Tuesday, November 26, 2013

26/11 ದಾಳಿಯ ಹುತಾತ್ಮ ಅಶೋಕ ಕಾಮಟೆಯವರ ಅಜ್ಜನೂ, ಶ್ರೀ ಕರಮರಕರರೂ, ಧಾರವಾಡದ ಸ್ವಾತಂತ್ರ ಚಳುವಳಿಯ ದಿನಗಳೂ.....

1940 ರ ಟೈಮ್. ಆಗ ತಾನೇ ಧಾರವಾಡದ ಸುಪರಿಂಟೆಂಡೆಂಟ್ ಆಫ್ ಪೋಲಿಸ್ ಎಂದು ಅಧಿಕಾರ ವಹಿಸಿಕೊಂಡಿದ್ದೆ. ಬ್ರಿಟಿಷರ ವಿರುದ್ಧ ಸ್ವಾತಂತ್ರ ಹೋರಾಟ ಜೋರಾಗಿ ನೆಡದಿತ್ತು. ಧಾರವಾಡದಲ್ಲಿಯೂ ಬೇಕಾದಷ್ಟು ಮಂದಿ ದೊಡ್ಡ ಮಟ್ಟದ ಕಾಂಗ್ರೆಸ್ ನಾಯಕರು, ಹೋರಾಟಗಾರರು ಇದ್ದರು.

ಅವರಲ್ಲಿ ನಮ್ಮ ಪೊಲೀಸರಿಗೆ ತುರ್ತಾಗಿ ಬೇಕಾಗಿದ್ದವರು ಶ್ರೀ ಕರಮರಕರ ಮತ್ತು ಶ್ರೀ ಹುಕ್ಕೇರಿಕರ. ನಾನು ಬಂದು ಲೋಕಲ್ ಪೋಲೀಸರನ್ನು ಗರಮ್ ಮಾಡಿದ್ದೇ ಮಾಡಿದ್ದು, ಈ ಇಬ್ಬರೂ ನಾಯಕರು ಗಾಯಬ್ ಆಗಿ  ಬಿಟ್ಟರು. ಎಷ್ಟು ಹುಡುಕಿದರೂ ಸಿಗಲೇ ಇಲ್ಲ. 

ನನಗೆ ಗೊತ್ತಾಯಿತು, ಇದು ಯಾರೋ ಪೋಲೀಸರದೇ ಕಿತಾಪತಿ ಅಂತ. ಪೋಲೀಸರಲ್ಲೇ ಯಾರೋ ಅವರಿಗೆ ಸುಳಿವು ಕೊಟ್ಟು ಧಾರವಾಡದಿಂದ ನಾಪತ್ತೆಯಾಗುವಂತೆ ಮಾಡಿದ್ದಾರೆ ಅಂದು. ಲೋಕಲ್ ಪೋಲೀಸರನ್ನು ಕರೆದು ಸರಿಯಾಗಿ ಗದರಿಸಿದೆ ಮತ್ತು ನಾಪತ್ತೆಯಾದವರನ್ನು ಪತ್ತೆ ಮಾಡಲು ಬೇರೆ ತಂತ್ರಗಳ ಬಗ್ಗೆ ಯೋಚಿಸತೊಡಗಿದೆ. 

ಇಂತಹ ಸಮಯದಲ್ಲಿ ಶ್ರೀ ಕರಮರಕರ ಬರೆದಂತಹ ಪತ್ರವೊಂದು ನನ್ನ ಕೈಸೇರಿತು. ಪತ್ರಗಳ ಮೇಲೆ ಸರ್ಕಾರಿ ಸೆನ್ಸಾರ್ ಇದ್ದಂತಹ ಸಮಯ. ಹೀಗಾಗಿ ಪೋಲಿಸ್ ಅಧಿಕಾರಿಯಾದ ನಾನು ಅಂತಹ ಪತ್ರಗಳನ್ನು ಓದಲೇ ಬೇಕಾಗಿತ್ತು. ಶ್ರೀ ಕರಮರಕರ ಮುಂಬೈಯಿಂದ ತಮ್ಮ ಪತ್ನಿಗೆ ಬರದಂತಹ ಪತ್ರ ಅದಾಗಿತ್ತು. ಓದಿದ ನಂತರ ಯಾಕೋ ಪಾಪ ಅನ್ನಿಸಿ, ಆ ಪತ್ರದ ಸುದ್ದಿ ಅಷ್ಟಕ್ಕೇ ಬಿಟ್ಟು, ಆ ಪತ್ರ ಹರಿದು ಹಾಕಿದೆ. 

ಮತ್ತೆ ಸ್ವಲ್ಪ ದಿನಗಳಲ್ಲಿಯೇ ಮತ್ತೊಂದು ಪತ್ರ ಶ್ರೀ ಕರಮರಕರ ಅವರಿಂದ ಬಂತು. ಮತ್ತೆ ಪತ್ನಿಗೆ. ಈ ಸಲ ಹಾಗೆಯೇ ಬಿಡುವಂತೆ ಇರಲಿಲ್ಲ. ಬಾಂಬೆ ಪೋಲೀಸರ ಸಹಾಯದಿಂದ ಪತ್ತೆ ಮಾಡಿ, ಚೌಪಾಟಿ ಬೀಚಿನ ಮೇಲೆ ತಿರುಗುತ್ತಿದ್ದ ಕರಮರಕರ ಅವರನ್ನು ಧಾರವಾಡ ಪೊಲೀಸರು ಬಂಧಿಸಿದರು. 

ಕರಮರಕರ ಅವರ ಬಂಧನದ ಸುದ್ದಿ ಮತ್ತು ಅವರನ್ನು ಧಾರವಾಡಕ್ಕೆ ತರುವ ಸುದ್ದಿ ಧಾರವಾಡದಲ್ಲಿ ದೊಡ್ಡ ಮಟ್ಟಿನ ಸಂಚಲನ ಉಂಟುಮಾಡಿತ್ತು. ದೊಡ್ಡ ಪ್ರಮಾಣದಲ್ಲಿ ಜನರು ಧಾರವಾಡ ರೈಲ್ವೆ ಸ್ಟೇಷನ್ ನಲ್ಲಿ ಜಮೆಯಾಗಿದ್ದರು. ನಾನೂ ಸಹ ಸುಮಾರು ಐವತ್ತು ಶಸ್ತ್ರಸಜ್ಜಿತ ಪೊಲೀಸರೊಂದಿಗೆ ರೈಲ್ವೆ ಸ್ಟೇಷನ್ ಬಂದೋಬಸ್ತಿನ ಮೇಲಿದ್ದೆ. ಕರಮಕರ ಸೀದಾ ರೈಲ್ವೆ ಸ್ಟೇಷನ್ನಿಗೆ ಬಂದರೆ ದೊಡ್ಡ ಮಟ್ಟದ ಗಲಭೆ ಆಗಬಹುದು ಅಂತ ಅಂದಾಜಿದ್ದ ನಾನು ಎಲ್ಲ ತಯಾರಿ ಮಾಡಿಕೊಂಡಿದ್ದೆ. ಆದರೆ ಅಲ್ಲಿ ಕೂಡಿದ್ದ ಜನರಿಗೆ ಗೊತ್ತಿಲ್ಲದ್ದು ಅಂದರೆ ಧಾರವಾಡಕ್ಕೆ ಮೂರ್ನಾಕು ಮೈಲು ದೂರವಿದ್ದಾಗಲೇ ಸಿಗ್ನಲ್ ಒಂದರಲ್ಲಿ ಕರಮಕರ್ ಅವರನ್ನು ಇಳಿಸಿಕೊಂಡಿದ್ದ ಪೋಲಿಸರು ರಹಸ್ಯವಾಗಿ ಅವರನ್ನು ಪೋಲಿಸ್ ಹೆಡ್ ಕ್ವಾರ್ಟರ್ಸ್ ಗೆ ಕರೆದೊಯ್ದಿದ್ದರು!

ರೈಲು ಬಂತು. ಕರೆತರಲು ಹೋಗಿದ್ದ ಪೋಲಿಸರಾಗಲಿ, ಕರಮರಕರ್ ಅವರಾಗಲಿ ರೈಲಿನಿಂದ ಇಳಿಯಲಿಲ್ಲ. ಕರಮರಕರ ಎಲ್ಲಿ? ಯಾಕೆ ಬಂದಿಲ್ಲ? - ಅಂತ ಕೂಡಿದ್ದ ಜನ ಗದ್ದಲ ಶುರು ಮಾಡಿದರು. ನನಗೇನು ಗೊತ್ತು? ನಾನೂ ಅವರನ್ನೇ ಹುಡುಕುತ್ತಿದ್ದೇನೆ, ಅಂತ ಎಲ್ಲರೂ ನಂಬುವಂತೆ ಹೇಳಿದೆ. 

ಹೀಗೆ ಕರಮರಕರ ಅವರನ್ನು ರಹಸ್ಯವಾಗಿ ಸಾಗಿಸಿದ್ದು ಒಂದು ದೊಡ್ಡ ಸಾಧನೆಯೇ ಅಂತ ನನ್ನ ಭಾವನೆ. ಇಲ್ಲದಿದ್ದರೆ ಆ ಕಾಲದಲ್ಲಿ ಸಂದರ್ಭ ಇಷ್ಟು ಗರಂ ಆಗಿತ್ತು ಅಂದರೆ, ರೈಲ್ವೆ ಸ್ಟೇಷನ್ ನಲ್ಲಿ ದೊಡ್ಡ ಗಲಭೆ ಆಗಿ, ಪೊಲೀಸರು ಲಾಠಿ ಚಾರ್ಜ್, ಗೋಲೀಬಾರ್ ಮಾಡಿ ಎಷ್ಟು ಜನರಿಗೆ ಗಾಯಗಳಾಗಬೇಕಿತ್ತೋ, ಎಷ್ಟು ಜನರು ಸಾಯಬೇಕಿತ್ತೋ. 

ಧಾರವಾಡದ ಶಾಣ್ಯಾ ಜನ ಏನು ಹಂಗೆಲ್ಲಾ ಸುಮ್ಮನೆ ಬಿಡೋ ಜನ ಅಲ್ಲ. ಮರುದಿವಸ ರೈಲ್ವೆ ಸ್ಟೇಷನ್ ನಲ್ಲಿ ಸೇರಿದ್ದಕ್ಕಿಂತ ದೊಡ್ಡ ಗುಂಪೊಂದು ಟೌನ್ ಪೋಲಿಸ್ ಸ್ಟೇಷನ್ ಮುಂದೆ ಬಂದು ಗದ್ದಲ ಶುರು ಮಾಡಿತು. ಕರಮರಕರ ಎಲ್ಲಿ? ಎಲ್ಲಿ ಅವರನ್ನು ಹುಗಿಸಿಟ್ಟಿದ್ದೀರಿ? ನಮಗೆ ಅವರನ್ನು ನೋಡಬೇಕು, ಅಂತ ಒಂದೇ ಸಮನೆ ಗದ್ದಲ. ಅಷ್ಟರಲ್ಲಿ ಕೆಲವು ಕಿಡಿಗೇಡಿಗಳು ಕಲ್ಲು ತೂರಲು ಆರಂಭಿಸಿದರು. ಆ ಕಾಲದಲ್ಲಿ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಆಗಿದ್ದವ ಒಬ್ಬ ಬ್ರಿಟಿಷ್ ಅಧಿಕಾರಿ. ಅವನಿಗೆ ಸಿಕ್ಕಾಪಟ್ಟೆ tension ಶುರು ಆಯಿತು. ಬೇಗ ಪರಿಸ್ಥಿತಿ ಕಂಟ್ರೋಲ್ ಮಾಡಿ. ಎಷ್ಟು ಬೇಕೋ ಅಷ್ಟು ಶಕ್ತಿ ಉಪಯೋಗಿಸಿ. ಗೋಲಿಬಾರ್ ಬೇಕಾದರೂ ಮಾಡಿ. ಒಟ್ಟಿನಲ್ಲಿ ಜನ ಹೋಗಬೇಕು. ಗದ್ದಲ ಕಡಿಮೆ ಆಗಬೇಕು. ಅಷ್ಟೇ, ಅಂತ ಖಡಕ್ಕ್ ಆರ್ಡರ್ ಮೇಲಿನ ಸಾಹೇಬರಿಂದ ಬಂತು.

ಬೇರೆ ಯಾರೋ ಆಗಿದ್ದರೆ ಪರಿಸ್ಥಿತಿ ನಿಭಾಯಿಸಲು ಗೋಲಿಬಾರೇ ಮಾಡುತ್ತಿದ್ದರೋ ಏನೋ. ಆದ್ರೆ ನನಗೆ ಅನಗತ್ಯ ಹಿಂಸೆಯ ಜರೂರತ್ ಕಾಣಲಿಲ್ಲ. ಗಲಭೆ ಮಾಡುತ್ತಿರುವರಲ್ಲೇ ಎದ್ದು ಕಾಣುತ್ತಿದ್ದ ನಾಲ್ಕಾರು ಹುಡುಗರನ್ನು ಕರೆದೆ. ಬಂದರು. ನೋಡ್ರೀಪಾ, ನಿಮ್ಮ ಕರಮರಕರ ಸಾಹೇಬರು ನಮ್ಮ ಪೋಲಿಸ್ ಸ್ಟೇಷನ್ ಒಳಗ ಇಲ್ಲ. ಬೇಕಾದ್ರ ನೀವೇ ಫುಲ್ ಅಡ್ಯಾಡಿ, ನೋಡಿಕೊಂಡು ಬಂದು ಖಾತ್ರಿ ಮಾಡಿಕೊಳ್ಳಿ, ಅಂತ ಹೇಳಿದೆ. ಮೊದಲು ಅವರಿಗೆಲ್ಲ ಫುಲ್ ಆಶ್ಚರ್ಯ. ಗಲಭೆ ಮಾಡುತ್ತಿದ್ದ ಜನರೊಂದಿಗೆ ಪೋಲೀಸರ ಈ ತರಹದ ಸದ್ವರ್ತನೆ! ನ ಭೂತೋ ನ ಭವಿಷ್ಯತಿ! ಅದೂ ಬ್ರಿಟಿಷರ ಕೆಳಗೆ ಕೆಲಸ ಮಾಡುತ್ತಿದ್ದ ಅಧಿಕಾರಿಯಿಂದ ಇಷ್ಟು ಒಳ್ಳೆಯ ವರ್ತನೆ! ಆದರೂ ಸುಧಾರಿಸಿಕೊಂಡ ಚಳುವಳಿಗಾರರು, ಪೋಲಿಸ್ ಸ್ಟೇಷನ್ ಹೊಕ್ಕು, ಎಲ್ಲಾ ಕಡೆ ಜಾಲಾಡಿ, ತಮ್ಮ ನಾಯಕ ಕರಮರಕರ ಇಲ್ಲ ಅಂತ ಖಾತ್ರಿ ಆದ ಮ್ಯಾಲೆ ಹೊರಟು ಹೋದರು. ಅವರ ಹಿಂದೆಯೇ ಸ್ಟೇಷನ್ ಮುಂದೆ ಗದ್ದಲ ಮಾಡುತ್ತಿದ್ದ ಗುಂಪು ಸಹ ಕರಗಿತು. 

ಆವತ್ತಿನ ಪರಿಸ್ಥಿತಿ ಇಷ್ಟು ಗಂಭೀರವಿತ್ತು ಅಂದರೆ ಪಾಲಕರು ಮತ್ತು ಇತರೆ ಸಹೃದಯರು ಗಾಯಾಳುಗಳಿಗೆ ಸುಶ್ರೂಷೆ ಮಾಡಲು ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದರು. ಯಾರಿಗೂ ಇಷ್ಟು ಸಲೀಸಾಗಿ ಆವತ್ತಿನ ಪರಿಸ್ಥಿತಿ ಹತೋಟಿಗೆ ಬಂದೀತು ಅಂತ ಅನ್ನಿಸಿರಲಿಲ್ಲ. ಪೊಲೀಸರು ಗೋಲಿಬಾರ್ ಮಾಡಿಯೇ ಮಾಡುತ್ತಾರೆ, ಒಂದಿಷ್ಟು ಹೆಣಗಳು ಉರುಳಿಯೇ ಉರುಳುತ್ತವೆ ಅಂತ ತಿಳಿದು ಖಾಸಗಿ ambulance ಮತ್ತಿತರ ವ್ಯವಸ್ಥೆ ಮಾಡಿಕೊಂಡಿದ್ದರು. ಧಾರವಾಡದ ಸಿವಿಲ್ ಹಾಸ್ಪಿಟಲ್ ಎಲ್ಲದಕ್ಕೂ ರೆಡಿ ಆಗಿತ್ತು. ಪುಣ್ಯಕ್ಕೆ ಅಂತಹ ಸಂದರ್ಭ ಬರಲಿಲ್ಲ. 

