Tuesday, October 08, 2013

ಒಂದೇ ಬಣ್ಣದ ಚಡ್ಡಿಗಳ ಕಥೆ....ವ್ಯಥೆ!

ಮೊನ್ನೆ ಚೀಪ್ಯಾನ ಮನಿಗೆ ಹೋಗಿದ್ದೆ. ರೂಪಾ ವೈನಿ ಇರಲಿಲ್ಲ.

ಎಲ್ಲೆ ಹೋಗ್ಯಾರಪಾ ರೂಪಾ ವೈನಿ? ಇದ್ದರ ಒಂದು ಕಪ್ ಚಹಾ ಆದರೂ ಸಿಗತಿತ್ತು, ಅಂತ ಚೀಪ್ಯಾನ ಕೇಳಿದೆ.

(ಚಹಾ) ಕುಡಕ ಸೂಳಿಮಗನs!!! ಬರೀ ಚಹಾದ ಮ್ಯಾಲೆ ಚಹಾ ಕುಡಿಯೋದು, ಒಂದರ ಮ್ಯಾಲೊಂದು ಚೀಟಿ ಹರದು ಹರದು ಗುಟಕಾ ಬಾಯಾಗ ತುಂಬಿಕೊಳ್ಳೋದು. ಇದು ಎರಡು ಬಿಟ್ಟು ಬ್ಯಾರೆ ಏನರೆ ಮಾಡ್ತೀ ಏನಲೇ ನೀನು? - ಅಂತ ಕೇಳಿ ಬಿಟ್ಟ ಮಂಗ್ಯಾ ಸೂಳಿಮಗ ನಮ್ಮ ಖಾಸ್ ದೋಸ್ತಾ! ಸೂಡ್ಲಿ ತಂದು!

ಲೇ.....ಮಂಗ್ಯಾನಿಕೆ ಚೀಪ್ಯಾ! ನಿನಗ ಚಹಾ ಸಹಿತ ಮಾಡಲಿಕ್ಕೆ ಬರೋದಿಲ್ಲ ಅಂತ ಗೊತ್ತ ಅದ ನನಗ. ಅದಕ್ಕ ನನಗ ಇಲ್ಲದ್ದು ಅದು ಇದು ಅಂತ ಹೇಳಲಿಕತ್ತಿ ನೀ. ನೀ ಏನು ಮಾಡೋದು ಬ್ಯಾಡ. ಅಡಗಿಮನಿಯೊಳಗ ಎಲ್ಲೆಲ್ಲೆ ಏನವ ಅನ್ನೋದನ್ನ ತೋರಿಸು. ನಾನೇ ಚಹಾ ಮಾಡಿ, ನಿನಗೂ ಕುಡಿಸಿ, ನಾನೂ ಕುಡಿತೇನಿ. ನಾ ಚಹಾ ಕುಡಕ ಹೌದು ನೋಡಪಾ. ತಾಸಿಗೆ ಎರಡು ಸರೆ ಚಹಾ ಆಗಲೇ ಬೇಕು. ಅಂದ್ರ ತಲಿ ಓಡತದ. ಇಲ್ಲಂದ್ರ ಇಲ್ಲ, ಅಂತ ಹೇಳಿದೆ.

ಅಡಿಗಿಮನಿಗೆ ಹೋಗಿ, ಬಾಳಿ ತೋಟದಾಗ ದಾಂಧಲೆ ಎಬ್ಬಿಸೋ ಮಂಗ್ಯಾಗೋಳ ಗತೆ ಫುಲ್ ರಾಡಿ ಎಬ್ಬಿಸಿ, ಗ್ಯಾಸ್ ಮ್ಯಾಲೆ ಸಕ್ಕರಿ ಚಲ್ಲಿ, ಸಕ್ಕರಿ ಸುಟ್ಟು, ಕೆಟ್ಟ ವಾಸನಿ ಎಬ್ಬಿಸಿ, ಅಂತೂ ಇಂತೂ ಎರಡು ಕಪ್ ಚಹಾದಂತಾ ಏನೋ ಒಂದು ತರಹದ ಸಿಹಿ ನೀರು ಮಾಡಿಕೊಂಡು ಕುಡದು ಹೊರಗ ಬಂದ್ವೀ.

ಹೊರಗ ಬಂದು, ಚೀಟಿ ಹರದ ಬಾಯಾಗ ಗುಟಕಾ ಹೆಟ್ಟಿಕೊಳ್ಳಬೇಕು ಅನ್ನೋದ್ರಾಗ ರೂಪಾ ವೈನಿ ಎಂಟ್ರೀ ಕೊಟ್ಟರು. ಹಿಂದ ಮುಂದ ಅವರ ಕನ್ಯಾರತ್ನಗಳಾದ ಕುಂತಿ ನಿಂತಿ  ಕಾಲ್ಕಾಲಾಗ ಅಡ್ಡ ಬಂದುಕೋತ್ತ, ಅವ್ವನ ಕಡೆ ಬೈಸೀಕೋತ್ತ ಬಂದವು. ಎಲ್ಲಾರೂ ಪ್ಯಾಟಿಗೆ ಹೋಗಿ ಏನೇನೋ ಖರೀದಿ ಮಾಡಿಕೊಂಡು ಬಂದ ಖುಶಿ ಒಳಗ ಇದ್ದರು.

ಹ್ಞೂ.....ತೊಗೊರೀ ನಿಮ್ಮುವು. ಫುಲ್ ಹಾಪ್ ಡಜನ್ ಅವ. ನೋಡ್ಕೊರೀ, ಅಂತ ಹೇಳಿಕೋತ್ತ ರೂಪಾ ವೈನಿ ಚೀಪ್ಯಾನ ಕೈಯಾಗ ಒಂದು ಪ್ಯಾಕೆಟ್ ತುರುಕಿದರು.

ಪ್ಯಾಕೆಟ್ ಒಳಗ ಏನು ಅದನೋ ಏನೋ?!

ಚೀಪ್ಯಾ ಪ್ಯಾಕೆಟ್ ಬಗ್ಗಿಸಿ, ಅಗಲ ಮಾಡಿ, ಅದರ ಒಳಗ ಕೈ ಹಾಕಿ, ಆ ಕಡೆ ಈ ಕಡೆ ಮಾಡಿ, ಕಣ್ಣು ಹತ್ತಿರ ತೊಗೊಂಡು ಹೋಗಿ ನೋಡಿ, ಹಾಂ!!!!!!! ಅಯ್ಯೋ!!! ಹೋಗ್ಗೋ!! , ಅಂತ ಹೈ ವೋಲ್ಟೇಜ್ ಶಾಕ್ ಹೊಡೆಸಿಕೊಂಡವರ ಹಾಂಗ ಚೀತ್ಕಾರ ಮಾಡಿದ.

ಆವಾ ಮಾಡಿದ ಚೀತ್ಕಾರಕ್ಕ ಎಲ್ಲಾರೂ ಬೆಚ್ಚಿ ಬಿದ್ದರು. ಬಾಜೂ ಮನಿ ಬೋಡ ತಲಿ ಕೆಂಪ ಮಡಿ ಸೀರಿ ಭಾಗೀರಥಿ ಬಾಯಾರು ಕೈಯಾಗ ತುಳಸಿ ತೀರ್ಥದ ತಾಮ್ರದ ಚಂಬು ಹಿಡಕೊಂಡು, ಜಪಮಾಲಿ ಮ್ಯಾಲೆ ಜಪಾ ಮಾಡಿಕೋತ್ತ, ರಾಯರ ಮಠಕ್ಕ ಹೊಂಟವರು ಚೀಪ್ಯಾ ಹಾಕಿದ ಚೀತ್ಕಾರಕ್ಕ ಎದಿ ಒಡದು ಹಾರ್ಟ್ ಅಟ್ಯಾಕ್ ಆದವರಾಂಗ ಎದಿ ಹಿಡಕೊಂಡು ಬಿದ್ದು ಕೂತರು. ಕೈಯ್ಯಾಗಿನ ತುಳಸಿ ತೀರ್ಥದ ತಂಬಿಗಿ ಟಣ್ ಟಣ್ ಸೌಂಡ್ ಮಾಡಿಕೋತ್ತ ಉರಳಿಕೋತ್ತ ಹೋತು.

