Saturday, March 22, 2014

'ದಿವಾಕರ ಹೆಗಡೆ' ಎಂಬ ಪುರಾತನ ಪಂಟರ್ ನೆನಪಾದ!

೧೯೮೪, ೧೯೮೫ ರ ಟೈಮ್ ಅಂತ ನೆನಪು. ನಾವು ಇನ್ನೂ ಆರೋ ಏಳನೇ ಕ್ಲಾಸು. ಸಂಯುಕ್ತ ಕರ್ನಾಟಕ, ಇಂಡಿಯನ್ ಎಕ್ಸಪ್ರೆಸ್ ಮನೆಗೆ ಬರುತ್ತಿದ್ದ ದಿನಪತ್ರಿಕೆಗಳು. ನಾವು ದಿನಾ ತಪ್ಪದೆ, ಪೂರ್ತಿಯಾಗಿ ಓದುತ್ತಿದ್ದುದು ಸಂಯುಕ್ತ ಕರ್ನಾಟಕ ಮತ್ತು ಪಕ್ಕದ ಮನೆಯವರು ತರಿಸುತ್ತಿದ್ದ ಕನ್ನಡ ಪ್ರಭ. ಇಂಗ್ಲೀಶ್ ಪೇಪರ್ ಓದಿ ಅರ್ಥ ಮಾಡಿಕೊಳ್ಳೋವಷ್ಟು ಇಂಗ್ಲೀಶ್, ಬುದ್ಧಿ ಎರಡೂ ಇನ್ನೂ ಬಂದಿರಲಿಲ್ಲ.

ಅಮ್ಮಾ, ಈ ದಿವಾಕರ ಹೆಗಡೆ ಅಂದ್ರೆ ಯಾರೇ? ಅಂತ ಪೇಪರ್ ಓದುತ್ತ ತಾಯಿಯವರನ್ನು ಕೇಳಿದೆ.

ಯಾವ ದಿವಾಕರ ಹೆಗಡೆಯಾ? ಯಾರನ? ಕರ್ಜೀಮನೆಯಲ್ಲಿ ಪ್ರಭಾಕರ, ಮಧುಕರ ಹೇಳಿ ಇದ್ದ. ಕೆಳಗಿನ ಕೇರಿಯಲ್ಲಿ ಸತ್ನಾಣಣ್ಣಯ್ಯನ ಮಕ್ಕ ಭಾಸ್ಕರ, ಸುಧಾಕರ ಇದ್ದ. ದಿವಾಕರ ಹೇಳಿ ಯಾರೂ ಇದ್ದ ನೆನಪಿಲ್ಲಿಯೋ, ಅಂದು ಬಿಟ್ಟರು ಅಮ್ಮ.

ನಾವು ಯಾರೋ ದಿವಾಕರ ಹೆಗಡೆ ಬಗ್ಗೆ ಕೇಳಿದರೆ ಇವರು ತಮ್ಮ ತವರು ಮನೆ ಕಡೆ ಸಿರ್ಸಿ ಹತ್ತಿರದ ಹಳ್ಳಿಗಳಲ್ಲಿ ಇರೋ ತಮ್ಮ ಕಸಿನ್ ಇತ್ಯಾದಿ ಸಂಬಂಧಿಗಳ ನೆನಪು ಮಾಡಿಕೊಂಡರು. ಒಳ್ಳೆ ಕಥೆ!

ಅಯ್ಯೋ! ಹೊನ್ನೆಗದ್ದೆ ಬದಿ ಹೆಗಡೆ ಅಲ್ಲದೇ ಮಾರಾಯ್ತೀ! ಇವಾ ಯಾರೋ ಬೆಂಗಳೂರಲ್ಲಿ ಇಪ್ಪವಾ. ಪೇಪರ್ ನಲ್ಲಿ ಸುದ್ದಿ ಬಂಜು, ಅಂತ ಹೇಳಿದೆ.

ಎಂತಾ ಸುದ್ದಿ ಬಂಜು ಅವನ ಬಗ್ಗೆ? ಹಾಂ? ಅಂತ ಕೇಳಿದರು.

ಬೆಂಗಳೂರಿನ ದೊಡ್ಡ ಗೂಂಡಾ ಹೇಳಿ ಆತು. ರೌಡಿಯಳ. ಜೇಲಿಗೆ ಹಾಕಿದ್ದವಡಾ, ಅಂತ ಹೇಳಿದೆ.

ಅಯ್ಯ! ಇಷ್ಟು ದೊಡ್ಡ ಮಾಡಿ, ದಿವಾಕರ ಹೆಗಡೆ ಹೇಳಿ ಕೇಳದನ್ನ ನೋಡಿರೆ ಸಾಕು! ಯಾರೋ ದೊಡ್ಡ ಮನುಷ್ಯನನ ಹೇಳಿ ನೋಡಿರೆ ಯಾರೋ ಗೂಂಡಾನಳ, ಯಾರೋ ರೌಡಿಯಳ ಅಂಬೆ. ಮಳ್ಳ, ಅಂದ್ರು  ಅಮ್ಮ. 

ದಿವಾಕರ ಹೆಗಡೆ! ಆ ಕಾಲದ ವಿದ್ಯಾರ್ಥಿ ಧುರೀಣ ಮತ್ತು ನಾಮೀ ಗೂಂಡಾ.

ಆ ಹೆಸರು ಕೇಳಿಯೇ ಹುರುಪೆದ್ದು ಹೋಗಿತ್ತು. ಅದು ದಾವೂದ್ ಇಬ್ರಾಹಿಂ ಮುಂಬೈ ಭೂಗತ ಜಗತ್ತಿನಲ್ಲಿ ಉತ್ತಂಗಕ್ಕೆ ಬರುತ್ತಿದ್ದ ಕಾಲ. ಹೆಚ್ಚಾಗಿ ಆಗಲೇ ದಾವೂದ್ ದುಬೈಗೆ ಶಿಫ್ಟ್ ಆಗಿದ್ದ ಅಂತ ಕಾಣಿಸುತ್ತದೆ. ಸುಮಾರು ಸುದ್ದಿ ಬರುತ್ತಿತ್ತು. ಬೆಂಗಳೂರಿನಲ್ಲಿ ಸಹ ಅಂಡರ್ವರ್ಲ್ಡ್ ಮಸ್ತಾಗಿತ್ತು. ಕೋತ್ವಾಲ ರಾಮಚಂದ್ರ ಮತ್ತು ಎಂಪೀ ಜಯರಾಜ್ ಎಂಬ ಪುರಾತನ ಪಂಟರುಗಳು ಬೆಂಗಳೂರಿನ ಭೂಗತ ಲೋಕದ ಮೇಲೆ ಅಧಿಪತ್ಯ ಸಾಧಿಸಲು ರಸ್ತೆ ತುಂಬಾ ನೆತ್ತರು ಹರಿಸಿದ್ದರು. ಎಲ್ಲ ದೇವರಾಜ್ ಅರಸ್, ಗುಂಡೂರಾವ್ ಇತ್ಯಾದಿ ರಾಜಕಾರಣಿಗಳ ಕಾಲದಲ್ಲಿ ಬಲಿತಿದ್ದರು.

ಮುಂದೆ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಸರ್ಕಾರ ಬಂದ ಮೇಲೆ ರೌಡಿಗಳ ನಿಗ್ರಹ ಮಾಡುವ ನಿರ್ಧಾರ ಕೈಗೊಂಡಿತ್ತು. ಯಾಕಂದ್ರೆ ಸ್ವಲ್ಪೇ ವರ್ಷಗಳ ಹಿಂದೆ ರಾಮಕೃಷ್ಣ ಹೆಗಡೆ, ದೇವೇಗೌಡ ಮುಂತಾದ ವಿರೋಧಿ ಧುರೀಣರಿಗೇ ಮಚ್ಚಿಟ್ಟು ಆವಾಜ್ ಹಾಕುವ ಮಟ್ಟಕ್ಕೆ ಗೂಂಡಾಗಳು ಬೆಳೆದು ನಿಂತಿದ್ದರು. ನನಗೆ ರಕ್ಷಣೆ ಕೊಡಿ! ಅಂತ ವಿಧಾನ ಸೌಧದಲ್ಲೇ ದೇವೇಗೌಡರು ಅಂಬೋ ಅಂದಿದ್ದರು. ಅವರ ಕಾರಿಗೆ ಆಗಿನ ದೈತ್ಯ ರೌಡಿ ಜಯರಾಜ್ ಮಚ್ಚು ಬೀಸಿದ್ದ. ಕೊತ್ವಾಲ ರಾಮಚಂದ್ರ ಹೋಗಿ ರಾಮಕೃಷ್ಣ ಹೆಗಡೆ ಅವರ ಮಗಳಿಗೆ ಧಮಿಕಿ ಹಾಕಿ, ನಿಮ್ಮಪ್ಪನಿಗೆ ಹುಷಾರಾಗಿರಲು ಹೇಳಮ್ಮೋ! ಅಂತ  ಆವಾಜ್ ಹಾಕಿದ್ದ. ಹೀಗಾಗಿ ಅಧಿಕಾರಕ್ಕೆ ಬಂದಾಕ್ಷಣ ಜನತಾ ಪರಿವಾರ ಮಾಡಿದ ಮೊದಲ ಕೆಲಸ ಅಂದ್ರೆ, ದೊಡ್ಡ ದೊಡ್ಡ ರೌಡಿಗಳ ಮಟ್ಟ ಹಾಕಿದ್ದು. ಇಂತಹ ಒಂದು ಕಾರ್ಯಾಚರಣೆಯಲ್ಲಿಯೇ ದಿವಾಕರ ಹೆಗಡೆ ಗೂಂಡಾ ನಿಗ್ರಹ ಕಾಯಿದೆಯಡಿ ಜೈಲ್ ಒಳಗೆ ಹೋಗಿ ಕೂತಿದ್ದ. ಅದು ಈಗ ಸುದ್ದಿಯಾಗಿ ಪತ್ರಿಕೆಯಲ್ಲಿ ಬಂದಿತ್ತು.

