Wednesday, July 03, 2013

ಬಿಸ್ಮಿಲ್ಲಾ ಭಾತ್, ಮಧುರ್ ಬಡಾ.... ಬಡಾ ಖಾನಾಗೆ ದಾವತ್!

ಸಂಡೆ ಮಧ್ಯಾನ್ಹ. ಭೀಮ್ಯಾನ ಚುಟ್ಟಾ ಅಂಗಡಿ ಮುಂದ 'ಡ್ರೈ ಮಾವಾ' ಮೆದ್ದುಕೋತ್ತ  ನಿಂತಿದ್ದೆ.

ಹೊಟ್ಟಿ ಮ್ಯಾಲೆ ಕೈ ಆಡಿಸಿಕೋತ್ತ ಕರೀಂ ಬರೋದು ಕಾಣಿಸ್ತು. ಮಸ್ತ ಬಡಾ ಖಾನಾ ಆಗಿರಬೇಕು. ಒಂದಿಷ್ಟು ಕುರಿ, ಕೋಳಿ ಮಟಾಶ್ ಆಗಿ ಬಿಟ್ಟಿರಬೇಕು.

ಹತ್ತಿರ ಬಂದ ಕರೀಂ, ಜೋರಾಗಿ ಹೊಟ್ಟಿ ಮ್ಯಾಲೆ ಕೈ ಆಡಿಸಿದವನss, 'ಬಿಸ್ಮಿಲ್ಲಾ ಅಲ್ ರಹಮಾನ್ ಅಲ್ ರಹೀಂ' ಅಂದುಬಿಟ್ಟ!!!

ಸಾಬ್ರಾ!!! ಊಟಾಗಿ ಹೊಟ್ಟಿ ಮ್ಯಾಲೆ ಕೈ ಆಡಿಸೋವಾಗ ಯಾಕ್ರೀ 'ಬಿಸ್ಮಿಲ್ಲಾ ಅಲ್ ರಹಮಾನ್ ಅಲ್ ರಹೀಂ' ಅಂತೀರಿ? - ಅಂತ ಕೇಳಿದೆ.

ಯಾಕೆ ಅನ್ನಬಾರದು ಕ್ಯಾ? - ಅಂತ ಕೇಳಿದ ಕರೀಂ.

ಹಂಗೇನೂ ಇಲ್ಲ ಬಿಡ್ರೀ. 'ಬಿಸ್ಮಿಲ್ಲಾ ಅಲ್ ರಹಮಾನ್ ಅಲ್ ರಹೀಂ' ಅಂದ್ರ 'ದಯಾಮಯನೂ ಕರುಣಾಮಯಿಯೂ ಆದ ದೇವರ  ಹೆಸರಲ್ಲಿ' ಅಂತ. ಹೌದೋ ಅಲ್ಲೋ? ಅನ್ನಬಹುದು ಅನ್ನಬಹುದು. ದೇವರ ಹೆಸರು ಯಾವಾಗ ಬೇಕಾಗಲೂ ತೊಗೋಬಹುದು, ಅಂತ ಹೇಳಿದೆ.

ವಾಹ್!!! ವಾಹ್!!! ನಮ್ಮದು ಧರ್ಮಾದು ಬಗ್ಗೆ ಕೂಡ ಎಲ್ಲ ತಿಳಿದುಕೊಂಡೀರಿ ಕ್ಯಾ? ಬಹುತ್ ಖೂಬ್....ಬಹುತ್ ಅಚ್ಚಾ ಹೈ, ಅಂದ ಕರೀಂ.

ಮಸ್ತ ಊಟಾದ ಮ್ಯಾಲೆ ಹೊಟ್ಟಿ ಮ್ಯಾಲೆ ಕೈ ಆಡಿಸಿಕೋತ್ತ 'ವಾತಾಪಿ ಜೀರ್ಣೋ ಭವ' ಅನ್ನೋದು ಪದ್ಧತಿ ನೋಡಪಾ, ಅಂತ ಹೇಳಿದೆ.

ಹಾಂ!!!! ಕಿಸ್ ಪಾಪಿ ಕೋ ಅಜೀರ್ಣ ಹುವಾ ಸಾಬ್? ಚಿಂತಾ ಕರ್ರೋ ನಕೊ. ಗ್ರೈಪ್ ವಾಟರ್ ಗೆ ಕುಡಿಸಿಬಿಟ್ಟಿ ಬೆನ್ನ ಮ್ಯಾಲೆ ಪಟಾ ಪಟಾ ಅಂತ ಗುದ್ದಿ ಬಿಡಿ. ಗ್ಯಾಸ್ ಎಲ್ಲ ಬಾಹರ್ ಆಗಿ ಏಕ್ದಂ ಹಲ್ಕಾ ಆಗ್ ಬಿಟ್ಟಿ ಅಜೀರ್ಣ ಇಂದ ಏಕ್ದಂ ರಿಲೀಫ್ ಸಿಗ್ತದೆ, ಅಂತ ಹೇಳಿಬಿಟ್ಟ ಕರೀಂ.

ಲೇ....ಮಂಗ್ಯಾನ್ ಕೆ..... ಯಾರಿಗೂ ಅಜೀರ್ಣ ಮತ್ತೊಂದು ಆಗಿಲ್ಲ. ಅವೆಲ್ಲ ನಿನಗ ತಿಳಿಯೋದಿಲ್ಲ. ಏನು ಸ್ಪೆಷಲ್ ಊಟ ನಿಮ್ಮ ಮನಿಯಾಗ ಇವತ್ತು? - ಅಂತ ಕೇಳಿದೆ.

ನಮ್ಮ ಮನೆನಲ್ಲಿ ಇವತ್ತು ಸಾಬ್ 'ಬಿಸ್ಮಿಲ್ಲಾ ಭಾತ್' ಮತ್ತು 'ಮಧುರ್ ಬಡಾ'. ಭಾರಿ ಮಸ್ತ್ ಇತ್ತು ಸಾಬ್. ಸಂಜಿ ಮುಂದೆ ಬನ್ನಿ. ನಿಮಗೂ ಕೊಡೋಣ, ಅಂತ ಅಂದ ಕರೀಂ.

ಹಾಂ!!!!!ಹಾಂ!!!............ಫುಲ್ ಶಾಕ್ ಹೊಡೀತು

ಬಿಸ್ಮಿಲ್ಲಾ ಭಾತ್!!!!

ಮಧುರ್ ಬಡಾ!!!!

ಏನಪಾ ಇವು? ನಮಗಂತೂ ತಿಳಿಲಿಲ್ಲ. ಯಾವ ಕಡೆ ಅಡಿಗಿ ಇರಬಹುದು ಇವು? ಹ್ಯಾಂಗ ಮಾಡಿರಬಹುದು? - ಅಂತ ಸಿಕ್ಕಾಪಟ್ಟೆ ಡೌಟ್ ಬಂದು ಬಿಟ್ಟವು.

