Wednesday, May 07, 2014

ಮುಂಬೈ ಭೂಗತ ಲೋಕದಲ್ಲೊಬ್ಬ ಎರಡು ಸಲ ಸಾವನ್ನು ಗೆದ್ದು ಬಂದ ಮೃತ್ಯುಂಜಯ!

೧೧ ನವೆಂಬರ್ ೧೯೯೮. ಮುಂಬೈ.

ಹಿಂದೆಂದೂ ಆಗಿರದಂತ ವಿಸ್ಮಯ ಘಟನೆಯೊಂದಕ್ಕೆ ಮಹಾನಗರಿ ತೆರೆದುಕೊಳ್ಳುತ್ತಿತ್ತು.

ಮುಂಬೈನ KEM ಆಸ್ಪತ್ರೆಯ ಶವಾಗಾರದ ಮುಂದಿರುವ ಬೆಂಚುಗಳ ಮೇಲೆ ಹೆಣ ಎತ್ತುವ ಕೆಲವು ವಾರ್ಡ್ ಬಾಯ್ಸ್ ಹರಟೆ ಹೊಡೆಯುತ್ತ ಕೂತಿದ್ದರು. ಬಿಳಿ ಅಂಗಿ, ಬಿಳಿ ಚಡ್ಡಿ, ಬಿಳಿ ಟೊಪ್ಪಿ ಅವರ ಟ್ರೇಡ್ ಮಾರ್ಕ್ ಸಮವಸ್ತ್ರ. ಹೆಣ ಎತ್ತೀ ಎತ್ತೀ ಯಾವದೋ ಬಣ್ಣಕ್ಕೆ ತಿರುಗಿತ್ತು. ಕೆಲವರು ಕೈಯಲ್ಲಿ ಗಾಯ್ ಛಾಪ್ ತಂಬಾಕು ಸುರುವಿಕೊಂಡು, ಸುಣ್ಣದ ಒಂದು ಸಣ್ಣ ಉಂಡೆಯನ್ನು ಅದರ ಮೇಲಿಟ್ಟು, ಅದರ ಮೇಲೆ ಹೆಬ್ಬಟ್ಟು ಒತ್ತಿ, ತಿಕ್ಕಿ ತಿಕ್ಕಿ, ಆ ಹೊತ್ತಿನ ತಂಬಾಕಿನ ಡೋಸಿಗೆ ತಯಾರಿ ಮಾಡಿಕೊಳ್ಳುತ್ತಿದ್ದರು.  ಹೆಣ ಎತ್ತೋ ತಮ್ಮ 'ಅದೃಷ್ಟದ' ಹಸ್ತರೇಖೆಗಳನ್ನೇ ಬದಲಿಸುವ ಪ್ರಯತ್ನ ಮಾಡುತ್ತಿದ್ದಾರೋ ಎಂಬಂತೆ ತಂಬಾಕು ತಿಕ್ಕುತ್ತಿದ್ದರು. ಅಷ್ಟರಲ್ಲಿ ಒಂದು ಹಳೆಯ ಲಟಾರಿ ಪೋಲೀಸ್ ವ್ಯಾನ್ ಆಕಡೆ ಬರುತ್ತಿರುವದು ಕಂಡಿತು. ತುಂಬಿದ ಬಸುರಿಯಂತೆ ಆಕಡೆ ಈಕಡೆ ಒಲಿಯುತ್ತ, ಜೋಲಿ ಹೊಡೆಯುತ್ತ, ಕೆಟ್ಟ ಕರಿ ಹೊಗೆ ಬಿಡುತ್ತ ಬರುತ್ತಿರುವ ವ್ಯಾನ್ ನೋಡಿದಾಕ್ಷಣ ವಾರ್ಡ್ ಬಾಯ್ಸಗೆ ಗೊತ್ತಾಯಿತು ಪೊಲೀಸರು ಹೆಣ ತರುತ್ತಿದ್ದಾರೆ ಅಂತ. ಆಕ್ಸಿಡೆಂಟ್, ಗೂಂಡಾಗಳ ಎನ್ಕೌಂಟರ್ ಆದಾಗೆಲ್ಲ ಪೊಲೀಸರು ಹೆಣ ತರುತ್ತಿದ್ದುದೇ ಅದರಲ್ಲಿ. ತಿಕ್ಕುತ್ತಿದ್ದ ತಂಬಾಕನ್ನು ದವಡೆ ಮೂಲೆಯಲ್ಲಿ ಹೆಟ್ಟಿಕೊಂಡ ವಾರ್ಡ್ ಬಾಯ್ಸ್ ಪೋಲೀಸ್ ವ್ಯಾನ್ ಬಂದು ನಿಲ್ಲುವದನ್ನೇ ಕಾಯತೊಡಗಿದರು.

ಪೋಲೀಸ್ ವ್ಯಾನಿನ ಕಪ್ಪು ಹೊಗೆಯನ್ನು ಚೀರಿಕೊಂಡು ಗಕ್ಕನೆ ಬಂದು ನಿಂತಿದ್ದು ಬಿಳೆ ಬಣ್ಣದ ಮಾರುತಿ ಜಿಪ್ಸಿ ಜೀಪು. ಬಿಳೆ ಮಾರುತಿ ಜಿಪ್ಸಿ ಜೀಪು ಅಂದ ಮೇಲೆ ಮುಗಿಯಿತು. ದೂಸಾರಾ ಮಾತೇ ಇಲ್ಲ. ಮುಂಬೈ ಪೋಲೀಸ ಇಲಾಖೆಯ ಖತರ್ನಾಕ್ ಕ್ರೈಂ ಬ್ರಾಂಚಿನವರದು. ಖಾತ್ರಿಯಾಗಿ ಎನ್ಕೌಂಟರ್ ಆಗಿದೆ. ಲಟಾರಿ ಪೋಲೀಸ್ ವ್ಯಾನ್ ಬರುತ್ತಿರುವದು ಕ್ರೈಂ ಬ್ರಾಂಚಿನ ಪೊಲೀಸರು ಎನ್ಕೌಂಟರಿನಲ್ಲಿ ಢಂ ಅನ್ನಿಸಿದ ಗೂಂಡಾಗಳ ಹೆಣ ಹೊತ್ತೇ ಅಂತ ವಾರ್ಡ್ ಬಾಯ್ಸಿಗೆ ಗೊತ್ತಾಗಲಿಕ್ಕೆ ಹೆಚ್ಚು ಹೊತ್ತು ಬೇಕಾಗಲಿಲ್ಲ. ಪೋಲೀಸ್ ಎನ್ಕೌಂಟರಿನಲ್ಲಿ ಸತ್ತವರ ಹೆಣ ಎತ್ತುವದು ಸ್ವಲ್ಪ ಬೇರೆ ತರಹದ ಕೆಲಸ. ಅದಕ್ಕೆ ತಯಾರಾದರು.

