Thursday, April 02, 2015

My Choice. ಕಂಡಕಂಡಲ್ಲಿ, ಸಿಕ್ಕಸಿಕ್ಕಲ್ಲಿ, ಎಲ್ಲರಿಗೂ ಮಾಡ್ತೇವಿ! ನಾವು ಮಾಡುವವರೇ! My Choice


ದೀಪಿಕಾ ಪಡುಕೋಣೆ 'My Choice' ವೀಡಿಯೊ ಗುಂಗಿನ್ಯಾಗ ಹೊಂಟಿದ್ದೆ. ಒಬ್ಬ ದೋಸ್ತ ಸಿಕ್ಕ. ಏನೋ ಮಾತು ಶುರುವಾಗಿ, ಎಲ್ಲೆಲ್ಲೋ ಹೋಗಿ, ಅವರ ದಾಂಪತ್ಯದ ಬಗ್ಗೆ ಹೊರಳಿತು. ಭಾಳ ಖತರ್ನಾಕ್ ಸುದ್ದಿ ಹೇಳಿಬಿಟ್ಟ ನಮ್ಮ ದೋಸ್ತ. ಅದನ್ನು ಕೇಳಿ, 'ಎಂತಾ ದಂಪತಿ!? ಖರೆ ಭಾಳ ದಂ ಅದ ದಂಪತಿಯೊಳಗ,'  ಅಂತ ಅನ್ನಿಸಿಬಿಡ್ತು.

'ನೋಡಪಾ. ಲಗ್ನ ಆಗೋಕಿಂತ ಮೊದಲು, ನಾನು ಅಕಿ ಲವರ್ ಇದ್ದಾಗ, ನಾನು ನನ್ನ ಗರ್ಲ್ ಫ್ರೆಂಡ್ ಕಂಡಕಂಡಲ್ಲಿ ಮಾಡಿಮುಗಿಸಿಬಿಡ್ತಿದ್ದಿವಿ ನೋಡಪಾ. ಹೊತ್ತು, ಗೊತ್ತು, ಜಾಗ, ಏನೂ ಕೇಳೇಬೇಡ. ಸಿಕ್ಕಸಿಕ್ಕಾಗೊಮ್ಮೆ ಮಾಡಿಬಿಡೋದು. ಮಾಡೇಬಿಡೋದು' ಅಂದ ನಮ್ಮ ದೋಸ್ತ.

'ಹೌದೇ?? ಭಾರಿ ಆತಲಾ! ಖರೇ? ಭಾಳ ಮುಂದುವರೆದವರು ಬಿಡು' ಅಂತ ಅಚ್ಚರಿಪಟ್ಟು, ಮೂಗಿನ ಮೇಲೆ ಬೆರಳು ಮತ್ತೊಂದು ಇಟ್ಟುಕೊಂಡೆ. ಖತರ್ನಾಕ್ ಗಂಡ ಹೆಂಡತಿ ಇರಬೇಕು ಇವರು.

ಕೆಟ್ಟ ಕುತೂಹಲ. ಲಗ್ನದ ಮೊದಲೇ ಸಿಕ್ಕಾಪಟ್ಟೆ ಮಾಡಿದವರು ಮುಂದ ಏನು ಮಾಡಿದರು? ಎಷ್ಟೆಷ್ಟು ಮಾಡಿದರು? ಎಲ್ಲೆಲ್ಲೆ, ಹ್ಯಾಂಗ್ಯಾಂಗ ಮಾಡಿದರು? ಅನ್ನೋದೆಲ್ಲ ತಿಳ್ಕೊಬೇಕು ಅಂತ ಕೆಟ್ಟ ಕುತೂಹಲ. ಅದಕ್ಕೇ, 'ಮುಂದ? ಮುಂದಿಂದು ಹೇಳೋ. ಲಗೂ ಹೇಳೋ!' ಅಂತ ಕೆಟ್ಟ ಗಡಿಬಿಡಿ ಮಾಡಿದೆ.

'ಮುಂದ ಲಗ್ನಾತು. ಮನಿ ಮಾಡಿದಿವಿ. ಆದರೂ ಎಲ್ಲಾ ಹೊಸಾದು ನೋಡು. ಈಗ ಮನಿಯೊಳಗ ಆ ರೂಮು ಈ ರೂಮು ಅಂತಿಲ್ಲ. ಸಂಡಾಸದಿಂದ ಹಿಡಿದು, ಅಡಗಿಮನಿ ತನಕಾ, ಗ್ಯಾರೇಜಿನಿಂದ ಹಿಡಿದು ಬಚ್ಚಲಮನಿ ತನಕಾ, ಕಂಡಕಂಡಲ್ಲಿ ಮಾಡಿದ್ದೇ ಮಾಡಿದ್ದು ನೋಡಪಾ. ಅಕಿಗೆ ನಾನು. ನನಗ ಅಕಿ. ಮಾಡಿದ್ದೇ ಮಾಡಿದ್ದು. ಏನು ಕೇಳ್ತೀ!? ಛೆ! ಛೆ! ಆಗ ಮಾಡಿದಂಗ ಈಗ ಮಾಡು ಅಂದ್ರ ಆಗಂಗಿಲ್ಲ ನೋಡಪಾ!' ಅಂದು ಅವನ, ಅವನ ಹೆಂಡತಿಯ ಗತಕಾಲದ ವೈಭವವನ್ನು ನೆನಪಿಸಿಕೊಂಡ.

'ಮುಂದ???' ಅಂತ ಮುಂದುವರಿಸಲು ಹೇಳಿದೆ.

'ಮುಂದೇನೋ? ಲಗ್ನಾಗಿ ಸ್ವಲ್ಪ ಹಳೇದಾದಂಗ ಬೆಡ್ ರೂಮಿಗೆ ಶಿಫ್ಟ್ ಮಾಡಿದಿವಿ ನೋಡಪಾ. ಆವಾಗ ಕಂಡಕಂಡಲ್ಲಿ ಮಾಡ್ತಿದ್ದಿಲ್ಲ. ಕಂಡಕಂಡಲ್ಲಿ ಮಾಡಲಿಕ್ಕೆ ಇಬ್ಬರದ್ದೂ ಕೆಲಸ. ಒಬ್ಬರಿಗೊಬ್ಬರು ಜಾಸ್ತಿ ಕಾಣ್ತಿದ್ದೇ ಇಲ್ಲ. ಹೊರಗೇ ಊಟ. ಬಂದು ಭೆಟ್ಟಿಯಾಗೋದು ಅಂದ್ರ ಬೆಡ್ರೂಮ್ ಒಳಗ ಬಂದು ಹುಸ್ ಅಂತ ಹಾಸಿಗೆ ಮೇಲೆ ಬಿದ್ದಾಗಲೇ ನೋಡಪಾ. ಅದಕ್ಕೇ ಬೆಡ್ರೂಮಿನಲ್ಲಿ ಮಾತ್ರ. ಆದ್ರ ಹೇಳತೇನಿ ನೋಡು. ಬೆಡ್ರೂಮಿನಾಗ ಕಾಲಿಟ್ಟ ಕೂಡಲೇ ಮಾಡಲಿಕ್ಕೆ ಶುರು ನೋಡಪಾ. ಒಳಗ ಹೊಕ್ಕ ಕೂಡಲೇ, ಒಬ್ಬರನ್ನೊಬ್ಬರು ನೋಡಿದ ಕೂಡಲೇ, ಮುಂಜಾನಿಂದ ನೋಡೇ ಇಲ್ಲ ಅನ್ನೋದನ್ನ ನೆನಿಸಿಕೊಂಡಾಕ್ಷಣ ಮೂಡು ಬಂದುಬಿಡ್ತಿತ್ತು ನೋಡಪಾ!' ಅಂತ ಅಂದ ದೋಸ್ತ.

ಇವನ ಕಥಿ ಏನೋ 'ಅನಂತನ ಆವಾಂತರ' ಸಿನೆಮಾದ ದಿನೇಶನ ಕಥಿ ಇದ್ದಂಗ ಅದ. ಆ ಮೂವಿಯಾಗ ಆವಾ ಆಕ್ಟರ್ ದಿನೇಶ್ ಯಾವಾಗಲೂ ಅದೇ ಮಾಡ್ತಿರ್ತಿದ್ದ. 'ರಮ್ಮೂ, ರಮ್ಮೂ' ಅಂತ ಅವನ ಹೆಂಡತಿಗೆ ಹಗಲು, ರಾತ್ರಿಯನ್ನದೆ ಕಾಡಿ ಕಾಡಿ, ಅಕಿಗೆ ನಿದ್ದಿಯಿಲ್ಲದೆ, ಅಕಿ ನಿದ್ದಿಗಣ್ಣಾಗ ಹೀರೋ ಕಾಶಿನಾಥನ ರೂಮಿಗೆ ಹೋಗಿ ಮಲಕೊಂಡು ಬಿಟ್ಟಿದ್ದಳು. ಕಾಶಿನಾಥ ಅಕಿ ತನ್ನ ಹೆಂಡತಿ ಅಂತ ತಿಳಕೊಂಡು ಅಕಿ ಮ್ಯಾಲೆ ಡೈವ್ ಹೊಡೆದುಬಿಟ್ಟಿದ್ದ. ಯಾವಗರೆ ನೋಡ್ರಿ ಆ ಮೂವಿ. ಇಂಟರ್ನೆಟ್ ಮ್ಯಾಲೆ ಅದ. ಬರೋಬ್ಬರಿ A ಸರ್ಟಿಫಿಕೇಟ್ ಅದನss ಮತ್ತ. ಮೊದಲೇ ಹೇಳೇಬಿಟ್ಟೇನಿ.

'ಮುಂದ????' ಅಂತ ಕೇಳಿದೆ.

'ಮುಂದೇನೋ? ಇಬ್ಬರೂ ಒಬ್ಬರಿಗೆ ಒಬ್ಬರು ಮಾಡಿ ಮಾಡಿ ಗಳಿಸಿದ ಪುಣ್ಯದಿಂದ ಮಕ್ಕಳು ಆದವು. ಬಂಗಾರದಂತಹ ಮಕ್ಕಳು. ಮಕ್ಕಳನ್ನ ನೋಡಿಕೊಳ್ಳಲಿಕ್ಕೆ, ಅದಕ್ಕೆ, ಇದಕ್ಕೆ ಅಂತ ಬ್ಯಾರೆ ಬ್ಯಾರೆ ಮಂದಿ ಬಂದು ಮನಿಯಾಗ ಇರಲಿಕ್ಕೆ ಶುರು ಮಾಡಿದರು. ಮನಿ ಒಳಗ ಪ್ರೈವಸಿ ಕಮ್ಮಿ ಆತು. ಮ್ಯಾಲೆ ನಮಗ ವಯಸ್ಸೂ ಆತು. ಮಾಡೋದು ಕಮ್ಮಿ ಆತು ನೋಡಪಾ!' ಅಂದ ದೋಸ್ತ.

