Wednesday, January 08, 2014

ಮಾರಿಷಸ್ ಬ್ಯಾಡೋ! ಹೀಗೊಂದು ಪ್ರವಾಸಕಥನ (ಭಾಗ - ೨)

(ಭಾಗ - ೧. ಇಲ್ಲಿಯವರಿಗೆ ಆದದ್ದು........ಚೀಪ್ಯಾ, ರೂಪಾ ವೈನಿ ಟ್ರಿಪ್ಪಿಗೆ ಹೋಗಬೇಕು, ಎಲ್ಲೆ ಹೋಗೋಣ? ಅಂತ ನನ್ನ ಕಡೆ ಐಡಿಯಾ ಕೇಳಿದರು. ಕೊಟ್ಟೆ. ಕೊಟ್ಟದ್ದು ಯಾವದೂ ಸರಿ ಆಗಿಲಿಲ್ಲ. ನಡು ರೂಪಾ ವೈನಿ ಅವರ ಹನಿಮೂನ್ ಶ್ರವಣಬೆಳಗೊಳದಲ್ಲಿ ಚೀಪ್ಯಾ ಮಾಡಿಸಿದ್ದನ್ನು ನೆನಪಿಸಿಕೊಂಡು 'ಗೊಮಟಾ ಫೇಸಿಂಗ್ ರೂಂ' ಬಗ್ಗೆ ಹೇಳಿ ಚೀಪ್ಯಾನ ಮಾನಾ ತೆಗೆದರು. ಮಾರಿಷಸ್ ಗೆ ಹೋಗ್ರೀ ಅಂದೆ. ಅದು ಮಾತ್ರ ಹರ್ಗೀಸ್ ಬ್ಯಾಡ ಅಂದ್ರು..... ಮುಂದೆ ಓದಿ)

ಮಾರಿಷಸ್ ಯಾಕ ಬ್ಯಾಡ್ರೀ ವೈನಿ? ಹೋಗಿ ಬರ್ರಲಾ. ಭಾಳ ದೂರೇನಿಲ್ಲ, ಅಂತ ಹೇಳಿದೆ.

ಬ್ಯಾಡಪಾ! ದ್ವೀಪಾ ಅದೂ ಸಮುದ್ರದ ನಡು(?) ಇರೋ ದ್ವೀಪಾ ಅಂದ್ರ ಬ್ಯಾಡಪಾ, ಅಂತ ರೂಪಾ ವೈನಿ ಏನೋ ಒಂದು ತರಹದ ಕಾಳಜಿ, ಹೆದರಕಿಯಿಂದ ಹೇಳಿದರು.

ಯಾಕ್ರೀ ವೈನಿ? ಏನು ನಿಮ್ಮ ಅಡಿಚಿಣಿ ಹೋಗಿ ಬರಲಿಕ್ಕೆ ಅಂತ ಹೇಳ್ರಲಾ? - ಅಂತ ಕೇಳಿದೆ. ನಮಗ ಅವರ ಸಮಸ್ಯೆಯ ಮೂಲಕ್ಕೆ ಹೋಗುವ ತವಕ.

ನನಗ ಈಜು ಬರೋದಿಲ್ಲೋ ಮಾರಾಯಾ, ಮಂಗೇಶ! ಅದಕ್ಕಾ ನಾ ಅಲ್ಲೆಲ್ಲ ಹೋಗೋದಿಲ್ಲ ನೋಡು, ಅಂತ ಹೇಳಿದರು.

ಹಾಂ!!!????

ಅಲ್ಲರೀ ವೈನಿ! ನಿಮಗ ಈಜು ಬರದೇ ಇರೋದಕ್ಕೂ ಮಾರಿಷಸ್ ಗೆ ನೀವು ಹರ್ಗೀಸ್ ಹೋಗೋದಿಲ್ಲಾ ಅಂತ ಅನ್ನೋದಕ್ಕೂ ಏನು ಸಂಬಂಧ ಅದರೀ? ಹಾಂ? ಅದು ಸಮುದ್ರದ ನಡು ಇದ್ದರೇನಾತು? ನೀವೇನೂ ಅಲ್ಲಿ ತನಕಾ ಈಜಿಕೋತ್ತ ಹೋಗಬೇಕಾಗಿಲ್ಲ. ಮುಂಬೈದಾಗ ವಿಮಾನ ಹತ್ತಿಬಿಟ್ಟರ ಸೂಂಯ್ ಅಂತ ಹೇಳಿ ಮಾರಿಶಸ್ಸಿನ್ಯಾಗ ಇಳಿಯೋದು? ಯಾಕ ಬ್ಯಾಡ್ರೀ? - ಅಂತ ಕೇಳಿದೆ.

ಹೋಗೋದು ವಿಮಾನದಾಗ ಹೋದರೂ, ವಾಪಸ್ ಬರೋದು? - ಅಂತ ಹೇಳಿ ರೂಪಾ ವೈನಿ ಅರ್ಧಾಕ್ಕs ನಿಂತರು.

ಏನ್ರೀ?! ಹಾಂ?! - ಅಂತ ಕೇಳಿದೆ. ಏನೇನೋ ತಲಿ ಬುಡ ಇಲ್ಲದ ಮಾತಾಡ್ಲಿಕತ್ತಾರ.

ಆಕಸ್ಮಾತ ನಮ್ಮನಿಯವರು ನನ್ನ ಅಲ್ಲೆ ಬಿಟ್ಟು ಓಡಿ ಬಂದ್ರ? ನಾ ಹ್ಯಾಂಗ ವಾಪಸ್ ಬರಲೀ? ಈಜಿಕೋತ್ತ ಬರಲೀ? ಈಜಂತೂ ಬರಂಗೇ ಇಲ್ಲಾ.  ಅಷ್ಟೂ ತಿಳಿಯೋದಿಲ್ಲ? ಹಾಂ? - ಅಂತ ರೂಪಾ ವೈನಿ ಏನೋ ಹೊಸಾ ರೂಟ್ ಒಳಗ ಹೊಂಟರು.

ಚೀಪ್ಯಾ ಯಾಕ ನಿಮ್ಮನ್ನು ಅಲ್ಲಿ ತನಕಾ ಕರಕೊಂಡು ಹೋಗಿ, ವಾಪಾಸ್ ಬರೋವಾಗ ಬಿಟ್ಟು ಬರ್ತಾನ? ನಿಮಗ ಹಾಂಗ್ಯಾಕ ಅನ್ನಸ್ತದ? ಏನೇನರೆ ಹೇಳಿಕೋತ್ತ.....ಹೋಗ್ಗಾ ನಿಮ್ಮಾ.... ಅಂತ ಹೇಳಿದೆ. ಝಾಡಿಸಿದೆ.

ಅಲ್ಲಾ....ಅಂತ ರೂಪಾ ವೈನಿ ಎಳೆದರು.

ಏನು ಅಲ್ಲಾ, ಬೆಲ್ಲಾ, ಕೋಳಿ ಬಾಯಾಗ ಹಲ್ಲಿಲ್ಲ? ಹಾಂ? - ಅಂತ ಜೋರ ಹೇಳಿದೆ.

ಅಲ್ಲೋ, ಅದು ಏನೋ ಅಂತಾರಲ್ಲ? ಕಾಶಿಗೆ ಹೋದವರು ಏನರೆ ಬಿಟ್ಟು ಬರಬೇಕು ಅಂತ. ಹಂಗs ಮಾರಿಷಸ್ ಗೆ ಹೋದವರು ದೊಡ್ಡದೇ ಏನಾದರು ಬಿಟ್ಟು ಬಂದು ಬಿಡೋಣ ಅಂತ ಇವರು ನನ್ನ ಬಿಟ್ಟು ಬಂದ್ರ ಅಂತ ಚಿಂತಿ, ಅಂತ ರೂಪಾ ವೈನಿ ಗಪ್ಪಾ ಹೊಡೆದರು.

ಏ...ಮಾರಿಷಸ್ ಬ್ಯಾಡಲೇ. ನಾನೂ ಒಲ್ಲೆ, ಅಂತ ಚೀಪ್ಯಾ ಸಹಿತ ಫಿಟ್ಟಿಂಗ್ ಇಟ್ಟ.

ಯಾಕಲೇ? ನಿಂದೇನು ಪ್ರಾಬ್ಲೆಮ್? ಹಾಂ? - ಅಂತ ಕೇಳಿದೆ.

ನನಗ ಹಡಗು ಹತ್ತಿದರ ಅದೇನೋ sea sickness ಆಗಿ, ಹೊಟ್ಟ್ಯಲ್ಲಾ ತೊಳಿಸಿ, ವಾಂತಿ ಬಂದು ಬಿಡ್ತದೋ ಮಾರಾಯಾ. ಅದಕ್ಕೇ ಬ್ಯಾಡ!!!!! - ಅಂತ ತನ್ನ ಭಯಂಕರ 'ಜ್ಞಾನದ' ಬಾಂಬ್ ಒಗೆದಾ ಚೀಪ್ಯಾ.

ಮಾರಿಷಸ್ ಗೆ ಕರಕೊಂಡು ಹೋದ ಗಂಡಾ ಬಿಟ್ಟು ಓಡಿ ಬಂದ್ರ, ಸಮುದ್ರದ ನಡುವಿರೋ ನಡುಗಡ್ಡಿಯಿಂದ ಈಜಿಕೋತ್ತ ಹ್ಯಾಂಗ ಬರಲಿ? ನನಗ ಈಜು ಬರೋದಿಲ್ಲ ಅಂತ ತಲಿ ಕೆಡಿಸಿಕೋಳ್ಳೋ ರೂಪಾ ಬಾಯಿ. ಮಾರಿಷಸ್ ದ್ವೀಪಾ ಅಂದ ಮ್ಯಾಲೆ ಅಲ್ಲೇ ಹೋಗೋದು ಕೇವಲ ಹಡಗಿನ್ಯಾಗ ಮಾತ್ರ ಅಂತ ತಂದೇ ರೀತಿಯಲ್ಲಿ ವಿಚಾರ ಮಾಡಿ, sea sickness ಸಹಿತ ತಲಿಗೆ ಬಂದು, ಈಗೇ ತಲಿಸುತ್ತು ಬಂದವರಾಂಗ ಮಾರಿ ಮಾಡೋ ಚೀಪ್ಯಾ ಸಾಹೇಬರು!!! ಮಸ್ತ ಅದ ಜೋಡಿ! ಆರ್ಡರ್ ಕೊಟ್ಟು ಮಾಡಿಸಿದ್ದು!!! ತಲಿ ನೋಡ್ರೀ ಇಬ್ಬರದ್ದೂ!

