Wednesday, February 04, 2015

ಫೆಬ್ರವರಿ ಹದಿನಾಲ್ಕಕ್ಕೆ ಹನುಮಾನ್ ಜಯಂತಿ?????

(F)art of living ಸ್ವಾಮೀಜಿ ಅಂತಲೇ ಖ್ಯಾತರಾದ ಭಂ ಭಂ ಭೋಲೆನಾಥ ಸ್ವಾಮೀಜಿ ಆಶ್ರಮದಲ್ಲಿ ಆರಾಮವಾಗಿ ಮಲಗಿದಂತೆ ಕುಳಿತಿದ್ದರು. ಅಥವಾ ಕುಳಿತಂತೆ ಮಲಗಿದ್ದರು.  ಸುತ್ತ ಮುತ್ತ ಶಿಷ್ಯ ಶಿಷ್ಯೆಯರು ತುಂಬಿದ್ದರು. ಶಿಷ್ಯೆಯರೇ ಹೆಚ್ಚಿದ್ದಂತೆ ಕಂಡು ಬಂತು.

'ಸ್ವಾಮಿಗಳೇ, ಬರೋ ಫೆಬ್ರವರಿ ಹದಿನಾಲ್ಕಕ್ಕ ಅದೇನೋ ಹಬ್ಬ ಐತಂತಲ್ಲರೀ. ಏನ್ರೀ ಅದು? ಏನು ಮಾಡ್ಬೇಕ್ರೀ?' ಅಂತ ಕೇಳಿದ ಭಕ್ತ. ನೋಡಲಿಕ್ಕೆ ಒಳ್ಳೆ ದೇವರಿಗೆ ಬಿಟ್ಟ ಗೂಳಿ ಹಾಗೆ ಇದ್ದ.

'ನಿನಗ ಹೆಂಡತಿ ಅದಾಳು?' ಅಂತ ಕೇಳಿದರು ಸ್ವಾಮೀಜಿ.

'ಇಲ್ಲರೀ, ಸ್ವಾಮಿಗಳ,' ಅಂದ ಭಕ್ತ.

'ಗರ್ಲ್ ಫ್ರೆಂಡ್ ಅದಾಳು?' ಅಂತ ಕೇಳಿದರು ಭಂ ಭಂ.

'ಅದಾಳ್ರೀ!'  ಅಂದುಬಿಟ್ಟ ಭಕ್ತ.

ಸ್ವಾಮಿಗಳು ಘಾಬರಿ ಬಿದ್ದು ಕೇಳಿದರು, 'ಅಲೀ ಇವನೌನ್! ಯಾವಾಗ ಮಾಲ್ ಅಂದರ್ ಮಾಡಿಕೊಂಡಿಲೇ? ನಮಗ ತೋರ್ಸೋದು ದೂರ ಉಳೀತು. ಹೇಳಲೂ ಇಲ್ಲ. ಹಾಂ!?'

'ಮಂಗ್ಯಾನಮಗನ್ನ ತಂದು. ಎಲ್ಲಾರೂ ಎಲ್ಲದನ್ನೂ ಮೊದಲು ಸ್ವಾಮಿಗಳಿಗೆ ಅರ್ಪಣೆ ಮಾಡಿ ನಂತರ ಪ್ರಸಾದ ಅಂತ ತೊಗೊಂಡ್ರೆ ಇವನ್ನ ನೋಡು, ಎಲ್ಲಾ ಮರೆತು ಈಗ ಹೇಳಾಕತ್ತಾನ. ತಡೀ ಇವಂಗ, ಇವನ ಗರ್ಲ್ ಫ್ರೆಂಡ್ ಇಬ್ಬರಿಗೂ ಬಡಿತೇನಿ, ಬಗಣಿ ಗೂಟಾ,' ಅಂತ ಮನಸ್ಸಿನಲ್ಲಿಯೇ ಸಿಟ್ಟಿಗೆದ್ದರು ಸ್ವಾಮೀಜಿ.

'ಯಾರಲೇ ಅಕಿ ನಿನ್ನ ಗರ್ಲ್ ಫ್ರೆಂಡ್?????' ಅಂತ ಹೂಂಕರಿಸಿದರು ಭಂಭಂಭೋಸ್ವಾ.

'ಸ್ವಾಮಿಗಳ, ಅಕಿ ನಮ್ಮ ಜೋಡಿ ಬಾಲವಾಡಿ ಒಳಗ ಇದ್ದಳ್ರೀ. ಈಗ ಮನ್ನೆ ಮನ್ನೆ ಫೇಸ್ಬುಕ್ ಮ್ಯಾಲೆ ಸಿಕ್ಕಾಳರೀ!' ಅಂದ ಭಕ್ತ.

