Sunday, August 02, 2015

ನಾದಬ್ರಹ್ಮನ ನಾದಿನಿ!

ಇಲ್ಲಿನ ಮಹನೀಯರೊಬ್ಬರು ತಮ್ಮ ಧರ್ಮಪತ್ನಿಯನ್ನು ತಮ್ಮ 'ಧರ್ಮನಾದಿನಿ' 'ಧರ್ಮನಾದಿನಿ' ಅಂತ ಪರಿಚಯಿಸುತ್ತಾರೆ.

ಧರ್ಮನಾದಿನಿ!!?? ಹ್ಯಾಂ!!!??? What's this nonsense!?

ಫುಲ್ confuse ಆದವರು, 'ಏ, ನಿಮ್ಮಾss! ಸರಿ ಮಾಡಿ ಹೇಳ್ರೀ. ಇವರು ನಿಮ್ಮ ಹೆಂಡತಿಯೋ ಅಥವಾ ನಿಮ್ಮ ನಾದಿನಿಯೋ??' ಅಂತ ಕೇಳಿದರೆ ವಿಚಿತ್ರ ವಿವರಣೆ ಕೊಡುತ್ತಾರೆ. ಹೆಂಡತಿಯ ತಂಗಿಗೆ ನಾದಿನಿ ಅನ್ನುತ್ತಾರೆ ನೋಡಿ. ಅದೇನೋ ಅಂತ ಸಂದೇಹ.

'ಅವಳಿಗೆ ಮತ್ತು ನನಗೆ ಇರುವ ಸಂಬಂಧಾನುಸಾರ ಆಕೆ ನಮ್ಮ ಪತ್ನಿ. ಕರ್ಮಾನುಸಾರ ನಮ್ಮ ನಾದಿನಿ,' ಅಂತ ವೇದಾಂತ ಹೇಳಿಬಿಡುತ್ತಾರೆ.

ಆಗ ಮತ್ತೂ ಕೆಟ್ಟ confusion.

'ಯಾರ ಕರ್ಮಾನುಸಾರ ಇವರು ನಿಮ್ಮ ನಾದಿನಿ????' ಅಂತ ಕೇಳಿದರೆ ಮತ್ತೂ ದೊಡ್ಡ ವೇದಾಂತ.

'ಇಬ್ಬರ ಕರ್ಮಾನುಸಾರವಾಗಿಯೂ ಇವಳು ನನ್ನ ನಾದಿನಿಯೇ,' ಅಂತ ತಮ್ಮ ಬೋಳು ತಲೆ ಮೇಲೆ ಶಿವಾಯ ನಮಃ ಮಾದರಿಯಲಿ ಕೈಯಾಡಿಸುತ್ತಾರೆ. ರೋಡ್ ಮೇಲೆ ಅಲ್ಲಲ್ಲಿ ಅಡ್ಡಾದಿಡ್ಡಿ ಎದ್ದಿರುವ ಹಂಪುಗಳಂತೆ ತಲೆ ಮೇಲೆದ್ದಿರುವ ಗುಮ್ಮಟೆಗಳು ಅವರಿಗೆ ಫೀಲ್ ಆಗುತ್ತವೆ. ನಿಮಗೆ ಕಂಡರೂ ಕಾಣಬಹುದು.

'ಹೆಂಡತಿ ಮತ್ತು ನಾದಿನಿ, ಟೂ ಇನ್ ಒನ್. ಅದು ಹ್ಯಾಂಗ ಸಾದ್ಯರೀ ಸರ್ರಾ!? ತಲಿ ಕೆಟ್ಟು ನಪರ ಎತ್ತು. ಸ್ವಲ ಬಿಡಿಸಿ ಹೇಳ್ರೀಪಾ!' ಅಂತ ಕೇಳಿಕೊಂಡಾಗ ಬರುತ್ತದೆ ಅಂತಿಮ ಉತ್ತರ.