ಸಾಬ್ರಾ!!!! ಏನ್ರೀ ಇದು???!!! ಈ ಭಾತ್ ಅನ್ನೋದು ನಿಮ್ಮ ಮನಿಯೊಳಗ ಹ್ಯಾಂಗ್ರೀ ಬಂತು? ವಾಂಗೀ ಭಾತ್, ಮಸಾಲಿ ಭಾತ್, ಒಗ್ಗರಣಿ ಭಾತ್, ಕೇಸರೀ ಭಾತ್, ಖಾರಾ ಭಾತ್ ಇತ್ಯಾದಿ ಎಲ್ಲ ನಮ್ಮ ಮಂದಿ ಅದೂ ಮರಾಠಿ ಮಾತಾಡೋ ಮಂದಿ ಅನ್ನೋದು ಜಾಸ್ತಿ. ನಿಮ್ಮ ಕಡೆ ಬಿರ್ಯಾನಿ, ಪುಲಾವ್ ಅಂತ ಅನ್ನೋದೇ ಜಾಸ್ತಿ. ಹಾಂಗಿದ್ದಾಗ ಬಿಸ್ಮಿಲ್ಲಾ ಭಾತ್ ಅಂದ್ರ ಏನ್ರೀ? ಮಧುರ್ ಬಡಾ ಅಂದ್ರಾ? ಯಾವ್ಯಾವ ಪ್ರಾಣಿ ಪಕ್ಷಿ ಹಾಕಿ ಮಾಡಿದ್ದು? ಹಾಂ? ಹಾಂ? - ಅಂತ ಕೇಳಿದೆ.

ಅಯ್ಯೋ ಸಾಬ್!!!! ಫುಲ್ ವೆಜಿಟೇರಿಯನ್ ಸಾಬ್!!! ಏಕದಂ ನಿಮ್ಮದು ಮಂದಿ ಅಡಿಗಿ ಹಾಗೆ. ಏನೂ ನಾನ್ವೆಜ್ ಗೀನ್ವೆಜ್ ಬಿಲ್ಕುಲ್ ಇಲ್ಲ. ನಿಮಗೆ ತಿನ್ನೋಕೆ ಏನೂ ಪ್ರಾಬ್ಲೆಮ್ ಇಲ್ಲ. ಬನ್ನಿ ಸಂಜಿ ಮುಂದೆ. ಎರಡೆರಡು ಹಾಕಿ ಬಿಟ್ಟಿ ಮಸ್ತ ಪಾರ್ಟಿ ಮಾಡೋಣ. ಕ್ಯಾ ಬೋಲ್ತಾ? - ಅಂತ ಭಾರಿ ಆಫರ್ ಕೊಟ್ಟೇ ಬಿಟ್ಟ ಕರೀಂ.

ಏನ್ ಹಾಕೋದ್ರೀ? ಅದೂ ಎರಡೆರಡು ಹಾಕೋದು ಅಂದ್ರ? - ಅಂತ ಘಾಬ್ರೀಲೆ ಕೇಳಿದೆ.

ಅಯ್ಯೋ!!! ನೀವು ಎರಡೆರಡು ಬಿಯರ್ ಹಾಕಿ. ನಾವು ಎರಡೆರಡು ಕಾಚಾ ಹಾಕ್ತೇವೆ. ಓಕೆ? - ಅಂತ ಹೇಳಿದ ಕರೀಂ.

ಹ್ಞೂ....ಹ್ಞೂ....ಹೌದೋ ಮಾರಾಯಾ.... ಕೆಟ್ಟ ಶಕಿ ಮಾರಾಯಾ....ಎರಡು ಐಸ್ ಕೋಲ್ಡ್ ಏಕ್ದಂ ಚಿಲ್ ಬಿಯರ್ ತರಿಸಿ ಕೊಟ್ಟು ಬಿಡೋ ಮಾರಾಯಾ. ಅದಿರ್ಲೀ....ನೀ ಯಾಕ ಎರಡೆರೆಡು ಕಾಚಾ ಹಾಕ್ತಿಯೋ? ಈ ಪರಿ ಶೆಕಿ ಅದ. ಎಷ್ಟೋ ಮಂದಿ ಒಂದೂ ಕಾಚಾ ಬ್ಯಾಡ ಅಂತ ಬರೆ ಲುಂಗಿ ಉಟ್ಟುಗೊಂಡು ಫ್ರೀ ಫಾರ್ಮ್ ಒಳಗ ಅಡ್ಡಾಡ್ಲಿಕತ್ತಾರ. ಹಂತಾದ್ರಾಗ ನೀನು ಎರಡೆರಡು ಕಾಚಾ ಹಾಕ್ಕೊಳ್ಳಿಕತ್ತಿ ಅಂದ್ರ ಏನು ಕಥಿ ಮಾರಾಯಾ? - ಅಂತ ಕೇಳಿದೆ.

ಅಯ್ಯೋ....ನಾವು ಸ್ಕಾಚಾ ಅಂದಿದ್ದು ನಿಮ್ಮ ತಗಡು ಕಿವಿಗೆ ಕಾಚಾ ಅಂತ ಕೇಳಿದ್ರೆ ನಾವೇನು ಮಾಡೋಣ. ನಿಮಗೆ ಬಿಯರ್ ನಮಗೆ ಸ್ಕಾಚಾ ಅಂತ ಹೇಳಿದ್ದು. ತಿಳೀತು ಕ್ಯಾ? - ಅಂತ ಝಾಡಿಸಿದ ಕರೀಂ.

ಓಹೋ!!! ಸ್ಕಾಚ್ ವಿಸ್ಕಿ ಅನ್ನಿ. ಅದು ಸ್ಕಾಚ್ ಅಂತರೀಪಾ. ಕಾಚಾ ಅಂದಂಗ ಸ್ಕಾಚಾ ಅಂದ್ರ ನಾವೇನು ಮಾಡೋಣ? - ಅಂತ ಉಲ್ಟಾ ಬಾರಿಸಿದೆ.

ಓಕೆ ....ಓಕೆ ....ಸಾಕು ಸಾಕು....ರುಮಾಲಿ ರೊಟೀ ಕೂಡ ಇರ್ತದೆ. ಮಸ್ತ ಆಗ್ತದೆ. ಮತ್ತೊಂದು ಸಬ್ಜೀ ಕೂಡ ಮಾಡಿಸೋಣ. ಬನ್ನಿ ಬನ್ನಿ, ಅಂತ ಮಸ್ತ ಆಫರ್ ಕೊಟ್ಟ ಕರೀಂ.

ಬಿಸ್ಮಿಲ್ಲಾ ಭಾತ್, ಮಧುರ್ ಬಡಾ ಜೊತಿ ರುಮಾಲಿ ರೋಟೀ!!!! ಒಂದರಕಿಂತ ಒಂದು ವಿಚಿತ್ರ ವಿಚಿತ್ರ ಅಡಿಗಿ!!!!

ಸಾಬ್ರಾ!!!! ನಮಗ ತಲಿಗೆ ರುಮಾಲು ಸುತ್ತಿಗೊಂಡು ಊಟಾ ಮತ್ತೊಂದು ಮಾಡಲಿಕ್ಕೆ ಸ್ವಲ್ಪ ಅಡಿಚಿಣಿ ಆಗ್ತದ್ರೀ. ಈ ರುಮಾಲಿ ರೊಟ್ಟಿ ಏನು ತಲಿಗೆ ರುಮಾಲು ಸುತ್ತಿಗೊಂಡ ಮ್ಯಾಲೆನೇ ತಿನ್ನೋದು ಏನು? ರೊಟ್ಟಿ ಜೊತೆ ರುಮಾಲು ಫ್ರೀ ಏನು? ಅಥವಾ ರೊಟ್ಟಿನೇ ರುಮಾಲಿನ ಗತೆ ಸುತ್ತಿಕೊಂಡು ಬಿಡೋದೋ? ಹಾಂ? ಹಾಂ? - ಅಂತ ಕೇಳಿದೆ, ಇನ್ನೋಸೆಂಟ್ ಆಗಿ. ನಮಗ ಗೊತ್ತಿಲ್ಲ.

ಕರೀಂ ಅಂಡು ತಟ್ಟಿಕೊಂಡು ಪೆಕಪೆಕಾ ಅಂತ ನಕ್ಕ. ನಾನು ಪಿಕಿ ಪಿಕಿ ಅಂತ ನೋಡಿದೆ.

ಸಾಬ್!!!! ರುಮಾಲಿ ರೋಟಿಗೆ ಮತ್ತೆ ತಲಿಗೆ ಸುತ್ತಿಕೊಳ್ಳುವ ರುಮಾಲಿಗೆ ಏನೂ ಸಂಬಂಧ ಇಲ್ಲ ಸಾಬ್. ಅದು ಒಂದು ಟೈಪ್ ರೋಟಿ ಅಷ್ಟೇ. ನೀವು ರುಮಾಲು ಮುಂಡಾಸು ಏನೂ ಸುತ್ತಿಗೊಳ್ಳದೆ ತಿನ್ನಬಹದು. ಬನ್ನಿ, ಅಂತ ಹೇಳಿದ ಕರೀಂ.

ಆತಪಾ ದೋಸ್ತಾ!! ಇಷ್ಟು ಪ್ರೀತಿಯಿಂದ ಕರೀಲಿಕತ್ತಿ ಅಂದ್ರ ಬಂದು ಬಿಡೋದೇ ಸಂಜಿ ಮುಂದ. ಎಷ್ಟು, ಏಳು ಘಂಟೆಕ್ಕ ಬರಲೀ? ತೀರ್ಥ ಅದು ಇದು ಮುಗಿದು ಊಟಕ್ಕ ಕರೆಕ್ಟ್ ಒಂಬತ್ತು ಒಂಬತ್ತೂವರಿ ಅಂದ್ರ ಸರಿ ಅಲ್ಲಾ? ಓಕೆ? ಬಂದ ಬಿಡ್ತೇನಿ, ಅಂತ ಹೇಳಿ ವಾಪಸ್ ಹೊಂಟು ಬಂದೆ.

ಬಿಸ್ಮಿಲ್ಲಾ ಭಾತ್, ಮಧುರ್ ಬಡಾ, ರುಮಾಲಿ ರೋಟಿ, ತಣ್ಣನೆ ಕಿಂಗ್ ಫಿಷರ್ ಬಿಯರ್!!! ಎಲ್ಲಾ ಎಷ್ಟು ಮಸ್ತ!!! ಲಗೂನ ಏಳು ಹೊಡಿಬಾರದಾ, ಅಂತ ಅನ್ನಿಸಲಿಕತ್ತಿತ್ತು.

ಅಂತೂ ಇಂತೂ ಸಂಜಿ ಆರೂವರಿ ಆಗಿ ಬಿಡ್ತು. 'ಇಂತಜಾರ್ ಕಿ ಘಡಿ' ಬಂದೇ ಬಿಡ್ತು. ಹೋದೆ ಕರೀಮನ ಮನಿಗೆ.

ಕರೀಮಂದಂತೂ ದೊಡ್ಡ ವಾಡೆ. ದೋಸ್ತರನ್ನ ಎಂಟರ್ಟೈನ್ ಮಾಡೋ ಜಗಾನಾ ಬ್ಯಾರೆ. ಅವನ ಯಬಡ ಬೇಗಂ ನಜರಿಂದ ಭಾಳ ದೂರ.

ಹೋಗಿ ಕೂತೆ. ಕರೀಂ ಬಂದು ಡುಬ್ಬಾ ಚಪ್ಪರಿಸಿ ಖಾತಿರದಾರಿ ಮಾಡಿ ಕೂಡಿಸಿದ. ಕೂಡೋ ಪುರಸತ್ತಿಲ್ಲ ಅವನ ಆಳು ಒಂದು ದೊಡ್ಡ ಗ್ಲಾಸ್ ಒಳಗ ಏನೋ ತಂದು ಇಟ್ಟು ಹೋದ.

ಏನೋ ಕರೀಂ ಇದು? ಇದು ಬೀಯರ್ ಕಂಡಂಗ ಕಾಣೋದಿಲ್ಲ. ನಮಗ ಬ್ಯಾರೆ ಏನೂ ಒಗ್ಗೋದಿಲ್ಲ ಮಾರಾಯಾ. ಏನೇನರ ಕುಡಿಸಿ ಬಿಡಬ್ಯಾಡೋ ಪುಣ್ಯಾತ್ಮಾ. ನಂತರ ನಾಳೆ ತಲಿ ಹಿಡಕೊಂಡು ಕೂತೆ ಅಂದ್ರ ಕಷ್ಟ ಮಾರಾಯಾ, ಅಂತ ಅಂದೆ.

ಚಿಂತಾ ನಕ್ಕೋ ಕರೋಜೀ!!! ಅದು ಬರೆ ಮೋಸಂಬಿ ಜ್ಯೂಸ್. ಅಷ್ಟೇ. ಭಾಳ ಬಿಸಿಲು ಐತೆ ನೋಡಿ. ಅದಕ್ಕೆ ಮೊದಲು ಥಂಡಾ
ಥಂಡಾ ಮೋಸಂಬಿ ಜ್ಯೂಸು ಕುಡದ ಬಿಟ್ಟಿ ನಂತರ ಬಿಯರ್ ಕುಡೀರಿ. ನಾವು ಸ್ಕಾಚಾ ಕುಡಿತೇವೆ, ಅಂದ ಕರೀಂ.

ಅಯ್ಯೋ!!!ಮೋಸಂಬಿ ಜ್ಯೂಸು ಏನು? ಭಾಳ ಮಸ್ತ. ಭಾಳ ಮಸ್ತ. ಆದರೂ ಹೀಂಗ ಗ್ಲಾಸ್ ಒಳಗ ಮೋಸಂಬಿ ಜ್ಯೂಸು ಕುಡಿಯೋದು ಏನೂ ಮಜಾ ಬಂರಗಿಲ್ಲ ಬಿಡೋ, ಅಂತ ಅನ್ನಕೋತ್ತನಾ ಗ್ಲಾಸ್ ಎತ್ತಿ ಗಟಗಟ ಒಂದೇ ಗುಕ್ಕಿಗೆ ಕುಡಿದು ಗ್ಲಾಸ್ ಕೆಳಗೆ ಇಟ್ಟೆ.

