Saturday, March 14, 2015

ಮಾಲು ಸಕತ್ತಾಗೈತೆ! ರಾತ್ರಿಗೆ ನನ್ನ ಬಳಿ ಕಳಿಸಿಬಿಡು...ಡಾನ್ ಅಬು ಸಲೇಂ ಕಥನಆ ಒಂದು ಮಾತು ಕೇಳಿದ ಮುಂಬೈನ ಪುರಾತನ ಅಂಡರ್ವರ್ಲ್ಡ್ ಡಾನ್ ಅಬು ಸಲೇಂ ದಂಗಾಗಿ ಹೋದ. ಅಪ್ರತಿಭನಾದ.

'ಮಾಲು ಸಕತ್ತಾಗೈತೆ! ರಾತ್ರಿಗೆ ನನ್ನ ಬಳಿ ಕಳಿಸಿಬಿಡು,' ಅಂತ ಅಬು ಸಲೇಂಗೆ ಆಜ್ಞೆ ತರಹ ಹುಕುಂ ಮಾಡಿದವನೇ 'ಅವನು' ಹಿಂತಿರುಗಿ ಸಹ ನೋಡದೇ ಹೋಗಿಬಿಟ್ಟ.

ಅದೊಂದು ಮಾತು ಮಾತ್ರ 'ಅವನು' ಹೇಳಲೇಬಾರದಾಗಿತ್ತು. ಆದ್ರೆ ಹೇಳಿಬಿಟ್ಟ.

ಹೀಗೆ 'ರಾತ್ರಿಗೆ ಮಾಲು ಕಳಿಸು' ಅಂತ ಹೇಳಿ ಹೋದ 'ಅವನು' ಯಾರೋ ಅಬ್ಬೇಪಾರಿಯಲ್ಲ. ಡಾನ್ ಅನೀಸ್ ಇಬ್ರಾಹಿಂ. ಬಿಗ್ ಡಿ ಅಂದ್ರೆ ದಾವೂದ್ ಇಬ್ರಾಹಿಮ್ಮನ ಖಾಸ ತಮ್ಮ. ಡಿ ಕಂಪನಿಗೆ ದಾವೂದ್ CEO ಆದರೆ ಈ ಅನೀಸ್ COO ಇದ್ದಂತೆ.

ಸುಮಾರು ೧೯೯೮-೯೯ ರ ಮಾತಿರಬಹುದು. ಅಬು ಸಲೇಂ ದುಬೈನಲ್ಲಿದ್ದ. ದಾವೂದ್, ಅನೀಸ್ ಮತ್ತಿತರ ಡಿ ಕಂಪನಿ ಮಂದಿ ಕರಾಚಿಯಿಂದಲೇ ಜಾಸ್ತಿ ಆಪರೇಟ್ ಮಾಡುತ್ತಿದ್ದರು. ಆದರೇನು ಮಾಡುವದು? ಮೋಜು, ಮಸ್ತಿ ಮಾಡಬೇಕು ಅಂದಾಗೆಲ್ಲ ದುಬೈಗೆ ಬಂದು ಹೋಗುತ್ತಿದ್ದರು. ಪಾಕಿಸ್ತಾನದ ಕರಾಚಿಯಿಂದ ಅರಬ್ ಕೊಲ್ಲಿ ಶಹರಗಳಾದ ದುಬೈ, ಬಹರೇನ್, ಅಬು ದಾಭಿ, ಶಾರ್ಜಾ, ದೋಹಾ, ಜೆಡ್ಡಾ ಎಲ್ಲ ಎಷ್ಟು ದೂರ? ಬೆಳಿಗ್ಗೆ ಕರಾಚಿ ಬಿಟ್ಟರೆ ಎಲ್ಲ ಸುತ್ತಾಡಿ, ಎಲ್ಲ ಕಡೆ ತಮ್ಮ ದಂಧೆಯ ವಿವರ ವಿಚಾರಿಸ್ಕೊಂಡು, ಸಂಜೆ ಬಂದು ಕರಾಚಿ ಮನೆ ಮುಟ್ಟಿಕೊಳ್ಳುತ್ತಿದ್ದ COO ಅನೀಸ್ ಇಬ್ರಾಹಿಮ್.

ಅಬು ಸಲೇಂ ಹೇಳಿ ಕೇಳಿ ಅನೀಸ್ ಇಬ್ರಾಹಿಮ್ಮನ ಖಾಸ ಬಂಟ. ೧೯೯೩ ರಲ್ಲಿ ಮುಂಬೈ ಸ್ಪೋಟಗಳ ನಂತರ, ಇನ್ನೂ ಮುಂಬೈನಲ್ಲೇ ಇದ್ದರೆ, ಅಬು ಸಲೇಂನನ್ನು ಪೊಲೀಸರು ಹಿಡಿದು, ಬಾರಿಸಿ, ಮಟ್ಟ ಹಾಕುತ್ತಾರೆ ಅನ್ನುವದು ಖಾತ್ರಿಯಾದ ನಂತರ, ಅನೀಸ್ ಇಬ್ರಾಹಿಂನೇ ಖುದ್ದಾಗಿ ನೇಪಾಳದ ಮೂಲಕ ಅಬು ಸಲೇಂನನ್ನು ದುಬೈಗೆ ಹಾರಿಸಿಕೊಂಡಿದ್ದ.

ಡಿ 'ಕಂಪನಿ' ಅಂತ ಸುಮ್ಮನೆ ಹೇಳುವದಿಲ್ಲ ನೋಡಿ. ಅದಕ್ಕೊಂದು ಬರೋಬ್ಬರಿ ಕಾರ್ಪೊರೇಟ್ ಗಾಂಭೀರ್ಯ ತಂದು ಕೊಟ್ಟ ಕೀರ್ತಿ ಬಿಗ್ ಡಿ ದಾವೂದನಿಗೇ ಸೇರಬೇಕು. ತಾನು CEO. ತಮ್ಮ ಅನೀಸ್ COO. ಛೋಟಾ ಶಕೀಲನಿಗೆ ಮುಂಬೈ ವ್ಯವಹಾರ. ಕ್ರಿಕೆಟ್ ಬೆಟ್ಟಿಂಗ್, ಬೆಂಗಳೂರು, ಮಂಗಳೂರು ಇತ್ಯಾದಿ ನೋಡಿಕೊಳ್ಳುವ ಜವಾಬ್ದಾರಿ ಶರದ್ ಅಣ್ಣಾ ಶೆಟ್ಟಿಗೆ, ಇನ್ನು ಬಾಲಿವುಡ್ಡಿನ ಸಂಪೂರ್ಣ ಉಸ್ತುವಾರಿ ಅಬು ಸಲೇಂನ ಸುಪರ್ದಿಯಲ್ಲಿ. ಹೀಗೆ ಬರೋಬ್ಬರಿ ಆರ್ಗನೈಜೇಷನ್ ಮಾಡಿಹಾಕಿದ್ದ ಡಾನ್ ದಾವೂದ್. ಎಲ್ಲಿ MBA ಓದಿ ಬಂದಿದ್ದನೋ?!

