Saturday, November 16, 2013

'ಭಾರತ ರತ್ನ' ಸೂಪರ್ ಕಂಡಕ್ಟರ್ ಡಾ. ಸಿಎನ್ನಾರ್ ರಾವ್ ಧಾರವಾಡಕ್ಕೆ ಬಂದಾಗ....ಕವಿವಿಯಲ್ಲಿ ಭಾಷಣ ಮಾಡಿದಾಗ

ಇವತ್ತು ಶನಿವಾರ ಮುಂಜಾನೆದ್ದು ಹಾಪ್ ಕಾಫೀ ಕುಡಕೋತ್ತ ಫೇಸ್ಬುಕ್ ಮ್ಯಾಲೆ ಕಣ್ಣಾಡಿಸಿಕೋತ್ತ ಇದ್ದಾಗ ಸಚಿನ್ ತೆಂಡುಲ್ಕರಗ 'ಭಾರತ ರತ್ನ' ಪ್ರಶಸ್ತಿ ಬಂದದ ಅಂತ ಸುಮಾರು ಮಂದಿ ಹಾಕಿದ ಪೋಸ್ಟ್ ನೋಡಿ ಆತು. ಆತು ಬಿಡ್ರೀ. ಒಬ್ಬ ಮಹಾನ ಕ್ರಿಕೆಟ್ ಆಟಗಾರ ರಿಟೈರ್ ಆದ. ಕಲೆ, ಕ್ರೀಡೆ ಎಲ್ಲದರಲ್ಲಿ ಸರ್ವಶ್ರೇಷ್ಠ ಸಾಧನೆ ಮಾಡಿದವರಿಗೆ 'ಭಾರತ ರತ್ನ' ಕೊಟ್ಟ ಪದ್ಧತಿ ಅದ. ಇವಂಗೂ ಕೊಟ್ಟಾರ ಅಂತ ಸುಮ್ಮನಾದ್ವೀ.

ಮುಂಜಾನೆ ನ್ಯೂಸ್ ಪೇಪರ್ ಓದೇ ಇರಲಿಲ್ಲ ನೋಡ್ರೀ. ಹಾಂಗಾಗಿ ಇನ್ನೊಬ್ಬ ಮಹಾನುಭಾವರಿಗೆ ಅದೇ ಪ್ರಶಸ್ತಿ ಬಂದ ವಿಷಯ ಗೊತ್ತೇ ಇರಲಿಲ್ಲ. ಅಷ್ಟರಾಗ ಫೇಸ್ಬುಕ್ ಮ್ಯಾಲೆ ಇರೊ 'ಧಾರವಾಡ ಬಾಂಡ್ಸ್' ಅನ್ನುವ ಗ್ರೂಪ್ ಮ್ಯಾಲೆ ಯಾರೋ ಒಬ್ಬರು ಡಾ. ಸಿ.ಎನ್. ಆರ್. ರಾವ್ ಅವರಿಗೂ ಸಹ 'ಭಾರತ ರತ್ನ' ಪ್ರಶಸ್ತಿ ಬಂದದ ಅಂತ ಪೋಸ್ಟ್ ಹಾಕಿದರು. ಸುದ್ದಿ ತಿಳದು ಸಿಕ್ಕಾಪಟ್ಟೆ ಖುಷಿ ಆಗಿ ಹೋತು.

