Thursday, May 07, 2015

'ತ'ರಿಗಮಪದನಿ

ಸರಿಗಮಪದನಿ ಅಂತ ಸಪ್ತ ಸ್ವರ ಎಲ್ಲರಿಗೂ ಗೊತ್ತಿರ್ತದ. ಆದ್ರ 'ತ'ರಿಗಮಪದನಿ ಅಂದ್ರ ಗೊತ್ತದ ಏನು? ಗೊತ್ತಿಲ್ಲ ಅಂದ್ರ ನಿಮ್ಮ ಚಹಾಕ್ಕ ಸ್ವಲ್ಪ ಜಾಸ್ತಿ ತಕ್ಕರಿ (ಸಕ್ಕರಿ) ಹಾಕ್ಕೊಂಡು ಕುಡೀರಿ. ಅಂದ್ರ ಗೊತ್ತಾಗಬಹದು.

ಮೊನ್ನೆ ಪ್ಯಾಟ್ಯಾಗ ಹಳೆ ದೋಸ್ತ ಸುನ್ಯಾ ಕಂಡ. ಭಾಳ ವರ್ಷಾಗಿ ಹೋಗಿತ್ತು ಅವನ್ನ ನೋಡಿ. ಮರ್ತೇ ಹೋಗಿತ್ತು. ಅದರೂ ಹೆಂಗೋ ನೆನಪಾತು.

'ಲೇ, ಸುನ್ಯಾ, ಸುನ್ಯಾ,' ಅಂತ ಕರೆದೆ. ಆವಾ ನಿಂತು ನೋಡಿದ. ನನ್ನ ಗುರ್ತು ಹಿಡಿದು ಈ ಕಡೆ ಬಂದ. ಈ ಕಡೆ ಬಂದ ಮೇಲೆ ಅವಂಗ ಏನೋ ನೆನಪಾತು ಅಂತ ಕಾಣಿಸ್ತದ. ಮುಂದ ಹೊಂಟಿದ್ದ ಯಾರೋ ಒಬ್ಬಾಕಿ ಲೇಡಿನ ನೋಡಿ, 'ಏ ಒತ್ತಲಾ! ಏ ಒತ್ತಲಾ!' ಅಂತ ಒದರಲಿಕ್ಕೆ ಶುರು ಮಾಡಿಬಿಟ್ಟ. ಹೋಗ್ಗೋ! ಶಿವನೇ ಶಂಭುಲಿಂಗ! ಹುಚ್ಚ ಮಂಗ್ಯಾನಿಕೆ. ನನಗ ಭಾಳ ಘಾಬ್ರೀ ಆತು. ಹೆದರಿಕಿ ಸಹಿತ ಆತು. ನಡು ಪ್ಯಾಟ್ಯಾಗ ಈ ಹಾಪಾ ಯಾರನ್ನೋ, ಅದೂ ಯಾವದೋ ಹೆಂಗಸನ್ನು ನೋಡಿ, 'ಒತ್ತಲಾ? ಒತ್ತಲಾ?' ಅಂತ ಒದರ್ಲಿಕತ್ತಾನ. ಯಾವಾಕಿಗೆ ಹೋಗಿ ಏನು ಒತ್ತವ ಇದ್ದಾನೋ ಏನೋ. ಆದ್ರ ನಮ್ಮ ಸುನ್ಯಾಗ ಮಾತ್ರ ಖಬರೇ ಇಲ್ಲ. ಮತ್ತ ಮತ್ತ, 'ಏ ಒತ್ತಲಾ! ಏ ಒತ್ತಲಾ!' ಅಂತ ಒದರೇ ಒದರಿದ. ಆವಾಗ ಆತು ಅನಾಹುತ. ಆತು ನಾ ತಿಳಕೊಂಡೆ.

ಯಾರೋ ಒಬ್ಬಾಕಿ ಘಟವಾಣಿ ತರಹದ ಹೆಂಗಸು, ಧಪ್ಪ ಧಪ್ಪ ಅಂತ ಹೆಜ್ಜಿ ಹಾಕ್ಕೋತ್ತ, ಲೇಡಿ ಹೊನಗ್ಯಾ ಗತೆ ನಮ್ಮ ಕಡೆ ಬಂದಳು. ಎಲ್ಲೆ ಕಾಲಾಗಿನ ಚಪ್ಪಲ್ ಕೈಯಾಗ ತೊಗೊಂಡು ನಮಗಿಬ್ಬರಿಗೂ ಹಾಕ್ತಾಳೇನೋ ಅಂತ ಹೆದರಿಕಿ ಆತು. ಅಕಿ ಚಪ್ಪಲ್ ಏನೂ ಕೈಯಾಗ ತೆಗೆದುಕೊಳ್ಳಲಿಲ್ಲ. ಅದೇ ದೊಡ್ಡದು. Thank God!

ಆ ಹೆಣ್ಣಮಗಳು ನಮ್ಮ ಹತ್ತಿರ ಬಂದಾಕಿನೇ, 'ಏನ್ರೀ??? ಹಾಂ? ಏನ್ರೀ??? ಏನು ಆ ಪರಿ ಒದರಲಿಕತ್ತೀರಿ?' ಅಂತ ಸುನ್ಯಾನ ಕೇಳಿದಳು.

'ಏ, ಇಕಿನ, ನಮ್ಮ ಗೆಳೆಯಾ ಸಿಕ್ಕಾನ. ನಾ ತಡೆದು ಬರ್ತೇನಿ. ನೀ ಹೋಗಿ ಸ್ವಲ್ಪ 'ತಕ್ಕರಿ' ತೊಗೋ. ಹಾಂ?' ಅಂತ ಹೇಳಿ ನಮ್ಮ ಸುನ್ಯಾ ಅಕಿ ಕೈಯಾಗ ಒಂದು ಚೀಲಾ ಕೊಟ್ಟ. ಕಿರಾಣಿ ಚೀಲಾ ಅಷ್ಟೇ. ಮಹಾರಾಣಿ ಕೈಯಾಗ ಕಿರಾಣಿ ಚೀಲಾ.

'ಅಯ್ಯ, ಇಷ್ಟೇನೇ? ಇಷ್ಟಕ್ಕೆ ಒತ್ತಲಾ, ಒತ್ತಲಾ ಅಂತ ಯಾವ ಪರಿ ಚೀರಾಣ, ಒದರಾಣ?! ಏನ್ರೀ ನೀವು!?' ಅಂತ ಹೇಳಿಕೋತ್ತ ಆ ಲೇಡಿ ಹೋತು. ಅಲೀ ಇವನೌನ್!

'ಅಲ್ಲಲೇ ಸುನ್ಯಾ, ಯಾರೋ ಒಬ್ಬಾಕಿನ ನೋಡಿ, 'ಏ ಒತ್ತಲಾ? ಏ ಒತ್ತಲಾ?' ಅಂದ್ರ ಒತ್ತಲೇನು, ಅದುಮಲೇನು ಅಂತ ಕರೆದಿ. ನಾ ಎಲ್ಲೋ ಮಷ್ಕಿರಿ ಮಾಡ್ಲಿಕತ್ತಿರಬೇಕು ಅಂತ ಘಾಬ್ರಿಯಾದೆ. ನೋಡಿದರೆ ಅಕಿ ಬಂದಳು. ಅಕಿ ಕಡೆ ಏನೋ ಚೀಲಾ ಕೊಟ್ಟು, ಅದೇನೋ ತಕ್ಕರಿ ತೊಗೊಂಡು ಬಾ ಅಂದುಬಿಟ್ಟಿ. ಏನಲೇ ಮಾಮಲಾ??? ಏನು ಒತ್ತೋದು? ಏನು ತಕ್ಕರಿ? ಹಾಂ?' ಅಂತ ಕೇಳಿದೆ.

'ಅಕಿ ಯಾರು ಅಂತ ಮಾಡೀ???? ಅಕಿನೇ ಒತ್ತಲಾ! ಅಕಿ ಹೆಸರೇ ಒತ್ತಲಾ! ನಿನಗ ಗುರ್ತಿಲ್ಲಾ???' ಅಂದುಬಿಟ್ಟ ಸುನ್ಯಾ. ಹೋಗ್ಗೋ!

ಹಾಂ! ಇದೆಂತಾ ಹೆಸರು ಶಿವನೇ! ಒತ್ತಲಾ! ಯಪ್ಪಾ! ಅಕಿ ಕಡೆ ಹೋಗಿ, 'ಹಾಯ್, ಒತ್ತಲಾ!' ಅಂತ ಹ್ಯಾಂಗ ಅಂದ್ರೂ ಕೊನೆಯಲ್ಲಿ ಒಂದು ಪ್ರಶ್ನಾರ್ಥಕ ಚಿನ್ನೆ ಬಂದು , 'ನಿಮ್ಮೌನ್, ನಿಂದು ಒತ್ತಲೇನು???' ಅಂತನೇ ಅನ್ನಿಸಿಬಿಡ್ತದೋ ಏನೋ!

'ಯಾರಲೇ ಅಕಿ ಸುನ್ಯಾ????' ಅಂತ ಕೇಳಿದೆ.

'ರಾಮಾ, ರಾಮಾ, ಏನು ಹಾಪ್ ಇದ್ದಿ ಮಾರಾಯಾ. ಅಕಿ ನನ್ನ ಹೆಂಡತಿ ಒತ್ತಲಾ. ಒತ್ತಲಾ. ಈಗರೆ ತಿಳೀತಾ????' ಅಂತ ಕೇಳಿದ ಸುನ್ಯಾ.

ಹೋಗ್ಗೋ! ಇವನಾಪನಾ! ಭಾಳ ವರ್ಷ ಆಗಿತ್ತು ನೋಡ್ರೀ ಇವನ್ನ ಭೆಟ್ಟಿಯಾಗಿ. ಈ ಹುಚ್ಚ ಸೂಳಿಮಗ 'ತ'ರಿಗಮಪದನಿ  ರೀತಿಯಲ್ಲಿ ಮಾತಾಡೋದು ನನಗ ಮರತೇ ಹೋಗಿತ್ತು. 'ಸ' ಅನ್ನೋ ಕಡೆಯಲ್ಲಾ 'ತ' ಅನ್ಕೋತ್ತ. ಹುಚ್ಚ ಮಂಗ್ಯಾನಿಕೆ ಅವನ ಹೆಂಡತಿ ಹೆಸರು ವತ್ಸಲಾ ಅನ್ನೋದನ್ನ ಒತ್ತಲಾ, ವತ್ತಲಾ ಅನ್ಲಿಕತ್ತಾನ. ಫುಲ್ ತಲಿ ಕೆಡಿಸಿಬಿಟ್ಟ. ಒತ್ತಲಾಗ ತಕ್ಕರಿ ತೊಗೊಂಡು ಬಾ ಅಂದ್ರ ವತ್ಸಲಾಗ ಸಕ್ಕರಿ ತೊಗೊಂಡು ಬಾ ಅಂತ ಅರ್ಥ.

ಈ 'ತ'ರಿಗಮಪದನಿ ಸಂಗೀತ ವಿದ್ವಾನ ಸುನ್ಯಾನ ಒಂದು ಭಾಳ ಮುಖ್ಯ ಪ್ರಶ್ನೆ ಕೇಳಬೇಕು ಅಂತ ಅನ್ನಿಸ್ತು. 'ಅಲ್ಲಲೇ ಸುನ್ಯಾ,  ನನ್ನ ಹೆಸರು ಮಂಗೇಶ. ನನಗ ಮಂಗ್ಯಾ, ಮಂಗ್ಯಾ ಅಂತಾರ. ನಿನ್ನ ಹೆಸರು ಸುನೀಲ. ನಿಂಗ ಧಾರವಾಡ ಮಂದಿ ಲೇ ಹಚ್ಚಿ ಮಾತಾಡಬೇಕು ಅಂತ ಅಂದ್ರ ಏನಂತ ಅನಬೇಕು???? ಹಾಂ????' ಅಂತ ಕೇಳಬೇಕು ಅನ್ನಿಸ್ತು.

ಈ 'ತ'ರಿಗಮಪದನಿ ಆದಮೀ 'ಸು'ನ್ಯಾ ಅನಲಿಕ್ಕೆ ಏನಂತಾನೋ ಏನೋ? ಅದನ್ನ ಕೇಳಿದ ಸುತ್ತಮುತ್ತಲಿನ ಮಂದಿ ಚಪ್ಪಲಿ ಕೈಯಾಗ ತೊಗೊಂಡ್ರ ಕಷ್ಟ, ಅಂತ ವಿಚಾರ ಮಾಡಿ, 'ನಮತ್ಕಾರ, ನಮತ್ಕಾರ, ಮತ್ತ ತಿಗೋಣ,' ಅಂತ ಹೇಳಿ ಬಂದೆ.

6 comments:

sunaath said...

ಯಪ್ಪಾ ಮಹೇಶಾ,
ಈ ‘ತ’ಗಲು-ಬದಲು ಭಾಷಾ ಭಾರೀ ಖತರನಾಕ ಅದ ಬಿಡಪಾ! ನನ್ನ ಹೆಸರೂ ‘ಸುನಾ(ಥ)’. ನಿನ್ನ ಬಾಯಾಗ ನಾ ಏನಾಗ್ತೇನೊ, ಯಪ್ಪಾ!

Mahesh Hegade said...

ಹಾ!ಹಾ! LOL....ಸುನಾಥ್ ಸರ್! ಸುನ್ಯಾನ ಕಡೆ ಸಿಗಬ್ಯಾಡ್ರೀ ಅಷ್ಟೇ!

Vimarshak Jaaldimmi said...


Funny!

Naayi-kunni => Naay-.unni!!

Shashikumar said...

mast aiti bidri....:)

Shashikumar said...

chalo aatu bidri....:)

Mahesh Hegade said...

Thank you, Shashikumar.