Thursday, April 24, 2014

ಶ್ರೀಮತಿ ಕೆನಡಿ ಶ್ರೀಮತಿ ಓನಾಸಿಸ್ ಆಗುವ ತನಕ.... (ಭಾಗ - ೩)

(ಹಿಂದಿನ ಭಾಗ -೧, ಭಾಗ -೨)

ಅಂತೂ ಇಂತೂ ಜಾಕಿ ಕೆನಡಿ ಎಂಬ ಆ ಕಾಲದ ಅಮೇರಿಕಾದ ಪ್ರಥಮ ಮಹಿಳೆ ಅರಿಸ್ಟಾಟಲ್ ಓನಾಸಿಸ್ ಎಂಬ ಕುಬೇರನ ಆತಿಥ್ಯ ಸ್ವೀಕರಸಿ, ದಿಲ್ಲು, ಮತ್ತೊಂದು ಕೊಟ್ಟು ಬಂದಳು ವಾಪಸ್. ಅಮೇರಿಕಾದ ಅಧ್ಯಕ್ಷರ ಧರ್ಮಪತ್ನಿಯಾದ ಕರ್ಮಕ್ಕೆ ಜಾನ್ ಕೆನಡಿಯವರ ಎಲ್ಲ ವೈಪರೀತ್ಯಗಳನ್ನು ಸಹಿಸಿಕೊಂಡೇ ಪ್ರಥಮ ಮಹಿಳೆಯ ಸ್ಥಾನದ ಗೌರವ ಕಾಯುವ ಕರ್ಮವೇ! ಅಂತ ಹಣೆ ಚಚ್ಚಿಕೊಂಡಳು. ಅಲ್ಲಿ ಓನಾಸಿಸ್ಸನ ಜೊತೆ ಎಷ್ಟು ಹಾಯಾಗಿತ್ತು! ಮುದುಕ ಪ್ರಿಯಕರ ಕಾಲಲ್ಲಿ ತೋರಿಸಿದ್ದನ್ನು ತಲೆ ಮೇಲೆ ಹೊತ್ತು ಮಾಡುತ್ತಿದ್ದ. ಇರಲಿ, ಮುಂದೆ ನೋಡಿಕೊಂಡರಾಯಿತು. ಇಲ್ಲಿ ಕೆನಡಿ ಸಾಹೇಬರ ಜೊತೆ ಇನ್ನೆಷ್ಟು ದಿವಸವೋ, ಅಂತ ರೆಗ್ಯುಲರ್ ಅಧ್ಯಕ್ಷರ ಪತ್ನಿ ಜೀವನಕ್ಕೆ ವಾಪಸ್ ಬಂದಳು.

ಅಧ್ಯಕ್ಷರ ಪತ್ನಿ ಮುನಿಸಿಕೊಂಡು ಓಡಿ ಹೋಗಿ ಬಿಟ್ಟಿದ್ದಳು. ಅಲ್ಲಿ ಓನಾಸಿಸ್ ಎಂಬ ಕುಬೇರನ ಜೊತೆ ಕುಣಿದು ಕುಪ್ಪಳಿಸಿ ಬಂದಳು, ಅಂತ ಸ್ವಲ್ಪ ಸುದ್ದಿ ಆಗಿತ್ತು ನೋಡಿ. ಅದನ್ನ ರಿಪೇರಿ ಮಾಡಬೇಕಿತ್ತು. PR ಇಮೇಜ್ ಸರಿಪಡಿಸಬೇಕಿತ್ತು. ಕೆನಡಿ ಸಾಹೇಬರು, ಮೇಡಮ್ಮು,ಅವರ ಮಕ್ಕಳಿಬ್ಬರು ಕೂಡಿ ಒಂದು ಫೋಟೋ ಸೆಶನ್ ಮಾಡಿದರು. ನೋಡಿದವರಿಗೆ ಅನ್ನಿಸಬೇಕು, ಎಷ್ಟು ಹ್ಯಾಪಿ ಫ್ಯಾಮಿಲಿ ನಮ್ಮ ಅಧ್ಯಕ್ಷರದು! ಅಂತ. ಹಾಗೆ ಮಾಡಿ, ಎಲ್ಲ ಫೋಟೋ ಪತ್ರಿಕೆಗಳಿಗೆ ಬಿಟ್ಟು, ಪ್ರಸಾದ ತಿನ್ನುವ ಪತ್ರಕರ್ತರಿಂದ ಲೇಖನ ಬರೆಸಿ, ಶ್ವೇತ ಭವನದಲ್ಲಿ ಎಲ್ಲ ಸರಿ ಇದೆ, ಸಂಸಾರ ಅನ್ಯೋನ್ಯವಾಗಿದೆ, ಅಂತ ಭೋಂಗು ಬಿಟ್ಟಾಯಿತು. ಕೆನಡಿಗಳಿಂದ ಒಂದು ತರಹದ ಸಮೂಹ ಸನ್ನಿಗೊಳಗಾಗಿದ್ದ ಜನ ಜೈ! ಜೈ! ಅಂದರು. ಜನರನ್ನು ಮತ್ತೆ ಮಂಗ್ಯಾ ಮಾಡಿದ ರಾಜಕಾರಣಿಗಳು ಪೆಕಾ ಪೆಕಾ ಅಂತ ನಕ್ಕರು.

