Thursday, February 27, 2014

ಟಂಕ'ಸಾಲಿ'ಯೇ ಇಲ್ಲದ ಸಾಲಿಯೊಂದು ಸಾಲಿಯೇ ಕೃಷ್ಣಾ!

ದಿವಂಗತ ಶ್ರೀ ಟಂಕಸಾಲಿ ಸರ್ (ಚಿತ್ರ ಕೃಪೆ: ಸುರೇಶ ಮೇಟಿ)
ಧಾರವಾಡದಲ್ಲಿ ನಮಗೆ ಮಾಧ್ಯಮಿಕ ಶಾಲೆಯಲ್ಲಿ ಸಮಾಜ ಶಾಸ್ತ್ರದ ಶಿಕ್ಷಕರಾಗಿದ್ದ ಶ್ರೀ ಹಣಮಂತ ರಾವ್ ಟಂಕಸಾಲಿ ಗುರುಗಳು ಇದೇ ಫೆಬ್ರುವರಿ ಇಪ್ಪತ್ತೇಳರಂದು ಧಾರವಾಡದಲ್ಲಿ ನಿಧನರಾದ ಸುದ್ದಿ ಬಂದಿದೆ. ಅವರಿಗೊಂದು ಶ್ರದ್ಧಾಂಜಲಿ ಮಾದರಿಯಲ್ಲಿ ಕೆಲವು ಹಳೆಯ ನೆನಪುಗಳನ್ನು ಗೀಚಿದ್ದರ ಪರಿಣಾಮ ಈ ಲೇಖನ.

ಟಂಕಸಾಲಿ ಸರ್ ಉರ್ಫ್ ಪ್ರೀತಿಯ ಟಿಂಕು ಸರ್, ಟಿಂಕು ಮಾಸ್ತರ್, ಟಿಂಕು ಹೋಗಿಬಿಟ್ಟರಂತ. ಏನು ಪುಣ್ಯಾ ಮಾಡಿದ್ದರಪಾ! ಶಿವರಾತ್ರಿ ಅಂತಹ ಪುಣ್ಯ ದಿನದಂದೇ ಹೋಗಿ ಬಿಟ್ಟರು. ಸೀದಾ ಕೈಲಾಸಕ್ಕೆ ತೊಗೋ. ನಂತರ ಬೇಕಾದ್ರ ವೈಕುಂಠಕ್ಕ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ......ನಡ್ರೀ ಶುರು ಮಾಡೋಣ.

'ಬೋರ್ನವಿಟಾ ಭಯಂಕರ' ಟಂಕಸಾಲಿ ಸರ್: ಬೋರ್ನವಿಟಾ ಕುಡಿದವರು ಇರಬಹುದು. ಅಥವಾ ಮುಷ್ಠಿಗಟ್ಟಲೆ ಬೋರ್ನವಿಟಾ ಸೀದಾ ಡಬ್ಬಿಂದನೇ ಮುಕ್ಕಿ, ಮ್ಯಾಲಿಂದ ಅರ್ಧಾ ಲೀಟರ್ ಹಾಲು ಕುಡಿದು, ತಮ್ಮದೇ ರೀತಿಯಲ್ಲಿ ಬೋರ್ನವಿಟಾ ಎಂಜಾಯ್ ಮಾಡಿದ ನಮ್ಮಂತ ವಿಚಿತ್ರ ಮಂದಿಯೂ ಇರಬಹುದು. ನಾವೆಲ್ಲಾ ಬೋರ್ನವಿಟಾ ಕುಡಿದಿದ್ದು ಹಾಂಗೇ ಬಿಡ್ರೀ. ಎಲ್ಲಿ ಮಾಡಿಕೋತ್ತ ಕೂಡೋದು? ಆದ್ರ ಬೋರ್ನವಿಟಾ ಓದಿ, ಇತರರಿಗೂ ಓದಿಸಿದವರು ಯಾರರೆ ಇದ್ದರೆ ಅದು ಟಂಕಸಾಲಿ ಸರ್ ಮಾತ್ರ.

ಹಾಂ!! ಬೋರ್ನವಿಟಾ ಕುಡಿಯೋದು, ತಿನ್ನೋದು, ಮುಕ್ಕೋದು ಬಿಟ್ಟು ಬೋರ್ನವಿಟಾ ಓದಿಬಿಟ್ಟರಾ ಟಂಕಸಾಲಿ ಸರ್? ಬರೆ ಓದಿದ್ದೊಂದೇ ಅಲ್ಲದೆ ಓದಿಸಿಯೂ ಬಿಟ್ಟರಾ? ಎಂತಾ ಮಾಸ್ತರಪಾ ಇವರು? ಅಂತ ಎಲ್ಲಾರೂ ಹೌಹಾರಬಹುದು.

ಅದೇನಾಗಿತ್ತು ಅಂದ್ರ.......

೧೯೮೦ ಇಸ್ವೀ ಟೈಮ್. ನಮ್ಮ ಅಣ್ಣ ಸಹಿತ ಅದೇ ಸಾಲಿ ಒಳಗ ಟಂಕಸಾಲಿ ಮಾಸ್ತರ್ ಶಿಷ್ಯಾ. ಅವರ ಪೆಟ್ ಶಿಷ್ಯಾ. ಮಾಸ್ತರ್ ಮಂದಿ ಪೆಟ್ ಪ್ರಾಣಿ, ಪಕ್ಷಿ ಸಾಕಂಗಿಲ್ಲ. ಶಿಷ್ಯರನ್ನೇ ಪೆಟ್ ಮಾಡಿಕೊಂಡು ಬಿಡ್ತಾರ. ಅದು ಅವರ ಧರ್ಮ. ಮತ್ತ ಪೆಟ್ ಆದವರ ಕರ್ಮ.

ಹೀಂಗ ಇರೋವಾಗ, ಟಂಕಸಾಲಿ ಮಾಸ್ತರ್ ಬೋರ್ನವಿಟಾ ಕಂಪನಿಯವರ ಒಂದು ಯೋಜನೆ ಅದ ಅನ್ನೋದನ್ನ ಕಂಡು ಹಿಡಿದಿದ್ದರು. ಬೋರ್ನವಿಟಾ ಕಂಪನಿ ಅದು ಏನೋ encyclopedia ತರಹದ ಪುಸ್ತಕ ಪ್ರಕಟ ಮಾಡ್ತಿತ್ತು. ಹೆಸರು ನೆನಪಿಲ್ಲ. ಬೋರ್ನವಿಟಾ ನಾಲೆಜ್ ಬ್ಯಾಂಕ್ ಅಂತ ಹೆಸರಿತ್ತಾ? ಅಂತ ಏನೋ ನೆನಪು. ನಾಕೋ ಐದೋ ಬೋರ್ನವಿಟಾ ಡಬ್ಬಿ wrapper ಕಳಿಸಿಕೊಟ್ಟರೆ ಒಂದು ಪುಸ್ತಕಾ ಕಳಸ್ತಿದ್ದರು. ಹೊರಗ ರೆಗ್ಯುಲರ್ ಪುಸ್ತಕ ಅಂಗಡಿ ಒಳಗ ಆ ಪುಸ್ತಕಾ ಸಿಗ್ತಿದ್ದಿಲ್ಲ. ಅದೇನೋ ಭಾರಿ ಮಸ್ತ ಪುಸ್ತಕ ಅಂತ. ಸಾಲಿ ಪರೀಕ್ಷಾ ಒಂದೇ ಸಾಕಾಗಿಲ್ಲ ಅಂತ ಅದು ಇದು ಅಂತ ಹಾಳುವರಿ (?) ಪರೀಕ್ಷಾ ಎಲ್ಲಾ ಬರೆದು, ಯಾವ್ಯಾವದೋ ಅದು ಇದು ಕ್ವಿಜ್ ಇತ್ಯಾದಿಗಳಿಗೆ ಹೋಗಿ, prize ಹೊಡಕೊಂಡು ಬರೋ ಶಾಣ್ಯಾ ಮಂದಿಗೆ ಭಾರಿ ಉಪಯೋಗ ಆಗ್ತಿದ್ದುವಂತ ಆ ಪುಸ್ತಕಗಳು. ಅದನ್ನ ಟಂಕಸಾಲಿ ಮಾಸ್ತರ್ ಕಂಡು ಹಿಡಿದಿದ್ದರು.

ಈಗ ಪುಸ್ತಕ ತರಸೋದು ಹ್ಯಾಂಗ? ಟಂಕಸಾಲಿ ಮಾಸ್ತರ್ ಸುತ್ತ ಒಂದು ನಾಕು ಐದು ಮಂದಿ ಶಾಣ್ಯಾ(?) ಹುಡುಗುರ ಗುಂಪು ಇರ್ತಿತ್ತು. ಅವರಿಗೆಲ್ಲಾ ಸರ್ ಈ ಸ್ಕೀಮ್ ವಿವರಿಸಿದರು. ಒಂದು ಸಿಸ್ಟಮ್ಯಾಟಿಕ್ ಪ್ಲಾನ್ ಹಾಕಿ ಯಾರು ಎಷ್ಟೆಷ್ಟು ಬೋರ್ನವಿಟಾ ಕುಡಿದು, ಯಾರ್ಯಾರು ಯಾವ ಯಾವ ಬುಕ್ ತರಿಸಬೇಕು ಅಂತ ಹೇಳಿ ಪ್ಲಾನ್ ಮಾಡಿ, ಒಂದು ನಾಲ್ಕೈದು ತಿಂಗಳದಾಗ ಒಬ್ಬ ಟಂಕಸಾಲಿ ಮಾಸ್ತರು ಮತ್ತ  ಅವರ ಶಿಷ್ಯರು ಕೂಡಿ ಎಲ್ಲಾ ಪುಸ್ತಕಾ ತರಿಸಿಕೊಂಡರು. ಎಷ್ಟು ಬೋರ್ನವಿಟಾ ಕುಡಿದು ಯಾರ್ಯಾರು ಎಷ್ಟೆಷ್ಟು ಸ್ಟ್ರಾಂಗ್ ಆದರೋ ಗೊತ್ತಿಲ್ಲ. ಬೋರ್ನವಿಟಾ ಕಂಪನಿಗೆ ದೊಡ್ಡ ಲಾಭ. ಪುಸ್ತಕ ಮಸ್ತ ಓದಿ, ಭಟ್ಟರ ಸಾಲಿ ಹುಡುಗುರು ರಾಜ್ಯ ಮಟ್ಟದ ಎಲ್ಲಾ ಕ್ವಿಜ್ ಅದು ಇದು ಸ್ಪರ್ಧೆ ಎಲ್ಲಾ ಕ್ಲೀನ್ ಸ್ವೀಪ್ ಮಾಡಿಕೊಂಡು ಬಂದಿದ್ದರು. ಬಾಕಿ ಸಾಲಿಗಳಿಗೆ ಬರೇ ಚಿಪ್ಪು ಅಷ್ಟೇ. ಬಾಕಿ ಸಾಲಿ ಮಾಸ್ತರುಗಳಿಗೆ ಟಂಕಸಾಲಿ ಮಾಸ್ತರ್ ತಲಿ ಎಲ್ಲೆ ಇರಬೇಕು? ಹೀಗೆ ಬೋರ್ನವಿಟಾ ಪುಸ್ತಕ ಉಪಯೋಗಿಸಿ ಭಯಂಕರ ಕ್ವಿಜ್ ಪಡೆ ತಯಾರು ಮಾಡಿದ್ದು ಟಂಕಸಾಲಿ ಸರ್ ಹಿರಿಮೆ.

ನಮ್ಮ ಅಣ್ಣ ಸಾಲಿ ಬಿಟ್ಟು ಎಷ್ಟೋ ವರ್ಷಗಳ ನಂತರ ಸಹಿತ ಟಂಕಸಾಲಿ ಸರ್ ನನ್ನ ಆಗಾಗ ಹಿಡಿದು, ಏ ಹೆಗಡೆ, ನಿಮ್ಮನಿಯಾಗ ಆ ಪುಸ್ತಕ ಇರಬೇಕು ನೋಡು, ಸ್ವಲ್ಪ ತಂದು ಕೊಡು, ಅಂತ ಹೇಳಿದ್ದು, ಅದರ ಪ್ರಕಾರ ಅವರಿಗೆ ತಂದು ಕೊಟ್ಟಿದ್ದು, ಅದನ್ನ ಉಪಯೋಗಿಸಿಕೊಂಡು ಅವರು ಹಲವಾರು ತಲೆಮಾರುಗಳ ವಿದ್ಯಾರ್ಥಿಗಳನ್ನ ಎಲ್ಲಾ ತರಹದ ಕ್ವಿಜ್ ಇತ್ಯಾದಿಗಳಿಗೆ ತಯಾರು ಮಾಡಿದ್ದು ಗೊತ್ತದ. ಕಲಿಸಬೇಕಾದ ಪಠ್ಯವನ್ನೇ ಸರಿಯಾಗಿ ಕಲಿಸುವ ಶಿಕ್ಷಕರು ಕಡಿಮೆ. ಅಂತಾದ್ರಾಗ ಎಲ್ಲೆಲ್ಲಿದೋ ಪುಸ್ತಕ, ಅವು ಎಲ್ಲೆ ಸಿಗ್ತಾವ, ಅವನ್ನು ಹ್ಯಾಂಗೆ ತರಿಸಬೇಕು, ತರಿಸಿದ ಮ್ಯಾಲೆ ಅವನ್ನ ಹ್ಯಾಂಗೆ ಉಪಯೋಗ ಮಾಡಿಕೊಂಡು, ಒಂದು ಕಿಲ್ಲರ್ ಕ್ವಿಜ್ ಟೀಮ್ ತಯಾರ್ ಮಾಡಿ, ಎಲ್ಲಾ ಪ್ರೈಸ್ ಹೊಡಿಬೇಕು ಅಂತ ಏನೆಲ್ಲಾ ಸ್ಕೀಮ್ ಹಾಕಿದ ಟಂಕಸಾಲಿ ಮಾಸ್ತರ್ ಸಿಂಪ್ಲಿ ಗ್ರೇಟ್! ಮಸ್ತ ತಲಿ ಇಟ್ಟಿದ್ದರು.

ಅಧ್ಯಾಪನದ ಜೊತೆ ಸತತ ಅಧ್ಯಯನ ಮಾಡಿದವರು ಟಂಕಸಾಲಿ ಸರ್. ನಾ ಅಂತೂ ಅವರನ್ನ ಪುಸ್ತಕ, ಯಾವದರೆ ಮ್ಯಾಗಜಿನ್ ಇಲ್ಲದೆ ನೋಡೇ ಇಲ್ಲ. ಯಾವದೋ ಪುಸ್ತಕ, ಯಾವದೋ ಮ್ಯಾಗಜಿನ್ ಸದಾ ಓದುತ್ತಲೇ ಇರ್ತಿದ್ದರು. ಆ ತರಹ ಅವರು ಮಾಡಿದ ಅಧ್ಯಯನ ಮತ್ತ ಅವರ ಪಾಂಡಿತ್ಯ ಅವರು ಕ್ಲಾಸ್ ತೊಗೊಳ್ಳೋವಾಗ ಕಂಡು ಬರ್ತಿತ್ತು. ದೇಶ ವಿದೇಶದ ಸುದ್ದಿ, ಸಂಗತಿ ಎಲ್ಲಾ ಮಸ್ತ ಹೇಳ್ತಿದ್ದರು. ಪಠ್ಯ ಪುಸ್ತಕ ರೆಫರ್ ಗಿಫರ್ ಮಾಡೋ ಪೈಕಿನೆ ಅಲ್ಲ ಸರ್. ಎಲ್ಲಾ ಸೀದಾ ಅವರ ಮೆದುಳಿಂದ ನಮ್ಮ ತಲಿಗೆ. ಯಾಕಂದ್ರ ನಮ್ಮಲ್ಲಿ ಎಲ್ಲರಿಗೆ ಮೆದುಳು ಇರಲಿಲ್ಲ. ತಲಿ ಇತ್ತು.

ನಮಗೆ ಅವರು ಕಲಿಸಿದ್ದು ಒಂದೇ ವರ್ಷ. ಹತ್ತನೇತ್ತಾ ಹಿಸ್ಟರಿ ಅಷ್ಟೇ. ಸಿವಿಕ್ಸ್ ಕೂಡ ಕಲಿಸಿದ್ದರಾ? ನೆನಪಿಲ್ಲ. ಜಿಯಾಗ್ರಫಿ ಮಾತ್ರ ಬೇರೆಯವರು.

ಬ್ಯಾರೆ ಯಾರಿಗಾದರೂ ಪುಸ್ತಕಾ ಎರವು ಕೊಡಬೇಕು ಅಂದ್ರ ಎದಿ ಡವಾಡವಾ ಅಂತಿತ್ತು. ಯಾಕಂದ್ರ ಒಮ್ಮೆ ಪುಸ್ತಕ ಕೊಟ್ಟ ಮ್ಯಾಲೆ ವಾಪಸ್ ಬರೋದು ಗ್ಯಾರಂಟೀ ಇರಲಿಲ್ಲ. ಸಾವಿರ ಸರೆ, ಪುಸ್ತಕ ಓದಿ ಆತೇನ್ರೀ? ಅಂತ ಕೇಳಿದ ಮ್ಯಾಲೆ ಏನೋ ದುರ್ದಾನ ತೆಗೆದುಕೊಂಡವರ ಹಾಂಗ ಪುಸ್ತಕಾ ವಾಪಾಸ್ ಕೊಟ್ಟವರು, ಕೊಡದೇ ಕೈ ಎತ್ತಿದವರೂ ಎಲ್ಲ ಇದ್ದಾರ. ಆದ್ರ ಟಂಕಸಾಲಿ ಸರ್ ಮಾತ್ರ ಹಾಂಗಲ್ಲ. ಅವರಿಗೆ ನಮ್ಮ ಮನಿಯೊಳಗ ಒಂದು ದೊಡ್ಡ ಪ್ರೈವೇಟ್ ಲೈಬ್ರರಿ ಅದ ಅಂತ ಗೊತ್ತಿತ್ತು. ಬೇಕಾದಾಗ ಪುಸ್ತಕಾ ಕೇಳಿ ತರಿಸ್ಕೋತ್ತಿದ್ದರು. ಕೆಲಸ ಮುಗದ ಮ್ಯಾಲೆ ತಪ್ಪದೆ ವಾಪಸ್ ಕೊಡ್ತಿದ್ದರು. ನಮ್ಮ ಮನಿಯಾಗಿನ ಎಷ್ಟೋ ಪುಸ್ತಕ ನಮ್ಮ ದೋಸ್ತರು, ನಮ್ಮ ಸೀನಿಯರ್ ಕೈಯ್ಯಾಗ ನೋಡೇನಿ. ಅದೆಲ್ಲಾ ವಾಯಾ ಟಂಕಸಾಲಿ ಸರ್. ಅವರ ಮೂಲಕ ಹೋಗಿದ್ದೆ ಛೋಲೋ ಆತು. ಅದಕ್ಕೇ ಎಲ್ಲಾ ವಾಪಾಸ್ ಬಂದವು. ಟಂಕಸಾಲಿ ಸರ್ ಮಸ್ತ ಪುಸ್ತಕ ಕೊಟ್ಟಾರಲೇ, ಅಂತ ಯಾರೋ ಎಲ್ಲೋ ಹೇಳಿಕೊಂಡು ಅಡ್ಯಾಡುತಿದ್ದರೆ, ಹೌದೇನಲೇ? ಟಂಕಸಾಲಿ ಸರ್ ಕೊಟ್ಟಾರಾ? ಹಾಂಗಾ? ಓದು ಓದು, ಅಂತ ನಮ್ಮದೇ ಪುಸ್ತಕ ಮಂದಿ ಕೈಯಲ್ಲಿ ನೋಡಿ ನಕ್ಕಿದ್ದು ನೆನಪಿದೆ ಬಿಡಿ.

ಮಾಸ್ತರ್ ಮಂದಿಯಲ್ಲಿ ಸಿಕ್ಕಾಪಟ್ಟೆ ಪುಸ್ತಕ ಓದಿಕೊಂಡವರು ಅಂದ್ರೆ ಒಬ್ಬರು ಟಂಕಸಾಲಿ ಸರ್. ಇನ್ನೊಬ್ಬರು ನಮ್ಮ ಗಣಿತಲೋಕದ ದಿವಂಗತ ದೇಶಪಾಂಡೆ ಸರ್. ಟಂಕಸಾಲಿ ಸರ್ ಮನಿ ಹೊಕ್ಕಿ ಅವರ ಲೈಬ್ರರಿ ನೋಡಿಲ್ಲ. ಸಾಕಷ್ಟು ದೊಡ್ಡದೇ ಇದ್ದೀತು. ದೇಶಪಾಂಡೆ ಸರ್ ಲೈಬ್ರರಿ ಮಾತ್ರ ಓದವರಿಗೆ ಸ್ವರ್ಗ.

ಕ್ರಿಕೆಟ್ ಕಿಟ್ಟೆಂಬ ದ್ರೌಪದಿ ಸೀರಿ: ಆವತ್ತು ಒಂದಿನ ನಾನು ಮತ್ತ ನನ್ನ ಖಾಸ್ ದೋಸ್ತ ಅರವಿಂದ ಪಾಟೀಲ ಇಬ್ಬರೂ ಪ್ರೇಯರ್ ಆದ ನಂತರ ಹೆಡ್ ಮಾಸ್ತರ್ ಕಡೆ ಬೈಸಿಕೊಂಡು ಕ್ಲಾಸಿಗೆ ಬರ್ಲಿಕತ್ತಿದ್ದಿವಿ. ಹಿಂದಿನ ದಿವಸ ನಾಕೋ ಐದೋ ಪೀರಿಯಡ್ ಆದ ಮ್ಯಾಲೆ ಮನಿಗೆ ಓಡಿ ಹೋಗಿದ್ದಿವಿ. ಅದಕ್ಕ ಮರು ದಿವಸ ಹಿಡಿದು, ಬೈದು ಕಳಿಸಿದ್ದರು.

ಲೇ ಅರವ್ಯಾ, ಅಂತ ಅರವಿಂದನ ಕರದೆ. ಬೈಸಿಕೊಂಡ ಬಂದ ಸಿಟ್ಟು ಅವನ ಕರೆದ ದನಿಯೊಳಗಿತ್ತು.

ಏನ್ ಮಹೇಶಾ? ಅಂದ ಅರವ್ಯಾ. ಆವಾ ಏನೇ ಆಗಲೀ, ಏನೇ ಹೋಗ್ಲೀ, ಎಮ್ಮೆ ನಿನಗೆ ಸಾಟಿ ಇಲ್ಲ ಅನ್ನೋ ಹಾಂಗ ಯಾವಾಗಲೂ ನಕ್ಕೋತ್ತ ನಗಿಸಿಕೋತ್ತ ಇರವಾ. ಜಾಲಿ ಫೆಲೋ.

ಅರವ್ಯಾ, ಒಂದು ಕೆಲಸಾ ಮಾಡಬೇಕಲೇ. ನಾವೆಲ್ಲರ ವಾರಕ್ಕ ಮೂರೋ, ನಾಕೋ, ಐದೋ ಸರೆನೋ ಐದಾರ್ ಪೀರಿಯಡ್ ಆದ ಮ್ಯಾಲೆ ಎದ್ದು ಮನಿಗೆ ಓಡಿ ಹೋದ್ರ ಹಾಕ್ಕೊಂಡು ಬೈತಾರ. ಒಮ್ಮೊಮ್ಮೆ ಕೆಲೊ ಮಂದಿಗೆ ಕಡತ ಸಹಿತ ಬೀಳ್ತಾವ. ಆದ್ರ ಇದೇ ಮಾಸ್ತರ್ ಮಂದಿ ಪೀರಿಯಡ್ ಗೆ ಹತ್ತು, ಹದಿನೈದು, ಮೂವತ್ತು ನಿಮಿಷ ತಡಾ ಆಗಿ, ಒಮ್ಮೊಮ್ಮೆ ಪೀರಿಯಡ್ ಮುಗಿಲಿಕ್ಕೆ ಇನ್ನು ಐದೇ ನಿಮಿಷ ಇದ್ದಾಗ ಬಂದಾಗ ನಾವೇನರೇ ಅಂತೇವಿ ಏನು? ಅಂತೇವಿ ಏನು ಹೇಳಲೇ ಮಗನೇ? ಪಾಪ, ಮಾಸ್ತರು, ಟೀಚರು, ಏನೋ ಲೇಟ್ ಆತು, ಅದಕ್ಕಾ ತಡಾ ಮಾಡಿ ಬಂದಾರ ಅಂತ ಸುಮ್ಮ ಇರ್ತೇವಿ. ಇವರಿಗೂ ಮಾಡೋಣ ತಡೀಲೇ, ಅಂತ ಒಂದು ಸ್ಕೆಚ್ ಹಾಕೋ ಹಾಂಗ ಹೇಳಿದೆ.

ಮಾಸ್ತರು ಟೀಚರು ಲೇಟ್ ಆಗಿ ಬಂದ್ರ ನಮಗ ಛೋಲೋನೇ ಆಗಿತ್ತು. ಗದ್ದಲಾ ಹಾಕಿಕೋತ್ತ ಕೂಡಲಿಕ್ಕೆ. ಆದ್ರ ಈಗ ಒಂದು ಇಶ್ಯೂ ಅಂತ ಮಾಡಿ ಅವರಿಗೇ ಉಲ್ಟಾ ಹೊಡಿಬೇಕಿತ್ತಲ್ಲಾ? ಅದಕ್ಕ ಅಂತ ಹೇಳಿ ಏನೋ ಒಂದು ಇಶ್ಯೂ.

ಏನು ಮಾಡೋಣಂತಿ ಮಹೇಶಾ? ಅಂದ ಅರವ್ಯಾ.

ನಮ್ಮ ಚಿತ್ರ ವಿಚಿತ್ರ ಆಲೋಚನೆಗಳನ್ನು ಅವತ್ತಿಂದ ಇವತ್ತಿನ ತನಕ ಕೇಳಿ, ಸಹಿಸಿಕೊಂಡು, ಕೆಲವೊಂದನ್ನು ಆಚರಣೆಯಲ್ಲಿ ತರಲು ಸಹಕರಿಸಿದ ಕೆಲವೇ ಕೆಲವು ಮಿತ್ರರಲ್ಲಿ ಈ ಅರವಿಂದ ಪಾಟೀಲ ಅಗ್ರಗಣ್ಯ.

ನೋಡಲೇ ಅರವ್ಯಾ ಸಿಂಪಲ್. ನಾಳಿಂದ ಅವನೌನ್ ಯಾವದೇ ಟೀಚರ್ ಮಾಸ್ತರ್ ಕ್ಲಾಸಿಗೆ ಬರೋದು ಐದು ಮಿನಿಟ್ ಲೇಟ್ ಆತು ಅಂದ್ರ ನಾನು, ನೀನು, ಆವಾ ಭಟ್ಟಾ, ಗಲಗಲಿ, ಬೇಕಾದ್ರ ಕರ್ಜಗ್ಯಾ, ಕಟೀರಾ, ಮತ್ತ ಯಾರರ ಬೇಕಂದ್ರ ಅವರು ಎಲ್ಲ ಕೂಡಿ ಹೋಗಿ, ಪೀರಿಯಡ್ಡಿಗೆ ಲೇಟ್ ಮಾಡಿದ ಮಾಸ್ತರ್ ಟೀಚರ್ ಹುಡುಕಿಕೊಂಡು ಹೊಂಟು ಬಿಡೋಣ. ಮೊದಲು ಹೋಗಿ ಆಫೀಸ್ ಒಳಗ ಚೆಕ್ ಮಾಡೋದು. ಲೇಟ್ ಆದ ಮಾಸ್ತರ್ ಟೀಚರ್ ರಜಾ ಮ್ಯಾಲೆ ಇದ್ದಾರ ಅಂದ್ರ ಆ ಮಾತು ಬ್ಯಾರೆ. ಏನರೆ ಸಾಲಿಗೆ ಬಂದು ಕ್ಲಾಸಿಗೆ ಪಿರಿಯಡ್ ತೊಗೊಳ್ಳಿಕ್ಕೆ ಲೇಟ್ ಮಾಡ್ಯಾರ ಅಂದ್ರ ಸಾಲಿ ಪೂರಾ ಹುಡುಕಿ, ಅವರನ್ನ ಕಾಡಿ ಬೇಡಿ ಕ್ಲಾಸಿಗೆ ಕರಕೊಂಡು ಬರೋದು ನೋಡಲೇ. ಏನಂತೀ? ಅಂತ ಕೇಳಿದೆ.

ಹೀಂಗ ಮಾಡೋಣ ಅಂತೀ? ಅಂತ ಅರವ್ಯಾ ಕೇಳಿದ. ದೊಡ್ಡ ಕ್ವೆಶ್ಚನ್ ಮಾರ್ಕ್ ಒಗೆದ.

ನಾನು ಹಾ!! ಹಾ!! ಅಂತ ರಕ್ಕಸ ನಗೆ ನಕ್ಕೆ. ಆವಾಗ ಅವಂಗ ಗೊತ್ತಾತು ನಮ್ಮ ಪ್ಲಾನಿನ ಹಿಂದಿನ ಮರ್ಮ.

ಮಹೇಶಾ ಮಸ್ತ ಐತಿ ಐಡಿಯಾ. ಪೀರಿಯಡ್ಡಿಗೆ ತಡಾ ಮಾಡಿದ ಮಾಸ್ತರ್, ಟೀಚರ್ ಹುಡುಕಾಕ ಅಂತ ಹೇಳಿ ಸಾಲಿ ತುಂಬಾ ಅಡ್ಯಾಡೋದು. ಯಾರರ ಹಿಡಿದು, ಯಾಕ ಅಡ್ಯಾಡಾಕ ಹತ್ತೀರಿ? ಅಂತ ಕೇಳಿದರ, ಈ ಮಾಸ್ತರ್ ಹುಡುಕಾಕ ಹೊಂಟೇವ್ರೀ, ಈ ಟೀಚರ್ ಹುಡುಕಾಕ ಹೊಂಟೇವ್ರೀ ಅಂತ ಹೇಳಿ ಚೌಕ ಗುಳಿಗಿ ಉಳ್ಳಿಸಿಬಿಡೋದು. ಆ ನೆವದಾಗಾರಾ ಸಾಲಿ ತುಂಬಾ ಒಂದೀಟು ಅಡ್ಯಾಡಿ ಬಂದಂಗ ಆಕ್ಕೈತಿ. ಬರ್ರಿ, ಬರ್ರಿ, ಕ್ಲಾಸಿಗೆ ತಡಾ ಆಗೈತಿ ಅಂತ ಹೇಳಿ ಮಾಸ್ತರ್ ಟೀಚರಿಗೆ ಕಾಡಿದಂಗೂ ಅಕ್ಕೈತಿ. ಇದೇ ಹೌದಿಲ್ಲ ನಿನ್ನ ಪ್ಲಾನ್? ಯಪ್ಪಾ!!! ಹೋಗ್ಗೋ!!! ಮಸ್ತ ಬತ್ತಿ ಇಟ್ಟಿಯಲ್ಲಪಾ!!!ಹಾ!! ಹಾ!! ಅಂತ ಅವನೂ ಯಕ್ಕಾ ಮಕ್ಕಾ ನಕ್ಕಾ. ನಾವಿಬ್ಬರು ಯಿನ್ & ಯಾಂಗ್ ಇದ್ದಂಗ. ನಾ ಅರ್ಧಾ ಹೇಳಿದರ ಉಳಿದ ಅರ್ಧಾ ಆವಾ ಪೂರ್ಣ ಮಾಡ್ತಿದ್ದ.

ಈ ಪ್ಲಾನಿಗೆ ಮೊದಲ ಬಲಿ ಆದವರು ಅವರೇ ಟಂಕಸಾಲಿ ಸರ್!

೧೯೮೭ ಜುಲೈ, ಆಗಸ್ಟ್ ಅಂತ ನೆನಪು. ನಾವು ಆಗ SSLC. ಆವತ್ತು ಮಧ್ಯಾನದ ಸೂಟಿ ಆದ ನಂತರ ಟಂಕಸಾಲಿ ಸರ್ ಹಿಸ್ಟರಿ ಪಿರಿಯಡ್ ಇತ್ತು ಅಂತ ನೆನಪು. ನಾರ್ಮಲಿ ಸರ್ ಎಂದೂ ಲೇಟ್ ಮಾಡಿದವರೇ ಅಲ್ಲ. ಐದು ನಿಮಿಷದೊಳಗೆ ಕ್ಲಾಸಿಗೆ ಹಾಜರ್ ಆಗಿ, ಶುರು ಮಾಡೇ ಬಿಡ್ತಿದ್ದರು. ಅವತ್ತು ಏನೋ ಲೇಟ್ ಆಗಿತ್ತು.

ಅವತ್ತು ಏನು ಆಗಿತ್ತು ಅಂದ್ರ ನಮ್ಮ ಸಾಲಿಗೆ ಹೊಸಾ ಕ್ರಿಕೆಟ್ ಕಿಟ್ ಬಂದು ಬಿಟ್ಟಿತ್ತು. ದೊಡ್ಡ ಘಟನೆ ಅದು. ಭಟ್ಟರ ಸಾಲಿಗೆ ಒಂದು ಹೊಚ್ಚ ಹೊಸಾ ಕ್ರಿಕೆಟ್ ಕಿಟ್ ಬರೋದು ಅಂದ್ರ ಸಣ್ಣ ಮಾತಲ್ಲ. ಆ ಕಾಲದಲ್ಲೇ ಅದಕ್ಕೆ ಮೂರು ನಾಕು ಸಾವಿರ ರೂಪಾಯಿ ಮ್ಯಾಲೆ ಇತ್ತು. ಅಂತಾ ಕ್ರಿಕೆಟ್ ಕಿಟ್ಟು ಬಂದು ಬಿಟ್ಟದ. ಇನ್ನು ಎಲ್ಲಾ ಬಿಚ್ಚಿ ತೆಗೆದು ನೋಡಬೇಕು. ಅಯ್ಯೋ! ಕ್ರಿಕೆಟ್ ಕಿಟ್ ಮ್ಯಾಲಿನ ಜಿಪ್ಪರ್ ತೆಗೆದು, ಮ್ಯಾಲಿನ ಚೀಲಾ ಬಿಚ್ಚಿ, ಒಳಗ ಏನದ ಅಂತ ನೋಡಬೇಕು ಅಂತ ಅಷ್ಟೇ!

ಮತ್ತ ನಮ್ಮ ಟಂಕಸಾಲಿ ಸರ್ ದೊಡ್ಡ ಕ್ರಿಕೆಟ್ ಪ್ಲೇಯರ್. ಅವರಿಗೆ ಸ್ವಲ್ಪ epilepsy ಅಂತ ಆರೋಗ್ಯದ ತೊಂದರೆ ಇತ್ತು. ಅದಕ್ಕೇ ಅವರಿಗೆ ದೊಡ್ಡ ಮಟ್ಟದ ಕ್ರಿಕೆಟ್ ಆಡಲಿಕ್ಕೆ ಆಗಲಿಲ್ಲ. ಇಲ್ಲಂದ್ರ ಕಮ್ಮಿ ಕಮ್ಮಿ ಅಂದ್ರೂ ರಣಜಿಯಾದ್ರೂ ಆಡೇ ಆಡ್ತಿದ್ದರು ಅಂತ ಅವರ ಕ್ರಿಕೆಟ್ ಆಟದ ಪ್ರಾವಿಣ್ಯತೆ ಬಲ್ಲವರ ಅಂಬೋಣ. ಇರಬಹದು ಬಿಡ್ರೀ.

ನಮ್ಮ ಸಾಲಿಯ ಸೆಂಟ್ರಲ್ ಹಾಲಿನಲ್ಲಿ ಕ್ರಿಕೆಟ್ ಕಿಟ್ಟನ್ನು ಮತ್ತೊಬ್ಬ ಕ್ರಿಕೆಟ್ ಪ್ರೇಮಿ ಮಾಸ್ತರ್ ಎಂ. ಎ. ಸಿದ್ಧಾಂತಿ ಸರ್ ಬಿಚ್ಚುತ್ತಿದ್ದರು. ಇತರ ಕ್ರೀಡಾಪ್ರೇಮಿ ಶಿಕ್ಷಕರಾದ ಪಟೇಲ್ ಸರ್, ಕಟ್ಟಿ ಸರ್ ಇತ್ಯಾದಿ ನೋಡುತ್ತಿದ್ದರು. ಟಂಕಸಾಲಿ ಸರ್ ಸಹಿತ ಅದನ್ನ ಆಸಕ್ತಿಯಿಂದ ನೋಡುತ್ತಿದ್ದರು. ಸಿದ್ಧಾಂತಿ ಸರ್ ಒಂದೊಂದೆ ಬ್ಯಾಟು, ಪ್ಯಾಡು, ಅದು ಇದು ತೆಗೆದು ತೆಗೆದು ಕೊಟ್ಟಂಗೆ ಇವರೆಲ್ಲ ಅದನ್ನ ಮುಟ್ಟಿ ಮುಟ್ಟಿ, ನೋಡಿ ನೋಡಿ, ಮಸ್ತ ಅದ, ಮಸ್ತ ಅದ, ಅಂತ ತಲಿ ಆಡಸ್ತಿದ್ದರು.

ಪಿರಿಯಡ್ ಶುರು ಆಗಿ ಐದು ನಿಮಿಷದ ಮ್ಯಾಲೆ ಆಗಿ ಬಿಟ್ಟಿತ್ತು. ನೋಡಿದರ ಟಂಕಸಾಲಿ ಸರ್ ಇಲ್ಲೆ ಕಿಟ್ ಬಿಚ್ಚೋದನ್ನ ನೋಡಿಕೋತ್ತ ನಿಂತಾರ. ಅವರನ್ನ ಅದೆಂಗ ಹಾಂಗೆ ಬಿಡಲಿಕ್ಕೆ ಬರ್ತದ? ಹೋಗಿ ಕೊಕ್ಕಿ ಹಾಕಲಿಕ್ಕೇ ಬೇಕು. ಬರ್ರಿ ಸರ್ರ್! ಬರ್ರಿ ಸರ್ರ್! ಯಾವಾಗ ಬರ್ತೀರಿ? ಸರ್! ಸರ್! ಅಂತ ಸರ್ ಜೀವಾ ತಿನ್ನಲಿಕ್ಕೇ ಬೇಕು.

ಹೋದ್ವೀ. ಹೋಗಿ, ಸರ್! ಅಂತ ಒಂದು ಮಾತು ಹೇಳಿ ನಿಂತ್ವಿ.

ಏನು? ಅನ್ನೋ ಲುಕ್ ಕೊಟ್ಟರು ಸರ್.

ಸರ್ರ್! ನಿಮ್ಮ ಪಿರಿಯಡ್ ಅದರೀ ಸರ್!...... ಅಂತ ಹೇಳಿದೆ.

ಹಾಂ!! ಬಂದೆ. ಈಗ ಬಂದೆ. ಹೋಗ್ರೀ,  ಅಂತ ಸರ್ ನಮ್ಮನ್ನೆಲ್ಲಾ ಬ್ರಷ್ ಆಫ್ ಮಾಡೋ ಹಾಂಗ ಹೇಳಿದರು. ಸರ್ ಕ್ರಿಕೆಟ್ ಕಿಟ್ ಬಿಚ್ಚೋದನ್ನ ಎಷ್ಟು ತನ್ಮಯತೆಯಿಂದ ನೋಡ್ಲಿಕತ್ತಿದ್ದರು ಅಂದ್ರ ಇವರು ಇವತ್ತು ಪಿರಿಯಡ್ ಗೆ ಕೈ  ಎತ್ತತಾರ ಅಂತ ಅನ್ನಿಸಿತು.

ಹೂನ್ರೀ ಸರ್ರ್! ಅಂತ ಅಷ್ಟೇ ಹೇಳಿ ಹೊರಳಿ ಬಂದ್ವಿ. ಬಂದು ಕೂತು ನಮ್ಮ ರೆಗ್ಯುಲರ್ ಹರಟಿ, ಹುಚ್ಚರ ಗತೆ ನಗುವ ಕಾರ್ಯಕ್ರಮ ಮುಂದುವರಿಸಿದಿವಿ.

ಐದು ನಿಮಿಷ ಆತು. ಹತ್ತು ನಿಮಿಷಾತು. ಸರ್ ಬರಲೇ ಇಲ್ಲ. ಇನ್ನೂ ಕ್ರಿಕೆಟ್ ಕಿಟ್ ಬಿಚ್ಚೋದು ಮುಗಿದಿದ್ದಿಲ್ಲ ಅಂತ ಕಾಣ್ತದ. ಮತ್ತೊಮ್ಮೆ ಹೋಗಿ ಕಾಡಿ ಪೀಡಿಸಿ ಬರಬೇಕು.

ಮತ್ತ ಹೋದ್ವೀ. ನಡು ಸಿಕ್ಕು, ಎಲ್ಲೆ ಹೊಂಟೀರಿ? ಅಂತ ಕೇಳಿದ ಮಂದಿಗೆ ರೆಡಿ ಉತ್ತರಾ, ಅದು ಟಂಕಸಾಲಿ ಸರ್ ಅಲ್ಲೆ (ಕಿಟ್) ಬಿಚ್ಚೋದನ್ನ ನೋಡಿಕೋತ್ತ ನಿಂತಾರ್ರಿ ಟೀಚರ್. ಹೋಗಿ ಕರಕೊಂಡು ಬರೋಣ ಅಂತ ಹೇಳಿ, ಅಂತ ಹೇಳೋದ್ರಾಗ ನಮಗೆ ನಗು ತಡಕೊಳ್ಳಲಿಕ್ಕೆ ಆಗ್ತಿದ್ದಿಲ್ಲ. ಏನೋ ಹೇಳಿ ಓಡೋದು.

ಮತ್ತ ಸರ್ ಮುಂದ ಹೋಗಿ ನಿಂತಿವಿ. ಅದೆಂತಾ ಕ್ರಿಕೆಟ್ ಕಿಟ್ಟೋ ಏನೋ? ಇನ್ನೂ ಒಳಗ ಕೈ ಹಾಕಿ ಹಾಕಿ ಸಾಮಾನು ತೆಕ್ಕೋತ್ತಲೇ ಇದ್ದರು. ಎಮ್.ಎ. ಸಿದ್ಧಾಂತಿ ಸರ್ ತೆಗೆದು ಕೊಟ್ಟಂಗೆ ಕೊಟ್ಟಂಗೆ ಬಾಕಿ ಮಂದಿ ಕೈಯ್ಯಾಗ ಆ ಸಾಮಾನು.  ಒಳ್ಳೆ ಅಕ್ಷಯ ಪಾತ್ರೆ ತರಹದ ಕಿಟ್. ಎಷ್ಟು ತೆಗೆದರೂ ಖಾಲಿ ಆಗ್ಲಿಕತ್ತಿದ್ದಿಲ್ಲ. ಯಾರಿಗೆ ಗೊತ್ತು, ಎರಡು ಮೂರು ಕಿಟ್ ಒಂದೇ ಸಲಕ್ಕೆ ಖರೀದಿ ಮಾಡಿ ಬಿಟ್ಟಿದ್ದರೋ ಏನೋ?

ಸರ್! ಬರ್ರಿ, ಅಂತ ಅನ್ನಬೇಕು ಅನ್ನೋದ್ರಾಗ ಕಟ್ಟಿ ಸರ್ ಕೈಯಾಗ ಒಂದು ಅಪರೂಪದ 'ಸಾಮಾನು' ಇತ್ತು. ಅದನ್ನ ನೋಡಿದ ನಮ್ಮ ಜೋಡಿ ಬಂದಿದ್ದ ಕಿಡಿಗೇಡಿ ಒಬ್ಬವ ಒಂದು ಸಿಕ್ಕಾಪಟ್ಟೆ ಖತರ್ನಾಕ್ ಜೋಕ್ ಹೊಡೆದ. ಸಿಕ್ಕಾಪಟ್ಟೆ ನಗು ಬಂತು. ಟಂಕಸಾಲಿ ಸರ್ ಮಾರಿ ನೋಡಿಕೋತ್ತ ಅವರ ಜೋಡಿ ಮಾತಾಡಬೇಕಿತ್ತು ಅಂತ ಹೇಳಿ ಹ್ಯಾಂಗೋ ಮಾಡಿ ನಗು ತಡಕೊಂಡೆ. ಅದು ಕಟ್ಟಿ ಸರ್ ಕೈಯಾಗ ಅದೇನು ಕ್ರಿಕೆಟ್ 'ಸಾಮಾನು' ಇತ್ತು, ಅದು ಏನು ಜೋಕ್ ಅದೆಲ್ಲ ಬ್ಯಾಡ. ಗೊತ್ತಾಗವರಿಗೆ ಅದು ಏನು 'ಸಾಮಾನು' ಅಂತ ಗೊತ್ತಾಗ್ತದ. 'ಸಾಮಾನು' ಗೊತ್ತಾದರ ಜೋಕ್ ಸಹಿತ ಗೊತ್ತಾಗ್ತದ.

ಮತ್ತ ಮೊದಲಿನ ಹಾಂಗೆ ಮಾಡಿದಿವಿ.

ಸರ್! ನಿಮ್ಮ ಪಿರಿಯಡ್ ಅದರೀ.................ಅಂತ ಎಳದೆ.

ಸರ್ ಅವರಿಗೆ ಕ್ರಿಕೆಟ್ ಕಿಟ್ ನೋಡೋ ಸಂಭ್ರಮ. ಕರಡಿ ಪೂಜಿ ಒಳಗ ಶಿವನ್ನ ಬಿಟ್ಟಂಗ....ಅಲ್ಲಲ್ಲ....ಶಿವಪೂಜಿ ಒಳಗ ಕರಡಿ ಬಿಟ್ಟಂಗ ನಾವು ಒಂದಿಷ್ಟು ಮಂದಿ ಹೋಗಿ, ಪಿರಿಯಡ್ ಅದ ಬರ್ರಿ! ಬರ್ರಿ! ಅಂತ ಕಾಡ್ಲಿಕತ್ತುಬಿಟ್ಟೇವಿ. ಸೂಡ್ಲಿ! ಪಿಶಾಚಿ ಅಂತಹ ಸ್ಟೂಡೆಂಟ್ಸ್.

ಟಂಕಸಾಲಿ ಸರ್ ಭಾಳ ಶಾಂತ ಸ್ವಭಾವದವರು. ಬೈತಿದ್ದಿಲ್ಲ.

ಬರ್ತೇನೋ ಮಾರಾಯಾ! ಈಗ ಬಂದೇ ಬಿಟ್ಟೆ. ಹೋಗ್ರೀ, ಅಂತ ಹೇಳಿ ಮತ್ತ ಓಡಿಸಿದರು.

ಏ! ಈ ಟಿಂಕು ಬರ್ತೇನಿ ಬರ್ತೇನಿ ಅಂತ ಬರೆ ಚೌಕ ಉಳ್ಳಸಾಕ ಹತ್ಯಾನ್ರಲೇ!!! ಹಾ!!! ಹಾ!! ಅಂತ ಅವರಿಗೆ ಕೇಳಿಸದಾಂಗ ನಕ್ಕೋತ್ತ ನಮ್ಮ 10th A ಕ್ಲಾಸಿಗೆ ಬಂದು ಕೂತ್ವಿ.

ಕ್ಲಾಸಿಗೆ ಬಂದು ಕಟ್ಟಿ ಸರ್ ಕೈಯ್ಯಾಗ ಇದ್ದ ಆ ಕ್ರಿಕೆಟ್ 'ಸಾಮಾನು' ನೆನೆಸಿಕೊಂಡು ನೆನಿಸಿಕೊಂಡು, ಎಲ್ಲಾ ಕಡೆ ತಟ್ಟಿಕೊಂಡು ನಕ್ಕು ನಕ್ಕು, ಕಣ್ಣಾಗ ನೀರು ಬಂದು ಬಿಟ್ಟಿತ್ತು. ಕಟ್ಟಿ ಸರ್ ಅಂದ್ರ ಯಂಗ್ & ಡ್ಯಾಶಿಂಗ್ ಮಾಸ್ತರ್. ಇನ್ನೂ ೨೮-೨೯ ವರ್ಷದ handsome ಮಾಸ್ತರು. ಅಂತವರ ಕೈಯಾಗ ಆ ಕ್ರಿಕೆಟ್ 'ಸಾಮಾನು' ನೋಡಿ ನಾವು ಮಂಗ್ಯಾನಿಕೆಗಳು ಯಾಕ್ ನಕ್ಕಿದ್ದಿವಿ? ಆವಾಗ ನಮಗ ನಗಲಿಕ್ಕೆ ಕಾರಣ ಅದು ಇದು ಬೇಕಾಗಿಯೇ ಇರಲಿಲ್ಲ. ಜಸ್ಟ್ ಬಿ ಹ್ಯಾಪಿ! ಹ್ಯಾಪಿಲಿ ಹಾಪ್ ಮಂದಿ ಎಲ್ಲಾ ನಾವು.

ಕಟ್ಟಿ ಸರ್ ಮ್ಯಾಲಿನ ಜೋಕ್ ಮತ್ತ ಮತ್ತ ಕೇಳಿ ನಕ್ಕು ಮುಗಿಸೋದ್ರಾಗ ಮತ್ತ ಹದಿನೈದು ನಿಮಿಷ ಆತು. ಅಂದ್ರ ಟಂಕಸಾಲಿ ಸರ್ ಪಿರಿಯಡ್ ಅರ್ಧಾಕ್ಕಿಂತ ಹೆಚ್ಚು ಮುಗಿದೇ ಹೋಗಿತ್ತು. ಇನ್ನೂ ಸರ್ ಪತ್ತೇನೇ ಇಲ್ಲ. ನಾವು ಬಿಡೋ ಪೈಕಿ ಅಲ್ಲವೇ ಅಲ್ಲ. ಕೈ ತೊಳಕೊಂಡೇ ಹಿಂದ ಬಿದ್ದವರು.

ಏ!!! ನಡ್ರಿಲೇ! ಟಿಂಕು ಮಾಸ್ತರ (ಕಿಟ್) ಬಿಚ್ಚೋದು, ನೋಡೋದು ಎಲ್ಲ ಇನ್ನೂ ಮುಗಿದಂಗ ಇಲ್ಲ. ಮತ್ತ ಹೋಗಿ ಕಡ್ಡಿ ಹಾಕೋಣ ನಡೀರಿಲೇ, ಅಂತ ಹೇಳಿ ಮತ್ತ ಹೋದ್ವೀ. ಅದೇ ನಾಲ್ಕೈದು ಜನರ ಗುಂಪು.

ಯಪ್ಪಾ!! ಅದೇನು ಇತ್ತೋ ಆ ಕ್ರಿಕೆಟ್ ಕಿಟ್ ಒಳಗ!!!! ಸ್ಕೂಲ್ ಹಾಲ್ ಒಳಗ ಅದನ್ನ ನಡು ಇಟ್ಟುಕೊಂಡು ಅದೇನು ತೆಗೆದು ತೆಗೆದು ಗುಡ್ಡಿ ಹಾಕ್ಲಿಕತ್ತಿದ್ದರೋ ದೇವರಿಗೇ ಗೊತ್ತು.

ಟಂಕಸಾಲಿ ಸರ್ ಅವರಿಂದ ಸ್ವಲ್ಪ ದೂರ ಇದ್ದಾಗ ಒಬ್ಬ ಕಿಡಿಗೇಡಿ ಇನ್ನೊಂದು ಬಾಂಬ್ ಹಾಕೇ ಬಿಟ್ಟ.

ಮಹೇಶಾ!!! ಆ ಕಿಟ್ ಆ ಪರಿ ಖಾಲಿ ಮಾಡಿದರೂ ಅದು ಖಾಲಿ ಅಗವಲ್ಲತು. ಅದನ್ನ ನೋಡಿದರ ನಿನಗೇನು ನೆನಪಾಗ್ತದ ಹೇಳು? ಅಂತ ಹೇಳಿ ಒಂದು ಬತ್ತಿ ಇಟ್ಟ. ಅವನ ಮಾರಿ ಮ್ಯಾಲಿನ ನಗು ನೋಡಿದ್ರ ಈ ಹಾಪ್ಸೂಳಿಮಗ ಏನೋ ಒಂದು ದೊಡ್ಡ ಜೋಕ್ ಹೊಡಿಯವ ಇದ್ದಾನ ಅಂತ ಖರೆ ಅಂದ್ರೂ ಗೊತ್ತಾತು.

ಏನಲೇ? ಏನ್ ಹಚ್ಚಿ? ಅಂತ ಕೇಳಿದೆ.

ಅವನೌನ್! ಒಂದು ತಾಸಿಂದ ಆ ಕ್ರಿಕೆಟ್ ಕಿಟ್ ಬಿಚ್ಚಲಿಕತ್ಯಾರ. ಇನ್ನೂ ಖಾಲಿ ಆಗವಲ್ಲತು. ಎಲ್ಲರೆ ನಮ್ಮ ಸಾಲಿ ಮಂದಿ ದ್ರೌಪದಿ ಕ್ರಿಕೆಟ್ ಕಿಟ್ ತಂದಾರೇನು ಅಂತ ನನಗ ಡೌಟ್ ನೋಡಪಾ, ಅಂತ ಭಾಳ ಇನ್ನೋಸೆಂಟ್ ಆಗಿ ಹೇಳಿದ.

ಏನು!! ದ್ರೌಪದಿ ಕಿಟ್ಟ? ಅಂದ್ರಾ? ಅಂತ ಕೇಳಿದೆ.

ದ್ರೌಪದಿ ಸೀರಿ, ನೆನಪಾತ? ಅದನ್ನ ಕೌರವರು ಎಷ್ಟೇ ಉಚ್ಚಿದರೂ ಅದು ಉಚ್ಚಲೇ ಇಲ್ಲ. ಅಕಿದು ಒಂದು ಸೀರಿ ಕಳದಾಂಗ ಮತ್ತೊಂದು ಬಂದೇ ಬರ್ತಿತ್ತು. ಈ ಕ್ರಿಕೆಟ್ ಕಿಟ್ ಒಂದೋ ಅಕ್ಷಯ ಪಾತ್ರೆ ಇರಬೇಕು. ಇಲ್ಲಂದ್ರ ದ್ರೌಪದಿ ಸೀರಿನೇ ಇರಬೇಕು. ಇಲ್ಲಂದ್ರ ಏನೋ ಇದು? ಒಂದು ತಾಸಿಂದ ಆ ಕಿಟ್ ಒಳಗಿಂದ ಸಾಮಾನು ತೆಗೆದೇ ತೆಗೆಲಿಕತ್ತಾರ ಇನ್ನೂ ಖಾಲಿ ಆಗವಲ್ಲತು, ಅಂದು ಬಿಟ್ಟ.

ಯಪ್ಪಾ!!! ಅವಾ ಹೇಳಿದ ರೀತಿ, ಆ ಡೈಲಾಗ್ ಡೆಲಿವರಿ, ಆ ಟೈಮಿಂಗ್ ಎಲ್ಲ ಕೂಡಿ ಸುತ್ತಾ ಮುತ್ತಾ ಸರ್ ಅವರು ಇವರು ಇದ್ದಾರ ಅನ್ನೋದರ ಖಬರು ಸಹ ಇಲ್ಲದೆ ಹಾಕ್ಕೊಂಡು ಖೀ!!!!ಖೀ!!! ಅಂತ ಎಲ್ಲಾ ಬಿಚ್ಚಿ ನಕ್ಕು ಬಿಟ್ಟಿವಿ. ಭಿಡೆ ಬಿಟ್ಟು ನಕ್ಕು ಬಿಟ್ಟಿವಿ. ಎಂ.ಎ. ಸಿದ್ಧಾಂತಿ ಸರ್ ಬಂದು ಹಾಕ್ಕೊಂಡು ಒದ್ದು ಬಿಟ್ಟಾರು ಅಂತ ಲಕ್ಷ ಸಹಿತ ಇಲ್ಲದೆ ನಕ್ಕಿದ್ದಿವಿ. ಯಪ್ಪಾ! ಆ ಪರಿ ನಕ್ಕಿದ್ದು ನೆನಪಿಲ್ಲ ಬಿಡ್ರೀ ಆ ಮ್ಯಾಲೆ.

ಹಾಂಗ ಹುಚ್ಚರ ಗತೆ ನಕ್ಕೊತ್ತನೇ ಟಂಕಸಾಲಿ ಸರ್ ಹತ್ತಿರ ಹೋಗಿ ಸಲಾಂ ಹೊಡಿ ಬೇಕು ಅನ್ನೋದ್ರಾಗ, ಸರ್ ಅವರೇ, ಈ ಶನಿಗಳು ಬಿಡೋ ಪೈಕಿ ಅಲ್ಲ, ಅಂತ ಹೇಳಿ, ಕಿಟ್ ಬಿಟ್ಟು ಬರಲಿಕ್ಕೆ ಮನಸ್ಸು ಇಲ್ಲದೆ, ಸಣ್ಣ ಮಾರಿ ಮಾಡಿಕೊಂಡು ನಮ್ಮ ಜೋಡಿನೇ ಬಂದ್ರು. ಕಟ್ಟಿ ಮಾಸ್ತರ್ ಮಾತ್ರ ಇನ್ನೂ ಆ 'ಸಾಮಾನು' ಕೈಯಲ್ಲಿ ಹಿಡಕೊಂಡೇ ನಿಂತಿದ್ದರು. ಅದು ಆ ತಿಂಗಳ ಮುಗಿಯದ ಜೋಕ್.

ಹೀಗೆ ಈ ಪರಿ ತನ್ಮಯತೆಯಿಂದ ಕ್ರಿಕೆಟ್ ಕಿಟ್ ನೋಡುತ್ತಿದ್ದ ಟಂಕಸಾಲಿ ಸರ್ ಅವರಿಗೆ ಕಾಟ ಕೊಟ್ಟು ಕೊಟ್ಟು ಕರಕೊಂಡು ಬಂದಾಗ ಪಿರಿಯಡ್ ಮುಗಿಯಲಿಕ್ಕೆ ಹತ್ತು ಭಾಳ ಅಂದ್ರ ಹದಿನೈದು ಮಿನಿಟ್ ಇತ್ತು. ಅಷ್ಟೇ.

ಮಹೇಶಾ!!! ಈಗ ನೋಡಾ!!! ನೋಡಾ! ರಾಜಾsssssssssssss ರಾಮ್ಮೋಹನ್ ರಾಯ್ ಅಂತಾರ ನೋಡಾ ಸರ್! ಬೇಕಾದ್ರ ಬೆಟ್ಟ ಕಟ್ ನೀ! ಅಂದಾ...ಅಂದಾ.... ಅಂದಲೇ ಟಿಂಕು ಅಂದಾ ...... ರಾಜಾsssssssssssss ರಾಮ್ಮೋಹನ್ ರಾಯ್, ಅಂತ ಒಬ್ಬ ಕಿಡಿಗೇಡಿ ಪೂರ್ತಿ ಪೀಛೆ ಮುಡ್ ಮಾಡಿ ಹೇಳಿ ನಕ್ಕಾ. ಭಾರಿ ಜೋಕ್ ಅದು.

ಟಂಕಸಾಲಿ ಸರ್ ಅವರು ಬ್ರಹ್ಮ ಸಮಾಜದ ಸ್ಥಾಪಕ ರಾಜಾ ರಾಮಮೋಹನ್ ರಾಯ್ ಅನ್ನುವನ ಹೆಸರನ್ನ ಅವರ ಟ್ರೇಡ್ ಮಾರ್ಕ್ ರೀತಿಯಲ್ಲಿ ರಾಜಾssssss ಅಂತ ಫುಲ್ ಎಳೆದು, ಒಮ್ಮೆಲೆ ಬ್ರೇಕ್ ಹಾಕಿ, ಫಾಸ್ಟ್ ಆಗಿ, ರಾಮ್ಮೋಹನ್ ಅಂತ ಎಲ್ಲಾ ಕೂಡಿಸಿ ರಾಯ್ ಸೇರಿಸಿ ರಾಜಾsssssssssssss ರಾಮ್ಮೋಹನ್ ರಾಯ್ ಅಂತ ಅಂದು ಬಿಡ್ತಿದ್ದರು. ಎಲ್ಲರದಲ್ಲೂ ಏನೇನನ್ನೋ ಕಂಡು ಎಲ್ಲದಕ್ಕೂ ನಗುವ ನಮ್ಮ ಹಾಪರ ಗ್ಯಾಂಗಿಗೆ ಅದೊಂದು ದೊಡ್ಡ ಮನರಂಜನೆ. ರಕ್ಕಸ ರಂಜನೆ.

ರಾಜಾsssssssssssss ರಾಮ್ಮೋಹನ್ ರಾಯ್!!!! ಅಂತ ಸರ್ ಅಂದೇ ಬಿಟ್ಟರು.

ಹೋಗ್ಗೋ!!!!

ನಾನು, ಭಟ್ಟಾ, ಅರವ್ಯಾ, ಬಾಜೂಕಿನ ಜಯ-ವಿಜಯರಾದ ಕಟೀರಾ, ಮುದಗಲ್ಲಾ, ಆ ಕಡೆಯಿಂದ ಜಗದೀಶ ಪಾಟೀಲಾ, ಮತ್ತೂ ಆ ಕಡೆಯಿಂದ ಖತರ್ನಾಕ್ ದ್ರೌಪದಿ ಸೀರಿ ಜೋಕಿನ ಕರ್ಜಗಿ, ಸುಮಾರು ಮುಂದೇ ಕೂತಿದ್ದ ಗಲಗಲಿ ಎಲ್ಲರೂ ನಗಲು ಶುರು ಮಾಡಿ, ಬಾಕಿ ಸುಮಾರು ಜನರೂ ನಗಲು ಶುರು ಮಾಡಿದ್ದಕ್ಕೆ ಸರ್ ಒಂದು ಕ್ಷಣ ದಂಗಾದರು. 10th A class ಅಂದ್ರೆ ಹಾಂಗೆ. very unpredictable.

ಟಂಕಸಾಲಿ ಸರ್ ಸಣ್ಣ ಪುಟ್ಟದ್ದಕ್ಕೆಲ್ಲ ತಲಿ ಬಿಸಿ ಮಾಡಿಕೊಳ್ಳುತ್ತಲೇ ಇರಲಿಲ್ಲ. ಮತ್ತ ಅದೇ ಹೊತ್ತಿಗೆ ಪಿರಿಯಡ್ ಸಹ ಮುಗೀತು ಅಂತ ಘಂಟಿ ಸಹಿತ ಹೊಡಿತು. ಟಂಕಸಾಲಿ ಸರ್ ಸಹಿತ, ಮಂಗ್ಯಾನಿಕೆ ಹುಡುಗುರು, ಅಂತ ಹೇಳಿ ಎದ್ದು ಹೋದರು.

ನಾವು ಮಾತ್ರ ಹತ್ತನೆ ಕ್ಲಾಸ್ ಮುಗಿಯೋ ತನಕಾ ಆ ದ್ರೌಪದಿ ಸೀರಿ ತರಹದ ಕ್ರಿಕೆಟ್ ಕಿಟ್ಟು, 'ಸಾಮಾನು' ಹಿಡಕೊಂಡು ನಿಂತಿದ್ದ ಕಟ್ಟಿ ಸರ್, ಕಿಟ್ ಬಿಚ್ಚಿ ಒಳಗಿದ್ದಿದ್ದನ್ನ ಮುಟ್ಟಿ ಮುಟ್ಟಿ ನೋಡುತ್ತಿದ್ದ ಟಂಕಸಾಲಿ ಸರ್, ಅವರನ್ನ ನಾವು ಹೋಗಿ ಕಾಡಿ ಕಾಡಿ ಕರಕೊಂಡು ಬಂದಿದ್ದು, ನಂತರದ ರಾಜಾsssssssssssss ರಾಮ್ಮೋಹನ್ ರಾಯ್ ಅಂದಿದ್ದು, ಇತ್ಯಾದಿಗಳ ಮೇಲೆ ನಕ್ಕಿದ್ದೆ ನಕ್ಕಿದ್ದು.

ಹೆಂಗಸೂರು ಮಾತ್ರ ಯಾಕ ಚಹಾ ಎಲಿ ಹರಿತಾರ್ರೀ?: ಪ್ರತಿ ವರ್ಷ ನವೆಂಬರ್ ಡಿಸೆಂಬರ್  ತಿಂಗಳಲ್ಲಿ BEd ಮಾಡುತ್ತಿದ್ದ ಸ್ಟೂಡೆಂಟ್ಸ್ ಪಾಠ ಮಾಡೋದನ್ನ ಪ್ರಾಕ್ಟೀಸ್ ಮಾಡಲು ಸಾಲಿಗೆ ಬರ್ತಿದ್ದರು. ಎರಡು ತಿಂಗಳು ಅವರದ್ದೇ ಪಾಠ. ರೆಗ್ಯುಲರ್ ಮಾಸ್ತರ್ ಮಂದಿ ಕೂತು ಅವರ performance ನೋಡಿ ಅವರಿಗೆ ಮಾರ್ಕ್ಸ್ ಹಾಕಿದರ ಆತು.

9th ಸ್ಟ್ಯಾಂಡರ್ಡ್. ೧೯೮೬. ಆವಾಗ ಟಂಕಸಾಲಿ ಸರ್ ನಮಗ ಕಲಸ್ತಿದ್ದಿಲ್ಲ. ಆದ್ರ ನಮಗ ಕಲಿಸಲು ಬಂದಿದ್ದ ಇಬ್ಬರು BEd ಟ್ರೈನಿ ಟೀಚರಗಳನ್ನು ನೋಡಿ, ಮಾರ್ಕ್ಸ್ ಹಾಕೋ ಕೆಲಸ ಅವರದ್ದೇ ಆಗಿತ್ತು. ಅದಕ್ಕೇ ಬಂದು ಕೂಡ್ತಿದ್ದರು.

ಆವಾಗ ಬಂದ ಇಬ್ಬರು BEd ಟ್ರೈನಿ ಮಾಸ್ತರಣಿಯರಲ್ಲಿ ಒಬ್ಬರನ್ನ ಮರೆಯೋ ಹಾಗೇ ಇಲ್ಲ. ಅವರೇ ಹಿರೇಮಠ ಟೀಚರ್. ಒಂದು ಟೈಪ್ ಭಾಳ ಛಂದ ಇದ್ದರು. ಎತ್ತರಕ್ಕ, ಟುಮ್ ಟುಮ್ ಆಗಿ, ಮಸ್ತಾಗಿ ಬಾಬ್ ಕಟ್ ಮಾಡಿಸಿಕೊಂಡು, ಛಂದ ಛಂದ ಸೀರಿ ಉಟಕೊಂಡು, ಸ್ವಲ್ಪ ಜಾಸ್ತಿಯೇ ಅನ್ನಿಸುವಷ್ಟು ಶೃಂಗಾರ ಮಾಡಿಕೊಂಡು ಬಂದು ಎಲ್ಲರ ಕಣ್ಣು ತಂಪು ಮಾಡ್ತಿದ್ದರು. ಛಂದ ಇದ್ದ ಮ್ಯಾಲೆ ಕ್ಲಾಸ್ ಹ್ಯಾಂಗ ತೊಗೊಂಡ್ರೂ ಓಕೆ. ಹಾಂಗಾಗಿ ಅವರು ಕ್ಲಾಸ್ ತೊಗೊಳ್ಳೋವಾಗ ಅವರಿಗೆ ಏನೂ ಜಾಸ್ತಿ ಗೋಳು ಹೊಯ್ಕೊತ್ತಿದ್ದಿಲ್ಲ. ಬಾಬ್ ಕಟ್ ಮಾಡಿಸಿದ ಕೂದಲಾ ಆ ಕಡೆ ಈ ಕಡೆ ಹಾರಿಸ್ಕೋತ್ತ, ನಡು ನಡು ಹೀ!! ಹೀ!! ಅಂತ ಛಂದ ನಕ್ಕೋತ್ತ, ಜಿಯಾಗ್ರಫಿ ಪಾಠ ಮಾಡ್ತಿದ್ದ ಹಿರೇಮಠ ಮೇಡಂ ನೋಡೋದೇ ಒಂದು ಛಂದ. 'ಮೈ ಹೂ ನಾ' ಅನ್ನೋ ಸಿನೆಮಾ ಒಳಗ ಸುಶ್ಮಿತಾ ಸೇನ್ ಒಬ್ಬಾಕಿ ಟೀಚರ್ ಪಾತ್ರ ಮಾಡ್ಯಾಳ ನೋಡ್ರೀ, ಥೇಟ್ ಹಾಂಗೆ ನಮಗ ಆವಾಗ ಹಿರೇಮಠ ಮೇಡಂ ಅಂದ್ರ.

ಇನ್ನೊಬ್ಬ ಟ್ರೈನಿ ಟೀಚರ್ ಹಿರೇಮಠ ಟೀಚರ್ ಅವರಿಗೆ ಫುಲ್ ಉಲ್ಟಾ. ಹಿರೇಮಠ ಟೀಚರ್ ಎಷ್ಟು gregarious ಇದ್ದರೋ ಅದರ ಉಲ್ಟಾ ಇದ್ದರು ಇನ್ನೊಬ್ಬರು ಟೀಚರ್. ಪಾಪ! ಸಿಂಪಲ್ ಅಂದ್ರ ಸಿಂಪಲ್. ಮತ್ತ ಭಾಳ ಮೃದು ಅಂದ್ರ ಮೃದು. ಘಟ್ಟೆಯಾಗಿ ಮಾತು ಸಹಿತ ಆಡ್ತಿದ್ದಿಲ್ಲ. ಅಂತವರು ಕೆಟ್ಟ ಕೆಟ್ಟ ಉಡಾಳರು ತುಂಬಿದ್ದ 9th A ಕ್ಲಾಸ್ ಒಳಗ ಅವರ BEd ಕ್ಲಾಸ್ ತೊಗೋಬೇಕು. ಅವರು ಹೇಳಿದ್ದಕ್ಕೊಮ್ಮೆ ನಗುವ ಮಂಗ್ಯಾನಿಕೆಗಳು. ಇಲ್ಲದ ಸಲ್ಲದ ಪ್ರಶ್ನೆ ಕೇಳಿ ಕಾಡೋ ಹುಚ್ಚರು. ಒಮ್ಮೊಮ್ಮೆ ಹಿರೇಮಠ ಮೇಡಂ ಅರ್ಧಾ ಕ್ಲಾಸ್ ತೊಗೊಂಡ್ರ ಉಳಿದ ಅರ್ಧಾ ಕ್ಲಾಸ್ ಈ ಇನ್ನೊಬ್ಬರು ಮೇಡಂ ತೊಗೊತ್ತಿದ್ದರು. ಚಂದನೆ ಹಿರೇಮಠ ಮೇಡಂ ಅವರನ್ನು ಬಾಯಿ ಮತ್ತೊಂದು ಎಲ್ಲ ಬಿಟ್ಟು ನೋಡಿಕೋತ್ತ ಕೂಡುತ್ತಿದ್ದ ನಾವು ಅವರ ಟೈಮ್ ಒಳಗ ಹಾಕದ ಗದ್ದಲಾ ಎಲ್ಲ ಕೂಡಿಸಿ ಇನ್ನೊಬ್ಬ ಬಡಪಾಯಿ ಟೀಚರ್ ಪಿರಿಯಡ್ ಒಳಗ ಡಬಲ್ ಗದ್ದಲಾ ಹಾಕಿ ಅವರ ಜೀವಾ ತಿಂದು ಬಿಡ್ತಿದ್ದಿವಿ. ಆ BEd ಟ್ರೈನಿ ಟೀಚರ್ ಕ್ಲಾಸ್ ಒಳಗ ಕೊನೇಗೆ ಯಾವಾಗಲೂ ಪ್ರಶ್ನೆ ಉತ್ತರ ಅಂತ ಒಂದು ಭಾಗ ಇದ್ದೇ ಇರ್ತಿತ್ತು. ಏನೇನೋ ಪ್ರಶ್ನೆ ಕೇಳಿ ತಲಿ ತಿನ್ನೋದು. ಒಮ್ಮೊಮ್ಮೆ ಅದು ಯಾವ ಮಟ್ಟಕ್ಕ ಹೋಗ್ತಿತ್ತು ಅಂದ್ರ, ತಮ್ಮ ಕ್ಲಾಸ್ ಅಲ್ಲದೇ ಇದ್ದರೂ ಹಿರೇಮಠ ಮೇಡಂ ಅವರೇ ಎದ್ದು ನಿಂತು, ಚಂದಾಗಿ ನಕ್ಕು, ಎಲ್ಲರನ್ನೂ ಒಂದು ತರಹಾ hypnotize ಮಾಡಿ, ನಮ್ಮನ್ನೆಲ್ಲಾ ಅಷ್ಟರ ಮಟ್ಟಿಗೆ ಹಾಪ್ ಮಾಡಿ, ಏನೋ ಒಂದು ಉತ್ತರಾ ಕೊಟ್ಟು, ಅವರ ಗೆಳತಿಯನ್ನ ಬಚಾವ ಮಾಡ್ತಿದ್ದರು. ಹಿರೇಮಠ ಮೇಡಂಗೆ ಒಂದು ತರಹ indirect ಲೈನ್ ಹೊಡೆಯುತ್ತಿದ್ದ ಕಿಡಿಗೇಡಿಗಳೆಲ್ಲ, ಹಿರೇಮಠ ಹೇಳ್ಯಾಳ, ಸುಮ್ಮ ಕೂಡ್ರೀಲೆ, ಅಂತ ಏನೋ ಒಂದು ತರಹದ ಮಾಂಡವಳಿ ಮಾಡಿ ಸುಮ್ಮನಿರ್ತಿದ್ದರು. BEd ಟ್ರೈನಿ ಟೀಚರಗಳ ಕ್ಲಾಸ್ ನೋಡಿ, ಮಾರ್ಕ್ಸ್ ಕೊಟ್ಟು ಹೋಗಲು ಬಂದು ಕೂತಿರುತ್ತಿದ್ದ ಟಂಕಸಾಲಿ ಸರ್ ಇದ್ಯಾವದರ ಮಧ್ಯೆ ಬರದೆ, ಏನರೆ ಮಾಡಿಕೊಂಡು ಹಾಳಾಗಿ ಹೋಗ್ರೀ, ಅಂತ ನಮ್ಮ ಪಾಲಿಗೆ ನಮ್ಮನ್ನ ಬಿಟ್ಟು, ಏನೋ ಓದಿಕೋತ್ತ ಇದ್ದು ಬಿಡ್ತಿದ್ದರು.

ನಮ್ಮ ಕಾಲದ ಒಂಬತ್ತನೆ ಕ್ಲಾಸಿನ ಭೂಗೋಲ ಓದಿದ್ದು ಯಾರಿಗಾದರೂ ನೆನಪಿದ್ದರೆ ಅದರಲ್ಲಿ ಚಹಾ ಮತ್ತು ಕಾಫಿ ಬೆಳೆಯ ಬಗ್ಗೆ
ಒಂದೋ ಎರಡೋ ಚಾಪ್ಟರ್ ಇತ್ತು. ಅರೇಬಿಕಾ, ರೋಬುಸ್ಟಾ ಎಂಬ ಕಾಫಿ ಬೀಜಗಳು ಅದು ಇದು ಅಂತ. ಚಹಾ ಬೆಳೆ ಬಗ್ಗೆ ಹೆಚ್ಚಿನ ಮಾಹಿತಿ. ಯಾಕಂದ್ರ ಭಾರತ ಅತಿ ಹೆಚ್ಚು ಚಹಾ ಬೆಳೆಯುವ ದೇಶ.

ಆ ಚಹಾ ಮ್ಯಾಲಿನ ಚಾಪ್ಟರ್ ಒಳಗ ಒಂದು ವಾಕ್ಯ ಅತಿ ಸಹಜ ಅನ್ನೋ ಹಾಂಗ ಬಂದು ಬಿಟ್ಟಿತ್ತು. ಅದು ಹ್ಯಾಂಗ ಇತ್ತು ಅಂದ್ರ....Tea leaves are almost exclusively picked by women. Hence, tea gardens employ a large number of women......ಸುಮಾರು ಹೀಂಗ ಇತ್ತು. ಸ್ವಲ್ಪ ಹೆಚ್ಚು ಕಮ್ಮಿ ಇತ್ತು. ಅರ್ಥ ಅದೇ.

ಆ ಇನ್ನೊಬ್ಬರು ಟ್ರೈನಿ ಟೀಚರ್ ಅವತ್ತು ಆ ಚಹಾದ ಮೇಲಿನ ಚಾಪ್ಟರ್ ಕವರ್ ಮಾಡಿ ಮುಗಿಸಿದ್ದರು. ಈಗ ಅಂತ್ಯದ ಹದಿನೈದು ಮಿನಿಟ್ ಪ್ರಶ್ನೆ ಉತ್ತರ. ಕಿಡಿಗೇಡಿ ಪ್ರಶ್ನೆ ಕೇಳಲಿಕ್ಕೆ 9th A ಕ್ಲಾಸಿನ ಕಿಡಿಗೇಡಿಗಳು ಯಾವಾಗಲೂ ತಯಾರ. ಅದೂ ಕೆಟ್ಟ ಬೋರ್ ಬರೊ ಹಾಂಗ ಪಾಠ ಹೇಳಿ ಮುಗಿಸ್ಯಾರ. ಇವರಿಗೆ ಮಾಡಲಿಕ್ಕೇ ಬೇಕು ಅಂತ ಹೇಳಿ ಒಂದಿಷ್ಟು ಮಂದಿ ಜನರಲ್ ಕರಿಯಪ್ಪಗಳು ತಯಾರಾದರು. ಜನರಲ್ ನಾಲೆಜ್ ಉಪಯೋಗಿಸಿ ಏನೇನೋ ಪ್ರಶ್ನೆ ಕೇಳವರಿಗೆ ಜನರಲ್ ಕರಿಯಪ್ಪಾ ಅಂತ ಹೆಸರು.

Any questions? ಅಂತ ಪಾಠ ಮಾಡಿ ಹೈರಾಣ ಆಗಿದ್ದ ಆ ಟ್ರೈನಿ ಟೀಚರ್ ಕೇಳಿದರು.

ನಮ್ಮ underground network ಒಳಗ ಆಗಲೇ ಸಂದೇಶಗಳು ಹರಿದಾಡಿ, ಯಾವ 'ಸಿಗಿಸೋ' ಪ್ರಶ್ನೆ ಕೇಳಬೇಕು ಅಂತ ಡಿಸೈಡ್ ಮಾಡಿ ಆಗಿತ್ತು. ಮುಂದೆ ಆಗೋದನ್ನು ಊಹಿಸಿಕೊಂಡು ನಗಲಿಕ್ಕೆ ರೆಡಿ ಆಗಿ ಕೂತಿದ್ದಿವಿ. ನಮ್ಮ ಮುಂದೆ, ಹುಡುಗಿಯರ ಸೆಕ್ಷನ್ ಒಳಗ, ಲಾಸ್ಟ್ ಬೆಂಚಿನಲ್ಲಿ ಕೂತಿದ್ದ ಸುಶ್ಮಿತಾ ಸೇನ್ ಮಾದರಿಯ ಹಿರೇಮಠ ಟೀಚರ್ ಹಿಂದ ತಿರುಗಿ, ತಮ್ಮ usual ಬ್ಯೂಟಿಫುಲ್ ಸ್ಮೈಲ್ ಕೊಟ್ಟು, what are you going to ask yaar? tell no? ಅಂದಿದ್ದರು. ಏನು ಪ್ರಶ್ನೆ ಕೇಳಬಹುದು ಅಂತ ಅವರಿಗೆ ಕೆಟ್ಟ ಕುತೂಹಲ ಒಂದು ಕಡೆ. ತಮ್ಮ ಗೆಳತಿಗೆ ಏನು ಕೇಳಿ ಕಾಡವರು ಇದ್ದಾರ ಅಂತ tension ಇನ್ನೊಂದು ಕಡೆ. ನಾವು ಏನೂ ಹೇಳಲಿಲ್ಲ. Wait & Watch ಅಂತ ಲುಕ್ ಕೊಟ್ಟು ಸುಮ್ಮನಾದ್ವಿ. ಆಗೆ ಆಗೆ ದೇಖೋ ಹೋತಾ ಹೈ ಕ್ಯಾ!

ಟೀಚರ್! ಅಂತ ಒಬ್ಬವ ಕೈ ಎತ್ತಿದಾ. ನಮ್ಮಿಂದಲೇ ತಯಾರಾದ ಒಬ್ಬ ಮುಂದೆ ಕೂತ ಕಿಡಿಗೇಡಿ. ರಾಜಗೋಪಾಲ ಗಲಗಲಿ ಅಂತ ನೆನಪು.

Yes. What is your question? ಅಂತ ಗಡ ಗಡ ನಡಗಿಕೋತ್ತ ಆ ಟ್ರೈನಿ ಟೀಚರ್ ಕೇಳಿದರು.

ಟೀಚರ್! ಚಹಾ ಎಲಿ ಹೆಂಗಸೂರು ಮಾತ್ರ ಯಾಕ ಹರಿತಾರ್ರೀ? ಗಂಡಸೂರು ಯಾಕ ಕೀಳಂಗಿಲ್ಲರಿ? ಗಂಡಸೂರು ಚಹಾ ಎಲಿ ಹರದ್ರ ಏನಾಗ್ತದ್ರೀ? ಅಂತ ಒಂದು ಭಯಂಕರ ಪ್ರಶ್ನೆ ಕೇಳಿದ ಜನರಲ್ ಕರಿಯಪ್ಪ ನಮ್ಮ ಕಡೆ ನೋಡಿ, ಹ್ಯಾಂಗ ಕೇಳಿದೆ? ಅಂತ ಕಣ್ಣು ಹೊಡೆದು ಕೂತಾ.

Tea leaves are  almost exclusively picked by women. Hence, tea gardens employ a large number of women ಅಂತ ಏನು ಹೇಳಿದ್ದರು ನೋಡ್ರೀ, ಅದಕ್ಕ ಇವನ ಪ್ರಶ್ನೆ ಅದು!!!!! ನಮ್ಮ ಕ್ಲಾಸಿನ ಜನರಲ್ ಕರಿಯಪ್ಪಗಳು ಪ್ರಶ್ನೆ ಕೇಳಿದರು ಅಂದ್ರ ಎಂತಾ ಜನರಲ್ ನಾಲೆಜ್ ಇದ್ದವರೂ ಸಹಿತ ತಲಿ ಕರಾ ಪರಾ ಅಂತ ಕೆರಕೊಂಡು ಹೋಗಬೇಕು. ಅಂತಾ ಪ್ರಶ್ನೆ ಕೇಳ್ತಿದ್ದರು.

ಈ ಪ್ರಶ್ನೆ ಕೇಳಿ ಆ ಟ್ರೈನಿ ಟೀಚರ್ ಫುಲ್ ಅಂದ್ರ ಫುಲ್ ಥಂಡಾ ಹೊಡೆದರು. ಇಲ್ಲಿ ತನಕಾ absent minded ಆಗಿ ಕೂತಿದ್ದ ಟಂಕಸಾಲಿ ಸರ್ ಸಹಿತ ಈ ಪ್ರಶ್ನೆಯಿಂದ ಫುಲ್ ಹಾಪ್ ಆಗಿ, ಏನಿರಬಹುದು ? ಅಂತ ತಲಿ ಕೆಡಿಸಿಕೊಂಡರು. ಟಂಕಸಾಲಿ ಸರ್ ಆಜನ್ಮ ಬ್ರಹ್ಮಚಾರಿ. ಅಂತವರು ಸಹಿತ, ಚಹಾ ತೋಟದಲ್ಲಿ ಹೆಂಗಸೂರು ಮಾತ್ರ ಯಾಕ ಚಹಾ ಎಲಿ ಹರಿತಾರ, ಗಂಡಸೂರು ಯಾಕ ಹರಿಯಂಗಿಲ್ಲ? ಅನ್ನೋದರ ಬಗ್ಗೆ ತಲಿ ಕೆಡಿಸಿಕೊಂಡು ಬಿಟ್ಟಿದ್ದರು ಅಂತ ಕಾಣಸ್ತದ. ಅಥವಾ ನಾವು ಕಿಡಿಗೇಡಿಗಳು ಹಾಂಗ ತಿಳಕೊಂಡಿವಿ. ಹಿರೇಮಠ ಟೀಚರ್ ಮಾತ್ರ ವಾಪಸ್ ತಿರುಗಿ, ನಮ್ಮ ಬೆಂಚಿನ ಕಡೆ ನೋಡಿ, ಚಂದಾಗಿ ಸ್ಮೈಲ್ ಕೊಟ್ಟು, what stupid question yaar? ಅಂತ ಹೇಳಿ ಮತ್ತ ಕಿಸಿ ಕಿಸಿ ನಕ್ಕು, ಸುಶ್ಮಿತಾ ಸೇನ್ ಫೀಲಿಂಗ್ ಕೊಟ್ಟು, ತಮ್ಮ ಗೆಳತಿ ಏನು ಉತ್ತರಾ ಕೊಟ್ಟಾಳು ಅಂತ ಕುತೂಹಲದಿಂದ ಮುಂದ ನೋಡಿಕೋತ್ತ ಕೂತಳು.

ಲೇ! ಅಕಿ 'ಎಕಿನೋಡರ್ಮಾಟಾ' ಹಿರೇಮಠ ನಿನಗs ಲೈನ್ ಹೊಡಿತಾಳ ನೋಡಲೇ, ಅಂತ ಲಾಸ್ಟ್ ಬೆಂಚಿನಲ್ಲಿ ಕೂತಿದ್ದ ಸುಂದರ ಹುಡುಗನೊಬ್ಬನಿಗೆ ಹಿರೇಮಠ ಟೀಚರ್ ಅವರಿಗೆ ಕೇಳದ ಹಾಗೆ ಕಾಡಿಸಿದ್ದು ಆಯಿತು. ಎಕಿನೋಡರ್ಮಾಟಾ ಅದು ನಾವು ಹಿರೇಮಠ ಟೀಚರ್ ಗೆ ಇಟ್ಟಿದ್ದ ಹೆಸರು. (Echinodermata ಅನ್ನುವ zoology ಪದಕ್ಕೆ 'ಅಕಿನ್ನ ನೋಡೋ ಹಿರೇಮಠಾ' ಅಂತ ಜೋಕ್ ಇತ್ತು. ಹಾಂಗಾಗಿ ಹಿರೇಮಠ ಮೇಡಂ ಅವರಿಗೆ ಎಕಿನೋಡರ್ಮಾಟಾ ಅಂತ ಹೆಸರು)

ಹೆಂಗಸೂರು ಮಾತ್ರ ಯಾಕ ಚಹಾ ಎಲಿ ಹರಿತಾರ? ಗಂಡಸೂರು ಯಾಕ ಹರಿಯಂಗಿಲ್ಲ? ಹರದ್ರ ಏನಾಗ್ತದ್ರೀ? ಅಂತ ಕೇಳಿದ ಪ್ರಶ್ನೆಗೆ ಉತ್ತರ ಬಂದಿರಲಿಲ್ಲ. ಪಾಪ ಅಕಿ ಬಡಪಾಯಿ ಟ್ರೈನಿ ಟೀಚರ್ ಏನು ಹೇಳಲಿ ಅಂತ ತಡಬಡಿಸಲಿಕತ್ತಿದ್ದಳು. ಏನು ಹೇಳಿಯಾಳು ಅಕಿ? ಯಾರಿಗೆ ಗೊತ್ತದ ಉತ್ತರಾ?

You know...you know....ಅಂತ ಎರಡು ಸಾರೆ ಗಂಟಲು ಕ್ಲಿಯರ್ ಮಾಡಿಕೊಂಡಳು. ಉತ್ತರ ಬರಲಿಲ್ಲ.

We don't know teacher, ಅಂತ ಕೋರಸ್ ಉತ್ತರ ಬಂತು. ಹುಚ್ಚರ ನಗಿ ಅದರ ಮ್ಯಾಲೆ. ಹೋಗ್ಗೋ!

You all boys are very naughty, yaar! ಅಂತ ಹಿರೇಮಠ ಟೀಚರ್ ತಿರುಗಿ, ನಮ್ಮ ಕಡೆ ನೋಡಿ, ಚಂದಾಗಿ ನಕ್ಕು ಹೇಳಿದಳು.

ಎಷ್ಟು ಚಂದ ಇದ್ದಾಳ ಮಾರಾಯ ಇಕಿ ಹಿರೇಮಠ. ಇಕಿ BEd ಲಗೂ ಮುಗಿದು, ಮುಂದಿನ ವರ್ಷ ನಮ್ಮ ಸಾಲಿಯೊಳಗೇ ಇಕಿಗೆ ನೌಕರಿ ಹತ್ತಿ, ನಮಗ ಹತ್ತನೇತ್ತಾ ಜಾಗ್ರಫೀ ಇವರೇ ಕಲಿಸೋ ಹಾಂಗ ಆಗ್ಲೀಪಾ ಅಂತ ಸುಮಾರು ಮಂದಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದರ ಆಶ್ಚರ್ಯ ಇಲ್ಲ.

ಟ್ರೈನಿ ಟೀಚರ್ ಮತ್ತೂ ಘಾಬರಿ ಆದರು. ಚಾಕ್ ಪೀಸ್ ತುಂಡು ತುಂಡು ಮಾಡಿದರು. ಹುಡುಗರು ಮತ್ತ ನಕ್ಕರು. ಅವರಿಗೆ ಮತ್ತೂ tension ಆತು.

I think....I think....only ladies pick tea leaves because.....I think....I think....you know....ladies' hands are very soft....you know....you know....soft hands, tea leaves, no damage to leaves .......ಅಂತ ಏನೋ ಹೇಳಿ ಬಿಟ್ಟರು. ಪಾಪ! ಪೂರ್ತಿ ಕೇಳಲಿಕ್ಕೆ ಆಗಲೇ ಇಲ್ಲ. ಅವರು ladies, soft hands, ಅಂದಿದ್ದೇ ತಡಾ ಎಲ್ಲಾರೂ ಹುಯ್ಯ ಅಂತ ನಕ್ಕಿದ್ದೇ ನಕ್ಕಿದ್ದು. ಪಾಪ ಟ್ರೈನಿ ಟೀಚರ್ ಅವರಿಗೆ ಕೆಟ್ಟ ಅಪಮಾನ ಆದ ಫೀಲಿಂಗ್ ಬಂದು, ಕ್ಲಾಸ್ ಬಿಟ್ಟು ಓಡಿ ಹೋಗಿಯೇ ಬಿಡ್ತಿದ್ದರೋ ಏನೋ, ಅಷ್ಟರಾಗ ಪಿರಿಯಡ್ ಮುಗಿದ ಘಂಟಿ ಸಹಿತ ಹೊಡೆದು, ಅವರು ಕ್ಲಾಸ್ ಬಿಟ್ಟು ಓಡಿ ಹೋಗೇ ಬಿಟ್ಟರು. ಮುಂದೆ ಅವರು ಮತ್ತ ನಮ್ಮ ಕ್ಲಾಸ್ ತೊಗೊಳ್ಳಿಕ್ಕೆ ಬಂದಿದ್ದರಾ? ನೆನಪಿಲ್ಲ.

ladies, soft hands, ಅದು ಇದು ಅಂತ ಕೇಳಿ ನಗುತ್ತಿದ್ದ ನಮ್ಮಲ್ಲಿ ಕೆಲವರು ಹಿರೇಮಠ ಮೇಡಂ ಕಡೆ ನೋಡುತ್ತಿದ್ದರೆ ಕೆಲವರು ಟಂಕಸಾಲಿ ಸರ್  ಕಡೆ ನೋಡಿದಿವಿ.

ಹಿರೇಮಠ ಮೇಡಂ ಫುಲ್ ಕೆಂಪಾಗಿ ಮತ್ತ ಮತ್ತ ಲಾಸ್ಟ್ ಬೆಂಚ್ ಹುಡುಗರ ಕಡೆ ನೋಡಿದರು.

ಇಕಿ ಹಿರೇಮಠ ಯಾಕ ಇಷ್ಟು ಕೆಂಪ ಆದಳೋ ಮಾರಾಯಾ? ಏ ಇವನಾ (ಹೆಸರು ಬೇಡ), ನಿನ್ನೇ ನೋಡಾಕತ್ತಾಳೇ ಅಕಿ. ಲಕ್ಕಿ ಸೂಳಿಮಗನ, ಅಂತ ಹಿರೇಮಠ ಮೇಡಂ ಅವರ ಆಶಿಕ಼್ ಅಂತ designate ಆಗಿದ್ದ ದರವೇಶಿಯೊಬ್ಬನನ್ನ ಎಲ್ಲರೂ ಕಾಡಿಸಿದರು.

ಮತ್ತೆ ಕೆಲವರು ಟಂಕಸಾಲಿ ಸರ್ ಕಡೆ ನೋಡಿದರು. ಅವರೂ ಸಹಿತ ನಕ್ಕೋತ್ತ ಎದ್ದು ಹೊಂಟಿದ್ದರು.

ಟಿಂಕೂ ಸಹಿತ ನಕ್ಕೋತ್ತ ಹೊಂಟಾನೋ!!!! ಯಪ್ಪಾ!!! ಕಾಲಾ ಕೆಟ್ಟತಲೇ!!! ಅಂತ ವಿಕಾರವಾಗಿ ಕೂಗಿದ ಒಬ್ಬ. ಸಾಲಿ ಗದ್ದಲದಾಗ ಎಲ್ಲದೂ ಓಕೆ.

ತೀರಿಹೋದ ಟಂಕಸಾಲಿ ಸರ್ ಅವರಿಗೇ ಆಗಲಿ ಅಥವಾ ನನ್ನ ಮಿತ್ರರಿಗೇ ಆಗಲಿ ಇದು ನೆನಪ ಅದನೋ ಇಲ್ಲೋ ಗೊತ್ತಿಲ್ಲ. ನನಗ ಅಂತೂ ಈ ಘಟನೆ, ಆ 'ಮೈ ಹೂ ನಾ' ಸುಶ್ಮಿತಾ ಸೇನ್ ಮಾದರಿಯ ಸುಂದರಿ ಹಿರೇಮಠ ಟೀಚರ್, ಸ್ತ್ರೀಯರ ಹಸ್ತಗಳು ಮೃದು ಇರುತ್ತವೆ, ಹಾಗಾಗಿಯೇ ಅವರು ಮಾತ್ರ ಚಹಾ ಎಲೆಗಳನ್ನು ಕೀಳುತ್ತಾರೆ ಅಂತ ಅಂದು ಉತ್ತರ ಕೊಟ್ಟ BEd ಟ್ರೈನಿ ಟೀಚರ್ ಎಲ್ಲ ಯಾವಾಗಲೂ ನೆನಪು ಆಗುತ್ತಲೇ ಇರುತ್ತಾರೆ. ಟಂಕಸಾಲಿ ಸರ್ ಸ್ವರ್ಗದಾಗ ಕೂತು ಇದನ್ನ ನೆನಸಿಕೊಂಡು ಮತ್ತೊಮ್ಮೆ ಎಲ್ಲಾ ಬಿಚ್ಚಿ ನಕ್ಕು ಬಿಡಲಿ. ಸಾಲಿಯೊಳಗ ಸರಿಯಾಗಿ ನಕ್ಕಿದ್ದರೋ ಇಲ್ಲೋ ಗೊತ್ತಿಲ್ಲ.

ನಮ್ಮ ಮುತ್ತಜ್ಜಿ ಕೈತುತ್ತು ತಿಂದಿದ್ದ 'ಟಂಕಶಾಲೆ ಹನುಮ': ನಮ್ಮ ಮುತ್ತಜ್ಜಿ (ನಮ್ಮ ತಾಯಿಯವರ ತಾಯಿಯ ತಾಯಿ) ೧೯೪೦ ನೆ ಇಸವಿ ಆಸು ಪಾಸಿನಲ್ಲೇ ಧಾರವಾಡಕ್ಕೆ ಬಂದಿದ್ದರು. ಸಿರ್ಸಿ ಬಿಟ್ಟು ಬಂದು ಬಿಟ್ಟಿದ್ದರು. ನಮ್ಮ ಮುತ್ತಜ್ಜ ಪ್ರಕಾಂಡ ಪಂಡಿತ ಕೃಷ್ಣ ಶಾಸ್ತ್ರಿ ತೀರಿ ಹೋಗಿ, ನಲವತ್ತು ವರ್ಷದ ಆಸು ಪಾಸಿನಲ್ಲೇ ನಮ್ಮ ಮುತ್ತಜ್ಜಿ ವಿಧವೆಯಾಗಿ ಬಿಟ್ಟರು. ಜೊತೆಗೆ ಒಂದು ಬಗಲಕೂಸು ಗಂಡು ಹುಡುಗ. ಇನ್ನೊಂದು ಹನ್ನೆರೆಡು ಹದಿಮೂರು ವರ್ಷದ ಹುಡುಗಿ. ದೊಡ್ಡ ಮಗಳು (ನಮ್ಮ ಅಜ್ಜಿ) ಮದುವೆ ಆಗಿ ಅಲ್ಲೆ ಸಿರ್ಸಿ ಕಡೆ ಇದ್ದರು. ಮುತ್ತಜ್ಜಿಗೆ ಸಿರ್ಸಿ ಕಡೆ ಆಸ್ತಿ ಪಾಸ್ತಿ ಇಲ್ಲ. ಗಂಡ ಕೃಷ್ಣ ಶಾಸ್ತ್ರಿಗೆ ಇದ್ದ ಆಸ್ತಿ ಅಂದ್ರೆ ಅವರ ಪಾಂಡಿತ್ಯ ಅಷ್ಟೇ. ಮೈಸೂರು ಮಹಾರಾಜರ ಆಸ್ಥಾನ ಪಂಡಿತರು, ಅದು ಇದು ಅಂತ ದೊಡ್ಡ ಹೆಸರು ಇತ್ತೇ ವಿನಹ ರೊಕ್ಕಾ ಗಿಕ್ಕಾ ನಾಸ್ತಿ. ಸಿರ್ಸಿ ಕಡೆನೇ ಇದ್ದರೆ, ಬ್ರಾಹ್ಮಣ ವಿಧವೆಯರಿಗೆ ಮಾಡುವ ಕೇಶ ಮುಂಡನ ಮಾಡಿಸಿಕೊಂಡು, ಬ್ರಾಹ್ಮಣ ವಿಧವೆಯರ ನಿಕೃಷ್ಟ ಬಾಳು. ಏನಾದರು ಮಾಡೋಣ ಅಂದ್ರೆ ವಿದ್ಯೆ ಇಲ್ಲ. ಹಣ ಇಲ್ಲ. ಜೊತೆಗೆ ಎರಡು ಚಿಕ್ಕ ಮಕ್ಕಳು ಬೇರೆ. ತನಗೆ ಬಂದ ಗತಿ ಮತ್ತೆ ಯಾರಿಗೂ ಬರುವದು ಬೇಡ ಅಂತ ಹೇಳಿ ನಮ್ಮ ಮುತ್ತಜ್ಜಿ ಅದೇನೋ ಧೈರ್ಯ ಮಾಡಿ ಧಾರವಾಡಕ್ಕೆ ಬಂದು ಬಿಟ್ಟಿದ್ದರು. ಏನರೆ ನೌಕರಿ ಚಾಕರಿ ಮಾಡಿ, ತಮ್ಮ ಮಕ್ಕಳಿಗೆ ಧಾರವಾಡದಲ್ಲಿ ಒಳ್ಳೆ ಶಿಕ್ಷಣ ಕೊಡುವ ಒಳ್ಳೆ ಯೋಚನೆ ಅವರದ್ದು.

ನಮ್ಮ ಮುತ್ತಜ್ಜಿಗೆ ಬರುತ್ತಿದ್ದುದು ಒಳ್ಳೆ ಅಡಿಗೆ ಮಾಡೋ ಕೆಲಸ ಅಷ್ಟೇ. ಹೀಗೆ ಧಾರವಾಡಕ್ಕೆ ಯಾರ ಗುರುತು ಪರಿಚಯ ಇಲ್ಲದೆ ಬಂದು, ಅವರು ಮೊದಲು ಕೆಲ ದಿವಸ ಪಟ್ಟ ಕಷ್ಟ ಅಷ್ಟಿಷ್ಟಲ್ಲ. literally ರಸ್ತೆ ಮೇಲೆ ಇದ್ದ ಹಾಗೆ. ಸ್ವಲ್ಪ ದಿನಗಳ ನಂತರ ಯಾರೋ ಒಬ್ಬ ಮಹನೀಯರು ಕರುಣೆ ತೋರಿಸಿ ತಮ್ಮ ಮನೆಯಲ್ಲಿ ಅಡಿಗೆ ಕೆಲಸಕ್ಕೆ ಇಟ್ಟುಕೊಂಡರು. ಟೆಂಪರರಿ ಆಗಿ ವಸತಿ ಸಹಿತ ಕೊಟ್ಟರು. ಅವರು ಇದೇ ಟಂಕಸಾಲಿ ಮಾಸ್ತರರ ತಂದೆಯವರು. ಟಂಕಸಾಲಿ ಅವರ ಮನೆಯಲ್ಲಿ ಅಡಿಗೆ ಕೆಲಸ ಶುರು ಮಾಡಿ, ಏನೋ ಒಂದು ತರಹದ ಬಾಳು ಕಂಡುಕೊಂಡ ನಮ್ಮ ಮುತ್ತಜ್ಜಿ ಆಮೇಲೆ ಹಿಂದೆ ನೋಡಿದ್ದೇ ಇಲ್ಲ. ಸಿಕ್ಕಾಪಟ್ಟೆ ಒಳ್ಳೆ ಅಡಿಗೆಯವರು, ಒಳ್ಳೆ ಕೆಲಸದವರು ಅಂತ ಹೇಳಿ ಭಾಳ ಫೇಮಸ್ ಆಗಿ, ಮಾಳಮಡ್ಡಿ ಬ್ರಾಹ್ಮಣರಿಗೆ, ಭವಾನಿ ಬಾಯಾರು ಇಲ್ಲ ಅಂದ್ರ ಅಡಿಗೆ ಆಗಂಗೆ ಇಲ್ಲ, ಅನ್ನೋವಷ್ಟು ಫೇಮಸ್ ಆಗಿ ಧಾರವಾಡದಲ್ಲಿ ಒಂದು ನೆಲೆ ಕಂಡುಕೊಂಡರು. ಮಕ್ಕಳು, ಮಮ್ಮಕ್ಕಳು (ನಮ್ಮ ತಾಯಿ ಇತ್ಯಾದಿ), ಮಿಮ್ಮಕ್ಕಳನ್ನ (ನಾವು, ಇತ್ಯಾದಿ) ಪಕ್ಕಾ ಧಾರವಾಡಿಗಳನ್ನಾಗಿ ಬೆಳೆಸಿದರು. ಇದಕ್ಕೆಲ್ಲಾ ಮೊದಲು ಆಸರೆ, ಸಹಾಯ ಕೊಟ್ಟಿದ್ದು ಟಂಕಸಾಲಿ ಸರ್ ಅವರ ಕುಟುಂಬವೇ. ವಿದ್ಯೆ ಕಲಿಸಿದ ಟಂಕಸಾಲಿ ಸರ್ ಅವರಿಗೆ ಹೇಳೋ ಧನ್ಯವಾದ ಒಂದು ಕಡೆ ಆದರೆ ನಮ್ಮ ಕುಟುಂಬಕ್ಕೆ ಧಾರವಾಡದಲ್ಲಿ ಬಾಳು ಕಟ್ಟಿಕೊಳ್ಳಲು ಸಹಕರಿಸಿದ ಇಡೀ ಟಂಕಸಾಲಿ ಕುಟುಂಬಕ್ಕೆ ಹೇಳುವ ಧನ್ಯವಾದವೇ ಇನ್ನೊಂದು. ಒಟ್ಟಿನಲ್ಲಿ ಟಂಕಸಾಲಿಗಳಿಗೆ ಒಂದು ದೊಡ್ಡ ನಮೋ ನಮಃ! ಟಂಕಸಾಲಿ ಸರ್ ಅವರಿಗೆ ಮತ್ತ ಅವರ ಮನಿ ಮಂದಿಗೆ ನಮ್ಮ ಮುತ್ತಜ್ಜಿ ಅಡಿಗಿ ಮಾಡಿ ಹಾಕಿ, ಉಣಿಸಿ, ದೊಡ್ಡ ಮಾಡೋದ್ರಲ್ಲಿ ಒಂದು ಸಣ್ಣ ಪಾಲು ವಹಿಸಿದ್ದರು ಅನ್ನೋದು ನಮಗೆ ಹೆಮ್ಮೆಯ ವಿಷಯ.

ನಮ್ಮ ಅಜ್ಜಿ ( ತಾಯಿಯ ತಾಯಿ) ಏನೂ ಧಾರವಾಡಕ್ಕೆ ಬಂದಿರಲಿಲ್ಲ. ಯಾಕಂದ್ರ ಅವರದ್ದು ಆಗಲೇ ಲಗ್ನಾ ಆಗಿ ಸಿರ್ಸಿ ಕಡೆನೇ ಇದ್ದರು. ಆದರ ಅವರ ತಾಯಿ (ನಮ್ಮ ಮುತ್ತಜ್ಜಿ), ಅವರ ಸಹೋದರ ಸಹೋದರಿಯರು, ಮಕ್ಕಳು (ನಮ್ಮ ತಾಯಿ, ಮಾಮಾ, ಮೌಶಿ, ಇತ್ಯಾದಿ) ಎಲ್ಲ ಧಾರವಾಡದಲ್ಲೇ ಇದ್ದುದರಿಂದ ನಮ್ಮ ಅಜ್ಜಿಗೆ ಧಾರವಾಡ ತವರುಮನೆ.  ಅದಕ್ಕೇ ಆಗಾಗ ಬರ್ತಿದ್ದರು. ಆವಾಗೆಲ್ಲಾ ಟಂಕಸಾಲಿ ಮಾಸ್ತರ್ ಎಲ್ಲ ಸಣ್ಣು ಹುಡುಗುರು. ನಮ್ಮ ಅಜ್ಜಿಯವರಿಗೆಲ್ಲ ಟಂಕಸಾಲಿ ಮಾಸ್ತರ್ ಅಂದ್ರ ಅವರ ಹವ್ಯಕ ಭಾಷೆಯಲ್ಲಿ 'ಟಂಕಶಾಲೆ ಹನುಮ'.