ಅಂಡರ್ವರ್ಲ್ಡ್ ಡಾನ್ ಗಳಿಗೆ ಮತ್ತೆ ಬಾಲಿವುಡ್ಡಿನ ನಟಿಯರಿಗೆ ಅದೇನು ಸಂಬಂಧವೋ. ಬೇರೆ ಬೇರೆ ಕಾರಣಗಳಿಗೆ ಡಾನ್ ಗಳಿಗೆ ಹತ್ತಿರವಾದ ಅನೇಕ ತಾರೆಯರಿದ್ದರು. ಡಾನ್ ಗಳ ಮೂಲಕ ಬಾಲಿವುಡ್ಡಿನ ಯಶಸ್ಸಿನ ಏಣಿ ಹತ್ತಲು ಹಾತೊರೆಯುತ್ತಿದ್ದವರು. ಡಾನ್ ಗಳೂ ಸಹಿತ ಬರೋಬ್ಬರಿ 'ಏನೆಲ್ಲಾ' ವಸೂಲಿ ಮಾಡಬೇಕೋ ಅದನ್ನೆಲ್ಲ ಬರೋಬ್ಬರಿ ವಸೂಲಿ ಮಾಡಿಯೇ, ತಾರೆಯರಿಗೆ ಏನು ಬೇಕೋ ಅದನ್ನು ಮಾಡಿಕೊಡುತ್ತಿದ್ದರು. ಒಬ್ಬಳಿಗೆ ಯಾರೋ ನಿರ್ಮಾಪಕ ತೊಂದರೆ ಕೊಟ್ಟರೆ, ಇನ್ನೊಬ್ಬಳ ಕಾರ್ಯದರ್ಶಿ ರೊಕ್ಕ ಗುಳುಂ ಮಾಡಿರುತ್ತಿದ್ದ. ಮತ್ತೊಬ್ಬಳಿಗೆ ಹೀರೋ ಯಾರೋ ತೊಂದ್ರೆ ಕೊಡುತ್ತಿದ್ದ. ಇನ್ನೊಬ್ಬಳಿಗೆ ದಕ್ಷಿಣದ ಯಾರೋ ನಿರ್ಮಾಪಕನಿಂದ ಎಷ್ಟೋ ದುಡ್ಡು ಅಡ್ವಾನ್ಸ್ ಅಂತ ಪಡೆದು ಈಗ ಆತನ ಸಿನೆಮಾಗೆ ಕೈಯೆತ್ತಿದ್ದರೂ ಅಡ್ವಾನ್ಸ್ ರೊಕ್ಕ ವಾಪಸ್ ಕೊಡುವ ಮನಸ್ಸಿಲ್ಲ. ಮತ್ತೊಬ್ಬಳಿಗೆ ಒಬ್ಬ ಸ್ಟಾರ್ ನಿರ್ದೇಶಕನ ಬ್ಯಾನರ್ ಅಡಿ ಕೆಲಸ ಬೇಕು. ಹೀಗೆ ತರೇವಾರಿ ಗೋಳು ಹೇಳಿಕೊಂಡು ಬಂದು, ಡಾನ್ ಗಳ ಚಿತ್ರ ವಿಚಿತ್ರವಾದ ಪಾಶಗಳಲ್ಲಿ ಬಿದ್ದು (ಸುಖದಿಂದ) ನರಳುತ್ತಿತ್ತು ಬಾಲಿವುಡ್ ನಟಿಮಣಿಯರ ದಂಡು. ಡಾನ್ ಗಳಿಗೂ ಸಹ ಅದೇ ಬೇಕು. ಒಂದು ಸಲ ಫೋನ್ ಮಾಡಿ ಅಬ್ಬರಿಸಿದರೆ ಕೆಲಸವಾಗುತ್ತದೆ. ಅಷ್ಟು ಮಾತ್ರಕ್ಕೆ ಈ ಕಡೆ ಬಾಲಿವುಡ್ ಪರಮ ಸುಂದರಿ ದೂಸರಾ ಮಾತಾಡದೇ ಮಂಚ ಹತ್ತಿ ಲಂಚ ಕೊಡುತ್ತಾಳೆ. ಯಾರಿಗಿದೆ ಯಾರಿಗಿಲ್ಲ ಈ ಭಾಗ್ಯ? ಈ ಮಂಚ, ಲಂಚ ಭಾಗ್ಯದ ಸ್ಕೀಮಿನಡಿಯಲ್ಲಿ ದುಬೈನಲ್ಲಿ, ಕರಾಚಿಯಲ್ಲಿ, ಸೌದಿಯ ಜೆಡ್ಡಾ, ರಿಯಾದಿನಲ್ಲಿ 'ಮೈ ದಾನ' (ಅರ್ಥಾತ್ ಮಾಂಸ ದಂಧೆ) ಮಾಡಿ ಬಂದ ದೊಡ್ಡ ದೊಡ್ಡ ನಟಿಯರ ಪಟ್ಟಿ ನೋಡಿಬಿಟ್ಟರೆ ಬೆಚ್ಚಿ ಬೀಳಬೇಕು.