ಈ ರೀತಿ ಮಾನವೀಯತೆಯಿಂದ ಪೋಲಿಸ್ ಕೆಲಸ ಮಾಡಿದ ನನ್ನನ್ನು ಧಾರವಾಡದ ಜನ ತುಂಬಾ ಮೆಚ್ಚಿಕೊಂಡರು. ಅನೇಕ ಕಾಂಗ್ರೆಸ್ ನಾಯಕರೂ ಸಹ ನನ್ನ ಮಿತ್ರರಾದರು. ನಾನು ಕಠಿಣ ಹೃದಯದ ಪೋಲಿಸ್ ಅಧಿಕಾರಿಯಲ್ಲ ಅಂತ ಧಾರವಾಡದ ಜನ ಪ್ರಶಂಸಿಸಿದರು.

ಧಾರವಾಡದ ಜನ ನನ್ನ ಮೇಲೆ ಎಷ್ಟು ಪ್ರೀತಿ, ವಿಶ್ವಾಸ, ಮೆಚ್ಚುಗೆ ಇಟ್ಟಿದ್ದರು ಅನ್ನುವದಕ್ಕೆ ಒಂದು ಸಣ್ಣ ಉದಾಹರಣೆ. ನಾನು ಧಾರವಾಡ ಬಿಟ್ಟು ಸುಮಾರು ಮೂವತ್ತು ವರ್ಷಗಳ ನಂತರ ಅಂದರೆ 1976 ರ ಸಮಯ. ಒಮ್ಮೆ ಮಿತ್ರರೊಂದಿಗೆ ಸತ್ಯ ಸಾಯಿ ಬಾಬಾ ಅವರನ್ನು ಭೆಟ್ಟಿಯಾಗಲು ಪುಟಪರ್ತಿಗೆ ಹೋಗುತ್ತಿದ್ದೆ. ರೈಲಿನಲ್ಲಿ. ಸಹ ಪ್ರಯಾಣಿಕರೊಬ್ಬರು ಧಾರವಾಡದವರು ಅಂತ ಗೊತ್ತಾಯಿತು. ಧಾರವಾಡದ ದೊಡ್ಡ ವಕೀಲರು ಅವರು. ನನ್ನ ಮಿತ್ರರು ಅವರನ್ನು, ನಿಮಗೆ ನಿವೃತ್ತ ಪೋಲಿಸ್ ಅಧಿಕಾರಿ ಕಾಮಟೆ ಗೊತ್ತೇ? ಅಂತ ಕೇಳಿದರು. ಆ ಸಹ ಪ್ರಯಾಣಿಕರು ಒಮ್ಮೆಲೇ ಹುರುಪಿನಿಂದ, ಕಾಮಟೆ ಅವರನ್ನು ಮರೆಯಲಾದೀತೇ? ಅವರಂತಹ ಪೋಲಿಸ್ ಅಧಿಕಾರಿ ಮತ್ತೆ ಧಾರವಾಡಕ್ಕೆ ಬರಲೇ ಇಲ್ಲ. ಎಷ್ಟು ಒಳ್ಳೆಯ ಮನುಷ್ಯರಾಗಿದ್ದರು ಅವರು. ಕ್ವಿಟ್ ಇಂಡಿಯಾ ಚಳುವಳಿ ಕಾಲದಲ್ಲಿ ಧಾರವಾಡದ ಪರಿಸ್ಥಿಯನ್ನು ಅತ್ಯಂತ ನಾಜೂಕಾಗಿ ನಿಭಾಯಿಸಿದವರು ಕಾಮಟೆಯವರು. ಧಾರವಾಡದಲ್ಲಿ ಈಗಲೂ ಎಲ್ಲರೂ ಅವರನ್ನು ನೆನೆಸುತ್ತಾರೆ. ಈಗ ಎಲ್ಲಿದ್ದಾರೋ ಏನೋ ಕಾಮಟೆಯವರು ? - ಅಂತ ಹೇಳಿದರು. ಅದನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು. ಮೂವತ್ತು ವರ್ಷದ ಮೇಲೂ ಧಾರವಾಡದ ಜನ ನನ್ನ ಮೇಲೆ ಇಷ್ಟು ಪ್ರೀತಿ, ಮೆಚ್ಚುಗೆ ಇಟ್ಟಿದ್ದಾರಲ್ಲ ಅಂತ ಹೆಮ್ಮೆ, ಸಂತೋಷ ಎಲ್ಲ ಆಯಿತು. ನನ್ನ ಸ್ನೇಹಿತರು, ನನ್ನನ್ನು ತೋರಿಸುತ್ತ, ಇಲ್ಲೇ ಇದ್ದಾರೆ ನೋಡಿ. ಇವರೇ ನಿಮ್ಮ ಆಗಿನ ಪೋಲಿಸ್ ಸಾಹೇಬರು. ಕಾಮಟೆಯವರು, ಅಂತ ಆ ಧಾರವಾಡದ ವಕೀಲರಿಗೆ ನನ್ನನ್ನು ಮರು ಪರಿಚಯ ಮಾಡಿಕೊಟ್ಟರು. ವಯಸ್ಸಾಗಿ ತುಂಬ ಬದಲಾಗಿದ್ದ ನನ್ನನ್ನು ಅವರು ಗುರುತಿಸಿರಲಿಲ್ಲ. ಈಗ ಅವರಿಗೆ ನನ್ನ ಪರಿಚಯವಾಗಿ, ನೆನಪುಗಳು ಮರುಕಳಿಸಿ, ತುಂಬ ಹೊತ್ತಿನ ತನಕ ಮಾತಾಡಿದರು. 

