Saturday, August 03, 2013

IAS ಅಧಿಕಾರಿಗಳಿಗೆ ಏಕಾದಶಿ ದಿವಸ ಮಾತ್ರ ರಜೆಯಂತೆ!

ಅಪರೂಪಕ್ಕ ಹಳೆ ಗೆಳತಿ ಒಬ್ಬಾಕಿ ಸಿಕ್ಕಿದ್ದಳು. ಅದೂ ಫೇಸ್ಬುಕ್ ಮ್ಯಾಲೆ.

ಕಾಲೇಜ ಬಿಟ್ಟ ಮ್ಯಾಲೆ ಅಕಿ ಭೆಟ್ಟಿನೇ ಇರಲಿಲ್ಲ. ಒಮ್ಮೆಲೇ ಏಕದಂ ಫೇಸ್ಬುಕ್ ಮ್ಯಾಲೆ ಪ್ರತ್ಯಕ್ಷ ಆಗಿ, ಹೈ!ಹ್ಯಾಂಗಿದ್ದಿ? ಅಂದಳು.

ನಾ ಏಕದಂ ಆರಾಮ ಮಾರಾಳಾ. ನೀ ಹ್ಯಾಂಗ ಇದ್ದೀ? ಏನ ಕಥಿ? ಎಷ್ಟು ವರ್ಷ ಆದ ಮ್ಯಾಲೆ ಸಿಕ್ಕಿ! ಹಾಂ? ಹಾಂ? - ಅಂತ ಕೇಳಿದೆ.

ನಾ ಏನ ಬಿಡೋ ಆರಾಮ ಇದ್ದೇನಿ. ನಾ ಹೇಳಿ ಕೇಳಿ IAS ಆಫೀಸರ್. ಭಾಳ busy ಮಾರಾಯಾ, ಅಂತ ಅಂದು ಅಕಿ ಒಂದು ದೊಡ್ಡ ನಿಟ್ಟುಸಿರು ಬಿಟ್ಟಿದ್ದು ಫೇಸ್ಬುಕ್ ಚಾಟ್ ಒಳಗೂ ಕೇಳಿತು.

ಹಾಂ?! ನೀ IAS ಆಫೀಸರ್ ಆಗೀ? ಯಾವಾಗಿಂದ? ಕಾಂಗ್ರಾಟ್ಸ್ ಮಾರಾಳಾ. ಮಸ್ತ ಆತ ತೊಗೋ. ನಮ್ಮ ಬ್ಯಾಚಿನಿಂದ ಯಾರೂ IAS, IPS ಆಫೀಸರ್ ಆಗಿದ್ದು ಗೊತ್ತಿರಲಿಲ್ಲ. ನೀ ಆಗಿದ್ದು ಕೇಳಿ ಭಾಳ ಸಂತೋಷ ಆತು. ಭಾಳ busy ಮತ್ತ ಜವಾಬ್ದಾರಿ ಕೆಲಸ ಇರಬೇಕು. ಅಲ್ಲ? - ಅಂತ ಕೇಳಿದೆ.

ಏನ ಹಾಂಗ ಅಂತಿಯೋ ಮಾರಾಯಾ? ಸುಮಾರು ಮಂದಿ ನಮ್ಮ ಬ್ಯಾಚಿನ ಹುಡುಗ್ಯಾರು IAS ಆಫೀಸರ್ ಇದ್ದಾರೋ. ಎಲ್ಲಾರದ್ದೂ ಫೇಸ್ಬುಕ್ ಪ್ರೊಫೈಲ್ ಕಳಿಸಲಿ ಏನು? ಎಲ್ಲಾರಿಗೂ ಕಾಂಗ್ರಾಟ್ಸ್ ಹೇಳವ ಇದ್ದಿ ಏನು? ಹೇಳೋ. ಖುಷ್ ಆಗ್ತಾರ, ಅಂತ ಹೇಳಿದ ನಮ್ಮ ಹಳೆ ಗೆಳತಿ ಫೇಸ್ಬುಕ್ ಮ್ಯಾಲೆ ಕಣ್ಣು ಹೊಡೆದಳು. ಯಾಕೋ ಏನೋ? ಇರಲಿ. ಗೆಳತಿ ಕಣ್ಣು ಹೊಡದರ ಯಾಕ ಬ್ಯಾಡ ಅನ್ನೋಣ? ಹಾಂ? ಹಾಂ?

ಹಾಂಗs?! ಭಾರಿ ಆತು ಬಿಡವಾ ನಿಮದೆಲ್ಲಾ. ಎಲ್ಲಾ ಗೂಳವ್ವಗಳು ದೊಡ್ಡ ದೊಡ್ಡ IAS ಆಫೀಸರ್ಸ್ ಆಗಿ ಕೂತೀರಿ ಅಂತ ಆತು. very proud of you all girls, ಅಂತ ಹೇಳಿದೆ.

ಥ್ಯಾಂಕ್ಯು ಥ್ಯಾಂಕ್ಯು, ಅಂತ ಅಂದಳು ಗೆಳತಿ.

ಅಲ್ಲಾ ನೀ ಆಗೋದು ಆದಿ, IAS ಆಫೀಸರ್ ಯಾಕ ಆದಿ? IPS ಆಗಿದ್ದರ ನಮ್ಮ ಗೆಳತಿ ಪೋಲಿಸ್ ಅಂತ ಹೇಳಿ ಎದಿ ಉಬ್ಬಿಸಿಕೊಂಡು ಹೇಳಿಕೋತ್ತ ಅಡ್ಡಾಡ್ತಿದ್ದೆ. ಹೋಗಿ ಹೋಗಿ IAS ಆಗಿ ಕೂತಿಯಲ್ಲಾ? ಹಾಂ? ಹಾಂ? - ಅಂತ ಹೇಳಿದೆ. ಮೊದಲಿಂದಲೂ ಪೊಲೀಸರು ಪೋದ್ದಾರರು ಅಂದ್ರ ಏನೋ ಒಂದು ಎಕ್ಸಟ್ರಾ ಫೀಲಿಂಗ್ ನಮಗ.

ಸ್ಟುಪಿಡ್, ಅಂತ ಬೈದಳು.

ಯಾಕಾ ಬೈತೀ??????ಹಾಂ? ಹಾಂ? - ಅಂತ ಆಕ್ಷೇಪಣೆ ಮಾಡುತ್ತಾ ಕೇಳಿದೆ. ಈಗ ಮಾತ್ರ ಸಿಕ್ಕಾಳ, ಅದೂ ಇಪ್ಪತ್ತು ವರ್ಷದ ಮ್ಯಾಲೆ. ಸಿಕ್ಕ ಕೂಡಲೇ ಬೈಲಿಕ್ಕೆ ಶುರು ಮಾಡಿ ಬಿಟ್ಟಾಳ. ಅ.....ಅ....ಅ.....ಇಕಿನs

ಮತ್ತೇನು?! ಮಾತು ಎತ್ತಿದ ಕೂಡಲೇ ಎದಿ ಉಬ್ಬಿಸೋದು ಅಂತೀ? ಬರೇ ಅವೇ ವಿಚಾರ ಬರ್ತಾವೇನು ತಲಿಯಾಗ? ಸ್ಟುಪಿಡ್ - ಅಂತ ಬೈದಳು.