ಮತ್ತೆ ಹೆಂಗೆ ಮೋಸಂಬಿ ಜ್ಯೂಸು ಕುಡಿಯೋರು ನೀವು? ಸೀದಾ ಮೋಸಂಬಿ ಗಿಡದ ಮ್ಯಾಲೆ ಮಂಗ್ಯಾ ಗತೆ ಕೂತು, ಮಂಗ್ಯಾ ಗತೆ ಮೋಸಂಬಿ ಕಿತ್ತಿ, ಏನೇನೋ ಮಾಡಿ ಕುಡಿತೀರಿ ಕ್ಯಾ? - ಅಂತ ಕೇಳಿದ ಕರೀಂ.

ಏ....ಹಾಂಗಲ್ಲೋ....ಛೋಲೋ ಮಸ್ತ ರಸಭರಿತ ಮೋಸಂಬಿ ಸಿಕ್ಕಿತು ಅಂದ್ರ ಮಾವಿನ ಹಣ್ಣಿನಾಂಗ ಚೀಪಿ ಬಿಡಬಹುದು ನೋಡು. ಮಾವಿನಹಣ್ಣು ಹ್ಯಾಂಗ ಬಾಯಾಗ ಇಟ್ಟಗೊಂಡು, ಒಮ್ಮೆ ಮ್ಯಾಲೆ ಕಚ್ಚಿ, ಕೆಳಗಿಂದ ಮೆತ್ತಗ ಒತ್ತಿಕೋತ್ತ ಬಂದ್ರ ಮಸ್ತ ಸೀಕರಣಿ ಹಾಂಗ ರಸಾ ಬಾಯಾಗ ಬರೋದಿಲ್ಲ ಏನು? ಹಾಂಗೇ ಇದು. ಮೋಸಂಬಿ ಒತ್ತಿ ಒತ್ತಿ, ಚೀಪಿ ಚೀಪಿ ರಸ ಕುಡಿಬೇಕೋ ಮಾರಾಯಾ. ಅದು ನ್ಯಾಚುರಲ್. ಅದನ್ನ ಬಿಟ್ಟು ಮಷೀನ್ ಒಳಗ ಮೋಸಂಬಿ ರಸ ಹಿಂಡಿ, ಗ್ಲಾಸ್ ಒಳಗ ಹಾಕಿ, ಅದಕ್ಕ ಐಸ್ ಹಾಕಿ, ಅದರಾಗ ಒಂದು ಕೊಳವಿ ಚುಚ್ಚಿ ಕುಡಿಯೋದು ಅಂದ್ರ ಏನು? ಹಾಂ? ಹಾಂ? - ಅಂತ ಮೋಸಂಬಿ ಹ್ಯಾಂಗ ಎಂಜಾಯ್ ಮಾಡಬೇಕು ಅಂತ ಹೇಳಿದೆ.

ಹಾಂಗೆ ಕ್ಯಾ? ಮೋಸಂಬಿ ಹೀಗೆ ಎಂಜಾಯ್ ಮಾಡೋದು ಎಲ್ಲಿಂದ ಕಲಿತರಿ ಸಾಬ್?- ಅಂತ ಕೇಳಿದ.

ನಮ್ಮ ಪೋರ್ಚುಗೀಸ್ ಟೀಚರ್ ಒಬ್ಬರು ಇದ್ದರು. ಅವರೇ ಹೇಳಿ ಕೊಟ್ಟಿದ್ದು ಈ ಪದ್ಧತಿ. ಪೋರ್ಚುಗೀಸ್ ಮಂದಿ ಮೋಸಂಬಿ ಹೀಂಗೇ ಜ್ಯೂಸು ಮಾಡೋದು ಏನಪಾ....ಮಸ್ತ ಇರ್ತದ. ನಮ್ಮ ಟೀಚರ್ ಭಾಳ ಮಸ್ತ ಇದ್ದರು. ಮೋಸಂಬಿ ಸಹಿತ ಅವರೇ ಕೊಟ್ಟು, ಒತ್ತಿ ಒತ್ತಿ ಚೀಪಿ ಚೀಪಿ ಜ್ಯೂಸು ಮಾಡೋದು ಹೇಳಿ ಕೊಡ್ತಿದ್ದರು. ಪರ್ಫೆಕ್ಟ್ ಆಗೋತನಕಾ ಎಷ್ಟು ಬೇಕು ಅಷ್ಟು  ಮೋಸಂಬಿ ಕೊಡ್ತಿದ್ದರು. ಕೊಡತಿದ್ದರು ಏನು ಬಂತು, ಅವರ ಕಾಂಪೌಂಡ್ ಒಳಗ ಇದ್ದ ಎಲ್ಲಾ ಮೋಸಂಬಿ ನಿಮ್ಮದೇ ಅಂತ ತಿಳಕೊಂಡು ಮಸ್ತಾಗಿ ಉಪಯೋಗಿಸಿ ಅಂತ ಸಹಿತ ಹೇಳಿ ಬಿಟ್ಟಿದ್ದರು, ಅಂತ ಹೇಳಿದೆ.

ಒಳ್ಳೇದು ಒಳ್ಳೇದು. ಏನ್ ಒಂದು ಗ್ಲಾಸ್ ಮೋಸಂಬಿ ಜ್ಯೂಸು ಕುಡಿದರೆ ಪೂರ್ತಿ ಮೋಸಂಬಿ ಪುರಾಣ ಹೇಳ್ತೀರಿ ಅಲ್ಲಾ. ಸಾಕು. ಈಗ ಥಂಡಾ ಬೀಯರ್ ತರಿಸಲಿ ಕ್ಯಾ?- ಅಂತ ಕೇಳಿದ ಕರೀಂ.

ತರಿಸೋ ಮಾರಾಯಾ. ಅದಕ್ಯಾಕ ಕೇಳ್ತೀ. ಅದಕ್ಕೇನು ಮುಹೂರ್ತ ನೋಡಬೇಕೆನು? ತರಿಸು, ತರಿಸು, ಅಂತ ಫುಲ್ ಓಕೆ ಕೊಟ್ಟೆ.

ತಣ್ಣನೆ ಕಿಂಗ್ ಫಿಷರ್ ಬೀಯರ್ ಬಂತು. ಅಮೃತ ಅಮೃತ. ಜೊತಿಗೆ ತುಪ್ಪದಾಗ ಹುರಿದ ಗೋಡಂಬಿ ಬ್ಯಾರೆ. ಆಹಾ!!!ಆಹಾ!!! ಲೈಫ್ ಅಂದ್ರ ಇದು.

ನೊರಿ ನೊರಿ ಬಿಯರ್ ಗ್ಲಾಸಿಗೆ ಬಗ್ಗಿಸಿ, ಒಂದೆರಡು ಗೋಡಂಬಿ ಬಾಯಿಗೆ ಒಕ್ಕೊಂಡು, ಬಿಯರ್ ಸಿಪ್ ಮಾಡಬೇಕು ಅನ್ನೋ ತನಕಾ ಕರೀಮನ ಹೈ-ಫೈ ಮ್ಯೂಸಿಕ್ ಸಿಸ್ಟಮ್ ಒಳಗ ಗಾನಾ ಶುರು ಆತು. ಮಸ್ತ ಮಸ್ತ.


ಅಂತ ಹಾಡು ಬಂತು. 

ಮೋಸಂಬಿ ಗುಂಗಿನೊಳಗೆ ಇದ್ದ ನಮಗೆ ಅದು.....

ಆಪ್ ಕೀ ಮೋಸಂಬಿಯೋನೆ ಸಮಜಾ
ಜ್ಯೂಸಿಂಗ್ ಕರನೇ ಕೆ ಕಾಬಿಲ್ ಹಮೆ 

ಅಂತ ಕೇಳಿಬಿಡಬೇಕಾ??!!! ಸ್ಟುಪಿಡ್ !!!! ಛೆ!!! ಛೆ!!! ಅಂತ ತಲಿ ಆ ಕಡೆ ಈ ಕಡೆ ಅಡ್ಡಾಡಿಸಿ ಎಲ್ಲಾ ಮೈಂಡ್ ಕ್ಲಿಯರ್  ಮಾಡಿಕೊಂಡೆ.

ಅದು ಇದು ಹಾಳ ಹರಟಿ ಹೊಡಕೋತ್ತ, ನಂದು ಎರಡು ಬಿಯರ್ ಮತ್ತ ಕರೀಮನ ಎರಡು ಸ್ಕಾಚ್ ಮುಗೀತು. ಒಂದು ಅರ್ಧಾ ಕೇಜಿ ಗೋಡಂಬಿ ಸಹಿತ ಕೃಷ್ಣಾರ್ಪಣ ಆಗಿರಬೇಕು.

ಊಟಕ್ಕೆ ಏಳೋಣ ಕ್ಯಾ? - ಅಂತ ಕೇಳಿದ ಕರೀಂ.

ಹ್ಞೂ...ನಡೀಪಾ.... ಟೈಮ್ ಆತು. ಊಟ ಮಾಡೋಣ. ಅದಕ್ಕೂ ಮೊದಲು ಒಮ್ಮೆ ಬಾತರೂಮಿಗೆ ಹೋಗಿ ಹಲ್ಕಾ ಆಗಿ ಬಂದು ಬಿಡ್ತೇನಿ, ಅಂತ ಹೇಳಿಕೋತ್ತ ಎದ್ದೆ.

ಸ್ವಲ್ಪ ಜೋಲಿ ತಪ್ಪಿತು. ಕೂತಲ್ಲೇ ಕೂತು ಎರಡು ದೊಡ್ಡ ಬಾಟಲೀ ಕಿಂಗ್ ಫಿಷರ್ ಎತ್ತಿದ್ದಕ್ಕ ಎದ್ದು ನಿಂತ ಕೂಡಲೇ ಸ್ವಲ್ಪ ಜೋಲಿ ಹೊಡೀತು. ಜೋಲಿ ಹೊಡಿಯವಂಗ ಸಹಾರಾ ಅಂತ ನಮ್ಮ 'ಹಮ್ ಜೋಲಿ' ಕರೀಂ ಬಂದ. ಆವಾ ಕೊಟ್ಟ ಸಪೋರ್ಟ್ ಸಾಕಾತು ಎದ್ದು ನಿಲ್ಲಲಿಕ್ಕೆ. ಜೋಲಿ ಹೊಡಕೋತ್ತನ ಹೋದೆ.

ಬಂದು ಭಾಳ ದಿವಸ ಆಗಿತ್ತು ಇವನ ಮನಿಗೆ. ಎಲ್ಲ ಹೊಸ ಹೊಸ ಅನ್ನಿಸಲಿಕತ್ತಿತ್ತು. ಬಾತರೂಂ ಇದ್ದ ಕಡೆ ಇದ್ದಂಗ ಇರಲಿಲ್ಲ. ಬಾತರೂಂ ಸಿಗದೇ ಮತ್ತ ವಾಪಸ್ ಬಂದೆ.

ಎಲ್ಲಿ ಅದನೋ ಮಾರಾಯಾ ನಿಮ್ಮನಿ ಬಾತರೂಂ? ಅಲ್ಲೆಲ್ಲೋ ಏನೋ ವಿಚಿತ್ರ ನಮ್ಮನಿ ರೂಂ ಬಂದದ ಅಲ್ಲಾ? ಹಾಂ? - ಅಂತ ಕರೀಮನ್ನ ಕೇಳಿದೆ.

ಬಾತರೂಂ ಇದ್ದಲ್ಲೇ ಅದೇ. ನಿಮಗೆ ಕಾಣಿಸಲಿಲ್ಲ ಕ್ಯಾ? ಮತ್ತೇನು ವಿಚಿತ್ರ ಬಾತರೂಂ ಅಂತೀರಿ? ಏನು ವಿಚಿತ್ರ ಬಾತರೂಂ. ಹಾಂ? ಹಾಂ? - ಅಂತ ಕೇಳಿದ ಕರೀಂ.

ಅಲ್ಲ ಮಾರಾಯಾ....ಎಂತಾ ಬಾತರೂಂ ಅಂತೇನಿ? ಬಾಗಲಾ ತೆಗೆದ ಕೂಡಲೇ ತಣ್ಣನೆ ಗಾಳಿ ಬರ್ತದ. ಮತ್ತ ಬ್ರೈಟ್ ಲೈಟ್ ಆನ್ ಆಗ್ತದ. ಒಳಗ ಹೋದ್ರ ಮತ್ತೂ ಕೋಲ್ಡ್. ಆ ಪರಿ ಥಂಡಿ. ಮತ್ತ ಒಳಗ ಹೋಗಿ ಬಾಗಿಲಾ ಹಾಕ್ಕೊಂಡ ಕೂಡಲೇ ಲೈಟ್ ಆಫ್ ಆಗಿ ಬಿಡ್ತದಲ್ಲೋ ಮಾರಾಯಾ. ಅಂತಾ ಕೆಟ್ಟ ಥಂಡಿ ಕತ್ತಲೀ ಬಾತರೂಂ ಒಳಗ ಹೋಗಿ ಹ್ಯಾಂಗ ಉಚ್ಚಿ ಹೊಯ್ಯೋದು? ಅದಕ್ಕss ಒಂದೆರಡು ಸಲಾ ಒಳಗ ಹೊರಗ ಹೋಗಿ ಬಂದು ಮಾಡಿದೆ. ಒಳಗ ಹೋದ ಕೂಡಲೇ ಲೈಟ್ ಬಂದು ಆಗೋದಂತೂ ನಿಲ್ಲಲಿಲ್ಲ. ಹಾಳಾಗಿ ಹೋಗಲೀ ಅಂತ ಹಾಂಗೇ ಬಂದೆ ನೋಡಪಾ, ಅಂತ ಹೇಳಿದೆ.

