Thursday, August 13, 2015

ರಂಗಿತರಂಗ.....ಅದು ಇದು

'ರಂಗಿತರಂಗ' - ಇಂದು ಅಮೇರಿಕಾದಲ್ಲಿ ಬಿಡುಗಡೆಯಂತೆ. ಒಳ್ಳೇದು. ಭಾಳ ಹವಾ ಮೈಂಟೈನ್ ಮಾಡಿರುವ ಮೂವಿ.

'ಬರ್ರಿ, ಕೂಡಿ ಹೋಗಿ ನೋಡೋಣ.  ಫಸ್ಟ್ ಶೋ ನೋಡಿ ಬಂದುಬಿಡೋಣ!' ಅಂದ್ರು ಕೆಲವು ಮಂದಿ. 'ದೊಡ್ಡ ನಮಸ್ಕಾರ. ನೀವು ಹೋಗಿ ನೋಡಿ ಬರ್ರಿ. ಹ್ಯಾಂಗದ ಅಂತ ಹೇಳ್ರಿ. ನಂತರ ನಾವು ನೋಡುವ ವಿಚಾರ ಮಾಡ್ತೇವಿ,' ಅಂದೆ. 'ನಂತರ ನಾವು ಒಬ್ಬರೇ ಹೋಗಿ ನೋಡಿಬರ್ತೇವಿ' ಅಂದುಕೊಂಡೆ. ಬಾಯ್ಬಿಟ್ಟು ಹೇಳಲಿಲ್ಲ. ಹೇಳಿಬಿಟ್ಟರೆ ಮುಂದೆ ಹೀಗೆ ಕರೆಯೋದು ದೂರ ಉಳೀತು. ಫೇಸ್ಬುಕ್ ಮೇಲೆ unfriend ಮಾಡಿಬಿಟ್ಟಾರು!

ಇದು ಮೊದಲೇ ಸಸ್ಪೆನ್ಸ್, ಥ್ರಿಲ್ಲರ್ ಮಾದರಿಯ ಮೂವಿ. ಮಂದಿ ಜೊತೆಗೆ ಹೋದರೆ ಸಿಕ್ಕಾಪಟ್ಟೆ ತೊಂದರೆ. ಒಂದೋ ಅವರಿಗೆ ಕಥೆ ಗೊತ್ತಾಗುವದೇ ಇಲ್ಲ. ನಿಮಿಷಕ್ಕೊಮ್ಮೆ, 'ಏನಾತ?? ಏನಾತ??? ಯಾಕ ಹಾಂಗ??? ಯಾಕ ಹೀಂಗ?? ಆವಾ ಹಿಂಗ್ಯಾಕ? ಅಕಿ ಹಾಂಗ್ಯಾಕ??' ಇದೇ ಮಾದರಿಯಲ್ಲಿ ಅವರ ಕಚಾಪಚಾ ಮಾತು ನಡೆದಿರುತ್ತದೆ. ಇವರಿಗೆ ಕಥೆ ನಾವು ಹೇಳಬೇಕು. ಕರ್ಮ! ಜೊತೆಗೆ ಆ ದರಿದ್ರ ಪಾಪ್ ಕಾರ್ನ್, ಅದು ಇದು ಅಂತ ತಿಂಡಿಗಳನ್ನು ಕುರ್ರಾ ಕುರ್ರಾ ಅಂತ ಪಚಗಡಿಸುತ್ತಿರುತ್ತಾರೆ. ಅದೊಂದು ಮಹಾ ದೊಡ್ಡ disturbance.

