Thursday, January 08, 2015

ಈಜಿಪ್ಟಿನಲ್ಲಿರುವ ಮಮ್ಮಿ!

ಟೀಚರ್ : ಕ್ಲಾಸ್, ಇವತ್ತಿಗೆ ಇಷ್ಟು ಸಾಕು. ನಾಳೆ ಈಜಿಪ್ಟ್ ಬಗ್ಗೆ ಹೇಳತೇನಿ. ಅಲ್ಲೆ ಮಮ್ಮಿ (mummy) ಅದಾವು.

ದ್ಯಾಮ್ಯಾಗ ಮಮ್ಮಿ ಅಂದ್ರ ಏನು ಅಂತ ಗೊತ್ತಾಗಲಿಲ್ಲ. ಟೀಚರ್ ಕಡೆ ಕೇಳಾಕ ಹೆದರಿಕಿ. ಎಲ್ಲರೆ ಮನಗಂಡ ಕಟದಾರು ಅಂತ. ಅದಕ ದೋಸ್ತ್ ಸೋಮ್ಯಾನ ಕಡೆ ಕೇಳಿದ. 'ಲೇ ಸೋಮ್ಯಾ, ಈ ಮಮ್ಮಿ ಅಂದ್ರ ಏನಲೇ????????'

ಸೋಮ್ಯಾ ದೊಡ್ಡ ದೀಡ್ ಪಂಡಿತ. ಹುಚ್ಚ ಮಂಗ್ಯಾನಿಕೆ. 'ಲೇ, ಮಮ್ಮಿ ಅಂದ್ರ....ಅಂದ್ರ ಅವ್ವ ಲೇ....ಅವ್ವ!!!' ಅಂತ ಚೌಕ್ ಉಳ್ಳಿಸಿದ. ಪೂರ್ತಿ ತಪ್ಪು ಅಲ್ಲ ಬಿಡ್ರೀ.

ದ್ಯಾಮ್ಯಾ 'ಮಮ್ಮಿ ಅಂದ್ರ ಅವ್ವ' ಅನ್ನೋ ಅದೇ ಧ್ಯಾನದಾಗ ಮನಿಗೆ ಬಂದ. ಅವರಪ್ಪ ಅಲ್ಲೇ ಕಂಡ. ಕಂಟ್ರಿ ಎಣ್ಣಿ ಹೊಡದ, ಕಟ್ಟಿ ಮ್ಯಾಲೆ ಟೈಟಾಗಿ ಕುಂತಿದ್ದ. ಬೀಡಿ ಸೇದಿಕೋತ್ತ.

'ಯಪ್ಪಾ............................ಏ ಯಪ್ಪಾ.......' ಅಂತ ಒದರಿದ ದ್ಯಾಮ್ಯಾ.

'ಏನಲೇ????? ಹ್ಯಾಂ????' ಅಂತ ನಶಾದಾಗ ಹೂಂಕರಿಸಿದ ಅವರಪ್ಪ.

'ಯಪ್ಪಾ, ಒಂದು ಮಾತು ಕೇಳೋದೈತಿ...' ಅಂದ ದ್ಯಾಮ್ಯಾ.

'ಏನಲೇ ಅದು?????' ಅಂದ ಅವರಪ್ಪ.

'ಯಪ್ಪಾ, ನೀ ಈಜಿಪ್ಟ್ ದೇಶಕ್ಕ ಹೋಗಿದ್ದಿ ಏನು????' ಅಂತ ಕೇಳಿಬಿಟ್ಟ ದ್ಯಾಮ್ಯಾ.

'ಏನ್ ಈಜಿಪ್ಟ್ ಹಚ್ಚಿಲೇ????? ನಾ ಧಾರವಾಡ ಬಿಟ್ಟ ಅವನೌನ್ ಹೊರಗ ಕಾಲಿಟ್ಟಿಲ್ಲಲೇ. ಈಜಿಪ್ಟ್ ಅಂತ ಈಜಿಪ್ಟ್!!!!' ಅಂದಾ ಅವರಪ್ಪಾ.

'ಈಜಿಪ್ಟ್ ಹೋಗಿಲ್ಲ ಅಂದ್ರ ಮತ್ತ ನಮ್ಮ ಅವ್ವನ್ನ ಎಲ್ಲಿಂದ ತಂದಿ?????????' ಅಂತ ಕೇಳಿಬಿಟ್ಟ ದ್ಯಾಮ್ಯಾ.

'ನಿಮ್ಮೌನ್!!! ನಿಮ್ಮ ಅವ್ವನ್ನ ಕೇಳ ಹೋಗ. ಅಕಿ ಎಲ್ಲಿಂದ ಬಂದಾಳ ಅಂತ!' ಅಂತ ಒದರಿದ ಅವರಪ್ಪ.

ದ್ಯಾಮ್ಯಾಗ ಗೊತ್ತೈತಿ, ಅವರ ಅವ್ವ ಭೈರಿದೇವರಕೊಪ್ಪದಿಂದ ಬಂದಾಳ ಅಂತ. ಹಾಂಗಿದ್ದರ ಈಜಿಪ್ಟ್ ಅಂದ್ರ ಭೈರಿದೇವರಕೊಪ್ಪ ಏನ????? ಅಂತ ತಲಿ ಕೆರಕೊಂಡ.

'ಏನ್ ಹಡಬಿಟ್ಟಿ ಟೀಚರ್ ಅದಾಳೋ ಅಕಿ. ಭೈರಿದೇವರಕೊಪ್ಪಕ್ಕ ಈಜಿಪ್ಟ್ ಅಂತಾಳ. ನಾಳೆ ಸೋಮ್ಯಾಗ ಹೇಳಬೇಕು' ಅಂತ ಹೇಳಿ ಊಟ ಮಾಡಿ, ಕೌದಿ ಹೊದಕೊಂಡ ಮಕ್ಕೊಂಡ.

ಆಕಡೆ ಸಾಲಿ ಟೀಚರ್ ಮರುದಿವಸ ಮಾಡಬೇಕಾದ ಈಜಿಪ್ಟ್ ಪಾಠದ ರಿವಿಶನ್ ಮಾಡಾಕ ಹತ್ತಿದರು. ನಂತರ ಇಳಿದರು.

ಇದೆಲ್ಲೆದರ ಮಧ್ಯೆ ಸಾಲಿ ಹುಡುಗುರ ಜಿಯಾಗ್ರಫಿ ಗೋವಿಂದಾ ಗೋವಿಂದಾ!!!!

(ಮೂಲ: ಶಿವರಾಂ ಶಾಸ್ತ್ರಿ)

No comments: