Saturday, August 23, 2014

ಸತ್ಯಾಗ್ರಹ ಮಾಡಿದ್ದ ಅನಂತಮೂರ್ತಿಗಳು

ಸರಿಯಾಗಿ ನೆನಪಿದೆ. ೧೯೯೯, ಸೆಪ್ಟೆಂಬರ್. ಯಾಕೆಂದರೆ ಅದು ಇಲ್ಲಿ ಬಂದ ನಂತರದ ಮೊದಲ ಭಾರತ ಪ್ರವಾಸ. ೧೯೯೭ ರಲ್ಲಿ ಅಮೇರಿಕಾಗೆ ಬಂದಿದ್ದು. ಎಲ್ಲರ ಹಾಗೆ ಎರಡು ವರ್ಷದಲ್ಲಿ ಒಂದಿಷ್ಟು ರಜೆ, ಸ್ವಲ್ಪ ರೊಕ್ಕಾ ಎಲ್ಲ ಒಟ್ಟು ಮಾಡಿಕೊಂಡು ಮೊದಲ 'ಬ್ಯಾಕ್ ಟು ಇಂಡಿಯಾ' ಟ್ರಿಪ್.

ಅಮೇರಿಕಾಗೆ ಹೋಗಿ ಏನು ಮಿಸ್ ಮಾಡಿಕೊಂಡಿದ್ದೆನೋ ಇಲ್ಲವೋ ಗೊತ್ತಿಲ್ಲ. ಕನ್ನಡ ಪತ್ರಿಕೆಗಳನ್ನು ಮಿಸ್ ಮಾಡಿಕೊಂಡಿದ್ದು ಮಾತ್ರ ಹೌದು. ಧಾರವಾಡದಲ್ಲಿ ಇದ್ದಾಗೇ ಇರಬಹುದು, ಬೆಂಗಳೂರಿನಲ್ಲಿ ಇದ್ದಾಗೇ ಇರಬಹುದು. ವಾರಾಂತ್ಯ ಬಂತು ಅಂದರೆ ನಮ್ಮದು ಸ್ಟ್ಯಾಂಡರ್ಡ್ ರೂಟೀನ್. ಪಾನ್ ಬೀಡಾ ಅಂಗಡಿಗಳಲ್ಲಿ ತೂಗು ಹಾಕಿರುವ ಅಷ್ಟೂ ಕನ್ನಡ ಪತ್ರಿಕೆಗಳನ್ನು ತರುವದು. ಶನಿವಾರ, ರವಿವಾರ ಪೂರ್ತಿ ಅವನ್ನು ಓದುವದು. ಆ ಪತ್ರಿಕೆ ಈ ಪತ್ರಿಕೆ ಅಂತ ಭೇದಭಾವ ಇಲ್ಲ. ಎಲ್ಲ ಪತ್ರಿಕೆ. ಲಂಕೇಶ ಪತ್ರಿಕೆ, ವಾರ ಪತ್ರಿಕೆ, ಹಾಯ್ ಬೆಂಗಳೂರು, ಶಿವರಾಜ್ ಕುಮಾರ್ ಪತ್ರಿಕೆ, ಪೋಲಿಸ್ ನ್ಯೂಸ್, ಕ್ರೈಂ ನ್ಯೂಸ್, ಪೋಲೀಸ್ ಪತ್ರಿಕೆ, ಭ್ರೂಣ (ಇತ್ತು ಕಣ್ರೀ ಆ ಹೆಸರಿನ ಒಂದು ಟ್ಯಾಬ್ಲಾಯ್ಡ್ ಪತ್ರಿಕೆ), ಮತ್ತೊಂದು, ಮಗದೊಂದು ಅಂತ. ಎಲ್ಲ ಆ ಕಾಲದಲ್ಲಿ ನಾಲ್ಕೈದು ರೂಪಾಯಿಗೆ ಸಿಗುತ್ತಿದ್ದವು. ಒಂದು ಐವತ್ತು ರೂಪಾಯಿಗೆ ವಾರಾಂತ್ಯಕ್ಕೆ ಸಮೃದ್ಧ ಟ್ಯಾಬ್ಲಾಯ್ಡ್ ಸಾಹಿತ್ಯ. ಜೊತೆಗೆ ಮೆಲ್ಲಲು ಕವಳ, ಗುಟಕಾ, ತಾಸಿಗೊಂದು ಸಲ ಗಂಟಲಲ್ಲಿ ಬಿಟ್ಟುಕೊಳ್ಳಲು ಚಾ, ಕಾಪಿ ಇದ್ದರೆ ಸ್ವರ್ಗಕ್ಕೆ ಗೋಲಿ ಮಾರೋ ಅನ್ನುವ ಹಾಗೆ.