ಅಯ್ಯೋ!!!! ಸಾಬ್!!!! ಅದು ನಮ್ಮ ಫ್ರಿಜ್ ಸಾಬ್!!!!!ಅದರ ಒಳಗೆ ಯಾಕೆ ಹೊಕ್ಕಿದ್ದ್ರೀ? ಎರಡು ಬೀಯರ್ ಗೇ  ಔಟ್ ಆಗಿ ಬಿಟ್ಟಿರಿ ಕ್ಯಾ? ಹಾಂ? ಹಾಂ? - ಅಂತ ಸಿಕ್ಕಾಪಟ್ಟೆ ಎಕ್ಸೈಟ್ ಆಗಿ ಹೇಳಿದ ಕರೀಂ.

ಏನು ಫ್ರಿಜ್? ಏನು ನೀ ನಿಮ್ಮನಿ ಬಾತರೂಂ ಫ್ರಿಜ್ಜಿನ ಗತೆ ತಣ್ಣಗ ಮಾಡಿಯಾ? ಯಾಕಾ? - ಅಂತ ಕೇಳಿದೆ.

ಬಾತರೂಂ ಫ್ರಿಜ್ ಗತೆ ತಣ್ಣಗೆ ಮಾಡಿಲ್ಲ ಸಾಬ್. ನೀವು ನಮ್ಮ ದೊಡ್ಡ ಸೈಜಿನ ಫ್ರಿಜ್ ಒಳಗೆ ಹೊಕ್ಕಿ ಹೊರಗೆ ಬಂದೀರಿ. ಅಷ್ಟೇ. ಅದಕ್ಕೇ ನಿಮಗೆ ಸಿಕ್ಕಾಪಟ್ಟೆ ಥಂಡಿ ಆಗಿದೆ. ಬಾಗಿಲಾ ಹಾಕಿದ ಕೂಡಲೇ ಲೈಟ್ ಆನ್ ಆಫ್ ಆಗೋದು ಎಲ್ಲ ಕಂಡಿದೆ. ನಮ್ಮ ಪುಣ್ಯಾ ಅದರಲ್ಲೇ ಮಾಡಿ ಬಂದಿಲ್ಲ. ಅಥವಾ ಮಾಡಿ ಬಂದಿರೋ?.....ಅಂತ ಕರೀಂ ಮತ್ತ ಸಿಕ್ಕಾಪಟ್ಟೆ ನಕ್ಕ.

ಅದೆಂತಾ ದೊಡ್ಡ ಸೈಜಿನ ಫ್ರಿಜ್ ಇಟ್ಟಿಯೋ ಮಾರಾಯಾ. ಒಳ್ಳೆ ರೂಂ ಇದ್ದಂಗ ಅದ. ಅದಕ್ಕೇ ಬಾತರೂಂ ಅಂತ ಒಳಗ ಹೊಕ್ಕಿ ಬಿಟ್ಟಿದ್ದೆ ಅಂತ ಕಾಣಸ್ತದ. ಆ ಫ್ರಿಜ್ ಮ್ಯಾಲೆ 'Not Bathroom' ಅಂತ ಒಂದು ಬೋರ್ಡ್ ಬರೆಸಿ ಹಾಕಿಸು. ಹಾಂಗೇ ಬಾತರೂಂ ಮ್ಯಾಲೆ 'Not Fridge' ಅಂತ ಬರೆಸಿ ಹಾಕಿಸು. ಎಷ್ಟು confuse ಆಗ್ತದ ಗೊತ್ತೇನು? ಮಂಗ್ಯಾನ್ ಕೆ, ಅಂತ ಅವಂಗೇ ಬೈದು ಬಿಟ್ಟೆ. ಉಲ್ಟಾ ಚೋರ್ ಕೊತ್ವಾಲ್ ಕೊ ದಾಂಟೆ.

'ಬಾತರೂಂ', 'ಫ್ರಿಜ್' ಅಂತ ಬೋರ್ಡ್ ಹಾಕಿಸಿದ್ದನ್ನ ನೋಡಿದ್ದೇ ಬಿಡಿ. ಆದ್ರೆ 'Not Bathroom' 'Not Fridge' ಅಂತ ಬೋರ್ಡ್ ಬರೆಸಿ ಹಾಕು ಅಂತ ಯಾರೂ ಹೇಳಿಲ್ಲ. ಈ ಪರಿ ಸಲಹೆ ಕೋಡುದು ಏನು?  ಒಳಗೆ ಹೋದ ಕಿಂಗ್ ಫಿಷರ್ ಪರಮಾತ್ಮನ ಮಹಿಮೆ ಏನು? ಒಳಗೋದ ಪರಮಾತ್ಮ ಏನೇನೋ ಆಡಿಸಿ ಬಿಡ್ತಾನೆ ಬಿಡಿ, ಅಂದ ಕರೀಂ.

ಏ ಮೆಹಮೂದ್.....ಸಾಬ್ ಕೊ ಬಾತರೂಂ ದಿಖಾರೆ. ಮತ್ತೆ ಫ್ರಿಜ್ ಒಳಗೆ ಹೋದಾರು. ನಜರ್ ರಖ್ ಬಾ. ಸಮಜಾ ಕ್ಯಾ? - ಅಂತ ಕರೀಂ ತನ್ನ ಅಣ್ಣನ ಮಗ ಕಂ ಅವನ ಅಸಿಸ್ಟೆಂಟ್ ಗೆ ಹೇಳಿದ.

ಈ ಸಾರೆ ಮೆಹಮೂದ್ ನಮಗೆ 'ಹಮ್ ಜೋಲಿ' ಆಗಿ ಸಹಾರಾ ಕೊಟ್ಟ. ಕೆಲಸಾ ಮುಗಿಸಿಕೊಂಡು ಹಲ್ಕಾ ಆಗಿ ಬಂದು ಕೂತ್ವಿ.

ಟೇಬಲ್ ಮ್ಯಾಲೆ ಪ್ಲೇಟ್ ತುಂಬ ಊಟ ರೆಡಿ ಇತ್ತು. ಮಸ್ತ ಬಿಸಿ ಬಿಸಿ. ಬಿಸಿ ಮಾಡಿದ್ರು. ಮಧ್ಯಾನ್ಹದ್ದ ಅಡಿಗಿ. ಬಿಸಿ ಮಾಡಿದ್ದಕ್ಕ ಬಿಸಿ ಆಗಿ ಬಿಟ್ಟಿತ್ತು.

ನೋಡಿ ಸಾಬ್!!!!ಬಿಸ್ಮಿಲ್ಲಾ ಭಾತ್, ಮಧುರ್ ಬಡಾ, ರುಮಾಲಿ ರೋಟಿ, ಗೋಬಿ ಸಬ್ಜೀ ಎಲ್ಲಾ ಅದೆ. ಮಸ್ತಾಗಿ ಹೊಡೀರಿ. ಭಿಡೆ ಗಿಡೆ ಮಾಡ್ಕೋಬೇಡಿ, ಅಂತ ಕರೀಂ ಆಗ್ರಹ ಮಾಡಿದ.