ಓಹೋ!!! ಈ ಹುಡುಗ್ಯಾರ ಮುಂದ ಎದೆ ಉಬ್ಬಿಸಿ ಎದೆಗಾರಿಕೆ ತೋರಿಸಲಿಕ್ಕೆ ಹೋಗಬಾರದು. ತಪ್ಪು ಅರ್ಥ ಬರ್ತದ. ಮೊದಲೇ ಫೇಸ್ಬುಕ್ ಮ್ಯಾಲೆ ಮುಖ ಮಾರಿ ಇಲ್ಲದೆ ದೆವ್ವಗೋಳು ಮಾತಾಡಿದಂಗ ಮಾತಾಡಿಕೋತ್ತ ಕೂತೇವಿ. miss ಸುಂದರಿ ಜೊತಿ misunderstanding ಆಗೋದು ಸಹಜ ಅದ.

ಇರ್ಲಿ ಬಿಡು ಮಾರಾಳಾ. ನಾವು ಎದಿ ಮತ್ತೊಂದು ಉಬ್ಬಿಸಿ ತಬ್ಬಿಸಿ ಏನೂ ಹೇಳಂಗಿಲ್ಲ. ಓಕೆ ಏನವಾ? - ಅಂತ ಸಮಾಧಾನ ಮಾಡೋ ದನಿಯೊಳಗ ಕೇಳಿದೆ.

ನಾ ಯಾಕ IPS ಆಫೀಸರ್ ಆಗಬೇಕಿತ್ತು? ನಿನ್ನ ಹಾಕ್ಕೊಂಡು ಬಡಿಲಿಕ್ಕೆ? ನಿನ್ನ ನೆನಪು ಮಾಡಿಕೊಂಡರ ಹಾಕ್ಕೊಂಡು ಬಡಿಬೇಕು ಅನ್ನಸ್ತದ, ಅಂದಳು ಗೆಳತಿ.

ಏನs? ಬರೇ ಬೈಲಿಕತ್ತಿ ಅಂತ ತಿಳಕೊಂಡರ ಒದಿತೀನಿ ಬಡಿತೀನಿ ಅಂತಿಯಲ್ಲಾ? ಹಾಂ? ಹಾಂ? - ಅಂತ ಕೇಳಿದೆ.

ಮತ್ತೇನು???? ಎಲ್ಲಾ ಹುಡುಗ್ಯಾರಿಗೆ ಆಂಟಿ ಅಂತೀ ಅಂತ? ಅದೂ ಹಾಪ್ ಆಂಟೀಸ್ ಅಂತೀ ಅಂತ? ಯಾಕ? ನಾವೇನು ಅಷ್ಟು ಮುದುಕ್ಯಾರಾಗಿ ಬಿಟ್ಟೇವಿ ಏನು? ನೀವೆಲ್ಲಾ ಏನು ಭಾಳ ಯಂಗ್ ಏನು? ನಿನ್ನ ಮಸಡಿ ನೋಡಿಕೊಂಡಿ? ಏನು ನೋಡಿಕೋತ್ತಿ? ಒಂದು ಮೂರ್ನಾಕು ಕನ್ನಡಿ ಜೋಡಿಸಿ ಇಟ್ಟರೂ ನಿನ್ನ ಬಾಡಿ ಪೂರ್ತಿ ಕಾಣೋದಿಲ್ಲ. ಆ ಪರಿ ಹೊನಗ್ಯಾ ಇದ್ದೀ. ಮತ್ತ ಎಲ್ಲಾ ಹುಡುಗ್ಯಾರಿಗೆ ಆಂಟಿ ಮತ್ತೊಂದು ಅಂತೀ. ಮಂಗ್ಯಾನ ತಂದು, ಅಂತ ಝಾಡಿಸಿದಳು ಗೆಳತಿ.

ನಾನು ಇಕಿ ಏನು ಅಂದಳೋ ಅಂತ ತಿಳಕೊಂಡು ಸುಧಾರಿಸಿಕೊಳ್ಳೋದ್ರೋಳಗ ಮತ್ತ ಬೈದಳು. ಸೂಡ್ಲೀ.

ನಿನ್ನ ಆಂಟಿ ಗೂಂಡಾ(anti goonda) ಕಾಯಿದೆ ಒಳಗ ಜೈಲಿಗೆ ಹಾಕಿಸಲಿ ಏನು? ಹಾಂ?ಹಾಂ? - ಅಂತ ಆವಾಜ ಬ್ಯಾರೆ ಹಾಕಿದಳು.

ಯಾಕಾ? ನಾ ಏನು ಗೂಂಡಾಗಿರಿ ಮಾಡಿದೆ? ಹಾಂ? ಹಾಂ? - ಅಂತ defensive ಆಗಿ ಕೇಳಿದೆ.

ಕೇಳೋದು ನೋಡು! ಎಲ್ಲಾ ಹುಡುಗ್ಯಾರಿಗೆ ಆಂಟಿ ಅನ್ನೋದು ಸಾಕಲ್ಲ ನಿನ್ನ ಆಂಟಿ ಗೂಂಡಾ ಕಾಯಿದೆ ಒಳಗಾ ಜೈಲಿಗೆ ಹಾಕಿಸಲಿಕ್ಕೆ. ಹಾಕಿಸಲಿ?ಹಾಂ? ಹಾಂ? - ಸೀರಿಯಸ್ ಆಗಿ ಆವಾಜ್ ಹಾಕಿದಳು.

ಹೇಳಿ ಕೇಳಿ IAS ಆಫೀಸರ್ ಅಂತಾಳ. IAS ಆಫೀಸರ್ ಅಂದ್ರ IPS ಮಂದಿಕಿಂತ ಒಂದು ಲೆವೆಲ್ ಮ್ಯಾಲೆ. ಎಲ್ಲೆರೆ ಸಿಟ್ಟಿಗೆದ್ದು ತನ್ನ ಪೋಲಿಸ್ ದೋಸ್ತರಿಗೆ ಹೇಳಿ ಒಳಗಾ ಹಾಕಿಸಿದಳು ಅಂದ್ರ ಮುಗೀತು ಅಷ್ಟ.

ಬ್ಯಾಡಾ  ಮಾರಾಳಾ! ಏನೋ ಸುಮ್ಮನಾ ಅಂತಿದ್ದೆ. ಇನ್ನು ಯಾರಿಗೂ ಆಂಟಿ ಅನ್ನಂಗಿಲ್ಲ. ಓಕೆ? - ಅಂತ ಹೇಳಿದೆ. ಖಾತ್ರಿ ಮಾಡಿದೆ.