೧೯೯೯ ಸೆಪ್ಟೆಂಬರ್ ನಲ್ಲಿ ಭಾರತಕ್ಕೆ ಬಂದು, ಧಾರವಾಡ ಮುಟ್ಟಿದರೆ ಮತ್ತದೇ ರೂಟೀನ್. ವಾರಾಂತ್ಯ, ವಾರ ಅಂತ ಭೇದವಿಲ್ಲ. ಮೂರು ವಾರದ ರಜಾ ಮೇಲೆ ಬಂದಿದ್ದು. ಅದೂ ಎರಡು ವರ್ಷಗಳ ಬಳಿಕ. ಫುಲ್ ಮಜಾ ಮಾಡಿ. ಮತ್ತೇನು ಅದೇ ಹಳೆಯ ಚಾಳಿ. ಅಂಗಡಿಗೆ ಹೋಗಿ, ಎಲ್ಲ ಪತ್ರಿಕೆ ತಂದು, ಗುಡ್ಡೆ ಹಾಕಿಕೊಂಡು ಓದಿದ್ದೇ ಓದಿದ್ದು. ಮನೆಯೂಟ, ಶುದ್ಧ ಧಾರವಾಡ ಜರ್ದಾ ಕವಳ ಹೆಚ್ಚಿನ ಬೋನಸ್ ಅನ್ನಿ. ಆಹಾ! ಧಾರವಾಡ ಮಳೆಗಾಲದ ಟೈಮಿನಲ್ಲಿ, ಆಫೀಸ್ ಅದು ಇದು ಅನ್ನುವ ತಲೆಬಿಸಿ ಇಲ್ಲದೆ ಟ್ಯಾಬ್ಲಾಯ್ಡ್ ಪತ್ರಿಕೆಗಳ 'ರೋಚಕ ಸಾಹಿತ್ಯ' ಓದುವ ಸುಖ! ಅದು ಅನುಭವಿಸಿದವರಿಗೇ ಗೊತ್ತು. 

ಆವಾಗ ಹಾಗೆ ತಂದುಕೊಂಡಿದ್ದ ಪತ್ರಿಕೆಗಳಲ್ಲಿ ಕಂಡಿದ್ದು 'ಅಗ್ನಿ' ಅನ್ನುವ ಟ್ಯಾಬ್ಲಾಯ್ಡ್ ಪತ್ರಿಕೆ. ಅಲ್ಲಿವರೆಗೆ ಆ ಹೆಸರಿನ ಪತ್ರಿಕೆ ಓದಿರಲಿಲ್ಲ. ಕಂಡಿದ್ದರೆ ತಾನೇ ಓದುವದು. ಹೆಚ್ಚಾಗಿ ನಾವು ಭಾರತ ಬಿಟ್ಟ ಮೇಲೆ ಆರಂಭವಾದ ಟ್ಯಾಬ್ಲಾಯ್ಡ್ ಪತ್ರಿಕೆ ಇರಬೇಕು. ಇರಲಿ ನೋಡೋಣ ಅಂತ ಪುಟ ತಿರುಗಿಸಿದೆ.