ಇದೆಲ್ಲ ಆಗಿದ್ದು ೧೯೬೨ ರ ಆಸು ಪಾಸಿನಲ್ಲಿ. ಕೆನಡಿ ಅಧ್ಯಕ್ಷರಾಗಿದ್ದೇ ಆಗಿದ್ದು ಒಂದಾದ ಮೇಲೊಂದು ಅವಗಢ. ಮೊದಲು ಕ್ಯೂಬಾ ವಿರುದ್ಧ ಮಾಡಿದ್ದ 'ಹಂದಿ ಕೊಲ್ಲಿ ಕಾರ್ಯಾಚರಣೆ' ಗಬ್ಬೆದ್ದು ಹೋಗಿ, ಅಮೇರಿಕಾದ ಮಾನ ಹರಾಜಾಗಿ, ಕೆನಡಿ ವಿಶ್ವದ ಕ್ಷಮೆ ಕೇಳಿದ್ದರು. ಅದಕ್ಕಾಗಿ ಸಿಐಎ ಬೇಹುಗಾರಿಕೆ ಸಂಸ್ಥೆಯ ದೊಡ್ಡ ದೊಡ್ಡ ತಲೆಗಳನ್ನು ಮನೆಗೆ ಕಳಿಸಿದ್ದರು. ಅದು ಮುಗಿಯಿತು ಅನ್ನುವವರೆಗೆ ರಶಿಯಾದ ತಲೆತಿರುಕ ಕ್ರುಸ್ಚೇವ್ ಪರಮಾಣು ಕ್ಷಿಪಣಿ ತಂದು ಕ್ಯೂಬಾದಲ್ಲಿ ಇಟ್ಟು ಬಿಟ್ಟು. ಮೂರನೇ ಮಹಾಯುದ್ಧ ಶುರುವಾಗಿ, ಎರಡೂ ಕಡೆಯವರು ತಮ್ಮ ಕಡೆ ಇದ್ದೆಲ್ಲ ಅಣು ಶಸ್ತ್ರ ಉಪಯೋಗಿಸಿ, ಇಡೀ ಪ್ರಪಂಚವನ್ನೇ ನಾಮಾನೇಷ ಮಾಡಿಬಿಡುತ್ತಾರೇನೋ ಅಂತ ಎಲ್ಲರೂ ಘಾಬರಿಯಾದಾಗ, ಕೆನಡಿ ತಲೆ ಉಪಯೋಗಿಸಿ, ರಶಿಯಾದ ಜೊತೆ ಒಳ ಒಪ್ಪಂದ ಅಂತ ಮಾಡಿಕೊಂಡು, ರಶಿಯಾ ಕ್ಯೂಬಾದಿಂದ ಅಣು ಶಸ್ತ್ರ ತೆಗೆಯುವಂತೆ ಮಾಡಿ ದೊಡ್ಡ ಉಪಕಾರ ಮಾಡಿದ್ದರು. ಆದರೆ ಕ್ಯೂಬಾ, ರಶಿಯಾ ಎಲ್ಲವನ್ನೂ ಚಿಂದಿ ಉಡಾಯಿಸಿ ಬಿಡೋಣ ಅಂತ ತುಂಬ ಜೋರಾಗಿ ಸಲಹೆ ನೀಡುತ್ತಿದ್ದ ಮಿಲಿಟರಿ ತಲೆಗಳಿಗೆ ಕೆನಡಿ ಮೇಲೆ ದೊಡ್ಡ ಅಸಮಾಧಾನ. ಇಂತಹ ಹೆಣ್ಣು ಮನಸ್ಸಿನ ಅಧ್ಯಕ್ಷ ಇದ್ದರೆ ಅಮೇರಿಕಕ್ಕೆ ದೊಡ್ಡ ಅಪಾಯ ಅಂತ ಅವರಾಗಲೇ ಎಲ್ಲರ ತಲೆ ಕೆಡಿಸಲು ಶುರು ಮಾಡಿದ್ದರು. ಒಟ್ಟಿನಲ್ಲಿ ಕೆನಡಿ ಸಾಹೇಬರಿಗೆ ಒಳಗೆ, ಹೊರಗೆ ಎಲ್ಲ ಕಡೆ ತಲೆ ಬಿಸಿ.

ಪಟ್ಟಭದ್ರ ಹಿತಾಸಕ್ತಿಗಳಾದ ಅಮೇರಿಕಾದ ಮಾಫಿಯಾ, military industrial complex, ಸಿಐಎ ಸಂಸ್ಥೆಯ rogue elements, ಕೆನಡಿಯ ರಾಜಕೀಯ ವಿರೋಧಿಗಳು, ಎಲ್ಲ ಕೂಡಿ ಕೆನಡಿ ವಿರುದ್ಧ ಸ್ಕೆಚ್ ಹಾಕ ತೊಡಗಿದರು. ಯಾವಾಗ ಕೆನಡಿ ಕ್ಯಾಸ್ಟ್ರೋನ ಹತ್ಯೆ ಮಾಡಲು ಹಿಂದೆ ಮುಂದೆ ನೋಡಿದರೋ, ಯಾವತ್ತು ವಿಯೆಟ್ನಾಂ ಮೇಲೆ ಯುದ್ಧ ಬೇಡ ಅಂದರೋ, ಅವತ್ತೇ ಅವರಿಗೆ ಒಂದು ಮುಹೂರ್ತ ಇಟ್ಟೇ ಬಿಟ್ಟರು. ದೊಡ್ಡದೊಂದು ಷಡ್ಯಂತ್ರ ಶುರುವಾಗೇ ಬಿಟ್ಟಿತು. ೧೯೬೩ ನೆ ಇಸವಿಯ ಆರಂಭದ ದಿನಗಳು.

ಇದರ ಪ್ರತಿಫಲವಾಗಿ ೨೨ ನವೆಂಬರ್ ೧೯೬೩ ರಂದು ಹಾಡೇ ಹಗಲು, ಡಲ್ಲಾಸ್ ನಗರದಲ್ಲಿ ತೆರೆದ ಕಾರಿನಲ್ಲಿ ಹೋಗುತ್ತಿದ್ದ ಕೆನಡಿ ಅವರನ್ನು ದೂರದಿಂದ ಸರಿಯಾಗಿ ಗುರಿಯಿಟ್ಟು, ತಲೆಗೇ ಗುಂಡು ಹಾರಿಸಿ ಹತ್ಯೆ ಮಾಡಲಾಯಿತು. ಅವತ್ತಿನ ಮಟ್ಟಿಗೆ ಅದೊಂದು ಹತ್ಯೆ ಅಂದರೂ ಇವತ್ತಿನ ಮಟ್ಟಿಗೆ ಅದೊಂದು ಕ್ಷಿಪ್ರ ಕ್ರಾಂತಿ (coup d'etat). ಪಟ್ಟಭದ್ರ ಹಿತಾಸಕ್ತಿಗಳ ತಾಳಕ್ಕೆ ಸರಿಯಾಗಿ ಕುಣಿಯಲು ಸಿದ್ಧರಿದ್ದ ಉಪಾಧ್ಯಕ್ಷ ಲಿಂಡನ್ ಜಾನ್ಸನ್ ಅಧ್ಯಕ್ಷರಾಗಿ ರೊಕ್ಕಾ ಮಾಡವರಿಗೆ ಎಲ್ಲ ಅನುಕೂಲ ಮಾಡಿಕೊಟ್ಟರು. ವಿಯೆಟ್ನಾಂ ಮೇಲೆ ಮುರಕೊಂಡು ಬಿತ್ತು ಅಮೇರಿಕಾ. ಒಂದಕ್ಕೆರಡು ರೇಟ್ ಹಾಕಿ ಬಿಸಿನೆಸ್ಸ್ ಮಂದಿ ರೊಕ್ಕಾ ಮಾಡಿಕೊಂಡರು. ಇದಕ್ಕೆ ಒಪ್ಪದಿದ್ದ ಮೃದು ಸ್ವಭಾವದ ಕೆನಡಿ ಶವವಾಗಿ ಮಣ್ಣು ಕಂಡಿದ್ದರು.

ಜಾಕಿ ಕೆನಡಿ ಮೇಡಮ್ಮಿಗೆ ಅಕಾಲಕ್ಕೆ ಬಂತು ವೈಧವ್ಯ. ಮಾಡುವ ಕ್ರಿಯಾಕರ್ಮ ಮುಗಿಸಿ, ಎರಡು ಮಕ್ಕಳನ್ನು ಕಟ್ಟಿಕೊಂಡು ಹೋಗಿ ಬೇರೆ ಕಡೆ ಸೆಟಲ್ ಆದರು ಮೇಡಂ. ಗಂಡನ ಅವಸಾನದ ನಂತರ ತುರ್ತಾಗಿ ಆಗಿ ಬೇರೆ ಸಂಗಾತಿ ಹುಡುಕಿಕೊಂಡು ಹೋಗಲಿಲ್ಲ ಜಾಕಿ. ಒಂದೆರಡು ವರ್ಷ ಅವರನ್ನು ಇವರನ್ನು ಅಲ್ಲಿ ಇಲ್ಲಿ ಭೆಟ್ಟಿಯಾದರೂ boyfriend ಅಂತ ಯಾರನ್ನೂ ಮಾಡಿಕೊಂಡಿರಲಿಲ್ಲ. ಆದರೆ ಅರಿಸ್ಟಾಟಲ್ ಓನಾಸಿಸ್ ಮಾತ್ರ ಯಾವಾಗಲೂ ಸಂಪರ್ಕದಲ್ಲಿ ಇದ್ದ. ಇಬ್ಬರ ನಡುವಿನ ಸರಸದ ಬೆಂಕಿ ಆರದಂತೆ ನೋಡಿಕೊಂಡಿದ್ದ!

ಬಾಬ್ಬಿ ಕೆನಡಿ (ರಾಬರ್ಟ್ ಕೆನಡಿ) - ಜಾನ್ ಕೆನಡಿಯವರ ತಮ್ಮ. ಅವರ ಸರ್ಕಾರದಲ್ಲಿ ಅಟಾರ್ನಿ ಜನರಲ್ ಅಂತ ಇದ್ದವನು. ಅಣ್ಣನ ಹತ್ಯೆಯಿಂದ ತುಂಬ ನೊಂದುಕೊಂಡ. ತುಂಬ guilty ಫೀಲ್ ಮಾಡಿಕೊಂಡ. ಯಾಕಂದ್ರೆ ಅವನೇ ಎಲ್ಲ ದೋ ನಂಬರ್ ದಂಧೆಯವರ ಮೇಲೆ ಮುರಕೊಂಡು ಬಿದ್ದು ಮಾಫಿಯಾದ ಕೋಪಕ್ಕೆ ಗುರಿಯಾಗಿದ್ದ. ಮಾಫಿಯಾ ದೊರೆಗಳೆಲ್ಲ ಒಂದು ಗೂಡಿ  ಈ ಬಾಬ್ಬಿ ಕೆನಡಿಯನ್ನೇ ಕೊಂದು ಬಿಡುವ ಪ್ಲಾನ್ ಮಾಡಿದ್ದರು.

ಆದರೆ ಮಾಫಿಯಾ ಬಾಸ್ ಕಾರ್ಲೋಸ್ ಮಾರ್ಸೆಲ್ಲೋ ಒಂದು ಮಾತು ತಣ್ಣಗೆ ಹೇಳಿದ್ದ: ನಾಯಿ ಬಾಲ ಕತ್ತರಿಸುವದರಿಂದ ಏನೂ ಉಪಯೋಗವಿಲ್ಲ. ಬಾಲ ಕಳೆದುಕೊಂಡ ನಾಯಿ ಸಿಟ್ಟಿಗೆದ್ದು ಕಚ್ಚಿ ಬಿಟ್ಟೀತು. ನಾಯಿ ಕತ್ತು ಕತ್ತರಿಸಿ ಒಗೆದು ಬಿಡಿ. ಬಾಲ ಆಡೋದು ತಾನಾಗೆ ನಿಲ್ಲುತ್ತದೆ. ಮತ್ತೆ ಎಂದೂ ಕಚ್ಚುವದಿಲ್ಲ. ಮಾತಿನ ಅರ್ಥ ಇಷ್ಟೇ - ಬಾಬ್ಬಿ ಕೆನಡಿ ಕೊಂದರೆ ಅಣ್ಣ ಅಧ್ಯಕ್ಷ ಜಾನ್ ಕೆನಡಿ ಮುರಕೊಂಡು ಬಿದ್ದು ನಮ್ಮನ್ನು ನಿರ್ನಾಮ ಮಾಡುತ್ತಾನೆ. ಅದರ ಬದಲಿ ಅಧ್ಯಕ್ಷರನ್ನೇ ಕೊಂದು ಬಿಟ್ಟರೆ, ಪವರ್ ಕಳೆದುಕೊಂಡ ಅಟಾರ್ನಿ ಜನರಲ್ ಹಲ್ಲಿಲ್ಲದ ಹಾವಂತೆ. ಮಾಸ್ಟರ್ ಪ್ಲಾನ್ ಅಂದ್ರೆ ಅದು. ಇದು ಬಾಬ್ಬಿ ಕೆನಡಿಗೂ ಗೊತ್ತಿತ್ತು. ಹಾಗಾಗಿ ಅಣ್ಣನ ಸಾವಿಗೆ ತನ್ನನ್ನೇ ಜಿಮ್ಮೆದಾರನನ್ನಾಗಿ ಮಾಡಿಕೊಂಡು ಸಂಕಟ ಪಟ್ಟುಕೊಂಡ. ಹಾಗಾಗಿ ಅತ್ತಿಗೆ ಜಾಕಿ, ಅಣ್ಣನ ಮಕ್ಕಳ ಬಗ್ಗೆ ವಿಶೇಷ ಒಲವು, ಕಾಳಜಿ ಬೆಳೆಸಿಕೊಂಡ.

ಅತ್ತ ಕಡೆ ಪತಿ ಜಾನ್ ಕೆನಡಿ ಮೇಲೆ ಹೋಗಿ ಸ್ವಲ್ಪ ವರ್ಷವಾದ ನಂತರ ಜಾಕಿ ಕೆನಡಿ ಸೀರಿಯಸ್ಸಾಗಿ ಶಿಪ್ಪಿಂಗ್ ಟೈಕೂನ್ ಓನಾಸಿಸ್ ಜೊತೆ ಡೇಟಿಂಗ್ ಶುರು ಮಾಡಿಕೊಂಡರು. ಜೊತೆ ಜೊತೆಯಾಗಿ ಹಲವು ಕಡೆ ಕಂಡು ಬಂದರು. ಅವರಿಬ್ಬರ ಸಂಬಂಧ ಕೇವಲ ದೋಸ್ತಿ ಮೀರಿ ಮುಂದು ಹೋಗಿದೆ ಅಂತ ಎಲ್ಲರಿಗೆ ಅನ್ನಿಸತೊಡಗಿತ್ತು. ಆಗ ಸ್ವಲ್ಪ ಇರಿಸು ಮುರಿಸಾಗಿದ್ದು ಮೈದುನ ರಾಬರ್ಟ್ ಕೆನಡಿಗೆ.

ಏಕೆ?

ರಾಬರ್ಟ್ ಕೆನಡಿಗೆ ತನ್ನತ್ತಿಗೆ ಜಾಕಿ ಟೈಕೂನ್ ಓನಾಸಿಸ್ ಜೊತೆ ಸುತ್ತುವದು ಸ್ವಲ್ಪವೂ ಇಷ್ಟವಿರಲಿಲ್ಲ. ಓನಾಸಿಸ್ ಜೊತೆ ಅಮೇರಿಕಾದ  ಅಟಾರ್ನಿ ಜನರಲ್ ಆಗಿ, ಕೇಸ್ ಹಾಕಿ ಶುರುವಾಗಿದ್ದ ದ್ವೇಷ ಪಾರ್ಟಿಯೊಂದರಲ್ಲಿ ಕೈ ಕೈ ಮೀಲಾಯಿಸುವ ಹಂತಕ್ಕೆ ಹೋಗಿ, ಓನಾಸಿಸ್ ಮತ್ತು ಕೆನಡಿ ಬದ್ಧ ದ್ವೇಷಿಗಳಾಗಿದ್ದರು. ಅಣ್ಣ ಜಾನ್ ಕೆನಡಿ ಹೋದ ಮೇಲೂ ಸ್ವಲ್ಪ ದಿವಸ ರಾಬರ್ಟ್ ಕೆನಡಿಯೇ ಅಟಾರ್ನಿ ಜನರಲ್ ಆಗಿ ಮುಂದುವರಿದಿದ್ದರೂ ಹಾವು ಕಿತ್ತ ಹಲ್ಲಿನಂತಾಗಿ ಏನೂ ಮಾಡಲು ಸಾಧ್ಯವಾಗಿರಲಿಲ್ಲ. ಅದೊಂದು ದೊಡ್ಡ ಹತಾಶೆಯಾಗಿತ್ತು. ಹೀಗಿರುವಾಗ ಅತ್ತಿಗೆ ಜಾಕಿ ಕೆನಡಿ ಓನಾಸಿಸ್ ಜೊತೆ ಸೀರಿಯಸ್ಸಾಗಿ ಸಂಬಂಧ ಶುರು ಮಾಡಿದಾಗ ರಾಬರ್ಟ್ ಕೆನಡಿ ಉರಿದು ಹೋದ.

ಜಾಕಿ ಕೆನಡಿ ಅವಳ ಓನಾಸಿಸ್ ಜೊತೆಯಿರುವ ಸಂಬಂಧವನ್ನು ನಗಣ್ಯ ಮಾಡುತ್ತ, ಅಂಥಾದ್ದೇನೂ ಇಲ್ಲ ಮಾರಾಯಾ! ಅನ್ನುತ್ತ ದಿನದೂಡಿದಳು. ರಾಬರ್ಟ್ ಕೆನಡಿ ಕೂಡ ಅಟಾರ್ನಿ ಜನರಲ್ ನೌಕರಿಗೆ ಟಾಟಾ ಹೇಳಿ, ತಾನೆ ಖುದ್ದು ಸೆನೆಟರ್ ಆಗಿ, ತನ್ನ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಗಮನ ಹರಿಸಿದ. ಅಣ್ಣನ ಹತ್ಯೆ ಕಾಡುತ್ತಲೇ ಇತ್ತು. ಸರಿಯಾಗಿ ತನಿಖೆ ಮಾಡೋಣ ಅಂದರೆ ಬಲವಿರಲಿಲ್ಲ, ಬೆಂಬಲವಿರಲಿಲ್ಲ. ಇದೆಲ್ಲದರ ಮಧ್ಯೆ ವಿಧವೆ ಅತ್ತಿಗೆ, ಆಕೆಯ ಇಬ್ಬರು ಮಕ್ಕಳ ಬಗ್ಗೆ ಗಮನ ಕೊಡುತ್ತಲೇ ಇದ್ದ.

ಸ್ವಲ್ಪ ವರ್ಷ ಮುಂದಕ್ಕೆ ಬರೋಣ. ೧೯೬೮. ಅಧ್ಯಕ್ಷೀಯ ಚುನಾವಣೆ ವರ್ಷ. ಆಗಿನ ಅಧ್ಯಕ್ಷ ಲಿಂಡನ್ ಜಾನ್ಸನ್ ಮತ್ತೆ ಸ್ಪರ್ಧಿಸುವದಿಲ್ಲ ಅಂದು ಬಿಟ್ಟಿದ್ದರು. ಡೆಮಾಕ್ರಟ್ ಪಕ್ಷ ಹೊಸ ಅಭ್ಯರ್ಥಿ ಹುಡುಕುತ್ತಿತ್ತು. ರಾಬರ್ಟ್ ಕೆನಡಿ ಅಧ್ಯಕ್ಷರಾಗುವ ಇಂಗಿತ ವ್ಯಕ್ತಪಡಿಸಿರಲಿಲ್ಲ.

ದೊಡ್ಡ ಮಟ್ಟದ ರಾಜಕೀಯ ಚದುರಂಗದಾಟದಲ್ಲಿ ಅವು ಏನೇನು ದಾಳಗಳು ಉರುಳಿದವೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ರಾಬರ್ಟ್ ಕೆನಡಿ ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷ ಟಿಕೆಟ್ಟಿಗೆ ತಾವೂ ಆಕಾಂಕ್ಷಿ ಅಂತ ಘೋಷಿಸಿ ಬಿಟ್ಟರು. ಅಂದಿನ ರಾಜಕೀಯದಲ್ಲಿ ದೊಡ್ಡ ಸಂಚಲನ. ರಿಪಬ್ಲಿಕನ್ ಪಕ್ಷದಿಂದ ನಿಲ್ಲಲು ತಯಾರಾಗಿದ್ದ ರಿಚರ್ಡ್ ನಿಕ್ಸನ್, ಹಾಂ! ಅಂತ ಉದ್ಗರಿಸಿದರು. ಎಂಟು ವರ್ಷದ ಹಿಂದೆ ಜಾನ್ ಕೆನಡಿ ಅದೇ ರಿಚರ್ಡ್ ನಿಕ್ಸನ್ ಅವರನ್ನುಅತಿ ಕಡಿಮೆ ಮತದಿಂದ ಸೋಲಿಸಿದ್ದರು. ಅದು ನ್ಯಾಯವಾದ ಸೋಲು ಅಂತ ನಿಕ್ಸನ್ ನಂಬಿರಲೇ ಇಲ್ಲ. ಮಾಫಿಯಾ ಬಿಟ್ಟು, ಚಿಕ್ಯಾಗೋನಲ್ಲಿ ನಕಲಿ ಮತದಾನ ಮಾಡಿಸಿ, ಕೆನಡಿ ಗೆದ್ದಿದ್ದರು ಅಂತ ಅವರ ಆಪಾದನೆ ಆಗಿತ್ತು. ಚಿಕ್ಯಾಗೋ ಮಾಫಿಯಾ ಕೆನಡಿ ಪರವಾಗಿ ಕೆಲಸ ಮಾಡಿದ್ದು ಸುಳ್ಳಂತೂ ಆಗಿರಲಿಲ್ಲ. ಈಗ ಇನ್ನೊಬ್ಬ ಕೆನಡಿ ಎದುರಾಳಿ ಆಗುತ್ತೇನೆ ಅನ್ನುತ್ತಿದ್ದಾನೆ. ಇನ್ನೊಬ್ಬ ಕೆನಡಿ ಎದುರು ಮತ್ತೊಮ್ಮೆ ಸೋಲು ಕಾದಿದೆಯೋ ಏನೋ ಅಂತ ನಿಕ್ಸನ್ ಚಿಂತಾಕ್ರಾಂತರಾದರು. ಸ್ವಲ್ಪ ದಿನಗಳಲ್ಲೇ ಆ ಚಿಂತೆ ಶಾಶ್ವತವಾಗಿ ಮರೆಯಾಗಲಿದೆ ಅಂತ ಅವರಿಗೆ ಗೊತ್ತಿತ್ತಾ?

ತಮ್ಮ ಉಮೇದುವಾರಿಕೆ ಘೋಷಣೆ ಮಾಡಿದ್ದೇ ಮಾಡಿದ್ದು ರಾಬರ್ಟ್ ಕೆನಡಿ ಸಮರೋಪಾದಿಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡರು. ಡೆಮಾಕ್ರಾಟಿಕ್ ಪಕ್ಷದ ಆಂತರಿಕ ಚುನಾವಣೆಗಳಲ್ಲಿ ಗೆಲ್ಲುತ್ತ ಹೊರಟರು. ಆಗ ವಿಯೆಟ್ನಾಂ ಯುದ್ಧ ತುಂಬ ರಭಸದಿಂದ ನೆಡೆಯುತ್ತಿತ್ತು. ದಿನಕ್ಕೆ ನೂರಾರು ಜನ ಅಮೇರಿಕನ್ ಸೈನಿಕರ ಶವಪೆಟ್ಟಿಗೆ ಹೊತ್ತ ವಿಮಾನಗಳು ಸೈಗಾನ್ ನಿಂದ ಹಾರುತ್ತಿದ್ದವು. ವಿಯೆಟ್ನಾಂ ಯುದ್ಧಕ್ಕೆ ಒಂದು ಅಂತ್ಯ ಬೇಗನೆ ಕಾಣಿಸುತ್ತೇನೆ, ಮಾರ್ಟಿನ್ ಲೂಥರ್ ಕಿಂಗ್ ಅವರ ಸಾವು ವ್ಯರ್ಥವಾಗಲು ಬಿಡುವದಿಲ್ಲ, ಶಾಂತಿ, ಅಂತೆಲ್ಲ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಿದ್ದ ಕೆನಡಿ ವರ್ಗಕ್ಕೆ ಅಭೂತಪೂರ್ವ ಬೆಂಬಲ ಸಿಗುತ್ತಿತ್ತು. ಪಟ್ಟಭದ್ರ ಹಿತಾಸಕ್ತಿಗಳ ಪಕ್ಕೆಯಲ್ಲಿ ಮತ್ತೆ ಮುಳ್ಳಾಡಿದಂತಾಯಿತಾ? ಎಲ್ಲಿ ಈ ಕೆನಡಿ ಬಂದು ತಮ್ಮ ರೊಕ್ಕಾ ಮಾಡುವ ಮಶೀನನನ್ನು ಹದೆಗೆಡಿಸಿಬಿಡುತ್ತಾರೋ ಅಂತ ಚಿಂತೆಯಾಯಿತಾ? ಗೆದ್ದ ನಂತರ ಎಲ್ಲಿ ತಮ್ಮ ಅಣ್ಣ ಜಾನ್ ಕೆನಡಿಯ ನಿಗೂಢ ಹತ್ಯೆಯ ಪುನರ್ತನಿಖೆ ಮಾಡಿಸಿಬಿಡುತ್ತಾರೋ ಅಂತ tension ಆಯಿತಾ?

ಜೂನ್ ೬, ೧೯೬೮, ಅಮೇರಿಕಾ ಮತ್ತೊಮ್ಮೆ ಫುಲ್ ಥಂಡಾ ಹೊಡೆದು, ಹಾಂ! ಅಂತ ಇಡೀ ದೇಶವೇ ಬಾಯಿಬಿಟ್ಟಿತು!

ರಾಬರ್ಟ್ ಕೆನಡಿ ಹತ್ಯೆಯಾಗಿದ್ದರು!

ಲಾಸ್ ಏಂಜೆಲ್ಸ್ ನಗರದ ಹೋಟೆಲ್ ಒಂದರಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತಾಡಿ ತಮ್ಮ ವಾಹನದ ಕಡೆ ತಮ್ಮ ಹಿಂಬಾಲಿಕರ ಜೊತೆ, ಹೋಟೆಲ್ಲಿನ ಅಡುಗೆ ಮನೆ ಮೂಲಕ ಒಳದಾರಿಯಲ್ಲಿ ಕೆನಡಿ ಬರುತ್ತಿದ್ದರು. ಖುಷಿಯಲ್ಲಿದ್ದರು. ಕ್ಯಾಲಿಫೋರ್ನಿಯಾ ಅಂತರಿಕ ಚುನಾವಣೆ ಗೆದ್ದಿದ್ದರು.

ಆಗ ಸಂಭವಿಸಿತು ಅವಗಢ!

ಒಬ್ಬ ಬಂದವನೇ ಢಂ! ಢಂ! ಅಂತ ಗುಂಡು ಹಾಕೇ ಬಿಟ್ಟ. ಪೂರ್ತಿ ಗೊಂದಲ. ಇಕ್ಕಟ್ಟು ಒಳದಾರಿ. ಜನದಟ್ಟಣೆ. ಗದ್ದಲ. ಗೌಜಿ. ಅದರಲ್ಲಿ ಗುಂಡು ಹಾರಾಟ. ಕೆನಡಿ ತೀವ್ರವಾಗಿ ಗಾಯಗೊಂಡರು. ಸುಮಾರು ಹೊತ್ತಿನ ನಂತರ ಅವರು ಆಸ್ಪತ್ರೆಯಲ್ಲಿ ನಿಧನರಾದರು. (ಹತ್ಯೆಯ ವೀಡಿಯೊ ಕೊನೆಗೆ ಇದೆ. ನೋಡಿ)

ಗುಂಡು ಹಾರಿಸಿದ ಎಂದು ನಂಬಲಾದ ವ್ಯಕ್ತಿಯನ್ನು ಎಲ್ಲರೂ ಕೂಡಿ ಅಲ್ಲೇ ಬಂಧಿಸಿದ್ದರು. ಆದರೆ ಅವನೇಕೆ ಅಷ್ಟು ನಿರ್ಭಾವುಕನಾಗಿ ಏನೂ ಗೊತ್ತಿಲ್ಲದವನಂತೆ, ಏನೂ ನೆನಪಿಲ್ಲದವನಂತೆ ನಿಂತಿದ್ದ!?

ಈ ಕಡೆ ಕೆನಡಿಗೆ ಗುಂಡು ಬೀಳುತ್ತಿದ್ದಂತೆ ಚುಕ್ಕೆ (polka  dots) ಲಂಗ ಹಾಕಿದ್ದ ಹುಡುಗಿ ಒಬ್ಬಾಕೆ, we shot him! we got him! ಅನ್ನುತ್ತ ಹೋಟೆಲ್ಲಿನಿಂದ ಓಡಿದಳು. ಅವಳೂ ಹತ್ಯೆಯಲ್ಲಿ ಭಾಗಿಯಾಗಿದ್ದಳೆ?

ಅಲ್ಲಿಯ ತನಕ ಓನಾಸಿಸ್ ಜೊತೆ ಏನೂ ಇಲ್ಲ, ಏನಿಲ್ಲ, ಅನ್ನುತ್ತಿದ್ದ ಜಾಕಿ ಕೆನಡಿ, ರಾಬರ್ಟ್ ಕೆನಡಿ ಜೂನ್ ೧೯೬೮ ರಲ್ಲಿ ಹತ್ಯೆಯಾಗಿದ್ದೆ ಆಗಿದ್ದು ಅಕ್ಟೋಬರ್ ನಲ್ಲಿ ಜಾಕಿ ಕೆನಡಿ ಓನಾಸಿಸ್ ನನ್ನು ಮದುವೆ ಆಗಿ ಬಿಟ್ಟಳು! ಜೂನ್ ನಲ್ಲಿ ಹತ್ಯೆ, ಅಕ್ಟೋಬರ್ ನಲ್ಲಿ ಮದುವೆ!

ಯಾಕೆ!?

ಕೇಳಿದರೆ, ಮೊದಲು ನನ್ನ ಗಂಡ ಜಾನ್ ಕೆನಡಿಯನ್ನು ಕೊಂದರು, ಈಗ ನೋಡಿ ನನ್ನ ಮೈದುನ ರಾಬರ್ಟ್ ಕೆನಡಿಯನ್ನು ಕೊಂದರು, ನನಗೆ ತುಂಬಾ ಭಯ, ಚಿಕ್ಕ ಮಕ್ಕಳು ಬೇರೆ, ಒಂದು ಗಂಡಿನ ಆಶ್ರಯ ಇದ್ದರೆ ಹೇಗೋ ಬದುಕಿಕೊಂಡೇವು, ಪ್ಲೀಸ್ ಮತ್ತೇನೂ ಕೇಳಬೇಡಿ, ಅಂತ ಹೇಳಿದ ಜಾಕಿ ಕೆನಡಿ ಹೊಸ ಗಂಡ, ಹಳೆ ಗೆಳೆಯನ ಮನೆ ಕಡೆ ಹೋಗಿ ಬಿಟ್ಟಳು.

ರಾಬರ್ಟ್ ಕೆನಡಿ ಸತ್ತು ಹೋಗಿ, ಅನಾಥ ಭಾವ ಬಂದಿದ್ದಕ್ಕೆ ಅಷ್ಟು ಬೇಗನೆ ಮದುವೆಯಾದಳೋ? ಅಥವಾ ರಾಬರ್ಟ್ ಕೆನಡಿ ಇರುವ ತನಕ ಅರಿಸ್ಟಾಟಲ್ ಓನಾಸಿಸ್ ನನ್ನು ಮದುವೆಯಾಗಲು ಸಾಧ್ಯವಿಲ್ಲ ಅಂತ ರಾಬರ್ಟ್ ಕೆನಡಿಯನ್ನು ಸಂಚು ಮಾಡಿ ತೆಗೆಸಿಬಿಡಲಾಯಿತಾ? ಯಾರು ಮಾಡಿದ್ದರು? ಆಕೆಯೋ ಅಥವಾ ಓನಾಸಿಸ್ಸನೋ? ಅಥವಾ ಬೇರೆ ಯಾರೋ ರಾಬರ್ಟ್ ಕೆನಡಿಯನ್ನು ತಮ್ಮದೇ ಕಾರಣಗಳಿಗೆ ಉಡಾಯಿಸಿಬಿಟ್ಟರೋ? ಒಂದು false trail ಮಾಡಲು ಓನಾಸಿಸ್ಸನ್ನು ಬಳಸಿಕೊಂಡರೋ? ಅಥವಾ ಎಲ್ಲ ಕೇವಲ ಕಾಕತಾಳಿಯವೋ?

ಎಲ್ಲ ನಿಗೂಢ!!!! ಗೋಜಲು ಗೋಜಲು!!!!!!!!!!!!!!

ಹೀಗೆ ಹಲವಾರು ಪ್ರಶ್ನೆಗಳು ಏಳುತ್ತವೆ. ಜಾನ್ ಕೆನಡಿ ಹತ್ಯೆಯ ನಿಗೂಢತೆಯೇ ಒಂದು ಮಟ್ಟದ್ದಾದರೆ ರಾಬರ್ಟ್ ಕೆನಡಿ ಹತ್ಯೆಯ ಹಿಂದಿರುವ ನಿಗೂಢತೆ, ಕಾರಸ್ತಾನ ಅರಿಯುತ್ತ ಹೋದಂತೆ ತಲೆ ಗಿವ್ವೆನ್ನುತ್ತದೆ.

ರಾಬರ್ಟ್ ಕೆನಡಿ ಮೇಲೆ ಗುಂಡು ಹಾರಿಸಿದ ಅಂತ ಹೇಳಿ ಒಬ್ಬ ಪ್ಯಾಲೆಸ್ತೇನಿ ನಿರಾಶ್ರಿತ ಜೇಲಿಗೆ ಹೋದ. ಅವನನ್ನು ಸಂಮೋಹಿನಿಗೆ ಒಳಪಡಿಸಿ ಅವನ ವ್ಯಕ್ತಿತ್ವನ್ನೇ ಬದಲಾಯಿಸಿಬಿಡಲಾಗಿತ್ತೆ? ಹತ್ಯೆಯ ನಂತರ ಅವನಿಗೆ ಏನೂ ನೆನಪಿರದ ಹಾಗೆ ಬ್ರೈನ್ ವಾಶ್ ಮಾಡಿ ಬಿಟ್ಟಿದ್ದರೆ? ಚುಕ್ಕಿ ಲಂಗದ ಹುಡುಗಿ ಹಂತಕನಿಗೆ ಸಂಜ್ಞೆ ಮಾಡಲು ಬಂದಿದ್ದಳೋ ಹೇಗೆ? ಮತ್ತೆ ಸಿಐಎ rogue elements ಈ ಹತ್ಯೆಯಲ್ಲಿಯೂ ಭಾಗಿಯಾಗಿದ್ದರಾ?

ಇವೆಕ್ಕೆಲ್ಲ ಉತ್ತರ ಮತ್ತು ರಾಬರ್ಟ್ ಕೆನಡಿ ಹತ್ಯೆಯ ಅನೇಕ ರೋಚಕ ವಿವರಗಳು ಮತ್ತು ಜಾಕಿ ಕೆನಡಿ, ಓನಾಸಿಸ್ ಹೊಸ ಸಂಸಾರದ ಸರಸ ವಿರಸ ಎಲ್ಲ ಮುಂದಿನ ಭಾಗದಲ್ಲಿ.

(ಮುಂದುವರಿಯಲಿದೆ) (ಭಾಗ - ೪ ಇಲ್ಲಿದೆ)

ಓನಾಸಿಸ್ & ಜಾಕಿ ಕೆನಡಿ ಮದುವೆ ನಂತರ
ರಾಬರ್ಟ್ ಕೆನಡಿ ಹತ್ಯೆಯ ವೀಡಿಯೊ

1 comment:

Vimarshak Jaaldimmi said...


Very good!

Was double-decker hairstyle common in those days? Maybe they got hints from fashion-divas of KalyanNagar!