ಬರೆ ಆಂಟಿ ಅನ್ನೋದು ಒಂದೇ ಅಲ್ಲ. ಹುಡುಗ್ಯಾರ ಮುಂದ ಎದೆ ಉಬ್ಬಿಸಿ ಹೆಮ್ಮೆ ಪಡ್ತೇನಿ, ಎದೆಗಾರಿಗೆ ಮತ್ತೊಂದು ಅದು ಇದು ಅಂತ ಪಿಟಕ್ ಅಂದ್ರೂ ನೀ ಸೀದಾ ಹಿಂಡಲಗಾ ಜೈಲು. ನೋಡ್ಕೋ ಮತ್ತ! - ಅಂತ ಫೈನಲ್ ವಾರ್ನಿಂಗ ಕೊಟ್ಟಳು.

ಈ ಇಂಗ್ಲೀಶ್ ಮೀಡಿಯಂ ಹುಡುಗ್ಯಾರ ಹಣೆಬರಹನ ಇಷ್ಟು. ಇಕಿ IAS ಆಫೀಸರ್ ಆಗ್ಯಾಳ ಅಂತ ನಾ ಹೆಮ್ಮೆಯಿಂದ ಎದೆ ಉಬ್ಬಿಸತೇನಿ ಅಂದ್ರ ಇಕಿ ಏನೋ ಇಮ್ಯಾಜಿನ್ ಮಾಡಿಕೊಂಡು, ಏನೋ ಫೀಲ್ ಮಾಡಿಕೊಂಡು, ನಾಚಿಕೊಂಡು, ಕೆಂಪ ಮಾರಿ ಆದ ಸ್ಮೈಲಿ ಬ್ಯಾರೆ ಹಾಕಿ ಬೈಲಿಕತ್ತಾಳ. ಇರ್ಲಿ ಬಿಡು. ಸಿಕ್ಕಾಗ ಇಕಿಗೆ ಕನ್ನಡ ಲೆಸೆನ್ ತೊಗೊಳ್ಳೋಣ ಅಂತ ಹೇಳಿ ಬಿಟ್ಟೆ.

ಇರಲಿ ಬಿಡವಾ. IAS ಆಫೀಸರ್ ಆದಿ ಅಂತ ಆತು. ಯಾವ ಕೇಡರ್ ನಿಮ್ಮದು? - ಅಂತ ಕೇಳಿದೆ.

ಏನ್ ಕೇಡರೋ? ಗೂಂಡಾ ಕೇಡಿ ಕಿಡಿಗೇಡಿ ಎಲ್ಲಾ ನೀನs. ನನ್ನ ಕಡೆ ಏನು ಕೇಡಿಗಳ ಬಗ್ಗೆ ಕೇಳ್ತೀ? ಸ್ಟುಪಿಡ್, ಅಂದಳು ಆಕಿ.

cadre ಅಂದ್ರ ಕೇಡಿ, ಕಿಡಿಗೇಡಿ ಅಂತ! ಅಯ್ಯ ಇಕಿನ! ಸ್ವಚ್ಚ ಹಾಪ್!

ಕೇಡರ್ ಅಂದ್ರ ಯಾವ ರಾಜ್ಯಕ್ಕ ನಿನ್ನ ಹಾಕ್ಯಾರ? - ಅಂತ ಕೇಳಿದೆ.

ರಾಜ್ಯಕ್ಕ ಯಾಕ ಹಾಕ್ತಾರೋ? ನನ್ನ ರಾಷ್ಟ್ರಕ್ಕ ಹಾಕಿ ಬಿಟ್ಟಾರ. ಗೊತ್ತದ ಏನು? - ಅಂತ ಕೇಳಿದಳು.

ಹಾಂ!!! IAS ಆಫೀಸರ್ ಮಂದಿನ ಬೇರೆ ಬೇರೆ ರಾಜ್ಯದ ಕೇಡರ್ ಗೆ ಹಾಕೋದು ಗೊತ್ತಿತ್ತು. ಏನಪಾ ಇಕಿ ರಾಷ್ಟ್ರಕ್ಕ ಹಾಕ್ಯಾಳ ಅಂತಾಳ!!!

ಹಾಂ?! ಏನಂದಿ? ರಾಷ್ಟ್ರಕ್ಕ ಹಾಕ್ಯಾರ!? ನೀ IAS ಆಫೀಸರೋ ಅಥವಾ IFS ಅಂದ್ರ ಇಂಡಿಯನ್ ಫಾರಿನ್ ಸರ್ವಿಸ್ ಆಫೀಸರೋ? IFS ಇದ್ದರ ಯಾವದಾರ ರಾಷ್ಟ್ರಕ್ಕ ಹಾಕಿದರು ಅಂದ್ರ ಓಕೆ. IAS ಆಗಿ ಯಾವ ರಾಷ್ಟ್ರಕ್ಕ ಬಂದಿ ಮಾರಾಳಾ? - ಅಂತ ಫುಲ್ confuse ಆಗಿ ಕೇಳಿದೆ.

ಮಹಾರಾಷ್ಟ್ರಕ್ಕ! - ಅಂದು ಸುಮ್ಮನಾದಳು. ಒಂದು naughty ಸ್ಮೈಲೀ ಬ್ಯಾರೆ ಕೊಟ್ಟಳು.

ಹಾ!!! ಹಾ!!!ಮಸ್ತ ಅದ ನಿನ್ನ sense of humor. ಅಂದ್ರ IAS ಆದ ಮ್ಯಾಲೆ ಮಹಾರಾಷ್ಟ್ರ ರಾಜ್ಯಕ್ಕ ನಿನ್ನ ಹಾಕ್ಯಾರ ಅಂತ ಆತು. ವೆರಿ ಗುಡ್! ವೆರಿ ಗುಡ್! ಪುಣ್ಯಾ ಮಾಡಿ ಬಿಡವಾ. ಎಷ್ಟು ಮಂದಿಗೆ ಮಹಾರಾಷ್ಟ್ರದಂತಾ ಒಳ್ಳೆ ರಾಜ್ಯ ಸಿಗ್ತದ? ಮತ್ತ ನಮ್ಮ ಧಾರವಾಡಕ್ಕ ಹತ್ತಿರ ಸಹಾ. ಮಸ್ತ ಆತು ಬಿಡು. ಎಲ್ಲೆ ನಿನ್ನ ಪೋಸ್ಟಿಂಗ್ ಮಹಾರಾಷ್ಟ್ರ ಒಳಗ? - ಅಂತ ಕೇಳಿದೆ.

ನನ್ನ ಪೋಸ್ಟಿಂಗ್ ಸದ್ಯಾ ಮುಂಬೈ ಒಳಗ ಅದ, ಅಂದಳು ಗೆಳತಿ.