ಪಾಪಿ ಮುಂಡೆ ಗಂಡಗ ಏನಾತ ರೂಪಾ? ಸಾಯೋ ಪರಿ ಹೊಯ್ಕೊಂಡ ಆ ಖೋಡಿ ನಿನ್ನ ಗಂಡ. ಆವಾ ಚೀರೋ ಪರಿ ಕೇಳಿ ನನ್ನ ಎದಿ ಧಸಕ್ಕ್ ಅಂತು, ಅಂತ ರೂಪಾ ವೈನಿಗೆ ಭಾಗೀರಥಿ ಬಾಯಾರು ಬೈದು ಕೇಳಿದರು.

ಮುತ್ತೈದಿ ಆದ ರೂಪಾ ವೈನಿಗೆ ಅಕಿ ಗಂಡ ಚೀಪ್ಯಾಗ ಈ ಬೋಡ ತಲಿ ಮುದುಕಿ ಮುಂಡೆ ಗಂಡ ಅಂದಿದ್ದು ಕಸಿವಿಸಿ ಆತು. ಆದರೂ ಅವೆಲ್ಲಾ ಬ್ರಾಹ್ಮರ ಬೈಗಳ. ಅವಕ್ಕೆಲ್ಲಾ ಏನೂ ಅರ್ಥ ಇರೋದಿಲ್ಲ ಅಂತ ಸುಧಾರಿಸ್ಕೊಂಡು ಕೆಟ್ಟ ಕಣ್ಣಿಲೆ ಚೀಪ್ಯಾನ ಕಡೆ ನೋಡಿದರು. ನೀವೇ ಹೇಳ್ರೀ ಅವರಿಗೆ. ಯಾಕ ಆ ಪರಿ ಚೀರಿದಿರಿ ಅಂತ, ಅನ್ನೋದನ್ನ ಮಾತಾಡದೇ ಹೇಳಿದರು ರೂಪಾ ವೈನಿ.

ಚೀಪ್ಯಾ ಏನೂ ಮಾತಾಡಲಿಲ್ಲ. ಮತ್ತ ಮತ್ತ ಕೈಯ್ಯಾಗ ಹೆಂಡ್ತಿ ಹಿಡಿಸಿದ ಪ್ಯಾಕೆಟ್ ನೋಡಿಕೋತ್ತ ಕೂತ.

ಏನು ಇದ್ದಿಯೋ ಪಾಪ ಮುಂಡೆ ಗಂಡ ಶ್ರೀಪಾದಾ? ನೋಡ್ಕೊಂಡು ಚೀರು. ಸಣ್ಣವ ಇದ್ದಾಗಿಂದ ಚೀರೋದು ಒಂದು ಮಸ್ತ ಕಲತೀ ನೋಡು. ಚೀರಿ ಚೀರೇ ಸಣ್ಣವ ಇದ್ದಾಗೇ ನಿಮ್ಮ ಅವ್ವನ್ನ ನುಂಗಿದ್ದಿ. ಈಗ ನನ್ನ ನುಂಗವಾ ಇದ್ದಿ ಏನು? ಹಾಂಗರೆ ಆಗಿ ಸಾವು ಬಂದರೆ ಸಾಕಪಾ. ದೇವರು ಕರೆಸಿಕೊಳ್ಳವಲ್ಲ,  ಅಂತ ಅನ್ಕೋತ್ತ ಮುದುಕಿ ಭಾಗೀರಥಿ ಬಾಯಾರು, ರಾಮಾ, ಕೃಷ್ಣಾ, ನನ್ನ ಸೊಂಟ ಹೋತೋ! ಗುರುವೇ ಸದ್ಗುರುವೇ! ಪರಮಾತ್ಮಾ! ಅಂತ ಹ್ಯಾಂಗೋ ಮಾಡಿ ಮ್ಯಾಲೆ ಎದ್ದು, ಸಾವರಿಸಿಕೊಂಡು, ಬಿದ್ದ ತಂಬಿಗಿ ಎತ್ತಿಕೊಂಡು, ತೀರ್ಥ ಎಲ್ಲಾ ಚೆಲ್ಲಿ ಹೋತೋ ಅಥವಾ ಉಳದದೋ ಅಂತ ನೋಡಿತು. ಪಾಪ ಏನೂ ತೀರ್ಥ ಉಳಿದಿರಲಿಲ್ಲ ಅಂತ ಅನ್ನಸ್ತದ. ಮತ್ತ ತುಳಸಿ ಎಲಿ ಹಾಕಿ ಹೊಸಾ ತುಳಸಿ ತೀರ್ಥ ಮಾಡಿಕೋಬೇಕಲ್ಲ ಅನ್ನೋ ಸಂಕಟ ಭಾಗೀರಥಿ ಬಾಯಾರ ಮಸಡಿ ಮ್ಯಾಲೆ ಮೂಡಿತು.

ಏನಿಲ್ಲರೀ ಭಾಗೂ ಮಾಂಶಿ. ತಪ್ಪಾತು. ಕ್ಷಮಾ ಮಾಡ್ರೀ, ಅಂತ ಚೀಪ್ಯಾ ಈ ಮುದುಕಿ ಹೋದ್ರ ಸಾಕು ಅನ್ನೋ ಹಾಂಗ ಹೇಳಿದ.

ಭಾಗೂ ಮಾಂಶಿ!!!!! ಅಲ್ಲಾ ಪಾಪ ನೆಡಿಲಿಕ್ಕೂ ತ್ರಾಸ ಪಡೋ ಮುದುಕಿಗೆ ಭಾಗೂ ಮಾಂಶಿ ಅಂತಾನ! ನಗು ಬಂತು! ಆದರ ಇಲ್ಲೆ ಭಾಗೂ ಅಂದ್ರ ಓಡೋದು ಅಲ್ಲ ಭಾಗೀರತಿ ಬಾಯಿ ಭಾಗೂ ಮಾಂಶಿ ಆಗ್ಯಾಳ ಅಷ್ಟ ಅಂತ.

ಭಾಗೀರಥಿ ಬಾಯಾರು ಆ ಕಡೆ ಹೋಗಿದ್ದ ಹೋಗಿದ್ದು ರೂಪಾ ವೈನಿ ಚೀಪ್ಯಾನ ಕೈ ತೊಗೊಂಡರು.

ಯಾಕ್ರೀ ಆ ಪರಿ ಚೀರಿದಿರಿ? ಏನು ಆತು? ಕೇಳಿದವರ ಎದಿ ಓಡಿಬೇಕು ಹಾಂಗ ಚೀರ್ತೀರಿ ನೋಡ್ರೀ! - ಅಂತ ವೈನಿ ಕೇಳಿದರು.

ಅಲ್ಲ...ಅಲ್ಲ...ಅದು ಅದು......ಅಂತ ಚೀಪ್ಯಾ as usual ತಡಬಡಿಸಿದ.

ಏನು?!! - ಅಂತ ರೂಪಾ ವೈನಿ ಪ್ರಶ್ನಾರ್ಥಕ ಚಿನ್ಹೆ ಹಾಕಿ ನಿಂತರು.

ಏನೋ ಮೀಯಾ ಬೀವಿ ನಡುವಿನ ಖಾಸಂ ಖಾಸ್ ಬಾತ್ ಅದ. ನಾ ದೋಸ್ತ್ ಬ್ಯಾರೆ ಇದ್ದೇನಿ. ನನ್ನ ಮುಂದ ಮಾತಾಡಲೋ ಬ್ಯಾಡೋ ಅಂತ ಚೀಪ್ಯಾ ಸ್ವಲ್ಪ hesitate ಮಾಡಿದ. ನನ್ನ ಮಾರಿ ನೋಡಿದ. ಹೆಂಡ್ತೀ ಮಾರಿ ನೋಡಿದ.

ಏನ್ ಪಿಕಿ ಪಿಕಿ ನೋಡ್ತೀರಿ? ಯಾರು? ಬ್ಯಾರೆ ಯಾರಿಲ್ಲ. ನಿಮ್ಮ ದೋಸ್ತ ಮತ್ತ ನನ್ನ ಪ್ರೀತಿ ಮೈದ್ನಾ ಮಂಗೇಶ ಇದ್ದಾನ.  ಅವನ ಮುಂದ ಏನು ನಿಮಗ ಹೇಳಲಿಕ್ಕೆ? ಹಾಂ? ಹೇಳ್ರೀ.... ಯಾಕ ಆ ಪರೀ ಚೀರಿ  ಎಲ್ಲಾರದ್ದೂ ಎದಿ ಒಡಿದಿರಿ ಅಂತ. ಏನು ಅಂಥಾದ್ದು ಆತು ಆ ಪ್ಯಾಕೆಟ್ ಒಳಗ ನೋಡಿದ ಕೂಡಲೇ? ಹೇಳ್ರೀ ನಿಮ್ಮಾ.....ಅ....ಆ..ಅ...- ಅಂತ ಹೇಳಿ ವೈನಿ ಚೀಪ್ಯಾಗ ಸರೀತ್ನಾಗಿ ಝಾಡಿಸೇ ಬಿಟ್ಟರು.

ಅಲ್ಲ...ಅಲ್ಲ..ಪ್ಯಾಕೆಟ್ ಒಳಗ ನೋಡಿದರ ಅರ್ಧಾ ಡಜನ್ ಅಂಡರ್ವೇರ್ ಚಡ್ಡಿ ತಂದಿ....ಆದ್ರಾ..... ಅಂತ ಚೀಪ್ಯಾ ಏನೋ ಆಕ್ಷೇಪಣೆ ಅದ ಅನ್ನೋವರಾಂಗ ನಿಲ್ಲಿಸಿದ.

ಹೌದು...ಬೇಕು ಅಂತ ನೀವಂತೂ ಹೇಳಲಿಲ್ಲ. ನೀವು  ಹೇಳೋದು ಏನು ಬಂತು? ನಾನೇ ನೋಡ್ತೇನಿ ಅಲ್ಲಾ. ನಿಮ್ಮ ಎಲ್ಲಾ ಚಡ್ಡಿ ಹರದು ಹರದು ಮಚ್ಚರದಾನಿ ಹಾಂಗ ಜಾಳಗಿ ಜಾಳಗಿ ಆಗಿ ಬಿಟ್ಟಾವ. ಎಲ್ಲರೆ ಧೋತ್ರದ ಮರಿಯೊಳಗ ನಿಮ್ಮ ಚಡ್ಡಿ ದರ್ಶನ ಆತು ಅಂದ್ರ ಮಚ್ಚರದಾನಿ ಒಳಗಿನ ಗುಂಗಾಡು ಕಂಡಂಗ ಎಲ್ಲಾರಿಗೂ ಎಲ್ಲಾದರ ಧರ್ಮ ಧರ್ಶನ ಆಗಿ ಬಿಡತದ. ನಿಮಗಂತೂ ಖಬರ್ ಇರಂಗಿಲ್ಲ. ಹೀಂಗs ಹರಕಾ ಪರಕಾ ತೂತು ಬಿದ್ದ ಚಡ್ಡಿ ಹಾಕ್ಕೊಂಡೇ ಪೂಜಾಕ್ಕ ಕೂತೆ, ಮುತ್ತೈದೆಯರ ಮುಂದ ಹೋಗಿ ಪ್ರಸಾದ ಕೊಟ್ಟೆ, ಅದನ್ನು ಮಾಡಿದೆ ಇದನ್ನು ಮಾಡಿದೆ ಮಾಡ್ತೀರಿ. ನನಗೇ ನಾಚಿಗಿ ಬರ್ತದ. ಅದಕ್ಕೆ ಧರ್ಮ ಪತ್ನಿಯಾದ ನನ್ನ ಧರ್ಮಕ್ಕ ಕರ್ಮಕ್ಕ ನಾನೇ ನೋಡಿ, ಇನ್ನೂ ಹೀಂಗ ಬಿಟ್ಟರ ಮತ್ತೂ ದೊಡ್ಡ ದೊಡ್ಡ ತೂತು ಬಿದ್ದು ಏನೇನೋ ಹೊರಗ ಬಂದು ಭುಸ್ ಭುಸ್ ಅಂದಾವು ಅಂತ ಹೇಳಿ ಒಂದು ಅರ್ಧಾ ಡಜನ್  ತಂದು ಬಿಟ್ಟೆ. ಸೋವಿ ಒಳಗ ಸಿಕ್ಕಿತು. ಇನ್ನು ಐದು ವರ್ಷ ಅಂಡರ್ವೇರ್ ಚಡ್ಡಿ ಬೇಕು ಅಂತ ಕೇಳಬಾರದು ನೋಡ್ರೀ ಮತ್ತ, ಅಂತ ಹೇಳಿ ರೂಪಾ ವೈನಿ ಚೀಪ್ಯಾನ ಶಿಥಿಲವಾಗಿದ್ದ ಶಿಲಾಯುಗದ ಕಾಲದ ಅಂಡರ್ವೇರ್ ಚಡ್ಡಿಗಳನ್ನು ಬದಲಾಯಿಸಲಿಕ್ಕೆ ಬ್ಯಾರೆ ಚಡ್ಡಿ ತಂದು ಕೊಟ್ಟರು ಅಂತ ಹೇಳಿದ್ರು.

ರೂಪಾ.....ರೂಪಾ....ಹಳೆ ಚಡ್ಡಿ ಭಾಳ ಏನೂ ಹಳೇವು ಆಗಿದ್ದಿಲ್ಲ ಬಿಡು. ಏನೋ ಅಲ್ಲಲ್ಲೆ ಸ್ವಲ್ಪ ಸಣ್ಣು ಸಣ್ಣು ತೂತು ಬಿದ್ದಂಗ ಬಿದ್ದಿದ್ದವು. ಡಾಂಬರ್ ಗುಳಿಗಿ ಹಾಕಿ ಇಟ್ಟಿದ್ದರ ಆಗ್ತಿತ್ತು, ಅಂತ ಚೀಪ್ಯಾ ಇಷ್ಟೆಲ್ಲಾ ರೊಕ್ಕಾ ಖರ್ಚು ಮಾಡಿ ಅರ್ಧಾ ಡಜನ್ ಗಟ್ಟಲೆ ಚಡ್ಡಿ ತರೋದರ ಬದಲೀ ಒಂದಿಷ್ಟು ಡಾಂಬರ್ ಗುಳಿಗಿ ತಂದು ಚಡ್ಡಿ ಆ ಕೆಟ್ಟ ವಾಸನಿ ಗುಳಿಗಿ ಮ್ಯಾಲೆ ಒಗದು ಬಿಟ್ಟಿದ್ದರ ಜೊಂಡಿಗ್ಯಾ, ಜಿರಲಿ, ಜರಿ ಅದು ಇದು ಹುಳ ಹಪ್ಪಡಿ ಕಡದು ತೂತು ಬಿಳೋದು ಕಮ್ಮಿ ಆಗ್ತಿತ್ತು ಅಂತ ಲೆಕ್ಕ ಹಾಕಿದ. ನಾವೆಲ್ಲಾ ಮಿಡ್ಲ್ ಕ್ಲಾಸ್ ಮಂದಿ ನೋಡ್ರೀ. ಹೀಂಗ ಸ್ವಲ ಸೇವಿಂಗ್ ಬಗ್ಗೆ ವಿಚಾರ ಮಾಡಲಿಲ್ಲ ಅಂದ್ರ ತಿಂಗಳದ ಕೊನಿಯಾಗ ಕೈಯಾಗ ಬರೆ ಠಣ್ ಠಣ್ ಗೋಪಾಲ ನೋಡ್ರೀ.

ಬ್ಯಾಡರಿಪಾ ಬ್ಯಾಡ! ನಿಮಗ ದೊಡ್ಡ ನಮಸ್ಕಾರ! ಆ ಡಾಂಬರ್ ಗುಳಿಗಿ ಮಾತ್ರ ನಿಮ್ಮ ಚಡ್ಡಿ ಸುತ್ತಾ ಮುತ್ತಾ ನಾ ಇಡಾಕಿ ಅಲ್ಲ.
ನೀವೇನೋ ಆ ಕೆಟ್ಟ ವಾಸನಿ ಚಡ್ಡಿ ಹಾಕ್ಕೊಂಡು ದಿನಾ ಪೂರ್ತಿ ಅಲ್ಲೆ ಇಲ್ಲೆ ಅಡ್ಯಾಡಿ ಬಿಡ್ತೀರಿ. ರಾತ್ರಿ ನನ್ನ ಪರಿಸ್ಥಿತಿ ಅಂದ್ರ.....ಅಂದ್ರ....ಅಂದ್ರ  - ಅಂತ ವೈನಿ ಮಾತು ಅರ್ಧಾಕ್ಕೆ ನಿಲ್ಲಿಸಿ ಬಿಟ್ಟರು. ಚೀಪ್ಯಾ ಮೀಸಿ ಕೆಳಗೇ ನಕ್ಕು ಕಿಡಿಗೇಡಿ ಹಾಂಗ ರೂಪಾ ವೈನಿ ಕಡೆ ನೋಡಿದ. ಇಬ್ಬರೂ ಏನೋ ಕೇವಲ ಪತಿ ಪತ್ನಿಯರಿಗೆ ಮಾತ್ರ ತಿಳಿಯೋ ಸಿಗ್ನಲ್ ಕೊಟ್ಟುಗೊಂಡು ಏನೇನೋ ಅರ್ಥ ಕಂಡುಕೊಂಡು ನಕ್ಕರು. ಏನೋ ಏನೋ! ಯಾರಿಗೆ ಗೊತ್ತು?

ಅಲ್ಲರೀ ವೈನಿ.....ಚೀಪ್ಯಾ ಹೇಳಿದ್ರಾಗ ಏನು ತಪ್ಪದ? ಅವನ ಅಂಡರ್ವೇರ್ ಚಡ್ಡಿ ಡಾಂಬರ್ ಗುಳಿಗಿ ವಾಸನಿ ಹೊಡದರ ನಿಮಗೇನ್ರೀ? ನೀವೇನು ಅವನ ಚಡ್ಡಿ ಒಗಿತೀರಿ ಏನು? ಇಲ್ಲ. ಅವನೇ ಒಕ್ಕೊತ್ತಾನ ಇಲ್ಲ ಹೆಚ್ಚಂದ್ರ ಬೂಬುಗ ಹಾಕ್ತಾನ. ಹಾಂಗಿದ್ದಾಗ ಅವನ ಚಡ್ಡಿ ಡಾಂಬರ್ ಗುಳಿಗಿ ವಾಸನಿ ಹೊಡೆದರ ನಿಮಗೇನ್ರೀ? - ಅಂತ ಕೇಳಿಬಿಟ್ಟೆ. ರೊಕ್ಕಾ ಉಳಸೋಣ ಅನ್ನೋ ನಮ್ಮ ದೋಸ್ತನ ಐಡಿಯಾ ಈ ವೈನಿ ಹೀಂಗ ತೆಗೆದು ಹಾಕಿದ್ದು ಸೇರಲಿಲ್ಲ ಬಿಡ್ರೀ.

ಗಪ್ಪ ಕೂಡೋ ಮಂಗೇಶ್! ನಿನಗೆಲ್ಲಾ ಅವು ತಿಳಿಯಂಗಿಲ್ಲ - ಅಂತ ಚೀಪ್ಯಾ, ರೂಪಾ ವೈನಿ ಇಬ್ಬರೂ ಹೊಯ್ಕೊಂಡರು. ಇಬ್ಬರೂ ತುಂಟ ನಗೆ ನಕ್ಕಿದ್ದು ನಾ ಮಿಸ್ ಮಾಡಲಿಲ್ಲ ಬಿಡ್ರೀ. ಏನೋ ಅದ ಬಿಡ್ರೀ! ;)

ಇಬ್ಬರೂ ಕೂಡೆ ಗಪ್ಪ್ ಕೂಡೋ ಅಂತ ಆಜ್ಞಾ ಮಾಡ್ಲೀಕತ್ತಾರ ಅಂದ್ರ ಗಪ್ಪ್ ಕೂಡೋದೇ ಒಳ್ಳೇದು ಅಂತ ಗಪ್ಪ್ ಆದೆ. ಆದರೂ ಗಂಡನ ಚಡ್ಡಿ ಡಾಂಬರ್ ಗುಳಿಗಿ ವಾಸನಿ ಆದ್ರ ಹೆಂಡತಿಗೇನು ತಾಪತ್ರಯ ಅಂತ ಇನ್ನೂ ತಿಳಿಲಿಲ್ಲ.

ಶ್ರೀಪಾದ ರಾವ್!! ಈಗರ ಹೇಳ್ರೀ. ನಾ ತಂದ ಅರ್ಧಾ ಡಜನ್ ಚಡ್ಡಿ ನೋಡಿದ ಕೂಡಲೇ ಯಾಕ ಹಾಂಗ ಚಿಟ್ಟಂತ ಚೀರಿಕೊಂಡು ಎಲ್ಲಾರ ಎದಿ ಒಡಿದಿರಿ ಅಂತ. ಹೇಳ್ರೀ! ಹೇಳ್ರೀ! - ಅಂತ ರೂಪಾ ವೈನಿ ಒರಿಜಿನಲ್ ಟಾಪಿಕ್ ಗೆ ಬಂದ್ರು.

ಮತ್ತೇನಾ ರೂಪಾ?! ತರೋದು ತಂದಿ ಅರ್ಧಾ ಡಜನ್ ಚಡ್ಡಿ. ಎಲ್ಲಾ ಒಂದೇ ಬಣ್ಣದ್ದು ತಂದು ಬಿಟ್ಟಿಯಲ್ಲಾ! ಹೀಂಗ ಮಾಡೋದು ಏನು? ಹಾಂ? - ಅಂತ ಚೀಪ್ಯಾ ಹೇಳಿದ.

ಹಾಂ! - ರೂಪಾ ವೈನಿ ಒಂದು ಕ್ಷಣ ಆವಾಕ್ಕ ಆಗಿ ಥಂಡಾ ಹೊಡೆದರು.

ಏನ್ರೀ!!???? ನಿಮ್ಮಂತ ಕಾಮಣ್ಣಗ ಕಾಮನಬಿಲ್ಲಿನ ಏಳು ಬಣ್ಣದ ಹಾಂಗ ಏಳು ಬ್ಯಾರೆ ಬ್ಯಾರೆ ಬಣ್ಣದ ಚಡ್ಡಿ ತಂದು ಕೊಡಬೇಕಾಗಿತ್ತೇನು? ರೀ....ಒಂದು ನೆನಪ ಇರಲೀ.....ನೀವೇನು ಸೂಪರ್ ಮ್ಯಾನ್ ಅಥವಾ ಸ್ಪೈಡರ್ ಮ್ಯಾನ್ ಅಲ್ಲ. ತಿಳೀತ? ಹಾಂ? ಹಾಂ? - ಅಂತ ದಭಾಯಿಸಿದರು ವೈನಿ.

ಒಂದೇ ಬಣ್ಣದ ಚಡ್ಡಿಗೆ ಮತ್ತ ಆ ಸೂಪರ್ ಮ್ಯಾನ್ ಗೆ ಸ್ಪೈಡೆರ್  ಮ್ಯಾನ್ ಗೆ ಏನು ಸಂಬಂಧನೇ ರೂಪಾ? - ಅಂತ ಹೈರಾಣ ಆಗಿ ಚೀಪ್ಯಾ ಕೇಳಿದ.

ರೀ.....ಶ್ರೀಪಾದ್ ರಾವ್.....ಆವಾ ಸೂಪರ್ ಮ್ಯಾನ್ ಆವಾ ಸ್ಪೈಡರ್ ಮ್ಯಾನ್ ಎಲ್ಲಾ ಚಡ್ಡಿ ಪ್ಯಾಂಟ್ ಹೊರಗ ಹಾಕ್ಕೊತ್ತಾರ. ಹಾಂಗಾಗಿ ಅವರಿಗೆ ಬ್ಯಾರೆ ಬ್ಯಾರೆ ಬಣ್ಣದ ಚಡ್ಡಿ ಬೇಕು ಅಂದ್ರ ಓಕೆ. ನಾವೆಲ್ಲಾ ಒಳಗ ಹಾಕ್ಕೋತ್ತೇವಿ ನೋಡ್ರೀ ಹಾಂಗಾಗಿ ನಮಗ ಒಂದೇ ಬಣ್ಣದ್ದು ಓಕೆ. ತಿಳೀತ ನಿಮ್ಮ ಧಡ್ಡ ತಲಿಗೆ ಈಗ? ಹಾಂ? ಹಾಂ? - ಅಂತ ಕೇಳಿದರು ವೈನೀ.

ಏನ್ರೀ ವೈನಿ? ಏನು ಸೂಪರ್ ಏನು ಸ್ಪೈಡೆರ್? ಮಜಾ ಅದಲ್ಲರೀ! ಹಾಂ? - ಅಂತ ಕೇಳಿದೆ.

ಮಂಗೇಶ ಮಾಮಾ.....ಸೂಪರ್ ಮ್ಯಾನ್, ಊಪರ್ ಚಡ್ಡಿ...ಏ ಮ್ಯಾನ್ ತೋ ಏಕದಂ ಸೂಪರ್ ಹೈ ಕ್ಯೂಂಕಿ ಇಸ್ಕಿ ಚಡ್ಡಿ ಇಸ್ಕಿ ಪ್ಯಾಂಟ್ ಕೆ ಊಪರ್ ಹೈ....ಅಂತ ಚೀಪ್ಯಾನ ಸಣ್ಣ ಹುಡುಗಿ ನಿಂತಿ ಹೇಳಿದಳು. ಏನ ಜೋರ್ ಅದ ಈ ಹುಡುಗಿ! ಕೆಟ್ಟ ಹುಡುಗಿ ಈಗೇ ಎಲ್ಲಾ ಕಲ್ತು ಬಿಟ್ಟದ.ಹ್ಞೂ....ಈಗ ಹೇಳ್ರೀ ಶ್ರೀಪಾದ ರಾವ್....ಹೇಳ್ರೀ.....ಒಂದೇ ಬಣ್ಣದ ಆರು ಚಡ್ಡಿ ತಂದ್ರ ನಿಮಗ ಏನು ತೊಂದ್ರೀ ಆತು ಅಂತ? ಹಾಂ? ಹಾಂ? - ಅಂತ ರೂಪಾ ವೈನಿ ಮೊದಲಿನ ವಿಷಯಕ್ಕೇ ಬಂದರು. ಹಂಗೆಲ್ಲಾ ಬಿಡೊ ಪೈಕಿ ಅಲ್ಲ ಅವರು.

ಅಲ್ಲ ರೂಪಾ....ನಾ ಒಂದೇ ಬಣ್ಣದ ಚಡ್ಡಿ ಹಾಕ್ಕೊಳ್ಳೋದು ನೋಡಿದ ಬ್ಯಾರೆ ಮಂದಿ ಇವಾ ಚಡ್ಡಿ ಬದಲೇ ಮಾಡೋದಿಲ್ಲ. ಹೇಶಿ ಮಂಗ್ಯಾನ ಮಗ. ದಿನಾ ಚಡ್ಡಿ ಬದಲು ಮಾಡದ ಹೇಶಿ. ಈ ಹೇಶಿನ ಹೀಂಗ ಅಂದ ಮ್ಯಾಲೆ ಇನ್ನು 'ಹೇಶಿ ಮನಿ ದ್ವಾಶಿ' ಹ್ಯಾಂಗೋ?! ಮ್ಯಾಲಿಂದ ನೋಡಿದರ ರಿಗ್ವೇದಿ ಬ್ರಾಹ್ಮಣ ಅದು ಇದು ಅಂತ ಹೇಳಿಕೋತ್ತ ಅಡ್ಯಾಡತಾನ. ಚಡ್ಡಿ ಬದಲು ಮಾಡದ ಬರಬಾರದ ರೋಗ ಬಂದು ರೋಗ್ವೇದಿ ಬ್ರಾಹ್ಮಣ ಅಂದಾರು. ಅದಕ್ಕ ಕೇಳಿದೆ ಯಾಕ ಒಂದೇ ಬಣ್ಣದ ಚಡ್ಡಿ ತೊಗೊಂಡು ಬಂದೀ ಅಂತ? ತಿಳೀತ? - ಅಂತ ಕೇಳಿದ ಚೀಪ್ಯಾ. ತನ್ನ ಚೀರಾಣಕ್ಕ ಫುಲ್ ವಿವರಣೆ ಕೊಟ್ಟ.

ಘಾತ ಮಾಡಿಕೊಂಡ! ಚೀಪ್ಯಾ ಅನಾಹುತ ಮಾಡಿಕೊಂಡ!

ವೈನಿ ಒಮ್ಮೆಲೇ ಗಾಯಗೊಂಡ ಸಿಂಹಿಣಿ ಹಾಂಗ ಹೂಂಕಾರ ಹಾಕಿದರು.

ಏನಂದ್ರೀ???!!!! ಇನ್ನೊಮ್ಮೆ ಹೇಳ್ರೀ!!! ಹೇಳ್ರೀ!!! - ಅಂತ ಇಲ್ಲದ ಹೂಂಕಾರ ಹಾಕಿದರು ರೂಪಾ ವೈನಿ.

ಅವರು ಹಾಕಿದ ಎಕ್ಸಟ್ರಾ ಸ್ಟ್ರಾಂಗ್ ಹೂಂಕಾರದಿಂದ ಚೀಪ್ಯಾ ಇನ್ನೂ ಸ್ವಲ್ಪ ಜಾಸ್ತಿನೇ ಘಾಬರಿ ಆದ. ತಾನು ಮೊದಲು ಮಾಡಿಕೊಂಡ ತಪ್ಪಿನ ಅರಿವು ಆಗಲೇ ಇಲ್ಲ. ಅರಿವೇ ಗುರು. ಅರಿವೇ ಇಲ್ಲದಿದ್ದ ಮ್ಯಾಲೆ ಗುರು ಎಲ್ಲಿಂದ. ಗುರು ಹಾಳಾಗಿ ಹೋಗಲಿ ಬಿಡ್ರೀ. ಮುಂದ ಗುರ್ರ್ ಅನಕೋತ್ತ ಧರ್ಮಪತ್ನಿ ನಿಂತಾಳ. ಕರ್ಮ! ಕರ್ಮ!

ಅದೇ.....ದಿನಾ ಒಂದೇ ಬಣ್ಣದ ಚಡ್ಡಿ ಹಾಕಿಕೊಂಡರ 'ನೋಡಿದವರು' ಇವಾ ಚಡ್ಡಿ ಬದಲು ಮಾಡೋದೇ ಇಲ್ಲ. ಹೇಶಿ ಅಂತಾರ ಅಂತ ಹೇಳಿದೆ ರೂಪಾ. ಏನು ತಪ್ಪು ಅಂದೆ? - ಅಂತ ಫುಲ್ ಇನ್ನೊಂಸೆಂಟ್ ಆಗಿ ಕೇಳಿದ ಚೀಪ್ಯಾ.

ಇದನ್ನು ಕೇಳಿದ ರೂಪಾ ವೈನಿ ಈ ಸಾರೆ ಸಿಟ್ಟಿನಿಂದ ಸೀದಾ ಚಾವಣಿಗೆ ಹೋಗಿ ಡಿಕ್ಕಿ ಹೊಡೆದರು. Hit the ceiling ಅಂತಾರಲ್ಲ ಹಾಂಗ.