ಬಂದು ನಿಂತ ಕ್ರೈಂ ಬ್ರಾಂಚಿನ ಮಾರುತಿ ಜಿಪ್ಸಿ ಜೀಪಿನಿಂದ ಚಕ್ಕಂತ ಇಳಿದು ನಿಂತವರು ಸೀನಿಯರ್ ಇನ್ಸಪೆಕ್ಟರ್ ಅಂಬಾದಾಸ್ ಪೋಟೆ, ಎನ್ಕೌಂಟರ್ ಸ್ಪೆಷಲಿಸ್ಟ್. ಅವರನ್ನು ನೋಡಿದ ವಾರ್ಡ್ ಬಾಯ್ಸಿಗೂ ಒಮ್ಮೆ ಬೆನ್ನುಹುರಿಯಾಳದಲ್ಲಿ ಯಾಕೋ ಒಂತರಹದ ಅಳುಕು ಛಳಕ್ ಅಂದಿತ್ತು. ಅರಿಭಯಂಕರ ಇನ್ಸಪೆಕ್ಟರ್ ಪೋಟೆ ಎನ್ಕೌಂಟರ್ ಮಾಡಿಕೊಂಡೇ ಬಂದಿರುತ್ತಾರೆ. ಸಂಶಯವೇ ಇಲ್ಲ. ಎಷ್ಟು ಹೆಣ ಎತ್ತಬೇಕಾಗಬಹುದು ಎಂಬುದೇ ಉಳಿದಿದ್ದ ಪ್ರಶ್ನೆ.

ಅಷ್ಟರಲ್ಲಿ ಜೋಲಿ ಹೊಡೆಯುತ್ತ ಬರುತ್ತಿದ್ದ ಹೆಣದ ವ್ಯಾನ್ ಸಹಿತ ಬಂದು ನಿಂತಿತು. ಹೆಣ ಎತ್ತುವ ಎರಡು ಸ್ಟ್ರೆಚರ್ ತೆಗೆದುಕೊಂಡ ನಾಲ್ಕು ವಾರ್ಡ್ ಬಾಯ್ಸ್ ವ್ಯಾನಿನ ಹಿಂದಿನ ಬಾಗಿಲ ಕಡೆ ಓಡಿದರು. ಇನ್ಸಪೆಕ್ಟರ್ ಪೋಟೆ ತಮ್ಮ ಸಹಾಯಕನಿಗೆ ಸಂಜ್ಞೆ ಮಾಡಿದರು. ಹೋಗಿ ವ್ಯಾನಿನ ಹಿಂದಿನ ಬಾಗಿಲು ತೆಗೆ ಅಂತ. ಅವನು ತೆಗೆದ. ಕಂಡ ದೃಶ್ಯ ಬಹಳ ಖರಾಬ್ ಆಗಿತ್ತು. ಬೀಭತ್ಸವಾಗಿತ್ತು. ಎಷ್ಟೋ ಎನ್ಕೌಂಟರ್, ಆಕ್ಸಿಡೆಂಟ್ ಆದಾಗ ಬಂದಿದ್ದ ಹೆಣ ಎತ್ತಿದ್ದ ವಾರ್ಡ್ ಬಾಯ್ಸ್ ಸಹಿತ ಆ ದೃಶ್ಯ ನೋಡಿ ಥಂಡಾ ಹೊಡೆದರು. ಹಾಂ! ಅಂತ ಬೆರಗಾದರು.

ಸುಮಾರು ಅರ್ಧ ಡಜನ್ ಹೆಣಗಳನ್ನು ಒಂದರ ಮೇಲೊಂದರಂತೆ ಅಸಡಾ ಬಸಡಾ ಪೇರಿಸಿಡಲಾಗಿತ್ತು. ಎಲ್ಲ ಕಡೆ ಸುರಿದಿರುವ ರಕ್ತ. ರಾಮಾ ರಕ್ತ. ಅಕರಾಳ ವಿಕರಾಳವಾಗಿ ಹರಡಿಕೊಂಡಿರುವ ಕೈ ಕಾಲುಗಳು. ಸತ್ತವರ ಮುಖದ ಮೇಲೆ ಚಿತ್ರ ವಿಚಿತ್ರ ಕೊನೆಯ ಭಾವನೆಗಳು. ಅವನ್ನು ತೊಳೆಯುವಂತೆ ಹರಿದಿರುವ ರಕ್ತ. ಬುರುಡೆ ಬಿಚ್ಚಿ ಪಚಕ್ ಅಂತ ಹೊರಗೆ ಹಾರಿರುವ ಲೋಳೆ ಲೋಳೆ ಬಿಳೆ ಬಿಳೆ ಮೆದುಳಿನ ಚೂರುಗಳು. ಅವು ಹರಿದ ರಕ್ತದಲ್ಲಿ ಕೆಂಪಾಗಿ ಭಯಾನಕವಾಗಿ ಕಾಣುತ್ತಿದ್ದವು. ಹಾರಿಬಲ್! ಮುನ್ಸಿಪಾಲಿಟಿಯವರು ಬೀದಿ ನಾಯಿಗಳನ್ನು ಕೊಂದು, ಕಚರಾ ಎಂಬಂತೆ ದರಾ ದರಾ ಎಳೆದುಕೊಂಡು ಬಂದಿರುತ್ತಾರಲ್ಲ ಹಾಗೆ ಹೆಣಗಳನ್ನು ಪೇರಿಸಿ ಒಗೆದಿದ್ದರು. ವ್ಯತ್ಯಾಸ ಅಂದ್ರೆ ಇವು ನಾಯಿಗಳದ್ದಲ್ಲ ಮನುಷ್ಯರವು. ನೋಡಿದ ವಾರ್ಡ್ ಬಾಯ್ಸ್ ಹಾಂ! ಅಂತ ಬೆಚ್ಚಿ ಬಿದ್ದರು. ಎಲ್ಲೋ ಒಂದೋ ಎರಡೋ ಗೂಂಡಾಗಳನ್ನು ಎನ್ಕೌಂಟರ್ ಮಾಡಿ ಹೆಣ ತಂದಿದ್ದಾರೋ ಅಂತ ನೋಡಿದರೆ ಆವತ್ತು ಇನ್ಸಪೆಕ್ಟರ್ ಪೋಟೆ ದೊಡ್ಡ ಭರ್ಜರಿ ಬೇಟೆಯನ್ನೇ ಆಡಿದ ಹಾಗೆ ಕಾಣುತ್ತಿತ್ತು.

ಎಷ್ಟು ಸಾಹೇಬ್? ಅಂತ ಕೇಳಿದ ಒಬ್ಬ ವಾರ್ಡ್ ಬಾಯ್.

ಅರ್ಧ ಡಜನ್ನಿಗೆ ಒಂದೇ ಕಮ್ಮಿ. ಐದು, ಅಂತ ಇನ್ಸಪೆಕ್ಟರ್ ಅಂಬಾದಾಸ್ ಪೋಟೆ ನಿರ್ಭಾವುಕರಾಗಿ ಹೇಳಿದರು.

ಏ, ತುಕಾರಾಂ, ಇನ್ನೂ ಮೂರು ಸ್ಟ್ರೆಚರ್ ತಗೊಂಡು ಬಾರಪ್ಪಾ, ಅಂತ ಬಾಯಲ್ಲಿದ್ದ ತಂಬಾಕನ್ನು ಉಗಿದು ಹೇಳಿದ ಒಬ್ಬ ವಾರ್ಡ್ ಬಾಯ್.

ಹೋ, ಭಾವು (ಸರಿ ಅಣ್ಣ) ಅಂತ ಮರಾಠಿಯಲ್ಲಿ ಹೇಳಿದ ತುಕಾರಾಮ ಎಂಬ ವಾರ್ಡ್ ಬಾಯ್ ಮತ್ತೂ ಮೂರು ಸ್ಟ್ರೆಚರ್ ತರಲು ಶವಾಗಾರದ ಒಳಗೆ ಓಡಿದ.

ಏನು ಸಾಹೇಬ್, ಬಹಳ ದೊಡ್ಡ ಬೇಟೆಯೇ ಆದಂತೆ ಇದೆ ಇವತ್ತು? ಏನಿದು ದಾಖಲೆಯೇ? ಅಂತ ಸುಮ್ಮನೆ ಕೇಳಿದ ವಾರ್ಡ್ ಬಾಯ್.

ಹಾಂಗೆ ಅಂತ ತಿಳ್ಕೋ. ಐದು ಜನ. ದೊಡ್ಡ ಗೂಂಡಾಗಳು. ಎಲ್ಲ ಛೋಟಾ ರಾಜನ್ ಗ್ಯಾಂಗ್. ದಾವೂದ್ ಇಬ್ರಾಹಿಮ್ ಕಡೆಯವರನ್ನು ಮುಗಿಸಲು ಹೋಗುತ್ತಿದ್ದರು. ಪಕ್ಕಾ ಖಬರ್ ಬಂದಿತ್ತು. ಎಲ್ಲರನ್ನೂ ಮೇಲೆ ಕಳಿಸಿಬಿಟ್ಟೆವು. ಖೇಲ್ ಖತಂ. ಕಚರಾ ಸಾಫ್. ಬೇಗ ಬೇಗ ಪೋಸ್ಟ್ ಮಾರ್ಟಂ ಇತ್ಯಾದಿ ಮಾಡಿಸಿ ಮುಗಿಸಯ್ಯ, ಅಂತ ಅವಸರ ಮಾಡಿದರು ಇನ್ಸಪೆಕ್ಟರ್ ಪೋಟೆ.

ಹೋ ಸಾಹೇಬ್! ಜರೂರ್, ಅಂತ ಒಪ್ಪಿಗೆ ಸೂಚಿಸಿದ ವಾರ್ಡ್ ಬಾಯ್ಸುಗಳ ಕಣ್ಣಲ್ಲಿ ದೊಡ್ಡ ಅಚ್ಚರಿ.

ಬೀದಿನಾಯಿಗಳಂತೆ ಹತ್ತಾರು ಗುಂಡು ತಿಂದು, ಹೆಣವಾಗಿ, ಲಟಾರಿ ಪೋಲೀಸ್ ವಾಹನದಲ್ಲಿ ಬಿದ್ದಿದ್ದ ಹೆಣಗಳನ್ನು ಒಂದೊಂದಾಗಿ ಎತ್ತಿ ಸ್ಟ್ರೆಚರ್ ಮೇಲಿಟ್ಟು ಶವಾಗಾರದ ಒಳಗೆ ಸಾಗಿಸತೊಡಗಿದರು. ಎಲ್ಲ ಹೆಣಗಳು ಒಳಗೆ ಹೋದವು ಅಂತಾದ ಮೇಲೆ ಒಮ್ಮೆ ತನ್ನ ತಂಡದೊಂದಿಗೆ ಇನ್ಸಪೆಕ್ಟರ್ ಪೋಟೆ ಶವಾಗಾರದ ಒಳಗೆ ಹೊಕ್ಕರು. ಪೋಸ್ಟ್ ಮಾರ್ಟಂ ಮೊದಲು ಒಂದು ಸಲ ಎಲ್ಲ ಸರಿಯಾಗಿದೆ ಅಂತ ಖಾತ್ರಿ ಮಾಡಿಕೊಳ್ಳುವದು ಅವರ ಪದ್ಧತಿ.

ಐದೂ ಗ್ಯಾಂಗಸ್ಟರುಗಳ ಶವಗಳನ್ನು ಸಾಲಾಗಿ ಮಲಗಿಸಿದ್ದರು. ಮೇಲೆ ಒಂದು ಬಟ್ಟೆ ತರಹದ್ದೇನೋ ಮುಚ್ಚಿದ್ದರು. ಒಂದು ಸರೆ ಆಕಡೆಯಿಂದ ಈಕಡೆ ಸರಿಯಾಗಿ ನೋಡಿದ ಇನ್ಸಪೆಕ್ಟರ್ ಪೋಟೆ ಹೊರಡಲು ತಯಾರಾದರು. ಇನ್ನು ಹೋಗಿ, ಯಾವಾಗಲೂ ಬಿಡುಗಡೆ ಮಾಡುವಂತಹ ಒಂದು ಪ್ರೆಸ್ ನೋಟ್ ಬಿಡುಗಡೆ ಮಾಡಿಬಿಟ್ಟರೆ ಕೆಲಸ ಮುಗಿದಂತೆ. ಈ ಗ್ಯಾಂಗಸ್ಟರುಗಳು ಬರುತ್ತಿದ್ದಾರೆ ಅಂತ ಖಚಿತ ಮಾಹಿತಿ ನಮಗೆ ಬಂದಿತ್ತು. ಅದರಂತೆ ನಾವು ಹೋಗಿ, ಅವರನ್ನು ಆವರಸಿಕೊಂಡು, ಶರಣಾಗಲು ಹೇಳಿದೆವು. ಆಗ ಅವರು ನಮ್ಮ ಮೇಲೆ ಗುಂಡು ಹಾರಿಸಿದರು. ಪೊಲೀಸರು ಸ್ವರಕ್ಷಣೆಗಾಗಿ ಗುಂಡು ಹಾರಿಸಿದರು. ಆ ಗುಂಡಿನ ಚಕಮಕಿಯಲ್ಲಿ ಗ್ಯಾಂಗಸ್ಟರುಗಳು ಗಾಯಗೊಂಡರು. ಹತ್ತಿರದ KEM ಆಸ್ಪತ್ರೆಗೆ ತರಲಾಯಿತು. ಅಲ್ಲಿ ವೈದ್ಯರು ಅವರೆಲ್ಲ ನಿಧನರಾಗಿದ್ದಾರೆ ಅಂತ ಘೋಷಿಸಿದರು. ಇದು ಪ್ರತಿ ಎನ್ಕೌಂಟರ್ ನಂತರ ಪೊಲೀಸರು ಕೊಡುತ್ತಿದ್ದ ಮಾಮೂಲಿ ವರದಿ. ಶತಪ್ರತಿಶತ ಫುಲ್ ಭೋಂಗು. ಎಲ್ಲರಿಗೂ ಗೊತ್ತಿದ್ದದ್ದೇ. ಆದರೂ ಪ್ರತಿ ಎನ್ಕೌಂಟರ್ ಆದ ಮೇಲೆ ಒಂದು ಅಂತಹ ಫೇಕ್ ವರದಿ ಬರಲಿಲ್ಲ ಅಂದ್ರೆ ಹೇಗೆ?

ಇನ್ಸಪೆಕ್ಟರ್ ಪೋಟೆ, ಅವರ ತಂಡ, ವಾರ್ಡ್ ಬಾಯ್ಸ್ ಎಲ್ಲ ಹೊರಗೆ ಬರಲು ತಿರುಗಿ ಎರಡು ಹೆಜ್ಜೆ ಹಾಕಿದ್ದರೋ ಇಲ್ಲವೋ, ಆವಾಗ ಅವರೆಲ್ಲರ ರೋಮಗಳೆಲ್ಲ ಎದ್ದು ನಿಲ್ಲುವಂತಹ ವಿಚಿತ್ರ ಘಟನೆಯೊಂದು ನಡೆದುಹೋಯಿತು. ಆ ನಮೂನಿ ಘಟಾನುಘಟಿ ಪೊಲೀಸರೇ ಅದಕ್ಕೆ ರೆಡಿ ಇರಲಿಲ್ಲ. ಹರ್ಗೀಸ್ ತಯಾರ ಇರಲೇ ಇಲ್ಲ! ಊಹಿಸಿಕೊಳ್ಳಲೂ ಅಸಾಧ್ಯ!

ಎನ್ಕೌಂಟರಿನಲ್ಲಿ ಗುಂಡು ತಿಂದು 'ಸತ್ತಿದ್ದ' ಅಂದುಕೊಂಡಿದ್ದ 'ಶವ'ವೊಂದು ಎದ್ದು ಕುಳಿತುಬಿಟ್ಟಿತು! ಎದ್ದು ಕುಳಿತಿದದ್ದು ಒಂದೇ ಅಲ್ಲ. ನಾನು ಸತ್ತಿಲ್ಲ!!! ನಾನು ಸತ್ತಿಲ್ಲ!!! ಅಂತ ಬೊಬ್ಬೆ ಹೊಡೆಯಿತು.

ಎಲ್ಲರ ಎದೆ ಒಂದು ಕ್ಷಣ ಝಲ್ ಅಂತು. ಕಮ್ಮಿ ಕಮ್ಮಿ ಅಂದರೂ ನೂರು ಗುಂಡುಗಳನ್ನು ಐದು ಮಂದಿ ರೌಡಿಗಳ ದೇಹದೊಳಕ್ಕೆ ನುಗ್ಗಿಸಿದ್ದರು. ಪ್ರತಿಯೊಬ್ಬರಿಗೆ ಸರಾಸರಿ ಇಪ್ಪತ್ತು ಗುಂಡು. ಒಂದು ಹೆಚ್ಚು ಒಂದು ಕಮ್ಮಿ. ಬದುಕುಳಿವ ಚಾನ್ಸೇ ಇರಲಿಲ್ಲ. ಅಂತದ್ದರಲ್ಲಿ ಅವರಲ್ಲೊಬ್ಬ ಎದ್ದು ಕೂತು, ನಾನು ಸತ್ತಿಲ್ಲ!! ಅಂತ ಬೊಂಬಡಾ ಹೊಡೆಯುತ್ತಿದ್ದಾನೆ. ಇದೇನು ಕನಸಾ ನನಸಾ? ಅಂತ ಕಣ್ಣು ತಿಕ್ಕಿಕೊಂಡರು ಪೋಟೆ. ನೋಡಿದರೆ ಆ ಪರಿ ಗುಂಡುಗಳನ್ನು ತಿಂದಿದ್ದರೂ ಅವನು ಮಾತ್ರ ಎದ್ದು ಕೂತು, ಸತ್ತಿಲ್ಲ, ಬದುಕಿಸಿ, ಅಂತ ಅಂಗಾಲಾಚುತ್ತಲೇ ಇದ್ದಾನೆ. ಆಸ್ಪತ್ರೆಯ ಶವಾಗಾರ ಅಲ್ಲದಿದ್ದರೆ ಅಂಬಾದಾಸ್ ಪೋಟೆ ಮತ್ತೊಮ್ಮೆ ರಿವಾಲ್ವರ್ ಲೋಡ್ ಮಾಡಿಕೊಂಡವರೇ ಮತ್ತೊಮ್ಮೆ ಢಂ! ಢಂ! ಅಂತ ಇನ್ನೊಂದಿಷ್ಟು ಗುಂಡು ನುಗ್ಗಿಸಿ ಅವನ ಕಥೆ ಮುಗಿಸುತ್ತಿದ್ದರೋ ಏನೋ. ಆದರೇನು ಮಾಡುವದು? ಅಷ್ಟು ಓಪನ್ ಆಗಿ ಎನ್ಕೌಂಟರ್ ಮಾಡಿದರೆ ಆಪತ್ತು ಅಂತ ಬಿಟ್ಟರು.

ಬದುಕಿದವ ಯಾರು ಅಂತ ನೋಡಿದರೆ ಅವರಿಗಾಗಲಿ ಅವರ ತಂಡದವರಿಗಾಗಲಿ ನಂಬಿಕೆ ಬರಲಿಲ್ಲ. ಬದುಕಿದ್ದ ಗ್ಯಾಂಗಸ್ಟರ್ ಯಾರಾಗಿದ್ದ ಅಂದರೆ ಡಿ.ಕೆ.ರಾವ್ ಉರ್ಫ್ ರವಿ ಮಲ್ಲೇಶ್ ಬೋರಾ.

ಇಸ್ಕಿ ಮಾಯಿಲಾ! ಅನ್ನುವ ಬೈಗುಳ ಅವರಿಗೆ ತಿಳಿಯದೇ ಅವರ ಬಾಯಿಂದ ಬಂತು. ಈ ಡಿ. ಕೆ. ರಾವ್ ಅನ್ನುವ ರೌಡಿಯದು ಏನು ನಸೀಬ ದೇವರೇ!? ಅಂತ ಅಂದುಕೊಂಡಿರಬೇಕು ಪೋಟೆ. ಈ ಪುಣ್ಯಾತ್ಮ ಬಚಾವಾಗಿದ್ದು ಇದು ಎರಡನೇ ಎನ್ಕೌಂಟರ್ ಆಗಿತ್ತು. ಕೇವಲ ಐದು ವರ್ಷದ ಹಿಂದೆ ಡಕಾಯಿತಿ ಮಾಡುತ್ತಿದ್ದಾಗ ಮೃದುಲಾ ಅನ್ನುವ ಲೇಡಿ ಇನ್ಸಪೆಕ್ಟರ್ ಗುಂಡು ಹಾರಿಸಿದ್ದರು. ಕಾಲಿಗೆ ಗುಂಡು ತಿಂದಿದ್ದ ಪುಣ್ಯಾತ್ಮ ಅವತ್ತೂ ಬಚಾವಾಗಿದ್ದ. ಇವತ್ತು ಕೊಲ್ಲಲೇ ಬೇಕು ಅಂತ ಮಾಡಿದ ಎನ್ಕೌಂಟರಿನಲ್ಲಿ ಸಹಿತ ಬಚಾವಾಗಿಬಿಟ್ಟಿದ್ದಾನೆ. ಏನು ಮಾಡುವದು? ಅವನ ಪುಣ್ಯ. ನಮ್ಮ ಕರ್ಮ, ಅಂದುಕೊಂಡರು ಪೋಟೆ.

ಮಾಡಲಿಕ್ಕೆ ಏನೂ ಇರಲಿಲ್ಲ. ಸತ್ತಿಲ್ಲ ಅಂದ ಮೇಲೆ ಬದುಕಿಸಿಕೊಳ್ಳಲಿಕ್ಕೇ ಬೇಕು. ಅವನನ್ನು ಶವಾಗಾರದಿಂದ ಎಮರ್ಜೆನ್ಸಿ ವಾರ್ಡಿಗೆ ಶಿಫ್ಟ್ ಮಾಡಿ ಬಂದರು. ಅಲ್ಲಿ ಡಾಕ್ಟರುಗಳು ಚಿಕಿತ್ಸೆ ಶುರು ಮಾಡಿ ಒಂದೊಂದೇ ಆಗಿ ಎಲ್ಲ ಹತ್ತೊಂಬತ್ತು ಗುಂಡು ತೆಗೆದು ಹಾಕುತ್ತಿದ್ದರೆ ಅವರೇ ಆಶ್ಚರ್ಯ ಪಡುತ್ತಿದ್ದರು, ಈ ಪುಣ್ಯಾತ್ಮ ಹೇಗೆ ಬದುಕಿ ಉಳಿದಿದ್ದಾನೆ ಅಂತ?

ಬರೋಬ್ಬರಿ ಹತ್ತೊಂಬತ್ತು ಗುಂಡು ತಿಂದು ಎರಡನೇ ಬಾರಿ ಸಾವನ್ನು ಗೆದ್ದು ಬಂದಿದ್ದ ಈ ಮೃತ್ಯುಂಜಯನಂತಹ ಡಿ.ಕೆ.ರಾವ್!!!!

ಡಿ. ಕೆ. ರಾವ್
 ಆಗಿದ್ದೇನಾಗಿತ್ತು ಅಂದು ೧೧ ನವೆಂಬರ್ ೧೯೯೮ ರಂದು ಮುಂಬೈನಲ್ಲಿ?

ಒಂದು ದೊಡ್ಡ ಎನ್ಕೌಂಟರ್ ಆಗಿ ಹೋಗಿತ್ತು. ಕ್ರೈಂ ಬ್ರಾಂಚಿನ ಸೀನಿಯರ್ ಇನ್ಸಪೆಕ್ಟರ್ ಅಂಬಾದಾಸ್ ಪೋಟೆ ಮತ್ತವರ ತಂಡ ಅರ್ಧ ಡಜನ್ನಿಗೆ ಒಂದು ಕಮ್ಮಿ ಅಂದ್ರೆ ಐದು ವಿಕೆಟ್ ಹೊಡೆದ ಖುಷಿಯಲ್ಲಿದ್ದರು. ಒಂದೇ ಎನ್ಕೌಂಟರಿನಲ್ಲಿ ಛೋಟಾ ರಾಜನ್ ಕಡೆಯ ಐದು ಖತರ್ನಾಕ್ ರೌಡಿಗಳನ್ನು ಬಲಿ ಹಾಕಿತ್ತು ಆ ಪೋಲೀಸ್ ತಂಡ.

ಐದು ಜನರಲ್ಲಿ ಎಲ್ಲರೂ ಮುಂಬೈ ಭೂಗತ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿದವರೇ. ಕೇವಲ ಮುಂಬೈ ಮಾತ್ರವಲ್ಲದೆ ಮಂಗಳೂರು, ಬೆಂಗಳೂರಲ್ಲಿ ಸಹ ಹವಾ ಎಬ್ಬಿಸಿ ಹೋಗಿದ್ದ ರಮೇಶ ಪೂಜಾರಿಯಿದ್ದ. ರಾಜಾ ಗೋರೆ, ವಿಪಿನ್ ಖಂಡೇರಾವ್, ಜೈರಾಮ್ ಶೆಟ್ಟಿ ಎಂಬ ದೊಡ್ಡ ದೊಡ್ಡ ರೌಡಿಗಳೂ ಇದ್ದರು. ಚಿಂದಿ ಚೋರನಾಗಿ ಶುರು ಮಾಡಿ ಆಗಲೇ ಒಂದು ಎನ್ಕೌಂಟರಿನಲ್ಲಿ ಕಾಲಿಗೆ ಮಾತ್ರ ಒಂದು ಗುಂಡು ತಿಂದು ಬದುಕಿ ಬಂದಿದ್ದ ಇದೇ ಡೀಕೆ ರಾವ್ ಸಹಿತ ಇದ್ದ.

ಇದಿಷ್ಟು ಜನರ ತಂಡ ಅವರ ವಿರುದ್ಧ ಪಾರ್ಟಿಯ ಇಬ್ಬರನ್ನು ಮುಗಿಸಲು ಹೊರಟಿದೆ ಅಂತ ಖಚಿತ ಮಾಹಿತಿ ಬಂದಿತ್ತು ಇನ್ಸಪೆಕ್ಟರ್ ಪೋಟೆ ಅವರಿಗೆ. 'ಗೇಮ್ ಬಜಾಕೆ ಖತಮ್ ಕರ್ ಡಾಲೋ!' ಅಂತ ಆದೇಶ ಮೇಲಿನ ಹಿರಿಯ ಅಧಿಕಾರಿಗಳಿಂದ ಬಂದಿತ್ತು. ಆ ಕಾಲದಲ್ಲಿ ದಿನ ಬೆಳಗಾದರೆ ಶುರುವಾಗಿ, ಸಿಕ್ಕಾಪಟ್ಟೆ ರಕ್ತ ಹರಿಸುತ್ತಿದ್ದ ಗ್ಯಾಂಗ್ ವಾರ್ ತಡೆಗಟ್ಟಲು ಪೊಲೀಸರು ಕಂಡುಕೊಂಡಿದ್ದ ಉಪಾಯ ಅಂದ್ರೆ ಎನ್ಕೌಂಟರ್. ಯಾವ ಕೋರ್ಟೂ ಇಲ್ಲ, ಯಾವ ಕೇಸೂ ಇಲ್ಲ, ತಲೆ ಬಿಸಿ ಇಲ್ಲವೇ ಇಲ್ಲ. ಗೋಲಿ ಅಂದರ್, ಭೇಜಾ ಬಾಹರ್, ಆದಮೀ ಊಪರ್, ಖೇಲ್ ಖತಮ್ - ಅನ್ನುವ ಹಾಗೆ ರೌಡಿಗಳು ಸಿಕ್ಕರೆ ಹಿಂದೆ ಮುಂದೆ ನೋಡದೆ ಉಡಾಯಿಸಿಬಿಡಿ. ಅವರೊಂದು ಸಮಾಜದ ಖಚ್ರಾ (ಕೊಳಕು) ಇದ್ದ ಹಾಗೆ. ಸಾಫ್ ಕರೋ! ಅಂತ summary ಆರ್ಡರ್ ಮೇಲಿಂದ. ಅದನ್ನೇ ಅವತ್ತು ಅಂಬಾದಾಸ್ ಪೋಟೆ ಪಾಲಿಸಲು ಹೊರಟಿದ್ದರು.

ರೌಡಿಗಳು ಮಾರುತಿ ಎಸ್ಟೀಮ್ ಕಾರಿನಲ್ಲಿ ಬರುತ್ತಿರುವದು ಕಂಡು ಬಂತು. ಕ್ರೈಂ ಬ್ರಾಂಚ್ ಪೋಲೀಸರ ತಂಡ ಆ ಕಾರನ್ನು ಫಾಲೋ ಮಾಡಲು ಆರಂಭಿಸಿತು. ಎನ್ಕೌಂಟರ್ ಮಾಡಲು ಆಯಕಟ್ಟಿನ ಸರಿಯಾದ ಜಾಗ ಸಿಕ್ಕಿದ್ದೇ ಸಿಕ್ಕಿದ್ದು, ರೌಡಿಗಳ ಕಾರನ್ನು ಹಿಂದೆ ಹಾಕಿದ ಪೋಲೀಸ್ ಡ್ರೈವರ್ ಬರೋಬ್ಬರಿ ಪೋಲೀಸ್ ಜೀಪನ್ನು ರೌಡಿಗಳ ಕಾರಿಗೆ ಅಡ್ಡ ಹಾಕಿಬಿಟ್ಟ. ರೌಡಿಗಳ ಕಾರು ಗಕ್ಕನೆ ನಿಂತಿತು. ಕೈಯಲ್ಲಿ ರಿವಾಲ್ವರ್ ಹಿರಿದ ನಾಲ್ಕೈದು ಪೋಲೀಸ್ ಅಧಿಕಾರಿಗಳು ಜೀಪಿಂದ ಜಿಗಿದವರೇ ಪೊಸಿಶನ್ ತೆಗೆದುಕೊಂಡರು. ನಂತರ ನಿರಂತರವಾಗಿ ಕೆಲ ನಿಮಿಷ ಮಾತಾಡಿದ್ದು ಪೊಲೀಸರೂ ಅಲ್ಲ, ರೌಡಿಗಳೂ ಅಲ್ಲ. ಪೋಲೀಸರ ಬಂದೂಕುಗಳು ಮಾತ್ರ.  ಢಮ್!!!ಢಮ್!! ಅಂತ ಪೋಲೀಸರ ಸರ್ವೀಸ್ ರಿವಾಲ್ವರುಗಳು ಎಲ್ಲ ಕಡೆಯಿಂದ ರೌಡಿಗಳ ಕಾರಿನತ್ತ ಮೊರೆದವು. ರೌಡಿಗಳಿಗೆ ಏನಾಯಿತು ಅಂತ ಗೊತ್ತಾಗುವದರಲ್ಲಿ ನೂರಾರು ಗುಂಡುಗಳು ಕಾರಿನ ಗ್ಲಾಸನ್ನು ಒಡೆದು ಬಂದು ಅವರ ದೇಹ ಸೀಳಿದ್ದವು. ಬದುಕುವ ಚಾನ್ಸೇ ಇಲ್ಲ(?) ಅಂತ ಹಲವಾರು ಎನ್ಕೌಂಟರ್ ಮಾಡಿ ಅನುಭವಸ್ಥರಾಗಿದ್ದ ಪೋಟೆ ಮತ್ತಿತರಿಗೆ ಗೊತ್ತಾಗಿತ್ತು.

ಎಲ್ಲ ರೌಡಿಗಳು ಸತ್ತಿದ್ದಾರೆ ಅಥವಾ ಫುಲ್ ಸ್ಕ್ರಾಪ್ ಆಗಿದ್ದಾರೆ ಅಂತ ಖಚಿತವಾಗುತ್ತಲೇ ಪೋಲೀಸ್ ಅಧಿಕಾರಿಗಳು ಕಾರಿನ ಸಮೀಪ ಬಂದರು. ಒಳಗೆ ಕೂತಿದ್ದ ರೌಡಿಗಳು ಬಿದ್ದ ಗುಂಡುಗಳ ಅಬ್ಬರಕ್ಕೆ ಫುಲ್ ಛಿದ್ರ ಛಿದ್ರ. ಛಲ್ಲಿ! ಛಲ್ಲಿ! ಒಬ್ಬರ ಮೇಲೆ ಒಬ್ಬರು ಬಿದ್ದು ಸತ್ತು ಹೋಗಿದ್ದರು. ಮುಂದಿನ ಸೀಟಿನಲ್ಲಿ ಎರಡು, ಹಿಂದೆ ಮೂರು. ಐದು ವಿಕೆಟ್ ಪೂರ್ತಿ ಡೌನ್.

ಅಷ್ಟರಲ್ಲಿ 'ಅಮ್ಮಾsss!' ಅಂತ ಯಾರೋ ಸಣ್ಣಗೆ ನರಳಿದ ದನಿ ಕೇಳಿತು. ಅದು ಜಯರಾಂ ಶೆಟ್ಟಿಯದು. ಗುಟುಕು ಜೀವ ಇತ್ತು. ಹತ್ತಿರ ಬಂದು ಗಮನಿಸುತ್ತಿದ್ದ ಇನ್ಸಪೆಕ್ಟರ್ ಅಂಬಾದಾಸ್ ಪೋಟೆ ಒಂದು ಕ್ಷಣ ಅವಾಕ್ಕಾದರು. ತೇರಿ ಮಾಯಿಲಾ! ಇನ್ನೂ ಸತ್ತಿಲ್ಲ ನನ್ಮಗ! ಅಂತ ಬೈಕೊಂಡವರೇ ಮತ್ತೊಮ್ಮೆ ಢಂ!!!ಢಂ!!! ಅಂತ ಮತ್ತೊಂದು ಪೂರ್ತಿ ಮ್ಯಾಗಜಿನ್ ಗುಂಡುಗಳನ್ನು ಗಾಯಗೊಂಡು, ಒಬ್ಬರ ಮೇಲೊಬ್ಬರು ಬಿದ್ದಿದ್ದ ರೌಡಿಗಳ ಮೇಲೆ ಹಿಂದೆ ಮುಂದೆ ನೋಡದೆ ಹಾರಿಸಿಬಿಟ್ಟರು. ಗುಟುಕು ಜೀವ ಹಿಡಿದುಕೊಂಡಿದ್ದ ಮೂವರು ರೌಡಿಗಳು ಒಮ್ಮೆ ಕೊನೆಯ ಬಾರಿಗೆ 'ಅಮ್ಮಾ!!!!' ಅಂತ ಚೀತ್ಕಾರ ಉದ್ದಕ್ಕೆ ತೆಗೆದು ಗೊಕ್ಕ್ ಅಂತ ಶಬ್ದ ಹೊರಡಿಸಿ ಸುಮ್ಮನಾಗಿದ್ದರು. ದೀರ್ಘ ನಿದ್ದೆಗೆ ಜಾರಿದ್ದರು. ಮುಗೀತು ಕಥೆ ಅಂತ ಪೋಟೆ ಸಾಹೇಬರು ಮುಂದಿನ ಕಾರ್ಯ ನಿರ್ವಹಿಸಲು ಆ ಕಡೆ ಹೋದರು. ಎಲ್ಲ ರೌಡಿಗಳು ನಿಜವಾಗಿ ಸತ್ತಿದ್ದರಾ? ಅಥವಾ..................

ಎಲ್ಲರೂ ಸತ್ತಿರಲಿಲ್ಲ. ಡಿ. ಕೆ. ರಾವ್ ಅನ್ನುವ ಮೃತ್ಯುಂಜಯ ಹತ್ತೊಂಬತ್ತು ಗುಂಡು ತಿಂದೂ ಬದುಕಿ ಉಳಿದಿದ್ದ. ಇಂದಿಗೂ ಇದ್ದಾನೆ. ಸುದ್ದಿಯಲ್ಲಿಯೂ ಇದ್ದಾನೆ. ಗೂಗಲ್ ಮಾಡಿದರೆ ಪುಟಗಟ್ಟಲೆ ಮಾಹಿತಿ ಸಿಗುತ್ತದೆ.

ಗುಂಡು ಬಿದ್ದ ನಂತರ 'ಅಮ್ಮಾ' ಅಂತ ನೋವಿನಿಂದ ಮುಲುಗಿದ ಜೈರಾಮ್ ಶೆಟ್ಟಿ ಬದುಕಲು ಇದ್ದ ಚಾನ್ಸ್ ಕಳೆದುಕೊಂಡಿದ್ದ. ಅವನ ಅಮ್ಮಾ ಅಂತ ನರಳುವಿಕೆಯಿಂದ ಎಚ್ಚತ್ತಿದ್ದ ಪೊಲೀಸರು ಒಂದೆರಡು ಗುಂಡು ಜಾಸ್ತಿಯೇ ಹಾಕಿ ಕಥೆ ಮುಗಿಸಿದ್ದರು. ರಮೇಶ ಪೂಜಾರಿ ಮತ್ತು ಜೈರಾಮ್ ಶೆಟ್ಟಿಯ ದೇಹಗಳ ನಡುವೆ ಎಲ್ಲೋ ಎಜ್ಜೆಯಲ್ಲಿ ಸಿಕ್ಕುಬಿದ್ದಿದ್ದ ಡಿ.ಕೆ. ರಾವ್ ಹೇಗೋ ಬಚಾವ್ ಆಗಿದ್ದ. ಎಕ್ಕಾ ಮಕ್ಕಾ ಗುಂಡು ಬಿದ್ದಿದ್ದವು. ಸಿಕ್ಕಾಪಟ್ಟೆ ನೋವಾಗುತ್ತಿತ್ತು. ಕಮಕ್ ಕಿಮಕ್ ಅಂದ್ರೆ ಮತ್ತೂ ಒಂದಿಷ್ಟು ಗುಂಡು ಬಿದ್ದು ಸಾಯುವದು ಗ್ಯಾರಂಟಿ ಇತ್ತು. ಹೇಗೋ ಮಾಡಿ ಸುಮ್ಮನೆ ಮಲಗಿದ್ದ. ಅದು ಹೇಗೆ ಅಷ್ಟು ನಿಶಬ್ದವಾಗಿ ಉಳಿದಿದ್ದನೋ? ಅದು ಹೇಗೆ ಒಂದಿಷ್ಟೂ ಆಚೀಚೆ ಅಲುಗದೆ ಸತ್ತಂತೆ ನಟಿಸುತ್ತ ಮಲಗಿದ್ದನೋ? ಅದು ಹೇಗೆ ಪೊಲೀಸರು ಮೋಸ ಹೋದರೋ? ಅಥವಾ ಬದುಕಿರುವ ಚಾನ್ಸೇ ಇರಲಿಕ್ಕೆ ಸಾಧ್ಯವಿಲ್ಲ ಅಂತ ಉಡಾಫೆಯೋ? ಒಟ್ಟಿನಲ್ಲಿ ಈ ಡಿ. ಕೆ. ರಾವ್ ಬದುಕಿ ಬಂದಿದ್ದ. ಶವಾಗಾರದಲ್ಲಿ ಹೆಣದಂತೆಯೇ ಕಫನ್ ಹೊದ್ದು ಮಲಗಿದ್ದ. ಇನ್ನೇನು ಪೋಸ್ಟ್ ಮಾರ್ಟಂ ಮಾಡಲು ವೈದ್ಯರು ಬಂದು, ಸತ್ತಿದ್ದಾನೋ ಬದುಕಿದ್ದಾನೋ ಅಂತ ಸಹಿತ ನೋಡದೆ, ಕರಪರಾ ಅಂತ ಕತ್ತರಿಸಿ ಪೋಸ್ಟ್ ಮಾರ್ಟಂ ಮಾಡಿ ಬಿಟ್ಟಾರು ಅಂತ ಎಚ್ಚೆತ್ತುಕೊಂಡು, ನಾ ಸತ್ತಿಲ್ಲ!!!! ನಾ ಸತ್ತಿಲ್ಲ!!!! ಅಂತ ಕೂಗಿ ಬಿಟ್ಟಿದ್ದ. ಲೀಟರ್ ಗಟ್ಟಲೆ ಹರಿದಿದ್ದ ರಕ್ತದೊಂದಿಗೆ ಇದ್ದ ಬದ್ದ ಶಕ್ತಿಯೆಲ್ಲ ಬಸಿದು ಹೋಗಿತ್ತು. ಅದರೂ ಹೇಗೋ ಮಾಡಿ ತಾನು ಸತ್ತಿಲ್ಲ ಅಂತ ಘೋಷಿಸಿಬಿಟ್ಟಿದ್ದ!

ಮೂಲತ ಕರ್ನಾಟಕದ ಗುಲಬುರ್ಗಾ ಕಡೆಯವನಾದ ರಾವ್ ನ ಮೂಲ ಹೆಸರು ರವಿ ಮಲ್ಲೇಶ್ ಬೋರಾ ಅಂತೇನೋ ಅಂತೆ. ಮೊದಲ ಬಾರಿಗೆ ಪೊಲೀಸರು ಬಂಧಿಸಿದಾಗ ಡಿ. ಕೆ. ರಾವ್ ಅನ್ನುವ ಯಾರದ್ದೋ ಫೇಕ್ ಐಡಿ ಕಾರ್ಡ್ ಇಟ್ಟುಕೊಂಡಿದ್ದ. ಪೋಲೀಸರ ಕಡತಗಳಲ್ಲಿ ಹಾಗೆಯೇ ಬಂದು ಬಿಟ್ಟಿತ್ತು. ಅವನ ಹಿಸ್ಟರಿ ಎಲ್ಲ ನಂತರ ಗೊತ್ತಾಗುತ್ತ ಹೋಯಿತು. ಅಷ್ಟರಲ್ಲಿ ಅಂಡರ್ವರ್ಲ್ಡನಲ್ಲಿ ತುಂಬ ಆಳಕ್ಕೆ ಇಳಿದು ಹೋಗಿದ್ದ. ಈಗಂತೂ ವಿದೇಶದಲ್ಲೆಲ್ಲೋ ಸೆಟಲ್ ಆಗಿರುವ ಛೋಟಾ ರಾಜನ್ ಎಂಬ ಭೂಗತ ಡಾನ್ ನ ಬಲಗೈ ಆಗಿಹೋಗಿದ್ದಾನೆ ಡಿ.ಕೆ. ರಾವ್.

ಪುಣ್ಯಾತ್ಮ ಮನ್ನಿತ್ತಲಾಗೆ ಹೊಸ ವರ್ಷದ ಪಾರ್ಟಿ ಕೊಟ್ಟರೆ  DCP ಒಬ್ಬರು ಬಂದು ಪಾರ್ಟಿಯಲ್ಲಿ ಡಾನ್ಸ್ ಮಾಡಿ ಮುಜುಗರಕ್ಕೀಡಾಗಿದ್ದರು. ದೊಡ್ಡ ಮಟ್ಟದ ಸಂಪರ್ಕಗಳು ಈ ಛೋಟಾ ಡಾನ್ ನವು. 

ಕೇಳಿದರೆ ಎಲ್ಲ ಬಿಟ್ಟಿದ್ದೇನೆ. ಅಂಡರ್ವರ್ಲ್ಡ್ ಜೊತೆ ಸಂಪರ್ಕವೇ ಇಲ್ಲ ಅನ್ನುತ್ತಾನೆ. ಪೊಲೀಸರು ಬೇರೆಯೇ ಸುದ್ದಿ ಹೇಳುತ್ತಾರೆ. ಸತ್ಯ ಎಲ್ಲೋ ಮಧ್ಯೆ ಇರಬೇಕು.

ರೌಡಿಗಳು ಅಂದ್ರೆ ದೊಡ್ಡ ಮಹಾ ವೀರರು, ಧೀರರು, ಶೂರರು ಅಲ್ಲ. ಮಾಧ್ಯಮಗಳು ಅವರನ್ನು ತುಂಬ ವೈಭವೀಕರಿಸಿ larger than life ಅನ್ನುವಂತೆ ಬಿಂಬಿಸುತ್ತವೆ, ಅಂತ ರೌಡಿಗಳು ಅಂದ್ರೆ ಕಸದಂತೆ ನೋಡುವ ಖಡಕ್ ಪೋಲೀಸ್ ಅಧಿಕಾರಿ ರಾಕೇಶ ಮಾರಿಯಾ ಸಹಿತ ಈ ಡಿ.ಕೆ. ರಾವ್ ಮತ್ತು ಅವನ ಕಾರ್ನಾಮೆಗಳನ್ನು ಒಂದು ತರಹದ ಅಚ್ಚರಿಯಿಂದ ನೋಡಿ ಅವನಿಗೆ 'black mamba' ಅಂದ್ರೆ 'ಕಪ್ಪು ಹೆಬ್ಬಾವು' ಅಂತ ಹೆಸರಿಟ್ಟಿದ್ದಾರೆ.

ಮುಂದೆ ಏನೇನು ಆಗುವದಿದೆಯೋ? ಕಾಲ ಎಲ್ಲ ಹೇಳುತ್ತದೆ.