'ಆಕೆಯ ಹತ್ತಿರ ನಾದಿಸಿಕೊಳ್ಳುವದು ನನ್ನ ಕರ್ಮ. ನನ್ನನ್ನು ಹಿಡಿದು ನಾದಿಬಿಡುವದು ಅವಳ ಕರ್ಮ. ಹಾಗಾಗಿ ಆಕೆ ನನ್ನ ನಾದಿನಿಯೇ. ಅದೂ ಧರ್ಮನಾದಿನಿ. ಪೂರ್ವ ಜನ್ಮದ 'ಪುಣ್ಯ' ಕರ್ಮದ ಫಲವಾಗಿ ಈ ಜನ್ಮದಲ್ಲಿ ನಮಗೆ ಧರ್ಮಪತ್ನಿ ಧರ್ಮನಾದಿನಿಯ ರೂಪದಲ್ಲಿ ಸಿಕ್ಕಿಬಿಟ್ಟಿದ್ದಾಳೆ!' ಅಂದು ಮತ್ತೆ ಬೋಳು ತಲೆ ಮೇಲಿನ ಗುಮ್ಮಟೆಗಳ ಸುತ್ತ ಬೆರಳುಗಳಿಂದ ಪ್ರದಕ್ಷಿಣೆ ಹಾಕುತ್ತಾರೆ. ಪತ್ನಿ ಉರ್ಫ್ ನಾದಿನಿಯ ನಾದುವ, ಲಟ್ಟಿಸುವ ಕರ್ಮಯೋಗದ ಪರಿಣಾಮಗಳೇ ಆ ಗುಮ್ಮಟೆಗಳು ಅಂತ ಈಗ ಬರೋಬ್ಬರಿ ಗೊತ್ತಾಗುತ್ತದೆ.

'ಸರಿ, ಕರ್ಮಾನುಸಾರ ನಿಮ್ಮ ಹೆಂಡತಿ ನಿಮ್ಮ ಹೆಂಡತಿಯಲ್ಲ ನಿಮ್ಮ ನಾದಿನಿ. ವಿಚಿತ್ರ ಆದರೂ ಸತ್ಯ. ಒಪ್ಪಿದೆ. ನೀವು ಯಾರು ಅವರಿಗೆ? ನೀವು ಅವರಿಗೆ ಪತಿಯೋ?? ಅಥವಾ......??' ಅಂತ ಕೇಳಿದರೆ ಮತ್ತೂ ವಿಚಿತ್ರ ವಿವರಣೆ ಸಿಗುತ್ತದೆ.

'ನಾನು ಆಕೆಗೆ ನಾದಬ್ರಹ್ಮ!' ಅಂದುಬಿಟ್ಟರು.

ಅವಳು ಇವರಿಗೆ ನಾದಿನಿ. ಇವರು ಆಕೆಗೆ ನಾದಬ್ರಹ್ಮ. What's this????

'ಆಕೆಯ ಹಣೆಯಲ್ಲಿ ನನ್ನನ್ನು ನಾದುವದನ್ನೂ, ನನ್ನ ಹಣೆಯಲ್ಲಿ ಆಕೆಯ ಕೈಯಲ್ಲಿ ನಾದಿಸಿಕೊಳ್ಳುವ ಹಣೆಬರಹವನ್ನು ಖುದ್ದಾಗಿ ಬರೆದುಕೊಂಡು ಬಂದ ಅದೃಷ್ಟವಂತ ನಾನು. ಸಾದಾ ಬ್ರಹ್ಮ ಸಾದಾ ಹಣೆಬರಹ ಬರೆದರೆ ನಮ್ಮಂತಹ ನಾದಬ್ರಹ್ಮರು ನಾದುವ ಮತ್ತು ನಾದಿಸಿಕೊಳ್ಳುವ ಹಣೆಬರಹ ಬರೆದುಬಿಡುತ್ತೇವೆ!' ಅಂದು ತಾವು ಹೇಗೆ ನಾದಬ್ರಹ್ಮ ಅನ್ನುವದನ್ನು ವಿವರಿಸಿದರು.

'ನೀವು ಅದೆಂಗ ನಾದಬ್ರಹ್ಮ ಆದ್ರೀ ಸರ್ರಾ??' ಅಂತ ಕೇಳಿದರೆ ಸಿಗುವ ಉತ್ತರ ಭೀಕರ ಅಷ್ಟೇ ಕರುಣಾಜನಕ.

'ಏನು ಮಾಡೋದ್ರೀ?? ಕಚ್ಚಾ ರಸ್ತೆದಾಗ ಹೊಂಟಿದ್ದ ಉಗುಳು ಮಾರಿ ಮಾರಮ್ಮನ ಮಾದರಿಯ ಇವಳನ್ನು ಪಕ್ಕಾ ಮನಿಯೊಳಗೆ ಕರೆಸಿಕೊಂಡೆ. ಕರೆಯಿಸಿಕೊಂಡಿದ್ದಷ್ಟೇ ಅಲ್ಲ ಅಕಿ ಕೈಯಾಗ ನಾದಿಸಿಕೊಂಡ ಮ್ಯಾಲೆ ನನ್ನನ್ನು ಲಟ್ಟಿಸಿಯೂಬಿಡಲಿಕ್ಕೆ ಅನುಕೂಲವಾಗಲಿ ಅಂತ ಅಕಿ ಕೈಯಾಗ ಸಾಗವಾನಿ ಲಟ್ಟಣಿಗೆ ಕೂಡ ಕೊಟ್ಟ ನಾದಬ್ರಹ್ಮ ರೀ ನಾ  ನಾದಬ್ರಹ್ಮ ರೀ...... ಈ....ಈ... ಈ .... ಈ .... ಈ .... ಈ .... ಈ !!!!' ಅಂತ ಗೊಳೋ ಅಂತ ಅಳುವ ಮಾದರಿಯಲ್ಲಿ ಹಾಡಲಿಕ್ಕೆ ಶುರು ಮಾಡಿಬಿಟ್ಟರು. ಕಾಲಾಗಿನ ಬಾಟಾ ಚಪ್ಪಲ್ ಕೈಯಾಗ ತೊಗೊಂಡು ತಮಗೆ ತಾವೇ ರಪ್ರಪಾ ಅಂತ ಬಾರಿಸಿಕೊಂಡರು. ಹಾಡಿಗೆ ಸಂಗೀತದ ಮಾದರಿಯಲ್ಲಿ ರಪ್ರಪಾ ಕೇಳಿಸಿತು! ಪಾಪ ಅನ್ನಿಸಿತು. ನಾದಬ್ರಹ್ಮರ ತಲೆಗೆ ಒಂದಿಷ್ಟು ಬ್ರಾಹ್ಮೀ ತೈಲದ ಜರೂರತ್ತಿದೆ ಅಂತ ಅನ್ನಿಸಿತು. ಅವರ ಸಾದಾ ನಸೀಬ ಬರೆದಿರುವ ಸಾದಾ ಬ್ರಹ್ಮ ಬ್ರಾಹ್ಮೀ ತೈಲವನ್ನು ಬರೆದಿದ್ದಾನೋ ಇಲ್ಲವೋ?! ಯಾರಿಗೆ ಗೊತ್ತು!?

ನಾದಮಯ….ನಾದಮಯ ಈ ಲೋಕವೆಲ್ಲ...ನಾದಿನಿಯಿಂದ ನಾದಿಸಿಕೊಳ್ಳೋ ನಾದಬ್ರಹ್ಮರ....ನಾದಮಯ….ನಾದಮಯ ಈ ಲೋಕವೆಲ್ಲ.

** ನಾದಬ್ರಹ್ಮನ ಬಗ್ಗೆ ತಿಳಿದುಕೊಂಡಿರಿ. ಇನ್ನು ಕುಂಚಬ್ರಹ್ಮನೊಬ್ಬ ಕುಚಬ್ರಹ್ಮ ಹೇಗೆ ಆದ ಅನ್ನುವ ರೋಚಕ ಕಹಾನಿ ಓದಲು ಇಲ್ಲಿ ಹೋಗಿ.... ಹೋಮಿಯೋಪತಿ ಕು(o)ಚ ಬ್ರಹ್ಮ. ಹಿಂದೊಮ್ಮೆ ಬರೆದಿದ್ದ ಲೇಖನ.



3 comments:

Vimarshak Jaaldimmi said...


Wow! Looks like haap & half have entered the scene!!

sunaath said...

ನಾದಬ್ರಹ್ಮ ಹಾಗು ಕುಂಚಬ್ರಹ್ಮ! ಥ್ಯಾಂಕ್ಯೂ for ಡಬಲ್ ಧಮಾಕಾ, ಮಹೇಶ!

Mahesh Hegade said...

Thanks Sunaath, sir.