ಅರೆ! ಇದು ನಮ್ಮ ಶ್ರೀಧರ್ ಮೂರ್ತಿಯವರ ಪತ್ರಿಕೆ. 'ನಮ್ಮ' ಶ್ರೀಧರ್ ಮೂರ್ತಿ ಅನ್ನಲಿಕ್ಕೆ ಅವರ ಪರಿಚಯ ಇಲ್ಲ. ಆದರೆ ಅವರು ಆಗಲೇ ಸುಧಾರಿತ ಮಾಜಿ ಅಂಡರ್ವರ್ಲ್ಡ್ ಕಿಂಗ್, ಮಾಜಿ ರೌಡಿಯಾದರೂ ಸಾಹಿತ್ಯ, ಸಂಗೀತ ಇತ್ಯಾದಿಗಳಲ್ಲಿ ಆಸಕ್ತಿ ಇರುವ ವ್ಯಕ್ತಿ, ಅದು ಇದು ಅಂತ ಸುಮಾರು ಸುದ್ದಿಯಾಗಿದ್ದರು. ಅಲ್ಲಿ ಇಲ್ಲಿ ಓದಿ ಅವರ ಬಗ್ಗೆ ಗೊತ್ತಿತ್ತು. ಮತ್ತೆ ತುಂಬ ಇಷ್ಟಪಟ್ಟು ಓದುತ್ತಿದ್ದ 'ಹಾಯ್ ಬೆಂಗಳೂರ್' ಪತ್ರಿಕೆಯಲ್ಲಿ ಅವರ ಸುದ್ದಿ ಸುಮಾರು ಬರುತ್ತಿತ್ತು. ಅದರ ಸಂಪಾದಕ ರವಿ ಬೆಳಗೆರೆಯವರ ಒಂದು ಕಾಲದ ಆತ್ಮೀಯ ಸ್ನೇಹಿತರಾಗಿದ್ದವರು ಈ ಶ್ರೀಧರ್. ಮತ್ತೆ ೧೯೯೭ ರಲ್ಲಿ, ನಾನು ಅಮೇರಿಕಾಗೆ ಹೊರಡುವ ಕೆಲವೇ ದಿವಸಗಳ ಮೊದಲು, ಬೆಂಗಳೂರಲ್ಲಿ, ಇದೇ ಶ್ರೀಧರ್ ಮೂರ್ತಿಗಳ ಮೇಲೊಂದು ಹತ್ಯಾ ಪ್ರಯತ್ನವೂ ಆಗಿತ್ತು. ಆವತ್ತು ಕಾರಿನಲ್ಲಿರದ ಶ್ರೀಧರ್ ಮೂರ್ತಿ ಬಚಾವಾಗಿದ್ದರು. ಅವರಂತೆಯೇ ಕಾಣುತ್ತಿದ್ದ ಅವರ ಡ್ರೈವರ್ ಶೀನ ಹಂತಕರ ಗುಂಡಿನ ದಾಳಿಯಲ್ಲಿ ಸತ್ತಿದ್ದ. ಭೂಗತ ಜಗತ್ತನ್ನು ಶ್ರೀಧರ್ ಬಿಟ್ಟಿದ್ದೇವೆ ಅಂದರೂ ಅವರ ಹಳೆ ದುಷ್ಮನ್ನುಗಳು ಬಿಡಬೇಕಲ್ಲ. ಆ ವಿಷಯದಲ್ಲಿ ಆಗಿದ್ದ ಗ್ಯಾಂಗ್ ವಾರ್.

ಇಂತಹ ರೋಚಕ ಹಿನ್ನೆಲೆಯಿದ್ದ ಶ್ರೀಧರ್ ಮೂರ್ತಿ 'ಅಗ್ನಿ' ಅನ್ನುವ ಪತ್ರಿಕೆ ಶುರುಮಾಡಿಕೊಂಡಿದ್ದರು.

ಆ ಸಂಚಿಕೆ ಬಿಚ್ಚಿ ನೋಡಿದರೆ ದೊಡ್ಡ ಸುದ್ದಿಯೇ ಸಾಹಿತಿ ಅನಂತಮೂರ್ತಿಗಳ ಸತ್ಯಾಗ್ರಹದ ಬಗ್ಗೆ.

ಆ ಸಂಚಿಕೆಯಲ್ಲಿ ಓದಿದ ಸುದ್ದಿಯಿಂದ ತಿಳಿದಿದ್ದು ಇಷ್ಟು. ಅಗ್ನಿ ಪತ್ರಿಕೆಯಲ್ಲಿ ಅನಂತಮೂರ್ತಿಗಳ ಬಗ್ಗೆ ಏನೋ ಒಂದು ವರದಿ ಬಂದಿತ್ತಂತೆ. ಏನು ಅಂತ ಸರಿ ನೆನಪಿಲ್ಲ. ಸರ್ಕಾರಿ ಕಾರನ್ನು ತಮ್ಮ ವಯಕ್ತಿಕ ಕೆಲಸಕ್ಕೆ ಉಪಯೋಗಿಸಿಕೊಂಡರು ಅಂತ ಏನೋ ವರದಿ ಅಂತ ಓದಿದ ನೆನಪು. ಅದನ್ನು ಓದಿದ ಅನಂತಮೂರ್ತಿ ತುಂಬ ಕೋಪಗೊಂಡಿದ್ದರು. ಸಮಜಾಯಿಷಿ ಕೊಡಲು ನೋಡಿದರು. 'ನಮ್ಮ ಕಡೆ ನಿಮ್ಮ ಅವ್ಯವಹಾರದ ಬಗ್ಗೆ ಪ್ರೂಫ್ ಇದೆ. ಅದಕ್ಕೇ ಬರೆದಿದ್ದೇವೆ,' ಅಂತ ಪತ್ರಿಕೆಯವರ ಹೇಳಿಕೆ. ಎಲ್ಲರಿಗೆ ಮೇಷ್ಟ್ರಾಗಿದ್ದ ಅನಂತಮೂರ್ತಿಗಳಿಗೆ ಅಗ್ನಿ ಪತ್ರಿಕೆಯ ಸಂಪಾದಕ ಶೀಧರ್ ಅಪರಿಚಿತರೂ ಅಲ್ಲ. ಫೋನ್ ಮಾಡಿ, ಏಕವಚನದಲ್ಲಿ ಪ್ರೀತಿಯಿಂದ ಮಾತಾಡಿ, 'ಅಲ್ಲಪ್ಪಾ, ಶೀಧರ್, ಖಾಯಿಲೆ ಬಿದ್ದ ತಾಯಿ ನೋಡಲು ಹೋದರೆ, ಏನೇನೋ ಬರೆದುಬಿಟ್ಟಿದ್ದಿಯಲ್ಲಪ್ಪಾ. ಇದು ಸರಿನೇ?' ಅಂತ ಅನಂತಮೂರ್ತಿಗಳ ಪ್ರಲಾಪ. 'ಸಾರ್, ನಿಮ್ಮ ತಾಯಿ ಬೇಗ ಹುಶಾರಾಗಲಿ. ವಿಷಯ ಅದಲ್ಲ. ನಮ್ಮ ತಕರಾರು ಇರುವದು ನೀವು ಸರ್ಕಾರಿ ಕಾರ್ ದುರ್ಬಳಕೆ ಮಾಡಿಕೊಂಡಿದ್ದೀರಿ ಅಂತ. ಅದರ ಬಗ್ಗೆ ಹೇಳಿ ಸಾರ್,' ಅಂತ ಸಂಪಾದಕ ಶ್ರೀಧರ್ ಅವರ ರಿವರ್ಸ್ ಆರ್ಗ್ಯುಮೆಂಟ್. ಒಟ್ಟಿನಲ್ಲಿ ಜಗಳ ಬಗೆಹರಿಯಲಿಲ್ಲ ಅಂತ ಕಾಣುತ್ತದೆ.

ಆಗ ನಿರ್ಧಾರ ಮಾಡಿದರು ಅನಂತಮೂರ್ತಿಗಳು - ಅಗ್ನಿ ಪತ್ರಿಕೆ ಕಚೇರಿ ಮುಂದೆ ಕುಟುಂಬ ಸಮೇತ ಸತ್ಯಾಗ್ರಹ ಮಾಡುತ್ತೇನೆ.  'ಸರಿ, ಬಂದು ಮಾಡಿಕೊಳ್ಳಿ,' ಅಂತ ಅಗ್ನಿ ಪತ್ರಿಕೆಯವರು ಹೇಳಿದರು.