ಮಾಡಿ, ಮಾಡಿ ಗಳಿಸಿದ ಪುಣ್ಯದಿಂದ ಮಕ್ಕಳಾದವು ಅಂತ! ಹ್ಯಾಂ???? ಅದೂ ಬಂಗಾರದಂತ ಮಕ್ಕಳು. ಏನು ಇವಾ ಮತ್ತ ಇವನ ಹೆಂಡತಿ ಎಲ್ಲರಂಗೇ ಮಕ್ಕಳು ಮಾಡಿದರೋ? ಅಥವಾ ಪುಣ್ಯ ಗಿಣ್ಯ ಅಂತಾನ. ಎಲ್ಲರೆ ಪುತ್ರಕಾಮೇಷ್ಟಿ ಯಾಗ ಗೀಗ ಮಾಡಿ ಮಕ್ಕಳು ಪಡೆದುಕೊಂಡ್ರೋ? ಅಂತ ಸಂಶಯ ಬಂತು. ಮುಂದೆ ಕೇಳೋಣ ಇವರ ಕಾರ್ನಾಮೆ ಸುದ್ದಿ.

'ಹಾಂಗಿದ್ರ ಈಗ ಹೆಂಗ? ಯಾವಾಗ, ಎಷ್ಟು ಸರಿ ಮಾಡ್ತೀರಿ ನಿಮ್ಮ ಪುಣ್ಯದ ಕೆಲಸ? ವಾರಕ್ಕೆ ಒಮ್ಮೇನೋ? ಪಕ್ಷಕ್ಕೆ ಒಮ್ಮೇನೋ? ತಿಂಗಳಕ್ಕೋ? ವರ್ಷಕ್ಕೋ? ಶತಮಾನಕ್ಕೋ? What is the frequency? Tell, I say' ಅಂತ ಕೇಳಿದೆ.

'ಏ! ಏನಂತ ತಿಳ್ಕೊಂಡಿ? ದಿನಕ್ಕೆ ಕಮ್ಮಿ ಕಮ್ಮಿ ಅಂದರೂ ಒಂದು ಮೂರು ನಾಲ್ಕು ಸತೆ ಅಂತೂ ಆಗೇ ಹೋಗ್ತದ. ಶನಿವಾರ, ರವಿವಾರ ಮನಿಯಾಗೇ ಹೆಚ್ಚು ಇರೋದಕ್ಕ ಇನ್ನೂ ನಾಲ್ಕು ಬಾರಿ ಜಾಸ್ತಿನೇ ಆಗ್ತದ ನೋಡಪಾ. ವಯಸ್ಸಾತು, ಮಕ್ಕಳಾಗ್ಯಾವ ಅಂತ ಪುಣ್ಯದ ಕೆಲಸ ಮಾಡೋದು ಬಿಡಲಿಕ್ಕೆ ಬರ್ತದೇನೋ??? ಅದೂ ಅಂತಾ ಪುಣ್ಯದ ಕೆಲಸ. ಹಾಂ?' ಅಂತ ಅಂದ ದೋಸ್ತ.

'ಅಲಾ ಇವ್ನ! ಏನು ಗಂಡ, ಹೆಂಡತಿ ಇದ್ದಾರಪಾ ಇವರು!? ಈ ವಯಸ್ಸಿನ್ಯಾಗೂ ದಿನಕ್ಕೆ ಕಮ್ಮಿ ಕಮ್ಮಿ ಅಂದರೂ ನಾಲ್ಕು ಐದು ಸರೆ ಮಾಡಿಬಿಡ್ತಾರ ಅಂದ್ರ ಎಂತಾ ಮಂದಿಪಾ ಇವರು?' ಅಂತ ಸಿಕ್ಕಾಪಟ್ಟೆ ಆಶ್ಚರ್ಯ ಆತು ನನಗ.

'ಅಲ್ಲಾ ಒಂದು ಮಾತು ಹೇಳು. ಈಗೂ ದಿನಕ್ಕೆ ಕಮ್ಮಿ ಕಮ್ಮಿ ಅಂದರೂ ನಾಲ್ಕಾರು ಸರೆ ಮಾಡ್ತೀರಿ ಅಂದ್ಯಲ್ಲಾ. ಎಲ್ಲೆ ಮಾಡ್ತೀರಿ? ಬೆಡ್ರೂಮ ಒಳಗೋ ಅಥವಾ......??' ಅಂತ ಕೇಳಿದೆ.

