Thursday, March 06, 2014

ರಾಹುಲ್ ಭಟ್ ಬುಡಕ್ಕೆ ಬಿಸಿ, ಮಹೇಶ್ ಭಟ್ ಮಂಡೆ ಬಿಸಿ

26/11/2008 ರ ಮುಂಬೈ ದಾಳಿ ಆದ ಮೇಲಿನ ಆತಂಕದ ದಿನಗಳು ಅವು. ಸಮುದ್ರದ ಮೂಲಕ ಮುಂಬೈ ನುಸುಳಿದ್ದ LeT (ಲಷ್ಕರ್-ಏ-ತೈಬಾ) ಉಗ್ರರು ಮುಂಬೈನಲ್ಲಿ ದೊಡ್ಡ ಮಟ್ಟದ ಧಮಾಕಾ ಮಾಡಿ, ಇಡೀ ವಿಶ್ವವೇ ಹಾಂ! ಅನ್ನುವಂತೆ ಪ್ರೇತ ನರ್ತನ ಮಾಡಿದ್ದರು. ಉಗ್ರರ ಪೈಕಿ ಅಜ್ಮಲ್ ಕಸಬ್ ಒಬ್ಬ ಸಿಕ್ಕಿ ಬಿದ್ದಿದ್ದ. ಅವನೋ ಕೂಲಿ ಮಟ್ಟದ ಉಗ್ರರ ಕಾರ್ಯಕರ್ಮಿ ಅಷ್ಟೇ. ಬಂದೂಕು ಹಿಡಿದು, ತಲೆಯಲ್ಲಿ ಮತಾಂಧತೆಯ ದ್ವೇಷ ತುಂಬಿಸಿಕೊಂಡು ಬಂದು, ದೊಡ್ಡ ಹತ್ಯಾಕಾಂಡ ಮಾಡಿ ಸಿಕ್ಕಿ ಬಿದ್ದಿದ್ದ. ಅವನಿಗೆ ದಾಳಿಯ ಹಿಂದಿನ ಸಂಚು, ಸೂತ್ರಧಾರರರು, ರಹಸ್ಯಗಳು ಏನೂ ಗೊತ್ತಿರಲಿಲ್ಲ. 26/11 ದಾಳಿಯ ಹಿನ್ನಲೆಯ ಬಗ್ಗೆ ಎಲ್ಲ ಪೋಲೀಸ್, ಬೇಹುಗಾರಿಕೆ ಸಂಸ್ಥೆಗಳು ಕತ್ತಲಲ್ಲಿ ತಡಕಾಡುತ್ತಿದ್ದವು, ಒಂದು ದೊಡ್ಡ ಸುಳಿವಿಗಾಗಿ.

ಅಷ್ಟರಲ್ಲಿ ಅಮೇರಿಕಾದ FBI ನಿಂದ ಒಂದು ಖತರ್ನಾಕ ಸುದ್ದಿ ಬಂತು. ಡೇವಿಡ್ ಕೋಲ್ಮನ್ ಹ್ಯಾಡ್ಲೀ ಅನ್ನುವ ಪಾಕಿಸ್ತಾನಿ ಮೂಲದ ಅಮೇರಿಕನ್ ಪ್ರಜೆ ಈ 26/11/2008 ರ  ದಾಳಿ ಆಗುವ ಮೊದಲು ಎರಡು ಮೂರು ವರ್ಷಗಳಿಂದ ಭಾರತಕ್ಕೆ ಬಂದು ಹೋಗಿ ಮಾಡುತ್ತಿದ್ದ. ಅವನೇ ರಹಸ್ಯವಾಗಿ ಮುಂಬೈನ ಎಲ್ಲ ಮಾಹಿತಿ ಸಂಗ್ರಹಿಸಿ LeT ಉಗ್ರರಿಗೆ ಕೊಟ್ಟಿದ್ದ. ಅವನು ಕೊಟ್ಟಿದ್ದ ಮಾಹಿತಿ ಉಪಯೋಗಿಸಿಯೇ ಪಾಕಿ ಉಗ್ರರು ಅಷ್ಟು ಕರಾರುವಕ್ಕಾಗಿ ಪ್ಲಾನ್ ಮಾಡಿ, ಮುಂಬೈನಲ್ಲಿ ದೊಡ್ಡ ಮಟ್ಟದ ಕಾರ್ಯಾಚರಣೆ ಮಾಡಿ, ಇಡೀ ದೇಶವನ್ನೇ ಸುಮಾರು ಮೂರು ದಿವಸಗಳ ಕಾಲ ಪೂರ್ತಿಯಾಗಿ ಥಂಡಾ ಹೊಡೆಸಿದ್ದರು. ಪೂರ್ತಿ ಸ್ಥಬ್ದಗೊಳಿಸಿದ್ದರು.

ಡೇವಿಡ್ ಕೋಲ್ಮನ್ ಹ್ಯಾಡ್ಲೀ

ಆಯಿತು. ಪಾಕಿಗಳು ಇದರ ಹಿಂದೆ ಇದ್ದಾರೆ ಅಂತ ಮೊದಲೇ ಗೊತ್ತಿತ್ತು. ಈಗ ಪಾಕಿ ಮೂಲದ ಅಮೇರಿಕನ್ ಒಬ್ಬ ಸಹಿತ ಇದ್ದಾನೆ ಅಂತ ಆಯಿತು, ಅಂತ ಹೇಳಿ ಈ ಡೇವಿಡ್ ಕೋಲ್ಮನ್ ಹ್ಯಾಡ್ಲೀ ಅನ್ನುವನ ಮಾಹಿತಿಯನ್ನು ಸಹಿತ ಪೋಲೀಸರು ತನಿಖಾ ಡೇಟಾಬೇಸ್ ಒಳಗೆ ಸೇರಿಸುತ್ತಿದ್ದಾಗ ಇನ್ನೊಂದು ಖತರ್ನಾಕ್ ಮಾಹಿತಿ ಬಂದು ಸೇರಿಕೊಂಡಿತು.

ಅದೇನೆಂದರೆ.....

ಈ ಡೇವಿಡ್ ಕೋಲ್ಮನ್ ಹ್ಯಾಡ್ಲೀ ಭಾರತದಲ್ಲಿ 'ರಾಹುಲ್' ಅನ್ನುವನ ಸಂಗಡ ಸತತ ಸಂಪರ್ಕದಲ್ಲಿದ್ದ!!!!

ಇದು ದೊಡ್ಡ ಮಟ್ಟದ ಸ್ಪೋಟಕ ಮಾಹಿತಿ. ಅಲ್ಲಿಯವರೆಗೆ 26/11 ಉಗ್ರರಿಗೆ ಭಾರತದ ಯಾರೊಂದಿಗೂ ಸಂಪರ್ಕವಿದ್ದ ಬಗ್ಗೆ ಏನೂ ಮಾಹಿತಿ ಇರಲಿಲ್ಲ.

ಯಾರು ಈ ರಾಹುಲ್? ಏನು ಮಾಡಿದ್ದ?

ಎಲ್ಲ ತನಿಖಾ ಸಂಸ್ಥೆಗಳು ದೊಡ್ಡ ಮಟ್ಟಿಗೆ ತಲೆ ಕೆಡಿಸಿಕೊಂಡವು.

ರಾಹುಲ್ ಅನ್ನುವ ಹೆಸರಿನ ದೊಡ್ಡ ದೊಡ್ಡ ಜನರಿದ್ದರು. ರಾಹುಲ್ ಗಾಂಧಿ, ರಾಹುಲ್ ದ್ರಾವಿಡ್, ರಾಹುಲ್ ಸಿಂಗ್ (ಲೇಖಕ ಖುಷ್ವಂತ ಸಿಂಗರ ಮಗ). ಹೀಗಿರುವಾಗ 26/11 ದಾಳಿಯ ಸಂಚು ರೂಪಿಸುವದರಲ್ಲಿ ಮಹತ್ತರ ಪಾತ್ರ ವಹಿಸಿದ್ದ ಪಾತಕಿ ಡೇವಿಡ್ ಕೋಲ್ಮನ್ ಹ್ಯಾಡ್ಲೀ ಅನ್ನುವವ ಯಾವದೋ ರಾಹುಲ್ ಅನ್ನುವವನ ಜೊತೆ ನಿರಂತರ ಸಂಪರ್ಕದಲ್ಲಿದ್ದ ಅನ್ನುವದು ದೊಡ್ಡ ವಿಷಯವೇ ಆಯಿತು.

ಈ ಸುದ್ದಿ  ಹೇಗೋ ಲೀಕ್ ಆಗಿ ಮಾಧ್ಯಮಗಳಿಗೆ ಹಬ್ಬವೋ ಹಬ್ಬ. ಟೀವಿ ಪಂಡಿತರ ತಲೆಗೊಂದು ಮಾತು, ಅಭಿಪ್ರಾಯ. ತನಿಖಾ ಸಂಸ್ಥೆಗಳಿಗೆ ದೊಡ್ಡ ಮಟ್ಟದ ತಲೆನೋವು.

ಡೇವಿಡ್ ಕೋಲ್ಮನ್ ಹ್ಯಾಡ್ಲೀ ಅನ್ನುವ ಪಾಕಿಸ್ತಾನ ಮೂಲದ ಅಮೆರಿಕನ್ ಒಬ್ಬವನ ಜೊತೆ ಭಾರತದ ರಾಹುಲ್ ಅನ್ನುವನ ಸಂಪರ್ಕ ಇತ್ತು ಮತ್ತು ಭಾರತದ ಎಲ್ಲಾ ತನಿಖಾ ಸಂಸ್ಥೆಗಳು ಆ ರಾಹುಲ್ ಯಾರು ಅಂತ ಹುಡುಕುತ್ತಿವೆ, ಅಂತ ಯಾವಾಗ ಟೀವಿಯಲ್ಲಿ, ಪತ್ರಿಕೆಗಳಲ್ಲಿ ಸುದ್ದಿ ನಿರಂತರವಾಗಿ ಬರತೊಡಗಿತೋ ಆವಾಗ ನಿಜವಾದ ರಾಹುಲ್ ಬೆಚ್ಚಿ ಬಿದ್ದ. ಬುಡದಲ್ಲೇ ಬೆಂಕಿ ಹತ್ತಿ ಬ್ಯಾಕ್ ಬ್ಲಾಸ್ಟ್ ಆದ ಅನುಭವ ಅವನಿಗೆ.

