್ಟು ಜ್ಞಾನಾರ್ಜನೆ ಮಾಡೋದು ನೋಡಪಾ. ಮೊದಲಿಂದ ಆದಿ ಶಂಕರರು ಅಂದ್ರ ಭಾಳ ಸಿಂಪಲ್. ಅವರು ಜ್ಞಾನದ ಬಗ್ಗೆ ಒತ್ತು ಕೊಟ್ಟರೆ ವಿನಃ ಆಚರಣೆಗಳ ಬಗ್ಗೆ ಅಲ್ಲವೇ ಅಲ್ಲ, ಅಂತ ಹೇಳಿದೆ.

ಜನರಿಗೆ ನಿಮ್ಮ ಶಂಕರಿ ಸ್ವಾಮಿಜೀ ಮೆಸೇಜ್ ಏನು? - ಅಂತ ಕೇಳಿದ ಕರೀಂ.

'ಬ್ರಹ್ಮ ಸತ್ಯ ಜಗತ್ ಮಿಥ್ಯಾ, ಜೀವೋ ಬ್ರಹ್ಮೈವ ನ ಪರಹ' ಅಂತ ಒಂದು ಶಾರ್ಟ್ & ಸ್ವೀಟ್ ವಾಕ್ಯದೊಳಗ ಎಲ್ಲಾ ವೇದ, ಉಪನಿಷತ್ತು, ಪುರಾಣ ಎಲ್ಲದರ ಸಾರ ಹೇಳಿ ಬಿಟ್ಟಾರ ನೋಡಪಾ ನಮ್ಮ ಗುರುಗಳು. ಇದೊಂದನ್ನೇ ವಿವರಿಸಲಿಕ್ಕೆ ಅಂತ ಸಾವಿರಾರು ಸ್ವಾಮಿಗಳು, ಸಾಧುಗಳು, ಸಂತರು ಲಕ್ಷಾಂತರ ಪುಸ್ತಕ ಬರೆದು ಪ್ರವಚನ ಮತ್ತೊಂದು ಕೊಟ್ಟಾರೆ ನೋಡಪಾ, ಅಂತ ಶಂಕರರ ಸಂದೇಶ ವಿವರಿಸಿದೆ.

ಐಸಾ ಬೋಲೇ ತೋ ಕ್ಯಾ? - ಅಂತ ಕೇಳಿದ ಕರೀಂ. ನಿರೀಕ್ಷಿಸಿದ್ದೆ ಅವನ ಪ್ರಶ್ನೆ.

ಶಂಕರರು ಹೇಳೋದು ಏನಪಾ ಅಂದ್ರಾ.....ವಿಶ್ವರೂಪಿ ಚೈತನ್ಯವಾದ ಬ್ರಹ್ಮನ್ ಮಾತ್ರ ಸತ್ಯ. ಪಂಚೇಂದ್ರಿಯಗಳಿಗೆ ಕಾಣುವ ಜಗತ್ತು ಪೂರ್ತಿ ಸತ್ಯ ಅಲ್ಲ. ನಿನ್ನಲ್ಲಿರುವ ಜೀವಾತ್ಮ ಮತ್ತ ಮ್ಯಾಲಿರೋ ಪರಮಾತ್ಮ ಎಲ್ಲಾ ಒಂದೇ. ಬ್ಯಾರೆ ಅಲ್ಲ, ಅಂತ ಹೇಳಿ ಬಿಟ್ಟಾರೋ! ಎಷ್ಟು ಮಸ್ತ ಹೇಳ್ಯಾರ ನೋಡು. ನೀನು, ನಾನು, ಹಾದಿಮನಿ ಶಂಕ್ರ್ಯಾ, ಮೂಲಿಮನಿ ಜಯಂತಿ ಎಲ್ಲಾ ಒಂದೇ ನೋಡಪಾ. ಫಾರ್ ಎಕ್ಸಾಂಪಲ್ ನೋಡಪಾ..... ಇರೋದು ಒಂದು ಚಂದ್ರ. ಹೌದೋ ಅಲ್ಲೋ? ಆದ್ರ ಚಂದ್ರನ ಪ್ರತಿಬಿಂಬ ನಿಮ್ಮನಿ ಸ್ವಿಮ್ಮಿಂಗ್ ಪೂಲ್ ಒಳಗೂ ಬೀಳ್ತದ, ನಿಮ್ಮನಿ ಮುಂದಿನ ಹೊಲಸ ಗಟಾರ ಒಳಗೂ ಬೀಳ್ತದ. ಪ್ರತಿಬಿಂಬ ಮಾತ್ರ ಚಂದ್ರನದೇ ಹೌದಿಲ್ಲೋ? ಹಾಂಗ ನೋಡಪಾ. ಬ್ಯಾರೆ ಬ್ಯಾರೆ ಮಂದಿ, ಪ್ರಾಣಿ, ಪಕ್ಷಿ, ಎವ್ರಿಥಿಂಗ್ ಇಸ್ ಬ್ರಹ್ಮನ್! ಎಲ್ಲಾ ಬ್ರಹ್ಮನ್. ವಿಶ್ವ ಚೈತನ್ಯ. ಒಂದು ಶಕ್ತಿ. ಅಷ್ಟೇ. ತಿಳೀತ? - ಅಂತ ಕೇಳಿದೆ.

ಏನೋ ಒಂದು ತರಹ ಮಜಾ ಅದೇ ಶಂಕರ ಸ್ವಾಮೀಜಿ ಹೇಳೋದು. ಮತ್ತೆ ಟೈಮ್ ಸಿಕ್ಕಾಗ ಡೀಟೇಲ್ ಆಗಿ ಹೇಳೀರಂತೆ. ಓಕೆ? ಬರಲೀ ಈಗಾ? ಖುದಾ ಹಾಫಿಜ್. ನೀವು ಮನೆಗೆ ಹೋಗಿ ಒಳ್ಳೆದಾಗಿ ಆದಿ ಶಂಕರಾಜೀ ಅವರ ಜನಮ್ ದಿನ್ ಮಸ್ತಾಗಿ ಮಾಡಿ. ಓಕೆ? - ಅಂತ ಹೇಳಿ ಕರೀಂ ಹೊಂಟು ಹೋದ. ನಾನೂ ಹೊಂಟು ಬಂದೆ.

ವೈಶಾಖ ಮಾಸದ ಶುಕ್ಲ ಪಕ್ಷ ಪಂಚಮಿಯ ದಿನ ಶ್ರೀ ಆದಿ ಶಂಕರರ ಜನ್ಮ ದಿನ.

ಈ ವರ್ಷ ಮೇ 15 ರಂದು ಆಚರಿಸಲಾಯಿತು.

Wednesday, July 03, 2013

ಬಿಸ್ಮಿಲ್ಲಾ ಭಾತ್, ಮಧುರ್ ಬಡಾ.... ಬಡಾ ಖಾನಾಗೆ ದಾವತ್!

ಸಂಡೆ ಮಧ್ಯಾನ್ಹ. ಭೀಮ್ಯಾನ ಚುಟ್ಟಾ ಅಂಗಡಿ ಮುಂದ 'ಡ್ರೈ ಮಾವಾ' ಮೆದ್ದುಕೋತ್ತ  ನಿಂತಿದ್ದೆ.

ಹೊಟ್ಟಿ ಮ್ಯಾಲೆ ಕೈ ಆಡಿಸಿಕೋತ್ತ ಕರೀಂ ಬರೋದು ಕಾಣಿಸ್ತು. ಮಸ್ತ ಬಡಾ ಖಾನಾ ಆಗಿರಬೇಕು. ಒಂದಿಷ್ಟು ಕುರಿ, ಕೋಳಿ ಮಟಾಶ್ ಆಗಿ ಬಿಟ್ಟಿರಬೇಕು.

ಹತ್ತಿರ ಬಂದ ಕರೀಂ, ಜೋರಾಗಿ ಹೊಟ್ಟಿ ಮ್ಯಾಲೆ ಕೈ ಆಡಿಸಿದವನss, 'ಬಿಸ್ಮಿಲ್ಲಾ ಅಲ್ ರಹಮಾನ್ ಅಲ್ ರಹೀಂ' ಅಂದುಬಿಟ್ಟ!!!

ಸಾಬ್ರಾ!!! ಊಟಾಗಿ ಹೊಟ್ಟಿ ಮ್ಯಾಲೆ ಕೈ ಆಡಿಸೋವಾಗ ಯಾಕ್ರೀ 'ಬಿಸ್ಮಿಲ್ಲಾ ಅಲ್ ರಹಮಾನ್ ಅಲ್ ರಹೀಂ' ಅಂತೀರಿ? - ಅಂತ ಕೇಳಿದೆ.

ಯಾಕೆ ಅನ್ನಬಾರದು ಕ್ಯಾ? - ಅಂತ ಕೇಳಿದ ಕರೀಂ.

ಹಂಗೇನೂ ಇಲ್ಲ ಬಿಡ್ರೀ. 'ಬಿಸ್ಮಿಲ್ಲಾ ಅಲ್ ರಹಮಾನ್ ಅಲ್ ರಹೀಂ' ಅಂದ್ರ 'ದಯಾಮಯನೂ ಕರುಣಾಮಯಿಯೂ ಆದ ದೇವರ  ಹೆಸರಲ್ಲಿ' ಅಂತ. ಹೌದೋ ಅಲ್ಲೋ? ಅನ್ನಬಹುದು ಅನ್ನಬಹುದು. ದೇವರ ಹೆಸರು ಯಾವಾಗ ಬೇಕಾಗಲೂ ತೊಗೋಬಹುದು, ಅಂತ ಹೇಳಿದೆ.

ವಾಹ್!!! ವಾಹ್!!! ನಮ್ಮದು ಧರ್ಮಾದು ಬಗ್ಗೆ ಕೂಡ ಎಲ್ಲ ತಿಳಿದುಕೊಂಡೀರಿ ಕ್ಯಾ? ಬಹುತ್ ಖೂಬ್....ಬಹುತ್ ಅಚ್ಚಾ ಹೈ, ಅಂದ ಕರೀಂ.

ಮಸ್ತ ಊಟಾದ ಮ್ಯಾಲೆ ಹೊಟ್ಟಿ ಮ್ಯಾಲೆ ಕೈ ಆಡಿಸಿಕೋತ್ತ 'ವಾತಾಪಿ ಜೀರ್ಣೋ ಭವ' ಅನ್ನೋದು ಪದ್ಧತಿ ನೋಡಪಾ, ಅಂತ ಹೇಳಿದೆ.

ಹಾಂ!!!! ಕಿಸ್ ಪಾಪಿ ಕೋ ಅಜೀರ್ಣ ಹುವಾ ಸಾಬ್? ಚಿಂತಾ ಕರ್ರೋ ನಕೊ. ಗ್ರೈಪ್ ವಾಟರ್ ಗೆ ಕುಡಿಸಿಬಿಟ್ಟಿ ಬೆನ್ನ ಮ್ಯಾಲೆ ಪಟಾ ಪಟಾ ಅಂತ ಗುದ್ದಿ ಬಿಡಿ. ಗ್ಯಾಸ್ ಎಲ್ಲ ಬಾಹರ್ ಆಗಿ ಏಕ್ದಂ ಹಲ್ಕಾ ಆಗ್ ಬಿಟ್ಟಿ ಅಜೀರ್ಣ ಇಂದ ಏಕ್ದಂ ರಿಲೀಫ್ ಸಿಗ್ತದೆ, ಅಂತ ಹೇಳಿಬಿಟ್ಟ ಕರೀಂ.

ಲೇ....ಮಂಗ್ಯಾನ್ ಕೆ..... ಯಾರಿಗೂ ಅಜೀರ್ಣ ಮತ್ತೊಂದು ಆಗಿಲ್ಲ. ಅವೆಲ್ಲ ನಿನಗ ತಿಳಿಯೋದಿಲ್ಲ. ಏನು ಸ್ಪೆಷಲ್ ಊಟ ನಿಮ್ಮ ಮನಿಯಾಗ ಇವತ್ತು? - ಅಂತ ಕೇಳಿದೆ.

ನಮ್ಮ ಮನೆನಲ್ಲಿ ಇವತ್ತು ಸಾಬ್ 'ಬಿಸ್ಮಿಲ್ಲಾ ಭಾತ್' ಮತ್ತು 'ಮಧುರ್ ಬಡಾ'. ಭಾರಿ ಮಸ್ತ್ ಇತ್ತು ಸಾಬ್. ಸಂಜಿ ಮುಂದೆ ಬನ್ನಿ. ನಿಮಗೂ ಕೊಡೋಣ, ಅಂತ ಅಂದ ಕರೀಂ.

ಹಾಂ!!!!!ಹಾಂ!!!............ಫುಲ್ ಶಾಕ್ ಹೊಡೀತು

ಬಿಸ್ಮಿಲ್ಲಾ ಭಾತ್!!!!

ಮಧುರ್ ಬಡಾ!!!!

ಏನಪಾ ಇವು? ನಮಗಂತೂ ತಿಳಿಲಿಲ್ಲ. ಯಾವ ಕಡೆ ಅಡಿಗಿ ಇರಬಹುದು ಇವು? ಹ್ಯಾಂಗ ಮಾಡಿರಬಹುದು? - ಅಂತ ಸಿಕ್ಕಾಪಟ್ಟೆ ಡೌಟ್ ಬಂದು ಬಿಟ್ಟವು.

ಸಾಬ್ರಾ!!!! ಏನ್ರೀ ಇದು???!!! ಈ ಭಾತ್ ಅನ್ನೋದು ನಿಮ್ಮ ಮನಿಯೊಳಗ ಹ್ಯಾಂಗ್ರೀ ಬಂತು? ವಾಂಗೀ ಭಾತ್, ಮಸಾಲಿ ಭಾತ್, ಒಗ್ಗರಣಿ ಭಾತ್, ಕೇಸರೀ ಭಾತ್, ಖಾರಾ ಭಾತ್ ಇತ್ಯಾದಿ ಎಲ್ಲ ನಮ್ಮ ಮಂದಿ ಅದೂ ಮರಾಠಿ ಮಾತಾಡೋ ಮಂದಿ ಅನ್ನೋದು ಜಾಸ್ತಿ. ನಿಮ್ಮ ಕಡೆ ಬಿರ್ಯಾನಿ, ಪುಲಾವ್ ಅಂತ ಅನ್ನೋದೇ ಜಾಸ್ತಿ. ಹಾಂಗಿದ್ದಾಗ ಬಿಸ್ಮಿಲ್ಲಾ ಭಾತ್ ಅಂದ್ರ ಏನ್ರೀ? ಮಧುರ್ ಬಡಾ ಅಂದ್ರಾ? ಯಾವ್ಯಾವ ಪ್ರಾಣಿ ಪಕ್ಷಿ ಹಾಕಿ ಮಾಡಿದ್ದು? ಹಾಂ? ಹಾಂ? - ಅಂತ ಕೇಳಿದೆ.

ಅಯ್ಯೋ ಸಾಬ್!!!! ಫುಲ್ ವೆಜಿಟೇರಿಯನ್ ಸಾಬ್!!! ಏಕದಂ ನಿಮ್ಮದು ಮಂದಿ ಅಡಿಗಿ ಹಾಗೆ. ಏನೂ ನಾನ್ವೆಜ್ ಗೀನ್ವೆಜ್ ಬಿಲ್ಕುಲ್ ಇಲ್ಲ. ನಿಮಗೆ ತಿನ್ನೋಕೆ ಏನೂ ಪ್ರಾಬ್ಲೆಮ್ ಇಲ್ಲ. ಬನ್ನಿ ಸಂಜಿ ಮುಂದೆ. ಎರಡೆರಡು ಹಾಕಿ ಬಿಟ್ಟಿ ಮಸ್ತ ಪಾರ್ಟಿ ಮಾಡೋಣ. ಕ್ಯಾ ಬೋಲ್ತಾ? - ಅಂತ ಭಾರಿ ಆಫರ್ ಕೊಟ್ಟೇ ಬಿಟ್ಟ ಕರೀಂ.

ಏನ್ ಹಾಕೋದ್ರೀ? ಅದೂ ಎರಡೆರಡು ಹಾಕೋದು ಅಂದ್ರ? - ಅಂತ ಘಾಬ್ರೀಲೆ ಕೇಳಿದೆ.

ಅಯ್ಯೋ!!! ನೀವು ಎರಡೆರಡು ಬಿಯರ್ ಹಾಕಿ. ನಾವು ಎರಡೆರಡು ಕಾಚಾ ಹಾಕ್ತೇವೆ. ಓಕೆ? - ಅಂತ ಹೇಳಿದ ಕರೀಂ.

ಹ್ಞೂ....ಹ್ಞೂ....ಹೌದೋ ಮಾರಾಯಾ.... ಕೆಟ್ಟ ಶಕಿ ಮಾರಾಯಾ....ಎರಡು ಐಸ್ ಕೋಲ್ಡ್ ಏಕ್ದಂ ಚಿಲ್ ಬಿಯರ್ ತರಿಸಿ ಕೊಟ್ಟು ಬಿಡೋ ಮಾರಾಯಾ. ಅದಿರ್ಲೀ....ನೀ ಯಾಕ ಎರಡೆರೆಡು ಕಾಚಾ ಹಾಕ್ತಿಯೋ? ಈ ಪರಿ ಶೆಕಿ ಅದ. ಎಷ್ಟೋ ಮಂದಿ ಒಂದೂ ಕಾಚಾ ಬ್ಯಾಡ ಅಂತ ಬರೆ ಲುಂಗಿ ಉಟ್ಟುಗೊಂಡು ಫ್ರೀ ಫಾರ್ಮ್ ಒಳಗ ಅಡ್ಡಾಡ್ಲಿಕತ್ತಾರ. ಹಂತಾದ್ರಾಗ ನೀನು ಎರಡೆರಡು ಕಾಚಾ ಹಾಕ್ಕೊಳ್ಳಿಕತ್ತಿ ಅಂದ್ರ ಏನು ಕಥಿ ಮಾರಾಯಾ? - ಅಂತ ಕೇಳಿದೆ.

ಅಯ್ಯೋ....ನಾವು ಸ್ಕಾಚಾ ಅಂದಿದ್ದು ನಿಮ್ಮ ತಗಡು ಕಿವಿಗೆ ಕಾಚಾ ಅಂತ ಕೇಳಿದ್ರೆ ನಾವೇನು ಮಾಡೋಣ. ನಿಮಗೆ ಬಿಯರ್ ನಮಗೆ ಸ್ಕಾಚಾ ಅಂತ ಹೇಳಿದ್ದು. ತಿಳೀತು ಕ್ಯಾ? - ಅಂತ ಝಾಡಿಸಿದ ಕರೀಂ.

ಓಹೋ!!! ಸ್ಕಾಚ್ ವಿಸ್ಕಿ ಅನ್ನಿ. ಅದು ಸ್ಕಾಚ್ ಅಂತರೀಪಾ. ಕಾಚಾ ಅಂದಂಗ ಸ್ಕಾಚಾ ಅಂದ್ರ ನಾವೇನು ಮಾಡೋಣ? - ಅಂತ ಉಲ್ಟಾ ಬಾರಿಸಿದೆ.

ಓಕೆ ....ಓಕೆ ....ಸಾಕು ಸಾಕು....ರುಮಾಲಿ ರೊಟೀ ಕೂಡ ಇರ್ತದೆ. ಮಸ್ತ ಆಗ್ತದೆ. ಮತ್ತೊಂದು ಸಬ್ಜೀ ಕೂಡ ಮಾಡಿಸೋಣ. ಬನ್ನಿ ಬನ್ನಿ, ಅಂತ ಮಸ್ತ ಆಫರ್ ಕೊಟ್ಟ ಕರೀಂ.

ಬಿಸ್ಮಿಲ್ಲಾ ಭಾತ್, ಮಧುರ್ ಬಡಾ ಜೊತಿ ರುಮಾಲಿ ರೋಟೀ!!!! ಒಂದರಕಿಂತ ಒಂದು ವಿಚಿತ್ರ ವಿಚಿತ್ರ ಅಡಿಗಿ!!!!

ಸಾಬ್ರಾ!!!! ನಮಗ ತಲಿಗೆ ರುಮಾಲು ಸುತ್ತಿಗೊಂಡು ಊಟಾ ಮತ್ತೊಂದು ಮಾಡಲಿಕ್ಕೆ ಸ್ವಲ್ಪ ಅಡಿಚಿಣಿ ಆಗ್ತದ್ರೀ. ಈ ರುಮಾಲಿ ರೊಟ್ಟಿ ಏನು ತಲಿಗೆ ರುಮಾಲು ಸುತ್ತಿಗೊಂಡ ಮ್ಯಾಲೆನೇ ತಿನ್ನೋದು ಏನು? ರೊಟ್ಟಿ ಜೊತೆ ರುಮಾಲು ಫ್ರೀ ಏನು? ಅಥವಾ ರೊಟ್ಟಿನೇ ರುಮಾಲಿನ ಗತೆ ಸುತ್ತಿಕೊಂಡು ಬಿಡೋದೋ? ಹಾಂ? ಹಾಂ? - ಅಂತ ಕೇಳಿದೆ, ಇನ್ನೋಸೆಂಟ್ ಆಗಿ. ನಮಗ ಗೊತ್ತಿಲ್ಲ.

ಕರೀಂ ಅಂಡು ತಟ್ಟಿಕೊಂಡು ಪೆಕಪೆಕಾ ಅಂತ ನಕ್ಕ. ನಾನು ಪಿಕಿ ಪಿಕಿ ಅಂತ ನೋಡಿದೆ.

ಸಾಬ್!!!! ರುಮಾಲಿ ರೋಟಿಗೆ ಮತ್ತೆ ತಲಿಗೆ ಸುತ್ತಿಕೊಳ್ಳುವ ರುಮಾಲಿಗೆ ಏನೂ ಸಂಬಂಧ ಇಲ್ಲ ಸಾಬ್. ಅದು ಒಂದು ಟೈಪ್ ರೋಟಿ ಅಷ್ಟೇ. ನೀವು ರುಮಾಲು ಮುಂಡಾಸು ಏನೂ ಸುತ್ತಿಗೊಳ್ಳದೆ ತಿನ್ನಬಹದು. ಬನ್ನಿ, ಅಂತ ಹೇಳಿದ ಕರೀಂ.

ಆತಪಾ ದೋಸ್ತಾ!! ಇಷ್ಟು ಪ್ರೀತಿಯಿಂದ ಕರೀಲಿಕತ್ತಿ ಅಂದ್ರ ಬಂದು ಬಿಡೋದೇ ಸಂಜಿ ಮುಂದ. ಎಷ್ಟು, ಏಳು ಘಂಟೆಕ್ಕ ಬರಲೀ? ತೀರ್ಥ ಅದು ಇದು ಮುಗಿದು ಊಟಕ್ಕ ಕರೆಕ್ಟ್ ಒಂಬತ್ತು ಒಂಬತ್ತೂವರಿ ಅಂದ್ರ ಸರಿ ಅಲ್ಲಾ? ಓಕೆ? ಬಂದ ಬಿಡ್ತೇನಿ, ಅಂತ ಹೇಳಿ ವಾಪಸ್ ಹೊಂಟು ಬಂದೆ.

ಬಿಸ್ಮಿಲ್ಲಾ ಭಾತ್, ಮಧುರ್ ಬಡಾ, ರುಮಾಲಿ ರೋಟಿ, ತಣ್ಣನೆ ಕಿಂಗ್ ಫಿಷರ್ ಬಿಯರ್!!! ಎಲ್ಲಾ ಎಷ್ಟು ಮಸ್ತ!!! ಲಗೂನ ಏಳು ಹೊಡಿಬಾರದಾ, ಅಂತ ಅನ್ನಿಸಲಿಕತ್ತಿತ್ತು.

ಅಂತೂ ಇಂತೂ ಸಂಜಿ ಆರೂವರಿ ಆಗಿ ಬಿಡ್ತು. 'ಇಂತಜಾರ್ ಕಿ ಘಡಿ' ಬಂದೇ ಬಿಡ್ತು. ಹೋದೆ ಕರೀಮನ ಮನಿಗೆ.

ಕರೀಮಂದಂತೂ ದೊಡ್ಡ ವಾಡೆ. ದೋಸ್ತರನ್ನ ಎಂಟರ್ಟೈನ್ ಮಾಡೋ ಜಗಾನಾ ಬ್ಯಾರೆ. ಅವನ ಯಬಡ ಬೇಗಂ ನಜರಿಂದ ಭಾಳ ದೂರ.

ಹೋಗಿ ಕೂತೆ. ಕರೀಂ ಬಂದು ಡುಬ್ಬಾ ಚಪ್ಪರಿಸಿ ಖಾತಿರದಾರಿ ಮಾಡಿ ಕೂಡಿಸಿದ. ಕೂಡೋ ಪುರಸತ್ತಿಲ್ಲ ಅವನ ಆಳು ಒಂದು ದೊಡ್ಡ ಗ್ಲಾಸ್ ಒಳಗ ಏನೋ ತಂದು ಇಟ್ಟು ಹೋದ.

ಏನೋ ಕರೀಂ ಇದು? ಇದು ಬೀಯರ್ ಕಂಡಂಗ ಕಾಣೋದಿಲ್ಲ. ನಮಗ ಬ್ಯಾರೆ ಏನೂ ಒಗ್ಗೋದಿಲ್ಲ ಮಾರಾಯಾ. ಏನೇನರ ಕುಡಿಸಿ ಬಿಡಬ್ಯಾಡೋ ಪುಣ್ಯಾತ್ಮಾ. ನಂತರ ನಾಳೆ ತಲಿ ಹಿಡಕೊಂಡು ಕೂತೆ ಅಂದ್ರ ಕಷ್ಟ ಮಾರಾಯಾ, ಅಂತ ಅಂದೆ.

ಚಿಂತಾ ನಕ್ಕೋ ಕರೋಜೀ!!! ಅದು ಬರೆ ಮೋಸಂಬಿ ಜ್ಯೂಸ್. ಅಷ್ಟೇ. ಭಾಳ ಬಿಸಿಲು ಐತೆ ನೋಡಿ. ಅದಕ್ಕೆ ಮೊದಲು ಥಂಡಾ
ಥಂಡಾ ಮೋಸಂಬಿ ಜ್ಯೂಸು ಕುಡದ ಬಿಟ್ಟಿ ನಂತರ ಬಿಯರ್ ಕುಡೀರಿ. ನಾವು ಸ್ಕಾಚಾ ಕುಡಿತೇವೆ, ಅಂದ ಕರೀಂ.

ಅಯ್ಯೋ!!!ಮೋಸಂಬಿ ಜ್ಯೂಸು ಏನು? ಭಾಳ ಮಸ್ತ. ಭಾಳ ಮಸ್ತ. ಆದರೂ ಹೀಂಗ ಗ್ಲಾಸ್ ಒಳಗ ಮೋಸಂಬಿ ಜ್ಯೂಸು ಕುಡಿಯೋದು ಏನೂ ಮಜಾ ಬಂರಗಿಲ್ಲ ಬಿಡೋ, ಅಂತ ಅನ್ನಕೋತ್ತನಾ ಗ್ಲಾಸ್ ಎತ್ತಿ ಗಟಗಟ ಒಂದೇ ಗುಕ್ಕಿಗೆ ಕುಡಿದು ಗ್ಲಾಸ್ ಕೆಳಗೆ ಇಟ್ಟೆ.

ಮತ್ತೆ ಹೆಂಗೆ ಮೋಸಂಬಿ ಜ್ಯೂಸು ಕುಡಿಯೋರು ನೀವು? ಸೀದಾ ಮೋಸಂಬಿ ಗಿಡದ ಮ್ಯಾಲೆ ಮಂಗ್ಯಾ ಗತೆ ಕೂತು, ಮಂಗ್ಯಾ ಗತೆ ಮೋಸಂಬಿ ಕಿತ್ತಿ, ಏನೇನೋ ಮಾಡಿ ಕುಡಿತೀರಿ ಕ್ಯಾ? - ಅಂತ ಕೇಳಿದ ಕರೀಂ.

ಏ....ಹಾಂಗಲ್ಲೋ....ಛೋಲೋ ಮಸ್ತ ರಸಭರಿತ ಮೋಸಂಬಿ ಸಿಕ್ಕಿತು ಅಂದ್ರ ಮಾವಿನ ಹಣ್ಣಿನಾಂಗ ಚೀಪಿ ಬಿಡಬಹುದು ನೋಡು. ಮಾವಿನಹಣ್ಣು ಹ್ಯಾಂಗ ಬಾಯಾಗ ಇಟ್ಟಗೊಂಡು, ಒಮ್ಮೆ ಮ್ಯಾಲೆ ಕಚ್ಚಿ, ಕೆಳಗಿಂದ ಮೆತ್ತಗ ಒತ್ತಿಕೋತ್ತ ಬಂದ್ರ ಮಸ್ತ ಸೀಕರಣಿ ಹಾಂಗ ರಸಾ ಬಾಯಾಗ ಬರೋದಿಲ್ಲ ಏನು? ಹಾಂಗೇ ಇದು. ಮೋಸಂಬಿ ಒತ್ತಿ ಒತ್ತಿ, ಚೀಪಿ ಚೀಪಿ ರಸ ಕುಡಿಬೇಕೋ ಮಾರಾಯಾ. ಅದು ನ್ಯಾಚುರಲ್. ಅದನ್ನ ಬಿಟ್ಟು ಮಷೀನ್ ಒಳಗ ಮೋಸಂಬಿ ರಸ ಹಿಂಡಿ, ಗ್ಲಾಸ್ ಒಳಗ ಹಾಕಿ, ಅದಕ್ಕ ಐಸ್ ಹಾಕಿ, ಅದರಾಗ ಒಂದು ಕೊಳವಿ ಚುಚ್ಚಿ ಕುಡಿಯೋದು ಅಂದ್ರ ಏನು? ಹಾಂ? ಹಾಂ? - ಅಂತ ಮೋಸಂಬಿ ಹ್ಯಾಂಗ ಎಂಜಾಯ್ ಮಾಡಬೇಕು ಅಂತ ಹೇಳಿದೆ.

ಹಾಂಗೆ ಕ್ಯಾ? ಮೋಸಂಬಿ ಹೀಗೆ ಎಂಜಾಯ್ ಮಾಡೋದು ಎಲ್ಲಿಂದ ಕಲಿತರಿ ಸಾಬ್?- ಅಂತ ಕೇಳಿದ.

ನಮ್ಮ ಪೋರ್ಚುಗೀಸ್ ಟೀಚರ್ ಒಬ್ಬರು ಇದ್ದರು. ಅವರೇ ಹೇಳಿ ಕೊಟ್ಟಿದ್ದು ಈ ಪದ್ಧತಿ. ಪೋರ್ಚುಗೀಸ್ ಮಂದಿ ಮೋಸಂಬಿ ಹೀಂಗೇ ಜ್ಯೂಸು ಮಾಡೋದು ಏನಪಾ....ಮಸ್ತ ಇರ್ತದ. ನಮ್ಮ ಟೀಚರ್ ಭಾಳ ಮಸ್ತ ಇದ್ದರು. ಮೋಸಂಬಿ ಸಹಿತ ಅವರೇ ಕೊಟ್ಟು, ಒತ್ತಿ ಒತ್ತಿ ಚೀಪಿ ಚೀಪಿ ಜ್ಯೂಸು ಮಾಡೋದು ಹೇಳಿ ಕೊಡ್ತಿದ್ದರು. ಪರ್ಫೆಕ್ಟ್ ಆಗೋತನಕಾ ಎಷ್ಟು ಬೇಕು ಅಷ್ಟು  ಮೋಸಂಬಿ ಕೊಡ್ತಿದ್ದರು. ಕೊಡತಿದ್ದರು ಏನು ಬಂತು, ಅವರ ಕಾಂಪೌಂಡ್ ಒಳಗ ಇದ್ದ ಎಲ್ಲಾ ಮೋಸಂಬಿ ನಿಮ್ಮದೇ ಅಂತ ತಿಳಕೊಂಡು ಮಸ್ತಾಗಿ ಉಪಯೋಗಿಸಿ ಅಂತ ಸಹಿತ ಹೇಳಿ ಬಿಟ್ಟಿದ್ದರು, ಅಂತ ಹೇಳಿದೆ.

ಒಳ್ಳೇದು ಒಳ್ಳೇದು. ಏನ್ ಒಂದು ಗ್ಲಾಸ್ ಮೋಸಂಬಿ ಜ್ಯೂಸು ಕುಡಿದರೆ ಪೂರ್ತಿ ಮೋಸಂಬಿ ಪುರಾಣ ಹೇಳ್ತೀರಿ ಅಲ್ಲಾ. ಸಾಕು. ಈಗ ಥಂಡಾ ಬೀಯರ್ ತರಿಸಲಿ ಕ್ಯಾ?- ಅಂತ ಕೇಳಿದ ಕರೀಂ.

ತರಿಸೋ ಮಾರಾಯಾ. ಅದಕ್ಯಾಕ ಕೇಳ್ತೀ. ಅದಕ್ಕೇನು ಮುಹೂರ್ತ ನೋಡಬೇಕೆನು? ತರಿಸು, ತರಿಸು, ಅಂತ ಫುಲ್ ಓಕೆ ಕೊಟ್ಟೆ.

ತಣ್ಣನೆ ಕಿಂಗ್ ಫಿಷರ್ ಬೀಯರ್ ಬಂತು. ಅಮೃತ ಅಮೃತ. ಜೊತಿಗೆ ತುಪ್ಪದಾಗ ಹುರಿದ ಗೋಡಂಬಿ ಬ್ಯಾರೆ. ಆಹಾ!!!ಆಹಾ!!! ಲೈಫ್ ಅಂದ್ರ ಇದು.

ನೊರಿ ನೊರಿ ಬಿಯರ್ ಗ್ಲಾಸಿಗೆ ಬಗ್ಗಿಸಿ, ಒಂದೆರಡು ಗೋಡಂಬಿ ಬಾಯಿಗೆ ಒಕ್ಕೊಂಡು, ಬಿಯರ್ ಸಿಪ್ ಮಾಡಬೇಕು ಅನ್ನೋ ತನಕಾ ಕರೀಮನ ಹೈ-ಫೈ ಮ್ಯೂಸಿಕ್ ಸಿಸ್ಟಮ್ ಒಳಗ ಗಾನಾ ಶುರು ಆತು. ಮಸ್ತ ಮಸ್ತ.


ಅಂತ ಹಾಡು ಬಂತು. 

ಮೋಸಂಬಿ ಗುಂಗಿನೊಳಗೆ ಇದ್ದ ನಮಗೆ ಅದು.....

ಆಪ್ ಕೀ ಮೋಸಂಬಿಯೋನೆ ಸಮಜಾ
ಜ್ಯೂಸಿಂಗ್ ಕರನೇ ಕೆ ಕಾಬಿಲ್ ಹಮೆ 

ಅಂತ ಕೇಳಿಬಿಡಬೇಕಾ??!!! ಸ್ಟುಪಿಡ್ !!!! ಛೆ!!! ಛೆ!!! ಅಂತ ತಲಿ ಆ ಕಡೆ ಈ ಕಡೆ ಅಡ್ಡಾಡಿಸಿ ಎಲ್ಲಾ ಮೈಂಡ್ ಕ್ಲಿಯರ್  ಮಾಡಿಕೊಂಡೆ.

ಅದು ಇದು ಹಾಳ ಹರಟಿ ಹೊಡಕೋತ್ತ, ನಂದು ಎರಡು ಬಿಯರ್ ಮತ್ತ ಕರೀಮನ ಎರಡು ಸ್ಕಾಚ್ ಮುಗೀತು. ಒಂದು ಅರ್ಧಾ ಕೇಜಿ ಗೋಡಂಬಿ ಸಹಿತ ಕೃಷ್ಣಾರ್ಪಣ ಆಗಿರಬೇಕು.

ಊಟಕ್ಕೆ ಏಳೋಣ ಕ್ಯಾ? - ಅಂತ ಕೇಳಿದ ಕರೀಂ.

ಹ್ಞೂ...ನಡೀಪಾ.... ಟೈಮ್ ಆತು. ಊಟ ಮಾಡೋಣ. ಅದಕ್ಕೂ ಮೊದಲು ಒಮ್ಮೆ ಬಾತರೂಮಿಗೆ ಹೋಗಿ ಹಲ್ಕಾ ಆಗಿ ಬಂದು ಬಿಡ್ತೇನಿ, ಅಂತ ಹೇಳಿಕೋತ್ತ ಎದ್ದೆ.

ಸ್ವಲ್ಪ ಜೋಲಿ ತಪ್ಪಿತು. ಕೂತಲ್ಲೇ ಕೂತು ಎರಡು ದೊಡ್ಡ ಬಾಟಲೀ ಕಿಂಗ್ ಫಿಷರ್ ಎತ್ತಿದ್ದಕ್ಕ ಎದ್ದು ನಿಂತ ಕೂಡಲೇ ಸ್ವಲ್ಪ ಜೋಲಿ ಹೊಡೀತು. ಜೋಲಿ ಹೊಡಿಯವಂಗ ಸಹಾರಾ ಅಂತ ನಮ್ಮ 'ಹಮ್ ಜೋಲಿ' ಕರೀಂ ಬಂದ. ಆವಾ ಕೊಟ್ಟ ಸಪೋರ್ಟ್ ಸಾಕಾತು ಎದ್ದು ನಿಲ್ಲಲಿಕ್ಕೆ. ಜೋಲಿ ಹೊಡಕೋತ್ತನ ಹೋದೆ.

ಬಂದು ಭಾಳ ದಿವಸ ಆಗಿತ್ತು ಇವನ ಮನಿಗೆ. ಎಲ್ಲ ಹೊಸ ಹೊಸ ಅನ್ನಿಸಲಿಕತ್ತಿತ್ತು. ಬಾತರೂಂ ಇದ್ದ ಕಡೆ ಇದ್ದಂಗ ಇರಲಿಲ್ಲ. ಬಾತರೂಂ ಸಿಗದೇ ಮತ್ತ ವಾಪಸ್ ಬಂದೆ.

ಎಲ್ಲಿ ಅದನೋ ಮಾರಾಯಾ ನಿಮ್ಮನಿ ಬಾತರೂಂ? ಅಲ್ಲೆಲ್ಲೋ ಏನೋ ವಿಚಿತ್ರ ನಮ್ಮನಿ ರೂಂ ಬಂದದ ಅಲ್ಲಾ? ಹಾಂ? - ಅಂತ ಕರೀಮನ್ನ ಕೇಳಿದೆ.

ಬಾತರೂಂ ಇದ್ದಲ್ಲೇ ಅದೇ. ನಿಮಗೆ ಕಾಣಿಸಲಿಲ್ಲ ಕ್ಯಾ? ಮತ್ತೇನು ವಿಚಿತ್ರ ಬಾತರೂಂ ಅಂತೀರಿ? ಏನು ವಿಚಿತ್ರ ಬಾತರೂಂ. ಹಾಂ? ಹಾಂ? - ಅಂತ ಕೇಳಿದ ಕರೀಂ.

ಅಲ್ಲ ಮಾರಾಯಾ....ಎಂತಾ ಬಾತರೂಂ ಅಂತೇನಿ? ಬಾಗಲಾ ತೆಗೆದ ಕೂಡಲೇ ತಣ್ಣನೆ ಗಾಳಿ ಬರ್ತದ. ಮತ್ತ ಬ್ರೈಟ್ ಲೈಟ್ ಆನ್ ಆಗ್ತದ. ಒಳಗ ಹೋದ್ರ ಮತ್ತೂ ಕೋಲ್ಡ್. ಆ ಪರಿ ಥಂಡಿ. ಮತ್ತ ಒಳಗ ಹೋಗಿ ಬಾಗಿಲಾ ಹಾಕ್ಕೊಂಡ ಕೂಡಲೇ ಲೈಟ್ ಆಫ್ ಆಗಿ ಬಿಡ್ತದಲ್ಲೋ ಮಾರಾಯಾ. ಅಂತಾ ಕೆಟ್ಟ ಥಂಡಿ ಕತ್ತಲೀ ಬಾತರೂಂ ಒಳಗ ಹೋಗಿ ಹ್ಯಾಂಗ ಉಚ್ಚಿ ಹೊಯ್ಯೋದು? ಅದಕ್ಕss ಒಂದೆರಡು ಸಲಾ ಒಳಗ ಹೊರಗ ಹೋಗಿ ಬಂದು ಮಾಡಿದೆ. ಒಳಗ ಹೋದ ಕೂಡಲೇ ಲೈಟ್ ಬಂದು ಆಗೋದಂತೂ ನಿಲ್ಲಲಿಲ್ಲ. ಹಾಳಾಗಿ ಹೋಗಲೀ ಅಂತ ಹಾಂಗೇ ಬಂದೆ ನೋಡಪಾ, ಅಂತ ಹೇಳಿದೆ.

ಅಯ್ಯೋ!!!! ಸಾಬ್!!!! ಅದು ನಮ್ಮ ಫ್ರಿಜ್ ಸಾಬ್!!!!!ಅದರ ಒಳಗೆ ಯಾಕೆ ಹೊಕ್ಕಿದ್ದ್ರೀ? ಎರಡು ಬೀಯರ್ ಗೇ  ಔಟ್ ಆಗಿ ಬಿಟ್ಟಿರಿ ಕ್ಯಾ? ಹಾಂ? ಹಾಂ? - ಅಂತ ಸಿಕ್ಕಾಪಟ್ಟೆ ಎಕ್ಸೈಟ್ ಆಗಿ ಹೇಳಿದ ಕರೀಂ.

ಏನು ಫ್ರಿಜ್? ಏನು ನೀ ನಿಮ್ಮನಿ ಬಾತರೂಂ ಫ್ರಿಜ್ಜಿನ ಗತೆ ತಣ್ಣಗ ಮಾಡಿಯಾ? ಯಾಕಾ? - ಅಂತ ಕೇಳಿದೆ.

ಬಾತರೂಂ ಫ್ರಿಜ್ ಗತೆ ತಣ್ಣಗೆ ಮಾಡಿಲ್ಲ ಸಾಬ್. ನೀವು ನಮ್ಮ ದೊಡ್ಡ ಸೈಜಿನ ಫ್ರಿಜ್ ಒಳಗೆ ಹೊಕ್ಕಿ ಹೊರಗೆ ಬಂದೀರಿ. ಅಷ್ಟೇ. ಅದಕ್ಕೇ ನಿಮಗೆ ಸಿಕ್ಕಾಪಟ್ಟೆ ಥಂಡಿ ಆಗಿದೆ. ಬಾಗಿಲಾ ಹಾಕಿದ ಕೂಡಲೇ ಲೈಟ್ ಆನ್ ಆಫ್ ಆಗೋದು ಎಲ್ಲ ಕಂಡಿದೆ. ನಮ್ಮ ಪುಣ್ಯಾ ಅದರಲ್ಲೇ ಮಾಡಿ ಬಂದಿಲ್ಲ. ಅಥವಾ ಮಾಡಿ ಬಂದಿರೋ?.....ಅಂತ ಕರೀಂ ಮತ್ತ ಸಿಕ್ಕಾಪಟ್ಟೆ ನಕ್ಕ.

ಅದೆಂತಾ ದೊಡ್ಡ ಸೈಜಿನ ಫ್ರಿಜ್ ಇಟ್ಟಿಯೋ ಮಾರಾಯಾ. ಒಳ್ಳೆ ರೂಂ ಇದ್ದಂಗ ಅದ. ಅದಕ್ಕೇ ಬಾತರೂಂ ಅಂತ ಒಳಗ ಹೊಕ್ಕಿ ಬಿಟ್ಟಿದ್ದೆ ಅಂತ ಕಾಣಸ್ತದ. ಆ ಫ್ರಿಜ್ ಮ್ಯಾಲೆ 'Not Bathroom' ಅಂತ ಒಂದು ಬೋರ್ಡ್ ಬರೆಸಿ ಹಾಕಿಸು. ಹಾಂಗೇ ಬಾತರೂಂ ಮ್ಯಾಲೆ 'Not Fridge' ಅಂತ ಬರೆಸಿ ಹಾಕಿಸು. ಎಷ್ಟು confuse ಆಗ್ತದ ಗೊತ್ತೇನು? ಮಂಗ್ಯಾನ್ ಕೆ, ಅಂತ ಅವಂಗೇ ಬೈದು ಬಿಟ್ಟೆ. ಉಲ್ಟಾ ಚೋರ್ ಕೊತ್ವಾಲ್ ಕೊ ದಾಂಟೆ.

'ಬಾತರೂಂ', 'ಫ್ರಿಜ್' ಅಂತ ಬೋರ್ಡ್ ಹಾಕಿಸಿದ್ದನ್ನ ನೋಡಿದ್ದೇ ಬಿಡಿ. ಆದ್ರೆ 'Not Bathroom' 'Not Fridge' ಅಂತ ಬೋರ್ಡ್ ಬರೆಸಿ ಹಾಕು ಅಂತ ಯಾರೂ ಹೇಳಿಲ್ಲ. ಈ ಪರಿ ಸಲಹೆ ಕೋಡುದು ಏನು?  ಒಳಗೆ ಹೋದ ಕಿಂಗ್ ಫಿಷರ್ ಪರಮಾತ್ಮನ ಮಹಿಮೆ ಏನು? ಒಳಗೋದ ಪರಮಾತ್ಮ ಏನೇನೋ ಆಡಿಸಿ ಬಿಡ್ತಾನೆ ಬಿಡಿ, ಅಂದ ಕರೀಂ.

ಏ ಮೆಹಮೂದ್.....ಸಾಬ್ ಕೊ ಬಾತರೂಂ ದಿಖಾರೆ. ಮತ್ತೆ ಫ್ರಿಜ್ ಒಳಗೆ ಹೋದಾರು. ನಜರ್ ರಖ್ ಬಾ. ಸಮಜಾ ಕ್ಯಾ? - ಅಂತ ಕರೀಂ ತನ್ನ ಅಣ್ಣನ ಮಗ ಕಂ ಅವನ ಅಸಿಸ್ಟೆಂಟ್ ಗೆ ಹೇಳಿದ.

ಈ ಸಾರೆ ಮೆಹಮೂದ್ ನಮಗೆ 'ಹಮ್ ಜೋಲಿ' ಆಗಿ ಸಹಾರಾ ಕೊಟ್ಟ. ಕೆಲಸಾ ಮುಗಿಸಿಕೊಂಡು ಹಲ್ಕಾ ಆಗಿ ಬಂದು ಕೂತ್ವಿ.

ಟೇಬಲ್ ಮ್ಯಾಲೆ ಪ್ಲೇಟ್ ತುಂಬ ಊಟ ರೆಡಿ ಇತ್ತು. ಮಸ್ತ ಬಿಸಿ ಬಿಸಿ. ಬಿಸಿ ಮಾಡಿದ್ರು. ಮಧ್ಯಾನ್ಹದ್ದ ಅಡಿಗಿ. ಬಿಸಿ ಮಾಡಿದ್ದಕ್ಕ ಬಿಸಿ ಆಗಿ ಬಿಟ್ಟಿತ್ತು.

ನೋಡಿ ಸಾಬ್!!!!ಬಿಸ್ಮಿಲ್ಲಾ ಭಾತ್, ಮಧುರ್ ಬಡಾ, ರುಮಾಲಿ ರೋಟಿ, ಗೋಬಿ ಸಬ್ಜೀ ಎಲ್ಲಾ ಅದೆ. ಮಸ್ತಾಗಿ ಹೊಡೀರಿ. ಭಿಡೆ ಗಿಡೆ ಮಾಡ್ಕೋಬೇಡಿ, ಅಂತ ಕರೀಂ ಆಗ್ರಹ ಮಾಡಿದ.

ಅವನೌನ್! ಇದೆಂತಾ ಬಿಸ್ಮಿಲ್ಲಾ ಭಾತ್ ಪಾ? ಇದೆಂತಾ ಮಧುರ್ ಬಡಾಪಾ? ಇದೆಂತಾ ರುಮಾಲಿ ರೊಟ್ಟಿಪಾ? ಸಬ್ಜೀ ಒಂದು ತಿಳೀತು. ನೌನ್!!! ಪಲ್ಯಾ ಹಸಿ ಇದ್ದಾಗೂ ಪಲ್ಯಾ, ಬೇಯಿಸಿ ಮಸಾಲಿ ಹಾಕಿದ ಮ್ಯಾಲೂ ಪಲ್ಯಾನೇ. ಹಿಂದಿ ಒಳಗೂ ಹಾಂಗೇ. ಪೆಹೇಲೆ ಭೀ ಸಬ್ಜೀ, ಪಕಾನೆ ಕೆ ಬಾದ್ ಭೀ ಸಬ್ಜೀ, ಅಂತ ಅಂದುಕೋತ್ತ ಊಟ ಶುರು ಮಾಡಿದೆ.

ಒಂದು ತುತ್ತು ತಿಂದೆ. ಗೊತ್ತಾತು ಬಿಸ್ಮಿಲ್ಲಾ ಭಾತ್ ಅಂದ್ರ ಏನು ಅಂತ. ಹೋಗ್ಗೋ!!!! ಇದು ಬಿಸಿಬೇಳೆ ಭಾತ್!!! ಇದಕ್ಕ ಕನ್ನಡ ಸರಿ ಗೊತ್ತಿಲ್ಲದವರು ಬಿಸಿಬೆಲ್ಲಾ ಭಾತ್, ಬಿಸಿಬಿಲಾ ಭಾತ್ ಅದು ಇದು ಏನೇನೋ ಅಂತಾರ. ಇವಾ ಅದೆಲ್ಲೋ ಕೇಳಿಕೊಂಡು ಬಿಸಿಬೇಳೆ ಭಾತ್ ಎಂಬ ಅಚ್ಚ ಕನ್ನಡದ ಅಡಿಗಿಗೆ ಬಿಸ್ಮಿಲ್ಲಾ ಭಾತ್ ಅಂದು ಬಿಟ್ಟಿದ್ದ. ಹಾಕ್ಕ್ ಅವನೌನ್!

ಸಾಬ್ರಾ!!! ಇದು ನಮ್ಮ ಕನ್ನಡಿಗರ ಫೇವರಿಟ್ ಡಿಶ್ ಬಿಸಿಬೇಳೆ ಭಾತ್ ರೀ!!!!!!.......ಯಾರು ಹೇಳಿದ್ರು ಇದ್ದಕ್ಕ ಬಿಸ್ಮಿಲ್ಲಾ ಭಾತ್ ಅಂತಾರ ಅಂತ? ಹಾಂ?ಹಾಂ? - ಅಂತ ಹೇಳಿದೆ

ಬಿಸಿಬೇಳೆ ಭಾತ್ ಉರ್ಫ್ ಬಿಸ್ಮಿಲ್ಲಾ ಭಾತ್

ನಮ್ಮ ಹಾಪ್ ಬೇಗಂ!!!- ಅಂತ ಮುಗುಮ್ಮಾಗಿ ಹೇಳಿ ಕರೀಂ ಊಟ ಮುಂದುವರಿಸಿದ. ಕಚಪಚಾ ಅಂತ ತಂದೂರಿ ಕೋಳಿ ಕಾಲು ಕಚ್ಚಿದ. ಸತ್ತು ಹೋಗಿ, ತಂದೂರ ಒಳಗ ಸುಟ್ಟುಕೊಂಡು, ಪ್ಲೇಟ್ ಮ್ಯಾಲೆ ಬಂದು ಕೂತಿದ್ದ ಕೋಳಿ ಕರೀಂ ಕಚ್ಚಿದ ರಭಸಕ್ಕ ಕ್ಕೊ....ಕ್ಕೊ.. ಕ್ಕೊ ಅಂತ  ಕೂಗಿಕೋತ್ತ ಹಾರಿ ಹೋಗಲಿಲ್ಲ. ಅವನ ಹೊಟ್ಟಿಯೊಳಗ ಹೋತು. ಅದೂ ಸೈಲೆಂಟ್ ಆಗಿ.

ಮಧುರ್ ಬಡಾ ಅಂದ್ರ ಏನು ಅಂತ ನೋಡೋಣ ಅಂತ ಒಂದು ಚೂರು ತಿಂದು ನೋಡಿದೆ. ರುಚಿ ನೋಡಿದ ಕೂಡಲೇ ತಿಳೀತು. ಇದು ನಮ್ಮ ಅಪ್ಪಟ ಕನ್ನಡಿಗ ಡಿಶ್ 'ಮದ್ದೂರು ವಡೆ' ಅಂತ. ಈ ಟಿವಿ ಮ್ಯಾಲೆ ಬರೋ ಕುಕಿಂಗ್ ಶೋ ಮಂದಿಗೆ ಹಿಂದ ಗೊತ್ತಿರೋದಿಲ್ಲ ಮುಂದ ಗೊತ್ತಿರೋದಿಲ್ಲ. ಮಧುರ್ ಬಡಾ ಅಂತ ಹೇಳಿರಬೇಕು. ಮಸ್ತ ನಾರ್ತ್ ಇಂಡಿಯನ್ ಫೀಲ್ ಕೊಡ್ತದ ನೋಡ್ರೀ. ಮಧುರ್ ಬಡಾ ಅಂತ ಮಧುರ್ ಬಡಾ!!!! ಅಂದವರಿಗೆ ಹಿಡದು ಹಿಡದು ಒದಿ ಬೇಕು!!! ಮಧುರವಾಗಿಯೇ ಒದಿಬೇಕು!!

ಸಾಬ್ರಾ!!! ಇದು ಮದ್ದೂರ್ ವಡಿ ರೀ!!!! ಇದಕ್ಕ ಮಧುರ್ ಬಡಾ ಅಂತ ಗಲತ್ ಹೆಸರು ಯಾರು ಕೊಟ್ಟರು? ಹಾಂ?ಹಾಂ? - ಅಂತ ಕೇಳಿದೆ.

ಮದ್ದೂರ ವಡೆ ಉರ್ಫ್ ಮಧುರ್ ಬಡಾ
ನಮ್ಮ ಬೇಗಂ!!!! - ಅಂತ ಮುಗುಮ್ಮಾಗಿ ಹೇಳಿ ಕರೀಂ ಒಂದು ದೊಡ್ಡ ಸೈಜಿನ  ಚಿಕನ್ - 65 ಸರ್ವಿಂಗ್ ಪ್ಲೇಟಿಗೆ ಹಾಕ್ಕೊಂಡ ಕರೀಂ, ನಾಮ್ ಮೇ ರಖಾ ಕ್ಯಾ ಹೈ, ಚಿಕನ್ ಸಿರ್ಫ್ ಚಿಕನ್ ಹೈ ಅನ್ನೋ ಹಾಂಗ ತನ್ನ ಕೋಳಿಗಳಿಗೆ ಮುಕ್ತಿ ಕೊಡುವ ಕಾಯಕ ಮುದುವರಿಸಿದ.

ಬಿಸಿಬೇಳೆ ಭಾತ್ ಗೆ ಬಿಸ್ಮಿಲ್ಲಾ ಭಾತ್, ಮದ್ದೂರ ವಡೆಗೆ ಮಧುರ್ ಬಡಾ, ಮೊಸರನ್ನಕ್ಕ ಯೋಗರ್ಟ್ ರೈಸ್, ಚಿತ್ರಾನ್ನಕ್ಕ ಕಲರ್ಡ್ ರೈಸ್, ಒಗ್ಗರಿಣಿ ಅನ್ನಕ್ಕ 'ಫ್ರೈಡ್ ರೈಸ್ ಪಿಲಾಫ್' ಮತ್ತು ಮಗದೊಂದು ಅಂತ ಫ್ಯಾಷನ್ ಹೆಸರು ಕೊಡವರಿಗೆ ಏನೂ ಕಮ್ಮಿ ಇಲ್ಲ. ಎಲ್ಲಾ ರಾಡಿ ಮಾಡಿ ನಮ್ಮ ಕನ್ನಡದ ಅಡಿಗಿ ಎಲ್ಲಾ ನಾರ್ತ್ ಇಂಡಿಯನ್, ಬೆಂಗಾಲಿ, ಗುಜರಾತಿ, ಪಂಜಾಬಿ ಡಿಶ್ ಅಂತ ತೋರಿಸಿಬಿಡ್ತಾರ. ಸುಡುಗಾಡ ಮಂದಿ.

ಬಿಸ್ಮಿಲ್ಲಾ ಭಾತ್, ಮಧುರ್ ಬಡಾ ಊಟ ಮುಗಿಸಿ ಬಂದೆ. ಬರೋವಾಗ ಯಾರೂ ಹಮ್ ಜೋಲಿ ಬೇಕಾಗಲಿಲ್ಲ. ಜೋಲಿ ಹೊಡಿಲಿಲ್ಲ. ಬಂದು ಮನಿ ಮುಟ್ಟಿ ಶೇಷಶಯನ ವಿಷ್ಣುವಿನ ಪೊಸಿಶನ್ ಒಳಗ ಮಲಕೊಂಡು ಬಿಟ್ಟೆ.

ಕನಸಿನ್ಯಾಗ ಪೋರ್ಚುಗೀಸ್ ಟೀಚರ್ ಜೊತಿ ಮೋಸಂಬಿ ಜ್ಯೂಸು ಮಾಡಿದ್ದೇ ಮಾಡಿದ್ದು. ಪೋರ್ಚುಗೀಸ್ ಟೀಚರ್ ಭಾರಿ ಖಡಕ್ಕ. ಸರೀತ್ನಾಗಿ ಅವರ ಪದ್ಧತಿ ಪ್ರಕಾರ ಮೋಸಂಬಿ ಜ್ಯೂಸ್ ಮಾಡಿಲ್ಲ ಅಂದ್ರ ಸ್ಟುಪಿಡ್ ಸ್ಟುಪಿಡ್ ಅಂತ ಬೈತಾರ. ಮಸ್ತ ಬೈದರು. ನಾಳೆ ಮೋಸಂಬಿ ತಂದು ಜ್ಯೂಸಿಂಗ್ ಪ್ರಾಕ್ಟೀಸ್ ಮಾಡಬೇಕು. ಅದನ್ನ ಕರೀಮಗೂ ಕಲಿಸಿ ಕೊಡಬೇಕು.

** 'ಬಿಸ್ಮಿಲ್ಲಾ ಭಾತ್' ಅಂತ ಯಾರೋ ತೆಲುಗರು ಮಾತಾಡುತ್ತಾ ಹೋಗುತ್ತಿದ್ದರು ಅಂತ ಯಾರೋ ಒಬ್ಬರು ಎಲ್ಲೋ ಇಂಟರ್ನೆಟ್ ಮ್ಯಾಲೆ ಜೋಕ್ ಮಾಡಿದ್ದರು. 'ಮಧುರ್ ಬಡಾ' ಅಂತ ಯಾವದೋ ಇಂಗ್ಲಿಷ್ ಕುಕಿಂಗ್ ಶೋ ನಲ್ಲಿ ಬಂದಿತ್ತು ಅಂತ ಇನ್ನೊಬ್ಬರು ಅಲ್ಲೇ ಹೇಳಿದ್ದರು.

** ಬಾತರೂಂ ಫ್ರಿಜ್ ಜೋಕ್ ಮಾಡಿದವರು ಮಿಮಿಕ್ರಿ ದಯಾನಂದ ಅಂತ ನೆನಪು. ಅವರಿಗೆ ಒಂದು ಸಲಾಂ!