ನನ್ನ ಬಿಟ್ಟು ನಿಮ್ಮಅಂಡರ್ವೇರ್ ಚಡ್ಡಿ ಬ್ಯಾರೆ ಯಾರ್ರೀ ನೋಡತಾರ? ಯಾರನ್ನ ಇಟಗೊಂಡೀರೀ ಹೇಳ್ರೀ? ಯಾರ ಅಕಿ ನನ್ನ ಸವತಿ?ಹಾಂ? ಹಾಂ? - ಅನಕೋತ್ತ ರೂಪಾ ವೈನಿ ಬಂದವರೇ ಚೀಪ್ಯಾನ ಎದಿ ಮ್ಯಾಲೆ ದಬಾ ದಬಾ ಗುದ್ದಿಕೋತ್ತ, ಹೇಳ್ರೀ ಹೇಳ್ರೀ ಯಾರನ್ನ ಇಟಗೊಂಡೀರೀ ಅಂತ. ಹೇಳಿ ಸಾಯರಿ(?).  ಕೇಳಿ ನಾನೇ ಸತ್ತು ಹೋಗ್ತೀನಿ. ಅಕಿಗೇ ನಿಮ್ಮ ಚಡ್ಡಿ ಮತ್ತೊಂದು ತೋರಿಸಿಕೊಂಡು ಆರಾಮ್ ಇರ್ರೀ. ನನಗ ಎಂತೆಂತಾ ವರಾ ಬಂದಿದ್ದವು. ಎಲ್ಲಾ ಅಮೇರಿಕಾ ಇಂಗ್ಲಂಡ ಆ ಲಂಡ್ ಈ ಲಂಡ್ ಅನ್ನೋ ದೇಶದ ಚೊಲೋ ಚೊಲೋ ವರಗಳು. ಎಲ್ಲಾ ಬಿಟ್ಟು ನಿಮ್ಮನ್ನ ಮಾಡಿಕೊಂಡು ಕೂತೆ. ಎರಡು ಮಕ್ಕಳಾ ಮಾಡಿದ ಮ್ಯಾಲ ಈಗ ಬ್ಯಾರೆ ಅಕಿಗೆ ಚಡ್ಡಿ ತೋರಿಸಲಿಕ್ಕೆ ಹೊಂಟೀರಲ್ಲ?! ಅಕಿ ನೋಡ್ತಾಳ ಅಂತ ಬ್ಯಾರೆ ಬ್ಯಾರೆ ಬಣ್ಣದ ಚಡ್ಡಿ ಬೇಕು ಅಂತೀರಲ್ಲ, ಅಂತ ಅನ್ನೋದ್ರಾಗ ರೂಪಾ ವೈನಿ ಕಣ್ಣಾಗ ಗಂಗಾ, ಯಮುನಾ, ಸರಸ್ವತೀ, ಕಾವೇರಿ, ಘಟಪ್ರಭಾ, ಮಲಪ್ರಭಾ ಎಲ್ಲಾ ನದಿಗಳು ಹರಿಲಿಕ್ಕೆ ಶುರು ಆದವು. ತನ್ನ ಗಂಡನ ಚಡ್ಡಿ ಇನ್ನೊಬ್ಬಾಕಿ ನೋಡಿರಬಹುದು ಎಂದು ಊಹಾ ಮಾಡಿಕೊಂಡು ಆದ ಶಾಕ್ ಒಳಗ ಚೀಪ್ಯಾನ ಎದಿ ಮ್ಯಾಲೆ ದಬಾ ದಬಾ ಗುದ್ದಲಿಕತ್ತಿದ್ದ ರೂಪಾ ವೈನಿ ಕೈ ತೆಗಿಯದೆ ಹಾಂಗೆ ಕೈ ಚೀಪ್ಯಾನ ಅಂಗಿ ಮ್ಯಾಲೆ ಕೆಳಗ ಎಳಕೋತ್ತ ಕುಸಿದು ಬಿದ್ದರು. ರೂಪಾ ವೈನಿ ದೊಡ್ಡ ಗಾತ್ರದ ಬಾಡಿ ಆ ರೀತಿಯೊಳಗ ಕುಸಿದು ಬೀಳೂವಾಗ ಚೀಪ್ಯಾನ ಅಂಗಿಯ ಅಷ್ಟೂ ಗುಂಡಿ ಪಟ್ ಪಟ್ ಅಂತ ಹರಿದು ಹೋದವು. ಇನ್ನು ಗುಂಡಿ ಬ್ಯಾರೆ ಹಚ್ಚಿಸಿಕೊಳ್ಳೋ ಗಂಡಾ ಗುಂಡಿ ಕೆಲಸ ಪಾಪ ಚೀಪ್ಯಾಗ. ಹೋಗ್ಗೋ. ಕುಸಿದು ಬೀಳುತ್ತಿದ್ದ ವೈನಿ ಕೈಯಾಗ ಲುಂಗಿ ಸಿಕ್ಕು, ಅದೂ ಸಹಿತ ಕಳೆದು ಹೋದೀತು ಅಂತ ಹೆದರಿದ ಚೀಪ್ಯಾ ಹಿಂದ ಜಿಗಿದ. ರೂಪಾ ವೈನಿಗೆ ಇವಾ ಹೀಂಗ ಜಿಗಿದು ಹಿಂದ ಸರಿಯೋದು ನೋಡಿ ಈವಾ ಚೀಪ್ಯಾ ರೂಪಾ ವೈನಿನೇ ನೋಡಿ ಅಸಹ್ಯದಿಂದ ದೂರ ಸರಿಲಿಕತ್ತಾನ ಅಂತ ಅನ್ನಿಸಿ ಅವರು ಇನ್ನೂ ಜೋರಾಗಿ ಗೊಳೋ ಅಂತ ಅಳಲಿಕತ್ತರು.

ಚೀಪ್ಯಾಗ ಈಗ ಜ್ಞಾನೋದಯ ಆತು. ತಾನು ಏನೋ ಮಾತಿಗೆ ಒಂದೇ ಬಣ್ಣದ ಚಡ್ಡಿ ನೋಡಿದವರು ತಪ್ಪು ತಿಳ್ಕೋತ್ತಾರ ಅಂತ ಹೇಳಿದ್ದು ಎಷ್ಟು ತಪ್ಪು ಕಲ್ಪನಾ ಕೊಡಬಹುದು ಹೆಂಡತಿಗೆ ಅಂತ ತಿಳಿದು ತಲಿ ತಲಿ ಚಚ್ಚಿಕೊಂಡ. ಗಂಡನ ಚಡ್ಡಿ ತನ್ನ ಬಿಟ್ಟು ಬ್ಯಾರೆ ಯಾರೂ ನೋಡಬಾರದು ಅನ್ನೋದು ಎಲ್ಲಾ ಹೆಂಡತಿಯರ ದೊಡ್ಡ ಆಶಾ ಇರ್ತದ. ಮತ್ತ ಅದು ಎಲ್ಲರೆ ಬ್ಯಾರೆ ಯಾರರ ನೋಡಿಬಿಟ್ಟರು ಅಂದ್ರ ಅವರಿಗೆ ತಲಿಯೊಳಗ ಇಲ್ಲದ ಹಾಳುವರಿ ವಿಚಾರ ಬಂದು ಅವರಿಗೆ ಏನೇನೋ ಸಂಶಯ ಬಂದು ಬಿಡ್ತದ ಅಂತ.

ರೂಪಾ......ರೂಪಾ.....ಏನ ನೀನು? ನಾ ಏನೋ ಮಾತಿಗೆ ನನ್ನ ಒಂದೇ ಬಣ್ಣದ ಚಡ್ಡಿಗಳನ್ನ ಯಾರೋ ನೋಡ್ತಾರ ಅಂದ್ರ ನೀ ಯಾರೋ ಬ್ಯಾರೆ ಹೆಂಗಸೇ ನೋಡತಾಳ ಅಂತ ಏನೇನೋ ಊಹಾ ಮಾಡಿಕೊಂಡು, ನಾ ನಿನ್ನ ಬಿಟ್ಟು ಯಾರನ್ನರೆ ಇಟ್ಟುಕೊಂಡೇನೀ ಅಂತ ಏನೇನೋ ತಪ್ಪತಪ್ಪ ವಿಚಾರ ಮಾಡಿ, ಏನೇನೋ ತಲಿಗೆ ಹಚ್ಚಿಗೊಂಡು, ಅಳಕೋತ್ತ ಕೂತಿ ನೋಡು. ಅಳೋದು ನಿಲ್ಲಿಸಿ ಸ್ವಲ್ಪ ನಗು ನೋಡೋಣ? ಒಂದೇ ಬಣ್ಣದ ಚಡ್ಡಿ ಇದ್ದರ ಏನಾತು? ನಾ ಮ್ಯಾಲಿಂದ ಪ್ಯಾಂಟ್ ಹಾಕ್ಕೊತ್ತೇನಿ. ಯಾರಿಗೂ ಒಳಗಿಂದು ಒಂದೇ ಬಣ್ಣದ ಚಡ್ಡಿ ಅಂತ ಗೊತ್ತಾಗೋದೇ ಇಲ್ಲ. ಏಳೇಳು. ಹೀಂಗೆಲ್ಲಾ ತಲಿ ಕೆಡಿಸ್ಕೊಂಡು, ಮನಸ್ಸು ಕೆಡಿಸ್ಕೋಬ್ಯಾಡ, ಅಂತ ಚೀಪ್ಯಾ ಏನೇನೋ ಸಮಾಧಾನ ಮಾಡಲಿಕ್ಕೆ ನೋಡಿದ.

ವೈನಿ ಇನ್ನೂ ಸ್ವಲ್ಪ ಬಿಕ್ಕಿ ಬಿಕ್ಕಿ ಅಳಕೋತ್ತನ ಸೀರಿ ಸೆರಗೀಲೇ ಕಣ್ಣು ಒರಸಿಕೊಂಡರು. ಜೋರಾಗಿ ಮೂಗು ಬ್ಯಾರೆ ಸೇದಿ ಬಿಟ್ಟರು. ಇಷ್!

ಏನೋ ಜಗಳಾ ಮುಗೀತು ಅನ್ನೋದ್ರಾಗ ದೊಡ್ಡ ಹುಡುಗಿ ಕುಂತಿ ಬತ್ತಿ ಇಟ್ಟಳು.

ಅಣ್ಣಾ....ನಿಮ್ಮ ಚಡ್ಡಿ ಎಲ್ಲಾ ಬೂಬು ಒಗಿತಾಳ. ಅಕಿಗೆ ಅನ್ನಿಸಬಹುದು ನೀವು ಚಡ್ಡಿ ಬದಲೀ ಮಾಡೋದಿಲ್ಲ ಅಂತ. ಒಂದೇ ಬಣ್ಣದ ಚಡ್ಡಿ ಒಗಿಲಿಕ್ಕೆ ಹಾಕ್ತೀರಿ ಅಂತ, ಅಂತ ಕುಂತಿ ಇಲ್ಲದ ಅಧಿಕ ಪ್ರಸಂಗಿತನ ಮಾಡಿದಳು.

ಈಗ ನಾನು ಮಧ್ಯ ಪ್ರವೇಶಿಸಲಿಲ್ಲ ಅಂದ್ರ ರೂಪಾ ವೈನಿ ಚೀಪ್ಯಾಗ ಮತ್ತ ಕೆಲಸದ ಬೂಬೂಗ ಇಲ್ಲದ ಸಂಬಂಧ ಹಚ್ಚಿ ಇನ್ನೂ ದೊಡ್ಡ ರಾಮಾಯಣ ಮಾಡ್ತಾರ ಅಂತ ಜೋರಾಗಿ ಫುಲ್ ಕಾನ್ಫಿಡೆನ್ಸ್ ನಿಂದ ಹೇಳಿದೆ.

ಹುಚ್ಚ ಖೋಡಿ ಕುಂತಿ ತಂದು!!! ಸ್ವಲರೆ ಬುದ್ಧಿ ಬ್ಯಾಡ ನಿನಗ? ಹಾಂ? ಅಲ್ಲ ಹುಚ್ಚಿ... ಚಡ್ಡಿ ಬದಲೀ ಮಾಡದಿದ್ದರ ನಿಮ್ಮಪ್ಪಾ ಒಗಿಲಿಕ್ಕೆ ಯಾಕ ಹಾಕತಿದ್ದಾ? ಮತ್ತ ಯಾರು ಯಾವ ಬಣ್ಣದ ಅರವೀ ಒಗಿಲಿಕ್ಕೆ ಹಾಕ್ಯಾರ ಅಂತ ನೋಡಿಕೋತ್ತ ಕೂಡಲಿಕ್ಕೆ ಬೂಬುಗ ಬರೆ ನಿಮ್ಮನಿ ಕೆಲಸ ಒಂದೇ ಅಲ್ಲ ತಿಳೀತ? ರೂಪಾ ವೈನಿ.....ನಿಮಗ ಕೈ ಮತ್ತೊಂದು ಮುಗಿದು ಕೇಳಿಕೋತ್ತೇನಿ. ಕೆಲಸದ ಬೂಬು ನಿಮ್ಮ ಪತಿದೇವರ ಚಡ್ಡಿ ನೋಡ್ತಾಳ ಅಂತ ಮಾತ್ರ ಮನಸ್ಸಿನ್ಯಾಗ ಹಾಕ್ಕೊಂಡು ಮತ್ತೊಂದು ಅವಗಢ ಮಾಡಿಕೋಬ್ಯಾಡ್ರೀ, ಅಂತ ಅದನ್ನ ಅಷ್ಟಕ್ಕ ನಿಲ್ಲಿಸಿದೆ.

ಮಂಗೇಶ....ನಮ್ಮನಿಯವರದ್ದು ಒಂದೇ ಅಲ್ಲ ಅನ್ನಲಿಕ್ಕೆ ನಿಂದೂ ಚಡ್ಡಿ ಬೂಬು ನೋಡ್ತಾಳೇನು? ಅಂತ ಕೇಳಿ ಬಿಟ್ಟರು ವೈನಿ. ತನ್ನ ಗಂಡನದು ಒಂದೇ ಅಲ್ಲ ಇನ್ನೂ ನಾಕ ಐದ ಮಂದಿ ಗಂಡಸೂರ ಚಡ್ಡಿ ಬೂಬು  ನೋಡಿಬಿಟ್ಟರೆ ತೊಂದ್ರೀ ಇಲ್ಲ ಅನ್ನೋ ಹಾಂಗ. ಹೋಗ್ಗೋ!

ರೀ ವೈನಿ....ನಮ್ಮನಿಗೆ ಬೂಬು, ಗೂಳವ್ವ ಅವರು ಇವರು ಯಾರೂ ಕೆಲಸಕ್ಕ ಮತ್ತೊಂದಕ್ಕ ಬರೋದಿಲ್ಲ. ನೀವು ಸುಮ್ಮ ಕೂಡ್ರೀ. ಮತ್ತೆ ಎಲ್ಲರ ಊರ ತುಂಬಾ ಬೂಬು ಮಂಗೇಶನ ಚಡ್ಡಿ ನೋಡ್ತಾಳ ಅಂತ ಹೇಳಿಕೊಂಡು ಬಂದು ಗಿಂದೀರಿ. ಆ ಮ್ಯಾಲೆ ಮಠಕ್ಕ ಹೋಗಲಿಕ್ಕೆ ನಮಗ ತೊಂದ್ರೀ ಆಗ್ತದ. ಒಳ್ಳೆ ವೈನಿ ನೀವು!! ಆ...ಆ...ಆ.... - ಅಂತ ಹೇಳಿದೆ. ನಮ್ಮ ವಸ್ತ್ರಾ ಎಲ್ಲಾ ನಾವೇ ಒಕ್ಕೋತ್ತೇವಿ. ಎಲ್ಲಿ ಬೂಬು ನೋಡೋದು!

ಯಾರೂ ನೋಡಂಗಿಲ್ಲ, ಏನೂ ತಿಳಕೊಳ್ಳಂಗಿಲ್ಲ ಅಂದ್ರ ನೀ ಒಂದೇ ಬಣ್ಣದ ಚಡ್ಡಿ ಹಾಕ್ಕೊತ್ತಿ ಏನು ಮಂಗೇಶ? ಅಲ್ಲಾ ಮಾತಿಗೆ ಕೇಳಿದೆ ಅಷ್ಟ, ಅಂತ ಇಲ್ಲದ ಉಸಾಬರಿ ಮಾಡಿದ್ರು ವೈನಿ. ಸಿಟ್ಟು ಬಂತು ನನಗ.

ನಿಮಗ ಬ್ಯಾರೆ ಕೆಲಸ ಇಲ್ಲ ನೋಡ್ರೀ ವೈನೀ. ಸೋವಿಯಾಗ ಸಿಗ್ತಾವ ಅಂತ ಒಂದೇ ಬಣ್ಣದ ಚಡ್ಡಿ ತರೋರು ನೀವು. ಒಂದೇ ಬಣ್ಣದ ಚಡ್ಡಿ ಹಾಕಿಕೊಂಡಿದ್ದನ್ನ ಯಾರರ ನೋಡಿದರೆ (?) ಚಡ್ಡಿ ಬದಲು ಮಾಡೋದಿಲ್ಲ ಅಂತ ತಿಳ್ಕೊಂಡು ಮಾನಸಿಕ ಆಗಿ ಏನೇನೋ ಅನ್ನವ ನಿಮ್ಮ ಗಂಡ, ಗಂಡನ ಚಡ್ಡಿ ಬ್ಯಾರೋ ಯಾರೋ ನೋಡಿದರು ಅಂದ್ರ ನೋಡಿದಾಕಿ ಅವರ ಉಪಪತ್ನಿನೇ ಇರಬೇಕು ಅಂತ ತಲಿ ಕೆಡಿಸಿಕೊಂಡು, ಗಂಡನ ಎದಿ ಮ್ಯಾಲೆ ದಬಾ ದಬಾ ಗುದ್ದಿ, ಅಂಗಿ ಗುಂಡಿ ಹರದು ಗಂಡಾಗುಂಡಿ ಮಾಡಿದವರು ನೀವು, ಗಂಡ ಹಾಕ್ಕೊಂಡ ಚಡ್ಡಿ ಹೆಂಡ್ತೀ ಬಿಟ್ಟು ಬ್ಯಾರೆ ಯಾರೂ ನೋಡಂಗಿಲ್ಲ ಅಂದ್ರ, ಅರವೀ ಒಗೆಯೋ ಬೂಬು ನೋಡ್ತಾಳ ಅಂತ ಇಲ್ಲದ ಕಿತಬಿ ಮಾಡೋ ನಿಮ್ಮ ಕನ್ಯಾರತ್ನ ಕುಂತಿ, ಇಂತವರ ನಡುವೆ ಸಿಕ್ಕೊಂಡು ನಾ ಫುಲ್ ಹಾಪ್ ಆಗಿ ಬಿಟ್ಟೇನಿ ನೋಡ್ರೀ. ಇನ್ನು ಒಂದು ನಿಮಿಷ ನಾ ಇಲ್ಲೆ ಇದ್ದರ ಅಂಗಿ ಚೊಣ್ಣ ಎಲ್ಲ ಹರಕೊಂಡು, ಕಳಕೊಂಡು 'ಭಲೇ ಹುಚ್ಚ' ಸಿನೆಮಾದಾಗಿನ ಹುಚ್ಚನ ಹಾಂಗೆ ಓಡಿ ಹೋಗಬೇಕಾಗ್ತದ ನೋಡ್ರೀ. ನನ್ನ ಬಿಡ್ರೀ.....ಪ್ಲೀಸ್! ಅಂತ ಕೈಮುಗಿದು ಕೇಳಿಕೊಂಡೆ.