ವಾಹ್!! ವಾಹ್!!! ಆಮಚೀ ಮುಂಬೈ ಒಳಗ ಇದ್ದೀ ಅಂತ ಆತು. ಮಸ್ತ ಆತು ತೊಗೋ. ಧಾರವಾಡ ಅಂದ್ರ ಬರೇ ಓವರ್ ನೈಟ್ ಜರ್ನಿ. ರಾತ್ರಿ VRL ಹತ್ತಿದರ ಮುಂಜಾನೆ ಧಾರವಾಡ. ನಾನೂ ಆಗಾಗ VRL ಒಳಗ ಅಲ್ಲೆ ಇಲ್ಲೆ ಹೋಗಿ ಬಂದು ಮಾಡಿಕೋತ್ತ ಇರ್ತೇನಿ. ನೀ ಯಾವಾಗಲೂ ಕಂಡೇ ಇಲ್ಲ ನೋಡು. ಸಿಕ್ಕಿದ್ದರ ಬಾಜೂ ಬಾಜೂ ಕೂತು ಮಸ್ತ ಹರಟಿ ಹೊಡಕೋತ್ತ ಹೋಗಬಹುದಿತ್ತು. ಮುಂದಿನ ಸರೆ VRL ಒಳಗ ಹೋಗುವಾಗ ಒಂದು ಮಿಸ್ ಕಾಲ್ ಕೊಡಲ್ಲಾ? ನಾನೂ ಆಕಸ್ಮಾತ ಅಲ್ಲೆ ಎಲ್ಲರ ಸುತ್ತಾ ಮುತ್ತಾ ಇದ್ದರ ಎಲ್ಲಾ ಕೆಲಸಾ ಮುಗಿಸಿ ನಿನ್ನ ಜೊತಿನೇ ಬಂದು ಬಿಡ್ತೇನಿ. ಏನಂತೀ? - ಅಂತ ಕೇಳಿದೆ.

IAS ಆಫೀಸರ್. ಅದೂ ನಮ್ಮ ಬ್ಯಾಚಿನ ಅತಿ ಚಂದ ಹುಡುಗಿ ಬ್ಯಾರೆ. VRL ಬಸ್ ಒಳಗ ಬಾಜು ಬಾಜು ಕೂತು ಬರೋ ನಸೀಬ್ ಯಾರಿಗೆ ಅದ, ಯಾರಿಗೆ ಇಲ್ಲ!

ಏನೂ ಬೇಕಾಗಿಲ್ಲ. ನೀ ಏನ ನನ್ನ ಜೋಡಿ VRL ಒಳಗ ಬರೋದು ಬೇಕಾಗಿಲ್ಲ. ನನ್ನ ಜೋಡಿ ನನ್ನ ಫ್ಯಾಮಿಲಿ ಇರ್ತದ. ಬ್ಯಾರೆ ಯಾರನ್ನಾರ ಫಿಕ್ಸ್ ಮಾಡಿಕೊ. ಓಕೆ? - ಅಂತ ಹೇಳಿ ನೀರು ಗೊಜ್ಜಿದಳಾ ಆ ಕೆಟ್ಟ IAS ಆಫೀಸರ್.

ಏನು? ಇವತ್ತು ಫ್ರೀ ಏನು ನೀ? ಆಫೀಸ್ ಇಲ್ಲ? ಆಫೀಸ್ ಟೈಮ್ ಒಳಗ ಫೇಸ್ಬುಕ್ ಮ್ಯಾಲೆ ಹರಟಿ ಹೊಡಕೋತ್ತ ಕೂತಿ? ಎಲ್ಲೆ ಇದ್ದಿ ಈಗ ಸದ್ಯಾ? - ಅಂತ ಕೇಳಿದೆ.

ಈಗ ನಾನು ಮನಿಯೊಳಗ ಇದ್ದೇನೋ ಮಾರಾಯಾ. ಕೆಲಸದ ನಡು ನಡು ಸ್ವಲ್ಪ ಬ್ರೇಕ್ ತೊಗೊಂಡು ಹರಟಿ ಅದು ಇದು ಮಾಡಿಕೋ ಬೇಕು ನೋಡಪಾ. ಭಾಳ busy ನಾನು, ಅಂದಳು ಅಕಿ.

ಹಾಂ? ಏನು? ನೀವು IAS ಆಫೀಸರ್ ಮಂದಿ ಸಹಿತ ಮನಿಯಿಂದ ಕೆಲಸಾ ಮಾಡ್ತೀರಾ? ಅಂದ್ರ working from home. ನೀ ಏನು ಕಂಪ್ಯೂಟರ್ ಡಿಪಾರ್ಟಮೆಂಟ್ ಒಳಗ ಇದ್ದೀ ಏನವಾ? - ಅಂತ ಕೇಳಿದೆ.

ಈ ಅಂಡರ್ವೇರ್ ಅಲ್ಲಲ್ಲ software ಮಂದಿ working from home ಅಂತ ಒಂದು ಹೊಸಾ ನಾಮಾ ಹಾಕೋ ಪದ್ಧತಿ ತಂದುಕೊಂಡಾರಾ ನೋಡ್ರೀ. ಹಾಂಗೇ ಈ IAS ಗವರ್ನಮೆಂಟ್ ಮಂದಿ ಕೂಡ ಅಂತಹದೇ ವೇಷ ಶುರು ಮಾಡ್ಯಾರೋ ಏನೋ ಅಂತ ಡೌಟ್ ಬಂತು!

ನಾನು ಮನಿಂದ ಅಲ್ಲದ ಮಠದಿಂದ ಕೆಲಸಾ ಮಾಡಬೇಕೆನು? ಸ್ಟುಪಿಡ್. ಇಲ್ಲ ನಾನು ಕಂಪ್ಯೂಟರ್ ಡಿಪಾರ್ಟಮೆಂಟ್ ಒಳಗ ಇಲ್ಲ. ನಾನು ಹೋಂ ಡಿಪಾರ್ಟಮೆಂಟ್. ಅಂದ್ರ ಗೃಹ ಖಾತೆ. ಹೋಂ ಸೆಕ್ರೆಟರಿ ಹೋಂ ಮಿನಿಸ್ಟರ್ ಎಲ್ಲಾ ನಾನs, ಅಂತ ಹೇಳಿದಳು ಅಕಿ.

ಹೋಗ್ಗೋ ಇಕಿನಾ!!! ಇದು ದೊಡ್ಡ confusion ಆತು. IAS ಆಫೀಸರ್ ಅಂತಾಳ. ಕೆಲಸದ ದಿವಸ ಸಹಿತ ಮನಿಯಿಂದನೇ ಕೆಲಸಾ ಮಾಡ್ತೇನಿ ಅಂತಾಳ. ಕೇಳಿದರ ಹೋಂ ಡಿಪಾರ್ಟಮೆಂಟ್ ಅಂತಾಳ. ಹೋಂ ಡಿಪಾರ್ಟಮೆಂಟ್ ಮಂದಿ ಯಾವಾಗಲೂ ಆಫೀಸ್ ಗೆ ಹೋಗಿಯೇ ಕೆಲಸಾ ಮಾಡೋದು. ಇಕಿ ಹ್ಯಾಂಗ ಮನಿಯಿಂದ ಕೆಲಸ ಮಾಡಲಿಕತ್ತಾಳ ಅಂತ ಗೊತ್ತಾಗಲಿಲ್ಲ.

ರಜಾ ಹಾಕಿ ಏನು? ಏನರ ವಿಶೇಷ ಅದು ಏನು? - ಅಂತ hesitatingly ಕೇಳಿದೆ.