ಟಾಪಿಕ್ ಚೇಂಜ್ ಮಾಡೋಣ ಅಂತ ಏನೋ ಒಂದು ಕಿರಿಕ್ ಪ್ರಶ್ನೆ ಕೇಳಿದೆ.

ಏನ್ ವೈನಿ ನೀವ್ಯಾಕ ಈಜು ಕಲಿಲಿಲ್ಲ? ನಮ್ಮ ಕಾಲದಾಗ ಧಾರವಾಡದಾಗ ಸ್ವಿಮ್ಮಿಂಗ್ ಪೂಲ್ ಇತ್ತಲಾ? ಅದೂ ಮಸ್ತ ಇತ್ತು.  ಯಾಕ ಕಲೀಲಿಲ್ಲರೀ? ಹಾಂ? - ಅಂತ ಕೇಳಿದೆ.

ಛೀ!!! ಹೇಶಿ ಮುಂಡೆಗಂಡ! ಅವೆಲ್ಲಾ ಛೊಲೋ ಮನಿ ಹುಡುಗ್ಯಾರು ಕಲಿಯೋದಿಲ್ಲ. ಏನಂತ ಕೇಳ್ತೀ? ಹಾಂ?! - ಅಂತ ವೈನಿ ನನಗೇ ಬಾರಿಸಿದರು.

ಅಯ್ಯಾ ಇವರ!!! ಈಜು ಕಲತವರೆಲ್ಲ ಕೆಟ್ಟ ಮನಿ ಹುಡುಗ್ಯಾರು ಅಂತ ನಿಮ್ಮ ಆಲೋಚನೆ ಏನು? ಹಾಂ?! ಅದು ಒಂದು ವಿದ್ಯೆ, ಸ್ಕಿಲ್. ಒಳ್ಳೆ ಆತು ಇವರದ್ದು, ಅಂತ ಹೇಳಿದೆ.

ಏ...ಆವಾಗ ಅಲ್ಲೆ ಈಜು ಕಲಿಸವಾ ಗಂಡಸು ಇದ್ದಾ. ಅದಕ್ಕ ಕಲಿಲಿಲ್ಲ ನಾನು, ಅಂತ ಹೊಸಾದ್ದು ಏನೋ ಹೇಳಿದರು ರೂಪಾ ವೈನಿ.

ಅಲ್ಲರೀ..... ಮತ್ತ ನೀವು ಹುಡುಗ್ಯಾರು ಈಜು ಕಲಿಯೋದೇ ಇಲ್ಲ ಅಂದ ಕಲಿಸುವರು ಯಾರು ಮತ್ತ? ನಿಮ್ಮಂತವರು ಯಾರರ ಕಲಿತಿದ್ದರ ಮುಂದ ಲೇಡೀಸ್ ಈಜು ಕಲಿಸೋ ಟೀಚರ್ ಬರ್ತಿದ್ದರೋ ಏನೋ? ಯಾರಿಗ್ಗೊತ್ತು? - ಅಂತ ಹೇಳಿದೆ.

ಮತ್ತ ಬಾಡಿ ಚಡ್ಡಿ ಹಾಕ್ಕೊಂಡು ಬರ್ರಿ, ಈಜು ಕಲಸ್ತೇನಿ ಅಂದಿದ್ದಾ ಆವಾ ಈಜು ಕಲಿಸೋ ಮಾಸ್ತರ್! ಅದಕ್ಕ ಹೋಗಲಿಲ್ಲ! - ಅಂದ್ರು ರೂಪಾ ವೈನಿ.

ರೀ ವೈನಿ....ಅದು ಬಾಡಿ ಚಡ್ಡಿ ಅಲ್ಲರೀ. ಅದಕ್ಕ ಸ್ವಿಮ್ಮಿಂಗ್ ವೇರ್ ಅಂತಾರ್ರೀ!!! ಎಂತೆಂತಾ ತರಹದ್ದು ಇರ್ತಾವ ಗೊತ್ತೇನ್ರೀ? ಲಕ್ಷಾಂತರ ರೂಪಾಯಿ ತನಕಾ ಇರ್ತಾವ. ಅದಕ್ಕ ಹೋಗಿ ಬಾಡಿ ಚಡ್ಡಿ ಅಂದು ಬಿಡೋದ?! ಹಾಂ! - ಅಂತ ಹೇಳಿದೆ.

ಎಲ್ಲಾ ಒಂದೇ!!! ಸುಮ್ಮ ಕೂಡು!!! - ಅಂತ ಭುಸ್ ಅಂದ್ರು ರೂಪಾ ವೈನಿ.

ಮತ್ತ ಪರಕಾರ ಪೋಲ್ಕಾ ಹಾಕ್ಕೊಂಡು ಬರ್ರಿ, ಈಜು ಕಲಸ್ತೇನಿ ಅಂತ ಹೇಳಿದ್ದರ ಹೋಗ್ತಿದ್ದಿರಿ ಏನು ವೈನಿ? ಹ್ಯಾಂಗೂ 'ಹಾಪ್ ಸಾರಿ' ಭಾಳ್ ಹಾಕ್ಕೊಂಡು ಅಡ್ಯಾಡ್ತಿದ್ದಿರಿ. ಆ ಹಾಪ್ ಸಾರಿ ನೋಡಿ ನೋಡಿ, ಚೀಪ್ಯಾ ಫುಲ್ ಹಾಪ್ ಆಗಿ, ನೀವು ಫುಲ್ ಸೀರಿಯೊಳಗ ಇರೋ ಹಾಪ್ ಅಂತ ಗೊತ್ತಿದ್ದರೂ ನಿಮ್ಮನ್ನ ಮಾಡಿಕೊಂಡ ನೋಡ್ರೀ!!! ಹಾ!!! ಹಾ!!! ಹಾಪ್ ಸೀರಿಯೊಳಗ ಇರೋ ಫುಲ್ ಹಾಪ್ ನೀವು!!! ಹಾ!! ಹಾ!!! - ಅಂತ ಇಲ್ಲದ ಜೋಕ್ ಹೊಡದೆ.

ಸುಮ್ಮ ಕೂಡು ಸಾಕು, ಅಂತ ಹೇಳಿ ರೂಪಾ ವೈನಿ ಕಳೆದು ಹೋದ ಹಾಪ್ ಸೀರಿ ಯುಗದ ನೆನಪು ಮಾಡಿಕೊಂಡು ಸದ್ಯಕ್ಕೆ ಹಾಕಿಕೊಂಡಿದ್ದ ಸರ್ಕಸ್ ಟೆಂಟಿನಂತಹ ನೈಟಿಗೆ ಕೈ ಕೈ ತಿಕ್ಕಿಕೊಂಡರು.

ಹ್ಞೂ....ಪರಕಾರ ಪೋಲ್ಕಾದಾಗ, ಯಾರರೆ ಹೆಂಗಸೂರು ಟೀಚರ್ ಈಜು ಕಳಿಸಿದ್ದರ ಕಲೀತಿದ್ನೋ ಏನೋ?! - ಅಂತ ರೂಪಾ ವೈನಿ ಹೇಳಿದರು.

ರೀ ವೈನಿ!!! ಈಜಲಿಕ್ಕೆ ಮೈಮ್ಯಾಲೆ ಕಡಿಮಿ ಅರಿವಿ ಇದ್ದಷ್ಟು ಚೋಲೋರೀ. ಗೊತ್ತದನೋ ಇಲ್ಲೋ? ಅರವಿ ಒಳಗ ನೀರು ತುಂಬಿಕೊಂಡು, ಅದರಾ ವಜ್ಜಾ ತಳಗ ಜಗ್ಗತದ. ಈಜು ಬಂದವರೂ ಸಹಿತ ಮುಳುಗಿ ಸಾಯೋದು ಹಾಂಗ ಆದಾಗೇ ನೋಡ್ರೀ. ಅದಕ್ಕಾ ಫುಲ್ ಪ್ಯಾಂಟ್ ಹಾಕ್ಕೊಂಡವರು ಸಹ ಅದನ್ನು ಕಳದೇ ಈಜು ಹೊಡಿತಾರ. ಇನ್ನೆಲ್ಲರ ಗಡಿಬಿಡ್ಯಾಗ, ಯಾರರ ಅಬಲಾ ನೀರಿಗೆ ಬಿದ್ದು, ಮುಳುಗಿ, ಅಬಲಾನ ಜೀವಾ ತಬಲಾ ಬಾರಿಸಿಬಿಡಬಹುದು ಅನ್ನೋ ಪರಿಸ್ಥಿತಿ ಇದ್ದರ ಲಗೂನ ಪ್ಯಾಂಟ್ ಫುಲ್ ಮ್ಯಾಲೆ ಎತ್ತಿ, ಮಡಚಿ ಡೈವ್ ಹೊಡದೇ ಬಿಡ್ತಾರ. ಗೊತ್ತಾತ್ರೀ? - ಅಂತ ಈಜಿನ dynamics ಬಗ್ಗೆ ಹೇಳಿದೆ.

ಮತ್ತ 'ಹೊಸ ಬೆಳಕು' ಸಿನೆಮಾದಗಾ ಸರಿತಾ ನೀರಿಗೆ ಹಾರಿಕೊಂಡಾಗ ರಾಜಕುಮಾರಾ ಪ್ಯಾಂಟ್ ಹಾಕ್ಕೊಂಡೇ ಜಿಗದಿದ್ದನಲ್ಲೋ? ಆವಾ ಯಾಕ ಪ್ಯಾಂಟ್ ಮ್ಯಾಲೆ ಮಾಡಿಕೊಳ್ಳಲಿಲ್ಲ? ರಾಜಕುಮಾರಕಿಂತ ನೀ ಶಾಣ್ಯಾ ಏನು? ಸುಮ್ಮ ಕೂಡು. ಸಾಕು. ಗೊತ್ತಿಲ್ಲ ಪಿತ್ತಿಲ್ಲ. ಏನೇನೋ ಹೇಳ್ತದ ಮಂಗ್ಯಾನ್ನ ತಂದು, ಅಂದ್ರು ರೂಪಾ ವೈನಿ.

ಏನು ಹೇಳೋಣ!!!??? ಹೊಸ ಬೆಳಕು ಸಿನೆಮಾ ಅಂತ! ಅದರಾಗ ಹಾಂಗಂತ ಹೀಂಗಂತ!!! ಏನ್ ಉಪಯೋಗಿಲ್ಲ ಇಂತಾ ಮಂದಿಗೆ ಹೇಳೋದ್ರಾಗ. ಹೊಂಟ ಪ್ರವಾಸ ಸಹಿತ ಸಿನೆಮಾ ಒಳಗೇ ನೋಡಿ ಬರ್ರಿ ಅನಬೇಕು ಇವರಿಗೆ!!!!!

ಮಾರಿಷಸ್ ಸಹಿತ ಬ್ಯಾಡ ಅಂದ್ರೀ. ಮತ್ತ ಎಲ್ಲೆ ಹೋಗ್ತಿರೀ? ಹಾಂ? - ಅಂತ ಪ್ರವಾಸದ ಟಾಪಿಕ್ಕಿಗೆ ಕರಕೊಂಡು ಬಂದೆ.

ಎಲ್ಲೆ ಹೋಗೋಣ? ಅನ್ನೋ ಲುಕ್ ಅವರಿಬ್ಬರ ಮಾರಿ ಮ್ಯಾಲೂ.



ಸವದತ್ತಿಗೆ ಹೋಗಿ ಬಂದು ಬಿಡ್ರೀ. ಇಲ್ಲೇ ಹತ್ತಿರದ, ಅಂತ ಹೇಳಿದೆ.

ಸವದತ್ತಿಗೆ ಹೋಗ್ರೀ ಅಂತ ಹೇಳೋ ಹಾಂಗ ಅದ್ಯಾವ ದೇವಿ ಪ್ರೇರಣಾ ಮಾಡಿದಳೋ? ಯಲ್ಲಮ್ಮನ ಕೃಪಾ ಆಗಿರಬೇಕು!

ಯಾಕsss? ಜೋಗಪ್ಪ ಜೋಗವ್ವನ ನೋಡಿ ಬರಲಿಕ್ಕೇನು? ಹಾಂ?! ನೀನೇ ಇದ್ದೀಯಲ್ಲಾ ದೊಡ್ಡ ಜೋಗಪ್ಪಾ. ಮತ್ಯಾಕ ನಿನ್ನ ಬ್ರಾಂಡಿನವರನ್ನೇ ನೋಡಲಿಕ್ಕೆ ಅಷ್ಟು ದೂರ ಸವದತ್ತಿಗೆ ಹೋಗಬೇಕು? ಹಾಂ! - ಅಂತ ನನ್ನ ವೈನಿ ತಿವಿದರು.

ಹಾ!!! ಹಾ!!! - ಅಂತ ಗಫಾ ಹೊಡದೆ. ತಿರುಗಿ ಝಾಡಿಸಿದರೆ ಬಿಟ್ಟಿ ಖಾನಾ, ಪೀನಾ ಎಲ್ಲ ಬಂದಾತು ಅಂದ್ರ ಅಷ್ಟೇ ಮತ್ತ. ಅದಕ್ಕss ಜೋಗಪ್ಪಾ ಅಂತರಾ ಅನ್ಲೀ, ಯೋಗಪ್ಪಾ ಅಂತರಾ ಅನ್ಲೀ!

ರೀ ವೈನಿ....ಹೀಂಗ ಮಾಡ್ರೀ. ಸವದತ್ತಿ, ನವಿಲು ತೀರ್ಥ ಕೂಡಿ ಒಂದು ಎರಡ ಮೂರ ದಿವಸದ ಟ್ರಿಪ್ ಹಾಕಿ ಬಿಡ್ರೀ. ಆರಾಮ, ಅಂತ ಹೇಳಿದೆ.

ರಾಮತೀರ್ಥ, ಅಂಬುತೀರ್ಥ ಅನ್ನೋವೆಲ್ಲಾ ತೀರ್ಥ ಬ್ಯಾಡ ಅಂದ್ರ ಮತ್ತ ತೀರ್ಥ ತಂದು ಇಡ್ತೀ ಅಲ್ಲೋ??!! ಹುಚ್ಚಾ!! - ಅಂತ ಚೀಪ್ಯಾ ಒದರಿದ.