ಆಗಿನ 'ಟಂಕಶಾಲೆ ಹನುಮ' ಈಗ ನಮ್ಮ ಮಾಸ್ತರು ಆಗ್ಯಾರ ಅನ್ನೋದನ್ನ ಕೇಳಿದ್ದ ನಮ್ಮ ಅಜ್ಜಿ, ಆ ಟಂಕಶಾಲೆ ಹನುಮ 'ಮಾಣಿ' ಅದೇ ಶಾಲ್ಯಲ್ಲಿ ಮಾಸ್ತರ್ ಆಗಿಗಿದ್ನಾ ಈಗಾ? ಅದೇ ಶಾಲಿಗೆ ಹೋಗ್ತಿದ್ದ ಅವೆಲ್ಲ. ಯಮ್ಮನೆ ಮಾಣಿ, ಕೂಸ್ಗಳ ಜೊಡಿಯವನೇ ಆಗಿದ್ದ ಆ ಹನುಮಾ ಹೇಳ ಮಾಣಿ. ಈಗ ನಿಂಗಳ ಮಾಸ್ತರ ಹೇಳಿ ಆತು. ಆಗ್ಲಿ. ಒಳ್ಳೇದಾತು, ಅಂತ ಸ್ವಚ್ಚ ಹವ್ಯಕ ಭಾಷೆಯಲ್ಲಿ ಹೇಳಿ ಅಜ್ಜಿ ಟಂಕಸಾಲಿ ಸರ್ ಅವರಿಗೇ ಮಾಣಿ ಅಂದು ಬಿಟ್ಟಿದ್ದರು. ನಮಗೆ ಸರ್ ಆದರೇನು? ನಮ್ಮ ತಾಯಿಗಿಂತ ಒಂದೋ ಎರಡೋ ವರ್ಷ ಹಿರಿಯರಾಗಿದ್ದ ಸರ್ ನಮ್ಮಜ್ಜಿ, ನಮ್ಮ ಮುತ್ತಜ್ಜಿಗೆಲ್ಲ ಮಾಣಿಯೇ! ನಮ್ಮ ಮುತ್ತಜ್ಜಿ ಇದ್ದಿದ್ದರೆ ಏನೆನ್ನುತ್ತಿದ್ದರೋ ಗೊತ್ತಿಲ್ಲ. ಅವರು ನಾವು ಹುಟ್ಟುವ ಮೊದಲೇ ಮೇಲೆ ಹೋಗಿಬಿಟ್ಟಿದ್ದರು. ಹೀಗಾಗಿ ಟಂಕಸಾಲಿ ಮಾಸ್ತರರ ಬಾಲಲೀಲೆಗಳನ್ನು ಕೇಳಿದ್ದು ಅಜ್ಜಿ ಮತ್ತು ಅವರ ವಾರಿಗೆಯವರೇ ಆದ ಇತರೆ ಕುಟುಂಬದ ಸದಸ್ಯರಿಂದ.

ಇತರೆ ವಿವರ: ಟಂಕಸಾಲಿ ಸರ್ ಅವರಿಗೆ ಎಪ್ಪತ್ತೆರಡು ವರ್ಷದ ಆಸು ಪಾಸು ವಯಸ್ಸಾಗಿತ್ತು ಅನ್ನಿಸುತ್ತದೆ. ನಮ್ಮ ತಾಯಿಗಿಂತ ಒಂದೆರೆಡು ವರ್ಷ ಹಿರಿಯರು ಅಂದ್ರೆ ಸುಮಾರು ಅಷ್ಟಿರಬಹುದು. ಅವರು ಕಲಿತದ್ದು ಸಹಿತ ಅದೇ ಕೆ.ಈ. ಬೋರ್ಡ್ ಸಾಲೆಯಲ್ಲಿಯೇ. ನಂತರ BA, BEd ಮಾಡಿಕೊಂಡು ಅಲ್ಲೇ ನೌಕರಿ ಶುರು ಮಾಡಿದ್ದರು. ಹೆಚ್ಚಾಗಿ ಅವರು ಮಾಳಮಡ್ಡಿ ಶಾಲೆಯಲ್ಲೇ ಇದ್ದಿದ್ದು ಜಾಸ್ತಿ.

ಸರ್ ಅಕ್ಕ ಒಬ್ಬಾಕೆ ಚಿಕ್ಕಂದಿನಲ್ಲೇ ತೀರಿ ಹೋಗಿದ್ದಳು. ಆಕೆಗೂ ಅದೇ epilepsy ತೊಂದರೆ. ನಂತರ ಅದು ಸರ್ ಗೆ ಬಂತು. ಒಳ್ಳೆಯ ರೀತಿಯಲ್ಲಿ ಆರೋಗ್ಯ ಕಾದಿಟ್ಟುಕೊಂಡಿದ್ದ ಸರ್ ಫಿಟ್ಸ್ / epilepsy ಎಷ್ಟೋ ಕಂಟ್ರೋಲ್ ಮಾಡಿಟ್ಟುಕೊಂಡಿದ್ದರು. ಆದೊಂದು ಇಲ್ಲದಿದ್ದರೆ ಅವರಿಗಿದ್ದ ಜಾಣತನ, ಬುದ್ಧಿಮತ್ತೆ ನೋಡಿದ್ದರೆ ಅವರು ಎಲ್ಲೋ ದೊಡ್ಡ ಐಎಎಸ್ ಆಫೀಸರ್ ಅಥವಾ ದೊಡ್ಡ ಪ್ರೊಫೆಸರ್ ಆಗೋ material. ಸಾಲೆಯಲ್ಲಿ ಮಾಸ್ತರಾದ್ರೂ ಅವರ outlook ಮಾತ್ರ ಏಕದಂ very scholarly. ಮಾತಾಡುವ ಶೈಲಿ, ಮಾತಾಡುವಾಗ ಸಹಜವಾಗಿ ಹೊರ ಹೊಮ್ಮುತ್ತಿದ್ದ ಪಾಂಡಿತ್ಯ ಯಾವದೇ ಯೂನಿವರ್ಸಿಟಿ ಮಾಸ್ತರಿಗೂ ಕಮ್ಮಿ ಇರಲಿಲ್ಲ.

ಟಂಕಸಾಲಿ ಸರ್ ಅಜೀವ ಬ್ರಹ್ಮಚಾರಿ. ಆರೋಗ್ಯದ ಬಗ್ಗೆ ಸ್ವಲ್ಪ ಚಿಂತೆ ಮತ್ತು ಕಾಳಜಿ ಹೊಂದಿದ್ದ ಅವರು ಮದುವೆ ಸಂಸಾರ ಇತ್ಯಾದಿಗಳಿಂದ ದೂರ ಇದ್ದರು. ಏನೇನೋ ದೊಡ್ಡ ದೊಡ್ಡ ರೋಗ, ರುಜಿನ ಇದ್ದರೂ ಒಂದಲ್ಲ ನಾಕು ಮದುವೆ ಆಗಿ, ಡಜನ್ ಮಕ್ಕಳು ಮಾಡಿ, ಲಗೂನೆ ಗೊಟಕ್ಕ ಅಂದು, ಹೆಂಡತಿ ಮಕ್ಕಳನ್ನು ರೋಡಿಗೆ ತರುವ ಜನರ ಮುಂದೆ ಟಂಕಸಾಲಿ ಸರ್ ತುಂಬ ಎತ್ತರದಲ್ಲಿ ನಿಂತ ಉನ್ನತ ವ್ಯಕ್ತಿಯಾಗಿ ಕಾಣುತ್ತಾರೆ. ತಮಗಿರುವ ಅನಾರೋಗ್ಯದಿಂದ ಒಂದು ಹೆಣ್ಣಿನ ಬಾಳು ಹಾಳಾಗುವ ಚಾನ್ಸೇ ಬೇಡ ಅಂತ ಹೇಳಿ ಅವರು ಬ್ರಹ್ಮಚಾರಿ ಆಗಿಯೇ ಉಳಿದಿದ್ದರು. ಮತ್ತೆ ಯಾವಾಗಲೂ ಆ ಪುಸ್ತಕ, ಈ ಪುಸ್ತಕ, ಈ ಕ್ವಿಜ್ ಸ್ಪರ್ಧೆ, ಆ ಚರ್ಚಾ ಸ್ಪರ್ಧೆ ಅಂತ ಆ ತರಹದ ಚಟುವಟಿಕೆಗಳಲ್ಲಿಯೇ ಮುಳುಗಿರುತ್ತಿದ್ದ ಸರ್ ಒಂದು ತರಹದ ಯೋಗಿಯ ಜೀವನ ಶೈಲಿಗೆ ಹೊಂದಿಕೊಂಡು ಬಿಟ್ಟಿದ್ದರು. ಅವರ ತಮ್ಮನ ಮನೆಯಲ್ಲಿ ಒಂದು ಭಾಗದಲ್ಲಿ ತಮ್ಮದೇ ಲೋಕದಲ್ಲಿ ಸರ್ ಇರುತ್ತಿದ್ದರು ಅಂತ ಕೇಳಿದ್ದು. ನಮ್ಮ ಅಣ್ಣ ತುಂಬಾ ರೆಗ್ಯುಲರ್ ಆಗಿ ಅವರ ಮನೆಗೆ ಹೋಗುತ್ತಿದ್ದ. ನಮ್ಮ ಅಣ್ಣನ ಜೋಡಿ ಎಲ್ಲ ಕಡೆ ಹೋಗಿದ್ದ ನಾವು ಅಲ್ಲೊಂದು ಯಾಕೋ ಹೋಗಿಯೇ ಇರಲಿಲ್ಲ. ಧನ್ಯ ಜೀವಿಯೊಬ್ಬರ ಕುಟೀರ ನೋಡಲೇ ಇಲ್ಲ.

ರಿಟೈರ್ ಆದ ನಂತರ ಸಹ ಸರ್ ಅಲ್ಲಿಯೇ ಮಾಳಮಡ್ಡಿಯಲ್ಲಿಯೇ ಓಡಾಡಿಕೊಂಡು ಇದ್ದರು. ೨೦೧೨ ಡಿಸೆಂಬರ್ ನಲ್ಲಿ ನಮ್ಮ SSLC ಬ್ಯಾಚಿನ ಇಪ್ಪತ್ತೈದನೇ ವರ್ಷದ ಮೆಗಾ ರಿಯೂನಿಯನ್ ಆದಾಗ ಅವರೇ ಮುಖ್ಯ ಅತಿಥಿಯಾಗಿ ಬಂದು, ಒಂದು solid ಭಾಷಣ ಮಾಡಿ, ಬೆಳಗಿಂದ ಸಂಜೆ ತನಕ ಇದ್ದು ಹೋಗಿದ್ದರು. ಬೆಳಗಿಂದ ಸಂಜೆ ತನಕ ಇದ್ದ ಶಿಕ್ಷಕರು ಮೂರೇ ಮೂರು ಜನ. ಟಂಕಸಾಲಿ ಸರ್, ಹೆಗಡೆ ಸರ್, ಚಿಕ್ಕಮಠ ಸರ್.

ಬರೆಯುತ್ತ ಹೋದರೆ ಟಂಕಸಾಲಿ ಸರ್ ಬಗ್ಗೆ ಬರೆಯಲಿಕ್ಕೆ ಬಹಳ ಇದೆ. ಆದರೆ ಎಲ್ಲದಕ್ಕೂ ಒಂದು The End ಹಾಕಲೇ ಬೇಕು ನೋಡ್ರೀ. ಅದಕ್ಕೇ ಇಷ್ಟು ಸಾಕು.

Rest in Peace, ಟಂಕಸಾಲಿ ಸರ್ ಉರ್ಫ್ ಟಿಂಕು ಸರ್!


** ಶೀರ್ಷಿಕೆ - ಟಂಕ'ಸಾಲಿ'ಯೇ ಇಲ್ಲದ ಸಾಲಿಯೊಂದು ಸಾಲಿಯೇ ಕೃಷ್ಣಾ! - ಇದು 'ನೀ ಸಿಗದಾ ಬಾಳೊಂದು ಬಾಳೆ ಕೃಷ್ಣಾ?' ಅನ್ನುವ ಭಾವಗೀತೆಯಿಂದ ಪ್ರೇರಿತ. ಎಂ.ಡಿ. ಪಲ್ಲವಿ ಮನತುಂಬಿ ಹಾಡಿದ್ದಾರೆ ಕೇಳಿ.

** ನಮ್ಮ ಬ್ಯಾಚಿನ ಸಿಲ್ವರ್ ಜುಬಿಲೀ ರಿಯೂನಿಯನ್ (೨೦೧೨, ಡಿಸೆಂಬರ್, ೨೩, ೨೪) ಸಮಾರಂಭದಲ್ಲಿ ಟಂಕಸಾಲಿ ಸರ್ ಮಾಡಿದ್ದ ಭಾಷಣದ ವೀಡಿಯೊ ಕೆಳಗಿದೆ ನೋಡಿ. 

19 comments:

Unknown said...

Good Write up Mahesh..

Unknown said...

Very nice.I really went back to my school days. The most cherished days of my life. The sweet memories always linger in my ears.

Mahesh Hegade said...

ಧನ್ಯವಾದ, ಕಿರಣ್ ಹಿರೇಮಠ ಅವರೇ!

Mahesh Hegade said...

ಧನ್ಯವಾದ, ಲಕ್ಷ್ಮಿ ಘಾರ್ಗೀ ಅವರೇ!

Unknown said...

best possible tribute Mahesh

Mahesh Hegade said...

Thanks Jamkhandi sir

Vimarshak Jaaldimmi said...


Rest in peace, respected Sir.

He was a great teacher, motivator, an epitome of a model educator, and above all a very good person.


Unknown said...

A true tribute to Tankasali sir...he will always be remembered..thanks for throwing light on his contributions towards shaping our lives....thank you Mahesh.

Mahesh Hegade said...

Thank you, Geeta Mathihalli

Shailesh Hegde said...


Really a fantastic teacher who dedicated his entire life for his students.

Excellent article.

Mahesh Hegade said...

Thanks Shailesh Hegde. Bournvita book episode is from your school days :)

bhatnp said...

Brought tears in my eyes

Mahesh Hegade said...

Thank you, BhatNP

angadiindu said...

ಟಂಕಸಾಲಿ ಸರ್, ನಮಗೂ ಕಲಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ.ಲಿಂಕ್ ಕಳಿಸಿದ್ದಕ್ಕೆ ಧನ್ಯವಾದಗಳು.

Mahesh Hegade said...

ಧನ್ಯವಾದ,ಅಂಗಡಿ ಅವರಿಗೆ.

Unknown said...

Maheshaa............thanq for reminding those wonderful days ...

Mahesh Hegade said...

Thanks Aravind Patil for being part of those memories ;)

neelesh said...

yaava hinnele gottildiddavroo odi khushi padovantha lekhana!

Mahesh Hegade said...

Thank you, Neelesh.