ಯಾರಾಗಿದ್ದ ಆ ರಾಹುಲ್? ಅದೂ ಇಡೀ ದೇಶ ಹುಡುಕುತ್ತಿದ್ದ ರಾಹುಲ್?

ಅವನೇ ರಾಹುಲ್ ಭಟ್. ಸಿನೆಮಾ ನಿರ್ದೇಶಕ ಮಹೇಶ್ ಭಟ್ ಅವರ ಮೊದಲ ಹೆಂಡತಿ ಮಗ.

ರಾಹುಲ್ ಭಟ್

ಒಂದು ದಿವಸ ರಾಹುಲ್ ಭಟ್ ತನ್ನ ತಂದೆ ಮಹೇಶ ಭಟ್ರಿಗೆ ಫೋನ್ ಮಾಡಿ, ಅಪ್ಪಾ! ಅಂದ.

ತಂದೆ ಮಕ್ಕಳಲ್ಲಿ ಸಂಬಂಧ ಅಷ್ಟಿರಲಿಲ್ಲ. ಅಷ್ಟಕಷ್ಟೇ ಅನ್ನುವಂತಿತ್ತು. ರಾಹುಲ್ ಭಟ್ ನ ತಾಯಿ ಕಿರಣ್ ಮಹೇಶ್ ಭಟ್ ನ ಮೊದಲ ಹೆಂಡತಿ. ಅವಳಿಗೆ ಎರಡು ಮಕ್ಕಳು ಕರುಣಿಸಿದ ಮೇಲೆ ದೊಡ್ಡ ಭಟ್ಟರು ಪ್ರೊತಿಮಾ ಬೇಡಿ, ಪರ್ವೀನ ಬಾಬಿ ಇತ್ಯಾದಿ ನಟಿಮಣಿಯರೊಂದಿಗೆ ಏನೇನೋ ಸಂಬಂಧ ಇಟ್ಟುಕೊಂಡು, ಕೊನೆಗೆ ಸೋನಿ ರಾಜಧನ್ ಎಂಬ ನಟಿಯೊಂದಿಗೆ ಮದುವೆಯಾಗಿ ಬೇರೆನೇ ಇದ್ದರು. ಮೊದಲ ಹೆಂಡತಿ ಮಕ್ಕಳಾದ ಪೂಜಾ, ರಾಹುಲ್ ಅವರೆಲ್ಲರೊಂದಿಗೆ ಮಹೇಶ್ ಭಟ್ಟರ ಸಂಬಂಧ ಅಷ್ಟಕಷ್ಟೇ ಇತ್ತು. ರಾಹುಲ್ ಭಟ್ಟನಿಗೆ ಅಪ್ಪ ಮಹೇಶ್ ಭಟ್ಟನ ಮೇಲೆ ಸಾಕಷ್ಟು ಮುನಿಸು, ಅಸಮಧಾನ, ತನ್ನ ತಾಯಿಯನ್ನು ಬಿಟ್ಟವ ಅಂತ ಕೋಪ ಎಲ್ಲ ಇತ್ತು. ಆದರೂ ಈಗ ಅಪ್ಪ ನೆನಪಾಗಿದ್ದ. ದೊಡ್ಡ ಮಟ್ಟದ ಟೆರರಿಸ್ಟ್ ಲಫಡಾ ಒಂದು ಬುಡಕ್ಕೇ ಬಂದಾಗ ಅಪ್ಪ ಬೆಪ್ಪ ಎಲ್ಲ ನೆನಪಾದರು ರಾಹುಲ್ ಭಟ್ ನಿಗೆ.

ಏನು ಮಗನೇ? ಅಂದ ಆ ಕಡೆಯಿಂದ ದೊಡ್ಡ ಭಟ್ ಮಹೇಶ್ ಭಟ್.

ಅಪ್ಪಾ, ದೊಡ್ಡ ಪ್ರಾಬ್ಲಮ್ ಆಗಿಬಿಟ್ಟಿದೆ. ಏನು ಮಾಡಬೇಕೋ ತಿಳಿಯುತ್ತಿಲ್ಲ. ಸಿಕ್ಕಾಪಟ್ಟೆ tension ಆಗಿ ತಲೆ ಸಿಡಿದೇ ಹೋಗುತ್ತಿದೆ, ಅಂದ ಸಣ್ಣ ಭಟ್ ಫೋನಿನಲ್ಲೇ ಕುಂಯ್ ಕುಂಯ್ ಅಂದ.

ಏನಾಯಿತು ಮಗನೇ? ಅಂತ ಕಿವಿ ನಿಮಿರಿಸಿಕೊಂಡು ಕೇಳಿದ ದೊಡ್ಡ ಭಟ್.

ರಾಹುಲ್ ಭಟ್ ಹೇಳಿದ್ದನ್ನು ಕೇಳಿದ ಮಹೇಶ್ ಭಟ್ ಕೂಡ ಫುಲ್ ದಂಗಾಗಿ ಹೋದ. ಮಗ ಹೇಳಿದ ಸುದ್ದಿ ಕೇಳಿ, ಅದನ್ನು ತಿಳಿದುಕೊಂಡು, ಅರಗಿಸಿಕೊಳ್ಳಲು ಅವನಿಗೆ ಸುಮಾರು ಹೊತ್ತೇ ಬೇಕಾಯಿತು.

ಎಂತಾ ಕೆಲಸ ಮಾಡಿಕೊಂಡು ಕೂತೆಯೋ ಮಗನೇ? ಇದರ ಮುಂದಿನ ಪರಿಣಾಮ ಏನಾಗುತ್ತದೆ ಅಂತ ನೆನಿಸಿಕೊಂಡರೆ ನನಗೇ ಭಯವಾಗುತ್ತದೆ. ಆದರೆ ನಿನ್ನದೇನೂ ತಪ್ಪಿಲ್ಲ ಅಂದ ಮೇಲೆ ಹೆದರಿಕೆ ಏಕೆ? ಒಂದು ಕೆಲಸ ಮಾಡು, ಅಂತ ಹೇಳಿ ದೊಡ್ಡ ಭಟ್ ಮಾತು ನಿಲ್ಲಿಸಿದ.

ಏನು ಮಾಡ್ಲೀ ಡ್ಯಾಡಿ? ಅಂತ ಸಣ್ಣ ಭಟ್ ಅತ್ತು ಕೇಳಿದ.

ಮುಂಬೈ ಪೋಲೀಸ್ ಕ್ರೈಂ ಬ್ರಾಂಚಿನ ಜಾಯಿಂಟ್ ಕಮಿಷನರ್ ರಾಕೇಶ ಮಾರಿಯಾ ನನಗೆ ತಕ್ಕ ಮಟ್ಟಿಗೆ ಪರಿಚಯಸ್ಥರು. ಅವರಿಗೆ ಫೋನ್ ಮಾಡಿ appointment ತೆಗೆದುಕೊಂಡು, ನಿನಗೆ ತಿರುಗಿ ಫೋನ್ ಮಾಡುತ್ತೇನೆ. ಹೋಗಿ ಅವರನ್ನು ಭೆಟ್ಟಿಯಾಗಿ ಮಾತಾಡು. ಮುಂದಿನದು ದೇವರಿಗೇ ಬಿಡಬೇಕು ಅಷ್ಟೇ. ನಮ್ಮ ಕೈಲಿಲ್ಲ. ದೊಡ್ಡ ಮಟ್ಟದ ಲಫಡಾದಲ್ಲಿ ಸಿಕ್ಕಿದ್ದೀಯ, ಅಂತ ಹೇಳಿದ ದೊಡ್ಡ ಭಟ್ ಹಣೆ ಮೇಲಿನ ಬೆವರು ಒರಸಿಕೊಳ್ಳುತ್ತ ಫೋನ್ ಇಡುವ ಮುಂಚೆ ಇನ್ನೊಂದು ಮಾತು ಹೇಳುವದು ಮರೆಯಲಿಲ್ಲ.

ರಾಹುಲ್ ಒಂದು ಮಾತು, ಅಂದ ಮಹೇಶ ಭಟ್ ಮಾತಿನ ಮಹತ್ವ ಮಗನ ತಲೆಯಲ್ಲಿ ಇಳಿಯಲಿ ಅನ್ನುವ ಹಾಗೆ ಒಂದು ದೊಡ್ಡ ಅಲ್ಪ ವಿರಾಮ ಹಾಕಿದ.

ಏನಪ್ಪಾ ಅದು? ಅಂದ ರಾಹುಲ್.  ಒಂದಲ್ಲ ಹತ್ತು ಮಾತಾದರು ಹೇಳು, ಆದರೆ ಈ ಕಂಟಕದಿಂದ ಪಾರಾಗೋ ಬಗೆ ತೋರು ತಂದೆ, ಅನ್ನುವ ದನಿಯಲ್ಲಿ ಕೇಳಿದ.

ರಾಕೇಶ ಮಾರಿಯಾ ಪೋಲೀಸ್ ಸಾಹೇಬರನ್ನು ಭೆಟ್ಟಿಯಾದಾಗ ಯಾವದನ್ನೂ ಮುಚ್ಚಿಡೋ ಹಾಗೆ ಇಲ್ಲ. ಎಲ್ಲ ಇದ್ದಕ್ಕಿದ್ದ ಹಾಗೆ ಪೂರ್ತಿಯಾಗಿ, ಸತ್ಯವನ್ನು ಮಾತ್ರ ಹೇಳುವೆ, ಸತ್ಯವನ್ನು ಬಿಟ್ಟು ಏನನ್ನೂ ಹೇಳುವದಿಲ್ಲ ಅನ್ನುವ ಹಾಗೆ ಪೂರ್ತಿ ಸತ್ಯ ಹೇಳು. ಅವರು ಕೇಳಿದ ಪ್ರಶ್ನೆಗಳಿಗೆ ಸತ್ಯವಾಗಿಯೇ ಉತ್ತರ ಕೊಡು. ನಿನ್ನದು ಏನೂ ತಪ್ಪಿಲ್ಲ ಅಂತ ಅವರಿಗೆ ಸಹಜವಾಗಿ ಮನವರಿಕೆಯನ್ನು ಮಾಡಿಕೊಡು. ಅವರಿಗೆ ನೀನು ಹೇಳಿದ್ದು ಸತ್ಯ ಅಂದರೆ ನೀನು ಬಚಾವ್. ಇಲ್ಲಾಂದ್ರೆ ನಿನ್ನನ್ನು ಸದ್ಯದ ಮಟ್ಟಿಗೆ ಯಾರೂ ಬಚಾವ್ ಮಾಡಲಾರರು, ಅಂದ ಮಹೇಶ ಭಟ್ಟ ಫೋನಿಟ್ಟ.

ಆ ಮೇಲೆ ಮಹೇಶ ಭಟ್ಟ ರಾಕೇಶ ಮಾರಿಯಾರನ್ನು ಸಂಪರ್ಕಿಸಿ, 26/11 ರ ಬಗ್ಗೆ ತಮ್ಮ ಮಗ ರಾಹುಲನಿಗೆ ಏನೋ ಮಾಹಿತಿ ಗೊತ್ತಿದೆಯೆಂದು ಹೇಳಿ ಅವರ appointment ತೆಗೆದುಕೊಂಡ. ಅದನ್ನು ಮಗ ರಾಹುಲನಿಗೆ ತಿಳಿಸಿ, ಮತ್ತೊಮ್ಮೆ ಧೈರ್ಯ ತುಂಬಿ, ಹೋಗಿ ರಾಕೇಶ ಮಾರಿಯಾರನ್ನು ಭೆಟ್ಟಿಯಾಗು ಅಂದ. ಆಲ್ ದಿ ಬೆಸ್ಟ್ ಹೇಳುವದನ್ನು ಮರಿಯಲಿಲ್ಲ.

ರಾಹುಲ್ ಜೊತೆಗೆ ಇನ್ನೊಬ್ಬ ಇದ್ದ. ಅವನ ಹೆಸರು ಸುದ್ದಿಯಲ್ಲಿ ಬಂದಿರಲಿಲ್ಲ. ಆದ್ರೆ ಪಾತಕಿ ಡೇವಿಡ್ ಕೋಲ್ಮನ್ ಹ್ಯಾಡ್ಲೀ ಅವನ ಜೊತೆಗೂ ತುಂಬ ಕ್ಲೋಸಾಗಿದ್ದ. ಅವನೇ ಬಾಡಿ ಬಿಲ್ಡರ್, ಜಿಮ್ ಟ್ರೈನರ್, ವಿಲಾಸ್ ವಾರಕ್ ಎಂಬ ದೈತ್ಯ ದೇಹಿ. ರಾಹುಲ್ ಭಟ್ಟನ ಆಪ್ತ ಮಿತ್ರ. ರಾಹುಲ್ ಭಟ್ಟ, ವಿಲಾಸ್ ವಾರಕ್ ಮತ್ತು ಡೇವಿಡ್ ಕೋಲ್ಮನ್ ಹ್ಯಾಡ್ಲೀ - ಈ ಮೂವರು ಸ್ನೇಹಿತರು. ಡೇವಿಡ್ ಕೋಲ್ಮನ್ ಹ್ಯಾಡ್ಲೀ ಅಂತಹ ಉಗ್ರನೊಂದಿಗೆ ತಾನು ಸ್ನೇಹ ಮಾಡಿದ್ದೆ, ಅವನು ಮುಂಬೈ ದಾಳಿಯ ಹಿಂದೆ ಇದ್ದ, ಈಗ ಪೊಲೀಸರು ಎಲ್ಲರನ್ನೂ ಹುಡುಕುತ್ತಿದ್ದಾರೆ ಅನ್ನುವ ವಿಷಯ ತಿಳಿದ ವಿಲಾಸ್ ವಾರಕ್ ಫುಲ್ ಹೆದರಿ, ಅವನಿಗೆ ನರ್ವಸ್ ಬ್ರೇಕ್ ಡೌನ್ ಆಯಿತು. ಪೊಲೀಸರು, ತನಿಖಾ ಏಜೆನ್ಸಿಗಳ ಕೈಗೆ ಸಿಕ್ಕು, ಚಿತ್ರಹಿಂಸೆ ಅನುಭವಿಸಿ, ರಾಷ್ಟ್ರದ್ರೋಹಿ ಅಂತ ಬ್ರಾಂಡ್ ಆಗಿ, ಸತ್ತು ಬದುಕುವದಕಿಂತ ಆತ್ಮಹತ್ಯೆ ಮಾಡಿಕೊಂಡು ಬಿಡುವದೇ ವಿಲಾಸನಿಗೆ ಲೇಸೆನಿಸಿತ್ತು. ರಾಹುಲ್ ಭಟ್ ನೇ ಸಮಾಧಾನ ಮಾಡಿದ್ದ. ಕ್ರೈಂ ಬ್ರಾಂಚಿನ ಟ್ರೀಟ್ಮೆಂಟ್ ವಿಲಾಸ್ ವಾರಕ ಬಹಳ ಬಾಲಿವುಡ್ ಸಿನೆಮಾಗಳಲ್ಲಿ ನೋಡಿದ್ದ ಅಂತ ಅನ್ನಿಸುತ್ತದೆ. 'ಬ್ಲಾಕ್ ಫ್ರೈಡೆ', 'ಅಬ್ ತಕ್ ಛಪ್ಪನ್' ತರಹದ ಚಿತ್ರಗಳನ್ನು ನೋಡಿದರೆ ಕ್ರೈಂ ಬ್ರಾಂಚ್ ಪೊಲೀಸರು ಪಾತಕಿಗಳ ಬಾಯಿ ಹೇಗೆ ಬಿಡಿಸುತ್ತಾರೆ ಅಂತ ತಿಳಿಯುತ್ತದೆ. ತಿಳಿಯುವದೊಂದೇ ಅಲ್ಲ ಇವರ ಸಹವಾಸ ಬೇಡವೇ ಬೇಡ ಅಂತ ದೊಡ್ಡ ನಮಸ್ಕಾರ ಹೊಡೆಯುವವರೇ ಜಾಸ್ತಿ. ವಿಲಾಸ್ ವಾರಕನಿಗೂ ಹಾಗೆ ಅನ್ನಿಸಿದ್ದರೆ ಏನು ಆಶ್ಚರ್ಯ?

appointment ಇದ್ದ ದಿವಸ ರಾಹುಲ್ ಭಟ್ ಮತ್ತು ವಿಲಾಸ್ ವಾರಕ್ ಮುಂಬೈನ ಕ್ರೈಂ ಬ್ರಾಂಚ್ ಆಫೀಸಿಗೆ ಹೋದರು. ಸ್ವಲ್ಪ ಸಮಯದ ನಂತರ ರಾಕೇಶ ಮಾರಿಯಾ  ಅವರ ಆಫೀಸ್ ಒಳಗಡೆ ಅವರನ್ನು ಕರೆದು ಬಿಡಲಾಯಿತು. ಸಿಂಹದ ಗುಹೆಯಲ್ಲಿ ಬಿಟ್ಟ ಮೇಕೆಗಳ ಸ್ಥಿತಿ ರಾಹುಲ್ ಮತ್ತು ವಿಲಾಸರದ್ದು. ಥರ ಥರ ನಡುಗುತ್ತ ಹೋದರು. ಮುಂಬೈ ಕ್ರೈಂ ಬ್ರಾಂಚ್ ಅಂದರೆ ಆ ಮಟ್ಟದ ಹೆದರಿಕೆ ಎಲ್ಲರಿಗೆ. ಆ ಪರಿ ಗೂಂಡಾಗಳ ಎನ್ಕೌಂಟರ್, ರೌಡಿಗಳ ಮರ್ದನ, ಟೆರರಿಸ್ಟಗಳ ಬಂಧನ ಮಾಡಿ ಲಿವಿಂಗ್ ಲೆಜೆಂಡ್ ಆಗಿದ್ದ ಪೋಲೀಸ್ ಆಫೀಸರ್ ರಾಕೇಶ ಮಾರಿಯಾ ಅಂದ್ರೆ ಘಟಾನುಘಟಿ ನುರಿತ ಕ್ರಿಮಿನಲ್ಲು ಗಳೇ ನಡುಗಿ ಹೋಗುತ್ತಿದ್ದರು. ಇನ್ನು ರಾಹುಲ್, ವಿಲಾಸರಂತಹ ಪಡ್ಡೆಗಳ ಗತಿ ಏನು?

ರಾಕೇಶ ಮಾರಿಯಾ ಚೇಂಬರ್ ಒಳಗೆ ಇರಲಿಲ್ಲ. ಗವ್ವೆನ್ನುವ ಮೌನ ಇಬ್ಬರೂ ಪಡ್ದೆಗಳನ್ನು ಮತ್ತೂ ಆತಂಕಕ್ಕೆ ತಳ್ಳಿತು. ಬಾಗಿಲು ತಳ್ಳಿಕೊಂಡು ಎತ್ತರಕ್ಕೆ, ನೇರವಾಗಿದ್ದ, ಮಾರಿಯಾ ಒಳಗೆ ಬಂದರು. ನಮಸ್ಕಾರ ಸರ್! ಅನ್ನುವ ಹಾಗೆ ರಾಹುಲ್, ವಿಲಾಸ್ ಎದ್ದು ನಿಂತು ಏನೋ ವಂದಿಸಿದರು. ಧಕ್, ಧಕ್ ಅನ್ನುತ್ತಿದ್ದ ಎದೆ ಗುಂಡಿಗೆ ಬಾಯಿಗೆ ಬಂದ ಅನುಭವ. ಅರಿಭಯಂಕರ ಮಾರಿಯಾ ಸಾಹೇಬರ ಮುಂದೆ ನಿಲ್ಲುವದು ಅಂದ್ರೆ ಸುಮ್ಮನೇನಾ? ಎಂತೆಂತದೋ ಜನರ ಏನೇನೋ ಒದ್ದೆಯಾಗಿ, ಏನೆಲ್ಲ ನಿಕಾಲಿಯಾಗಿ ಬಿಟ್ಟಿತ್ತು ಅವರ ಮುಂದೆ. ಇನ್ನು ಈ ಎರಡು ಪಡ್ಡೆ ಹುಡುಗರ ಗತಿ, ಅಷ್ಟೇ!

ರಾಕೇಶ ಮಾರಿಯಾ ಬಂದು ಕೂತವರೇ, ಕೊಂಚ ಗತ್ತಿನಿಂದಲೇ ನೋಡಿ, ರಾಹುಲ್, ವಿಲಾಸರಿಗೆ ಕೂಡಲು ಹೇಳಿದರು. ಇಬ್ಬರೂ ಕೂತರು.

ಮಾರಿಯಾ ತಮ್ಮ ತೀಕ್ಷ್ಣ ದೃಷ್ಟಿ ಬೀರುತ್ತ, ದುರು ದುರು ದಿಟ್ಟಿಸುತ್ತ, ಏನು? ಏನು ಸಮಾಚಾರ? ಅಂತ ಬಿಗುವಾಗೇ ಕೇಳಿದರು.

ಸರ್ssssssssss! ಅನ್ನುತ್ತ ವಿಲಾಸ್ ವಾರಕ್ ಅಳಲು ಶುರು ಮಾಡಿಬಿಟ್ಟ. ಮಾರಿಯಾ ಬಿಟ್ಟು ಬೇರೆ ಯಾರೋ ಆಗಿದ್ದರೆ, ಅರೆ! ಏನಾಯಿತು ಮಾರಾಯಾ? ನಾನೇನು ಮಾಡಿದೆ? ಹಾಂ? ಯಾಕೆ ಅಳೋಕೆ ಶುರು ಮಾಡಿಬಿಟ್ಟೆ? ಅಂತ ರಮಿಸಲು ಬರುತ್ತಿದ್ದರೋ ಏನೋ. ಆದರೆ ಅವರು ರಾಕೇಶ ಮಾರಿಯಾ. ಅದೂ ಮುಂಬೈ ಪೋಲೀಸ್ ಕ್ರೈಂ ಬ್ರಾಂಚ್ ಜಾಯಿಂಟ್ ಕಮಿಷನರ್. 26/11 ತನಿಖೆಯ ಪೂರ್ತಿ ಜವಾಬ್ದಾರಿ ಅವರ ಮೇಲೆ ಇದೆ. ಹೀಗಿದ್ದಾಗ ಯಾರೋ ಪಡ್ಡೆ ಹುಡುಗ ಬಂದು ಟೈಮ್ ವೇಸ್ಟ್ ಮಾಡುತ್ತಿರುವದು ಅಲ್ಲದೆ ಮಾತಿಲ್ಲದೆ ಅಳಲು ಶುರು ಮಾಡಿ ಬಿಟ್ಟಿದ್ದಾನೆ. ಕರ್ಮ! ಕರ್ಮ! ಅಂತ ಮನದಲ್ಲೇ ಅಂದುಕೊಂಡು, ರಾಹುಲ್ ಕಡೆ ನೋಡಿ, ಏನು? ಅಂದರು.

ರಾಹುಲ್ ಭಟ್ಟ ಸಹಿತ ಒಳ ಒಳಗೆ ಹೆದರಿ ಹೆಮಾರಿ ಹೋಗಿದ್ದರೂ ಏನೋ ಮಾಡಿ ಎಲ್ಲಿಂದಲೋ ಇದ್ದ ಬಿದ್ದ ಧೈರ್ಯ ಸ್ವಲ್ಪ ತಂದುಕೊಂಡ. ಉಗುಳು ನುಂಗೇ ನುಂಗಿದ. ರಾಕೇಶ ಮಾರಿಯಾ ಮತ್ತೆ ದಿಟ್ಟಿಸಿದರು. ಇನ್ನೂ ಮಾತಾಡಲಿಲ್ಲ ಅಂದ್ರೆ ಎದ್ದು ಬಂದು ಒದ್ದೇ ಬಿಟ್ಟಾರು ಅಂತ ಅಂಜಿದ ರಾಹುಲ್ ಮಾತಾಡಲು ಶುರು ಮಾಡಿದ.

ಸಾರ್! ಡೇವಿಡ್ ಕೋಲ್ಮನ್ ಹ್ಯಾಡ್ಲೀ ಸಂಪರ್ಕದಲ್ಲಿದ್ದ ರಾಹುಲ್ ನಾನೇ ಸಾರ್! ಅಂದು ಸುಮ್ಮನಾದ.

ಹಾಂ!!! ಅಂತ ಅಬ್ಬರಿಸಿದರು ಮಾರಿಯಾ.

ಅವರ ಇಡೀ ಪೋಲೀಸ್ ವ್ಯವಸ್ಥೆ ಇಡೀ ದೇಶ, ಇತರೆ ಸಂಸ್ಥೆಗಳು ವಿದೇಶ ಎಲ್ಲ 'ಆ ರಾಹುಲ್' ಸಲುವಾಗಿ ಜಾಲಾಡುತ್ತಿದ್ದರೆ ಬೇಕಾಗಿದ್ದ ರಾಹುಲ್, ಅದೂ ಮಹೇಶ ಭಟ್ ಎಂಬ ಖ್ಯಾತ ಸಿನಿಮಾ ನಿರ್ದೇಶಕರ ಮಗ, ಮಾಡೆಲ್, ನಟ ಮುಂದೆ ಬಂದು ಕೂತು ತಾನೇ ಅದು ಅನ್ನುತ್ತಿದ್ದಾನೆ!!!

ನೋಡು! ಮೊದಲಿಂದ ಪೂರ್ತಿಯಾಗಿ ಹೇಳು. ಏನಾದರೂ ಮುಚ್ಚಿಟ್ಟೆ ಅದು ಇದು ಅಂದ್ರೆ ಅಷ್ಟೇ ಮತ್ತೆ, ಅಂತ ತಮ್ಮ ಕ್ರೈಂ ಬ್ರಾಂಚ್ ಧಮಕಿ ಲೈಟ್ ಆಗಿ ಕೊಟ್ಟರು. ಅಷ್ಟರಲ್ಲಿ ಮಾರಿಯಾ ಅವರನ್ನು ನೋಡಿದಾಕ್ಷಣ ಸತ್ತೆನೋ  ಅಂತ ಅಳಲು ಶುರು ಮಾಡಿದ್ದ 'ಭಯಂಕರ ಬಾಡಿ ಬಿಲ್ಡರ್' ವಿಲಾಸ್ ವಾರಕ್ ಗೊಸ್ ಗೊಸ್ ಅಂತ ಮೂಗು ಎಳೆಯುತ್ತ ಅಳುವದನ್ನ ನಿಲ್ಲಿಸಿ ಸುಮ್ಮನಾಗುತ್ತಿದ್ದ.

ಸರ್! ಈ ಡೇವಿಡ್ ಕೋಲ್ಮನ್ ಹ್ಯಾಡ್ಲೀ ಆಗಾಗ ಮುಂಬೈಗೆ ಬರುತ್ತಿದ್ದ ಸರ್. ನಾನು ಹೋಗುತ್ತಿದ್ದ ಜಿಮ್ಮಿಗೇ ಕಸರತ್ತು ಮಾಡಲು ಬರುತ್ತಿದ್ದ. ಈ ವಿಲಾಸ್ ಅದೇ ಜಿಮ್ಮಿನಲ್ಲಿ ಫಿಟ್ನೆಸ್ ಶಿಕ್ಷಕ. ಹಾಗೆ ಜಿಮ್ಮಿಗೆ ಬರುತ್ತಿದ್ದ ಡೇವಿಡ್ ಹ್ಯಾಡ್ಲೀ ನಮಗೆ ಪರಿಚಯ ಸಾರ್. ಅಷ್ಟೇ. ಅಲ್ಲಿ ಇಲ್ಲಿ ಅಂತ ಟೀ, ಕಾಫೀ, ಪಾರ್ಟಿ ಅದು ಇದು ಅಂತ ಮಾಡಿದ್ದಿವಿ ಸಾರ್. ಒಂದೆರಡು ಸರೆ ನಮ್ಮ ಮನೆಗೂ ಬಂದಿದ್ದ. ಆದ್ರೆ ನಮಗೆ ಅವನು  26/11 ಉಗ್ರರ ದಾಳಿಯ ಬಗ್ಗೆ ಏನೂ ಹೇಳಿರಲಿಲ್ಲ ಸಾರ್. ಅಮೇರಿಕಾಗೆ ವಲಸೆ ಹೋಗುವವರಿಗೆ ಸಹಾಯ ಮಾಡುವ ಇಮಿಗ್ರೇಷನ್ ಕನ್ಸಲ್ಟಿಂಗ್ ಬಿಸಿನೆಸ್ಸ್ ನಡೆಸುತ್ತಿದ್ದ ಸಾರ್. ದೇಶದಲ್ಲಿ ಇಲ್ಲದಾಗ ಆಗಾಗ ಫೋನ್ ಮಾಡಿ ಸಹಜ ಮಾತಾಡುತ್ತಿದ್ದ. ಅಷ್ಟೇ. ನಾನು ಅವನಿಗೆ ಎಂದೂ ಫೋನ್ ಮಾಡಿರಲಿಲ್ಲ.  ಮತ್ತೆ ಡೇವಿಡ್ ಹೇಳಿಯೇ ಬಿಟ್ಟಿದ್ದ ಸಾರ್ - ಫೋನ್ ಮಾಡಲೇ ಬೇಡಿ, ಅಂತ. ಅವನಾಗೇ ಫೋನ್ ಮಾಡಿದಾಗ ಮಾತಾಡಿದ್ದು ಅಷ್ಟೇ ಸಾರ್, ಅಂತ ಹೇಳಿದ ರಾಹುಲ್, ಸರ್! ನನ್ನ ನಂಬಿ ಸಾರ್, ಅಂತ 'ಅಂಬಿಗ ನಾ ನಿನ್ನ ನಂಬಿದೆ' ಅನ್ನುವ ದೈನೇಸಿ ಲುಕ್ ಮಾರಿಯಾ ಸಾಹೇಬರಿಗೆ ಕೊಟ್ಟ.

ಇದನ್ನೆಲ್ಲ ನಾನು ನಂಬಬೇಕು. ಅಲ್ಲಾ? ಅಂತ ಹೂಂಕರಿಸಿದರು ಮಾರಿಯಾ ಸಾಹೇಬರು. ಕಾಳಿನಿಂದ ಜೊಳ್ಳನ್ನು ಬೇರ್ಪಡಿಸುವ ಪೋಲೀಸರ ಟೆಕ್ನಿಕ್ ಅದು.

ಸಾರ್! ಇಷ್ಟೇ ಸಾರ್ ಆಗಿದ್ದು. ಇದರ ಬಿಟ್ಟು ಏನೇನೂ ಇಲ್ಲ ಸಾರ್. ಆ ಪುಣ್ಯಾತ್ಮ ನಮ್ಮ ದೇಶದ ಮೇಲೆ surveillance ಮಾಡಲು ಬಂದಿದ್ದ, 26/11 ರ ದಾಳಿಯ ಸಲುವಾಗಿ ಮಾಹಿತಿ ಸಂಗ್ರಹಿಸಿ ಉಗ್ರರಿಗೆ ಕೊಟ್ಟ, ಅಂತೆಲ್ಲ ಗೊತ್ತಿದ್ದರೆ ಮೊದಲೇ ತಿಳಿಸುತ್ತಿದ್ದೆವು ಸಾರ್. ಟೀವಿಯಲ್ಲಿ ಅವನ ಬಗ್ಗೆ ನೋಡಿದ್ದೇ ತಡ ನಿಮ್ಮನ್ನು ನೋಡಲು ಬಂದೆ ಸರ್. ಜೊತೆಗೆ ಈ ವಿಲಾಸನನ್ನೂ ಕರೆದುಕೊಂಡು ಬಂದೆ ಸರ್. ನಮ್ಮದು ಏನೂ ತಪ್ಪಿಲ್ಲ ಸಾರ್, ಅಂತ ಹೇಳಿದ ರಾಹುಲ್ ಭಟ್ ಅಂಬೋ ಅಂದ.

ನೋಡೀ!!!! ಎಲ್ಲ ವಿವರ ಚೆಕ್ ಮಾಡಿಸುತ್ತೇನೆ. ಏನಾದರೂ ಸುಳ್ಳು ಗಿಳ್ಳು ಹೇಳಿದ್ದು ಕಂಡುಬಂದರೆ ಅಷ್ಟೇ ಮತ್ತೆ. ಗೊತ್ತಲ್ಲ ನಾವು ಯಾರು ಅಂತ? ಹಾಂ! ನಾವು ಕ್ರೈಂ ಬ್ರಾಂಚ್. ಕಲ್ಲುಗಳನ್ನೂ ಸಹ ಮಾತಾಡುವಂತೆ ಮಾಡಿದ್ದೇನೆ ಈ ಲಾಕಪ್ಪುಗಳಲ್ಲಿ, ಅಂತ ಮಾರಿಯಾ ಅಬ್ಬರಿಸಿದರು.

ಇದರ ಬಗ್ಗೆ ಮತ್ತೇನಾದರೂ ನೆನಪಾದರೆ ಆಗಿಂದಾಗಲೇ ತಿಳಿಸಬೇಕೆಂದು ಹೇಳಿ, ಈಗ ಹೋಗಿ, ಅಂತ ಹೇಳಿ ಕಳಿಸಿದರು.

ಬದುಕಿದೆಯಾ ಬಡ ಜೀವವೇ ಅಂತ ನಡಗುತ್ತ ರಾಹುಲ್ ಮತ್ತು ವಿಲಾಸ್ ಎದ್ದು ಬಂದರು. ಅವರು ಕುಳಿತ ಕುರ್ಚಿ ಒದ್ದೆ ಮಾಡಿ ಬಂದಿದ್ದರೋ ಏನೋ! ಗೊತ್ತಿಲ್ಲ.

ಆಗಿದ್ದೇನಾಗಿತ್ತು?

ಡೇವಿಡ್ ಕೋಲ್ಮನ್ ಹ್ಯಾಡ್ಲೀ - ಪಾಕಿಸ್ತಾನಿ ಮೂಲದ ಅಮೇರಿಕನ್. ಅಪ್ಪ ಪಾಕಿಸ್ತಾನ ಬಿಟ್ಟು ಯಾವದೋ ಕಾಲದಲ್ಲಿ ಅಮೇರಿಕಾ ಸೇರಿಕೊಂಡಿದ್ದ. ಅಲ್ಲೇ ಯಾರೋ ಬಿಳಿಯಳನ್ನು ಮದುವೆಯಾದಾಗ ಹುಟ್ಟಿದವನೇ ಡೇವಿಡ್ ಕೋಲ್ಮನ್ ಹ್ಯಾಡ್ಲೀ. ಮೊದಲಿನ ಸ್ವಲ್ಪ ವರ್ಷ ಅಮೇರಿಕಾದಲ್ಲೇ ಕಳೆದ. ನಂತರ ಅಪ್ಪನಿಗೆ ಪಾಕಿಸ್ತಾನ ನೆನಪಾಯಿತು. ಅಮೇರಿಕಾ ಸಾಕಾಯಿತು. ಬಿಟ್ಟು ಬಂದ. ಜೊತೆಗೆ ಬಂದ ಅಮೆರಿಕನ್ ಅಮ್ಮನಿಗೆ ಪಾಕಿಸ್ತಾನ ಸರಿ ಬರಲಿಲ್ಲ. ಖುದಾ ಹಾಫಿಜ್! ಅಂತ ದೊಡ್ಡ ನಮಸ್ಕಾರ ಹೊಡೆದು ವಾಪಸ್ ಅಮೇರಿಕಾಕ್ಕೆ ವಾಪಸ್ ಬಂದು ಬಿಟ್ಟಳು. ತಲಾಕ್ ಆದ ಹಾಗೆಯೇ. ಸ್ವಲ್ಪ ವರ್ಷ ಡೇವಿಡ್ ತಂದೆಯೊಂದಿಗೆ ಪಾಕಿಸ್ತಾನದಲ್ಲೇ ಉಳಿದ. ಮುಂದೆ ಅಮೇರಿಕಾ ಕರೆಯಿತು. ಅಮ್ಮ ಬಾ ಎಂದಳು. ಅಪ್ಪನಿಗೆ ಗುಡ್ ಬೈ ಹೇಳಿ ಅಮೆರಿಕಾಕ್ಕೆ ಬಂದ. ಬಂದು ಸುಮ್ಮನೆ ಇದ್ದಿದ್ದರೆ ಏನೂ ತೊಂದರೆಯೇ ಇರಲಿಲ್ಲ. ಆದ್ರೆ ಸುಮ್ಮನಿರುವದು ಡೇವಿಡ್ಡನ ಜಾಯಮಾನವೇ ಅಲ್ಲ.

ತಾಯಿ ಬಾರ್ ನಡೆಸುತ್ತಿದ್ದಳು. ಮೊದಲು ಸ್ವಲ್ಪ ದಿವಸ ಬಾರಿನ ಗಲ್ಲಾ ಪೆಟ್ಟಿಗೆ ಸಂಬಾಳಿಸಿದ ಡೇವಿಡ್. ಅದರಲ್ಲಿ ಜಾಸ್ತಿ ದುಡ್ಡು ಕಾಣಲಿಲ್ಲ. ಡ್ರಗ್ ದಂಧೆ ಶುರು ಮಾಡಿದ. ಅದರಲ್ಲಿ ಸುಮಾರು ದುಡ್ಡು ಕಂಡ. ಆ ಹೊತ್ತಿಗೆ ಕೆನಡಾದ ಒಬ್ಬಳನ್ನು ಮದುವೆಯಾದ. ಡ್ರಗ್ ದಂಧೆ ಜೋರಾಯಿತು. ಸಿಕ್ಕೊಂಡು ಬಿದ್ದ. ಸಿಕ್ಕೊಂಡು ಬಿದ್ದವನು ಮಾದಕ ದ್ರವ್ಯ ನಿಗ್ರಹ (DEA) ಸಂಸ್ಥೆ ಜೊತೆ ಒಳ ಒಪ್ಪಂದ ಮಾಡಿಕೊಂಡು ಶಿಕ್ಷೆಯಿಂದ ಬಚಾವ ಆದ. ತನಗಿಂತ ದೊಡ್ಡ ಡ್ರಗ್ ಸ್ಮಗ್ಲರುಗಳನ್ನು ಹಿಡಿದು ಕೊಟ್ಟು ಭೇಷ ಭೇಷ ಎನ್ನಿಸಿಕೊಂಡು DEA ಜನರಗೆ ತುಂಬ ಬೇಕಾದವನು ಆಗಿಹೋದ.

ಅದು ಏನೋ ಎಂತೋ, ಮತ್ತೆ ಪಾಕಿಸ್ತಾನ ಕರೆಯಿತು. ಬಂದೇ ಬಿಟ್ಟ. ಧರ್ಮದ ಮತ್ತು ಯಾಕೋ ಈ ಸಲ ಸ್ವಲ್ಪ ಜಾಸ್ತಿ ತಲೆಗೇರಿತ್ತು. ಡೇವಿಡ್ ಹ್ಯಾಡ್ಲೀ ಹೋಗಿ ದಾವೂದ್ ಗಿಲಾನಿ ಅಂತ ಪಾಕಿಸ್ತಾನದಲ್ಲಿ ಪ್ರಚಲಿತನಾದ. ಅ ಟೈಮಿನಲ್ಲೇ ಅವನಿಗೆ LeT ಉಗ್ರರ ಸಂಪರ್ಕ ಬಂದಿದ್ದು. ದೊಡ್ಡ ದೊಡ್ಡ ಮತಾಂಧ ಗುರುಗಳ ಮಾತು, ಭೀಕರ ಭಾಷಣ ಕೇಳಿ ಫುಲ್ ಜಿಹಾದಿ ಆಗಿ ಬಿಟ್ಟ. ತಾನೂ LeT ಸಂಘಟನೆ ಸೇರಿ ಬಿಟ್ಟ. ತರಬೇತಿ ಪಡೆದ. ಕಾಶ್ಮೀರಕ್ಕೆ ಕಳಿಸಿ, ಭಾರತದ ಪಡೆಗಳ ವಿರುದ್ಧ ಹೋರಾಡುತ್ತೇನೆ, ಅಂದ. LeT ಅವರಿಗೆ ಇವನು ಕಾದಾಟಕ್ಕೆ ಬೇಕಾಗುವ ಹುಂಬನಲ್ಲ ಅನ್ನಿಸಿತು. ಒಳ್ಳೆ ಹೀರೋ ಪರ್ಸನಾಲಿಟಿ ಹೊಂದಿದ್ದ ಡೇವಿಡ್ / ದಾವೂದ್ ಸೂಕ್ಷ್ಮವಾಗಿ ಮಾಡುವ ಬೇಹುಗಾರಿಕೆ ಕೆಲಸಕ್ಕೇ ಸರಿ ಅಂತ ಹೇಳಿ ಅವನಿಗೆ ಬೇರೆಯೇ ತರಹದ ತರಬೇತಿ ಕೊಡಿಸಿತು.

ಅಷ್ಟರಲ್ಲಿ ಡೇವಿಡ್ / ದಾವೂದ್ ಪಾಕಿಸ್ತಾನದಲ್ಲಿ ಮತ್ತೊಂದು ಮದುವೆಯಾಗಿ ಮಕ್ಕಳು ಮಾಡಿಕೊಂಡಿದ್ದ. ಅಮೆರಿಕಾಗೆ ಆಗಾಗ ಹೋಗಿ ಬಂದು ಮಾಡುತ್ತಿದ್ದ. ಪಾಕಿಸ್ತಾನದಲ್ಲಿ ಹೆಂಡತಿ ಇದ್ದಾಗೇ ಮೊರೊಕ್ಕೊ ದೇಶದಿಂದ ಪಾಕಿಸ್ತಾನಕ್ಕೆ ಮೆಡಿಕಲ್ ಕಲಿಯಲು ಬಂದಿದ್ದ ಯುವತಿ ಒಬ್ಬಳನ್ನು ಡವ್ವಾಗಿ ಫಿಟ್ಟಿಂಗ್ ಮಾಡಿಕೊಂಡ. ಆಕೆಯನ್ನೂ ಸಹ ಭಾರತಕ್ಕೆ ಕರೆದುಕೊಂಡು ಬಂದಿದ್ದ. ಹೀಗೆ ಬಹು ಪತ್ನಿ ವಲ್ಲಭನಾಗಿದ್ದ ಡೇವಿಡ್ ಕೋಲ್ಮನ್ ಹ್ಯಾಡ್ಲಿಯ ಬಗ್ಗೆ ಅವನ ಪತ್ನಿಯರೇ ಅವರಿದ್ದ ದೇಶದಲ್ಲಿ ಪೋಲೀಸ್ ಕಂಪ್ಲೇಂಟ್ ಕೊಟ್ಟಿದ್ದರು. ಅವನಿಗೆ ಉಗ್ರವಾದದ ಬಗ್ಗೆ ಇದ್ದ ಆಸಕ್ತಿ ಬಗ್ಗೆ ತಿಳಿಸಿದ್ದರು. ಯಾರೂ ಅದನ್ನೆಲ್ಲ ಹೆಚ್ಚು ಗಮನಕ್ಕೆ ತೆಗೆದುಕೊಂಡಿರಲಿಲ್ಲ. ಅದರ ಪರಿಣಾಮ ಹ್ಯಾಡ್ಲೀ ತನ್ನ ಖತರ್ನಾಕ ಕೆಲಸ ಎಲ್ಲ ಕಡೆ ಆರಾಮಾಗಿ ಮಾಡುತ್ತಲೇ ಹೋದ.

26/11/2008 ದಾಳಿಗೆ ಸುಮಾರು ಮೂರು ನಾಕು ವರ್ಷದ ಹಿಂದೆಯೇ ಮೊದಲ ಬಾರಿಗೆ ಡೇವಿಡ್ ಭಾರತಕ್ಕೆ ಬಂದ. ಬಿಸಿನೆಸ್ಸ್ ಮಾಡುತ್ತೇನೆ ಅಂತ ಬಂದ. ಮತ್ತೊಬ್ಬ ಪಾತಕಿ ರಾಣಾ ಎಂಬವ ಅಮೇರಿಕಾದಲ್ಲಿ ಡೇವಿಡ್ ಹ್ಯಾಡ್ಲೀಯ ದೋಸ್ತ. ಅವನೂ ಪಾಕಿಸ್ತಾನದವನೇ. ಅವನದು ಅಮೇರಿಕಾಕ್ಕೆ ವಲಸೆ ಬರುವವರಿಗೆ ಸಹಾಯ ಮಾಡುವ ಬಿಸಿನೆಸ್ಸ್ ಇತ್ತು. ಅದರ ಬ್ರಾಂಚ್ ಆಫೀಸ್ ಭಾರತದಲ್ಲಿ ಮುಂಬೈನಲ್ಲಿ ತೆಗೆಯುತ್ತೇನೆ ಅಂತ ಹೇಳಿ ಬಂದಿದ್ದ ಡೇವಿಡ್ ಕೋಲ್ಮನ್ ಹ್ಯಾಡ್ಲೀ. ಬಂದ ನಿಜವಾದ ಕಾರಣ 26/11 ರಂತಹ ದಾಳಿಗೆ ಸ್ಕೆಚ್ ಹಾಕಲು ಅಂತ ಈಗ ಗೊತ್ತಾಗುತ್ತಿತ್ತು.

ಶಾಸ್ತ್ರಬದ್ಧವಾಗಿಯೇ ಬರುತ್ತಿದ್ದ ಡೇವಿಡ್ ಕೋಲ್ಮನ್ ಹ್ಯಾಡ್ಲೀಯ ಬಗ್ಗೆ ಯಾರಿಗೂ ಯಾವ ಸಂಶಯವೂ ಬರಲಿಲ್ಲ. ಬರುತ್ತಿದ್ದ ಹೋಗುತ್ತಿದ್ದ. ವೀಸಾ ಇತ್ತು. ಪಾಕಿಸ್ತಾನಕ್ಕೆ ವಾಯಾ ದುಬೈ ಹೋಗುತ್ತಿದ್ದ. ಮೂಲತಹ ಪಾಕಿಯೇ ಆದ ಕಾರಣ ಅದೂ ಅಷ್ಟು ಸಂಶಯ ಉಂಟು ಮಾಡಲಿಲ್ಲ.

ಮುಂಬೈನಲ್ಲಿ ಡೇವಿಡ್ ಕೋಲ್ಮನ್ ಹ್ಯಾಡ್ಲೀ ಒಂದು ಆಫೀಸ್ ತೆಗೆದ. ಒಂದು ಮಹಿಳಾ ಸೆಕ್ರೆಟರಿ ಇಟ್ಟುಕೊಂಡ. ಸುಮ್ಮನೆ ನೋಡಿದವರಿಗೆ ಇಮಿಗ್ರೇಷನ್ ಕನ್ಸಲ್ಟೆಂಟ್ ಅಂತನೇ ಕಾಣುತ್ತಿದ್ದ. ಆದರೆ ಮಾಡಿದ್ದು ಮಾತ್ರ ಪೂರ್ತಿ surveillance ಕೆಲಸ. ಪದೇ ಪದೇ ತಾಜ್ ಹೋಟೆಲ್ಲಿಗೆ ಹೋದ. ಎಲ್ಲ ಫೋಟೋ, ವೀಡಿಯೊ ಮಾಡಿಕೊಂಡ. ಸುಮಾರು ಸಲ ರಾಹುಲ್ ಭಟ್ ಮತ್ತು ವಿಲಾಸ್ ವಾರಕ್ ಸಹಿತ ಅವನ ಜೊತೆ ತಾಜ್ ಹೋಟೆಲ್ಲಿನಲ್ಲಿ ಪಾರ್ಟಿ ಮಾಡಿದ್ದರು. ಸಕತ್ತಾಗಿ ಗುಂಡು, ತುಂಡು ಹಾಕಿಸಿ ಎಂಜಾಯ್ ಮಾಡಿಸಿದ್ದ. ಮುಂದೊಂದು ದಿನ ಇಂತಹ ಬಕರಾಗಳನ್ನು ತನ್ನ ಹಾಗೆಯೇ ಪಾಕಿ ಏಜೆಂಟ್ ಮಾಡಿಕೊಳ್ಳುವ ಹುನ್ನಾರ ಇತ್ತಂತೆ. ಹಾಗಂತ ಅಮೇರಿಕಾದಲ್ಲಿ ವಿಚಾರಣೆ ಸಮಯ ಹ್ಯಾಡ್ಲೀ ಹೇಳಿದ್ದ.

ಇಷ್ಟೇ ಅಲ್ಲ. ಒಂದು ಬೋಟ್ ಭಾಡಿಗೆಗೆ ತೆಗೆದುಕೊಂಡು ಮುಂಬೈ ಸುತ್ತ ಮುತ್ತ ಎಲ್ಲ ವೀಕ್ಷಣೆ ಮಾಡಿದ. ಸಲೀಸಾಗಿ ನೌಕಾ ನೆಲೆ, ಯುದ್ಧ ನೌಕೆಗಳ ಚಿತ್ರ ತೆಗೆದ. ವೀಡಿಯೊ ರೆಕಾರ್ಡಿಂಗ್ ಮಾಡಿದ. ಯಾರೂ ಏನೂ ಕೇಳಲಿಲ್ಲ. ಕೇಳಬೇಕಾದವರು, ನೋಡಬೇಕಾದವರು, ಹಿಡಿದು ವಿಚಾರಿಸಬೇಕಾದವರು ಎಲ್ಲಿ ಹೋಗಿದ್ದರೋ ಏನೋ? ಕಸಬ್ ಮತ್ತಿತರ ಉಗ್ರರು ಇಳಿದ ಬಂದಿದ್ದ ಸಮುದ್ರ ತಟದ ಜಾಗದ, ಮತ್ತೆ ಹಲವು ಜಾಗಗಳ GPS coordinates ನೀಟಾಗಿ ರೆಕಾರ್ಡ್ ಮಾಡಿಕೊಂಡು ಪಾಕಿಗಳಿಗೆ ತಲುಪಿಸಿದ್ದ. ಅದನ್ನೇ ಅವರು ಕಸಬ್ ಇತ್ಯಾದಿಗಳಿಗೆ ಕೊಟ್ಟ GPS ಉಪಕರಣಗಳಲ್ಲಿ ಪ್ರೋಗ್ರಾಮ್ ಮಾಡಿ ಕೊಟ್ಟು ಕಳಿಸಿದ್ದರು.

ಅದೇನೋ ಏನೋ, ಡೇವಿಡ್ ಕೋಲ್ಮನ್ ಹ್ಯಾಡ್ಲೀಗೆ ರಾಹುಲ್ ಭಟ್ ಮೇಲೆ ಹೆಚ್ಚಿನ ಅಕ್ಕರೆ. ಬಾಲ್ಯದಲ್ಲಿ ತಂದೆಯ ಪ್ರೀತಿಯಿಂದ ವಂಚಿತ ರಾಹುಲ್ ಭಟ್ ಸಹಿತ ತನಗೆ ತಿಳಿಯದೇ ಕಂಡ ಕಂಡವರಲ್ಲಿ ಕಳೆದು ಹೋಗಿದ್ದ ತಂದೆ ಮಹೇಶ್ ಭಟ್ ನನ್ನು ಹುಡುಕುತ್ತಿದ್ದ. ಅದೇ ವೇಳೆಗೆ ಈ ಡೇವಿಡ್ ಕೋಲ್ಮನ್ ಹ್ಯಾಡ್ಲೀ ಅನ್ನುವ ಪಾಕಂಡಿ ಸಿಕ್ಕ. ಇನ್ನೂ ಏನೇನು ಆಗಬೇಕಿತ್ತೋ? ಕೇವಲ ಸ್ನೇಹ ಮಾತ್ರ ಆಯಿತು.

ರಾಹುಲ್ ಭಟ್ ನೇ ಹೇಳಿಕೊಂಡಂತೆ, 26/11 ರ ದಾಳಿಗೆ ಕೆಲ ದಿನ ಮುಂಚೆ ಮಾತ್ರ ಈ ಡೇವಿಡ್ ಕೋಲ್ಮನ್ ಹ್ಯಾಡ್ಲೀ ರಾಹುಲ್ ಭಟ್ ನಿಗೆ ಫೋನ್ ಮಾಡಿ, ರಾಹುಲ್, ಜೋಕೆ! ನವೆಂಬರ್ ಇಪ್ಪತ್ತಾರ ಆಸು ಪಾಸು ದಕ್ಷಿಣ ಮುಂಬೈ ಕಡೆ ಮಾತ್ರ ತಲೆ ಹಾಕಬೇಡ, ಅಂತೇಳಿ ಫೋನ್ ಇಟ್ಟಿದ್ದ. ಡೇವಿಡ್ ಕೋಲ್ಮನ್ ಹ್ಯಾಡ್ಲೀಯ ವಿಕ್ಷಿಪ್ತ ಗುಣ ಸ್ವಭಾವ ಸ್ವಲ್ಪ ಮಟ್ಟಿಗೆ ರಾಹುಲ್ ಭಟ್ ನಿಗೆ ಅರ್ಥವಾಗಿತ್ತು. ಕೇವಲ ಅವನು ಹೇಳಿದ್ದನ್ನು ಕೇಳೋದು ಮಾತ್ರ, ವಾಪಸ್ ಪ್ರಶ್ನೆ ಗಿಶ್ನೆ ಕೇಳೋ ಹಾಗೇ ಇಲ್ಲ. ಕೇಳಲಿಕ್ಕೆ ಅಷ್ಟರಲ್ಲಿ ಫೋನ್ ಇಟ್ಟಾಗಿತ್ತು. ರಾಹುಲ್ ಭಟ್ ಆ ಎಚ್ಚರಿಕೆಗೆ ಎಷ್ಟು ಮಹತ್ವ ಕೊಟ್ಟನೋ ಗೊತ್ತಿಲ್ಲ. ಅವನಂತೂ ಮುಂಬೈ ದಾಳಿ ನೆಡದಾಗ ಮನೆಯಲ್ಲೇ ಕೂತಿದ್ದನಂತೆ.

ಎಲ್ಲ ತನಿಖಾ ಸಂಸ್ಥೆಗಳು ರಾಹುಲ್ ಭಟ್ ನನ್ನು ಮತ್ತೆ ಮತ್ತೆ ಪ್ರಶ್ನಿಸಿದವು. ಭಟ್ ಸುಳ್ಳು ಹೇಳುತ್ತಿಲ್ಲ ಅಂತ ಎಲ್ಲರಿಗೆ ಮನವರಿಕೆ ಆಯಿತು.

ಭಾರತದ ನಂತರ ಡೆನ್ಮಾರ್ಕ್ ಮೇಲೆ ದಾಳಿ ಮಾಡುವ ಸಲುವಾಗಿ ಡೆನ್ಮಾರ್ಕ್ ಗೆ ಹೋಗಿದ್ದ ಡೇವಿಡ್ ಹ್ಯಾಡ್ಲೀ ಸಿಕ್ಕಿ ಬಿದ್ದಿದ್ದ. ಕೆಲವು ಭಾರತೀಯ ತನಿಖಾಧಿಕಾರಿಗಳು ಅಮೇರಿಕಾಗೂ ಹೋಗಿ, FBI ಬಂಧನದಲ್ಲಿದ್ದ ಡೇವಿಡ್ ಕೋಲ್ಮನ್ ಹ್ಯಾಡ್ಲೀಯನ್ನೇ ವಿಚಾರಣೆ ಮಾಡಿ ಬಂದರು. ಎಲ್ಲಿಯೂ ರಾಹುಲ್ ಭಟ್ ತಪ್ಪಿತಸ್ಥ ಅಂತ ಕಂಡು ಬರಲಿಲ್ಲ. ಅಂತಿಮವಾಗಿ ರಾಹುಲ್ ಭಟ್ ನಿಗೆ ಕ್ಲೀನ್ ಚಿಟ್ ಕೊಡಲಾಯಿತು. ಬೆನ್ನೇರಿದ್ದ ಬೇತಾಳ ಹಾರಿ ಹೋಗಿ ನಿರಾಳವಾದ ಅನುಭವ ಆಗಿರಬೇಕು ರಾಹುಲ್ ಭಟ್, ಮಹೇಶ್ ಭಟ್ ಕುಟುಂಬದವರಿಗೆ.

ಆಪಾದನೆ ಬಂದ ಕೂಡಲೇ ವಿಲಾಸ್ ವಾರಕನನ್ನು ಅವನ ಜಿಮ್ ಟ್ರೈನರ್ ನೌಕರಿಯಿಂದ ಓಡಿಸಲಾಗಿತ್ತು. ಮದುವೆ ಮಾಡಿಕೊಂಡು, ಮುಂಬೈನಲ್ಲಿ ಬದುಕಲು ಕಾಸಿಲ್ಲದೆ, ಹೆಂಡತಿಯನ್ನು ಹಳ್ಳಿಗೆ ಕಲಿಸುವಂತಹ ಪರಿಸ್ಥಿತಿ ಪಾಪ ಅವನಿಗೆ. ಆ ಮೇಲೆ ರಾಹುಲ್ ಭಟ್ ನೇ ಅವನಿಗೆ ಯಾರೋ ದೊಡ್ಡ ಬಿಲ್ಡರ್ ಸಾಹೇಬರ ಬಾಡಿ ಗಾರ್ಡ್ ಕೆಲಸ ಕೊಡಿಸಿದನಂತೆ. ಅದೊಂದು ಒಳ್ಳೆ ಕೆಲಸ ಮಾಡಿ ಮೆರದ ಸಣ್ಣ ಭಟ್.

ಒಂದು ಅತ್ಯಂತ ಕುತೂಹಲಕಾರಿ ಸಂಗತಿ ಅಂದರೆ, ಈ ಡೇವಿಡ್ ಕೋಲ್ಮನ್ ಹ್ಯಾಡ್ಲೀ ಎಂಬ ಘಾತುಕ ಯಾರೋ ಒಬ್ಬ ದೊಡ್ಡ ಬಾಲಿವುಡ್ ಹೀರೋಯಿನ್ ಜೊತೆಗೆ 'ಸಂಬಂಧ' ಹೊಂದಿದ್ದ ಅನ್ನುವದು. ಆಕೆ ಯಾರು ಅಂತ ಯಾರೂ ಬಹಿರಂಗವಾಗಿ ಬಾಯಿ ಬಿಡುತ್ತಿಲ್ಲ. ಯಾರೋ ದೊಡ್ಡ ಸುಂದರಿಯೇ ಇರಬೇಕು. ಅದಕ್ಕೇ ಎಲ್ಲರೂ ಚುಪ್ ಚುಪ್! ಕೊಡಬೇಕಾದವರಿಗೆಲ್ಲ ಸರಿಯಾದ 'ತನು', ಮನ, ಧನಗಳ ಕಾಣಿಕೆ ಒಪ್ಪಿಸಿ ಬಚಾವಾಗಿರಬೇಕು ಆಕೆ. ೧೯೯೩ ರ ಮುಂಬೈ ಸರಣಿ ಸ್ಪೋಟಗಳ ನಂತರವೂ ಹಲವಾರು ದೊಡ್ಡ ನಟಿಯರ ಹೆಸರು ಬಂದು ಹೋಗಿತ್ತು. ಆದರೆ ನಟರ ಹೆಸರು ಖುಲ್ಲಂ ಖುಲ್ಲಾ ಆದಷ್ಟು ನಟಿಮಣಿಗಳ ಹೆಸರು ಹೊರಗೆ ಬರಲಿಲ್ಲ. ಅವೆಲ್ಲ ಎಲ್ಲೊ ಇಂಟರ್ನೆಟ್ ಮೇಲೆ ಯಾವ್ಯಾವದೋ ಹರಟೆ ಬೋರ್ಡುಗಳಲ್ಲಿ ಚರ್ಚೆ ಆಗುತ್ತಲೇ ಇರುತ್ತವೆ.

ಇಲ್ಲಿ ಬರೆದ ಸುಮಾರು ಸುದ್ದಿಯನ್ನು ಈಗಿತ್ತಲಾಗೆ ರಾಹುಲ್ ಭಟ್ ಬರೆದ ಪುಸ್ತಕ - Headley & I - ಪುಸ್ತಕದಿಂದ ಎತ್ತಿದ್ದು. ಮುಂಬೈನ ಖ್ಯಾತ ಪತ್ರಕರ್ತ ಹುಸೇನ್ ಝೈದಿ ಭಟ್ ನ ಜೊತೆಗೂಡಿ ಒಂದು ರೋಚಕ ಪುಸ್ತಕ ತಂದಿದ್ದಾರೆ.

ಈ ಪುಸ್ತಕ ರಾಹುಲ್ ಭಟ್ ನ ಆತ್ಮಕತೆಯಂತೆ ಇದೆ. ತಂದೆ ಮಹೇಶ್ ಭಟ್ ಮುನ್ನುಡಿ ಬರೆದಿದ್ದಾರೆ. ಪ್ರತಿ ಚಾಪ್ಟರ್ ಮೊದಲು ರಾಹುಲ್ ಒಂದು ಸ್ವಲ್ಪ ತಂದೆಯನ್ನು ಬಯ್ಯುತ್ತಾನೆ. ತಂದೆ ಒಪ್ಪಿಕೊಳ್ಳುತ್ತಾನೆ. ಪುಸ್ತಕ ಮುಗಿಯುವ ಹೊತ್ತಿಗೆ ತಂದೆ ಮಗ ಇಬ್ಬರಿಗೂ ರಾಜಿಯಾಗಿರುತ್ತದೆ. ಪುಸ್ತಕದ flow ಚನ್ನಾಗಿದ್ದು ಸುರಳೀತವಾಗಿ ಓದಿಸಿಕೊಂಡು ಹೋಗುತ್ತದೆ. ಪುಸ್ತಕ ಸಿಕ್ಕಾಪಟ್ಟೆ ಫೇಮಸ್ ಆಗಿದೆಯಂತೆ. ಮುಂದೆ ಸಿನೆಮಾ ಸಹಿತ ಆಗುವದಿದೆಯಂತೆ. ಹಾಗಂತ ರಾಹುಲ್ ಭಟ್ ತನ್ನ ವೆಬ್ ಸೈಟ್ ಒಳಗೆ ಹಾಕಿಕೊಂಡಿದ್ದಾನೆ.

ಪುಸ್ತಕದಲ್ಲಿ ರಾಹುಲ್ ಭಟ್ ನ ಬಗ್ಗೆ ಮೊದಲು ಪತ್ರಿಕೆಗಳಲ್ಲಿ ಓದಿದ್ದ ಕೆಲವು ವೈಪರೀತ್ಯಗಳ ಉಲ್ಲೇಖ ಇದೆ. ಈ ರಾಹುಲ್ ಭಟ್ ತನ್ನ ಅಕ್ಕ ಪೂಜಾಳ ಪುರಾತನ ಬಾಯ್ ಫ್ರೆಂಡ್ ರಣವೀರ್ ಶೋರೆ ಎಂಬವನಿಗೆ ತಾರಾ ಮಾರಾ ಬಡಿದು ಬಿಟ್ಟಿದ್ದ. ರಾಹುಲ್ ಭಟ್ ದೊಡ್ಡ ಮಟ್ಟದ ಬಾಡಿ ಬಿಲ್ಡರ್. ರಾಹುಲ್ ಭಟ್ ಮಕ ತಿಕ ಅನ್ನದೆ ಚಚ್ಚಿದ ಅಬ್ಬರಕ್ಕೆ ಆ  ರಣವೀರ ರಣರಂಗ ಬಿಟ್ಟು ಓಡಿ ಸೀದಾ ಹಾಸ್ಪಿಟಲ್ ಗೆ ಅಡ್ಮಿಟ್ ಆಗಿದ್ದ. ಅದೇನೋ ಪೂಜಾ ಭಟ್ ಳ ಜೊತೆ ಅವನ ಜಗಳ. ನನ್ನ ಅಕ್ಕನಿಗೆ ತೊಂದರೆ ಕೊಡ್ತಿಯೇನೋ? ಅಂತ ಏರಿ ಹೋದವನೇ ರಾಹುಲ್ ಭಟ್ ರಣವೀರ್ ಶೋರೆಯನ್ನು ನಾಯಿಯಂತೆ ಬಡಿದಿದ್ದನಂತೆ. ಮುಂದೆ ಪೂಜಾ ಭಟ್ ಳನ್ನು ಬಿಟ್ಟ ಶೋರೆ ಬೇರೆ ಹೋದ. ಅದರ ಬಗ್ಗೆ ಸಹಿತ ರಾಹುಲ್ ಭಟ್ ಬರೆದು ಕೊಂಡಿದ್ದಾನೆ. ಮುರುಕು ಸಂಸಾರದ ಮನೆಯಿಂದ ಬಂದ ಮಕ್ಕಳ ಮಾನಸಿಕ ವೈಪರೀತ್ಯಗಳು ಇವೆಲ್ಲ  ಅಂತ ರಾಹುಲ್ ಭಾಷ್ಯ ಅದಕ್ಕೆ.

ಹಿಂದಿನ ಬ್ಲಾಗ್ ಪೋಸ್ಟಿನಲ್ಲಿ ಖಡಕ್ ಪೋಲೀಸ್ ಅಧಿಕಾರಿ ಸೂಪರ್ ಕಾಪ್ ರಾಕೇಶ ಮಾರಿಯಾ ಬಗ್ಗೆ ಬರೆದಾಗ, ಈ ರಾಹುಲ್ ಭಟ್ ಎಪಿಸೋಡ್ ಬಗ್ಗೆ ಹಾಕಿ ಮಾರಿಯಾ ಸಾಹೇಬರ ಬಗ್ಗೆ ಮತ್ತೊಂದು ಮಾಹಿತಿ ಕೊಡೋಣ ಅಂತಿತ್ತು. ಅದು ಬಿಟ್ಟು ಹೋಗಿತ್ತು. ಮತ್ತೆ ರಾಹುಲ್ ಭಟ್ ನ ಡೇವಿಡ್ ಕೋಲ್ಮನ್ ಹ್ಯಾಡ್ಲೀ ಜೊತೆ ಆಗಿದ್ದ ಲಫಡಾ ದೊಡ್ಡ ಮಟ್ಟದ್ದೇ ಆಗಿದ್ದರಿಂದ ಬೇರೆದನ್ನೇ ಬರೆದೆ.

ರಾಕೇಶ ಮಾರಿಯಾ ಬಗ್ಗೆ ಬರೆದ ಹಿಂದಿನ ಪೋಸ್ಟ್ ಇಲ್ಲಿದೆ. ಕೆಲವೊಂದು ಮಾಹಿತಿಗಳನ್ನು ಆ ಬ್ಲಾಗ್ ಪೋಸ್ಟಿನಲ್ಲಿ ಉಲ್ಲೇಖಿಸಿದ ಪುಸ್ತಕಗಳಿಂದ ಆರಿಸಿದ್ದು.

ರಾಹುಲ್ ಭಟ್ ಬರೆದ ಪುಸ್ತಕ

5 comments:

ವಿ.ರಾ.ಹೆ. said...

Interesting....!!

Mahesh Hegade said...

Thanks Vikas!

Vimarshak Jaaldimmi said...


Good article!

It would be interesting to get supercop's feedback on treatment plan for Appayya alias Choobicchu swami of Zanzarwad!!

angadiindu said...

ತುಂಬಾ ಇಂಟರೆಸ್ಟಿಂಗ್ ಆಗಿ ಓದಿಸಿಕೊಂಡು ಹೋಗುತ್ತದೆ. ರವಿ ಬೆಳಗೆರೆಯ ಕ್ರೈಮ್ ಸ್ಟೋರಿ ಬರಹದಂತಿದೆ ನಿಮ್ಮ ಈ ಲೇಖನ.

Mahesh Hegade said...

ಧನ್ಯವಾದ ಅಂಗಡಿ ಅವರಿಗೆ.

ನಾನೂ ಸಹ ರವಿ ಬೆಳೆಗೆರೆ ಅವರ ಅಭಿಮಾನಿ. ಅವರ ಹಲವಾರು ಪುಸ್ತಕಗಳನ್ನು, 'ಹಾಯ್ ಬೆಂಗಳೂರ್' ಪತ್ರಿಕೆಯನ್ನು ಓದಿ ಪ್ರಭಾವಿತನಾಗಿದ್ದೇನೆ. ಹಾಗಾಗಿ ಶೈಲಿ ಸ್ವಲ್ಪ ಅವರ ಶೈಲಿ ತರಹ ಬಂದಿರಬಹುದು. :)