Sunday, June 22, 2014

ಯಕ್ಷಗಾನದ 'ಹಾಸ್ಯ ರತ್ನ' ಕುಂಜಾಲು ರಾಮಕೃಷ್ಣ

"ಏ! ಎದ್ದಕಳ್ಳರಾ! ಯಾರ್ ಬಂದ ನೋಡು! ಕುಂಜಾಲ್ ರಾಮಕೃಷ್ಣ!" ಅಂತ ಉತ್ಸುಕತೆಯಿಂದ ಹೇಳುತ್ತ, ರಪರಪಾ, ದಬದಬಾ ಅಂತ ಬೆನ್ನ ಮೇಲೆ ಮೃದಂಗವನ್ನೋ, ಕುಂಡೆ ಮೇಲೆ ಚಂಡೆಯನ್ನೋ ಬಾರಿಸುತ್ತ ಹಿರಿಯರು ಮಲಗಿದ್ದ ಸಣ್ಣ ಮಾಣಿಗಳನ್ನು ಎಬ್ಬಿಸುತ್ತಿದ್ದರೆ, ಸಣ್ಣ ಮಾಣಿಗಳು ಎಬ್ಬಿಸಲು ಬಾರಿಸಿದ್ದ ಅಬ್ಬರಕ್ಕೆ ಕೆಳಗೆ ಇಳಿದು ಹೋಗಿದ್ದ ಚಡ್ಡಿಯನ್ನು ಪುಕಳಿ ಮೇಲೆ ಎಳೆಯುತ್ತ, "ಅರೇ! ಕುಂಜಾಲ್ ಇಷ್ಟ ಲಗೂ ಬಂದ್ಬುಟ್ನಾ!?" ಅಂತ ಅಂದುಕೊಳ್ಳುತ್ತ ಎದ್ದು, ಕಣ್ಣು ತಿಕ್ಕುತ್ತ, ಕುಂಜಾಲು ರಾಮಕೃಷ್ಣ ಅನ್ನುವ ಯಕ್ಷಗಾನದ ವಿದೂಷಕನೊಬ್ಬನ ಹಾಸ್ಯ ನೋಡಿ ಬಿದ್ದು ಬಿದ್ದು ನಗುತ್ತಿದ್ದರು. ಆ ವಿದೂಷಕನ ಪಾತ್ರದ ಸೀನ್ ಮುಗಿದ ತಕ್ಷಣ ಮತ್ತೆ ವರ್ಕಾಸುರ ಆಟಕ್ಕೆ (ನಿದ್ದೆಗೆ) ವಾಪಸ್. ಯಕ್ಷಗಾನದ ಮಟ್ಟಿಗೆ ತೆನಾಲಿ ರಾಮನಷ್ಟೇ ಪ್ರಸಿದ್ಧನಾಗಿದ್ದ ಕುಂಜಾಲ್ ರಾಮನ ಹಾಸ್ಯದ ಸೀನುಗಳನ್ನು ನೋಡಿಬಿಟ್ಟರೆ ಟಿಕೆಟ್ಟಿಗೆ ಕೊಟ್ಟಿದ್ದ ಪೂರ್ತಿ ದುಡ್ಡು ವಸೂಲ್ ಆದಂತೆಯೇ.

ಸುಮಾರು ನಾಲ್ಕು ದಶಕಗಳ ಕಾಲ ಯಕ್ಷಗಾನ ರಂಗದಲ್ಲಿ ವಿದೂಷಕರಾಗಿ ತಮ್ಮದೇ ಛಾಪು ಮೂಡಿಸಿಕೊಂಡಿದ್ದ ಕುಂಜಾಲು ರಾಮಕೃಷ್ಣ ನಾಯಕ್ ನಿಧನರಾಗಿದ್ದಾರೆ. ಆದರೆ ತುಂಬ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ.

ಕುಂಜಾಲು ರಾಮಕೃಷ್ಣ ನಾಯಕ್

"ಅಡ್ಡ ಬಿದ್ದೆ ಒಡೆಯಾ!" ಅಂತ ಕೀರಲು ಧ್ವನಿಯಲ್ಲಿ ಕೂಗುತ್ತ, 'ಧಡ್' ಅಂತ ಸೀದಾ ನೆಲಕ್ಕೆ ಬಿದ್ದು, ರಂಗದ ಮೇಲಿದ್ದ ಹೀರೋ ಪಾತ್ರಧಾರಿಗೆ ನಮಸ್ಕಾರ ಮಾಡುತ್ತ, ರಂಗ ಪ್ರವೇಶ ಮಾಡುತ್ತಿದ್ದ ಕುಂಜಾಲು ರಾಮಕೃಷ್ಣ ಎಂಟ್ರಿ ಕೊಡುತ್ತಿದ್ದಂತೆಯೇ ನಗುವೇ ನಗು. ದೇಹದ ಯಾವದೇ ಭಾಗವನ್ನೂ ಮಣಿಸದೆ, 'ಧಡ್' ಅಂತ ಬಿದ್ದು, ಸಾಷ್ಟಾಂಗ ನಮಸ್ಕಾರ ಹಾಕುವದಿದೆಯೆಲ್ಲ ಅದು ನೋಡಲು ಸಿಕ್ಕಾಪಟ್ಟೆ ಮಜಾ ಕಂಡರೂ ಅದನ್ನು ಪರ್ಫೆಕ್ಟ್ ಮಾಡಿಕೊಳ್ಳಲು ಬೇಕಾದ ಶ್ರಮ, ಮಾಡುವಾಗ ಇರುವ ಅಪಾಯ ಏನೂ ಕಮ್ಮಿ ಅಲ್ಲ. ಸ್ವಲ್ಪ ಹೆಚ್ಚು ಕಮ್ಮಿ ಆದರೂ ಹಲ್ಲೋ, ಪಕ್ಕೆಯ ಎಲುಬೋ ಮುರಿದೇ ಹೋಗುವ ಅಪಾಯ. ಕುಂಜಾಲರ ಹಲವಾರು ಕಾಮಿಡಿ ಟ್ರಿಕ್ ಗಳಲ್ಲಿ ಇದೂ ಒಂದು.

ಯಕ್ಷಗಾನದ ವಿದೂಷಕ / ಹಾಸ್ಯಗಾರ ಪಾತ್ರ ನಿರ್ವಹಿಸುವದು ತುಂಬ ಕಷ್ಟದ ಕೆಲಸ. ಯಕ್ಷಗಾನ ಪ್ರಸಂಗಗಳೆಲ್ಲ ಪುರಾಣ ಆಧಾರಿತವಾದವು. ಮೂಲ ಕಥೆಗೆ ಚ್ಯುತಿ ಬರದಂತೆ ಹಾಸ್ಯವನ್ನು ಅಡಿಗೆಗೆ ರುಚಿಗೆ ತಕ್ಕಂತೆ ಉಪ್ಪು, ಖಾರ ಮಾತ್ತೊಂದು ಹಾಕಿದಂತೆ ರಸಭಂಗವಾಗದಂತೆ ಹಾಕಬೇಕು. ಇಲ್ಲಾಂದ್ರೆ ಸರಿಯಾಗುವದಿಲ್ಲ. ರುಚಿ ಕೆಟ್ಟು ಹೋಗುತ್ತದೆ. ಮತ್ತೆ ಹೆಂಗಸರು, ಮಕ್ಕಳು ಎಲ್ಲರೂ ಯಕ್ಷಗಾನ ನೋಡಲು ಬಂದಿರುತ್ತಾದ್ದರಿಂದ ಅಸಂಬಂದ್ಧವಾಗಿ ಅಶ್ಲೀಲವಾಗಿ ಮಾತಾಡುವಂತಿಲ್ಲ. ಇಂತದ್ದೆಲ್ಲ ಕಟ್ಟಳೆ, ಪರಿಮಿತಿಗಳ ನಡುವೆಯೇ ಹಾಸ್ಯ ರಸ  ಹರಿಸಿ ಜನರನ್ನು ನಕ್ಕು ನಲಿಸುವದು ಸಣ್ಣ ಮಾತಲ್ಲ. ಕುಂಜಾಲರಿಗೆ ಆ ಕಲೆ ಸಿದ್ಧಿಸಿತ್ತು.

"ನಮೋ ನಮಃ  ಒಡೆಯಾ" ಅಂತ ಕುಂಜಾಲು ರಂಗಸ್ಥಳಕ್ಕೆ ಎಂಟ್ರಿ ಕೊಟ್ಟರು. ಕುಳಿತಿದ್ದ ರಾಜ ಪಾತ್ರಧಾರಿಗೆ ತಮ್ಮ ಎಂದಿನ 'ಧಡ್' ಅಂತ ಬಿದ್ದು ಮಾಡುವ ನಮಸ್ಕಾರ ಮಾಡಿದರು.

"ಒಂದು ಲೆಕ್ಕ ಮಾಡಲಿಕ್ಕಿದೆ. ಮಾಡ್ತೀಯಾ?" ಅಂತ ರಾಜ ಪಾತ್ರಧಾರಿ ಕೇಳಿದ.

"ಹೇಳಿ ಒಡೆಯಾ. ನೀವು ಕೇಳೋದು ದೊಡ್ಡದೋ ಅಥವಾ ನಾವು ಮಾಡೋದೋ? ಹೀ! ಹೀ!" ಅಂತ ಕುಂಜಾಲು ಹಲ್ಲು ಕಿರಿದರು. ಮುಂದಿನ ಒಂದೆರೆಡು ಹಲ್ಲು ಉದುರಿ ಹೋಗಿ, ಅವರ ಹಾಸ್ಯಕ್ಕೆ ಅನುಕೂಲವೇ ಆಗಿತ್ತು. ನೋಡಿದರೇ ನಗು ಬರುವಂತಿದ್ದ ಕುಂಜಾಲು ಬಾಯಿ ಬಿಟ್ಟರೆ ಅಷ್ಟೇ ಮತ್ತೆ. ಆ ಮುಖ ನೋಡಿಯೇ ನಗು.

"ಒಂಬತ್ತು ಎಳೆ ಉಂಟು. ತಿಳಿಯಿತಾ?" ಅಂದ ರಾಜ ಪಾತ್ರಧಾರಿ.

"ಮುಂದೆ ಹೇಳಿ ಒಡೆಯಾ?" ಅಂದ್ರು ಕುಂಜಾಲು.

"ಇರುವ ಒಂಬತ್ತು ಎಳೆಗಳನ್ನು ನಾಲ್ಕು ಪಾಲು ಮಾಡಿದರೆ ಏನು ಬರ್ತದ್ಯೋ? ಹೇಳು ನೋಡುವಾ?" ಇದು ರಾಜನ ಲೆಕ್ಕದ ಪ್ರಶ್ನೆ.

"ಎರಡೂ ಕಾಲು ಎಳೆ" ಅನ್ನುತ್ತ ಸುಂಯ್ ಅಂತ ರಾಜನ 'ಎರಡೂ ಕಾಲು ಎಳೆ'ಯಲು ಹೋಗುವ ಹಾಸ್ಯಗಾರ ಕುಂಜಾಲು ರಾಮಕೃಷ್ಣರ ಅಭಿನಯ ನಗಿಸದೇ ಇರಲು ಸಾಧ್ಯವೇ ಇಲ್ಲ. (9/4 = 2.25. ಎರಡೂ ಕಾಲು)

ಕುಂಜಾಲರ ಅಭಿನಯದಲ್ಲಿ ಎದ್ದು ಕಾಣುತ್ತಿದ್ದುದು ಭಯಂಕರ ಸಮಯ ಪ್ರಜ್ಞೆ. ಅದೇನು witty ಅನ್ನಿಸುವಂತಹ ಡೈಲಾಗ್ಸ್ ಮಾರಾಯರೇ ಅವರದ್ದು. ಒಮ್ಮೆ ಹೀಗಾಗಿತ್ತು. ಯಾವದೋ ಪ್ರಸಂಗ. ಎದುರಿನ ಪಾತ್ರಧಾರಿ ದೊಡ್ಡ ಕಲಾವಿದ ದಿವಂಗತ ಕೆರೆಮನೆ ಶಂಭು ಹೆಗಡೆ. ಹಾಸ್ಯದ ಸೀನಿಗೆ ಎಂಟ್ರಿ ಕೊಟ್ಟರು ಕುಂಜಾಲು. ಶುರುವಾಯಿತಲ್ಲ ಮೇರು ನಟರಿಬ್ಬರ ಮಧ್ಯೆ ಜುಗಲ್ ಬಂದಿ. ಒಬ್ಬರ ಮಾತಿಗೆ ಇನ್ನೊಬ್ಬರ ಪ್ರತಿಮಾತು. ಸಂಭಾಷಣೆ ಮುಗಿಯಲು ವಿದೂಷಕ ಮಾತು ನಿಲ್ಲಿಸಬೇಕು, last word ಯಾವಾಗಲೂ ಮುಖ್ಯ ಪಾತ್ರಧಾರಿಗೇ ಸಿಗಬೇಕು. ಕುಂಜಾಲು, ಶಂಭು ಹೆಗಡೆ ಇಬ್ಬರೂ ಅಪ್ರತಿಮ ಮಾತುಗಾರರೇ. ಅದರಲ್ಲಿ ಸಂದೇಹವೇ ಇಲ್ಲ. ಸಂಭಾಷಣೆಯ ಮಟ್ಟಿಗೆ ಶಂಭು ಹೆಗಡೆ ಯಾವದೇ ತರಹದ ಚಾಲೆಂಜಿಗೂ ಸೈ ಅನ್ನುವವರು. ಮತ್ತೆ ಅವರಿಗೆ ಹಲವಾರು ವರ್ಷಗಳ ಸಹ ಕಲಾವಿದ, ಸ್ನೇಹಿತ ಕುಂಜಾಲು ಅಂದ್ರೆ ಏನೋ ಒಂದು ರೀತಿಯ ಅಕ್ಕರೆ. ಕುಂಜಾಲು ಕೊಟ್ಟ ಪ್ರತಿ ಮಾತಿನೇಟಿಗೆ ತಕ್ಕ ಉತ್ತರ ಕೊಡುತ್ತಲೇ ಹೋದರು ಶಂಭು ಹೆಗಡೆ. ಒಬ್ಬರ ಮಾತಿನಲ್ಲಿ ಇನ್ನೊಬ್ಬರಿಗೆ ಮುಂದೇನು ಮಾತಾಡಬೇಕು ಅನ್ನುವ ಸಣ್ಣ ಸುಳಿವು, ಹಿಂಟ್ ಇರುತ್ತಿತ್ತು. ಅದ್ಭುತ ಸಂಭಾಷಣೆ. ಇಬ್ಬರೂ ದಿವ್ಯ ಮೂಡಿನಲ್ಲಿ ಇದ್ದರು ಅಂತ ಕಾಣುತ್ತದೆ. ಮಾತು ಮುಗಿಯುತ್ತಲೇ ಇಲ್ಲ. ಇನ್ನು ಹೀಗೆ ಬಿಟ್ಟರೆ ಸಮಯದ ಅಭಾವವಾದೀತು ಅಂತ ಭಾಗವತ ನೆಬ್ಬೂರ ನಾರಾಯಣ ಹೆಗಡೆ ತಾಳ ಜಪ್ಪಿ, ಮುಂದಿನ ಪದ ಹಾಡೇ ಬಿಟ್ಟರು. ಕುಂಜಾಲು ಮತ್ತೆ ಶಂಭು ಹೆಗಡೆಯವರ ಮುಖದ ಮೇಲಿನ ತುಂಟ ನಗೆ ಮರೆಯುವಂತಿಲ್ಲ. 'ಮತ್ತೊಮ್ಮೆ ನೋಡಿಕೊಳ್ಳುತ್ತೀನಿ ನಿನ್ನ' ಅನ್ನುವ ತುಂಟ ಲುಕ್ ಕೊಟ್ಟು ಆ ದೃಶ್ಯಕ್ಕೆ ಮಂಗಳ ಹಾಡಿದ್ದರು ಈ ಇಬ್ಬರು ಮೇರು ಕಲಾವಿದರು.