'ಏ ಈಗ ಬೆಡ್ರೂಮ್ ಗಿಡ್ರೂಮ್ ಏನೂ ಬೇಕಾಗಿಲ್ಲ. ಎಲ್ಲಿ ಆಗ್ತದ ಅಲ್ಲಿ. ಅಕಿ ನನಗ ಎಲ್ಲಿ ಸಿಗ್ತಾಳೋ ಅಥವಾ ನಾ ಅಕಿಗೆ ಎಲ್ಲಿ ಸಿಗ್ತೇನೋ ಅಲ್ಲೇ ಮುದ್ದಾಂ ಮಾಡೇಬಿಡ್ತೇವಿ ನೋಡಪಾ. ಯಾರಿಗೂ ಕೇರ್ ಮಾಡಂಗಿಲ್ಲ. ಅಕಿ ಪಡಸಾಲ್ಯಾಗ ಸಿಕ್ಕಳು ಅಂದ್ರ ಅಲ್ಲೇ ಮಾಡೋದು. ಹೊರಗ ಬಾಲ್ಕನಿ ಒಳಗ ಸಿಕ್ಕರೆ ಅಲ್ಲೇ ಮಾಡೋದು. ಅಡಿಗಿಮನ್ಯಾಗ ಭಾಂಡೆ ತಿಕ್ಕೋದು ನಂದೇ ಕೆಲಸ ನೋಡು. ಭಾಂಡೆ ತಿಕ್ಕೋತ್ತ ತಿಕ್ಕೋತ್ತನೇ ಮಾಡಿಬಿಡ್ತೇನಿ. ಅಕಿ ಅಲ್ಲೇ ಹಿಂದ ಒಲಿ ತಿಕ್ಕೋತ್ತ ಇರ್ತಾಳ ನೋಡು. ಅಕಿನೂ ಮಾಡೇಬಿಡ್ತಾಳ. ಅಕಿ ಕಸಬರಗಿ ಹೊಡಿಲಿಕತ್ತಿದ್ದಳು ಅಂದ್ರ ನಾನು ಇಲ್ಲದ ಕಷ್ಟ ಪಟ್ಟು ನೆಲ ಸಾಪ್ ಮಾಡ್ತಿರ್ತೇನಿ. ಆವಾಗೂ ಮಾಡೇಬಿಡ್ತೇವಿ. ಊಟ ಮಾಡೋವಾಗೂ ಮಾಡ್ತೇವಿ. ಅದೂ ಎಂಜಲ, ಮುಸರಿ ಕೈಯಾಗೇ ಮಾಡ್ತೇವಿ ನೋಡಪಾ. ಮುಸರಿ ಕೈಯಾಗ ಅದನ್ನು ಮಾಡೋದ್ರಾಗ ಬರುವ ಮಜಾನೇ ಬ್ಯಾರೆ. ಹ್ಯಾಂಗೂ ಆಮೇಲೆ ಕೈ ತೊಳೆದುಕೊಳ್ಳುವದು ಇದ್ದೇ ಅದ ನೋಡು. ಮುಸರಿ ಕೈಯಾಗೇ ಮಾಡಿಬಿಟ್ಟೇವಿ ಅಂತ ಒಂದೇ ಕೈ ಬದಲಿ ಎರಡೂ ಕೈ ಸ್ವಚ್ಚಾಗಿ ತೊಳೆದುಕೊಂಡು  ಬಂದು ಬಿಟ್ಟರೆ ಆತು. ಇನ್ನೂ ಭಾಳ ಕಡೆ ಮಾಡ್ತೇವಿ ಬಿಡು. 'ಕಂಡಲ್ಲಿ ಗುಂಡು' ಇದ್ದಂಗ ನಾವು. ಸಿಕ್ಕಲ್ಲಿ ಮಾಡು. ಮಾಡೇಬಿಡು,' ಅಂತ ಭಾಳ ಖುಷಿಯಿಂದ, ಗರ್ವದಿಂದ ಹೇಳಿದ ನಮ್ಮ ದೋಸ್ತ.

'ಅಬ್ಬಾ! ಮತ್ತ ಎಲ್ಲೆಲ್ಲಿ ಮಾಡ್ತೀರಿ? ಫುಲ್ ಲಿಸ್ಟ್ ಹೇಳಿಬಿಡು. ಎಲ್ಲೆಲ್ಲಿ ನಿಮ್ಮ ಪುಣ್ಯದ ಕೆಲಸ ಮಾಡ್ತೀರಿ?' ಅಂತ ನಾ ಕೇಳಿದೆ.

'ಸಾಲಿಗೆ ಮಕ್ಕಳನ್ನು ಕರಕೊಂಡು ಬರಲಿಕ್ಕೆ ಇಬ್ಬರೂ ಹೋಗಿರ್ತೇವಿ ಒಮ್ಮೊಮ್ಮೆ. ಅಕಿ ಮನಿಯಿಂದ ಬಂದ್ರ ನಾ ಸೀದಾ ಆಫೀಸಿನಿಂದ ಬಂದಿರ್ತೇನಿ. ಅಲ್ಲೇ ಸಾಲಿಯೊಳಗs, ನಮ್ಮ ಮಕ್ಕಳ ಟೀಚರ್, ಮಾಸ್ತರ್ ಮುಂದೇ ಮಾಡಿಬಿಡ್ತೇವಿ. ಆದ್ರ ಒಂದು ಮಾತ ಮತ್ತ. ಮೊದಲು ಟೀಚರ್, ಮಾಸ್ತರ್ ಮಂದಿಗೆ ಮಾಡ್ತೇವಿ. ಆಮ್ಯಾಲೆ ನಮಗ ನಾವು ಮಾಡಿಕೊಳ್ಳತೇವಿ. ಮನ್ನೆಯಂತೂ ಅಕಿ ಮತ್ತ ನಾನು ರಸ್ತೆದಾಗ ಟ್ರಾಫಿಕ್ ಸಿಗ್ನಲ್ ಒಳಗ ಭೆಟ್ಟಿಯಾಗಿಬಿಟ್ಟಿವಿ. ಅದು ನಾನು ಕಾರಿನ್ಯಾಗ ಎಲ್ಲಿಂದನೋ ಬರ್ಲಿಕತ್ತಿದ್ದೆ. ನಮ್ಮ ಮನಿಯಾಕಿ ಸ್ಕೂಟಿ ಮ್ಯಾಲೆ ಕೇಕ್ ಮಾಡಲಿಕ್ಕೆ ಅಂತ ತತ್ತಿ, ಕೋಳಿ ತತ್ತಿ ಮಾರಾಯಾ, ಬ್ಯಾರೆ ಯಾವ ತತ್ತಿಯೂ ಅಲ್ಲ ಮತ್ತ, ತೊಗೊಂಡು ಬರ್ಲಿಕತ್ತಿದ್ದಳು. ರೆಡ್ ಲೈಟ್ ಬಿತ್ತು. ಇಬ್ಬರೂ ನಿಂತಿದ್ದಿವಿ. ನಾ ಕಾರಿನ್ಯಾಗ ಕೂತಿದ್ದೆ. ಅಕಿ ಮಸಡಿ ಮುಚ್ಚೋವಂತಹ ಹೆಲ್ಮೆಟ್ ಹಾಕಿಕೊಂಡು ಬಾಜೂಕೇ ಬಂದು ನಿಂತಳು. ಅಕಿ ಹೆಲ್ಮೆಟ್ ತೆಗೆದು 'ಹಾಯ್! ಡಾರ್ಲಿಂಗ್' ಅಂದಳು. ಅಕಿನ ನೋಡಿದ್ದೇ ನನಗೆ ಮೂಡು ಬಂದೇ ಬಿಡ್ತು ನೋಡು. ಅಲ್ಲೇ ಟ್ರಾಫಿಕ್ ಸಿಗ್ನಲ್ ಒಳಗೇ ಮಾಡಿಬಿಟ್ಟೆ ಅಕಿಗೆ. ನಾ ಮಾಡಿದ ಮ್ಯಾಲೆ ಅಕಿ ಹೆಂಗ ಬಿಟ್ಟಾಳು? ಹಾಂ? ಅಕಿನೂ ಮಾಡೇಬಿಟ್ಟಳು. ಮತ್ತ ಮತ್ತ ಒಬ್ಬರಿಗೊಬ್ಬರು ಮಾಡಿಕೊಂಡ್ವಿ. ಟ್ರಾಫಿಕ್ ಸಿಗ್ನಲ್ ಒಳಗ ನಿಂತ ಮಂದಿ ಎಲ್ಲ ಏನೋ ಒಂದು ತರಹ ನೋಡಿದರು. ಆದ್ರ ನಮಗೇನು? Who cares? Hell with the society. ಅಷ್ಟರಾಗ ಗ್ರೀನ್ ಲೈಟ್ ಬಿತ್ತು. ಹ್ಯಾಂಗೂ ಅಕಿಗೆ ಮತ್ತ ನನಗ ಮಾಡಿ ಮುಗಿಸಿಯಾಗಿತ್ತು. ತೃಪ್ತಿಯಾಗಿತ್ತು. ಹೊಂಟು ಬಂದಿವಿ ನೋಡಪಾ,' ಅಂತ ಹೇಳಿಬಿಟ್ಟ.

