Sunday, August 25, 2013

ಕತ್ತಲಿ.....ನಾ ಎಲ್ಲೆ ಒತ್ತಲಿ?

ಕಂಪ್ಯೂಟರ್ ಮುಂದೆ ಕಿಡಿಗೇಡಿಗಳು...ಅದೂ ಕತ್ತಲ್ಯಾಗ
ನಿನ್ನೆ ಇಲ್ಲೆ ಕರೆಂಟ್ ಹೋಗಿ ಬಿಟ್ಟಿತ್ತು. ಫುಲ್ ಕತ್ತಲಿ. ಸ್ವಲ್ಪೇ ಹೊತ್ತು ಹೋಗಿತ್ತು. ಆದರೂ ಕತ್ತಲಿ. ಹೀಂಗ ಅಚಾನಕ್ ಆಗಿ ಕತ್ತಲಿ ಆದಾಗಲೇ ಯಾರೋ ಒಬ್ಬವ ಮಂಗ್ಯಾನಿಕೆ ದೋಸ್ತ್ ಫೇಸ್ಬುಕ್ ಮೆಸೇಜ್ ಮಾಡಿ ಹರಟಿ ಶುರು ಮಾಡಿದ. ನಾವೂ ಫುಲ್ ರೆಡಿ ಅಂತಹ ಹರಟಿ ಹೊಡಿಲಿಕ್ಕೆ. ಆವಾ ಹಾಪನ ಜೋಡಿ ಮಾತಾಡೋವಾಗ 1986 ಒಳಗ ಕತ್ತಲಲ್ಲಿ ಆದ(?) ಒಂದು ಘಟನೆ ನೆನಪು ಆಗಿ ಬಿಡ್ತು.

1986 ....ನಾವು ಆವಾಗ 9th ಸ್ಟ್ಯಾಂಡರ್ಡ್ ಅಂದ್ರ ಒಂಬತ್ತನೆತ್ತಾ. ಯಾರೋ ಇಬ್ಬರು ಕಂಪ್ಯೂಟರ್ ತೊಗೊಂಡು ಸಾಲಿಗೆ ಬಂದು ಬಿಟ್ಟಿದ್ದರು. ಅವನೌನ್! ದೊಂಬರಾಟದವರು, ಜಾದೂ ಮಾಡವರು, ದಾಸರ ನಾಮದ ಪುಸ್ತಕಾ ಮಾರವರು, ಜಪಾನೀ ಪದ್ಧತಿ ಒಳಗ ಕಾಗದದ ಹೂವು ಮಾಡವರು, ಕಸೂತಿ ಹಾಕಿ ತೋರಿಸಿ ಕಸೂತಿ ಕಡ್ಡಿ ಮಾರವರು, ಅವರು ಇವರು ಅಂತ ಮಂದಿ ಸಾಲಿಗೆ ಬಂದಕೋತ್ತನ ಇರ್ತಿದ್ದರು. ಹಾಂಗs ಈ ಕಂಪ್ಯೂಟರ್ ಮಂದಿ ಸಹಾ. ಏನೋ ಒಂದಿಷ್ಟು ಕಂಪ್ಯೂಟರ್ ಅದು ಇದು ಅಂತ ಹೇಳಿ, ಒಂದಿಷ್ಟು demonstration ತೋರಿಸಿ, ಕ್ಲಾಸ್ ಇಡ್ತೇವಿ, ಜಾಯಿನ್ ಆಗಿ ಕಂಪ್ಯೂಟರ್ ಕಲೀರಿ ಅಂತ ಅವರ sales pitch. ಉದರ ನಿಮಿತ್ತಂ ಬಹುಕೃತ ವೇಷಂ!! ಎಲ್ಲರಿಗೂ ಪಾಪಿ ಪೇಟ್ ಕಾ ಸವಾಲ್!!

ಅವನೌನ್! ಸಣ್ಣ ಬ್ಲಾಕ್ ಅಂಡ್ ವೈಟ್ ಟೀವಿ ಎರಡು ಇಟ್ಟು ಅದಕ್ಕ ಒಂದೆರಡು ತಗಡಿನ ಡಬ್ಬಿ ಹಚ್ಚಿ ಏನೋ ಒಂದಿಷ್ಟು ಹಾವು ಏಣಿ ಆಟ, ಪಾಂ ಪಾಂ ಅಂತ ಆಟೋ ರಿಕ್ಷಾ ಹಾರ್ನ್ ಒತ್ತಿದರ ಆಗೋ ಸೌಂಡ್, ಅದು ಇದು ಅಂತ ಏನೇನೋ ತೋರಿಸಿದರು. ಎರಡು ತಾಸು ಫುಲ್ ಮಜಾ. ರೇವಣಕರ ಉರ್ಫ್ TT ಸರ್ ಅದನ್ನ sponsor ಮಾಡಿದ್ದರು. ನಮಗ ಮಧ್ಯಾನ ಸೂಟಿ ಆದ ಮ್ಯಾಲೆ ನಿದ್ದಿ ಬದಲು ಏನೋ ಒಂದು diversion ಅಷ್ಟ.