'ಥತ್ ನಿನ್ನ. ಗರ್ಲ್ ಫ್ರೆಂಡ್ ಅಂದ್ರ ಫ್ರೆಂಡ್ ಗರ್ಲ್ ಅಲ್ಲಲೇ. ಬಾಲವಾಡಿ ಒಳಗಿನ ಸಣ್ಣ ಹುಡುಗಿ ಫ್ರೆಂಡ್ ಅಲ್ಲ. ಇರಲಿ ಬಿಡು. ನಿನಗ ಅವೆಲ್ಲ ತಿಳಿಯಂಗಿಲ್ಲ,' ಅಂದ ಸ್ವಾಮಿಜಿ ಪ್ರಶ್ನೆ ಮುಂದುವರೆಸಿದರು.

'ಸ್ಟೆಪ್ನೀ ಐತಿ?' ಅಂದು ಕೇಳಿದ ಸ್ವಾಮೀಜಿ, 'ಹೆಂಡತಿನೇ ಇಲ್ಲ ಅಂತಿ. ಅಂದ ಮ್ಯಾಲೆ ಸ್ಟೆಪ್ನೀ ಎಲ್ಲಿಂದ ಬರಬೇಕು?' ಅಂತ ಆವರೇ ಹೇಳಿದರು.

ಭಕ್ತ ಮತ್ತೊಮ್ಮೆ ಇಟ್ಟುಬಿಟ್ಟ. ಇಟ್ಟೇಬಿಟ್ಟ.

'ಏ! ಸ್ವಾಮಿಗಳೇ, ಸ್ಟೆಪ್ನೀ ಐತ್ರೀ. ಅದೂ ಫುಲ್ ಹವಾ ತುಂಬಿಕೊಂಡು ಮಜಬೂತ್ ಐತ್ರೀ. ಯಾಕ್ರೀ ನಿಮ್ಮ ಫಟಫಟಿ (ಮೋಟಾರ್ ಬೈಕ್) ಪಂಚರ್ ಆಗೈತಿ ಏನ್ರೀ?? ಹೇಳ್ರೀ ಸರ್ರಾ! 'ನಿಮ್ಮವ್ವನ ಗುದ್ದು, ಪಂಚರ್ ತಿದ್ದು,' ಅನ್ನೋ ತೊಂದ್ರಿನೇ ಬ್ಯಾಡರೀಪಾ. ನನ್ನ ಸ್ಟೆಪ್ನೀ ತೆಗೆದ ನಿಮ್ಮ ಗಾಡಿಗೆ ಹಾಕೇ ಬಿಡ್ಲಿ ಏನ್ರೀ????? ನಾ ಆಮೇಲೆ ಪಂಚರ್ ಶಾಪಿನಲ್ಲಿ, ಪಂಚರ ಶಾಪದಿಂದ ಪಂಚರಾದ ನಿಮ್ಮ ಟೈರ್ ರಿಪೇರ್ ಮಾಡಿಸಿಕೊಂಡು ಬರ್ತೇನಿ. ಚಿಂತಿ ಬ್ಯಾಡ್ರೀ ಸ್ವಾಮಿಗಳ,' ಅಂತ ಹೇಳಿಬಿಟ್ಟ ಭಕ್ತ. ಭಾಳ ಮುಗ್ಧ ಭಕ್ತ.

'ಹುಚ್ಚ ಸೂಳಿ ಮಗನ! ನಾ ಕೇಳಿದ್ದು ಸ್ಕೂಟರ್, ಫಟಫಟಿ, ಕಾರ್ ಸ್ಟೆಪ್ನೀ ಅಲ್ಲಲೇ. ಇರ್ಲಿ ಬಿಡು. ನಿನಗ ಅವೆಲ್ಲ ತಿಳಿಯಂಗಿಲ್ಲ. ನಿನಗ ಸ್ಟೆಪ್ನೀ ಇಲ್ಲ ತೊಗೋ,' ಅಂದ್ರು ಸ್ವಾಮೀಜಿ.

ಅಷ್ಟರಾಗ ಸ್ವಾಮೀಜಿ ಅವರ ಅನಧೀಕೃತ ಹೆಂಡತಿ, ಗರ್ಲ್ ಫ್ರೆಂಡ್, ಸ್ಟೆಪ್ನೀ, ಡವ್ವ, ಸಖಿ ಎಲ್ಲದೂ all-in-one ಆದ ಮಾಲೊಂದು ಬಂದು, ಸ್ವಾಮಿಗಳಿಗೆ ಬಗ್ಗಿ ಬಗ್ಗಿ ನಮಸ್ಕಾರ ಮಾಡಿ, ಆವ್! ಆವ್! ಅನ್ನೋ ಮಾದರಿಯಲ್ಲಿ ಮ್ಯಾವ್! ಮ್ಯಾವ್! ಅಂದಳು.

'ಲೇ ಇವನ ಭಕ್ತಾ! ನಿನಗ ಹೆಂಡ್ತೀ ಇಲ್ಲ. ಗರ್ಲ್ ಫ್ರೆಂಡೂ ಇಲ್ಲ. ಸ್ಟೆಪ್ನೀ ಅಂತೂ ಇಲ್ಲೇ ಇಲ್ಲ. ಅಂದ ಮ್ಯಾಲೆ ನೀ ಒಂದು ಕೆಲಸ ಮಾಡಲೇ,' ಅಂತ ಸ್ವಾಮೀಜಿ ಎದ್ದರು.