ಏನ ರಜಾನೋ? ನಾವು ಯಾವಾಗಲೂ ಮನಿಯಿಂದನ ಕೆಲಸ ಮಾಡೋದು ಏನಪಾ. ಏಕಾದಶಿ ದಿವಸ ಒಂದು ಏನೋ ಸ್ವಲ್ಪ ರಜಾ ಸಿಕ್ಕಂಗ ಸಿಗ್ತದ ನೋಡೋ. ಬಾಕಿ ದಿವಸ ಎಲ್ಲಾ ಕತ್ತಿ ಗತೆ ದುಡಿಯೋದs ನೋಡಪಾ! - ಅಂದುಬಿಟ್ಟಳು ಗೆಳತಿ.

ಹಾಂ!!! ಯಾವಾಗಲೂ ಮನಿಯಿಂದಲೇ ಕೆಲಸ ಮಾಡೋದು! ಮತ್ತ ಏಕಾದಶಿ ದಿವಸ ಮಾತ್ರ ಏನೋ ರಜಾ ತರಹ. ಅದೂ ಫುಲ್ ರಜಾ ಅಲ್ಲ ಮತ್ತ. ಫುಲ್ confusion!

ಯಾಕ? ಏನರ long leave ಹಾಕಿ ಏನು? ಏನರ ವಿಶೇಷ ಆದ ಏನು? ಲಗೂನ ಪೇಡೆ ಕೊಡಾಕಿ ಇದ್ದಿ ಏನು ಮತ್ತ? - ಅಂತ ನಾನೂ ಅಪರೂಪಕ್ಕ ಒಂದು ಕಣ್ಣು ಹೊಡೆಯುವ ಸ್ಮೈಲೀ ಹಾಕಿ ಕೇಳಿದೆ. ನಾಚಿಕೋತ್ತನ ಹಾಕಿದೆ.

ಸ್ಟುಪಿಡ್!! ಏನು ಕಣ್ಣು ಹೊಡೆದು long leave ಅಂತ ಕೇಳ್ತಿಯೋ? ಸ್ಟುಪಿಡ್ - ಅಂತ ಬೈದಳು.

ಅಲ್ಲಾ!!!!ಅದು ಏನಂದ್ರ...ಏನಂದ್ರ....ಹ್ಯಾಂಗ ಕೇಳಲಿ ನಿನ್ನ? ಏನಂದ್ರ....ಅದು ಏನಂದ್ರ...ಅಂತ ತಡಬಡಿಸಿದೆ.

ಏನಂದ್ರ ಏನಂದ್ರ ಅಂತ ಎಷ್ಟು ಸರೆ ತಡಬಡಸ್ತಿಯೋ ಮಾರಾಯಾ? ಇನ್ನೂ ತಡಬಡಿಸಿದರ ನಾನು ತಡಾ ಮಾಡದ ಬಡಿತೀನಿ ನೋಡ್ಕೋ ಮತ್ತ. ಜಲ್ದೀ ಹೇಳು. ಸ್ಟುಪಿಡ್. ಜಲ್ದೀ ಕೇಳು, ಅಂತ ಮತ್ತ ಹಾಕ್ಕೊಂಡು ಬೈದಳು ಗೆಳತಿ.

ಅಲ್ಲಾ...IAS ಆಫೀಸರ್ ಅಂತೀ.... ಮನಿಯಿಂದ ಕೆಲಸಾ ಮಾಡ್ತೀ ಅಂತೀ....ರಜಾ ಅಲ್ಲಾ ಅಂತೀ....ಲಾಂಗ್ ಲೀವ್ ಅಲ್ಲಾ ಅಂತೀ....ಮತ್ತೆಲ್ಲರ ಬಸರು ಬಾಣಂತನ ನೆಡದದ ಏನು? ಹಾಂ? ಅದಕ್ಕ ಮನಿಯೊಳಗ ರೆಸ್ಟ್ ಮಾಡಿಕೋತ್ತನ IAS ಕೆಲಸಾನೂ ಮಾಡ್ತಿ ಏನು? ಹಾಂ? ಹಾಂ? - ಅಂತ ಕೇಳಿಬಿಟ್ಟೆ.

ಸ್ಟುಪಿಡ್!!!!! ಇದು ಕೇಳೋ question ಏನು? ಮಹಾ ಸ್ಟುಪಿಡ್. ಎಲ್ಲಿ ಬಸರು ಬಾಣಂತನ ಹಚ್ಚಿಯೋ?! ನಮದೆಲ್ಲಾ ಅವು ಮುಗದು ಹಳೇ ಮಾತಾತು. ಅಲ್ಲಾ ನಿನಗ ತಲಿ ಅನ್ನೋದು ಸ್ವಲ್ಪ ಅದ ಏನು? ಅಲ್ಲಾ ನಾ ನಿನ್ನ ಕ್ಲಾಸ್ಮೇಟ್. ಈ ವಯಸ್ಸಿನ್ಯಾಗ ಬಸುರಾಗಿ ಏನು ಅಂತ ಕೇಳ್ತೀ ಅಲ್ಲಾ??!!! ನಿನಗ ಸ್ವಲ್ಪನೂ ಕಾಮನ್ ಸೆನ್ಸ್ ಅನ್ನೋದು ಅದನೋ ಇಲ್ಲೋ?!! ಸ್ಟುಪಿಡ್!!!!ಸೋ ಸ್ಟುಪಿಡ್!!!! - ಅಂತ ಫೇಸ್ಬುಕ್ ಚಾಟ್ ಮ್ಯಾಲೇ ಹಾಕ್ಕೊಂಡು ಬೈದು ಬಿಟ್ಟಳು.

ಬಸಿರು ಬಾಣಂತನದ ಬಗ್ಗೆ ಮಾತಾಡಿ ಈ ಪರಿ ಬೈಸಿಕೊಂಡು ಏಕದಂ 'ಬಂಧನ' ಚಿತ್ರದ ಹಾಡು ನೆನಪಾಗಿ ಬಿಡ್ತು.

ಬಣ್ಣಾ ನನ್ನ ಒಲವಿನಾ ಬಣ್ಣಾ
ನನ್ನ ಚಲುವಿನ ಬಣ್ಣಾ
ನೀ ನಕ್ಕರೆ ಹಸಿರು
ಉಲ್ಲಾಸದ ಉಸಿರು
ನೂರಾಸೆಯ ಚಲುವಿನ ಬಣ್ಣಾ
ಬಣ್ಣಾ ನನ್ನ ಒಲವಿನಾ ಬಣ್ಣಾ

ಅಂತ ಚಂದ ಹಾಡು ಇತ್ತು. ಅದನ್ನ ಕಿಡಿಗೇಡಿ ಧಾರವಾಡ ಹುಡುಗುರು ಅದನ್ನ ವಿರೂಪಗೊಳಿಸಿ...........

ಚೊಣ್ಣಾ ನಿನ್ನ ಒಲವಿನ ಚೊಣ್ಣಾ
ಚೊಣ್ಣಾ ಕಳಿಲೇನೋ ಅಣ್ಣಾ?
ಅಕಿ ನಕ್ಕರೆ ಉಸಿರು
ಭಾನಗಡಿ ಆದರೆ ಬಸಿರು

ಅಂತ ಹಾಡ್ತಿದ್ದರು. ಮಂಗ್ಯಾನ ಮಕ್ಕಳು! ಸೂಡ್ಲಿ!