ಹೀಗೆ ಧಾರವಾಡದ ಬಗ್ಗೆ, ಧಾರವಾಡದಲ್ಲಿ ತಮ್ಮ ಪೋಲಿಸ್ ಅವಧಿಯ ಬಗ್ಗೆ, ಆ ಸಮಯದ ಸವಾಲುಗಳ ಬಗ್ಗೆ, ಅವುಗಳನ್ನು ತಾವು ಹೇಗೆ ನಿಭಾಯಿಸಿದರು ಅನ್ನುವದರ ಬಗ್ಗೆ ಬರೆದವರು ಶ್ರೀ ನಾರಾಯಣರಾವ್ ಮಾರುತಿರಾವ್ ಕಾಮಟೆ

ನಾರಾಯಣರಾವ್ ಮಾರುತಿರಾವ್ ಕಾಮಟೆ ಅಂದರೆ ಭಾಳ ಜನರಿಗೆ ತಿಳಿಯಲಿಕ್ಕಿಲ್ಲ. ಅದೇ 26/11 ರ ಮುಂಬೈನಲ್ಲಿ ಆದ ಉಗ್ರರ ದಾಳಿಯಲ್ಲಿ, ಉಗ್ರರೊಂದಿಗೆ ಹೋರಾಡುತ್ತಾ ಪ್ರಾಣ ಕೊಟ್ಟ ಹುತಾತ್ಮ ಶ್ರೀ ಅಶೋಕ ಕಾಮಟೆಯವರ ಅಜ್ಜ (ತಂದೆಯವರ ತಂದೆ) ಅಂದರೆ ತಿಳಿದೀತು. 