ಡಾ. ಸಿಎನ್ನಾರ್ ರಾವ್
'ಭಾರತ ರತ್ನ' ಪ್ರಶಸ್ತಿ ಪಡೆದವರು ಭಾಳ ಮಂದಿ ಇದ್ದಾರ ಬಿಡ್ರೀ. ಆದರೆ ನಾವು ನೋಡಿದವರು, ಅದೂ ಪ್ರತ್ಯಕ್ಷ ನೋಡಿದವರಿಗೆ ಅದು ಸಿಕ್ಕಿತು ಅಂದ್ರ ಅದಕ್ಕ ಏನೋ ಬೇರೇನೆ ಮಹತ್ವ ಬರ್ತದ ಬಿಡ್ರೀ. ಆ ಖುಷಿನೇ ಬ್ಯಾರೆ. ಡಾ. ಸಿ.ಎನ್. ಆರ್. ರಾವ್ ಅವರನ್ನು ಬಿಟ್ಟರೆ ಬ್ಯಾರೆ ಯಾವ 'ಭಾರತ ರತ್ನ' ಪ್ರಶಸ್ತಿ ವಿಜೇತರನ್ನೂ ಪ್ರತ್ಯಕ್ಷ ನೋಡಿಲ್ಲ ಅಂತ ಮಾಡಿದ್ದೆ. ಆ ಮ್ಯಾಲೆ ಕಂಪ್ಲೀಟ್ ಲಿಸ್ಟ್ ಚೆಕ್ ಮಾಡಿ ನೋಡಿದರೆ ಇನ್ನೂ ಒಬ್ಬರನ್ನ ದೂರಿಂದ ನೋಡಿದ ನೆನಪಾತು. ಅವರೇ ರಾಜೀವ್ ಗಾಂಧೀ. ಧಾರವಾಡಕ್ಕ ಬಂದಿದ್ದರು. 1984 ಒಳಗ. ಆವಾಗ ಮಾತ್ರ ಅವರ ಅವ್ವ ಇಂದಿರಾ ಗಾಂಧೀ ತೀರಿಕೊಂಡಿದ್ದರು. ಎಲೆಕ್ಷನ್ ಪ್ರಚಾರಕ್ಕ ಯೂನಿವರ್ಸಿಟಿ ಗ್ರೌಂಡ್ ಒಳಗ ಹೆಲಿಕ್ಯಾಪ್ಟರ್ ನಿಂದ ಇಳದು, ಕೆಸಿಡಿ ಗ್ರೌಂಡ್ ಗೆ ಭಾಷಣ ಮಾಡಲಿಕ್ಕೆ ಹೋಗಿದ್ದರು. ನಾವೆಲ್ಲಾ ಆವಾಗ ಏಳನೆತ್ತಾ ಹುಡುಗುರು. ರಾಜೀವ್ ಗಾಂಧಿಕಿಂತ ಅವರ ಹೆಲಿಕಾಪ್ಟರ್ ನೋಡಲಿಕ್ಕೆ ಯೂನಿವರ್ಸಿಟಿ ಗ್ರೌಂಡ್ ಗೆ ಹೋದಾಗ, ರಾಜೀವ್ ಗಾಂಧಿ ಒಂದು ದೊಡ್ಡ ಟಾಟಾ ಮಾಡಿ, ಕಾರ್ ಹತ್ತಿ ಹೋಗಿದ್ದನ್ನ ನೋಡಿದ ನೆನಪು. ಆ ಮ್ಯಾಲೆ ಅವರು 1991 ಒಳಗ ಮರಣ ಹೊಂದಿದ ಮ್ಯಾಲೆ ಅವರಿಗೂ 'ಭಾರತ ರತ್ನ' ಬಂತಂತ ಅನ್ನೋದನ್ನ ವಿಕಿಪೀಡಿಯ ನೋಡಿದ ಮ್ಯಾಲೆ ಗೊತ್ತಾತು.

ಡಾ. ಸಿ.ಎನ್. ಆರ್. ರಾವ್ ಅವರ ಬಗ್ಗೆ ಮೊದಲಿಂದಲೂ ಅಲ್ಪ ಸ್ವಲ್ಪ ಗೊತ್ತಿತ್ತು. ಅವರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಸಂಸ್ಥೆಯ ನಿರ್ದೇಶಕರು ಅಂತ ಭಾಳ ವರ್ಷ ಇದ್ದರು. ಪೇಪರ್ ಒಳಗ ಅಲ್ಲೆ ಇಲ್ಲೆ ಸುದ್ದಿ ಬರ್ತಿತ್ತು. ದೊಡ್ಡ ವಿಜ್ಞಾನಿ, ಮಹಾ ಮೇಧಾವಿ ಅಂತ ಆಗಲೇ ಅಂದ್ರ ೧೯೮೦, ೧೯೯೦ ಟೈಮ್ ನಲ್ಲೇ ದೊಡ್ಡ ಹವಾ ಇತ್ತು ಡಾ. ರಾವ್ ಅವರ ಬಗ್ಗೆ.

ಇಂತಹ ಡಾ. ಸಿಎನ್ನಾರ ರಾವ್ ಧಾರವಾಡಕ್ಕೆ ಒಮ್ಮೆ ೧೯೯೦ ಜನವರಿ ಅಥವಾ ಫೆಬ್ರುವರಿ ಒಳಗ ಬಂದಿದ್ದರು. ಕರ್ನಾಟಕ ವಿಶ್ವವಿದ್ಯಾಲಯ ಕೊಟ್ಟ ಗೌಡಾ (ಗೌರವ ಡಾಕ್ಟರೇಟ್) ಪಡೆಯಲು ಬಂದಿದ್ದಾರಾ? ಸರಿ ನೆನಪಿಲ್ಲ.

ಆವಾಗ superconductivity ಅನ್ನೋದು ಸಿಕ್ಕಾಪಟ್ಟೆ hot ಟಾಪಿಕ್. superconductors ತಯಾರ ಆದವು ಅಂದ್ರ ಅದು ಒಂದು ಹೊಸ ಕ್ರಾಂತಿಯನ್ನೇ ಮಾಡಿಬಿಡ್ತದ ಅದು ಇದು ಅಂತ. ಸಿಕ್ಕಾಪಟ್ಟೆ ಪ್ರಾಮಿಸಿಂಗ್ ಫೀಲ್ಡ್ ಆಗಿತ್ತು ಅದು. ರೆಗ್ಯುಲರ್ ನ್ಯೂಸ್ ಪೇಪರ್ ಒಳಗೂ ಅದರ ಬಗ್ಗೆ ಆರ್ಟಿಕಲ್ ಅವು ಇವು ಬರ್ತಿದ್ದವು. ಎಲ್ಲಾ ಕಡೆ ಇರೊ ಕಾಮನ್ ಸುದ್ದಿ ಅಂದ್ರ ಈ ಡಾ. ಸಿಎನ್ನಾರ್ ರಾವ್ ಅನ್ನೊ ಭಾರತೀಯ ವಿಜ್ಞಾನಿ ಸಹ ವಿಶ್ವದ ಕೆಲವೇ ಕೆಲವು ದೊಡ್ಡ ಮಟ್ಟದಲ್ಲಿ superconductivity ಮ್ಯಾಲೆ ಸಂಶೋಧನೆ ಮಾಡುತ್ತಿರುವ ವಿಜ್ಞಾನಿಗಳಲ್ಲಿ ಒಬ್ಬರು ಅಂತ. ಸುದ್ದಿ ಕೇಳಿ ಮಸ್ತ ಖುಷಿ ಆಗ್ತಿತ್ತು ಬಿಡ್ರೀ.

ನಾವೆಲ್ಲಾ ಆವಾಗ ಇನ್ನೂ ಪಿಯೂಸಿ ಸೆಕೆಂಡ್ ಇಯರ್. semiconductor ಬಗ್ಗೆನೇ ಸರಿ ಗೊತ್ತಿರಲಿಲ್ಲ. superconductors ಬಿಡ್ರೀ. ಬಸ್ ಕಂಡಕ್ಟರ್ ಮಾತ್ರ ಸರಿ ಗೊತ್ತಿದ್ದರು. ಅಷ್ಟೇ. ಆದ್ರ ನಮ್ಮ 'ಗಣಿತ ಲೋಕ' ಎಂಬ ಟ್ಯೂಶನ್ ಕ್ಲಾಸಿನ ದೇಶಪಾಂಡೆ ಸರ್ ಮಾತ್ರ ಪಿಯೂಸಿ ಫಿಸಿಕ್ಸ್ ಒಳಗ ಸೆಮಿಕಂಡಕ್ಟರ್ ಬಗ್ಗೆ ಕ್ಲಾಸ್ ತೊಗೊಂಡಾಗ semiconductor ಜೋಡಿನೇ ಸಂಕ್ಷಿಪ್ತವಾಗಿ superconductors ಬಗ್ಗೆ ಸಹಿತ ಹೇಳಿ ಆ superconductor ಬಗ್ಗೆ ಏನೋ ಒಂದು ತರಹದ ಕುತೂಹಲ ಹುಟ್ಟಿಸಿಬಿಟ್ಟಿದ್ದರು. ಗಣಿತಲೋಕದ ದೇಶಪಾಂಡೆ ಸರ್ ಅಂದ್ರ ಹಾಂಗೇ. ಸಣ್ಣ ಮಟ್ಟದ ಸಿಎನ್ನಾರ್ ರಾವ್ ಇದ್ದಂಗ ಅವರು.

ರೈಟ್ ಶಿವಾ!! ರೈಟ್ ಶಿವಾ!!! ಸಪ್ತಾಪುರ ಭಾವಿ ಬಂತು. ಇಳೀರಿ. ಈ ಕ್ವಾಣದಂತಹ ಹುಡುಗ್ಗ ಎಮ್ಮಿಕೆರಿಗೆ ಹಾಪ್ ಟಿಕೆಟ್ರೀ? ಏ...ಫುಲ್ ಟಿಕೆಟ್ ತೊಗೊಳ್ಳಿಕ್ಕೇ ಬೇಕು. ರೀ ಸ್ವಾಮ್ಯಾರ...ಅದು ಲೇಡೀಸ್ ಸೀಟ್ ರೀ. ಬಿಟ್ಟು ಕೊಡ್ರೀ, ಅದು ಇದು ಅಂತ ಕೇವಲ ಸಿಟಿ ಬಸ್ ಕಂಡಕ್ಟರ್ ಉವಾಚ ಕೇಳಿದ್ದ ನಮಗೆ ಈ superconductor ಅಂದ್ರೆ ಏನಪಾ ಅಂತಾ ತಿಳ್ಕೊಬೇಕು ಅಂತ ಭಾಳ ಕುತೂಹಲ ಇತ್ತು.

ಇಂತಾ ಸಮಯದಾಗ ಡಾ. ಸಿಎನ್ನಾರ ರಾವ್ ಅವರು ಧಾರವಾಡಕ್ಕ ಬರೋರು ಇದ್ದಾರ, ಕರ್ನಾಟಕ ಯೂನಿವರ್ಸಿಟಿ ಒಳಗ ಲೆಕ್ಚರ್ ಕೊಡವರು ಇದ್ದಾರ ಅಂತ ಸುದ್ದಿ ಆತು. ಒಂದು ದಿವಸ ಮಧ್ಯಾನ್ಹ ಕರ್ನಾಟಕ ಯೂನಿವರ್ಸಿಟಿ ಮೇನ್ ಬಿಲ್ಡಿಂಗ್ ಒಳಗ ಇರುವ ಸೆನೆಟ್ ಹಾಲಿನಲ್ಲಿ ಲೆಕ್ಚರ್ ಅಂತ ನಿಕ್ಕಿ ಆಗಿ ಪೇಪರ್ ಒಳಗೆ ಸುದ್ದಿ ಬಂದು ನಮಗೂ ತಿಳೀತು. ನಾನು ನಮ್ಮ ದೋಸ್ತ ಪ್ರದೀಪ ಹೆಗಡೆಗೆ, ಏ ನಡೀಲೇ, ದೊಡ್ಡ ಸೈಂಟಿಸ್ಟ್ ಬಂದಾರ, ಲೆಕ್ಚರ್ ಅದ, ಕೇಳಿ ಬರೋಣ. ಮನಿಗೆ ಬಾ. ಕೂಡೆ ಹೋಗೋಣ, ಅಂತ ಹೇಳಿದ್ದೆ.

ಆವಾ ಬಂದಾ ಮಧ್ಯಾನ್ಹ ಮನಿಗೆ. ಬರೋಬ್ಬರಿ ಟೈಮಿಗೆ. ಫೆಬ್ರವರಿ ೧೯೯೦ ಅಂತ ನೆನಪು. ಇಬ್ಬರೂ ಕೂಡಿ ಯೂನಿವರ್ಸಿಟಿಗೆ ಹೋದ್ವೀ. ಸೆನೆಟ್ ಹಾಲ್ ಒಳಗ ಹೋಗಿ ಕೂತ್ವೀ. ಮಸ್ತ ಫುಲ್ ಆಗಿತ್ತು. ಸುಮಾರು ಮಂದಿ ಆ ಕೆಟ್ಟ ಫೆಬ್ರುವರಿ ಹೀಟ್ ಒಳಗೂ ಸೂಟ್ ಹಾಕ್ಕೊಂಡು, ಟೈ ಮತ್ತೊಂದು ಕಟ್ಟಿಕೊಂಡು, ಕರ್ಚೀಪ್ ಒಳಗ ನಿಮಷಕ್ಕೊಮ್ಮೆ ಮಾರಿ ಬೆವರ ಒರಸಿಕೋತ್ತ ಅಡ್ಯಾಡಿಲಿಕತ್ತಿದ್ದರು. ಇವರೊಳಗೇ ಯಾರೋ ಸಿಎನ್ನಾರ್ ರಾವ್ ಇರಬೇಕು ಬಿಡು ಅಂತ ತಿಳಕೊಂಡು, ಏನೋ ಹರಟಿ ಹೊಡಕೋತ್ತ ಕೂತ್ವೀ. ಕಾರ್ಯಕ್ರಮ ಶುರು ಆಗೋದಿತ್ತು ಇನ್ನೇನು.

ಎಲ್ಲಾರೂ ಬಂದು ಸ್ಟೇಜ್ ಮ್ಯಾಲೆ ಕೂತರು. ಆದರೂ ಈ superconductor ಸಿಎನ್ನಾರ್ ರಾವ್ ಯಾರು ಅಂತ ಮಾತ್ರ ತಿಳಿಲಿಲ್ಲ. ಸ್ವಾಗತ ಗೀತೆ, ಅದು ಇದು ಎಲ್ಲಾ ಮುಗೀತು. ಏನೇನೋ ಸ್ವಾಗತ ಭಾಷಣ, ಅತಿಥಿ ಪರಿಚಯ ಎಲ್ಲಾ ಆತು. ಆ ಮ್ಯಾಲೆ ಒಮ್ಮೆ ಕೊನೀಗೇ, ಡಾ. ಸಿಎನ್ನಾರ್ ರಾವ್ ಅವರಿಗೆ ಸ್ವಾಗತ, ಅವರು ಬಂದು ಭಾಷಣ ಮಾಡಬೇಕು, ಅಂತ ಅಂದಾಗ, ಅಂತೂ ಇಂತೂ superconductor ರಾವ್ ಬರ್ತಾರಪಾ ಇನ್ನೇನು ಅಂತ ಆ ಕಡೆ ಈ ಕಡೆ ತಿರುಗಿ ತಿರುಗಿ ನೋಡಿದಿವಿ.