ಹಾಳಾಗಿ ಹೋಗು! - ಅಂತ ನನ್ನ ಡಿಸ್ಮಿಸ್ ಮಾಡಿದರು ವೈನಿ.

ರೀ....ಅವು ಹೊಸಾ ಚಡ್ಡಿ ಎಲ್ಲಾ ಈ ಕಡೆ ಕೊಡ್ರೀ. ಹೊಸಾವು ಅಂತ ಹಾಂಗೆ ಸೀದಾ ಹಾಕಿಕೊಂಡು ಕೂತೀರಿ. ಒಂದು ಸಲಾ ನೀರಾಗ ಹಾಕಿ ಬಿಡ್ತೇನಿ. ಆ ಮ್ಯಾಲೆ ಹಾಕಿಕೊಂಡೀರಿ ಅಂತ. ತಿಳೀತ? - ಅಂತ ಹೇಳಿಕೋತ್ತ ವೈನಿ ಚೀಪ್ಯಾನ ಕೈಯಾಗಿನ ಚಡ್ಡಿಗಳ ಪ್ಯಾಕೆಟ್ ಇಸಿದುಕೊಂಡರು.

ಯಾಕ? ಯಾಕ? ಮಸ್ತ ಏಕದಂ ಹೊಸಾವು ಅವ. ನೀರಾಗ ಯಾಕ ಹಾಕ್ತೀ? ಹಾಂ? ಹಾಂ? - ಅಂತ ಕೇಳಿದ ಚೀಪ್ಯಾ.

ರೀ!!! ನಿಮಗ ಸ್ವಲ್ಪರ ಕಾಮನ್ ಸೆನ್ಸ್ ಅದ ಏನ್ರೀ? ಆ ಅಂಗಡಿಯೊಳಗ ಎಷ್ಟು ಮಂದಿ ಹೆಂಗಸೂರು, ಗಂಡಸೂರು ಆ ಚಡ್ಡಿಗಳನ್ನ ಮುಟ್ಟಿ ಮುಟ್ಟಿ ನೋಡಿ ಬ್ಯಾಡ ಅಂತ ವಾಪಸ್ ಬಿಟ್ಟು ಹೋಗಿರ್ತಾರೋ ಏನೋ. ಅವರ ಕೈಯಾಗ ಏನೇನು ಹತ್ತಿರ್ತದೋ ಏನೋ? ಅದಕ್ಕ ಒಂದು ಸರೆ ನೀರಾಗ ಹಾಕಿ ಬಿಡ್ತೇನಿ ಅಂದೆ. ಯಾರರೆ ಆಗ ಮಾತ್ರ ಬ್ಯಾಡಗೀ ಮೆಣಸಿನಕಾಯಿ ಕುಟ್ಟಿ ಬಂದು, ಕೆಂಪ ಮೆಣಸಿನಕಾಯಿ ಕೆಟ್ಟ ಖಾರದ ಪುಡಿ ಹತ್ತಿದ ಕೈಯಾಗಿಂದ ಇವೇ ಚಡ್ಡಿ ಮುಟ್ಟಿ ನೋಡಿ, ಬ್ಯಾಡ ಅಂತ  ಇಟ್ಟು ಹೋಗಿದ್ದನ್ನ ನಾ ತಂದಿದ್ದೆ ಅಂದ್ರ ಏನು ಮಾಡ್ತೀರಿ? ಆ ಪರಿ ಖಾರಪುಡಿ ಹತ್ತಿದ ಚಡ್ಡಿ ಹಾಕಿಕೊಂಡರ ಏನು ಆಗ್ತದ ಹೇಳ್ರೀ? ಹಾಂ? ಹಾಂ? - ಅಂತ ಗಂಡನ ಬಗ್ಗೆ ಭಾರಿ ಕಾಳಜಿ ವಹಿಸೋಹಾಂಗ ರೂಪಾ ವೈನಿ ಹೇಳಿದರು.

ಏನಾಗ್ತದ? - ಅಂತ ಯಬಡನ ಹಾಂಗ ಚೀಪ್ಯಾ ಕೇಳಿದ.

ಅಯ್ಯೋ!!!ಏನಾಗ್ತದ ಅಂತ ತಿಳ್ಕೊಬೇಕು ಅಂದ್ರ ಒಂದು ತಾಸು ಬ್ಯಾಡಗಿ ಖಾರ ಪುಡಿಯೊಳಗ ಬೆರಳು ಹೆಟ್ಟಿಕೊಂಡು ಕೂಡ್ರೀ. ಬೆರಳಿಗೆ ಏನು ಉರಿ ಆಗ್ತದ ಅದರ ಹತ್ತು ಪಟ್ಟು ಉರಿ 'ಅದಕ್ಕ' ಆಗ್ತದ. ನಿಮ್ಮವ್ವ ಅಂದ್ರ ನಮ್ಮ ಅತ್ತಿ ನಿಮಗ ಪ್ಯಾಟಿಂದ ತಂದ ಚಡ್ಡಿ ನೀರಿಗೆ ಹಾಕದೇ ಹಾಂಗೇ ನಿಮಗ ಹಾಕ್ಕೊಳ್ಳಿಕ್ಕೆ ಬಿಟ್ಟಿದ್ದಕ್ಕ ನಿಮ್ಮ 'ಅದರ' ಪರಿಸ್ಥಿತಿ ಹೀಂಗ ಅದ, ಅಂತ ವೈನಿ ಒಂದು ತರಹ ಗೂಡಾರ್ಥದಲ್ಲಿ ಹೇಳಿದರು. 'ಅದರ' ಪರಿಸ್ಥಿತಿ ಅಂದ್ರ!!!!???? ಬರೆ ಕೋಡ್ ಲ್ಯಾಂಗ್ವೇಜ್ ಒಳಗ ಮಾತಾಡ್ತಾರ ಗಂಡಾ ಹೆಂಡತಿ.

ನೀನು ನಮ್ಮ ಅವ್ವನ ಸುದ್ದಿಗೆ ಬರ ಬ್ಯಾಡ ! -ಅಂತ ಚೀಪ್ಯಾ ಹೊಸಾ ಜಗಳಕ್ಕ ರೆಡಿ ಆದ.

ನನಗ ಬ್ಯಾರೆ ಕೆಲಸ ಅದ. ನೀರಾಗ ಹಾಕಿ ಒಣಾ ಹಾಕಿರ್ತೆನಿ. ನಾಳಿಂದ ಇವಾ ಚಡ್ಡಿ ಹಾಕಿಕೊಳ್ಳರೀ ಮತ್ತ. ಆ ತೂತು ಬಿದ್ದ ಮಚ್ಚರದಾನಿ ಚಡ್ಡಿ ಹಾಕ್ಕೊಂಡು ಅಡ್ಯಾಡಬ್ಯಾಡ್ರೀ, ಅಂತ ತಾಕೀತು ಮಾಡಿ ವೈನಿ ಹೋದರು.

ಇನ್ನೊಂದು ಜಗಳ ಶುರು ಆಗಲಿಲ್ಲ ಅಂತ ಖಾತ್ರಿ ಮಾಡಿಕೊಂಡು ನಾ ವಾಪಸ್ ಬಂದೆ.

No comments: