Thursday, June 25, 2015

ನರಹರಿ ಆಪರೇಷನ್ : ೧೯೭೫ ರ ಎಮರ್ಜೆನ್ಸಿಯ ಒಂದು ಅತಿರೇಕ

೧೯೭೫ ರಲ್ಲಿ ಇಂದಿರಾ ಗಾಂಧಿ ಎಮರ್ಜೆನ್ಸಿ ಜಾರಿಗೊಳಿಸಿದ್ದು ಎಲ್ಲರಿಗೂ ಗೊತ್ತು. ಆ ಸಮಯದಲ್ಲಿ ಭಾರತದ ದೊಡ್ಡ ಸಮಸ್ಯೆ ಅಂದರೆ ಜನಸಂಖ್ಯಾ ಸ್ಪೋಟ. ಅದರ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡವ ಇಂದಿರಾ ಗಾಂಧಿಯ ಮಗ ಸಂಜಯ ಗಾಂಧಿ. ಹೇಗಾದರೂ ಮಾಡಿ ಜನಸಂಖ್ಯೆ ಕಡಿಮೆ ಮಾಡಲೇಬೇಕು. ಏನು ಮಾಡಬೇಕು? ಅಂತ ವಿಚಾರ ಮಾಡಿದ. ಅವನಿಗೇ ಆ ಖತರ್ನಾಕ್ ವಿಚಾರ ಬಂತೋ ಅಥವಾ ಅವನ ಸುತ್ತಲಿದ್ದ ಮನೆಹಾಳ ಜನರಲ್ಲಿ ಯಾರಾದರೂ ಆ ಐಡಿಯಾ ಕೊಟ್ಟರೋ ಗೊತ್ತಿಲ್ಲ. ನಿರ್ಧರಿಸಿಯೇ ಬಿಟ್ಟ. ನರಮಾನವರೆಲ್ಲರ ನರ ಕಟ್ ಮಾಡಿ ನರಸತ್ತ ಮಾನವರನ್ನಾಗಿ ಮಾಡಿಬಿಡಬೇಕು. ಎಲ್ಲರಿಗೂ ನರಹರಿ ಆಪರೇಷನ್ ಮಾಡಿಸಿಯೇಬಿಡಬೇಕು. ಜನರನ್ನು ಸಂತಾನಹರಣ ಚಿಕಿತ್ಸೆಗೆ ಒಳಪಡಿಸಬೇಕು. ತಿಂಗಳಿಗೆ ಇಷ್ಟು ಅಂತ ಸಂತಾನಹರಣ ಚಿಕಿತ್ಸೆ ಆಗಲೇಬೇಕು. ಅಷ್ಟಾದರೆ ಸಾಕು. ಆಸ್ಥಾನದ ಸಂಖ್ಯಾಶಾಸ್ತ್ರಜ್ಞರು ಪೊಕಳೆ ಹೊಡೆದಂತೆ ಮುಂದಿನ ತಲೆಮಾರುಗಳಲ್ಲಿ ಜನಸಂಖೆ ಕಮ್ಮಿಯಾಗುತ್ತಲೇ ಹೋಗುತ್ತದೆ. ಇದು ಅವನ ದೊಡ್ಡ ತಲೆಯಿಂದ ಹೊರಹೊಮ್ಮಿದ ಬ್ರಿಲಿಯಂಟ್ ಐಡಿಯಾ!

ಇಂತದೊಂದು ಐಡಿಯಾ ಬಂದಿದ್ದೇ ಬಂದಿದ್ದು, ಎಲ್ಲ ಅಧಿಕಾರಿಗಳಿಗೆ ಬರೋಬ್ಬರಿ ಸಂದೇಶ ಹೋಯಿತು. ಹೇಳಿ ಕೇಳಿ ಎಮರ್ಜೆನ್ಸಿ ಸಮಯ. ಕಾಯ್ದೆ ಕಾನೂನು ಎಲ್ಲ ಮೂಲೆ ಸೇರಿದ್ದವು. ಮುದ್ದಿನ ಕಿರಿಯ ಮಗ ಸಂಜಯ ಗಾಂಧಿಯಂತೂ ಅಮ್ಮ ಇಂದಿರಾ ಗಾಂಧಿಯ ದೊಡ್ಡ ಬಲಹೀನತೆ. ಅವನು ಏನೇ ಮಾಡಿದರೂ ಆಕೆ ಸುಮ್ಮನಿರುತ್ತಿದ್ದಳು. ಮತ್ತೆ ಶುದ್ದ ಮೊಂಡನೀತ. ಅಮ್ಮ ಹೇಳಿದರೆ ಕೇಳೋ ಪೈಕಿಯೂ ಅಲ್ಲ. 'ಸರಿ, ಏನಾದರೂ ಮಾಡಿಕೊಂಡು, ಹಾಳಾಗಿ ಹೋಗು,' ಅಂತ ಎಮರ್ಜೆನ್ಸಿಯ ಇತರೆ ತಲೆನೋವುಗಳನ್ನು ವಿಚಾರಿಸಿಕೊಳ್ಳಲು ಹೋದರು ಅವರು. ಈಕಡೆ ಸಂಜಯ ಗಾಂಧಿಯ ಅಂಧಾದುಂಧಿ ಶುರುವಾಯಿತು.

ಎಲ್ಲ ಜಿಲ್ಲೆಗಳಿಗೆ ಖಡಕ್ ಕೋಟಾ. ಮತ್ತೆ ಪದೇ ಪದೇ ಪ್ರಗತಿಯ ಪರಿಶೀಲನೆ. ಹಾಕಿದ್ದ ಕೋಟಾಕ್ಕೆ ತಕ್ಕಂತೆ ಸಂತಾನಹರಣ ಚಿಕಿತ್ಸೆಗಳು ಆದವೋ, ಭಾಳ ಒಳ್ಳೆಯದು. ಎಲ್ಲರಿಗೂ ಇನಾಮು ಇತ್ಯಾದಿ. ಟಾರ್ಗೆಟ್ ರೀಚ್ ಆಗಲಿಲ್ಲವೋ ಗ್ರಹಚಾರ ವಕ್ಕರಿಸಿಕೊಳ್ಳುತ್ತಿತ್ತು. ಸಂಜಯ ಗಾಂಧಿಯಿಂದ, ಅವನ ಚೇಲಾಗಳಿಂದ ಅಧಿಕಾರಿಗಳಿಗೆ ಬರೋಬ್ಬರಿ ಬೆಂಡು. ಹಾಗೆ ಬೆಂಡೆತ್ತಿಸಿಕೊಳ್ಳುವದು ಯಾವನಿಗೆ ಬೇಕು ಅಂತ ಅಂದುಕೊಂಡ ಅಧಿಕಾರಶಾಹಿ ಇಲ್ಲದ ಅತಿರೇಕಗಳಿಗೆ ಇಳಿದು ಬಿಟ್ಟಿತು. ಅದೇ ದೊಡ್ಡ ದುರಂತ.

ಮೇಲಿಂದ ಬಂದಿದ್ದ ಟಾರ್ಗೆಟ್ ಮುಟ್ಟಲೇಬೇಕು ಅಂತ ಅಧಿಕಾರಶಾಹಿ ಜನರಿಗೆ ಏನೇನೋ ಆಮಿಷ ಒಡ್ಡಿತು. ಆದರೂ ಹೆಚ್ಚಿನ ಗಂಡಸರು, ಹೆಂಗಸರು ಮುಂದೆ ಬರಲೇ ಇಲ್ಲ. ಮುಖ್ಯವಾಗಿ ಜನರಿಗೆ ತಿಳುವಳಿಕೆ ಇರಲಿಲ್ಲ. ತಪ್ಪು ಮಾಹಿತಿಯೇ ಜಾಸ್ತಿಯಿತ್ತು. ಸಂತಾನಹರಣ ಚಿಕಿತ್ಸೆಯಿಂದ ಶಕ್ತಿ ಕಮ್ಮಿಯಾಗುತ್ತದೆ. ಹೊಲಗದ್ದೆಗಳಲ್ಲಿ ಕೆಲಸ ಮಾಡಲು ಆಗುವದಿಲ್ಲ. ಇನ್ನಿತರ ಏನೇನೋ ಆರೋಗ್ಯದ ತೊಂದರೆಗಳು ಬರುತ್ತವೆ. ಅದು, ಇದು ಅಂತೆಲ್ಲ ತಪ್ಪು ಮಾಹಿತಿ ಮತ್ತು ಆತಂಕ. ಹೀಗೆಲ್ಲ ಏನೇನೋ ಕೇಳಿದ್ದ ಮಂದಿ ಬರಲೇ ಇಲ್ಲ. ಬದಲಾಗಿ ನರ ಕಟ್ ಮಾಡುವ ಆಪರೇಷನ್ ಎಂದೇ ಜನಜನಿತವಾಗಿದ್ದ ಸಂತಾನಹರಣ ಚಿಕಿತ್ಸೆಗೆ ನರಹರಿ ಆಪರೇಷನ್ ಅಂತ ಜೋಕ್ ಮಾಡಿಕೊಂಡು ಇದ್ದರು. ಮುಂದೆ ಜರುಗಲಿರುವ ಭೀಕರ ಪರಿಣಾಮಗಳನ್ನು ಆ ಅಮಾಯಕರು ಊಹಿಸಿರಲಿಕ್ಕಿಲ್ಲ ಬಿಡಿ.

ಯಾವಾಗ ಟಾರ್ಗೆಟ್ ರೀಚ್ ಆಗಲಿಲ್ಲವೋ ಆಗ ಶುರುವಾಯಿತು ಮುಂದಿನ ಕಾರ್ಯಾಚರಣೆ. ಹಳ್ಳಿಗಳ ಮೇಲೆ ಶುದ್ಧ ಗೂಂಡಾ ಪಡೆಯ ರೈಡ್. ಡಾಕ್ಟರುಗಳು ಹೋಗಿ ಒಂದು ಶಿಬಿರ ಸೆಟಪ್ ಮಾಡಿಕೊಳ್ಳುತ್ತಿದ್ದರು. ಪೊಲೀಸರು, ಗೂಂಡಾಗಳು ಕೂಡಿ ಸುತ್ತಲಿನ ಗ್ರಾಮಗಳ ಮೇಲೆ ರೈಡ್ ಮಾಡುತ್ತಿದ್ದರು. ಕೈಗೆ ಸಿಕ್ಕ ಗಂಡಸರು, ಹೆಂಗಸರನ್ನು ಪ್ರಾಣಿಗಳಂತೆ ಹಿಡಿಹಿಡಿದು ಎಳೆದುಕೊಂಡು ಬರುತ್ತಿದ್ದರು. ಟಾರ್ಗೆಟ್ ಬಹಳ ದೊಡ್ಡದಿದ್ದು, ಬಹಳ ಕಡಿಮೆ ಆಪರೇಷನ್ ಆಗಿದ್ದರೆ ಸಣ್ಣ ಮಕ್ಕಳನ್ನೂ ಹಿಡಿದುಕೊಂಡು ಬಂದೇಬಿಡುತ್ತಿದ್ದರು. ನಂತರ ನಡೆಯುತ್ತಿದ್ದುದು ಶುದ್ಧ ಅತ್ಯಾಚಾರ. ಬಲವಂತದ ಶಸ್ತ್ರಚಿಕಿತ್ಸೆ. ನಂತರ ಆ ಅಮಾಯಕರ ಅಂಡಿನ ಮೇಲೆ ಒದ್ದು ವಾಪಸ್ ಕಳಿಸುವ ಮೊದಲು ಒಂದಿಷ್ಟು ರೊಕ್ಕ, ಹಣ್ಣು ಇತ್ಯಾದಿ. ಅದು ಆಪರೇಷನ್ ಮಾಡಿಸಿಕೊಂಡಿದ್ದಕ್ಕೆ ಸರ್ಕಾರದ ಪರವಾಗಿ ಪ್ರೋತ್ಸಾಹದ ರೂಪದ ಇನಾಮು. ಅದರಲ್ಲಿ ಎಷ್ಟು ಈ ಕಳ್ಳರ ಕಿಸೆ ಸೇರಿತೋ ಗೊತ್ತಿಲ್ಲ.

ಇಂತಹ ವೈಪರೀತ್ಯಕ್ಕೆ ಬಲಿಯಾದವರಲ್ಲಿ ಇನ್ನೂ ಸಂತಾನ ಬೇಕೆಂದುಕೊಂಡವರು, ವಿವಾಹವೇ ಆಗದ ಹುಡುಗ ಹುಡುಗಿಯರು ಎಲ್ಲರೂ ಇದ್ದರು. ಕೆಲವೊಂದು ಕಡೆ ಎಲ್ಲಿಯ ತನಕ ರಾಡಾ ಆಗಿತ್ತು ಅಂದರೆ ಇನ್ನೂ ಪ್ರಾಯಕ್ಕೇ ಬರದ ಹುಡುಗ ಹುಡುಗಿಯರ ಸಂತಾನಹರಣ ಚಿಕಿತ್ಸೆ ಕೂಡ ಆಗಿಹೋಗಿತ್ತು. ಒಟ್ಟಿನಲ್ಲಿ ಸರ್ಕಾರಿ ದಸ್ತಾವೇಜಿನಲ್ಲಿ ದಾಖಲಾಗಬೇಕು. ಟಾರ್ಗೆಟ್ ಮುಟ್ಟಬೇಕು. ಮಾಹಿತಿ ಸಂಜಯ ಗಾಂಧಿಗೆ ಹೋಗಬೇಕು. ಮೋಗ್ಯಾಂಬೋ ಖುಷ್ ಆಗಬೇಕು.

ಉತ್ತರದ ರಾಜ್ಯಗಳಲ್ಲಿ ಮತ್ತು ಬಿಹಾರದಲ್ಲಿ ಇಂತಹ ವೈಪರೀತ್ಯಗಳು ತುಂಬಾ ಆದವು. ಈ ಅಂಧಾದುಂಧಿ ಪರಾಕಾಷ್ಠೆ ಮುಟ್ಟಿದಾಗ ಯಾರೋ ಇದನ್ನು ಇಂದಿರಾ ಗಾಂಧಿಯ ಕಿವಿಯಲ್ಲೂ ಹಾಕಿದರು. ಮುದ್ದಿನ ಮಗ ಸಂಜಯ ಗಾಂಧಿಯ ವಿರುದ್ಧ ಆಕೆ ಏನನ್ನೂ ಕೇಳಲು ಇಷ್ಟಪಡುತ್ತಿದ್ದಿಲ್ಲ. ಆದರೆ ಯಾವಾಗ ಆಕೆಯ ಖಾಸಂ ಖಾಸ್ ಮಂದಿ ಮತ್ತೆ ಮತ್ತೆ ಹೇಳತೊಡಗಿದರೋ ಮತ್ತೆ ಅದಕ್ಕೂ ಮುಖ್ಯವಾಗಿ ಯಾವಾಗ ಈ ಬಲವಂತದ ಸಂತಾನಹರಣ ಶಸ್ತ್ರಚಿಕಿತ್ಸೆ ಮುಂದಿನ ಚುನಾವಣೆ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಅಂತ ಆಕೆಯ ಸುತ್ತ ನೆರೆದಿರುತ್ತಿದ್ದ ಕಾಶ್ಮೀರಿ ಕಬಾಲ್ (cabal) ಹೇಳತೊಡಗಿತೋ ಆಗ ಇಂದಿರಾ ಎಚ್ಚೆತ್ತುಕೊಂಡರು. ಸಂಜಯ ಗಾಂಧಿಯನ್ನು ನೇರವಾಗಿ ತರಾಟೆಗೆ ತೆಗೆದುಕೊಳ್ಳಲಿಲ್ಲ. ಮಾತೃಹೃದಯ ಒಪ್ಪಲಿಲ್ಲ. ಆದರೆ ತಾವೇ ಖುದ್ದಾಗಿ ಆಜ್ಞೆ ಹೊರಡಿಸಿದರು. ಬಲಾತ್ಕಾರವಾಗಿ ಯಾರಿಗೂ ಏನೂ ಮಾಡಬಾರದು ಅಂತ ಖಡಕ್ ಆಜ್ಞೆ ಮಾಡಿದರು. ಮಾಡಿದರೆ ಎಚ್ಚರಿಕೆ ಅಂತ ವಾರ್ನಿಂಗ್ ಬೇರೆ ಕೊಟ್ಟರು. ಸಂಜಯ ಗಾಂಧಿಯ ಪುಂಡ ಪಟಾಲಮ್ಮಿನಲ್ಲಿದ್ದು, ನರಹರಿ ಆಪರೇಷನ್ ರೂವಾರಿಗಳಾಗಿದ್ದ ಮರಿ ಪುಡಾರಿಗಳನ್ನು ಕರೆಕರೆದು ಬೆಂಡೆತ್ತಿದರು. ಅಂತೂ ಹೀಗೆಲ್ಲ ಮಾಡಿ ಸಂಜಯ ಗಾಂಧಿಯ ಮನ್ಮಾನಿಯನ್ನು indirect ಆಗಿ ಬಂದ್ ಮಾಡಿಸಿದ್ದರು. ಸಂಜಯ ಗಾಂಧಿ ಒಂದಿಷ್ಟು ಸಿಡಿಮಿಡಿಗೊಂಡ. ಅಮ್ಮನ ಜೊತೆ ಒಂದಿಷ್ಟು ಧುಸುಮುಸು ಮಾಡಿದ. ಇದೊಂದು ವಿಷಯದಲ್ಲಿ ಅಮ್ಮ ಅವನ ಮಾತು ಕೇಳಲಿಲ್ಲ. ಆದರೆ ತುಂಬಾ ತಡವಾಗಿ ಈ ಕ್ರಮ ಕೈಗೊಂಡಿದ್ದರು ಇಂದಿರಾ ಗಾಂಧಿ. ಬೇಕಾದಷ್ಟು ಡ್ಯಾಮೇಜ್ ಆಗಿಹೋಗಿತ್ತು. ಆಗಲೇ ಮಂದಿ ನಿರ್ಧರಿಸಿದ್ದರು, 'ಸಂಜಯ ಗಾಂಧಿಯೆಂಬ ಈ ನರಹರಿಗೆ ಮತ್ತು ಅಲ್ಲಿಯವರೆಗೆ ದುರ್ಗೆಯ ಪ್ರತಿರೂಪ ಅಂತ ಆರಾಧಿಸುತ್ತಿದ್ದ ಅವನ ಅಮ್ಮ ಇಂದಿರಾ ಗಾಂಧಿಗೆ ಮುಂದಿನ ಚುನಾವಣೆಯಲ್ಲಿ ಒಂದು ಗತಿ ಕಾಣಿಸಬೇಕು,' ಅಂತ. ಹಾಗೆಯೇ ಆಯಿತು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಯಿತು. ಸಂತಾನ ಭಾಗ್ಯ ಕಳೆದುಕೊಂಡು, ಅವರ ಪ್ರಕಾರ ತೀವ್ರ ನಿಶ್ಶಕ್ತಿ ಅನುಭವಿಸುತ್ತಿದ್ದ ಉತ್ತರದ ಕಡೆಯ ಹಳ್ಳಿಯ ಮಂದಿ ಹೋಲ್ಸೇಲಿನಲ್ಲಿ ಕಾಂಗ್ರೆಸ್ ವಿರುದ್ಧ ವೋಟು ಹಾಕಿದ್ದರು. ಕಾಂಗ್ರೆಸ್ ಮಕಾಡೆಯಾಗಿ ಲಂಬಾ ಲಂಬಾ ಮಲಗಿಬಿಟ್ಟಿತ್ತು. ಅಮ್ಮ, ಮಗ ಇಬ್ಬರೂ ಸೋತಿದ್ದರು. ಅಮ್ಮ ಹಿಂದಿನ ಅಪರಾಧವೊಂದರಲ್ಲಿ ಸಾಂಕೇತಿಕವಾಗಿ ಜೈಲಿಗೂ ಹೋಗಿಬಂದಳು. ಒಂದು ಕಾಲದಲ್ಲಿ ಇಂದಿರಾ ಗಾಂಧಿಯ ಕೂದಲು ಕೊಂಕಿದ್ದರೂ ಇಡೀ ಭಾರತ ಹೊತ್ತಿಕೊಳ್ಳುತ್ತಿತ್ತು. ಈಗ ಒಂದು ತರಹದ ಜಿಗುಪ್ಸೆ, ನಿರುಮ್ಮಳ ಅಷ್ಟೇ.

ಸಂಜಯ ಗಾಂಧಿಯ ಜೊತೆ ಡೂನ್ ಸ್ಕೂಲಿನಲ್ಲಿ ಓದಿದ್ದ, ಅವನ ಮಿತ್ರರಾಗಿದ್ದ ಪತ್ರಕರ್ತ ವಿನೋದ್ ಮೆಹ್ತಾ ಬರೆದ ಪುಸ್ತಕದಲ್ಲಿ ಒಂದು ಮಾತು ಹೇಳುತ್ತಾರೆ. ಅದು ಜೋಕೋ ಅಥವಾ ನಿಜವೋ ಗೊತ್ತಿಲ್ಲ. ಸಂತಾನಹರಣ ಚಿಕಿತ್ಸೆಗೆ ಜನರನ್ನು ಎತ್ತಾಕಿಕೊಂಡು ಹೋಗಲು ಗೂಂಡಾ ಪಡೆ ಹಳ್ಳಿಗಳನ್ನು ರೈಡ್ ಮಾಡುತ್ತಿತ್ತು ಅಂತ ಹೇಳಿದೆ ನೋಡಿ. ಒಂದು ಸಲ ಏನೋ ಮಿಸ್ಟೇಕ್ ಆಗಿ ಮೊದಲೊಂದು ಸಲ ರೈಡ್ ಮಾಡಿದ್ದ ಹಳ್ಳಿಯನ್ನೇ ಮತ್ತೆ ರೈಡ್ ಮಾಡಿದ್ದರು. ಸಾಮಾನ್ಯವಾಗಿ ಇವರು ಬರುತ್ತಿದ್ದಂತೆ ಭಯಭೀತರಾದ ಜನರು, 'ನರ ಉಳಿದರೆ ಸಾಕು ನಾರಾಯಣ,' ಅನ್ನುವ ಮಾದರಿಯಲ್ಲಿ, ಬಿದ್ದಾಕಿ ಕಾಡುಮೇಡಿಗೆ ಓಡುತ್ತಿದ್ದರು. ಆ ಹಳ್ಳಿಯ ಜನರು ಮಾತ್ರ ಎಲ್ಲವನ್ನೂ ದೇವರಿಗೆ ಬಿಟ್ಟವರಂತೆ ಶಿವಾಯ ನಮಃ ಅನ್ನುವ ರೀತಿಯಲ್ಲಿ ಕಟ್ಟೆ ಮೇಲೆ ಕೂತೇ ಇದ್ದರು. ಬೀಡಿ ಸೇದುತ್ತ, ಎಲೆಯಡಿಕೆ ಜಗಿಯುತ್ತ ಕೂತೇ ಇದ್ದರು. ಗೂಂಡಾಗಳು ಬರುತ್ತಿರುವದನ್ನು ನೋಡಿದ ಒಬ್ಬ ಹಿರಿಯ ಯಜಮಾನ ತನ್ನ ಗಾವಟಿ ಹಿಂದಿಯಲ್ಲಿ ಹೇಳಿದನಂತೆ - 'ಹೋದ ಸಲ ಬಂದವರು ಫೋನಿನ ತಾರು ಕಟ್ ಮಾಡಿಹೋಗಿದ್ದರು. ಈಸಲ ಏನು ಹ್ಯಾಂಡ್ ಸೆಟ್ಟನ್ನೇ  ಒಯ್ಯಲು ಬಂದಿದ್ದಾರೆಯೋ ಹೇಗೆ?????' ಹಾಗಂತ ಹೇಳಲಿಲ್ಲ ಗೂಂಡಾಗಳ ಮುಂದೆ. ಹೇಳಿಕೇಳಿ ಶುದ್ಧ ಗೂಂಡಾಗಳು. ಸಿಟ್ಟಿಗೆದ್ದು ಹ್ಯಾಂಡ್ ಸೆಟ್ಟನ್ನೇ ಒಯ್ದುಬಿಟ್ಟರೆ ದೊಡ್ಡ ಕಷ್ಟ ಅಂತ ಹೇಳಿ, 'ನಮ್ದೂಕೆ ನರಹರಿ ಆಪರೇಷನ್ ಆಗಿಬಿಟ್ಟೈತೆ ಸ್ವಾಮೀ. ಮತ್ತೊಮ್ಮೆ ಯಾಕೆ? ಬಿಟ್ಟುಬಿಡಿ. ಹೆಂಗೋ ಬದುಕಿಕೊಳ್ಳುತ್ತೀವಿ,' ಅಂತ ನಮಸ್ಕಾರ ಹೇಳಿ ಕಳಿಸಿದ್ದರು.

ಎಮರ್ಜೆನ್ಸಿಗೆ ನಲವತ್ತು ವರ್ಷ ಅಂತ ಎಲ್ಲ ಕಡೆ ಸುದ್ದಿ. ಇದೆಲ್ಲ ನೆನಪಾಯಿತು.

ಪೂರಕ ಮಾಹಿತಿಗೆ:

The Sanjay Story: From Anand Bhavan to Amethi by Vinod Mehta

The Red Sari : A Dramatized Biography of Sonia Gandhi by Javier Moro



4 comments:

Kushi said...

Nimma post odi.... Nagunu banthu.... Haage...lots of information too...thank u....

Mahesh Hegade said...

Thank you, Kushi.

sunaath said...

ಸಂಜಯ ಗಾಂಧಿಯ ಅತಿರೇಕವನ್ನು ಯಾರೂ ಒಪ್ಪಲಾರರು. ಆದರೆ ವೋಟುಬ್ಯಾಂಕ್‍ ರಾಜಕಾರಣದಲ್ಲಿ ಕುಟುಂಬನಿಯಂತ್ರಣವನ್ನು ಜನಸಮ್ಮತಿಯಿಂದ ಮಾಡಲೂ ಸಹ ಭಾರತದಂತಹ ಅನಕ್ಷರಸ್ಥ ದೇಶದಲ್ಲಿ ಸಾಧ್ಯವಿಲ್ಲ. ನೂರು ಜನರು ಕೂಡಬಹುದಾದ ದೋಣಿಯಲ್ಲಿ ಸಾವಿರ ಜನರು ಕೂತರೆ ಏನಾಗಬಹುದು? ಗ್ಯಾಂಗರೀನ್ ಆದಾಗ ಕಾಲು ಕತ್ತರಿಸುವುದು ಅನಿವಾರ್ಯವಲ್ಲವೆ? Otherwise India will commit suicide because of the bursting population.
ಮಾಹಿತಿಪೂರ್ಣ ಲೇಖನಕ್ಕಾಗಿ ಅಭಿನಂದನೆಗಳು.

Mahesh Hegade said...

Thank you Sunaath, Sir.