ಸುಮ್ಮ ಕೂಡಪಾ. ಬರೇ ಸವದತ್ತಿಗೆ ಹೋಗಿ, ಜೋಗಪ್ಪಾ ಮತ್ತ ಜೋಗವ್ವಗಳನ್ನ ನೋಡಿ, ಉಧೋ, ಉಧೋ ಅಂದು, ಬೇಕಾದ್ರ 'ಎಲ್ಲೋ ಜೋಗಪ್ಪ ನಿನ್ನ ಅರಮನೆ? ಎಲ್ಲೋ ಜೋಗಪ್ಪ ನಿನ್ನ ಅರಮನೆ?' ಅಂತ ಹಾಡಿ ಬರವರು  ಏನು? ಏನ್ರೀ ವೈನಿ, ಬರೆ ಸವದತ್ತಿ ಅನ್ನಲಿಕತ್ತಾರ್ರಲ್ಲ ನಿಮ್ಮ ಪತಿದೇವರು? ಯಾಕ? ಅವರನ್ನೇ ಜೋಗಪ್ಪನ ಮಾಡೋ ಇರಾದಾ ಅದ ಏನು? - ಅಂತ ಸಣ್ಣದಾಗಿ ಫಿಟ್ಟಿಂಗ ಇಟ್ಟೆ.

ಸುಮ್ಮ ಕೂಡ್ರೀ ನೀವು! ಅಂತ ಚೀಪ್ಯಾಗ ಕಟ್ಟಪ್ಪಣೆ ಆತು. ಆವಾ ಬಾಯಿಗೆ ಡಬಲ್ ಸ್ಟಿಚಿಂಗ್ ಮಾಡಿಸೇ ಬಿಟ್ಟಾ.

ಐಡಿಯಾ ಏನೋ ಚೊಲೋ ಅದ ಮಂಗೇಶ. ಆದ್ರ ಒಂದೇ ದಿವಸದಾಗ ಎಲ್ಲ ಮುಗಿಸಿ ಬರೋದು ಅಂದ್ರ ಭಾಳ ಗಡಿಬಿಡಿ ಗಡಿಬಿಡಿ ಆಗ್ತದೋ. ಏನ ಮಾಡೋಣ? - ಅಂತ ವೈನಿ ಅವರ ಪ್ರಾಕ್ಟಿಕಲ್ ಸಮಸ್ಯೆ ಮುಂದೆ ಇಟ್ಟರು.

ಆದ್ರ ಆಗ್ಲಿರೀ. ಎರಡ್ಯಾಕ ಮೂರ್ನಾಕು ದಿವಸ ಆಗಲೀ. ಏನು ತೊಂದ್ರೀ? ಮನಿ ಮಠ ಅಂತ ವರ್ಷ ಪೂರ್ತೆ ದುಡಿಯೋ ನಿಮಗ ಒಂದೆರೆಡು ದಿವಸದ ಚೇಂಜ್ ಬ್ಯಾಡ್ರೀ? ಹಾಕ್ರಿ ರಜಾ. ಏನ್ ಬರೆ ಗಂಡಸೂರು ಮಾತ್ರ ಮನಸ್ಸು ಬಂದಾಗ ಹ್ಯಾಂಗ ಬೇಕು ಹಾಂಗ ರಜಾ ಹಾಕಬಹುದು, ಹೆಂಗಸೂರು ಹಾಕೋ ಹಾಂಗಿಲ್ಲ ಅಂತ ಎಲ್ಲರ ಕಾಯಿದೆ ಅದ ಏನು? ನೆಡ್ರೀ ಟ್ರಿಪ್ಪಿಗೆ, ಅಂತ ಫುಲ್ ಪಂಪ್ ಹೊಡದೆ.

ಏ ರೂಪಾ....ಎರಡ ಮೂರ ದಿವಸ ಅಂದ್ರ....ಇಲ್ಲೆ ಅವ್ವಾ ಒಬ್ಬಾಕಿನ ಆಗ್ತಾಳ. ಅದೂ ಅಕಿಗೆ ಬ್ಯಾರೆ ಕಿವಿ ಸರಿ ಕೇಳಂಗಿಲ್ಲ....ಅಂತ ಏನೋ ಹೇಳಲಿಕ್ಕೆ ಬಂದಾ.

ಆ  ಲೇಡಿ ಡ್ರಾಕುಲಾಗಾ ಒಂದೆರೆಡು ದಿನಾ ನನ್ನ ರಕ್ತಾ ಕುಡಿದಿದ್ದರೆ ಏನ ಆಗ್ತದ? ಎಲ್ಲಿಂದ ಪಡಕೊಂಡು ಬಂದೇನೋ ಈ ಮನಿ? ಅಂದ ರೂಪಾ ವೈನಿ ಏನೋ ವಿಚಾರ ಮಾಡಿದರು.

ಒಂದ ಮಾತ್ರೀ. ನಿಮ್ಮವ್ವನ ಬಗ್ಗೆ ಚಿಂತಿ ಮಾಡಬ್ಯಾಡ್ರೀ. ಬೇಕಾದ್ರ ಅವರನ್ನೂ ಕರಕೊಂಡೇ ಹೋಗೋಣ. ಬರ್ತಾರೇನು ಅಂತ ಕೇಳ್ರೀ, ಅಂತ ಚೀಪ್ಯಾಗ ಸವಾಲ್ ಒಗೆದು, ಆ ಅತ್ತಿ ಸಮಸ್ಯಾ ಚೀಪ್ಯಾನ ಸಮಸ್ಯಾ ಮಾಡಿ ಬಿಟ್ಟರು ರೂಪಾ ವೈನಿ.

ಏ ಬ್ಯಾಡ ಮಾರಾಳ, ಬ್ಯಾಡಾ! ಮನಿಯೊಳಗ ನಿಮ್ಮ ಗದ್ದಲಾ, ಯುದ್ಧಾ ನೆಡಿತದ ಓಕೆ. ಅಲ್ಲೆ ಎಲ್ಲರೆ ಸವದತ್ತಿ ಎಲ್ಲಮ್ಮನ ಮುಂದ ನಿಮ್ಮ ಜಗಳ ಶುರು ಆತು ಅಂದ್ರ ಎಲ್ಲಮ್ಮ ಸವದತ್ತಿ ಬಿಟ್ಟು ಕಿರವತ್ತಿ ಅಡವಿಗೆ ಓಡಿ ಬಿಡ್ತಾಳ. ದೊಡ್ಡ ಪಾಪ ಆಗ್ತದ. ನಾ ನಮ್ಮ ಅಕ್ಕಗ ಬಂದು ಒಂದೆರೆಡು ದಿನಾ ಇದ್ದು ಹೋಗು ಅಂತೇನಿ. ಅಕಿ ಹ್ಯಾಂಗೂ ಫ್ರೀ ಇದ್ದಾಳ ಈಗ. ಮಕ್ಕಳು ಎಲ್ಲಾ ದೊಡ್ಡವರು ಆಗ್ಯಾರ. ಗಂಡ ಬ್ಯಾರೆ ಸನ್ಯಾಸ ತೊಗೊಂಡು ಬಿಟ್ಟಾ. ಅಕಿ ಬಂದು ನಮ್ಮವ್ವನ ಸೇವಾ ಮಾಡಿ ಹೋಗ್ತಾಳ. ನಾವು ಹೋಗಿ ಬರೋಣ ನಡಿ, ಅಂತ ಚೀಪ್ಯಾ ಏನೋ ಒಂದು ಸಮಾಧಾನ ಕಂಡು ಹಿಡಿದ.

ಆ 'ಡೀಪಿ ಎಂಎಚ್' ಬರ್ತದಾ? ಸರೀ ಆತು ನಿಮ್ಮವ್ವನ ಕಂಪನಿಗೆ. ಇಬ್ಬರೂ ಕೂಡಿ ಒಬ್ಬರಿಗೊಬ್ಬರು ಬ್ಲೇಡ್ ಹಾಕಿಕೊಂಡು ಪಿಟೀಲ್ ಕೊಯ್ಯ್ಕೊಳ್ಳಲಿ, ಅಂತ ವೈನಿ ವಿಚಿತ್ರವಾಗಿ ನಕ್ಕರು.

ಡೀಪಿ ಎಂಎಚ್???!!! ಅಂದ್ರ ಏನ್ರೀ ವೈನಿ? ಚೀಪ್ಯಾನ ಅಕ್ಕಗ ಅದೇನು ಹೆಸರಿಟ್ಟೀರಿ? ಹಾಂ? - ಅಂತ ಕೇಳಿದೆ.

'ಡೀಪಿ ಎಂಎಚ್' ಅಂದ್ರ ಧಡ್ಡ ಪಟೌಡಿ, ಮಬ್ಬ ಹುಸೇನ್ ಅಂತ ಅರ್ಥ, ಅಂತ ಏನೋ ಹೇಳಿದರು ರೂಪಾ ವೈನಿ.

ಅಂದ್ರ ರೀ? - ಅಂತ ಕೇಳಿದೆ.

ಅಂದ್ರ ಅಷ್ಟೇ. ಈಗ ಟ್ರಿಪ್ಪಿನ ಬಗ್ಗೆ ಮಾತಾಡೋ ಮಂಗೇಶ, ಅಂತ ರೂಪಾ ವೈನಿ ಫುಲ್ ಖುಷ್ ಆಗಿ ಹೇಳಿದರು.

ಅಂದ್ರ ನಿಮಗೆಲ್ಲಾ ಸವದತ್ತಿ, ನವಿಲುತೀರ್ಥ ಟ್ರಿಪ್ ಓಕೆ ಅಂದಂಗ ಆತು. ಖರೇರೀ? - ಅಂತ ಕೇಳಿದೆ.

ಹ್ಞೂ....ಓಕೆನೋ ಓಕೆ....ಅಂತ ರೂಪಾ ವೈನಿ ಎಲ್ಲರ ಪರವಾಗಿ ಹ್ಞೂ ಅಂದ್ರು. ಚೀಪ್ಯಾ ಸಹಿತ ಓಕೆ ಅಂತ ತಲಿ ಕುಣಿಸಿದ.

ಓಕೆ ಅಂದ್ರ ಓಕೆ. ಹೋಗಿ ಬಂದು ಬಿಡ್ರೀ. ನಾ ಬರಲೀ ಇನ್ನು? ನನ್ನ ಕೆಲಸ ಮುಗೀತಲ್ಲ? ನಿಮಗ ಟ್ರಿಪ್ ಐಡಿಯಾ ಕೊಡೋದು ನನ್ನ ಕೆಲಸಾಗಿತ್ತು. ಏನೇನೋ ಟ್ರಿಪ್ಪಿನ ಐಡಿಯಾ ಕೊಟ್ಟೆ. ನಿಮಗ ಯಾವದೂ ಸೇರದೆ ಈಗ ಸವದತ್ತಿ, ನವಿಲುತೀರ್ಥ ಸೇರಿ ಬಿಟ್ಟದ. ಹೋಗಿ ಬರ್ರಿ. ಮತ್ತೂ ಏನರೆ ಮಾಹಿತಿ ಬೇಕು ಅಂದ್ರ ಕೇಳ್ರೀ. ಮಸ್ತಾಗಿ ನಿಮ್ಮ ಟ್ರಿಪ್ಪಿನ ಫುಲ್ ಪ್ಲಾನ್ ಹಾಕಿ ಕೊಟ್ಟು ಬಿಡ್ತೇನಿ, ಅಂತ ಹೇಳಿದೆ.

ಅಂದ್ರಾ!!!! ಅಂತ ಇಬ್ಬರೂ ಘಾಬ್ರಿಲೆ ಒದರಿದರು.

ಏನಾತ್ರೀ!!!??? - ಅಂತ ಕೇಳಿದೆ.

ಅಂದ್ರಾ ನೀ ಬರಂಗಿಲ್ಲ? ಬರೆ ನಾವಿಷ್ಟೇ ಟ್ರಿಪ್ಪಿಗೆ ಹೋಗಿ ಬರಬೇಕಾ? ಏ...ಅದೆಲ್ಲಾ ನಡಿಯಂಗಿಲ್ಲ. ನೀನೂ ಬರಲೇ ಬೇಕು, ಅಂತ ಒತ್ತಾಯ ಮಾಡ್ಲಿಕತ್ತರು.

ಎಲ್ಲೆ ಬಂದು ಸಿಕ್ಕಾಕ್ಕೊಂಡೆ ಶಿವಾ!!!??? ಅಂತ ಆಲೋಚನೆ ಬಂತು.

ನಾ ಯಾಕ್ರೀ? ನೀವು ಪತಿ ಪತ್ನಿ ಕುಟುಂಬ ಸಮೇತ ಹೊಂಟೀರಿ. ಶಿವ ಪೂಜಿ ನಡು ಕರಡಿ ಯಾಕ ಬಿಡಬೇಕು? ಹೋಗಿ ಬರ್ರಿ. ನಾ ನೀವು ಬಂದ ಮ್ಯಾಲೆ ನಿಮ್ಮ ಟ್ರಿಪ್ಪಿನ ವಿಷಯ ಎಲ್ಲ ಕೇಳಿ ತಿಳಕೊತ್ತೇನಿ, ಅಂತ ಹೇಳಿದೆ.

ಏ....ಬಾರೋ...ನಾವೇನು ಸವದತ್ತಿ ನವಿಲುತೀರ್ಥಕ್ಕ ಹನಿಮೂನಿಗೆ ಹೊಂಟಿಲ್ಲ. ಬರೆ ಟ್ರಿಪ್ಪಿಗೆ ಮಾತ್ರ. ಬಾ ಅಲ್ಲಾ? ಏನ್ ನಾಟಕಾ ಮಾಡ್ತೀ? ಬಾ ಬಾ, ಅಂತ ಆಖ್ರೀ ಮಾತಿನಂಗ ಹೇಳಿ ವೈನಿ ಹೊಂಟೇ ಬಿಟ್ಟರು.

ಈ ಬೆನ್ನೇರಿದ ಬೇತಾಳ ಹಾಂಗ್ ಸುಮ್ಮನೆ ಕೆಳಗ ಇಳಿಯೋದಿಲ್ಲ ಅಂತ ಹೇಳಿ, ಹ್ಞೂ, ಅಂತ ಒಪ್ಪಿಕೊಂಡೆ. ಮುಂದ ಏನು ಕಾದದೋ ಏನೋ?!


(ಸಶೇಷ. ಮುಂದುವರಿಯಲಿದೆ)

ಎಲ್ಲರೂ ಕೂಡಿ ಸವದತ್ತಿ ನವಿಲುತೀರ್ಥದ ಟ್ರಿಪ್ಪಿಗೆ ಹೋದರಾ? ಮುಂದೇನಾತು? ಅದನ್ನ ಮುಂದಿನ ಭಾಗದಲ್ಲಿ ಓದಿ.

(ಭಾಗ - ೩ ಇಲ್ಲಿದೆ)

4 comments:

Vimarshak Jaaldimmi said...


Very Nice! Full of creativity, humor, and suspense!

Mahesh Hegade said...

Thank you! :)

Pankha Jaaldimmi said...


Waiting for the next part!

Extremely interesting!!

Mahesh Hegade said...

ಧನ್ಯವಾದ!

ಮುಂದಿನ ಭಾಗ ಹಾಕಿದ್ದೇವೆ. ಓದಿ.