ಈ ದಿವಾಕರ ಹೆಗಡೆ ಹೇಳವಾ ನಮ್ಮ ಪೈಕಿನ ಹ್ಯಾಂಗೆ? ಅಂತ ಕೇಳಿದೆ.

ನಮ್ಮ ಹವ್ಯಕರಲ್ಲಿ ಎಲ್ಲ ತರಹದ ಉದ್ಯೋಗ ಮಾಡುವರು ಇದ್ದರು. ದೊಡ್ಡ ಹೆಸರು ಮಾಡದ, ನಮ್ಮ ಜನ ಇಲ್ಲದ ಒಂದೇ ಒಂದು ಫೀಲ್ಡ್ ಅಂದ್ರೆ ಭೂಗತ ಜಗತ್ತು ಅಂದ್ರೆ ಮಾಫಿಯಾ ಅಂದ್ರೆ ಅಂಡರ್ವರ್ಲ್ಡ್.

ರಾಜಕಾರಣದಲ್ಲಿ ಮುಖ್ಯಮಂತ್ರಿಯಾಗಿ ರಾಮಕೃಷ್ಣ ಹೆಗಡೆ ಇದ್ದರು. ಇನ್ನೂ ಎರಡು ಮೂರು ಜನ ಹವ್ಯಕ ಶಾಸಕರು ಇದ್ದರು. ಸಿನಿಮಾದಲ್ಲಿ ಪುಟ್ಟಣ್ಣ ಕಣಗಾಲರ ಮಾನಸ ಪುತ್ರ ನೀರ್ನಳ್ಳಿ ರಾಮಕೃಷ್ಣ ಇದ್ದ. ನಟಿ ಲಕ್ಷ್ಮಿ ಭಟ್ ಇದ್ದಳು. ದೊಡ್ಡ ವಕೀಲರು, ನ್ಯಾಯಾಧೀಶರು, ಉದ್ದಿಮೆದಾರರು, ಪಂಡಿತರು ಹೀಗೆ ಉಳಿದ ಎಲ್ಲಾ ದಂಧೆಗಳಲ್ಲೂ ನಮ್ಮವರು ಇದ್ದರು ಬಿಡಿ. SSLC, PUC ರಾಂಕ್ ಲಿಸ್ಟುಗಳಲ್ಲೂ ನಮ್ಮವರದೇ ವಿಜೃಂಭಣೆ. ಇಡೀ ಜಗತ್ತನ್ನೇ ಜಾಲಾಡಿದರೂ ಹತ್ತು ಲಕ್ಷಕ್ಕಿಂತಲೂ ಕಮ್ಮಿ ಜನ ಇರುವ ನಮ್ಮ ಅಲ್ಪಸಂಖ್ಯಾತ (?) ಹವ್ಯಕ ಸಮಾಜದ ಜನ ಎಲ್ಲ ಕ್ಷೇತ್ರಗಳಲ್ಲೂ ಉನ್ನತಿ ಸಾಧಿಸಿದ್ದಾರೆ. ಇಲ್ಲದ್ದು, ಅಥವಾ ಇದ್ದೂ ನಮಗೆ ಗೊತ್ತಿರದದ್ದು ಅಂದ್ರೆ ಭೂಗತ ಲೋಕ ಮಾತ್ರ. ಹಾಗಾಗಿ ಅದರಲ್ಲೂ ಯಾರಾದರು ನಮ್ಮ ಕುಲ ಬಾಂಧವರು ಇದ್ದಾರೋ ಹೇಗೆ ಅಂತ ಕೆಟ್ಟ ಕುತೂಹಲ.

ಅಯ್ಯೋ! ಆ ಗೂಂಡಾ ಎಲ್ಲಾ ನಮ್ಮವ ಸುಳ್ಳಾಗಿಕ್ಕ. ನಮ್ಮ ಹವ್ಯಕರಲ್ಲಿ ಸಣ್ಣ ಪುಟ್ಟ ನಂಬ್ರಾ (ಜಗಳ) ಮಾಡಿಕೆಂಡು ಹೊಡದಾಡಿಕೆಂಬವು ಇರ್ತವೇ ವಿನಾ ದೊಡ್ಡ ಮಟ್ಟದ ಗೂಂಡಾಗಿರಿ ಮಾಡವು ಎಲ್ಲ ಇಲ್ಲೆ. ಹವ್ಯಕ ಸುಳ್ಳಾಗಿಕ್ಕು ಅವಾ, ಅಂದ್ರು ಅಮ್ಮ

ಮತ್ತೆ!? ದಿವಾಕರ 'ಹೆಗಡೆ' ಹೇಳಿದ್ದು. ನಮ್ಮವ ಅಲ್ಲದ? ಅಂತ ಕೇಳಿದೆ.

ಅಯ್ಯ.....ಹೆಗಡೆ ಹೇಳಿ ಕೊಂಕಣಿಗರಲ್ಲಿ, ಬಂಟರಲ್ಲಿ ಸಹಾ ಇರ್ತ. ಬರಿ ಹವ್ಯಕರಲ್ಲಿ ಒಂದೇ ಅಲ್ಲ. ಅವರ ಪೈಕಿ ಯಾರಾರು ಆಗಿಕ್ಕು ಆ ಗೂಂಡಾನ  ಪೀಂಡಾನ  ಹೇಳ ದಿವಾಕರ ಹೇಳ ಹೆಗಡೆ. ನಮ್ಮ ಪೈಕಿ ಸುಳ್ಳಪಾ, ಅಂದ್ರು ಅಮ್ಮ.

ಹೌದು! ಕೊಂಕಣಿಗಳಲ್ಲಿ ಹೆಗಡೆ ಇದ್ದಿದ್ದು ಗೊತ್ತು. ಧಾರವಾಡದ ಹೆಗಡೆ ಮೆಡಿಕಲ್ಸ್ ಅವರ ಪೈಕಿದೇ. ಇನ್ನು ಬಂಟರು ಅಂದ್ರೆ ಯಾರು? ಆವಾಗ ಇನ್ನೂ ಬಂಟರು ಅಷ್ಟು ಫೇಮಸ್ ಆಗಿರಲಿಲ್ಲ. ಐಶ್ವರ್ಯ ರಾಯ್ ಮಿಸ್ ವರ್ಲ್ಡ್ ಆಗಿರಲಿಲ್ಲ. ಶಿಲ್ಪಾ ಶೆಟ್ಟಿ ಎಂಬ ಸಿಂಹಕಟಿಯ ಬಂಟರ ಸುಂದರಿ ಇನ್ನೂ ಪಟ್ಟಕ್ಕೆ ಬಂದಿರಲಿಲ್ಲ.

ಬಂಟರು ಅಂದ್ರೆ ಯಾರೇ ಅಮ್ಮಾ? ಅಂತ ಕೇಳಿದೆ.

ಬಂಟರು ಅಂದ್ರೆ ಶೆಟ್ಟ್ಯಕ್ಕ. ಈಗ ನಮ್ಮ ಆರ್.ಎನ್. ಶೆಟ್ಟರು ಇಲ್ಲ್ಯ? ಅವರು ಬಂಟರು. ಅವರ ಪೈಕಿ, ಅಂತ ಹೇಳಿ ಅಮ್ಮ ಹೋದರು. ಅವರಿಗೆ ಸಾವಿರ ಕೆಲಸ. ನಮ್ಮ ಹಾಗೆ ಅಲ್ಲ.

ಈ ದಿವಾಕರ ಹೆಗಡೆ ರಹಸ್ಯ ಬಗೆಹರಿಯಲಿಲ್ಲ. ಇವಾ ಹವ್ಯಕನೇ? ಅಥವಾ ಇತರೆಯವನೋ?

ಅದು ಅಷ್ಟಕ್ಕೇ ಮುಗಿಯಿತು. ಮತ್ತೊಂದು ಒಂದೋ ಎರಡೋ ವರ್ಷ ಆದ ಮೇಲೆ ಮತ್ತೆ ಬಂದಿತ್ತು ಅವನ ಸುದ್ದಿ ಪತ್ರಿಕೆಯಲ್ಲಿ. ಈ ಸರಿ ಖತರ್ನಾಕ್ ಸುದ್ದಿ. ೧೯೮೬ ಅಂತ ನೆನಪು.

ದೊಡ್ಡ ರೌಡಿ, ವಿದ್ಯಾರ್ಥಿ ಧುರೀಣ ದಿವಾಕರ ಹೆಗಡೆ ಕೊಲೆಯಾಗಿ ಹೋಗಿದ್ದ!

ದಾರುಣವಾಗಿ ಹತ್ಯೆ ಮಾಡಲಾಗಿತ್ತು. ಬೆಂಗಳೂರಿನಲ್ಲಿ.

ವಿರೋಧಿ ಬಣದವರು ಹೊಂಚು ಹಾಕಿ, ಮೋಟಾರ್ ಬೈಕ್ ಮೇಲೆ ಹೋಗುತ್ತಿದ್ದವನನ್ನು ತಡೆದು, ಬೀಳಿಸಿ, ಬಿದ್ದು ಎದ್ದು ಓಡುತ್ತಿದ್ದವನ್ನು ಅಟ್ಟಿಸಿಕೊಂಡು ಬಂದು, ಲಾಂಗು ಮಚ್ಚುಗಳಿಂದ ಕೊಚ್ಚಿ ಕೊಚ್ಚಿ ಕೊಂದಿದ್ದರು. ಹಾಡೇ ಹಗಲು! ರಾಜಧಾನಿ ಬೆಂಗಳೂರಲ್ಲಿ.

ಹಾಂ! ಅಂತ ಬೆಚ್ಚಿ ಬಿದ್ದಿದ್ದೆ.

ಬೆಂಗಳೂರಿನ ಭೂಗತ ಜಗತ್ತಿನಲ್ಲಿದ್ದ ಒಬ್ಬೇ ಒಬ್ಬ ಹೆಗಡೆ (ನಮ್ಮವನು ಅಲ್ಲದಿದ್ದರೂ) ಹೋಗೇಬಿಟ್ಟನೇ!? ಅಕಟಕಟಾ!

ದಿವಾಕರ ಹೆಗಡೆ ಯಾರು? ಯಾಕೆ ಸತ್ತ? ಇದೆಲ್ಲ ವಿವರ ತಿಳಿದು, ಅರ್ಥವಾಗಿದ್ದು ಒಂದು ದೊಡ್ಡ ಬ್ರೇಕಿನ ಬಳಿಕವೇ. ಅದೂ ದೊಡ್ಡ ಬ್ರೇಕ್. ಬರೋಬ್ಬರಿ ಇಪ್ಪತ್ತೊಂದು ವರ್ಷದ ಬ್ರೇಕ್. ' ಒಂದು ಸಣ್ಣ ಬ್ರೇಕ್ ನಂತರ' ಅಂತ ಟೀವಿ ಮಂದಿ ಹೇಳಿದ ಹಾಗೆ ಅಲ್ಲ.

ದಿವಾಕರ ಹೆಗಡೆ - ಸುಮಾರು ೧೯೭೮, ೭೯ ಕಾಲದಿಂದ ಕೊಲೆಯಾಗುವ ತನಕ ಅಂದರೆ ೧೯೮೬ ರ ವರಗೆ ಬೆಂಗಳೂರಲ್ಲಿ ಇದ್ದ ದೊಡ್ಡ ವಿದ್ಯಾರ್ಥಿ ಮುಖಂಡ. ಅವನ alignment ಇದ್ದಿದ್ದು ಜಯರಾಜ್ ಎಂಬ ಡಾನ್ ಕಡೆಗೆ. ಇನ್ನೊಬ್ಬ ಪ್ರತಿಸ್ಪರ್ಧಿ ಡಾನ್ ಅಂದರೆ ಕೊತ್ವಾಲ್ ರಾಮಚಂದ್ರ. ಅವನಿಗೂ ಇದ್ದರು ವಿದ್ಯಾರ್ಥಿ ಬೆಂಬಲಿಗರು. ಆ ಕಾಲದ ಬೆಂಗಳೂರಿನ ಕಾಲೇಜು ಹಾಸ್ಟೆಲ್ಲುಗಳಲ್ಲಿ ರೌಡಿಗಳ ಕೇಕೆ ನಿರಂತರ. ಪೊಲೀಸರಿಗೆ ದೊಡ್ಡ ತಲೆನೋವು. ದೇವರಾಜ ಅರಸರ ಅಳಿಯನ ಕೃಪಾಶೀರ್ವಾದದಲ್ಲಿ 'ಇಂದಿರಾ ಬ್ರಿಗೇಡ್' ಎಂಬ ಸಂಘಟನೆಯಡಿ ಎಲ್ಲ ರೌಡಿಗಳ ಜಮಾವಣೆ.

ನ್ಯಾಯಾಲದಲ್ಲಿ ನ್ಯಾಯಾಧೀಶರ ಮುಂದೆಯೇ ತನ್ನ ವಿರುದ್ಧ ಸಾಕ್ಷಿ ಹೇಳುತ್ತಿದ್ದವನ್ನು ಬಕಬಕನೆ ಕರುಳೆಲ್ಲ ಕಿತ್ತಿ ಹೊರಬರುವಂತೆ ಇರಿದಿದ್ದ ಹುಂಬ ಡಾನ್ ಜಯರಾಜ ದೊಡ್ಡ ಜೈಲ್ ಶಿಕ್ಷೆ ಅನುಭವಿಸುತ್ತಿದ್ದ. ಹೀಗಾಗಿ ಇನ್ನೊಬ್ಬ ಡಾನ್ ಕೊತ್ವಾಲ್ ರಾಮಚಂದ್ರ ಕಿಂಗ್ ಅಂತ ಮೆರೆಯಲು ಪ್ರಯತ್ನ ಮಾಡುತ್ತಿದ್ದ. ಆದರೆ ಶಿವಮೊಗ್ಗದಿಂದ ಬಂದು, ಮೂಲತ ಡಕಾಯಿತಿ ಮಾಡಿಕೊಂಡಿದ್ದ ರಾಮಚಂದ್ರನಿಗೆ ಬೆಂಗಳೂರಿನ ಭೂಗತ ಲೋಕದ ಸಿಂಹಾಸನ ಸಂಬಾಳಿಸಲಿಕ್ಕೆ ಆಗಲಿಲ್ಲ. ಜಯರಾಜ್ ಜೈಲ್ ಒಳಗೆ ಇದ್ದರೂ ಅವನ ದೊಡ್ಡ ದೊಡ್ಡ ಪಂಟರುಗಳು ಹೊರಗೆ ಇದ್ದರು. ಹಗಲು ರಾತ್ರಿಯನ್ನದೆ ಕೊತ್ವಾಲನನ್ನು ಹುಡುಕಿ, ಮುಗಿಸೇ ಬಿಡಲು ಕಂಕಣ ತೊಟ್ಟಿದ್ದರು. ಅಂತವರಲ್ಲಿ ಮುಂಚೂಣಿಯಲ್ಲಿ ಇದ್ದವನು ದಿವಾಕರ ಹೆಗಡೆ. ಅಷ್ಟು ಸಿಟ್ಟಿತ್ತು ಅವನಿಗೆ ಕೊತ್ವಾಲನ ಮೇಲೆ. ಯಾಕೆಂದ್ರೆ ಅವನ ಕೆಲ ವಿರೋಧಿ ವಿದ್ಯಾರ್ಥಿ ಧುರೀಣರನ್ನು ಕೊತ್ವಾಲ್ ಬೆಂಬಲಿಸಿದ್ದ.

ಮುಂದೆ ಏನೇನೋ ಆಯಿತು. ತನ್ನ ಒಡನಾಡಿಗಳಿಂದಲೇ ಕೊತ್ವಾಲ್ ನಿದ್ದೆಯಲ್ಲಿಯೇ ಕೊಲೆಯಾದ. ಮಟಾಶ್! ಜಯರಾಜ್ ಹೊರಗೆ ಬಂದ. ಬೆಂಗಳೂರಿನ ಭೂಗತ ಲೋಕದ ದೊರೆಯಾಗಿ ಮೆರೆಯತೊಡಗಿದ. ಅವನ ಕೆಳಗಿದ್ದವರೂ ಮೆರೆಯತೊಡಗಿದರು. ಅವನ ಪರಮ ಬಂಟನಾಗಿದ್ದ ದಿವಾಕರ್ ಹೆಗಡೆ ಕೂಡ ಮೆರದಿದ್ದೇ ಮೆರೆದಿದ್ದು.

ಉದ್ಧಟ ದಿವಾಕರ ಹೆಗಡೆ ಮುಂಗೋಪಿ. ಸಹನೆಯಿಲ್ಲ. ಮುಖದ ಮೇಲೆ ಹೊಡೆದಂತೆ ಮಾತು. ಈಗಂತೂ ಗುರು ಜಯರಾಜ್ ಡಾನ್. ಮತ್ತೇನು? ಉದ್ಧಟತನ ಸ್ವಲ್ಪ ಜಾಸ್ತಿಯೇ ಆಯಿತು. ಯಾವದೋ ಸಮಯದಲ್ಲಿ ಜಯರಾಜ್ ಪಾಳೆಯದವನೇ ಆದ 'ತಂಬು' ಅನ್ನುವ ರೌಡಿಯನ್ನು ತಡವಿಕೊಂಡ. ಉಲ್ಟಾ ಸೀದಾ ಮಾತಾಡಿದ. ಅವಮಾನ ಮಾಡಿದ. ಆಗಲೇ ಒಂದೋ ಎರಡೋ ದೊಡ್ಡ ಮಟ್ಟದ ಮರ್ಡರ್ ಮಾಡಿ ಫೇಮಸ್ ಆಗಿದ್ದ ತಂಬು ಇವನಿಗೊಂದು ಶಾಸ್ತಿ ಮಾಡಲೇ ಬೇಕು ಅಂತ ಸ್ಕೆಚ್ ಹಾಕೇ ಬಿಟ್ಟ. ಮತ್ತೆ ಏನೇನೋ ಲೆಕ್ಕಾಚಾರ ಎಲ್ಲ ವರ್ಕ್ ಔಟ್ ಆಗಿರಬೇಕು ಬಿಡಿ. ಹಾಗಾಗಿ ದಿವಾಕರ ಹೆಗಡೆಯ ಕೊಲೆಗೆ ಮುಹೂರ್ತ ಕೂಡಿ ಬಂತು.

ತಂಬು ತಡಮಾಡಲಿಲ್ಲ. ಮುಂದೆ ಕೆಲವೇ ದಿವಸಗಳಲ್ಲಿ ತನ್ನ ಗ್ಯಾಂಗಿನ ಜೊತೆಗೂಡಿ ಒಬ್ಬನೇ ಬೈಕ್ ಮೇಲೆ ಹೊರಟಿದ್ದ ದಿವಾಕರ ಹೆಗಡೆಯನ್ನು ಆಟಕಾಯಿಸಿದ. ಬಿದ್ದು ಓಡುತ್ತಿದ್ದವನ್ನು ಪೀಸ್ ಪೀಸ್ ಮಾಡಿ ಕೊಚ್ಚಿದರು. ಕಥೆ ಮುಗಿಸಿದರು.

ದಿವಾಕರ ಹೆಗಡೆ ಎಂಬ ವಿದ್ಯಾರ್ಥಿ ಧುರೀಣ ಹೀಗೆ ಮುಗಿದು ಹೋಗಿದ್ದ.

ತುಂಬಾ ಸಲ ಹೀಗೇ ಆಗುತ್ತದೆ. ಯಾವದೋ ವಿಷಯದ ಬಗ್ಗೆ ಎಂದೋ ಏನೋ ಓದಿರುತ್ತೇವೆ. ಪೂರ್ತಿ ಮಾಹಿತಿ ಸಿಕ್ಕಿರುವದಿಲ್ಲ. ಮುಂದೆಂದೋ ದಿವಸ ಮತ್ತೊಂದಿಷ್ಟು ಮಾಹಿತಿ ಸಿಗುತ್ತದೆ. ತಲೆಯಲ್ಲಿ ಅದೇನು ಚಕ್ರಗಳು ತಿರುಗುತ್ತವೆಯೋ ಏನೋ! ಮೊದಲಿನ ಮಾಹಿತಿ, ಈಗ ಸಿಕ್ಕ ಮಾಹಿತಿ ಎಲ್ಲ ಕೂಡಿ ಒಂದು ಸಮಗ್ರ ಚಿತ್ರಣ ಸಿಗುತ್ತದೆ. connecting the dots ಅನ್ನುತ್ತಾರಲ್ಲ ಹಾಗೆ.

ದಿವಾಕರ ಹೆಗಡೆ ವಿಷಯದಲ್ಲಿ ಹೀಗೆ ಆಗಿದ್ದು ೨೦೦೮ ರಲ್ಲಿ. ಅಗ್ನಿ ಶ್ರೀಧರ್ ಎಂಬ ಮಾಜಿ ಭೂಗತ ಜಗತ್ತಿನ ಡಾನ್ ಒಬ್ಬರು ತಮ್ಮ ಆತ್ಮಕಥೆಯಂತೆ ಇರುವ ಮೂರು ಸಂಪುಟಗಳ 'ದಾದಾಗಿರಿಯ ದಿನಗಳು' (೧,೨,೩) ಎಂಬ ಪುಸ್ತಕ ಬರೆದಿದ್ದರು. ತರಿಸಿ ಓದಿದ್ದೆ. ಅದರಲ್ಲಿ ಸಿಕ್ಕಿತ್ತು ನೋಡಿ ಇದೆಲ್ಲ ವಿಷಯ. ೧೯೮೬ ರಲ್ಲಿ ಏನು ದಿವಾಕರ ಹೆಗಡೆ ಕೊಲೆಯಾದಾಗ ಸುದ್ದಿ ಓದಿದ್ದೆನೋ ಅದೇ ಕೊನೆ. ನಂತರ ಅವನ ಬಗ್ಗೆ ತಿಳಿದಿದ್ದು ೨೦೦೮ ರಲ್ಲೇ. ಆವಾಗ ಒಂದು ಫುಲ್ ಪಿಕ್ಚರ್ ಬಂತು.

ಈಗ ಆ ಮೂರು ಸಂಪುಟಗಳ 'ದಾದಾಗಿರಿಯ ದಿನಗಳು' ಇಂಗ್ಲೀಷಿಗೆ ತರ್ಜುಮೆಯಾಗಿ  'MY DAYS IN THE UNDERWORLD RISE OF THE BANGALORE MAFIA' ಅಂತ ಬಂದಿದೆ. ಮೂಲಕ್ಕೆ ಚ್ಯುತಿ ಬರದಂತೆ ಅನುವಾದ ಮಾಡಲಾಗಿದೆ. ಕನ್ನಡದ ಪುಸ್ತಕಗಳು ಕೆಲವೊಂದು ಕಡೆ ತುಂಬಾ ಎಳೆದು ಬೋರ್ ಹೊಡೆಸುತ್ತಿದ್ದವು. ಅವನ್ನೆಲ್ಲ ಸಂಕ್ಷಿಪ್ತ ಮಾಡಿರುವದರಿಂದ ಒಳ್ಳೆ ಥ್ರಿಲ್ಲರ್ ಮೂವಿಯ ಸ್ಕ್ರಿಪ್ಟ್ ತರಹ ಇಂಗ್ಲೀಶ್ ಪುಸ್ತಕ ಓದಿಸಿಕೊಂಡು ಹೋಗುತ್ತದೆ. ಆಸಕ್ತರು ಓದಬಹುದು. ಎಲ್ಲೂ ಕ್ರೌರ್ಯವನ್ನು glorify ಮಾಡಿಲ್ಲ. ಸಿಂಪಲ್ ಆತ್ಮಕಥೆ - ಒಬ್ಬ ಸುಧಾರಿತ ಮಾಜಿ ರೌಡಿಯದು.

ಇನ್ನೂ ಕೆಲವು ಡಾಟ್ಸ್ ಕನೆಕ್ಟ್ ಮಾಡಿದರೆ ಇನ್ನೂ ಕೆಲವು ಮಾಹಿತಿ ಅರಿಯಬಹುದು. ದಿವಾಕರ ಹೆಗಡೆ ಬಿಟ್ಟು ಆಗ ಇನ್ನೂ ಮೂವರು ವಿದ್ಯಾರ್ಥಿ ಧುರೀಣರು ಇದ್ದರು. ಅವರಲ್ಲಿ ಬಿ.ಕೆ.ಹರಿಪ್ರಸಾದ ಅನ್ನುವವರು ಈಗ ದಿಲ್ಲಿಯಲ್ಲಿ ಪಾರ್ಲಿಮೆಂಟ್ ಮೆಂಬರ್. ಡೀಕೆ ಶಿವಕುಮಾರ್ ಈಗ ಕರ್ನಾಟಕದ ಇಂಧನ ಸಚಿವ. ಇನ್ನೊಬ್ಬ ಆರ್.ವಿ. ಹರೀಶ್ ಎಂಬುವವರೂ ಸಹಿತ ರಾಜಕಾರಣಿ. ಈ ಹರೀಶ್ ದಿವಾಕರ ಹೆಗಡೆ ಕೊಲೆ ಪ್ರಕರಣದಲ್ಲಿ ಆರೋಪಿ ಅಂತ ಫಿಟ್ಟಾಗಿ ಆಮೇಲೆ ನಿರ್ದೋಷಿ ಅಂತ ಖುಲಾಸೆಯಾಗಿ ಬಂದವರಂತೆ. ಬದುಕಿದ್ದರೆ ದಿವಾಕರ ಹೆಗಡೆ ಕೂಡ ಹೀಗೇ ಏನೋ ದೊಡ್ಡ ಮನುಷ್ಯ ಆಗಿರುತ್ತಿದ್ದನೋ ಏನೋ! ಅವನಿಗೆ ನಸೀಬ್ ಇರಲಿಲ್ಲ!

ಇಷ್ಟೆಲ್ಲ ಮಾಹಿತಿ ತಿಳಿದರೂ ಈ ದಿವಾಕರ ಹೆಗಡೆ ಹವ್ಯಕನೇ ಅನ್ನುವ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಅಲ್ಲ ಅವನು ಬಂಟರ ಪೈಕಿ ಅಂತ ಯಾರೋ ಹೇಳಿದ್ದರು ಅಂತ ನೆನಪು. ಇರಲಿ ಇನ್ನೂ ಒಂದು ದೊಡ್ಡ ಇಪ್ಪತ್ತು ವರ್ಷದ ನಂತರದ ಬ್ರೇಕಿನ ನಂತರ ತಿಳಿಯಬಹುದು. ಆವಾಗ ಮತ್ತೆ ಡಾಟ್ಸ್ ಕನೆಕ್ಟ್ ಮಾಡಿ ಮತ್ತೂ ಪರಿಪೂರ್ಣ ಮಾಹಿತಿ ಸಂಗ್ರಹಿಸಿದರಾಯಿತು. :)

* ಮೂರು ಸಂಪುಟಗಳ ಕನ್ನಡ ಪುಸ್ತಕ 'ದಾದಾಗಿರಿಯ ದಿನಗಳು' ಓದಿ ಮುಗಿಸಿದಾಗ ಬರೆದಿದ್ದ ಪುಸ್ತಕ ಪರಿಚಯದ ಬ್ಲಾಗ್ ಪೋಸ್ಟ್ ಇಲ್ಲಿದೆ. ಓದಿ.







3 comments:

Vimarshak Jaaldimmi said...


Interesting!

What about some other crime cases involving forest officers & apparently innocent citizens?

ವಿ.ರಾ.ಹೆ. said...

"ಯಾವ ದಿವಾಕರ ಹೆಗಡೆಯಾ? ಯಾರನ? ಕರ್ಜೀಮನೆಯಲ್ಲಿ ಪ್ರಭಾಕರ, ಮಧುಕರ ಹೇಳಿ ಇದ್ದ. ಕೆಳಗಿನ ಕೇರಿಯಲ್ಲಿ ಸತ್ನಾಣಣ್ಣಯ್ಯನ ಮಕ್ಕ ಭಾಸ್ಕರ, ಸುಧಾಕರ ಇದ್ದ. ದಿವಾಕರ ಹೇಳಿ ಯಾರೂ ಇದ್ದ ನೆನಪಿಲ್ಲಿಯೋ, ಅಂದು ಬಿಟ್ಟರು ಅಮ್ಮ."

ROFL. :D

ಸದರಿ ವ್ಯಕ್ತಿ ಹವ್ಯಕ ಆಲ್ಲ ಅನ್ನಿಸುತ್ತದೆ. ಆ ಕಾಲದಲ್ಲಿ ಹವ್ಯಕ್ರು ಇನ್ನೂ ಬೆಂಗಳೂರಿಗೆ ದಾಂಗುಡಿಯಿಟ್ಟಿರಲಿಲ್ಲ. ಹಂಗೇನಾದ್ರೂ ಬಂದಿದ್ದರೂ ಪಂಟರುಗಳಾಗುವಷ್ಟು ಇರಲಿಲ್ಲ ಅನ್ನಿಸುತ್ತದೆ. ಆದರೂ ಯಾರಿಗ್ಗೊತ್ತು ?!! ಬೇಕು ಅಂದ್ರೆ ಇದನ್ನು ಫೈಂಡ್ ಔಟ್ ಮಾಡುವ ಕೆಲಸ initiate ಮಾಡನ. ! :P

Mahesh Hegade said...

ಹೇ!!ಹೇ!!!

ಹಾಂಗೆ ಮಾಡು. ಯಾರಾರು ಸಿಕ್ಕರೆ ಹಳೆ ಸುದ್ದಿ ಕೇಳು.
ದಿವಾಕರ ಹೆಗಡೆ ಬಗ್ಗೆ ಗೊತ್ತಾಗ್ಕು :)