Wednesday, January 01, 2014

ಮಾರಿಷಸ್ ಬ್ಯಾಡೋ! ಹೀಗೊಂದು ಪ್ರವಾಸಕಥನ (ಭಾಗ - ೧)

ನಮ್ಮ ದೋಸ್ತ ಚೀಪ್ಯಾ, ಅವನ ಹೆಂಡತಿ ರೂಪಾ ವೈನಿ. ಇನ್ನೂ ಹೊಸ ದಂಪತಿಗಳು. ಆಗಿದ್ದರು. ಈಗ ಸುಮಾರು ಏಳೆಂಟು ವರ್ಷಗಳ ಹಿಂದ. ಹೊಸಾದು ಅಂದ್ರ ಸುಮಾರು ಹಳೇದು ಆಗಿತ್ತು ಬಿಡ್ರೀ ದಾಂಪತ್ಯ. ಕುಂತಿ, ನಿಂತಿ (ಅಲ್ಲಲ್ಲ ನಿಯತಿ) ಎಂಬ ಎರಡು ಕನ್ಯಾರತ್ನಗಳು ಆಗಾಗಲೇ ಆಗಿ ಬಿಟ್ಟಿದ್ದವು. ಆದರೂ ಅವು ಇನ್ನೂ ಸಣ್ಣು ಇದ್ದವು. ದೊಡ್ದಾಕಿ ಕುಂತಿಗೆ ಎಲ್ಲೋ ಮೂರೋ ನಾಲ್ಕೋ ವರ್ಷ. ಸಣ್ಣಾಕಿ ನಿಂತಿ ಇನ್ನೂ ಬಗಲಗೂಸು. ಎಲ್ಲೆ ಒಂದೋ ಅಥವಾ ದೀಡ ವರ್ಷಾಗಿರಬೇಕು ಬಿಡ್ರೀ.

ಒಂದು ದಿವಸ ಅವರ ಮನಿಗೆ ಹೋದಾಗ ಅವರ ಮಾತುಕತಿ ನೆಡದಿತ್ತು.

ಎಲ್ಲರ ಕರಕೊಂಡು ಹೋಗ್ರೀ! ಎಲ್ಲರ ಕರಕೊಂಡು ಹೋಗ್ರೀ! ಮನಿ ಮಠಾ, ಮನಿ ಮಠಾ, ಅಂತ ಹೇಳಿ ಹೇಳಿ, ಮಾಡಿ ಮಾಡಿ, ಸಾಕಾಗಿ ಬಿಟ್ಟದ. ಇದರಾಗ ನಿಮ್ಮವ್ವ ಉರ್ಫ್ ನಮ್ಮತ್ತಿ ಬ್ಯಾರೆ. ಲೇಡಿ ಡ್ರಾಕುಲಾ ಗತೆ ಜೀವಾ ತಿಂತಾರಾ. ರಕ್ತಾ ಹೀರತಾರ. ಹಿಂತಾದ್ರಾಗ ಜೀವನಾ ಸಾಕಾಗಿ ಬಿಟ್ಟದರಿ. ಎಲ್ಲರೆ ಕರ್ಕೊಂಡು ಹೋಗ್ರೀ, ಅಂತ ರೂಪಾ ವೈನೀದು ವರಾತ.

ತಪ್ಪೇನಿಲ್ಲ ಬಿಡ್ರೀ. ರೂಪಾ ವೈನಿ ಈ ಪರಿ ಕೊಯ್ಯಾ ಕೊಯ್ಯಾ nagging ಮಾಡೋವಾಗ ಅವರ ವಯಸ್ಸರೆ ಎಷ್ಟು? ಹೆಚ್ಚೆಚ್ಚಂದ್ರ ಇಪ್ಪತ್ತೆಂಟೋ ಇಪ್ಪತ್ತೊಂಬತ್ತೋ ಅಷ್ಟಾ. ಇನ್ನೂ ಸಣ್ಣ ಯುವತಿಯ ವಯಸ್ಸೇ ಅನ್ನರೀ. ಆ ವಯಸ್ಸಿನ ಮಂದಿಗೆ ಇರಬಹುದಾದ ವಯೋಸಹಜ ಬಯಕೆಗಳೆಲ್ಲ ಅವರಿಗೂ ಇರೋದು ಸಹಜ ನೋಡ್ರೀ. ಮತ್ತ ಅವರು ಮಾಡ್ಲಿಕತ್ತಿದ್ದು ಸಂಸಾರ. ಸನ್ಯಾಸ ಅಲ್ಲ ನೋಡ್ರೀ!

ಎಲ್ಲರ ಕರಕೊಂಡು ಹೋಗ್ರೀ! ಎಲ್ಲರ ಕರಕೊಂಡು ಹೋಗ್ರೀ! ಅಂತ ಜೀವಾ ತಿನ್ನಲಿಕತ್ತಾಳ. ಎಲ್ಲೆ ಕರಕೊಂಡು ಹೋಗಲೀ? ಅಂತ ಚೀಪ್ಯಾ ವಿಚಾರ ಮಾಡಿದ.

