Wednesday, August 13, 2014

ಚೂರು ಪಾರು...ಅದು ಇದು

ಶಿಷ್ಯ: ಗುರುಗಳೇ, ನನಗೆ ಜ್ಞಾನೋದಯವಾಗಬೇಕು. ಏನು ಮಾಡಬೇಕು? ಹೇಳಿ.

ಗುರು: (ತುಂಬ ಯೋಚನೆ ಮಾಡಿ ಹೇಳಿದ) ಜ್ಞಾನೋದಯವಾಗಬೇಕು ಅಂದರೆ.......ಸೂರ್ಯೋದಯವಾಗಲು ಏನು ಮಾಡುತ್ತೀಯೋ ಅದನ್ನು ಮಾಡು.

ಶಿಷ್ಯ: ಹಾಂ!? ಸೂರ್ಯೋದಯವಾಗಲು ನಾನು ಏನೂ ಮಾಡಬೇಕಾಗಿಯೇ ಇಲ್ಲ!

ಗುರು: ಜ್ಞಾನೋದಯಕ್ಕೂ ಅಷ್ಟೇ. ಏನೂ ಮಾಡಬೇಕಾಗಿಯೇ ಇಲ್ಲ!

ಶಿಷ್ಯ: ಹಾಗಾದರೆ ಈ ಧ್ಯಾನ, ಯೋಗ ಇತ್ಯಾದಿ ಎಲ್ಲ ಯಾತಕ್ಕೆ?

ಗುರು: ಸೂರ್ಯೋದಯವಾದಾಗ ಅದನ್ನು ನೋಡಲು ಎಚ್ಚರವಿರುವದು ಹೇಗೆ ಮುಖ್ಯವೋ ಹಾಗೇ ಜ್ಞಾನೋದಯವಾದಾಗ ಕೂಡ ಎಚ್ಚರವಿರುವದೂ ಮುಖ್ಯ. ಜ್ಞಾನೋದಯವಾದಾಗ ಎಚ್ಚರವಿರಲು ಅನುಕೂಲವಾದೀತು ಅಂತ ಧ್ಯಾನ, ಯೋಗ ಎಲ್ಲ! ಅಷ್ಟೇ.

***

ಒಬ್ಬನಿಗೆ ಕನ್ನಡಿಯೊಂದರಲ್ಲಿ ತನ್ನನ್ನು ತಾನು ನೋಡಿಕೊಳ್ಳುವ ಮನಸ್ಸಾಯಿತು.
ನೋಡಿದರೆ ಕನ್ನಡಿ ಮೇಲೆ ಧೂಳು ತುಂಬಿತ್ತು.
ತಿಕ್ಕಿ ತಿಕ್ಕಿ ಸ್ವಚ್ಚ ಮಾಡಲು ಪ್ರಾರಂಭಿಸಿದ.
ಅದೆಷ್ಟು ಜನ್ಮದ ಧೂಳಿತ್ತೋ!
ಕನ್ನಡಿಯ ಚೌಕಟ್ಟು (ಫ್ರೇಮ್) ದುರ್ಬಲವಾಗಿ ಹೋಯಿತು. ಲದ್ಡಾಯಿತು. ದೂಳು ಮಾತ್ರ ಇನ್ನೂ ಉಳಿದಿತ್ತು.
ಹೋಗಿ ಹೊಸ ಚೌಕಟ್ಟು ತಂದ. ಕನ್ನಡಿಗೆ ಹಾಕಿಕೊಂಡ.
ಉಜ್ಜಿ ಉಜ್ಜಿ ಸ್ವಚ್ಚಗೊಳಿಸುವದನ್ನ ಮುಂದುವರಿಸಿದ.

ಅರ್ಥ? ಅವರವರ ಭಾವಕ್ಕೆ, ಭಕ್ತಿಗೆ.

***

೯/೧೧ ದಾಳಿಯ ನಂತರ ಅಮೇರಿಕಾ ಆಫ್ಘಾನಿಸ್ತಾನಕ್ಕೆ ಹೋಗಿ ಕೂತಿದ್ದು ಸರಿಯಷ್ಟೇ. ಅಲ್ಲಿ ಹೋಗಿ ತಾಲಿಬಾನು, ಅಲ್ಕೈದಾ, ಲಾಡೆನ್ ಎಲ್ಲರ ಮಾಹಿತಿ ತೆಗೆಯಲು ಪ್ರಾರಂಭಿಸಿದವರು ಅಮೇರಿಕಾದ ಬೇಹುಗಾರಿಕೆ ಸಂಸ್ಥೆ ಸಿಐಎ ಏಜೆಂಟರು.

ಒಬ್ಬ ಅಫ್ಘಾನಿ ಟ್ರೈಬಲ್ ನಾಯಕನ ಬಳಿ ತಾಲಿಬಾನ್ ಬಗ್ಗೆ ಸಾಕಷ್ಟು ಮಾಹಿತಿಯಿದೆ ಅಂತ ಗೊತ್ತಾಯಿತು. ಸಿಐಎ ಏಜೆಂಟಗಳು ಹೋಗಿ, 'ಸಲಾಂ' ಅಂದರು. ಮಾಹಿತಿ ಕೊಡಲು ಕೇಳಿದರು. ಹಿಂದೆ ಮುಂದೆ ನೋಡಿದ. ಗೊತ್ತಾಯಿತು. ಆಸಾಮಿ ಏನೋ ಕೇಳುತ್ತಿದ್ದಾನೆ ಅಂತ. ಏನು ಕೊಡಬೇಕು ಅಂತ ತಿಳಿಯಲಿಲ್ಲ. ದುಡ್ಡು ಕಾಸು ಅವನಿಗೆ ಅವನಿಗೆ ಉಪಯೋಗವಿಲ್ಲ. ಯಾಕೆಂದರೆ ಅವರ ಸಮಾಜದಲ್ಲಿ ರೊಕ್ಕಕ್ಕೆ ಕಿಮ್ಮತ್ತಿಲ್ಲ. ಎಲ್ಲ ದನಗಾಹಿಗಳು.

ಆ ನಾಯಕನಿಗೋ ಸುಮಾರು ವರ್ಷ ವಯಸ್ಸಾಗಿತ್ತು. ಮನೆಯಲ್ಲಿ ನೋಡಿದರೆ ಚಿಕ್ಕ ವಯಸ್ಸಿನ ಮೂರೋ ನಾಕೋ ಬೇಗಂಗಳು ಸುತ್ತ ಮುತ್ತ ಸುಳಿ ಮಿಳಿ ಮಾಡುತ್ತಿದ್ದರು. ನಾಯಕ ಮಾತ್ರ ಸುಸ್ತಾದವನಂತೆ ಕೂತಿರುತ್ತಿದ್ದ.

ಸಿಐಎ ಏಜೆಂಟ್ ತಲೆಯೊಳಗೆ ಏನೋ ಬಂತು. ಕಿಸೆಯಿಂದ ಒಂದಿಷ್ಟು ನೀಲಿ ಗುಳಿಗೆ ತೆಗೆದವನೇ ನಾಯಕನ ಕೈಯಲ್ಲಿ ತುರುಕಿ, ಕಣ್ಣು ಹೊಡೆದು, 'ಖುದಾ ಹಾಫಿಜ್' ಅಂತ ಹೇಳಿ ಹೊರಟು ಬಂದ.

ಸ್ವಲ್ಪ ದಿವಸಗಳ ನಂತರ ಹೋದರೆ ಸುಸ್ತಾಗಿದ್ದ ನಾಯಕ ಎದ್ದು ಥಕಥೈ ಅಂತ ಕುಣಿಯುತ್ತಿದ್ದ. ಕೇಳುವ ಮೊದಲೇ ಸಾಕಷ್ಟು ಮಾಹಿತಿ ಕೊಟ್ಟ. ಮತ್ತೂ ಕೊಡುತ್ತೇನೆ ಅಂದ. ಇನ್ನೂ ಒಂದಿಷ್ಟು ನೀಲಿ ಗುಳಿಗೆ ಇದ್ದರೆ ಕೊಟ್ಟು ಹೋಗಿ ಅಂದ. ನೀಲಿ ಗುಳಿಗೆಯೇ? ತೊಗೊಳ್ಳಿ. ಬೇಕಾದಷ್ಟು ಕೊಡೋಣ ಅಂತ ಹೇಳಿ ಸಿಐಎ ಕೊಟ್ಟಿತು.

ಆ ನೀಲಿ ಗುಳಿಗೆ ಅಫ್ಘಾನಿ ಬುಡಕಟ್ಟು ಜನರಲ್ಲಿ ಅದೆಷ್ಟು ಪ್ರಸಿದ್ಧವಾಯಿತು ಅಂದರೆ ಸಿಐಎ ದೊಡ್ಡ ಮಟ್ಟದಲ್ಲಿ ತರಿಸಿ ತರಿಸಿ ಕೊಡಬೇಕಾಯಿತು. ಗುಳಿಗೆ ಕೊಡಿ, ಮಾಹಿತಿ ತೊಗೊಳ್ಳಿ ಅನ್ನುವ ಪರಿಸ್ಥಿತಿ ಬಂತು.

ಯಾವದಾಗಿತ್ತು ಆ ಗುಳಿಗೆ?

ವಯಾಗ್ರಾ!

***

ಅಮೇರಿಕಾದ ಮಿನ್ನಿಯಾಪೋಲಿಸ್ ನಗರದ ಟಾರ್ಗೆಟ್ ಮಳಿಗೆಯೊಂದಕ್ಕೆ ಒಬ್ಬ ವ್ಯಕ್ತಿ ಆಗಮಿಸಿದ. ದುಮು ದುಮು ಅನ್ನುತ್ತಲೇ ಬಂದ. 'ಓಹೋ! ಕ್ರುದ್ಧ ಗ್ರಾಹಕ. ಏನೋ ಕಿರಿಕ್ ಆಗಿರಬೇಕು. ಇವನನ್ನು ಸಮಾಧಾನ ಮಾಡಬೇಕು,' ಅಂತ ಅಂಗಡಿಯವರಿಗೆ ಅವನ ನೋಡಿಯೇ ತಿಳಿಯಿತು.

'ಹಲೋ ಸಾರ್, ನಿಮಗೆ ಹೇಗೆ ಸಹಾಯ ಮಾಡಲಿ?' ಅಂತ ಕೇಳಿದ ಗ್ರಾಹಕ ಸೇವಾ ವಿಭಾಗದ ಮ್ಯಾನೇಜರ್.

'ಏನ್ರೀ ಇವು? ಹಾಂ!?' ಅಂತ ಅಬ್ಬರಿಸಿದ ಗ್ರಾಹಕ. ಏನೋ ಒಂದಿಷ್ಟು ಕಾಗದ ಮೇನೇಜರನ ಮುಖದ ಮುಂದೆ ಹಿಡಿದ. ತಿವಿದ.

'ಸಾರ್, ಇವು ಕೂಪನ್ನು ಸಾರ್. ಡಿಸ್ಕೌಂಟ್ ಕೂಪನ್ನು. ಇದರಲ್ಲಿ ಏನು ಪ್ರಾಬ್ಲಮ್ ಸಾರ್?' ಅಂತ ಕೇಳಿದ ಮ್ಯಾನೇಜರ್.

'ಅದು ನನಗೂ ಗೊತ್ತುರೀ. ಎಂತಹ ಕೂಪನ್ ಅಂತ ಸ್ವಲ್ಪ ನೋಡಿ!' ಅಂತ ಅಬ್ಬರಿಸಿದ ಗ್ರಾಹಕ.

ಮ್ಯಾನೇಜರ್ ಕೂಪನ್ನುಗಳನ್ನು ತೆಗೆದುಕೊಂಡು ನೋಡಿದ.

'ಸಾರ್, ಇವು ಬಸುರಿ ಹೆಂಗಸರಿಗೆ ಕಳಿಸೋ ಕೂಪನ್ನುಗಳು. ಗರ್ಭ ಧರಿಸಿದ ನಂತರ, ಹೆರಿಗೆ ಸಮಯಕ್ಕೆ, ಹೆರಿಗೆ ನಂತರ ಶಿಶುಗಳಿಗೆ ಬೇಕಾಗೋ ವಸ್ತುಗಳನ್ನು ಕೊಳ್ಳಲು ಡಿಸ್ಕೌಂಟ್ ಕೂಪನ್ನುಗಳು ಸಾರ್,' ಅಂತ innocent ಆಗಿ ಹೇಳಿದ ಅಂಗಡಿಯವ.

'ಸರಿರೀ. ಈ ಕೂಪನ್ಸ್ ಯಾರಿಗೆ ಕಳಿಸುತ್ತಿದ್ದೀರಿ ಅಂತ ಗೊತ್ತೇ? ಹಾಂ!?' ಅಂತ ಅಬ್ಬರಿಸಿದ ಕ್ರುದ್ಧ ಕಸ್ಟಮರ್. ಅವನಿಗೆ ಮತ್ತೂ ಹೆಚ್ಚಿನ ಕಿರಿಕಿರಿ.

'ಯಾರಿಗೆ ಸಾರ್!?' ಅಂತ ಕೇಳಿದ ಮ್ಯಾನೇಜರ್. ಅವನಿಗೇನು ಗೊತ್ತು? ಯಾರಿಗೆ ಹೋಗಿ ಮುಟ್ಟಿದ್ದವೋ ಆ ಬಸುರಿಯರ ಕೂಪನ್ನುಗಳು.

'ರೀ! ಇಂತಹ ಕೂಪನ್ನುಗಳನ್ನು ನನ್ನ ಹದಿನಾರು ವರ್ಷದ ಮಗಳಿಗೆ ಕಳಿಸೋದೇ? ಅವಳಿಗೇನು ಬಸುರಾಗು ಅಂತ ಹೇಳ್ತಾ ಇದ್ದೀರಾ? ಒಳ್ಳೆ ಅಂಗಡಿಯವರು ನೀವು! ಸ್ವಲ್ಪ ನೋಡಿಕೊಂಡು ಯಾರಿಗೆ ಯಾವ ತರಹದ ಕೂಪನ್ ಕಳಿಸಬೇಕು ಅಂತ ಕಾಳಜಿ ವಹಿಸಿ ಕಳಿಸಿ. ತಿಳೀತಾ?' ಅಂತ ಅಬ್ಬರಿಸಿ ಹೊರಟ ಕಸ್ಟಮರ್.

'ಸಾರೀ ಸಾರ್. ಅದೇನೋ ಮಿಸ್ಟೇಕ್ ಆಗಿರಬೇಕು. ಅದಕ್ಕೇ ಬಸುರಿಯರಿಗೆ ಕಳಿಸೋ ಕೂಪನ್ ತಮ್ಮ ಹದಿಹರಿಯದ ಮಗಳಿಗೆ ಹೋಗಿ ಬಿಟ್ಟಿದೆ ಅಂತ ಕಾಣುತ್ತೆ. ವಿಚಾರಿಸ್ತೀನಿ ಸಾರ್. ಮತ್ತೊಮ್ಮೆ ನಮ್ಮ ಟಾರ್ಗೆಟ್ ಮಳಿಗೆ  ಪರವಾಗಿ  ಸಾರೀ ಸಾರ್. ಕ್ಷಮಿಸಿ,' ಅಂತ ಗೊಳೋ ಅಂದ ಮ್ಯಾನೇಜರ್. ತಲೆ ಬಿಸಿಯಾಗಿದ್ದ ಕಸ್ಟಮರನನ್ನು ತಣ್ಣ ಮಾಡಿ ಕಳಿಸಿದ್ದರೆ ಸಾಕಾಗಿತ್ತು ಅವನಿಗೆ.

ಇದಾದ ಸ್ವಲ್ಪ ದಿವಸಗಳ ನಂತರ, ಅಂಗಡಿಯವರ ಪದ್ಧತಿ ಪ್ರಕಾರ ಟಾರ್ಗೆಟ್ ಅಂಗಡಿಯ ಮಾಲೀಕ ಆ ಕಸ್ಟಮರನಿಗೆ ಫೋನ್ ಮಾಡಿದ. ಫೋನ್ ಮಾಡಿ, ಮಾತಾಡಿ, ಕೂಪನ್ ಕಳಿಸಿ ಆದ ಪ್ರಮಾದಕ್ಕೆ ಮತ್ತೊಮ್ಮೆಕ್ಷಮೆ ಕೇಳಿ, ಗ್ರಾಹಕನನ್ನು ಹಿಡಿದಿಟ್ಟುಕೊಳ್ಳುವ ಒಂದು ಪ್ರಯತ್ನ. ಎಲ್ಲ ಅಂಗಡಿಗಳೂ ಮಾಡುತ್ತವೆ ಬಿಡಿ. ಯಾಕೆಂದರೆ ಅವರಿಗೆಲ್ಲ ಗೊತ್ತು ಹೊಸ ಕಸ್ಟಮರ್ ಸಂಪಾದಿಸುವದು ಎಷ್ಟು ಕಷ್ಟದ ಕೆಲಸ ಅಂತ. ಸಂತೃಪ್ತ ಗ್ರಾಹಕರು ಬೆಸ್ಟ್. ಅಸಂತೃಪ್ತ ಗ್ರಾಹಕರು ತುಂಬ ಡೇಂಜರಸ್ ಬಿಸಿನೆಸ್ಸಿಗೆ. ಅದಕ್ಕೇ ಗ್ರಾಹಕ ದೇವೋ ಭವ!

ಫೋನ್ ಮಾಡಿದ.  ಆವತ್ತು ಬಂದಿದ್ದ ಮಂಡೆ ಬಿಸಿ ಕಸ್ಟಮರ್ ಸಿಕ್ಕ. ಮ್ಯಾನೇಜರ್ ಮತ್ತೊಮ್ಮೆ ಕ್ಷಮೆ ಕೇಳಿದ.

'ಮ್ಯಾನೇಜರ್ ಅವರೇ, ಒಂದು ಮಾತು ಹೇಳಬೇಕಿತ್ತು ನಿಮಗೆ. ನನಗೇ ಗೊತ್ತಿಲ್ಲದಂತೆ ನನ್ನ ಮನೆಯಲ್ಲಿ ಒಂದು ಘಟನೆ ನಡೆದಿವೆ ಅಂತ ಈಗ ಗೊತ್ತಾಯಿತು,' ಅಂತ ಒಂದು ತರಹ ಮಳ್ಳನ ದನಿಯಲ್ಲಿ ಹೇಳಿದ ಕಸ್ಟಮರ್.

'ಏನ್ ಸಾರ್?' ಅಂತ ಕೇಳಿದ ಫೋನ್ ಮಾಡಿದ ಮ್ಯಾನೇಜರ್.

'ಅದು ಏನು ಅಂದ್ರೆ, ನನ್ನ ಮಗಳು ಬಸುರಿಯಂತೆ. ಇದೇ ಆಗಸ್ಟ್ ನಲ್ಲಿ ಡೆಲಿವರಿ ಡೇಟ್ ಇದೆಯಂತೆ. ಸರಿಯಾಗಿ ವಿಚಾರ ಮಾಡಿದ ಮೇಲೆ ಬಾಯಿ ಬಿಟ್ಟಳು. ಏನು ಮಾಡೋದು? ಎಲ್ಲ ನಮ್ಮ ಕರ್ಮ. ಈ ಕಾಲದ ಮಕ್ಕಳೇ ಹೀಗೆ. ಅದು ಗೊತ್ತಿಲ್ಲದೇ ಆವತ್ತು ನಿಮ್ಮ ಅಂಗಡಿಗೆ ಬಂದು, ಬಸುರಿಯರಿಗೆ ಕಳಿಸುವ ಕೂಪನ್ನ ಅವಳಿಗೆ ಕಳಿಸಿದ್ದಕ್ಕೆ ನಿಮ್ಮ ಮೇಲೆ ರೇಗಾಡಿಬಿಟ್ಟೆ. ಆವತ್ತು ಕೋಪದಿಂದ ರೇಗಾಡಿದ್ದಕ್ಕೆ ನಿಜವಾಗಿ ನಿಮ್ಮ ಕ್ಷಮೆ ನಾನು ಕೇಳಬೇಕು. ಸಾರೀ! ದಯವಿಟ್ಟು ಕ್ಷಮಿಸಿ' ಅಂತ ಹೇಳಿ ಕಸ್ಟಮರ್ ಫೋನಿಟ್ಟ.