ಬಂಧನ ಚಿತ್ರದ ಹಾಡು ಯಾಕ ನೆನಪಾತು?

ಒಮ್ಮೆ ಧಾರವಾಡ ಲೈನ್ ಬಜಾರ್ ಒಳಗ ಒಬ್ಬಾಕಿ ಝಕಾಸ್ ಮಾಲಿಗೆ ಹೀಂಗ ಹಾಡಿದಾಗ ಅಕಿ ಕೆಟ್ಟ ಮಸಡಿ ಮಾಡಿ ಬೈದಿದ್ದು ನೆನಪಾತು. ಅಲ್ಲಾ ಸ್ವೀಟ್ ಸಿಕ್ಸ್ಟೀನ್ ಹುಡುಗಿ ಮುಂದ ಹೋಗಿ ಚೊಣ್ಣ ಅದು ಇದು ಅಂದ್ರ ಬೈದ ಬಿಡ್ತಾಳ ಏನು? ಕಾಲಾಗಿನ ಬಾಟಾ ತೆಗೆದು ಟಾಟಾ ಹೇಳಲಿಲ್ಲ ಪುಣ್ಯಾಕ್ಕ!!

ಈಗ ಫೇಸ್ಬುಕ್ ಮ್ಯಾಲೆ ಇಕಿನೂ ಹಾಂಗ ಬೈಲಿಕತ್ತಾಳ. ಲಗೂನ ಟಾಪಿಕ್ ಚೇಂಜ್ ಮಾಡಿಬಿಡಬೇಕು. ಮೊದಲೇ IAS ಆಫೀಸರ್ ಇಕಿ. ಎಲ್ಲರೆ ಫೋನ್ ಮಾಡಿದಳು ಅಂದ್ರ ನಾ ಧಾರವಾಡ ಒಳಗಾ ಕೂತರೂ, ಇಕಿ ಅಲ್ಲೆ ಮುಂಬೈ ಪೋಲೀಸರಿಗೆ ಫೋನ್ ಮಾಡಿ, ಅವರು ನಮ್ಮ ಧಾರವಾಡ ವಿದ್ಯಾಗಿರಿ ಪೋಲೀಸರಿಗೆ ಫೋನ್ ಮಾಡಿ, ಅವರು ಮನಿಗೆ ಬಂದು, ನನ್ನ ಒದ್ದು ಹಿಡಕೊಂಡು ಹೋದರು ಅಂದ್ರ ಅಷ್ಟ ಮತ್ತ! ಬ್ಯಾಡಪ್ಪೋ ಬ್ಯಾಡ!!!!

ತಪ್ಪಾತವಾ ಮಾರಾಳಾ!!! ಹೊಟ್ಯಾಗ ಹಾಕ್ಕೋ!!! ಅಲ್ಲಾ IAS ಆಫೀಸರ್ ಆದರೂ ಮನಿಯಾಗೇ ಇರ್ತೀ ಅಂದಿ. ಅದಕ್ಕs ಎಲ್ಲೇ ಮತ್ತೊಂದು ಮಕ್ಕಳು ಮರಿ ಮಾಡಿಕೊಳ್ಳಲಿಕ್ಕೆ ಹೊಂಟಿಯೋ ಅಂತ ಕೇಳೋ ಜುರ್ರತ್ ಮಾಡಿಬಿಟ್ಟೆ. ತಪ್ಪಾತು. ಕ್ಷಮಾ ಮಾಡು. ಆದರೂ ಇನ್ನೊಂದು ಮರಿ ಆಗಲಾರದಷ್ಟು ವಯಸ್ಸೇನೂ ಆಗಿಲ್ಲ ಬಿಡು. ವಿಚಾರ ಮಾಡಲಿಕ್ಕೆ ಅಡ್ಡಿಲ್ಲ, ಅಂತ ಹೇಳಿ ಮಾತು ಮುಗಿಸಿದೆ.

ಮತ್ತ ಅದ ಮಾತು!!!???? ಬಡಿತೀನಿ ನೋಡು!!! - ಅಂತ ಹುಸಿಮುನಿಸು ತೋರಿಸಿದಳು ಸುಂದರಿ. ಮಾರಿ ಕೆಂಪಾದ ಸ್ಮೈಲೀ ಸಹಿತ ಹಾಕಿದಳು ಅಂದ ಮ್ಯಾಲೆ ಖಾತ್ರಿ ಆತು. ಸುಮ್ಮಸುಮ್ಮನ ನಾಟಕಾ ನೌಟಂಕಿ ಮಾಡ್ಲಿಕತ್ತಾಳ. 

ವಯಸ್ಸಾಗಿಲ್ಲ, ಚಂದ ಇದ್ದೀ - ಇವೆರಡು ಗೋಲ್ಡನ್ ವಾಕ್ಯಗಳು. ಹೆಂಗಸರು, ಗಂಡಸರು, ನಡುವಿನವರು ಯಾರಿಗೆ ಬೇಕಾದರೂ ಹೇಳ್ರೀ. ನೋ ಪ್ರಾಬ್ಲೆಮ್. ಪ್ರಾಬ್ಲೆಮ್ ಇದ್ದರೂ ಸುರಳೀತ ಹೂವು ಎತ್ತಿದಾಂಗ solve ಆಗಿ ಹೋಗಿ ಬಿಡ್ತದ.

ಹೂನವಾ ಸುಂದ್ರಾ ಬಾಯಿ, ಮತ್ತೇನು ಸುದ್ದಿ? ಈಗ ಸದ್ಯಾ ಅಂತು ಮುಂಬೈ ಒಳಗ ಇದ್ದೀ. ಮೊದಲು ಎಲ್ಲೆ ಇದ್ದಿ? ಏನು ಪೋಸ್ಟಿಂಗ್ ಇತ್ತು? - ಅಂತ ಕೇಳಿದೆ. 

IAS ಆದ ಕೂಡಲೇ ಮೊದಲು ಸ್ವಲ್ಪ ವರ್ಷ ಅಮೇರಿಕಾ ಒಳಗ ಇದ್ದು ಬಂದೆನೋ. ಅಲ್ಲೇ ಆಗಿತ್ತು ನನ್ನ ಪೋಸ್ಟಿಂಗ್, ಅಂತ ಹೇಳಿದಳು. 

ಏನೂ? IAS ಮಂದಿ ಸಹಿತ ಅಮೇರಿಕಾ ಒಳಗ ಕೆಲಸಾ ಮಾಡ್ತಾರ? ಹಾಂ? ಹಾಂ? ಅಲ್ಲ.....ಇನ್ನೊಮ್ಮೆ ಕೇಳಿ ಖಾತ್ರಿ ಮಾಡಿಕೋತ್ತೇನಿ.  ನೀ Indian Administrative Service ಆಫಿಸರೋ ಅಥವಾ Indian Foreign Service ಆಫಿಸರೋ??? ಖಾತ್ರಿ ಮಾಡವಾ!!! - ಅಂತ ಕೇಳಿದೆ. 

ಇಕಿ ಉತ್ತರಾ ಕೊಡೊ ಧಾಟಿ ನೋಡಿದರ ಯಾಕೋ ಏನೋ ನನಗೇ full confusion!

IAS ಓನ್ಲಿ! ಆದರ Indian Administrative Service ಅಲ್ಲ. ಬ್ಯಾರೆ! - ಅಂತ ಹೇಳಿದಳು ಗೆಳತಿ. 

ಹಾಂ?!!! IAS ಹೌದು ಅಂತಾಳ. ಆದ್ರ Indian Administrative Service ಅಲ್ಲ ಅಂತಾಳ. ತಲಿ ಕೆಟ್ಟು ಹೋತು. ಟೈಮ್ ನೋಡಿದೆ. ಸೂಡ್ಲಿ ರಾತ್ರಿ ಒಂದು ಘಂಟೆ. ಎಲ್ಲೆ ಯಾವದರ ದೆವ್ವ ಕಂಪ್ಯೂಟರ್ ನಾಗ ಬಂದು ಕೂತು ಮಜಾಕ್ ಮಾಡ್ಲಿಕತ್ತದೋ ಅಂತ ಡೌಟ್ ಬಂತು. ಇಕಿ ಖರೇನೇ ನಮ್ಮ ಕ್ಲಾಸ್ಮೇಟ್ ಹುಡುಗಿ ಹೌದೋ ಅಲ್ಲೋ? ಮತ್ಯಾರರ ಫೇಕ್ ಫೇಸ್ಬುಕ್ ಪ್ರೊಫೈಲ್ ಹಾಕಿಕೊಂಡು ನಮ್ಮನ್ನ ಮಂಗ್ಯಾ ಮಾಡಲಿಕತ್ತಾರೇನು ಅಂತ ಡೌಟ್ ಬಂತು. ಇಕಿ ಇಕಿನೇ ಹೌದು ಅಂತ ಖಾತ್ರಿ ಮಾಡಿಕೋಬೇಕು. ಇಲ್ಲಂದ್ರ ಡೇಂಜರ್!

ನೀ PUC ಒಳಗ ದೇಶಪಾಂಡೆ ಗಣಿತಲೋಕಕ್ಕ ಟ್ಯೂಷನ್ ಬರ್ತಿದ್ದೀ ಅಲ್ಲಾ? - ಅಂತ ಕೇಳಿದೆ. ಅಕಿ ಅಲ್ಲೆ ಬರ್ತಿದ್ದಿಲ್ಲ. ಬ್ಯಾರೆ ಎಲ್ಲೋ ಹೋಗತಿದ್ದಳು. ನೋಡೋಣ ಅಂತ ಕೇಳಿದೆ. 

ಇಲ್ಲಪಾ ನಾವು ಬ್ಯಾರೆ ಕಡೆ ಹೋಗ್ತಿದ್ದಿವಿ. ಎಲ್ಲಾರೂ ಗಣಿತಲೋಕಕ್ಕೆ ಹೋದ್ರ ಬಾಕಿ ಟ್ಯೂಶನ್ ಮಾಸ್ತರ್ ಮಂದಿ ಏನು ಮಾಡಬೇಕು? - ಅಂತ ಕೇಳಿ ಎಲ್ಲೆ ಟ್ಯೂಶನ್ ಗೆ ಹೋಗತಿದ್ದಳು ಅಂತ ಹೇಳಿದಳು. ಉತ್ತರ ಕರೆಕ್ಟ್ ಇತ್ತು. ಇನ್ನೊಂದು ಪ್ರಶ್ನೆ ಕೇಳಿ ಮತ್ತೂ ಖಾತ್ರಿ ಮಾಡಿಕೊಂಡು ಬಿಡೋಣ ಅಂತ ಮಾಡಿದೆ. 

ನೀನು ಮಸ್ತ ಟೈಟ್ ಪ್ಯಾಂಟ್ ಬನಿಯನ್ ಹಾಕೊಂಡು ಕಾಲೇಜಿಗೆ ಬರ್ತಿದ್ದಿ ಹೌದಿಲ್ಲೋ? ಮಸ್ತ ಇತ್ತು ನಿನ್ನ ಡ್ರೆಸ್ ಮತ್ತ ಫ್ಯಾಷನ್ ಸೆನ್ಸ್, ಅಂತ ಒಂದು ಒಗದೆ. ಬೈಸಿಕೊಳ್ಳಲಿಕ್ಕೆ ತಯಾರ ಆದೆ. 

ಯಾಕ? ಎಷ್ಟು ಪೆಗ್ ಹಾಕ್ಕೊಂಡು ಕೂತಿ? ನಾ ನಿನಗ ಹ್ಯಾಂಗ ಕಾಣಲಿಕತ್ತೇನಿ?  ನಾ ಎಂದರೆ ಅಂತಾ ಅಸಡ್ಡಾಳ ಡ್ರೆಸ್ ಹಾಕ್ಕೋತ್ತೇನಿ ಏನು? ಹಾಂ? ಮತ್ತ ಅದೇನು ಬನಿಯನ್ ಅನ್ನೋದು? ಚಂದಾಗಿ ಟೀಶರ್ಟ್ ಅನ್ನಲಿಕ್ಕೆ ಏನು ಧಾಡಿ? ನಾನು ಕಾಲೇಜ್ ಒಳಗ ಯಾವಾಗಲೂ ಚೂಡಿದಾರ. ಅದೂ ಮತ್ತ ಮ್ಯಾಲೆ ಯಾವಾಗಲೂ ಧಪ್ಪನೆ ದುಪಟ್ಟಾ ವೇಲ್ ಸಹಿತ ಹಾಕ್ತಿದ್ದೆ. ಅದು ಬಿಟ್ಟರೆ ಬ್ಯಾರೆ ಡ್ರೆಸ್ ಇಲ್ಲ. ಅಂತಾ ಸಾಧು ಇದ್ದ ನನ್ನ ಕಡೆ ಅಸಹ್ಯ ಆಗಿ ಟೈಟ್ ಪ್ಯಾಂಟ್ ಮತ್ತ ಟೀಶರ್ಟ್ ಹಾಕ್ಕೊತ್ತಿದ್ದಿ ಅಂತ ಕೇಳಲಿಕ್ಕೆ ನಾಚಿಗಿ ಬರಂಗಿಲ್ಲ ನಿನಗ!? ಎಲ್ಲಿಂದ ಬರಬೇಕು? ನೀ ಎಲ್ಲಾ ಬಿಟ್ಟೀ ಅಂತ ಗೊತ್ತಿತ್ತು. ಅಂದ ಮ್ಯಾಲೆ ನಾಚಿಗಿ ಮೊದಲೇ ಬಿಟ್ಟಿರತಿ. ಹೌದಿಲ್ಲೋ? ಛೀ!! ಛೀ!! ಬನಿಯನ್ ಅಂತ ಬನಿಯನ್!!! ಸೊ ಸ್ಟುಪಿಡ್!!!!! - ಅಂತ ಹಾಕ್ಕೊಂಡು ಬೈದಳು. 

ಈಗ ಫುಲ್ ಖಾತ್ರಿ ಆತು. ಇಕಿ ನಮ್ಮ ಕ್ಲಾಸ್ಮೇಟ್ ಹುಡುಗಿ ಅಂತ. ಡೌಟ್ ಇಲ್ಲ. ಚೂಡಿದಾರ ಅದರ ಮ್ಯಾಲೆ ಕಂಬಳಿ ಅಂತಹ ದುಪಟ್ಟಾ. ಇಕಿ ಗ್ಯಾರಂಟಿ ನಮ್ಮ ಗೂಳವ್ವನೇ. ಕೋಯಿ ಶಕ್ ನಹಿ!!!

ಇಲ್ಲ.....ಸುಮ್ಮನೆ ಕೇಳಿ ಖಾತ್ರಿ ಮಾಡಿಕೊಂಡೆ. ಬಹಳ ವರ್ಷ ಆಗಿತ್ತು ನೋಡು ಅದಕ್ಕ. ನೀನು ನೀನ ತೊಗೋ, ಅಂತ ಹೇಳಿ ಸ್ವಲ್ಪ ಸಮಾಧಾನ ಮಾಡಿದೆ. 

ಓಕೆ!!!ಓಕೆ!!! ಅಂತ ಒಂದು ಸ್ಮೈಲೀ ಮೆಸೇಜ್ ಕಳಿಸಿದಳು. 

ಮತ್ತ IAS ವಿಷಯಕ್ಕೆ ಬರಬೇಕು. 

ಅಲ್ಲಾ ಸುಂದರಾ ಬಾಯಿ, IAS ಅಂತೀ. ಆದರ  Indian Administrative Service ಅಲ್ಲ ಅಂತೀ. ಮತ್ತ ಇದೆಂತಾ IAS ಮಾರಾಳಾ???!!!! - ಅಂತ ಕೇಳಿದೆ. 

ಇದು ಇಂಡಿಯನ್ ಅಡಿಗಿಮನಿ ಸರ್ವಿಸ್. ಅಂದ್ರ ನಾ ಹೌಸ್ ವೈಫ್ ಮಾರಾಯಾ! ಅದಕ್ಕೇ ಹೇಳಿದೆ ಏಕಾದಶಿ ಸ್ವಲ ರಜಾ ಅಂತ. ಏಕಾದಶಿ ದಿವಸ ನಾವು ದೊಡ್ಡವರು ಉಪವಾಸ ಫಳಾರ ಮಾಡ್ತೇವಿ. ಹಾಂಗಾಗಿ ಸ್ವಲ್ಪ ಕೆಲಸ ಕಮ್ಮಿ ಇರ್ತದ. ಅದಕ್ಕೇ ನಮ್ಮಂತಹ IAS ಆಫೀಸರ್ ಮಂದಿಗೆ ಅವತ್ತು ಒಂದು ದಿವಸ ಸ್ವಲ್ಪ ರಜಾ ಇದ್ದಂಗ. ಅದೂ ಪೂರ್ತಿ ಅಲ್ಲ ಮತ್ತ, ಅಂತ ಹೇಳಿದಳು. 

ಅದಕ್ಯಾಕ ಬರೇ ಹೌಸ್ ವೈಫ್ ಅಂತ ಹೇಳ್ತೀ? ಹೊರಗ ಹೋಗಿ ನೌಕರಿ ಮಾಡವರು ಭಾಳ ಮಂದಿ ಇರ್ತಾರ. ಎಲ್ಲಾ ಇದ್ದೂ, ಸಾಕಷ್ಟು ಕಲಿತೂ, ಫ್ಯಾಮಿಲಿ ಸಲುವಾಗಿ ಮನಿಯೊಳಗs ಇರ್ತೇನಿ ಅನ್ನೋರು ಭಾಳ ಕಮ್ಮಿ. ಅದಕ್ಕ ಹೌಸ್ ವೈಫ್ ಅಂದ್ರ ಸ್ವಲ್ಪ ಕಿಮ್ಮತ್ತು ಕಡಿಮೀ ಅಂತ ಹೋಂ ಮೇಕರ್ ಅಂತ ಹೊಸಾ ಬಿರದು ಕೊಟ್ಟಾರ. ಹೋಂ ಮೇಕರ್ ಇಲ್ಲ ಅಂದ್ರ ಅಷ್ಟ ಮತ್ತ. ಆ ಮನಿ ನೋಡೋ ಹಾಂಗ ಇರಂಗಿಲ್ಲ. ದೊಡ್ಡ ಪುಣ್ಯದ ಕೆಲಸ ಮಾರಾಳಾ ಇದು. ಇದೇ ಬೆಸ್ಟ್ ನೌಕರಿ ಏನವಾ. ಇದಕ್ಕ ಪಗಾರ್ ಕೊಡಲಿಕ್ಕೆ ಸಾಧ್ಯನs  ಇಲ್ಲ. ಏನು ಕೊಟ್ಟರೂ ಕಮ್ಮಿ, ಅಂತ ಹೇಳಿದೆ.

ಹಾಂಗ ಅಂತೀಯಾ? - ಅಂತ ಕೇಳಿದಳು. 

ಮತ್ತೇನಾ? ಒಂದು ದೊಡ್ಡ ಫ್ಯಾಮಿಲಿ ತೂಗಿಸಿಕೊಂಡು ಹೋಗೋದು, ಎಲ್ಲಾರ ಸೇವಾ ಮಾಡೋದು ಅಂದ್ರ ಕಮ್ಮಿ ಏನು? ಎಲ್ಲಾರಿಗೂ ಆ ನಸೀಬ್ ಎಲ್ಲೆ ಇರ್ತದ? ನಿನಗ ನಸೀಬನೂ ಅದ ಮತ್ತ ಹೋಂ ಮೇಕರ್ ಆಗೋ ಒಳ್ಳೆ ಬುದ್ಧಿನೂ ಅದ. ಏಕದಂ ಮಸ್ತ ಕಾಂಬಿನೇಶನ್. ಭಾಳ ಪುಣ್ಯದ ಕೆಲಸ ಬಿಡವಾ, ಅಂತ ಹೇಳಿದೆ. 

ಈ IAS ಅಂದ್ರ ಇಂಡಿಯನ್ ಅಡಿಗೆಮನೆ ಸರ್ವಿಸ್ ಇದು ಅತ್ಯಂತ ಶ್ರೇಷ್ಠ ನೌಕರಿ. ಇದಕ್ಕ ಬೆಲೆ ಕಟ್ಟಲಿಕ್ಕೆ ಸಾಧ್ಯನೇ ಇಲ್ಲ. ಹೊರಗ ಹೋಗಿ ನೌಕರಿ ಮಾಡಲಿಕ್ಕೆ ವಿದ್ಯಾ, ಬುದ್ಧಿ ಎಲ್ಲಾ ಇದ್ದರೂ ಕುಟುಂಬದ ಸಲುವಾಗಿ ಫುಲ್ ಟೈಮ್ ಹೋಂ ಮೇಕರ್ ಆಗಿರುವ ಮಹಿಳೆಯರಿಗೆ ಒಂದು ದೊಡ್ಡ ನಮೋ ನಮಃ!!

No comments: