Thursday, June 25, 2015

ಎಮರ್ಜೆನ್ಸಿ ಎಂಬ ಕರಾಳ ಕಾಲ

೧೯೭೫ ರಲ್ಲಿ ಇಂದಿರಾ ಗಾಂಧಿ ಜಾರಿಗೊಳಿಸಿದ್ದ ಎಮರ್ಜೆನ್ಸಿಗೆ ಇವತ್ತು ನಲವತ್ತು ವರ್ಷಗಳಂತೆ.

ಎಮರ್ಜೆನ್ಸಿ ಅಂದಕೂಡಲೇ ಮೊದಲು ನೆನಪಿಗೆ ಬರುವವರು ನಮ್ಮ ಧಾರವಾಡದ ಶಾನಬಾಗ್ ಪ್ರೊಫೆಸರ್. ಅವರ ಬಗ್ಗೆ ಹಿಂದೊಂದು ಲೇಖನ ಬರೆದಿದ್ದೆ. ಇಂದಿರಾ ಗಾಂಧಿ ಕೊಟ್ಟಿದ್ದ ಹೊಡೆತ, ಕಿರುಕುಳ ತಾಳಲಾಗದೇ RSS ನ ಘಟಾನುಗಟಿಗಳಾದ  ದೇವರಸ್, ವಾಜಪೇಯಿ ಮುಂತಾದವರೇ ಆಗಿನ ಸರ್ಕಾರಕ್ಕೆ ಮುಚ್ಚಳಿಕೆ ಪತ್ರ ಬರೆದುಕೊಟ್ಟು, ಸೆರೆಯಿಂದ ಹೊರಬರಲು ಏನೋ ಒಂದು ತರಹದ ಸಂಧಾನಕ್ಕೆ ಪ್ರಯತ್ನ ಮಾಡುತ್ತಿದ್ದರು. ಹಾಗಿರುವಾಗ ಪರಿಸ್ಥಿತಿಯೊಂದಿಗೆ ಯಾವದೇ ತರಹದ ಹೊಂದಾಣಿಕೆ ಮಾಡಿಕೊಳ್ಳದೇ, 'ಬಂದದ್ದೆಲ್ಲ ಬರಲಿ.....' ಅಂತ ಎಲ್ಲವನ್ನೂ ಎದುರಿಸಿ, ಯಶಸ್ವಿಯಾಗಿ ಒಂದು ವರ್ಷದ ಕಾರಾಗ್ರಹವಾಸದ ನಂತರ ಅಂತರ್ಸ್ಥೈರ್ಯವನ್ನು ಜಾಸ್ತಿ ಮಾಡಿಕೊಂಡೇ ಹೊರಗೆ ಬಂದಿದ್ದರು ಪ್ರೊ. ಶಾನಬಾಗ್. ಅವರು ಅದೆಲ್ಲ, ಅಷ್ಟೆಲ್ಲ ಕಷ್ಟ ಕೋಟಲೆ ಅನುಭವಿಸಿದ್ದು ತಾವು ನಂಬಿದ ಮೌಲ್ಯಗಳಿಗಾಗಿ ಮತ್ತು ತಮ್ಮ ಧ್ಯೇಯಗಳಿಗಾಗಿ. ಶಾನಬಾಗ್ ಪ್ರೊಫೆಸರ್ ಕುರಿತಾದ ಲೇಖನ ಇಲ್ಲಿದೆ.

ಖ್ಯಾತ ವಕೀಲ, ಸಂವಿಧಾನ ತಜ್ಞ, ರಾಮ್ ಜೇಠಮಲಾನಿ ಕೂಡ ನೆನಪಾಗುತ್ತಾರೆ. ಅಮೇರಿಕಾದಿಂದ political asylum ಪಡೆದುಕೊಂಡ ಮೊತ್ತ ಮೊದಲ ಭಾರತೀಯ ಅವರು. ಎಮರ್ಜೆನ್ಸಿಯಲ್ಲಿ ಇಂದಿರಾ ಗಾಂಧಿ ವಿರುದ್ಧ ಹಚ್ಚಿ ಬಡಿದಾಡುತ್ತಿದ್ದರು. ಒಂದು ಹಂತದಲ್ಲಿ ಕಾಂಗ್ರೆಸ್ ಗೂಂಡಾ ಪಡೆ ತುಂಬಾ ಕಾಟ ಕೊಡತೊಡಗಿತು. ಅಲ್ಲೇ ಇದ್ದರೆ ಜೀವಕ್ಕೇ ಅಪಾಯ ಅಂತ ಹೆಂಗೋ ಮಾಡಿ ದೇಶ ಬಿಟ್ಟು ಅಮೇರಿಕಾಗೆ ಹಾರಿದರು. political asylum ಕೋಟಾದಲ್ಲಿ ವೀಸಾ ಪಡೆದುಕೊಂಡು ಅಮೇರಿಕಾದಿಂದಲೇ ಎಮರ್ಜೆನ್ಸಿ ವಿರುದ್ಧ ಹೋರಾಟ ಮಾಡಿದ್ದರು, ತಮ್ಮ ಬರವಣಿಗೆ ಮತ್ತು ಭಾಷಣಗಳ ಮೂಲಕ. ತಮ್ಮ ಜೀವನದಲ್ಲಿ ಎರಡನೇ ಬಾರಿಗೆ ನಿರಾಶಿತ್ರರಾಗಿದ್ದರು ರಾಮ್ ಜೇಠಮಲಾನಿ. ೧೯೪೭ ರಲ್ಲಿ ಸ್ವಾತಂತ್ರ ಸಮಯದಲ್ಲಿ ಭಾರತ ಇಬ್ಭಾಗವಾದಾಗ ಪಾಕಿಸ್ತಾನದ ಕರಾಚಿ ಬಿಟ್ಟು ಬರಬೇಕಾದಂತಹ ಪರಿಸ್ಥಿತಿ ಬಂದಿತ್ತು. ಆಗ ಎಮರ್ಜೆನ್ಸಿ ಸಮಯದಲ್ಲಿ ಮತ್ತೊಮ್ಮೆ ನಿರಾಶಿತ್ರರಾಗಿದ್ದರು. ಈಗ ತೊಂಬತ್ತೊಂದು ವರ್ಷ ಅವರಿಗೆ. ಇಂದಿಗೂ establishment ವಿರುದ್ಧ ಅವರ ಹೋರಾಟ ನಡೆದೇ ಇರುತ್ತದೆ. ಮೊನ್ನಿತ್ತಲಾಗೆ ಪ್ರಧಾನಿ ಮೋದಿಗೆ 'ಗುರ್!' ಅಂದಿದ್ದಾರೆ.

ನೆನಪಾಗುವವರಲ್ಲಿ ಡಾ. ಸುಬ್ರಮಣಿಯನ್ ಸ್ವಾಮಿ ಮತ್ತೊಬ್ಬರು. ಅವರೂ ಎಮರ್ಜೆನ್ಸಿ ಸಮಯದಲ್ಲಿ ಅಮೇರಿಕಾದಿಂದಲೇ ಚಟುವಟಿಕೆ ನಡೆಸಿದ್ದರು. ಆದರೆ ಡಾ. ಸ್ವಾಮಿ ಒಂದು ಚಾಲೆಂಜ್ ತೆಗೆದುಕೊಂಡಿದ್ದರು. 'ಏನೇ ಆಗಲಿ, ಸಂಸತ್ ಅಧಿವೇಶನದ ಸಮಯಕ್ಕೆ ಸರಿಯಾಗಿ ಭಾರತಕ್ಕೆ ಹೋಗಿ, ಸಂಸತ್ತಿನಲ್ಲಿ ಭಾಷಣ ಮಾಡೇಮಾಡುತ್ತೇನೆ,' - ಇದು ಅವರ ಸಂಕಲ್ಪ. ಎಲ್ಲ ಕಡೆ ಅವರನ್ನು, ಅವರಂತಹ ಇತರೆ ಭೂಗತರಾಗಿದ್ದ ಜನರನ್ನು ಹಿಡಿದು ಒಳಗೆ ಹಾಕಲು ಇಡೀ ವ್ಯವಸ್ಥೆ ಕಾಯುತ್ತಿತ್ತು. ಅದು ಹೇಗೋ ಮಾಡಿ ದೆಹಲಿ ತಲುಪಿದರು. ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಮೂಲಕ ಯಾವದೇ ತೊಂದರೆಯಿಲ್ಲದೆ ಪಾಸಾಗಿ ಹೋಗುತ್ತೇನೆ ಅಂತ ಅವರಿಗೆ ಯಾವದೇ ನಂಬಿಕೆ ಇರಲಿಲ್ಲ. ಅದರೂ ಸಿಕ್ಕಾಪಟ್ಟೆ ತಲೆಯಿರುವ ಆಸಾಮಿ ಸ್ವಾಮಿ. ಆಗ ತುಂಬಾ ಪಾಪ್ಯುಲರ್ ಆಗಿದ್ದ ಯುವ ಕಾಂಗ್ರೆಸ್ ಜನರ ಹಾಗೆ ಶಾಲು ಧರಿಸಿ ಹೊರಗೆ ಬಂದರು. ಜುಬ್ಬಾ ಪೈಜಾಮಾ ಅಂತೂ ಅವರಂತೆಯೇ ಹಾಕಿದ್ದರು. ಗತ್ತಿನಿಂದ ನಡೆದು ಬಂದರು. ಸಂಜಯ ಗಾಂಧಿ ಮತ್ತು ಅವನ ಯುವ ಕಾಂಗ್ರೆಸ್ ಫುಲ್ ಹವಾ ಮಡಗಿದ್ದ ಕಾಲವದು. ಯುವ ಕಾಂಗ್ರೆಸ್ ಮಂದಿಯನ್ನು ಯಾರೂ ತಡವಿಕೊಳ್ಳುತ್ತಿರಲಿಲ್ಲ. ಯುವ ಕಾಂಗ್ರೆಸ್ ಮಂದಿಯ ಗೆಟಪ್ಪಿನಲ್ಲಿ ಕಂಡ ಸ್ವಾಮಿಯವರನ್ನೂ ಸಹ ಯಾವದೋ ಯುವ ಕಾಂಗ್ರೆಸ್ ಮುಖಂಡನೇ ಇರಬೇಕು ಅಂತ ಊಹಿಸಿ, ಯಾವದೇ ಚೆಕ್ ಮಾಡುವದು ದೂರ ಉಳಿಯಿತು, ಪಾಸ್ಪೋರ್ಟ್ ಸಹ ಸ್ಟ್ಯಾಂಪ್ ಮಾಡದೇ ಹೊರಗೆ ಹೋಗಲು ಬಿಟ್ಟುಬಿಟ್ಟಿದ್ದರಂತೆ. ಹಾಗೆ ಹೊರಗೆ ಬಂದ ಸ್ವಾಮಿ, ಎಲ್ಲರ ಕಣ್ಣು ತಪ್ಪಿಸಿ ದೆಹಲಿಯಲ್ಲಿ ಎಲ್ಲೋ ಉಳಿದಿದ್ದರು. ಮುಂದೆ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಭಾಷಣ ಮಾಡಿದರೋ ಇಲ್ಲವೋ ನೆನಪಿಲ್ಲ. ಅವರ ಈ ಸಾಹಸವನ್ನು ಯಾವದೋ youtube ವೀಡಿಯೊ ಕ್ಲಿಪ್ ನಲ್ಲಿ ನೋಡಿದ, ಕೇಳಿದ ನೆನಪು. ಹೆಚ್ಚಾಗಿ 'ಆಪ್ ಕಿ ಅದಾಲತ್' ಪ್ರೊಗ್ರಾಮ್ ಇರಬೇಕು.

ಎಮರ್ಜೆನ್ಸಿಗೆ ನಲವತ್ತು ವರ್ಷ ಅಂದಾಗ ಇವಿಷ್ಟು ನೆನಪಾದವು. ಇನ್ನೂ ಒಂದಿಷ್ಟು ಕ್ರೌರ್ಯ, ಪೋಲೀಸರ ಅತಿರೇಕಗಳು, ಸಂಜಯ ಗಾಂಧಿ ಮತ್ತು ಅವನ ಪಟಾಲಂ ಹಾಕಿದ ದಾಂಧಲೆ ಮತ್ತೆ ಏನೇನೋ ಸಹ ನೆನಪಾದವು. ಅವೆಲ್ಲವುಗಳ ಬಗ್ಗೆ ಇವತ್ತಿಗೆ ಬೇಕಾದಷ್ಟು ಮಾಹಿತಿ ಸಿಗುತ್ತದೆ. 'When governments fear the people, there is liberty. When the people fear the government, there is tyranny,' ಅಂತ ಅಮೇರಿಕಾದ ಮಾಜಿ ಅಧ್ಯಕ್ಷ, ತತ್ವಜಾನಿ ಥಾಮಸ್ ಜೆಫರ್ಸನ್ ಹೇಳಿದ್ದು ಬರೋಬ್ಬರಿ ಅನಿಸುತ್ತದೆ.

2 comments:

sunaath said...

People do not have any fundamental right during emergency , including right to life....ಈ ಅರ್ಥದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರದ attorney general ಆದವರೊಬ್ಬರು ನ್ಯಾಯಾಲಯದಲ್ಲಿ ಹೇಳಿದ್ದರು. ನನಗೆ ನೆನಪಿರುವ ಮಟ್ಟಿಗೆ ಅವರು ನಿರೇನ್ ಡೇ ಇರಬಹುದು. emergency ಅವಧಿಯನ್ನು ಹಾಗು ಪ್ರೊಫೆಸರ್ ಶಾನಭಾಗರಂತಹ ಧೀರ ವ್ಯಕ್ತಿಯನ್ನು ನೆನಪಿಸಿದ್ದೀರಿ. ಧನ್ಯವಾದಗಳು.

Mahesh Hegade said...

Thank you Sunaath, Sir.