ಪೂರ್ತಿ ಬಾಲಿವುಡ್ ಅಬು ಸಲೇಂನ ಕೈಯಲ್ಲಿತ್ತು ನೋಡಿ. ಅದಕ್ಕೇ ನಟಿಮಣಿಯರೆಲ್ಲ ಅವನ ಮೂಲಕವೇ ಇತರೆ ಡಾನ್ ಗಳಿಗೆ ಆಹುತಿಯಾಗುತ್ತಿದ್ದರು. ಬೇರೆ ಬೇರೆ ಡಾನ್ ಗಳ ಖಯಾಲಿ ನೋಡಿ, ಬರೋಬ್ಬರಿ ಅವರ ಟೇಸ್ಟ್ ಗೆ ಹೊಂದುವಂತಹ ಹಕ್ಕಿಗಳನ್ನು ಕರೆಯಿಸಿ, ಮಂಚ ಹತ್ತಿಸುವದರಲ್ಲಿ ಅಬು ಸಲೇಂ ಸಿಕ್ಕಾಪಟ್ಟೆ ಫೇಮಸ್. ಅತ್ತ ಕರಾಚಿಯಿಂದ 'ಸಲೇಂ ಮಿಯ್ಯಾ, ಬದನ್ ದುಖ್ ರಹಾ ಹೈ. ಖುಚ್ ಮಾಲಿಶ್ ಕಾ ಇನ್ತೆಜಾಂ ಕರೋ' ಅಂತ ದಾವೂದನೋ, ಅನೀಸನೋ ಮೈಮುರಿದರು, ಮುಲುಗಿದರು ಅಂದ್ರೆ ಅದು ಅಬು ಸಲೇಂಗೆ ಆಜ್ಞೆ ಇದ್ದಂತೆ. ಮರುಕ್ಷಣವೇ ಮುಂಬೈಗೆ ಫೋನ್ ಹಚ್ಚಿ ಬಾಲಿವುಡ್ಡಿನ ತನ್ನ ಖಾಸ್ ಅಮೃತಾಂಜನಿ ತಲೆಹಿಡುಕ ಜನರ ಹತ್ತಿರ ಮಾತಾಡುತ್ತಿದ್ದ. ಮೈಮುರಿದು, ಆಕಳಿಸಿದ್ದ ಡಾನ್ ಗಳ ಆವತ್ತಿನ, ಆಹೊತ್ತಿನ ಜರೂರತ್ತಿಗೆ ತಕ್ಕ ಸುಂದರಿಯರು ಕೆಲವೇ ಘಂಟೆಗಳಲ್ಲಿ ಮುಂಬೈನಿಂದ ದುಬೈ ವಿಮಾನ ಹತ್ತುತ್ತಿದ್ದರು. ಒಮ್ಮೊಮ್ಮೆ ಕರಾಚಿ ಡಾನ್ ಗಳೇ ದುಬೈಗೆ ಬರುತ್ತಿದ್ದರು. ಎಷ್ಟೋ ಸಲ ಈ ಸುಂದರಿಯರೇ ಕರಾಚಿಗೆ ಹೋಗಿ ಬಿಡುತ್ತಿದ್ದರು. ದುಬೈ ಏರ್ಪೋರ್ಟ್ ನಲ್ಲಿ ಒಬ್ಬ ಬಂದು ಅವರ ಪಾಸ್ಪೋರ್ಟ್ ಸಂಗ್ರಹಿಸಿಕೊಂಡು ಹೋಗಿ ಬಿಡುತ್ತಿದ್ದ. ಕರಾಚಿಗೆ ಕನೆಕ್ಷನ್ ಫ್ಲೈಟ್ ಹಿಡಿದು ಹೋದರೆ ಪಾಸ್ಪೋರ್ಟ್, ವೀಸಾ ಯಾವದೇ ಜರೂರತ್ತಿಲ್ಲದೆ ಅವರನ್ನು ಹೊರಗಿಂದಲೇ ಕರೆದುಕೊಂಡು ಹೋಗಿ ಸೀದಾ ಡಾನ್ ತೆಕ್ಕೆಗೇ ತಳ್ಳುವ ವ್ಯವಸ್ಥೆ ಇತ್ತು. ಬಿಗ್ ಡಿ ದಾವೂದ್ ಇಬ್ರಾಹಿಂ ಅಂದ್ರೆ ಸಾಮಾನ್ಯನೇ? ಡಾನ್ ನನ್ನು ಬರೋಬ್ಬರಿ ಖುಷ್ ಮಾಡಿ, ಆತ ಕೊಟ್ಟ ಬಿಂಗಲಾಟಿ ಗಿಫ್ಟು, ರೊಕ್ಕ, ಬಾಲಿವುಡ್ ಕೆರಿಯರ್ ಬಗ್ಗೆ ಕೊಟ್ಟ ಏನೇನೋ ಆಶ್ವಾಸನೆಗಳು ಎಲ್ಲ ಕಲೆಕ್ಟ್ ಮಾಡಿಕೊಂಡು, ವಾಪಸ್ ಮತ್ತೆ ದುಬೈ ಮೂಲಕ ಭಾರತಕ್ಕೆ. ದುಬೈ ಏರ್ಪೋರ್ಟ್ ನಲ್ಲಿ ಮತ್ತೆ ಅದೇ ಆದ್ಮಿ ಸಿಗುತ್ತಿದ್ದ. ದುಬೈ ಏರ್ಪೋರ್ಟ್ ಸ್ಟ್ಯಾಂಪ್ ಹಾಕಿಕೊಟ್ಟಿದ್ದ ಪಾಸ್ಪೋರ್ಟ್ ಕೊಡುತ್ತಿದ್ದ. ದುಬೈಗೆ ಹೋಗಿ ಬಂದೆ ಅಂತ ಭೋಂಗು ಬಿಡಲಿಕ್ಕೆ ಬೇಕಲ್ಲ?

(ಅನೇಕ ನಟ ನಟಿಯರು, ಉದ್ಯಮಿಗಳು, ಇದೇ ರೀತಿಯಲ್ಲಿ, ಯಾವದೇ ದಾಖಲೆ ಇಲ್ಲದೆ ಕರಾಚಿಗೆ ಹೋಗಿ, ದಾವೂದನನ್ನು ಭೆಟ್ಟಿಯಾಗಿದ್ದು ಜಾಗತಿಕ ಬೇಹುಗಾರಿಕೆ ಸಂಸ್ಥೆಗಳಿಗೆ (CIA, Mossad, R&AW, MI6, IB) ಬರೋಬ್ಬರಿ ಗೊತ್ತಿದೆ. ಇದರ ಬಗ್ಗೆ ಭಾಳ ಹಿಂದೆ Outlook ಪತ್ರಿಕೆಯಲ್ಲಿ ಒಂದು ವರದಿಯೂ ಬಂದಿತ್ತು. ಹುಡುಕಿ ಓದಿ.)

ಆವತ್ತು ಅನೀಸ್ ಇಬ್ರಾಹಿಮ್ ಯಾಕೋ ದುಬೈಗೆ ಬಂದಿದ್ದ. ಅಬು ಸಲೇಂನ ಜೊತೆಗೆ ಒಂದು ಸುಂದರ 'ಹಕ್ಕಿ' ಇರುವದನ್ನು ಕಂಡ. ಆಕೆ ಯಾರು ಅಂತ ಅನೀಸನಿಗೆ ಗೊತ್ತಾಯಿತೇ? ಅದು ಗೊತ್ತಿಲ್ಲ. ಆದರೆ ಆಕೆ ಮೇಲೆ ಮನಸ್ಸು ಮಾತ್ರ ಬಂದುಬಿಡ್ತು. ಆ ರಾತ್ರಿಗೆ ಆಕೆ ಬೇಕೇ ಬೇಕು ಅನ್ನಿಸಿಬಿಡ್ತು. ಬೇಕು ಅಂದ ಮೇಲೆ ಬೇಕೇ ಬೇಕು. ರಾತ್ರಿಗೆ ಕೋಟಿಗಟ್ಟಲೆ ರೊಕ್ಕ ಕೊಟ್ಟು ಸುಖ ಅನುಭವಿಸಿದ ಮಹನೀಯರು ಅವರೆಲ್ಲ. ಹೇಳಿ ಕೇಳಿ ಹಡಬೆ ರೊಕ್ಕ. ಅದಕ್ಕೇ ಮುಲಾಜಿಲ್ಲದೆ ಹೇಳೇ ಬಿಟ್ಟ ಅನೀಸ್, 'ಮಾಲು ಸಕತ್ತಾಗೈತೆ. ರಾತ್ರಿಗೆ ನನ್ನ ಬಳಿ ಕಳಿಸಿಬಿಡು' ಅಂತ.

ಅಂದು ಅಬು ಸಲೇಂ ಜೊತೆ ಇದ್ದಾಕೆ ನಟಿ ಮೋನಿಕಾ ಬೇಡಿ! ಅವಳ ಮೇಲೆಯೇ ಬಿದ್ದಿತ್ತು ಡಾನ್ ಅನೀಸ್ ಇಬ್ರಾಹಿಂನ ಹದ್ದಿನ ಕಣ್ಣು.

ಮೋನಿಕಾ ಬೇಡಿ. ಮೂಲತ ಪಂಜಾಬಿ ಮೂಲದ ಸಿಖ್ ಯುವತಿ. ತಂದೆ ಡಾಕ್ಟರ್. ರೊಕ್ಕ ಮಾಡುವ ತಲಬು ಬಂತು. ಪಂಜಾಬ್ ಬಿಟ್ಟು, ಕುಟುಂಬದೊಂದಿಗೆ ಸೀದಾ ನಾರ್ವೆ ದೇಶಕ್ಕೆ  ಹೋಗಿ, ಟಿಂಬರ್ ಬಿಸಿನೆಸ್ ಮಾಡಿ ಸಿಕ್ಕಾಪಟ್ಟೆ ಶ್ರೀಮಂತರಾಗಿಬಿಟ್ಟರು. ಅವರ ಮಗಳೇ ಈ ಮೋನಿಕಾ ಬೇಡಿ. ಒಳ್ಳೆ ರೀತಿಯಲ್ಲಿ ಓದಿಕೊಂಡಿದ್ದ ಈಕೆಗೆ ಬಾಲಿವುಡ್ಡಿನ ಹುಚ್ಚು ಹತ್ತಿಬಿಟ್ಟಿತು. ಮನೆ ಮಂದಿ ಎಷ್ಟೇ ಬೇಡ ಅಂದರೂ ಒಂದು ದಿವಸ ಸುಮಾರು ೧೯೯೫ ರ ಹೊತ್ತಿಗೆ ಪೆಟ್ಟಿಗೆ ಕಟ್ಟಿಕೊಂಡು ಮುಂಬೈಗೆ ಬಂದು ಇಳಿದೇ ಬಿಟ್ಟಳು.

ಯಾವದೇ ಸ್ಟಾರ್ ಹಿನ್ನೆಲೆ ಇಲ್ಲದೆ ಬಾಲಿವುಡ್ಡಿನಲ್ಲಿ ಅವಕಾಶ ಸಿಗಲು ಅದೇನು ಹಲ್ವಾನೇ? ಮತ್ತೆ ಈ ಮೋನಿಕಾ ಏನೂ ಸುರ ಸುಂದರಿಯೂ ಅಲ್ಲ. ಸಿಕ್ಕಾಪಟ್ಟೆ ಒಳ್ಳೆ ನಟಿಯೂ ಅಲ್ಲ. ಯವ್ವನ ಇತ್ತು. ಪಂಜಾಬಿಯಾಗಿದ್ದಕ್ಕೆ ಸ್ವಲ್ಪ ಜಾಸ್ತಿಯೇ buxom babe ತರಹ ಇದ್ದಳು.

ಬಾಲಿವುಡ್ಡಿನಲ್ಲಿ ಅವಕಾಶ ಹುಡುಕಿಕೊಂಡು ಚಪ್ಪಲಿ ಸವೆಸಿದವಳಿಗೆ ಸಿಕ್ಕವ ಮುಕೇಶ ದುಗ್ಗಲ್ ಎನ್ನುವ ತಲೆಮಾಸಿದ ಒಬ್ಬ ನಿರ್ಮಾಪಕ. ಹೀಗೆ ಅವಕಾಶ ಹುಡುಕಿಕೊಂಡು ಬರುವವರನ್ನು ಪಟಾಯಿಸಿ, ಅವರಿಂದ ಬಿಟ್ಟಿ ಕೆಲಸ, ಕಾಸು ಇತ್ಯಾದಿ ಕಿತ್ತಿ, ಸಾಧ್ಯವಾದರೆ ಏನೋ ಒಂದು ಅವಕಾಶ ಕೊಟ್ಟು, ಮಾಫಿಯಾ ಮಂದಿಯ ರೊಕ್ಕ ಹಾಕಿ, ತಗಡು ಬಿ, ಸಿ ಕ್ಲಾಸಿನ ಸಿನೆಮಾ ಮಾಡಿ ರೊಕ್ಕ ಮಾಡಿಕೊಳ್ಳುತ್ತಿದ್ದ ಪಿರ್ಕಿ ಆ ದುಗ್ಗಲ್. ಅಂತಹ ಮುಕೇಶ ದುಗ್ಗಲನ ಕೈಗೆ ಸಿಕ್ಕಿಬಿದ್ದಳು ಮೋನಿಕಾ. ಅದೇನೇನು ಕರಾರು ಪತ್ರಗಳ ಮೇಲೆ ಸಹಿ ಹಾಕಿಸ್ಕೊಂಡನೋ ಗೊತ್ತಿಲ್ಲ. ನಂತರ ಈಕೆಗೆ ಆ ಕರಾರು ಪತ್ರ ಹಿಡಿದುಕೊಂಡು ತುಂಬ ಕಾಡತೊಡಗಿದ. ಈಕೆಯನ್ನು ಹಾಕಿಕೊಂಡು ಒಂದೋ ಎರಡೋ ಮೂವಿಯೇನೋ ಮಾಡಿದ. ಎಲ್ಲ ತೋಪು. ಈಕೆ ಬೇರೆ ಅವಕಾಶ ಹುಡುಕಿಕೊಂಡು ಹೊರಟರೆ, ಕಾಂಟ್ರಾಕ್ಟ್ ಪತ್ರ ತೋರಿಸಿ, you are locked in with me for two years, ಅಂದು ಬಿಡುತ್ತಿದ್ದ. ಒಟ್ಟಿನಲ್ಲಿ ಕಿರಿಕ್ ಪಾರ್ಟಿ. ಕೇವಲ ಈ ತರಹದ್ದೊಂದೇ ಕಾಟ ಕೊಡುತ್ತಿದ್ದನೋ ಅಥವಾ ಬೇರೆ ರೀತಿಯಿಂದ ಸಹ ಹುರಿದು ಮುಕ್ಕುತ್ತಿದ್ದನೋ ಗೊತ್ತಿಲ್ಲ. ಒಟ್ಟಿನಲ್ಲಿ ಮುಕೇಶ್ ದುಗ್ಗಲ್ ಕೈಗೆ ಸಿಕ್ಕ ಮೋನಿಕಾ ಬೇಡಿ ಹೈರಾಣಾಗಿ ಹೋಗಿದ್ದಳು.