ಇನ್ನು ಕೆಲವು ಮಂದಿಗೆ ಸಿನಿಮಾದ ಮೊದಲ ಸೀನ್ ಮುಗಿಯುವ ಮೊದಲೇ ಪೂರ್ತಿ ಕಥೆ ಗೊತ್ತಾಗಿ ಹೋಗಿರುತ್ತದೆ. ಅಥವಾ ಹಾಗಂತ ತಿಳಿದುಬಿಟ್ಟಿರುತ್ತಾರೆ. ಕಥೆ ಹೇಳಲು ಶುರು ಮಾಡಿಬಿಡುತ್ತಾರೆ. ನಾವು ಇವರ ಕಥೆ ಕೇಳೋಣವೋ ಅಥವಾ ಸಿನಿಮಾ ಕಥೆ ನೋಡೋಣವೋ? ಇವರೂ ಪಾಪ್ ಕಾರ್ನ್ ತರಲೆಗಳೇ. ಜೊತೆಗೆ ಸ್ನಾನದ ಬಕೆಟ್ ಸೈಜಿನ ಕಪ್ಪಿನಲ್ಲಿ ಏನೋ ದ್ರವವನ್ನು ಕಲಗಚ್ಚಿನ ಮಾದರಿಯಲ್ಲಿ ಸೊರ್ರಾ ಸೊರ್ರಾ ಅಂತ ಕುಡಿಯುತ್ತಿರುತ್ತಾರೆ. ಸಿನಿಮಾ ಕೆಟ್ಟ ಬೋರ್ ಆಗಿ, ಮಂಡೆ ಬಿಸಿಯಾದರೆ ಅದರಲ್ಲೇ ನೀರು ತುಂಬಿಕೊಂಡು ಅಲ್ಲೇ ಸ್ನಾನ ಮಾಡೇಬಿಟ್ಟರೂ ಆಶ್ಚರ್ಯವಿಲ್ಲ.

ಎಲ್ಲ ಮುಚ್ಚಿಕೊಂಡು ಗಪ್ಪಾಗಿ ಕೂತು ಸಿನಿಮಾ ನೋಡುವ ಮಂದಿ ಭಾಳ ಕಮ್ಮಿ. ಏನೂ ಇಲ್ಲದಿದ್ದರೂ ತಮ್ಮ ಮೊಬೈಲ್ ತೆಗೆದು, ಮಿಣುಕು ಹುಳುಗಳಂತೆ ಮೊಬೈಲ್ ಫೋನಿನ ಪುಕಳಿ ಪಿಕಿ ಪಿಕಿ ಮಾಡಿಯಾದರೂ ರಸಭಂಗ ಮಾಡೇಬಿಡುತ್ತಾರೆ. ಇನ್ನು ಅವರ ಯಡಬಿಡಂಗಿ ಮಕ್ಕಳು ಬಂದರಂತೂ ಮುಗಿದೇ ಹೋಯಿತು. ಅವಕ್ಕೆ ಕನ್ನಡವೂ ಬರುವದಿಲ್ಲ. ಬಂದರೂ ಅಡ್ಡಾದಿಡ್ಡಿ. ನಮ್ಮ ದೇಶದಲ್ಲಿ ಮಕ್ಕಳು ಮಾಮಾ, ಅಂಕಲ್ ಅಂತ ನಿಮಿಷದಲ್ಲಿ ದೋಸ್ತಿ ಮಾಡಿಕೊಂಡುಬಿಟ್ಟರೆ ಇಲ್ಲಿಯವು 'ಹ್ಯಾಂ??!!' ಅಂತ ನೋಡುತ್ತಿರುತ್ತವೆ. ಅಪರಿಚಿತರು ಅಂದರೆ ಡೇಂಜರ್ ಅಂತ ಮಕ್ಕಳ ತಲೆಯಲ್ಲಿ ತುಂಬಿರುತ್ತಾರಲ್ಲ. ಅದರ ಪರಿಣಾಮ. ಅವಕ್ಕೋ ಕನ್ನಡ ಸಿನೆಮಾದ ತಲೆಬುಡ ತಿಳಿಯುವದಿಲ್ಲ. ತಮ್ಮ ವೀಡಿಯೊ ಗೇಮ್, ಐಪ್ಯಾಡ್ ತಂದಿರುತ್ತಾರೆ. ಅವರದ್ದೂ ಒಂದು ತರಹದ ಬೆಳಕಿನ ಪಿಕಿಪಿಕಿ. ಕಿರಿಕಿರಿ.

ಇನ್ನು ಇಂತಹ ಫೇಮಸ್ ಮೂವಿ, ಫಸ್ಟ್ ಶೋ ಅಂದರೆ ಮುಗಿದೇ ಹೋಯಿತು. ಚಿಳ್ಳೆ, ಪಿಳ್ಳೆ, ಕೂಸು, ಕುನ್ನಿ ಎಲ್ಲ ಕಟ್ಟಿಗೊಂಡು ಬಂದುಬಿಟ್ಟಿರುತ್ತಾರೆ. ಫುಲ್ ಗದ್ದಲ. 'ಮೊಬೈಲ್ ಫೋನ್ ಬಂದ್ ಮಾಡಿಕೊಂಡು, ಅದುಮಿಕೊಂಡು ಕೂಡ್ರಿ' ಅಂತ ಸಾವಿರ ಸಾರೆ ಹೇಳಿದ್ದು ತಿಳಿದರೆ ಕೇಳಿ. ಒಂದು ನಾಲ್ಕಾರು ರಿಂಗ್ ಕೇಳೇ ಕೇಳುತ್ತವೆ. ಇನ್ನು ಕೆಲವರಿಗೆ ಮೂವಿ ನಡೆಯುತ್ತಿದ್ದಂತೆಯೇ ಫೇಸ್ಬುಕ್, ಟ್ವಿಟ್ಟರ್ ಇತ್ಯಾದಿ ಅಪ್ಡೇಟ್ ಮಾಡುವ ಚಟ. ಒಟ್ಟಿನಲ್ಲಿ ಶಾಂತಿಯಿಂದ ಕೂತು ಸಿನಿಮಾ ನೋಡೋಣ ಅಂದರೆ ಅಲ್ಲಿ ಶಾಂತಿಯಿರುವದಿಲ್ಲ. ಬರೇ ಗದ್ದಲ ಮಾಡುವ ಡಿಸ್ಕೋ ಶಾಂತಿ, ಡಿಸ್ಕೋ ಶಾಂತರೇ ತುಂಬಿರುತ್ತಾರೆ.

ಶಾಂತಿಯಿಂದ ಕೂತು ಯಾವದೇ ಸಿನಿಮಾ ನೋಡಬೇಕು ಅಂದರೆ ಒಂದಿಷ್ಟು ದಿನ ಬಿಟ್ಟು, ಗದ್ದಲ ಎಲ್ಲ ಕಡಿಮೆಯಾದ ನಂತರ ನೋಡಿ. ಯಾವದಾದರೂ ವೀಕ್ ಡೇ ದಿನ, ಅಡ್ನಾಡಿ ಹೊತ್ತಿನಲ್ಲಿ ಹೋಗಿ ನೋಡಿ. ಒಮ್ಮೊಮ್ಮೆ ನಿಮ್ಮನ್ನು ಬಿಟ್ಟರೆ ಥೇಟರಿನಲ್ಲಿ ಬೇರೆ ಯಾರೂ ಇರುವದಿಲ್ಲ. ನಿಮಗೇ exclusive ಆಗಿ ಸ್ಪೆಷಲ್ ಶೋ ತೋರಿಸಿದಂತೆ ಸಿನಿಮಾ ತೋರಿಸುತ್ತಾರೆ.

ಇಡೀ ಬಾಲ್ಕನಿಯಲ್ಲಿ ಒಬ್ಬನೇ ಕೂತು ನೋಡಿದ ಮೂವಿಯೆಂದರೆ ಪುರಾನಾ ಜಮಾನಾದ 'ರಾಜಕೀಯ' ಅನ್ನುವ ಕನ್ನಡ ಮೂವಿ. ನಟ ದೇವರಾಜ್ ಇದ್ದಿದ್ದು. ೧೯೯೩ - ೯೪ ರಲ್ಲಿ ರಿಲೀಸ್ ಆಗಿತ್ತು. ಮತ್ತೊಮ್ಮೆ ತಿರುಗಿ ಬಂದಿತ್ತು ೯೪-೯೫ ರಲ್ಲಿ. ಅಲ್ಲಿ ಬೆಂಗಳೂರಿನ ಅಲಸೂರಿನ ಅಂಚಿನಲ್ಲಿದ್ದ ಥೇಟರ್ ಒಂದರಲ್ಲಿ ನೋಡಿದ ನೆನಪು. ಥೇಟರ್ ಹೆಸರು ಏನಂತ ಮರೆತುಹೋಗಿದೆ. ಪ್ರಸನ್ನ? ಇಂದಿರಾ ನಗರದ CMH ರಸ್ತೆಯ ಆರಂಭದಲ್ಲಿದ್ದ ಹಳೆಯ ಥೇಟರ್.