ಮ್ಯಾನೇಜರ್ ಹಾಂ! ಅಂತ ದಂಗು ಹೊಡೆದ.

ಆಗಿದ್ದೇನಾಗಿತ್ತು?

ಟಾರ್ಗೆಟ್ ಕಂಪನಿ ಗ್ರಾಹಕರ ಶಾಪಿಂಗ್ ಡಾಟಾ ಎಲ್ಲ ಸಂಗ್ರಹಿಸಿ, ಅದನ್ನು ತುಂಬಾ ಡೀಪ್ ಆಗಿ ಬೇರೆ ಬೇರೆ ರೀತಿಯಿಂದ ವಿಶ್ಲೇಷಿಸಿ, ಗ್ರಾಹಕರಿಗೆ ಕಾಲಕ್ಕೆ ಸರಿಯಾಗುವಂತಹ ಕೂಪನ್ನುಗಳನ್ನು ಹುಡುಕುವ ಸಾಫ್ಟ್ವೇರ್ ಒಂದನ್ನು ತಯಾರಿಸಿ, ಅದರ ಉಪಯೋಗ ಮಾಡುವದನ್ನು ಆರಂಭಿಸಿತ್ತು. ಆ ಹುಡುಗಿ ಸಹಿತ ಟಾರ್ಗೆಟ್ ಗ್ರಾಹಕಿ. ಅದೇನೇನು ಸಾಮಾನು ಖರೀದಿ ಮಾಡುತ್ತಿದ್ದಳೋ ಏನೋ! ಒಟ್ಟಿನಲ್ಲಿ ಅವಳ ಹಲವಾರು ತಿಂಗಳುಗಳ ಖರೀದಿ ಡಾಟಾವನ್ನು ವಿಶ್ಲೇಷಿಸಿದ ಕಂಪ್ಯೂಟರ್ ಬರೋಬ್ಬರಿ ಹೇಳಿತ್ತು ಅವಳ ಪರಿಸ್ಥಿತಿ ಬಗ್ಗೆ. ಅದಕ್ಕೇ ಸರಿಯಾಗಿ ಅವಳಿಗೆ ಅನುಕೂಲವಾಗುವಂತೆ ಗರ್ಭಿಣಿಯರಿಗೆ,
ಹೊಸ ತಾಯಂದಿರಿಗೆ ಉಪಯೋಗವಾಗುವಂತಹ ಒಂದಿಷ್ಟು ಕೂಪನ್ನುಗಳನ್ನು ಕಳಿಸಿತ್ತು. ಅದು ಅವಳ ತಂದೆಗೆ ಸಿಕ್ಕು ಆವಾಂತರವಾಗಿತ್ತು.

ಇದನ್ನು Data Mining & Predictive Analytics ಅನ್ನುವ ಹೊಸ ವಿಷಯದ, ಮಾಹಿತಿ ತಂತ್ರಜ್ಞಾನದ ಆವಿಷ್ಕಾರದ ವಿಜಯ ಅನ್ನುತ್ತೀರೋ ಅಥವಾ ಮತ್ತೇನೋ ಅನ್ನುತ್ತೀರೋ!? ನಿಮಗೆ ಬಿಟ್ಟದ್ದು.

ಪೂರ್ತಿ ಮಾಹಿತಿಗೆ - http://www.nytimes.com/2012/02/19/magazine/shopping-habits.html?pagewanted=all&_r=0

1 comment:

Vimarshak Jaaldimmi said...


Very good!

Any hints for L01/2?!