ಮುಕೇಶ್ ದುಗ್ಗಲ್ - ಈ ಕಡೆ ಡಿ ಕಂಪನಿಯ ಡಾನ್ ಛೋಟಾ ಶಕೀಲನಿಂದಲೂ ರೊಕ್ಕ ತೊಗೊಂಡು ಮೂವಿ ಮಾಡುತ್ತಿದ್ದ. ಆ ಕಡೆ ದಾವೂದನ ಪರಮ ವೈರಿ ಛೋಟಾ ರಾಜನ್ ಜೊತೆ ಕೂಡ ಸಂಪರ್ಕ ಇಟ್ಟುಕೊಂಡಿದ್ದ. ಅದೇನೋ ಲಫಡಾ ಆಯಿತು. ಸಿಟ್ಟಿಗೆದ್ದ ಛೋಟಾ ಶಕೀಲ್ ಸುಪಾರಿ ಕೊಟ್ಟೇ ಬಿಟ್ಟ. ಉಸಕೋ ಖತಂ ಕರ್ ಡಾಲೋ! ೧೯೯೫ ರಲ್ಲಿ ಶಕೀಲ್ ಕಳಿಸಿದ್ದ ಶಾರ್ಪ್ ಶೂಟರ್ ಗಳು ಮುಕೇಶ್ ದುಗ್ಗಲ್ ನನ್ನು ಕೊಂದೇ ಬಿಟ್ಟರು. ಈ ಕಿಲ್ಲಿಂಗ್ ಕೀರ್ತಿ ಮಾತ್ರ ಅಬು ಸಲೇಂಗೆ ಹೋಯಿತು. ದುಗ್ಗಲ್ ಸಾವಿನಿಂದ ಮೋನಿಕಾ ಬೇಡಿ ಮಾತ್ರ, 'ದೊಡ್ಡ ಉಪದ್ರವ ಕಳೆಯಿತು' ಅಂತ ನಿರುಮ್ಮಳವಾದಳು. ಡಾನ್ ಅಬು ಸಲೇಂಗೆ ಅಂದೇ ಆಕೆ ಫುಲ್ ಫಿದಾ! ಯಾಕೆಂದರೆ ಬಾಲಿವುಡ್ ತುಂಬ ಡಾನ್ ಅಬು ಸಲೇಂ ಮುಕೇಶ್ ದುಗ್ಗಲನನ್ನು ಉಡಾಯಿಸಿಬಿಟ್ಟ ಅಂತ ಸುದ್ದಿಯಾಗಿತ್ತು ನೋಡಿ. ಅದಕ್ಕೆ.

ಅದೇ ಸಮಯಕ್ಕೆ ದುಬೈಗೆ ರವಾನಿಸಲ್ಪಟ್ಟಿದ್ದ ಸುಂದರಿಯರ ಗುಂಪಿನಲ್ಲಿ ಮೋನಿಕಾ ಬೇಡಿಯೂ ಇದ್ದಳು. ಆವಾಗಲೇ ಆಕೆ ಬಿದ್ದಳು ನೋಡಿ ಡಾನ್ ಅಬು ಸಲೇಂನ ಕಣ್ಣಿಗೆ. ಆ ಹೊತ್ತಿಗಾಗಲೇ ಡಾನ್ ಅಬು ಸಲೇಂ ದೊಡ್ಡ ಪ್ಲೇಬಾಯ್ ಅಂತ ಕುಖ್ಯಾತನಾಗಿದ್ದ. ಮ್ಯೂಸಿಕ್ ಮುಘಲ್ ಗುಲ್ಷನ್ ಕುಮಾರ್ ಹತ್ಯೆ ಅವನಿಗೆ ದೊಡ್ಡ ಮಟ್ಟದ ಕುಖ್ಯಾತಿ ತಂದು ಕೊಟ್ಟಿತ್ತು. ದೊಡ್ಡ ನಿರ್ಮಾಪಕ ರಾಜೀವ್ ರಾಯ್ ಮೇಲೆ ಗುಂಡು ಹಾರಿಸಿದ್ದರು ಅಬು ಸಲೇಂ ಬಂಟರು. ಬಕ್ಕ ತಲೆಯ ರಾಜೀವ್ ರೈ ತನ್ನ ಹೆಂಡತಿ, ಒಂದು ಕಾಲದ 'ಓಯ್ ಓಯ್' ನಟಿ ಸೋನಂಳನ್ನು ಕರೆದುಕೊಂಡು, ಮುಂಬೈ ಅಂಡರ್ವರ್ಲ್ಡ್ ಕಾಟವೇ ಬೇಡ ಅಂತ ಲಂಡನ್ ಸೇರಿಕೊಂಡಿದ್ದ. ಹೃತಿಕ್ ರೋಶನ್  ಅಪ್ಪ ರಾಕೇಶ್ ರೋಶನ್ ಸಹ ಒಂದು ಗುಂಡು ತಿಂದು, 'ಭಾಯಿ, ನೀ ಹೇಳಿದ ಹಾಗೆಯೇ ಕೇಳ್ತಿನೀ. ನನ್ನ ಮತ್ತು ನನ್ನ ಮಗ ಹೃತಿಕನನ್ನು ಬಿಟ್ಟು ಬಿಡೋ' ಅಂತ ಅಂಗಾಲಾಚಿದ್ದ. ಆತನ ಮಾವ, ಪುರಾತನ ಬಾಲಿವುಡ್ ಕುಳ, ಓಂ ಪ್ರಕಾಶ್, ಖುದ್ದಾಗಿ ಡಿ ಕಂಪನಿ ಜೊತೆ ಮಾತಾಡಿ ಅಳಿಯನ ಜೀವದ ಡೀಲ್ ಕುದರಿಸಿಕೊಂಡಿದ್ದ. ಹೀಗೆಲ್ಲ ಮಾಡಿ ಸಿಕ್ಕಾಪಟ್ಟೆ ಹವಾ ಎಬ್ಬಿಸಿದ್ದ ಅಬು ಸಲೇಂ ಅಂದರೆ ಬಾಲಿವುಡ್ ನಟ ನಟಿಯರಿಗೆ ಒಂದು ದೊಡ್ಡ ಅಚ್ಚರಿ ಮತ್ತು ಭಯ. ಅದನ್ನೇ ಉಪಯೋಗಿಸಿಕೊಂಡು ಬಾಲಿವುಡ್ ನಟಿಯರು ಮತ್ತು ಅಬು ಸಲೇಂ ತುಂಬ ಕ್ಲೋಸ್ ಆಗಿಬಿಟ್ಟರು. ಡಾನ್ ಅಬು ಸಲೇಂ ಮಂಚ ಹತ್ತಿಸಿದ ನಟಿಯರು, ಬ್ಯೂಟಿ ಕ್ವೀನ್ ಗಳ ಲೆಕ್ಕವಿಲ್ಲ. ೨೦೦೫ ರಲ್ಲಿ ಪೋರ್ಚುಗಾಲ್ ದೇಶದಿಂದ ಬಂಧಿತನಾಗಿ ಬಂದ ನಂತರ ಡಾನ್ ಅಬು ಸಲೇಂನನ್ನು ಮಂಪರು ಪರೀಕ್ಷೆಗೆ (narco analysis) ಒಳಪಡಿಸಲಾಗಿತ್ತು. ಆವಾಗ ಆ ಪುಣ್ಯಾತ್ಮ ಬಾಯಿಬಿಟ್ಟ ನಟರು, ನಟಿಯರು, ಪೋಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಅವರಿಗೆ ಅವನು ಮಾಡಿದ್ದ ಸೇವೆ, ಅವನಿಂದ ಸಪ್ಲೈ ಆಗಿದ್ದ ನಟಿಯರು ಮಾಡಿದ್ದ ಸೇವೆ ಎಲ್ಲವನ್ನೂ ಬಕ ಬಕ ಅಂತ ಕಾರಿಕೊಂಡಿದ್ದ. ಆ ಮಂಪರು ಪರೀಕ್ಷೆಯ ಟೇಪ್ ಪೂರ್ತಿ ಔಟ್ ಆದರೆ ಅದೆಷ್ಟು ಮಂದಿಯ ಪತಲೂನ್ ಡೀಲಾ ಆಗಿ ಸೊಂಟದಿಂದ ಕೆಳಗೆ ಇಳಿಯುತ್ತದೆಯೋ ಗೊತ್ತಿಲ್ಲ.

