Friday, April 17, 2015

ದೇವರಿಗೆ ಬಿಟ್ಟ ಹೋರಿ, ಎತ್ತು, ಅನಧೀಕೃತ ಎತ್ತು

ಎಲ್ಲ ಹೋರಿಗಳೂ ಎತ್ತುಗಳಾಗುವದಿಲ್ಲ
ಎಲ್ಲ ಗಂಡುಗಳೂ ಗಂಡರಾಗುವದಿಲ್ಲ

ಹಾಗೆಯೇ ಎಲ್ಲ ಗುಂಡುಗಳೂ 'ಢಮ್' ಅಂತ ಹಾರುವದಿಲ್ಲ. ಕೆಲವು ಟಿಸಮದ್ದು ಆಗಿ ಕೇವಲ ಕುಸಪುಸಾ ಅಂತ ಗ್ಯಾಸ್ ಬಿಡುವ ಶಬ್ದ ಮಾಡುತ್ತವೆಯೇ ಹೊರತೂ ಹಾರುವದಿಲ್ಲ ಅಂತ ಕೆಲವರ ಕುಚೋದ್ಯ.

ಎತ್ತು = ಗಂಡ
ಹೋರಿ = ಗಂಡಾಂತರ (ಗಂಡನಿಂದ ಅಂತರ = ಗಂಡಾಂತರ. ನಂತರ ಆಗುವ ಆವಾಂತರ ಗಂಡ್ವಾಂತರ)

ಹಾಗಂತ ಸಮೀಕರಣ ಪ್ರೇಮಿಗಳು ಮಾಡಿದ ಏನೋ ಒಂದು ತರಹದ ಸಮೀಕರಣ. ಒಪ್ಪಿಸಿಕೊಳ್ಳಿ.

'ಏನು ಹೋರಿ ಲೈಫು ಅಷ್ಟು ಮಜಾನೇ?' ಅಂತ ಕೇಳಿದವರಿಗೆ, ದನದ ಕೊಟ್ಟಿಗೆ ನೋಡಿ, ಹೋರಿ, ಮಣಕ, ಹಸು, ಕರ, ಎಮ್ಮೆ, ಕೋಣ ಎಲ್ಲವನ್ನೂ ನೋಡಿದ ಅನುಭವದಿಂದ ಹೇಳಬಹುದಾದ ಒಂದೇ ಮಾತೆಂದರೆ, 'ದೇವರಿಗೆ ಬಿಟ್ಟ ಹೋರಿ ಮಾತ್ರ ಖುಷಿಯಾಗಿರುತ್ತದೆ. ಇಲ್ಲವಾದಲ್ಲಿ ಹೆಚ್ಚಿನವು ಅನಧಿಕೃತ ಎತ್ತುಗಳಾಗಿ, ಆದರೂ ಹೋರಿ ಅಂತ ಕರೆಯಿಸಿಕೊಳ್ಳುವ ಪ್ರಾರಬ್ಧ ಕರ್ಮದ  ಗಂಡು ಕರುಗಳ ಹಾಲತ್ ಭಾಳ ಖರಾಬ್!'

ಇದೆಲ್ಲ ವಿಚಾರ ಚಿಕ್ಕಂದಿನಲ್ಲಿ ಅಜ್ಜನಮನೆ ಹೊನ್ನೆಗದ್ದೆ, ಸಿರಸಿ ಕೊಟ್ಟಿಗೆಯಲ್ಲಿ ಕಂಡು ಬರುತ್ತಿದ್ದ ಅಸಂಖ್ಯಾತ ಹೋರಿ ಕರುಗಳ ನೆನಪಲ್ಲಿ ಈಗ ಬಂತು. ಅವು ಎತ್ತುಗಳಾಗಲು ಯೋಗ್ಯವಲ್ಲ. ಯಾಕೆಂದರೆ ಕಾಮಗಾರಿ ಮಾಡಬಲ್ಲ ಎತ್ತಿನ ಬ್ರೀಡಿನವೇ ಅಲ್ಲ ಅವು. ಪಾಪ. ಕಡಿದು ತಿನ್ನುವ ಮಂದಿಗೆ ಮಾರುವಂತಿಲ್ಲ. ಅಷ್ಟಿನ ಮಟ್ಟಿನ ಧರ್ಮ ನಿಷ್ಠೆ ಇತ್ತು ಆವಾಗಿನ ಮಂದಿಗೆ. ಹಾಗಾಗಿ ಎತ್ತುಗಳಾಗಲಿಕ್ಕೆ ಯೋಗ್ಯವಿಲ್ಲದಿದ್ದರೂ ಮಾರಲಿಕ್ಕೆ ಆಗುವದಿಲ್ಲ.  ಆದರೆ ಅವುಗಳ '#@$' ಬಡಿಸದೇ ಇಟ್ಟುಕೊಳ್ಳುವಂತಿಲ್ಲ. ಇಲ್ಲವಾದರೆ ಅವುಗಳ ಜವಾನಿ, ದಿವಾನಿ, ಕಹಾನಿ ವಿಪರೀತ. ಮಸ್ತಿಗೆ ಬಂದಾಗ ಮ್ಯಾನೇಜ್ ಮಾಡುವದು ಕಷ್ಟ. ದೇವರಿಗೆ ಬಿಡೋಣ ಅಂದರೆ ಎಷ್ಟು ಅಂತ ಬಿಡೋಣ? ದೇವರೇ ಖುದ್ದಾಗಿ, 'ಸಾಕಪ್ಪೋ ಸಾಕು. ಊರಿಗೆ ಒಂದೇ ದೇವರ ಹೋರಿ ಸಾಕಪ್ಪೋ,' ಅಂದು ಬಿಡುತ್ತಾನೆ. ಯಾಕೆಂದರೆ ದೇವರಿಗೆ ಬಿಟ್ಟ ಹೋರಿ ಏನು ಮಾಡಿದರೂ ಓಕೆ. ಅದು ಎಲ್ಲಿ ಮೇಯ್ದರೂ ಓಕೆ. ಕದ್ದು ಮೇಯ್ದರೂ ಓಕೆ. ಬಾರಾ ಖೂನ್ ಮಾಫ್. ಎಲ್ಲ ಹೋರಿಗಳನ್ನೂ ದೇವರ ಹೋರಿ ಅಂತ ಮಾಡಿ ಬಿಟ್ಟು ಬಿಟ್ಟರೆ, ಎಲ್ಲ ಗದ್ದೆ, ಹಿತ್ತಲು ಫುಲ್ ಮಟಾಶ್! ಹಾಗಾಗಿ ಊರಿಗೆ ಒಂದಲ್ಲ, ಐದಾರು ಊರು ಸೇರಿದ ಒಂದು ಗ್ರಾಮಕ್ಕೆ ಒಂದು ದೇವರ ಹೋರಿ ಅಂತ ಬಿಡುತ್ತಿದ್ದರು ಅಂತ ನೆನಪು. ಉಳಿದವೆಲ್ಲ ಬಡಿಸಿಕೊಳ್ಳಬಾರದ ಜಾಗದಲ್ಲಿ ಬರೋಬ್ಬರಿ ಬಡಿಸಿಕೊಂಡ ಹೋರಿ ನಾಮಾಂಕಿತ ಅನಧಿಕೃತ ಎತ್ತುಗಳೇ. ಅಷ್ಟೇ ಎತ್ತುಗಳ ಬಾಸಿಂಗ, ಕೋಡು ಸಿಂಗಾರ, ದೀಪಾವಳಿಯ ಓಡಾಟ, ಸಡಗರ ಇತ್ಯಾದಿ ಮಾತ್ರ ಇಲ್ಲ. ಫುಲ್ ಟೊಮ್ಮೆ! ಹಳೇ ಕಾಲದ ಬೋಡಮ್ಮ, ಫಣಿಯಮ್ಮಗಳ ಸ್ಥಿತಿ, ಪರಿಸ್ಥಿತಿ. ಪಾಪ. ಮೂರೊತ್ತು ದಾಣಿ, ಅಕ್ಕಚ್ಚು ಸಿಕ್ಕರೆ ಹಾಕಿದ ಅಕ್ಕಯ್ಯನಿಗೆ, ಭಾವಯ್ಯನಿಗೆ, ಮಾವಯ್ಯನಿಗೆ, ಅತ್ತೆಗೆ ನಮೋ ನಮಃ. ಹಾಗೆಯೇ ಇರುತ್ತಿದ್ದವು ಪಾಪದ ಹೋರಿಗಳೆಂಬ ಅನಧಿಕೃತ ಎತ್ತುಗಳು. 

ಹೀಗೇ ವಿಚಾರ ಮಾಡಿ, ಅದೆಷ್ಟು ಹೋರಿ ಕರುಗಳನ್ನು ಅನಧಿಕೃತ ಎತ್ತುಗಳನ್ನಾಗಿ ಮಾಡಿ, ಜೀವನ ಪರ್ಯಂತ ಸಾಕಿದ ಪುಣ್ಯ ನಮ್ಮ ಅಜ್ಜನಮನೆಯವರಿಗೆ ಅದೆಷ್ಟು ಬಂತೋ! ಅದೇ ಪುಣ್ಯ ನಮಗೂ ಸ್ವಲ್ಪ ತಾಕುತ್ತಿದೆ ಅಂದುಕೊಂಡಿದ್ದೇವೆ.

ಮೊದಲೆಲ್ಲ ಅಂದರೆ ೧೯೭೫-೭೬ ಟೈಮಿನಲ್ಲಿ ಕಮ್ಮಿ ಕಮ್ಮಿ ಅಂದರೂ ಆರು ಆಕಳು, ನಾಲ್ಕು ಎಮ್ಮೆ, ಒಂದು ಜೋಡಿ ಭರ್ಜರೀ ಎತ್ತು ಇತ್ತು ನಮ್ಮ ಅಜ್ಜನಮನೆ ಕೊಟ್ಟಿಗೆಯಲ್ಲಿ. ಹೋರಿ ಕರ, ಕೋಣದ ಮಣಕಗಳ ಸಂಖ್ಯೆ ಬಿಡಿ. ಅಸಂಖ್ಯ. ಗೊಬ್ಬರದ ಗಾಡಿ ಹೊಡೆಯಲಿಕ್ಕೆ, ಆಲೆಮನೆಯಲ್ಲಿ ಗಾಣದಲ್ಲಿ ಕಬ್ಬು ಅರೆಯಲು ಕೋಣ ಬೇಕು ಅಂದರೆ ಪಕ್ಕದ ಮನೆ ಶಂಬಜ್ಜ (ಉರ್ಫ್ ಶಂಬಪ್ಪಚ್ಚಿ ಉರ್ಫ್ ಶಂಭು ಹೆಗಡೆ) ಬರೋಬ್ಬರಿ ಜೋಡಿ ಕೋಣ ಮಡಿಗಿದ್ದ. ಆಲೆಮನೆಗೆ ಕೋಣ ಕೊಡಯ್ಯಾ ಅಂದರೆ, 'ಯನ್ನ ಮನೆ ಕ್ವಾಣಾ ಬರೀ ಗೊಬ್ಬರ ಹೊಡಿಯಲ್ಲೆ ಮಾತ್ರ ಸರಿ ಮಾರಾಯಾ ಗೋಪಾಲಾ. ಆಲೆಮನಿಗೆ ಅವೆಲ್ಲಾ ತಡೀತ್ವಿಲ್ಯಾ,' ಅಂತ ನಮ್ಮ ಅಜ್ಜ ಗೋಕೃನಾಹೆಹೊ (ಗೋಪಾಲ ಕೃಷ್ಣ ನಾರಾಯಣ ಹೆಗಡೆ, ಹೊನ್ನೆಗದ್ದೆ) ಗೆ ಭೋಂಗು ಬಿಡುತ್ತಿದ್ದ. ಎಷ್ಟು ನಿಜವೋ ಏನೋ. ಸರಿ ಅಂತ ಹೇಳಿ ನಮ್ಮಜ್ಜ ಆಲೆಮನೆಗೇ ಅಂತ ಸ್ಪೆಷಲ್ ಆಗಿ ತಯಾರಾಗಿರುತ್ತಿದ್ದ ಕೋಣ ಹುಡುಕುತ್ತ ಹೋಗುತ್ತಿದ್ದ. (ಗೋಕೃನಾಹೆಹೊ, ಇದು ನಮ್ಮಜ್ಜನ ಮನೆಯ ಎಲ್ಲ ಪಾತ್ರೆ, ಪಗಡೆಗಳ ಮೇಲೆ ಕೆತ್ತಿದಂತಹ ಬರಹ. ಅವರದ್ದು ಅಂತ ಖಾತ್ರಿ ಮಾಡಲಿಕ್ಕೆ)

ಈಗ ಬಿಡಿ. ಎಲ್ಲ ಬದಲಾಗಿ ಹೋಗಿದೆ. ನಮ್ಮ ಅಜ್ಜನಮನೆ ಊರಿನಲ್ಲಿ ಕೊಟ್ಟಿಗೆ ಎಲ್ಲ ಫುಲ್ ಮಾಯವಾಗಿದೆ. ಎಲ್ಲರೂ ಡೇರಿಯಿಂದ ಹಾಲು ತರುವವರೇ. ಅದು ಏನೋ ನಮ್ಮ ಸಣ್ಣ ಮಾವ, ಪ್ರಕಾಶ ಹೆಗಡೆ, ಇನ್ನೂ ಇದ್ದಾನೆ ಮತ್ತು ಅವನಿಗೆ ಹಸು, ಕರು, ಎಲ್ಲ ಭಾಳ ಇಷ್ಟ ಅಂತ ಒಂದೆರೆಡು ಕರೆಯುವ ದನ, ಒಂದು ಎಮ್ಮೆ, ಒಂದು ಕರು ಇದೆ. ೨೦೧೨ ಡಿಸೆಂಬರ್ ನಲ್ಲಿ ನಾನು ಹೋದಾಗ ಒಂದೇ ಕರು ಇತ್ತು. ಅದು ಹೋರಿಯಾಗಿತ್ತೇ, ಹಸುವಾಗಿತ್ತೇ ಅಂತ ನಾನು ಗಮನಿಸಲಿಲ್ಲ. ಯಾಕೆಂದರೆ ಅದನ್ನು ಅಪ್ಪಿ ಮುದ್ದಾಡುವದರಲ್ಲಿಯೇ ಸಮಯ ಹೋಯಿತು. ಅಷ್ಟು ಮುದ್ದಾಗಿತ್ತು ಕರು. ಅದಕ್ಕೆ ಇನ್ನೂ ಕೇವಲ ಮೂರೋ ನಾಲ್ಕೋ ತಿಂಗಳಿರಬಹುದು ಅಷ್ಟೇ. ಹೋರಿಯಾಗಿದ್ದರೆ ಅದು ದೇವರ ಹೋರಿಯಾಗುತ್ತದೆಯೋ ಅಥವಾ ಎತ್ತಾಗಲು ಯೋಗ್ಯವಲ್ಲದಿದ್ದರೂ ಅನಧೀಕೃತ ಎತ್ತಾಗಿ ಪಾಪದ ಫಣಿಯಮ್ಮನ ಜಿಂದಗಿ ಕಳೆಯುತ್ತದೆಯೋ ಅಂತೆಲ್ಲ  ಈಗ ನೆನಪಾಯಿತು.

* ಹಳೆಯ ಬ್ಲಾಗ್ ಪೋಸ್ಟುಗಳಾದ, 'ಗಂಡಾಂತರ ಸೆ ಹೆಂಡಾಂತರ ತಕ್ ', 'ಬಗಲಲ್ಲೇ ಇರೋ ಬ್ರಹ್ಮಚಾರಿ, ದೂರ ಇರೋ ಗಂಡಾಚಾರಿ..ಇಬ್ಬರನ್ನೂ ನಂಬಬಾರದು' ಇವನ್ನು ಓದುತ್ತ, ಪ್ರೀತಿಯ ಹೊನ್ನೆಗದ್ದೆ ಫೋಟೋ ನೋಡುತ್ತ ಇದ್ದಾಗ ತಲೆಗೆ ಬಂದಿದ್ದು ಈ ಬ್ಲಾಗ್. ಅದ್ಭುತ ಹೊನ್ನೆಗದ್ದೆ ಫೋಟೋ ನೋಡಲು ಕೆಳಗಿನ ಲಿಂಕ್ ಇವೆ.

ಹೊನ್ನೆಗದ್ದೆ - ೧ (ಇದರಲ್ಲಿ ಇನ್ನೊಂದ್ನಾಲ್ಕು ಕೊಟ್ಟಿಗೆ ಫೋಟೋಗಳು ಇವೆ)
ಹೊನ್ನೆಗದ್ದೆ - ೨
ಹೊನ್ನೆಗದ್ದೆ - ೩
ಹೊನ್ನೆಗದ್ದೆ - ೪


ಹೊನ್ನೆಗದ್ದೆ, ಸಿರ್ಸಿ. ಮುದ್ದಾದ ಕರುವಿನ ಜೊತೆ ನಾನು :)

8 comments:

sunaath said...

‘ಅನ್ಯೋ ಗಂಡಃ ಗಂಡಾಂತರಮ್’ ಇದು ಶ್ರೀರಂಗರ ಒಂದು ಜೋಕು. ಈಗೆಲ್ಲ ಕಾಲ ಬದಲಾಗಿದೆ. ವಿನಿಮಯದಲ್ಲಿ ಈಗ ಏನೆಲ್ಲ ಸಿಗುತ್ತದೆ!

Mahesh Hegade said...

ಶ್ರೀರಂಗರ ಜೋಕ್ ಮಸ್ತಾಗಿದೆ. ಗೊತ್ತಿರಲಿಲ್ಲ. ತಿಳಿಸಿದ್ದಕ್ಕೆ ಥ್ಯಾಂಕ್ಸ್ ಸರ್!

ವಿ.ರಾ.ಹೆ. said...

ಹೌದು. ಮೊದಲು ಅಜ್ಜನಮನೆಲ್ಲಿ ಎಷ್ಟೆಲ್ಲಾ ದನ ಇದ್ದಿದ್ದ. ನೋಡಿದ್ ನೆನಪಿದ್ದು. ಗೋಕೃನಾಹೆಹೊ LOL... ;)

ಈ ಮಾಡರ್ನ್ ಫಿಸಿಕ್ಸಿಗೂ ಅದ್ವೈತಕ್ಕೂ ಹೆಂಗೆ ಲಿಂಕೋ?!

Shailesh Hegde said...


Fantastic pictures!

Chaali-kana, those cattle & kunnis, and the surrounding nature simply wonderful!!

Vimarshak Jaaldimmi said...


Very good!

You may have to invoke the ಯೆಂಕಟಿ (Naalku Kalina Tamma => NKT => ಯೆಂಕಟಿ) principles to explain the link!!

Pundalik Kolimbattor said...


Great posts!

Keen to know the modern physics links too - working on Higgis Barsons.

Mahesh Hegade said...

@Vikas. Thanks.

Search for Advaita & Quantum Physics on youtube.com. You will find some great videos explaining how modern physics aligns with what was revealed in Upanishads and Vedas. Adi Shankara's commentary made those cryptic explanations even more clearer. What he explained via many metaphors and pure logic today scientists are trying to come up with theories and proofs but still agreeing with a lot of his interpretation and solid logic. Universe as a holographic illusion was probably the best explanation that Shankara derived from Upanishads. Even Ramanujacharya and Madhvacharya's explanations align with different levels of reality and physics. Shankara's metaphysics is considered to be all encompassing similar to Einstein's general theory of relativity which encompasses Newtonian and other elementary physics. Of course Shankar borrowed heavily from Buddhism mainly from Nagarjuna.

After watching some of the videos, if you are interested I can give you a list of many books that I have read and still reading.

ವಿ.ರಾ.ಹೆ. said...

thank you.. I will watch those videos & go to books later.