ದಿವಂಗತ ಅಶೋಕ ಕಾಮಟೆಯವರ ಪತ್ನಿ ವಿನೀತಾ ಕಾಮಟೆ ತಮ್ಮ ಪತಿಯ ಮರಣಾನಂತರ 'To the last bullet' ಅನ್ನುವ ಪುಸ್ತಕ ಬರೆದಿದ್ದಾರೆ. ಅಶೋಕರ ಬದುಕಿನ ಒಂದು ಚಿತ್ರಣ ಕಟ್ಟಿಕೊಡುವ ಸಮಯದಲ್ಲಿ ವಿನೀತಾ ಕಾಮಟೆ ಅವರ ಕುಟುಂಬ ಹೇಗೆ ತಲೆಮಾರುಗಳಿಂದ ಸೈನ್ಯ, ಪೋಲಿಸ್ ಇಲಾಖೆಗಳಲ್ಲಿ ದೇಶ ಸೇವೆ ಮಾಡಿದೆ ಅನ್ನುವದನ್ನು ಹೇಳುತ್ತಾ ಪಿತಾಮಹ ನಾರಾಯಣರಾವ್ ಮಾರುತಿರಾವ್ ಕಾಮಟೆ ಅವರ ಪೋಲಿಸ್ ಸೇವೆ ಸ್ಮರಿಸಿದ್ದಾರೆ. ಹಿರಿಯ ಕಾಮಟೆಯವರ ದಿನಚರಿಯಿಂದಲೋ, ಅವರು ಬರೆದ ಪುಸ್ತಕದಿಂದಲೋ, ಪ್ರಕಟವಾಗದ ಹಸ್ತಪ್ರತಿಯಿಂದಲೋ ವಿನೀತಾ ಈ ವಿವರ ಬರೆದಿದ್ದಾರೆ ಅಂತ ಓದಿದ ನೆನಪು. 

ದಿವಂಗತ ಅಶೋಕ ಕಾಮಟೆ ಮೊದಲಿಂದಲೂ ಗಮನ ಸೆಳದ ಗಂಡೆದೆಯ ಪೋಲಿಸ್ ಆಫೀಸರ್. ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಅಧಿಕಾರಿ. ಯಾರಿಗೂ ಕೇರೇ ಮಾಡದ ದಿಟ್ಟ ಅಧಿಕಾರಿ. ಇಲ್ಲದಿದ್ದರೆ ಎರಡು ಹಾಲಿ MLA ಗಳನ್ನು ಶಾಂತಿಭಂಗದ ಆಪಾದನೆ ಮೇಲೆ ಒದ್ದು ಲಾಕಪ್ ಒಳಗೆ ಹಾಕುವ ದಮ್ಮು ಇರುತ್ತಿರಲಿಲ್ಲ. ಅದನ್ನು ಮಾಡಿ, ಅದರ ಬಗ್ಗೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ದೊಡ್ಡ ಕೋಲಾಹಲ ಎಬ್ಬಿಸಿ, ಸೋಲಾಪುರ ಜನರ ಮೆಚ್ಚುಗೆಗೆ ಪಾತ್ರರಾಗಿದ್ದವರು ಅಶೋಕ ಕಾಮಟೆ. ಮುಂದೆ ಬೋಸ್ನಿಯಾದಲ್ಲಿ ಭಾರತದ ಶಾಂತಿಪಡೆಯಲ್ಲೂ ಕೆಲಸ ಮಾಡಿದ್ದರು ಕಾಮಟೆ. ಒಳ್ಳೆಯ ಕೆಲಸ ಮಾಡಿದ್ದ ಅವರನ್ನು ಮುದ್ದಾಂ ಮುಂಬೈಗೆ ಹಾಕಲಾಗಿತ್ತು. ಅಡಿಷನಲ್ ಕಮಿಷನರ್ ಅಂತ ಅಲ್ಲಿದ್ದರು ಕಾಮಟೆ. 26/11/2008 ರಂದು ಉಗ್ರರ ದಾಳಿ ನೆಡದಾಗ ಆ ಕಾಲದ ಮುಂಬೈ ಪೋಲಿಸ್ ಕಮಿಷನರ್ ಹಸನ್ ಗಫೂರರಿಗೆ ಮೊದಲು ನೆನಪಾದ dare devil ಆಫೀಸರ್ ಅಂದರೆ ಅಶೋಕ ಕಾಮಟೆ. ಹೀಗಾಗಿ ಕಾಮಟೆ ಅವರ ಏರಿಯಕ್ಕೆ ಸಂಬಂಧವಿಲ್ಲದಿದ್ದರೂ ಕಾಮಟೆಯವರಿಗೇ ಬುಲಾವಾ ಹೋಗಿತ್ತು, ಪರಿಸ್ಥಿತಿ ನಿಯಂತ್ರಿಸಲು. ಉಗ್ರರೊಂದಿಗೆ ತಮ್ಮ AK - 47 ಹಿಡಿದು ಹೋರಾಡುತ್ತಲೇ ಕಾಮಟೆ ಇತರ ಇಬ್ಬರು ಅಧಿಕಾರಿಗಳೊಂದಿಗೆ ಹುತಾತ್ಮರಾದರು. ಶ್ರೀ ಕರ್ಕರೆ ಮತ್ತು ಶ್ರೀ ಸಲಸ್ಕರ್ ಆ ಇಬ್ಬರು ಇತರ ಅಧಿಕಾರಿಗಳು.


ಶ್ರೀ ಕರಮರಕರ - ಧಾರವಾಡ ಸೀಮೆಯ ಆ ಕಾಲದ ದೊಡ್ಡ ಸ್ವಾತಂತ್ರ ಹೋರಾಟಗಾರರು, ಸಮಾಜಸೇವಕರು ಇತ್ಯಾದಿ. ಅವರು ನೆಹರು ಸಂಪುಟದಲ್ಲಿ ಸಚಿವರಾಗಿದ್ದರು. ಕೆ.ಇ.ಬೋರ್ಡ್ ಶಾಲೆಯಲ್ಲಿ ಶಿಕ್ಷಕರೂ, ಶಾಲೆಯ ಉನ್ನತಿಗೆ ಕಾರಣರೂ ಆಗಿದ್ದರು. 

ಒಳ್ಳೆಯ ಪುಸ್ತಕ. 26/11 ಕ್ಕೆ ಇವತ್ತಿಗೆ ಐದು ವರ್ಷ. ಎರಡು ವರ್ಷದ ಹಿಂದೆ ಓದಿದ್ದ ಪುಸ್ತಕದ ಮೇಲೆ ಮತ್ತೆ ಕಣ್ಣಾಯಿಸಿದೆ. ಅರೆ! ಹುತಾತ್ಮ ಅಶೋಕ ಕಾಮಟೆಯವರಿಗೂ ಧಾರವಾಡಕ್ಕೂ ಪುರಾತನ ಸಂಬಂಧವಂದಿದೆಯಲ್ಲ ಅಂತ ನೆನಪಾಯಿತು. ಅದಕ್ಕೇ ಈ ಲೇಖನ.

6 comments:

Unknown said...

Good write up. mahesh. Kamate senior was the last SP of Dharwad in British regime. Mr Narayan Bidi was the first SP after Independence. He is the father of Shri M N Bidi who retired as teacher at K E Board's High School. I hope he was there when you studied at KEBHS. Tall guy.

Unknown said...

Good write up. mahesh. Kamate senior was the last SP of Dharwad in British regime. Mr Narayan Bidi was the first SP after Independence. He is the father of Shri M N Bidi who retired as teacher at K E Board's High School. I hope he was there when you studied at KEBHS. Tall guy.

Unknown said...

Good write up. mahesh. Kamate senior was the last SP of Dharwad in British regime. Mr Narayan Bidi was the first SP after Independence. He is the father of Shri M N Bidi who retired as teacher at K E Board's High School. I hope he was there when you studied at KEBHS. Tall guy.

Mahesh Hegade said...

Dear Jamakhandi Sir,

Thank you very much.

So happy that you took time to read my blog and left a comment.

Yes sir. Bidi sir was our social studies teacher in 8th std (84-85).

Thanks again Sir.

-Mahesh

jayakeerthi.m said...

Super mahesh I had got a habbit of reading your blog every friday which makes me very happy keep writing :)

Mahesh Hegade said...

Thank you very much, Jayakeerthi.M.