ಆಶ್ಚರ್ಯಕರ ಸಂಗತಿ ಏನು ಅಂದ್ರ ಅಷ್ಟು ದೊಡ್ಡ ವಿಜ್ಞಾನಿ ಸ್ಟೇಜ್ ಮ್ಯಾಲೆ ಇರಲೇ ಇಲ್ಲ. ಅವರು ಹಿಂದೆ ಸಭಿಕರ ಮಧ್ಯೆ ತಮ್ಮ ಇತರೆ ಕವಿವಿ ಪ್ರಾಧ್ಯಾಪಕ ಮಿತ್ರರ ಜೋಡಿ ಆರಾಮ ಕೂತು ಬಿಟ್ಟಿದ್ದರು!!! ಕರೆದ ಕೂಡಲೆ ಹಿಂದಿಂದ ಎದ್ದು ಬಂದರು ಡಾ. ರಾವ್.

ಇವರೇ ಏನು superconductivity ಮ್ಯಾಲೆ ವಿಶ್ವದಲ್ಲಿ ದೊಡ್ಡ ಮಟ್ಟದ ರಿಸರ್ಚ್ ಮಾಡುತ್ತಿರುವರಲ್ಲಿ ಅಗ್ರಗಣ್ಯರು ಅನ್ನಿಸಿಕೊಂಡಿರುವಂತಹ ಡಾ. ಸಿಎನ್ನಾರ್ ರಾವ್?! ಅಂತ ಭಾಳ ಆಶ್ಚರ್ಯ ಆತು. ಸಿಂಪಲ್ ಅಂದ್ರ ಸಿಂಪಲ್ ಆದಮೀ. ಒಂದು ಸಿಂಪಲ್ ಶರ್ಟ್, ದೊಗಲಾ ಬಗಲಾ ಪ್ಯಾಂಟ್, ಬೆಲ್ಟ್ ಅಷ್ಟೇ. ನೋಡಿದರ ಬಾಜೂ ಮನಿ generic ಅಂಕಲ್ ಗತೆ ಇದ್ದಾರ. ಅಷ್ಟು ದೊಡ್ಡ ವಿಜ್ಞಾನಿ ಇಷ್ಟು ಸಿಂಪಲ್ಲಾ???!! ಬಗಲಾಗ ಒಂದು ಬ್ರೀಫ್ ಕೇಸ್ ಇತ್ತು. ಆ ಬ್ರೀಫ್ ಕೇಸ್ ಬಗಲ ಸಂದಿಯೊಳಗ ಸಿಕ್ಕಿಸಿಕೊಂಡಿದ್ದ ಸ್ಟೈಲ್ ಮಾತ್ರ ಥೇಟ್ ಬಸ್ ಕಂಡಕ್ಟರ್ ಅವನ ಆ ಚರ್ಮದ ಬ್ಯಾಗ್ ಒಮ್ಮೊಮ್ಮೆ ಬಗಲಾಗ ಸಿಗಿಸಿಕೊಂಡಿರ್ತಾರ ನೋಡ್ರೀ, ಸೇಮ್ ಹಾಂಗೇ! ಒಟ್ಟಿನ್ಯಾಗ ಬಸ್ ಕಂಡಕ್ಟರ್ ಇರ್ಲಿ ಸೂಪರ್ ಕಂಡಕ್ಟರ್ ಮ್ಯಾಲೆ ರಿಸರ್ಚ್ ಮಾಡೋ ದೊಡ್ಡ ವಿಜ್ಞಾನಿ ಇರಲಿ ಬಗಲ ಸಂದಿಯೊಳಗ ಬ್ರೀಫ್ ಕೇಸ್ ಸಿಗಿಸಿಕೊಳ್ಳೋ ಸ್ಟೈಲ್ ಮಾತ್ರ ಸೇಮ್ ಅಂತ ಕಾಣಸ್ತದ.

ದೊಡ್ಡ ನಗು ಬೀರಿಕೋತ್ತ ಹಿಂದಿಂದ ಎದ್ದು ಬಂದ ಸಿಎನ್ನಾರ್ ರಾವ್ ಅವರು ಸ್ಟೇಜ್ ಮ್ಯಾಲೆ ಹೋಗಲೇ ಇಲ್ಲ. ಅವರು ಸೀದಾ ಹೋಗಿ ನಿಂತಿದ್ದು ಪ್ರೊಜೆಕ್ಟರ್ ಬಾಜೂಕ. ಪ್ರೊಜೆಕ್ಟರ್ ಬಾಜೂಕ ನಿಂತವರೇ, ತಮ್ಮ ಬ್ರೀಫ್ ಕೇಸಿನಿಂದ transparencies ತೆಗೆದರು. ಅವನ್ನ ನೀಟಾಗಿ ಜೋಡಿಸಿಕೊಂಡರು. ಆವಾಗೆಲ್ಲಾ ಈ PowerPoint ಅದು ಇದು ಇರಲಿಲ್ಲ. ಲೆಕ್ಚರ್ ಕೊಡಬೇಕು ಅಂದ್ರ transparencies ತಂದುಕೊಂಡು, ಅದರ ಮ್ಯಾಲೆ ಬರಿಯುವಂತಹ ಸ್ಪೆಷಲ್ ಇಂಕ್ ಇರೋ ಪೆನ್ ತೊಗೊಂಡು ಬಂದು, ವಿಷಯವನ್ನು transparencies ಮ್ಯಾಲೆ ಬರಕೊಂಡು ಹೋಗಿ, ಅದನ್ನ overhead projector ಮ್ಯಾಲೆ ಇಟ್ಟರ ನಿಮ್ಮ material ರೆಡಿ. ನಂತರ ಹೊಡಿರೀ ಹಲಗಿ. ಭಾಷಣ ಮಾಡ್ರೀ.

ತಮ್ಮ ಸ್ವಂತ ಕೈ ಬರಹದಲ್ಲಿ ಸುಂದರವಾಗಿ ಬೇರೆ ಬೇರೆ ಬಣ್ಣದ ಪೆನ್ಸ್ ಉಪಯೋಗಿಸಿ ಡಾ. ಸಿಎನ್ನಾರ್ ರಾವ್ superconductivity ಮೇಲೆ transparencies ಮಾಡಿಕೊಂಡು ಬಂದಿದ್ದರು.

ಒಮ್ಮೆ ಅವರು ಸೆಟಲ್ ಆಗಿ ಮಾತಾಡ್ಲಿಕ್ಕೆ ಶುರು ಮಾಡಿದರು ನೋಡ್ರೀ! ಒಂದು ತಾಸು ಹ್ಯಾಂಗ ಹೋತು ಅನ್ನೋದೇ ಗೊತ್ತಾಗಲಿಲ್ಲ. ಅಷ್ಟು ಮಸ್ತ ಮಾತಾಡಿದರು. ಸಿಂಪಲ್ ಅಂದ್ರ ಸಿಂಪಲ್ ಇಂಗ್ಲಿಷ್ ಭಾಷಾ. ಮುಂಬೋ ಜಂಬೋ ಏನೂ ಇಲ್ಲ. ಇಲ್ಲದ ಒಣಾ ಉಪದೇಶ, ಉದ್ರಿ ಅಡ್ವೈಸ್, ಅದು ಇದು ಕೇಳಲೇ ಬ್ಯಾಡ್ರೀ. superconductivity ಮ್ಯಾಲೆ introductory ಲೆಕ್ಚರ್ ಅಂದ್ರ ಕೇವಲ ಅಷ್ಟೇ. ಇದಕ್ಕೂ ಮುಂಚೆ ಕೆಮಿಸ್ಟ್ರಿ ಡಿಪಾರ್ಟ್ಮೆಂಟ್ ಒಳಗ ಅವರ advanced ಲೆಕ್ಚರ್ ಆಗಿತ್ತು.

ಒಂದು ತಾಸು ಅಮೋಘ ಭಾಷಣ ಮಾಡಿ, ಅದನ್ನ ಒಂದು ಲಾಜಿಕಲ್ ಹಂತಕ್ಕೆ ತಂದು, ಭವಿಷ್ಯದಲ್ಲಿ ಆಗಬಹುದಾದ ಸಂಶೋಧನೆಗಳ ಬಗ್ಗೆ ಮಾತಾಡಿ ಡಾ. ರಾವ್ ಭಾಷಣ ಮುಗಿಸಿದರೆ ಒಂದು ಸಂಗೀತ ಕಚೇರಿ ಮುಗಿದ ಅನುಭವ. ಮಸ್ತ ಚಪ್ಪಾಳಿ ಹೊಡೆದರು ಎಲ್ಲರೂ.

ಏನೋ ಮಾಲಿ ಹಾಕಿಸಿಕೊಳ್ಳಲಿಕ್ಕೋ, ಸನ್ಮಾನ ಮಾಡಿಸಿಕೊಳ್ಳಲಿಕ್ಕೋ ಡಾ. ರಾವ್ ಆ ಕಡೆ ಹೋದರು ಒಂದು ಕ್ಷಣ. ಈ ಕಡೆ ಕವಿವಿ ಚಪರಾಸಿ ಒಬ್ಬ ಅವರ ಅಮೂಲ್ಯ ಬ್ರೀಫ್ ಕೇಸ್, transparencies ಹಿಂದೆ ಮುಂದೆ ಮಾಡಿಬಿಟ್ಟ ಅಂತ ಕಾಣಿಸ್ತದ. ಏ...ಸ್ಟುಪಿಡ್! ಈಡಿಯಟ್! ಅಂತ ಸಣ್ಣದಾಗಿ ಚೀರುತ್ತ ಡಾ. ರಾವ್ ಈ ಕಡೆ ಓಡಿ ಬಂದು ಬಿಟ್ಟರು. ಎಲ್ಲರೆ ಅವರ ಸಾಮಾನು ರಾಡಿ ಎಬ್ಬಿಸಿ ಬಿಟ್ಟಾನು ಅಂತ ಚಿಂತಿ ಇರಬೇಕು ಅವರಿಗೆ. ಆ ಹೊತ್ತಿಗಾಗಲೇ ಮಂದಿ ಎಲ್ಲಾ ಎದ್ದು ಹೊಂಡಲಿಕ್ಕೆ ತಯಾರ ಆಗಿ ಗದ್ದಲ ಶುರು ಆಗಿತ್ತು. ಹಾಂಗಾಗಿ ಡಾ. ಸಿಎನ್ನಾರ್ ರಾವ್ ಚಪರಾಸಿಗೆ ಬೈದಿದ್ದು ನಮ್ಮಂತಹ ಕಿಡಿಗೇಡಿಗಳಿಗೆ ಮಾತ್ರ ಕಂಡು, ಅವತ್ತಿನ ಸಂಜಿ ಹರಟಿ ಒಳಗ superconductivity ಎಲ್ಲಾ ಮರ್ತು ಹೋಗಿ, ಸೂಪರ್ ಕಂಡಕ್ಟರ್ ಸೂಪರ್ ಸಿಎನ್ನಾರ್ ರಾವ್ ಚಪರಾಸಿಯನ್ನು ಹ್ಯಾಂಗ ಅಟ್ಟಿಸಿಕೊಂಡು ಬಂದು ಬೈದರು ಅನ್ನೋದನ್ನ ಮತ್ತ ಮತ್ತ ನೆನಪಿಸಿಕೊಂಡು, ಅದನ್ನ ಆಕ್ಟ್ ಮಾಡಿ ಮಾಡಿ ನಕ್ಕಿದ್ದೆ ನಕ್ಕಿದ್ದು.

ಲೆಕ್ಚರ್ ಕೇಳಿ, ಸೆನೆಟ್ ಹಾಲಿಂದ ಹೊರಗ ಬಂದ್ರ ಇನ್ನೊಬ್ಬ ಖಾಸ್ ದೋಸ್ತ ಅರವಿಂದ ಪಾಟೀಲ ಸಹಿತ ಕಂಡ. ಅವನೂ ಅಲ್ಲೇ ಬಂದಿದ್ದ ಅಂತ. ನಾವು ಬರೋದು ಗೊತ್ತಿಲ್ಲದ ಕಾರಣ ಬ್ಯಾರೆ ಎಲ್ಲೋ ಹೋಗಿ ಕೂತುಬಿಟ್ಟಿದ್ದ. ಅವನೂ ಏನರೆ ಜೋಡಿ ಇದ್ದಿದ್ದ ಅಂದ್ರ, ನಾವು ಏನರೆ ಜೋಕ್ ಮಾಡಿ, ಸಿಕ್ಕಾಪಟ್ಟೆ ನಕ್ಕು, ಸಿಎನ್ನಾರ್ ರಾವ್ ಕಡೆ ಬೈಸಿಕೊಳ್ಳುತ್ತಿದ್ದೆವೋ ಏನೋ? ಯಾರಿಗೊತ್ತು? ಆವಾ ನಾನು ಕೂಡಿ ಇದ್ದಾಗ, ನಗಬಾರದ ಟೈಮ್ ಒಳಗ  ಏನೇನೋ ಹೇಳಿ, ಜೋಕ್ ಮಾಡಿ, ನಕ್ಕು ಬೈಸಿಕೊಂಡಿದ್ದು ಬೇಕಾದಷ್ಟು ಸರೆ ಇತ್ತು. ಏನೋ ಇಲ್ಲಿ ಬಚಾವ್ ಅಷ್ಟೇ!

ಇದೆಲ್ಲಾ ಆಗಿದ್ದು 23 ವರ್ಷಗಳ ಹಿಂದೆ. ಅದಾದ ನಂತರ ಡಾ. ಸಿಎನ್ನಾರ್ ರಾವ್ ಮತ್ತೂ ಏನೇನೋ ಸಾಧಿಸಿ ಬಿಟ್ಟಾರ. ವಿದೇಶ ಒಳಗ ಇದ್ದಿದ್ದರ ಅವರಿಗೆ ನೊಬೆಲ್ ಪ್ರೈಜ್ ಎಂದೋ ಬರ್ತಿತ್ತು ಅಂತ ವೈಜ್ಞಾನಿಕ ಸಮೂಹದಲ್ಲಿ ಮಾತು ನೆಡದಿರ್ತದ. ಅದು ಖರೆ. ಲಗೂನೇ ಅವರಿಗೆ ನೊಬೆಲ್ ಪ್ರೈಜ್ ಬರಲಿ ಅಂತ ಎಲ್ಲರೊಂದಿಗೆ ನಮ್ಮದೂ ಹಾರೈಕೆ!

12 comments:

V.R.BHAT said...

ಭೇಷಾತು ಬಿಡ್ರೀಪಾ, ನೀವಾರ ಸೀಎನ್ನಾರ್ ರಾವ್ ನೋಡೀರಿ ಇನ್ನಾ ನಾವೆಲ್ಲ ಖುದ್ದಾಗಿ ಭೇಟಿಯಾಗಿಲ್ಲೇನ್ರಪಾ..ಒಳ್ಳೇ ಕಥೀ ಹೇಳ್ದಾಂಗೇಳೀರಿ ಬಾಳ ಚಲೋ ಬಂದದ ಬುಡ್ರಿ. ನಿಮ್ಮ ಹಾರೈಕಿ ಜೊತೀಲೆ ನಮ್ಮದೂ ಹಾರೈಕಿ ಸೇರಿಸ್ಕೆಂಬುಡ್ರಲ ...ಶರಣ್ರೀಯಪ್ಪಾ.

Mahesh Hegade said...

ಧನ್ಯವಾದ ಭಟ್ಟರಿಗೆ.

Vijaya said...

chand bardiri..:) dhanyavadagalu..

Mahesh Hegade said...

ಧನ್ಯವಾದ ವಿಜಯಾ ಅವರಿಗೆ.

Unknown said...

wonderful Mahesh. I didn't know Hon.PhD is called as 'GOWDA'. I think this is why our own GOWDA also became Prime minister :-)

ಮೋಹನ ಹಂಪಾಳಿ said...

ಬಹಳ ಸುಂದರ ಸ್ಪಷ್ಟ ಸರಳ ಲೇಖನದಲ್ಲೊಂದು ಸಂದೇಶ ಮೆಚ್ಚುವಹಾಗಿದೆ.

Mahesh Hegade said...

@ಬೃಜೇಶ - ಈಗ ಎಲ್ಲಾರ ಕಡೆ ಗೌಡಾ (ಗೌರವ ಡಾಕ್ಟರೇಟ್) ಇದೆ ಮಾರಾಯಾ. ಭೂಗತ ದೊರೆಗಳಿಂದ ಹಿಡಿದು ಸಿನೆಮಾ ನಟರ ತನಕ ಯಾರನ್ನೂ ಬಿಟ್ಟಿಲ್ಲ ಈ ಗೌಡಾದ ಮಾಯೆ :)

Mahesh Hegade said...

ಮೋಹನ ಹಂಪಾಳಿ ಅವರಿಗೆ ಧನ್ಯವಾದ.

Unknown said...

MAHESHA AVARA BHALA CHANDA BARADIRI..ADOO DHARWAD KANNADA INNO CHALOO BARADIRI....

PRABHUGOUDA HIREGOUDAR

Mahesh Hegade said...

ಧನ್ಯವಾದ ಹಿರೇಗೌಡರ್ ಅವರಿಗೆ.

ವಿ.ರಾ.ಹೆ. said...

ಸಿ ಎನ್ನಾರ್ ರಾಯರಷ್ಟೇ ಸಿಂಪಲ್ಲಾಗಿ ಚೊಲೋ ಇದ್ದು ಬರಹ. ನಾನು ಯಾವ ಭಾರತ ರತ್ನನೂ ನೋಡಿದ್ನಿಲ್ಲೆ ಇನ್ನೂವ!

Mahesh Hegade said...

Thanks Vikas!