ಮೋನಿಕಾ ಬೇಡಿ ಅಬು ಸಲೇಂನ ಲೈಫಿನಲ್ಲಿ ಬರುವ ಮೊದಲು ಅದೆಷ್ಟು ನಟ ನಟಿಯರು ಬಂದು ಹೋಗಿದ್ದರೋ ಗೊತ್ತಿಲ್ಲ. ಅದು ಯಾಕೋ ಗೊತ್ತಿಲ್ಲ. ಅಬು ಸಲೇಂ ಮತ್ತು ಮೋನಿಕಾ ಬೇಡಿ ನಡುವೆ ಕೇವಲ ಮಂಚದ ವ್ಯವಹಾರ ಮಾತ್ರ ಇರಲಿಲ್ಲ. 'ಪ್ಯಾರ್ ಗೆ ಆಗಿ ಬುಟ್ಟೈತೆ' ಸಹ ಆಗಿ ಬಿಟ್ಟಿತು. ಅದೇ ಆಗಿದ್ದು ಲಫಡಾ. ಅಂಡರ್ವರ್ಲ್ಡ್ ಡಾನ್ ಮಂದಿ ಎಂದೂ ಹಾಗೆಲ್ಲ ಸಿನೆಮಾ ನಟಿಯರೊಂದಿಗೆ ಪ್ರೀತಿ, ಪ್ರೇಮ ಇತ್ಯಾದಿ ಮಾಡಿದ್ದೇ ಇಲ್ಲ. ಎಲ್ಲ ಟೆಂಪರರಿ ತಾತ್ಕಾಲಿಕ ಸೆಟಪ್ ಅಷ್ಟೇ. ಹೆಚ್ಚೆಂದರೆ ನಾಲ್ಕಾರು ತಿಂಗಳ ವ್ಯವಹಾರ. ಇನ್ನು ಡಾನ್ ಗಳು ಗರ್ಭ ನಿರೋಧಕ ಇತ್ಯಾದಿ ಧರಿಸುವದಿಲ್ಲ. ಅದೆಷ್ಟೋ ಡಾನ್ ಗಳ  ಮತ್ತು ನಟಿಯರ ನಾಜಾಯಿಸ್ (illegitimate) ಮಕ್ಕಳು ಇಂದಿಗೂ ಇವೆ ಅಂತ ಗುಡುಗುತ್ತಾರೆ 'Sword of Truth' ಅನ್ನುವ ರೈಟ್ ವಿಂಗ್ ವೆಬ್ ಸೈಟ್ ಒಂದಕ್ಕೆ ಬರೆಯುತ್ತಿದ್ದ ಖಡಕ್ ಅಂಕಣಕಾರ್ತಿ ಆದಿತಿ ಚತುರ್ವೇದಿ. 'ಅದೆಷ್ಟು ಬಾಲಿವುಡ್ ನಟಿಯರು ಮಾಫಿಯಾ ಡಾನ್ ಗಳ ಬೀಜ ಬಿತ್ತಿಸಿಕೊಂಡು, ಅದರ ಫಲ ಹೊತ್ತು, ಅಬಾರ್ಶನ್ ಮಾಡಿಸಿಕೊಂಡಿಲ್ಲ?' ಅಂತ ಸೀದಾ ಸೀದಾ ಅನ್ನುತ್ತಾರೆ ಆಕೆ. (ಹುಡುಕಿ ನೋಡಿ, ಸಿಕ್ಕೀತು ಆ ವೆಬ್ ಸೈಟ್ - Sword of Truth)

ಒಟ್ಟಿನಲ್ಲಿ ಡಾನ್ ಅಬು ಸಲೇಂ ಮತ್ತು ಮೋನಿಕಾ ಬೇಡಿ ಮಧ್ಯೆ ಬಾಲಿವುಡ್ ವ್ಯವಹಾರ ಮೀರಿದ ಪ್ರೀತಿ, ಪ್ರೇಮ ಬೆಳೆದು ಬಿಟ್ಟಿತ್ತು. ಆಗಲೇ ಅಬು ಸಲೇಂ ಮದುವೆಯಾಗಿ ಒಂದೋ ಎರಡೋ ಮಕ್ಕಳ ತಂದೆ!

ಹೀಗೆಲ್ಲ ಇದ್ದಾಗ ಬಾಸ್ ಅನೀಸ್ ಇಬ್ರಾಹಿಂ ತುಂಬ insensitive ಆಗಿ, 'ಮಾಲು ಸಕತ್ತಾಗೈತೆ! ರಾತ್ರಿಗೆ ನನ್ನ ಬಳಿ ಕಳಿಸಿಬಿಡು' ಅಂದು ಬಿಟ್ಟ. ಅದರ ಹಿಂದಿನ ಹಿಕ್ಮತ್ತು ಏನು?

ಯಾಕೋ ಏನೋ ಅನೀಸ್ ಇಬ್ರಾಹಿಮ್ ಮತ್ತು ಅಬು ಸಲೇಂ ಮಧ್ಯೆ ಸಂಬಂಧ ಹಳಸುತ್ತ ಬಂದಿತ್ತು. ಕಾರಣ ಅನೇಕ. ಮುಂಬೈನಲ್ಲಿ ಅಬು ಸಲೇಂ ಅಂದ್ರೆ ಡಾನ್ ಗಳ ಚಹಾ ತಂದುಕೊಂಡುವ ಹುಡುಗ. ಆದರೆ ದುಬೈಗೆ ಬಂದು, ಬಾಲಿವುಡ್ಡಿನ ಮೇಲೆ ತನ್ನದೇ ಆದ ಅಧಿಪತ್ಯ ಸಾಧಿಸಿ, ಒಂದು ಲೆವೆಲ್ ಗೆ ಬಂದ ಅಬು ಸಲೇಂನ ಸ್ಟೇಟಸ್ ಬೇರೆಯೇ. ಆದರೆ ದಾವೂದ್ ಸಹೋದರರು ಅದನ್ನೆಲ್ಲ ಗಮನಿಸಲೇ ಇಲ್ಲ. ಒಂದು ಕಾಲದಲ್ಲಿ ಚಹಾ ತಂದುಕೊಡುತ್ತಿದ್ದವ ಇವತ್ತು ಬಾಲಿವುಡ್ ಇಡೀ ಆಕ್ರಮಿಸಿ, ಕೋಟಿಗಟ್ಟಲೆ ರೊಕ್ಕ ತಂದುಕೊಡುತ್ತಿದ್ದರೂ ಆತನನ್ನು ಅದೇ ರೀತಿ ನೋಡಿದರು. ಎಲ್ಲಿಯವರೆಗೆ ಅಂದರೆ ಡಾನ್ ಗಳ ಹೆಂಡತಿಯರೂ ಸಹ ಅಬು ಸಲೇಂನ ಅಧಿಕೃತ ಪತ್ನಿ ಸಮೀರಾಳನ್ನು ಅದೇ ರೀತಿ ನೋಡತೊಡಗಿದ್ದರು. ಡಾನ್ ಅಬು ಸಲೇಂ ತುಂಬ ಸಹಿಸಿಕೊಂಡ. ಆದರೆ ಎಂದು ಒಂದು ದಿವಸ ಬಾಸ್ ಅನೀಸ್ ಇಬ್ರಾಹಿಂ ತನ್ನ ಪ್ರಿಯತಮೆ ಮೋನಿಕಾಳನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತ, 'ರಾತ್ರಿಗೆ ಕಳಿಸಿಬಿಡು' ಅಂದನೋ ಅವತ್ತೇ ಅಬು ಸಲೇಂ ನಿರ್ಧಾರ ಮಾಡಿಯೇಬಿಟ್ಟ. ಡಿ ಕಂಪನಿ ಬಿಟ್ಟು ಹೊರಡಲೇ ಬೇಕು. ಒಂದು ಸ್ವಂತ ನೆಲೆ ಕಂಡುಕೊಳ್ಳಲೇ ಬೇಕು ಅಂತ.

ಮುಂದೇನು? ಇಂತಹ ಹೊತ್ತಿಗೆ ಎಂದೇ ಎಲ್ಲ ಸಿದ್ಧ ಮಾಡಿಕೊಂಡಿದ್ದ ಅಬು ಸಲೇಂ ಸೈಲೆಂಟ್ ಆಗಿ ಕುಟುಂಬ ಸಮೇತ ಸೌತ್ ಆಫ್ರಿಕಾಕ್ಕೆ ಹಾರಿಬಿಟ್ಟ. ಅಲ್ಲಿದ್ದು ಕೆಲ ತಿಂಗಳ ನಂತರ ಅಮೇರಿಕಾಗೆ ಹಾರಿಬಿಟ್ಟ. ಅದು ಹೆಚ್ಚಾಗಿ ೨೦೦೦ ಇರಬೇಕು. ಅಮೇರಿಕಾದಲ್ಲಿ ಇದ್ದಷ್ಟು ದಿವಸ ಮೆರದೇ ಮೆರೆದ. ೯/೧೧ ದುರಂತ ಒಂದು ಆಯಿತು ನೋಡಿ. ಅದು ಆದದ್ದೇ ಆದದ್ದು ಅಮೇರಿಕಾ ಎಲ್ಲ ತರಹದ ಅಂಡರ್ವರ್ಲ್ಡ್, ಟೆರರಿಸ್ಟ್ ಮಂದಿ ಮೇಲೆ ಮುರಕೊಂಡು ಬಿತ್ತು. ಅಮೇರಿಕಾದಲ್ಲೇ ಇದ್ದರೆ ಡೇಂಜರ್ ಅಂದವನೇ ಮೋನಿಕಾ ಬೇಡಿ ಜೊತೆ ಡಾನ್ ಅಬು ಸಲೇಂ ಪೋರ್ಚುಗಾಲ್ ದೇಶಕ್ಕೆ ಹಾರಿಬಿಟ್ಟ. ಅಲ್ಲಿ ಏನೋ ಒಂದು ತರಹ ಅಜ್ಞಾತವಾಸದಲ್ಲಿದ್ದ. ಗ್ಯಾಂಗ್ ಬಿಟ್ಟು ಓಡಿ ಹೋದ ಅಂತ ಸಿಟ್ಟಿಗೆದ್ದಿದ್ದ ಡಿ ಕಂಪನಿಯೇ ಅವನ ವಾಸನೆ ಹಿಡಿದು ಪೊಲೀಸರಿಗೆ ಟಿಪ್ ಕೊಟ್ಟು ಅರೆಸ್ಟ್ ಮಾಡಿಸಿತು ಅನ್ನುತ್ತಾರೆ ಕೆಲವರು. ಇನ್ನು ಕೆಲವು ಜನ, 'ಭಾರತದ ಕೋರಿಕೆಯಾದ ದಾವೂದನ handover ಅಂತೂ ಸಾಧ್ಯವಿಲ್ಲ. ಚಿಕ್ಕ ಪುಟ್ಟ ಡಾನ್ ಒಬ್ಬನನ್ನಾದರೂ ಹಿಡಿದು ಕೊಟ್ಟು ಭಾರತವನ್ನು ಖುಷ್ ಮಾಡೋಣ' ಅಂತ ಅಮೇರಿಕಾ ತನ್ನ FBI ಮೂಲಕ, ಪೋರ್ಚುಗೀಸ್ ಸರ್ಕಾರದ ಮೇಲೆ ಒತ್ತಡ ಹಾಕಿ ಡಾನ್ ಅಬು ಸಲೇಂನನ್ನು ಅರೆಸ್ಟ್ ಮಾಡಿಸಿ, ಭಾರತಕ್ಕೆ ಸಾಗಹಾಕಿತು ಅನ್ನುತ್ತಾರೆ. ಯಾವದೋ ನಿಜವೋ?

