Thursday, December 18, 2014

ಬೇರೆಬೇರೆಯಾಗಿದ್ದ ಗಂಡ ಹೆಂಡತಿಯರನ್ನು ಒಂದುಗೂಡಿಸಿ 'ಮಾನವೀಯತೆ ಮೆರೆದ' ಕಸ್ಟಮ್ಸ್ ಅಧಿಕಾರಿ!

ಬೇರೆಬೇರೆಯಾಗಿದ್ದ ಗಂಡ ಹೆಂಡತಿಯರನ್ನು ಕಸ್ಟಮ್ಸ್ ಅಧಿಕಾರಿಯೊಬ್ಬರು ಒಂದುಗೂಡಿಸಿ 'ಮಾನವೀಯತೆ ಮೆರೆದ' ಘಟನೆ ಸ್ಯಾನ್ ಫ್ರಾನ್ಸಿಸ್ಕೋ ಏರ್ಪೋರ್ಟ್ ನಿಂದ ವರದಿಯಾಗಿದೆ.

ಡಿಸೆಂಬರ್ ೧೭ ರಂದು ಭಾರತದಿಂದ ಆಗಮಿಸಿದ್ದರು ಆ ದಂಪತಿ. ಇಮಿಗ್ರೇಷನ್ ಮುಗಿಸಿ, ಲಗೇಜ್ ಎಲ್ಲ ಕಲೆಕ್ಟ್ ಮಾಡಿ, ಟ್ರಾಲಿಯಲ್ಲಿ ಹಾಕಿಕೊಂಡು ಹೊರಟರು. ಕಸ್ಟಮ್ಸ್ ಕ್ಲಿಯರ್ ಮಾಡುವಲ್ಲಿ ದೊಡ್ಡ, ಉದ್ದನೆಯ ಕ್ಯೂ. ಕಸ್ಟಮ್ ಅಧಿಕಾರಿಗಳಿಗೆ ಮೊದಲೇ ತಲೆ ಬಿಸಿ. ಒಬ್ಬೊಬ್ಬರದೇ ಕಸ್ಟಮ್ಸ್ ಡಿಕ್ಲೆರೇಶನ್ ಕಾರ್ಡ್ ನೋಡಿ ನೋಡಿ, ಅವರನ್ನು ಸೀದಾ ಹೊರಗೆ ಬಿಡಬಹುದೋ ಅಥವಾ ಹೆಚ್ಚಿನ ಚೆಕಿಂಗ್ ಗೆ ಕಳಿಸಬೇಕೋ ಅನ್ನುವ ಮಂಡೆ ಬಿಸಿ. ಅಂತಾದ್ದರಲ್ಲಿ ಈ ಗಂಡ ಒಂದು ಕಡೆ, ಅವನ ಹೆಂಡತಿ ಇನ್ನೊಂದು ಕಡೆ. ಅಕಟಕಟಾ!

ಒಂದು ಪರಿವಾರಕ್ಕೆ ಒಂದೇ ಒಂದು ಕಸ್ಟಮ್ಸ್ ಡಿಕ್ಲೆರೇಶನ್ ಕಾರ್ಡ್. ಪೂರ್ತಿ ಕುಟುಂಬ ಕೂಡಿ ಬಂದು, ಕಸ್ಟಮ್ಸ್ ಕ್ಲಿಯರ್ ಮಾಡಬೇಕು. ಅದು ಪದ್ಧತಿ. ಹಾಗಿದ್ದಾಗ ಗಂಡ ಒಬ್ಬನೇ ಮುಂದೆ ಬಂದು, ಕಸ್ಟಮ್ಸ್ ಅಧಿಕಾರಿ ಕೈಯಲ್ಲಿ ತನ್ನ ಕಸ್ಟಮ್ಸ್ ಫಾರ್ಮ್ ಇಡುತ್ತ, 'ನಮ್ಮ ಮಿಸೆಸ್ ಅಲ್ಲಿದ್ದಾರೆ. ಓ ಅಲ್ಲಿ. ಲೈನಿನಲ್ಲಿ ಹಿಂದೆ. ಇಬ್ಬರದೂ ಇದರಲ್ಲಿ ಇದೆ......' ಅಂದು, ಪೆದ್ದ ನಗೆ ನಕ್ಕ.

ಹಾಕ್ಕ ಅವನೌನ್!

ಕಸ್ಟಮ್ಸ್ ಅಧಿಕಾರಿಗೆ ಉರಿದು ಹೋಯಿತು. 'ರೀ! ಇಬ್ಬರೂ ಜೊತೆಯಲ್ಲೇ ಬರಬೇಕು. ಗೊತ್ತಿಲ್ಲವಾ??? ಸರಿ ಸರಿ ಒಂದು ಕೆಲಸ ಮಾಡಿ' ಅನ್ನುತ್ತ ಜನರ ಕ್ಯೂ (queue) ಸಂಬಾಳಿಸಲು ಟೆಂಪರರಿ ಬೇಲಿಯಂತೆ ಹಾಕಿದ್ದ ಕಟಾಂಜನದ ಒಂದು ಕೊಂಡಿ ತೆಗೆಯತೊಡಗಿದ.

ಗಂಡ ಪ್ರಾಣಿಗೆ ಸಿಕ್ಕಾಪಟ್ಟೆ ಖುಷಿ. ಬೇಲಿ ತೆಗೆದು, ಕ್ಯೂನಲ್ಲಿ ತುಂಬ ಹಿಂದೆ ಇದ್ದ ಹೆಂಡತಿಯನ್ನು ಮುಂದೆ ತರಿಸಿ, ಒಂದುಗೂಡಿಸಿ, ಬೇಗನೆ ಕಸ್ಟಮ್ಸ್ ಕ್ಲಿಯರ್ ಮಾಡಿ ಕಳಿಸುತ್ತಾನೆ ಅಂತ ಸಂಭ್ರಮಿಸುತ್ತ, ಕೈ ಕೈ ಎತ್ತಿ, 'ಜಲ್ದೀ ಆವ್! ಜಲ್ದೀ ಆವ್!' ಅನ್ನುತ್ತ ಹೆಂಡತಿ ಕರೆಯತೊಡಗಿದ. ಹಿಂದಿ ಗೊತ್ತಿಲ್ಲದಿದ್ದರೆ ಅವನು ಆವ್ ಆವ್ ಅಂತ ಕೂಗುವದನ್ನು 'ಶುದ್ಧ' ಕನ್ನಡಿಗರು ಹಾವ್, ಹಾವ್ ಅಂತ ಅರ್ಥ ಮಾಡಿಕೊಂಡು, ಇದೆಲ್ಲಿ ಏರ್ಪೋರ್ಟ್ ನಲ್ಲಿ ನಾಗಪ್ಪ ಬಂದಾನಪ್ಪಾ ಅಂತ ಭೀತರಾಗಬೇಕು. ಆ ರೀತಿಯಲ್ಲಿ ಆವ್, ಆವ್ ಅಂತ ಕರೆಯುತ್ತಿದ್ದ.

ತಾತ್ಕಾಲಿಕವಾಗಿ ಬೇಲಿ ತೆಗೆದ ಕಸ್ಟಮ್ಸ್ ಆಫೀಸರ್, 'ಯೋ! ನಿನ್ನ ಹೆಂಡತಿ ಇಲ್ಲಿ ಬರಲಿ ಅಂತ ಬೇಲಿ ತೆಗಿಲಿಲ್ಲ. ನೀನು ಅಲ್ಲಿ ಹೋಗಲಿ ಅಂತ ತೆಗೆದೆ. ಹೋಗಿ ಅವಳ ಜೊತೆ ನಿಲ್ಲು. ಇಬ್ಬರೂ ಕೂಡಿ, ನಿಮ್ಮ ಪಾಳಿ ಬಂದಾಗ ಬನ್ನಿ,' ಅಂತ ಝಾಡಿಸಿ, 'ನಡೆ ಇನ್ನು' ಅನ್ನುವ ರೀತಿ ಸಂಜ್ಞೆ ಮಾಡಿದಾಗ ಗಂಡನ ಮುಖ ನೋಡುವ ಹಾಗಿತ್ತು. ಬೃಹತ್ ಪ್ರಮಾಣದ KLPD!

'ಏಳೇಳು ಜನ್ಮ ಕೂಡಿ ಇರೋದು ದೂರ ಉಳೀತು. ಕಸ್ಟಮ್ ಲೈನಲ್ಲೂ ಜೊತೆ ಇರೋಕೆ ಆಗದ useless ಇವಳು' ಅಂತ ಏನೋ ಗೊಣಗುತ್ತ, ತನ್ನ ಮಹಾ ದೊಡ್ಡ ಸೈಜಿನ ಲಗೇಜ್ ಹೊತ್ತಿದ್ದ ಟ್ರಾಲಿ ನೂಕುತ್ತ ಹೆಂಡತಿಯನ್ನು ಸೇರಲು(!) ಹೊರಟ ಗಂಡ.

ಗಂಡನ ಗೊಣಗಾಟ ಕೇಳಿದ, ನೋಡಿದ ಹೆಂಡತಿ ಈ ಆಸಾಮಿ ಆಕೆಯನ್ನೇ ಬಯ್ಯುತ್ತಿರಬೇಕು ಅಂತ ತಿಳಿದು ಕೆಕ್ಕರಿಸಿ ಲುಕ್ ಕೊಟ್ಟಳು. ಸಡನ್ ಆಗಿ ಪ್ಲೇಟ್ ಚೇಂಜ್ ಮಾಡಿದ ಗಂಡ 'ಜೊತೆಯಲಿ, ಜೊತೆ ಜೊತೆಯಲಿ. ನಾನೂ ನೀನೂ ಕೂಡಿ, ಕಸ್ಟಮ್ಸ್ ಕ್ಲಿಯರ್ ಮಾಡಿ. ಜೊತೆಯಲಿ, ಜೊತೆ ಜೊತೆಯಲಿ......' ಅಂತ ರೋಮ್ಯಾಂಟಿಕ್ ಓಳು ಬಿಡುವ ಲುಕ್ ಕೊಡುತ್ತ ಹಿಂದಿದ್ದ ಹೆಂಡತಿಯನ್ನು ಕೂಡಿದ.

ಅಷ್ಟರಲ್ಲಿ ನನ್ನ ಪಾಳಿ ಬಂತು. ನನ್ನ ನೋಡಿದ ಕಸ್ಟಮ್ಸ್ ಆಫೀಸರ್ ನನಗೂ ಒಂದು ಕೆಟ್ಟ ಲುಕ್ ಕೊಟ್ಟ. ಒಬ್ಬ ದೇಸಿ ಈಗ ಮಾತ್ರ ಇಂಪ್ರೆಷನ್ ಕೆಡಿಸಿ ಹೋಗಿದ್ದ ನೋಡಿ. 'ಸರಿ ಸರಿ. ಹೋಗಿ ನೀವು. ಎಕ್ಸಟ್ರಾ ಚೆಕಿಂಗ್ ಏನೂ ಬೇಡ,' ಅಂತ ಹೇಳಿ ನನ್ನ ಕಳಿಸಿದ.

ಧಾರವಾಡದ ಬಾಬು ಸಿಂಗನ ಪೇಡಾ, ಇಲ್ಲಿನ ಕವಳ ಪ್ರಿಯ ಬಂಧುಗಳಿಗೆ ಕಳಿಸಲೆಂದು ತಂದಿದ್ದ ಜರ್ದಾ, ಅಡಿಕೆ ಎಲ್ಲ ಉಳಿಯಿತು. ಕಸ್ಟಮ್ ಅಧಿಕಾರಿಯಿಂದ ಬಚಾವ್ ಆಯಿತು ಅನ್ನುವ ಸಂತಸದಲ್ಲಿ ರೈಟ್ ಹೇಳಿದೆ.

ತಿರುಗಿ ನೋಡಿದರೆ ಬೇರೆಬೇರೆಯಾಗಿದ್ದ ಗಂಡ ಹೆಂಡತಿ ಒಂದುಗೂಡಿ, ತುಂಬ ಹಿಂದಿನಿಂದ, ತಮ್ಮ ಭಯಂಕರ ಟ್ರಾಲಿಗಳನ್ನು ನೂಕುತ್ತ, ಮತ್ತೊಮ್ಮೆ ಕಸ್ಟಮ್ಸ್ ಆಫೀಸರ್ ಹತ್ತಿರ ಆಯಾಸದ ಹೆಜ್ಜೆ ಹಾಕುತ್ತ ಬರುತ್ತಿದ್ದರು. ಬೇರೆಬೇರೆಯಾಗಿದ್ದವರು ಒಟ್ಟಿನಲ್ಲಿ ಒಂದಾಗಿದ್ದರು. ಕಸ್ಟಮ್ಸ್ ಆಫೀಸರ್ ಒಂದುಗೂಡಿಸಿದ್ದ!


(ನನ್ನ ಫೇಸ್ ಬುಕ್ ಸ್ಟೇಟಸ್ ನಿಂದ ಕಾಪಿ ಮಾಡಿದ್ದು)