ಹೇಳಿದ ದಿವಸ ಪತ್ನಿ, ಮಗನ ಸಂಗಡ ಬಂದ ಅನಂತಮೂರ್ತಿ ಸತ್ಯಾಗ್ರಹಕ್ಕೆ ಕೂತರು. ಎಷ್ಟು ಶಿಸ್ತುಬದ್ಧವಾಗಿ ಬಂದು ಕೂತಿದ್ದರು ಅಂತೀರಿ. ಎಷ್ಟು ಮಟ್ಟಸವಾಗಿ ತಯಾರಿ ಮಾಡಿಕೊಂಡು ಬಂದಿದ್ದರು ಅಂತೀರಿ. ಕುಳಿತುಕೊಳ್ಳಲು ಫೋಲ್ಡಿಂಗ್ ಖುರ್ಚಿಗಳು, ತಿಂಡಿ ತುಂಬಿದ ಟಿಫಿನ್ ಕ್ಯಾರಿಯರ್, ಕಾಫೀ, ಟೀ ಇದ್ದ ಥರ್ಮಾಸ್. ವಾಹ್! ಶಿಸ್ತು ಅಂದರೆ ಅವರನ್ನು ನೋಡಿ ಕಲಿಯಬೇಕು. ವೇಷ ಭೂಷಣ ಅಂತೂ ಬಿಡಿ. ಅವರ ಡ್ರೆಸ್ ಯಾವಾಗಲೂ ಪರ್ಫೆಕ್ಟ್. ಒಂದು ಇಸ್ತ್ರಿ ಗೆರೆ ಆಕಡೆ ಈಕಡೆ ಆಗಿರುವದಿಲ್ಲ. ಇದೆಲ್ಲ ಫೋಟೋ, ವರದಿ ಆವತ್ತು ತಂದಿದ್ದ ಅಗ್ನಿ ಪತ್ರಿಕೆಯಲ್ಲಿತ್ತು.

ಸತ್ಯಾಗ್ರಕ್ಕೆ ಬಂದಾಗ ಅಲ್ಲೂ ಜಗಳವಾಗಿಬಿಡಬೇಕೇ! ಅಗ್ನಿ ಪತ್ರಿಕೆ ವರದಿಯಿಂದ ಅನಂತಮೂರ್ತಿಗಳ ಪುತ್ರ ಶರತ್ ತುಂಬ ಕೋಪಗೊಂಡಿದ್ದರು. ಅನಂತಮೂರ್ತಿಗಳ ಬಗ್ಗೆ ಹಿಂದೆ ವರದಿ ಬರೆದಿದ್ದ ವರದಿಗಾರ ಅಲ್ಲಿ ಕಂಡೇ ಬಿಡಬೇಕೇ! ಬಿಸಿರಕ್ತ ಬೇರೆ. ಅನಂತಮೂರ್ತಿ ಪುತ್ರ ವರದಿಗಾರರಿಗೆ ಏನೋ ಅಂದರು. ಅವರೂ ತಿರುಗಿ ಏನೋ ಅಂದು ಅಲ್ಲೂ ಜಗಳ. ಈಗ ಅಗ್ನಿ ಪತ್ರಿಕೆಯ ಎಲ್ಲರೂ ಹೊರಗೆ ಬಂದು ಒಂದು ತರಹದ ಡಬಲ್ ಸತ್ಯಾಗ್ರಹ.

ಅನಂತಮೂರ್ತಿಗಳು ಅಂದಾಕ್ಷಣ ಯಾವಾಗಲೂ ಈ ಘಟನೆ ನೆನಪಾಗುತ್ತದೆ.

ಅನಂತಮೂರ್ತಿಗಳ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನೆಮ್ಮದಿ ಸಿಗಲಿ.

ಸಾಹಿತಿ ಅನಂತಮೂರ್ತಿಗಳು

1 comment:

Vimarshak Jaaldimmi said...


May his soul rest in peace!