'ಏನು ಮಾಡಲ್ರೀ ಸ್ವಾಮಿಗಳ?????' ಅಂತ ಕೇಳಿದ ಭಕ್ತ.

'ನೀ ಫೆಬ್ರುವರಿ ಹದಿನಾಲ್ಕರಂದು 'ಹನುಮಾನ್ ಜಯಂತಿ' ಮಾಡಿ ಬಿಡು. ಒಳ್ಳೆದಾಗಲಿ,' ಅಂತ ಹೇಳಿ ಸ್ವಾಮಿಗಳು ಹೊರಟರು.

'ಆದ್ರ ಸ್ವಾಮಿಗಳ ಹನುಮಾನ್ ಜಯಂತಿ ಬರೋದು ಏಪ್ರಿಲ್ ಒಳಗ. ಅಲ್ಲರೀ?' ಅಂತ ಕೇಳಿದ ಭಕ್ತ.

'ನೋಡಪಾ ನಮ್ಮಂತ ಸ್ವಾಮಿಗಳಿಗೆ ದಿನಾನೂ 'ಕಾಮ'ಣ್ಣನ ಹಬ್ಬ. ನಿಮ್ಮಂತವರಿಗೆ ದಿನಾನೂ ಹನುಮಾನ್ ಜಯಂತಿ. ಯೋಗಿ ಪಡೆದಿದ್ದು ಯೋಗಿಗೆ. ಭೋಗಿ ಪಡೆದಿದ್ದು ಭೋಗಿಗೆ. ಯೋಗಿಯಾಗೋ ನಿನ್ನಾಪನಾ ಯೋಗಿ ಮಹಾಯೋಗಿಯಾಗೋ!' ಅಂತ ಹೇಳಿದ ಸ್ವಾಮೀಜಿ ಪಟಾಕಾ ಫಿಗರೊಂದಿಗೆ ಸಮಾಧಿ ಕೋಣೆ ಹೊಕ್ಕರು.

ನಂತರ ಒಳಗೆ ನಡೆದಿದ್ದು ಭಯಂಕರ ಕಾಮ ದಹನ ಅನ್ನಿಸುತ್ತದೆ. ಅದರ ಬಿಸಿ ಝಳ ಹೊರಗೂ ತಟ್ಟುತ್ತಿತ್ತು. ಅಯ್ಯೋ! ಕಾಮ ದಹನ ಅಂದ್ರ ತಪ್ಪು ತಿಳ್ಕೊಬ್ಯಾಡ್ರೀ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಅನ್ನೋ ಷಡ್ವೈರಿಗಳ ದಹನ ಅಂತ. ಕಾಮ ದಹನದ ಬೆಂಕಿ ಹಚ್ಚಲಿಕ್ಕೆ, ಬೆಂಕಿ ಆರದಾಂಗ ಊದಕೊಳವಿ ಊದಲಿಕ್ಕೆ ಅಂತ ತಮ್ಮ ಶಿಷ್ಯೆ ಕರ್ಕೊಂಡು ಕೋಣೆ ಒಳ ಹೊಕ್ಕಿದ್ದರು ಸ್ವಾಮೀಜಿ. ಆದ್ರ ಅವರು ಮಾತ್ರ ಭಾಳ ಖಡಕ್ ಬ್ರ(ಬ್ರಾ)ಹ್ಮಚಾರಿ! ಚಿತ್ತ ಯಾವಾಗಲೂ ಅಲ್ಲೇ!

ಭಕ್ತ ಮಾತ್ರ ಗುರುವಿನ ಆಜ್ಞೆಯಂತೆ 'ಹನುಮಾನ್ ಜಯಂತಿ' ಆಚರಿಸಲು ಬೇಕಾಗೋ ಜಯಂತಿ ಅಲ್ಲಲ್ಲ ಲಂಗೋಟಿ ತರಲು ಪೇಟೆ ಕಡೆ ಹೊಂಟ.

ಜೈ ಬಜರಂಗ ಬಲಿ!

ಹ್ಯಾಪಿ ವ್ಯಾಲೆಂಟೈನ್ ಡೇ!

ಇತರೆ ಸಂಬಂಧಿತ ಪೋಸ್ಟುಗಳು:

ವಿಲಾಯತಿ ಸಂತನೂ, ದೇಸಿ Love Day ಯೂ 

ಆಂಟಿ ಅಂದರೆ ನರಕ, ACP ಅಂದರೆ ಸ್ವರ್ಗ...(F)art of Living

'ಹಾದಿ ಶಂಕರಾ' ಜಯಂತಿ, ಮುಬಾರಕ್, ಮುಬಾರಕ್! 



No comments: