Wednesday, April 15, 2015

ಮುಲ್ಲಾ ನಸ್ರುದ್ದೀನ್ ಮಾಡಿದ ಕಳ್ಳಸಾಗಾಣಿಕೆ

ಮುಲ್ಲಾ ನಸ್ರುದ್ದೀನ್ ಆಗಾಗ ತನ್ನ ದೇಶದ ಗಡಿ ದಾಟಿ, ಪಕ್ಕದ ದೇಶಕ್ಕೆ ಹೋಗುತ್ತಿದ್ದ. ಬರುವಾಗ ಮಾತ್ರ ಒಂದು ಹಿಂಡು ಕತ್ತೆಗಳನ್ನು ಹೊಡೆದುಕೊಂಡು ಬರುತ್ತಿದ್ದ. ಗಡಿ ಕಾಯವ ಕಾವಲುಗಾರರಿಗೆ ಸಂಶಯ ಬಂತು. 'ಈ ನಸ್ರುದ್ದೀನ್ ಇಷ್ಟೊಂದು ಕತ್ತೆಗಳನ್ನು ಹೊಡೆದುಕೊಂಡು ಬರುತ್ತಿದ್ದಾನೆ. ಕತ್ತೆಗಳನ್ನು ಉಪಯೋಗಿಸುವದು ಸಾಮಾನು ಸಾಗಣೆ ಮಾಡಲಿಕ್ಕೆ. ಎಲ್ಲಿ ಈ ನಸ್ರುದ್ದೀನ್ ಏನಾದರೂ ಕಳ್ಳಸಾಗಾಣಿಕೆ ಮಾಡುತ್ತಿದ್ದಾನೋ ಹೇಗೆ? ಕಳ್ಳ ನನ್ನ ಮಗ!' ಅಂತ ಸಂದೇಹಪಟ್ಟರು. ಕೇಳಿದರು. ನಸ್ರುದ್ದೀನ್ ಮಾತ್ರ ಹೆಚ್ಚಿಗೆ ಮಾತಾಡದೇ, ಬೇಕಾದರೆ ಚೆಕ್ ಮಾಡಿಕೊಳ್ಳಿ, ಶೋಧಿಸಿಕೊಳ್ಳಿ ಅಂದುಬಿಟ್ಟ. ಗಡಿ ಕಾವಲುಗಾರರು ಎಲ್ಲ ಶೋಧಿಸಿದರು. ಏನೂ ಸಿಗಲಿಲ್ಲ. ನಸ್ರುದ್ದೀನ್ ಮತ್ತು ಕತ್ತೆಗಳನ್ನು ದೇಶದ ಒಳಗೆ ಹೋಗಲು ಬಿಟ್ಟರು. ಇದು ಹಾಗೆಯೇ ಮುಂದುವರೆಯಿತು.

ಮುಂದೆ ಬಹಳ ವರ್ಷಾನಂತರ ಮುಲ್ಲಾ ನಸ್ರುದ್ದೀನ್ ಆ ವ್ಯಾಪಾರ ಬಿಟ್ಟು, ನಿವೃತ್ತನಾಗಿ ಬೇರೆ ಊರು ಸೇರಿಕೊಂಡ. ಒಂದು ದಿವಸ ಅವನಿಗೆ ಒಬ್ಬ ಪರಿಚಯಸ್ಥ ಸಿಕ್ಕ. ಅವನು ಯಾರಾಗಿದ್ದ ಅಂದರೆ ಬಹಳ ಹಿಂದೆ ನಸ್ರುದ್ದೀನ್ ಕತ್ತೆಗಳನ್ನು ಗಡಿ ಮೂಲಕ ತರುತ್ತಿರುವಾಗ ಹಿಡಿದು, ಚೆಕ್ ಮಾಡಿದ್ದ ಗಡಿ ಕಾವಲಿನವ. ಅವನಿಗೆ ಮೊದಲಿನ ಕುತೂಹಲ ಹೋಗಿರಲೇ ಇಲ್ಲ.

'ನಸ್ರುದ್ದೀನ್, ನೀನು ಪಕ್ಕದ ದೇಶದಿಂದ ಅದೆಷ್ಟು ಬಾರಿ ಕತ್ತೆಗಳನ್ನು ತಂದೆ. ನಾವು ಪ್ರತಿ ಬಾರಿ ಎಷ್ಟು ಹುಡುಕಿದೆವು, ನೀನು ಏನು ಕಳ್ಳಸಾಗಾಣಿಕೆ ಮಾಡುತ್ತಿರಬಹುದು ಅಂತ ಕಂಡುಹಿಡಿಯಲಿಕ್ಕೆ. ನಾವು ಎಷ್ಟೇ ಹುಡುಕಿದರೂ ಏನೂ ಸಿಗಲೇ ಇಲ್ಲ. ನಿಜ ಹೇಳು. ನೀನು ಏನು ಕಳ್ಳಸಾಗಾಣಿಕೆ ಮಾಡುತ್ತಿದ್ದೆ? ಮತ್ತು ಅದು ಹೇಗೆ ಮಾಡುತ್ತಿದ್ದೆ?' ಅಂತ ಕೇಳಿದ ಮಾಜಿ ಕಾವಲಿನವ.

ನಸ್ರುದ್ದೀನ್ ತುಂಟ ನಗೆ ನಕ್ಕ. 'ಜನಾಬ್, ನಾನು ಕತ್ತೆಗಳ ಕಳ್ಳಸಾಗಾಣಿಕೆ ಮಾಡುತ್ತಿದ್ದೆ. ಪಕ್ಕದ ದೇಶದಲ್ಲಿ ಕತ್ತೆಗಳು ಸೋವಿಯಾಗಿ ಸಿಗುತ್ತಿದ್ದವು. ಅಲ್ಲಿ ಖರೀದಿಸಿ, ಈಕಡೆ ಹೊಡೆದುಕೊಂಡು ಬಂದು, ನಮ್ಮ ದೇಶದಲ್ಲಿ ಲಾಭಕ್ಕೆ ಮಾರುತ್ತಿದ್ದೆ. ಅಷ್ಟೇ,' ಅಂದು ಗಡ್ಡ ನೀವಿಕೊಂಡ.

'ಅಯ್ಯೋ! ಕತ್ತೆಗಳನ್ನೇ ಕಳ್ಳಸಾಗಾಣಿಕೆ ಮಾಡುತ್ತಿದ್ದೆಯೇ!? ನಾವು ನೀನು ಕತ್ತೆಗಳ ಮೂಲಕ ಬೇರೆ ಏನೋ ಕಳ್ಳಸಾಗಾಣಿಕೆ ಮಾಡುತ್ತಿರಬೇಕು ಅಂತ ಸಾಮಾನುಗಳನ್ನು ಕಂಡುಹಿಡಿಯುವತ್ತ ಲಕ್ಷ್ಯ ಕೊಟ್ಟೆವು. ಕತ್ತೆಗಳೇ ಆ ಕಳ್ಳಸಾಗಾಣಿಕೆ ಸಾಮಾನುಗಳು ಆಗಿರಬಹುದು ಅಂತ ಗ್ರಹಿಸಲೇ ಇಲ್ಲ. ನೀನು ಪ್ರಳಯಾಂತಕ ಬುದ್ಧಿವಂತ ನಸ್ರುದ್ದೀನ್!' ಅಂತ ಹೇಳಿ, ಬೆನ್ನು ತಟ್ಟಿ ಎದ್ದು ಹೋದ.

ನೀತಿ: Don't just focus on the content but also give attention to the context :) ನಮ್ಮ ಮನಸ್ಸಿನಲ್ಲಿ ಏಳುವ ಅನೇಕ ವಿಚಾರಗಳು ಕತ್ತೆಗಳಿದ್ದಂತೆ. ಅವುಗಳಲ್ಲಿ ಅರ್ಥ ಹುಡುಕುವದರಲ್ಲಿ ಸಮಯ ವ್ಯರ್ಥ ಮಾಡುವದರಕಿಂತ ಕತ್ತೆಗಳಂತಹ ವಿಚಾರಗಳನ್ನೇ ಗಮನಿಸಿ, ಇಷ್ಟೊಂದು ಕತ್ತೆಗಳಂತಹ ವಿಚಾರಗಳು ಏಕೆ ಬರುತ್ತಿವೆ ಅಂತ ಯೋಚಿಸಬೇಕು.

ಆಧಾರ: Beyond Mindfulness: The Direct Approach to Lasting Peace, Happiness, and Love by Stephan Bodian 

5 comments:

N'dnade Yd'bd'ange said...


Very nice!

sunaath said...

ಎಲ್ಲ ಕತ್ತೆಗಳೂ ಶಾಸನಸಭೆಗಳಿಗೆ ಹೋದುದರಿಂದ, ಭಾರತದಲ್ಲಿ ಕತ್ತೆಗಳ ಕೃತಕ ಅಭಾವವಾಗಿರಬಹುದು. ಇನ್ನು ಕತ್ತೆಯೇ ಕಳ್ಳಸಾಗಾಣಿಕೆಯ ಸರಕು ಎಂದು ತಿಳಿಯದ ಕಾವಲುಗಾರನೇ ನಿಜವಾದ ಕತ್ತೆ. (ಕತ್ತೆಗಳ ಕ್ಷಮೆಯನ್ನು ಕೋರುತ್ತೇನೆ.)

Mahesh Hegade said...

Good one Sir!

angadiindu said...

ಇದೇ ಥರದ್ದು, ಬಹಳ ಹಿಂದೆ "ಮಯೂರ" ಮಾಸಪತ್ರಿಕೆಯಲ್ಲಿ ಓದಿದ್ದೆ. ಆದರೆ ಅದರಲ್ಲಿ ಕತ್ತೆಯ ಮೇಲೆ ಉಸುಕಿನ ಚೀಲ ಹಾಕಿ ಸಾಗಿಸುತ್ತಿದ್ದನು. ದಿನಾಲೂ,ಬಾರ್ಡರ್ ನಲ್ಲಿ ಚೆಕ್ ಮಾಡುವಾಗ ಬರೀ ಉಸುಕು ಅಂತಾ ಹಾಗೆ ಬಿಡುತ್ತಿದ್ದರು. ವಾಸ್ತವವಾಗಿ ಅವನು ಉಸುಕಿನ ಕಳ್ಳ ಸಾಗಾಟ ಮಾಡುತ್ತಿದ್ದನು. ಇದೇ ರೀತಿಯ ಕಳ್ಳ ಸಾಗಾಟ ಹುಬ್ಬಳ್ಳಿ-ಧಾರವಾಡಕ್ಕೂ ಅಗತ್ಯವಾಗಿದೆ. ಯಾಕಂದರೆ ಉಸುಕಿನ ಬೆಲೆ ಈಗ ಒಂದು ಲೋಡಿಗೆ ಮುವತ್ತು ಸಾವಿರವಾಗಿ ಮನೆ ಕಟ್ಟಿಸುವವರ ನಿದ್ದೆ ಕೆಡಿಸಿದೆ.

Mahesh Hegade said...

ಧನ್ಯವಾದ, ಅಂಗಡಿಯವರಿಗೆ. ನಿಮ್ಮ ವರ್ಷನ್ ಸಹ ಬಹಳ ಚೆನ್ನಾಗಿದೆ.

ಖರೆ! ಉಸುಕಿನ ಬೆಲೆ ಆಪರಿ ಏರಿದ್ದಕ್ಕೆಯೇ ಸ್ಯಾಂಡ್ ಮಾಫಿಯಾ ಜೋರಾಗಿದೆ. ಎಲ್ಲಿತನಕಾ ಅಂದರೆ ಅಧಿಕಾರಿಗಳ ಮೇಲೆಯೇ ಲಾರಿ ಹರಿಸಿಕೊಂಡು ಹೋಗುವ ಧಾರ್ಷ್ಟ್ಯ ತೋರುವಷ್ಟು.