ನಮಗೋ ಆವಾಗ ಸಿನಿಮಾ ನೋಡುವ ಹುಚ್ಚು. ವೀಕೆಂಡ್ ಒಂದೆರೆಡು ಸಿನಿಮಾ ನೋಡಲಿಕ್ಕೇಬೇಕು. ಹಾಗೇ ಹೋದೆ. ಜನವೇ ಇಲ್ಲ. ಇದ್ದ ನಾಲ್ಕಾರು ಜನ ಎಲ್ಲ ಗಾಂಧಿ ಕ್ಲಾಸ್ ತೆಗೆದುಕೊಂಡು ಹೋಗಿ ಕೂತರು. ಬಾಲ್ಕನಿಗೆ ಹೋಗಿ ನಾ ಕೂತೆ. ಕತ್ತಲಲ್ಲಿ ಜಾಸ್ತಿ ಜನರಿಲ್ಲ ಅಂತ ಗೊತ್ತಾಯಿತೇ ವಿನಃ ಯಾರೂ ಇರಲಿಲ್ಲ ಅಂತ ಮಾತ್ರ ಗೊತ್ತಾಗಲಿಲ್ಲ. ಅದು ಗೊತ್ತಾಗಿದ್ದು ಅಂತ್ಯದಲ್ಲಿ, ಮೂವಿ ಮುಗಿದು ಫುಲ್ ಲೈಟ್ಸ್ ಹಾಕಿದಾಗ. ಹಾಗಾಗಿ 'ರಾಜಕೀಯ' ಅನ್ನುವ ಮೂವಿ ಯಾವಾಗಲೂ ನೆನಪಲ್ಲಿ ಉಳಿಯುತ್ತದೆ.

ಈ ಮೂವಿ ಮಂದಿ ಮೂವಿಗಳನ್ನು online ಯಾಕೆ ಬಿಡುಗಡೆ ಮಾಡುವದಿಲ್ಲವೋ ಗೊತ್ತಿಲ್ಲ. ಮಾಡಿದರೆ ಕಾಸು ಕೊಟ್ಟೇ ನೋಡುತ್ತೇವೆ. ಕಾಪಿ ಗೀಪಿ ಮಾಡಿ ಹಂಚುವದಿಲ್ಲ. ಕನ್ನಡ ಮೂವಿ ಅಷ್ಟೇನೂ ಪೈರೇಟ್ ಆಗಲಿಕ್ಕಿಲ್ಲ. ಯಾಕೆಂದರೆ ರಂಗಿತರಂಗದ ಪೈರೇಟೆಡ್ ಕಾಪಿ ಎಲ್ಲೂ ಕಂಡಿಲ್ಲ. screen capture ಕಾಪಿ ಸಹಿತ ಎಲ್ಲೂ torrent ಸೈಟುಗಳಲ್ಲಿ ಕಂಡುಬಂದಿಲ್ಲ. ಅಷ್ಟರ ಮಟ್ಟಿಗೆ ಅದು ಬಚಾವು. ಅದೇ ಹಿಂದಿ ಮೂವಿ ನೋಡಿ. ಬಂದ ಕೆಲವೇ ಘಂಟೆಗಳಲ್ಲಿ ಕ್ಯಾಮೆರಾ ಸ್ಕ್ರೀನ್ ಕ್ಯಾಪ್ಚರ್ ಕಾಪಿ ರೆಡಿ. torrent ನಲ್ಲಿ download ಮಾಡಿಕೊಂಡಾಗಿರುತ್ತದೆ ನಮಗೆ. ಬೇಕಾದರೆ ನೋಡಿದರಾಯಿತು. ಅದನ್ನೇ online ರಿಲೀಸ್ ಮಾಡಿಬಿಟ್ಟಿದ್ದರೆ ಕಾಸು ಕೊಟ್ಟೇ ನೋಡುತ್ತಿದ್ದೆವು. ಇದು ಯಾಕೆ ಸಿನಿಮಾ ಜನರ ತಲೆಗೆ ಬಂದಿಲ್ಲ ಅಂತ ನಮಗೆ ಅರ್ಥವಾಗಿಲ್ಲ. ಒಂದೋ piracy ಆಗದಂತೆ ನೋಡಿಕೊಳ್ಳಿ. ಇಲ್ಲ online ರಿಲೀಸ್ ಮಾಡಿ ಆದಷ್ಟು ಜಾಸ್ತಿ ಕಾಸು ಮಾಡಿಕೊಳ್ಳಿ.

ರಂಗಿತರಂಗ, ಮರಾಠಿಯ 'ನಾಗರಿಕ್' ಇನ್ನೂ ವರೆಗೆ ಎಲ್ಲೂ ಸಿಕ್ಕಿಲ್ಲ. piracy ಮಂದಿ ರೀಜನಲ್ ಮೂವೀಸ್ ಕ್ಯಾಮೆರಾ ಕಾಪಿ ಜಾಸ್ತಿ ತೆಗೆಯುವದಿಲ್ಲ ಅಂತ ಕಾಣುತ್ತದೆ.

ಏನೇ ಇರಲಿ. ರಂಗಿತರಂಗ ಒಳ್ಳೆ ಮೂವಿಯಂತೆ. ನೋಡಿ. ಅಪರೂಪಕ್ಕೊಂದು ಒಳ್ಳೆ ಮೂವಿ ಕನ್ನಡದಲ್ಲಿ. ಇಲ್ಲವೆಂದರೆ ಉಳಿದವೆಲ್ಲ 'ಲೊಡ್ಡೆ' ಮಾದರಿಯ ಮೂವಿಗಳೇ.

9 comments:

sunaath said...

ಮಹೇಶರೆ,
ನನಗೆ ‘ರಂಗಿತರಂಗ’ಎನ್ನುವ ಟೈಟಲ್ಲೇ ಅರ್ಥ ಆಗ್ತಾ ಇಲ್ಲ; ಇನ್ನು ಸಿನೆಮಾ ಅರ್ಥ ಆದೀತೆ?
ನೀವು ನೋಡಿದ ಮೇಲೆ ಇಲ್ಲಿಯೇ ಕತೆಯನ್ನಷ್ಟು ಬರೆದು ಬಿಡಿ. ಓದಿ ಸಂತೋಷಿಸುತ್ತೇನೆ.

Kushi said...

Ee baari moviege hodre popcorn thinnabardu anno mattige nange brainwash madbittri....;-)

Vimarshak Jaaldimmi said...


Nice movie - worth watching! Creative twists!!

Also see: Handi Mrudanga.

Mahesh Hegade said...

Khushi N - enjoy your popcorn :)

Lingappa Langappa Bhandivaddar said...


ಮಜ್ಹವಾಗಿದೆ!

Amita Pai said...


Realistic!

Mahesh Hegade said...

ಸುನಾಥ್ ಸರ್, 'ರಂಗಿ', 'ತರಂಗ' ಅಂತ ಎರಡು ಕನ್ನಡ ಶಬ್ದಗಳನ್ನು ಉಪಯೋಗ ಮಾಡಿಕೊಂಡಿದ್ದಾರಲ್ಲ ಅಂತ ಸಮಾಧಾನ ಪಡಬೇಕು. ಇಲ್ಲವೆಂದರೆ ಈಗಿನ ಚಿತ್ರಗಳ ಹೆಸರುಗಳು - ಮಚ್ಚಾ. ಬಚ್ಚಾ, ಚಿತ್ರಾನ್ನ......

Mahesh Hegade said...

Thank you, Amita Pai.

Ammeeta Kaige said...


Very good!