Saturday, March 07, 2015

ಶಟ್ರೋಸಾಫ್ಟ್ ಟೆಕ್ನಾಲಜೀಸ್ OR ಹಟ್ರೋಸಾಫ್ಟ್ ಟೆಕ್ನಾಲಜೀಸ್ ???



ಒಬ್ಬವ ಹಳೆ ದೋಸ್ತ ಸಿಕ್ಕಿದ್ದ.

'ಏನಲೇ? ಭಾಳ ಅಪರೂಪ? ಹಾಂ?' ಅಂದೆ.

'ಏ  ದೋಸ್ತ, ಹೊಸಾ ನೌಕರಿ ಶುರು ಮಾಡೇನೋ!' ಅಂದ ದೋಸ್ತ.

'ಹೌದಾ? ಕಾಂಗೋ! ಕಾಂಗೋ!' ಅಂದೆ.

ಕಾಂಗೋ ಅಂದ್ರ ಆಫ್ರಿಕಾದ ನಟ್ಟ ನಡು ಇರೋ ದೇಶ ಅಲ್ಲರೀ. congratulations ಅನ್ನೋದರ ಶಾರ್ಟ್ ಫಾರ್ಮ್. ತಿಳೀತ?

'ಯಾವ ಕಂಪನಿ? ಏನು ಹೆಸರು?' ಅಂತ ಕೇಳಿದೆ.

'ಶಟ್ರೋಸಾಫ್ಟ್ ಟೆಕ್ನಾಲಜೀಸ್!' ಅಂದುಬಿಟ್ಟ. ಅಕಟಕಟಾ!

ಏನೇನು ಹೆಸರು ಇಡ್ತಾರಪಾ? ನಮ್ಮ ಕಾಲದಾಗ ಶ್ರೀ ಗಣೇಶ್ ಟ್ರೇಡರ್ಸ್, ಶ್ರೀ ಕಾಳಿಕಾ ಬ್ರದರ್ಸ್ ಹೀಂಗ ಮಂಗಳಕರವಾದ ಹೆಸರು ಇಡತಿದ್ದರು. ಇವರನ್ನ ನೋಡಿದರೆ ಸಾಕು. ಅದೇನೋ IT ಅಂತ. IT ಅಂದ್ರ ನಾನು ಇಟ್ಟಂಗಿ ಟೆಕ್ನಾಲಜಿ ಅಂತ ತಿಳಕೊಂಡಿದ್ದೆ. ನೋಡಿದರೆ ಅದು information technology ಅಂತ. ಒಟ್ಟ ಸುಡಗಾಡು ಒಂದು.

ಹೀಂಗ ಶಟ್ಟ್ರೋಸಾಫ್ಟ್ ಅನ್ನೋ ಕಂಪನಿ ಸೇರಿದ್ದ ದೋಸ್ತ ಒಂದೇ ತಿಂಗಳದಾಗ ಆ ಕಂಪನಿ ಕೆಲಸ ಬಿಟ್ಟುಬಿಟ್ಟ. ಕೆಲಸ ಬಿಟ್ಟಿದ್ದೊಂದೇ ಅಲ್ಲ IT ನೇ ಬಿಟ್ಟುಬಿಟ್ಟ. ಅಷ್ಟು ಸಾಕಾಗಿ ಹೋಗಿತ್ತು ಅವಂಗ. ನನಗ ಭಾಳ ಆಶ್ಚರ್ಯ ಆತು. ಇಷ್ಟು ವೈರಾಗ್ಯ ಬರಲಿಕ್ಕೆ ಏನು ಕಾರಣ ಇರಬಹುದು ಅಂತ.

ಒಂದು ದಿನ ಸಿಕ್ಕ. ಎಲ್ಲೆ ಅಂತೀರಿ? ಅಲ್ಲೇ NP ಒಳಗ. NP ಅಂದ್ರ ನ್ಯೂ ಪ್ರಭಾತ್ ಬಾರ್ & ರೆಸ್ಟೋರಂಟ್ ಅಂತ. ನಮ್ಮ ಊರಿನ ಪ್ರೀಮಿಯಂ ಶೆರೆ ಅಂಗಡಿ. ರೊಕ್ಕ ಇದ್ದಾಗ NP. ಇಲ್ಲಂದ್ರ ಅಂತೂ ಗೊತ್ತೇ ಅದ ಅಲ್ಲ? ಅದೇ ಗ್ವಾಡಿಗೆ ಸುಣ್ಣ ಹೊಡೆಯುವರಿಂದ ಹಿಡಿದು ಕುಂಡಿಗೆ ಸುಣ್ಣ ಹಚ್ಚುವವರ ತನಕ ಎಲ್ಲರೂ ಕುಡಿಯುಲು ಬರುವ ಮಾಳಮಡ್ಡಿಯ ಪ್ರೆಸಿಡೆಂಟ್ ಬಾರ್ & ರೆಸ್ಟೋರಂಟ್.

'ಏನಲೇ ದೋಸ್ತ? ಕೆಲಸ ಬಿಟ್ಟು ಬಿಟ್ಟೀ?' ಅಂತ ಕೇಳಿದೆ.

'ಹೌದಪಾ ಹೌದು! ಬಿಟ್ಟೇ ಬಿಟ್ಟೆ. ಸಾಕಾಗಿ ಹೋತು,' ಅಂದವನೇ ಒಂದು ದೊಡ್ಡ ಡ್ರಿಂಕ್ ಸ್ವಾಹಾ ಮಾಡಿಬಿಟ್ಟ. ಒಮ್ಮೆಲೇ ಅಷ್ಟು ಸ್ವಾಹಾ ಮಾಡಿದರೆ ಮತ್ತೇನು? ಅದೇನು ಕಹಿ ಇರ್ತದೋ ಏನೋ ಗೊತ್ತಿಲ್ಲ. ಕೆಟ್ಟ ಮಾರಿ ಮಾಡಿದ.

'ಯಾಕ? ಏನಾತು? ಭಾರಿ ನೌಕರಿ, ದೊಡ್ಡ ಪಗಾರು, ಆಳು, ಕಾಳು ಅಂತ ಹೇಳಿಕೋತ್ತ ಹೋಗಿದ್ಯಲ್ಲಲೇ? ಹಾಂ? ಇಷ್ಟು ಲಗೂ ಬ್ಯಾಸರಾತ?' ಅಂತ ಕೇಳಿದೆ.

'ಆ ಶಟ್ಟ್ರೋಸಾಫ್ಟ್ ಕಂಪನಿ ಒಳಗ ಎಲ್ಲರೂ ಒಂದು ತರಹದ ಮಂದಿ ನೋಡಪಾ,' ಅಂತ ಹೇಳಿ ಮತ್ತ ಸುಮ್ಮಾದ.

'ಹ್ಯಾಂ????????' ಅಂತ ಫುಲ್ surprise, confuse ಲುಕ್ ಕೊಟ್ಟೆ.

'ಆ ಕಂಪನಿ ಒಳಗ ಇದ್ದವರೆಲ್ಲ ಚಿತ್ರ ವಿಚಿತ್ರ ಹೆಸರಿನ ಶಟ್ಟರುಗಳು. ನನ್ನ ಜೀವನಾ ಹರಾಮ್ ಮಾಡಿಬಿಟ್ಟರು,' ಅಂತ ಗೊಳೋ ಅಂದ.

'ಏನಲೇ ಹಾಂಗಂದ್ರ? ನೀ ಹೇಳಿ ಕೇಳಿ ಯಾಲಕ್ಕಿಶಟ್ಟರ್ ಕಾಲೋನಿ ನಿವಾಸಿ. ಹಾಂಗಿದ್ದಾಗ ಶಟ್ಟರ್ ಅಂದ್ರ ಯಾಕ ತೊಂದ್ರೀ?' ಅಂತ ಕೇಳಿದೆ.

'ನೋಡಪಾ ಆ ಕಂಪನಿ ಒಳಗ ಇರೋ ದೊಡ್ಡ ಮಂದಿ ಎಲ್ಲ ಚಿತ್ರವಿಚಿತ್ರ ಹೆಸರಿನ ಹಾಪಗೋಳು. ಅವರ ಜೋಡಿ ಗುದ್ದಾಡಿ ಗುದ್ದಾಡಿ ಸಾಕಾಗಿ, ಬಿಟ್ಟು ಓಡಿ ಬಂದೆ,' ಅಂತ ಹೇಳಿದ.

ಅಷ್ಟೇ ಅಲ್ಲ ಅವನ ಶಟ್ಟ್ರೋಸಾಫ್ಟ್ ಅನ್ನುವ ಕಂಪನಿ ವೆಬ್ ಸೈಟ್ ತೆಗೆದು ತೋರಿಸಿ ಅದರಾಗ ಮ್ಯಾನೇಜ್ಮೆಂಟ್ ಟೀಂ ತೋರಿಸಿದ .

CEO - ಆನಿಶಟ್ಟರ್
CFO - ಬಗ್ಗಿಶಟ್ಟರ್
COO - ಮಲಗಿಶಟ್ಟರ್
VP Sales - ಕುಂದ್ರಿಶಟ್ಟರ್
VP Products - ನಿಂದ್ರಿಶಟ್ಟರ್

'ಹಾ!! ಹಾ!! ಚಿತ್ರ ವಿಚಿತ್ರ ಹೆಸರಿನ ಶಟ್ಟರುಗಳು ಇದ್ದಾರಲ್ಲಪಾ? ಎಲ್ಲಾ ಶಟ್ಟಿ ಲೋಗ್ ಏನು? ಎಲ್ಲೆ ಮಂಗಳೂರು ಕಡೆ ಮಂದಿ? ಇವರಿಂದ ಏನು ತೊಂದ್ರೀ ನಿನಗ? ಹಾಂ?' ಅಂತ ಕೇಳಿದೆ.

'ಲೇ! ಹುಚ್ಚ ಸೂಳಿ ಮಗನsss! ಅದು ಶಟ್ಟರ್ ಅಲ್ಲಲೇ. ಸರಿ ಮಾಡಿ ಓದು. ನಾನೂ ಹಾಂಗೆ ತಿಳಕೊಂಡು ಆ ದರಿದ್ರ ಕಂಪನಿ ಸೇರಿದ್ದೆ. ನೋಡಿದರೆ ಅದು ಬ್ಯಾರೆನೇ!' ಅಂತ ಬೈದ.

ನೋಡಿದೆ. ಸರಿ ಮಾಡಿ ನೋಡಿದೆ.

ಅಯ್ಯೋ! ಮಹಾ ಮೋಸ ಆಗಿಬಿಟ್ಟದ. ಮರಾ ಮೋಸ. ಸಮೋಸ.

CEO - Ani S Hattar (ಆನಿಶಟ್ಟರ್)
CFO - Baggi S Hattar (ಬಗ್ಗಿಶಟ್ಟರ್)
COO - Malagi S Hattar (ಮಲಗಿಶಟ್ಟರ್)
VP Sales - Kundri S Hattar (ಕುಂದ್ರಿಶಟ್ಟರ್)
VP Products - Nindri S Hattar (ನಿಂದ್ರಿಶಟ್ಟರ್)

'ಹೋಗ್ಗೋ ಇವನೌನಾ!!!!! ಹೋಗಿ ಹೋಗಿ 'ಹಟ್ರಪ್ಪ ಬಗ್ಗಿಸಿಕ್ಯಾರೋ' ಸಂಸ್ಕೃತಿ ಇರುವ ಕಂಪನಿ ಸೇರಿ ಬಿಟ್ಟಿದ್ದಿ  ಅಂತ ಕಾಣಸ್ತದ. ಅಲ್ಲೆಲ್ಲಾ ನಿನ್ನಂತಾ ಸಂಬಾವಿತ, ಸಾಫ್ಟ್ ಮಂದಿ ಬದುಕಿ ಬಾಳೋದು ಭಾಳ ಕಠಿಣ ಅದ ಬಿಡು. ನಿನ್ನ ಹಿಂದ ಮುಂದ ಎಲ್ಲಾ ಬರೋಬ್ಬರಿ ಉಳದದಲ್ಲಾ? ಅಷ್ಟು ಸಾಕು,' ಅಂತ ಹೇಳಿದೆ. 

'ಮುಂದ ಏನು ಮಾಡಲೋ???? ಅದೇ ಚಿಂತಿ' ಅಂದಾ ದೋಸ್ತ.

'ನೋಡಪಾ! ಊಟದ ಚಿಂತಿ ಬ್ಯಾಡ. ಮನಿ ಅಂತೂ ಅದ. ಇನ್ನು ಹೆಂಡ್ತಿ ಮಕ್ಕಳ ಚಿಂತಿ ಅಂತೂ ಬಿಟ್ಟೇ ಬಿಡು' ಅಂತ ಹೇಳಿಬಿಟ್ಟೆ.

'ಏನು ಹಾಂಗಂದ್ರ???????' ಅಂತ ಫುಲ್ ಕ್ವೆಶ್ಚನ್ ಮಾರ್ಕ್ ಒಗೆದು ಬಿಟ್ಟ.

'ನೋಡು,  ಹಣಿ ಮ್ಯಾಲೆ ಗೂಟದ ನಾಮಾ ಉದ್ದಕ ಹಚ್ಚಿಕೊಂಡು ಹೋಗಿ ಉತ್ತರಾದಿ ಮಠದಾಗ ಕೂತರೆ ಊಟ ಅಲ್ಲೇ ಸಿಗ್ತದ. ಅವನೌನ್ ಮೈತುಂಬಾ ಬೂದಿ ಬಳ್ಕೊಂಡು ಹೋಗಿ ಕೂತರ ಶಂಕರ ಮಠದಾಗ ಊಟ ಸಿಗ್ತದ. ಅದರಲ್ಲೇ ಸ್ವಲ್ಪ ಚೇಂಜ್ ಮಾಡಿ ವಿಭೂತಿ ಪಟ್ಟಾ ಹೊಡಕೊಂಡು ಹೋಗಿ, 'ಜ್ಯೋತಿ ಬೆಳಗಿದೆ ಪರಂಜ್ಯೋತಿ ಬೆಳಗಿದೆ' ಅಂತ ಸ್ವಾಮಿಗಳ ಮುಂದ ಹಾಡಿಬಿಟ್ಟರೆ ಮುರಘಾ ಮಠದಲ್ಲಿ ದಾಸೋಹ ತಪ್ಪೋದಿಲ್ಲ. ಇನ್ನೂ ಭಾಳ ಐಡಿಯಾ ಅವ. ಊಟದ ಚಿಂತಿ ಬ್ಯಾಡ ನಿನಗ' ಅಂತ ಹೇಳಿದೆ.

'ಇನ್ನೇನು ಐಡಿಯಾ ಅವಾ?' ಅಂತ ಕೇಳಿದ.

'ಬತ್ತಲೆ ಆಗಿ, ಕೂದಲಾ ಕಿತ್ತುಗೊತ್ತ ಓಡಿಕೋತ್ತ ಹೋದರೆ ಜೈನ ಮಠದಲ್ಲಿ ಊಟ ಗ್ಯಾರಂಟಿ. ಹಾಂಗೆ ಸ್ವಲ್ಪ  ಕ್ರಿಯೇಟಿವ್ ಆದ್ರ ಮಸೀದಿ, ಚರ್ಚ್ ಒಳಗೂ ಬಿರ್ಯಾನಿ, ಕೇಕ್ ಎಲ್ಲಾ ಸಿಗ್ತಾವ ನೋಡಪಾ. ಊಟದ ಚಿಂತಿ ಬ್ಯಾಡಲೇ,' ಅಂತ ಫುಲ್ ಆಶ್ವಾಸನೆ ಕೊಟ್ಟೆ.

'ಹೆಂಡ್ತಿ ಮಕ್ಕಳು????????' ಅಂತ ತಲಿ ಕೆಡಿಸಿಕೊಂಡ.

'ಅದರ ವಿಚಾರ ಬಿಟ್ಟುಬಿಡು ನೀ,' ಅಂದೆ.

'ಅಂದ್ರಾ?????????????????????????'

'ಲೇ! ಹುಚ್ಚ ಸೂಳಿ ಮಗನ! ನೀನೇ ನೌಕರಿ ಇಲ್ಲದ ಅಬ್ಬೇಪಾರಿ. ನಿನ್ನ ಹೆಂಡ್ತಿ ಅಕಿನೇ ನೌಕರಿ ಮಾಡ್ತಾಳ. ಇಲ್ಲಾ ಮಕ್ಕಳನ್ನು ಕರ್ಕೊಂಡು ತವರು ಮನಿಗೆ ರನ್ನಿಂಗ್ ರೇಸ್ ಹಚ್ಚತಾಳ,' ಅಂತ ಹೇಳಿದೆ.

'ಹಾಂಗಂತೀ??????' ಅಂತ ಉದ್ದ ಎಳೆದ.

'ಹೂಂ! ಹಾಂಗsss! ಮೊದಲು ತೀರ್ಥ ಮುಗಿಸು. ಊಟ ಮಾಡೋಣ' ಅಂದೆ.

ಅಷ್ಟರಾಗ ಒಬ್ಬವ ಬಂದು 'ನಮಸ್ಕಾರೀ ಸರ್ರಾ!' ಅಂದ. ಏನೂ ಕೇಳದೇ ಹತ್ತು ರೂಪಾಯಿ ನೋಟು ತೆಗೆದು ಕೈಯಾಗ ಇಟ್ಟೆ. 'ಥ್ಯಾಂಕ್ಸ್ ರೀ ಸರ್ರಾ!' ಅನ್ಕೋತ್ತ ಶೆರೆ ತೊಗೋಳಿಕ್ಕೆ ಹೋತು ಅದು. ಅದು ಗ್ವಾಡಿಗೆ ಸುಣ್ಣಾ ಹೊಡೆಯೋ ಪಾರ್ಟಿ. ಇನ್ನು ಕುಂಡಿಗೆ ಸುಣ್ಣಾ ಹೊಡೆಯೋ ಪಾರ್ಟಿ ಬಂದು, 'ಸರ್ರಾ ನಮಗೂ ಒಂದು ಹತ್ತು ರೂಪಾಯಿ ಕೊಡರಲ್ಲಾ? ಪ್ಲೀಸ್. ನಮಗೂ ಇನ್ನೊಂದು 30 ml ಬೇಕ್ರೀ' ಅನ್ನೋಕಿಂತ ಮೊದಲು ಊಟ ಮುಗಿಸಿ ಓಡೋದು ಒಳ್ಳೇದು.

ಸ್ಪೂರ್ತಿ: ಧಾರವಾಡ ದೋಸ್ತರು ಹೇಳಿದ ಕಥೆಗಳು ;)