ಆ ಪರಿ ಗುಂಡೇಟು ತಿಂದರೂ ಅದೆಂಗೆ ಬದುಕಿ ಬಂದೆ ಮಾರಾಯಾ? ಅಂತ ಕೇಳಿದರೆ, ಡಿ.ಕೆ. ರಾವ್, ಎಲ್ಲದೂ  ಅದೃಷ್ಟ ಸ್ವಾಮೀ, ಅಂತ ಹೇಳಿ ದೇವರಿಗೆ ಕೈ ಮುಗಿಯುತ್ತಾನೆ. ನೀನೇನಾದರು ಯೋಗಾ ಗೀಗಾ ಕಲಿತು, ಏನೇನೋ ಸಾಧನೆ ಮಾಡಿ, ತಾಸುಗಟ್ಟಲೆ ಉಸಿರು ಗಿಸಿರು ಹಿಡಿದಿಟ್ಟುಕೊಂಡು ಬದುಕಿ ಬಂದೆಯಾ ಹೇಗೆ? ಅಂತ ಕೇಳಿದರೆ, ಅದೆಲ್ಲ ಗೊತ್ತಿಲ್ಲ ಬಿಡಿ, ಅಂದುಬಿಡುತ್ತಾನೆ ಡಿ.ಕೆ. ರಾವ್.

ಪುಣ್ಯಾತ್ಮನೇ, ಯಾವ ಜನ್ಮದಲ್ಲಿ, ಅದೆಷ್ಟು ಕೋಟಿ ಮಹಾ ಮೃತ್ಯುಂಜಯ ಮಂತ್ರ ಜಪಿಸಿ, ಸಿದ್ಧಿ ಮಾಡಿಕೊಂಡು ಬಂದಿದ್ದಿ ಮಾರಾಯ? ಅಂತ ಯಾರೂ ಕೇಳಲಿಲ್ಲ ಅಂತ ಕಾಣುತ್ತದೆ.

ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ। ಊರ್ವಾರುಕಮಿವ ಬಂಧನಾನ್ ಮೃತ್ಯೋರ್ಮೂಕ್ಷಿಯ ಮಾ ಮೃತಾತ್।। ಅನ್ನುವ ಸಾವನ್ನು ದೂರವಿಡಲು ಜಪಿಸುವ ಮಹಾ ಮೃತ್ಯುಂಜಯ ಮಂತ್ರ ಒಂದು ತರಹ ಬೇರೆಯಾಗಿಯೇ ಕೇಳುತ್ತದೆ ಈ ಡಿ. ಕೆ. ರಾವ್ ಅನ್ನುವ 'ಡಬಲ್' ಮೃತ್ಯುಂಜಯನ ಕಥೆ ಕೇಳಿದ ಮೇಲೆ!

ಡಿ. ಕೆ. ರಾವ್ ಅನ್ನುವ ಭೂಗತ ಜೀವಿಯ ಬಗ್ಗೆ ಅಲ್ಲಿ ಇಲ್ಲಿ ಓದಿದ್ದರೂ, ಪುಣ್ಯಾತ್ಮನ ಎರಡೆರಡು ಎನ್ಕೌಂಟರ್ ಕಥೆ ಅಲ್ಪ ಸ್ವಲ್ಪ ಗೊತ್ತಿದ್ದರೂ, ಪೂರ್ತಿ ಮಾಹಿತಿ ಸಿಕ್ಕಿದ್ದು ಮುಂಬೈನ ಪ್ರಖ್ಯಾತ ಕ್ರೈಂ ಜರ್ನಾಲಿಸ್ಟ್ ಹುಸೇನ್ ಝೈದಿ ಬರೆದ ಹೊಸ ಪುಸ್ತಕ 'Byculla to Bangkok' ನಲ್ಲಿ. ಅದ್ಭುತವಾದ ವಿವರಗಳಿವೆ. ಮುಂಬೈ ಅಂಡರ್ವರ್ಲ್ಡ್ ಬಗ್ಗೆ walking encyclopedia ಅಂತಲೇ ಖ್ಯಾತರಾಗಿರುವ ಹುಸೇನ್ ಝೈದಿ ಬರೆದಿರುವ ಮುಂಬೈ ಭೂಗತ ಜಗತ್ತಿನ ವಿವರಗಳನ್ನು ಓದುತ್ತ ಹೋದಂತೆ ಅಲ್ಲಿರುವ ಕ್ಯಾರಕ್ಟರುಗಳು ಪೂರ್ತಿಯಾಗಿ ನಮ್ಮನ್ನು ಆವರಿಸಿಕೊಂಡು ತಲೆಯಲ್ಲಿಯೇ ಗ್ಯಾಂಗ್ ವಾರ್ ಶುರುವಾಗಿ ಬಿಡುವಂತೆ ಬರೆದಿದ್ದಾರೆ. ಅವರ ಇತರೆ ಪುಸ್ತಕಗಳನ್ನು ಓದಿದವರು, ಇದೇನು ಮಹಾ? ಆ ಯಪ್ಪಾ ಬರೆಯೋದೇ ಹಾಂಗೆ. ಕಣ್ಣಿಗೆ ಕಟ್ಟುವಂತೆ, ಅಂತ ಹೇಳಿ ನಾನು ಹೇಳಿದ ಹಾಗೆ ಇನ್ನೊಂದು ಭೂಗತ ಲೋಕದ ಕಥೆ ನಿಮ್ಮುಂದೆ ಬಿಚ್ಚಿಕೊಂಡಾರು! ಖಬರ್ದಾರ್! :)ವಿ. ಸೂ : ವಿವರವನ್ನೆಲ್ಲ ಮೇಲೆ ಹೇಳಿದ ಪುಸ್ತಕದಿಂದ ಎತ್ತಿದ್ದು. ಆಸ್ಪತೆಯ ಸನ್ನಿವೇಶವನ್ನು ಸ್ವಲ್ಪ ನಾಟಕೀಯ ಮಾಡಿದ್ದು ನಾನು. ರಿಯಲ್ ಲೈಫಿನಲ್ಲಿ ಅದು ಬರೆದಿದ್ದರ ಹತ್ತು ಪಟ್ಟು fascinatingly dramatic ಆಗಿರಬೇಕು ಬಿಡಿ ಆ 'ಹೆಣ' ಎದ್ದು ಕೂತು ಲಬೋ ಲಬೋ ಅನ್ನುವ ದೃಶ್ಯ. ಅದನ್ನು ಇನ್ಸಪೆಕ್ಟರ್ ಪೋಟೆ ಸಾಹೇಬರು ಮಾತ್ರ ಕಂಡಂಗೆ ಕಂಡ ಹಾಗೆ ಹೇಳಿಯಾರು. ಬೇರೆ ಯಾರಿಗೂ ಸಾಧ್ಯವಿಲ್ಲ.

5 comments:

Vimarshak Jaaldimmi said...


On to the sensational!

The description of "khaini tikking" is marvelous!! Did they use "kaachu" also?

ವಿ.ರಾ.ಹೆ. said...

OMG !! 19 BULLETS !!

Mahesh Hegade said...

ಹೂಂ! ಹತ್ತೊಂಬತ್ತು! ಅದೂ ದೊಡ್ಡ ದೊಡ್ಡ ಗುಂಡು. ತೆಳತ್ತಾ? :)

Anonymous said...

good article Hegadeji

Mahesh Hegade said...

ಧನ್ಯವಾದ ನಾಗರಾಜ ಬಡಿಗೇರ ಅವರೇ!