ಕೆಳಗೆ ಹಾಕಿರುವ 'ಗದಾಯುದ್ಧ' ಪ್ರಸಂಗದ ಕ್ಲಿಪ್ ನೋಡಿ. 'ವೈಶಂಪಾಯನ ಸರೋವರದ ಸಮೀಪ ಯಾರಿದ್ದರು?' ಅಂತ ಕೇಳುತ್ತಾನೆ ಭೀಮಸೇನ. 'ಕುಪ್ಪಯ್ಯ ಆಚಾರ್ರು. ಮತ್ತೆ ಅವಸತ್ತ ಮಾಣಿ' ಅಂದು ಬಿಡುತ್ತಾನೆ ಕುಂಜಾಲು. ಜನ ಬಿದ್ದು ಬಿದ್ದು ನಗಬೇಕು. ಕೃಪಾಚಾರ್ಯ, ಅಶ್ವತ್ಥಾಮ (ದ್ರೋಣಾಚಾರ್ಯರ ಮಾಣಿ) ಅನ್ನಲಿಕ್ಕೆ ಹೋದಾಗ ಮಾಡಿದ ಅವಗಢ.

ಅವರ ವೇಷ ಭೂಷಣಗಳೂ ಅಷ್ಟೇ. ಚಿತ್ರ ವಿಚಿತ್ರ. ಮೇಕ್ಅಪ್ ಸಹಿತ ಹಾಗೆಯೇ. ಮತ್ತೆ ವಿಶಿಷ್ಟವಾದ, ನಗೆ ತರಿಸುವ 'ಮಳ್ಳು' ಕುಣಿತ. ಆದರೆ ಎಲ್ಲ ಯಕ್ಷಗಾನ ಶಾಸ್ತ್ರದ ಇತಿಮಿತಿಯಲ್ಲಿಯೇ.

ಅತ್ಯಂತ ಸುಸಂಸ್ಕೃತ ರೀತಿಯಲ್ಲಿ ಹಾಸ್ಯ ಮಾಡಿ ಎಲ್ಲರನ್ನೂ ನಗಿಸುತ್ತಿದ್ದ ಕುಂಜಾಲರ ಕಾಲ ಎಂದೋ ಮುಗಿದು ಹೋಗಿದೆ ಬಿಡಿ. ಈಗಿತ್ತಲಾಗೆ ಯಕ್ಷಗಾನ ನೋಡದಿದ್ದರೂ, ಕೆಲ ವರ್ಷದ ಹಿಂದೆ ಒಂದಿಷ್ಟು ಯಕ್ಷಗಾನ ಪ್ರಸಂಗಗಳ ಟೇಪ್ ಕ್ಯಾಸೆಟ್ಟು  ಖರೀದಿ ಮಾಡಿದ್ದೆ,  ಅದರಲ್ಲಿನ ಕೆಲವು ಹಾಸ್ಯ ಸಂಭಾಷಣೆ ಕೇಳಿದರೆ! ರಾಮಾ! ದಟ್ಟ ದರಿದ್ರ ಕನ್ನಡ ಸಿನೆಮಾದ ಡಬಲ್ ಮೀನಿಂಗ್ ಡೈಲಾಗಿಗೆ ಸಡ್ಡು ಹೊಡೆದಂತೆ ಇತ್ತು. ಆ ಒಂದು ಕ್ಷಣಕ್ಕೆ ನಗು ಬಂದರೂ, ಇದು ಫ್ಯಾಮಿಲಿ ಹಾಸ್ಯ ಮಾತ್ರ ಅಲ್ಲವೇ ಅಲ್ಲ ಅಂತ ಅನ್ನಿಸಿದ್ದು ನಿಜ. 'ಕೀಚಕ ವಧೆ' ಪ್ರಸಂಗ. ಕೀಚಕ ತನ್ನ ಬಂಟ ವಿದೂಷಕನೊಂದಿಗೆ ತನ್ನ ಅಕ್ಕನ ಅಂತಪುರಕ್ಕೆ ಬರುತ್ತಾನೆ. ಕೀಚಕನ ಅಕ್ಕನ ಸುತ್ತ ಮುತ್ತ ಹಲವಾರು ಮಹಿಳೆಯರು, ಸೇವಕಿಯರು, ಪರಮ ಸುಂದರಿ ಸೈರಂಧ್ರಿ (ದ್ರೌಪದಿ) ಎಲ್ಲ ಇರುತ್ತಾರೆ. "ಇಲ್ಲಿ ಎಷ್ಟೊಂದು ಜನ ಹೆಂಗಸರು ನೆರೆದಿದ್ದಾರೆ ಮಾರಾಯಾ" ಅಂತ ಕೀಚಕ ಉದ್ಗರಿಸುತ್ತಾನೆ. "ಇಲ್ಲಿ ನೆರೆದ ಹೆಂಗಸರೆಲ್ಲ 'ನೆರೆದವರೇ' ಮಹಾಸ್ವಾಮಿ! ಹೀ! ಹೀ!' ಅಂತ ಹಾಸ್ಯಗಾರನ ಅಸಂಬದ್ಧ ಪ್ರಲಾಪ. ಇಂದು ಇಂತಹ ಡಬಲ್ ಮೀನಿಂಗ್ ಸಹ ಯಕ್ಷಗಾನದ ಹಾಸ್ಯ ಅಂತ ಚಲಾವಣೆ ಆಗುತ್ತಿದ್ದರೆ ಅದು ಕುಂಜಾಲು ರಾಮಕೃಷ್ಣನ ನಂತರ ಬಂದ ವಿದೂಷಕರ ಬೌದ್ಧಿಕ ದಿವಾಳಿತನ, ಅಧ್ಯಯನದ ಕೊರತೆ, poor taste ಅಷ್ಟೇ. ಅಂತಹ ಅಸಂಬದ್ಧ ಮಾತುಗಳನ್ನು ಕುಂಜಾಲು ರಾಮಕೃಷ್ಣರ ಬಾಯಿಂದ ಬರುವದನ್ನು ಊಹಿಸಲು ಸಾಧ್ಯವಿಲ್ಲ.

ಮೊದಲಿಂದ ಕೆರೆಮನೆ ಮೇಳದ (ಇಡಗುಂಜಿ ಮೇಳ) ಜೊತೆಯೇ ಇದ್ದವರು ಕುಂಜಾಲು. ಧಾರವಾಡಕ್ಕೆ ಕೆರೆಮನೆ ಮೇಳ ಮೂರ್ನಾಕು ಸರಿ ಬಂದರೂ ಕುಂಜಾಲು ಮಾತ್ರ ಬಂದಿರಲಿಲ್ಲ. ಅವರು ಒಮ್ಮೆ ಯಕ್ಷಗಾನದ ಸೀಸನ್ನಿನಲ್ಲಿ ಏನು ಘಟ್ಟದ ಮೇಲೆ ಬಂದರೋ ಬಂದರು. ನಂತರ ಘಟ್ಟ ಇಳಿದು, ಉಡುಪಿ ಸಮೀಪದ ಕುಂಜಾಲು ಎಂಬ ಸಣ್ಣ ಗ್ರಾಮ ಸೇರಿಕೊಂಡರೆ ಅವರು ಮತ್ತೆ ಹೊರಡುತ್ತಿದ್ದುದು ಮುಂದಿನ ಯಕ್ಷಗಾನದ ಸೀಸನ್ ಟೈಮ್ ನಲ್ಲಿ ಮಾತ್ರ ಅಂತ ಕಾಣುತ್ತದೆ. ಹಾಗಾಗಿ ಧಾರವಾಡಕ್ಕೆ ಶಂಭು ಹೆಗಡೆ ಅವರ ಜೊತೆ ಅವರು ಬರಲಿಲ್ಲ. ನಾವಿದ್ದಾಗ ಅಂದರೆ ೧೯೯೦ ರ ವರೆಗೆ ಅಂತೂ ಬರಲಿಲ್ಲ. ಶಂಭು ಹೆಗಡೆ ಅವರನ್ನು ಭೆಟ್ಟಿ ಮಾಡುವ ಅವಕಾಶ ಎರಡು ಮೂರು ಬಾರಿ ಸಿಕ್ಕಿದರೂ ಕುಂಜಾಲರ ಭೇಟಿಯ ಅವಕಾಶ ಮಾತ್ರ ಸಿಗಲಿಲ್ಲ. ಅವರ ಹಾಸ್ಯ ನೋಡಿದ್ದೆಲ್ಲ ಬೇಸಿಗೆ ರಜೆಯಲ್ಲಿ ಸಿರ್ಸಿ ಕಡೆ ಹೋಗಿ, ಅಜ್ಜನ ಮನೆ ಸುತ್ತ ಮುತ್ತ ಆಗುತ್ತಿದ್ದ ಆಟ ನೋಡಿದಾಗ ಮಾತ್ರ. ಅದೇ ದೊಡ್ಡ ಸೌಭಾಗ್ಯ. ಊರು ಕಡೆ ಹೋದಾಗ, ಯಕ್ಷಗಾನ ಕಲಾವಿದರನ್ನು ಭೆಟ್ಟಿ ಮಾಡುವ ಉದ್ದೇಶದಿಂದ ಬಣ್ಣದ ಚೌಕಿಗೆ (ಗ್ರೀನ್ ರೂಂ) ನುಗ್ಗುವ ಪ್ರಯತ್ನ ಮಾಡುತ್ತಿದ್ದೆವಾದರೂ ಅದರಲ್ಲಿ ಜಾಸ್ತಿ ಯಶಸ್ಸು ಸಿಗುತ್ತಿರಲಿಲ್ಲ. ಬಣ್ಣದ ಚೌಕಿ ಕಲಾವಿದರ ಗುಡಿ ಇದ್ದಂತೆ. ಅಲ್ಲಿ ಹೋದರೆ ಅವರಿಗೆ ಒಂದು ತರಹದ ಕಿರಿಕಿರಿ.

ಹಾಸ್ಯ ರತ್ನ ಕುಂಜಾಲು ಜೀವನದ ಪ್ರಸಂಗ ಮುಗಿಸಿ ಮಂಗಳ ಹಾಡಿದ್ದಾರೆ. ಒಂದು ಅಮೋಘ ಪ್ರಸಂಗಕ್ಕೆ ತೆರೆ ಬಿದ್ದಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತ .............
* ಯಕ್ಷಗಾನದ ಬಗ್ಗೆ ಮಾತಾಡುತ್ತಿರುವಾಗ ನೆನಪಿಗೆ ಬರುವ ಎರಡು ವಿಶೇಷ ಪ್ರಯೋಗಗಳೆಂದರೆ ಪ್ರೇತ ನೃತ್ಯ ಮತ್ತು ಸಿಂಹ ನೃತ್ಯ.

ಪ್ರೇತ ನೃತ್ಯ:ಸಿಂಹ ನೃತ್ಯ:

 

1 comment:

Shailesh Hegde said...


Great tribute to an extremely talented artist who made thousands of people laugh! May be an evolutionary quirk!!

The "preta nritya" clip shows immense creativity - simple setup surpasses any hitech effect.