ದೂರ ದೂರ ಅಂದ್ರ ಖರ್ಚು ಜಾಸ್ತಿ. ಇಬ್ಬರು ಸಣ್ಣ ಹುಡುಗಿಯರು ಬ್ಯಾರೆ. ಮತ್ತೂ ದೊಡ್ಡ ಕಿರಿ ಕಿರಿ. ಮತ್ತ ಮನಿಯೊಳಗ ರೂಪಾ ವೈನಿ ಬಿಟ್ಟರೆ ಬ್ಯಾರೆ ಹೆಂಗಸೂರು ಇಲ್ಲ. ಚೀಪ್ಯಾನ ವಟಾ ವಟಾ ಅನ್ನೋ ಅವ್ವನ ಬಿಟ್ಟು. ಹಾಂಗಾಗಿ ಮಲ್ಟಿಪಲ್ ದಿವಸದ ಟ್ರಿಪ್ ಮಾಡಲಿಕ್ಕೆ ಆಗೋದಿಲ್ಲ.

ಏನಲೇ ಮಂಗೇಶ? ಎಲ್ಲಿ ಹೋಗಿ ಬರೋಣ ನಾವು ಅಂತೀ? ಏನು ನಿನ್ನ ಅಭಿಪ್ರಾಯ? - ಅಂತ ಎಲ್ಲಾ ಹೋಗಿ ಹೋಗಿ ನನ್ನ ಕಡೆ ಕೇಳಿದ.

ರಾಮತೀರ್ಥಕ್ಕ ಹೋಗಿ ಬಂದು ಬಿಡ್ರೀಪಾ! ಅಂತ ಇಲ್ಲದ ಉದ್ರೀ ಸಲಹೆ ಕೊಟ್ಟೆ. ಕೇಳಿದ ಮ್ಯಾಲೆ ಕೊಡಲಿಲ್ಲ ಅಂದ್ರ ಹ್ಯಾಂಗ?

ಎಲ್ಲದ ಆ ರಾಮತೀರ್ಥ? ಅಂತ ಕೇಳಿದರು ರೂಪಾ ವೈನಿ. ದನಿ ಒಳಗ ಒಂದು ತರಹ ಕಿರಿಕಿರಿ ಇಣುಕಿತ್ತು. ಕಿರಿಕಿರಿಕಿಂತ ಹೋಗಿ ಹೋಗಿ ನನ್ನ ಕಡೆ ಅವರ ಪ್ರವಾಸಕ್ಕೆ ಸಲಹೆ ಕೇಳಿದ ಅವರ ಗಂಡನ ಬುದ್ಧಿಗಿಷ್ಟು ಬೆಂಕಿ ಹಚ್ಚಾ ಅನ್ನೋ ಫೀಲಿಂಗ್.

ರಾಮತೀರ್ಥ...ನಮ್ಮ ಹೊನ್ನಾವರದ ಹತ್ರ ಅದರೀ. ಮುಂಜಾನೆ ಹೋಗಿ ಆರಾಮ ಸಂಜಿಕ್ಕ ಬಂದು ಬಿಡಬಹುದು, ಅಂತ ಹೇಳಿದೆ.

ಏನದ ಅಲ್ಲೆ? ನೋಡಲಿಕ್ಕೆ, ಮಾಡಲಿಕ್ಕೆ? - ಅಂತ ರೂಪಾ ವೈನಿ ಕೇಳಿದರು.

ನೋಡಲಿಕ್ಕೆ ಸುತ್ತಾ ಮುತ್ತಾ ಅಡವಿ, ಕಾಡು, ಮೇಡು ಅದರಿ ವೈನೀ. ಇನ್ನು ಮಾಡಲಿಕ್ಕೆ......ನೋಡ್ರೀ.....ಸ್ನಾನ ಮಾಡಲಿಕ್ಕೆ ಒಂದು ಸಹಜ ಝರಿ ಅದ ನೋಡ್ರೀ. ಸಣ್ಣ ಪ್ರಮಾಣದ ಫಾಲ್ಸ್ ಇದ್ದಂಗ. ಗುಡ್ಡದ ಮ್ಯಾಲಿಂದ ನೀರು ಬಂದು ಬೀಳ್ತಾವ್ರೀ. ಒಂದು ಕಲ್ಲಿನ ಪೈಪ್ ಮಾಡಿ ಕೊಟ್ಟಾರ್ರೀ. ಅದರ ಕೆಳಗ ನಿಂತು ಶಾವರ್ ಬಾತ್ ತೊಗೊಬಹುದು ನೋಡ್ರೀ. ಅಲ್ಲೇ ಗುಡಿನೂ ಅದರಿ ಬಾಜೂಕ. ಹೋಗಿ ಬರ್ರಿ. ಮಸ್ತ ಆಗ್ತದ ಟ್ರಿಪ್, ಅಂತ ಹೇಳಿದೆ.

ಯಾಕ ನಮ್ಮ ಮನಿಯಾಗ ಸ್ನಾನ ಮಾಡಲಿಕ್ಕೆ ಕೇಡು ಬಂದದ ಅಂತ ಹೇಳಿ ನಿಮ್ಮ ಹೊನ್ನಾವರದ ತನಕಾ ಹೋಗಿ, ಝರಿ ಕೆಳಗ ನಿಂತು ಸ್ನಾನ ಮಾಡಿ ಬರಬೇಕಾ? ಕೆಲಸಿಲ್ಲೇನು ಬ್ಯಾರೇದು? ಮತ್ತೇನು ಅದ ಅಲ್ಲೆ? - ಅಂತ ಆಖರೀ ಪ್ರಶ್ನೆ ಕೇಳೋಹಾಂಗ ಗದರಿಸಿ ಕೇಳಿದರು ರೂಪಾ ವೈನಿ.

ಒಂದು ಗುಹಾ ಅದ ನೋಡ್ರೀ. ಆ ಗುಹಾದ ವಿಶೇಷತೆ ಏನು ಅಂದ್ರ...............ಅಂತ ಹೇಳೋಣ ಅನ್ನೋದ್ರಾಗ ರೂಪಾ ವೈನಿ ಕೋರ್ಟ್ ಸರ್ಕಲ್ ಒಳಗ ನಿಂತ ಟ್ರಾಫಿಕ್ ಪೊಲೀಸನ ಗತೆ ಕೈಯೆತ್ತಿ, ಥಾಂಬಾ, ಥಾಂಬಾ, ಅಂತ ಸನ್ನಿ ಮಾಡಿದರು. ಹೀಂಗ ಅರ್ಧಕ್ಕ ಮಾತು ಕಟ್ಟು ಮಾಡೋರು ಪೋಲಿಸನ ಗತೆ ಒಂದು ಸೀಟೀನೂ ಹೊಡೆದುಬಿಟ್ಟಿದ್ದರ ಆಗಿತ್ತು. ಅsssss....ಇವರನ್ನು ತಂದು. ಪೂರ್ತ ಮಾತಾಡಲಿಕ್ಕೆ ಬಿಡೋದಿಲ್ಲ.

ಏನು ಗುಹಾದಾಗ ಕೂತು ತಪಸ್ಸು ಮಾಡಲಿಕ್ಕಾ? ನಿನ್ನ ಗತೆ ಮೂರು ತಿಂಗಳಕ್ಕೊಮ್ಮೆ ತಪಸ್ಸು ಮಾಡಲಿಕ್ಕೆ ಹೊಂಟಿಲ್ಲ ನಾವು. ಏನೋ ಮನಿ ಕೆಲಸಾ, ಅದೇ ಸಂಸಾರದ ತಾಪತ್ರಯ, ಅದೇ ಹುಡುಗುರ ಸಾಲಿ, ಅದೇ ಗಂಡಾ(!), ಅದೇ ಮನಿ ಅಂತ ಬ್ಯಾಸರ ಬಂದದ. ಅದಕ್ಕ ಟ್ರಿಪ್ ಹೋಗಿ ಬರೋಣ ಅಂದ್ರ ಅಲ್ಲೆಲ್ಲೋ ಅದ್ಯಾವದೋ ತೀರ್ಥಕ್ಕ ಹೋಗ್ರೀ, ಝರಿ ಕೆಳಗ ಸ್ನಾನಾ ಮಾಡ್ರೀ, ಗವಿಯೊಳಗ ಕೂತು ತಪಸ್ಸು ಮಾಡ್ರೀ ಅಂತಿಯಲ್ಲೋ?! ಖಬರ್ಗೇಡಿ ತಂದು, ಅಂತ ವೈನಿ ಝಾಡಿಸಿದರು.

ಏನಲೇ ಚೀಪ್ಯಾ, ವೈನಿ, ಅದೇ ಗಂಡಾ, ಅದೇ ಮನಿ ಅಂತ ಅನ್ನಲಿಕತ್ತಾರ? ಏನು ವಿಚಾರ ಅದ ಇಬ್ಬರದ್ದೂ? ಪ್ರವಾಸದಿಂದ ಬರೋವಾಗ ಗಂಡಾ ಹೆಂಡತಿ ಆಗೇ ಬರವರೋ ಅಥವಾ ಏನರೆ ಗಂಡಾಗುಂಡಿ ಮಾಡಿಕೊಂಡು ಬ್ಯಾರೆ ಬ್ಯಾರೆ ಬರೋ ವಿಚಾರ ಅದನೋ? ಹಾಂ? - ಅಂತ ಕೇಳಿದೆ. ಹೇಳಲಿಕ್ಕೆ ಬರೋದಿಲ್ಲ ನೋಡ್ರೀ. ಮೊದಲು ಡೈವೋರ್ಸ್ ನಂತರ ಮದ್ವೀ ಅನ್ನೋ ಕಾಲ ಇದು.

ಸುಮ್ಮ ಕೂಡೋ!!! ಇಲ್ಲದ ಉಪದ್ವಾಪಿತನಾ ಮಾಡಬ್ಯಾಡ. ಏಳೇಳು ಜನ್ಮದ ಅನುಬಂಧ ಇರ್ತದ, ಅಂತ ಇಬ್ಬರೂ ಕೂಡೆ ಬೊಂಬಡಾ ಬಾರಿಸಿದರು. ಮಾರಿ ನೋಡಿದರ ಏಳೇಳು ಜನ್ಮದ ಶನಿ ಇರ್ತದ ಅನ್ನೋ ಲುಕ್ ಇಬ್ಬರ ಮಾರಿ ಮ್ಯಾಲೂ!

ರೀ ವೈನಿ, ಆ ರಾಮತೀರ್ಥದಾಗ ಇರೋ ಆ ಗುಹಾ ಹಿಡಕೊಂಡು ಹೋದ್ರ ಸೀದಾ ಗೋಕರ್ಣ ಮುಟ್ಟತದ ಅಂತ ಪ್ರತೀತಿ ಅದರೀ. ಹಿಂದಿನ ಕಾಲದಾಗ ಋಷಿ ಮುನಿಗಳು ಹಾಂಗೇ ಹೋಗಿ ಗೋಕರ್ಣ ಸೇರಿಕೋತಿದ್ದರಂತರೀ. ಗೊತ್ತದ ಏನ್ರೀ? - ಅಂತ ಹೇಳಿದೆ.

ರಾಮತೀರ್ಥದಿಂದ ಗುಹಾ ಹಿಡಕೊಂಡು ಹೋಗಿ ಗೋಕರ್ಣದ ಕೋಟಿತೀರ್ಥ ಮುಟ್ಟಿಕೋ ಅಂತಿಯಾ? ಹಾಂ? - ಅಂತ ಕೇಳಿದರು ರೂಪಾ ವೈನಿ. ಸ್ವಲ್ಪ irritate ಆಗಿದ್ದರು.

not a bad idea! ಹೋಗೋದು ರಾಮತೀರ್ಥಕ್ಕೆ ಆದರೂ ಗೋಕರ್ಣದ ಕೋಟಿತೀರ್ಥದಾಗ ಎದ್ದು ಬರಬಹುದು ನೋಡ್ರೀ. ವಿಚಾರ ಮಾಡ್ರೀ, ಅಂತ ಅಂದೆ.

ಬ್ಯಾಡಪಾ ಬ್ಯಾಡಾ. ಮೊದಲೇ ಆ ಹೊಲಸ್ ಗೋಕರ್ಣದ ಕೋಟಿತೀರ್ಥದಾಗ ಕೋಟಿ ಮಂದಿ ಹೊಲಸ್ ಸೇರಿ, ನೆಲ ಕಾಣದಷ್ಟು ರಾಡಿ ಎದ್ದು, ನೀರು ಹಸಿರು ಆಗ್ಯದ. ಅಂತಾ ಹೇಶಿ ನೀರಿನ್ಯಾಗೇ ಎಲ್ಲಿಂದಲೋ ಒಂದು ಮೊಸಳಿ ಬ್ಯಾರೆ ಬಂದು ಸೇರಿಕೊಂಡುಬಿಟ್ಟದ ಅಂತ. ನಾವೇನು ವಾಪಸ್ ಬರಬೇಕೋ ಬ್ಯಾಡೋ? ಏನಂತ ಹೇಳ್ತಿಯೋ ಹುಚ್ಚಾ? ಹಾಂ? - ಅಂತ ಬೈದರು ವೈನಿ.

ಹಾಂಗಿದ್ದರ ಅಂಬುತೀರ್ಥಕ್ಕ ಹೋಗಿ ಬಂದು ಬಿಡ್ರೀ. ಮಸ್ತ ಅದ ಜಾಗಾ. ಏನಲೇ ಚೀಪ್ಯಾ? ಅಂಬುತೀರ್ಥಕ್ಕ ಕರಕೊಂಡು ಹೋಗಿ ಬಂದು ಬಿಡಲೇ. ಅಲ್ಲೇ ಶಿವಮೊಗ್ಗಾ, ತೀರ್ಥಹಳ್ಳಿ ಬಾಜೂಕೇ ಅದ. ಶರಾವತಿ ನದಿ ಉಗಮ ಸ್ಥಾನ ಮಾರಾಯ. ಭಾಳ ಚಂದ ಅದ. ಹೋಗಿ ಬರ್ರಿಲೇ, ಅಂತ ಇನ್ನೊಂದು ಐಡಿಯಾ ಕೊಟ್ಟೆ.

ಅಲ್ಲೋ ಮಂಗೇಶ, ಏನು ಬರೇ ರಾಮತೀರ್ಥ, ಕೋಟಿತೀರ್ಥ, ಅಂಬುತೀರ್ಥ ಅಂತ ತೀರ್ಥಗಳ ಹೆಸರೇ ಹೇಳಲಿಕತ್ತಿಯಲ್ಲಾ? ಏನು ರಾಯರಿಗೆ 'ತೀರ್ಥ' ಹೆಚ್ಚಾಗ್ಯದೋ ಅಥವಾ ಕಮ್ಮಿ ಆಗ್ಯದೋ? ಹಾಂ? ಅಂತ ಕೇಳಿದ ರೂಪಾ ವೈನಿ, ಏನಾಗ್ಯದರೀ ನಿಮ್ಮ ಹುಚ್ಚ ದೋಸ್ತಗ? ಹಾಂ? ನೀವು ಬ್ಯಾರೆ ಎಲ್ಲಾ ಹೋಗಿ ಹೋಗಿ ಇವನ ಕಡೆ ಎಲ್ಲೆ ಪ್ರವಾಸ ಹೋಗಿ ಬರೋಣ ಅಂತ ಕೇಳಲಿಕತ್ತೀರಿ ನೋಡ್ರೀ. ಆವಾ ಎಲ್ಲರೆ ಅವನ  ಆ ಕುಟೀರದಂತಹ ರೂಂ ಬಿಟ್ಟು ಹೊರಗ ಬಿದ್ದಿದ್ದು ನೋಡಿರಿ ಏನು? ಉದ್ಯೋಗಿಲ್ಲ ನಿಮಗ, ಅಂತ ಚೀಪ್ಯಾಗೂ ಝಾಡಿಸಿದರು ವೈನಿ.

ಲೇ, ದೋಸ್ತಾ, ತೀರ್ಥ ಏನಿದ್ದರೂ ತೊಗೋಳ್ಳಿಕ್ಕೆ ಮಾತ್ರ. ಹೋಗಲಿಕ್ಕೆ ಅಲ್ಲ. ತೀರ್ಥ ಬಿಟ್ಟು ಬ್ಯಾರೆ ಏನರೆ suggest ಮಾಡಲೇ ಮಂಗ್ಯಾನಿಕೆ, ಅಂತ ಚೀಪ್ಯಾ ಸಹಿತ ಹೇಳಿಬಿಟ್ಟ!

ಹಾಂಗಿದ್ದರ ವೈನಿ ಕರ್ಕೊಂಡು ಮಾರಿಷಶ್ ಗೆ ಹೋಗಿ ಬಂದು ಬಿಡಲೇ ಚೀಪ್ಯಾ. ಮಸ್ತ ಆಗಿ ಹನಿಮೂನ್ ಮಾಡಿ ಬರ್ರಿ. ನಿಮ್ಮದು ಹನಿಮೂನ್ ಆಗಿಲ್ಲಲ್ಲ ಹ್ಯಾಂಗೂ. ಈಗ ಮಾಡ್ರಿಲೆ. better late than never! - ಅಂತ ಹೇಳಿದೆ.

ಏ! ಯಾಕಪಾ ಮಂಗೇಶ? ಯಾಕಾಗಿಲ್ಲ ನಮ್ಮ ಹನಿಮೂನು? ಮರ್ತಿ ಏನು ನಿಮ್ಮ ಚೀಪ್ಯಾ ಸಾಹೇಬರು ನನ್ನ ಎಲ್ಲೇ ಹನಿಮೂನಿಗೆ ಕರಕೊಂಡು ಹೋಗಿದ್ದರು ಅಂತ? ಹಾಂ? - ಅಂತ ರೂಪಾ ವೈನಿ ಏನೋ ಮೆದುಳಿಗೆ ಕೈ ಹಾಕಿದರು.

ಹನಿಮೂನಿಗೆ ಹೋಗಿದ್ರ್ಯಾ? ಎಲ್ಲೆ? ನೆನಪಾಗವಲ್ಲತು? ಅಂತ ತಲಿ ಕೆರಕೊಂಡು, ಎಲ್ಲೆ ಕರಕೊಂಡು ಹೋಗಿದ್ದಿಲೆ ಚೀಪ್ಯಾ? ಛುಪಾ ರುಸ್ತುಂ ಸೂಳಿಮಗನಾ! ಅಂತ ಅಂದು ಚೀಪ್ಯಾನ ಡುಬ್ಬದ ಮ್ಯಾಲೆ ಒಂದು ಕೊಟ್ಟೆ.

ಚೀಪ್ಯಾ ಹೇಳಲೋ ಬ್ಯಾಡೋ ಅಂತ ಮಿಜಿ ಮಿಜಿ ಮಾಡಿದ.

ಹೇಳ್ರೀ! ಹೇಳಿ ಸಾಯ್ರೀ(!). ಎಲ್ಲೆ ಕರಕೊಂಡು ಹೋಗಿದ್ದಿರಿ ಅಂತ ಅಂತ ರೂಪಾ ವೈನಿ ತಿವಿದರು.

ಚೀಪ್ಯಾ ತಲಿ ತಗ್ಗಿಸಿದ. ಎಲ್ಲಿಂದ ಹೇಳಿಯಾನು? ಏನೋ ಲಫಾಡಾ ಮಾಡಿಕೊಂಡಿರಬೇಕು.

ಯಾವ ಮಾರಿ ಇಟಗೊಂಡು ಏನ್ ಹೇಳ್ತಾರ ಇವರು? ನಾನೇ ಹೇಳತೇನಿ ತೊಗೋ, ಅಂತ ವೈನಿ ಹೇಳಲಿಕ್ಕೆ ರೆಡಿ ಆಗಿದ್ದರು. ಅಷ್ಟರಾಗ ಯಾರೋ ಬಾಗಲಾ ಬಡಿದರು. ವೈನಿ ಆ ಕಡೆ ಹೋದರು. ಈ ಕಡೆ ಚೀಪ್ಯಾ ಮಂಗ್ಯಾನ ಮಾರಿ ಮಾಡಿಕೊಂಡು ಮುಂದಾಗೋ ಮಂಗಳಾರತಿಗೆ ಸಿದ್ಧನಾದ.

ಮಂಗೇಶಾ, ನಿಮ್ಮ ಚೀಪ್ಯಾ ಹನಿಮೂನಿಗೆ ಅಂತ ನನ್ನ ಒಂದು ವಾರ ಹೋಗಿ ಹೋಗಿ ಶ್ರವಣಬೆಳಗೋಳಕ್ಕ ಕರಕೊಂಡು ಹೋಗಿಬಿಟ್ಟಿದ್ದರಪಾ. ಕೆಟ್ಟ ಅಸಹ್ಯ! - ಅಂತ ನಾಚಿಕೆ ಭರಿತ ಸಿಟ್ಟಿನಿಂದ ರೂಪಾ ವೈನಿ ಹೇಳಿದರು.

ಶ್ರವಣಬೆಳಗೊಳಕ್ಕ ಹೋದರೇನಾತ ರೂಪಾ? ಛೊಲೋ ಆಗಿತ್ತೋ ಇಲ್ಲೋ? ಹಾಂ? - ಅಂತ ಚೀಪ್ಯಾ ಇನ್ನೋಸೆಂಟ್ ಆಗಿ ಕೇಳಿದ.

ಛೊಲೋ ಅಂತ ಛೊಲೋ! ಹನಿಮೂನ್ ಅಂದ್ರ ಕನ್ನಡ ಸಾಲಿ ವಾರ್ಷಿಕ ಪ್ರವಾಸ ಅಂತ ತಿಳಕೊಂಡು ಶ್ರವಣಬೆಳಗೋಳಕ್ಕ ಕರಕೊಂಡು ಹೋಗಿದ್ದಿರಿ ಏನು? ಯಾರು ಐಡಿಯಾ ಕೊಟ್ಟಿದ್ದರು ನಿಮಗ? ಹೆಸರು ಹೇಳ್ರೀ. ಹೋಗಿ, ಹುಡುಕಿ, ಪಾತಾಳದಾಗಿದ್ದರೂ ಹುಡುಕಿ, ಹೆಣಾ ಹಾಕಿ ಬರ್ತೇನಿ, ಅಂತ ರೂಪಾ ವೈನಿ ಚೀರಾಡಿದರು.

ಹೋಗ್ಗೋ ಚೀಪ್ಯಾ! first step on the wrong foot ಅನ್ನೋ ಹಾಂಗ ಮೊದಲನೇ ಹೆಜ್ಜೆನೇ ತಪ್ಪು ಇಟ್ಟಿದ್ಯಲ್ಲೋ. ರೂಪಾ ವೈನಿ ಎಮ್ಮಿಕೇರಿ ಸಾಲಿ ಆದರೇನಾತು? ಅವರೂ ಅಂತಾ ಕಡೆ ಎಲ್ಲ ಟ್ರಿಪ್ಪಿಗೆ ಹೋಗಿ ಬಂದಿರ್ತಾರಪಾ. ಹೋಗಿ ಹೋಗಿ ಗೋಮಟೇಶ್ವರನ್ನ ತೋರಿಸ್ಕೊಂಡು ಬಂದ್ಯಾ? ಅದೂ ಹನಿಮೂನಿನ್ಯಾಗ? ಭಲೇ! - ಅಂತ ನಾನೂ ಸ್ವಲ್ಪ ಇಟ್ಟೆ. ಹಿಂದ ಬತ್ತಿ.

ಸಾಕು ಸುಮ್ಮ ಕೂಡಪಾ, ಅನ್ನೋ ಲುಕ್ ಚೀಪ್ಯಾ ಕೊಟ್ಟ.

ಮಂಗೇಶಾ, ಅದೂ ಎಂತಾ ಜಗದಾಗ ಹೋಟೆಲ್ ರೂಂ ಬುಕ್ ಮಾಡಿದ್ದರು ಗೊತ್ತದ ಏನು? ಈ ಸಮದ್ರ ದಂಡಿ ಮ್ಯಾಲೆ ಇರೋ ಹೊಟೆಲ್ಲಿನಾಗ sea facing rooms ಅಂತ ಇರ್ತಾವ ನೋಡು ಹಾಂಗೆ ಶ್ರವಣಬೆಳಗೊಳದಾಗ 'ಗೊಮಟಾ ಫೇಸಿಂಗ್ ರೂಂ' ಅಂತ ಇರ್ತಾವ. ಆ ರೂಮಿಂದ ಎಲ್ಲಿಂದನೇ ನೋಡು, ಹ್ಯಾಂಗೇ ನೋಡು, ಬೇಕಾದ್ರ ಗಜಂ ನಿಂತೇ ನೋಡು, ಕಣ್ಣು ಬಿಟಗೊಂಡು ನೋಡು, ಕಿವಿ ಮುಚ್ಚಿಕೊಂಡು ನೋಡು, ಗೋಮಟೇಶ್ವರ ಕಂಡೇ ಕಾಣ್ತಾನ. ಅಸಡ್ಡಾಳ! ಹೊತ್ತಿಲ್ಲ ಗೊತ್ತಿಲ್ಲ! ಬರೇ ಅದs ಅದ. ನೋಡಿ ನೋಡಿ ಸಾಕಾತು! - ಅಂತ ರೋಷದಿಂದ ಹೇಳಿದ ರೂಪಾ ವೈನಿ ಚೀಪ್ಯಾನ ಯಾವದಕ್ಕೂ ಉಪಯೋಗಿಲ್ಲದ ಮುದಿಯೆತ್ತನ್ನ ನೋಡೋ ಹಾಂಗ ನೋಡಿ, ನಿಮ್ಮ ಜನುಮಕ್ಕಿಷ್ಟು ಬೆಂಕಿ ಹಾಕಾ ಅನ್ನೋ ಲುಕ್ ಕೊಟ್ಟರು.

ಮತ್ತ ಏನೋ ಗೊಣಗಿದರು. ನನಗ ಕೇಳಿಸ್ತು.

ಹೊರಗ ನೋಡಿದ್ರ ಆ ಗೋಮಟೇಶ್ವರ. ಒಳಗ ನೋಡಿದ್ರ ಆ ಗೋಮಟೇಶ್ವರನ್ನ ಅಪರಾವತಾರ ಈ ನಿಮ್ಮ ದೋಸ್ತ ಚೀಪ್ಯಾ ಅನ್ನೋ ಸಣ್ಣ ಗೋಮಟೇಶ್ವರ. ಆವಾ ಬುದ್ಧಾ ಏನೋ ಗಚ್ಚಾಮಿ ಎಲ್ಲೋ ಗಚ್ಚಾಮಿ ಅಂದ್ರ ಇವರಿಬ್ಬರೂ ಎಲ್ಲಾ ವಸ್ತ್ರಾ ಬಿಚ್ಚಾಮಿ ಮಾಡಿಕೊಂಡು ನಿಂತು ಬಿಟ್ಟಾರ. ಹೇಶಿಗೋಳು. ಒಂದು ವಾರ ಶಿಕ್ಷೆ ಸಾಕಾಗಿ ಹೋತು! - ಅಂತ ಮಣ ಮಣ ಅಂದ್ರು.

ಏನ್ರೀ ವೈನಿ, ಚೀಪ್ಯಾ ರೂಮಿನ್ಯಾಗ ಗೋಮಟೇಶ್ವರ, ಏನೋ ಬಿಚ್ಚಿ ನಿಂತಿದ್ದ ಅಂತ ಏನೋ ಅಂದರೆಲ್ಲಾ? ಏನು? - ಅಂತ ಕೇಳಿದೆ.

ಸುಮ್ಮ ಕೂಡೋ!!! ಗಪ್! - ಅಂತ ದಂಪತಿಗಳು ಇಬ್ಬರೂ ಕೂಡೆ ಒದರಿದರು.

ಬಿಚ್ಚಾಮಿ, ಉಚ್ಚಾಮಿ ಅದು ಇದು ಅಂತ ದಂಪತಿಗಳು ತಾವು ಅಂತಾರ. ಸಂದರ್ಭದೊಡನೆ ಸ್ಪಷ್ಟೀಕರಣ ಕೇಳಿದ್ರ ಗಪ್ ಕೂಡೋ ಅಂತ ಹೊಯ್ಕೋತ್ತಾರ. ಇದೊಳ್ಳೆ ಕಥಿ ಆತು!

ಕುಚ್ ಅಂದರ್ ಕಾ ಮಾಮಲಾ ಹೈ. ಹಾಳಾಗಿ ಹೋಗ್ಲೀ. ನಮಗ್ಯಾಕ? ಅಂತ ಬಿಟ್ಟೆ.

ರೂಪಾ ವೈನಿ ತೀರ್ಥವಿಲ್ಲದ ಹೆಸರಿನ ಊರಾದ ಮಾರಿಷಸ್ ಅನ್ನೋ ಹೆಸರು ಕೇಳಿ ಫುಲ್ excite ಆಗಿ ಬಿಟ್ಟರು. ನಡು ಶ್ರವಣಬೆಳಗೊಳದ ಕಥಿ ಹೇಳಲಿಕ್ಕೆ ಹೋಗಿ ನಮ್ಮ ಮಾತು ಹಾದಿ ತಪ್ಪಿತ್ತು. ವಾಪಸ್ ಬಂತು ಈಗ.

ಎಲ್ಲದ ಮಂಗೇಶ ಆ ಏನೋ ಮಾರಿ ಶಸ್ ಅನ್ನೋ ಊರು? ಫಾರಿನ್ನ ಏನು? ನಡ್ರೀ. ನಾವೂ ಫಾರಿನ್ನ್ ರಿಟರ್ನ್ಡ್ ಆಗೋಣ - ಅಂತ ಉತ್ಸಾಹದಿಂದ ಹೇಳಿದರು.

ವೈನಿ ಮಾರಿಷಸ್ ಅಂದ್ರ ಇಂಡಿಯಾ ಮತ್ತ ಆಫ್ರಿಕಾ ನಡುವಿರೋ ಒಂದು ನಡುಗಡ್ಡಿರೀ. ಸಮುದ್ರದ ನಡು ಅದ. ಹೋಗಿ ಬರ್ರಿ.  ಮಸ್ತ ಅದ ಅಂತ ಕೇಳೇನಿ, ಅಂತ ಹೇಳಿದೆ.

ಮಾರಿಷಸ್

ಹಾಂ???!! ಏನು ಗಡ್ಡಿ? ಸರಿತ್ನಾಗಿ ಹೇಳೋ ಮಂಗ್ಯಾನಿಕೆ. ಆ ಗಡ್ಡಿ ಈ ಗಡ್ಡಿ ಅಂದ್ರ ಕಪಾಳಗಡ್ಡಿಗೆ ಒಂದು ಕೊಡತೇನಿ ನೋಡು ಮತ್ತ. ಹಾಂಗ ಒಂದು ಕೊಟ್ಟರ ಸೀದಾ ಸೀದಾ ಮಾತಾಡ್ತೀ. ಮೊದಲು ಆ ತೀರ್ಥ ಈ ತೀರ್ಥ ಅಂತ ಇಲ್ಲದ ಐಡಿಯಾ ಕೊಟ್ಟಿ. ಈಗ ಏನು ಗಡ್ಡಿ ಹಚ್ಚಿ? ಹಾಂ? ಮಸ್ಕಿರಿ ಏನು? - ಅಂತ ವೈನಿ ಬೈದರು.

ಹೋಗ್ಗೋ ಇವರ!!! ಇಂಗ್ಲೀಷ್ ಒಳಗ island ಅಂತ ಹೇಳಬಹುದಿತ್ತು. ಅವರ ಇಂಗ್ಲೀಷ್ ತುಟ್ಟಿ. ಅದಕ್ಕ ಸ್ವಚ್ಚ ಕನ್ನಡ ಒಳಗ ನಡುಗಡ್ಡೆ ಅಂದ್ರ ಅದು ಉಳ್ಳಾಗಡ್ಡಿ, ಗೆಣಸು, ಬಟಾಟಿ ತರಹದ ಯಾವದೋ ಗಡ್ಡಿ ಅಂತ ತಿಳ್ಕೊಂಡು ಸಿಟ್ಟಿಗೆದ್ದು ನನ್ನ ಕಪಾಳಗಡ್ಡಿಗೆ ಕೊಡಲಿಕ್ಕೆ ರೆಡಿ ಆಗಿಬಿಟ್ಟಾರ ವೈನಿ. ಅವರು ಕಪಾಳಕ್ಕ ಮತ್ತೊಂದು ಗಡ್ಡಿಗೆ ಕೊಡೋದೆಲ್ಲ ಏನಿದ್ದರೂ ಅವರ ಪತಿದೇವರಾದ ಚೀಪ್ಯಾಗs ಇರಲಿ ನಮಗ ಬ್ಯಾಡ ಅಂತ ಹೇಳಿ ನಡುಗಡ್ಡೆಗೆ ಏನನಬಹುದು? ಅಂತ ವಿಚಾರ ಮಾಡಿದೆ.

ಹಾಂ!! ಹೊಳೀತು!!

ದ್ವೀಪ!!!

ರೀ...ವೈನಿ....ಮಾರಿಷಸ್ ಅಂದ್ರ ಒಂದು ದ್ವೀಪ. ದ್ವೀಪ ದೇಶ. ಸಮುದ್ರದ ನಡು ಒಂದs ಅದರೀ, ಅಂತ ಹೇಳಿದೆ.

ದ್ವೀಪಾ!? ಅಂದ್ರ ಸಮುದ್ರದ ನಡೂ ಇರೋದು. ಅಲ್ಲೆಲ್ಲ ನಾ ಹೋಗಂಗಿಲ್ಲಪಾ. ಸಮುದ್ರದ ನಡು ಇರೋ ದ್ವೀಪಕ್ಕ ಇಲ್ಲ ಅಂದ್ರ ಬಿಲ್ಕುಲ್ ಇಲ್ಲ. ಅದು ಬ್ಯಾಡೇ ಬ್ಯಾಡ, ಅಂತ ವೈನಿ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿ ಬಿಟ್ಟರು.

---

ರೂಪಾ ವೈನಿ ಯಾಕ ಮಾರಿಷಸ್ ಬ್ಯಾಡ ಅಂದ್ರು? ಮಾರಿಷಸ್ ಬ್ಯಾಡಂದ್ರ ಎಲ್ಲೆ ಪ್ರವಾಸ ಹೋದರು? ಅಲ್ಲೆ ಏನಾತು? - ಅನ್ನೋದರ ಬಗ್ಗೆ ಪ್ರವಾಸಕಥನ ಮುಂದುವರಿಯಲಿದೆ.


ಸಶೇಷ (ಮುಂದುವರಿಯಲಿದೆ)......ಭಾಗ-೨ ಇಲ್ಲಿದೆ.

** ಕೆಲವೊಂದು ಬ್ಲಾಗ್ ಪೋಸ್ಟ್  ಭಾಳ ಉದ್ದ ಇರ್ತಾವ. ಧಾರವಾಹಿ ಮಾಡಿ ಬರಿ ಅಂತ ಕೆಲವು ಮಂದಿ ಸಹೃದಯಿಗಳ ಸಲಹೆ. ಅದರ ಪ್ರಕಾರ ಒಂದು ಪ್ರಯತ್ನ. ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದ.

8 comments:

ಶಶಾಂಕ ತೆಂಕೋಡು said...

Chanagiddu. Post udda idre dharavahi madi bariri. adre ondsala mugida mele ellanu onde kade siga hange ondu link kodi. Sorry Officenalli Kannada bariyakke kashta.

Mahesh Hegade said...

ತುಂಬಾ ಧನ್ಯವಾದ!

ಹಾಗೇ ಮಾಡುವ ವಿಚಾರವಿದೆ.

ಓದಿ ತಿಳಿಸಿದ್ದಕ್ಕೆ ಧನ್ಯವಾದ.

ಹೊಸ ವರುಷದ ಶುಭಹಾರೈಕೆಗಳೊಂದಿಗೆ.

Vimarshak Jaaldimmi said...


Very good idea for a new year!

Dharavahi-style keeps the suspense flowing over time!!

Anonymous said...

chennagide...

Mahesh Hegade said...

ಧನ್ಯವಾದ!

Vimarshak Jaaldimmi said...


Keenly waiting for Part II!

Anonymous said...

ತುಂಬಾ ಚೆನ್ನಾಗಿದೆ.
ಮುಂದಿನ ಭಾಗಕ್ಕೆ ಕಾಯುತಿದ್ದೀನಿ...........

ಧನ್ಯವಾದಗಾಳು

Mahesh Hegade said...

ಭಾಗ-೨ ಹಾಕಿದ್ದೇನೆ ಓದಿ.

ಓದಿ ತಿಳಿಸಿದ್ದಕ್ಕೆ ಧನ್ಯವಾದ!