ಅವನೌನ್! ಇದೆಂತಾ ಬಿಸ್ಮಿಲ್ಲಾ ಭಾತ್ ಪಾ? ಇದೆಂತಾ ಮಧುರ್ ಬಡಾಪಾ? ಇದೆಂತಾ ರುಮಾಲಿ ರೊಟ್ಟಿಪಾ? ಸಬ್ಜೀ ಒಂದು ತಿಳೀತು. ನೌನ್!!! ಪಲ್ಯಾ ಹಸಿ ಇದ್ದಾಗೂ ಪಲ್ಯಾ, ಬೇಯಿಸಿ ಮಸಾಲಿ ಹಾಕಿದ ಮ್ಯಾಲೂ ಪಲ್ಯಾನೇ. ಹಿಂದಿ ಒಳಗೂ ಹಾಂಗೇ. ಪೆಹೇಲೆ ಭೀ ಸಬ್ಜೀ, ಪಕಾನೆ ಕೆ ಬಾದ್ ಭೀ ಸಬ್ಜೀ, ಅಂತ ಅಂದುಕೋತ್ತ ಊಟ ಶುರು ಮಾಡಿದೆ.

ಒಂದು ತುತ್ತು ತಿಂದೆ. ಗೊತ್ತಾತು ಬಿಸ್ಮಿಲ್ಲಾ ಭಾತ್ ಅಂದ್ರ ಏನು ಅಂತ. ಹೋಗ್ಗೋ!!!! ಇದು ಬಿಸಿಬೇಳೆ ಭಾತ್!!! ಇದಕ್ಕ ಕನ್ನಡ ಸರಿ ಗೊತ್ತಿಲ್ಲದವರು ಬಿಸಿಬೆಲ್ಲಾ ಭಾತ್, ಬಿಸಿಬಿಲಾ ಭಾತ್ ಅದು ಇದು ಏನೇನೋ ಅಂತಾರ. ಇವಾ ಅದೆಲ್ಲೋ ಕೇಳಿಕೊಂಡು ಬಿಸಿಬೇಳೆ ಭಾತ್ ಎಂಬ ಅಚ್ಚ ಕನ್ನಡದ ಅಡಿಗಿಗೆ ಬಿಸ್ಮಿಲ್ಲಾ ಭಾತ್ ಅಂದು ಬಿಟ್ಟಿದ್ದ. ಹಾಕ್ಕ್ ಅವನೌನ್!

ಸಾಬ್ರಾ!!! ಇದು ನಮ್ಮ ಕನ್ನಡಿಗರ ಫೇವರಿಟ್ ಡಿಶ್ ಬಿಸಿಬೇಳೆ ಭಾತ್ ರೀ!!!!!!.......ಯಾರು ಹೇಳಿದ್ರು ಇದ್ದಕ್ಕ ಬಿಸ್ಮಿಲ್ಲಾ ಭಾತ್ ಅಂತಾರ ಅಂತ? ಹಾಂ?ಹಾಂ? - ಅಂತ ಹೇಳಿದೆ

ಬಿಸಿಬೇಳೆ ಭಾತ್ ಉರ್ಫ್ ಬಿಸ್ಮಿಲ್ಲಾ ಭಾತ್

ನಮ್ಮ ಹಾಪ್ ಬೇಗಂ!!!- ಅಂತ ಮುಗುಮ್ಮಾಗಿ ಹೇಳಿ ಕರೀಂ ಊಟ ಮುಂದುವರಿಸಿದ. ಕಚಪಚಾ ಅಂತ ತಂದೂರಿ ಕೋಳಿ ಕಾಲು ಕಚ್ಚಿದ. ಸತ್ತು ಹೋಗಿ, ತಂದೂರ ಒಳಗ ಸುಟ್ಟುಕೊಂಡು, ಪ್ಲೇಟ್ ಮ್ಯಾಲೆ ಬಂದು ಕೂತಿದ್ದ ಕೋಳಿ ಕರೀಂ ಕಚ್ಚಿದ ರಭಸಕ್ಕ ಕ್ಕೊ....ಕ್ಕೊ.. ಕ್ಕೊ ಅಂತ  ಕೂಗಿಕೋತ್ತ ಹಾರಿ ಹೋಗಲಿಲ್ಲ. ಅವನ ಹೊಟ್ಟಿಯೊಳಗ ಹೋತು. ಅದೂ ಸೈಲೆಂಟ್ ಆಗಿ.

ಮಧುರ್ ಬಡಾ ಅಂದ್ರ ಏನು ಅಂತ ನೋಡೋಣ ಅಂತ ಒಂದು ಚೂರು ತಿಂದು ನೋಡಿದೆ. ರುಚಿ ನೋಡಿದ ಕೂಡಲೇ ತಿಳೀತು. ಇದು ನಮ್ಮ ಅಪ್ಪಟ ಕನ್ನಡಿಗ ಡಿಶ್ 'ಮದ್ದೂರು ವಡೆ' ಅಂತ. ಈ ಟಿವಿ ಮ್ಯಾಲೆ ಬರೋ ಕುಕಿಂಗ್ ಶೋ ಮಂದಿಗೆ ಹಿಂದ ಗೊತ್ತಿರೋದಿಲ್ಲ ಮುಂದ ಗೊತ್ತಿರೋದಿಲ್ಲ. ಮಧುರ್ ಬಡಾ ಅಂತ ಹೇಳಿರಬೇಕು. ಮಸ್ತ ನಾರ್ತ್ ಇಂಡಿಯನ್ ಫೀಲ್ ಕೊಡ್ತದ ನೋಡ್ರೀ. ಮಧುರ್ ಬಡಾ ಅಂತ ಮಧುರ್ ಬಡಾ!!!! ಅಂದವರಿಗೆ ಹಿಡದು ಹಿಡದು ಒದಿ ಬೇಕು!!! ಮಧುರವಾಗಿಯೇ ಒದಿಬೇಕು!!

ಸಾಬ್ರಾ!!! ಇದು ಮದ್ದೂರ್ ವಡಿ ರೀ!!!! ಇದಕ್ಕ ಮಧುರ್ ಬಡಾ ಅಂತ ಗಲತ್ ಹೆಸರು ಯಾರು ಕೊಟ್ಟರು? ಹಾಂ?ಹಾಂ? - ಅಂತ ಕೇಳಿದೆ.

ಮದ್ದೂರ ವಡೆ ಉರ್ಫ್ ಮಧುರ್ ಬಡಾ
ನಮ್ಮ ಬೇಗಂ!!!! - ಅಂತ ಮುಗುಮ್ಮಾಗಿ ಹೇಳಿ ಕರೀಂ ಒಂದು ದೊಡ್ಡ ಸೈಜಿನ  ಚಿಕನ್ - 65 ಸರ್ವಿಂಗ್ ಪ್ಲೇಟಿಗೆ ಹಾಕ್ಕೊಂಡ ಕರೀಂ, ನಾಮ್ ಮೇ ರಖಾ ಕ್ಯಾ ಹೈ, ಚಿಕನ್ ಸಿರ್ಫ್ ಚಿಕನ್ ಹೈ ಅನ್ನೋ ಹಾಂಗ ತನ್ನ ಕೋಳಿಗಳಿಗೆ ಮುಕ್ತಿ ಕೊಡುವ ಕಾಯಕ ಮುದುವರಿಸಿದ.