ಒಟ್ಟಿನಲ್ಲಿ ಡಾನ್ ಮತ್ತು ಅವನ ಡವ್ ಮೋನಿಕಾ ಬೇಡಿಯನ್ನು ೨೦೦೫ ರಲ್ಲಿ ಪೋರ್ಚುಗಲ್ ದೇಶದ ರಾಜಧಾನಿ ಲಿಸ್ಬನ್ ತುಂಬಾ ಅಟ್ಟಾಡಿಸಿಕೊಂಡು ಓಡಾಡಿಸಿ ಹಿಡಿದು ಭಾರತಕ್ಕೆ ತರಲಾಯಿತು. ತಂದವರು CBI. ಅರೆಸ್ಟ್ ಆದ ಡಾನ್ ಕೇಳಿದ್ದು ಒಂದೇ ಮಾತು, 'ನೀವು ಮುಂಬೈ ಕ್ರೈಂ ಬ್ರಾಂಚಿನವರೇ?' ಅಂತ. 'ಅಲ್ಲ. ಯಾಕೆ? ನಾವು CBI' ಅಂದರೆ ಡಾನ್, 'ಒಳ್ಳೇದು. ಮುಂಬೈ ಕ್ರೈಂ ಬ್ರಾಂಚ್ ಆಗಿದ್ದರೆ ಭಾರತದಲ್ಲಿ ಇಳಿದಾಕ್ಷಣ ಎನ್ಕೌಂಟರ್ ಮಾಡಿಯಾರು ಅಂತ ಹೆದರಿಕೆ' ಅಂದುಬಿಟ್ಟ. ಹಾಗೆ ಹೇಳಲು ಕಾರಣವೂ ಇತ್ತು. ಯಾಕೆಂದರೆ ಈ ಪುಣ್ಯಾತ್ಮನೇ ಮುಂಬೈ ಪೋಲೀಸಿನಲ್ಲಿದ್ದ ತನ್ನ ಖಾಸ್ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳಿಗೆ 'ಹರಕೆ ಕುರಿ'ಗಳನ್ನು ಕಳಿಸುತ್ತಿದ್ದ. ಇಷ್ಟು ಎನ್ಕೌಂಟರ್ ಆಗಲೇ ಬೇಕು. ಅದಕ್ಕೆ ಜನ ಬೇಕು. ಎಲ್ಲಿಂದ ಬರಬೇಕು? ದುಬೈನಲ್ಲಿ ಕೂತಿದ್ದ ಅಬು ಸಲೇಂಗೆ ಫೋನ್ ಮಾಡುತ್ತಿದ್ದರು ಕೆಲ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳು. ಅವರ ಜೊತೆಗಿನ ಡೀಲ್ ಪ್ರಕಾರ, ತನ್ನ ಊರಾದ ಉತ್ತರ ಪ್ರದೇಶದ ಅಜಮ್ ಘರ್ ನಿಂದ, ಐದೋ ಹತ್ತೋ ಸಾವಿರವೋ ರುಪಾಯಿ ಕೊಟ್ಟು ಶಾರ್ಪ್ ಶೂಟರ್ ಕರೆಸುತ್ತಿದ್ದ ಸಲೇಂ. ಅವರಿಗೆ ಆರ್ಡರ್ ಬರುತ್ತಿತ್ತು, 'ಇಂತಹ ನಟ / ನಟಿ ಮನೆ ಮುಂದೆ ಹೋಗಿ, ಘೋಡಾ (ಗನ್) ಹಿಡಿದುಕೊಂಡು ಶೋ ಕೊಡಿ' ಅಂತ. ಅದೇ ಸಮಯಕ್ಕೆ ಸರಿಯಾಗಿ ಎನ್ಕೌಂಟರ್ ಸ್ಪೆಷಲಿಸ್ಟ್ ಪೋಲೀಸ್ ಮಂದಿಗೆ ಸಹ ಮೆಸೇಜ್ ಹೋಗುತ್ತಿತ್ತು. 'ಹೋಗಿ, ಎನ್ಕೌಂಟರ್ ಮಾಡಿ,' ಅಂತ. ಅವರು ಹೋಗಿ ಎನ್ಕೌಂಟರ್ ಮಾಡಿ, ದೊಡ್ಡ ಹಲ್ಲಾ ಗುಲ್ಲಾ. ಇದೆಲ್ಲ ನೋಡಿದ ಸಿನೆಮಾ ಮಂದಿ ಚಡ್ಡಿಯೊಳಗೆ ಒಂದಾ ಎರಡಾ ಮಾಡಿಕೊಳ್ಳುತ್ತಿದ್ದರು. ಭೀತಿಯೇ ಅಂಡರ್ವರ್ಲ್ಡ್ ಮೂಲವಯ್ಯ. ಅಬು ಸಲೇಂನ ಬ್ರಾಂಡ್ ವ್ಯಾಲ್ಯೂ ಮತ್ತಿಷ್ಟು ಏರುತ್ತಿತ್ತು.  'ಮನೆ ಮುಂದೆನೇ ಭಾಯಿಯ ಶಾರ್ಪ್ ಶೂಟರುಗಳು ಸುಳಿದಾಡುತ್ತಿದ್ದರು. ಟೈಮಿಗೆ ಸರಿಯಾಗಿ ಪೊಲೀಸರು ಬಂದು ಎನ್ಕೌಂಟರ್ ಮಾಡಿದ್ದಕ್ಕೆ ಬಚಾವ್ ' ಅಂತ ಜನ ನಿಟ್ಟುಸಿರು ಬಿಟ್ಟರೆ ಡಾನ್ ಮತ್ತೂ ಖಾಕಿ ಕದೀಮ ಎನ್ಕೌಂಟರ್ ಸ್ಪೆಷಲಿಸ್ಟ್ ತಟ್ಟಿಕೊಂಡು ನಗುತ್ತಿದ್ದರು. ಅಬು ಸಲೇಂನಿಗೆ ಬರೋಬ್ಬರಿ ರೊಕ್ಕ ಸಂದಾಯವಾಗುತ್ತಿತ್ತು. ಪೊಲೀಸರಿಗೂ ಸಹ. ಇವರ ದಂಧೆ ಮಧ್ಯೆ ಜಾನ್ ಕಳೆದುಕೊಂಡವರು ಮಾತ್ರ ಅಜಮ್ ಘರ್ ದ ಹುಚ್ಚ ಯುವಕರು. ಅದೂ ಕೇವಲ ಐದೋ ಹತ್ತೋ ಸಾವಿರಕ್ಕೆ.

ಅದೆಲ್ಲ ಇರಲಿ. ಆದರೆ ಆ ಹೊತ್ತಿನಲ್ಲಿ, ಆ ನಿಂತ ಮೆಟ್ಟಿನಲ್ಲಿ, ಡಾನ್ ಅನೀಸ್ ಇಬ್ರಾಹಿಂ, ಅದೂ ಬಾಸ್, 'ಹುಡುಗಿ ಕಳಿಸು. ಇವತ್ತು ರಾತ್ರಿಗೆ,' ಅಂದಾಗ ಅಬು ಸಲೇಂ ಏನು ಮಾಡಿದ? ತನ್ನ ಪ್ರಿಯತಮೆಯನ್ನು ಕಳಿಸಿದನೇ? ಆಕೆ ಹೋದಳೇ? ಡಾನ್ ಅನೀಸ್ ಇಬ್ರಾಹಿಂನ ಬಿಸ್ತರ್ ಗರಂ ಮಾಡಿದಳೇ? ಗೊತ್ತಿಲ್ಲ. ಅವಕ್ಕೆಲ್ಲ ಉತ್ತರ ಕೇವಲ ಅವರೇ ಕೊಟ್ಟಾರು. ಅಬು ಸಲೇಂ ಮತ್ತು ಮೋನಿಕಾ ಬೇಡಿ.

* ಇದೇ ಪುಸ್ತಕ ಆಧರಿಸಿ ಬರೆದಿದ್ದ ಮತ್ತೊಂದು ಬ್ಲಾಗ್ ಪೋಸ್ಟ್. ನಾನು ಅಬು ಸಲೇಂ! (ಅಂಡರ್ವರ್ಲ್ಡ್ ಡಾನ್ ಒಬ್ಬನ ಕಥನ)