'ಹ್ಯಾಂ????? ಟ್ರಾಫಿಕ್ ಸಿಗ್ನಲ್ ಒಳಗ, ಎಲ್ಲಾರ ಮುಂದೆನೇ, ಅಷ್ಟು ಲಗೂ ಮಾಡಿಬಿಟ್ಟಿರೀ? ಮತ್ತೆ ಮತ್ತೆ ಮಾಡಿದಿರಿ??? ಖರೇ? ಏನೂ ನಾಚಿಗಿ ಅದು ಇದು ಅನ್ನಿಸಲಿಲ್ಲ???? ಮತ್ತ ನಿಮ್ಮ ಮಕ್ಕಳ ಸಾಲ್ಯಾಗ ಟೀಚರ್, ಮಾಸ್ತರ್ ಮುಂದೂ ಮಾಡಿದಿರಿ? ಅದೂ ಟೀಚರ್ ಮಾಸ್ತರ್ ಮಂದಿಗೆ ಸಹಿತ ಮಾಡಿದಿರಿ ಅಂದಿ. ಏನು ಮಾರಾಯ ಇದು?  ಏನಾಗ್ಯದ ನಿನಗ ಮತ್ತ ನಿನ್ನ ಹೆಂಡತಿಗೆ? ಮಂದಿ ಹಿಡಿದು ಒದಿತಾರ ನೋಡು!' ಅಂತ ಹೇಳಿದೆ.

'ಯಾಕಲೇ ಮಂಗ್ಯಾನಿಕೆ? ಏನು ತಪ್ಪದ ನಾವು ಮಾಡೋದ್ರಾಗ? ಲವ್ ಮಾಡಿ ಲಗ್ನಾ ಆಗೇವಿ. ಮಕ್ಕಳು, ಮರಿ ಮಾಡಿಕೊಂಡು ಚಂದಾಗಿ ಸಂಸಾರ ಮಾಡಿಕೊಂಡು ಹೊಂಟೇವಿ. ನಾವೂ ಒಳ್ಳೆ ಸಂಸ್ಕಾರವಂತ ಮಂದಿ. ಮೊದಲಿಂದ ಮಾಡಿಕೊಂಡು ಬಂದ ಪದ್ಧತಿ ಬಿಡಬಾರದು. ಈಗ ಮೊದಲಿನ ಹಾಂಗ ಲವ್ ಬರ್ಡ್ಸ್ ಇಲ್ಲ ಖರೆ. ಮೊದಲಿನ ಹಾಂಗ ಬೇಕುಬೇಕಾದಷ್ಟು ಮಾಡಲಿಕ್ಕೆ ಟೈಮ್ ಸಿಗೋದಿಲ್ಲ ಅಂತ ಹೇಳಿ ಟೈಮ್ ಸಿಕ್ಕಾಗೆಲ್ಲ ಒಳ್ಳೆ ಪುಣ್ಯದ ಕೆಲಸ ಮಾಡ್ತೇವಿ ಅಂದ್ರ ಏನೇನೋ ಅಂತಿಯಲ್ಲಲೇ!!!!!???? ಒಂದು ಮಾತು ನೆನಪಿಡು ನೀನು......' ಅಂದವನೇ ದೋಸ್ತ ಮಾತು ನಿಲ್ಲಿಸಿದ.

'ಏನಲೇ???' ಅಂತ ಕೇಳಿದೆ.

'ನೋಡಲೇ ನಾವು ಮಾಡೋದು ಭಾಳ ಒಳ್ಳೆ ಕೆಲಸ. ಮಹಾ ಪುಣ್ಯದ ಕೆಲಸ. ಅದರ ಮ್ಯಾಲೆ ಮಾಡಿದಷ್ಟೂ ನಮಗೆ, ಇನ್ನೊಬ್ಬರಿಗೆ ಒಳಿತನ್ನೇ, ಶ್ರೇಯಸ್ಸನ್ನೇ ತಂದು ಕೊಡುವ ಕೆಲಸ. ಈಗಿನ ಮಂದಿ ಹಾಂಗ ಕಂಡಕಂಡಲ್ಲೆ ಕಿಸ್ ಹೊಡೆದೆ, ಕೈ ತುರಿಸಿದಾಗ ಬಿಡಬಾರದ ಜಾಗದಲ್ಲಿ ಕೈ ಇಳಿಸಿಬಿಟ್ಟೆ, ಕೈಹಾಕಿ ಕೆರೆದುಬಿಟ್ಟೆ, ಚುಬುರಿಬಿಟ್ಟೆ, ಪ್ರೀತಿಯಿಂದ ಪರಚಿಬಿಟ್ಟೆ ಇತ್ಯಾದಿ ಅಂತಹ ಲಜ್ಜೆಗೆಟ್ಟ ಕೆಲಸವನ್ನೇನೂ ಮಾಡೋದಿಲ್ಲ ನಾವು. ಗಂಡ ಹೆಂಡತಿ ಒಬ್ಬರಿಗೊಬ್ಬರು ಸಿಕ್ಕಾಗ ಮುದ್ದಾಂ ಮಾಡ್ತೇವಿ. ಹಾಕ್ಕೊಂಡು ಮಾಡ್ತೇವಿ. ಗಿಚ್ಚಾಗಿ ಮಾಡ್ತೇವಿ. ಜಬರ್ದಸ್ತ್ ಮಾಡ್ತೇವಿ. ಆದ್ರ ಈಗಿನ ಮಂದಿ ಹಾಂಗ ಅಸಹ್ಯ ಅಸಹ್ಯ ಕೆಲಸ ಅಂತೂ ಮಾಡೋದಿಲ್ಲ. ತಿಳಿತೇನು?' ಅಂದುಬಿಟ್ಟ ದೋಸ್ತ.

ಹೋಗ್ಗೋ! ದೊಡ್ಡ confusion ಆಗಿಬಿಡ್ತು ಈಗ. ಗಂಡ ಹೆಂಡತಿ ಕಂಡಕಂಡಲ್ಲಿ, ಸಿಕ್ಕಸಿಕ್ಕಲ್ಲಿ ಮಾಡ್ತಾರ ಅಂತಾತು. ಆದ್ರ ಅಸಹ್ಯದ ಕೆಲಸ ಅಲ್ಲ ಅಂತಾತು. ಹಾಂಗಿದ್ದರೆ ಏನು ಕರಾಮತ್ ಮಾಡ್ತಾರ? ಹಾಂ?

'ದೋಸ್ತ ಒಂದು ಮಾತು ಹೇಳಪಾ,' ಅಂತ ಕೇಳಿದೆ.

'ಏನು?' ಅಂತ ಕೇಳಿದ. 

'ನನಗ ನೀವು ಗಂಡ ಹೆಂಡತಿ ಸಿಕ್ಕಾಗೊಮ್ಮೆ ಒಬ್ಬರಿಗೊಬ್ಬರು 'ಏನು' ಮಾಡ್ತಿರಬಹುದು ಅಂತ ಒಂದು ಐಡಿಯಾ ಅದ. ಆದರೂ ನೀವು ಎಲ್ಲಿಯಂದರಲ್ಲಿ, ಸಿಕ್ಕಲ್ಲಿ, ಭಿಡೆಯಿಲ್ಲದೇ, ಏನೂ ಸಂಕೋಚ ಇಲ್ಲದೇ ಮಾಡ್ತೀರಿ ಅಂತ ಅಂದ ಮ್ಯಾಲೆ ಒಂದು ಡೌಟ್ ಬಂದದ. ನೀನು ನಿನ್ನ ಹೆಂಡತಿ ಭೆಟ್ಟಿಯಾದಾಗೊಮ್ಮೆ ಏನು ಮಾಡ್ತೀರಿ?? ಸ್ವಲ್ಪ ಹೇಳಲಾ??' ಅಂತ ಕೇಳಿದೆ.

'ಅಕಿ ನಾನು ಭೆಟ್ಟಿಯಾದಾಗೊಮ್ಮೆ, ಕೈಜೋಡಿಸಿ, ಬಾಯಿ ತುಂಬಾ, ಒಬ್ಬರಿಗೊಬ್ಬರು, ಹಾರ್ದಿಕವಾಗಿ ನಮಸ್ಕಾರ ಮಾಡ್ತೇವಿ. ಒಮ್ಮೊಮ್ಮೆ ಒಂದೇ position ಒಳಗ ಮಾಡಿ ಮಾಡಿ ಸಾಕಾಗಿರ್ತದ ಅಂತ ಹೇಳಿ ನಮಸ್ತೆ ಮಾಡಿಬಿಡ್ತೇವಿ. ಆ position ಸಹಿತ ಬ್ಯಾಸರ ಆತು ಅಂದ್ರ ಹಾಪ್ ನಮಸ್ಕಾರ ಮಾಡಿಬಿಡ್ತೇವಿ' ಅಂದುಬಿಟ್ಟ ನಮ್ಮ ದೋಸ್ತ.

'ಹೋಗ್ಗೋ! ಏನು ಗಂಡ ಹೆಂಡತಿ ಇದ್ದೀರಿ ಮಾರಾಯಾ! ಒಬ್ಬರಿಗೊಬ್ಬರು ನಮಸ್ಕಾರ, ನಮಸ್ತೆ ಮಾಡಿಕೊಳ್ಳತೀರೇ?????? ಅದೂ ಕಂಡಕಂಡಾಗೊಮ್ಮೆ????? ಸಿಕ್ಕಾಗೊಮ್ಮೆ???? ಏನಲೇ ಇದು ವಿಚಿತ್ರ?????? ಹುಚ್ಚ ಹುಚ್ಚ ಅಂತಾರ' ಅಂದೆ.

'ಗೊತ್ತದನೋ! ನಾವೆಲ್ಲಾ ಹಳೇ ಕಾಲದ ಮಂದಿ. ಸಿಕ್ಕಾಗೊಮ್ಮೆ ಇನ್ನೊಬ್ಬರಿಗೆ ನಮಸ್ಕರಿಸಿ, ಅವರಲ್ಲಿರುವ ಆತ್ಮಕ್ಕೆ ನಮ್ಮಲ್ಲಿರುವ ಆತ್ಮದಿಂದ ವಂದನೆ ಅನ್ನುವ ಭಾವನೆ ನಮಸ್ಕಾರದ ಮೂಲಕ ಮತ್ತೆ ಮತ್ತೆ ವ್ಯಕ್ತಪಡಿಸಿ, ಆತ್ಮ ಆತ್ಮಗಳ ಮಿಲನ ಮಾಡಿಸುವ ಪ್ರಯತ್ನದಲ್ಲಿ ನಾವು ಇರ್ತೇವಿ. ಬ್ಯಾರೆ ಮಂದಿ ಕಂಡಕಂಡಲ್ಲಿ ಕಿಸ್ ಹೊಡಕೋತ್ತ, ಅವಕಾಶ ಸಿಕ್ಕರೆ ಎಲ್ಲೆಲ್ಲೊ ಕೈ ಬಿಟ್ಟುಗೋತ್ತ, ಬೇಕಾದರೆ ಇನ್ನೂ ಮುಂದುವರಿಯುತ್ತ ಇರ್ತಾರ. ಈಗಿನವರಿಗೆ ಅದೇ ಚಂದ. ಈಗಿನವರು ಅಕಸ್ಮಾತ ನಮಸ್ಕಾರ, ಹಾಪ್ ನಮಸ್ಕಾರ, ನಮಸ್ತೆ ಏನೇ ಮಾಡಿದರೂ ಕಾಟಾಚಾರಕ್ಕೆ ಮಾಡಿ ಮುಗಿಸಿಬಿಡುವಂತಹದು. ಆದ್ರ ಒಂದು ವಿಷಯ ಎಲ್ಲರೂ ತಿಳಿದುಕೊಳ್ಳಲೇಬೇಕು. ಒಂದು ಸಂದೇಶ ಎಲ್ಲರೂ ಕೇಳಬೇಕು. ಎಲ್ಲರೂ ನಮಸ್ಕಾರ ಮಾಡ್ರೋ. ಕಂಡಕಂಡವರಿಗೆ, ಕಂಡಕಂಡಲ್ಲಿ ನಮಸ್ಕಾರ ಮಾಡ್ರೋ. ನಮಸ್ತೆ ಅನ್ನಿರೋ. ಆವಾಗ ನೋಡ್ರೀ ಇಡೀ ಸಮಾಜ ಹೆಂಗ ಬದಲಾಗಿಹೋಗ್ತದ ಅಂತ. ನಾನು ನನ್ನ ಹೆಂಡತಿ ಲವರ್ ಇದ್ದ ಕಾಲದಿಂದಲೂ ಮಾಡಿಕೊಂಡು, ಪಾಲಿಸಿಕೊಂಡು ಬಂದ ಒಪ್ಪಂದ, ಕರಾರು ಅಂತ ಏನಾದರೂ ಇದ್ದರೇ ಇದೇ ಒಂದು ನೋಡಪಾ. ಸಿಕ್ಕಾಗೊಮ್ಮೆ, ಕಂಡಾಗೊಮ್ಮೆ, ಮಾತಿಗೊಮ್ಮೆ ಮಾಡಿಬಿಡೋದು. ಅದೇ ನಮಸ್ಕಾರ ಮಾಡೋದು ಅಂತ,' ಅಂದ ದೋಸ್ತ. ದೊಡ್ಡ ಸಾಂಸ್ಕೃತಿಕ ಬಾಂಬ್ ಹಾಕಿಬಿಟ್ಟ. ನಮಸ್ತೆ ಬಾಂಬ್. ನಮಸ್ಕಾರದ ಮೆಣಸ್ಕಾರ. ಘಾಟೋ ಘಾಟು!

'ಯಪ್ಪಾ! ಉದ್ದೇಶ ಏನೋ ಭಾಳ ಛಲೋ ಅದ. ಆದ್ರ ಭಾಳ ವಿಚಿತ್ರ ಅನ್ನಿಸ್ತದ ನೋಡಪಾ. ನೀವು ಗಂಡ ಹೆಂಡತಿ ಇಬ್ಬರೇ ಇದ್ದಾಗ ನಮಸ್ಕಾರ ಆದರೂ ಮಾಡಿಕೊಳ್ಳಿರೀ, ನಮಸ್ತೆ ಅಂತಾರೂ ಹೇಳಿಕೊಳ್ಳಿರಿ. ಅದು ಓಕೆ. ಆದ್ರ ಎಲ್ಲಾರ ಮುಂದ, ಸಾಲಿ ಮಾಸ್ತರ್ ಟೀಚರ್ ಮುಂದೆ, ಟ್ರಾಫಿಕ್ ಸಿಗ್ನಲ್ ಒಳಗ, ಎಲ್ಲಾ ಕಡೆ ಒಬ್ಬರಿಗೊಬ್ಬರು ನಮಸ್ಕಾರ, ನಮಸ್ತೆ, ಹಾಪ್ ನಮಸ್ಕಾರ ಅನ್ನೋದು ಸರಿ ಅನ್ನಿಸೋದಿಲ್ಲ ನೋಡಪಾ. ನಾ ಒಪ್ಪೋದಿಲ್ಲ. ನಮ್ಮ ಸಮಾಜನೂ ಒಪ್ಪೋದಿಲ್ಲ,' ಅಂತ ಹೇಳಿ ಅಲ್ಲಾಡಿಸಿದೆ. ತಲಿ ಆಕಡೆ ಈಕಡೆ ಅಲ್ಲಾಡಿಸಿದೆ ಅಂತ ಅಷ್ಟೇ. ಅಲ್ಲಾಡಿಸೋದು ಅಂದ್ರ ಹುಚ್ಚ ಮಂದಿಗೆ ಏನೇನೋ ವಿಚಾರ ಬರ್ತಾವ.

'ಬ್ಯಾಡ ಬಿಡಲೇ. ಯಾರೂ ಒಪ್ಪೋದು ಬ್ಯಾಡ. ನಾವು ಯಾರಿಗೂ ಕೇರ್ ಮಾಡೋದಿಲ್ಲ. We don't care for anyone. We will do what we like to do' ಅಂದುಬಿಟ್ಟ. ದೀಪಿಕಾ ಪಡುಕೋಣೆ ಕಿವಿಯಾಗ ಬೆಟ್ಟು ಹೆಟ್ಟಿಕೊಂಡು, ಚಿಟಿ ಚಿಟಿ ಅಂತ ಚಿಟ್ಟನೆ ಚೀರಿದಂಗಾತು.

'ಯಾಕ??? ಹಾಂಗ್ಯಾಕ??????? ಯಾಕ ಅಷ್ಟು ಕೆಟ್ಟ ಹಟಮಾರಿತನ?????' ಅಂತ ಕೇಳಿದೆ.

'My Choice. My Choice. My life, my choice' ಅಂತ ಹೇಳಿದವನೇ ನನಗೂ ಒಂದು ನಮಸ್ಕಾರ ಮ್ಯಾಲಿಂದ ಬೋನಸ್ ನಮಸ್ತೆ ಮಾಡಿ ಹೋಗಿಬಿಟ್ಟ.

'ಓಹೋ! ಇದೂ My Choice ಗಿರಾಕಿ. ಒಳ್ಳೇದೇ ಬಿಡ್ರೀ. ಒಂದು ಮಾತು ಖರೆ. My Choice ಅಂತ ಹೇಳಿ ನಮಸ್ಕಾರ ಮಾಡವರು, ನಮಸ್ತೆ ಮಾಡವರು, ದಿನಾ ಸ್ವಲ್ಪ ಪೂಜೆ ಪುನಸ್ಕಾರ ಮಾಡವರು, ಧ್ಯಾನ ಮಾಡವರು, ಹಾಳುವರಿ ಹರಟೆ ಬದಲಿಗೆ ರಾಮ ನಾಮ ಜಪ ಮಾಡುವವರು, ಹೀಗೆ ಸಾತ್ವಿಕ ಟೈಪಿನ ಮಂದಿ ಎಲ್ಲ ಕಡೆ ತಯಾರಾಗಿ, ಅಂತಹ ಪುಣ್ಯದ ಕೆಲಸ ಕಂಡಕಂಡಲ್ಲಿ ಮಾಡಿ, ಯಾರಾದರೂ ಆಕ್ಷೇಪಿಸಿದರೆ ಅದಕ್ಕೆ My Choice ಅಂತ ಮಾರಿ ಮುರಿದು ಹೋಗುವಂತಹ ಮೂಹ್ ತೋಡ್ ಜವಾಬ್ ಕೊಡಲಿಕ್ಕೆ ಸಾಧ್ಯವಾದರೆ My Choice ಮಾಡಿದ್ದು ಸಾರ್ಥಕ, ನೋಡಿದ್ದೂ ಸಾರ್ಥಕ, ಎಲ್ಲವೂ ಸಾರ್ಥಕ' ಅಂತ ಅನ್ನಿಸಿತು.

ವಿ. ಸೂ: ಮಾಡುತ್ತಿರುವದು ನಮಸ್ಕಾರ ಅಂತ ತಿಳಿಯಿತು ತಾನೇ? ಈಗ ಮೇಲಿಂದ ಮತ್ತೊಮ್ಮೆ ಓದಿ. ಈಗ ಬರುವ ಮಜಾ, ನಗುವೇ ಬೇರೆ! ;)

ಗಂಡ ಹೆಂಡತಿ ನಮಸ್ತೆ. ಬೇರೆಯವರಿಗೆ ಮಾಡೋದು ಅಷ್ಟೇ ಅಲ್ಲ. ಒಬ್ಬರಿಗೊಬ್ಬರೂ ಸಹಿತ ಮಾಡಿಕೊಳ್ಳಬೇಕು!

5 comments:

sunaath said...

ನಮಸ್ಕಾರ, ಯಪ್ಪಾ! ನಮಸ್ತೇ ಯಪ್ಪಾ!! ಇನ್ನ ನೀ ಕಂಡಾಗ ಒಮ್ಮೆ, ಕಂಡಲ್ಲೊಮ್ಮೆ ನಾನೂ ನಿನಗ ಮಾಡೇ ಬಿಡ್ತೇನಿ; ನೀನೂ ನನಗ ಮಾಡೇ ಬಿಡು; ನಮಸ್ಕಾರಾ ಮತ್ತ!
(ಕಡೀ ಘಳಿಗೀ ತನಕಾ ನಗಿಸಿಕೋತನ, ಸಸ್ಪೆನ್ಸ್ ಇಟ್ಟುಕೊಂಡು ಹೋದ ಲೇಖನಕ್ಕಾಗಿ ಅಭಿನಂದನೆಗಳು.)

Mahesh Hegade said...

ನಮಸ್ಕಾರ ಸುನಾಥ್ ಸರ್!

ಭಾಳ ಧನ್ಯವಾದ!

ನಮಸ್ತೆ! :)

Augustine Minnimani said...


Very funny!

srini k said...

so sweet very funny

Mahesh Hegade said...

Thank you Srini K.