ಬಿಸಿಬೇಳೆ ಭಾತ್ ಗೆ ಬಿಸ್ಮಿಲ್ಲಾ ಭಾತ್, ಮದ್ದೂರ ವಡೆಗೆ ಮಧುರ್ ಬಡಾ, ಮೊಸರನ್ನಕ್ಕ ಯೋಗರ್ಟ್ ರೈಸ್, ಚಿತ್ರಾನ್ನಕ್ಕ ಕಲರ್ಡ್ ರೈಸ್, ಒಗ್ಗರಿಣಿ ಅನ್ನಕ್ಕ 'ಫ್ರೈಡ್ ರೈಸ್ ಪಿಲಾಫ್' ಮತ್ತು ಮಗದೊಂದು ಅಂತ ಫ್ಯಾಷನ್ ಹೆಸರು ಕೊಡವರಿಗೆ ಏನೂ ಕಮ್ಮಿ ಇಲ್ಲ. ಎಲ್ಲಾ ರಾಡಿ ಮಾಡಿ ನಮ್ಮ ಕನ್ನಡದ ಅಡಿಗಿ ಎಲ್ಲಾ ನಾರ್ತ್ ಇಂಡಿಯನ್, ಬೆಂಗಾಲಿ, ಗುಜರಾತಿ, ಪಂಜಾಬಿ ಡಿಶ್ ಅಂತ ತೋರಿಸಿಬಿಡ್ತಾರ. ಸುಡುಗಾಡ ಮಂದಿ.

ಬಿಸ್ಮಿಲ್ಲಾ ಭಾತ್, ಮಧುರ್ ಬಡಾ ಊಟ ಮುಗಿಸಿ ಬಂದೆ. ಬರೋವಾಗ ಯಾರೂ ಹಮ್ ಜೋಲಿ ಬೇಕಾಗಲಿಲ್ಲ. ಜೋಲಿ ಹೊಡಿಲಿಲ್ಲ. ಬಂದು ಮನಿ ಮುಟ್ಟಿ ಶೇಷಶಯನ ವಿಷ್ಣುವಿನ ಪೊಸಿಶನ್ ಒಳಗ ಮಲಕೊಂಡು ಬಿಟ್ಟೆ.

ಕನಸಿನ್ಯಾಗ ಪೋರ್ಚುಗೀಸ್ ಟೀಚರ್ ಜೊತಿ ಮೋಸಂಬಿ ಜ್ಯೂಸು ಮಾಡಿದ್ದೇ ಮಾಡಿದ್ದು. ಪೋರ್ಚುಗೀಸ್ ಟೀಚರ್ ಭಾರಿ ಖಡಕ್ಕ. ಸರೀತ್ನಾಗಿ ಅವರ ಪದ್ಧತಿ ಪ್ರಕಾರ ಮೋಸಂಬಿ ಜ್ಯೂಸ್ ಮಾಡಿಲ್ಲ ಅಂದ್ರ ಸ್ಟುಪಿಡ್ ಸ್ಟುಪಿಡ್ ಅಂತ ಬೈತಾರ. ಮಸ್ತ ಬೈದರು. ನಾಳೆ ಮೋಸಂಬಿ ತಂದು ಜ್ಯೂಸಿಂಗ್ ಪ್ರಾಕ್ಟೀಸ್ ಮಾಡಬೇಕು. ಅದನ್ನ ಕರೀಮಗೂ ಕಲಿಸಿ ಕೊಡಬೇಕು.

** 'ಬಿಸ್ಮಿಲ್ಲಾ ಭಾತ್' ಅಂತ ಯಾರೋ ತೆಲುಗರು ಮಾತಾಡುತ್ತಾ ಹೋಗುತ್ತಿದ್ದರು ಅಂತ ಯಾರೋ ಒಬ್ಬರು ಎಲ್ಲೋ ಇಂಟರ್ನೆಟ್ ಮ್ಯಾಲೆ ಜೋಕ್ ಮಾಡಿದ್ದರು. 'ಮಧುರ್ ಬಡಾ' ಅಂತ ಯಾವದೋ ಇಂಗ್ಲಿಷ್ ಕುಕಿಂಗ್ ಶೋ ನಲ್ಲಿ ಬಂದಿತ್ತು ಅಂತ ಇನ್ನೊಬ್ಬರು ಅಲ್ಲೇ ಹೇಳಿದ್ದರು.

** ಬಾತರೂಂ ಫ್ರಿಜ್ ಜೋಕ್ ಮಾಡಿದವರು ಮಿಮಿಕ್ರಿ ದಯಾನಂದ ಅಂತ ನೆನಪು. ಅವರಿಗೆ ಒಂದು ಸಲಾಂ!

2 comments:

Anonymous said...

Lol Mahesh!
ನಮ್ಮ ಕೋರ್ಟ್ ಕ್ಯಾಂಟೀನ್ನ್ಯಾಗ ಒಬ್ಬಾಂವ ಮಾಣಿ ಬಡಬಡಾ ಅಂತ "ಆ ರೈಸ್ ಭಾತ್, ಈ ರೈಸ್ ಭಾತ್,......" ಗೋಳ ಮೆನು ಒದರೋಮುಂದ ಒಂದು ಹೊಸಾ ನಮೂನಿ ಲಿಸ್ಟ್ ಆಗಿತ್ತು..... "ಫಿಗರ್ ರೈಸ್"!!!!!!"ಏನೋ ತಮ್ಮಾ ಹಿಂಗಂದ್ರ???!!" ನನ್ನ ಫ್ರೆಂಡ್ ಕೇಳೇ ಬಿಟ್ಟಾ, "ಹೆಣ್ಮಕ್ಕಳು, ಅದೂ ವಕೀಲ್ತ್ಯಾರು ಇರೋ ಮುಂದ ನೋಡಿ ಮಾತಾಡ್ಪಾ.... " ಅಂತ ಎಚ್ಚರಿಕಿ ಸೈತ ಕೊಟ್ಟಾ. ಅದಕ್ಕ ಮಾಣಿ ತನ್ನ ಬಾಯಾಗಿನ ಮೂರೂವರಿ ವಜ್ರಗಳ ತದ್ರೂಪಿ (!) ಬಾಚಿ ದಂತ ಪ್ರದರ್ಶನ ಮಾಡಿಕೊತ್ತ "ಸರ್ರಾ, ಬಿದ್ರ್ಯಲ್ಲಾ ನೀವೂ? ನಾಏನು ಅಂಥಾದು ಹೇಳಿದ್ನಿರಿ? ಚಿತ್ತ್ರಾನ್ನಕ್ಕ ಇಂಗ್ಲಿಷಿನ್ಯಾಗ ಫಿಗರ್ ರೈಸ್ ಅಂದೆ, ಅಷ್ಟ!" ಅಂದ.  :D

Mahesh Hegade said...

ROTFL...Thank you!!! too good!!!!