ದಿವಂಗತ ರೇವಣಕರ್ ಸರ್

ಹೀಂಗ ಕಂಪ್ಯೂಟರ್ demonstration ನೆಡದಾಗೇ ಒಂದು ಚಿಕ್ಕ ಅನಾಹುತ. ಅದು ಏನು ಕರೆಂಟ್ ವೋಲ್ಟೇಜ್ ಪ್ರಾಬ್ಲೆಮ್ಮೋ ಗೊತ್ತಿಲ್ಲ. ಒಂದು ಸಣ್ಣ ಟೀವಿ ಹಿಂದಿಂದ ಬುಸ್ಸ್ ಅಂತಿ ಹೊಗಿ ಅಂದ್ರ ಸ್ಮೋಕ್ ಬಂದು ಬಿಡ್ತು. ಆ ಟೀವಿ ಖಾತ್ರಿ ಅಂದ್ರೂ ಮಟಾಶ್ ಆಗಿ ಖರಾಬ್ ಆಗಿರ್ತದ. TT ಮಾಸ್ತರ್ ಮಾತ್ರ ಅದೂ ಸಹ ಕಂಪ್ಯೂಟರ್ ಸ್ಪೆಷಲ್ ಎಫೆಕ್ಟ್ ಅನ್ನೋ ಲುಕ್ ಕೊಟ್ಟರು. ನಾವೆಲ್ಲಾ ಹಾಪ್ ಕೆ ಬೋರ್ಡ್ ಮಂಗ್ಯಾನಿಕೆಗಳು, ನೆಲದ ಮ್ಯಾಲೆ ಅಂಡು ಊರಿ ಕೂತಿದ್ದರೂ, ಅಂಡು ಎತ್ತಿ, ತಟ್ಟಿ ಸಿಕ್ಕಾಪಟ್ಟೆ ನಕ್ಕರೆ TT ಸರ್ ಮತ್ತ ಕಂಪ್ಯೂಟರ್ ತಂದಿದ್ದ ಹಾಪರು ಕರ್ಚೀಪ್ ತೊಗೊಂಡು ಗಾಳಿ ಹಾಕಿ ಹಾಕಿ ಹೊಗಿ ದೂರ ಮಾಡ್ಲಿಕತ್ತಿದ್ದರು. ಏನು ಹೇಳಲಿ ನಿಮಗ ಆ ಹೊಗಿ ಸೀನ್!! ಕಂಪ್ಯೂಟರ್ ತಂದ ಮಂದಿ, ರೇವಣಕರ್ ಸರ್ ಎಲ್ಲಾ ಫುಲ್ ಅಗ್ನಿಶಾಮಕ ದಳದವರಾಗಿ ಪರಿವರ್ತನೆಯಾಗಿಬಿಟ್ಟಿದ್ದರು. ಫೈರ್ ಇಂಜಿನ್ ಒಂದು ಬಂದಿರಲಿಲ್ಲ ನೋಡ್ರೀ! ಕರ್ಚೀಪಿನಿಂದ ಬೆಂಕಿ, ಹೋಗಿ ಆರಿರಲಿಲ್ಲ ಅಂದ್ರ ನೆಕ್ಸ್ಟ್ ನಮ್ಮ ಭಟ್ಟರ ಸಾಲಿ ಹಾವು, ಕಪ್ಪಿ ಬಿದ್ದ ನೀರಿನ ಟಂಕಿಯಿಂದ ನೀರು ತರಿಸಬೇಕಾಗ್ತಿತ್ತು. ಅಷ್ಟರಾಗ ರೇವಣಕರ್ ಸರ್ ಮತ್ತಿತ್ತರ ಶ್ರಮದಿಂದ ಬೆಂಕಿ ಆರಿತು. ಬಚಾವ್!

ನಂತರ ಪ್ರಕಟಣೆ ಆತು. ಕಂಪ್ಯೂಟರ್ ಕ್ಲಾಸ್. ಒಂದು ತಿಂಗಳ. ವಾರಕ್ಕ ಎರಡೋ ಮೂರೋ ದಿವಸ. ಮುಂಜಾನೆ ಹತ್ತರಿಂದ ಹನ್ನೊಂದು ಘಂಟೆಯವರೆಗೆ. ಅಂದ್ರ ರೆಗ್ಯುಲರ್ ಸಾಲಿ ಸುರು ಆಗೋಕಿಂತ ಮೊದಲು. ನೂರೋ ಇನ್ನೂರೋ ಮುನ್ನೂರೋ ರುಪಾಯಿ ಫೀಸ್. ಎಷ್ಟು ಅಂತ ಸರಿ ನೆನಪ ಇಲ್ಲ. ಆದ್ರ ಆ ಕಾಲದಾಗ ದೊಡ್ಡ ಅಮೌಂಟ್ ಬಿಡ್ರೀ. ನಾವೆಲ್ಲಾ ಮಿಡ್ಲ್ ಕ್ಲಾಸ್ ಮಂದಿ.

ಫೀಸ್ ಕೇಳೇ ಭಾಳ ಮಂದಿ, ಏ! ಬ್ಯಾಡ ಬಿಡಲೇ, ಅಂತ ಅಂದು ಬಿಟ್ಟರು.

ರೆಗ್ಯುಲರ್ ಸಾಲಿ ಸುರು ಆಗೋಕಿಂತ ಮೊದಲು ಅಂತ ಹೇಳಿ ನಮ್ಮಂತ ಸಾಲಿಗೆ ಬರಲಿಕ್ಕೆ ಮನಸೇ ಇಲ್ಲದವರು ಬ್ಯಾಡ ಅಂತ ಬಿಟ್ಟಿವಿ. ನಮಗ ಹನ್ನೊಂದರ ಸಾಲಿಗೆ ಆರಾಮ ಹನ್ನೊಂದುವರೀ ಮ್ಯಾಲೆ ಬಂದು, ಲೇಟ್ ಲತೀಫ್ ಆಗಿ ಎಂಟ್ರಿ ಕೊಟ್ಟು, ಫಸ್ಟ್ ಪೀರಿಯಡ್ ಜಮಖಂಡಿ ಸರ್ ಜಾಗ್ರಫೀ ಕ್ಲಾಸ್ ಅರ್ಧಾ ಮುಗದ ಮ್ಯಾಲೆ ಎಂಟ್ರಿ ಹೊಡಿಲಿಕ್ಕೆ ನೋಡಿ, ಅವರು, ನೀ ಮೊದಲು ಹೆಡ್ ಮಾಸ್ಟರ್ ಕಡೆ ಹೋಗಿ ಪರ್ಮಿಷನ್ ತೊಗೊಂಡು ಬಾ ಅಂದು, ನಾವು ಓಕೆ ಅಂತ ಚಾಲೆಂಜ್ ಸ್ವೀಕಾರ ಮಾಡಿ, ಹೆಡ್ ಮಾಸ್ಟರ್ ರೂಮಿಗೆ ಹೋಗಿ, ನಮ್ಮ ಅಪ್ಪಾ ಅಮ್ಮಾ ಅಣ್ಣನ ಮಾರಿ ನೆನಪ ಮಾಡಿಕೊಂಡು RT ಸರ್ ನಮಗ -admit him - ಅಂತ ಒಂದು ಚೀಟಿ ಕೊಟ್ಟು, ಅದನ್ನ ಜಮಖಂಡಿ ಮಾಸ್ತರ್ ಟೇಬಲ್ ಮ್ಯಾಲೆ ಒಗದು, ಕಿಸಿ ಕಿಸಿ ನಕ್ಕೋತ್ತ ಲಾಸ್ಟ್ ಬೆಂಚ್ ಮ್ಯಾಲೆ ಹೋಗಿ ಕೂಡೋದು ನಮ್ಮ ಪದ್ಧತಿ. ಹೀಂಗ ಇದ್ದಾಗ ಒಂದು ದೀಡ ತಾಸು ಮೊದಲೇ ಬಂದು ಕಂಪ್ಯೂಟರ್ ಅದು ಇದು ಕಲಿ ಅಂದ್ರ ಹ್ಯಾಂಗ್ರೀ? ಬ್ಯಾಡ ಅಂತ ಬಿಟ್ಟೇ ಬಿಟ್ಟಿವಿ.

ಎಲ್ಲಾ ನಾಕೂ ಡಿವಿಷನ್ ಹಿಡದು, ಮತ್ತ ಎಲ್ಲಾ ಹತ್ತನೆತ್ತಾ ಮಂದಿ ಎಲ್ಲ ಹಿಡದು ಒಂದು ಇಪ್ಪತ್ತು ಮೂವತ್ತು ಮಂದಿ ತಯಾರು ಆದರು ನೋಡ್ರೀ. ನಮ್ಮ ಕ್ಲಾಸಿಂದ ಹೋದವರಲ್ಲಿ ನನ್ನ ಕ್ಲೋಸ್ ಫ್ರೆಂಡ್ ಒಬ್ಬವಂದೇ ನನಗ ನೆನಪು. ಅವನಿಂದ ಇನ್ನೊಬ್ಬಾಕಿ ಹುಡುಗಿ ನೆನಪು. ಬಾಕಿ ಯಾರ್ಯಾರ ಹೋಗಿದ್ದರು ಅಂತ ನೆನಪು ಇಲ್ಲ.

ಕಂಪ್ಯೂಟರ್ ಕ್ಲಾಸ್ ಶುರು ಆತು. ನಮ್ಮ ದೋಸ್ತ ದಿನಾ ನಡು ಊಟದ ಸೂಟಿ ಬಿಟ್ಟಾಗ ಏನಾತು ಅಂತ ಹೇಳವಾ. ನಾವು ಅವನ್ನ ಜೋಕ್ ಮಾಡಿ, ಮಂಗ್ಯಾನಿಕೆ! ಆಟೋ ರಿಕ್ಷಾ ಪೋ ಪೋ ಅಂತ ಸೌಂಡ್ ಮಾಡಲಿಕ್ಕೆ ಕಂಪ್ಯೂಟರ್ ಯಾಕಲೇ ಬೇಕು? ಒಂದು ಆಟೋ ಹಾರ್ನ್ ತಂದುಕೊಂಡು ಮನಸಾರೆ ಒತ್ತಿ ಎಂಜಾಯ್ ಮಾಡಲೇ. ಒಂದು ಹದಿನೈದು ಇಪ್ಪತ್ತು ರೂಪಾಯಿ ಒಳಗ ಸಿಗ್ತಾವ ಆಟೋ ಪೋ ಪೋ ಹಾರ್ನ್. ಅದನ್ನ ಬಿಟ್ಟು, ಸಾಲಿಗೆ ಲಗೂ ಬಂದು, ಆ ಕತ್ತಲಿ ಕ್ವಾಣಿ ಒಳಗ ಕೂತು, ಕಂಪ್ಯೂಟರ್ ಮ್ಯಾಲೆ ಏನೇನೋ ಕುಟ್ಟಿ, ಅವರ ಕಡೆ ಬೈಸಿಕೊಂಡು.......ಇದಕ್ಕೇ ಅಂತಾರ ನೋಡಲೇ..... ರೊಕ್ಕಾ ಕೊಟ್ಟು ಏನೋ ಕೊಯ್ಸಿಕೊಳ್ಳೋದು ಅಂತ.....ಅಂತ ಕಾಡಸ್ತಿದ್ದಿವಿ.

ಪೋ ಪೋ ಹಾರ್ನ್! :)

ಒಂದು ದಿವಸ ನಮ್ಮ ದೋಸ್ತ ಒಂದು ಅದ್ಭುತ ಕಹಾನಿ ಹೇಳಿಬಿಟ್ಟ.

ಮಹೇಶ!! ಇವತ್ತು ಕಂಪ್ಯೂಟರ್ ಕ್ಲಾಸ್ ಒಳಗ ಏನಾತು ಗೊತ್ತದ ಏನು?!

ಏನಾತಲೇ? ಹೇಳೋ ಮಾರಾಯಾ. ಮತ್ತ ಎಲ್ಲರೆ ಕರೆಂಟ್, ವೋಲ್ಟೇಜ್ ಹೆಚ್ಚು ಕಮ್ಮಿ ಆಗಿ ಕಂಪ್ಯೂಟರ್ ಢಂ ಅನ್ನಿಸಿಬಿಟ್ಟಿರಿ ಏನು? ಹಾಂ? ಹಾಂ? - ಅಂತ ಕೇಳಿದೆ.

ಇಲ್ಲೋ ಮಾರಾಯಾ....ಒಂದು ದೊಡ್ಡ misunderstanding ಆಗಿ ಬಿಟ್ಟಿತ್ತು, ಅಂತ ಹೇಳಿದ ನಮ್ಮ ದೋಸ್ತ.

ಏನಲೇ?  ಮೀಸಿ understanding ಆತ? ನಿನಗ ಒಬ್ಬವಂಗೇ ನಮ್ಮ ಕ್ಲಾಸ್ ಒಳಗ 9th ಒಳಗೇ ಮೀಸಿ ಗಡ್ಡ ಬಂದಿದ್ದು. ಅದನ್ನ ನೋಡಿಯೇ ಭಾಳ ಮಂದಿ miss ಗಳು ನಿನ್ನ ಜೋಡಿ ಏನೇನೋ understanding ಮಾಡ್ಕೊಬೇಕು ಅಂತ ಸ್ಕೀಮ್ ಹಾಕ್ಯಾರ. ಹಾಂಗೇನು ಕಥಿ? ಯಾವ ಸಿಗ್ನಲ್ ಸಿದ್ದಿ ಹೊಸಾ ಸಿಗ್ನಲ್ ಕೊಟ್ಟಳು? ಪುಣ್ಯಾ ಮಾಡಿ ಬಂದಿ ಬಿಡಪಾ. ಎಲ್ಲಾರು ನಿನಗೇ ಸಿಗ್ನಲ್ ಕೊಡ್ತಾರ. ಜಾತಿ, ಮತ ಎಲ್ಲಾ ಕಡೆಗಣಿಸಿ ನಿನಗೇ ಫುಲ್ ಸಿಗ್ನಲ್. ಸಿಗ್ನಲ್ ಸಿದ್ದಿಯರ ನಾಯಕ ನೀ, ಅಂತ ಮಸ್ತ ಪಂಪ್ ಹೊಡದ್ವೀ ನಾನು ಮತ್ತ ಇನ್ನೊಬ್ಬ ದೋಸ್ತ.

ಮಹೇಶ ಅದು ಏನು ಆತು ಅಂದ್ರ ಅಕಿ (ನಮ್ಮ ಕ್ಲಾಸಿನ ಒಬ್ಬಾಕಿ ಹುಡುಗಿ) ಕತ್ತಲ್ಯಾಗ ಒತ್ತು ಅಂದಳೋ ಮಾರಾಯಾ! - ಅಂತ ಹೇಳಿ ಕರ್ಚೀಪಿನಿಂದ ಬೆವರು ಒರೆಸಿಕೊಂಡ.

ಹಾಂ!!!!! ಹಾಂ!!!! - ನಾನು ಮತ್ತ ನನ್ನ ಇನ್ನೊಬ್ಬ ದೋಸ್ತ ಫುಲ್ ಫ್ಲಾಟ್. ಈ ಹುಚ್ಚ ಸೂಳೆಮಗಂಗ ಎಲ್ಲಾ ಗರ್ಲ್ಸ್ ಬರೆ ಸಿಗ್ನಲ್ ಸಿದ್ದಿಯರ ಹಾಂಗ ಪಿಕಿ ಪಿಕಿ ನೋಡ್ತಾರ ಅಂದ್ರ ಇಕಿ ಯಾರೋ ಒಬ್ಬಾಕಿ ಕತ್ತಲಿ ಒಳಗ ಒತ್ತಲಿ ಅಂತ ಸಹ ಹೇಳಿ ಬಿಟ್ಟಾಳ ಅಂತ ಹೊಟ್ಟಿ ಉರೀತು. ಈ ಮಾತು ನೆಡದಾಗ ನಾವು ಮೂವರು ಮಂದಿ ಭಟ್ಟನ ಅಂಗಡಿ ಮುಂದೆನೇ ಇದ್ದಿವಿ. ನಾನು ಮತ್ತ ನನ್ನ ಇನ್ನೊಬ್ಬ ದೋಸ್ತ ಎಕ್ಸಟ್ರಾ ಉಪ್ಪು ಹಾಕಿಸಿಕೊಂಡು ಸೋಡಾ ಕುಡಿದಿವಿ. ಹೊಟ್ಟಿ ಉರಿ ಕಮ್ಮಿ ಮಾಡಕೊಳ್ಳಲಿಕ್ಕೆ. ಕತ್ತಲಲ್ಲಿ ಒತ್ತಲಿಕ್ಕೆ ಆಹ್ವಾನ ಪಡಕೊಂಡಿದ್ದ ಈ ಚೆಲುವಾಂತ ಚನ್ನಿಗ ಚಂದ ಸೂಳೆಮಗ ಮಾತ್ರ ಚಿಂತಿ ಇಲ್ಲದೆ ಭಟ್ಟನ ಅಂಗಡಿ ಡಿಂಗ್ಡಾಂಗ (ding dong) ಅನ್ನೋ ಖಾದ್ಯ ತಿಂದ. ಈಗಾಗ್ಲೇ ಒತ್ತಲಿಕ್ಕೆ ಕರದು ಬಿಟ್ಟಾಳ ಮುಂದೆ ಸೀದಾ ಅಕಿ ಜೋಡಿ ಡಿಂಗ್ಡಾಂಗ, ಜಿಂಗಾ ಚಿಕಾ ಜಿಂಗಾ ಚಿಕಾ ಡಿಂಗ್ಡಾಂಗ, ಅಂತ ಹೇಳಿ ಆವಾ ಡಿಂಗ್ಡಾಂಗ ತೊಗೊಂಡು ತಿಂದಾ ಅಂತ ಅನ್ನಿಸ್ತದ.

ಮಹೇಶ!!! ಅದು ಏನು ಆತು ಅಂದ್ರ.....ಕಂಪ್ಯೂಟರ್ ರೂಂ ಏಕ್ದಂ ಕತ್ತಲಿ ಮಾರಾಯಾ..... ಅಂತಾದ್ರಾಗ ನಾನು ಮತ್ತ ಅಕಿ ಕೂಡಿ ಮಾಡಲಿಕತ್ತಿದ್ದ ಕಂಪ್ಯೂಟರ್ ಸಹಿತ ಏಕದಂ ಬಂದ್ ಆಗಿ ಬಿಡ್ತ ನೋಡಪಾ, ಅಂತ ಹೇಳಿ ಮತ್ತ ಡಿಂಗ್ಡಾಂಗ ತಿನ್ನೋದನ್ನ ಮುಂದುವರಿಸಿದ.

ಕಂಪ್ಯೂಟರ್ ಬಂದ ಆತು. ನಾ ಇನ್ನೂ ಬಂದ್ ಆಗಿಲ್ಲ. ಅದಕ್ಕೇ ಒತ್ತಿಬಿಡು ಅಂತ ಹೇಳಿದಳು ಏನು? - ಅಂತ ನಾವಿಬ್ಬರೂ ಒಂದೇ ಸಲ excitement ತಡಿಲಾಗದ ಕೇಳಿದಿವಿ.

ಅಕಿ ಹೇಳಿದಳು, ಒತ್ತರೀ, ಅಂತ. ನಾ ಫುಲ್ ಹೈರಾಣ ಮಾರಾಯಾ..... ಅಂತ ಹೇಳಿದ.

ಚೆಲುವಾಂತ ಚನ್ನಿಗನ ಡಿಂಗ್ಡಾಂಗ ತಿಂದು ಮುಗೀತು. ಈಗ ಭಟ್ಟನ ಗುಳಂಬ ಹಾಕಿದ ಬ್ರೆಡ್ ಜ್ಯಾಮ್ ತೊಗೊಂಡ. ಸಾವಕಾರ ಸೂಳೆಮಗ....!!! unlimited ಭಟ್ಟನ ಅಂಗಡಿ budget ಇವಂದು!!!

ಹ್ಞೂ.....ಮುಂದ? ಏನಾತು? - ಅಂತ ಕೇಳಿದೆ

ಅಕಿ ಕಡೆ ಏನು ಒತ್ತಬೇಕರಿ? ಅಂತ ಕೇಳಿದೆ - ಅಂದವನೇ ಭಟ್ಟಂಗ ಸ್ವಲ್ಪ ಗುಳಂಬ ಜಾಸ್ತಿ ಹಾಕಲಿಕ್ಕೆ ಹೇಳಿದ.

ಅಂಗಡಿ ಭಟ್ಟಾ ಇನ್ನೂ ಬೆರಕಿ. ಗುಳಂಬದ ಡಬ್ಬಿ ಒಳಗ ಚಮಚಾ ಸುಮ್ಮನೆ ಆಡಿಸಿದಾಂಗ ಮಾಡಿ, ಅದನ್ನೇ ಬ್ರೆಡ್ ಮ್ಯಾಲೆ ಹಚ್ಚಿದ. best optical illusion!!!

ಇವಾ ನಮ್ಮ ದೋಸ್ತ ಹುಚ್ಚ ಮಂಗ್ಯಾನಿಕೆ 9th ಸ್ಟ್ಯಾಂಡರ್ಡ್ ಒಳಗೇ ಇಷ್ಟು ಹೊನಗ್ಯಾ ಇದ್ದಾ ಅಂದ್ರ ನಾವೂ ಸಹಿತ ಅವಂಗ ಹೊಸದಾಗಿ ಸಾಲಿಗೆ ಬಂದಾಗ ರೀ ಹಚ್ಚಿ ಮಾತಾಡ್ತಿದ್ದಿವಿ. ಮ್ಯಾಲೆ ಗಡ್ಡ ಮೀಸಿ ಬ್ಯಾರೆ ಜೋರು. ಹಾಂಗಾಗಿ ನಮ್ಮ ಕ್ಲಾಸಿನ ಹುಡುಗಿ ಇವಂಗ ರೀ ಹಚ್ಚಿ ಒತ್ತರೀ ಅಂದಿದ್ದು ಏನೂ ಆಶ್ಚರ್ಯ ಇಲ್ಲ.

ಮಹೇಶ!!!! ನಾ ಫುಲ್ ಥಂಡಾ ಮಾರಾಯಾ!!! ನಾ ಏನೋ ಇಕಿ ಸಂಭಾಯಿತ ಅಂತ ತಿಳಕೊಂಡ್ರ ಸೀದಾ ಒತ್ತರಿ ಅನ್ನಲಿಕತ್ತಾಳ ಇಕಿ. ಹಾಂ? ಹಾಂ? - ಅಂತ ಬ್ರೆಡ್ ಜಾಮ್ ಕಚ್ಚಿದ.

ನಾವು ಮುಂದ ಏನು ಹೇಳ್ತಾನೋ, ಯಾವ ನೋಡದೇ ಇರುವ ಮಲಯಾಳೀ ಮೂವಿ ಸೀನ್ ಹೇಳ್ತಾನೋ, ಅಂತ ಕಾದು ಕೂತ್ವಿ.

ರೀ....ಎಡಗಡೆ ಇದ್ದಿದ್ದು ಒತ್ತರಿ.....ಅಂದಳೋ ಮಾರಾಯಾ ಅಕಿ...ಅಂತ ಹೇಳಿ ಬ್ರೇಕ್ ತೊಗೊಂಡ ನಮ್ಮ ದೋಸ್ತ.

ಎಡಗಡೆದೇ ಯಾಕ? ಇಲ್ಲೂ ಲೆಫ್ಟ್ ಹ್ಯಾಂಡ್ ಡ್ರೈವ್ ಏನಪಾ? ಹಾಂ?! - ಅಂತ ನಾನು ಮತ್ತ ನನ್ನಇನ್ನೊಬ್ಬ ದೋಸ್ತ ಕೇಳಿದಿವಿ.

ನಾನೂ ಹಾಂಗೆ ತಿಳಕೊಂಡೆ ಮಾರಾಯಾ. ಇಕಿ ಹೇಳಿ ಕೇಳಿ ನೋಡಲಿಕ್ಕೆ ಅಂತೂ ಸಿಕ್ಕಾಪಟ್ಟೆ ಸಂಭಾಯಿತ. ಹಾಂಗಾಗಿ ರೂಲ್ಸ್ ಎಲ್ಲಾ ಫಾಲೋ ಮಾಡ್ತಾಳ ಅಂತ ಕಾಣಿಸ್ತದ. ಅದಕ್ಕ ಮೊದಲು ಲೆಫ್ಟ್ ಒತ್ತರಿ ಅನ್ನಲಿಕತ್ತಾಳ, ಅಂತ ನಾ ತಿಳಕೊಂಡೆ ಮಾರಾಯಾ, ಅಂತ ನಮ್ಮ ಚೆಲುವಾಂತ ಚನ್ನಿಗ ಹೇಳಿದ.

ಇಷ್ಟು ಹೇಳೋದ್ರಾಗ ಬ್ರೆಡ್ ಜ್ಯಾಮ್ ತಿಂದು ಮುಗಸಿದ್ದ. ಈಗ ಅವನೂ ಒಂದು ಸೋಡಾ ತೊಗೊಂಡು ಉಪ್ಪು ಹಾಕಿಸಿಕೊಂಡು ಕುಡಿಲಿಕ್ಕೆ ಶುರು ಮಾಡಿ ಬಿಟ್ಟ.

ಹ್ಞೂ....ಅಕಿ ಎಡಗಡೆದು ಒತ್ತರೀ ಅಂದಳು ಅಂತ ಆತು. ನೀ ಏನು ಮಾಡಿದಿ ಹೀರೋ? - ಅಂತ ನಾವು ಕೇಳಿದಿವಿ.

ಇವಾ ಹುಚ್ಚ ಸೈಂಟಿಫಿಕ್ ಸೂಳೆಮಗ. ಥಿಯರಿ ಆಫ್ ರಿಲೇಟಿವಿಟಿ ಆಗಲೇ ಕಲ್ತು ಬಿಟ್ಟಿದ್ದ. ಲೆಫ್ಟ್ ರೈಟ್ ಎಲ್ಲಾ ರಿಲೇಟಿವ್ ಅಂತ ಗೊತ್ತಾಗಿ, ರೀ ಯಾರ ಲೆಫ್ಟ್ ರೀ? ನಿಮ್ಮ ಲೆಫ್ಟ್ ಅಥವಾ ನಮ್ಮ ಲೆಫ್ಟ್? ನಿಮ್ಮ ಲೆಫ್ಟ್ ಅಂದ್ರ ನನ್ನ ರೈಟ್. ರೈಟ್ ಒತ್ತಲೋ ಅಥವಾ ಲೆಫ್ಟ್ ಒತ್ತಲೋ, ಅಂತ ಕೇಳಿಬಿಟ್ಟಾನ ಅಕೀನ್ನ ನಮ್ಮ ದೋಸ್ತ.

ಹೋಗ್ಗೋ!!! ಅಕಿಗೆ ಈಗ ಫುಲ್ ಗೊತ್ತಾಗಿ ಬಿಟ್ಟದ. ಅಕಿ ಹೇಳಿ ಕೇಳಿ ತುಪ್ಪಾ ತಿಂದ V ಬ್ರಾಂಡ್. ಭಾಳ ಶಾಣ್ಯಾ ಇಲ್ಲದಿದ್ದರೂ ಈ ಚಲುವಾಂತ ಚನ್ನಿಗ ಕೇಳೋ ಧಾಟಿ ನೋಡಿಯೇ ಅಕಿಗೆ ಗೊತ್ತಾಗಿ ಬಿಟ್ಟದ ಇವಂಗ misunderstanding ಆಗಿ ಬಿಟ್ಟದ ಅಂತ.

ಸಿಕ್ಕಾಪಟ್ಟೆ ನಾಚಿಕೊಂಡು, ಆ ಕತ್ತಲಿ ಕ್ವಾಣಿ ಒಳಗೇ ಸಿಕ್ಕಾಪಟ್ಟೆ ಕೆಂಪ್ ಕೆಂಪ್ ಆಗಿ, ಯುನಿಫಾರ್ಮ್ ಸ್ಕರ್ಟ್ ಮತ್ತ ಮತ್ತ ಸರಿ ಮಾಡಿಕೊಂಡು, ನಾಚಿಕೋತ್ತ, ರೀ.....ನಾ ಹೇಳಿದ್ದು.... ಕಂಪ್ಯೂಟರ್ ಲೆಫ್ಟ್ ಬಟನ್ ಒತ್ತರೀ ಅಂತ. ಕಂಪ್ಯೂಟರ್ ಬಂದ್ ಆಗಿ ಬಿಟ್ಟದ ನೋಡ್ರೀ. ಅದಕ್ಕ ಹೇಳಿದೆ. ನಾ ಹೇಳಿ ಒಂದು ತಾಸಾತು. ನೀವು ಇನ್ನೂ ಯಾವ ಲೆಫ್ಟ್, ಯಾವ ರೈಟ್ ಅಂತ ವಿಚಾರ ಮಾಡಿಕೋತ್ತ ಕೂತಿರಿ. ಲಗೂನ ಒತ್ತರೀ. ಒತ್ತಿ ಬಿಡ್ರೀ. ಲೆಫ್ಟ್ ಒತ್ತರಿ. ಒತ್ತಿದರ ಚಾಲೂ ಆದರೂ ಆಗಬಹುದು. ಒತ್ತಿ ಚಾಲೂ ಆದ್ರ ನಮ್ಮ assignment ಮುಗಿಸಬಹುದು, ಅಂತ ಹೇಳಿದಳು ಆಕಿ.

ಓ!! ಕಂಪ್ಯೂಟರ್ ಬಟನ್ ಏನ್ರೀ???!!! ನನಗ ಗೊತ್ತಾಗಲಿಲ್ಲ ಬಿಡ್ರೀ. ಏನೋ ಅಂತ ಮಾಡಿದ್ದೆ, ಅಂತ ಅಂದವನೇ ನಮ್ಮ ಚೆಲುವ ಚನ್ನಿಗ ದೋಸ್ತ ಸಿಕ್ಕಾಪಟ್ಟೆ frustration ಒಳಗ ಲೆಫ್ಟ್ ಬಟನ್ ಒತ್ತೇ ಬಿಟ್ಟ ಅಂತ ಆತು. ಮತ್ತ ಥಿಯರಿ ಆಫ್ ರಿಲೇಟಿವಿಟಿ. ಅಕಿ ಲೆಫ್ಟ್ ಬ್ಯಾರೆ ಇವಂದು ಲೆಫ್ಟ್ ಬ್ಯಾರೆ. ಇವಾ ಇಷ್ಟೆಲ್ಲಾ ಕೇಳಿಕೊಂಡ ಮ್ಯಾಲೆ ಒತ್ತಿದ್ದು relatively ರೈಟ್ ಬಟನ್. ಕಂಪ್ಯೂಟರ್ ಕ್ಯಾ ಕ್ಯೂ ಅಂದು ಮತ್ತ ಮಲಕೊಂಡು ಬಿಡ್ತು. ಹೋಗ್ಗೋ!!!!


ರೀ!!!!! ರೀ!!! ಲೆಫ್ಟ್ ಲೆಫ್ಟ್ ಅಂತ ಸಾವಿರ ಸರೆ ಹೇಳಿದೆ. ಹೋಗಿ ಹೋಗಿ ರೈಟ್ ಒತ್ತಿಬಿಟ್ಟಿರಿ ನೋಡ್ರೀ!!! ಅ!!!ಅ!!! ಅಂತ ಅಂದಾಕಿನೇ ಅಕಿನೇ ಕಂಪ್ಯೂಟರ್ ಲೆಫ್ಟ್ ಬಟನ್ ಒತ್ತಿಯೇ ಬಿಟ್ಟಳು. ಹಾಕ್ಕ!!!ಹಾಕ್ಕ!!

ಹೋಗ್ಗೋ ನಿನ್ನ!! ಪಾಪ ಅಕಿ ಕತ್ತಲ್ಯಾಗ ಬಂದ್ ಆದ ಕಂಪ್ಯೂಟರ್ ಲೆಫ್ಟ್ ಬಟನ್ ಒತ್ತಿ reset ಮಾಡು ಅಂತ ಹೇಳಿದರ ನೀ ಗಂಡು ಗೂಳಿ ಸೂಳೆಮಗ ಏನೇನೋ ವಿಚಾರ ಮಾಡಿ ಬಿಟ್ಟಿದ್ದಿ ನೋಡು. ಪುಣ್ಯಕ್ಕ clarification ಕೇಳಿದಿ ಛೊಲೋ ಆತು. ಇಲ್ಲಂದ್ರ ಅಕಿ ಡೆಲಿಕೇಟ್ ಡಾರ್ಲಿಂಗ್ ಸುಂದರಿ ಫುಲ್ ಗೋವಿಂದಾ ಗೋವಿಂದ. ಹಿಡದು ನಿನಗೇ ಅಕೀನ್ನ ಕಟ್ಟಿ ಬಿಡ್ತಿದ್ದರು. ಅಂತರ್ಜಾತೀಯ ಬಾಲವಿವಾಹ ಆಗ್ತಿತ್ತು ನೋಡಲೇ.....ಹಾ!!! ಹಾ!!! - ಅಂತ ನಾವು ಜೋಕ್ ಹೊಡದ್ವೀ.

ಹಾಂ !! ಬಾಲ!! ವಿವಾಹ!! ಹಾಂ! ಹಾಂ! - ಅಂತ ಅಂದ ಚನ್ನಿಗ ಮತ್ತೆಲ್ಲರ ಬಾಲ ಬಂದದೋ ಅಂತ ನೋಡಿಕೊಂಡ. ಹಿಂದಂತೂ ಬಾಲ ಬಂದಿರಲಿಲ್ಲ. ಮುಂದ ಬಾಲ!? ಅವಂಗೇ ಖಾತ್ರಿ ಇರಲಿಲ್ಲ.

ಈ ಘಟನೆ 'ಕತ್ತಲಿ ಒತ್ತಲಿ' ಅಂತನೇ ಸಿಕ್ಕಾಪಟ್ಟೆ ಫೇಮಸ್ ಆಗಿ ಬಿಡ್ತು. ಕತ್ತಲ್ಯಾಗ ಒತ್ತೋ ಭಾಗ್ಯ ಪಡಿಬೇಕು ಅಂತ ಸುಮಾರು ಮಂದಿ ಸೆಕೆಂಡ್ ಬ್ಯಾಚಿಗೆ ಹೆಸರು ಹಚ್ಚಿಸಬೇಕು ಅಂತ ರೋಕಡಾ ರೆಡಿ ಮಾಡಿಕೊಂಡು  ಕೂತಿದ್ದರು. ಅದು ಏನೋ ಎಂತೋ..... ಗೊತ್ತಿಲ್ಲ.... ಆ ಕಂಪ್ಯೂಟರ್ ಮಂದಿಗೆ ನಮ್ಮ ಸಾಲಿ ಬಿಸಿನೆಸ್ ವರ್ಕ್ ಔಟ್ ಆಗಲಿಲ್ಲ ಅಂತ ಅನ್ನಸ್ತದ. ಝೇಂಡಾ ಎತ್ತಿಕೊಂಡು ಹೋಗಿ ಬಿಟ್ಟರು. ಮುಂದೆ ಕತ್ತಲಿ ಒತ್ತಲಿ ಭಾಗ್ಯ ಯಾರಿಗೂ ಸಿಗಲೇ ಇಲ್ಲ.

** ಇದು ಕಪೋಲಕಲ್ಪಿತ ಕಹಾನಿ ಮಾತ್ರ. ನಮ್ಮ ಸಾಲ್ಯಾಗ ಕಂಪ್ಯೂಟರ್ ಕ್ಲಾಸ್ ಆಗಿದ್ದು ಖರೆ. ಅದ್ರ ಕಂಪ್ಯೂಟರ್ ಕತ್ತಲೆ ಕೋಣೆಯಲ್ಲಿ 'ಈ' ಘಟನೆ ಆಗಿಲ್ಲ. ಈ ತರಹದ ಹಲವಾರು ಚರ್ಚೆ ಮಾತ್ರ  ಭಟ್ಟನ ಅಂಗಡಿ ಮುಂದ ಭಾಳ ಆಗ್ಯಾವ. ಹಾಂಗಾಗಿ ಓದಿದವರು ಯಾರೂ ಏನೂ ತಲಿ ಕೆಡಸಿಕೊಳ್ಳೋ ಜರೂರತ್ ಇಲ್ಲ.

** 'ಕತ್ತಲಿ ಒತ್ತಲಿ' ಅಂತ ಮೊನ್ನೆ ಒಬ್ಬ ದೋಸ್ತನ ಸಂಗ್ತಿ ಫೇಸ್ಬುಕ್ ಮ್ಯಾಲೆ ಹರಟಿ ಹೊಡೆದಾಗ ಹೇಳಿ ಹೇಳಿ ನಕ್ಕಿದ್ದು. ಆ ಟೈಟಲ್ ಗೆ ಹೊಂದುವಂತೆ ಒಂದು ಕಲ್ಪಿತ ಸ್ಟೋರಿ ಅಷ್ಟೇ. ನಮ್ಮ ಸಾಲಿ ಕಥೆಗಳು ಅಂದ್ರ reality is stranger than fiction!!! :) :)

No comments: